Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಲ ಮತ್ತು ದೇಶ
Share:
Articles September 13, 2025 ಡಾ. ಎನ್.ಜಿ ಮಹಾದೇವಪ್ಪ

ಕಾಲ ಮತ್ತು ದೇಶ

ಕಾಲದ (Time) ಬಗ್ಗೆ ನಾನಾ ದೃಷ್ಟಿಗಳಿವೆ. ಇವುಗಳಲ್ಲಿ ಕೆಲವು ಕಾಲ ವಸ್ತುವೆಂಬ ಅಸತ್ಯ ಸಿದ್ಧಾಂತದ ಮೇಲೆ ನಿಂತಿವೆ. ವಸ್ತು ಎಂದರೆ ನಾವು ನೋಡದಿದ್ದರೂ ಒಂದು ದೇಶ (Space)ದಲ್ಲಿರುವ ಸತ್ಯ. ಈ ಸಿದ್ಧಾಂತವನ್ನು ನಂಬುವ ಬಹಳಷ್ಟು ಜನರು ‘ಕಾಲ ಕೆಟ್ಟಿದೆ, ಕಲಿಕಾಲದಲ್ಲಿ ಸಾಧು ಸಂತರಿಗೆ, ಸಜ್ಜನರಿಗೆ ಗೌರವವಿಲ್ಲ’, ಮುಂತಾಗಿ ಹೇಳುತ್ತಾರೆ. ಈ ಹೇಳಿಕೆಗಳಿಗೆ ‘ಕಾಲ ಎಂಬುದೊಂದು ವಸ್ತುವಿದೆ, ಅದು ಇಂದ್ರಿಯ ಗೋಚರವಲ್ಲ, ಅದು ಹಾಲು ಹಣ್ಣಿನಂತೆ ಕೆಟ್ಟಿದೆ, ಅದರಿಂದಾಗಿ ಒಳ್ಳೆಯವರಿಗೆ ಗೌರವವಿಲ್ಲ’ ಎಂಬ ಅರ್ಥವಿದೆ. ಕಾಲವು ಒಂದು ವಸ್ತು ಎನ್ನುವುದೇ ಮೊದಲನೆಯ ತಪ್ಪು; ಅದು ಕೆಡುತ್ತದೆ ಎನ್ನುವುದು ಎರಡನೆಯ ತಪ್ಪು. ಮತ್ತೆ ಕೆಲವರು ಕಾಲವು ಸೂರ್ಯ ಚಂದ್ರ ನಕ್ಷತ್ರಗಳ ಚಲನೆಯನ್ನು ಅವಲಂಬಿಸುತ್ತದೆ ಎಂದೂ ಸೂರ್ಯ ಚಂದ್ರ ನಕ್ಷತ್ರಗಳನ್ನು ಪರಮಾತ್ಮನೇ ಸೃಷ್ಟಿಸಿದನಾದುದರಿಂದ ಕಾಲವನ್ನೂ ಅವನೇ ಸೃಷ್ಟಿಸಿದ ಎಂದೂ ನಂಬುತ್ತಾರೆ. ಮತ್ತೆ ಕೆಲವರು ಕಾಲಕ್ಕೂ ವೇಳೆಗೂ ಇರುವ ವ್ಯತ್ಯಾಸ ಗೊತ್ತಿಲ್ಲದೆ ಗಡಿಯಾರಗಳು ಕಾಲವನ್ನು ತೋರಿಸುತ್ತವೆ ಎನ್ನುತ್ತಾರೆ. ಆದರೆ ಗಡಿಯಾರಗಳು ವೇಳೆಯನ್ನು ತೋರಿಸುತ್ತವೆಯೇ ಹೊರತು ಕಾಲವನ್ನಲ್ಲ. ಗಡಿಯಾರಗಳು ಕಾಲವನ್ನು ತೋರಿಸುವುದಾಗಿದ್ದರೆ ಅವೆಲ್ಲವೂ ಒಂದೇ ಕಾಲವನ್ನು ತೋರಿಸಬೇಕಾಗಿತ್ತು. ಅಲ್ಲದೆ, ಗಡಿಯಾರ ತೋರಿಸುವ ವೇಳೆಯನ್ನು ನಾವು ಕಾಲ ಎಂದು ತಪ್ಪು ತಿಳಿದುಕೊಂಡರೆ, ಗಡಿಯಾರವನ್ನು ಸೃಷ್ಟಿಸಿದವನೇ ಕಾಲವನ್ನೂ ಸೃಷ್ಟಿಸಿದ ಎಂದೂ ಭ್ರಮಿಸಬೇಕಾಗುತ್ತದೆ. ಈಗಂತೂ ಗಡಿಯಾರಗಳನ್ನು ಅನೇಕ ಯಂತ್ರಗಳು ಸೃಷ್ಟಿಸುತ್ತವೆ. ಅಲ್ಲದೆ, ಕಾಲವು ಹೊರಗಿರುವ ವಸ್ತು, ಅದನ್ನು ಇಂದ್ರಿಯಗಳ ಮೂಲಕ ತಿಳಿದುಕೊಳ್ಳಬಹುದು ಎಂದು ತಪ್ಪು ತಿಳಿದುಕೊಳ್ಳಬೇಕಾಗುತ್ತದೆ.

ಒಂದು ವೇಳೆ ಪರಮಾತ್ಮನೇ ಕಾಲವನ್ನು ಸೃಷ್ಟಿಸಿದ ಎಂಬ ಸಿದ್ಧಾಂತವನ್ನು ನಂಬಿದರೆ, ಸೃಷ್ಟಿಗಿಂತ ಮೊದಲು ಕಾಲ ಇರಲಿಲ್ಲವೇ ಎಂದು ಕೇಳಬೇಕಾಗುತ್ತದೆ. ಸೃಷ್ಟಿಪೂರ್ವದಲ್ಲಿ ಕಾಲ ಇಲ್ಲದಿದ್ದರೆ ಪರಮಾತ್ಮ ಯಾವುದೋ ಒಂದು ಕಾಲದಲ್ಲಿ ಕಾಲವನ್ನು ಸೃಷ್ಟಿಸಿದ ಎಂಬ ಸ್ವವಿರೋಧಕ್ಕೆ ಒಳಗಾಗುತ್ತದೆ. ಸೃಷ್ಟಿಪೂರ್ವದಲ್ಲಿ ಕಾಲ ಇದ್ದಿದ್ದರೆ, ಅದನ್ನು ಸೃಷ್ಟಿಸುವ ಪ್ರಶ್ನೆಯೇ ಏಳುವುದಿಲ್ಲ.

ಇದೇ ಪ್ರಶ್ನೆಯನ್ನು ನಾವು ಇನ್ನೊಂದು ದಿಕ್ಕಿನಿಂದ ಪರಿಶೀಲಿಸಬಹುದು. ಈಗ ಬೆಳಗಿನ 10:00 ಗಂಟೆ. ಇದಕ್ಕಿಂತ ಮೊದಲು 9:00, 8:00, ಮುಂತಾದ ವೇಳೆಗಳಿದ್ದವು. ಇವತ್ತಿಗಿಂತ ಮೊದಲು ನಿನ್ನೆ, ಮೊನ್ನೆ ಎಂಬ ಕಾಲ ಇತ್ತು; ಅದಕ್ಕೂ ಮೊದಲು 2024, 2023, ಮುಂತಾದ ವರ್ಷಗಳಿದ್ದವು; ಅದಕ್ಕೂ ಮೊದಲು, ಅಂದರೆ, ಕ್ರಿಸ್ತಪೂರ್ವಕ್ಕೂ ಕ್ರಿ.ಪೂ.10, ಕ್ರಿ.ಪೂ.20, ಕ್ರಿ.ಪೂ.1000, ಇತ್ಯಾದಿ, ಕಾಲ ಇತ್ತು. ಹೀಗೆ ನಾವು ಯಾವುದೇ ಕಾಲವನ್ನು ಊಹಿಸಿಕೊಂಡರೂ ಅದರ ಹಿಂದೆ ಒಂದು ಕಾಲ ಇತ್ತೆಂದೂ ನಾಳೆ, ನಾಡಿದ್ದು, ಅದಕ್ಕೂ ಮುಂದೆಯೂ ಅನಂತವಾಗಿ ಕಾಲ ಇರುತ್ತದೆ ಎಂದೂ ತರ್ಕಿಸಬೇಕಾಗುತ್ತದೆ. ಅಂದರೆ, ಕಾಲ ಅನಾದಿ, ಅನಂತ. ಅದನ್ನು ಯಾರೂ ಯಾವಾಗಲೂ ಸೃಷ್ಟಿಸಿಲ್ಲ, ಸೃಷ್ಟಿಸಬೇಕಾಗಿಲ್ಲ.

ಕಾಂಟ್ ಎಂಬ ಜರ್ಮನ್ ದಾರ್ಶನಿಕ ಈ ಬಗ್ಗೆ ಒಂದು ವಿಚಿತ್ರವಾದ, ಆದರೆ ಸತ್ಯವಾದ, ವಿರೋಧಿಸಲಾಗದ ಸಿದ್ಧಾಂತವನ್ನು ಮಂಡಿಸುತ್ತಾನೆ. ಅವನ ಪ್ರಕಾರ ಮನುಷ್ಯನ ಅನುಭವಕ್ಕೂ ಕಾಲ-ದೇಶಗಳಿಗೂ ನಿಕಟ ಸಂಬಂಧವಿದೆ. ಮನುಷ್ಯ ಘಟನೆಗಳನ್ನು ವೀಕ್ಷಿಸುವಾಗ ಮಾತ್ರ ಕಾಲವನ್ನು ಗಣಿಸುತ್ತಾನೆ. ಆ ಘಟನೆಗಳು ಹೊರಗಿನ ಘಟನೆಗಳಿರಬಹುದು ಅಥವಾ ನಮ್ಮ ಮನಸ್ಸಿನಲ್ಲೇ ಆಗುತ್ತಿರುವ ಮಾನಸಿಕ ಘಟನೆಗಳು ಇರಬಹುದು. ನೆನ್ನೆ ಮಳೆ ಬಂದಿದ್ದುದು ಒಂದು ಘಟನೆ. ಈ ಘಟನೆ ನೆನ್ನೆ ರಾತ್ರಿ 9:00 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಡೆಯಿತು. 9 ರಿಂದ 12 ಗಂಟೆ ಎಂಬುದು ಕಾಲದ ತುಂಡು. ಪ್ರತಿ ಕಾಲದ ತುಂಡಿನ ಹಿಂದೆ (ಉದಾಹರಣೆಗೆ, ರಾತ್ರಿ 9:00 ಗಂಟೆಯ ಹಿಂದೆ) ಒಂದು ಕಾಲವಿದ್ದಂತೆ ಪ್ರತಿ ಘಟನೆಯ ಹಿಂದೆಯೂ ಮತ್ತೊಂದು ಘಟನೆ ಇರುತ್ತದೆ (ಅದನ್ನೇ ನಾವು ಕೆಲವು ವೇಳೆ ಕಾರಣ ಎನ್ನುತ್ತೇವೆ). ಮಳೆ ಬರುವ ಮುನ್ನ ಮೋಡ ಕಪ್ಪಾಗಿದ್ದವು; ಅದಕ್ಕೂ ಮೊದಲು ಆವಿಯು ಮೋಡದ ರೂಪತಾಳಿತ್ತು; ಇತ್ಯಾದಿ. ಅದೇ ರೀತಿ, ಪ್ರತಿ ಘಟನೆಯ ಮುಂದೆಯೂ ಮತ್ತೊಂದು ಘಟನೆ ಇರುತ್ತದೆ (ಇದನ್ನೆ ನಾವು ಕೆಲವು ವೇಳೆ ಪರಿಣಾಮ ಎನ್ನುತ್ತೇವೆ). ಉದಾಹರಣೆಗೆ, ಮಳೆ ಬಂದಿದ್ದರಿಂದ ಬೆಳೆ ಚೆನ್ನಾಗಿ ಬೆಳೆದವು. ಬೆಳೆ ಚೆನ್ನಾಗಿ ಬೆಳೆದಿದ್ದರಿಂದ ಫಸಲು ಹೆಚ್ಚಾಯಿತು. ಫಸಲು ಹೆಚ್ಚಾದದ್ದರಿಂದ ಧಾನ್ಯಗಳ ಬೆಲೆಗಳು ಇಳಿದವು, ಇತ್ಯಾದಿ. ಹೀಗೆ ಘಟನೆಗಳ ಸಂತತಿಯೂ ಅನಾದಿ, ಅನಂತ. ಅವುಗಳನ್ನು ಯಾರೂ ಯಾವಾಗಲೂ ಸೃಷ್ಟಿಸಲಿಲ್ಲ, ಸೃಷ್ಟಿಸಬೇಕಾಗಿಲ್ಲ.

ಆದರೆ ಮನುಷ್ಯನಿಗೆ ಘಟನೆಗಳ ಅನುಭವ ಆಗದಿದ್ದರೆ, ಅವನಿಗೆ ಕಾಲದ ಅನುಭವವೂ ಆಗುವುದಿಲ್ಲ. ನಾನು ಗಾಢ ನಿದ್ರೆ/ಮೂರ್ಛಾವಸ್ಥೆ/ಸಮಾಧಿ ಸ್ಥಿತಿಯಲ್ಲಿದ್ದರೆ, ಅಂದರೆ ನಾನು ಎಂಬ ಭಾವವೇ ನನಗಾಗದಿದ್ದರೆ, ವಸ್ತುಗಳ ಮತ್ತು ಘಟನೆಗಳ ಅನುಭವವೂ ಆಗುವುದಿಲ್ಲ. ಎಚ್ಚರವಾದ ಮೇಲೆ ನಾನು ಹತ್ತರಿಂದ ಹನ್ನೊಂದು ಗಂಟೆಯವರೆಗೆ ಮಲಗಿದ್ದೆ/ ಮೂರ್ಛಾವಸ್ಥೆಯಲ್ಲಿದ್ದೆ/ಸಮಾಧಿ ಸ್ಥಿತಿಯಲ್ಲಿದ್ದೆ ಎಂದು ಹೇಳಬೇಕು. ಸರಿಯಾದ ಕಾಲದ ಅಳತೆ ಗೊತ್ತಿಲ್ಲದಿದ್ದರೂ ನಾನು ಎಷ್ಟೋ ಕಾಲ ಮಲಗಿದ್ದೆ/ಮೂರ್ಛಾವಸ್ಥೆಯಲ್ಲಿದ್ದೆ/ಸಮಾಧಿಸ್ಥಿತಿಯಲ್ಲಿದ್ದೆ ಎಂದೇ ಹೇಳಬೇಕು. ಕಾಲದ ಅನುಭವ ಆಗಬೇಕಿದ್ದರೆ, ಘಟನೆಗಳ ಅನುಭವವಾಗಲೇಬೇಕು.

ವಸ್ತುಗಳ ಇರುವಿಕೆಯೂ ಒಂದು ಘಟನೆ. ಉದಾಹರಣೆಗೆ, ಈ ಮನೆ 1978 ರಿಂದ 2025 ರವರೆಗೂ ಇರುತ್ತದೆ, ಬಸವಣ್ಣನವರು 1105 ರಿಂದ 1168 ರವರೆಗೆ ಬದುಕಿದ್ದರು, ಇತ್ಯಾದಿ. ವಸ್ತುಗಳ ಇರುವಿಕೆಗೆ ದೇಶದ ಕಲ್ಪನೆ ಅಗತ್ಯ. ಅಂದರೆ, ಒಂದು ವಸ್ತು ಇದೆ ಎಂದರೆ ಯಾವುದೋ ಒಂದು ದೇಶದಲ್ಲಿರಬೇಕು, ಅದು ಇಷ್ಟು ಉದ್ದ, ಅಗಲ, ಎತ್ತರ ಇರಬೇಕು, ಅದಕ್ಕೆ ಒಂದು ಆಕಾರ ಇರಬೇಕು ಎಂದು ನಾವು ಮೊದಲೇ ತೀರ್ಮಾನಿಸುತ್ತೇವೆ (ಉದ್ದ, ಅಗಲ, ಎತ್ತರ, ಸಣ್ಣದು, ದೊಡ್ಡದು, ದುಂಡಗಿರುವುದು, ಚಪ್ಪಟೆಯಾಗಿರುವುದು, ಇತ್ಯಾದಿ ದೇಶಿಕ ಗುಣಗಳು; ಒಂದು ಗಂಟೆ, ಮೂರು ದಿನ, ಹತ್ತು ವರ್ಷ, ಏಕ ಕಾಲ, ಒಂದಾದಮೇಲೆ ಒಂದು, ನೆನ್ನೆ, ಮುಂತಾದವುಗಳು ಕಾಲಿಕ ಗುಣಗಳು). ಯಾವುದೇ ದೇಶದಲ್ಲಿಲ್ಲದ ವಸ್ತು ಇಲ್ಲ; ಅದರಂತೆ ಯಾವುದೇ ಕಾಲದಲ್ಲಿಲ್ಲದ ಘಟನೆಗಳಿಲ್ಲ.

ಕಾಲ, ದೇಶಗಳು ಹೊರಗಿರುವ ವಸ್ತುಗಳಲ್ಲದ್ದರಿಂದ, ಮಾನವ ಅವುಗಳನ್ನು ಬಾಹ್ಯ ವಸ್ತುಗಳಂತೆ ಕಾಣಲಾರ, ಎಂಬುದನ್ನು ನಾವು ಗಮನಿಸಬೇಕು. ಅವು ವಸ್ತುಗಳಾಗಿದ್ದರೆ ಯಾವುದೇ ವಸ್ತು ಅಥವಾ ಘಟನೆಯಿಲ್ಲದಿದ್ದರೂ ಅವುಗಳನ್ನು ನಾವು ಅರಿಯಬಹುದಿತ್ತು. ಅಂದರೆ, ಬರೀ ಕಾಲವನ್ನೇ ನಾವು ಅನುಭವಿಸಲಾರೆವು. ಗಡಿಯಾರದ ಮುಳ್ಳುಗಳ ಚಲನೆ ಒಂದು ಘಟನೆಯೇ ಹೊರತು ಕಾಲದ ಚಲನೆ ಅಲ್ಲ. ಕಾಲ ವಸ್ತುವಲ್ಲ, ಆದುದರಿಂದ ಅದು ಚಲಿಸುವುದಿಲ್ಲ. ಬರೀ ದೇಶವನ್ನೂ ಅರಿಯಲಾರೆವು. ನ್ಯೂಟನ್ ಭಾವಿಸಿದಂತೆ ಅದು ಒಂದು ಅತ್ಯಂತ ದೊಡ್ಡದಾದ ಚೀಲವಲ್ಲ.

ಮಾನವನಿಗೆ ಘಟನೆಯಿಲ್ಲದ ಬರೀ ಕಾಲದ ಅನುಭವವಾಗುವುದಿಲ್ಲ; ಕಾಲದಲ್ಲಿಲ್ಲದ ಘಟನೆಯ ಅನುಭವವೂ ಆಗುವುದಿಲ್ಲ. ಕಾಲ-ದೇಶಗಳು ಒಂದು ರೀತಿಯ ಸ್ವಾಭಾವಿಕ (ಹುಟ್ಟಿನಿಂದಲೇ ಬಂದ) ಕನ್ನಡಕ ಇದ್ದಂತೆ. ಅದನ್ನು ಹಾಕಿಕೊಂಡರೆ ವಸ್ತುಗಳ ಇರವಿಕೆ ಮತ್ತು ಘಟನೆಗಳ ಅರಿವಾಗುತ್ತದೆ; ಅದನ್ನು ತೆಗೆದರೆ ನಾವು ಏನನ್ನೂ ನೋಡಲಾರೆವು.

ಕಾಲ-ದೇಶಗಳು ಮಾನವನ ಅನುಭವದ ಅವಿಭಾಜ್ಯ ಅಂಗವಾಗಿವೆ. ಹೇಗೆಂದರೆ, ಒಂದು ವಸ್ತು ಇದೆ ಅಥವಾ ಒಂದು ಘಟನೆ ನಡೆಯಿತು ಎಂದರೆ ಅದು ಯಾವುದೋ ಕಾಲ ಮತ್ತು ದೇಶಗಳಲ್ಲಿ ಇರಲೇಬೇಕು ಎಂದು ತರ್ಕಿಸುತ್ತೇವೆ. ದೇಶದಲ್ಲಿಲ್ಲದ ಕಾಲದಲ್ಲಿಲ್ಲದ ವಸ್ತುಗಳು, ಘಟನೆಗಳು ಮಾನವನಿಗೆ ಗೊತ್ತಿಲ್ಲ.

ಮಾನವನನ್ನು ಪರಮಾತ್ಮನೇ ಸೃಷ್ಟಿಸಿದ, ಆದುದರಿಂದ ಕಾಲ-ದೇಶಗಳನ್ನೂ ಅವನೇ ಸೃಷ್ಟಿಸಿದ ಎಂದಾಗುವುದಿಲ್ಲವೇ? ಎಂದು ಕೆಲವರು ಆಕ್ಷೇಪಿಸಬಹುದು. ಆದರೆ ಕಾಂಟನ ಪ್ರಕಾರ ಪರಮಾತ್ಮ ಮಾನವನನ್ನು ಸೃಷ್ಟಿಸಿದ ಎಂಬ ಮಾತೇ ಮಾನವನ ಕಲ್ಪನೆಯಾಗಿದೆ. ಆಗ ಸೃಷ್ಟಿಯೂ ಕಾಲದಲ್ಲಿ ಘಟಿಸುವ ಒಂದು ಘಟನೆಯಾಗುತ್ತದೆ. ಅಂದರೆ, ನಮ್ಮ ಕಲ್ಪನೆ ಯಾವುದೋ ಒಂದು ಕಾಲದಲ್ಲಿ ಕಾಲವು ಸೃಷ್ಟಿಯಾಯಿತು ಎಂಬ ಸ್ವವಿರೋಧಕ್ಕೆ ಒಳಗಾಗುತ್ತದೆ; ಅದೇ ರೀತಿ, ಪರಮಾತ್ಮ ಒಂದು ದೇಶದಲ್ಲಿ ನಿಂತುಕೊಂಡೇ ಮಾನವನನ್ನು ಸೃಷ್ಟಿಸಿದ ಎಂದು ಭಾವಿಸುವುದೂ ಸ್ವವಿರೋಧವೇ.

ಕಾಲ, ದೇಶ ಹೊರಗಿನ ವಸ್ತುಗಳಲ್ಲ. ವಸ್ತುಗಳ ಗುಣಗಳೂ ಅಲ್ಲ. ವಸ್ತುಗಳಾಗಿದ್ದರೆ ನಮಗೆ ಅನುಭವ ಆಗದಿದ್ದರೂ ಅವುಗಳನ್ನು ನಾವು ಅರಿಯಬಹುದಿತ್ತು. ಆದರೆ ಅವು ನಾವು ನೋಡದಿದ್ದಾಗ ಇರುವ ವಸ್ತುಗಳಲ್ಲ. ನಾವು ನೋಡಿದಾಗ ಮಾತ್ರ ಅವು ಇರುತ್ತವೆ. ಅವುಗಳನ್ನು ನಾವು ಅನುಭವದಿಂದ ಕಲಿತಿಲ್ಲ. ನಮಗೆ ಅನುಭವ ಆಗಬೇಕಾದರೆ ಅವುಗಳನ್ನು ನಮ್ಮ ಸ್ವಾಭಾವಿಕ ಕನ್ನಡಕಗಳಂತೆ ಬಳಸಬೇಕಾಗುತ್ತದೆ. ಅಂದರೆ ಕಾಲ ದೇಶಗಳು ನಾವು ನಮ್ಮ ಅನುಭವಕ್ಕೆ ನೀಡುವ ಅನುಭವಪೂರ್ವ ಕಾಣಿಕೆಗಳು.

Previous post ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
Next post ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ

Related Posts

ಹಿರಿಯರ ಹಾದಿ…
Share:
Articles

ಹಿರಿಯರ ಹಾದಿ…

July 4, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಾತನ್ನು ಯೋಗ ಎನ್ನುವರು. ಅದು ಪ್ರವಚನ ಯೋಗ. ಕೇಳುಗರು ಸಹ ಮನಸ್ಸಿಟ್ಟು ಕೇಳಬೇಕು. ಅದು ಶ್ರವಣ ಯೋಗ. ಅದನ್ನು ಪ್ರಸಾದವಾಣಿ ಎನ್ನುವರು. ಮಠ ಸಾತ್ವಿಕತೆಯ, ಧರ್ಮದ, ಸುಜ್ಞಾನದ...
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
Share:
Articles

ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು

June 17, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಓದಿನ ಹಿರಿಯರು, ವೇದದ ಹಿರಿಯರು, ಶಾಸ್ತ್ರದ ಹಿರಿಯರು, ಪುರಾಣದ ಹಿರಿಯರು, ವೇಷದ ಹಿರಿಯರು, ಭಾಷೆಯ ಹಿರಿಯರು, ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ....

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ನಾನು ಯಾರು?
ನಾನು ಯಾರು?
December 8, 2021
ಎರವಲು ಮನೆ…
ಎರವಲು ಮನೆ…
August 10, 2023
ದಾರಿ ಬಿಡಿ…
ದಾರಿ ಬಿಡಿ…
December 6, 2020
ಸಂಸ್ಕೃತ ಕೃತಿಗಳು
ಸಂಸ್ಕೃತ ಕೃತಿಗಳು
October 10, 2023
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
Copyright © 2025 Bayalu