Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನಿಮಿಷನ ಕಥೆ- 6
Share:
Articles April 11, 2025 ಮಹಾದೇವ ಹಡಪದ

ಅನಿಮಿಷನ ಕಥೆ- 6

ಮೂಡಿಮಸಳುವ ಚಿತ್ರ

ವಿರುಪಾಕ್ಷನ ಸನ್ನಿಧಿಗೆ ಬಂದು ನಂದಿಯ ಮುಂದೆ ಮಂಡಿಯೂರುವಾಗ ಆಯಾಸವೆಂಬುದು ಕತ್ತಲೊಡನೆ ಕಣ್ಣಿಗಾವರಿಸಿ ತ್ರೈಲೋಕ್ಯ ಕಣ್ಮುಚ್ಚಿದ. ಬೃಹದಾಕಾರದ ನಂದಿಯ ಮುಂಗಾಲಿಗೊರಗಿ ಮಹಾಕೂಟೇಶ ಎಂದೊಮ್ಮೆ ಉಸಿರಗರೆದು ಕಣ್ತೆರೆದಾಗ ದಂಡಿನ ಮಕ್ಕಳು ಮಲ್ಲಯುದ್ಧದ ಪಟ್ಟು-ಗುಟ್ಟು, ಎದುರು ಪಟ್ಟಿನ ಮಲಕು, ತೋಳತೆಕ್ಕೆಯ ಹಿಡಿತಗಳ ಬಗ್ಗೆ ಮಾತಾಡುತ್ತ ಬರುತ್ತಿರುವುದು ಕಾಣಿಸಿತು. ಮಂದ್ರವಾದ ಜೋಳದ ಅಂಬಲಿಯ ಘಮ ಮೂಗಿಗೆ ಬಂದು ಮುಟ್ಟಿದಾಗ ತನ್ನ ಒಕ್ಕಣ್ಣಿನಲ್ಲೇ ಕತ್ತಲು ಸೀಳಿಕೊಂಡು ಗರಡಿಮನೆಗೆ ಹೊಂದಿಕೊಂಡಂತಿದ್ದ ತನ್ನ ಮನೆಯನ್ನು ದಿಟ್ಟಿಸಿದ. ಮಹಾಲೇಖೆ ಅಲ್ಲಿದ್ದಾಳೆ… ತನಗಾಗಿ ಕಾದಿದ್ದಾಳೆ… ಆ ಮನೆಯ ಆಚೆ ಬಯಲಿನಲ್ಲಿರುವ ಚಂದ್ರಮೌಳಿಯ ಗುಡಿಯ ಆವರಣದಲ್ಲೆ ಆ ಪವಾಡ ಸಿದ್ಧ ನಮಗೆ ಮಕ್ಕಳ ಫಲ ಕೊಟ್ಟನಲ್ಲ..! ನೆನಪುಗಳು ಗರಿಗೆದರಿ ಎಷ್ಟೋ ವರುಷಗಳ ಮೇಲೆ ತುಟಿದೆರೆದು ಕಿರುನಗೆ ನಕ್ಕ. ದಂಡಿನ ಮಕ್ಕಳು ಮಾತಾಡುತ್ತ ವಿರುಪಾಕ್ಷನ ಗುಡಿಯ ಮಂಟಪದ ಸಮೀಪ ಬಂದಾಗ ಈ ಹುಡುಗರಲ್ಲಿ ನನ್ನ ಮಗನೂ ಇದ್ದಾನೇನೋ ಎಂಬ ಕುತೂಹಲವು ಅವನ ಆಯಾಸವನ್ನು ದೂರಮಾಡಿತು. ದಂಡಿನ ಮಕ್ಕಳೇ.. ಎಂದು ಕರೆದಾಗ ಅಪರಿಚಿತನ ಕೂಗಿಗೆ ‘ಯಾರು..?’ ಎಂದರು.

“ಇಲ್ಲಿ ಗರಡಿಯ ದಳಪತಿ ಯಾರಿದ್ದಾರು..?”
“ಅವರು ಯಾರೇ ಇರಲಿ ನೀವ್ಯಾರು..?”
“ನಾನು ನಾ…”

ಏನು ಹೇಳಬೇಕೆಂದು ಮಾತು ಹೊಸೆಯುವುದರಲ್ಲಿದ್ದಾಗಲೇ ಮಾಲಿಂಗ ಕುದುರೆಯನ್ನು ತಂದು ಹುಡುಗರ ಕೈಗೊಪ್ಪಿಸಿ, ಮೇಳನಾಯಕರ ಕೂಗಿ ಕರೆದು ವಸೂದೀಪ್ಯ ಪಳಗಿಸಬೇಕಿದ್ದ ಕುದುರೆಯನ್ನು ದಂಡಿನ ಲಾಯಕ್ಕೆ ಒಪ್ಪಿಸಿದ್ದೇನೆಂದೂ, ಕೆಲದಿನ ಕಳೆದ ಮೇಲೆ ಹುಡುಗ ದಂಡಿಗೆ ಬಂದು ಸೇರುತ್ತಾನೆಂದೂ, ಒಂದೇ ಉಸುರಿಗೆ ಉಸುರಿ ನಡೆದೇಬಿಟ್ಟ. ಮಕ್ಕಳ ಮಾತು ವಸೂದೀಪ್ಯನ ವಿಚಿತ್ರ ನಡವಳಿಕೆಯ ಬಗ್ಗೆ ಲೊಚಗುಡುವ ಧಾಟಿಯಲ್ಲಿ ನಡೆದವು.

ಎಲ್ಲ ಮುಗಿದಿತ್ತು… ಕುದುರೆಯೊಂದನ್ನ ಪಳಗಿಸಿದ್ದರೆ ಹುಲಿಯಂತಾಗುತ್ತಿದ್ದ…
ಹೌದೌದು.. ಮುಂದೆ ರಾಜರ ದಂಡಿನಲ್ಲಿ ಮುಖ್ಯಹುದ್ದರಿಯಾಗಿ ದಳವಾಯಿ, ದಳಪತಿಯಾಗುವ ಕೌಶಲ…
ಅವನು ಕತ್ತಿ ತಿರುವಿ ನಿಂತರೆ ಸಾಕ್ಷಾತ್ ಆಳರಸರ ಬೆಂಗಾವಲಿನ ದಳಪತಿ ಹಾಗೆ ಕಾಣತಿದ್ದ…
ಏನಿದ್ದರೇನು.. ಸಾಧಿಸೋ ವಯಸ್ಸಲ್ಲಿ ಗಾದಿಯ ಸುಖ ಬಯಸಿ ಹಾಳಾದ…
ಚಂದ್ರಲಾ ತಲೆತಿರುಗಿಸಿದಳು…
ಏಯ್ ಇಲ್ಲಿಲ್ಲ. ಅವನಿಗೆ ಸಿದ್ಧಸಾಧು ಮಾಟಮಾಡಿಸಿದ.
ಅದಕೆ ದಳವಾಯಿಗಳು ಹೇಳೋದನ್ನ ನಾವು ಕೇಳಬೇಕು. ಮಂಟಪದಲ್ಲಿ ಕುಣಿಯುವ ಪಾತರದವರ ಬೆನ್ನು ಬಿದ್ದು ಹಾಳಾದ.

ತಲೆಗೊಂದು ತರತರ ತಮಗೆ ತಿಳಿದಂತೆ ತಮ್ಮ ಇತಿಮಿತಿಗಳಲ್ಲಿ ಆ ಹುಡುಗರು ಮಾತಾಡಿಕೊಳ್ಳುತ್ತಿದ್ದರು. ದಳವಾಯಿ ದೊಂದಿ ಹಿಡಿದು ಹೊರಗೆ ಬಂದು… ಕುದುರೆಯ ವಸಡು ಸರಿಸಿ ದವಡೆಹಲ್ಲುಗಳನ್ನು ಪರೀಕ್ಷಿಸಿದ. ಕುದುರೆಯ ಮೈಮೇಲೆ ಗಾಯಗಳೇನಾದರೂ ಆಗಿದ್ದಾವಾ ಎಂದು ಮೈದಡವಿ ನೋಡಿ ಬಾಲಮುರಿದ. ಚಂಗನೇ ಜಿಗಿದ ಕುದುರೆಯ ಮೂಗುದಾನವನ್ನು ಎತ್ತಿಹಿಡಿದು ಒಬ್ಬ ಹುಡುಗನ ಕೈಗಿಟ್ಟು ಲಾಯಕ್ಕೆ ಬಿಟ್ಟು ಬರಲು ಹೇಳಿದ.
“ವೆಂಕೋಬ…”

ವಿರುಪಾಕ್ಷನ ಮಂಟಪದ ಮೂಲೆಯಿಂದ ತನ್ನನ್ನು ಯಾರೋ ಒಂಟಿಅಕ್ಷರದಲ್ಲಿ ಕೂಗಿ ಕರೆದದ್ದು ಇರಸುಮುರುಸಾಗಿ ದೊಂದಿಯೊಡನೇ ಗುಡಿಯತ್ತ ಬಂದ. ದಂಡಿನ ಹುಡುಗರೂ ಕೂಗಿದ ದನಿಯತ್ತ ತಿರುಗಿದರು.

“ನೀನು ಪುಣ್ಯವಂತ ನೋಡು, ಕಲಿತ ಕೌಶಲವನ್ನ ಮಕ್ಕಳಿಗೆ ಹೇಳತಿದ್ದಿ… ನಾನು…”
“ಯಾರ ನೀನು..? ನನ್ನ ಹೆಸರು ಹಿಡಿದು ಕರೆದಾಂವ.”

ದೊಂದಿಯ ಬೆಳಕು ತಂದು ಮುಖದ ಮುಂದೆ ಹಿಡಿದಾಗ ಜಡೆಗಟ್ಟಿದ್ದ ತಲೆ, ಊನಾದ ಕಣ್ಣು, ಮುಖದ ತುಂಬೆಲ್ಲ ಕಲ್ಲಿನ ಚೂರುಗಳು ಗುರುತು ಮಾಡಿದ್ದ ಗಾಯಗಳು, ಸುಕ್ಕುಗಟ್ಟಿದ್ದ ಗಲ್ಲ, ವಯಸ್ಸಿನ ಗೆರೆ ಮೂಡಿದ್ದ ಹಣೆಯ ನಡುವೆ ಹುಬ್ಬಗಂಟಿಕ್ಕಿದ್ದ ತ್ರೈಲೋಕ್ಯ.

“ಗುರುತ ಸಿಗಲಿಲ್ಲೇನೋ ವೆಂಕ್ಯಾ..?”
“ಲೋಕ್ಯಾ..!”

ಹೌದೆಂಬಂತೆ ಕಣಾಲಿಗಳನ್ನು ತುಂಬಿಕೊಂಡು ಗೋಣಾಡಿಸಿದಾಗ ದಳವಾಯಿ ವೆಂಕೋಬ ಅವನ ಮುಂದೆ ಮಂಡಿಯೂರಿ ಕುಳಿತಾಗ ದಂಡಿನ ಹುಡುಗರು ಮುಖಮುಖ ನೋಡಿಕೊಂಡು ಮುಂದೆ ನಡೆಯಬಹುದಾದ ಮಾತುಕತೆಗೆ ಕೌತುಕರಾದರು.

“ಯಾಕ ಹಿಂಗ? ಹಿಂಗ್ಯಾಕ ಆದೆಯೋ ಲೋಕ್ಯಾ.. ಅಳಬ್ಯಾಡ. ಗಪ್ಪಾಗು. ನೀ ಎಂಥ ಶೂರ, ಎಂಥಾ ಭಂಟ ಇದ್ದಿ ನಿನ್ನಂತವನ ಕಣ್ಣಾಗ ನೀರಾಡೋದನ್ನ ನಾ ನೋಡೋದಿಲ್ಲ. ಗಪ್ಪಾಗು. ಏ ಹುಡುಗುರ್ಯಾ.. ಗರಡಿಗೆ ಹೋಗಿ ನೀರು ಒಂದು ಪರ್ಯಾಣ ಅಂಬಲಿ ತಗೊಂಡು ಬರ್ರಿ…”
ನಿಂತಿದ್ದ ಹುಡುಗರಲ್ಲೊಬ್ಬ ಓಡಿದ. ಒಬ್ಬನೇ ದಳವಾಯಿ ಕೈಯ್ಯಾಗ ಕಲಿತ ಇಬ್ಬರು ಗೆಳೆಯರು ಎದುರುಬದುರಾಗಿ ಕುಳಿತು ಕಣ್ಣೀರಾಗಿದ್ದನ್ನ ಕಂಡ ಹುಡುಗರು ಅವರ ಸಮೀಪದಲ್ಲೇ ಬಂದು ಕುಳಿತರು. ಹುಡುಗ ನೀರು ತಂದುಕೊಟ್ಟಾಗ ದಳವಾಯಿ ತ್ರೈಲೋಕ್ಯನನ್ನು ಸಮಾಧಾನ ಮಾಡಿ ನೀರು ಕುಡಿಸಿ ಅಂಬಲಿ ಪರ್ಯಾಣವನ್ನು ಅವನ ಮುಂದಿಟ್ಟು ಮೂಗೊರೆಸಿಕೊಳ್ಳುತ್ತ ದಂಡಿನ ಹುಡುಗರಿಬ್ಬರ ಹೆಗಲ ಮೇಲೆ ಕೈಯಿಟ್ಟು ಮಂಟಪದ ಮತ್ತೊಂದು ಮಗ್ಗುಲಿಗೆ ಬಂದು ಆ ಹುಡುಗರನ್ನು ಮಹಾಲೇಖೆಯನ್ನು ಕರೆದುಕೊಂಡು ಬರಲು ಕಳಿಸಿದ. ಪರ್ಯಾಣದಲ್ಲಿ ಬೆರಳೆರಡನ್ನು ಅದ್ದಿ ನಾಲಿಗೆಗಿಟ್ಟುಕೊಂಡು ಚಪ್ಪರಿಸಿದ ತ್ರೈಲೋಕ್ಯ.. ಅಂಬಲಿಯಲ್ಲಿ ತೇಲುತ್ತಿದ್ದ ಬೆಳ್ಳುಳ್ಳಿಯನ್ನು ಹೆಕ್ಕಿ ಬಾಯೊಳಗಿಟ್ಟುಕೊಂಡ.

“ನಮ್ಮ ಗರಡಿಯೊಳಗಿನ ಅಂಬಲಿ ರುಚಿಯನ್ನ ನಾ ತಿರುಗಿದ ದೇಶದ-ಪರದೇಶದ ಯಾವ ಮೂಲೆಯೊಳಗೂ ಕುಡಿಲಿಲ್ಲ ನೋಡು. ಈ ಹುಡುಗರೆಲ್ಲ ಕಸರತ್ತು ಕಲತಾರೇನು?”

“ಹೂಂ ಕಲತಾರು. ಇನ್ನು ಕೆಲವರು ಕಲಿತಿದ್ದಾರ. ನಮಗಿದ್ದ ಹಸಿವು ಈಗಿನ ಮಕ್ಕಳೊಳಗ ಎಲ್ಲಿ ಬರತೈತಿ ಹೇಳು. ನಾವು ಕಲಿತಿದೀವಿ, ಕಲಿಬೇಕು ಅನ್ನೋ ಹುಂಬತನದೊಳಗೆ ಏನು ಕಲಿತರ ಏನು ಅರಿವಿಗೆ ಬಂದೀತು. ಅರಿವಿಗೆ ಬಂದು ಕಲಿಯುವ ಹುಡುಗರು ಮನಸ್ಸಿನ ಚಂಚಲತನಕ್ಕ ಜಾರಿಬಿಡತಾರು. ಈಗ ನೀ ಬಂದೆಯಲ್ಲ. ನಮ್ಮ ರಣಕಲ್ಲಿನ ಗರಡಿ ಮ್ಯಾಳಕ್ಕ ಬಲಬಂತು.”

“ಈ ಗರಡಿಗೆ ನೀನು ಬಂದು ಏಸು ದಿನಗಳಾದವು?”

“ನಿನ್ನ ಮಾನ್ಯಖೇಟದ ಅರಸರು ಬಂಧಿಸಿದರು ಅಂತ ಕೇಳಿ ಗಾಬರಿಯಾಗಿ ನಾನು ಮುಣಗುಂದದಿಂದ ರಣಕಲ್ಲಿಗೆ ಬಂದೆ. ಅಷ್ಟೊತ್ತಿಗಾಗಲೇ ಇಲ್ಲಿ ಆ ಕೊಕ್ಕರಮೀಸಿ ದಳವಾಯಿದ ಆಡಂಬರ ಶುರುವಾಗಿತ್ತು ನೋಡು.. ಯಾರನ್ನ ಕೇಳಿದರೂ ನಿನ್ನ ಬಗ್ಗೆ ಮಾತೇ ಆಡತಿದ್ದಿಲ್ಲ. ಅವರಿವರ ಬಾಯಿಂದ ನಿನ್ನ ಕತೆ ಕೇಳಿ ಮನಸ್ಸಿಗೆ ಖೇದ ಆಯ್ತು. ಇನ್ನೇನು ಊರಿಗೆ ಹೊರಡಬೇಕು ಅನ್ನುವಾಗ ಅರಸಿಬೀದಿಯ ನಾಯಕರು ಬಂದು ನನ್ನ ಈ ಗರಡಿಗೆ ಗುರುವಾಗಿಸಿದರು. ಲೋಕ್ಯಾ ನಿನ್ನ ಕಣ್ಣಿಗೇನಾತು..?”

ತ್ರೈಲೋಕ್ಯ ನೆನಪಿನಾಳದಿಂದ ಉಸಿರನ್ನು ಬಗೆದು ಹೊರಗೆತ್ತಿ ನಿಟ್ಟುಸುರಗರೆದು ರಣಕಲ್ಲಿನ ಗಾಳಿಯನ್ನು ತನ್ನ ದೇಹದೊಳಕ್ಕೆ ಎಳೆದುಕೊಂಡು ನಿಡುಗಾಲದ ಕತೆಯನ್ನು ಗೆಳೆಯನ ಮುಂದೆ ಬಿಡಿಬಿಡಿಸಿ ಹೇಳತೊಡಗಿದ. ಅಷ್ಟೊತ್ತಿಗಾಗಲೇ ದಂಡಿನ ಹುಡುಗರಿಗೆ ಬಂದಿರುವಂಥ ಯಾತ್ರಿಕ ಭಂಟನೂ, ಹಿಂದೊಮ್ಮೆ ತಮ್ಮದೇ ಗರಡಿಯ ದಳವಾಯಿಯೂ ಆಗಿದ್ದವನೆಂದೂ.. ಈತ ಊರ ಜನರು ಕತೆಮಾಡಿ ಹೇಳುವ ವಸೂದೀಪ್ಯನ ಅಪ್ಪನೆಂದೂ ಗುಸುಗುಸು ಮಾತಾಡಿಕೊಳ್ಳುತ್ತಾ ಆ ಮಾತಿನ ಪಿಸು ಉಸಿರು ಚಂದ್ರಮೌಳೇಶನ ಗುಡಿಯ ಪೌಳಿಯಲ್ಲಿದ್ದ ಪಾತ್ರದವರ ಕಿವಿಗೆ ಮುಟ್ಟಿ, ಅಲ್ಲಿ ಮುಟ್ಟಿದಂತ ಸುದ್ದಿ ಆಚಾರರ ಬೀದಿಗೂ, ಧರೆಗೆ ದೊಡ್ಡವರಾದ ಕರಿ-ಬಿಳಿ ಕಂಕಣದವರ ಬೀದಿಗೂ, ರಾಜರ ಬೀದಿಗೂ, ತೇರಿನ ಬೀದಿಗೂ ತಲುಪಿ ಕಟ್ಟಕಡೆಯ ನರಸಮ್ಮನ ಮನೆಯ ಅಂಗಳಕ್ಕೂ ಕಾಲಿಟ್ಟಿತು.

“ಅಬ್ಬೆ.. ಅಬ್ಬೆ.. ನೀವು ಈಗಿಂದೀಗ ಗರಡಿ ಮನೆಯ ಅಂಗಳಕ್ಕ ಬರಬೇಕು ಅಂತ ದಳವಾಯಿಗಳು ಹೇಳಿ ಕಳಿಸಿದಾರ.”
“ಯಾಕೋ ನನ್ನಪ್ಪ ವಸೂದೀಪ್ಯನಿಂದ ಏನಾದರೂ ಅಪಚಾರ ಆಯ್ತೇನು..?”
“ಇಲ್ಲಬ್ಬೆ ನಮಗದೇನು ಗೊತ್ತಿಲ್ಲ. ನೀ ಬರಲೇಬೇಕು ಕರಕೊಂಡು ಬರ್ರಿ ಅಂತ ಹೇಳಿದಾರ. ನಮ್ಮ ದೊಂದಿ ಬೆಳಕನ್ಯಾಗ ಹೋಗೂಣು ಬರ್ರಿ.”
“ನಿಂತಕಾಲ ಮ್ಯಾಲ ಬರ್ರಿ ಅಂದರ ಹ್ಯಾಂಗೋ ನನ್ನಪ್ಪಾ… ಒಂದೊಬ್ಬಿ ಹಿಟ್ಟು ಕದಡಿಟ್ಟಿರುವೆ. ಬಿಸಿಬಿಸಿ ಎರಡು ಕೈರೊಟ್ಟಿ ಮಾಡಿ ಬಂದೇನು.”
“ಅದೆಲ್ಲ ನಮಗ ಗೊತ್ತಿಲ್ಲರೀ… ನಿಮ್ಮನ್ನ ಈಗಿಂದೀಗ ಕರಕೊಂಡು ಬರಬೇಕು ಅಂತ ದಳವಾಯಿಗಳು ಹೇಳಿದ್ದಾರೆ.”
“ಅಂಥ ಅವಸರಾದರೂ ಏನಿದ್ದೀತು ಮಾಲಿಂಗ. ನೀನು ಹೋದಾಗ ಅವರೇನು ಹೇಳಲಿಲ್ಲೇನು. ಬಾ ಮಾಲಿಂಗ ಹೋಗಿ ಬಂದರಾಯ್ತು. ಎಳೆಗುದುರೆಗೆ ಏನಾದರೂ ಮೈಗೆ ಏಟಾಗಿತ್ತೋ ಏನೋ.. ಇಲ್ಲ ವಸೂದೀಪ್ಯನ ನಡವಳಿಕೆ ಗರಡಿಮನೆಗೆ ಅಗೌರವ ತಂದಿತೋ ಏನೋ…”
ಮಹಾಲೇಖೆ ಮುಂಗೈಗೆ ಅಂಟಿದ್ದ ಹಿಟ್ಟನ್ನು ತೊಳೆದು, ಉಟ್ಟಿದ್ದ ಸೀರೆಯ ಸೆರಗನ್ನು ಮುಂದೆ ಮಾಡಿಕೊಂಡು ಕೈ ಒರೆಸಿಕೊಳ್ಳುತ್ತಾ ವಾರಪಡಸಾಲೆಯ ಮೊಗದಾಟಿ ಮೆಟ್ಟಿಲೆರಡನ್ನು ಇಳಿಯುತ್ತಿದ್ದಾಗ ದಂಡಿನ ಹುಡುಗ ಬಾಯಿಬಿಟ್ಟ.
“ನಿಮ್ಮನ್ನ ಕಾಣಲಿಕ್ಕ ಲೋಕ್ಯನಾಥನೋ.. ತ್ರೈಲೋಕ್ಯನೋ ಅನ್ನೋ ಹೆಸರಿನ ಮನಸ್ಯಾರು ಬಂದಾರು.”

ಮೆಟ್ಟಲಿಳಿಯುತ್ತಿದ್ದ ಮಹಾಲೇಖೆಯ ಕಾಲುಗಳು ಆಯತಪ್ಪಿ ಮುಗ್ಗಾಲೂರಿ ಧಡಗ್ಗೆಂದು ನೆಲಕ್ಕೆ ಕುಸಿದಳು. ಕಂಬಕ್ಕೊರಗಿ ಮೊಣಕಾಲುಗಳ ನಡುವೆ ಮುಖ ಇಟ್ಟುಕೊಂಡು ತಲೆಯಾಡಿಸುತ್ತಿದ್ದ ವಸೂದೀಪ್ಯ ಧಡಗ್ಗನೇ ತಲೆ ಎತ್ತಿ ತಾಯಿ ಕಡೆಗೆ ನೋಡಿದ. ದಂಡಿನ ಹುಡುಗರಿಬ್ಬರು ಮತ್ತು ಮಾಲಿಂಗನೂ ಆಯತಪ್ಪಿ ಬಿದ್ದಿದ್ದ ಮಹಾಲೇಖೆಯನ್ನು ಹಿಡಿದೆತ್ತಿ ಪಡಸಾಲೆಯಲ್ಲಿ ಕೂರಿಸಿದರು. ಮಾಲಿಂಗನ ಹೆಂಡತಿ ಅಬ್ಬೆಗಾಗಿ ಒಳಗೋಡಿ ನೀರು ತಂದು ಕೊಟ್ಟಳು. ತನ್ನನ್ನು ತಾನೇ ನಂಬದ ಸ್ಥಿತಿಯಲ್ಲಿ ಮಹಾಲೇಖೆ ತನ್ನ ಮೈ ಚರ್ಮ ತಾನೇ ಚಿವುಟಿಕೊಂಡು ಅಳು ನುಂಗಿಕೊಂಡ ಮುಖಾರವಿಂದದಲ್ಲಿ ಮಗನ ಕಡೆಗೆ ನೋಡಿದಳು. ವಸೂದೀಪ್ಯ ಕುಳಿತಲ್ಲಿಂದ ಎದ್ದು ಬಂದು ತಾಯಿಯ ಕೈಹಿಡಿದು ಅವಳ ಕಣ್ಣಲ್ಲಿ ತುಂಬಿಕೊಂಡಿದ್ದ ನೀರೊಳಗಿನ ಗೊಂಬೆಯನ್ನು ಜಾರಿಸುವ ಕ್ಷಣಕ್ಕಾಗಿ ಕಾದ.. ಊಹ್ಞೂ.. ಆಕೆ ಅಳಲಿಲ್ಲ. ಕೆರೆಯ ಅಂಗಳ ತುಂಬಿದಂತೆ ತುಂಬಿ ಬಂದ ಕಣ್ಣೀರನ್ನು ಪಿಳಕಿಸದೆ ತಡೆದಿದ್ದಳು. ಆಕಾಶವೂ ಭೂಮಿಯೂ ಒಂದಾಗುವ ಕ್ಷಿತಿಜದ ಅಂಚು ಅಲ್ಲಿ ಕಾಮನ ಬಿಲ್ಲಾಗಿ ಬಗೆಬಗೆಯ ಏಳುಬಣ್ಣಗಳ ರಂಗನ್ನು ನುಂಗಿಕೊಳ್ಳುವ ಹಾಗೆ ಗೋಚರಿಸಿತು. ಸಿದ್ಧಸಾಧುವಿನ ಕಣ್ಣಲ್ಲಿ ಅಡಗಿದ್ದ ಬೆಳಕು, ತಾಯಿ ಕಣ್ಣಲ್ಲಿ ಅಡಗುತ್ತಿರುವ ಆ ಏಳುಬಣ್ಣಗಳ ಗರಿಯೂ ವಸೂದೀಪ್ಯನನ್ನು ಸೂರೆಗೊಂಡವು. ಅಬ್ಬೆ ಎಂದು ತಾಯಿಯ ಭುಜ ದಡವಿ ಎಬ್ಬಿಸಿದಾಗ ಆಕೆ ಯಾವ ಕ್ಷಣದಲ್ಲಿ ರೆಪ್ಪೆ ಬಡಿದಳೋ ಅದ್ಯಾವ ಮಾಯದಲ್ಲಿ ಕಣ್ಣೀರ ಕೆರೆಕಟ್ಟೆ ಒಡೆಯಿತೋ.. ಕತ್ತಲು ಬೆಳಕನ್ನು ನುಂಗಿದಂತೆ ಬೆಳಕೂ ಕತ್ತಲನ್ನು ನುಂಗುವ ಹಾಗೆ ತಾಯಿ ಭ್ರಮೆಗೊಂಡಿದ್ದಳು.

ಯಾರ ಬರುವಿಗಾಗಿ ಕಾದು ಕಣ್ಣಸುತ್ತಲೂ ಕರಿಕಪ್ಪಿನ ಕೆರೆ ಕಟ್ಟಿತ್ತೋ ಅವರು ಬಂದಾಗ ಹೀಗೆ ಸುಮ್ಮನೇ ಗಪ್ಪಗಾರಾಗಿ ಕುಳಿತಿರುವುದಕ್ಕಾಗಿ ಮೋಹವನ್ನು ಉಣಬೇಕೆ..? ಅಕ್ಕರೆಯನ್ನು ಹೆತ್ತು ಪೋಷಿಸಬೇಕೆ…! ಅಬ್ಬೆಯ ಭುಜದಡವಿ ಮಾಲಿಂಗನ ಹೆಂಡತಿ ಮಾತಾಡಿಸಿದಳು.
“ನೀ ಎದ್ದು ಹೋಗಿ ಕರೆದುಕೊಂಡು ಬಾ ಅಬ್ಬೆ, ಚಿಕ್ಕಪ್ಪನಿಗಾಗಿ ಬಿಸಿಬಿಸಿ ಕೈರೊಟ್ಟಿ ಮಾಡುವೆ. ಉಂಡು ನಿಧಾನದಲ್ಲಿ ಮಾತಾಡಿದರಾಯ್ತು. ಎದ್ದೇಳು ಅಬ್ಬೆ..”

ಇರುವೆ ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಲ್ಲಿ ಮನುಷ್ಯರು, ಕರಡಿಗಳು, ಆನೆಗಳು ಮಾತ್ರ ಮಮಕಾರದ ಒಡಲಚೀಲ ಕಟ್ಟಿಕೊಂಡು ಹುಟ್ಟಿರುತ್ತವೆ. ಹಾಗಾಗಿ ಈ ಮಮಕಾರವೆಂಬುದು ಕರುಣೆಯಾಗಿ, ಆ ಕಾರುಣ್ಯವೇ ಭಾಷೆಯಾಗಿ, ಆ ಭಾಷೆಯ ತಿಳಿಬೆಳಕಲ್ಲಿ ಬದುಕಿನ ಗುಟ್ಟುಗಳು, ಒಳಗುಟ್ಟುಗಳು, ಪರಸ್ಪರ ಸಂಬಂಧಗಳು ಹೆಣೆದುಕೊಂಡಿರಲಾಗಿ ಇಂದು ಮನುಷ್ಯ ಮಾತ್ರ ಯೋಚಿಸುವ, ಯೋಚಿಸಿದ್ದ ವಿವೇಚಿಸುವ ಬುದ್ಧಿವಂತಿಕೆಯನ್ನು ಕಲಿತಿದ್ದಾನೆ ಎಂದು ಸಿದ್ಧಸಾಧು ಉಪನಿಷ್ಯತ್ತಿನ ಬಗ್ಗೆ ಹೇಳುವಾಗ ಹೇಳಿದ್ದು ವಸೂದೀಪ್ಯನ ಅರಿವಿಗೆ ಬರತೊಡಗಿತು. ದಿಙ್ಮೂಢಳಾಗಿ ಕುಳಿತ ಆಕೆಯ ಮುಖಭಾವದಲ್ಲಿ ಗೆಲುವೆಂಬುದಿಲ್ಲ. ನಿರಾಸೆಯ ನಿಟ್ಟುಸಿರಿಲ್ಲ. ಗಂಡನಿಲ್ಲದೆ ತಾನು ಅನುಭವಿಸಿದ ಯಾತನೆಗಳು ಆಕೆಯ ಚಿಂತೆಯಲ್ಲಿ ಮೆರವಣಿಗೆ ಹೊರಟಿದ್ದಂತೆ ನಿರ್ಲಿಪ್ತಳಾಗಿದ್ದಳು ಮಹಾಲೇಖೆ. ಮಾತಿಲ್ಲ-ಕತೆಯಿಲ್ಲ ಇದ್ದಕ್ಕಿದ್ದಂತೆ ಬಿಗುವಾದ ವಾತಾವರಣದಲ್ಲಿ ಮೌನವೂ ಸೇರಿಕೊಂಡು ತಿಳಿಯಾಗುವ ಯಾವ ಅವಕಾಶಗಳೂ ಇಲ್ಲವೆಂದು ಅರ್ಥಮಾಡಿಕೊಂಡ ಮಾಲಿಂಗನೂ ದಂಡಿನ ಹುಡುಗರು ಜೊತೆಯಾಗಿ ಗರಡಿಮನೆಯ ಕಡೆಗೆ ಹೊರಟರು.

ನಿಜವಾದ ಸುಖ ಯಾವುದು..? ಅರಿತೆನೆಂಬ ಅರಿವು ಸುಖವೇ, ಕಳೆದುಕೊಂಡುದರ ಅರಿವಾದಾಗ ಕಾಲವೂ ಕಳೆದಿರುತ್ತದೆ. ಅನುಭವ ಅರಿವುಗಳೆರಡೂ ಗುರು ಕಾಣಿಸಿದ ಬೆಳಕಿನ ಸೋಜಿಗದಲ್ಲೇ ಇದೆಯೇ.. ತನ್ನ ಇರುವಿಕೆಯಲ್ಲೇ ಅರಿವನ್ನು ಸಾಧಿಸುವ ಬಗೆಯನ್ನು ಹೇಳಿಕೊಡಬಲ್ಲ ಗುರುವನ್ನು ಹುಡುಕಬೇಕಿದೆ. ಅಬ್ಬೆಗೆ ಅಪ್ಪನ ಆಸರೆ ಸಿಕ್ಕಿದರೆ ನಾನು ಅರಿವನ್ನು ಅರಿಯುವ ಸಾಧನೆಯ ದಾರಿಗೆ ಯಾವ ಅಡೆತಡೆಯೂ ಇರುವುದಿಲ್ಲ. ಅಬ್ಬೆಯ ಕಣ್ಣೀರು ಯಾವ ಕ್ಷಣದಲ್ಲಿ ತುಳುಕಿತೆಂದು ಅಂದಾಜಿಸಲಾಗದಷ್ಟು ಮನಸ್ಸು ಮಬ್ಬುಗೊಂಡಿತಲ್ಲ…
“ಅಗೋ ಚಿಕ್ಕಪ್ಪ ಬಂದರೂ ಅಂತ ಕಾಣತದೆ. ಕಾಲಿಗೆ ನೀರು ಕೊಡತೀನಿ.”

ಮಾಲಿಂಗನ ಹೆಂಡತಿ ತುಂಬಿದ ತಂಬಿಗೆ ಹಿಡಿದು ಅಂಗಳಕ್ಕೆ ಬಂದಾಗ ವಸೂದೀಪ್ಯ.. ಅಬ್ಬೆ ಹೇಳುತ್ತಿದ್ದ ಅಪ್ಪನ ಕಲ್ಪನೆಯನ್ನು ಮತ್ತೊಮ್ಮೆ ನೆನೆದು ಹೊರಗೆ ಹಣಿಕಿದ. ಮಹಾಲೇಖೆ ಕುಳಿತಲ್ಲಿಂದಲೇ ಎದ್ದು ನಿಂತಳು.

(ಮುಂದುವರೆಯುವುದು…)

Previous post ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
Next post ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…

Related Posts

ಶರಣರು ಕಂಡ ಸಮಸಮಾಜ
Share:
Articles

ಶರಣರು ಕಂಡ ಸಮಸಮಾಜ

July 4, 2022 ಡಾ. ಚಂದ್ರಶೇಖರ ನಂಗಲಿ
(ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆ) ಹನ್ನೆರಡನೆ ಶತಮಾನದ ಶರಣ ಚಳುವಳಿಯನ್ನು ಅಧ್ಯಯನ ಮಾಡುವಾಗ 800 ವರ್ಷಗಳ ಅಂಧಕಾರಯುಗವನ್ನು ಮರೆಯಬಾರದು. ವಚನಗಳನ್ನು ಸಾಹಿತ್ಯ...
ಅನುಭಾವ ಮತ್ತು ಅನಿರ್ವಚನೀಯತೆ
Share:
Articles

ಅನುಭಾವ ಮತ್ತು ಅನಿರ್ವಚನೀಯತೆ

March 12, 2022 ಡಾ. ಎನ್.ಜಿ ಮಹಾದೇವಪ್ಪ
ನಾವು ಇಂದ್ರಿಯಾನುಭವವನ್ನು ವರ್ಣಿಸಿದಂತೆ ಅನುಭಾವ ಅಥವಾ ತುರೀಯವನ್ನು ವರ್ಣಿಸಲಾಗದು. ಅನುಭಾವಿಗಳೇ ಅದನ್ನು ಅನಿರ್ವಚನೀಯ, ಮಾತುಮನಂಗಳಿಂದತ್ತತ್ತ, ಮೂಕ/ಶಿಶು ಕಂಡ...

Comments 9

  1. ಕವಿತಾ ಮುದೇನೂರು
    Apr 20, 2025 Reply

    ಕತೆಯನ್ನು ಆಳವಾಗಿ, ವಿಸ್ತಾರವಾಗಿ, ಐತಿಹಾಸಿಕ ಸನ್ನಿವೇಶಗಳ ಜೊತೆಜೊತೆಗಿಟ್ಟು ಬರೆಯುತ್ತಿರುವ ಮಹಾದೇವ ಹಡಪದ ಅವರಿಗೆ ಶರಣು.

  2. Sharath T
    Apr 20, 2025 Reply

    I am really inspired along with your story telling abilities as well as with the depth of your knowledge.

  3. ಬಸವಕಿರಣ, ಭಾಲ್ಕಿ
    Apr 28, 2025 Reply

    ಕತೆಯ ನಡೆಯಲ್ಲಿ, ಪಾತ್ರಗಳ ಒಳತೋಟಿಗಳಲ್ಲಿ ಜೀವನ ಸಾರವೇ ತುಂಬಿಕೊಂಡಂತೆ ಹೃದಯ ಮುಟ್ಟುವ ಅನುಭವವಾಗುವುದು ಖಂಡಿತ. ಕತೆಗಾರ ಮಹಾದೇವ ಅವರ ಓದಿನ ಹರವು ದೊಡ್ಡದಿದೆ🫡

  4. ವಿಶಾಲಾಕ್ಷಿ ತಿಪಟೂರು
    Apr 28, 2025 Reply

    ಮಹಾಲೇಖೆ ಹಾಗೂ ತ್ರೈಲೋಕ್ಯರ ಮಿಲನ ಹೇಗಿರಬಹುದು….. ಕಲ್ಪನೆ ಮಾಡಿಕೊಂಡರೆ ಕಣ್ಣು ಹನಿ ಇಡುತ್ತವೆ.

  5. ರಾಜು ಕಮತಗಿ
    May 1, 2025 Reply

    ಕತೆ ಕೊಂಚ ದೀರ್ಘ ಎನಿಸಿದರೂ ಎಳೆಎಳೆಯಾಗಿ ಓದಿಸಿಕೊಂಡು ಹೋಗುತ್ತದೆ. ಪ್ರತಿ ಕಂತಿನಲ್ಲಿ ಇನ್ನೂ ಜಾಸ್ತಿ ಕೊಡಬಹುದಲ್ಲಾ… ತ್ರೈಲೋಕ್ಯ ಮಹಾಲೇಖೆಯರ ಭೇಟಿಯನ್ನು ಇದರಲ್ಲೇ ಮುಂದುವರಿಸಿದ್ದರೆ ಚೆನ್ನಾಗಿತ್ತು…

  6. ಸುಶೀಲಾ ಪ್ರತಾಪ್
    May 9, 2025 Reply

    ಇತಿಹಾಸ, ತಾತ್ವಿಕತೆ, ಭಾವನೆ ಮತ್ತು ಮಾನವೀಯ ಸಂಬಂಧಗಳ ಸಂಗಮವಾಗಿ ಕತೆ ಬರೆಯುತ್ತಿರುವ ಮಹಾದೇವ ಅಣ್ಣನವರಿಗೆ ವಂದನೆಗಳು.

  7. Ashakiran, Bengaluru
    May 17, 2025 Reply

    It’s simply wonderful, Waiting for 7 th chapter

  8. ರಾಜು ಚಿತೆವಾಡಾ
    May 28, 2025 Reply

    ಇತಿಹಾಸದ ವ್ಯಕ್ತಿಗಳ, ಅದರಲ್ಲೂ ಶರಣರ ಕತೆಗಳನ್ನು ಬರೆಯುವುದು ಸರಳ ಸಂಗತಿಯಲ್ಲಾ. ಹಿಂದೆ ಬಯಲಿನಲ್ಲಿ ನಿಮ್ಮ ಕತೆಗಳನ್ನು ಓದಿದ್ದೆ, ಬಹಳ ಪ್ರಭಾವಿತನಾಗಿದ್ದೆ, ಮತ್ತೆ ಕತೆ ಬರೆಯುತ್ತಿರುವುದು ನಿಜಕ್ಕೂ ನನಗೆ ಬಹಳ ಸಂತೋಷ ತಂದಿದೆ.👌👌👌

  9. Kamal D.
    May 28, 2025 Reply

    ಮಕ್ಕಳಿಗೆ ಶರಣರ ಪರಿಚಯ ಮಾಡಿಸಲು ಕತೆಯ ಪ್ರಕಾರ ಬಹಳ ಅನುಕೂಲಕರ. ಥ್ಯಾಂಕ್ಯೂ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಮನಸ್ಸು
ಮನಸ್ಸು
September 7, 2020
ಹಣತೆ ಸಾಕು
ಹಣತೆ ಸಾಕು
September 14, 2024
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ದಾಸೋಹ ತತ್ವ
ದಾಸೋಹ ತತ್ವ
January 10, 2021
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
Copyright © 2025 Bayalu