Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
Share:
Articles July 10, 2023 ಡಾ. ನಟರಾಜ ಬೂದಾಳು

ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು

‘ಮಿಲಿಂದ ಪ್ರಶ್ನೆ’ ಕೃತಿಗೆ ಬೌದ್ಧ ದರ್ಶನದ ಸಂದರ್ಭದಲ್ಲಿ ಪ್ರಮುಖ ಸ್ಥಾನವಿದೆ. ಇದು ಬೌದ್ಧ ಕೇಂದ್ರ ತಾತ್ವಿಕತೆಯ ಕಡೆಗೆ ಕೈಮಾಡುವ ಕೃತಿ. ಬೌದ್ಧ ಕೇಂದ್ರ ತಾತ್ವಿಕತೆಯ ಕಡೆಗೆ ನಡೆಯುತ್ತಾ ನಡೆಯುತ್ತಾ ಹೀನಯಾನ-ಮಹಾಯಾನವೆಂಬ ವಿಭಜನೆಗಳು, ನಾಲ್ಕು ಚಿಂತನಾ ಪ್ರಸ್ಥಾನಗಳ ತಾತ್ವಿಕ ಕಿತ್ತಾಟಗಳು – ಇವ್ಯಾವೂ ಉಳಿಯಲಾರವು. ಸರಳವಾಗಿ ಪ್ರಶ್ನೋತ್ತರ ರೂಪದಲ್ಲಿ ಬೌದ್ಧ ದರ್ಶನದ ಪ್ರಮುಖ ನಿಲುವುಗಳನ್ನು ಮಂಡಿಸುವ ಈ ಕೃತಿಯ ಕೆಲವು ಪ್ರಶ್ನೋತ್ತರಗಳನ್ನು ಕನ್ನಡದ ಭಾಷಾಜಾಯಮಾನಕ್ಕೆ ಒಗ್ಗಿಸಿ ನೀಡುವ ಪ್ರಯತ್ನ ಇದು. ಇಲ್ಲಿ ಪ್ರಶ್ನೆ ಕೇಳುವವನು ಮಿಲಿಂದನೆಂಬ ಮಹಾರಾಜ, ಉತ್ತರಿಸುವವನು ನಾಗಸೇನನೆಂಬ ಬೌದ್ಧ ಭಿಕ್ಕು.

*** *** ***
ಮರುಜನ್ಮದ ಬಗೆಗೆ ಬೌದ್ಧ ದರ್ಶನದ ನಿಲುವೇನು? ಎಂಬ ಪ್ರಶ್ನೆಯನ್ನು ತಿರುತಿರುಗಿ ಕೇಳಲಾಗುತ್ತದೆ. ಹೀಗೆ ಕೇಳುವವರಲ್ಲಿ ಸಾಮಾನ್ಯವಾಗಿ ಒಂದು ಪೂರ್ವ ತಿಳುವಳಿಕೆಯಿರುತ್ತದೆ. ಅದೇನೆಂದರೆ, ಪ್ರತಿಯೊಂದು ‘ಜನ್ಮವೂ’ ಸ್ವತಂತ್ರವಾದುದು ಮತ್ತು ಇಲ್ಲಿಂದ ಇಲ್ಲಿಯವರೆಗೆ ‘ಈ ಜನ್ಮ’ ಎಂದು ಗುರುತಿಸಿಬಹುದೆಂದು ನಂಬಿರುತ್ತಾರೆ. ಬೌದ್ಧ ದರ್ಶನವು ಲೋಕವನ್ನು ನಿರಂತರವಾದ ಪ್ರವಾಹವೆಂದು ವಿವರಿಸಿರುವುದರಿಂದ, ಇಲ್ಲಿನ ಎಲ್ಲ ಜೀವಿಗಳು ಈ ಪ್ರವಾಹದಲ್ಲಿ ರೂಪುಗೊಳ್ಳುವ ಮತ್ತು ವಿಸರ್ಜನೆಗೊಳ್ಳುವ ‘ಪ್ರಕಿಯೆ’ ಮಾತ್ರ. ಹಾಗಾಗಿ ಇಲ್ಲಿ ಯಾವ ಜೀವಿಗೂ ಆರಂಭ ಮತ್ತು ಅಂತ್ಯವೆಂದು ಕರೆಯಬಹುದಾದ ನಿಶ್ವಿತ ಘಟನೆಗಳುಳ್ಳ ‘ಜೀವಮಾನ’ವೆಂಬುದು ಇಲ್ಲ. ಇನ್ನೂ ಮುಖ್ಯವಾಗಿ ಒಂದು ಜೀವಿಯಲ್ಲಿ ನಿರಂತರವಾಗಿ ಮತ್ತು ಸ್ವತಂತ್ರವಾಗಿ ಮುಂದುವರಿಯುವ ಸ್ವತಂತ್ರವಾದ ಆತ್ಮವೆಂಬುದು ಇಲ್ಲ. ಎಲ್ಲವೂ ನಿರಂತರ ಏರ್ಪಡುತ್ತಲೇ ಇರುವ ಸಂಬಂಧಗಳು ಮಾತ್ರ. ಹಾಗಾಗಿ ಈ ಸಂಬಂಧದ ಸ್ವರೂಪವನ್ನು ಮಾತ್ರ ವಿವರಿಸಲು ಸಾಧ್ಯ. ಈ ಪ್ರಶ್ನೋತ್ತರ ಅದನ್ನು ಖಚಿತಪಡಿಸುತ್ತದೆ.

ಮಿಲಿಂದ: ಭನ್ತೇ ನಾಗಸೇನ, ಹುಟ್ಟುವ ಯಾರೇ ಆಗಲಿ, ಅವನೇ ಆಗಿರುತ್ತಾನೋ ಅಥವಾ ಬೇರೆಯವನೋ?

ನಾಗಸೇನ: “ಅವನೂ ಅಲ್ಲ, ಬೇರೆಯೂ ಅಲ್ಲ, ಮಹಾರಾಜ”

ಮಿಲಿಂದ: ಹಾಗೆಂದರೆ? ಉದಾಹರಣೆಯೊಂದನ್ನು ಕೊಡಿ.

ನಾಗಸೇನ: ಮಹಾರಾಜ, ನೀನು ಹಿಂದೆ ಮಗುವಾಗಿದ್ದಾಗ ತೆವಳುತ್ತಾ, ತೊದಲುತ್ತಾ, ಬೆನ್ನಡಿಯಾಗಿ ಮಲಗಿದ್ದೆ. ಈಗ ದೊಡ್ಡವನಾಗಿ ಪ್ರಶ್ನೆ ಕೇಳುತ್ತಾ ನಿಂತಿದ್ದೀಯ. ಆ ಮಗು ಮತ್ತು ದೊಡ್ಡವನಾಗಿರುವ ನೀನು ಒಬ್ಬನೆಯೋ ಬೇರೆ ಬೇರೆಯೋ?

ಮಿಲಿಂದ: ಆ ಮಗು ಬೇರೆ ನಾನು ಬೇರೆ ಭನ್ತೇ.

ನಾಗಸೇನ: ಆ ಮಗು ಬೇರೆ ನೀನು ಬೇರೆ ಅನ್ನುವಿಯಾದರೆ, ಆ ಮಗುವಿನ ತಂದೆ ತಾಯಿಗಳು ನಿನ್ನ ತಂದೆ ತಾಯಿಗಳಲ್ಲ, ಆ ಮಗುವಿನ ಗುರು ನಿನ್ನ ಗುರುವಲ್ಲ. ಆಗಿನ ಯಾವ ತಿಳಿವೂ ನಿನ್ನದಲ್ಲ – ಎಂದಾಗುತ್ತದೆ. ಏನು ಮಹಾರಾಜ? ಒಂದು ತಿಂಗಳ ಗರ್ಭದ ತಾಯಿ ಬೇರೆ, ಎರಡು ತಿಂಗಳ ಗರ್ಭದ ತಾಯಿ ಬೇರೆ, ಮೂರು ತಿಂಗಳ ಗರ್ಭದ ತಾಯಿ ಬೇರೆಯೆ? ಚಿಕ್ಕವನ ತಾಯಿ ಬೇರೆ ದೊಡ್ಡವನ ತಾಯಿ ಬೇರೆಯೆ?

ಮಿಲಿಂದ: ಅಲ್ಲ ಭನ್ತೇ, ಆದರೆ ಇದನ್ನು ನೀವು ಹೇಗೆ ವಿವರಿಸುವಿರಿ?

ನಾಗಸೇನ: ಬೇರೆ ಬೇರೆಯೂ ಅಲ್ಲ ಹಾಗೆಯೇ ಒಂದೇ ಅಲ್ಲ. ಈ ದೇಹವೆಂಬ ‘ಪ್ರಕ್ರಿಯೆಯಲ್ಲಿ’ ಇವೆಲ್ಲ ಸಂಗ್ರಹವಾಗುತ್ತ, ವಿಸರ್ಜನೆಯಾಗುತ್ತ ಹೋಗುತ್ತಿರುವ ಸಂಬಂಧಗಳು. ಇದೊಂದು ಪ್ರವಾಹ ಮಾತ್ರ. ಇದನ್ನು ಒಂದು ಅಥವಾ ಬೇರೆ ಬೇರೆ ಎಂದು ವಿವರಿಸಲಾಗದು.

ಮಿಲಿಂದ: ಮತ್ತಷ್ಟು ಉದಾಹರಣೆ ಕೊಡಿ.

ನಾಗಸೇನ: ಯಾರಾದರೊಬ್ಬನು ರಾತ್ರಿಯೆಲ್ಲ ಉರಿಯಲಿ ಎಂದು ದೀಪವೊಂದನ್ನು ಹತ್ತಿಸಿದರೆ ಮೊದಲ ಜಾವದಲ್ಲಿ ಆ ದೀಪವು ಉಂಟುಮಾಡಿದ ಜ್ವಾಲೆ, ಮತ್ತು ಎರಡನೆಯ ಜಾವದಲ್ಲಿ ಅದು ಉಂಟುಮಾಡಿದ ಜ್ವಾಲೆ ಒಂದೆಯೋ ಬೇರೆ ಬೇರೆಯೋ?

ಮಿಲಿಂದ: ಒಂದೇ ಭನ್ತೇ.

ನಾಗಸೇನ: ಒಂದೇ ಅಲ್ಲ, ಬೇರೆ ಬೇರೆಯೂ ಅಲ್ಲ. ದೀಪವೆಂಬುದೊಂದು ಪ್ರಕ್ರಿಯೆ. ಎಲ್ಲಿಯವರೆಗೆ ದೀಪ ಉರಿಯಲು ಬೇಕಾದ ಎಲ್ಲವೂ ಕೂಡಿ ಬರುವವೋ ಅಲ್ಲಿಯವರೆಗೆ ಅದು ನಿರಂತರವಾಗಿ ಉರಿಯುತ್ತದೆ. ಭಂಗಗೊಂಡಾಗ ಆರಿ ಹೋಗುತ್ತದೆ. ಹಾಗೆ ಉರಿಯುವಾಗ ಕೂಡಿಕೊಂಡಿರುವ ‘ಅಂಶಗಳ’ ಧರ್ಮವು (ಗುಣಸ್ವಭಾವಗಳು) ಪ್ರದರ್ಶಿತವಾಗುತ್ತದೆ. ಮನುಷ್ಯ ಜೀವಿಯೂ ಅಷ್ಟೆ. ಅವನು ಉಂಟಾಗಲು ಸೇರಿಕೊಂಡಿರುವ ಅಂಶಗಳ ಗುಣಸ್ವಭಾವಗಳು ‘ಪರಿಸ್ಥಿತಿ’ಯನ್ನಾಧರಿಸಿ ಪ್ರದರ್ಶಿತವಾಗುತ್ತವೆ.

ಮಿಲಿಂದ: ನೀನು ಜಾಣ ಭನ್ತೇ. ಅಂದರೆ ಈ ಜೀವ ಪ್ರವಾಹದಲ್ಲಿ ಇದುವರೆಗೆ ಸಂಗ್ರಹಗೊಂಡಿರುವ ಅಂಶಗಳ ಪ್ರಭಾವ ಇದ್ದೇ ಇರುತ್ತದೆ ಅಲ್ಲವೆ?

ನಾಗಸೇನ: ನಿಜ. ವೀಣೆಗೆ ಪತ್ರವಿಲ್ಲದಿದ್ದರೆ, ಚರ್ಮವಿಲ್ಲದಿದ್ದರೆ, ದ್ರೋಣಿಯಿಲ್ಲದಿದ್ದರೆ, ದಂಡವಿಲ್ಲದಿದ್ದರೆ, ಉಪವೀಣೆಯಿಲ್ಲದಿದ್ದರೆ, ತಂತಿಯಿಲ್ಲದಿದ್ದರೆ ಕಮಾನು ಇಲ್ಲದಿದ್ದರೆ, ವಾದಕನ ಸಾಮರ್ಥ್ಯ ಪ್ರಯತ್ನಗಳಿಲ್ಲದಿದ್ದರೆ, ಶಬ್ದ ಹುಟ್ಟುವುದೆ? ಹುಟ್ಟಿದ ಶಬ್ದದಲ್ಲಿ ಈ ಎಲ್ಲ ಅಂಶಗಳ ‘ಧರ್ಮ’ (ಗುಣಸ್ವಭಾವಗಳು) ವ್ಯಕ್ತವಾಗುವುದಿಲ್ಲವೆ? ಇವುಗಳಲ್ಲಿ ಯಾವುದಾದರೂ ಒಂದನ್ನು ವೀಣೆ ಎಂದು ಕರೆಯಲು ಸಾಧ್ಯವಿಲ್ಲ. ಹಾಗೆಯೇ ಇವುಗಳಿಗೆ ಹೊರತಾಗಿ ಇದೆ ಎಂದುಕೊಂಡಿರುವ ಇನ್ಯಾವುದೋ ಒಂದನ್ನು ವೀಣೆ ಎಂದು ಕರೆಯಲಾಗದು. ಅದನ್ನು ನುಡಿಸುವವನನ್ನೂ ಸೇರಿಸಿಕೊಂಡು ಈ ಎಲ್ಲ ಅಂಶಗಳ ಸಂಯೋಗವನ್ನು ವೀಣೆ ಎನ್ನುತ್ತೇವೆ. ಹಾಗಾಗಿ ಭವವಿಲ್ಲದೆ ಜನಿಸುವ ಸಂಸ್ಕಾರಗಳು ಯಾವುವೂ ಇಲ್ಲ. ಈ ಭವದ ಗುಣಸ್ವಭಾವಗಳು ಹಿಂದಿನಿಂದ ಬಂದಿರಲೇ ಬೇಕಲ್ಲವೆ? ಹಾಗೆಯೇ ಇವುಗಳೆಲ್ಲವನ್ನು ನಿರ್ವಹಿಸುವ ಸ್ವತಂತ್ರವಾದ ಒಂದನ್ನು ಬೇರೆಯಾಗಿ ಗುರುತಿಸಲು ಬರುವುದಿಲ್ಲ.

ಮಿಲಿಂದ: ಇನ್ನೊಂದು ಉದಾಹರಣೆಯನ್ನು ಕೊಡುವಿರಾ…

ನಾಗಸೇನ: ಉಪ್ಪನ್ನು ತಕ್ಕಡಿಯಲ್ಲಿ ತೂಗಬಹುದೆ ಮಹಾರಾಜ?

ಮಿಲಿಂದ: ತೂಗಲು ಸಾಧ್ಯವಿದೆ ಭನ್ತೇ.

ನಾಗಸೇನ: ಇಲ್ಲ ಮಹಾರಾಜ. ತಕ್ಕಡಿಯಲ್ಲಿ ತೂಗಲು ಸಾಧ್ಯವಿರುವುದು ಉಪ್ಪಿನ ಭಾರವನ್ನು ಮಾತ್ರ. ಅದರ ಬಣ್ಣವನ್ನು, ರುಚಿಯನ್ನು ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ.

ಮಿಲಿಂದ: ನೀನು ಜಾಣ ಭನ್ತೇ.

*** *** ***

ಮಿಲಿಂದ: ಭನ್ತೇ, ಯಾರ ಪಾಪ ಹೆಚ್ಚು? ತಿಳಿದು ಪಾಪ ಮಾಡುವವನದೊ? ತಿಳಿಯದೆ ಪಾಪ ಮಾಡುವವನದೊ?

ನಾಗಸೇನ: ತಿಳಿಯದೆ ಪಾಪ ಮಾಡುವವನ ಪಾಪ ಹೆಚ್ಚು.

ಮಿಲಿಂದ: ಹಾಗಾದರೆ ತಿಳಿಯದೆ ಪಾಪ ಮಾಡುವವರನ್ನು ನಾವು ಹೆಚ್ಚು ಶಿಕ್ಷಿಸಬೇಕಾಗುತ್ತದೆ.

ನಾಗಸೇನ: ಚೆನ್ನಾಗಿ ಕಾದು ಕೆಂಪಾಗಿರುವ ಕಬ್ಬಿಣದ ಗುಂಡೊಂದನ್ನು ಅದು ಗೊತ್ತಿರುವವನು ಹಿಡಿದರೆ ಹೆಚ್ಚು ಸುಡಿಸಿಕೊಳ್ಳುತ್ತಾನೋ, ಗೊತ್ತಿಲ್ಲದೆ ಹಿಡಿದವನು ಹೆಚ್ಚು ಸುಡಿಸಿಕೊಳ್ಳುತ್ತಾನೋ?

ಮಿಲಿಂದ: ತಿಳಿಯದೆ ಹಿಡಿಯುವವನು ಹೆಚ್ಚು ಸುಡಿಸಿಕೊಳ್ಳುತ್ತಾನೆ ಭನ್ತೇ.

ನಾಗಸೇನ: ಹೌದು. ಹಾಗಾಗಿ ತಿಳಿಯದೆ ಮಾಡುವವನು ಹೆಚ್ಚು ಪಾಪ ಮಾಡಿಬಿಡುತ್ತಾನೆ.

ಮಿಲಿಂದ: ನೀನು ಕುಶಲಿ ಭನ್ತೇ.

Previous post ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸ್ವತಂತ್ರ ಧರ್ಮ
Next post ಗೇಣು ದಾರಿ
ಗೇಣು ದಾರಿ

Related Posts

ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
Share:
Articles

ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು

June 14, 2024 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಬಸವಣ್ಣನವರ ‘ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯಾ’ ಎನ್ನುವ ವಚನದ ಅಂತ್ಯದಲ್ಲಿ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎನ್ನುವ...
ಪ್ರಭುಲಿಂಗಲೀಲೆ…
Share:
Articles

ಪ್ರಭುಲಿಂಗಲೀಲೆ…

May 10, 2022 ಡಾ. ಚಂದ್ರಶೇಖರ ನಂಗಲಿ
ಚಾಮರಸ ವಿರಚಿತ ಪ್ರಭುಲಿಂಗಲೀಲೆಯು ಅಲ್ಲಮಪ್ರಭುವನ್ನು ಶಿವನೊಡನೆ “ತಗುಳ್ಚಿ ಪೋಲಿಪ” ಕಥನಕ್ರಮದ ಮಧ್ಯಕಾಲೀನ ಮಹಾಕಾವ್ಯ. ಇದನ್ನು Phylosophical Allegory...

Comments 13

  1. ಜ್ಞಾನಪ್ರಕಾಶ್ ಕೊರಲಿ, ಧಾರವಾಡ
    Jul 12, 2023 Reply

    ಮಿಲಿಂದ ಮಹಾರಾಜನ ಮೂರೂ ಪ್ರಶ್ನೆಗಳು ಸರಳವಾಗಿದ್ದವು, ಆದರೆ ಉತ್ತರಗಳು ಗಹನವಾಗಿದ್ದವು. ಜನ್ಮಾಂತರಗಳಿವೆಯೇ ಎಂಬುದಕ್ಕೆ ಇದೆ ಅಥವಾ ಇಲ್ಲ ಎನ್ನುವ ಉತ್ತರ ಮಾತ್ರ ನಮಗೆ ಗೊತ್ತಾಗುವುದು. ಬೌದ್ಧ ಭಿಕ್ಕು ನಾಗಸೇನನ ಉತ್ತರಗಳು ನಿಜಕ್ಕೂ ತಿಳಿದುಕೊಳ್ಳುವಲ್ಲಿ ಕಠಿಣವಾಗಿವೆ.

  2. ವಿಕಾಸ್ ಗೌಡ, ವಿಜಯಪುರ
    Jul 12, 2023 Reply

    ಬುದ್ಧ ಧರ್ಮವು ಪುನರ್ಜನ್ಮವನ್ನು ಒಪ್ಪುವುದಿಲ್ಲ ಎನ್ನುವುದು ನನ್ನ ತಿಳುವಳಿಕೆಯಾಗಿತ್ತು, ಆದರೆ ಅನೇಕ ಬೌದ್ಧ ಭಿಕ್ಕುಗಳು ಪುನರ್ಜನ್ಮವನ್ನು ತಿಳಿಸುವ ಬೋಧಿಸತ್ವರ ಕತೆಗಳನ್ನು ಹೇಳುತ್ತಾರೆ. ಆತ್ಮವನ್ನು ಅಲ್ಲಗಳೆದ ಬುದ್ಧ ಧರ್ಮದಲ್ಲಿ ಪುನರ್ಜನ್ಮ ಪಡೆಯುವುದು ಯಾವುದು ಸರ್? ನನ್ನ ಬೌದ್ಧ ಗೆಳೆಯನೊಬ್ಬ ಹೇಳಿದ ಮನಸ್ಸು ಎಂದು, ಆದರೆ ಈ ಉತ್ತರ ನನಗೆ ಸರಿ ಎನಿಸುತ್ತಿಲ್ಲ. ಮಿಲಿಂದನ ಪ್ರಶ್ನೆಯೂ ಇದೆ ಆಗಿತ್ತು, ಗುರು ಕೊಟ್ಟ ಉತ್ತರ ನನಗೆ ಸ್ಪಷ್ಟತೆ ನೀಡಲಿಲ್ಲ.

  3. SAvitha, Chikkamagaluru
    Jul 12, 2023 Reply

    ಒಂದೇ ಜೀವಮಾನದಲ್ಲಿನ ಪ್ರತಿ ಗಳಿಗೆಯೂ ಜನ್ಮಾಂತರ- ವಿಶಿಷ್ಟ ವ್ಯಖ್ಯಾನ ಪುನರ್ಜನ್ಮ ಪರಿಕಲ್ಪನೆಗೆ!

  4. Omkarappa R
    Jul 13, 2023 Reply

    ದೀಪದ ಪ್ರಕ್ರಿಯೆಗೆ ನಮ್ಮ ಜೀವನವನ್ನು ಹೋಲಿಸಿಕೊಂಡು ನೋಡುವುದಾದರೆ ಪ್ರತಿದಿನವನ್ನೂ ಜನ್ಮಾಂತರವೆಂದು ಹೇಳಬಹುದೆನಿಸುತ್ತದೆ.

  5. ಶಶಿಧರ ಕಿರವಾಡಿ
    Jul 17, 2023 Reply

    ಝೆನ್ ಜ್ಞಾನದ ಬೋಧನೆಗಳು ನಮ್ಮ ನಂಬಿಕೆಗಳನ್ನು ಬುಡ ಸಮೇತ ಅಲ್ಲಾಡಿಸುವಂತೆ ಇರುತ್ತವೆ, ಮಿಲಿಂದನ ಮೂರು ಪ್ರಶ್ನೆಗಳು ಹಾಗೆ ಇವೆ, ಇವುಗಳ ಉತ್ತರಗಳು ನಮ್ಮ ತಿಳುವಳಿಕೆಗೆ ಸವಾಲಿನಂತಿವೆ.

  6. Giridhar Hoskote
    Jul 17, 2023 Reply

    ಸರ್, ನಿಮ್ಮ ಪುಸ್ತಕಗಳನ್ನ ಓದಿದ್ದೇನೆ. ಬುದ್ಧ ತತ್ವಗಳನ್ನು ಸೊಗಸಾಗಿ, ಸುಲಭವಾಗಿ ಎಂಥವರಿಗೂ ಅರ್ಥವಾಗುವಂತೆ ಆಕರ್ಷಕ ಶೈಲಿಯಲ್ಲಿ ಬರೆಯುವಿರಿ. ಬಯಲುನಲ್ಲಿ ಬರೆದ ನಿಮ್ಮ ಎಲ್ಲಾ ಲೇಖನಗಳನ್ನು ಓದಿದ್ದೇನೆ, thank you sir 🙏🏽

  7. ಕಿರಣ್ ಕುಮಾರ್, ಸೊಲ್ಲಾಪುರ
    Jul 18, 2023 Reply

    ಈ ಭವದ ಗುಣಸ್ವಭಾವಗಳು ಹಿಂದಿನಿಂದ ಬಂದಿರಲೇ ಬೇಕಲ್ಲವೆ?
    -ಈ ಮಾತು ಏನನ್ನು ಸೂಚಿಸುತ್ತದೆ? ಗುಣಸ್ವಭಾವಗಳು ಜನ್ಮಜನ್ಮಕ್ಕೆ ಪ್ರಯಾಣ ಬೆಳೆಸುತ್ತವೆಯೇ? ವೀಣೆ ನುಡಿಸುವುದನ್ನು ನಿಲ್ಲಿಸಿದರೆ ಅದರ ಪತ್ರ, ಚರ್ಮ, ದ್ರೋಣಿ, ದಂಡ, ತಂತಿ, ಉಪವೀಣೆಗಳೆಲ್ಲಾ ಏನಾಗುತ್ತವೆ? ಪೂರ್ವಜನ್ಮ ಪುನರ್ಜನ್ಮಗಳ ಕರ್ಮ ಸಿದ್ಧಾಂತದ ಬಹಳಷ್ಟು ಪುಸ್ತಕಗಳನ್ನು ಓದಿರುವ ನನಗೆ ಬುದ್ಧನ ಬನ್ತೆಯ ಮಾತುಗಳು ಗೊಂದಲ ಮೂಡಿಸಿದ್ದು ಸುಳ್ಳಲ್ಲಾ- ಸ್ವಲ್ಪ ವಿವರವಾಗಿ ಬರೆಯುವಿರಾ ಅಥವಾ ಇದರ ಬಗ್ಗೆ ನೀವೇನಾದರೂ ಪುಸ್ತಕ ಬರೆದಿದ್ದಲ್ಲಿ, ಪ್ಲೀಸ್ ತಿಳಿಸಿ.

  8. Ambale Naga
    Jul 22, 2023 Reply

    ನಟರಾಜ ಬೂದಾಳು ಅವರಿಗೆ ಧನ್ಯವಾದಗಳು. ಅತ್ಯುತ್ತಮವಾದ ಲೇಖನ. 🙏

  9. mshashidhar
    Jul 22, 2023 Reply

    ಬಯಲು ಬ್ಲಾಗ್ ನಲ್ಲಿ ಬರುವ ಎಲ್ಲಾ ಬರಹಗಳು ಭಿನ್ನ ಮತ್ತು ಜ್ಞಾನಪೂರ್ಣ ಆಗಿರುತ್ತವೆ,,,ನಾನು ಯಾರು ಎಂಬ ಆಳ ನಿರಾಳ ಪುಸ್ತಕ ಓದಿದಷ್ಟು ಓದಬೇಕೆನಿಸುವ ಪುಸ್ತಕ

  10. A.T.Patil, Raichur
    Jul 23, 2023 Reply

    As I studied and understood that….Conscious is process of evolution. It is regulerly evolving through gene..So we are not acting like monkey in this process. Future gen also not living like us.
    We can see its bio-print in our limbic brain..
    Totally its unknown process ..which unexplored by human..

  11. ಶ್ರೀನಾಥ ರಾಯಸಂ
    Jul 24, 2023 Reply

    ಎಲ್ಲಾ ಒಪ್ಪಬಹುದಾದ ಮತ್ತು ವಾಸ್ತವ ಬಿಂಬಿಸುವ ವಿಚಾರಗಳು . ಆತ್ಮ ಮತ್ತು ಪುನರ್ಜನ್ಮದ ಕಲ್ಪನೆ ಬಂದದ್ದು ಜೀವಿಯ ನಿರಂತರತೆಯನ್ನು ಪ್ರತಿಪಾದಿಸುವ ವಾದಗಳಿಂದ, ಆದರೆ ಅದನ್ನು ನಂಬಿಕೆಯೆಂದು ಪರಿಗಣಿಸಬಹುದೇ ಹೊರತು ಅದೇ ಸರಿ ಎಂದು ಒಪ್ಪಿಕೊಳ್ಳಲಾಗದು. ಬೌದ್ಧಧರ್ಮ ಪುನರ್ಜನ್ಮದ ನಂಬಿಕೆಯನ್ನೇ ತಳ್ಳಿಹಾಕಿತು.

  12. ಹರಪ್ರಸಾದ, ಬಳ್ಳಾರಿ
    Jul 26, 2023 Reply

    ನಟರಾಜ್ ಶರಣರಿಗೆ ಶರಣು. ಉಪ್ಪಿನ ಭಾರವನ್ನು ತಕ್ಕಡಿಯಲ್ಲಿ ತೂಗಬಹುದು, ಅದರ ಬಣ್ಣ ಮತ್ತು ರುಚಿಯನ್ನಲ್ಲ- ಎನ್ನುವ ಉತ್ತರದಲ್ಲಿ ಯಾವುದೋ ಅರ್ಥಗರ್ಭಿತ ಸೂಚನೆ ಅಡಗಿರುತ್ತದೆ, ಆದರೆ ನಾಲ್ಕೈದು ಬಾರಿ ಓದಿದರೂ ಅದು ಏನನ್ನು ಸೂಚಿಸುತ್ತದೆ ಎಂಬುದು ನನಗೆ ಗೊತ್ತಾಗಲೇ ಇಲ್ಲ, ದಯವಿಟ್ಟು ವಿವರಿಸಿಕೊಡುವಿರಾ?

  13. ಪ್ರಭಾಕರ ಡೋಣಿ
    Jul 28, 2023 Reply

    ತಿಳಿದು ಪಾಪ ಮಾಡುವವನ ಪಾಪವೇ ಹೆಚ್ಚೆಂದು ನನ್ನ ತರಕ್ವಾಗಿತ್ತು. ಭನ್ತೆಯ ಉತ್ತರ ನನ್ನನ್ನು ಬಹಳ ಯೋಚನೆಗೆ ಒಡ್ಡಿತು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸೂರ್ಯ
ಸೂರ್ಯ
January 8, 2023
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಹುಡುಕಾಟ
ಹುಡುಕಾಟ
July 21, 2024
ಆಸರೆ
ಆಸರೆ
August 6, 2022
ಪೊರೆವ ದನಿ…
ಪೊರೆವ ದನಿ…
August 11, 2025
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ಬಯಲಾಟ
ಬಯಲಾಟ
March 17, 2021
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು
August 11, 2025
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
Copyright © 2025 Bayalu