Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
Share:
Articles April 6, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ

ವಿಶ್ವದಲ್ಲಿಯೇ ಆಗದ ಧಾರ್ಮಿಕ, ಸಾಮಾಜಿಕ ಪರಿವರ್ತನೆಯಾಗಿದ್ದು ಹನ್ನೆರಡನೆ ಶತಮಾನದಲ್ಲಿ. ಅಂದಿನ ಸನಾತನ ಧರ್ಮ ಮತ್ತು ಸಮಾಜದಲ್ಲಿದ್ದ ಅಸಮಾನತೆ, ಜಾತೀಯತೆ, ಮೌಢ್ಯ, ಲಿಂಗತಾರತಮ್ಯ, ಧಾರ್ಮಿಕ ದಾಸ್ಯ ಇತ್ಯಾದಿ ಅನಿಷ್ಟಗಳನ್ನು ನಿವಾರಿಸಿ ಸಮಾನತೆ, ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಹೋದರತ್ವ, ಪೂಜಾಸ್ವಾತಂತ್ರ್ಯ, ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ನೆಲೆಗಟ್ಟಿನ ಮೇಲೆ ಹೊಸ ಸಮಾಜವನ್ನು ಅನುಭವ ಮಂಟಪದ ಮೂಲಕ ಜಾರಿಗೊಳಿಸಿದವರು ಬಸವಾದಿ ಶರಣರು. ಅದೇ ಮುಂದೆ ‘ಲಿಂಗಾಯತ’ ಧರ್ಮದ ಹುಟ್ಟಿಗೆ ಕಾರಣವಾಯ್ತು. ಈ ಧರ್ಮದ ದ್ರಷ್ಟಾರರು ಬಸವಣ್ಣ. ಅವರನ್ನೇ ಧರ್ಮಗುರು ಎಂದು ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭುದೇವರಾದಿಯಾಗಿ ಎಲ್ಲ ಶರಣರು ಮುಕ್ತವಾಗಿ ಒಪ್ಪಿದ್ದು ವಚನ ಸಾಹಿತ್ಯದಿಂದ ವೇದ್ಯವಾಗುವುದು. ಲಿಂಗಾಯತ ಕನ್ನಡ ನಾಡಿನಲ್ಲಿ ಮೈದಾಳಿದ ಸ್ವತಂತ್ರ ಮತ್ತು ಅಲ್ಪಸಂಖ್ಯಾತರ ಧರ್ಮ. ಇದು ಕನ್ನಡ ನಾಡು, ನುಡಿಗೆ ಮಾತ್ರವಲ್ಲದೆ ವಿಶ್ವಕ್ಕೇ ಮಹತ್ವದ ಸಂದೇಶ ನೀಡಿದ ಧರ್ಮ. ಇಂಥ ಧರ್ಮದ ಅರಿವು ಮತ್ತು ಆಚರಣೆ ಹಿಂದೆಂದಿಗಿಂತಲೂ ಇಂದು ಅನಿವಾರ್ಯವಾಗಿದೆ. ಶರಣರು ಬಾಹ್ಯವಾಗಿ ದೇವರನ್ನು ಹುಡುಕದೆ ದೇಹವೇ ದೇವಾಲಯ ಎಂದರು. ಅವರು ಜಾರಿಯಲ್ಲಿ ತಂದ ಧರ್ಮ ದಯಾಮೂಲವಾದದ್ದು. ಅದು ಅರಿವು ಮತ್ತು ಆಚಾರಗಳ ಸಂಗಮ. ‘ವಚನ’ ಎನ್ನುವ ವಿಶಿಷ್ಟ ಸಾಹಿತ್ಯದ ಮೂಲಕ ಶರಣರು ಧರ್ಮಪ್ರಸಾರ ಮಾಡಿದರು. ಧಾರ್ಮಿಕ ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವ ನೆಲೆಯಲ್ಲಿ ಲಿಂಗಾಯತ ಧರ್ಮ ಜಾರಿಯಲ್ಲಿ ತಂದದ್ದು ಕಾಯಕ, ದಾಸೋಹ, ಇಷ್ಟಲಿಂಗ ಪೂಜೆಯಂತಹ ಮಹತ್ವದ ಅಂಶಗಳನ್ನು. ಲಿಂಗಾಯತ ಧರ್ಮದಲ್ಲಿ ವೈಚಾರಿಕತೆ ಮತ್ತು ಪ್ರಾಯೋಗಿಕತೆ ಎರಡೂ ಇವೆ.

12ನೆಯ ಶತಮಾನದ ಪೂರ್ವದ ಸನಾತನ ಧಾರ್ಮಿಕ ಆಚರಣೆಗಳು ಆರೋಗ್ಯಪೂರ್ಣವಾಗಿರಲಿಲ್ಲ. ಜನರನ್ನು ವರ್ಣ, ವರ್ಗ, ಜಾತಿಗಳ ಮೂಲಕ ವಿಂಗಡಿಸುವ, ಆಶ್ರಮ ವ್ಯವಸ್ಥೆಯಲ್ಲೂ ಅಸಮಾನತೆ ತೋರುವ, ಮೌಢ್ಯಗಳನ್ನೇ ಜ್ಞಾನವೆಂದು ಬಿಂಬಿಸುವ ಕೃತ್ಯದಲ್ಲಿ ತೊಡಗಿದ್ದವು. ಸ್ತ್ರೀಯರು ಮತ್ತು ಇತರೆ ವರ್ಣದವರನ್ನು ಶೂದ್ರರೆಂದು ಶೋಷಿಸುವ ಕಾರ್ಯವೇ ಮುಖ್ಯವಾಗಿತ್ತು. ಇದೇ ಹೊಸ ಧರ್ಮದ ಉದಯಕ್ಕೆ ಕಾರಣವಾಯ್ತು. ಪರಂಪರಾಗತವಾಗಿ ಬಂದ ದೇವಾಲಯ ಸಂಸ್ಕೃತಿಯೇ ಅಸಮಾನತೆ, ಅಮಾನವೀಯತೆ ಮತ್ತು ಭೇದ ಸಂಸ್ಕೃತಿಗೆ ಭದ್ರಬುನಾದಿಯಾಗಿತ್ತು. ದೇವಾಲಯಗಳಿಗೆ ಶೂದ್ರರ, ಸ್ತ್ರೀಯರ ಪ್ರವೇಶವಿರಲಿಲ್ಲ. ಸಂಸ್ಕೃತವೇ ಧರ್ಮದ ಮತ್ತು ದೇವರ ಭಾಷೆಯಾಗಿತ್ತು. ಆ ಬಾಷೆಯ ಮೂಲಕ ಹೊರಹೊಮ್ಮುವ ವೇದಮಂತ್ರಗಳೇ ಪರಮಶ್ರೇಷ್ಠ ಎನ್ನುವ ಭ್ರಮೆಯನ್ನು ಸಮಾಜದಲ್ಲಿ ಬಿತ್ತಿದ್ದರು. ಹೆತ್ತ ತಾಯಿ, ಒಡಹುಟ್ಟಿದ ಸಹೋದರಿ, ಕೈ ಹಿಡಿದ ಸತಿ, ತಮಗೆ ಜನಿಸಿದ ಹೆಣ್ಣುಮಕ್ಕಳು ಮತ್ತಿತರ ಸ್ತ್ರೀಯರನ್ನು ಅಸ್ಪೃಶ್ಯರೆಂದೇ ಪರಿಗಣಿಸುತ್ತಿದ್ದರು. ಮುಟ್ಟಿನ ಕಾರಣಕ್ಕೆ ಸ್ತ್ರೀಯರನ್ನು ಹೊರಗಿಡುತ್ತಿದ್ದರು. ವಿಧವೆಯರನ್ನು ವಿಕಾರಗೊಳಿಸಿ ಜೀವನಪರ್ಯಂತ ಗೃಹಬಂಧನದಲ್ಲಿಡುತ್ತಿದ್ದರು. ಮೇಲು-ಕೀಳುಗಳನ್ನು ಸೃಷ್ಟಿಸಿ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದರು. ದೇವರು ದಿಂಡಿರ ಹೆಸರಿನಲ್ಲಿ ಭಯ ಹುಟ್ಟಿಸುತ್ತಿದ್ದರು. ಮೋಕ್ಷ, ಸಾಯುಜ್ಯಗಳ ನೆಪದಲ್ಲಿ ಇಹದ ಬದುಕನ್ನೇ ಬರಡಾಗಿಸುತ್ತಿದ್ದರು. ಪೂರ್ವಜನ್ಮ, ಪುನರ್ಜನ್ಮದ ಕನಸು ಬಿತ್ತಿ ಅಸಮಾನತೆಯನ್ನೇ ಆದರ್ಶವಾಗಿಸಿಕೊಂಡಿದ್ದರು. ಇಂಥ ಧಾರ್ಮಿಕ, ಸಾಮಾಜಿಕ ರೋಗಗಳನ್ನು ನಿವಾರಿಸುವ ದಿಕ್ಕಿನಲ್ಲಿ ಅನುಭವ ಮಂಟಪದಲ್ಲಿ ಸಂವಾದ ನಡೆಯುತ್ತಿತ್ತು. ಅದೇ ಲಿಂಗಾಯತ ಧರ್ಮದ ಉದಯಕ್ಕೆ ಕಾರಣವಾಯ್ತು.

ಲಿಂಗಾಯತ ಧರ್ಮದಲ್ಲಿ ಲಿಂಗಭೇದ, ಜಾತಿಭೇದ, ಸೂತಕ, ಬಹುದೇವತಾರಾಧನೆ, ಪುನರ್ಜನ್ಮ ಮುಂತಾದವುಗಳಿಗೆ ಅವಕಾಶವಿಲ್ಲ. ಗುರುವಿಗೆ, ಕಾಯಕಕ್ಕೆ, ಇಷ್ಟಲಿಂಗನಿಷ್ಠೆಗೆ ಆದ್ಯತೆ. ಸ್ತ್ರೀಯರು ಪುರುಷರಷ್ಟೇ ಸಮಾನರು. ಶರಣರಿಗೆ ಪೂರ್ವದಲ್ಲಿದ್ದ ಧರ್ಮದಲ್ಲಿನ ಅವೈಚಾರಿಕತೆಯನ್ನು ಪ್ರಶ್ನಿಸುವ, ಪ್ರತಿಭಟಿಸುವ, ಪರಿಷ್ಕರಿಸುವ ಮೂಲಕ ಬೆಳಕಿಗೆ ಬಂದದ್ದು ಲಿಂಗಾಯತ ಧರ್ಮ. ಇಲ್ಲಿ ಹೊನ್ನು-ಹೆಣ್ಣು-ಮಣ್ಣು ಮಾಯೆಯಲ್ಲ. ಸ್ವರ್ಗ, ನರಕಗಳಿಗೆ ಹೊಸ ಅರ್ಥವನ್ನು ಕಲ್ಪಿಸಿದರು. ಅವು ಸತ್ತನಂತರ ಸೇರುವ ತಾಣಗಳಲ್ಲ. ಆಚಾರವೇ ಸ್ವರ್ಗ, ಅನಾಚಾರವೇ ನರಕ. ಮಾನವ ಮಹಾದೇವನಾಗಲು ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳನ್ನು ಜಾರಿಯಲ್ಲಿ ತಂದರು. ಸಕಲ ಜೀವಾತ್ಮರಿಗೆ ಒಳಿತು ಬಯಸುವ ದಯಾಮೂಲವಾದುದು ಲಿಂಗಾಯತ ಧರ್ಮ. ದೇವರನ್ನು ಮನುಷ್ಯರಿಂದ ಪ್ರತ್ಯೇಕಿಸದೆ ಮನುಷ್ಯರನ್ನೇ ದೇವರನ್ನಾಗಿ ಮಾಡುವ ಮಾನವೀಯ ನೆಲೆಗಟ್ಟು ಲಿಂಗಾಯತ ಧರ್ಮದ್ದು. ಅರಿವನ್ನೇ ಗುರುವಾಗಿಸಿಕೊಂಡು, ಗುರು ಕೊಟ್ಟ ಜ್ಞಾನವನ್ನೇ ಲಿಂಗವಾಗಿಸಿಕೊಂಡು, ಲಿಂಗದ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸುವ ಜಂಗಮವಾಗಿ, ಸರ್ವವನ್ನೂ ಪ್ರಸಾದ-ಪಾದೋದಕವಾಗಿ ಅರ್ಪಿಸಿ ವಿಭೂತಿ ಪುರುಷರಾಗಿ, ಜ್ಞಾನಚಕ್ಷುವಿನ ಪ್ರತೀಕವಾಗಿ ರುದ್ರಾಕ್ಷಿ ಧರಿಸಿ, `ನಮಃ ಶಿವಾಯ’ ಮೂಲಕ ಮಾತನ್ನೇ ಮಂತ್ರವಾಗಿಸಿಕೊಳ್ಳುವುದು ಅಷ್ಟಾವರಣಗಳ ಆಶಯ. ಅಷ್ಟಾವರಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಲೋಕದಲ್ಲಿ ಶೋಷಣೆಯೇ ಇರಲಾರದು.

ಗುರುವಿನ ಮೂಲಕ ಆಯತ ಮಾಡಿಕೊಂಡ ಇಷ್ಟಲಿಂಗವನ್ನಲ್ಲದೆ ಬೇರೇನನ್ನೂ ಪೂಜಿಸದಿರುವುದೇ ಲಿಂಗಾಚಾರ. ಕಾಯಕ ಶ್ರದ್ಧೆಯುಳ್ಳವರಾಗಿ ಸಾತ್ವಿಕ ಬದುಕು ನಡೆಸುವುದೇ ಸದಾಚಾರ. ಜಾತಿಭೇದ ಮಾಡದೆ ಎಲ್ಲರೂ ಶಿವನ ಮಕ್ಕಳು ಎಂದು ಸಮಸಮಾಜ ನೆಲೆಗೊಳಿಸುವುದೇ ಶಿವಾಚಾರ. ಸಾಮೂಹಿಕವಾಗಿ ಅನ್ಯಾಯವನ್ನು ಪ್ರತಿಭಟಿಸುವುದು ಗಣಾಚಾರ. ನಿರಹಂಕಾರಿಗಳಾಗಿ, ಸೇವಾಭಾವನೆ ಬೆಳೆಸಿಕೊಳ್ಳುವುದೇ ಭೃತ್ಯಾಚಾರ. ಪಂಚಾಚಾರಗಳ ಆಶಯದಂತೆ ಬದುಕನ್ನು ಕಟ್ಟಿಕೊಳ್ಳುವವರೇ ಲಿಂಗಾಯತರು. ಕಾಯಕದಲ್ಲಿ ಶ್ರದ್ಧೆ, ಜೀವರಾಶಿಗಳ ಒಳಿತಿನಲ್ಲಿ ನಿಷ್ಠೆ, ಜೀವನದಲ್ಲಿ ಅವಧಾನ, ಲೋಕಾನುಭವ ಮತ್ತು ಶಿವಾನುಭವಗಳನ್ನು ಒಂದಾಗಿಸಿಕೊಂಡು ತಾನು ಮತ್ತು ಇತರರೂ ಆನಂದವಾಗಿರುವುದು, ಜಗತ್ತಿನ ಜೀವಾವಳಿಯ ಸುಖದಲ್ಲಿ ಸಮರಸವಾಗುವ ಗುಣವೇ ಲಿಂಗಾಯತ ಧರ್ಮದ್ದು. ಇಂಥ ತತ್ವಾಧಾರಿತ ಲಿಂಗಾಯತ ಧರ್ಮೀಯರು 900 ವರ್ಷಗಳಲ್ಲಿ ಪುನಃ ಶರಣರ ಪೂರ್ವದ ಧರ್ಮಕ್ಕೆ ಆಕರ್ಷಿತರಾಗುತ್ತಿರುವ ದುರಂತವನ್ನು ನಾವಿಂದು ಕಾಣುತ್ತಿದ್ದೇವೆ. ಅಂದು ಪ್ರಾಚೀನ ಧರ್ಮದಿಂದ ಲಿಂಗಾಯತ ಧರ್ಮಕ್ಕೆ ಬಂದವರೇ ಹೆಚ್ಚು. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ ಮಾತ್ರವಲ್ಲದೆ ಅಫಘಾನಿಸ್ಥಾನದಿಂದ ಮರುಳಶಂಕರದೇವ, ಕಾಶ್ಮೀರದಿಂದ ಮೋಳಿಗೆ ಮಾರಯ್ಯ, ತಮಿಳುನಾಡಿನಿಂದ ಮಾದಾರ ಚೆನ್ನಯ್ಯ ಕಲ್ಯಾಣಕ್ಕೆ ಬಂದು ಲಿಂಗಾಯತ ಧರ್ಮದ ಅನುಷ್ಠಾನಕ್ಕೆ ಕಾರಣರಾದರು. ಇಂದು ಲಿಂಗಾಯತರೇ ವ್ಯಾವಹಾರಿಕ, ಪ್ರಾಪಂಚಿಕ, ಪ್ರಯೋಜನಾತ್ಮಕ ಕಾರಣಗಳಿಗಾಗಿ ಲಿಂಗಾಯತ ಧರ್ಮವನ್ನು ಬಿಟ್ಟು ಹೋಗುತ್ತಲಿದ್ದಾರೆ. ಅವರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ರಾಜಕಾರಣಿಗಳು ಮತಕ್ಕಾಗಿ ಲಿಂಗಾಯತ ಧರ್ಮವನ್ನು ಜಾತಿ ಉಪಜಾತಿಗಳಾಗಿ ವಿಂಗಡಿಸುತ್ತಿದ್ದಾರೆ. ಮೀಸಲಾತಿ ಮತ್ತಿತರ ಕಾರಣಗಳಿಗಾಗಿ ಲಿಂಗಾಯತರು ಧರ್ಮವೇ ಅಲ್ಲದ ಹಿಂದೂ ಧರ್ಮಕ್ಕೆ ಗುಳೆ ಹೋಗುತ್ತಿದ್ದಾರೆ. ಈಗಾಗಲೇ ವಿವಿಧ ಆಯೋಗಗಳ ಸೌಲಭ್ಯಗಳ ಆಸೆಯಿಂದ 40ಕ್ಕೂ ಹೆಚ್ಚು ಲಿಂಗಾಯತ ಉಪಜಾತಿಯವರು ಹಿಂದುತ್ವವನ್ನು ಅಪ್ಪಿಕೊಂಡಿದ್ದಾರಂತೆ. 102 ಉಪಜಾತಿಗಳನ್ನು ಹೊಂದಿರುವ ಲಿಂಗಾಯತ ಧರ್ಮೀಯರಲ್ಲಿ ಈಗ ಕೇವಲ 62 ಉಪಜಾತಿಗಳು ಮಾತ್ರ ಉಳಿದುಕೊಂಡಿವೆಯಂತೆ. 2025ರಲ್ಲಿ ಬರಲಿರುವ ಜನಗಣತಿಯಲ್ಲಿ ಧರ್ಮ, ಜಾತಿ ಮತ್ತು ಉಪಜಾತಿಗಳ ಕಲಂಗಳಲ್ಲಿ ಏನು ಬರೆಯಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾದವರು ಒಂದು ನಿರ್ಣಯ ತೆಗೆದುಕೊಂಡಿದ್ದಾರೆ. ಅದೆಂದರೆ ಕೇವಲ ಮೀಸಲಾತಿಗಾಗಿ ಹೋರಾಟ ಮಾಡುವ ಲಿಂಗಾಯತ ಉಪಜಾತಿಗಳನ್ನು ನಾವು ಬೆಂಬಲಿಸುವುದಿಲ್ಲ ಎನ್ನುವುದು. ಮೀಸಲಾತಿ, ರಾಜಕಾರಣ ಮುಂತಾದವುಗಳಿಗಾಗಿ ಲಿಂಗಾಯತರಾಗಿ ಉಳಿಯದೆ ತಾತ್ವಿಕವಾಗಿ ಲಿಂಗಾಯತರಾಗಬೇಕು. ಇಂದಿನ ಲಿಂಗಾಯತರು ಸುತ್ತಲಿನ ಪರಿಸರದ ಪ್ರಭಾವದಿಂದಲೋ, ಸಂಸ್ಕೃತ ಶ್ರೇಷ್ಟ ಎನ್ನುವ ಭ್ರಮೆಯಿಂದಲೋ, ಸಂಪ್ರದಾಯ ಮತ್ತು ಪರಂಪರೆಯನ್ನು ಬಿಡುವುದು ಹೇಗೆ ಎಂಬ ಗೊಂದಲದಿಂದಲೋ ಗುಡಿ ಗುಂಡಾರಗಳನ್ನು ಸುತ್ತುತ್ತಿದ್ದಾರೆ. ತೀರ್ಥಯಾತ್ರೆಗೆ ಹೋಗುತ್ತಿದ್ದಾರೆ. ಜನನ, ಮದುವೆ, ಗೃಹ ಪ್ರವೇಶ ಮುಂತಾದ ಆಚರಣೆಗಳಲ್ಲಿ ವೈದಿಕತೆಯನ್ನು ಮೆರೆಸುತ್ತಿದ್ದಾರೆ. ಹೋಮಾದಿ ಕರ್ಮಾಚರಣೆಗಳನ್ನು ಮಾಡಿಸಿ ಮನೆಯೊಳಗೇ ಹೊಗೆ ಹಾಕಿಕೊಳ್ಳುತ್ತಿದ್ದಾರೆ. ಈಗೀಗಲಂತೂ ಹೋಮಾದಿ ಕ್ರಿಯೆಗಳ ಜೊತೆಗೆ ದೇವರುಗಳನ್ನು ಬೊಂಬೆಗಳನ್ನಾಗಿಸಿ ಪೂಜಿಸುವ ವಿಚಿತ್ರ ಪರಂಪರೆ ಬಂದಿದೆ. ಲಿಂಗಾಯತ ಜಂಗಮರೇ ಹಿಂದಿನ ದಿವಸ ಗೊಂಬೆಗಳನ್ನು ತಂದು ಅಲಂಕಾರ ಮಾಡಿ ಮರುದಿನ ತೆಗೆದುಕೊಂಡು ಹೋಗುವ ಈ ಪೂಜೆಯ ಆಟ ದೊಂಬರಾಟವೇ ಸರಿ. ಅದಕ್ಕಾಗಿಯೇ ಪ್ರಭುದೇವರು ಹೇಳಿದ್ದು:

ಅಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನೀವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ.
ಏನೆಂದರಿಯರು ಎಂತೆಂದರಿಯರು.
ಜನ ಮರುಳೊ ಜಾತ್ರೆ ಮರುಳೊ ಎಂಬಂತೆ;
ಎಲ್ಲರೂ ಪೂಜಿಸಿ, ಏನನೂ ಕಾಣದೆ,
ಲಯವಾಗಿ ಹೋದರು ಗುಹೇಶ್ವರಾ.

ಕನ್ನಡ ನೆಲದ ಲಿಂಗಾಯತ ಧರ್ಮವನ್ನು ಶರಣರ ವಚನಗಳ ಮೂಲಕವೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ವಚನಗಳು ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಅನರ್ಘ್ಯ ಭಂಡಾರವಾಗಿವೆ. ಅರ್ಥವಾಗದ ಸಂಸ್ಕೃತ ಮಂತ್ರಗಳಿಗಿಂತ ವಚನಗಳನ್ನು ಓದುವುದು, ಹಾಡುವುದು, ಅರ್ಥ ಮಾಡಿಕೊಳ್ಳುವುದು ಸುಲಭ ಮತ್ತು ಅರ್ಥಪೂರ್ಣ. ಮನೆಯಲ್ಲಿ ನಡೆಯುವ ಶೀಲವಂತ (ಸೀಮಂತ), ಲಿಂಗಧಾರಣೆ, ಲಿಂಗದೀಕ್ಷೆ, ಮದುವೆ, ಶವಸಂಸ್ಕಾರ ಮತ್ತಿತರ ಸಂದರ್ಭಗಳಲ್ಲಿ ವಚನಗಳ ಮೂಲಕವೇ ಅವುಗಳನ್ನು ಮಾಡುವಂತಾಗಬೇಕು. ಇದನ್ನು ಬಿಟ್ಟು ಇಂದು ಅನೇಕ ಲಿಂಗಾಯತರು ಜ್ಯೋತಿಷಿಗಳ ಬೆನ್ನು ಬಿದ್ದಿದ್ದಾರೆ. ಮಗು ಹುಟ್ಟಿದ್ದಕ್ಕೆ, ಮದುವೆ ಮಾಡುವುದಕ್ಕೆ, ಮನೆಯ ಬುನಾದಿ ಹಾಕುವುದಕ್ಕೆ, ಬಾಗಿಲಿಡುವುದಕ್ಕೆ, ಗೃಹಪ್ರವೇಶ ಮಾಡುವುದಕ್ಕೆ ತಿಥಿ, ವಾರ, ನಕ್ಷತ್ರಗಳನ್ನು ಹುಡುಕುತ್ತಲಿದ್ದಾರೆ. ಅಂಥವರಿಗೆ ಹೇಳಬೇಕಾದ ಬಸವಣ್ಣನವರ ವಚನ:

ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.

ಈ ವಚನದ ತಾತ್ಪರ್ಯದಂತೆ ಬಂಧು ಮಿತ್ರರು ಸೇರುವ ಸಮಯವೇ ಸುಮೂರ್ತ. ಅದಕ್ಕೆ ಲಗ್ನವೂ ಇಲ್ಲ, ವಿಘ್ನವೂ ಇಲ್ಲ. ಯುಟೂಬ್ನಲ್ಲಿ ಜ್ಯೋತಿಷಿಗಳೊಬ್ಬರು ಹೇಳಿದ ಮಾತಿನ ಸತ್ಯವನ್ನು ಮನಗಾಣಬೇಕು. ಭೂಮಿಯನ್ನೊಳಗೊಂಡಂತೆ ಇತರ ಗ್ರಹಗಳ ಚಲನೆಯಿಂದ ಪ್ರಾಕೃತಿಕ ಘಟನೆಗಳು ಘಟಿಸುತ್ತವೆ. ಅವುಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜ್ಯೋತಿಷ್ಯ ಶಾಸ್ತ್ರ ನೀಡುವ ಮುನ್ಸೂಚನೆಯಿಂದ ನಾವು ರಕ್ಷಣಾಕ್ರಮಗಳನ್ನು ಕೈಗೊಳ್ಳಬಹುದು. ಇದು ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಸತ್ಯ. ಆದರೆ ಕೆಲವು ಜ್ಯೋತಿಷಿಗಳು ಆ ಘಟನೆಗಳನ್ನು ತಡೆಯಲು ವಿವಿಧ ಪೂಜಾದಿ ಕ್ರಿಯೆಗಳನ್ನು ಹೇಳುವರು. ಹೀಗೆ ಪರಿಹಾರ ಹೇಳುವುದು ಜ್ಯೋತಿಷ್ಯದ ಭಾಗವಲ್ಲ. ಈ ಸತ್ಯವನ್ನು ಮನಗಾಣಬೇಕು. ನಕ್ಷತ್ರ, ತಿಥಿ, ವಾರಗಳಲ್ಲಿ ಒಳ್ಳೆಯದೂ ಇಲ್ಲ, ಕೆಟ್ಟದ್ದೂ ಇಲ್ಲ. ಅಮೃತಗಳಿಗೆ, ರಾಹುಕಾಲ, ಯಮಗಂಡ ಕಾಲವೂ ಇಲ್ಲ. ರಾಹುಕಾಲದಲ್ಲಿ ಪ್ರಯಾಣ ಪ್ರಾರಂಭಿಸಬಾರದು ಎನ್ನುವ ಮೌಢ್ಯ ಬಹುತೇಕ ಜನರಲ್ಲಿದೆ. ರಾಹುಕಾಲದಲ್ಲಿ ಪ್ರಯಾಣ ಮಾಡಿದವರೆಲ್ಲರೂ ಅಪಾಯಕ್ಕೆ ಸಿಲುಕಿದ್ದಾರೆಯೇ? ಒಳ್ಳೆಯ ಕಾಲದಲ್ಲಿ ಪ್ರಯಾಣ ಮಾಡಿದವರು ಅಪಾಯಕ್ಕೆ ತುತ್ತಾಗಿಲ್ಲವೇ? ಸುಖಕರ ಪ್ರಯಾಣಕ್ಕೆ ಬೇಕಾಗಿರುವುದು ಸುಸಜ್ಜಿತ ವಾಹನ, ಚಾಲಕನ ಜಾಗರೂಕತೆ, ಉತ್ತಮ ರಸ್ತೆ. ಇವುಗಳ ಜೊತೆಗೆ ಮುಂಚಿತವಾಗಿ ಪ್ರಯಾಣ ಪ್ರಾರಂಭಿಸುವ, ನಿಧಾನವಾಗಿ ಚಲಿಸುವ, ನಿಗದಿತ ಸಮಯಕ್ಕೆ ಮೊದಲೇ ಗುರಿ ತಲುಪುವ ಸತ್ಚಿಂತನೆ ಮುಖ್ಯವೇ ಹೊರತು ರಾಹು, ಯಮಗಂಡ ಕಾಲಗಳಲ್ಲ. ಅನೇಕ ವಾಹನ ಸವಾರರು ಬೆಕ್ಕು ಅಡ್ಡ ಬಂದರೆ ಅಪಶಕುನ ಎಂದು ಕಾರು ನಿಲ್ಲಿಸುವರು. ಅಲ್ಲಿರುವುದು ಬೆಕ್ಕು ಕಾರಿನ ಗಾಲಿಗೆ ಸಿಕ್ಕು ಸಾಯಬಾರದು ಎನ್ನುವ ಜೀವಕರುಣೆ. ಬೆಕ್ಕಿಗೆ ಕಾರು ಅಪಾಯಕಾರಿಯೇ ಹೊರತು ಕಾರಿಗೆ ಬೆಕ್ಕು ಶಕುನವೂ ಅಲ್ಲ, ಅಪಶಕುನವೂ ಅಲ್ಲ. ಧರ್ಮ ದಯಾಮೂಲವಾದದ್ದೇ ಹೊರತು ಭಯಮೂಲವಾದುದಲ್ಲ. ಇದಕ್ಕೆ ಸಾಕ್ಷಿ:

ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.

ಲಿಂಗವಂತರು ಸಕಲ ಜೀವಾತ್ಮರ ಬಗ್ಗೆ ದಯೆಯುಳ್ಳವರಾಗಿ ವರ್ತಿಸಿದಾಗ ಅವರು ಧರ್ಮದ ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದು ಅರ್ಥ. ಏನೇ ಹೇಳಿದರೂ ಜನ ಶಾಸ್ತ್ರ, ಜ್ಯೋತಿಷ್ಯ, ಹೊತ್ತಿಗೆಗಳಿಗೆ ಮರುಳಾದಂತೆ ಸದ್ವಿಚಾರಗಳಿಗೆ ತಲೆಬಾಗುವುದು ಕಷ್ಟಕರವಾಗಿದೆ. ಅದರಿಂದಾಗಿಯೇ ಅವರು ತಮ್ಮ ಬದುಕಿನಲ್ಲಿ ಕಷ್ಟಗಳ ಸರಮಾಲೆಯನ್ನೇ ಬರಮಾಡಿಕೊಳ್ಳುವರು. ಆದರೂ ಅದರ ಅರಿವಾಗದಿರುವುದು ದುರಂತವೇ ಸರಿ. ಶ್ರೀಮಂತರೊಬ್ಬರು ವಾಸ್ತು ಶಾಸ್ತ್ರಜ್ಞರ ಮಾತುಗಳಿಗೆ ಮರುಳಾಗಿ ಬಹು ಸುಂದರವಾಗಿದ್ದ ತಮ್ಮ ಹಳೆಯ ಮನೆಯನ್ನು ಕೆಡವಿಸಿ ದುಬಾರಿ ಖರ್ಚು ಮಾಡಿ ಹೊಸಮನೆಯನ್ನು ಕಟ್ಟಿಸಿದ್ದರು. ಅದನ್ನು ಕಟ್ಟಿಸಿದ ಮೇಲೆ ಅನಾರೋಗ್ಯಕ್ಕೆ ತುತ್ತಾದರು. ಆ ಮೊದಲೇ ಮಾಡಿದ ಸಾಲ ಹೆಚ್ಚಾಗಿ ಅವರು ಅನುಭವಿಸಿದ ಯಾತನೆ ಅವರ್ಣನೀಯ. ವಾಸ್ತುಶಾಸ್ತ್ರ ನಂಬಿ ಬದುಕನ್ನೇ ನಾಶ ಮಾಡಿಕೊಂಡಿರುವ ಬೇಕಾದಷ್ಟು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಅಲ್ಲಿ ಬೇಕಾಗಿರುವುದು ವಾಸ್ತು ಅಲ್ಲ. `ಮನೆ ನೋಡಾ ಬಡವರು, ಮನ ನೋಡಾ ಘನ’ ಎನ್ನುವ ಭಾವನೆ. ಮನೆ ಸುಭದ್ರವಾಗಿರಲು ಬೇಕಾದ್ದು ವಾಸ್ತುಶಾಸ್ತ್ರವಲ್ಲ; ಗುಣಮಟ್ಟದ ಸಿಮೆಂಟ್, ಇಟ್ಟಿಗೆ, ಕಲ್ಲು, ಜಲ್ಲಿ, ಮರಳು, ಕಬ್ಬಿಣ ಹಾಗೂ ಕುಶಲ ತರಗಾರರು, ತಂತ್ರಜ್ಞರು. ವಾಸ್ತುಶಾಸ್ತ್ರದಿಂದಲೇ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಮೆರೆಯುತ್ತಿದ್ದ ಚಂದ್ರಶೇಖರ ಗುರೂಜಿ ಹೊಟೆಲ್ ಆವರಣದಲ್ಲೇ ಕೊಲೆಯಾಗಿ, ಹೆಣವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ವಾಸ್ತುಶಾಸ್ತ್ರ ಅದನ್ನು ಹೇಳುವವರಿಗೆ ಲಾಭವೇ ಹೊರತು ಕೇಳುವವರಿಗಲ್ಲ. ಲಿಂಗಾಯತ ಧರ್ಮದ ತತ್ವಸಿದ್ಧಾಂತಗಳನ್ನರಿತು ಅದರಂತೆ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಮಾಡಿದರೆ ವಾಸ್ತು, ಪೂಜಾರಿ, ಪುರೋಹಿತರು ಹೇಳಹೆಸರಿಲ್ಲದೆ ಮರೆಯಾಗುವರು. ಅದಕ್ಕಾಗಿ ವಚನಸಾಹಿತ್ಯದ ಅರಿವುಳ್ಳವರಾಗಿ ಅದಕ್ಕನುಗುಣವಾಗಿ ಬದುಕು ಕಟ್ಟಿಕೊಂಡರೆ ಸುಖೀ ಜೀವನ ನಡೆಸಲು ಸಾಧ್ಯ. 21ನೆಯ ಶತಮಾನದಲ್ಲೂ ವಾಸ್ತು, ರಾಹುಕಾಲ, ಜಾತಕ, ಕುಂಡಲಿ ಹಿಂದೆ ಸುತ್ತುವವರ ಕಂಡಾಗ ಇವರ ಶಿರ ಹೊನ್ನ ಕಳಸವಾಗುವುದು ಯಾವಾಗ ಎನ್ನುವ ಪ್ರಶ್ನೆ ನಮ್ಮಂಥವರನ್ನು ಕಾಡುತ್ತಲೇ ಇರುತ್ತದೆ. ವಿಷಾದದ ಸಂಗತಿ ಎಂದರೆ ಇವುಗಳ ಬಗ್ಗೆ ಅರಿವು ಮೂಡಿಸಬೇಕಾದವರೇ ಅರಿವುಗೇಡಿಗಳಾಗಿ ಅಂಥವುಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಲಿಂಗಾಯತ ಧರ್ಮದ ದೌರ್ಭಾಗ್ಯ.

ವೈದಿಕ ಧರ್ಮಾಚರಣೆಗಳು ಪ್ರದರ್ಶನದ ಸರಕುಗಳಾಗಿವೆ. ಧರ್ಮಾಚರಣೆಗಳು ಆತ್ಮದರ್ಶನದ ಆಗರವಾಗಬೇಕು. ಅಂಥ ವಿಚಾರಗಳು ವಚನ ಸಾಹಿತ್ಯದಲ್ಲಿವೆ. ವಚನಗಳ ಮಾರ್ಗದಲ್ಲಿ ಸಾಗಿದಾಗ ಮಾತ್ರ ಸುಖೀ ಸಮಾಜ ನಿರ್ಮಾಣವಾಗುವುದು. ಕರ್ನಾಟಕದಲ್ಲಿ ಲಿಂಗಾಯತ ಧರ್ಮದ ಹೆಸರಿನಲ್ಲಿ ಸಾವಿರಾರು ಮಠ ಮತ್ತು ಮಠಾಧೀಶರೂ ಇದ್ದಾರೆ. ಬಹುತೇಕ ಮಠ, ಮಠಾಧೀಶರಲ್ಲಿ ಶರಣರ ಪೂರ್ವದಲ್ಲಿದ್ದ ವೈದಿಕ ಧರ್ಮಾಚರಣೆಗಳೇ ಶ್ರೇಷ್ಟ ಎನ್ನುವ ಪೂರ್ವಗ್ರಹ ಪೀಡಿತ ಭಾವನೆ ತುಂಬಿದೆ. ಈ ಭಾವನೆಯನ್ನು ಮೊದಲು ಕಿತ್ತು ಹಾಕಿದರೆ ಲಿಂಗಾಯತ ಧರ್ಮವನ್ನು ಉಳಿಸಿ ಬೆಳೆಸಬಹುದಾಗಿದೆ. ಇವತ್ತು ರಾಜಕಾರಣಿಗಳ ಮತ್ತು ಮಠಾಧೀಶರ ಸ್ವಾರ್ಥಪೂರಿತ ಹೊಂದಾಣಿಕೆಯೂ ಲಿಂಗಾಯತ ಧರ್ಮದ ಅವನತಿಗೆ ಕಾರಣವಾಗಿದೆ. ಶಿಕ್ಷಣ, ಉದ್ಯೋಗ, ಮೀಸಲಾತಿಯ ಹೆಸರಲ್ಲಿ ಲಿಂಗಾಯತ ಧರ್ಮವನ್ನು ಜಾತಿಯನ್ನಾಗಿಸಿ ಸಮಾಜದ ವಿಘಟನೆಗೆ ಕಾರಣರಾಗಿದ್ದಾರೆ. ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣದ ಗುರಿ ಮತ್ತು ಸಮಸಮಾಜದ ಆದರ್ಶ ಹೊಂದಿರುವ ಲಿಂಗಾಯತ ಧರ್ಮದ ಸಂಘಟನೆಗೆ ಮಠ ಮತ್ತು ರಾಜಕಾರಣಗಳು ಶ್ರಮಿಸಬೇಕು. ಆದರೆ ಆ ಎರಡೂ ಕ್ಷೇತ್ರದ ಜನರು ವಿಘಟನೆಗೆ ಕಾರಣವಾಗುತ್ತಿರುವುದು ವಿಪರ್ಯಾಸ. ಬಸವಣ್ಣ ಲಿಂಗಾಯತ ಧರ್ಮದ ಧರ್ಮಗುರು. ಮಠಾಧೀಶರು ಲಿಂಗಾಯತ ಧರ್ಮದ ದೀಕ್ಷಾಗುರುಗಳು. ಬಸವಣ್ಣ ಲಿಂಗಾಯತ ಧರ್ಮದ ತಾಯಿ ಇದ್ದಂತೆ. ಮಠಾಧೀಶರು ಆ ತಾಯಿಯ ಮಕ್ಕಳಿದ್ದಂತೆ. ಹಾಗಾಗಿ ಸಿದ್ಧರಾಮೇಶ್ವರರು `ಬಸವಣ್ಣನೇ ತಂದೆ, ಬಸವಣ್ಣನೇ ತಾಯಿ, ಬಸವಣ್ಣನೇ ಪರಮಬಂಧುವೆನಗೆ. ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ’ ಎಂದಿರುವುದು. ಹೆರಿಗೆ ಸಂಧರ್ಭದಲ್ಲಿ ವೈದ್ಯರು ತಾಯಿ ಅಥವಾ ಮಗು ಇಬ್ಬರಲ್ಲಿ ಒಬ್ಬರನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯ ಎಂದರೆ ತಾಯಿಯನ್ನೇ ಉಳಿಸಿ ಎನ್ನುವರು. ಏಕೆಂದರೆ ತಾಯಿ ಇದ್ದರೆ ಮತ್ತೊಂದು ಮಗುವನ್ನು ಪಡೆಯಬಹುದೆನ್ನುವ ಆಶಾವಾದ. ಅಂತೆಯೇ ಮಠಾಧೀಶರು ತಮ್ಮ ಮಠದ ಮೂಲಪುರುಷರನ್ನು ಮುಂದಿಟ್ಟುಕೊಂಡು ಬಸವಣ್ಣನವರನ್ನು ಧರ್ಮಗುರುವಾಗಿ ಸ್ವೀಕರಿಸಿದರೆ ಲಿಂಗಾಯತ ಧರ್ಮ ಜೀವಂತಿಕೆ ಪಡೆಯುತ್ತದೆ.

ಕ್ರೈಸ್ತರಲ್ಲಿ ವಿವಿಧ ಸಂತರ ಹೆಸರುಗಳು ಚರ್ಚ್ಗಳಿಗೆ ಇದ್ದರೂ ಅಲ್ಲಿ ನಡೆಯುವುದು ಏಸುವಿನ ಪ್ರಾರ್ಥನೆ, ಆರಾಧನೆ ಮಾತ್ರ. ಅದೇ ರೀತಿ ದರ್ಗಾಗಳಿಗೆ ಮುಸಲ್ಮಾನ್ ಸಂತರ ಹೆಸರುಗಳಿದ್ದು ಅವು ಶ್ರದ್ಧಾಕೇಂದ್ರಗಳಾಗಿವೆ. ಅಲ್ಲಿ ಮಾಡುವ ನಮಾಜ್ ಅಲ್ಲಾಹ ಮತ್ತು ರಷೂಲ್ ಮಹಮದರನ್ನು ಕುರಿತದ್ದೇ. ಅದರಂತೆಯೇ ಮಠಗಳು ತಮ್ಮ ಮೂಲ ಗುರುಗಳ ಹೆಸರಿನಲ್ಲಿದ್ದರೂ ಧರ್ಮಗುರು ಬಸವಣ್ಣನವರ ಆಚಾರ ವಿಚಾರಗಳು ಮಠದ ಆತ್ಮವಾಗಬೇಕು. ಲಿಂಗಾಯತ ಧರ್ಮೀಯರ ಸಂಘಟನೆ ಅಷ್ಟು ಸುಲಭದ ಕೆಲಸವಲ್ಲ. ಅದು ಸುಲಭವಾಗುವುದು ಮಠಾಧೀಶರ, ಯುವಕರ, ಮಹಿಳೆಯರ ಧರ್ಮಶ್ರದ್ಧೆಯನ್ನು ಅವಲಂಬಿಸಿದೆ. ಅದಕ್ಕಾಗಿ ಮಠಗಳಲ್ಲಿ ವಚನ ಪಾಠಶಾಲೆಗಳನ್ನು ತೆರೆದು ವಚನ ಸಂಗೀತ, ವಚನ ವಿಶ್ಲೇಷಣೆ, ವಚನ ಕಂಠಪಾಠ, ವಚನ ಪರೀಕ್ಷೆ ಇತ್ಯಾದಿ ನಡೆಯಬೇಕು. ಲಿಂಗವಂತ ಧರ್ಮದ ಕ್ರಿಯಾಮೂರ್ತಿಗಳಿಗೆ (ಜಂಗಮರು) ಆಗಾಗ ಮಠಗಳಲ್ಲಿ ತರಬೇತಿ ಶಿಬಿರ ನಡೆಯಬೇಕು. ವಚನಗಳೇ ಪಠ್ಯಗಳಾಗಿರಬೇಕು. ವಚನಾಧಾರಿತ ಸಂಗೀತ, ನೃತ್ಯ, ನಾಟಕ ಜಾರಿಯಲ್ಲಿ ಬರಬೇಕು.

ಪಂಗಡ ಉಪಪಂಗಡ ಭೇದವಿಲ್ಲದೆ ಲಿಂಗಾಯತರಲ್ಲಿ ಕಲ್ಯಾಣಮಹೊತ್ಸವ ನಡೆಯಬೇಕು. ಸಾರ್ವಜನಿಕರು ರಾಜಕಾರಣ, ಪಕ್ಷ, ಮಠ ಇವುಗಳನ್ನು ಮೀರಿ ನೈಜ ಲಿಂಗಾಯತರಾಗಿ ಉಳಿಯುವಲ್ಲಿ ವಚನ ಸಾಹಿತ್ಯದ ಅಧ್ಯಯನಕ್ಕೆ ಮುಂದಾಗಬೇಕು. ವಚನ ವಿಶ್ವವಿದ್ಯಾಲಯ ಸ್ಥಾಪನೆಯಾಗುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು. ಅಲ್ಲಿ ವಚನಕಾರರ ವಚನಗಳನ್ನು ಸಂಗ್ರಹಿಸುವ, ಸಂಶೋಧಿಸುವ, ಪರಿಷ್ಕರಿಸುವ, ಅನುವಾದಿಸುವ, ಪ್ರಕಟಿಸುವ ಕಾರ್ಯ ನಿರಂತರ ನಡೆಯಬೇಕು. ಆಧುನಿಕ ತಂತ್ರಜ್ಞಾನ ಬಳಸಿ ವಚನಸಾಹಿತ್ಯವನ್ನು ಡಿಜಟಲೀಕರಣಗೊಳಿಸುವ, ಅಂತರ್ಜಾಲಕ್ಕೆ ಸೇರಿಸುವ ಪ್ರಸಾರ ಕಾರ್ಯ ಅವ್ಯಾಹತವಾಗಿ ನಡೆಯಬೇಕು. ಆಗಾಗ್ಗೆ ಲಿಂಗಾಯತ ಧರ್ಮದ ಸಾಹಿತ್ಯ ಕುರಿತಂತೆ ಗೋಷ್ಠಿ, ಉಪನ್ಯಾಸ, ಸಂವಾದ ನಡೆಯಬೇಕು. ಬಸವಣ್ಣನವರ ಹೆಸರಿನಲ್ಲಿ ಹುಟ್ಟಿಕೊಂಡಿರುವ ವಿವಿಧ ಸಂಘಟನೆಗಳು ಒಂದೇ ಛತ್ರದಡಿ ಬರಬೇಕು. ಅಲ್ಲದೆ ಶರಣರ ಜನ್ಮಸ್ಥಳ, ಐಕ್ಯಸ್ಥಳಗಳ ಅಭಿವೃದ್ದಿ ಕಾರ್ಯ ನಡೆದು ಅಲ್ಲೆಲ್ಲ ಗ್ರಂಥಾಲಯಗಳಿದ್ದು ಆಯಾ ಶರಣರ ಮತ್ತು ಇತರ ಶರಣರ ವಚನಗಳು ದೊರೆಯುವ ವ್ಯವಸ್ಥೆಯಾಗಬೇಕು. ಇವೆಲ್ಲ ಒಂದು ಸಮಾಜ ಅಥವಾ ಧರ್ಮಕ್ಕೆ ಸೀಮಿತ ಎನಿಸಿದರೂ ಅಲ್ಲಿ ಸಕಲ ಜೀವಾತ್ಮರ ಒಳಿತಿದೆ. ಈ ನೆಲೆಯಲ್ಲಿ ಶರಣರ ಅಥವಾ 12ನೆಯ ಶತಮಾನದ ನಂತರ ಮೊಟ್ಟಮೊದಲ ಹೆಜ್ಜೆ ಎಂದರೆ ಜಾಗತಿಕ ಲಿಂಗಾಯತ ಮಹಾಸಭೆ ಎಂದರೆ ತಪ್ಪೇನಿಲ್ಲ. ಈಗಲೂ ಲಿಂಗಾಯತರು ಮತ್ತು ವೀರಶೈವ ಲಿಂಗಾಯತರು ವೈದಿಕ ಗುಲಾಮಗಿರಿಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಅದಕ್ಕೆ ಕಾರಣ ಪರಂಪರೆಯಿಂದ ಅಂಥ ಗೊಡ್ಡು ಸಂಪ್ರದಾಯಗಳಿಗೆ ಅಂಟಿಕೊಂಡು ಬಂದಿರುವುದು. ಮನಸ್ಸಿದ್ದಲ್ಲಿ ಮಾರ್ಗವಿದೆ. ಅರ್ಬುದ ರೋಗ ಬಂದ ಭಾಗವನ್ನು ನಿರ್ದಾಕ್ಷಿಣ್ಯವಾಗಿ ವೈದ್ಯರು ಕತ್ತರಿಸುವಂತೆ ವೈದಿಕ ಪರಂಪರೆ ಎನ್ನುವ ಅರ್ಬುದ ರೋಗವನ್ನು ಕತ್ತರಿಸಿ ಹಾಕದಿದ್ದರೆ ಲಿಂಗಾಯತರಿಗೆ ಖಂಡಿತ ಭವಿಷ್ಯವಿಲ್ಲ. ಲಿಂಗಾಯತರಿಗೆ ಬೇಕಾಗಿರುವುದು ತತ್ವಬದ್ಧತೆ. ಸಕಲ ಜೀವಾತ್ಮರಿಗೆ ಒಳಿತು ಬಯಸುವ ಹೃದಯ ಶ್ರೀಮಂತಿಕೆ. ಈ ದಿಶೆಯಲ್ಲಿ ಲಿಂಗಾಯತ ಮಠಾಧೀಶರ ಜವಾಬ್ದಾರಿ ತುಂಬಾ ಗುರುತರವಾಗಿದೆ. ನೂಲಿನಂತೆ ಸೀರೆ, ತಾಯಿಯಂತೆ ಮಗಳು, ಗುರುವಿನಂತೆ ಶಿಷ್ಯ ಎನ್ನುವ ಹಾಗೆ ಲಿಂಗಾಯತ ಮಠಾಧೀಶರು ಲಿಂಗಾಯತ ಸಮಾಜವನ್ನು ಜಾಗೃತಗೊಳಿಸುವ ಸಂಕಲ್ಪಕ್ಕೆ ಕಟಿಬದ್ಧರಾಗಬೇಕಿದೆ. ಅವರು ಬಸವಪರಂಪರೆಯ ವಾರಸುದಾರರು ಎನ್ನುವುದನ್ನು ಮರೆಯಬಾರದು.

ಅನ್ಯದೈವವ ಬಿಟ್ಟುದಕ್ಕೆ ಆವುದು ಕ್ರಮವೆಂದರೆ;
ಅನ್ಯದೈವವ ಮನದಲ್ಲಿ ನೆನೆಯಲಾಗದು,
ಅನ್ಯದೈವವ ಮಾತನಾಡಲಾಗದು.
ಅನ್ಯದೈವವ ಪೂಜೆ ಮಾಡಲಾಗದು.
ಸ್ಥಾವರಲಿಂಗಕ್ಕೆರಗಲಾಗದು.
ಆ ಲಿಂಗ ಪ್ರಸಾದವ ಕೊಳಲೆಂತೂ ಬಾರದು.
ಇಷ್ಟು ನಾಸ್ತಿಯಾದರೆ ಆತ ಅನ್ಯದೈವವ ಬಿಟ್ಟು ಲಿಂಗವಂತನೆನಿಸಿಕೊಂಬನು.
ಇವರೊಳಗೆ ಅನುಸರಣೆಯ ಮಾಡಿಕೊಂಡು
ನಡೆದನಾದೊಡೆ ಅವಂಗೆ ಕುಂಭೀಪಾತಕ
ನಾಯಕನರಕ ತಪ್ಪದು ಮಾಣಾ ಕೂಡಲಚೆನ್ನಸಂಗಯ್ಯ.
***
ಲಿಂಗವಂತನ ನಡೆ ನುಡಿ ಚಾರಿತ್ರ ನಿಂದಕವನಾಡಿದಡೆ
ಆ ಲಿಂಗ ನಿಮ್ಮ ಹಲ್ಲ ಕಳೆವ; ಆ ಲಿಂಗ ನಿಮ್ಮ ನರಕಕ್ಕಿಕ್ಕುವ.
ಆ ಲಿಂಗವಂತ ಲಿಂಗ ಪ್ರಾಣಿಯಾಗಿಪ್ಪ.
ಇದು ಸತ್ಯ ವಚನ.
ಇದ ಕೇಳಿ ಲಿಂಗವಂತನ ನಾಸ್ತಿಕವನಾಡಿದಡೆ
ರೌರವನರಕದಲ್ಲಿಕ್ಕುವ ಕಾಣಾ ಗುಹೇಶ್ವರಾ.

Previous post ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
Next post ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು

Related Posts

ದುಡಿಮೆಯೆಲ್ಲವೂ ಕಾಯಕವೇ?
Share:
Articles

ದುಡಿಮೆಯೆಲ್ಲವೂ ಕಾಯಕವೇ?

November 10, 2022 ಡಾ. ಪಂಚಾಕ್ಷರಿ ಹಳೇಬೀಡು
‘ಕಾಯಕವೇ ಕೈಲಾಸ’ ಎಂಬ ಜಗತ್ಪ್ರಸಿದ್ದ ನಾಣ್ಣುಡಿಯನ್ನು ಇಂಗ್ಲಿಷ್ ಭಾಷೆಯಲ್ಲಿ ಸರಳವಾಗಿ ‘ವರ್ಕ್ ಈಸ್ ವರ್ಷಿಪ್’ ಎಂದು ಹೇಳುವುದನ್ನು ನಾವೆಲ್ಲಾ ನೋಡಿಯೇ/ ಕೇಳಿಯೇ...
ಗುರು-ಶಿಷ್ಯ ಸಂಬಂಧ
Share:
Articles

ಗುರು-ಶಿಷ್ಯ ಸಂಬಂಧ

August 8, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಡಕೆಯ ಮಾಡುವಡೆ ಮಣ್ಣೆ ಮೊದಲು, ತೊಡುಗೆಯ ಮಾಡುವಡೆ ಹೊನ್ನೆ ಮೊದಲು, ಶಿವಪಥವನರಿವಡೆ ಗುರುಪಥವೆ ಮೊದಲು, ಕೂಡಲಸಂಗಮದೇವರನರಿವಡೆ ಶರಣರ ಸಂಗವೆ ಮೊದಲು. ಸಂಗದ ಮಹತ್ವವನ್ನು ಕೆಲವು...

Comments 10

  1. VIJAYAKUMAR KAMMAR
    Apr 10, 2023 Reply

    ಪರಮ ಪೂಜ್ಯರ ಮಾತುಗಳು ಮತ್ತು ಬರವಣಿಗೆ ನೇರ ಹಾಗೂ ನಿಷ್ಠೂರ. ಮೂಢನಂಬಿಕೆಗಳು ಮತ್ತು ಡಂಭಾಚಾರಗಳ ವಿರುದ್ಧ ಉತ್ತಮ ಲೇಖನ ಮಂಡಿಸಿದ್ದಾರೆ. 🙏🙏

  2. ಕಾವ್ಯಾ ಜವಳಿ
    Apr 11, 2023 Reply

    ಆಚರಣೆಯಲ್ಲಿ ಸೋತರು, ಅರ್ಥಮಾಡಿಕೊಳ್ಳುವಲ್ಲಿ ಸೋತರು, ತಮ್ಮ ಪರಂಪರೆಯನ್ನು ಅರಿಯುವಲ್ಲಿ ಸೋತರು… ಹೀಗಾಗಿ ಸಂಘಟನೆ ಎನ್ನುವದು ಲಿಂಗಾಯತ ಧರ್ಮೀಯರಲ್ಲಿ ಸುಲಭದ ಮಾತಲ್ಲಾ.

  3. Raveendra P
    Apr 13, 2023 Reply

    I read your blog from time to time and recommended to many of my friends… the articles are really carrying new thoughts and progressive ideas.

  4. D.S.Patil
    Apr 19, 2023 Reply

    ಲಿಂಗಾಯತರಿಗೆ ಬೇಕಾಗಿರುವುದು ತತ್ವಬದ್ಧತೆ. ಎಲ್ಲಿದೆ ಅದು… ಮಾತಲ್ಲೂ ಇಲ್ಲ, ಕೃತಿಯಲ್ಲೂ ಇಲ್ಲ.

  5. Nagaraj Sadashiva
    Apr 20, 2023 Reply

    ಸಂಸ್ಕೃತ ಶ್ಲೋಕಗಳನ್ನ ಕನ್ನಡಕ್ಕೆ ಅನುವಾದಿಸಿ ಅರ್ಥಮಾಡಿಕೊಳ್ಳುವುದು ಸುಲಭ… ಕನ್ನಡದಲ್ಲಿರುವ ವಚನಗಳು ಕೇವಲ ಅರ್ಥಮಾಡಿಕೊಳ್ಳುವುದಕ್ಕೆ ಸೀಮಿತವಲ್ಲ… ಆಚರಣೆಗೆ ಬಂದಾಗಲೇ ಅವುಗಳ ಅರ್ಥ ತಿಳಿಯುವುದು… ವಚನಗಳನ್ನ ಲಘುವಾಗಿ, ಸುಲಭವೆಂದು ಭಾವಿಸುವುದು ಸರಿಯಲ್ಲ…..

  6. Shashidhar B. M
    Apr 23, 2023 Reply

    ನಾನು ಶೇರ್ ಮಾಡಿದ ಬಯಲು ಬ್ಲಾಗ್ ನಲ್ಲಿ ಬರುವ ವೈಚಾರಿಕ ಮತ್ತು ವಚನ ಸಾಹಿತ್ಯದ ಬರಹಗಳನ್ನು ಓದಿ, ಭಾಳ ಜನ ಪ್ರಭಾವಿತರಾಗಿದ್ದಾರೆ 👏

  7. ಮಹಾದೇವಯ್ಯ ಬಿರಾದಾರ
    Apr 23, 2023 Reply

    ಅನ್ಯದೈವಗಳ ಬೆನ್ನುಬಿದ್ದ ಲಿಂಗಾಯತರಲ್ಲಿ ಸಂಘಟನೆ ಸಾಧ‍್ಯವೇ? ರಾಜಕೀಯದಲ್ಲಿ ಒಡೆದು ಹೋಗಿರುವ ನಮ್ಮಲ್ಲಿ ಸಿದ್ಧಾಂತಗಳ ಮೌಲ್ಯವೇ ಕುಸಿದುಹೋಗಿದ್ದು, ಮಹಾ ತ್ಯಾಗ-ಬಲಿದಾನಗಳಿಂದಾದ ಸಮುದಾಯ ಸ್ವಾರ್ಥ ಹಾಗೂ ಅಜ್ಞಾನದಲ್ಲಿ ಬಿದ್ದುಹೋಗಿದೆ. ಈ ಲೇಖನದಲ್ಲಿರುವ ತಮ್ಮ ಅನುಭಾವದ ಮಾತುಗಳು ಸಮುದಾಯಕ್ಕೆ ಮರೆತು ಹೋದದ್ದನ್ನು ಜ್ಞಾಪಿಸುವಂತಾಗಲಿ.

  8. ಶಿವಕುಮಾರ್ ಹೆಚ್
    Apr 23, 2023 Reply

    ಬಸವಬಳ್ಳಿಗಳ ಯಾತ್ರೆಯಂತಹ ವಿನೂತನ ಪ್ರಯೋಗಗಳು ಖಂಡಿತ ಬದಲಾವಣೆ ತರಬಲ್ಲವು. ಸಮಾಜದ ಕಟ್ಟಕಡೆಯ ಮನುಷ್ಯನನ್ನೂ ಮುಟ್ಟಬಲ್ಲ ಈ ರಂಗ ಪ್ರಯೋಗವು ತಮ್ಮ ತಂಡದಿಂದ ಆಗಾಗ ನಡೆಯುವಂತಾಗಲಿ ಸರ್. ಮಹಾದೇವ ಹಡಪದ ಅವರ ಮಾತುಗಳಲ್ಲಿನ ಸಿಟ್ಟು, ಪ್ರೀತಿ, ಕಳಕಳಿಯನ್ನು ನಾನು ಗುರುತಿಸಬಲ್ಲೆ.

  9. Dinesh K.P
    Apr 27, 2023 Reply

    Hi, superb website, the articles appear here are extraordinary…

  10. Vinayak H
    May 9, 2023 Reply

    Saved as a favourite, I love your website.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
ನಾನು… ನನ್ನದು
ನಾನು… ನನ್ನದು
July 4, 2021
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಎಲ್ಲಿದ್ದೇನೆ ನಾನು?
ಎಲ್ಲಿದ್ದೇನೆ ನಾನು?
February 10, 2023
Copyright © 2025 Bayalu