Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸರ್ವ ಧರ್ಮ ಸಮನ್ವಯ
Share:
Articles February 16, 2026 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಸರ್ವ ಧರ್ಮ ಸಮನ್ವಯ

ನಡೆಶುಚಿ, ನುಡಿಶುಚಿ, ತನುಶುಚಿ, ಮನಶುಚಿ, ಭಾವಶುಚಿ
ಇಂತೀ ಪಂಚತೀರ್ಥಂಗಳನೊಳಕೊಂಡು ಮತ್ರ್ಯದಲ್ಲಿ ನಿಂದ
ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ
ಚೆನ್ನಮಲ್ಲಿಕಾರ್ಜುನಾ!

ಭಾರತ ಹಲವು ಜಾತಿ, ಭಾಷೆ, ವೇಷ-ಭೂಷಣ, ಧರ್ಮಗಳಿರುವ ವೈವಿಧ್ಯಮಯ ದೇಶ. ವೈವಿಧ್ಯತೆಯಲ್ಲೇ ಏಕತೆ ಸಾಧಿಸಿ ಮಾನವೀಯ ನೆಲೆಗಟ್ಟಿನಲ್ಲಿ ಸರ್ವರೂ ಒಂದಾಗಿ ಸಾಮರಸ್ಯ ಕಾಯ್ದುಕೊಳ್ಳುವುದು, ಎಲ್ಲ ಧರ್ಮಗಳನ್ನು ಗೌರವಿಸುವುದು ‘ಸರ್ವ ಧರ್ಮ ಸಮನ್ವಯ’ಕ್ಕೆ ಸೋಪಾನ. ‘ಸರ್ವ ಧರ್ಮ ಸಮನ್ವಯ’ ಎಂದರೆ ವೈವಿಧ್ಯತೆಯನ್ನು ಗೌರವಿಸುತ್ತ ವಿಶ್ವಪ್ರೇಮ ಭಾವನೆಯನ್ನು ಗಟ್ಟಿಗೊಳಿಸಿಕೊಳ್ಳುವುದು. ಭಾರತ ವಿಶ್ವಕ್ಕೆ ನೀಡಿದ ಬಹುದೊಡ್ಡ ಸಂದೇಶ ಎಂದರೆ ‘ಸಹಿಷ್ಣುತೆ’. ನದಿಗಳು ಬೇರೆ ಬೇರೆಯಾಗಿದ್ದರೂ ಅವು ಕೊನೆಗೆ ಸೇರುವುದು ಸಾಗರವನ್ನೇ. ಅದೇ ರೀತಿ ಧರ್ಮಗಳು ಬೇರೆ ಬೇರೆಯಾಗಿದ್ದರೂ ಅವುಗಳ ಗುರಿ ‘ಸಕಲ ಜೀವಾತ್ಮರ ಒಳಿತನ್ನು ಬಯಸುವುದು’. ಎಲ್ಲ ಧರ್ಮಗಳ ಮೂಲ ತತ್ವ: ಸತ್ಯ, ಅಹಿಂಸೆ, ನೀತಿ, ಪ್ರೀತಿ, ಸಮಾನತೆ, ಕರುಣೆ, ಶಾಂತಿ, ಸೇವೆ, ತ್ಯಾಗ ಇತ್ಯಾದಿ. ಇವು ಇಂದಿನ ದಿನಗಳಲ್ಲಿ ತೀರಾ ಅಗತ್ಯವಾಗಿವೆ. ಏಕೆಂದರೆ ಎಲ್ಲೆಡೆ ಅನುಮಾನ, ಅವಮಾನ, ಅಹಂಕಾರ, ಅಧಿಕಾರ ದರ್ಪ, ಹಿಂಸೆ, ಭಯೋತ್ಪಾದನೆ, ಕೋಮುದಳ್ಳುರಿ, ಯುದ್ಧ ಇತ್ಯಾದಿ ಧರ್ಮ ಬಾಹಿರವಾದ ಕೃತ್ಯಗಳೇ ತಾಂಡವನೃತ್ಯ ನಡೆಸಿವೆ. ಇವುಗಳಿಂದ ಶಾಂತಿ, ಸಹಿಷ್ಣುತೆ, ಸಮಾನತೆ, ಪ್ರೀತಿ, ಸೌಹಾರ್ದತೆ ಇಂಥ ಗುಣಗಳು ನೆಲಕಚ್ಚುತ್ತಲಿವೆ. ಇವುಗಳಿಗೆ ಪರಿಹಾರ ಇಲ್ಲವೇ?
ಖಂಡಿತ ಇದೆ.

ಆಲಿ ಆಲಯದಲ್ಲಿ ಕರಿಗೊಳಲು,
ಆಲಿಸುವ ಶ್ರವಣವು ಮೇಲಿಪ್ಪ ಆಕಾಶವನಡರಲು
ಉಲುಹು ನಿರ್ಭೂತಚಿತ್ತ ಸಮಾಧಾನವನೆಯ್ದಲು
ಕಾಲ ಕರ್ಮ ಭವಂಗಳ ಗೆಲುವುದಿದೇನು
ಸೋಜಿಗವು ಹೇಳಾ, ರೇವಣ್ಣಪ್ರಭುವೆ.

ಇದು ಬಸವಣ್ಣನವರ ಹಿರಿಯ ಸಮಕಾಲೀನರಾಗಿದ್ದ ‘ವಿಶ್ವಬಂಧು’ ಮರುಳಸಿದ್ಧರ ವಚನ. ಇಷ್ಟಲಿಂಗದ ಮೂಲಕ ಕಾಲ, ಕರ್ಮ, ಭವಂಗಳನ್ನು ಗೆಲ್ಲುವ ಗುಟ್ಟು ಇಲ್ಲಿದೆ. ಮರುಳಸಿದ್ಧರು ಇಂದಿನ ಕೊಟ್ಟೂರು ತಾಲ್ಲೂಕು ಉಜ್ಜಯಿನಿಯಲ್ಲಿ ‘ಸದ್ಧರ್ಮ ಪೀಠ’ವನ್ನು ಸ್ಥಾಪಿಸಿದವರು. ಆ ಪೀಠದ ಮೇಲೆ ತಮ್ಮ ಪ್ರಿಯ ಶಿಷ್ಯ ತೆಲಗುಬಾಳಿನ ಸಿದ್ದೇಶ್ವರರನ್ನು ಕೂರಿಸಿ ‘ತರಳಾ ಬಾಳು’ ಎಂದು ಹಾರೈಸಿದರು. ‘ತರಳ’ ಎಂದರೆ ಎಳೆಯ. ‘ಬಾಳು’ ಎಂದರೆ ಜೀವಿಸು. ಲೋಕದ ಜನರೆಲ್ಲರೂ ತರಳರಿದ್ದಂತೆ. ಅವರು ಆದರ್ಶ ಬಾಳನ್ನು ನಡೆಸಬೇಕು ಎನ್ನುವುದು ‘ತ ರ ಳ ಬಾ ಳು’ ಪಂಚಾಕ್ಷರಿ ಮಂತ್ರದ ಮತಿತಾರ್ಥ. ಅಂದಿನಿಂದ ಇಂದಿನವರೆಗೆ ‘ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ, ಶ್ರೀ ತರಳಬಾಳು ಜಗದ್ಗುರು’ ಪರಂಪರೆ ಮುಂದುವರಿದುಕೊಂಡು ಬಂದಿದೆ. ಬಂದಿರುವುದು ಮಾತ್ರವಲ್ಲ; ಅದು ತಮ್ಮ ಮೂಲ ಗುರುವಿನ ಆಣತಿಯಂತೆ ‘ಸರ್ವ ಧರ್ಮ ಸಮನ್ವಯ’ವನ್ನು ತರಳಬಾಳು ಹುಣ್ಣಿಮೆ, ತರಳಬಾಳು ವಿದ್ಯಾಸಂಸ್ಥೆ ಮತ್ತಿತರ ಸೇವಾಕಾರ್ಯಗಳ ಮೂಲಕ ಜಾರಿಯಲ್ಲಿ ತಂದಿದೆ. ಮರುಳಸಿದ್ಧರು ಅಜ್ಞಾನ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಹೋರಾಡಿದವರು. ಕುರಿ, ಕೋಳಿ, ಕೋಣನ ಬಲಿಯಿಂದ ದೇವಿ ಸಂತೃಪ್ತಳಾಗಿ ಸಮೃದ್ಧ ಮಳೆ-ಬೆಳೆ ಕೊಡುವಳು ಎನ್ನುವ ಹುಸಿ ನಂಬಿಕೆ ಈ ವಿಜ್ಞಾನ ಯುಗದಲ್ಲೂ ಇದೆ. ಇಂಥ ಅಜ್ಞಾನ ಮತ್ತು ಮೌಢ್ಯವನ್ನು ಮರುಳಸಿದ್ಧರು 900 ವರ್ಷಗಳ ಹಿಂದೆಯೇ ಪ್ರತಿಭಟಿಸಿದರು. ದೇವಿಗೆ ಬಲಿ ಕೊಡಬೇಕಾಗಿರುವುದು ಕುರಿ, ಕೋಳಿ, ಕೋಣದಂಥ ಸಾಧು ಪ್ರಾಣಿಗಳನ್ನಲ್ಲ; ಬದಲಾಗಿ ಮಾನವನ ಮನದಲ್ಲೇ ಮನೆಮಾಡಿಕೊಂಡಿರುವ ಅಜ್ಞಾನ, ಮೂಢನಂಬಿಕೆ, ಅಹಂಕಾರ, ಸ್ವಾರ್ಥ ಇಂತಹ ಕುರಿ, ಕೋಳಿ, ಕೋಣಗಳನ್ನು ಎಂದು ಜನರನ್ನು ಜಾಗೃತಗೊಳಿಸಿ ಬಲಿಕೊಡುವುದನ್ನು ನಿಲ್ಲಿಸಿದರು. ಇದು ಅವರ ‘ಸರ್ವ ಧರ್ಮ ಸಮನ್ವಯ’ದ ಸಂಕೇತ.

20ನೆಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ‘ಸರ್ವಶರಣ ಸಮ್ಮೇಳನ, ಅಕ್ಕನ ಬಳಗ, ಅಣ್ಣನ ಬಳಗ, ತರಳಬಾಳು ಕಲಾಸಂಘ, ತರಳಬಾಳು ಪ್ರಕಾಶನ, ಶರಣರ ಜಯಂತಿಗಳು, ಸಾಮೂಹಿಕ ಕಲ್ಯಾಣ ಮಹೋತ್ಸವ, ತರಳಬಾಳು ಹುಣ್ಣಿಮೆ, ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ’ ಇಂಥವುಗಳ ಮೂಲಕ ‘ಸರ್ವ ಧರ್ಮ ಸಮನ್ವಯ’ದ ಕಾರ್ಯಗಳನ್ನು ಮಾಡುತ್ತ ಬಂದದ್ದು ಸ್ಮರಣಾರ್ಹ. ಅವರು ಭರಮಸಾಗರದಲ್ಲಿ ಮಸೀದಿ ಉದ್ಘಾಟನೆ ಮಾಡಿದ್ದು, ಸಿರಿಗೆರೆಯಲ್ಲಿ ಪೇಜಾವರ ಸ್ವಾಮಿಗಳ ಉತ್ಸವ ಮಾಡಿಸಿದ್ದು, ಅರಸೀಕೆರೆ ತಾಲ್ಲೂಕಿನಲ್ಲಿ ಮಾದಿಗ ಜನಾಂಗದ ಸ್ವಾಮಿಗಳ ಉತ್ಸವಕ್ಕೆ ಅಡ್ಡಿಪಡಿಸಿದಾಗ ಮಠದ ಆನೆ, ಬಿರುದಾವಳಿ ಇತ್ಯಾದಿ ಕಳಿಸಿ ಅವರ ಉತ್ಸವ ಮಾಡಿಸಿದ್ದು, ಬಸವಾದಿ ಶರಣರ ತತ್ವಗಳಿಗೆ ಬದ್ಧರಾಗಿ ಬಾಳಿದ್ದು, ಮೂಡನಂಬಿಕೆಗಳನ್ನು ವಿರೋಧಿಸಿದ್ದು, ‘ಮಸೀದಿಯಲ್ಲಿರುವ ದೇವರೇ ಮಂದಿರದಲ್ಲಿದ್ದಾನೆ. ಮಂದಿರದಲ್ಲಿರುವವನೇ ಚರ್ಚಿನಲ್ಲಿದ್ದಾನೆ’, ‘ಹಿಂದೂ ಜನರ ದೇವರನ್ನು ನಾಶಗೊಳಿಸಬೇಕೆಂಬ ಮಹಮ್ಮದನು ತನ್ನ ಅಲ್ಲಾನನ್ನೇ ಹೊಡೆಯುತ್ತಾನೆ, ತನ್ನ ಅಲ್ಲಾಗೆ ದ್ರೋಹಿಯಾಗುತ್ತಾನೆ’ ಎಂದದ್ದು; ಇಂತಹ ಕಾರ್ಯಗಳು ಅವರ ‘ಸರ್ವಧರ್ಮ ಸಮನ್ವಯ’ಕ್ಕೆ ಸಾಕ್ಷಿಯಾಗಿವೆ. ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಹ ಇಂತಹ ಧರ್ಮ ಸಮನ್ವಯದ ಕಾರ್ಯಗಳನ್ನು ವಿವಿಧ ಚಟುವಟಿಕೆಗಳ ಮೂಲಕ ಮುಂದುವರಿಸಿಕೊಂಡು ಬರುತ್ತಿದ್ದಾರೆ.

‘ತನ್ನ ಧರ್ಮವನ್ನು ಪ್ರೀತಿಸಬೇಕು, ಇತರರ ಧರ್ಮಗಳನ್ನು ಗೌರವಿಸಬೇಕು’ ಎನ್ನುವುದು ಭಾರತೀಯ ಸಂಸ್ಕೃತಿ. ಹಾಗಂತ ಆ ಧರ್ಮಗಳಲ್ಲಿ ಹಿಂಸೆ, ಕ್ರೌರ್ಯ, ಮೌಡ್ಯ, ಜಾತೀಯತೆ, ಅವೈಜ್ಞಾನಿಕತೆ, ಲಿಂಗಭೇದ ಇತ್ಯಾದಿ ಅಮಾನವೀಯ ಅಂಶಗಳಿದ್ದಲ್ಲಿ ಅವುಗಳನ್ನೂ ಗೌರವಿಸಬೇಕು ಎಂದೇನಿಲ್ಲ. ಅಂಥ ಸಂದರ್ಭದಲ್ಲಿ ಆ ಧರ್ಮದ ದೋಷಗಳನ್ನು ಹೇಳಿ ತಿದ್ದುವ ಕಾರ್ಯ ಮಾಡಬೇಕು. ಇದನ್ನು ಅನೇಕ ಧರ್ಮದೀಪಕರು ಮಾಡುತ್ತಲೇ ಬಂದಿದ್ದಾರೆ. ಹಾಗೆ ಮಾಡಿದ್ದೇ ಮತ್ತೊಂದು ಧರ್ಮದ ಉದಯಕ್ಕೂ ಕಾರಣವಾಗಿದೆ. ಬಸವಣ್ಣನವರು ತಮ್ಮ ಪೂರ್ವದಲ್ಲಿದ್ದ ಧರ್ಮಗಳಲ್ಲಿನ ಕೆಲವು ದೋಷಗಳನ್ನು ನೇರವಾಗಿ ಹೇಳಿ ಯಜ್ಞ, ಹೋಮ, ಮೂಢತೆ, ಜಾತೀಯತೆ, ಬಲಿ, ಲಿಂಗ ತಾರತಮ್ಯ ಇಂಥ ಅನಿಷ್ಠಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಕಾಯಕ ಮಾಡಿದರು. ಅದು ಕಾರಣವಾಗಿಯೇ ‘ಲಿಂಗಾಯತ’ ಎನ್ನುವ ಹೊಸ ಧರ್ಮ ಅಸ್ತಿತ್ವಕ್ಕೆ ಬಂದಿತು. ಇದರಲ್ಲಿ ‘ಸರ್ವ ಧರ್ಮ ಸಮನ್ವಯ’ಕ್ಕೆ ಪೂರಕವಾದ ತತ್ವಾದರ್ಶಗಳಿವೆ. ಅವರ ತತ್ವಾದರ್ಶಗಳಂತೆ ನಮ್ಮ ಗುರುಗಳು ದೇವಸ್ಥಾನಗಳ ಬದಲು ಮನುಷ್ಯನ ಮನಸ್ಸನ್ನು ಕಟ್ಟುವ ಕಾಯಕಕ್ಕೆ, ಸಾಮೂಹಿಕ ಇಷ್ಟಲಿಂಗ ದೀಕ್ಷೆಗೆ, ಸರ್ವಶರಣ ಸಮ್ಮೇಳನಕ್ಕೆ ವಿಶೇಷ ಒತ್ತು ಕೊಡುತ್ತಿದ್ದರು. ಅದೇ ಅವರ ‘ಸರ್ವ ಧರ್ಮ ಸಮನ್ವಯ’ ಸಿದ್ಧಾಂತವಾಗಿತ್ತು.

ಧರ್ಮ, ದೇವರು ನಾಣ್ಯದ ಎರಡು ಮುಖಗಳಿದ್ದ ಹಾಗೆ. ಇವುಗಳ ವಿಚಾರವಾಗಿ ಬಸವಣ್ಣನವರು ಚಿಂತನೆ ನಡೆಸಿದ್ದು ಅವರ ವಚನಗಳಿಂದ ವೇದ್ಯವಾಗುವುದು. ಧರ್ಮ ಭಯದ ಮೂಲವಾಗಿದ್ದನ್ನು ಗಮನಿಸಿ ಧರ್ಮಕ್ಕೆ ಹೊಸ ವ್ಯಖ್ಯಾನವನ್ನೇ ನೀಡಿದರು:

ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.

ಧರ್ಮದ ಮೂಲ ದಯೆ. ದಯೆ ಕೇವಲ ಮಾನವರ ಬಗ್ಗೆ ಮಾತ್ರ ಅಲ್ಲ; ಸರ್ವ ಪ್ರಾಣಿ ಸಂಕುಲದ ಬಗೆಗೂ ಇರಬೇಕು. ಸರ್ವ ಜೀವ ಸಂಕುಲದ ಬಗೆಗೂ ಇರಬೇಕು. ಹಾಗಾಗಿ ‘ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ’ ಎನ್ನುವ ಬಸವಣ್ಣನವರು ಹಿಂಸೆಯನ್ನು ಪ್ರತಿಭಟಿಸಿ ಅಹಿಂಸೆಯನ್ನು ಎತ್ತಿಹಿಡಿದಿದ್ದಾರೆ. ಧರ್ಮ ಸಮನ್ವಯತೆಗೆ ಬೇಕಾದದ್ದು ‘ದಯ’ವೇ ಹೊರತು ‘ಹಿಂಸೆ’ಯಲ್ಲ.

ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೆ ಅಳು, ಕಂಡಾ!
ವೇದವನೋದಿದವರ ಮುಂದೆ ಅಳು, ಕಂಡಾ!
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.

ಧರ್ಮ, ದೇವರ ಹೆಸರಿನಲ್ಲಿ ಬಲಿ ಕೊಡುವುದನ್ನು ಬಸವಣ್ಣನವರು ಪ್ರತಿಭಟಿಸಿದ್ದಾರೆ. ವೇದ, ಶಾಸ್ತ್ರ ಬಲ್ಲವರೇ ಬಲಿ ಕೊಡಲು ಪ್ರೋತ್ಸಾಹಿಸುವುದನ್ನು ಕಂಡು ಬಲಿಯಾಗುವ ಪ್ರಾಣಿಗೆ ಹೇಳುತ್ತಾರೆ: ಅಂಥವರ ಮುಂದೆ ನೀನು ಅಳು. ಅತ್ತರೆ ಆ ಜನರಿಗೆ ದೇವರೇ ಶಿಕ್ಷೆ ಕೊಡುವನು ಎಂದು. ಇಲ್ಲಿ ಅಳುವುದು ಎಂದರೆ ಹೋರಾಡುವುದು, ಪ್ರತಿಭಟಿಸುವುದು. ಇದನ್ನು ಮಾಡಬೇಕಾದದ್ದು ಹೋತವಲ್ಲ; ಬದಲಾಗಿ ವೇದ, ಶಾಸ್ತ್ರಗಳ ನೆಪದಲ್ಲಿ ಜನರನ್ನು ದಿಕ್ಕು ತಪ್ಪಿಸುವವರ ವಿರುದ್ಧ ವಿಚಾರವಂತರೇ ಬಂಡೇಳಬೇಕಾಗಿದೆ. ಸಂಪ್ರದಾಯವಾದಿಗಳು ಅನಂತ ದೇವರುಗಳನ್ನು ಸೃಷ್ಟಿಸಿ ದೇವರಿಗೂ ಜಾತಿಗಳನ್ನು ಅಂಟಿಸಿದ್ದಾರೆ. ಬೇರೆ ಬೇರೆ ವರ್ಗ, ವರ್ಣದವರಿಗೆ ಬೇರೆ ಬೇರೆ ದೇವರು! ಕೆಲವರ ದೇವರು ಶ್ರೇಷ್ಟ, ಮತ್ತೆ ಕೆಲವರ ದೇವರು ಕನಿಷ್ಟ. ರಕ್ತ, ಮಾಂಸ ಬೇಡುವ ದೇವರುಗಳೂ ಇವೆ. ಬಸವಣ್ಣನವರು ‘ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ, ಒಬ್ಬನೆ ಕಾಣಿರೊ, ಇಬ್ಬರೆಂಬುದು ಹುಸಿ!’ ಎಂದು ಹಲವು ದೇವರುಗಳ ಕಲ್ಪನೆಯನ್ನೇ ಅಲ್ಲಗಳೆದಿದ್ದಾರೆ.

ದೇವರ ವಿಚಾರವಾಗಿ ಬಸವಣ್ಣ ಮತ್ತು ಅವರ ಸಮಕಾಲೀನ ಶರಣರ ಚಿಂತನೆಗಳು ವೈಚಾರಿಕ ಮತ್ತು ವೈಜ್ಞಾನಿಕವಾಗಿವೆ. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎನ್ನುವ ಬಸವಣ್ಣನವರು ‘ಸ್ಥಾವರ’ ದೇವರ ಬದಲು ‘ಜಂಗಮ’ ದೇವರ ಬಗ್ಗೆ ಮಾತನಾಡಿದ್ದಾರೆ. ಗುಡಿ ಕಟ್ಟಿಸಿ, ವಿಗ್ರಹ ಪ್ರತಿಷ್ಠಾಪಿಸುವವರಿಗೆ ಅವರು ಹೇಳುವುದು: ‘ದೇಹವೇ ದೇವಾಲಯ’ ಎಂದು. ಅಲ್ಲಮಪ್ರಭುದೇವರು ಈ ವಿಚಾರದಲ್ಲಿ ತುಂಬಾ ಕಟುವಾಗಿ ಮಾತನಾಡಿದ್ದಾರೆ. ಕಲ್ಲಿನಿಂದಲೇ ದೇವಾಲಯ ಕಟ್ಟಿಸಿ, ಅಂಥ ಕಲ್ಲಿನಿಂದಲೇ ದೇವರ ಮೂರ್ತಿ ಮಾಡಿಸಿ ಅದನ್ನು ದೇವಾಲಯದೊಳಗೆ ಪ್ರತಿಷ್ಠಾಪಿಸುವರು. ಅಕಸ್ಮಾತ್ ಗೋಡೆಯ ಕಲ್ಲು, ದೇವರ ಕಲ್ಲಿನ ಮೇಲೆ ಬಿದ್ದರೆ ನಿಮ್ಮ ದೇವರು ಎತ್ತ ಹೋದರು ಎಂದು ಪ್ರಶ್ನಿಸಿದ್ದಾರೆ. ಅಂಬಿಗರ ಚೌಡಯ್ಯನವರು ‘ಕಲ್ಲ ದೇವರ ಪೂಜೆಯ ಮಾಡಿ ಕಲಿಯುಗದ ಕತ್ತೆಗಳಾಗಿ ಹುಟ್ಟಿದರು. ಮಣ್ಣ ದೇವರ ಪೂಜಿಸಿ ಮಾನಹೀನರಾದರು. ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು’ ಎಂದು ಕಲ್ಲು, ಮಣ್ಣು, ಮರ ಇತ್ಯಾದಿಗಳಿಂದ ಮಾಡಿದ ದೇವರ ಪೂಜಕರನ್ನು ಕಟುವಾಗಿ ಟೀಕಿಸಿದ್ದಾರೆ. ಶರಣರದು ಜಂಗಮ ನಿಷ್ಠೆ. ಅದಕ್ಕಾಗಿ ಬಸವಣ್ಣನವರು ಇಷ್ಟಲಿಂಗವನ್ನು ಕರುಣಿಸಿದರು. ಇದನ್ನು ಬಿಟ್ಟು ಹಲವು ದೇವರುಗಳ ಪೂಜೆ ಮಾಡುವ ‘ಲಿಂಗವಂತ’ರಿಗೆ ಅವರು ಹೇಳಿದ್ದು:

ದೇವನೊಬ್ಬ, ನಾಮ ಹಲವು,
ಪರಮ ಪತಿವ್ರತೆಗೆ ಗಂಡನೊಬ್ಬ,
ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ವನು.
ಹಲವು ದೈವದ ಎಂಜಲ ತಿಂಬವರನೇನೆಂಬೆ,
ಕೂಡಲಸಂಗಮದೇವಾ!

ಭಕ್ತರು ಇಂದಿನ ಕಂಪ್ಯೂಟರ್ ಯುಗದಲ್ಲೂ ಅದೆಷ್ಟು ದೇವರುಗಳನ್ನು ಪೂಜಿಸುತ್ತಿದ್ದಾರೆ? ಈ ದೇವರಿಗಿಂತ ಆ ದೇವರು ಶಕ್ತಿಶಾಲಿ ಎಂದು ಅದು ಎಷ್ಟೇ ದೂರದಲ್ಲಿದ್ದರೂ ಅಂಥ ದೇವಾಲಯ ಹುಡುಕಿಕೊಂಡು ಹೋಗುವರು. ಹಾಗಾಗಿಯೇ ಇಂದು ಎಲ್ಲೆಡೆ ಹೊಸ ಹೊಸ ದೇವಾಲಯಗಳು ತಲೆ ಎತ್ತುತ್ತಲಿವೆ. ಸರ್ಕಾರ ಕೂಡ ಅವುಗಳಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ. ಇದು ‘ಸರ್ವ ಧರ್ಮ ಸಮನ್ವಯ’ದ ಬದಲು ಮನುಷ್ಯ ಮನುಷ್ಯರ ನಡುವೆ ಸಂಶಯದ ಬೇಲಿ ನೆಡಲು ಕಾರಣವಾಗುತ್ತಿದೆ. ಅದಕ್ಕಾಗಿಯೇ ಕುವೆಂಪು ಅವರು ‘ಓ ನನ್ನ ಚೇತನ ಆಗು ನೀ ಅನಿಕೇತನ’ ಎಂದದ್ದು. ಅವರು ‘ನೂರು ದೇವರನೆಲ್ಲ ನೂಕಾಚೆ ದೂರ, ಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು, ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು, ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು’ ಎಂದು ಹೇಳಿದ್ದನ್ನು ಜನರು ಗಮನಿಸದೆ ನೂರಾರು ದೇವರುಗಳ ಗುಡಿಗೆ ಸುತ್ತಿದ್ದೇ ಸುತ್ತಿದ್ದು. ‘ವಿಶ್ವಮಾನವ ಸಂದೇಶ’ದಲ್ಲಿ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂದು ಕುವೆಂಪು ಹೇಳಿದ್ದು ಧರ್ಮಾಂಧರ ತಲೆಗೆ ಹೋಗುವುದೇ ಇಲ್ಲ. ಮತ್ತೂ ಅವರು ನೂರು ದೇವರುಗಳನ್ನು ತಮ್ಮ ಮನಸ್ಸು ಮತ್ತು ಮನೆಯೊಳಗೆ ಬರಮಾಡಿಕೊಳ್ಳುತ್ತಿದ್ದಾರೆ. ಅದನ್ನು ಕಂಡೇ ಡಾ. ಜಿ ಎಸ್ ಶಿವರುದ್ರಪ್ಪನವರು ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ’ ಎಂದಿದ್ದಾರೆ.

ಭೂಮಿ, ಸೂರ್ಯ, ಗಾಳಿ, ಮಳೆ, ಬೆಂಕಿ ಇವುಗಳಲ್ಲಿ ಭೇದವಿಲ್ಲ. ಪ್ರಕೃತಿಮಾತೆ ಸಮತೋಲನ ಕಾಪಾಡಿಕೊಂಡಿದೆ. ಆದರೆ ಧರ್ಮ, ದೇವರ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವೆ ಬೇಲಿಯನ್ನು ನೆಡುವ ಕಾರ್ಯ ನಡೆಯುತ್ತಲೇ ಇದೆ. ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರ ಚಿಂತನೆ ಮಾಡಬೇಕಿದೆ. ಆಗ ಮಾತ್ರ ‘ಸರ್ವ ಧರ್ಮ ಸಮನ್ವಯ’ ಸಾಧ್ಯ. ಜಾತಿ, ಧರ್ಮಗಳ ಗೋಡೆಯನ್ನು ಕೆಡವಿ ಕುವೆಂಪು ಅವರು ಹೇಳಿರುವಂತೆ ‘ವಿಶ್ವಮಾನವ’ರಾಗಬೇಕಿದೆ. ಅದನ್ನೇ ಬಸವಣ್ಣನವರು ‘ಇವನಾರವ’ ಎನ್ನದೆ ‘ಇವ ನಮ್ಮವ’ ಎಂದು ಎಲ್ಲರನ್ನೂ ಸಮಾನವಾಗಿ ಕಾಣಲು ಹೇಳಿದ್ದು. ಧರ್ಮ ವಿಭಜಿಸುವುದಲ್ಲ. ಅದರ ಉದ್ದೇಶ ಒಟ್ಟುಗೂಡಿಸುವುದು. ಅದನ್ನೇ ಡಾ. ಮಹಾದೇವ ಬಣಕಾರರು ‘ಧರ್ಮ ಸೂಜಿ ಇದ್ದಂತೆ, ಜಾತಿ ಕತ್ತರಿ ಇದ್ದಂತೆ; ಸೂಜಿಯ ಕೆಲಸ ತುಂಡಾಗಿದ್ದ ಬಟ್ಟೆಗಳನ್ನು ಸೇರಿಸಿ ಒಂದಾಗಿಸುವುದು. ಕತ್ತರಿಯ ಕೆಲಸ ಒಂದಾಗಿದ್ದ ಬಟ್ಟೆಯನ್ನು ಕತ್ತರಿಸಿ ತುಂಡು ತುಂಡು ಮಾಡುವುದು’ ಎನ್ನುತ್ತಿದ್ದರು. ಧರ್ಮ ಯಾವುದೇ ಇದ್ದರೂ ಅದು ಸೂಜಿಯ ಕೆಲಸ ಮಾಡಿದಾಗ ಮಾತ್ರ ‘ಸರ್ವ ಧರ್ಮ ಸಮನ್ವಯ’ ಸಾಧ್ಯ. ಧರ್ಮ ಸಾರ್ವಜನಿಕರಲ್ಲಿ ಪರಸ್ಪರ ಪ್ರೀತಿ, ಸಹಿಷ್ಣುತೆ, ಸತ್ಯ, ನೀತಿ, ಪ್ರಾಮಾಣಿಕತೆ ಇಂಥ ಮೌಲ್ಯಗಳನ್ನು ಬಿತ್ತಬೇಕು. ಪ್ರತಿಯೊಬ್ಬರೂ ಮೊದಲು ಭಾರತೀಯರು ಎನ್ನುವ ದೇಶಪ್ರೇಮವಿರಬೇಕು. ನಂತರ ಅವರವರ ಧರ್ಮದ ಪ್ರೇಮವಿದ್ದರೆ ತಪ್ಪೇನಲ್ಲ. ಆಯಾ ಧರ್ಮದ ಅನುಯಾಯಿಗಳು ಮತಾಂಧರಾಗದೆ, ಮಾನವ ಮಾನವರ ನಡುವೆ ಬಾಂಧವ್ಯದ ಸೇತುವೆ ಕಟ್ಟುವ ಕಾರ್ಯ ಮಾಡಿದಾಗ ಮಾತ್ರ ಸಮನ್ವಯ ಸಾಧ್ಯ. ಭಾರತ ‘ಸರ್ವಜನಾಂಗದ ಶಾಂತಿಯ ತೋಟ’. ತೋಟದಲ್ಲಿ ವಿವಿಧ ವರ್ಣಗಳ ಹೂಗಳಿರುವ ಹಾಗೆ ಭಾರತದಲ್ಲಿ ಹಲವು ಧರ್ಮಗಳಿದ್ದರೂ ಅವುಗಳ ನಡುವೆ ಮಧುರ ಬಾಂಧ್ಯವದ ಮೂಲಕ ಸಮನ್ವಯ ಸಾಧಿಸಬೇಕಾಗಿದೆ. ಇಲ್ಲದಿದ್ದರೆ ‘ಸರ್ವ ಧರ್ಮ ಸಮನ್ವಯ’ ಎನ್ನುವುದು ಒಂದು ಘೋಷಣೆಯಾಗಬಹುದಷ್ಟೆ.

ಧರ್ಮದ ಹೆಸರಿನಲ್ಲಿ ಸ್ವಾರ್ಥ, ಸಂಕುಚಿತತೆಯ ಗೋಡೆ ಕಟ್ಟದೆ ಮಾನವರನ್ನು ದೇವರನ್ನಾಗಿ ಮಾಡುವಂತಾಗಬೇಕೇ ಹೊರತು ದಾನವರನ್ನಲ್ಲ. ಆದರೆ ತಮ್ಮ ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಧರ್ಮಾಂಧರಿಂದಾಗಿ ಏನೆಲ್ಲ ಅನಾಹುತಗಳು ಘಟಿಸುತ್ತಲೇ ಇವೆ. ಇಂದು ಧರ್ಮದ ಹೆಸರಿನಲ್ಲಿ ಮಾನವ ದೇವನಾಗದೆ ದಾನವನಾಗಲು ಸ್ಪರ್ಧೆ ನಡೆಸುತ್ತಿದ್ದಾನೆ. ಇಂಥವರನ್ನು ಕಂಡೇ ರಾಷ್ಟ್ರಕವಿ ಕುವೆಂಪು ಅವರು ‘ಗುಡಿ, ಚರ್ಚ್, ಮಸಜೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮಟ್ಟ ಕೀಳಬನ್ನಿ, ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ, ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ, ಓ ಬನ್ನಿ ಸೋದರರೆ ಬೇಗ ಬನ್ನಿ. ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ, ಮತಿಯಿಂದ ದುಡಿಯಿರೈ ಲೋಕಹಿತಕೆ, ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು, ಸೇರಿರೈ ಮನುಜಮತಕೆ ಓ ಬನ್ನಿ ಸೋದರರೆ ವಿಶ್ವಪಥಕೆ’ ಎಂದು ಕರೆ ಕೊಟ್ಟಿದ್ದಾರೆ.

ಲಿಂಗಾಯತ ಧರ್ಮದಲ್ಲಿ ಕಾಯಕ ಮತ್ತು ದಾಸೋಹ ತತ್ವಗಳಿಗೆ ಒತ್ತು ಕೊಡಲಾಗಿದೆ. ಲಿಂಗಾಯತ ಧರ್ಮದ ಧರ್ಮಗುರು ಬಸವಣ್ಣನವರು ‘ಕಾಯ’ ಮತ್ತು ‘ಕಾಯಕ’ ಶುದ್ಧಿಗೆ ವಿಶೇಷ ಮಹತ್ವ ನೀಡಿದ್ದಾರೆ. ‘ಕಾಯ’ ಎಂದರೆ ದೇಹ. ಮನುಷ್ಯ ತನ್ನ ದೇಹದ ಪಾವಿತ್ರ್ಯತೆ ಕಾಯ್ದುಕೊಳ್ಳುವುದು ಬಹುಮುಖ್ಯ. ಅದು ತಿಪ್ಪೆಗುಂಡಿ ಅಥವಾ ಚರಂಡಿ ಆಗಬಾರದು. ಹಾಗಾಗಬಾರದು ಎಂದರೆ ಮನುಷ್ಯ ದುಶ್ಚಟಗಳಿಂದ ಮುಕ್ತನಾಗಬೇಕು. ಮದ್ಯಪಾನದಂತಹ ದುಶ್ಚಟವೇ ಮನುಕುಲದ ಆರೋಗ್ಯ, ಸಂಪತ್ತು, ಸಂಸ್ಕೃತಿಯನ್ನು ನಾಶ ಮಾಡುತ್ತದೆ ಎಂದು ಮದ್ಯವನ್ನು ನಿಷೇಧಿಸುವಂತೆ ಪೂಜ್ಯರು ಹಿಂದೆ ಬಹುದೊಡ್ಡ ಹೋರಾಟವನ್ನೇ ಮಾಡಿದ್ದರು. ಆದರೆ ಯಾವ ಸರ್ಕಾರಗಳೂ ಆ ಬಗ್ಗೆ ಗಮನ ಹರಿಸದೆ ಮತ್ತಷ್ಟು ಮದ್ಯದಂಗಡಿಗಳಿಗೆ ಅನುಮತಿ ನೀಡುತ್ತಿರುವುದು ಏನನ್ನು ಸೂಚಿಸುತ್ತದೆ? ಇದು ಸಹ ಸರ್ವಧರ್ಮ ಸಮನ್ವಯಕ್ಕೆ ಬಹುದೊಡ್ಡ ಪೆಟ್ಟು ಕೊಡುತ್ತಿದೆ. ಆಗ ‘ಕಾಯವೆ ಕೈಲಾಸ’ವಾಗಲು ಹೇಗೆ ಸಾಧ್ಯ? ಹಾಗಂತ ಕೈಲಾಸವನ್ನು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಿಲ್ಲ. ಕೈಲಾಸ ಎನ್ನುವುದು ಭೂಮಿಯ ಮೇಲಿರುವ ಹಾಳು ಬೆಟ್ಟ ಎನ್ನುತ್ತಾರೆ ಶಿವಯೋಗಿ ಸಿದ್ಧರಾಮೇಶ್ವರರು. ಕೈಲಾಸ ಎಂದರೆ ಆನಂದ. ಅದಕ್ಕೆ ಬೇಕಾದುದು ನಡೆ ನುಡಿ ಸಿದ್ಧಾಂತ. ಆದರ್ಶ ಬದುಕು. ಅದನ್ನೇ ಮತ್ತೊಂದರ್ಥದಲ್ಲಿ ಶರಣರು ‘ಕಾಯಕವೆ ಕೈಲಾಸ’ ಎಂದಿದ್ದಾರೆ. ಹೀಗೆ ಮನುಷ್ಯ ಕಾಯ ಮತ್ತು ಕಾಯಕ ಶುದ್ಧಿಗೆ ಒತ್ತು ಕೊಟ್ಟರೆ ‘ಸರ್ವ ಧರ್ಮ ಸಮನ್ವಯ’ ತನ್ನಿಂದ ತಾನೇ ಸಾಧಿತವಾಗುವುದು. ಇವತ್ತು ವೈಜ್ಞಾನಿಕವಾಗಿ ಅದ್ಭುತ ಪ್ರಗತಿಯಾಗಿದೆ. ವಿಜ್ಞಾನಕ್ಕೆ ತಳಹದಿಯಾಗಿರಬೇಕಾದದ್ದು ಮಾನವೀಯ ಧರ್ಮ. ಮಾನವೀಯತೆಯಿಲ್ಲದ ವಿಜ್ಞಾನ ಕುರುಡನಂತಾಗಿ ವಿನಾಶಕ್ಕೆ ಪ್ರೇರಕವಾಗುವುದು. ಅಂತೆಯೇ ವೈಜ್ಞಾನಿಕ ತಳಹದಿಯಿಲ್ಲದ ಧರ್ಮ ಕುಂಟನಂತಾಗಿ ಮೌಢ್ಯಗಳಿಗೆ ಹೆದ್ದಾರಿಯಾಗುವುದು. ತನ್ನ ಧರ್ಮವೇ ಶ್ರೇಷ್ಠ ಎನ್ನುವುದಕ್ಕಿಂತ ತಾನು ಶ್ರೇಷ್ಠ ಗುಣಗಳ ಮನುಷ್ಯನಾಗುವುದು ಮುಖ್ಯವಾಗಬೇಕು.

ಧರ್ಮ ಎಂದರೆ ಗುಡಿ, ಚರ್ಚು, ಮಸೀದಿ, ಅಡ್ಡ-ಉದ್ದ ನಾಮ ಇತ್ಯಾದಿಗಳಲ್ಲ. ಬದಲಾಗಿ ಆದರ್ಶ ಬದುಕನ್ನು ನಡೆಸುವುದು ಮತ್ತು ಇತರರಿಗೆ ಅದೇ ಅವಕಾಶ ಕಲ್ಪಿಸುವುದು. ದಯಾವಂತರಾಗಿ, ನೀತಿವಂತರಾಗಿ ಸೌಹಾರ್ದದಿಂದ ಎಲ್ಲರೊಂದಿಗೆ ಕೂಡಿ ಬಾಳುವುದು. ‘ಕಾಯಕವೆ ಕೈಲಾಸ’ ಎನ್ನುವ ತತ್ವ ಅನುಭವ ಮಂಟಪದ ಧ್ಯೇಯವಾಕ್ಯವಾಗಿತ್ತು. ಕಾಯಕ ಮಾಡಲು ಆರೋಗ್ಯ ಚನ್ನಾಗಿರಬೇಕು. ‘ಆರೋಗ್ಯವೇ ಭಾಗ್ಯ’. ಆರೋಗ್ಯವೇ ಇಲ್ಲದಿದ್ದರೆ ಯಾವ ಕಾಯಕವನ್ನೂ ಮಾಡಲು ಆಗುವುದಿಲ್ಲ. ಕಾಯ ಶುದ್ಧಿ, ಕಾಯಕ ಶುದ್ಧಿಗೂ ಕಾರಣವಾಗುವುದು. ಹಾಗಾಗಿ ಮಾಡುವ ಕಾಯಕ ಸತ್ಯಶುದ್ಧವಾಗಿರಬೇಕಾದದ್ದು ಬಹುಮುಖ್ಯ. ಕಾಯಕಗಳಲ್ಲಿ ಮೇಲು, ಕೀಳು ಇಲ್ಲ. ಚಪ್ಪಲಿ ಹೊಲಿಯುವ ಕಾಯಕ ಕೀಳೆಂದಾಗಲಿ, ಖುರ್ಚಿಯ ಮೇಲೆ ಕುಳಿತು ಮಾಡುವ ಕಾಯಕ ಮೇಲೆಂದಾಗಲಿ ಅಲ್ಲ. ಈ ಭೂಮಿಗೆ ಬಂದ ಪ್ರತಿಯೊಬ್ಬರೂ ಒಂದಿಲ್ಲೊಂದು ಕಾಯಕ ಮಾಡಲೇಬೇಕು. ಗುರು, ಲಿಂಗ, ಜಂಗಮರಿಗೂ ಕಾಯಕ ಕಡ್ಡಾಯ. ಕಾಯಕದಿಂದ ಆರ್ಥಿಕ ಮತ್ತು ಸಾಮಾಜಿಕ ಸಮನ್ವಯ ಸಾಧಿಸಲು ಸಾಧ್ಯ. ಕಾಯಕದಲ್ಲಿ ಇಂದಿಗೆ, ನಾಳೆಗೆ, ಮಡದಿ ಮಕ್ಕಳಿಗೆ ಎಂದು ಕೂಡಿಡುವ ಪದ್ಧತಿ ಇಲ್ಲ. ‘ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ’ ಎನ್ನುವುದು ಬಸವಣ್ಣನವರ ಪ್ರಮಾಣ. ಇದೇ ದಾಸೋಹ ಪ್ರಜ್ಞೆ.

‘ಅನುಭವ ಮಂಟಪ’ ವಿಶ್ವದ ಮೊದಲ ಧಾರ್ಮಿಕ ಸಂಸತ್. ಅಲ್ಲಿ ಜಾತಿ, ವಯಸ್ಸು, ಲಿಂಗ ಭೇದವಿಲ್ಲದೆ ಎಲ್ಲ ಕಾಯಕದವರೂ ಮುಕ್ತವಾಗಿ ಚರ್ಚೆ ಮಾಡುತ್ತಿದ್ದರು. ಅವರ ಚರ್ಚೆ ಧರ್ಮ ಸಮನ್ವಯಕ್ಕೆ ಹಿಡಿದ ಕನ್ನಡಿಯಾಗಿತ್ತು. ಶರಣರ ದೃಷ್ಟಿಯಲ್ಲಿ ಧರ್ಮ ಮನುಷ್ಯ ಮನುಷ್ಯರ ನಡುವೆ ಬಾಂಧವ್ಯದ ಬೆಸುಗೆ ಹಾಕಬೇಕು. ಯಾರೇ ಆಗಲಿ; ಲೋಕದ ಡೊಂಕನ್ನು ತಿದ್ದುವ ಮುನ್ನ ತನ್ನ ಡೊಂಕನ್ನು ತಿದ್ದಿಕೊಳ್ಳಬೇಕು. ವ್ಯಕ್ತಿಯ ತನು, ಮನ, ಭಾವ, ಬುದ್ಧಿಯಲ್ಲಿ ಪರಿವರ್ತನೆಯಾದರೆ ಧರ್ಮ ಸಮನ್ವಯತೆ ಸುಲಭ. ಧರ್ಮ ಎಂದರೆ ಮೊದಲೇ ಹೇಳಿದಂತೆ ಕೇವಲ ಬಾಹ್ಯ ಕ್ರಿಯಾಚರಣೆಗಳಲ್ಲ; ಅದು ಮನುಷ್ಯತ್ವ. ಇಂದು ಜಾತಿ, ಮತ, ಧರ್ಮದ ಹೆಸರಿನಲ್ಲಿ ಮಾನವೀಯ ಸಂಬಂಧಗಳು ಶಿಥಿಲವಾಗುತ್ತಿವೆ. ಬಸವಣ್ಣನವರು ಸಕಲ ಜೀವಾತ್ಮರ ಲೇಸನ್ನು ಬಯಸುವುದೇ ನಿಜ ಧರ್ಮ ಎಂದರು. ಅಲ್ಲಿ ಕೇವಲ ಮಾನವ ಮಾತ್ರರಿಲ್ಲ; ಸಕಲ ಜೀವಜಾಲವೇ ಇದೆ. ಆ ಜೀವಜಾಲ ಚನ್ನಾಗಿದ್ದರೆ ನಾವೂ ಚನ್ನಾಗಿರಲು ಸಾಧ್ಯ. ಇದೇ ಧರ್ಮ ಸಮನ್ವಯ. ಈ ಹಾದಿಯಲ್ಲಿ ನಡೆದರೆ ಮಾತ್ರ ಮನುಕುಲ ನೆಮ್ಮದಿಯಿಂದ ಬಾಳಲು ಸಾಧ್ಯ.

ಅನುಭವ ಮಂಟಪದಲ್ಲಿ ಹರಳಯ್ಯ, ಕಕ್ಕಯ್ಯ, ಚನ್ನಯ್ಯ, ಚಂದಯ್ಯ, ಮಾಚಯ್ಯ, ಮರುಳ ಶಂಕರದೇವ, ಮಹಾದೇವ ಭೂಪಾಲ, ಸತ್ಯಕ್ಕ, ಸೂಳೆ ಸಂಕವ್ವೆ, ಕದಿರೆ ರೆಮ್ಮವ್ವೆ, ಅಕ್ಕಮಹಾದೇವಿ ಹೀಗೆ ವಿವಿಧ ವರ್ಗದ, ವಿಭಿನ್ನ ಕಾಯಕದ ಜನರಿದ್ದರು. ಅಲ್ಲಿ ಜಾತಿ ಮತ್ತು ಕಾಯಕದ ಆಧಾರದ ಮೇಲೆ ಯಾರನ್ನೂ ನೋಡದೆ ಸರ್ವಸಮಾನತೆಯನ್ನು ಜಾರಿಯಲ್ಲಿ ತಂದಿದ್ದರು. ಅವರಿಗೆ ಅಂತರಂಗ, ಬಹಿರಂಗ ಶುದ್ಧಿ ಮುಖ್ಯವಾಗಿತ್ತು. ಬಸವಣ್ಣನವರು ಅಂತರಂಗ ಬಹಿರಂಗ ಶುದ್ಧಿಗೆ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ ಎನ್ನುವ ಸಪ್ತ ಸೂತ್ರಗಳನ್ನೇ ಅನುಭವ ಮಂಟಪದ ಮುಂದಿಟ್ಟರು. ಅವೇ ದೇವರನ್ನು ಒಲಿಸುವ ಸುಗಮ ದಾರಿ ಎನ್ನುವುದನ್ನೂ ತೋರಿಸಿಕೊಟ್ಟರು. ಸಪ್ತಶೀಲಗಳಂತೆ ನಡೆದರೆ ‘ಸರ್ವ ಧರ್ಮ ಸಮನ್ವಯ’ ಸಹಜವಾಗಿಯೇ ಜಾರಿಯಲ್ಲಿ ಬರುವುದು. ತಂತ್ರಜ್ಞಾನ ಇಂದು ವಿಶ್ವವನ್ನೇ ಒಂದು ಹಳ್ಳಿಯಾಗಿಸಿ ನಮ್ಮನ್ನು ಹತ್ತಿರ ತಂದಿದೆ. ಆದರೆ ನಮ್ಮ ಹೃದಯಗಳು ದೂರವಾಗುತ್ತಿವೆ. ಜಾತಿ, ಮತ, ಪಂಥಗಳ ಗೋಡೆಗಳನ್ನು ಕೆಡವಿ ವಿಶ್ವಮಾನವರಾಗುವುದು ಇಂದಿನ ಅಗತ್ಯ. ವಿಶ್ವಬಂಧು ಮರುಳಸಿದ್ಧರ ತತ್ವದಂತೆ ಎಲ್ಲರನ್ನೂ ಬಂಧುಗಳಂತೆ ಕಾಣುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕಾಗಿದೆ.

ಇಂದು ತನ್ನ ಧರ್ಮವೇ ಶ್ರೇಷ್ಠ ಎನ್ನುವ ವ್ಯಸನ ಹೆಚ್ಚಾಗಿ ಒಬ್ಬರು ಮತ್ತೊಬ್ಬರನ್ನು ಅನುಮಾನದಿಂದ ನೋಡುವಂತಾಗಿದೆ. ಮನುಷ್ಯ ಧರ್ಮಕ್ಕಿಂತ ಶ್ರೇಷ್ಠ ಧರ್ಮ ಮತ್ತೊಂದಿಲ್ಲ. ಶರಣರು ವೇದ, ಶಾಸ್ತ್ರ, ಪುರಾಣ, ಶ್ರುತಿ, ಸ್ಮೃತಿ, ಆಗಮ ಇತ್ಯಾದಿಗಳಿಗೆ ಮಹತ್ವ ಕೊಟ್ಟವರಲ್ಲ. ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ’ ಎಂದು ಬಸವಣ್ಣನವರು ಹೇಳಿದರೆ ಪ್ರಭುದೇವರು ‘ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ’ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾದೇವಿಯಕ್ಕ, ‘ವೇದ ಶಾಸ್ತ್ರ, ಆಗಮ ಪುರಾಣಂಗಳೆಲ್ಲವು ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ. ಇವ ಕುಟ್ಟಲೇಕೆ ಕುಸುಕಲೇಕೆ?’ ಎಂದು ಪ್ರಶ್ನಿಸಿದ್ದಾರೆ. ಸಿದ್ಧರಾಮೇಶ್ವರರು ‘ನಮ್ಮ ನಡಾವಳಿಗೆ ನಮ್ಮ ಪುರಾತರ ನುಡಿಯೆ ಇಷ್ಟವಯ್ಯಾ’ ಎನ್ನುತ್ತ ‘ಸ್ಮೃತಿಗಳು ಸಮುದ್ರದ ಪಾಲಾಗಲಿ, ಶ್ರುತಿಗಳು ವೈಕುಂಠವ ಸೇರಲಿ, ಪುರಾಣಗಳು ಅಗ್ನಿಯ ಸೇರಲಿ, ಆಗಮಗಳು ವಾಯುವ ಹೊಂದಲಿ’ ಎಂದದ್ದು ಚಿಂತನಾರ್ಹವಾಗಿದೆ.

ಧರ್ಮ ಕತ್ತಲೆಯನ್ನು ಕಳೆದು ಬೆಳಕು ಕೊಡುವಂತಹುದು. ಆದರೆ ಧರ್ಮಾಂಧರು ಬೆಳಕನ್ನು ಆರಿಸಿ ಬೆಂಕಿ ಹಚ್ಚುವರು. ಧಾರ್ಮಿಕ ವಲಯದಲ್ಲಿರುವವರು ಮಾನವೀಯ ಗುಣಗಳನ್ನು ಎತ್ತಿಹಿಡಿಯುವಂತಾಗಬೇಕು. ಇಂದು ಮನುಷ್ಯ ಚಂದ್ರನ ಮೇಲೆ ಮನೆ ಕಟ್ಟುವ ಸಾಹಸದಲ್ಲಿದ್ದಾನೆ. ನೀರಿನಲ್ಲಿ ಮೀನಿನಂತೆ ತೇಲುತ್ತಿದ್ದಾನೆ, ಆಕಾಶದಲ್ಲಿ ಹಕ್ಕಿಯಂತೆ ಹಾರುತ್ತಿದ್ದಾನೆ. ಆದರೆ ಮನುಷ್ಯನಾಗಿ ಬಾಳುವುದು ಹೇಗೆಂಬುದನ್ನು ಮರೆತಿದ್ದಾನೆ. ಇದಕ್ಕೆ ಧರ್ಮ ಅಡ್ಡಗೋಡೆಯಾಗುತ್ತಿದೆ ಎನ್ನುವ ಅಭಿಪ್ರಾಯ ಹಲವರದು. ಧರ್ಮದ ಯತಾರ್ಥ ಅರಿತು ಆ ಧರ್ಮದ ಆಶಯದಂತೆ ಪ್ರತಿಯೊಬ್ಬರೂ ವ್ಯಕ್ತಿಗತ ಬದುಕನ್ನು ಕಟ್ಟಿಕೊಂಡರೆ ಧರ್ಮ ಅಡ್ಡಗೋಡೆಯಾಗದೆ ‘ಸರ್ವ ಧರ್ಮ ಸಮನ್ವಯ’ಕ್ಕೆ ಸೋಪಾನವಾಗುವುದು. ಲಿಂಗಾಯತ ಧರ್ಮದಲ್ಲಿ `ಸರ್ವ ಧರ್ಮ ಸಮನ್ವಯ’ಕ್ಕೆ ಬೇಕಾದ ಎಲ್ಲ ಆದರ್ಶಗಳೂ ಅಡಕವಾಗಿವೆ. ಆದರೆ ಆ ಧರ್ಮದ ತತ್ವಾದರ್ಶಗಳಂತೆ ಜನರು ಮತ್ತು ಅವರಿಗೆ ಮಾರ್ಗದರ್ಶನ ಮಾಡುವ ಮಠಾಧೀಶರು ನಡೆದುಕೊಳ್ಳಬೇಕಿದೆ. ಬೆಲ್ಲವ ತಿಂದ ಕೋಡಗನಂತೆ, ಕಬ್ಬ ತಿಂದ ನರಿಯಂತೆ, ಗಗನವಡರಿದ ಕಾಗೆಯಂತೆ ಚಂಚಲ ಮನದವರಾಗದೆ ‘ಕೂಡಲಸಂಗನ ಶರಣರ ಕಂಡು ಲಿಂಗವೆಂದೆ ನಂಬು ಮನವೆ’ ಎಂದಿರುವ ಬಸವಣ್ಣನವರ ಸಂದೇಶ ಬದುಕಿನಲ್ಲಿ ಸಾಕಾರಗೊಳ್ಳಬೇಕಿದೆ. ಆಗ `ಸರ್ವ ಧರ್ಮ ಸಮನ್ವಯ’ ಸಾಧ್ಯ.

ಸರ್ವಧರ್ಮ ಸಮನ್ವಯದ ಹಿನ್ನೆಲೆಯಲ್ಲೇ ನಮ್ಮ ಗುರುಗಳು ಬಸವಾದಿ ಶಿವಶರಣರ ವಚನ ಸಾಹಿತ್ಯವನ್ನು ಆಂಗ್ಲಭಾಷೆಗೆ ಅನುವಾದ ಮಾಡಿಸಿದ್ದರು. ಅವರು ಶರಣರ ವಚನಗಳು ವಿಶ್ವವ್ಯಾಪಿಯಾಗುವ ಕನಸು ಕಂಡಿದ್ದರು. ಅವರ ಕನಸನ್ನು ಡಾ. ಜಗದ್ಗುರುಗಳು ಗಣಕ ತಂತ್ರಜ್ಞಾನ ಬಳಸಿ ಎಲ್ಲ ವಚನಗಳು ಮೊಬೈಲ್‍ನಲ್ಲೇ ಸಿಗುವಂತೆ ನನಸು ಮಾಡಿದ್ದಾರೆ. ಹೀಗೆ ನಮ್ಮ ಮಠ ಸರ್ವ ಧರ್ಮ ಸಮನ್ವಯದ ನೆಲೆಯಲ್ಲೇ ಕೆಲಸ ಮಾಡುತ್ತಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.

ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು? ಫಲವೇನು?
ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ.
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ.

ಈ ವಚನದ ಆಶಯ ಸಫಲವಾದರೆ ಸರ್ವ ಧರ್ಮ ಸಮನ್ವಯದ ಜೊತೆಗೆ ಸಕಲ ಜೀವಾತ್ಮರ ಕಲ್ಯಾಣವಾಗುವುದು. “ಬುದ್ಧನ ಕರುಣೆ, ಪೈಗಂಬರರ ಶಾಂತಿ, ಏಸುಕ್ರಿಸ್ತರ ಕ್ಷಮಾಗುಣ, ಮಹಾವೀರರ ಅಹಿಂಸೆ, ವಿಶ್ವಬಂಧು ಮರುಳಸಿದ್ಧರ ವಿಶ್ವಪ್ರೇಮ, ಬಸವಣ್ಣನವರ ಸಪ್ತಶೀಲಗಳು, ವಿವೇಕಾನಂದರ ವಿಶ್ವಭ್ರಾತೃತ್ವ, ಗಾಂಧೀಜಿಯ ಸತ್ಯ, ಕುವೆಂಪು ಅವರ ವಿಶ್ವಮಾನವ ಸಂದೇಶ, ಒಗ್ಗಟ್ಟಾಗದೆ ಯಾವ ಕಾರ್ಯವೂ ನಡೆಯುವುದಿಲ್ಲ” ಎನ್ನುವ ನಮ್ಮ ಗುರುಗಳ ಮೌಲ್ಯಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ‘ಸರ್ವ ಧರ್ಮ ಸಮನ್ವಯ’ದ ಬಗ್ಗೆ ಮಾತನಾಡುವ ಅಗತ್ಯವೇ ಬೀಳುವುದಿಲ್ಲ.

ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ.
ಧೂಪ ಪರಿಮಳವಲ್ಲ, ಕಂಚು ಬೆಳಗಲ್ಲ, ಸಯಧಾನ ಅರ್ಪಿತವಲ್ಲ!
ಅದೆಂತೆಂದಡೆ:
ಸಜ್ಜನವೆ ಮಜ್ಜನ, ಸದಾಚಾರವೆ ಪತ್ರೆ ಪುಷ್ಪ.
ಅಷ್ಟಮದಂಗಳ ಸುಟ್ಟುದೆ ಧೂಪ, ನಯನವೆ ಸ್ವಯಂ ಜ್ಯೋತಿ.
ಪರಿಣಾಮವೆ ಅರ್ಪಿತ ಕಾಣಾ ಗುಹೇಶ್ವರಾ.
ಆವನಾದಡೇನು ಶ್ರೀಮಹಾದೇವನ ನೆನೆವನ
ಬಾಯ ತಂಬುಲವ ಮೆಲುವೆ, ಬೀಳುಡುಗೆಯ ಹೊದೆವೆ,
ಪಾದರಕ್ಷೆಯ ಕಾಯ್ದು ಬದುಕುವೆ, ಕೂಡಲಸಂಗಮದೇವಾ.

ಈ ಮಾತುಗಳ ಹಿನ್ನೆಲೆಯಲ್ಲಿ ಸರ್ವಧರ್ಮ ಸಮನ್ವಯ ಮಾಡುವುದು ಹೇಗೆನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ. ಇವತ್ತಿನ ದಿನಮಾನಗಳಲ್ಲಿ ಮನುಷ್ಯ ರಾಕ್ಷಸನಂತಾಗುವ ವಾತಾವರಣವನ್ನು ಎಲ್ಲ ಕಡೆ ಕಾಣುತ್ತಲಿದ್ದೇವೆ. ಅಂಥ ರಾಕ್ಷಸತ್ವದಿಂದ ದೇವತ್ವದ ಕಡೆಗೆ ಕರೆದೊಯ್ಯುವಂತಹುದೇ ತರಳಬಾಳು ಹುಣ್ಣಿಮೆಯ ವಿಶೇಷ.

Previous post ನಾನೆಂಬ ನಿನಾದ…
ನಾನೆಂಬ ನಿನಾದ…
Next post ನಾಥರು ಹಾಗೂ ಶರಣರು
ನಾಥರು ಹಾಗೂ ಶರಣರು

Related Posts

ಅಮುಗೆ ರಾಯಮ್ಮ- ಜೀವನ ವೃತ್ತಾಂತ
Share:
Articles

ಅಮುಗೆ ರಾಯಮ್ಮ- ಜೀವನ ವೃತ್ತಾಂತ

September 10, 2022 ಡಾ. ಬಸವರಾಜ ಸಬರದ
ಶಿವಶರಣರ ಜನನ ವೃತ್ತಾಂತಗಳ ಬಗೆಗೆ ಹೆಚ್ಚಿನ ವಿವರಗಳು ಸಿಗುವುದಿಲ್ಲ, ಖಚಿತ ಮಾಹಿತಿಗಳು ದೊರೆಯುವುದಿಲ್ಲ. ಆದರೂ ದೊರೆತಿರುವ ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಅಮುಗೆ...
ಕಾಣಿಕೆಯ ರೂಪದ ಕಪ್ಪುಹಣ
Share:
Articles

ಕಾಣಿಕೆಯ ರೂಪದ ಕಪ್ಪುಹಣ

April 29, 2018 ಡಾ. ಜೆ ಎಸ್ ಪಾಟೀಲ
ಭಾರತ ದೇಶವು ಭ್ರಷ್ಟತೆಯ ಕರಾಳ ಸಂಸ್ಕೃತಿಯನ್ನು ತನ್ನ ಸಾಂಪ್ರದಾಯಿಕ ಸಂಸ್ಕೃತಿಯ ಭಾಗವಾಗಿಸಿಕೊಂಡೇ ಬೆಳೆದುದು ಅದರ ಪುರಾಣ ಮತ್ತು ಇತಿಹಾಸದುದ್ದಕ್ಕೂ ದಾಖಲಾಗಿದೆ. ದೇವರು ಮತ್ತು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
August 2, 2019
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ವಚನಾಮೃತಂ: ಪುಸ್ತಕ ವಿಮರ್ಶೆ
ವಚನಾಮೃತಂ: ಪುಸ್ತಕ ವಿಮರ್ಶೆ
February 6, 2025
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
August 10, 2023
ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…
February 10, 2023
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
Copyright © 2026 Bayalu