ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಅವರ ಈ ಸಂದರ್ಶನ ನಡೆಸಿದವರು ಪ್ರೊ.ದೇಜಗೌ
ಸಂದರ್ಶಕ: ತಾವು ‘ವಚನಕಾರ ಬಸವೇಶ್ವರರು’ ಎಂಬ ಲೇಖನವನ್ನು ಬಹು ಹಿಂದೆಯೇ ಪ್ರಕಟಿಸಿ, ‘ಆ ಕಾಲದ ಯುಗಶಕ್ತಿ ಅವರ ಪ್ರಬುದ್ಧ ಚೇತನ ಸಂಮಥಿಸಿ, ಹೊಮ್ಮಿಸಿದ ತೆರೆ ತೆರೆಯ ಆಂದೋಲನಗಳಲ್ಲಿ ಮೂರ್ತಿಮತ್ತಾಗಿದೆ’ ಎಂದು ಹೇಳಿದ್ದೀರಿ. ‘ಅಂದೋಲನಗಳಲ್ಲಿ’ ಎನ್ನುವ ಪದದ ಬಹುವಚನ ಪ್ರತ್ಯಯ ಪ್ರಯೋಗದ ಅರ್ಥವೇನು?
ಕುವೆಂಪು: ಅವರು ಜನ್ಮತಃ ಕ್ರಾಂತದರ್ಶಿಯೂ ಅಹುದು, ಕ್ರಾಂತಿವೀರರೂ ಅಹುದು. ಅವರು ಕಲ್ಪನೆಯಲ್ಲಿ ಕಂಡು ವಾಸ್ತವದಲ್ಲಿ ರೂಪಿಸಿದ ಆಂದೋಳನಗಳು ಹಲವು : ಸಾಮಾಜಿಕಾರ್ಥಿಕ ಧಾರ್ಮಿಕ ಸಾಹಿತ್ಯಕ ಇತ್ಯಾದಿ. ವಿವೇಕಾನಂದ-ಗಾಂಧೀಜಿಯವರ ಜನ್ಮಧಾರಣೆಗೆ ಐತಿಹಾಸಿಕ ಅಗತ್ಯತೆ ಎಂತು ಕಾರಣವೊ ಬಸವಣ್ಣನವರ ಹುಟ್ಟಿಗೂ ಅದೇ ಕಾರಣವಾಗಿತ್ತು. ರಾಜಕೀಯಾರ್ಥಿಕ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಸಮತೋಲನ ತಪ್ಪಿ, ಅನಾಚಾರ ಭ್ರಷ್ಟಾಚಾರಗಳು ಸಮಾಜದ ಅಸ್ತಿ ವಿವರಗಳಲ್ಲೆಲ್ಲ ವ್ಯಾಪಿಸಿಕೊಂಡು, ಅದು ನರಕೀಯವಾದಾಗ, ಸಮತೋಲನದ ಪುನರುಜ್ಜೀವನಕ್ಕಾಗಿ ಅಂಥ ಮಹಾಪುರುಷರ ಉದಯ ಅತ್ಯಗತ್ಯವಾಗುತ್ತವೆ. ಅಧ್ಯಾತ್ಮ ಸಾಧನೆಯಿಂದ ಸಂಲಬ್ದವಾದ ಪ್ರವಾಹೋಪಮ ಅದಮ್ಯಶಕ್ತಿ ಹಲವು ಒಸಗೆಗಳಲ್ಲಿ ಪ್ರವಹಿಸಿ, ಜೀವನದ ಸಕಲ ಕ್ಷೇತ್ರಗಳನ್ನು ಆಲಿಂಗಿಸಿಕೊಳ್ಳುತ್ತದೆ. ಅದು ಪ್ರವಹಿಸಿದೆಡೆಗಳಲ್ಲೆಲ್ಲ ಶತ ಶತಮಾನಗಳಿಂದ ಮಡುಗೊಂಡಿದ್ದ ಕಶ್ಚಲ, ಕಟ್ಟಿಕೊಂಡಿದ್ದ ಪಾಚಿ ಕೊಚ್ಚಿಕೊಂಡು ಹೋಗುತ್ತವೆ. ಭಾರತೀಯ ಪ್ರತಿಭೆಯ ಬಹುಮುಖ ಹಾಗೂ ಪ್ರಬುದ್ಧ ಚೇತನಗಳೇ ಮೂರ್ತಗೊಂಡಂತಿದ್ದ ಆ ಭೀಷ್ಮ ವ್ಯಕ್ತಿತ್ವ ಸಾಹಿತ್ಯಕ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಕ್ರಾಂತಿಯಲ್ಲಿ ಪೂರ್ಣಾಭಿವ್ಯಕ್ತಿಯನ್ನು ಪಡೆದಿದೆ; ಆ ಕಾಲದ ಯುಗಶಕ್ತಿ ಅವರ ಕ್ರಿಯಾಶೀಲ ಜೀವನದಲ್ಲಿ ಪ್ರತಿಫಲನಗೊಂಡಿದೆ.
ಸಂದರ್ಶಕ: ಪ್ರೌಢ ಚಂಪೂ ಮಾರ್ಗದ ಜನ್ನಿವಾರವನ್ನು ಹರಿದು ಬಿಸುಟು ಸಾಮಾನ್ಯನಿಗೂ ಸುಲಭವಾಗುವ ರಗಳೆ, ಷಟ್ಪದಿಗಳ ಲಿಂಗಧಾರಣೆ ಮಾಡುವ ಉತ್ಸಾಹ ದೃಶ್ಯ ನಿಜವಾಗಿಯೂ ಮನೋಲ್ಲಾಸಕಾರಿಯಾಗುತ್ತದೆ ಎನ್ನುವಾಗ, ಹರಿಹರ ರಾಘವಾಂಕರಿಗೆ ಬಸವಣ್ಣನವರ ವಚನಗಳೇ ಸ್ಫೂರ್ತಿದಾಯಕವಾಗಿರುವಾಗ, ಅವರು ನಡೆಸಿದ ಸಾಹಿತ್ಯಕ್ರಾಂತಿ ಗೌಣವೆನ್ನಲಾದೀತೆ?
ಕುವೆಂಪು: ಅವರು ಮೊದಲು ಆಚಾರರು, ಸಮಾಜ ಸುಧಾರಕರು, ನೂತನ ಆರ್ಥಿಕ ಮಾರ್ಗ ಪ್ರವರ್ತಕರು, ಅನಂತರ ವಚನಕಾರರು. ತಾವು ಕಂಡ ಆಧ್ಯಾತ್ಮಿಕ ಸತ್ಯಗಳ, ಜೀವನಾನುಭವ ಹಾಗೂ ತಾತ್ವಿಕ ವಿಚಾರಗಳ ಅಭಿವ್ಯಕ್ತಿಗೆ ವಚನಗಳು ಮಾಧ್ಯಮವಾದುವೇ ಹೊರತು, ವಚನರಚನೆಯೇ ಅವರ ಜೀವನದ ಪ್ರಧಾನೋದ್ದೇಶವಾಗಿರಲಿಲ್ಲ. ಅವರು ಸೂಕ್ಷ್ಮ ಸಂವೇದನಾಶೀಲರಾದ್ದರಿಂದ, ಅವರ ಅಂತರ್ದೃಷ್ಟಿ ಬಹಿರ್ದೃಷ್ಟಿಗಳೆರಡೂ ಪ್ರಖರವಾಗಿದ್ದುದರಿಂದ ಅವರ ವಚನಗಳಲ್ಲಿ ಸಾಹಿತ್ಯಾಂಶಗಳು ಮೇಲಿಂದ ಮೇಲೆ ಮೈದೋರುತ್ತವೆ. ಹೃದಯದಿಂದ ನೇರವಾಗಿ ಹೊರಹೊಮ್ಮಿದುವಾದ್ದರಿಂದ ಅವುಗಳಲ್ಲಿ ಭಾವಾತ್ಮಕತೆಯನ್ನು ರಸಾದ್ರತೆಯನ್ನು ಕಾಣಬಹುದು. ಲೌಕಿಕಾಲೌಕಿಕ ವಿಚಾರಗಳು ಭಾವಕೋಶದ ಮೂಲಕ ಹೊರಹೊಮ್ಮುವಾಗ ಸಹಜವಾಗಿಯೇ ಭಾಷೆ ಸಾಲಂಕಾರಿಕವಾಗುತ್ತದೆ. ಒಂದು ಹೆಚ್ಚು ಒಂದು ಕಡಿಮೆ ಎನ್ನುವ ಅರ್ಥದಲ್ಲಿ ಇಲ್ಲಿ ಗೌಣಪದವನ್ನು ಬಳಸಿಲ್ಲ. ಉದ್ದೇಶ ಪ್ರಯೋಜನ ಏನೇ ಇರಲಿ, ನೂತನ ಸಾಹಿತ್ಯಯುಗಕ್ಕೆ ಪ್ರೇರಕಶಕ್ತಿಯಾದ, ಎಂಟು ಶತಮಾನಗಳ ನಂತರವೂ ಮಾಸದ ಪ್ರಭಾವಳಿಯುಳ್ಳ ವಚನಸಾಹಿತ್ಯ ಕನ್ನಡ ಸಾಹಿತ್ಯ ಸರಸ್ವತಿಯ ಕಿರೀಟದ ಪ್ರಜ್ವಲ ರತ್ನವೆಂದೇ ಹೇಳಬೇಕಾಗಿದೆ.
ಸಂದರ್ಶಕ: ಆಚಾರ ಪಟ್ಟ ಪಡೆದಿರುವ ಅನೇಕ ಗುರುಗಳಿಗೆ ಸಾಮಾಜಿಕ ಪ್ರಜ್ಞೆಯೇ ಇರುವುದಿಲ್ಲ. ಆದರೆ ಬಸವಣ್ಣನವರ ರೀತಿಯೇ ಬೇರೆ. ಅವರಲ್ಲಿ ಆ ಪ್ರಜ್ಞೆ ದಟ್ಟವಾಗಿತ್ತೆಂದು ಹೇಳಬಹುದೆ?
ಕುವೆಂಪು: ಸಂದೇಹವೇಕೆ? ಬಸವೇಶ್ವರರಂತೆ ಸಾಮಾಜಿಕ ಪ್ರಜ್ಞೆ ಇದ್ದ ಆಚಾರರು ಈಚೀಚಿನ ಸ್ವಾಮಿವಿವೇಕಾನಂದ, ಗಾಂಧೀಜಿಯಂಥವರನ್ನು ಬಿಟ್ಟರೆ-ಪ್ರಾಚೀನರಲ್ಲಿ ಒಬ್ಬರೂ ಇಲ್ಲವೆಂದೇ ಹೇಳಬಹುದು. ಈ ಕ್ಷೇತ್ರದಲ್ಲಿ ಅವರು ಏರಿದ ಮಟ್ಟಕ್ಕೆ ಇಂದಿನವರು ಸಹ ಯಾರೂ ಏರಿಲ್ಲ.
ಸಂದರ್ಶಕ: ಗಾಂಧೀಜಿ, ವಿವೇಕಾನಂದ…
ಕುವೆಂಪು: ಆ ಕಾಲದ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯೊಡನೆ ‘ಇಂದಿನದನ್ನು’ ಹೋಲಿಸಿದರೆ ಅವರ ಮಹತ್ವ ವ್ಯಕ್ತವಾಗುತ್ತದೆ; ಸ್ವಾಮಿ ವಿವೇಕಾನಂದರು ಜನ್ಮಧಾರಣೆ ಮಾಡುವ ಹೊತ್ತಿಗೆ ಮೊಗಲ್ ಚಕ್ರವರ್ತಿಗಳ ಕಾಲ ಮುಗಿದು, ಆಂಗ್ಲೆಯರ ಆಡಳಿತ ಪ್ರಾರಂಭವಾಗಿತ್ತು. ಆಗ ಕಲ್ಕತ್ತೆ ಅವರ ಸಕಲಕ್ರಿಯಾ ಚಟುವಟಿಕೆಗಳ ಕೇಂದ್ರಸ್ಥಾನವಾಗಿತ್ತು. ರೈಲು ಕಾರ್ಖಾನೆಗಳು ಜನಸಂಪರ್ಕವನ್ನು ತೀವ್ರಗೊಳಿಸಿದ್ದವು; ಭಿನ್ನ ಭಿನ್ನ ಜಾತಿಯವರು, ತಾವಾಗಿಯೇ ಒಂದು ಕಡೆ ಸೇರುವ ಅವಕಾಶವೊದಗಿತ್ತು. ಸಂಪ್ರದಾಯಸ್ಥರು ಸಹ ಆಂಗ್ಲ ಅಧಿಕಾರಿಗಳ ಕೈಕೆಳಗೆ ನೌಕರಿ ಮಾಡಬೇಕಿತ್ತು. ಯೂರೋಪೀಯ ಅಧಿಕಾರಿಗಳು ಸಂಸ್ಕೃತಾಧ್ಯಯನದ ಮೂಲಕ, ಅದರ ಮತ್ತು ಅದರ ಸಂತಾನವೆನ್ನಬಹುದಾದ ಅನೇಕ ಸಂಪ್ರದಾಯಗಳ ಮಡಿವಂತಿಕೆಯ ಮೇಲೆ ದಾಳಿ ನಡೆಸಿದ್ದರು. ಅವರು ಶೂದ್ರಾತಿ ಶೂದ್ರರಿಗೂ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿದ್ದರು. ಆಂಗ್ಲ ಸಾಹಿತ್ಯದಲ್ಲಿ ಕೃತವಿದ್ಯರಾಗಿದ್ದ ಬುದ್ಧಿವಂತರು ಜಾತೀಯತೆ ಮತೀಯತೆಗಳ ಬಗ್ಗೆ ನಿರ್ಲಕ್ಷ್ಯದಿಂದಿದ್ದರು. ಸರ್ಕಾರ ಅನೇಕ ಕಾನೂನುಗಳ ಮೂಲಕ ಸಾಮಾಜಿಕ ನ್ಯೂನತೆಗಳನ್ನು ಸರಿಪಡಿಸಲು ಹವಣಿಸುತ್ತಿತ್ತು. ಧಾರ್ಮಿಕ ಮತ್ತು ಸಾಮಾಜಿಕ ಲೋಪದೋಷಗಳನ್ನು ತೊಡೆಯುವ ಸಲುವಾಗಿಯೇ ‘ಆತ್ಮೀಯ ಸಮಾಜ’ ‘ಬ್ರಹ್ಮ ಸಮಾಜ’ಗಳು ಹುಟ್ಟಿಕೊಂಡವು. ಅವುಗಳ ಹುಟ್ಟಿಗೆ ಕ್ರಿಶ್ಚಿಯನ್ ಧರ್ಮದ ಪ್ರಸಾರವೂ ಪರೋಕ್ಷ ಕಾರಣವಾಗಿತ್ತು. ಶ್ರೀರಾಮಕೃಷ್ಣ ಪರಮಹಂಸರಂಥ ಸರ್ವಧರ್ಮ ಸಮನ್ವಯಾಚಾರರ ಪ್ರಭಾವದಿಂದಾಗಿ ಜಾತಿಮತಗಳು ಅರ್ಥಹೀನವಾಗಿ ತೋರುತ್ತಿದ್ದುವು. ಸ್ವಾಮಿ ವಿವೇಕಾನಂದರು ಹೋದೆಡೆಯಲ್ಲೆಲ್ಲ ಜಾತಿಮತಗಳ ಹಾನಿಕಾರಕವಾದ ಸಂಗತಿಗಳನ್ನು ಖಂಡ ತುಂಡವಾಗಿ ಖಂಡಿಸಿ, ನಾಡಿನಲ್ಲಿ ನವಚೈತನ್ಯದ ಅಲೆಯನ್ನು ಎಬ್ಬಿಸಿದರು. ಪಾಶ್ಚಾತ್ಯ ಸಂಸ್ಕೃತಿಯ ಸಂಪರ್ಕ ಹಾಗೂ ಸ್ವಾತಂತ್ರ್ಯ ಸಮರದ ಫಲವಾಗಿ ಮೂಡಿದ ಆತ್ಮಪ್ರಜ್ಞೆ ಸ್ವಾಭಿಮಾನಗಳಿಂದಾಗಿ ಶೂದ್ರತಿಶೂದ್ರರೂ ತಮ್ಮ ಹಕ್ಕುಗಳನ್ನು ಸಂಪಾದಿಸಿಕೊಳ್ಳಲು ಹಾತೊರೆಯುತ್ತಿದ್ದರು. ಈ ಎಲ್ಲ ಕಾರಣಗಳಿಂದ ಪ್ರಾಚೀನ ಅರ್ಥಹೀನ ಸಂಪ್ರದಾಯಗಳು ಗೋರಿಯತ್ತ ಸಾಗಿದ್ದವು. ಇಂಥ ಪರಿಸ್ಥಿತಿಯಲ್ಲಿ ಗಾಂಧೀಜಿಯ ಸಮಾಜ ಸುಧಾರಣಾ ಕಾರ್ಯ ತುಂಬ ಪ್ರಯಾಸಕರವಾಗಿರಲಿಲ್ಲ. ಜತೆಗೆ ಸ್ವಾತಂತ್ರ್ಯ ಸಂಪಾದನೆಯೇ ಅವರ ಮುಖ್ಯ ಗುರಿಯಾಗಿತ್ತು. ಉಳಿದ ಸಾಮಾಜಿಕ ರಚನಾತ್ಮಕ ಚಟುವಟಿಕೆಗಳು ಸ್ವಾತಂತ್ರ್ಯ ಹೋರಾಟಕ್ಕೆ ಅನುವಾಗಿದ್ದುವೇ ಹೊರತು ಅವೇ ಪ್ರಮುಖವಾಗಿರಲಿಲ್ಲ.
ಬಸವಣ್ಣನವರ ಕಾಲದ ಸಮಸ್ಯೆಗಳೇ ಬೇರೆ; ಬೇರೆ ಮಾತ್ರವಲ್ಲ, ಅತ್ಯಂತ ಗಂಭೀರ ಭೀಕರವಾಗಿದ್ದುವು. ನಾನಾ ಜಾತಿ ಮತಗಳ ತಿಕ್ಕಾಟದಿಂದಾಗಿ, ಚಕ್ರವರ್ತಿ ಸಾಮಂತರ ನಿರಂತರ ಕಲಹಗಳಿಂದಾಗಿ ನಾಡು ಮಾತ್ರವಲ್ಲ, ಜನತೆಯ ಮನಸ್ಸು ಸಹ ಛಿದ್ರ ವಿಚ್ಛಿದ್ರವಾಗಿತ್ತು. ಬಹುದೇವತೋಪಾಸನೆ, ಭಿನ್ನ ವಿಭಿನ್ನ ಸಂಪ್ರದಾಯ ಮತ್ತು ಉತ್ತಮಾಧಮ ಭೇದಗಳಿಂದಾಗಿ ಸಮಾಜದಲ್ಲಿ ಐಕ್ಯತೆ, ಭದ್ರತೆಗಳು ಉಳಿದಿರಲಿಲ್ಲ. ಧಾರ್ಮಿಕ ಸಾಮಾಜಿಕ ಪತನ ರಾಜಕೀಯ ಕ್ಷೋಭೆಗೆ ಕಾರಣವಾಗಿತ್ತು. ಧಾರ್ಮಿಕ ಸಾಮಾಜಿಕ ಕ್ಷೇತ್ರಗಳ ಹೊಲಸನ್ನು ಶುದ್ದಿಗೊಳಿಸಿದ್ದಾದರೆ ರಾಜಕೀಯ ಕ್ಷೋಭೆಯನ್ನು ತಡೆಗಟ್ಟಬಹುದೆಂಬುದು ಬಸವಣ್ಣನವರ ನಿಲುವು. ಅದಕ್ಕೆ ರೂಪಕೊಡುವ ಸಲುವಾಗಿ ಅವರು ಹೊಸ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾರೆ; ಅವುಗಳನ್ನು ಕಾರ್ಯಗತಗೊಳಿಸುತ್ತಾರೆ.
ಸಂದರ್ಶಕ: ಅಂಧಶ್ರದ್ದೆಯನ್ನು ಹೋಗಲಾಡಿಸುವಲ್ಲಿ, ಸನಾತನ ಧರ್ಮಕ್ಕಂಟಿಕೊಂಡು ಬಂದಿದ್ದ ಕಿಲ್ಪಿಷವನ್ನು ತೊಳೆಯುವಲ್ಲಿ ಅವರು ಹದಿನಾರನೆಯ ಶತಮಾನದ ಮಾರ್ಟಿನ್ ಲೂಥರ್‌ನನ್ನು ಸಹ ಮೀರಿಸುತ್ತಾರಲ್ಲವೆ?
ಕುವೆಂಪು: ನಿಸ್ಸಂದೇಹವಾಗಿ. ವರ್ಣಸಂಕರ ಮಹಾಪರಾಧವೆಂದು ಗಣನೆಗೊಂಡಿದ್ದ ಕಾಲವದು. ವರ್ಣವ್ಯವಸ್ಥೆಯನ್ನು ಸುವ್ಯವಸ್ಥೆಯಿಂದ ಕಾಪಾಡಬೇಕಾದದ್ದು ಆಗಿನ ಕಾಲದ ರಾಜರ ಆದ್ಯ ಕರ್ತವ್ಯವಾಗಿತ್ತು. ಮನುಧರ್ಮಶಾಸ್ತ್ರದ ಬೋಧೆಯನ್ನು ಶಾಸನವೆಂದೇ ಪರಿಗ್ರಹಿಸಿ ಅವರು ಆಚರಣೆಯಲ್ಲಿ ತರಬೇಕಾಗಿತ್ತು. ಒಬ್ಬ ರಾಜನ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದುಕೊಂಡು ವೈದಿಕಮತಕ್ಕೆ ವಿರುದ್ಧವಾಗಿ ಸೆಟೆದೆದ್ದದ್ದು ಆಗಿನ ಕಾಲಕ್ಕೆ ಸಾಮಾನ್ಯ ಸಂಗತಿಯಲ್ಲ. ಪುರೋಹಿತರ ಮತ್ತು ಪವಿತ್ರ ಗ್ರಂಥಗಳ ನಿಂದೆ ಪರಮಾಪರಾಧವಾಗಿದ್ದ ಕಾಲದಲ್ಲಿಯೇ ಅವರು-
ವೇದಕ್ಕೆ ಒರೆಯಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ:
ತರ್ಕದ ಬೆನ್ನ ಬಾರನೆತ್ತುವೆ.
ಆಗಮದ ಮೂಗ ಕೊಯ್ದುವೆ, ನೋಡಯ್ಯ,
ಮಹಾದಾನಿ, ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ.
ಎಂದು ಘೋಷಿಸುತ್ತಾರೆ. ‘ವ್ಯಾಸ ಬೋಯಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ’ ಎಂದು ಸಾರುತ್ತಾರೆ; ವರ್ಣವ್ಯವಸ್ಥೆಗೆ ಕುಠಾರಪ್ರಾಯರಾಗುತ್ತಾರೆ.
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯ;
ರಾಶಿಕೂಟ ಗಣಸಂಬಂಧವುಂಟೆಂದು ಹೇಳಿರಯ್ಯ;
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯ;
ನಾಳಿನದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ.
ಎಂದು ಜ್ಯೋತಿಷ್ಯ ಪಂಚಾಂಗಗಳಲ್ಲಿದ್ದ ಜನರ ಅಂಧಶ್ರದ್ಧೆಯನ್ನು ನಿವಾರಿಸುತ್ತಾರೆ.
ಹಾವಡಿಗನು ಮೂಕೊರತಿಯು:
ತನ್ನ ಕೈಯಲ್ಲಿ ಹಾವು,
ಮಗನ ಮದುವೆಗೆ ಶಕುನವ ನೋಡಹೋಹಾಗ
ಇದಿರಲೊಬ್ಬ ಮೂಕೊರತಿಯ ಹಾವಡಿಗನ ಕಂಡು,
ಶಕುನ ಹೊಲ್ಲೆಂಬ ಚದುರನ ನೋಡಾ…
ಎಂದು ಮೂಢ ಸಂಪ್ರದಾಯಗಳನ್ನು ನಿರ್ದಾಕ್ಷಿಣ್ಯವಾಗಿ ಹಳಿಯುತ್ತಾರೆ. ಪ್ರಯೋಗ ಪರೀಕ್ಷೆಗಳಿಗೊಳಗಾಗದ ಯಾವ ತತ್ತ್ವವನ್ನೂ ಅವರು ನಂಬುವುದಿಲ್ಲ.
ಸಂದರ್ಶಕ: ಆಧುನಿಕ ಶಿಕ್ಷಣವನ್ನು ಪಡೆದ ವಿಜ್ಞಾನಿಗಳೂ ಅವರಂತೆ ನಿರಂಕುಶಮತಿಗಳೆಂದು ವೈಚಾರಿಕ ಬುದ್ಧಿಯವರೆಂದು ಹೇಳುವಂತಿಲ್ಲವಷ್ಟೆ?
ಕುವೆಂಪು: ವಿಜ್ಞಾನದ ಪ್ರಾಧ್ಯಾಪಕರು ಸಭೆ ಸಮಾರಂಭ ತರಗತಿಗಳಿಗೆ, ಆಯುಷ್ಕರ್ಮ ಶಾಲೆಗೆ ಹೋಗುವ ಮುನ್ನ ರಾಶಿ ತಿಥಿ ನಕ್ಷತ್ರಗಳನ್ನು ನೋಡುತ್ತಾರೆ. ಆದ್ದರಿಂದಲೇ ನಮ್ಮ ದೇಶ ಅಜ್ಞಾನ ದಾರಿದ್ರಾದಿ ಅನಿಷ್ಟಗಳಿಂದ ಪಾರಾಗಿಲ್ಲ. ಬಸವಣ್ಣನವರು ಭಕ್ತಿ ಭಂಡಾರಿಯಾಗಿ, ಆಧ್ಯಾತ್ಮ ಸಿದ್ದಿಯನ್ನು ಪಡೆದು, ಪರಮಾತ್ಮನ ಸರ್ವಾಂತರಾಮಿತ್ವದಲ್ಲಿ ವಿಶ್ವಾಸ ಹೊಂದಿದ್ದುದರಿಂದ ಅವರು ರಾಶಿಕೂಟ ಗಣಕೂಟಗಳನ್ನು ನೋಡುತ್ತಿರಲಿಲ್ಲ. ಇಂಥ ಗೊಡ್ಡು ನಂಬಿಕೆಗಳಲ್ಲಿ ವಿಶ್ವಾಸವುಳ್ಳವನು ಮೂರ್ಖನಾಗಿರಬೇಕು ಅಥವಾ ಶೋಷಕ ಪ್ರವೃತ್ತಿಯ ಕಪಟಿಯಾಗಿರಬೇಕು. ದೇವರಲ್ಲಿ ಅಗಾಧವಾದ ಶ್ರದ್ಧೆಯುಳ್ಳ ಆಸ್ತಿಕ ಇವುಗಳಿಂದ ಸಂಪೂರ್ಣ ಮುಕ್ತನಾಗಿರುತ್ತಾನೆ.
ಸಂದರ್ಶಕ: ಜಾತ್ಯತೀತ ಸಮಾಜ ನಿರ್ಮಾಣ ಕಾರ್ಯದಲ್ಲಿ ಅವರಷ್ಟು ದೂರ ಮುಂದೆ ಹೋದವರು ಈ ನಾಡಿನಲ್ಲಿ ವಿರಳರೆಂದೇ ಹೇಳಬಹುದಲ್ಲವೆ?
ಕುವೆಂಪು: ನಿಜ. ಶ್ರೀ ರಾಮಕೃಷ್ಣಪರಮಹಂಸರು, ಸ್ವಾಮಿ ವಿವೇಕಾನಂದರು, ಗಾಂಧೀಜಿಯವರು ಜಾತ್ಯತೀತರಾಗಿದ್ದರು, ಜಾತಿ ನಿರ್ಮೂಲನವಾಗಬೇಕೆಂದು ಸಾರಿದರು; ನುಡಿದಂತೆ ನಡೆದರು. ವಿವೇಕಾನಂದರಂತು ಈ ಬಗ್ಗೆ ಕಠೋರವಾಗಿಯೇ ನುಡಿದು, ಉತ್ತಮ ವರ್ಗದವರ ನಿಂದೆಗೆ ಗುರಿಯಾದದ್ದೂ ಉಂಟು. ಆದರೆ ಬಸವಣ್ಣನವರ ಹಾಗೆ ಜಾತೀಯತೆಯ ಮೇಲು ಕೀಳುಗಳ ಬಗ್ಗೆ ಕುದಿದವರು, ನೊಂದವರು, ಬೆಂದವರು ಕಂಬನಿಗರೆದವರು ಮತ್ತೊಬ್ಬರಿಲ್ಲ. ‘ಅಪ್ಪನು ಮಾದಾರ ಚೆನ್ನಯ್ಯ: ಬೊಪ್ಪನು ನಮ್ಮ ಡೋಹರ ಕಕ್ಕಯ್ಯ: ಚಿಕ್ಕಯ್ಯ ನೆಮ್ಮಯ್ಯ: ಗೋತ್ರ ಮಾದಾರ ಚೆನ್ನಯ್ಯ, ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯ’ ಎಂದು ಬಗೆ ಬಗೆಯಾಗಿ ಹಲುಬುತ್ತಾರೆ. ಅಸ್ಪೃಶ್ಯತೆಯ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ನಾಯಕರು, ವೇದೋಪನಿಷತ್ತುಗಳಿಂದ ಶ್ಲೋಕಗಳನ್ನುದ್ಧರಿಸಿ ವರ್ಣಭೇದ ಅಸ್ಪೃಶ್ಯತೆಗಳಿಗಲ್ಲಿ ಸ್ಥಾನವಿಲ್ಲವೆಂದು ಹೊಸ ಹೊಸ ಸಿದ್ಧಾಂತಗಳನ್ನು ಪ್ರತಿವಾದಿಸುವ ತತ್ತ್ವಶಾಸ್ತ್ರಜ್ಞರು, ಹರಿಜನರ ಕೇರಿಗೆ ಹೋಗಿ, ಭಾಷಣ ಮಾಡಿ, ಅವರನ್ನು ಮುಟ್ಟಿಸಿಕೊಳ್ಳದಿದ್ದರೂ ಕೂಡಲೇ ಮಠಕ್ಕೆ ಹೋಗಿ ಸ್ನಾನ ಮಾಡುವ ಆಚಾರರು ನಮ್ಮಲ್ಲಿ ಯಥೇಚ್ಚವಾಗಿದ್ದಾರೆ. ಇವರೆಲ್ಲರೂ ಆತ್ಮವಂಚಕರು, ದೈವದ್ರೋಹಿಗಳು, ದೇಶಘಾತಕರು. ಬಸವಣ್ಣನವರು ಹೊಲೆಯ ಮಾದಿಗರಿಗೆ ಲಿಂಗದೀಕ್ಷೆ ಕೊಟ್ಟು, ತನ್ನವರೆಂದು ತಬ್ಬಿಕೊಂಡರು. ಸಮಾನ ಸ್ಥಾನ ನೀಡಿದರು. ಅವರ ಮನೆಗೆ ಹೋಗಿ ಅವರು ಕೊಟ್ಟ ಅಂಬಲಿಯನ್ನು ಪ್ರಸಾದವೆಂದು ಸ್ವೀಕರಿಸಿದರು; ಸಹ ಪಂಕ್ತಿಭೋಜನದಿಂದಲೇ ತೃಪ್ತರಾಗದೆ ಬ್ರಾಹ್ಮಣ ವಧುವಿಗೂ ಹರಿಜನ ವರನಿಗೂ ಮದುವೆ ಮಾಡಿಸಿ ಕೃತಕೃತ್ಯರಾದರು.
ಸಂದರ್ಶಕ: ಗಾಂಧೀಜಿ ಸಹ ಇಷ್ಟು ದೂರ ಹೋಗಲಿಲ್ಲವಲ್ಲವೆ?
ಕುವೆಂಪು: ಹೋಲಿಕೆ ಅನಗತ್ಯ. ಈ ಮೊದಲೇ ಹೇಳಿದಂತೆ ಗಾಂಧೀಜಿಯ ಮೊದಲ ಗುರಿ ಸ್ವಾತಂತ್ರ್ಯ ಸಂಪಾದನೆ. ತಾವು ಹುಟ್ಟಿದ ಪರಿಸರ ಕಾರಣವಾಗಿಯೋ ಏನೋ ಅಥವಾ, ರಾಜಕೀಯ ಕಾರಣವೋ, ಅವರು ವರ್ಣಾಶ್ರಮ ಧರ್ಮದ ಪರವಾಗಿದ್ದರು. ಬಸವಣ್ಣನವರು ತದ್ವಿರುದ್ಧ, ಅವರಿಗೆ ರಾಜರು ವಿರುದ್ಧ. ಶಾಸನದ ಬೆಂಬಲವೂ ಇಲ್ಲ. ಅಧಿಕಾರ ವಿರೋಧಿಗಳ ಕೈಯಲ್ಲಿ. ದುರ್ಬಲ ವರ್ಗಕ್ಕೆ ಬಾಯಿಲ್ಲ. ಇಂಥ ಅಪಾಯಕಾರೀ ಅಸಹಾಯಕ ಪರಿಸ್ಥಿತಿಯಲ್ಲಿ, ಅವರು ಕೈಗೊಂಡ ಕಾರ್ಯಗಳು ರಾಜದ್ರೋಹಕರವಾದುವೆಂಬ ಅಪವಾದಕ್ಕೆ ಗುರಿಯಾಗಬಹುದಾಗಿದ್ದ ಸಂದರ್ಭದಲ್ಲಿ, ಅವರು ಸಾಧಿಸಿದ ಸಿದ್ಧಿ ಪವಾಡ ಸದೃಶವಾಗಿದ್ದುದರಲ್ಲಿ ಸಂದೇಹವಿಲ್ಲ.
ಸಂದರ್ಶಕ: ಸಮಾಜದಲ್ಲಿದ್ದ ಮೇಲುಕೀಳುಗಳಿಗೆ ವೃತ್ತಿಭೇದ ಮೂಲವಾಗಿತ್ತೆಂದು ಹೇಳಬಹುದೆ?
ಕುವೆಂಪು: ವೃತ್ತಿಭೇದವೂ ಕೃತಕವಾದದ್ದೇ. ಬೆವರು ಸುರಿಸದೆ, ಅಮೃತಾನ್ನವನ್ನುಂಡು, ಸುಪ್ಪತ್ತಿಗೆಯಲ್ಲಿ ಹೊರಳಾಡುವ ಶೋಷಕ ಬುದ್ಧಿಯ ಬುದ್ದಿಜೀವಿಗಳು ಕಲ್ಪಿಸಿಕೊಂಡ ಉಪಾಯಗಳೇ ಈ ಮೇಲುಕೀಳುಗಳಿಗೆ ಮೂಲವಾಗುತ್ತವೆ. ಈ ವೃತ್ತಿಭೇದ ಸಮಾಜದ ಪ್ರಗತಿಗೆ, ಆರ್ಥಿಕ ಅಭ್ಯುದಯಕ್ಕೆ, ಭಾವೈಕ್ಯಕ್ಕೆ ಮಾರಕವಾಯಿತು; ಅದು ಧರ್ಮಗ್ಲಾನಿಗೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ, ಸೃಜನಶೀಲ ಪ್ರತಿಭೆಗೆ ಕಂಟಕವಾಯಿತು. ವೃತ್ತಿಭೇದವೇ ಜಾತೀಯತೆಗೂ ಕಾರಣವೆಂಬುದನ್ನವರು ಬಹು ಬೇಗನೆ ಮನಗಂಡರು. ಆದ್ದರಿಂದ ಕಾಯಕಕ್ಕೆ ಅಪಾರ ಪ್ರಾಶಸ್ತ್ಯ ನೀಡಿದರು. ಅದು ಧರ್ಮ ಕರ್ಮಗಳಿಗೆ ಮಾತ್ರವಲ್ಲ, ಮನುಷ್ಯನ ಸಕಲ ಜೀವನ ವ್ಯಾಪಾರಗಳಿಗೆ ಹಾಗೂ ಚತುರ್ವಿಧ ಪುರುಷಾರ್ಥಗಳಿಗೆ ಹಿನ್ನೆಲೆ ಮುನ್ನೆಲೆಯೆಂದು, ಆಧ್ಯಾತ್ಮ ಸಿದ್ದಿಗೆ ಸತ್ಪಾಧನವೆಂದು, ಆರ್ಥಿಕೋನ್ನತ್ತಿಗೆ ಏಕೈಕ ಮಾರ್ಗವೆಂದು, ಸಮಾಜದ ಸಕಲ ರೋಗರುಜಿನಗಳಿಗೆ ರಾಮಾಸ್ತ್ರವೆಂದು ಅವರು ಜನರಿಗೆ ತೋರಿಸಿಕೊಟ್ಟರು. ‘ಕಾಯಕವೇ ಕೈಲಾಸವೆಂದು’ ಸಾರಿದರು. ‘ದೇವಸಹಿತ ಭಕ್ತ ಮನೆಗೆ ಬಂದರೆ, ಕಾಯಕವಾವುದೆಂದು ಬೆಸಗೊಂಡಡೆ ನಿಮ್ಮಾಣೆ’: ‘ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವ ನೋದಿ ಹಾರುವನಾದ’ ಎಂದು ನುಡಿದು, ವೃತ್ತಿ ಯಾವುದಾದರೂ ಮೋಕ್ಷಕ್ಕೆ ದಾರಿಯಾಗುತ್ತದೆಂದು ಸ್ಪಷ್ಟಪಡಿಸಿದರು. ‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ’ ಶರಣರು ಕುಲಜರಲ್ಲದೆ, ಶುಷ್ಕ ಪಂಡಿತರಲ್ಲ, ‘ನುಡಿಜಾರ-ನಡೆಜಾರರಲ್ಲವೆಂದು’ ಕುಲ ಕುಲವೆಂದು ರೋದಿಸುವ ಜನರಿಗೆ ಆಚರಣೆಯ ಮೂಲಕ ಮನವರಿಕೆ ಮಾಡಿಕೊಟ್ಟರು. ‘ನಾನು ಆರಂಬವ ಮಾಡುವೆನಯ್ಯ ಗುರುಪೂಜೆಗೆಂದು, ನಾನು ಬೆವಹಾರವ ಮಾಡುವೆನಯ್ಯ ಲಿಂಗಾರ್ಚನೆ’ಗೆಂದು ನುಡಿದು ಅವರು ಸಮಾಜದ ಮುಂದಿಟ್ಟ ಆದರ್ಶಕ್ಕೆ ತಾವೇ ನಿದರ್ಶನವಾಗುತ್ತಾರೆ. ಕಾಯಕದ ಮೂಲಕ ಸಮಾಜದ ಕೊನೆಯ ವ್ಯಕ್ತಿಗೂ ಸ್ವಾವಲಂಬನ ಶಕ್ತಿಯನ್ನೂ, ಆತ್ಮಗೌರವದ ಮಹಿಮೆಯನ್ನೂ ತೋರಿಸಿಕೊಟ್ಟರು.
ಸಂದರ್ಶಕ: ಧಾರ್ಮಿಕ ಕ್ಷೇತ್ರದಲ್ಲಿ ಅವರು ಮಾಡಿದ ಬದಲಾವಣೆಗಳೇನು?
ಕುವೆಂಪು: ಬಹುದೇವತೋಪಾಸನೆ ಮತ್ತು ಕ್ಷುದ್ರ ದೇವತಾಪೂಜೆ ಸಾಮಾಜಿಕವಾಗಿ ಐಕ್ಯಭಂಗಕಾರಿಯೆಂದು, ಆಧ್ಯಾತ್ಮಿಕವಾಗಿ ತೇಜೋಹಾನಿಕಾರಿಯೆಂದು ತಿಳಿದ ಅವರು ಏಕದೇವೋಪಾಸನೆಯ ಕಡೆಗೆ ಜನರ ಗಮನ ಸೆಳೆದರು. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಾವರಲಿಂಗ ಪೂಜೆಯನ್ನು ನಿಷೇಧಿಸಿ, ಶೋಷಕ ಸಾಧನವಾದ ಪೌರೋಹಿತ್ಯದ ಸೊಂಟ ಮುರಿದದ್ದು, ಅವರು ಇಂಡಿಯಾಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ತೋರಿಸಿದ ಕ್ರಾಂತಿಮಾರ್ಗ. ಎಲ್ಲೆಲ್ಲಿ ಪೌರೋಹಿತ್ಯ ಜನತೆಯ ಅಜ್ಞಾನ ದಾರಿದ್ರಗಳನ್ನು ಬಂಡವಾಳ ಮಾಡಿಕೊಂಡು, ಮೂಢ ಸಂಪ್ರದಾಯಗಳನ್ನು ಆಶ್ರಯಿಸಿಕೊಂಡು ವಿಜೃಂಭಿಸುತ್ತಿದೆಯೋ, ಅಲ್ಲಲ್ಲಿಯ ಜನಕ್ಕೆ ಅಲ್ಲಲ್ಲಿಯ ಮತಸುಧಾರಣಾಕಾಂಕ್ಷಿಗಳಿಗೆ ಬಸವಣ್ಣನವರ ಈ ಆದರ್ಶ ದಾರಿದೀಪ ವಾಗುತ್ತದೆ.
ಸಂದರ್ಶಕ: ಬಸವಣ್ಣ ಸ್ತ್ರೀಯರಿಗೆ ಕೊಟ್ಟ ಪ್ರಾಶಸ್ತ್ಯವನ್ನು ಜಗತ್ತಿನ ಯಾವ ಸಮಾಜ ಸುಧಾರಕನೂ, ಯಾವ ಆಚಾರನೂ, ಯಾವ ಕ್ರಾಂತಿಕಾರನೂ ಈತನಕ ನೀಡಿಲ್ಲವೆನ್ನಬಹುದೆ?
ಕುವೆಂಪು: ಆ ಬಗ್ಗೆ ಅನುಮಾನವೇ ಇಲ್ಲ. ತಾತ್ವಿಕವಾಗಿ ಕಲ್ಲು ಗೊಂಬೆಗಳ ರೂಪದಲ್ಲಿ ಸ್ತ್ರೀಯರನ್ನು ಜಗತ್ತಿನ ಎಲ್ಲ ಕಡೆಯೂ ಪೂಜಿಸುತ್ತಾರಷ್ಟೆ, ರಾಜಕೀಯ ಒತ್ತಟ್ಟಿಗಿರಲಿ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪುರುಷನಂತೆ ಮಹಿಳೆಯೂ ಸ್ವಾತಂತ್ರ್ಯ ಸಮಾನತೆಯಿಂದ ವ್ಯವಹರಿಸಬಹುದೆಂಬುದನ್ನು ನಿದರ್ಶನದ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದಕರಲ್ಲಿ ಅವರಿಗೆ ಅಗ್ರಪಟ್ಟಿ ಸಲ್ಲಬೇಕು. ಅವರ ಯಾವ ಕಾರ್ಯವನ್ನು ಗಮನಿಸಿದರೂ ಮಾನವೀಯತೆ ಎದ್ದು ಕಾಣುತ್ತದೆ. ಸ್ತ್ರೀಪುರುಷ ಸಮಾನತೆಯ ಸಂಕೇತವಾಗಿ ಅವರಿಗೂ ಲಿಂಗಧಾರಣೆ ಮಾಡಿಸಿ, ಅವರೂ ಮೋಕ್ಷಕ್ಕರ್ಹರು ಎಂಬ ನಿಜವನ್ನು ಪ್ರಕಾಶಪಡಿಸಿದರು. ಅನುಭವ ಮಂಟಪದಲ್ಲಿ, ಪುರುಷರೊಡನೆ ಸಮಾನ ಸ್ಥಾನದಲ್ಲಿ ಕುಳಿತು ನಾನಾ ವಿಧವಾದ ಚರ್ಚೆಯಲ್ಲಿ ಭಾಗವಹಿಸಿ, ಅನೇಕ ಸಮಸ್ಯೆಗಳನ್ನು ಬಿಡಿಸಲು ಅವರೇ ಕಾರಣ. ಸಮಾಜದ ಅಂಗಾರ್ಧವನ್ನು ಶಾಶ್ವತವಾದ ಅಜ್ಞಾನಾಂಧಕಾರದಲ್ಲಿಟ್ಟು, ಅವಳನ್ನು ಕೇವಲ ಭೋಗವಸ್ತುವಾಗಿ ಉಪಯೋಗಿಸಿಕೊಳ್ಳುವುದು ಯೋಗ್ಯವಲ್ಲವೆಂದು ಅವರು ನುಡಿದಾಗ ಸಂಪ್ರದಾಯಸ್ಥರು ಮುಖ ಮುರಿದಿರಬೇಕು.
ಸಂದರ್ಶಕ: ಜಗತ್ತಿನ ಅನೇಕ ಮತಾಚಾರರು ಮಾತಿನಲ್ಲಿ ಸ್ವರ್ಗ ನರಕಗಳನ್ನು ತೋರುತ್ತಾರೆ. ವೈರಾಗ್ಯವನ್ನು ಬೋಧಿಸುತ್ತಾರೆ. ಜಗತ್ತು ಮಾಯೆಯೆನ್ನುತ್ತಾರೆ. ಬಸವೇಶ್ವರರು ತೋರಿರುವ ದಾರಿಯೇ ಬೇರೆ. ಅವರು ವಾಸ್ತವತಾವಾದಿಯೆಂದು, ಪ್ರಾಯೋಗಿಕ ತತ್ತ್ವಜ್ಞಾನಿಯೆಂದು ತೋರುತ್ತಾರಲ್ಲವೆ?
ಕುವೆಂಪು: ಲೋಕದ ನಡುವೆ, ಸಂಸಾರದಲ್ಲಿದ್ದುಕೊಂಡೇ ಲಿಂಗಾಂಗ ಸಾಮರಸ್ಯವನ್ನು ಸಾಧಿಸಬಹುದೆಂದು ಅವರು ಹೇಳುತ್ತಾರೆ. ಅವರು ಸಂಸಾರವನ್ನು ತ್ಯಜಿಸಲಿಲ್ಲ; ಸನ್ಯಾಸವನ್ನು ಪುರಸ್ಕರಿಸಲಿಲ್ಲ. ಅವರು ಇಬ್ಬರು ಸ್ತ್ರೀಯರನ್ನು ಮದುವೆಯಾಗಿದ್ದರು. ಇಬ್ಬರೂ ಆಧ್ಯಾತ್ಮ ಸಾಧನೆಯಲ್ಲಿ ನಿರತರಾದವರು. ಅಧ್ಯಾತ್ಮ ಸಾಧನೆಗೆ ಸಂಸಾರ ಅಡಚಣೆಯಾಗದೆಂದು ತೋರಿಸಿಕೊಟ್ಟವರು. ಬಸವೇಶ್ವರರು ಜಗತ್ತು ಮಾಯೆಯೆಂದವರಲ್ಲ. ಈಶ್ವರ ಸರ್ವವ್ಯಾಪಿಯೆನ್ನುವುದಾದರೆ, ಜಗತ್ತು ಹೇಗೆ ಮಾಯೆಯಾಗುತ್ತದೆ? ಧರ್ಮದ ಚೌಕಟ್ಟಿನಲ್ಲಿ, ಪರದ್ರವ್ಯ ಪರಸತಿಗಾಶಿಸದೆ, ಲಿಂಗಪೂಜೆಯನ್ನು ಬಿಡದೆ ಸದಾಚಾರಕ್ಕೆ ಶರಣಾಗಿ ಕಾಯಕ ಜೀವನವನ್ನು ನಡೆಸಿದ್ದಾದರೆ ಸ್ವರ್ಗ ನರಕಗಳ ಚಿಂತೆ ಬೇಕಿಲ್ಲವೆಂಬುದೇ ಅವರ ಸಂದೇಶದ ಸಾರ. ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿ ಭೋ! ಸತ್ಯವ ನುಡಿವುದೆ ದೇವಲೋಕ; ಮಿಥ್ಯವ ನುಡಿವುದೆ ಮರ್ತ್ಯಲೋಕ: ಆಚಾರವೇ ಸ್ವರ್ಗ, ಅನಾಚಾರವೇ ನರಕ- ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ: ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ: ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ ಕೂಡಲ ಸಂಗಮದೇವಾ. ಬಸವಣ್ಣನವರ ಈ ಸಂದೇಶ ಗ್ರಹಿಕೆಗೆ ಸರಳ, ಆಚರಣೆಗೆ ಸುಲಭ. ಎಂಥ ಸಾಮಾನ್ಯನಿಗೂ ದಕ್ಕುವಂಥ ತತ್ತ್ವವಿದು.
ಸಂದರ್ಶಕ: ಬಸವಣ್ಣನವರ ಉಪದೇಶ ಇಂದಿಗೂ ಪ್ರಸ್ತುತವೆನ್ನಬಹುದೆ?
ಕುವೆಂಪು: ಅಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ. ಅವರ ಉಪದೇಶ ಚಿರಂತನ ಮೌಲ್ಯಗಳಿಂದ ಕೂಡಿದೆ. ನಮ್ಮ ನಾಡಿನ ಅಪರಿಹಾರವಾದ ನಾನಾ ಸಮಸ್ಯೆಗಳಿಗೆ ಅವರ ಸಂದೇಶವೇ ದಿವ್ಯಭೇಷಜ. ಮೊದಲೇ ಅವರ ಸಂದೇಶವನ್ನೊಪ್ಪಿಕೊಂಡು, ಆಚರಣೆಗೆ ತಂದಿದ್ದ ಪಕ್ಷದಲ್ಲಿ ಈ ದೇಶದಲ್ಲಿ ವಿದೇಶೀಯ ಮತಗಳ ಪ್ರಸಾರಕ್ಕೆ ಅವಕಾಶವಿರುತ್ತಿರಲಿಲ್ಲ. ಮುಸ್ಲಿಮರಾಗಲೀ ಕ್ರಿಶ್ಚಿಯನ್ನರಾಗಲೀ ಇರುತ್ತಿರಲಿಲ್ಲ; ರಾಷ್ಟ್ರವನ್ನು ಕಿತ್ತು ತಿನ್ನುತ್ತಿರುವ ಸಾಮಾಜಿಕ ರೋಗರುಜಿನಗಳು ಇರುತ್ತಿರಲಿಲ್ಲ. ನಾಗಾಲ್ಯಾಂಡ್ ಮಿಜೋರಾಮ್‌ಗಳ ಸಮಸ್ಯೆ ತಲೆಯೆತ್ತುತ್ತಿರಲಿಲ್ಲ. ನಾಡಿನ ಅನೈಕ್ಯಕ್ಕೆ ಕಾರಣವಾಗಿರುವ ಜಾತೀಯತೆ ಇರುತ್ತಿರಲಿಲ್ಲ; ನಾನು ಹೇಳುವ ವಿಶ್ವಮಾನವತತ್ವ ಎಂದೋ ರೂಢಿಯಲ್ಲಿ ಬರುತ್ತಿತ್ತು.
ಸಂದರ್ಶಕ: ನಮ್ಮಲ್ಲಿ ಇನ್ನೂ ಹಲವು ಆಚಾರ್ಯರು ಆಗಿ ಹೋಗಿದ್ದಾರೆ. ಅವರಿಗೂ ಇವರಿಗೂ ಇರುವ ಸಾಮ್ಯ ಭೇದಗಳೇನು?
ಕುವೆಂಪು: ಹುಟ್ಟಿನಲ್ಲಿ ಮಾತ್ರ ಸಾಮ್ಯವೇ ಹೊರತು ಉಳಿದ ವಿಷಯಗಳಲ್ಲಿ ಅಂದರೆ ಧೈಯೋದ್ದೇಶಗಳಲ್ಲಿ, ಅವುಗಳನ್ನು ಕಾರ್ಯಗತಗೊಳಿಸಿದ ವಿಧಾನಗಳಲ್ಲಿ, ಮನೋಧರ್ಮದಲ್ಲಿ- ಇವರು ಇತರರಿಂದ ತೀರ ಭಿನ್ನರೆಂದೇ ಹೇಳಬಹುದು. ಇವರು ಬರಿಯ ತಾತ್ವಿಕರಲ್ಲ, ವ್ಯಾಖ್ಯಾನಕಾರರಲ್ಲ, ಸಿದ್ದಾಂತ ಲೋಲುಪರಲ್ಲ. ಅಂತರಂಗಶೋಧನೆ, ಸತ್ಯಾನ್ವೇಷಣೆ, ಸಕಲ ಜೀವಾವಳಿಗೆ ಲೇಸನ್ನು ಸಾಧಿಸುವ ಹಂಬಲ, ಸ್ತ್ರೀಯರನ್ನೊಳಗೊಂಡ ದೀನದಲಿತ ದುರ್ಬಲರ ಉದ್ದಾರ, ಗೊಡ್ಡು ಕಂದಾಚಾರಗಳ ತಿರಸ್ಕಾರ, ಮತಧರ್ಮಗಳು ಸಾಮಾನ್ಯರ ಸ್ವತ್ತಾಗಬೇಕೆನ್ನುವ ಆಕಾಂಕ್ಷೆ, ಜಾತಿವಿನಾಶ, ಅಸ್ಪೃಶ್ಯತಾ ನಿರ್ಮೂಲನಗಳ ಸಂಕಲ್ಪ-ಈ ಒಂದೊಂದು ಉದ್ದೇಶವನ್ನು ನೆನೆದಾಗ ಮೈ ಜುಮ್ಮೆನ್ನುತ್ತದೆ. ಇವರೆಷ್ಟು ಪ್ರಾಚೀನರೋ ಅಷ್ಟೇ ಅರ್ವಾಚೀನರೂ ಅಹುದು ಎನಿಸುತ್ತದೆ. ವಿವೇಕಾನಂದ ಗಾಂಧೀಜಿಯರೆ ನಮ್ಮ ಮುಂದೆ ನಿಂತು ಬೋಧಿಸುತ್ತಿರುವಂತೆ ಭಾಸವಾಗುತ್ತದೆ. ಇವರು ಸಾಮಾನ್ಯ ಜನತೆಯ ನಡುವೆ ಬೆಳೆದು, ಅವರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಸವೆಸಿ, ಹುತಾತ್ಮರಾದವರು. ಕೇವಲ ಕೆಲವರಿಗಾಗಿ, ಕೆಲವರ ಭಾಷೆಯಲ್ಲಿ ಉದಾತ್ತ ತತ್ತ್ವಗಳನ್ನು ಪ್ರಚಾರಮಾಡದೆ, ಸಾಮಾನ್ಯ ಜನರ ಹೃದಯವನ್ನು ಗೆದ್ದುಕೊಳ್ಳುವ ಬಯಕೆಯಿಂದ, ತಾವು ಕಂಡ, ನಡೆಯಲ್ಲಿ ತಂದ, ಎಲ್ಲರಿಗೂ ಎಟುಕುವಂಥ ತತ್ತ್ವಗಳನ್ನು ಜೀವನ ವಿಜ್ಞಾನವನ್ನು ಬುದ್ದನಂತೆ ಸಾಮಾನ್ಯ ಜನರ ಭಾಷೆಯಲ್ಲಿ ವಿವರಿಸುತ್ತಾರೆ. ಇವರು ಆಸೇತು ಹಿಮಾಚಲದ ತನಕ ಪರ್ಯಟನೆ ಮಾಡದೆ, ಮೊದಲು ತನ್ನ ಸುತ್ತಮತ್ತಣ ಜನರು ಬೆಳಕು ಕಾಣಲಿ, ಅನ್ನ ಪಡೆಯಲಿ ಎಂಬ ಹಂಬಲದಿಂದ ಆಧುನಿಕ ಮಾನವತಾವಾದಿಗಳಿಗೂ ಸೋಜಿಗವಾಗುವ ರೀತಿಯಲ್ಲಿ ಕ್ರಾಂತಿಕಾರಕವಾದ ಸುಧಾರಣೆಗಳನ್ನು ಕೈಗೊಳ್ಳುತ್ತಾರೆ. ಗಗನೋನ್ನತವಾಗಿ ಪುಷ್ಪಫಲ ಸಮೃದ್ಧವಾಗಿ ಬೆಳೆದ ಮಹಾವೃಕ್ಷ ಇವರು. ಮರ ಜೇನುಹುಳುಗಳನ್ನರಸಿಕೊಂಡು ಹೋಗುವುದಿಲ್ಲ. ಅಖಂಡ ಇಂಡಿಯಾದಿಂದ ಜನ ಆ ಮರದ ನೆಳಲಿನ ಆಸರೆಗಾಗಿ ತಂಡೋಪತಂಡವಾಗಿ ಬರುತ್ತಾರೆ. ತಮ್ಮ ದೇಶದ ಬಾಳು ಸರಿ ಹೋಗುವ ತನಕ ತಾವು ಅಮೆರಿಕೆಗೆ, ಜಗತ್ತಿನ ಇತರ ದೇಶಗಳಿಗೆ ಹೋಗುವುದಿಲ್ಲವೆಂದು ನುಡಿದ ಗಾಂಧೀಜಿಯ ನೆನಪಾಗುತ್ತದೆ, ಈ ಸಂದರ್ಭದಲ್ಲಿ, ದೇಶ ಭಾಷೆ, ಅರ್ಥಾತ್ ಕನ್ನಡ ಭಾಷೆಯ ಬಗ್ಗೆ ಇವರು ವ್ಯಕ್ತಪಡಿಸಿದ ಆಸಕ್ತಿ ಆಧುನಿಕ ಶಿಕ್ಷಣತಜ್ಞರನ್ನು ಸಹ ನಾಚಿಸುವಂಥದಾಗಿದೆ. ಇವರ ಸಮನ್ವಯ ದೃಷ್ಟಿಯ ಕ್ರಿಯಾಮಯ ಪ್ರಯೋಗಶೀಲ ಜೀವನವೇ ಒಂದು ಮಹತ್ತಾದ ಕಲೆಯಾಗಿದೆ. ಇವರ ಪ್ರತಿಯೊಂದು ಜೀವಕಣದಲ್ಲಿಯೂ ನಡೆನುಡಿಗಳಲ್ಲಿಯೂ ಭಾರತೀಯ ಪ್ರಜ್ಞೆ ಮಾತ್ರವಲ್ಲ, ವಿಶ್ವಪ್ರಜ್ಞೆ ಹೊಳಲುಗೊಡುತ್ತದೆ.
ಸಂದರ್ಶಕ: ಬಸವಣ್ಣನವರನ್ನು ವಿಶ್ವಮಾನವರೆಂದು ಕರೆಯಬಹುದೆ? ಮಾರ್ಕ್ಸರಂತೆ ಅವರೂ ಮಾನವತಾವಾದಿಯಲ್ಲವೆ?
ಕುವೆಂಪು: ಅವರಲ್ಲದೆ, ವಿವೇಕಾನಂದರಂಥವರಲ್ಲದೆ, ಮತ್ತಾರು ವಿಶ್ವಮಾನವರಾದಾರು? ಮಾರ್ಕ್ಸ್ ಮಾನವತಾವಾದಿ ನಿಜ: ಬಸವೇಶ್ವರರು ಮಾನವತಾವಾದಿ ಮಾತ್ರವಲ್ಲ, ಸರ್ವೋದಯವಾದಿ.
ಸಂದರ್ಶಕ: ಬಂಗಾಳದಲ್ಲಿ ಗೌರಾಂಗ, ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀ ಅರವಿಂದೋ ಮೊದಲಾದ ವಿಭೂತಿಪುರುಷರ ಅವತಾರವಾಯಿತಷ್ಟೆ. ಆ ಒಂದು ಪ್ರದೇಶದಲ್ಲಿಯೇ ಅದೆಷ್ಟು ಜನ ಅವತರಿಸಿದರೆಂಬುದನ್ನು ನೆನೆದಾಗ ವಿಸ್ಮಯವಾಗುತ್ತದೆ. ಅದಕ್ಕೆ ಪರಿಸರ ಕಾರಣವೆನ್ನಬಹುದೆ?
ಕುವೆಂಪು: ಪರಿಸರವೂ ಕಾರಣವಿರಬಹುದು. ಭಗವಂತ ಇದ್ದಕ್ಕಿದ್ದಂತೆಯೇ ಜನ್ಮವೆತ್ತಿ, ಅನೇಕ ಭಕ್ತರನ್ನು ಸಿದ್ದಗೊಳಿಸಿ ಧರ್ಮಪ್ರಸಾರಕ್ಕೆ, ಸಮಾಜಸುಧಾರಣೆಗೆ, ನಾಡಿನ ಅಭ್ಯುದಯಕ್ಕೆ ಅಣಿಗೊಳಿಸಬಹುದು. ಹನ್ನೆರಡನೆಯ ಶತಮಾನದ ಬಸವಣ್ಣನವರು ಮತ್ತು ಶಿವಶರಣರೇ ನನ್ನ ಮಾತಿಗೆ ಸಾಕ್ಷಿ. ಅವರು ಯಾರಿಗೂ ಕಡಿಮೆಯಿಲ್ಲ. ವಿಭೂತಿ ಶಕ್ತಿಯ ವ್ಯಕ್ತರೂಪಗಳಲ್ಲಿ ಬಸವಣ್ಣನವರೂ ಒಬ್ಬರು.
ಸಂದರ್ಶಕ: ಅವರ ಕಾರ್ಯಕ್ಷೇತ್ರ ಕರ್ನಾಟಕಕ್ಕೆ ಸೀಮಿತವಾಗದೆ, ಇಡೀ ರಾಷ್ಟ್ರವನ್ನೆಲ್ಲ ವ್ಯಾಪಿಸಿಕೊಳ್ಳಬೇಕಿತ್ತು. ಆಗ ಬಸವಣ್ಣನವರ ಮಹತ್ವ ಲೋಕಕ್ಕೆ ವೇದ್ಯವಾಗುತ್ತಿತ್ತು, ಅಲ್ಲವೆ?
ಕುವೆಂಪು: ಬಸವಣ್ಣನವರು ಪ್ರದರ್ಶನಕ್ಕಾಗಲೀ ಲೋಕವ್ಯಾಪ್ತಿಯಾದ ಕೀರ್ತಿಗಾಗಲೀ ಹಾತೊರೆದವರಲ್ಲ, ಅವರಿಗಿದ್ದದ್ದು ಸಾಮಾನ್ಯ ಜನತೆಯ ಉದ್ಧಾರಾಕಾಂಕ್ಷೆ. ಅವರಿಗಾಗಿ ಅವರ ಮಾತಿನಲ್ಲಿಯೇ, ಬುದ್ಧನಂತೆ ಉಪದೇಶ ಮಾಡಿದರು. ಬುದ್ಧನಿಗೆ ದೊರಕಿದ ಆನಂದನಂಥ, ಅಶೋಕನಂಥ ಶಿಷ್ಯರು ಬಸವಣ್ಣನವರಿಗೆ ಸಿಗಲಿಲ್ಲ. ಆದರೆ ಅವರ ಉಪದೇಶಗಳಲ್ಲಿ ದೇಶಕಾಲಾತೀತವಾದ ಮೌಲ್ಯಗಳಿವೆ, ವಿಶ್ವಪ್ರಜ್ಞೆಯಿದೆಯೆನ್ನುವುದನ್ನು ಮರೆಯಲಾಗದು. ನಮಗೆ ಲಭ್ಯವಾಗಿರುವ ವೈಜ್ಞಾನಿಕ ವೈಚಾರಿಕ ವಿಚಾರಧಾರೆಯ ಸಂಪರ್ಕ ಅವರಿಗಿರಲಿಲ್ಲ. ಆಫ್ರಿಕಾ ಅಮೆರಿಕೆಗಳ ಸಂಗತಿ ಅವರಿಗೆ ಗೊತ್ತಿರಲಿಲ್ಲ. ಆದರೂ ತಮ್ಮ ಸುತ್ತಮುತ್ತಣ ಜನರಲ್ಲಿ ವಿಶ್ವಪ್ರಜ್ಞೆಯನ್ನು ಮೂಡಿಸುವ ಅವರ ಸಾಹಸ ಪ್ರಯತ್ನವೇ ಒಂದು ಪವಾಡವೆನ್ನಬಹುದು.
ಸಂದರ್ಶಕ:ಅವರು ಅನೇಕ ಪವಾಡಗಳನ್ನು ಮೆರೆದರೆನ್ನುತ್ತಾರೆ, ನೀವು ಒಪ್ಪುವಿರಾ?
ಕುವೆಂಪು: ಅವರು ಪವಾಡ ಮೆರೆದರೋ ಇಲ್ಲವೋ ನನಗೆ ಗೊತ್ತಿಲ್ಲ. ಅವರ ಮಹಿಮೆಯನ್ನು ಅರ್ಥಮಾಡಿಕೊಳ್ಳಲು ಅವರೇ ನುಡಿದ ವಚನಗಳಿವೆ. ಪವಾಡಗಳು ಅವರ ಮಹಿಮೆಗೆ ಒಡ್ಡಿದ ಪ್ರತಿರೂಪಗಳೆನ್ನುವುದಾದರೆ ಒಪ್ಪಬಹುದು. ಆದರೆ ಒಮ್ಮೊಮ್ಮೆ ಆ ಪವಾಡಗಳ ಉಲ್ಲೇಖವೇ ಅವರ ಮಹಿಮೆಯ ಪ್ರಕಾಶನಕ್ಕೆ, ಅವರ ಸ್ವಸ್ವರೂಪ ದರ್ಶನಕ್ಕೆ ಅಡಚಣೆಯಾಗಬಹುದು. ಅವರಷ್ಟು ವ್ಯಾಪಕ ರೀತಿಯಲ್ಲಿ ಮಹಾಕ್ರಾಂತಿಗೆ ಕಾರಣಭೂತರಾದ ವ್ಯಕ್ತಿಗಳು ವಿರಳ. ಭರತಖಂಡದಲ್ಲಿಯೇ ಅಂಥ ಕ್ರಾಂತಿ ಆತನಕ ಅಷ್ಟೇ ಏಕೆ, ಇತ್ತೀಚಿನ ತನಕ ನಡೆದಿರಲಿಲ್ಲ. ಸೋದರತೆ ಸಮಾನತೆಗಳನ್ನು ನೆಲೆಗೊಳಿಸಲು ತಮ್ಮ ಶಕ್ತಿ ಸಿದ್ದಿಗಳನ್ನೆಲ್ಲ ನಿವೇದಿಸಿ, ಹುತಾತ್ಮರಾದ ಭರತಖಂಡದ ಪ್ರಪ್ರಥಮ ಯುಗಪುರುಷರವರು. ಅವರ ಪ್ರಖರ ಪ್ರತಿಭೆಯನ್ನು ಸಹಿಸಲಾರದೆ ಸಮಾಜ ಕಣ್ಣುಮುಚ್ಚಿತು. ಅವರ ಹುತಾತ್ಮತೆಯಲ್ಲಿ ಹಿಂದೂ ಧರ್ಮದ ಸೋಲಿದೆ: ಮನೆಗೆ ತಾನಾಗಿ ಬಂದ ಸುವರ್ಣಾವಕಾಶವನ್ನು ನಾಡು ಕಳೆದುಕೊಂಡಿದ್ದರಲ್ಲಿ ಅದರ ವಿಫಲತೆಯಿದೆ.
ಸಂದರ್ಶಕ: ಇಷ್ಟಕ್ಕೆಲ್ಲ ಯಾರು ಕಾರಣ?
ಕುವೆಂಪು: ಕನ್ನಡಿಗರು. ಅದರಲ್ಲಿಯೂ ಅವರ ಅನುಯಾಯಿಗಳು. ಅವರು ಬಸವಣ್ಣನವರ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಿದರು. ಅವರು ಒಂದು ಜಾತಿಗೆ ಮಾತ್ರ ಸೀಮಿತರಾದ ವ್ಯಕ್ತಿಯೆಂಬಂತೆ ಅವರು ನಡೆದುಕೊಂಡರು. ವೈದಿಕ ಧರ್ಮಕ್ಕೆ ವಿರೋಧವಾಗಿ ತಲೆಯೆತ್ತಿದ ಬಸವಣ್ಣನವರ ಧರ್ಮ ಶುಷ್ಕಾಚರಣೆಗಳ ಪ್ರದರ್ಶನದಲ್ಲಿ, ಪುರೋಹಿತ ನೀತಿಯಲ್ಲಿ ಅದಕ್ಕೆ ಪ್ರತಿಸ್ಪರ್ಧಿಯೆಂಬಂತೆ ವಿಜೃಂಭಿಸಿತು. ಗಾಂಧೀಜಿಯ ಕಾಲದಲ್ಲಿ ಬದುಕಿದ್ದವರಿಗೆ, ಅವರ ನಂತರ ಬಂದವರಿಗೆ ತಿಳಿಯುತ್ತದೆ, ಬಸವಣ್ಣನವರ ವ್ಯಕ್ತಿತ್ವ, ಮಹಿಮೆ.
(ಕೃಪೆ: ಕುವೆಂಪು ಅವರ ದೃಷ್ಟಿಯಲ್ಲಿ ಶ್ರೀಬಸವೇಶ್ವರರು: ಸಂ.ದೇಜಗೌ)





Comments 4
ಶಾಂತಿನಾಥ ಬಳ್ಳಾರಿ
Oct 25, 2025ಬಸವಣ್ಣನವರ ಬಗೆಗೇ exclusive ಆಗಿ ಕುವೆಂಪುರವರು interview ಕೊಟ್ಟಿದ್ದಾರೆ!! ಓದಿ, ತುಂಬ ಖುಷಿಯಾಯಿತು.
ಷಣ್ಮುಖಯ್ಯ ಗಿರಿನಗರ
Oct 27, 2025ಬಸವಣ್ಣನವರು ಸರ್ವೋದಯವಾದಿ ಎಂದು ಕುವೆಂಪು ಅವರು ಗುರುತಿಸಿದ್ದು ನಿಜಕ್ಕೂ ಬಹಳ ಸಂತೋಷದ ಸಂಗತಿ. ಜ್ಞಾನಪೀಠ ಪ್ರಶಸ್ತಿ ವಿಜೇತರಲ್ಲಿ ಪ್ರತಿಯೊಬ್ಬರೂ ಬಸವಣ್ಣನವರ ತತ್ವಗಳ ಪ್ರಾಮುಖ್ಯತೆಯ ಕುರಿತು ಮಾತಾಡಿದ್ದಾರೆ. ಕುವೆಂಪು ಅವರು ಎಲ್ಲರಿಗಿಂತ ಹೆಚ್ಚು ಆಪ್ತವಾಗಿ ಕಂಡಿದ್ದಾರೆ.
Jnanesh T.P
Oct 28, 2025Very interesting interview 👍🏿
ಡಿ. ಉಮಾಪತಿ, ಬೆಂಗಳೂರು
Oct 29, 2025ಓದಿದ್ದೆ….ನೀವು ಬಯಲುನಲ್ಲಿ ಪ್ರಕಟಿಸಿದ್ದು ಒಳ್ಳೆಯದಾಯ್ತು. ಇದೇ ನೆವದಲ್ಲಿ ಇನ್ನೊಮ್ಮೆ ಓದಬಹುದು… ಥ್ಯಾಂಕ್ಯೂ.