Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶರಣ- ಎಂದರೆ…
Share:
Articles March 6, 2020 ಡಾ. ಪಂಚಾಕ್ಷರಿ ಹಳೇಬೀಡು

ಶರಣ- ಎಂದರೆ…

“ಶರಣ” ಎಂಬ ಶಬ್ದವು ಬಹಳ ಪ್ರಾಚೀನವಾದುದು. ಬೌದ್ಧರು “ಬುದ್ಧಂ ಶರಣಂ ಗಚ್ಛಾಮಿ”, “ದಮ್ಮಂ ಶರಣಂ ಗಚ್ಛಾಮಿ” ಮತ್ತು “ಸಂಘಂ ಶರಣಂ ಗಚ್ಛಾಮಿ” ಎಂದು ಹೇಳುವಲ್ಲಿ, ತಮ್ಮಲ್ಲಿರುವ ಬುದ್ಧತ್ವಕ್ಕೆ, ಧರ್ಮಕ್ಕೆ ಹಾಗೂ ಸಂಘಕ್ಕೆ ಶರಣಾಗುವಂತೆ ತಮ್ಮ ಧರ್ಮಾನುಯಾಯಿಗಳಿಗೆ ಕರೆಕೊಡುತ್ತಾರೆ. ಇದು ಅವರ ಪ್ರಮುಖ ಧರ್ಮಸೂತ್ರ. ಇಲ್ಲಿ ಶರಣ ಎಂದರೆ ಶರಣಾಗುವುದು. ವ್ಯಕ್ತಿಯೊಬ್ಬ ತನ್ನ ಅಹಮ್ಮಿಕೆಯನ್ನು ಕಳೆದುಕೊಂಡು ಶರಣಾಗತಿಯ ಭಾವದಿಂದ ಗುರುವಿಗೆ, ಧರ್ಮಕ್ಕೆ ಹಾಗೂ ಸಮಾಜಕ್ಕೆ ಶರಣಾಗುವ ಮೂಲಕ ವಿಶ್ವಮಾನವನಾಗುತ್ತಾನೆ.
ಬಸವಣ್ಣನವರು ಹಾಗೂ ಇತರ ಶರಣರು ತಮ್ಮ ವಚನಗಳಲ್ಲಿ ಅನೇಕ ಬಾರಿ ಶರಣ ಎಂಬ ಶಬ್ದವನ್ನು ಬಳಸಿದ್ದಾರೆ. ಲಿಂಗಾಯತ ಧರ್ಮದಲ್ಲಿ “ಶರಣ” ಶಬ್ದಕ್ಕೆ ವಿಶಾಲಾರ್ಥವಿದ್ದು, ಮುಖ್ಯವಾಗಿ ಈ ಕೆಳಗಿನ ಎರಡು ವಿಧಗಳಲ್ಲಿ ಈ ಲೇಖನ ಚರ್ಚಿಸುತ್ತದೆ.

೧. ಬೌದ್ಧರಂತೆ ಶರಣಾಗತಿಯ ಭಾವವನ್ನು ಹೊಂದುವ ಮೂಲಕ ವಿಶ್ವಮಾನವನಾಗುವುದು.
೨. ಸರ್ವಶೂನ್ಯನಿರಾಲಂಬ ಲಿಂಗದಲ್ಲಿ ಹೊಮ್ಮುವ ಸ್ಫುರಣಕ್ಕೆ ಶರಣ ಎಂದಿದ್ದಾರೆ.

ಅಲ್ಲಮಪ್ರಭುದೇವರ “ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಶಬ್ದದಂತೆ, ಗುಹೇಶ್ವರಾ, ನಿಮ್ಮ – ಶರಣ ಸಂಬಂಧ” ಎಂಬ ವಚನದಲ್ಲಿ  ಶಿವ ಮತ್ತು ಶಕ್ತಿಯರ ಸಂಬಂಧವನ್ನು ಗುರುತಿಸಲಾಗಿದೆ. ಶರಣ ಎಂದರೆ ಪರಶಿವನೊಳಗೆ ಅಡಕವಾಗಿರುವ ಮೂಲ ಚಿತ್. ಆ ಚಿತ್ತೇ ಸಕಲ ಜಗದ ಸೃಷ್ಟಿಗೆ ಕಾರಣ. ಪರಶಿವನು ಸೃಷ್ಟಿಪೂರ್ವದಲ್ಲಿ  ಸ್ವಯಂಭು ಸ್ಥಿತಿಯಲ್ಲಿ ತಾನೇ ತಾನಾಗಿರುತ್ತಾನೆ.  ತೋರ್ಪಡಲು ಏನೊಂದೂ ಇರುವುದಿಲ್ಲ. ಅಂಥಾ ಸ್ಥಿತಿಯಲ್ಲಿ ಪರಶಿವನಲ್ಲಿ  ಉಗಮವಾದ ಸ್ಫುರಣವೇ ಚಿತ್. ಆ ಚಿತ್ತಿನಿಂದ ಉತ್ಪತ್ತಿ,  ಸಕಲ ಸೃಷ್ಟಿ! ಶರಣ ಎಂದರೆ ಅಂಥಾ ನಿಷ್ಕಲ ಮೂಲ ಸ್ವರೂಪ, ಕಲಾರಹಿತವಾದ ಚೈತನ್ಯ. ಆ ಚಿತ್ ನಮ್ಮೊಳಗೂ ಇದ್ದು ಅದು ನಮ್ಮ ಅರಿವಿಗೆ ಬರುವುದಿಲ್ಲ. ಏಕೆಂದರೆ ನಾವು ಮೂಲ ಸ್ವರೂಪದಿಂದ ಬಹಳ ದೂರ ನಿಂತಿದ್ದೇವೆ.

ರೇಡಿಯೋ ಕೇಂದ್ರದಿಂದ ಪ್ರಸಾರವಾಗುವ ಸುದ್ದಿ ನಮ್ಮ ಮನೆಯನ್ನು ತಲುಪಲು ನಮ್ಮ ಮನೆಯಲ್ಲಿರುವ ರೇಡಿಯೋ ತರಂಗಗಳು  ರೇಡಿಯೋ ಕೇಂದ್ರದಿಂದ ಪ್ರಸಾರವಾಗುವ ತರಂಗಾಂತರಗಳೊಂದಿಗೆ  ಹೊಂದಿಕೆಯಾದಾಗ ಮಾತ್ರ  ಸುದ್ದಿ ಬಿತ್ತರವಾಗುತ್ತದಲ್ಲವೇ? ಹಾಗೆಯೇ  ಸೂಕ್ಷ್ಮರೂಪದಲ್ಲಿ ವಿಶ್ವದೆಲ್ಲೆಡೆ ವ್ಯಾಪಿಸಿರುವ ಮೂಲಚಿತ್ (ಶರಣ) ಶುದ್ಧರೂಪದಲ್ಲಿರುತ್ತದೆ, ಅದೇ ಚಿತ್ (ಶರಣ) ನಮ್ಮೊಳಗೂ ಇರುವುದು. ಯಾವಾಗ ನಮ್ಮೊಳಗಿನ ಚಿತ್ ವಿಶ್ವದ ಮೂಲ ಚಿತ್ ಸ್ವರೂಪವೇ ಆಗಿದೆ ಎಂಬ ಅರಿವುಂಟಾಗುವುದೋ ಅದೇ ಲಿಂಗಾಂಗ ಸಮರಸ. ಲಿಂಗಾಂಗ ಸಮರಸಕ್ಕೆ ಬಹು ಮುಖ್ಯ ಅಡ್ಡಿ ಎಂದರೆ ನಮ್ಮೊಳಗಿನ ಚಿತ್ ತನ್ನ ಮೂಲ ಸ್ವರೂಪವನ್ನು ಮರೆತು  ಮಲಿನಗೊಂಡಿರುವುದು.  ಶುದ್ಧ ಚಿತ್ (ಶರಣ) ಮತ್ತು ಅಶುದ್ಧ ಚಿತ್ (ಮಾನವ) ನೊಡನೆ ಸಂಪರ್ಕವೇರ್ಪಡುವುದಿಲ್ಲ. ಆ ಸಂಪರ್ಕವೇರ್ಪಡಲು ಅಶುದ್ಧ ಚಿತ್ ತನ್ನ ಮೂಲನೆಲೆಯನ್ನು ಅರಿತು ತನಗಂಟಿರುವ ಮಾಲಿನ್ಯವನ್ನು ಝಾಡಿಸಿ ಮೊದಲು ಶುಚಿಯಾಗಬೇಕು. ಅದನ್ನೇ ಪ್ರವಾದಿ ಬಸವೇಶ್ವರರು “ಅರಿದೊಡೆ ಶರಣ ಮರೆದೊಡೆ ಮಾನವ, ಮರೆಯದೆ ಪೂಜಿಸು ಕೂಡಲಸಂಗನ” ಎಂದಿದ್ದಾರೆ. ನಮ್ಮೊಳಗಿನ ಶುದ್ಧ ಶಿವ ತತ್ವದ ಅರಿವು  ಮರೆಯಾಗಿರುವುದರಿಂದ ನಾವು ಮಾನವರಾಗಿದ್ದೇವೆ. ಶುದ್ಧ ಶಿವತತ್ವದ ಅರಿವು ಜಾಗೃತವಾದೊಡನೆ ಮರೆವಿನ ಮಾನವ ಅರಿವಿನ ಜ್ಯೋತಿಯಾಗುತ್ತಾನೆ.

ಅಕ್ಕಮಹಾದೇವಿ ತಾಯಿ ತಮ್ಮ  “ಆದಿ ಅನಾದಿಯೆನ್ನದೆ ಬಸವಣ್ಣ ಗಣಮೇಳಾಪವಾಗಿ ಅನಂತ ಯುಗಂಗಳಲ್ಲಿಯೂ ಸಕಲ ಲೋಕದೊಳು ಚರಿಸುತ್ತಿಪ್ಪ ಸುಳುಹನರಿಯದೆ ಸಕಲ ನಿಃಕಲರೆಲ್ಲ ಭ್ರಮೆಗೊಂಡು ಬೀಳುತ್ತೇಳುತ್ತಿರ್ದರು. ಇವರೆಲ್ಲರ ಮುಂದೆ ಆ ಗಣಂಗಳ ನಾನರಿದು ಬದುಕಿದೆನು ಕಾಣಾ ಶ್ರೀಶೈಲಚೆನ್ನಮಲ್ಲಿಕಾರ್ಜುನಾ.” ಎಂಬ ವಚನದಲ್ಲಿ ವ್ಯಕ್ತವಾಗಿರುವ  “ಬಸವಣ್ಣ” ಎಂಬ ಪದದ ಅರ್ಥವನ್ನು ಬಹಳ ಸೂಕ್ತರೀತಿಯಲ್ಲಿ ಸೂಕ್ಷ್ಮವಾಗಿ ವಿವರಿಸುತ್ತಾರೆ. ಬಸವಣ್ಣ ಎಂದರೆ ಕೇವಲ ಹನ್ನೆರಡನೇ ಶತಮಾನದ ಬಸವಣ್ಣ ಅಲ್ಲ! ಪರಮಾತ್ಮನ ಮೂಲ ಚಿತ್! ಆ ಮೂಲ ಚಿತ್ತೇ ಬಸವಣ್ಣ. ಬಸವಣ್ಣ ಅಷ್ಟು ಶುದ್ಧರೂಪದ ಚಿತ್ (ಶರಣ). ಆ ಮೂಲ ಚಿತ್ತಿಗೂ (ಲಿಂಗ) ಹನ್ನೆರಡನೇ ಶತಮಾನದ ಬಸವಣ್ಣನವರ ಚಿತ್ತಿಗೂ (ಅಂಗ) ಯಾವುದೇ ಭಿನ್ನವಿಲ್ಲದೇ ಅಭಿನ್ನವಾದ್ದರಿಂದ ಅವರದ್ದು ಸದಾ ಲಿಂಗಾಂಗ ಸಾಮರಸ್ಯದ ಬದುಕಾಗಿತ್ತು. ಹಾಗಾಗಿಯೇ ಶರಣರು ಬಸವಣ್ಣನವರನ್ನು ಸಾಕ್ಷಾತ್ ಶಿವನೆಂದೇ ಹಾಡಿ ಹೊಗಳಿದ್ಡಾರೆ.  ಆ ಮೂಲ ಚಿತ್ (ಶರಣ) ಅನಂತ ಯುಗಗಳಲ್ಲಿಯೂ ಅನಂತ ಲೋಕಗಳಲ್ಲೂ ನಿರಂತರವಾಗಿ ಪ್ರವಹಿಸಿಕೊಂಡು ಬರುತ್ತಿರುವುದನ್ನು ನಮ್ಮ ಅಂತರಂಗದ ಶುದ್ಧ ಅರಿವಿನ (ಚಿತ್) ದೃಷ್ಟಿಯಿಂದ ಕಂಡು ಅನುಭವಿಸಬೇಕೆಂದು ಅಕ್ಕ ಹೇಳುತ್ತಾರೆ. ಆ ಕಾರಣದಿಂದಾಗಿಯೇ ಬಸವಣ್ಣನವರನ್ನು ಪ್ರಣವಸ್ವರೂಪಿ ಎನ್ನುವುದು.  ಪ್ರಣವ ಎಂದರೆ ಮೂಲ ಚಿತ್, ಮೂಲಚಿತ್ ಸ್ವರೂಪವೇ ಬಸವಣ್ಣ, ಬಸವಣ್ಣ ಭಿನ್ನವಲ್ಲ ಪ್ರಣವ ಬೇರೆ ಅಲ್ಲ ಎಂಬುದು ಅಕ್ಕನ ಇಂಗಿತ.  “ಆದಿ ಅನಾದಿಗಳಿಂದತ್ತಲಯ್ಯಾ ಬಸವಣ್ಣನು. ಮೂದೇವರ ಮೂಲಸ್ಥಾನವಯ್ಯಾ ಬಸವಣ್ಣನು. ನಾದ ಬಿಂದು ಕಳಾತೀತ ಆದಿ ನಿರಂಜನನಯ್ಯಾ ಬಸವಣ್ಣನು. ಆ ನಾದಸ್ವರೂಪೇ ಬಸವಣ್ಣನಾದ ಕಾರಣ, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.” ಆ ಶುದ್ಧ  ಚಿತ್ (ಶರಣ) ಬಸವಣ್ಣನಾಗಿ ಅವತರಿಸಿದರು, ನಾದ ಬಿಂದು ಸ್ವರೂಪವೇ ಬಸವಣ್ಣ (ಲಿಂಗ), ಪರಶಿವನ ಕಳಾ ಸ್ವರೂಪವೇ ಬಸವಣ್ಣ (ಅಂಗ). ಅಂಥಾ ಬಸವಣ್ಣನ ಶ್ರೀ ಪಾದಕ್ಕೆ  ನಮಸ್ಕರಿಸುತ್ತಾರೆ ಅಕ್ಕ.

ಅಲ್ಲಮಪ್ರಭುದೇವರ “ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು. ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಅನಾದಿಯಾಗಿತ್ತು. ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ. ಆ ಶರಣನ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಶಿವನಾದ, ಆ ಶಿವನ ಮೂರ್ತಿಯಿಂದ ರುದ್ರನಾದ, ಆ ರುದ್ರನ ಮೂರ್ತಿಯಿಂದ ವಿಷ್ಣುವಾದ. ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ. ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ_ ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದರು” ಎಂಬ ವಚನದಲ್ಲಿ “ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ” ಎಂಬುದು ಪರಶಿವನ ಮೂಲ ಚಿತ್ ಅನ್ನು ನಿರ್ದೇಶಿಸುತ್ತದೆ.

ದೇವ-ಭಕ್ತ,  ನಾನು-ನೀನು,  ಗುರು-ಶಿಷ್ಯ, ಎಂಬುವು ಕೇವಲ ಶಿವತತ್ವದ ಮರೆವಿನಿಂದ ಸೃಷ್ಟಿಯಾದ ಗುಳ್ಳೆಗಳು. ಇವೆಲ್ಲಾ ದ್ವಂದ್ವಗಳು ನಮ್ಮನ್ನು ಇನ್ನಿಲ್ಲದಂತೆ ನಿತ್ಯ ಬಾಧಿಸುತ್ತಿವೆ. ಒಮ್ಮೆ ಶಿವತತ್ವದ ಅರಿವು ನಮ್ಮಲ್ಲಿ ಜಾಗರವಾದರೆ ಈ ಎಲ್ಲಾ ದ್ವಂದ್ವಗಳೂ ಹರಿಹಂಚಾಗಿ ಹೋಗಿ ಅಲ್ಲಿ ಏಕಭಾವ ನೆಲೆಗೊಳ್ಳುತ್ತದೆ ಎಂದು  ತೋಂಟದ ಸಿದ್ಧಲಿಂಗ ಶಿವಯೋಗಿಗಳು “ಶಿವನ ಕಾಯವೇ ಭಕ್ತ, ಭಕ್ತನ ಕಾಯವೇ ಶಿವ. ಶಿವನ ಚೈತನ್ಯವೇ ಭಕ್ತ, ಭಕ್ತನ ಚೈತನ್ಯವೇ ಶಿವನು ನೋಡಾ. ಭಕ್ತನ ಮನ ಭಾವ ಕರಣಂಗಳೇ ಭಕ್ತನು ನೋಡಾ. ಇದು ಕಾರಣ. ಶಿವನೇ ಭಕ್ತನು; ಭಕ್ತನೇ ಶಿವನು. ದೇವ ಭಕ್ತನೆಂಬ ಅಂತರವೆಲ್ಲಿಯದೋ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.” ಎಂಬ ವಚನದಲ್ಲಿ ನಿರೂಪಿಸಿದ್ದಾರೆ.

ನಾವು ನಿತ್ಯ ನಮಗರಿವಿಲ್ಲದಂತೆ ಶರಣ ಎಂಬ ಪದವನ್ನು ಬಳಸುತ್ತಿರುತ್ತೇವೆ. ಆದರೆ ನಮಗೆ ಆ ಪದದ ಹರವು ಆಳ ಒಂದೂ ತಿಳಿದಿರುವುದಿಲ್ಲ.  ಬಸವಣ್ಣನವರು ಹೇಳಿರುವಂತೆ “ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು, ಶಿವಚಿತ್ತವೆಂಬ ಕೂರಲಗ ಕೊಂಡು, ಶರಣಾರ್ಥಿಯೆಂಬ ಶ್ರವಗಲಿತಡೆ, ಆಳುತನಕ್ಕೆ ದೆಸೆಯಪ್ಪೆ ನೋಡಾ. ಮಾರಂಕ ಜಂಗಮ ಮನೆಗೆ ಬಂದಲ್ಲಿ ಇದಿರೆತ್ತಿ ನಡೆವುದು, ಕೂಡಲಸಂಗಮದೇವನನೊಲಿಸುವಡಿದು ಚಿಹ್ನ!” ಸಮಚಿತ್ತದ ನೇಮದೊಂದಿಗೆ ಶಿವಚಿತ್ತವೆಂಬ ಕೂರಲಗನ್ನು ಹಿಡಿದು ಶರಣಾರ್ಥಿ ಎಂಬ ಪಥವರಿದು ನಡೆದರೆ ಅದೇ ಸತ್ಪಥ, ಅದೇ ಶಿವನೊಲುಮೆಯ ತಾಣ.

Previous post ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
Next post ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ

Related Posts

ಅವಿರಳ ಅನುಭಾವಿ: ಚನ್ನಬಸವಣ್ಣ
Share:
Articles

ಅವಿರಳ ಅನುಭಾವಿ: ಚನ್ನಬಸವಣ್ಣ

March 6, 2020 ಮಹಾದೇವ ಹಡಪದ
ಜಾಜಿ ಮಲ್ಲಿಗೆ ಅರಳಿ ಹೂಬಿಟ್ಟ ಹೊತ್ತು. ಊರೆಲ್ಲ ಘಮ್ಮೆನ್ನುವ ಪರಿಮಳ ಹೊತ್ತು ಸೂಸುವ ಆ ತಂಗಾಳಿಯಲಿ ಚುಮುಚುಮು ಬೆಳಕಿನ ಕಿರಣಗಳು ಗುಡ್ಡವನ್ನೆಲ್ಲ ಕೆಂಪೇರಿಸಿ ಹೊಂಬಣ್ಣದ...
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
Share:
Articles

ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ

October 13, 2022 ಡಾ. ಬಸವರಾಜ ಸಬರದ
ಅಮುಗೆ ರಾಯಮ್ಮ 116 ವಚನಗಳನ್ನು ರಚಿಸಿರುವ ಮಹತ್ವದ ವಚನಕಾರ್ತಿ. ಇವರ ವಚನಗಳಲ್ಲಿ ವಸ್ತು ವೈವಿಧ್ಯತೆಯಿದೆ. ಸರಳ ಮಾತುಗಳಲ್ಲಿ, ನೇರ ನುಡಿಗಳಲ್ಲಿ ಶರಣರ ತತ್ವಗಳನ್ನು...

Comments 10

  1. ಮಠಪತಿ.ವಿ.ವಿ
    Mar 6, 2020 Reply

    ಗುರುಗಳಿಗೆ ಅನಂತ ಅನಂತ ಶರಣು ಶರಣಾರ್ಥಿಗಳು..

    ಸುಂದರವಾದ ಅದ್ಭುತವಾದ ವಿವರಣೆ..
    ಸುಮಾರು ನಾಲ್ಕೈದು ದಿನದ ಹಿಂದೆ “ಶರಣು ಶರಣಾರ್ಥಿ” ಎಂಬ ಲಿಂಗಾಯತರ ಮಂತ್ರವನ್ನು, ತೆಲುಗುನಲ್ಲಿ ವಿವರಣೆ ಕೂಡಿ ಎಂದು ನಮ್ಮ ಸ್ನೇಹಿತರು ಕೇಳಲಾಗಿದೆ. ಆವಾಗಿನಿಂದ ಸಮಯ ಸಿಕ್ಕಿದಾಗ ಸುಮಾರು ವಚನಗಳನ್ನು ಅಧ್ಯಾಯನ ಮಾಡುತಿದ್ದೇನೆ..
    ಬಸವಣ್ಣನವರ ಕರುಣೆಯಿಂದ ನಿಮ್ಮ ವಿವರಣೆ ಕಂಡು ಬಾಯಾರಿದವಂಗೆ ಸಿಹಿನೀರು ಸಿಕ್ಕಿದಂತೆ ಸಂತೋಷವಾದೆ ಅಣ್ಣಾ..

    ನಿಮ್ಮ ಪೂರ್ತಿ ಬರಹವನ್ನು ಓದಿದ ನಂತರ
    ನನಗೊಂದು ಬಸವಣ್ಣ ನವರ ವಚನ ನೆನೆಪಾಗ್ತಾಯಿದೆ..

    “ಶರಣ ನಿದ್ರೆಗೈದಡೆ ಜಪ ಕಾಣಿರೊ,
    ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
    ಶರಣ ನಡೆದುದೆ ಪಾವನ ಕಾಣಿರೊ,
    ಶರಣ ನುಡಿದುದೆ ಶಿವತತ್ವ ಕಾಣಿರೊ,
    ಕೂಡಲಸಂಗನ ಶರಣನ
    ಕಾಯವೆ ಕೈಲಾಸ ಕಾಣಿರೊ.”

    ಈವಾಗ ಇದರ ಅರ್ಧವು ನನಗೆ ಮೊದಲಿನಿಂದ ಒಂದು ಪಟ್ಟು ಹೆಚ್ಚು ಅರ್ಥಪೂರ್ಣವಾಗಿ ಕಂಡು ಬರುತಿದೆ..

    ಅಣ್ಣಾ ನಿಮಗೆ, ಮತ್ತೊಮ್ಮೆ ಅನಂತ ಅನಂತ ಶರಣು ಶರಣಾರ್ಥಿಗಳು..

  2. ಮಹಾದೇವ
    Mar 7, 2020 Reply

    ಶರಣು ಶರಣಾರ್ಥಿಗಳು… ಅರ್ಥಗರ್ಭಿತ ವಿವರಣೆಯುಳಗಳ ಲೇಖನ ಸರ್

  3. Veerabhadrappa, Bangalore
    Mar 8, 2020 Reply

    ಲೇಖನ ಚನ್ನಾಗಿದೆ, ಆದರೆ ಅಪೂರ್ಣ ಎನಿಸಿತು, ಅಶುದ್ಧ ಚಿತ್ತು ಶುದ್ಧವಾಗುವುದು ಹೇಗೆ? ಮಾನವ ಶರಣನಾಗುವ ದಾರಿ ಯಾವುದು?

  4. ರಾಜಶೇಖರ್ ಕಬ್ಬೂರು
    Mar 11, 2020 Reply

    ಶರಣನ ಬಗೆಗೆ ಸಂಕ್ಷಿಪ್ತ ವಿವರ ನೀಡುವ ಲೇಖನ ಓದಿ ಕೆಲವು ಸಂದೇಹಗಳು ಮಾಯವಾದವು. ಜಂಗಮನಾದ ಬಳಿಕ ಶರಣತ್ವವೇ ಅಥವಾ ಶರಣನಾದ ಬಳಿಕ ಜಂಗಮತ್ವವೇ?

  5. Devaraj B.S
    Mar 11, 2020 Reply

    ಬಸವಣ್ಣ ನಿಜವಾಗಿ ಚಿತ್ ಸ್ವರೂಪಿಗಳೇ, ಆ ಶುದ್ಧ ಚೈತನ್ಯ ಉಳಿದ ಶರಣರನ್ನೂ ಶುದ್ಧವಾಗಿಸಿತು. ನಮ್ಮಂಥ ಅಶುದ್ದರು ಶುದ್ದವಾಗಲು ಏನು ಮಾಡಬೇಕು?

  6. Shambhulingaiah
    Mar 12, 2020 Reply

    ಅಲ್ಲಮಪ್ರಭುದೇವರ “ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು… ವಚನ ಅರ್ಥವಾಗಲಿಲ್ಲ. ಸ್ವಲ್ಪ ವಿವರಿಸಿದ್ದರೆ ಒಳ್ಳೆಯದಿತ್ತು. ದೇವ-ಭಕ್ತರ ಅಂತರವೆಲ್ಲಿಯದೋ ಎಂದು ತೋಂಟದ ಸಿದ್ದಲಿಂಗೇಶ್ವರರು ಯಾವ ಹಿನ್ನೆಲೆಯಲ್ಲಿ ಹೇಳಿದರು? ಇದು ಅದ್ವೈತವೇ? ಇದು ಸರಿಯೇ?

  7. Mariswamy Gowdar
    Mar 15, 2020 Reply

    ಶರಣ ಎಂದರೆ… ಒಳ್ಳೆಯ ಲೇಖನ. ಅಹಂಕಾರಿಕೆ ಕಳೆದುಕೊಂಡು ನಡೆಯುವುದೇ ಶರಣಪಥದ ಮಹಿಮೆ.

  8. Karuna
    Mar 24, 2020 Reply

    ಅಲ್ಲಮಪ್ರಭುದೇವರ “ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು… ಈ ವಚನದ ತಾತ್ಪರ್ಯ ಬರೆದಿದ್ದರೆ ಶರಣನಾಗುವ ದಾರಿ ಕಾಣುತ್ತಿತ್ತು. ತಾತ್ವಿಕ ಹಾಗೂ ವೈಚಾರಿಕ ಲೇಖನಗಳಿಂದ ಬಯಲು ಮೌಲಿಕವಾದ ತಾಣವಾಗಿದೆ.

  9. ಮೃತ್ಯುಂಜಯ ಜಿ.ಕೆ
    Mar 26, 2020 Reply

    ಉತ್ತಮ ಲೇಖನ, ಶರಣನಾಗುವ ಅರ್ಹತೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದ.

  10. Veeresh S, Belgavi
    Mar 26, 2020 Reply

    ದ್ವಂದ್ವಗಳು ನಮ್ಮನ್ನು ಇನ್ನಿಲ್ಲದಂತೆ ನಿತ್ಯ ಬಾಧಿಸುತ್ತಿವೆ. ಒಮ್ಮೆ ಶಿವತತ್ವದ ಅರಿವು ನಮ್ಮಲ್ಲಿ ಜಾಗರವಾದರೆ ಈ ಎಲ್ಲಾ ದ್ವಂದ್ವಗಳೂ ಹರಿಹಂಚಾಗಿ ಹೋಗಿ ಅಲ್ಲಿ ಏಕಭಾವ ನೆಲೆಗೊಳ್ಳುತ್ತದೆ… ನಾ-ನೀ ಎಂಬ ಬೇಧ ಹರಿದಾತನೇ ಶರಣ. ವೆರಿ ನೈಸ್.

Leave a Reply to Mariswamy Gowdar Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
February 6, 2025
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
WHO AM I?
WHO AM I?
June 17, 2020
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…
September 13, 2025
Copyright © 2025 Bayalu