Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಚನ ಸಾಹಿತ್ಯದಲ್ಲಿ ಆಯಗಾರರು
Share:
Articles May 10, 2023 ವಿಜಯಕುಮಾರ ಕಮ್ಮಾರ

ವಚನ ಸಾಹಿತ್ಯದಲ್ಲಿ ಆಯಗಾರರು

ನಮ್ಮದು ಕೃಷಿ ಸಂಸ್ಕೃತಿ, ಕೃಷಿ ಎಲ್ಲಾ ಸಂಸ್ಕೃತಿಗಳ ತಾಯಿ. ಎಲ್ಲ ಕಾಯಕಗಳಿಗೂ ಮತ್ತು ಸಂಸ್ಕೃತಿಗಳಿಗೂ ಹೆತ್ತವ್ವನ ಸ್ಥಾನದಲ್ಲಿರುವುದೇ ವ್ಯವಸಾಯ. ಹಾಗೆಯೇ ವ್ಯವಸಾಯ ಕೇಂದ್ರೀಕೃತ ಕೆಲಸ-ಕಾರ್ಯಗಳಿಗೆ ಬೇಕಾಗುವ ಪರಿಕರಗಳನ್ನು ತಯಾರಿಸುವ ಕಾಯಕಯೋಗಿಗಳನ್ನು ಬಸವಣ್ಣನವರು ‘ಆಯಗಾರರು’ ಎಂದು ಕರೆದು, ಅವರ ಕಾಯಕಕ್ಕೆ ದೈವತ್ವದ ಸ್ಥಾನ ನೀಡಿದರು. ಅರ್ಧದಷ್ಟು ಜನ ನೇರವಾಗಿ ವ್ಯವಸಾಯದಲ್ಲಿ ತೊಡಗಿಸಿಕೊಂಡರೆ ಇನ್ನುಳಿದವರು ವ್ಯವಸಾಯಕ್ಕೆ ನೆರವಾಗುವ ಪರಿಕರಗಳನ್ನು ತಯಾರಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡವರು. ಬಸವಣ್ಣನವರ ಈ ವಚನ ಗಮನಿಸಿ:

ನಾನು ಆರಂಭವ ಮಾಡುವೆನಯ್ಯಾ| ಗುರುಪೂಜೆಗೆಂದು ||
ನಾನು ಬೆವಹಾರವ ಮಾಡುವೆನಯ್ಯಾ| ಲಿಂಗಾರ್ಚನೆಗೆಂದು ||
ನಾನು ಪರಸೇವೆಯನು ಮಾಡುವೆನಯ್ಯಾ| ಜಂಗಮ ದಾಸೋಹಕ್ಕೆಂದು ||
ನಾನಾವಾವ ಕರ್ಮಂಗಳ| ಮಾಡಿದಡೆಯು ||
ಆ ಕರ್ಮಫಲಭೋಗವ ನೀ ಕೊಡುವೆ| ಎಂಬುದ ನಾನು ಬಲ್ಲೆನು ||
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ| ಮತ್ತೊಂದಕ್ಕೆ ಮಾಡೆನು ||
ನಿಮ್ಮ ಸೊಮ್ಮಿಂಗೆ ಸಲಿಸುವೆನು| ನಿಮ್ಮಾಣೆ ಕೂಡಲಸಂಗಮದೇವಾ ||

‘ಆಯ’ ಎಂದರೆ ವ್ಯವಸಾಯ ದೃಷ್ಟಿಯಲ್ಲಿ ಆದಾಯ ಅಥವಾ ಭೂಮಿಯಿಂದ ಬರುವ ಲಾಭ. ವ್ಯವಸಾಯಕ್ಕೆ ಬೇಕಾದ ಸೇವೆ ಮತ್ತು ಸಲಕರಣೆಗಳನ್ನು ತಯಾರಿಸಿ ಒದಗಿಸಿ ಕೊಡುವ ಕಾಯಕ ಸಮುದಾಯಕ್ಕೆ ರೈತರು ತಾವು ಬೆಳೆದ ಕಾಳು-ಕಡಿಗಳಲ್ಲಿನ ಒಂದು ಪಾಲನ್ನು ನೀಡುವ ಪ್ರತಿಫಲಕ್ಕೆ ‘ಆಯ’ ಎಂದು ಕರೆಯಲಾಗುತ್ತದೆ. ಕಾರ ಅಥವಾ ಗಾರ ಪ್ರತ್ಯಯ ಸೇರಿಸಿ ‘ಆಯಗಾರ’ ಎನ್ನುವ ಶಬ್ದ ಉತ್ಪತ್ತಿಯಾಗಿದೆ. ಅಂದರೆ ರೈತರ ಆದಾಯಕ್ಕೆ ಕೈ ಜೋಡಿಸುವವರು ಆಯಗಾರರು. ಉತ್ತರ ಕರ್ನಾಟಕದಲ್ಲಿ ಆಯಗಾರರಿಗೆ ‘ಬಾರಾಬುಲತೆ’, ಹಳೆ ಮೈಸೂರು ಭಾಗದಲ್ಲಿ ‘ಅಡದೆಯವರು’ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಎಚ್ಚಗಾರರು’ ಎಂದು ಗುರುತಿಸುತ್ತಾರೆ. ಉತ್ತರ ಭಾರತದಲ್ಲಿಯೂ ಆಯಗಾರರನ್ನು ಜಜಮಾನಿ, ಕಾಮೀನ್, ಫರ್ಜನ್, ಪರ್ಧಾನ್, ಕಾಮವಾಲೆ ಅಂತಲೂ ಪ್ರಾದೇಶಿಕವಾಗಿ ಕರೆಯುವುದು ರೂಢಿಯಲ್ಲಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಮಾನತೆ ಬಿಂಬಿಸುವಲ್ಲಿ ಗ್ರಾಮದಲ್ಲಿದ್ದ ಗೌಡರು, ಪಟೇಲರು, ಶಾನುಭೋಗರು, ಬಣಗಾರ, ತಳವಾರ, ತೋಟಿ, ನೀರಗಂಟಿ, ಅಕ್ಕಸಾಲಿಗ, ಕಮ್ಮಾರ, ಮಡಿವಾಳ, ಕ್ಷೌರಿಕ ಮುಂತಾದ ಎಲ್ಲ ಆಯಗಾರರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಬರುತ್ತಾರೆ. ಪರಸ್ಪರ ಅವಲಂಬನೆ, ಕರ್ತವ್ಯವೇ ದೇವರು ಎನ್ನುವ ತತ್ವ, ನಂಬಿಕೆಗಳು ಆಯಗಾರರ ಸಿದ್ಧಾಂತಗಳು. ಆಯಗಾರರನ್ನು ಕೂಲಿ ಕಾರ್ಮಿಕರನ್ನಾಗಿ ಗ್ರಾಮೀಣ ಜನ ಎಂದೂ ನಡೆಸಿಕೊಂಡಿದ್ದಿಲ್ಲ. ಆಯಗಾರರನ್ನು ಜಾನಪದರು ಎಷ್ಟು ಸೊಗಸಾಗಿ ಹೇಳಿದ್ದಾರೆಂದರೆ ಗ್ರಾಮೀಣ ಆರ್ಥಿಕ ಮಾದರಿಯನ್ನೇ ತೋರಿಸುತ್ತದೆ-

ಸುಣಗಾರ ಮನೀಯಿಂದ | ಸುಣ್ಣ ತಂದು ಮನೀ ಸಾರಿಸಿ ||
ರೈತರ ಮನೀಯಿಂದ | ಜೋಳಾ ತಂದ ||
ವಡ್ಡರ ಮಾಡಿದ | ಬೀಸುಕಲ್ಲಿನ್ಯಾಗ ಜೋಳಾ ಬೀಸಿ ||
ಬಡಿಗೇರ ಮಾಡಿದ | ಕೊಮ್ಮಣಿಗ್ಯಾಗ ರೊಟ್ಟಿ ಬಡದ ||
ಕಂಬಾರ ಮಾಡಿದ | ತೆವಿ ಮ್ಯಾಗ ರೊಟ್ಟಿ ಸುಟ್ಟು ||
ಮ್ಯಾದರ ಮಾಡಿದ | ಬುಟ್ಯಾಗ ರೊಟ್ಟಿ ಹಾಕತೇವರೀ ||
ಕುಂಬಾರ ಮಾಡಿದ | ಗಡಿಗ್ಯಾಗ ಅಡಿಗಿ ಮಾಡತೇವರೀ ||
ಕಿರಸ್ಯಾರ ಮುಂದ ಡೊಗ್ಗಿ | ನಾವು ತೆಲಿ ಬೋಳಸಿಕೊಂಡ ||
ಸಿಂಪಿಗ್ಯಾರ ಹೊಲದ | ಅಂಗಿ ತೊಟಗೊಂಡ ದೇವರಿಗೆ ಹೋಗಿ ||
ಹೂಗಾರ ಮನೀಯಿಂದ | ಹೂವ ತಂದು ದೇವರಿಗೆ ಏರಸತೇವರಿ ||
ಕೊರವರ ಮಾಡಿದ | ನೆಲವಿನ ಮ್ಯಾಲ ಹಾಲಿನ ಗಡಿಗಿ ಇಟ್ಟು ||
ಹೆಪ್ಪ ಹಾಕಿ ಮಾರನೇ ದಿನಾ | ಬೆಣ್ಣಿ ಕಡದ ತುಪ್ಪಾ ತೆಗೆದ ||
ಆ ತುಪ್ಪಾ ಕಾಸಿ ದೇವರಿಗೆ | ಎಣ್ಣಿ ಬತ್ತಿ ಹಚ್ಚತೇವರಿ ||

ಶರಣ ಸಂಸ್ಕೃತಿಯ ತಳಹದಿಯೇ ಕಾಯಕ. ಎಲ್ಲಾ ಕಾಯಕಗಳನ್ನು ಗೌರವದಿಂದ ಕಂಡ ಅದ್ಭುತ ಲೋಕವಿದು. ಮೂಲ ಮಾನವನ ಬದುಕಿನಲ್ಲಿ ಆಯಗಾರರ ಕಲ್ಪನೆಯನ್ನು ಗಮನಿಸಿ ಆ ವ್ಯವಸ್ಥೆಯಲ್ಲಿ ಕೃಷಿ ಮಾಡುವ ರೈತನಷ್ಟೇ ನೇಯುವ ನೇಕಾರನಿಗೂ, ಬುಟ್ಟಿ ಹೆಣೆಯುವ ಮಾದಾರರಿಗೂ, ಚಕ್ಕಡಿ ತಯಾರಿಸುವ ಬಡಿಗೇರರಿಗೂ, ಕುಂಟಿ-ಕುರುಪಿ ಮಾಡುವ ಕಂಬಾರನಿಗೂ, ಮಡಕೆ ಮಾಡುವ ಕುಂಬಾರನಿಗೂ ಗೌರವದ ಸ್ಥಾನಮಾನಗಳು ಇದ್ದವು.

ಕಸವು ಹೊಡೆದ ಕೈಯು | ಕಸ್ತೂರಿ ನಾತಾವ ||
ಬಸವಣ್ಣ ನಿನ್ನ ಸಗಣೀಯ | ಬಳದ ಕೈ ||
ವಿಸಳ ಯಾಲಕ್ಕಿ | ಗೊನಿ ನಾತ ||

(ಜನಪದ ಗೀತಾಂಜಲಿ/ದೇ. ಜವರೇಗೌಡ/12. ಬಸವಯ್ಯ/ಪೇಜ್ ನಂ. 44/ಸಾಲು 78)

ಆಯಗಾರರ ವೃತ್ತಿ ಕೌಶಲ್ಯಗಳು (Professional Skills) ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗುವಂಥವು. ಎಲ್ಲ ಆಯಗಾರರೂ ಒಬ್ಬರಿಗೊಬ್ಬರು ಅವಲಂಬಿತವಾಗಿರುವುದರಿಂದ ಪರಸ್ಪರ ಗೌರವ ಭಾವನೆಯಿಂದ ಕಾಣುತ್ತಿದ್ದರು. ಬಸವಣ್ಣನವರು ಈ ಆಯಗಾರರನ್ನು ಒಟ್ಟುಗೂಡಿಸಿ ಅವರ ಕಾಯಕಕ್ಕೆ ದೈವತ್ವದ ಜಾಗ ನೀಡಿ ಸಮ ಸಮಾಜ ನಿರ್ಮಿಸಿದರು. ವೈವಿಧ್ಯಮಯವಾದ ಆಯಗಾರರ ಕುಲ ಕಸುಬುಗಳಿಗೆ ಈಗ ಮೊದಲಿನ ಸ್ಥಾನಮಾನ ಇಲ್ಲದಿದ್ದರೂ ಸಂಪೂರ್ಣ ನಶಿಸಿ ಹೋಗದೆ ಇಂದಿಗೂ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಮಾಡುವ ಕಾಯಕದಿಂದಲೇ ಬಡಗಿ, ಕುಂಬಾರ, ಕಮ್ಮಾರ, ಕೊರಮ, ಬೇಡ, ನೇಕಾರ, ಅಕ್ಕಸಾಲಿಗ, ಚಮ್ಮಾರ, ಗಾಣಿಗ, ಇಂಥ ಹಲವಾರು ವೃತ್ತಿಗಾರರನ್ನು ಇವತ್ತಿಗೂ ಕಾಣಬಹುದು. ಈ ಎಲ್ಲ ವೃತ್ತಿಗಳು ಜನಪದರ ಬದುಕಿನ ಉಸಿರಾಗಿದ್ದವು. ಆದರೆ ಕಾಲದ ಸ್ಥಿತ್ಯಂತರದಿಂದಾಗಿ ಅವುಗಳ ಮಹತ್ವ ಇವತ್ತು ಮಸುಕಾಗಿದೆ.

ನುಲಿಯ ಚಂದಯ್ಯ

ಆಧುನಿಕ ಭಾರತದ ಸಂವಿಧಾನದಲ್ಲಿ ಏನೇನಿದೆಯೋ ಅದೆಲ್ಲವೂ ಮತ್ತು ಅದಕ್ಕೂ ಹೆಚ್ಚಿನ ವಿಚಾರಗಳನ್ನು ಬಸವಾದಿ ಶರಣರ ಸಂವಿಧಾನ ಒಳಗೊಂಡಿದೆ. ಈ ಭೂಮಿ ರಚನೆಯಾಗಿದ್ದು ಬಿಗ್ ಬ್ಯಾಂಗ್ ನಿಂದ ಅಂತ ಭೌಗೋಳಿಕ ಮತ್ತು ಖಗೋಳ ಭೌತಶಾಸ್ತ್ರಜ್ಞದ ಎಲ್ಲ ವಿಜ್ಞಾನಿಗಳೂ ಖಚಿತವಾಗಿ ಹೇಳಿದ್ದಾರೆ. ಇಂಥದ್ದೇ ಒಂದು ಮಹಾಸ್ಫೋಟ 12 ನೇ ಶತಮಾನದಲ್ಲಾಯಿತು. ಅದು ಅರಿವಿನ ಮಹಾಸ್ಫೋಟ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ ಮಹಾಸ್ಫೋಟ.

ಚಂದಯ್ಯ ಹೆಸರಿನ ಇನ್ನೂ ಮೂವರ ಪ್ರಸ್ತಾಪ ಶರಣರ ಕಾಲದಲ್ಲಿ ಪ್ರಸ್ತಾಪವಾಗಿದೆ. ಅವರು- 1. ಅಣಬೆ ಚಂದಯ್ಯ, 2. ಚಿಮ್ಮಲಿಗೆ ಚಂದಯ್ಯ, 3. ಸೀಗೂರು ಚಂದಯ್ಯ. ಆದರೆ ಈ ಮೂವರು ಬರೆದ ಯಾವುದೇ ವಚನಗಳು ಇಂದಿಗೂ ಲಭ್ಯವಾಗಿಲ್ಲ. ನುಲಿಯ ಚಂದಯ್ಯನವರ ಪ್ರಸ್ತಾಪ ಬಸವ ಪುರಾಣ, ಶೂನ್ಯ ಸಂಪಾದನೆಗಳು, ರಾಘವಾಂಕ ಚಾರಿತ್ರ್ಯ, ಶಿವತತ್ವ ಚಿಂತಾಮಣಿ, ಚೆನ್ನಬಸವ ಪುರಾಣ, ಗುರುರಾಜ ಚಾರಿತ್ರ್ಯ ಮತ್ತು ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರ ಮುಂತಾದ ಗ್ರಂಥಗಳಲ್ಲಿ ಪ್ರಸ್ತಾಪವಾಗಿದೆ. ಹೆಂಡದ ಮಾರಯ್ಯ ತಮ್ಮ ಎರಡು ವಚನಗಳಲ್ಲಿ ಬಹಳ ಅಭಿಮಾನ ಮತ್ತು ಆತ್ಮೀಯತೆಯಿಂದ ‘ನುಲಿಯೊಡೆಯರೆ’ ಎಂದು ಬರೆದಿದ್ದಾರೆ. ಬಸವಣ್ಣನವರ ಹಿರಿಯ ಸಮಕಾಲೀನರಾದ ನುಲಿಯ ಚಂದಯ್ಯ ಕ್ರಿ. ಶ. 1107ರಲ್ಲಿ ಈಗಿನ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ‘ಶಿವಣಗಿ’ ಎನ್ನುವ ಗ್ರಾಮದಲ್ಲಿ ಜನಿಸಿದರು. ವಿಜಯಪುರದಿಂದ ಕಲಬುರ್ಗಿಗೆ ಹೋಗುವ ಮಾರ್ಗದಲ್ಲಿ ಈ ಶಿವಣಗಿ ಗ್ರಾಮವಿದ್ದು ಅಲ್ಲಿ ನುಲಿಯ ಚಂದಯ್ಯನವರ ಹೆಸರಿನ ಒಂದು ದೇವಸ್ಥಾನವೂ ಇದೆ. ನುಲಿಯ ಚಂದಯ್ಯ ‘ಕುಳುವ’ ಎಂಬ ಭಾಷೆಯನ್ನು ಮಾತನಾಡುವ ‘ಕೊರವ’ ಸಮಾಜಕ್ಕೆ ಸೇರಿದವರು. ಅಂದರೆ ಹಗ್ಗ ಹೊಸೆಯುವ ಕಾಯಕ ಮಾಡುವ ಜನಾಂಗಕ್ಕೆ ಸಂಬಂಧಪಟ್ಟವರು. ನುಲಿ ಅಂದರೆ ಹುಲ್ಲು ಅಥವಾ ಹಗ್ಗ. ಹಗ್ಗವನ್ನು ಬೇರೆ ಬೇರೆ ವಸ್ತುಗಳಾದ ಪುಂಡಿ ಕಟ್ಟಿಗೆ, ಗಾದಾಳೆ, ಮೆದೆಹುಲ್ಲು ಮತ್ತಿತರ ನಾರಿನಿಂದ ತಯಾರಿಸುತ್ತಾರೆ. ‘ಚಂದೇಶ್ವರಲಿಂಗ’ ಎನ್ನುವ ವಚನಾಂಕಿತದಿಂದ ನುಲಿಯ ಚಂದಯ್ಯನವರು ಬರೆದ 48 ವಚನಗಳು ಸಿಕ್ಕಿವೆ. ಹುಲ್ಲಿನ ಬಗ್ಗೆ ಅವರದೊಂದು ವಚನ:

ಸಂಸಾರವೆಂಬ | ಸಾಗರದ ಮಧ್ಯದೊಳಗೆ ||
ಬೆಳೆದ ಹೊಡಕೆಯ | ಹುಲ್ಲ ಕೊಯ್ದು ||
ಮತ್ತಮಾ ಕಣ್ಣ ತೆಗೆದು | ಕಣ್ಣಿಯ ಮಾಡಿ ||
ಇಹಪರವೆಂಬ | ಉಭಯದ ಗಂಟನಿಕ್ಕಿ ||
ತುದಿಯಲ್ಲಿ ಮಾಟಕೂಟವೆಂಬ | ಮನದ ಕುಣಿಕೆಯಲ್ಲಿ ||
ಕಾಯಕವಾಯಿತ್ತು | ಇದು ಕಾರಣ ||
ಚಂದೇಶ್ವರಲಿಂಗವೆಂಬ | ಭಾವವೆನಗಿಲ್ಲ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1336 / ವಚನ ಸಂಖ್ಯೆ-1325)

ಕಾಯಕ ಮತ್ತು ದಾಸೋಹದ ಹರಿಕಾರರಾದ ಶರಣರು ಕಾಯಕ ತತ್ವವನ್ನು ಬಲವಾಗಿ ಪ್ರತಿಪಾದಿಸಿದ್ದರು. ಚೈನಾ ದೇಶದ ಒಂದು ಗಾದೆ ನೆನಪಿಗೆ ಬರುತ್ತದೆ. “He who does not work, shall he eat?” ದುಡಿಯದೆ ಊಟ ಮಾಡುವ ಹಕ್ಕು ಯಾರಿಗೂ ಇಲ್ಲ. ಇದನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತಂದವರು ಬಸವಾದಿ ಶರಣರು. ನುಲಿಯ ಚಂದಯ್ಯನವರ ಒಂದು ವಚನ ಈ ಕಾಯಕ ತತ್ವವನ್ನು ನಿರೂಪಿಸುತ್ತದೆ.

ಗುರುವಾದಡೂ | ಕಾಯಕದಿಂದವೆ ಜೀವನ್ಮುಕ್ತಿ ||
ಲಿಂಗವಾದಡೂ ಕಾಯಕದಿಂದವೇ | ವೇಷದ ಪಾಶ ಹರಿವುದು ||
ಗುರುವಾದಡೂ | ಚರಸೇವೆಯ ಮಾಡಬೇಕು ||
ಲಿಂಗವಾದಡೂ | ಚರ ಸೇವೆಯ ಮಾಡಬೇಕು ||
ಜಂಗಮವಾದಡೂ | ಚರಸೇವೆಯ ಮಾಡಬೇಕು ||
ಚೆನ್ನಬಸವಣ್ಣಪ್ರಿಯ | ಚಂದೇಶ್ವರಲಿಂಗದ ಅರಿವು ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1334 / ವಚನ ಸಂಖ್ಯೆ-1305)

ಈ ವಚನ ಗುರು, ಲಿಂಗ, ಜಂಗಮ ಯಾರಾದರೂ ಸರಿ ಕಾಯಕ ಸೇವೆಯನ್ನು ಕಡ್ಡಾಯ ಮಾಡಲೇಬೇಕು ಎಂದು ಸಾರುತ್ತದೆ. ಭಾವಶುದ್ಧವಾಗಿ ಮಾಡುವುದೇ ನಿಜ ಕಾಯಕ. ಕಾಯಕದಿಂದ ಬಂದುದು ಮಾತ್ರ ಲಿಂಗಾರ್ಪಿತವೆಂಬ ಮಾತುಗಳಲ್ಲಿ ನುಲಿಯ ಚಂದಯ್ಯನವರ ಕಾಯಕದ ಪರಿಕಲ್ಪನೆ ಸ್ಪಷ್ಟವಾಗಿ ನಿರೂಪಿತವಾಗಿದೆ. ಬಸವ ಪುರಾಣ ಮತ್ತು ಶೂನ್ಯ ಸಂಪಾದನೆಗಳಲ್ಲಿ ‘ಕಳಚಿ ಬಿದ್ದ ಇಷ್ಟಲಿಂಗದ ಕೈಯಿಂದಲೇ ಹಗ್ಗ ಮಾರುವ ಕಾಯಕ ಮಾಡಿಸಿದ ಗಟ್ಟಿಗ’ ಶರಣ ನುಲಿಯ ಚಂದಯ್ಯ ಎಂಬ ಕಲ್ಪನಾತೀತ ವರ್ಣನೆ ಬಂದಿದೆ. ಈ ಪ್ರಕರಣ ನಡೆದಿದೆ ಅಥವಾ ನಡೆದಿಲ್ಲಾ ಎನ್ನುವ ಬಗ್ಗೆ ಬಸವ ತತ್ವದ ವಿವೇಚನೆ ಇದ್ದರೂ ನುಲಿಯ ಚಂದಯ್ಯನವರ ಕಾಯಕ ನಿಷ್ಠೆ ಉಪಮಾತೀತ. ಅವರು ಬಸವಣ್ಣನವರ ಬಗ್ಗೆ ಅಪಾರ ಭಕ್ತಿ -ಗೌರವ ಇಟ್ಟುಕೊಂಡಿದ್ದರು. ಬಸವಣ್ಣನವರ ಬಗ್ಗೆ ತಮ್ಮ ಮೂರು ವಚನಗಳಲ್ಲಿ ಪ್ರಸ್ತಾಪ ಮಾಡುತ್ತಾರೆ.

ಗುರುವ ಕುರಿತು | ಮಾಡುವಲ್ಲಿ ||
ಬ್ರಹ್ಮನ ಭಜನೆಯ | ಹರಿಯಬೇಕು ||
ಲಿಂಗವ ಕುರಿತು | ಮಾಡುವಲ್ಲಿ ||
ವಿಷ್ಣುವಿನ ಸಂತೋಷಕ್ಕೆ | ಸಿಕ್ಕದಿರಬೇಕು ||
ಜಂಗಮವ ಕುರಿತು | ಮಾಡುವಲ್ಲಿ ||
ರುದ್ರನ ಪಾಶವ | ಹೊದ್ದದಿರಬೇಕು ||
ಒಂದನರಿದು | ಒಂದ ಮರೆದು ||
ಸಂದಿಲ್ಲದ ಸುಖ | ಜಂಗಮ ದಾಸೋಹದಲ್ಲಿ ||
ಸಂಗನ ಬಸವಣ್ಣ ನಿತ್ಯ | ಚಂದೇಶ್ವರಲಿಂಗಕ್ಕೆ ತಲುಪಿ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1333 / ವಚನ ಸಂಖ್ಯೆ-1292)

ಗುರುವಿನ ವಿಸ್ತಾರ ಅರಿಯಬೇಕಾದರೆ ಅನ್ಯ ದೇವರ ಅಂದರೆ ಬ್ರಹ್ಮನ ವಿಚಾರವನ್ನು ಮನಃಪಟಲದಿಂದ ದೂರ ಸರಿಸಬೇಕು. ಲಿಂಗದ ಸೇವೆ ಅಂದರೆ ಅಂತರಂಗದ ಅರಿವು ಮತ್ತು ಬಹಿರಂಗದ ನಿಲುವನ್ನು ಸಾಕಾರಗೊಳಿಸಲು ವಿಷ್ಣುವಿನ ಸಂತೋಷ ಅಂದರೆ ಅರಿಷಡ್ವರ್ಗಗಳ ಪರಿಣಾಮಕ್ಕೆ ಒಳಗಾಗಬಾರದು. ಜಂಗಮ ಅಂದರೆ ಸಮಷ್ಠೀ ಪ್ರಜ್ಞೆಯ ಅರಿವು ಮೂಡಿಸುವಾಗ ರುದ್ರನ ಪಾಶ ಅಂದರೆ ಈ ಜನ್ಮ ಇಲ್ಲಿಯೇ ಮುಗಿಯುವುದು ಎನ್ನುವ ಭಾವದಿಂದ ಸೇವೆ ಮಾಡಬೇಕು. ಲಿಂಗಾಂಗ ಸಾಮರಸ್ಯದ ಕುರುಹಿನ ಮೂರ್ತಿ ಬಸವಣ್ಣನವರನ್ನು ದಾಸೋಹಂ ಭಾವದಿಂದ ನೋಡ ಬಯಸುತ್ತಾರೆ ನುಲಿಯ ಚಂದಯ್ಯ. ಈ ಮೂಲಕ ಬಸವಣ್ಣನವರ ವ್ಯಕ್ತಿತ್ವದಲ್ಲಿ ದಾಸೋಹ ಭಾವ ಎಂತಹದ್ದು ಎನ್ನುವುದಕ್ಕೆ ಬಸವಣ್ಣನವರಲ್ಲಿ ಚಂದೇಶ್ವರಲಿಂಗವನ್ನು ಕಾಣುತ್ತಾರೆ.

ಎನ್ನಂಗದ ಸತ್ಕ್ರೀ | ಸಂಗನ ಬಸವಣ್ಣನು ||
ಎನ್ನ ಲಿಂಗದ ಸತ್ಕ್ರೀ | ಚೆನ್ನಬಸವಣ್ಣನು ||
ಎನ್ನ ಅರುಹಿನ ಸತ್ಕ್ರೀ | ಪ್ರಭುವೇ ನೀವು ನೋಡಾ ||
ಎನ್ನ ದಾಸೋಹದ ನೈಷ್ಠೆಯೇ | ಮಡಿವಾಳಯ್ಯನು ||
ಇಂತೀ ಅಂಗ ಲಿಂಗ | ಜ್ಞಾನ ದಾಸೋಹ ||
ಇವು ಮುಂತಾದವೆಲ್ಲವೂ | ನಿಮ್ಮ ಪುರಾತನರಾದ ಕಾರಣ ||
ಚಂದೇಶ್ವರಲಿಂಗದಲ್ಲಿ | ಚೆನ್ನಬಸವಣ್ಣನ ಕೃಪೆಯಿಂದ ||
ನಿಮ್ಮ ಶ್ರೀಪಾದವ | ಬೆರೆಸಿದೆನಯ್ಯಾ ಪ್ರಭುವೇ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1333 / ವಚನ ಸಂಖ್ಯೆ-1288)
ಎನ್ನ ಸತ್ಕ್ರೀ | ಸಂಗನಬಸವಣ್ಣ ||
ಎನ್ನ ಸುಜ್ಞಾನವೇ | ಚೆನ್ನಬಸವಣ್ಣ ||
ಈ ಎರಡರ ಏಕೀಭಾವವೇ | ಪ್ರಭುವೇ ನೀವು ನೋಡಾ ||
ನಿಮ್ಮೆಲ್ಲರ ನೈಷ್ಠೆಯೇ | ಮಡಿವಾಳಯ್ಯನು ||
ಇಂತೀ ಚತುರ್ವಿಧವೆನಗೆ | ಬೇಕಾದ ಕಾರಣ ||
ಇಷ್ಟಲಿಂಗದ ಸೇವೆ | ಚರಲಿಂಗದ ದಾಸೋಹವೆಂಬುದನು ||
ಬಸವಣ್ಣಪ್ರಿಯ | ಚಂದೇಶ್ವರಲಿಂಗದಲ್ಲಿ ||
ಚೆನ್ನಬಸವಣ್ಣನ ಕೈಯಲ್ಲಿ | ಎನಗೆ ತಿಳುಹಿಕೊಡಾ ಪ್ರಭುವೇ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1333 / ವಚನ ಸಂಖ್ಯೆ-1289)

ಮೇಲಿನ ಎರಡೂ ವಚನಗಳಲ್ಲಿ ಪುರಾತನರು ಅಂದರೆ ಪೂರ್ವಜರು ಮತ್ತು ಪಂಚಭೂತಗಳನ್ನು ಹಾಗೂ ಪಂಚತತ್ವಗಳನ್ನೊಳಗೊಂಡಂತೆ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ ಪ್ರಭು ಮತ್ತು ಮಡಿವಾಳ ಮಾಚಿದೇವರನ್ನು ನೆನೆಯುತ್ತಾರೆ. ಎನ್ನಂಗದ ಸತ್ಕ್ರೀ ಎನ್ನುವಲ್ಲಿ ನಮ್ಮಿಂದ ಅಗುವ ಎಲ್ಲ ಸತ್ಯನಿಷ್ಠ ಕರ್ಮ ಕಾಯಕಗಳಿಗೆ ಬಸವಣ್ಣನವರಿಗೆ, ಸತ್ಯನಿಷ್ಠ ಆಚಾರ ವಿಚಾರಗಳನ್ನು ಚೆನ್ನಬಸವಣ್ಣನವರಿಗೆ, ಅಂತರಂಗದ ನಿಜದ ಅರಿವನ್ನು ಅಲ್ಲಮಪ್ರಭುವಿಗೆ ಮತ್ತು ದಾಸೋಹದ ಪರಿಕಲ್ಪನೆಯ ಸದ್ಗುಣಗಳನ್ನು ವೀರಗಣಾಚಾರಿ ಮಡಿವಾಳ ಮಾಚಿದೇವರಿಗೆ ಅರ್ಪಿಸುತ್ತಾರೆ. ಶರಣ ಭಾವದ ಸದ್ಗುಣಗಳೆಲ್ಲ ಈ ನಾಲ್ವರಿಂದ ಮತ್ತು ಸಕಲ ಹಿರಿಯರಿಂದ ಪಡೆದೆನು ಎನ್ನುವಲ್ಲಿ ಸದ್ಗುಣಗಳ ಅರಿವನ್ನು ಪಡೆಯುವ ಹಂಬಲಕ್ಕೆ ಹೊಸ ಭಾಷ್ಯ ಬರೆಯುತ್ತಾರೆ.

ಕಲ್ಯಾಣ ಕ್ರಾಂತಿಯ ವಿಷಯ ತಿಳಿದು ಉಳುವಿಗೆ ಬಂದಾಗ ಅಷ್ಟರಲ್ಲಿ ಅನೇಕ ಶರಣರು ಲಿಂಗೈಕ್ಯರಾಗಿರುತ್ತಾರೆ. ಉಳಿದ ಚೆನ್ನಬಸವಣ್ಣ, ಹಡಪದ ರೇಚಣ್ಣ ಮುಂತಾದವರನ್ನು ಉಳುವಿಯಲ್ಲಿಯೇ ಬಿಟ್ಟು ಅಕ್ಕ ನಾಗಲಾಂಬಿಕೆಯವರನ್ನು ಕರೆದುಕೊಂಡು ಈಗಿನ ಶಿವಮೊಗ್ಗ ಜಿಲ್ಲೆಯ ತುಂಗಾ ನದಿಯ ಪ್ರದೇಶಕ್ಕೆ ಹೋಗುತ್ತಾರೆ. ನಾಗಲಾಂಬಿಕೆಯವರನ್ನು ತರೀಕೆರೆ ಸಮೀಪದ ‘ಎಣ್ಣೆಹೊಳೆ’ ಎನ್ನುವ ಗ್ರಾಮದಲ್ಲಿ ನೆಲೆ ನಿಲ್ಲಲು ಸಹಾಯ ಮಾಡುತ್ತಾರೆ. ಆ ಗ್ರಾಮದ ಸಿದ್ಧವೀರಸ್ವಾಮಿ ಎನ್ನುವವರು ನಾಗಲಾಂಬಿಕೆಯವರಿಗೆ ಒಂದು ಮಠ ಕಟ್ಟಿಸಿ ಕೊಡುತ್ತಾರೆ. ಅಕ್ಕ ನಾಗಲಾಂಬಿಕೆಯ ಲಿಂಗೈಕ್ಯದ ಬಳಿಕ ನುಲಿಯ ಚಂದಯ್ಯ ಪದ್ಮಾವತಿ (ಈಗಿನ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಮೀಪವಿರುವ ‘ಆರ್. ನುಲೇನೂರು’ ಎನ್ನುವ ಗ್ರಾಮ) ಎನ್ನುವ ಗ್ರಾಮಕ್ಕೆ ಬರುತ್ತಾರೆ. ದುಮ್ಮಿರಾಯನ ಪತ್ನಿ ಪದ್ಮಾವತಿ ಚಂದಯ್ಯನವರಿಂದ ಧರ್ಮೋಪದೇಶ ಪಡೆದು ಒಂದು ಕೆರೆ ಕಟ್ಟಿಸುತ್ತಾರೆ. ಆ ಕೆರೆ ದಂಡೆಯ ಮೇಲೆ ಒಂದು ಮಠವಿದೆ. ಅಲ್ಲಿ ಚಂದಯ್ಯನವರು ತಮ್ಮ ಜೀವನದ ಕೊನೆಯವರೆಗೂ ಅನುಭಾವ ಗೋಷ್ಠಿ ನಡೆಸುತ್ತಿದ್ದರೆಂದು ತಿಳಿದು ಬರುತ್ತದೆ. ಅವರ ಜ್ಞಾಪಕಾರ್ಥವಾಗಿ ಪದ್ಮಾವತಿ ಎಂಬ ಊರನ್ನು ‘ನುಲೇನೂರು’ ಎಂದು ಕರೆಯಲಾರಂಭಿಸಿದರು. ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿನ ಕಲ್ಲು ಮಂಟಪ (ಗಗ್ಗರಿ ಮಂಟಪ) ದಲ್ಲಿ ಹಲವಾರು ಶರಣರ ಜೊತೆಗೆ ನುಲಿಯ ಚಂದಯ್ಯನವರ ಮೂರ್ತಿಯನ್ನೂ ವಚನಾಂಕಿತದೊಂದಿಗೆ ಕೆತ್ತಲಾಗಿದೆ.

ಅಕ್ಕಸಾಲಿಗ: ಹಾವಿನಹಾಳ ಕಲ್ಲಯ್ಯ

ಪರಮ ಪದವಿಯ | ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ ||
ಪರಮ ಪದವಿಯ | ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ ||
ಎನಗೆ ನಿಮ್ಮ ತೊತ್ತು | ಸೇವೆಯೆ ಸಾಕು ||
ಮಹಾಲಿಂಗ ಕಲ್ಲೇಶ್ವರಾ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1749 / ವಚನ ಸಂಖ್ಯೆ-1161)

ಚಿನ್ನದೊಂದಿಗೆ ತಮ್ಮ ಕಾಯಕವನ್ನು ತಳುಕು ಹಾಕಿಕೊಂಡು ಬದುಕು ಕಟ್ಟಿಕೊಂಡು ಬೆಳೆದು ಬಂದ ಆಯಗಾರರೇ ಅಕ್ಕಸಾಲಿಗರು. ಅರ್ಕಶಾಲಿ ಎನ್ನುವುದರ ರೂಪಾಂತರ ಶಬ್ದವೇ ಅಕ್ಕಸಾಲಿಗ. ಪ್ರಪಂಚದ ಅತ್ಯಂತ ಪ್ರಾಚೀನ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯ ಅಕ್ಕಸಾಲಿಗರದ್ದು. ಇವರನ್ನು ಸ್ವರ್ಣಕಾರ, ಸೋನಗಾರ, ಪತ್ತಾರ, ಚಿನಿವಾರ, ಏರಣಿಗ, ವಾಜ, ಗೋಲ್ಡ್ ಸ್ಮಿಥ್, ಸಿಲ್ವರ್ ಸ್ಮಿಥ್ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಅಕ್ಕಸಾಲಿಗ ಆಯಗಾರರರಲ್ಲಿ ಇಬ್ಬರು ಪ್ರಮುಖ ವಚನಕಾರರ ಉಲ್ಲೇಖ ಬರುತ್ತದೆ. ಒಬ್ಬರು ಕಿನ್ನರಿ ಬ್ರಹ್ಮಯ್ಯ ಇನ್ನೊಬ್ಬರು ಹಾವಿನಹಾಳ ಕಲ್ಲಯ್ಯ. ಬಸವಣ್ಣನವರ ಸಮಕಾಲೀನರಾದ ಇವರು ಅನುಭವ ಮಂಟಪದ 770 ಅಮರಗಣಂಗಳಲ್ಲಿ ಇದ್ದವರು. ಬಸವ ಪುರಾಣ, ಹರಹರ ರಗಳೆ, ಶೂನ್ಯ ಸಂಪಾದನೆ ಮುಂತಾದ ಗ್ರಂಥಗಳಲ್ಲಿ ಇವರನ್ನು ಪವಾಡ ಪುರುಷರಂತೆ ಚಿತ್ರಿಸಿದ್ದಾರೆ. ಸತ್ಯನಿಷ್ಠ ಕಾಯಕ, ನಿಷ್ಕಾಮ ದಾಸೋಹ ಮತ್ತು ಇಷ್ಟಲಿಂಗ ಪೂಜೆಯನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ನುಡಿದಂತೆ ನಡೆದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಾವಿನಹಾಳ ಗ್ರಾಮದ ಅಕ್ಕಸಾಲಿಗ ಶಿವನಯ್ಯ (ಶಿವನೋಜ, ಶಿವಯ್ಯ) ಮತ್ತು ಸೋಮವ್ವೆಯರ ಮಗ ಕಲ್ಲಯ್ಯ. ಹಾವಿನಹಾಳ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನವಿದೆ. ಈ ಗ್ರಾಮದ ಮೂಲಕ ಹಾವು ಹರಿದಾಡುವಂತೆ ಭಾಸವಾಗುವ ದೊಡ್ಡ ಹಳ್ಳ ಹಾಯ್ದು ಹೋಗಿದೆ. ಕಲ್ಲಯ್ಯನವರು ಊರಿನಲ್ಲಿದ್ದ ಕಲ್ಲೇಶ್ವರ ದೇವಸ್ಥಾನದಲ್ಲಿ ಏಕಾಂತವಾಗಿ ಧ್ಯಾನದಲ್ಲಿ ನಿರತರಾಗಿರುತ್ತಿದ್ದರು.

ಕಂಗಳು ತುಂಬಿ ನಿಮ್ಮುವ | ನೋಡುತ್ತ ನೋಡುತ್ತಲಯ್ಯಾ ||
ಕಿವಿಗಳು ತುಂಬಿ ನಿಮ್ಮುವ | ಕೇಳುತ್ತ [ಕೇಳುತ್ತ] ಲಯ್ಯಾ ||
ಮನತುಂಬಿ ನಿಮ್ಮುವ | ನೆನೆವುತ್ತ ನೆನೆವುತ್ತಲಯ್ಯಾ ||
ಮಹಾಲಿಂಗ ಕಲ್ಲೇಶ್ವರ | ದೇವರಲ್ಲಿ ಸುಖಿಯಾಗಿರ್ದೆನಯ್ಯ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1745 / ವಚನ ಸಂಖ್ಯೆ-1132)

ಏಕಾಂತದಲ್ಲಿರುತ್ತಿದ್ದ ಕಲ್ಲಯ್ಯನವರಿಗೆ ಸಾಂಸಾರಿಕ ಜೀವನದಲ್ಲಿ ವೈರಾಗ್ಯ ಮೂಡಿತ್ತೆಂದು ಕಾಣುತ್ತದೆ. ಇವರಿಗೆ ಮದುವೆ ಮಾಡಿದರೆ ಅನುಕೂಲ ಎಂದು ತಂದೆ ತಾಯಿ ಆಪೇಕ್ಷೆ ಪಡುತ್ತಾರೆ. ಆದರೆ ಕಲ್ಲಯ್ಯ ಮದುವೆ ನಿರಾಕರಿಸುತ್ತಾರೆ. ಗುರುಗಳ ಅವಶ್ಯಕತೆ ಅರಿತ ಕಲ್ಲಯ್ಯ ಸೊನ್ನಲಿಗೆಗೆ ಬರುತ್ತಾರೆ. ಶ್ರದ್ಧಾ ಭಕ್ತಿಯಿಂದ ಸೊನ್ನಲಿಗೆಯ ಸಿದ್ಧರಾಮೇಶ್ವರರ ಸನ್ನಿಧಾನದಲ್ಲಿ ಶಿವಚಿಂತನೆ, ಶಿವಾನುಭವ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು. ಹೀಗಿರಲು ಆ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಚನ್ನವ್ವಳೊಂದಿಗೆ ವಿವಾಹವಾಗುತ್ತದೆ. ಕಲ್ಲಯ್ಯ ಮತ್ತು ಚನ್ನವ್ವರಿಗೆ ಹೆಣ್ಣು ಮಗು ಆಗುತ್ತದೆ. ಈ ಮಗುವಿಗೆ ಕಲ್ಲವ್ವೆ ಎಂದು ಹೆಸರಿಡುತ್ತಾರೆ. ‘ಮಹಾಲಿಂಗ ಕಲ್ಲೇಶ್ವರ’ ಎಂಬ ವಚನಾಂಕಿತದಲ್ಲಿ ಕಲ್ಲಯ್ಯ 102 ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳಲ್ಲಿ ಅಷ್ಟಾವರಣ, ಪಂಚಾಚಾರ, ಅನುಭಾವಗಳು ನಿರೂಪಿತವಾಗಿವೆ. ಕಲ್ಯಾಣಕ್ಕೆ ಬಂದು ಶರಣ ಚಳುವಳಿಯಲ್ಲಿ ಭಾಗವಹಿಸಿದರೆಂದು ಉಲ್ಲೇಖಿಸಲಾಗಿದೆ. ಅವರ ಸಾಕಷ್ಟು ವಚನಗಳಲ್ಲಿ ಬಸವಣ್ಣನವರ ಗುಣಗಾನ ಮಾಡಿದ್ದನ್ನು ಕಾಣಬಹುದು.

ಬಯಲ ಬೊಮ್ಮವ | ನುಡಿವ ||
ಆ ನುಡಿಯ ಬಯಲ ಭ್ರಮೆಯಲ್ಲಿ | ಬಿದ್ದ ಜಡರುಗಳು ||
ಬಲ್ಲರೆ | ಶಿವನಡಿಗಳ? ||
ಗುರುಲಿಂದ ಜಂಗಮದ | ಪಾದೋದಕ ಪ್ರಸಾದವೆಂಬ ||
ಪರಮಾಮೃತವ | ಸವಿದು ||
ಪರವಶನಾದ | ಪರಮ ಮುಗ್ಧಂಗಲ್ಲದೆ ||
ಪರವು | ಸಾಧ್ಯವಾಗದು ||
ಮಹಾಲಿಂಗ ಕಲ್ಲೇಶ್ವರನ | ಶರಣ ||
ಪೂರ್ವಾಚಾರಿ || ಬಸವಣ್ಣಂಗಲ್ಲದೆ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1750 / ವಚನ ಸಂಖ್ಯೆ-1166)

ಹಾವಿನಹಾಳ ಕಲ್ಲಯ್ಯ ತಮ್ಮ ಜೀವನದ ಬಹುಪಾಲು ಕಾಲವನ್ನು ಸೊನ್ನಲಿಗೆಯಲ್ಲಿ ಕಳೆಯುತ್ತಾರೆ. ಅಲ್ಲೇ ಲಿಂಗೈಕ್ಯರಾಗುತ್ತಾರೆ. ಸಿದ್ಧರಾಮೇಶ್ವರ ದೇವಾಲಯ ಪ್ರಾಕಾರದಲ್ಲಿನ ಮಹಾಲಿಂಗ ಕಲ್ಲೇಶ್ವರ ದೇವಾಲಯ ಇವರ ಸಮಾಧಿ ಎಂದು ಗುರುತಿಸಲಾಗಿದೆ.

ಹೂಗಾರ ಮಾದಯ್ಯ – ಮಾದೇವಿ

ಶರಣರ ನೆನೆದಾರ | ಸರಗೀಯ ಇಟ್ಟಾಂಗ ||
ಅರಳು ಮಲ್ಲಿಗೆ | ಮುಡಿದ್ಹಾಂಗ ||
ಕಲ್ಯಾಣ ಶರಣರ | ನೆನೆಯೋ ನನ ಮನವೇ ||

ಜನಪದರು ಎಷ್ಟು ಸೊಗಸಾಗಿ ಶರಣರನ್ನು ನೆನೆದಿದ್ದಾರೆ. ಅವರಿಗೆ ಶರಣರನ್ನು ಕುರಿತು ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ.

ಕಾಯಕವೇ ಶಿವ ಭಕ್ತಿ | ಕಾಯಕವೇ ಶಿವ ಭಜನೆ ||
ಕಾಯಕವೇ ಲಿಂಗಪೂಜೆ | ಶಿವಪೂಜೆ ಶಿವಯೋಗ ||
ಕಾಯಕವೇ ಆಯಿತ್ತು | ಕೈಲಾಸ ||

ಕಾಯಕ ತತ್ವದಲ್ಲಿ ನಿಷ್ಠೆಯುಳ್ಳ ಶರಣ ದಂಪತಿಗಳಲ್ಲಿ ಹೂಗಾರ ಮಾದಯ್ಯ ಮತ್ತು ಮಾದೇವಿ ದಂಪತಿಗಳು ಸೇರಿದ್ದಾರೆ. ಇವರ ಜನ್ಮ ಸ್ಥಳದ ಬಗ್ಗೆ ಮಾಹಿತಿ ನನಗೆ ಲಭ್ಯವಾಗಿಲ್ಲ. ಉತ್ತರ ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿ ಹೂಗಾರ ಮನೆತನದವರು ಸಿಗುತ್ತಾರೆ. ಹೂವಿನ, ಮಾಲೆಗಾರ, ಸರವಂದಿಗ, ಪೂವಾಡಿಗ, ಫೂಲಮಾಲಿ, ಸಮಾಳದ, ವೀಣೇಕಾರ, ಗವಾಯಿ ಎಂಬ ಹೆಸರು ಚಾಲ್ತಿಯಲ್ಲಿದ್ದವು. ಗೌರವ ವಾಚಕಗಳಾದ ಜೀರ, ಗೊರವ ಎನ್ನುವ ಹೆಸರುಗಳೂ ಬಳಕೆಯಲ್ಲಿವೆ. ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೂಗಾರ (ಮಾಲೇಗಾರ) ರ ಆರಾಧ್ಯ ದೈವ ಮತ್ತು ಇಷ್ಟದೇವನಾದ ಬಾವಿಯ ಬೊಮ್ಮನನ್ನು ಉಲ್ಲೇಖ ಮಾಡಿದ್ದಾರೆ.

ಬಡಹಾರುವನೇಸು ಭಕ್ತನಾದಡೆಯೂ | ನೇಣಿನ ಹಂಗ ಬಿಡ ||
ಮಾಲೆಗಾರನೇಸು ಭಕ್ತನಾದಡೆಯೂ | ಬಾವಿಯ ಬೊಮ್ಮನ ಹಂಗು ಬಿಡ ||
ಬಣಜಿಗನೇಸು ಭಕ್ತನಾದಡೆಯೂ | ಒಟ್ಟಿಲ ಬೆನಕನ ಹಂಗ ಬಿಡ ||
ಕಂಚುಗಾರನೇಸು ಭಕ್ತನಾದಡೆಯೂ | ಕಾಳಿಕಾದೇವಿಯ ಹಂಗ ಬಿಡ ||
ನಾನಾ ಹಂಗಿನವನಲ್ಲ | ನಿಮ್ಮ ಶರಣರ ||
ಹಂಗಿನವನಯ್ಯಾ | ಕೂಡಲಸಂಗಮದೇವಾ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-44 / ವಚನ ಸಂಖ್ಯೆ-451)

ಸಮಾಜದಲ್ಲಿ ಜನನದಿಂದ ಮರಣದವರೆಗೂ ಹೂಗಾರರು ತಮ್ಮ ಪಾತ್ರ ನಿರ್ವಹಿಸುತ್ತಾರೆ. ಮದುವೆಗೆ ದಂಡೆ, ಬಾಸಿಂಗಗಳನ್ನೂ ಮಾಡುತ್ತಾರೆ. ರೈತರಿಗೂ ಹೂಗಾರರಿಗೂ ಅವಿನಾಭಾವ ಸಂಬಂಧ. ಬಿತ್ತುವ ಸಮಯದಲ್ಲಿ ಕೂರಿಗೆಗೆ ಮತ್ತು ಎತ್ತುಗಳಿಗೆ ಅಲಂಕಾರ ಮಾಡುವ ಹೂಗಾರರು ಸುಗ್ಗಿಯ ವೇಳೆಯಲ್ಲಿ ಕಣಕ್ಕೆ ಹೂವಿನಿಂದ ಅಲಂಕಾರ ಮಾಡುತ್ತಾರೆ. ಕಲ್ಯಾಣದಲ್ಲಿ ಅನುಭವ ಮಂಟಪದ ಹತ್ತಿರ ಬಿಲ್ವಪತ್ರಿ ವನವಿತ್ತು. ಜಾನಪದರು ಹೇಳುವಂತೆ “ಶಿವಪೂಜೆ ಮಾಡೂದಕ ಮೂಗಂಡ ಹೂಬೇಕ ಬೇಲಪತ್ರಿ ಬೇಕ ನಿತ್ಯದಲಿ” ಬೆಳಗಿನ ಜಾವದಲ್ಲಿ ಕಲ್ಯಾಣದಲ್ಲಿ ಶರಣರ ಮನೆ ಮನೆಗೆ ಸುತ್ತಾಡಿ ಹೂ-ಪತ್ರೆ ತಲುಪಿಸುವ ಕಾಯಕ ಅವರದಾಗಿತ್ತು. ಪ್ರತಿ ದಿನ ಹೂ ಕಟ್ಟುವಾಗ ವಚನಗಳನ್ನು ಓದುವ ಹವ್ಯಾಸವನ್ನಿಟ್ಟುಕೊಂಡಿದ್ದರು. ಈ ದಂಪತಿಗೆ ಲಿಂಗಣ್ಣನೆಂಬ ಮಗನಿದ್ದನೆಂದು ತಿಳಿದು ಬರುತ್ತದೆ. ಸಕಳೇಶ ಮಾದರಸರನ್ನು ತಮ್ಮ ಗುರುವೆಂದು ಭಾವಿಸಿದ್ದರು. ಬಸವ ಕಲ್ಯಾಣದಲ್ಲಿಯೇ ಈ ಶರಣ ದಂಪತಿಗ ಐಕ್ಯರಾಗಿದ್ದಾರೆ. ಅನಂತ ಹುಣ್ಣಿಮೆಯಂದು ಇವರ ಜಯಂತಿ ಆಚರಿಸಲಾಗುತ್ತದೆ.

ಕುಂಬಾರ ಗುಂಡಯ್ಯ

ಶಾಸನಗಳ ಪ್ರಕಾರ ಭಲ್ಲೂನಗರ, ಭಲ್ಲೂ, ಭಾಲಿಕ, ಭಾಲಕ ಎಂದು ಕರೆಯಲ್ಪಡುವ ಬೀದರ ಜಿಲ್ಲೆಯ ಭಾಲ್ಕಿ ಕುಂಬಾರ ಗುಂಡಯ್ಯನವರ ಜನ್ಮಸ್ಥಳ. ಕುಂಬಾರ ಗುಂಡಯ್ಯನವರ ತಂದೆ ಸತ್ಯಣ್ಣ ಮತ್ತು ತಾಯಿ ಸಂಗಮ್ಮ. ಅವರ ಮಡದಿ ಕೇತಲಾದೇವಿ. ಇವರಿಗೊಬ್ಬಳು ನೀಲಲೋಚನೆ ಎಂಬ ಸಹೋದರಿ ಇದ್ದಳು. ಬ್ರಹ್ಮಯ್ಯನ ಸಹೋದರಿ ಕೇತಲಾದೇವಿ ಗುಂಡಯ್ಯನವರ ಪತ್ನಿ. ಕೇತಲಾದೇವಿಯವರು ಬರೆದ ವಚನಗಳು ಲಭ್ಯವಾಗಿವೆ. ಗುಂಡಯ್ಯನವರ ತಂಗಿ ನೀಲಲೋಚನೆಯನ್ನು ಬ್ರಹ್ಮಯ್ಯನವರು ವಿವಾಹ ಆಗಿದ್ದರೆಂದು ತಿಳಿದು ಬರುತ್ತದೆ. ಮರಡೀಪುರ ಶಾಸನದಲ್ಲಿ ಗುಂಡಯ್ಯನವರ ಬಗ್ಗೆ ಉಲ್ಲೇಖವಿದೆ. ಅಬ್ಬಲೂರು ಸೋಮೇಶ್ವರ ದೇವಾಲಯದಲ್ಲಿ ‘ಕುಂಬಾರ ಗುಂಡನ ಮುಂದೆ ಬಂದಾಡಿದ ನಮ್ಮ ಶಿವನು’ ಎಂಬ ಬರಹವಿದ್ದು ಅದರ ಕೆಳಗೆ ಗಡಿಗೆ ಬಾರಿಸುತ್ತ ಕುಳಿತ ಗುಂಡಯ್ಯನವರ ವಿಗ್ರಹ ಕೆತ್ತಲಾಗಿದೆ.

ಕಾಯಕವೇ ಶಿವಭಕ್ತಿ | ಕಾಯಕವೆ ಶಿವಭಜನೆ ||
ಕಾಯಕವೆ ಲಿಂಗ | ಶಿವಪೂಜೆ ಶಿವಯೋಗ ||
ಕಾಯಕವೆ ಕಾಯ್ವ | ಕೈಲಾಸ ||
ಬೇಡೆನಗೆ ಕೈಲಾಸ | ಬಾಡುವುದು ಕಾಯಕವು ||
ನೀಡೆನಗೆ | ಕಾಯಕವ ||
ಕುಣಿದಾಡಿ ನಾಡ | ಹಂದರಕೆ ಹಬ್ಬಿಸುವೆ ||

ಕುಂಬಾರ ಗುಂಡಯ್ಯನ ಕುರಿತ ಈ ವಿವರಣೆ ಸಿಗುವುದು ಜನಪದ ಕವಿ ಸಾವಳಿಗೇಶನ ಕೃತಿಯಲ್ಲಿ. ಕುಂಬಾರ ಗುಂಡಯ್ಯನವರು ಕೈಲಾಸವನ್ನೂ ನಿರಾಕರಿಸಿ ನನಗೆ ಕಾಯಕವೇ ಇರಲಿ ಎನ್ನುತ್ತಾರೆ. ಹರಿಹರ ಕವಿ ಬರೆದ ‘ಕುಂಬಾರ ಗುಂಡಯ್ಯನ ರಗಳೆ’ಯಲ್ಲಿಯೂ ಇಂತಹ ಅನೇಕ ಪ್ರಸ್ತಾಪಗಳು ಬರುತ್ತವೆ. ಕುಂಬಾರ ಗುಂಡಯ್ಯನವರನ್ನು ಕುರಿತು ಜನಪದ ವಿದ್ವಾಂಸರಾದ ಡಾ. ಬಿ.ಎಸ್. ಗದ್ದಗಿಮಠ ತಮ್ಮ ಸಂಶೋಧನೆಯ ಪುಸ್ತಕ ‘ಜನಪದ ಕಾವ್ಯ’ದಲ್ಲಿ ಚಿತ್ರಿಸಿದ್ದಾರೆ.

ಅನುಭಾವ ಆವಿಗೆಗೆ | ಕನಲೆಂಬ ಕಿಚ್ಚಿಟ್ಟು ||
ತಣಿವಂತೆ ಸುಡಲು | ಶಿವಭಕ್ತಿ ಮಡಿಕೆಗಳ ||
ದಣುವಾರಿಹೋಯ್ತು | ಕಾಯಕದ ||
ಹರುಷದಲಿ ಗಡಿಗೆಗಳ | ಶರಣರಿಗೆ ಮಾರುತಲಿ ||
ಸರಸದಲಿ ಇದ್ದ | ಸತಿಯೊಡನೆ ಗುಂಡಯ್ಯ ||
ಸರಿಯಾರು ಶಿವನೆ | ಶರಣರಿಗೆ ||

ಕುಂಬಾರ ಗುಂಡಯ್ಯ ಬಸವಣ್ಣನವರ ಸಮಕಾಲೀನರೋ ಎನ್ನುವುದು ಖಚಿತವಾಗಿ ತಿಳಿದು ಬಂದಿಲ್ಲ. ಆದರೆ ಅಂಬಿಗರ ಚೌಡಯ್ಯ, ಸಿದ್ಧರಾಮೇಶ್ವರ, ಜೇಡರ ದಾಸಿಮಯ್ಯನವರ ವಚನಗಳಲ್ಲಿ ಇವರ ಪ್ರಸ್ತಾಪ ಬಂದಿರುವುದರಿಂದ ಬಸವಣ್ಣನವರ ಸಮಕಾಲೀನರು ಎಂದು ಗುರುತಿಸಬಹುದು. ಗುಂಡಯ್ಯನವರ ಘನ ವ್ಯಕ್ತಿತ್ವಕ್ಕೆ ಸಿದ್ದರಾಮೇಶ್ವರರ ಈ ವಚನವೇ ಸಾಕ್ಷಿ.

ಕುಂಬಾರರೆಲ್ಲರು | ಗುಂಡಯ್ಯನಾಗಬಲ್ಲರೆ ||
ಮಡಿವಾಳರೆಲ್ಲರು | ಮಾಚಯ್ಯನಾಗಬಲ್ಲರೆ ||
ಜೇಡರೆಲ್ಲರು | ದಾಸಿಮಯ್ಯನಾಗಬಲ್ಲರೆ ||
ಎನ್ನ ಗುರು | ಕಪಿಲಸಿದ್ಧಮಲ್ಲೇಶ್ವರಯ್ಯಾ ||
ಪ್ರಾಣಿಗಳ ಕೊಂದು | ಪರಿಹರಿಸಬಲ್ಲಡೆ ||
ತೆಲುಗ | ಜೊಮ್ಮಯ್ಯನಾಗಬಲ್ಲರೆ ||

ವೀರ ಗಣಾಚಾರಿ ಅಂಬಿಗರ ಚೌಡಯ್ಯನವರ ಈ ಒಂದು ವಚನದಲ್ಲಿ ಕುಂಬಾರ ಗುಂಡಯ್ಯನವರ ವರ್ಣನೆಯಿದೆ:

[ನಂಬಿಯಣ್ಣ] ಮಾಡುವ ಭಕ್ತಿ | ನಾಡೆಲ್ಲ ಮಾಡಬಹುದಯ್ಯಾ ||
ಕುಂಬಾರ ಗುಂಡಯ್ಯ ಮಾಡುವ ಭಕ್ತಿ | ಊರೆಲ್ಲಾ ಮಾಡಬಹುದಯ್ಯಾ ||
ಬಸವಣ್ಣ ಮಾಡುವ ಭಕ್ತಿ | ಶಿಶುವೆಲ್ಲ ಮಾಡಬಹುದಯ್ಯಾ ||
ಇದೇನು ದೊಡ್ಡಿತ್ತೆಂಬರು | ಸರ್ವರಿಗೆ ವಶವಾಗದ ಭಕ್ತಿ ||
ಅವರ ಮನ-ಜ್ಞಾನದಂತೆ | ಇರಲಿ ಶರಣಾರ್ಥಿ ||
ಈ ವಸುಧೆಯೊಳಗೆ | ಶುದ್ಧಭಕ್ತಿಯನರಿತು ||
ನಡೆದುದು ಬಟ್ಟೆಯಾಗದೆ | ನುಡಿದುದು ಶುದ್ಧಿಯಾಗದೆ ||
ದೇಹಕ್ಕೆ ಕಷ್ಟ-ನಷ್ಟ | ರೋಗ-ರುಜೆಗಳು ಬಂದು ||
ಅಟ್ಟಿ ಮುಟ್ಟಿದವನಾಗಿ | ಧೃಢವಾಗಿದ್ದು ||
ಶರಣನ ಮನವು | ನಿಶ್ಚಯಿಸಿ ||
ಧೃಢಶೀಲಂಗಳಂ | ಬಿಡದೆ ನಡೆವಾತ ||
ದೊಡ್ಡ ಭಕ್ತನೆಂದಾತ ನಮ್ಮ | ಅಂಬಿಗರ ಚೌಡಯ್ಯ ||

ಹಾಗೆಯೇ ಜೇಡರ ದಾಸಿಮಯ್ಯ ತಮ್ಮ ಒಂದು ವಚನದಲ್ಲಿ ಕುಂಬಾರ ಗುಂಡಯ್ಯನನ್ನು ನೆನೆಸಿಕೊಂಡಿದ್ದಾರೆ:

ನಂಬಿದ ಚೆನ್ನನ | ಅಂಬಲಿಯನುಂಡ ||
ಕೆಂಭಾವಿ ಭೋಗಯ್ಯನ | ಹಿಂದಾಡಿ ಹೋದ ||
ಕುಂಭದ ಗತಿಗೆ | ಕುಕಿಲಿರಿದು ಕುಣಿದ ||
ನಂಬದೇ ಕರೆದವರ | ಹಂಬಲನೊಲ್ಲನೆಮ್ಮ ರಾಮನಾಥ ||

ಕುಂಬಾರ ಗುಂಡಯ್ಯ ಬರೆದ ವಚನಗಳು ಇದೂವರೆಗೂ ಲಭ್ಯವಾಗಿಲ್ಲ. ಕಾಯಕವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ಜೀವಿಸಿದ ಶರಣ ಕುಂಬಾರ ಗುಂಡಯ್ಯನವರು ಹುಟ್ಟೂರಾದ ಭಾಲ್ಕಿಯಲ್ಲಿಯೇ ಲಿಂಗೈಕ್ಯರಾದರೆಂದು ತಿಳಿದುಬರುತ್ತದೆ.

Previous post ಹೀಗೊಂದು ಸಂವಾದ…
ಹೀಗೊಂದು ಸಂವಾದ…
Next post ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ

Related Posts

ತತ್ವಪದಕಾರರ  ಸಾಮರಸ್ಯ ಲೋಕ
Share:
Articles

ತತ್ವಪದಕಾರರ ಸಾಮರಸ್ಯ ಲೋಕ

September 6, 2023 ಮೀನಾಕ್ಷಿ ಬಾಳಿ
ಭಂವಸೈ ಆಡಿದೆನಾ ಮೋಹರಮ್ಮಕ ಆಲಾಯಿ ಆಡಿದೆನಾ ಮೋಹರಮ್ಮಕ ಭವ ಎಂಬ ಭಂವಸೈ ಅರುವಿನ ಆಲಾಯಿ ಮೂರು ಕೂಡಿದಲೇ ಮೊಹರಂ ಮಾಡಿದೆನಾ || ಪ || ತನು ಮಸೂತಿಯೊಳು ನಾ ಪಂಚ ತತ್ವ ಪಂಜೆಯ...
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
Share:
Articles

ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2

July 21, 2024 ಪದ್ಮಾಲಯ ನಾಗರಾಜ್
ಐದು ಮನವ ಕುಟ್ಟಿ ಒಂದು ಮನವ ಮಾಡು, ಕಂಡಾ ಮದವಳಿಗೆ! ಇದು ನಮ್ಮ ಬಾಳುವೆ, ಮದವಳಿಗೆ! ಇದು ನಮ್ಮ ವಿಸ್ತಾರ, ಮದವಳಿಗೆ! ಮದವಳಿದು ನಿಜವುಳಿದ ಬಳಿಕ ಅದು ಸತ್ಯ ಕಾಣಾ,...

Comments 8

  1. Shubha
    May 11, 2023 Reply

    ಅರ್ಥಪೂರ್ಣ ಲೇಖನ.. ಧನ್ಯವಾದಗಳು

  2. Dr.maitreyini gadigeppagoudar
    May 17, 2023 Reply

    ಅತ್ಯುತ್ತಮ ಲೇಖನ

  3. ಗೌರೀಶ ತಾಳೆಕೊಪ್ಪ
    May 29, 2023 Reply

    ಆಯಗಾರರ ನೆರವಿಲ್ಲದೆ ಸುಸ್ಥಿರವಾದ ಸಮಾಜ ಕಟ್ಟುವುದಕ್ಕೆ ಆಗುವುದಿಲ್ಲ. ಕಲ್ಯಾಣದ ಶರಣರ ಸಂಘಟನೆಯ ಒಳನೋಟ ನೀಡುವ ಲೇಖನ.

  4. ಶಿವಶಂಕರಪ್ಪ ಯಡಿಯೂರು
    May 29, 2023 Reply

    ಶರಣರ ಸಂಕ್ಷಿಪ್ತ ವಿವರಣೆಗಳು ಇಷ್ಟವಾದವು, ಶ್ರಮ ಸಂಸ್ಕೃತಿಯ ಶರಣ ಪರಂಪರೆಯನ್ನು ತೋರಿಸಿದ ಬರಹ ಚೆನ್ನಾಗಿ ಮೂಡಿಬಂದಿದೆ.

  5. Halappa Beluru
    May 29, 2023 Reply

    ನುಲಿಯ ಚಂದಯ್ಯ, ಹೂಗಾರ ಮಾದಯ್ಯ- ಮಾದೇವಿ, ಕುಂಬಾರ ಗುಂಡಯ್ಯ, ಹಾವಿನಹಾಳ ಕಲ್ಲಯ್ಯ- ತಮ್ಮತಮ್ಮ ಕಾಯಕಗಳಲ್ಲಿಯೇ ಪರಮಾರ್ಥವನ್ನು ಕಂಡು ಹೇಳಿದ ವಚನಗಳನ್ನು ಓದಿ ಆಶ್ಚರ್ಯ, ಸಂತೋಷಗಳಾದವು. ವಚನಗಳ ಮೂಲಕವೇ ಕಾಯಕ ಯೋಗಿಗಳ ಪರಿಚಯ ಸೊಗಸಾಗಿದೆ.

  6. ವಿಜಯಶ್ರೀ ಸೊರಬ
    May 29, 2023 Reply

    ಜಾನಪದ ಹಾಡುಗಳಲ್ಲಿ ಶರಣರ ಹೆಸರುಗಳು ಪದೆ ಪದೇ ಪ್ರಸ್ತಾಪವಾಗಿರುವುದನ್ನ ಗಮನಿಸಿದರೆ ಜನ ಮಾನಸದ ಮೇಲಿನ ಬಸವಣ್ಣನವರ ಪ್ರಭಾವ ಅಸಾಮಾನ್ಯವಾಗಿದೆ. ಪ್ರೀತಿಯಿಂದ ಜನಸಾಮಾನ್ಯರು ಕಲ್ಯಾಣದ ಸೊಬಗನ್ನು ಕೊಂಡಾಡಿದ್ದಾರೆ…..

  7. Devappa Jalaki
    May 29, 2023 Reply

    ಕಾಯಕವನ್ನೇ ದೈವವೆಂದು ಅಪ್ಪಿದವರ ಅದ್ಭುತ ಕತೆ ಕಲ್ಯಾಣದ ಕತೆ.

  8. ನವೀನ್ ಕರಡಗಿ
    May 30, 2023 Reply

    ಯಾರು ಏನೇ ಹೇಳಲಿ, ಕಾಯಕವನ್ನೇ ದೈವವೆಂದ ಬಸವಾದಿ ಶರಣರೇ ಅಂದಿಗೂ, ಇಂದಿಗೂ, ಎಂದೆಂದಿಗೂ ನನ್ನ ಹೀರೋಗಳು 🙏🏽

Leave a Reply to ವಿಜಯಶ್ರೀ ಸೊರಬ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
…ಬಯಲನೆ ಬಿತ್ತಿ
…ಬಯಲನೆ ಬಿತ್ತಿ
August 11, 2025
ದಾರಿಯಲ್ಲದ ದಾರಿ…
ದಾರಿಯಲ್ಲದ ದಾರಿ…
October 10, 2023
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ಭಾರ
ಭಾರ
October 6, 2020
Copyright © 2025 Bayalu