Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಲಿಂಗ ಕೂಡಲ ಸಂಗಮ
Share:
Articles April 29, 2018 ಕೆ.ಆರ್ ಮಂಗಳಾ

ಲಿಂಗ ಕೂಡಲ ಸಂಗಮ

ವಚನಗಳು ಓದುಗನನ್ನು ಒಂದು ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯುತ್ತವೆ. ಆ ಮಟ್ಟವನ್ನು ಮನಸ್ಸು ಮುಟ್ಟದ ಹೊರತು ಅದರ ಒಳಪದರುಗಳು ಬಿಚ್ಚಿಕೊಳ್ಳಲಾರವು. ಇಲ್ಲಿ ಕಾಣಿಸುವ ಭಕ್ತ, ಪ್ರಸಾದ, ಗುರು, ಲಿಂಗ, ಜಂಗಮದಂಥ ವಿಶೇಷ ಶಬ್ದಗಳು ಕೇವಲ ಅರ್ಥಸೂಚಕಗಳಲ್ಲ. ಅರ್ಥಗಳನ್ನು ಬೆಳೆಸುವಂಥವು. ಅನ್ವೇಷಕನನ್ನು ಅಮೂರ್ತತೆಯ ದಿಕ್ಕಿನತ್ತ ಜಗ್ಗುವ ಶಕ್ತಿ ವಚನಗಳಲ್ಲಿದೆ. ಹಾಗೆಯೇ ಅಮೂರ್ತವಾಗಿ ಕಲ್ಪನೆಯಲ್ಲಿ ತೇಲಿ ಹೋಗದಂತೆ ಸಾಧಕನ ಅನುಭಾವದ ನೆಲೆಗೆ ತತ್ವಗಳನ್ನು ತಂದು ಮೂರ್ತಗೊಳಿಸುವ ಕಾಂತತ್ವವೂ ಇಲ್ಲಿ ಅಡಗಿದೆ. ಉದಾಹರಣೆಗೆ ‘ಲಿಂಗ’ ಎನ್ನುವ ಪದ. ಈ ಶಬ್ದವು ಒಂದೆಡೆ ಆತ್ಮಲಿಂಗ ಸ್ವರೂಪಿಯಾಗಿ, ಮತ್ತೊಂದೆಡೆ ಜಗದಗಲ, ಮುಗಿಲಗಲ, ಮಿಗೆಯಗಲ ತೆರೆದುಕೊಳ್ಳುವ ಬಯಲಾಗಿ ವಿಸ್ತರಿಸುತ್ತದೆ. ಆದರೆ ಈ ಎರಡೂ ಅಮೂರ್ತ ಕಾಣ್ಕೆಗಳಿಗಿಂತ ವಿಭಿನ್ನವಾಗಿ ಮತ್ತೊಂದು ಹೊಸ ನೆಲೆಯ ಮೂರ್ತ ಅರ್ಥದಲ್ಲಿ ಬಸವಣ್ಣನವರು ‘ಲಿಂಗ’ ಎನ್ನುವ ಪದವನ್ನು ಪರಿಭಾವಿಸಿದ್ದಾರೆ. ಅದು ಇಡೀ ಬ್ರಹ್ಮಾಂಡದಲ್ಲಿ ಓತಪ್ರೋತವಾಗಿರುವ ಸಮಷ್ಟಿ ಪ್ರಜ್ಞೆ. ಇಂಥ ಶಕ್ತಿ ತತ್ವಕ್ಕೆ ಯಾವ ನಿರ್ದಿಷ್ಟ ಹೆಸರುಗಳೂ ಬೇಕಾಗುವುದಿಲ್ಲ. ಲಿಂಗವು ಜಂಗಮವಾಗಿ, ಇಡೀ ಸಮಷ್ಟಿಯ ಚೈತನ್ಯವಾಗಿ ತೋರುವ ಹೊಳವು ಅದು. ಅದೇ ಕೂಡಲ ಸಂಗಮ.
ಜೀವ ಕಾರುಣ್ಯ ತುಂಬಿದ ಬಸವಣ್ಣನವರ ವಿಚಾರಗಳಲ್ಲಿ ಇಡೀ ಸೃಷ್ಟಿಗೆ ದೈವತ್ವ ಪ್ರಾಪ್ತಿಯಾಗುತ್ತದೆ. ಲಿಂಗ ಪೂಜೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಅವರು ಸಮಾಜ ಹಾಗೂ ಸಮಸ್ತ ಜೀವಸಂಕುಲದ ಸೇವೆಗೆ ನೀಡುತ್ತಾರೆ. ಒಂದರ್ಥದಲ್ಲಿ ಅವರಿಗೆ ಅದೇ ದೇವಪೂಜೆ. “ಲಿಂಗವ ಪೂಜಿಸಿ ಜಂಗಮವ ಉದಾಸೀನವ ಮಾಡಿದಡೆ ಬೆಂದೆನಯ್ಯಾ ನಾನು” ಎಂದು ನೋಯುತ್ತಾರೆ. ಬಸವಣ್ಣನವರ ಲಿಂಗ ಜಪ ಸ್ತೋತ್ರಗಳಿಗೆ ಒಲಿಯುವ ಮರುಳನಲ್ಲ. ಅಷ್ಟವಿಧಾರ್ಚನೆಯ ವಿಧಿ ವಿಧಾನಗಳನ್ನು ನಿರೀಕ್ಷಿಸುವ ವ್ಯಾಮೋಹಿಯಲ್ಲ. ಚಿನ್ನದ ದ್ವಾರಗಳ ಹಿಂದೆ ಬಂಧಿಯಾಗಿ, ಗರ್ಭಗುಡಿಯಲ್ಲಿ ಅವಿತು ಕುಳಿತ ಹೇಡಿಯಲ್ಲ. ಮತ್ತೊಂದು ದೇವನಾಗಿ ಪೂಜೆಗೊಳ್ಳುವಂಥವನೂ ಅಲ್ಲ. ಅಂತರಂಗ- ಬಹಿರಂಗ ಶುದ್ಧಿಗಳ ಮೂಲಕವೇ ಆತ ಪ್ರಸನ್ನಗೊಳ್ಳುವುದು.
ದೇವರು ಒಂದು ಅನಂತ ಅನೂಹ್ಯ ಶಕ್ತಿ. ಅದು ನಂಬಿಕೆ ಮತ್ತು ಭರವಸೆಗಳೊಂದಿಗೆ ಬೆಸೆದುಕೊಂಡ ಪದ. ಆದರೆ ದೇವರ ಅಸ್ತಿತ್ವದಲ್ಲಿ ಸಿಗುವ ಸಮಾಧಾನ ಕೇವಲ ಅದೇ ಭಾವದಲ್ಲಿ ನಿಂತುಹೋದಲ್ಲಿ ಬುದ್ಧಿ ವಿಚಾರಶೂನ್ಯವಾಗುತ್ತದೆ. ದೇವರು ಒಂದು ಇರುವಿಕೆಯಾದರೂ ಸಾಕೆಂದು ಮನಸ್ಸು ತರ್ಕಿಸುತ್ತಾ ಹೋಗುತ್ತದೆ. ಅವಲಂಬನೆ ಹೆಚ್ಚಾದಂತೆ ವಿಧಿವಾದಗಳು, ಕರ್ಮಕಾಂಡಗಳು ಹುಟ್ಟಿಕೊಳ್ಳುತ್ತವೆ. ತಾನೇ ಸೃಷ್ಟಿಸಿದ ವಿಷ ವರ್ತುಲದಲ್ಲಿ ಮನುಷ್ಯ ಸಿಕ್ಕಿಕೊಳ್ಳುತ್ತಾನೆ. ಇಂಥ ಜಾಡ್ಯಕ್ಕೆ, ದಾಸ್ಯಕ್ಕೆ ಮನಸ್ಸು ತುತ್ತಾಗದಂತೆ ದೇವರ ಪರಿಕಲ್ಪನೆಯನ್ನು ವಿಶೇಷಾರ್ಥಗಳಲ್ಲಿ ಕಂಡುಕೊಳ್ಳುವುದನ್ನು ಶರಣರು ಕಲಿಸುತ್ತಾರೆ. ಜೀವಚೈತನ್ಯವೇ ಪರಮಾತ್ಮನ ಎದೆಯ ಬಡಿತ. ಪಂಚಭೂತಗಳೇ ಆತನ ಚಲನೆ. ಪರಮಾತ್ಮನ ಇರುವಿಕೆಯಲ್ಲೇ ಪ್ರೀತಿಯನ್ನೂ, ಜವಾಬ್ದಾರಿಯನ್ನೂ, ನಿರ್ಭೀತಿಯನ್ನೂ ಅನುಭವಿಸಿದರು ಶರಣರು.
ಒಂದು ಕಡೆ ಬಸವಣ್ಣನವರು ‘ಕೂಡಲ ಸಂಗನ ನಿಲುವು ಕನ್ನೆಯ ಸ್ನೇಹದಂತೆ’ ಎನ್ನುತ್ತಾರೆ. ಸಂಗನ ಒಡನಾಟ ಅಂದರೆ ಸೃಷ್ಟಿಯ ಅನಂತತೆಯ ಸಾಹಚರ್ಯ. ಬ್ರಹ್ಮಾಂಡದ ಅಗಾಧತೆಯ ಮುಂದೆ ಮನಸ್ಸು ಮಾತು ಕಳೆದುಕೊಳ್ಳುತ್ತದೆ. ಕಲ್ಪನೆಗೂ ದಕ್ಕದ ಆ ಅಖಂಡತೆಯು ಭಯ ಹುಟ್ಟಿಸದೇ ವ��ಸ್ಮಯ ಮೂಡಿಸುತ್ತದೆ. ಅದು ಸ್ನೇಹದ ನವಿರನ್ನು ಮನಸ್ಸಿಗೆ ತಂದುಕೊಡುವ ಒಡನಾಟ. ಮುಗ್ಧತೆಯನ್ನು ಅರಳಿಸುವಂಥದು. ಶಬ್ದ ಮುಗ್ಧ ಸ್ಥಿತಿ ಎನ್ನುತ್ತಾರಲ್ಲ ಹಾಗೆ. ಆದರೆ ಜಗತ್ತಿನ ವ್ಯವಹಾರಗಳೆಲ್ಲಾ ಇಂಥ ಮುಗ್ಧತೆಯನ್ನು ದೋಚುವಂಥವು. ತಂತ್ರ-ಕುತಂತ್ರಗಳಿಗೆ, ದುರಾಸೆ-ದುಷ್ಟತನಗಳಿಗೆ ದೂಡುವಂಥವು. ಮುಗ್ಧತೆ ಕೆಟ್ಟಾಗ ಮನಸ್ಸಿನ ಹದ ತಪ್ಪುತ್ತದೆ. ಕೊಚ್ಚೆ- ರಾಡಿಗಳು ಹೃದಯದ ಕವಾಟಗಳಿಗೆ ನುಗ್ಗುತ್ತವೆ. ವಿವೇಕ ಮಾಯವಾಗುತ್ತದೆ. ವಿಕಾರಗಳು ತಾಂಡವವಾಡುತ್ತವೆ. ಆಗ ಕೂಡಲ ಸಂಗನ ನಿರಾಳ ನಿಲುವು ಗ್ರಹಿಕೆಗೂ ನಿಲುಕಲಾರದು. ಲೋಕದ ಕಣ್ಣಿಗೆ ಅನಂತತೆಯ ಜೀವಮಿಡಿತ ವೇದ್ಯವಾಗದು. ಏಕೆಂದರೆ ಲೋಕಾತ್ಮನನ್ನು ಅರಿಯಲು ನೈಜತೆ ಬೇಕು. ಮುಗ್ಧತೆ ಕೆಡದಂತೆ ಬದುಕುವುದನ್ನು ಕಲಿಯಬೇಕು.
ಭೂಮಿಯೊಳಗೆ ನಿಧಾನವಿದ್ದುದ
ಅಂಜನವುಳ್ಳವರು ತೋರಿರಯ್ಯಾ.
ಅಂಜಲುಬೇಡ ಕಂಡಾ, ಮನದಲ್ಲಿ ಸಂದೇಹವ ಮಾಡದಿರಾ.
ಜಂಗಮದೊಳಗೆ ಲಿಂಗಯ್ಯನಿದ್ದಾನೆಂದು ನಂಬುಗೆಯುಳ್ಳಡೆ
ತೋರುವ ಕೂಡಲಸಂಗಯ್ಯ.
ಬ್ರಹ್ಮಾಂಡದಲ್ಲಿ ಅಡಗಿರುವ ದೇವರನ್ನು ಎಲ್ಲಿ ಹುಡುಕುವುದು? ಇಡೀ ಸಮಷ್ಟಿಯಲ್ಲಿ ಆತ ನೆಲದ ಮರೆಯ ನಿಧಾನದಂತೆ ಅಡಗಿದ್ದಾನೆ. ಯಾವ ಭಯವಿಲ್ಲದೆ, ಅನುಮಾನಗಳಿಲ್ಲದೆ ಸಮಷ್ಟಿಯ ಹಿತಕ್ಕಾಗಿ ದುಡಿಯುವುದಾದರೆ ಲಿಂಗಯ್ಯ ತಂತಾನೇ ಪ್ರಕಟಗೊಳ್ಳುತ್ತಾನೆ. ಇಲ್ಲಿ ಒಂದು ಬಹು ಮುಖ್ಯ ಅಂಶವನ್ನು ಗಮನಿಸಬೇಕು. ವಚನಗಳಲ್ಲಿ ಜಂಗಮ ಎನ್ನುವ ಪದವು ತತ್ವನಿಷ್ಠ ಸಾಧಕರು, ಸಮಾಜ, ಸಮಸ್ತ ಜೀವ ಚೈತನ್ಯ ಎನ್ನುವ ಅರ್ಥವ್ಯಾಪ್ತಿ ಪಡೆದುಕೊಳ್ಳುತ್ತಾ ಹೋಗುತ್ತದೆ. ಲಿಂಗಯ್ಯ ಈ ಸೃಷ್ಟಿಯಲ್ಲಿ, ಸಕಳ- ನಿಷ್ಕಳ ಸ್ವರೂಪಿಯಾದ ಸಮಷ್ಟಿಯಲ್ಲಿದ್ದಾನೆ. ಈ ನಂಬಿಕೆ ಇದ್ದಲ್ಲಿ ಮಾತ್ರ ಆತ ಅನುಭವಕ್ಕೆ ನಿಲುಕಬಲ್ಲ.
ಮನುಷ್ಯ ಮತ್ತು ಸಮಷ್ಟಿಯ ನಡುವೆ ಇರುವ ಸಂಬಂಧವಾದರೂ ಎಂಥದು? ಬಸವಣ್ಣನವರು ಹೇಳುತ್ತಾರೆ ಇದು ‘ಎಳೆಯ- ಹಳೆಯ ಸಂಬಂಧ’. ಈ ಭೂಮಿಯ ಮೇಲೆ ಜೀವ ಅಂಕುರಿಸಿ, ಕಣ್ಣು ಬಿಟ್ಟಾಗ ಅದರ ಗ್ರಹಿಕೆಗೆ ಎಲ್ಲವೂ ಹೊಸದು. ಆಗ ಜೀವದ ಬೆಳವಣಿಗೆಯಲ್ಲಿ ಜಗತ್ತು ಅನುಭವಿಯಂತೆ ಮಾರ್ಗದರ್ಶನ ನೀಡುತ್ತದೆ, ಕೈ ಹಿಡಿದು ಬೆಳೆಸುತ್ತದೆ. ಎಳೆಯ ಜೀವಕ್ಕೆ ಪ್ರತಿಯೊಂದೂ ಹೊಸ ಪಾಠವೇ. ಆಗು-ಹೋಗುಗಳೆಲ್ಲ ಹೊಸ ಹೊಸ ಪಠ್ಯಗಳೇ. ಪ್ರಬುದ್ಧವಾಗಿ ಮಾಗುವ ಜೀವದ ಕಣ್ಣಲ್ಲಿ ಲೋಕದ ಚಹರೆಯೂ ಬದಲಾಗುತ್ತದೆ. ಹಗಲು ರಾತ್ರಿಗಳು, ಕಾಲದ ಪಲ್ಲಟಗಳು, ಭೂಮಿಯ ಹೊದಿಕೆಗಳು ಬದಲಾದಂತೆ ಮತ್ತೆ ಎಲ್ಲ ಹೊಚ್ಚ ಹೊಸದು. ಎಲ್ಲವೂ ಹೊಸತು ಹೊಸತು… ಮುದಿಯಾಗುವ ಜೀವದ ದೇಹದೆದುರು ಪ್ರಪಂಚದಲ್ಲಿ ಮಾತ್ರ ಅದೇ ತಾಜಾತನ, ಎಳೆತನ. ಅಂದಂದಿಂಗೆ ಎಳೆಯ ನೀನು, ಹಳೆಯ ನಾನು… ಸಮಷ್ಟಿಯ ಅಲೌಕಿಕ ಸೌಂದರ್ಯ ಸಮಸ್ತ ತಾರಾಮಂಡಲಗಳಲ್ಲಿ ಹೊಳೆದು ನಕ್ಕಂತೆ, ಕಣ್ಣು ಮಿಟುಕಿಸಿದಂತೆ… ಜೀವಕ್ಕೆ ಈ ಅನಂತ ಸಾಹಚರ್ಯೆಯ ಸಂಬಂಧ ಒಂದು ನಿತ್ಯ ಒಗಟು, ನಿರಂತರ ಸವಾಲು.
ಧರ್ಮ ವ್ಯವಹಾರಕ್ಕೆ ಇಳಿದುಬಿಟ್ಟರೆ ಅಲ್ಲಿಂದ ಮೊದಲು ಪಲಾಯನಗೈಯುವುದು ಮಾನವೀಯತೆ. ಇನ್ನು ಕಟ್ಟುಪಾಡುಗಳಿಗೆ ತನ್ನನ್ನು ಕಟ್ಟಿಹಾಕಿಕೊಂಡರೆ ಮನುಷ್ಯ ಅದರಲ್ಲಿ ಖಾಯಂ ಬಂಧಿಯಾಗಿ ಬಿಡುತ್ತಾನೆ. ಈ ಹಿನ್ನೆಲೆಯಲ್ಲಿ ನೋಡಿದರೆ ಲಿಂಗಾಯತವು ಒಂದು ಮುಕ್ತ ಸ್ವತಂತ್ರ ಧರ್ಮ. ಮನುಷ್ಯತ್ವದ ಮೂಲತತ್ವಗಳೇ ಇಲ್ಲಿನ ತಾಯಿ ಬೇರು. ಬಸವಣ್ಣನವರು ಹೇಳಿದ್ದು ದಯೆಯೇ ಧರ್ಮದ ಮೂಲ ಎಂದು. ಧರ್ಮ ನಿಲ್ಲಬೇಕಾದುದು ದಯೆಯ ಬುನಾದಿಯ ಮೇಲೇ. ವಿಭೂತಿ, ರುದ್ರಾಕ್ಷಿ, ಲಿಂಗ… ಇತ್ಯಾದಿಗಳೆಲ್ಲಾ ಸಾಧನೆಯ ಪರಿಕರಗಳು ಮಾತ್ರ.
ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ
ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೆ ರೂಪಾದೆ.
ಇನ್ನು ಜಂಗಮವೆ ಲಿಂಗವೆಂದು ನಂಬಿದೆ,
ಕೂಡಲಸಂಗಮದೇವಾ.

ಇಲ್ಲಿ ದೇವರ ಇರುವು ಏಕದೇವೋಪಾಸನೆಯ ಎಲ್ಲೆ ಮೀರಿ ನಿಲ್ಲುತ್ತದೆ. ಅರಿವಿನ ಮೂಲಕ ಪ್ರಕಟಗೊಳ್ಳುವ ದೇವರ ಇರುವು ಆರಂಭದಲ್ಲಿ ಇಷ್ಟಲಿಂಗದ ರೂಪ ತಾಳಿದೆ. ಅಂಗೈಯಲ್ಲಿ ಪೂಜೆಗೊಂಡು ಜೀವಾತ್ಮವೇ ತಾನೆಂದು ತೋರಿಸಿ ಕೊಟ್ಟಿದೆ. ಆದರೆ ಪರಮಾತ್ಮ ಜೀವಾತ್ಮ ಭಿನ್ನವಲ್ಲ ಎಂಬ ತಿಳಿವಳಿಕೆಯು ವ್ಯಕ್ತಿ ಕೇಂದ್ರಿತದಲ್ಲೇ ನಿಂತು ಬಿಡುವುದಿಲ್ಲ. ಅಹಂ ಬ್ರಹ್ಮಾಸ್ಮಿ ಎನ್ನುವ ತಿಳಿವಳಿಕೆಯಲ್ಲಿ ಅರಿವಿನ ಪಯಣ ಪರ್ಯಾವಸಾನ ಹೊಂದುವುದಿಲ್ಲ. ಅದು ಸಮಾಜ ಮುಖಿಯಾಗಿ ಹರಿದು ಸಮಷ್ಟಿಯತ್ತ ತನ್ನ ಇರುವಿಕೆಯನ್ನು ವಿಸ್ತರಿಸಿಕೊಳ್ಳುತ್ತದೆ. ಆಗ ಜಂಗಮಕ್ಕೆ, ಸಮಷ್ಠಿ ಚೈತನ್ಯಕ್ಕೆ ಜೀವ ತಲೆ ಬಾಗುತ್ತದೆ. ನಾ ದೇವನಾದರೂ ಜಂಗಮವೇ ಲಿಂಗ ಎನ್ನುವ ನಂಬಿಕೆ ವಿಧೇಯತೆಯನ್ನೂ, ಜವಾಬ್ದಾರಿಯನ್ನೂ ನೀಡುತ್ತದೆ.
ತನಗೂ ಸಮಷ್ಟಿಗೂ ಸಂಬಂಧವಿಲ್ಲವೆನ್ನುವ ವ್ಯಕ್ತಿವಾದವನ್ನು ಶರಣರು ಒಪ್ಪುವುದಿಲ್ಲ. ಏಕೆಂದರೆ ನಮ್ಮ ಜೀವನ ದೃಷ್ಟಿಕೋನವೇ ನಮ್ಮ ಸಮಾಜವನ್ನು ನಿರ್ಮಿಸುವುದು. ನಮ್ಮ ಆಯ್ಕೆಗಳು, ನಮ್ಮ ಆದ್ಯತೆಗಳು ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತವೆ. ಆದಾಗ್ಯೂ ವ್ಯಕ್ತಿ ಮತ್ತು ಸಮಾಜದ ನಡುವಣ ಸಂಬಂಧ ಸರಳ ಸಮೀಕರಣದ್ದಾಗಿರುವುದಿಲ್ಲ. ಬದುಕಿನ ಅನೇಕ ಮಗ್ಗಲುಗಳು, ಸಮಾಜದ ನಾನಾ ವ್ಯವಸ್ಥೆಗಳು ವಿಭಿನ್ನ ನೆಲೆಯಲ್ಲಿ ಒಂದನ್ನೊಂದು ಪ್ರಭಾವಿಸುತ್ತಿರುತ್ತವೆ. ಬಸವಣ್ಣನವರು ಇಡೀ ಸಮಾಜವನ್ನು, ಸಮಷ್ಟಿ ಭಾವವನ್ನು ಪ್ರಶ್ನಿಸುವ ಒಂದು ಅಪೂರ್ವ ವಚನ ಇಲ್ಲಿದೆ:
ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿಯಿರಿ, ಕೂಡಲಸಂಗಯ್ಯಾ.
ಇಲ್ಲಿ ಲೋಕದ ರೂಢಿಗೆ ಸಂಪೂರ್ಣ ಭಿನ್ನವಾದ ನೆಲೆಯಲ್ಲಿ ನಿಂತುಕೊಂಡಿದ್ದಾರೆ ಬಸವಣ್ಣನವರು. ಯಾರಾದರೂ ಪ್ರಖ್ಯಾತರನ್ನು, ದೊಡ್ಡ ಅಧಿಕಾರಿಗಳನ್ನು, ಮಂತ್ರಿಮಹೋದಯರನ್ನು, ಆಗರ್ಭ ಶ್ರೀಮಂತರನ್ನು ತಮ್ಮ ನೆಂಟರೆಂದೋ, ದೂರದ ಸಂಬಂಧಿಯೆಂದೋ ಪರಿಚಯಿಸಿಕೊಳ್ಳುವುದು, ಅದನ್ನೊಂದು ಹೆಗ್ಗಳಿಕೆಯಂತೆ ಹೇಳಿಕೊಳ್ಳುವುದು ಲೋಕದ ರೂಢಿ. ಇಂಥ ಪೊಳ್ಳುತನ ಬಸವಣ್ಣನವರಿಗೆ ಹಿಡಿಸದು. ಹಣ, ಅಧಿಕಾರ, ಕೀರ್ತಿ, ಪ್ರತಿಷ್ಟೆಗಳು ವ್ಯಕ್ತಿತ್ವದ ಮಾನದಂಡಗಳಲ್ಲ. ಸರಳ ಕಾಯಕಜೀವಿಗಳೇ ಸಮಾಜದ ನಿರ್ಣಾಯಕರು, ಅವರೇ ಆದರ್ಶಪ್ರಾಯ. ಸ್ವತಃ ತಾವೇ ಒಬ್ಬ ಪ್ರಧಾನಮಂತ್ರಿಯಾಗಿಯೂ, ವರ್ಣಾಶ್ರಮದ ಉನ್ನತ ಕುಲದ ಹುಟ್ಟು ತಮಗಿದ್ದಾಗಲೂ ಬಸವಣ್ಣನವರು ಇಲ್ಲಿ ಇಡೀ ಸಮಷ್ಟಿಗೆ ತಮ್ಮ ಪರಿಚಯವನ್ನು ಹೇಳಿಕೊಳ್ಳುವ ವಿಧಾನವೇ ವಿನೂತನ. ಜಗತ್ತಿನ ದೃಷ್ಟಿಯಲ್ಲಿ ಅತ್ಯಂತ ಸಾಮಾನ್ಯರಲ್ಲಿ ಸಾಮಾನ್ಯರಾದ, ವರ್ಣಾಶ್ರಮದ ಪಟ್ಟಿಯಲ್ಲಿ ಹೆಸರು ಪಡೆಯಲೂ ಅರ್ಹರಲ್ಲದ, ಸಮಾಜದಲ್ಲಿ ನಿಕೃಷ್ಟರೆಂದು ತುಳಿಯಲ್ಪಟ್ಟ ಅಂತ್ಯಜರನ್ನು ಹೆಮ್ಮೆಯಿಂದ ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ ಎಂದು ಹೇಳಿಕೊಳ್ಳುತ್ತಾರೆ. ತಮ್ಮ ಐಡೆಂಟಿಟಿ ಹೇಳಿಕೊಳ್ಳಲು ಅವರ ಹೆಸರು ಮುಂದೆ ಮಾಡಿ ಹಿಂದೆ ನಿಲ್ಲುತ್ತಾರೆ. ಇಂಥವರ ಸಂಬಂಧಿಯಾದ ತಮ್ಮನ್ನು, ‘’ಎನ್ನನೇತಕ್ಕರಿಯಿರಿ?” ಎನ್ನುವಲ್ಲಿ ಬಸವಣ್ಣನವರ ಅಂತರಂಗದ ಆರ್ತನಾದವೇ ಹೊಮ್ಮಿದಂತೆ ಭಾಸವಾಗುತ್ತದೆ. ಲೋಕದ ದೃಷ್ಟಿ ಹೀಗೆ ಬದಲಾಗಬೇಕು. ಈ ದಿಕ್ಕಿನಲ್ಲಿ ತಿರುಗಬೇಕು. ಕಾಯಕಜೀವಿಗಳ ಮುಂಚೂಣಿಯಲ್ಲಿ ಅದರ ವ್ಯವಹಾರಗಳು ನಿರ್ಧರಿಸಲ್ಪಡಬೇಕು. ಸಿರಿವಂತರು, ಅಧಿಕಾರಗಳ ಒಣ ಪ್ರತಿಷ್ಠೆಗಳು ಆಗ ತಂತಾನೇ ಪಕ್ಕಕ್ಕೆ ಸರಿದು ನಿಲ್ಲುತ್ತವೆ. ಮಾದಾರ, ಡೋಹಾರರಂಥವರ ಕುಟುಂಬದವ ತಾನು ಎಂಬುದು ಅಭಿಮಾನದ ಸಂಗತಿಯೇ ಹೊರತು ಕೀಳರಿಮೆಯ ವಿಷಯವೇ ಆಗಕೂಡದು. ಇಂಥ ಕ್ರಾಂತಿಕಾರಕ ಬದಲಾವಣೆಗೆ ಮೊದಲ ಹೆಜ್ಜೆ ಇಡುತ್ತಾರೆ ಬಸವಣ್ಣನವರು.
ಸರ್ವಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಸವಣ್ಣನವರು ಚಿಂತಿಸಿದರು ಮತ್ತು ಹಾಗೆಯೇ ನಡೆದುಕೊಂಡರು. ಅವರದು ಸಮಾಜಮುಖಿ ನಿಲುವು. ಸಮಷ್ಟಿಯ ಒಳಿತಿನ ಬಗ್ಗೆ ಕಾಳಜಿಯಿಲ್ಲದ ಪಾರಮಾರ್ಥಿಕತೆ ಮನಸ್ಸಿಗೆ ಮಂಕುಬೂದಿ ಎರಚುತ್ತದೆ. ಭಾವುಕ ಜೀವಿಗಳು ಆಧ್ಯಾತ್ಮಿಕಕ್ಕೆ ಆತುಕೊಂಡರೆ ಸಂಪೂರ್ಣವಾಗಿ ಸಮಾಜಕ್ಕೆ ವಿಮುಖರಾಗುವ ಅಪಾಯ ಇರುತ್ತದೆ.
ತನು ನಿಮ್ಮದೆಂಬೆ, ಮನ ನಿಮ್ಮದೆಂಬೆ, ಧನ ನಿಮ್ಮದೆಂಬೆ,
ಮತ್ತೆಯೂ ವಂಚನೆ ಮಾಣದಯ್ಯಾ.
ಲಿಂಗ ಜಂಗಮವೆಂಬೆ, ಜಂಗಮ ಲಿಂಗವೆಂಬೆ,
ಮತ್ತೆಯೂ ವಂಚನೆ ಮಾಣದಯ್ಯಾ.
ಒಡಲೊಡವೆ ಹಡೆದರ್ಥ ನಿಮ್ಮದೆಂದರಿಯದೆ
ಕೆಮ್ಮನೆ ಕೆಟ್ಟೆ, ಕೂಡಲಸಂಗಮದೇವಾ.
ಅತ್ಯಂತ ಮುಖ್ಯವಾದ ವಚನವಿದು. ಭಕ್ತಿಯ ಪರಾಕಾಷ್ಠತೆಯ ಕೇಂದ್ರವಾದ ಲಿಂಗವು ಕೊನೆಯಲ್ಲಿ ಸಮಷ್ಟಿಯ ರೂಪಕವಾದ ಜಂಗಮ ಚೈತನ್ಯದೊಂದಿಗೆ ಸೇರಿಕೊಳ್ಳುತ್ತದೆ. ಲಿಂಗ ಮತ್ತು ಜಂಗಮ ಎರಡೂ ಒಂದೇ ���ಂಬ ಅಂತಿಮ ತೀರ್ಪು ಇಲ್ಲಿದೆ. ಈ ಶರೀರ ಮತ್ತು ಮನಸ್ಸುಗಳು ಸೃಷ್ಟಿಯ ಕೊಡುಗೆ. ಜೀವನ ನಿರ್ವಹಿಸಲು ಬೇಕಾಗುವ ಹಣ ಕೂಡ ಸಮಷ್ಟಿಗೇ ಸೇರಿದ್ದು. ನಾವು ಬಂದು ಹೋಗಲಿರುವ ಅತಿಥಿ ಮಾತ್ರ. ಹೀಗಿರುವಾಗ ನನ್ನದೆಂದು ಅಹಂಕಾರ ಪಡಲು ಇಲ್ಲೇನಿದೆ? ಲಿಂಗ ಮತ್ತು ಸಮಷ್ಟಿಗಳು ಎರಡೂ ಬೇರೆ ಬೇರೆಯಲ್ಲ. ಬಿಚ್ಚಿದರೆ ಬೇರಾಗದಂತೆ ಒಂದರೊಳಗೊಂದು ಮಿಳಿತಗೊಂಡಿವೆ. ಈ ಭಾವನೆಯಲ್ಲಿ ಯಾವ ವಂಚನೆಯನ್ನೂ ಮಾಡಲಾರೆ. ನಾನು ಗಳಿಸಿದ ಧನಕನಕವಾಗಲಿ, ನನಗೆ ಪೂರ್ವಾರ್ಜಿತವಾಗಿ ಬಂದ ಸಿರಿಸಂಪತ್ತಾಗಲಿ ಎಲ್ಲವೂ ಸಮಾಜದ್ದು. ಈ ಒಂದು ಸ್ಪಷ್ಟತೆ ಮನಸ್ಸಿಗೆ ಇಲ್ಲದೇ ಹೋದರೆ ಅದೊಂದು ವ್ಯರ್ಥ ಬದುಕು. “ಛಲಬೇಕು ಶರಣಂಗೆ ಲಿಂಗ ಜಂಗಮ ಒಂದೇ ಎಂಬ” ಎಂದು ಹೇಳುವ ಮೂಲಕ ಶರಣರಲ್ಲಿ ಇರಲೇ ಬೇಕಾದ ಐದು ಛಲಗಳಲ್ಲಿ ಇದೂ ಸೇರಿಕೊಳ್ಳುತ್ತದೆ.
ಬಸವಣ್ಣನವರು ತಮ್ಮ ಹೊಸ ವಿಚಾರಗಳಲ್ಲಿಯೂ ಮೂಢನಂಬಿಕೆಗಳು ನುಸುಳದಂತೆ, ದೇವರ ಕುರುಹಾದ ಇಷ್ಟಲಿಂಗ ಕೂಡ ಮತ್ತೊಂದು ಸ್ಥಾವರವಾಗಿ ಉಳಿಯದಂತೆ ಎಚ್ಚರಿಕೆ ವಹಿಸುತ್ತಾರೆ. ಅವರ ನಡೆ-ನುಡಿಗಳಲ್ಲಿ ಅಂಥ ನಿಷ್ಠುರತೆ ಇದೆ. ಆಂತರಿಕ ಸೂಕ್ಷ್ಮತೆಗಳು, ಬದಲಾವಣೆಗಳು ಹೊರ ಬದುಕಿನ ವಾತಾವರಣದಿಂದ ಪ್ರಭಾವಿತವಾಗಿರುತ್ತವೆ. ವ್ಯಕ್ತಿಯಲ್ಲಿ ಹುಟ್ಟಿಕೊಳ್ಳುವ ಆಧ್ಯಾತ್ಮಿಕ ಆಕಾಂಕ್ಷೆ ಸಮಷ್ಟಿಯನ್ನು ಒಳಗೊಳ್ಳದೆ ಹೋದರೆ ಸಮುದಾಯದ ಪ್ರಗತಿ ಸಾಧ್ಯವಿಲ್ಲವೆಂಬುದು ಅವರ ನಂಬಿಕೆಯಾಗಿತ್ತು. ನಮ್ಮ ತೆವಲುಗಳಿಗಾಗಿ ಆಡಂಬರದ ಪೂಜೆಗಳನ್ನು ಮಾಡುವುದು ಕೂಡ ವಿಕೃತಿಯೇ. ಸೃಷ್ಠಿಯ ದೇವ ಬಾಹ್ಯ ಪೂಜೆಗಳಿಗೆ, ಮಸ್ತಕಾಭಿಷೇಕಗಳಿಗೆ ಅತೀತನಾದವ. ಆತನನ್ನು ಸಂತುಷ್ಠಿಗೊಳಿಸಲು ಇರುವ ಒಂದೇ ಮಾರ್ಗವೆಂದರೆ ಜಂಗಮ ಸೇವೆ.
ಎರೆದಡೆ ನನೆಯದು, ಮರೆದಡೆ ಬಾಡದು,
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ;
ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನೆನೆಯಿತ್ತು.
ಲಿಂಗ ಸ್ಥಾವರ ರೂಪಿಯಲ್ಲ. “ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ” ಎಂದು ಲಿಂಗದ ನಿಜದ ನೆಲೆಯನ್ನು ತೋರಿಸುತ್ತಾರೆ. ಹೀಗೆ ದೇವರು, ಧರ್ಮದ ವಿಷಯಗಳಲ್ಲಿಯೇ ಸಮಸ್ಯೆಯ ಮೂಲ ಕಂಡಾಗ ಇವುಗಳನ್ನು ಮರು ವ್ಯಾಖ್ಯಾನಿಸುವ ತುರ್ತನ್ನು ಬಸವಣ್ಣನವರು ಗುರುತಿಸಿದರು.
ಶ್ರಮದ ದುಡಿಮೆಯೇ ದೇವರ ತಾಣ, ಕೈಲಾಸ ಎಂದ ಶರಣರು, ಸಮಾಜ ಸೇವೆಯೇ ದೇವರನ್ನು ಕಾಣುವ ನೆಲೆ ಎಂದರು. ನಿಸರ್ಗವನ್ನು ಭೋಗಿಸುವ, ತನ್ನ ದುರಾಸೆಗಳ ಪೂರೈಕೆಗೆ ಹೇಗೆಂದರೆ ಹಾಗೆ ಬಳಸಿಕೊಳ್ಳುವ ನೀಚತನ ಮನುಷ್ಟನದ್ದು. ಇಂಥ ಸ್ವಾರ್ಥದ ನಡೆಗೆ ಬಸವಣ್ಣನವರು ಕಡು ವಿರೋಧಿ. ಜಗತ್ತಿಗೊಂದು ಲಯವಿದೆ. ಈ ಸಹಜ ಲಯದಲ್ಲಿ ಪಶು-ಪಕ್ಷಿಗಳು, ಸಸ್ಯ ಸಂಕುಲಗಳು ಜೀವನ ನಡೆಸುತ್ತವೆ. ಮನುಷ್ಯ ಕೂಡ ನಿಸರ್ಗದ ಸಹಜತೆಗೆ ಮಾರಕವಾಗದಂತೆ ಬದುಕಿದಾಗಲೇ ಭೂಮಿ ಆತನನ್ನು ಪೊರೆಯುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯ ಹಿತ ಮರೆತದ್ದರಿಂದ ನಮ್ಮ ಬದುಕು ಇಂದು ಅಕ್ಷರಶಃ ನರಕವಾಗುತ್ತಿದೆ. ನೀರು, ನೆಲ, ಗಾಳಿ… ಎಲ್ಲವೂ ವಿಷವಾಗುತ್ತಿರುವ ಈ ದಿನಗಳಲ್ಲಿ ಜಗತ್ತಿನ ಒಂದೊಂದೇ ಮಹಾನಗರಗಳು ಉಸಿರಾಡಲು ಹೆಣಗಾಡುತ್ತಿವೆ. ನಮ್ಮ ದೇಶದ ರಾಜಧಾನಿ ದೆಹಲಿ, ನಮ್ಮ ನಾಡಿನ ರಾಜಧಾನಿ ಬೆಂಗಳೂರು ಈಗಾಗಲೇ ಜೀವವಾಯುವಿಗಾಗಿ ತಡಬಡಿಸುವ ಪರಿಸ್ಥಿತಿಗೆ ತಲುಪಿವೆ. ಬದುಕಲು ಯೋಗ್ಯವಲ್ಲದ ಪ್ರದೇಶಗಳ ಪಟ್ಟಿಯಲ್ಲಿ ಸೇರಿಕೊಂಡಿವೆ. ಕೆರೆ, ಬಾವಿಗಳು ತುಂಬಿಕೊಳ್ಳದೆ ಬದುಕುವುದು ವರ್ಷದಿಂದ ವರ್ಷಕ್ಕೆ ದುಸ್ತರಗೊಳ್ಳುತ್ತಾ ಹೋಗುತ್ತದೆ. ಸಮತೋಲನ ತಪ್ಪುತ್ತಿರುವ ಪರಿಸರವನ್ನು ರಕ್ಷಿಸುವುದು ಕೂಡ ನಿಜವಾದ ಅರ್ಥದಲ್ಲಿ ಲಿಂಗಾರ್ಚನೆಯೇ.
ಆಧ್ಯಾತ್ಮಿಕ ಲೋಕದ ಅರ್ಥಕೋಶಗಳ ಮುಂದೆ ನಾನು ಹೊಸಬಳು. ಒಂದೆಡೆ ಅಂತರಂಗದ ಪದರುಗಳಲ್ಲಿ ಹುಡುಕುವ ಏಕಾಗ್ರತೆ, ಮತ್ತೊಂದು ಕಡೆ ಸುತ್ತಲಿನ ಜೀವಜಾಲದಲ್ಲಿ ಓತಪ್ರೋತವಾಗಿ ಹುದುಗಿರುವ ಚೈತನ್ಯವನ್ನು ಗ್ರಹಿಸುವ ಹಂಬಲ. ವೈಯಕ್ತಿಕ ವಿಕಾಸಕ್ಕೆ ತುಡಿಯುತ್ತಲೇ ಇಡೀ ಸಾಮಾಜಿಕ ಸಂದರ್ಭಕ್ಕೂ ಮಿಡಿಯುವುದರಿಂದ ವಚನಗಳು ಕಾಲಾತೀತವಾಗಿ ತಮ್ಮ ಆಶಯಗಳನ್ನು ವಿಸ್ತರಿಸಿಕೊಳ್ಳುತ್ತವೆ. ಮುಟ್ಟಿದಲ್ಲಿ ಮಿಡಿಯಬಲ್ಲ, ವಿಚಾರಗಳಿಗೆ ದೂಡಬಲ್ಲ ಜೀವಂತಿಕೆ ಅವುಗಳದು. ಅಮೂರ್ತ ವಿಚಾರಗಳನ್ನು ಮೂರ್ತ ರೂಪದಲ್ಲಿ ತೋರುವ ವಚನಗಳಲ್ಲಿ ಬಯಲೇ ಅಡಗಿದೆ ಎನಿಸುತ್ತದೆ. ವಚನದಿಂದ ವಚನಗಳಿಗೆ ನಮ್ಮ ನೋಟಗಳೂ ಬದಲಾಗಬೇಕು. ಆಗಲೇ ಹೊಸ ಅನುಭವ, ಹೊಸ ಕಾಣ್ಕೆ.

Previous post ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
Next post ಕಾಣಿಕೆಯ ರೂಪದ ಕಪ್ಪುಹಣ
ಕಾಣಿಕೆಯ ರೂಪದ ಕಪ್ಪುಹಣ

Related Posts

ಮನುಷ್ಯತ್ವ ಮರೆಯಾಗದಿರಲಿ
Share:
Articles

ಮನುಷ್ಯತ್ವ ಮರೆಯಾಗದಿರಲಿ

August 6, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮನುಷ್ಯನ ಪರಮೋದ್ದೇಶ ಇತರರಿಗೆ ತನ್ನಿಂದಾದಷ್ಟು ಒಳಿತು ಮಾಡುವುದು. ಇದು ಅನುಭಾವಿಗಳ, ಹಿರಿಯರ ಅಭಿಪ್ರಾಯ. ನೀನು ಇನ್ನೊಬ್ಬರಿಗೆ ಉಪಕಾರ ಮಾಡದಿದ್ದರೂ ಉಪದ್ರ ನೀಡಬೇಡ ಎನ್ನುವ...
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
Share:
Articles

ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು

July 4, 2021 Bayalu
ಪ್ರಸ್ತುತ ಲೇಖನದಲ್ಲಿ ‘ವಚನ ಗುಮ್ಮಟ’ವೆಂದು ಪ್ರಶಂಸಿಸಲ್ಪಟ್ಟ ಫ.ಗು. ಹಳಕಟ್ಟಿಯವರ (1880-1964) ಜೀವನ ಚರಿತ್ರೆಯನ್ನು ಅವಲೋಕಿಸುವ ಪ್ರಯತ್ನ ಮಾಡಲಾಗಿದೆ. ಅವರ ಜೀವನ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
October 21, 2024
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
Copyright © 2025 Bayalu