Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಲಿಂಗಾಯತ ಮಠಗಳು ಮತ್ತು ಬಸವತತ್ವ
Share:
Articles July 21, 2024 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಲಿಂಗಾಯತ ಮಠಗಳು ಮತ್ತು ಬಸವತತ್ವ

ಅನ್ನ, ಅರಿವೆ, ಆಶ್ರಯ, ಔಷಧಿ ಮತ್ತು ಅರಿವು ಪ್ರತಿಯೊಬ್ಬ ಮಾನವನ ಮೂಲಭೂತ ಅವಶ್ಯಕತೆಗಳು. ಇವು ದೊರೆತಾಗ ಒಬ್ಬ ವ್ಯಕ್ತಿ ಆದರ್ಶದ ದಾರಿಯಲ್ಲಿ ನಡೆಯಲು ಸಾಧ್ಯ. ಈ ಅವಶ್ಯಕತೆಗಳನ್ನು ಪಡೆಯಬಹುದು ಹೇಗೆಂದು ತಿಳಿಸಿಕೊಟ್ಟವರು ಬಸವಾದಿ ಶಿವಶರಣರು. ಬಸವಣ್ಣನವರ ಬಗ್ಗೆ ಬಹುತೇಕ ಜನ ಅಭಿಮಾನದಿಂದ ನಾವು ಬಸವ ಪರಂಪರೆಯವರು ಎಂದು ಹೇಳಿಕೊಳ್ಳುತ್ತಾರೆ. ಬಸವಣ್ಣನವರು ಮನುಕುಲಕ್ಕೆ ನಡೆಗಲಿಸಿದರು, ನುಡಿಗಲಿಸಿದರು, ಉಡಗಲಿಸಿದರು, ಉಣಗಲಿಸಿದರು; ಎಲ್ಲದಕ್ಕಿಂತ ಹೆಚ್ಚಾಗಿ ಹೇಗೆ ಬಾಳಬೇಕು ಎನ್ನುವುದನ್ನೂ ಕಲಿಸಿದರು. ಬಸವಣ್ಣನವರ ಜನಪರ ತತ್ವಗಳ ನೆಲೆಯಲ್ಲೇ ಅಸ್ತಿತ್ವಕ್ಕೆ ಬಂದದ್ದು ‘ಲಿಂಗಾಯತ’ ಧರ್ಮ. ಈ ಧರ್ಮ ಬಸವಣ್ಣನವರಿಗಿಂತ ಪೂರ್ವ ಇದ್ದದ್ದೇನಲ್ಲ. ಈ ಧರ್ಮದ ದ್ರಷ್ಟಾರರು ನಾವೇ ಎಂದು ಬಸವಣ್ಣನವರು ಎಲ್ಲಿಯೂ ಹೇಳಿಕೊಂಡಿಲ್ಲ. ಅವರ ಆಚಾರ, ವಿಚಾರ, ತತ್ವಸಿದ್ಧಾಂತಗಳು ಲಿಂಗಾಯತ ಧರ್ಮದ ಉದಯಕ್ಕೆ ಕಾರಣವಾದವು. ಹಾಗಾಗಿ ಬಸವಣ್ಣನವರನ್ನು ಲಿಂಗಾಯತ ಧರ್ಮದ ಧರ್ಮಗುರು ಎಂದು ಗೌರವಿಸುತ್ತ ಬರಲಾಗಿದೆ. ಅವರೇ ಇಷ್ಟಲಿಂಗದ ಜನಕ. ಬಸವಣ್ಣನವರು ಕೇವಲ ಗುರು, ಜಗದ್ಗುರು ಅಲ್ಲ; ‘ಗೃಹಸ್ಥ ಜಗದ್ಗುರು’ ಎಂದು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳುತ್ತಿದ್ದರು. ಅವರ ಬರಹದಲ್ಲೂ ಅದು ದಾಖಲಾಗಿದೆ.

ಲೋಕಾರೂಢಿಯಲ್ಲಿ ಒಬ್ಬ ಜಗದ್ಗುರು ಎಂದರೆ ಅವರಿಗೊಂದು ದೊಡ್ಡ ಮಠವಿರಬೇಕು. ಅವರು ಆ ಮಠದ ಗುರು ಎಂದು ಭಕ್ತರು ಗೌರವಿಸಬೇಕು. ಆ ವ್ಯಕ್ತಿ ಕಾವಿಧರಿಸಿ ಸನ್ಯಾಸಿಯಾಗಿ ಬಾಳಬೇಕು. ಹಲವಾರು ಶಾಖಾ ಮಠಗಳು ಅವರ ಅಧೀನದಲ್ಲಿರಬೇಕು. ಸಂಸಾರದಿಂದ ದೂರವಿದ್ದು ಭಕ್ತರಿಗೆ ಹತ್ತಿರವಾಗಿರಬೇಕು. ಆದರೆ ಬಸವಣ್ಣನವರು ಯಾವುದೇ ಮಠದ ಮಠಾಧಿಪತಿಯಾಗಿರಲಿಲ್ಲ. ಸನ್ಯಾಸಿ ಮೊದಲೇ ಅಲ್ಲ. ಇಬ್ಬರು ಸತಿಯರ ಪತಿ. ಬಿಜ್ಜಳನ ರಾಜ್ಯದಲ್ಲಿ ಅರ್ಥ ಸಚಿವರು. ಅವರನ್ನು ‘ಗೃಹಸ್ಥ ಜಗದ್ಗುರು’ ಎಂದು ನಮ್ಮ ಗುರುಗಳು ಗೌರವಿಸಲು ಕಾರಣವೆಂದರೆ: ಅವರ ನಡೆ-ನುಡಿಯ ಶುದ್ಧಿ, ಧಾರ್ಮಿಕ ಒಲವು, ಆಧ್ಯಾತ್ಮಿಕ ಸಾಧನೆ, ಜನಪರ ಹಾಗೂ ಜೀವಪರ ಕಾಳಜಿ. ನಮ್ಮ ಗುರುಗಳು ಹೇಳುತ್ತಿದ್ದ ಮತ್ತೊಂದು ಮಾತು: ಸನ್ಯಾಸಿಯ ಜೀವನಕ್ಕಿಂತ ಗೃಹಸ್ಥ ಜೀವನ ಶ್ರೇಷ್ಠ ಎಂದು. ಗೃಹಸ್ಥಧರ್ಮದ ಶ್ರೇಷ್ಠತೆಯನ್ನು ಉಳಿಸಿಕೊಂಡವರು ಬಸವಣ್ಣನವರಾದ್ದರಿಂದ ಅವರು ‘ಗೃಹಸ್ಥ ಜಗದ್ಗುರು’. ಹಾಗೆ ಅವರನ್ನು ಒಪ್ಪಿಕೊಂಡಮೇಲೆ ಗೃಹಸ್ಥರ ಮತ್ತು ಜಗದ್ಗುರುಗಳ ಆಂತರಿಕ ಮತ್ತು ಬಾಹ್ಯ ಬದುಕು ಹೇಗಿರಬೇಕು? ಮಠದ ಅಧಿಪತಿಯಾಗಿ ಮೈಮೇಲೆ ಕಾವಿ ಬಟ್ಟೆ, ಹಣೆ ಮೇಲೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಎದೆ ಮೇಲೆ ಇಷ್ಟಲಿಂಗ ಧರಿಸಿ ಪ್ರತಿದಿನ ಬೆಳಗ್ಗೆ, ಮದ್ಯಾಹ್ನ, ಸಂಜೆ-ಮೂರು ಹೊತ್ತು ಲಿಂಗಪೂಜೆ ಮಾಡಿದರೆ ಒಬ್ಬ ಗುರುವಾಗಬಹುದೇ? ಗುರುವಿನ ಕಾಯಕ ಇಷ್ಟಕ್ಕೇ ಮುಗಿಯಿತೇ? ಇವು ಕೇವಲ ಬಾಹ್ಯ ಆಚರಣೆಗಳಾದವು. ಇವುಗಳ ಜೊತೆ ಅವರು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಂತಹ ದುರ್ಗುಣಗಳನ್ನು ಕಳೆದುಕೊಳ್ಳಬೇಕು. ಕಾಮನೆಗಳಿಗೆ ಕಡಿವಾಣ ಹಾಕಬೇಕು. ಅಂತರಂಗ ಶುದ್ಧಿಯ ಮೂಲಕ ವ್ಯಕ್ತಿತ್ವಕ್ಕೆ ಚ್ಯುತಿ ಬಾರದ ಹಾಗೆ ನಡೆದುಕೊಳ್ಳಬೇಕು.

ಚನ್ನಬಸವಣ್ಣನವರ ‘ಕರಣ ಹಸಿಗೆ’ ಹೇಳುವುದೇ ಆಂತರಿಕ ಶುದ್ಧಿಯನ್ನು. ಬಸವಣ್ಣನವರು ‘ಕೂಡಲಸಂಗಮದೇವರನೊಲಿಸ ಬಂದ ಪ್ರಸಾದಕಾಯವ ಕೆಡಿಸಲಾಗದು’ ಎಂದಿದ್ದಾರೆ. ಕೆಲವು ಸ್ವಾಮಿಗಳನ್ನೂ ಒಳಗೊಂಡಂತೆ ಬಹುತೇಕ ಜನರು ತಮ್ಮ ದೇಹವನ್ನು ಒಂದು ಕೊಚ್ಚೆ ಅಥವಾ ಚರಂಡಿಯನ್ನಾಗಿಸಿಕೊಂಡಿದ್ದಾರೆ. ಚರಂಡಿಯಲ್ಲಿ ದುರ್ವಾಸನೆ ಇರುತ್ತದೆ. ಅನೇಕ ಕ್ರಿಮಿ ಕೀಟಗಳು ಪಿತಿಗುಟ್ಟುತ್ತಿರುತ್ತವೆ. ಮಾನವನ ದೇಹ ಎಂದೂ ಚರಂಡಿಯಾಗಬಾರದು. ಎಂದರೆ ಅರಿಷಡ್ವರ್ಗಗಳಿಂದ ಹೊರ ಬರಬೇಕು. ಕುಡಿಯಬಾರದ್ದನ್ನು ಕುಡಿಯುವ, ತಿನ್ನಬಾರದ್ದನ್ನು ತಿನ್ನುವ, ಮಾಡಬಾರದ್ದನ್ನು ಮಾಡುವ, ಮುಟ್ಟಬಾರದ್ದನ್ನು ಮುಟ್ಟುವ ಹೀನ ಕಾರ್ಯದಿಂದ ದೂರವಿರಬೇಕು. ಹೀಗಿಲ್ಲದೆ ಅವುಗಳನ್ನು ಒಡಲೊಳಗೆ ಅಡಗಿಸಿಕೊಂಡು ಅನಾಚಾರಿಗಳಾಗಿ ನಡೆದುಕೊಂಡರೆ ಮಠದಲ್ಲಿದ್ದರೇನು? ಕಾವಿ ಧರಿಸಿದ್ದರೇನು? ಆತ ಆತ್ಮವಂಚಕ, ಸಮಾಜದ್ರೋಹಿ. ಕಾವಿಬಟ್ಟೆ ಧರಿಸುವುದಷ್ಟೇ ಮುಖ್ಯವಲ್ಲ. ಕಾಮನೆಗಳಿಗೆ ಕಾವಿಯನ್ನು ಹಾಕಿಕೊಳ್ಳಬೇಕು. ಅಂದರೆ ಅವುಗಳಿಗೆ ಕಡಿವಾಣ ಹಾಕಬೇಕು. ಅದು ಕಾರಣವೇ ‘ತನು ಬೋಳಾದಡೇನಯ್ಯಾ, ಮನ ಬೋಳಾಗದನ್ನಕ್ಕರ’ ಎಂದಿದ್ದಾರೆ ಚೆನ್ನಬಸವಣ್ಣ. ಮಂಡೆ ಬೋಳಾಗುವ ಮುನ್ನ ಮನಸ್ಸು ಬೋಳಾಗಬೇಕು. ದುಶ್ಚಟ, ದುರಭ್ಯಾಸಗಳಿಂದ ದೂರವಿರಬೇಕು. ಸಚ್ಚಾರಿತ್ರ್ಯವಂತರಾಗಿ ಬಾಳಬೇಕು.

ನಾವು ಸಂದರ್ಭಾನುಸಾರ ಸ್ವಾಮಿ ವಿವೇಕಾನಂದರನ್ನು ಸ್ಮರಿಸಿಕೊಳ್ತೇವೆ. ಅವರು 1893ರಲ್ಲಿ ಅಮೆರಿಕೆಯ ಚಿಕಾಗೊದಲ್ಲಿ ನಡೆದ `ವಿಶ್ವಧರ್ಮ ಸಮ್ಮೇಳನ’ದಲ್ಲಿ ಭಾಗವಹಿಸಲು ಭಾರತದಿಂದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೋಗುವರು. ಅವರಿಗೆ ಆಹ್ವಾನ ಇರಲಿಲ್ಲ. ಸಮ್ಮೇಳನದ ಮೊದಲ ದಿನವೇ (ಸೆಪ್ಟೆಂಬರ್ 11) ಕೊನೆಯ ಉಪನ್ಯಾಸಕರಾಗಿ ಮಾತನಾಡುವ ಅವಕಾಶ ಲಭ್ಯವಾಗುವುದು. ‘ಅಮೆರಿಕೆಯ ಸಹೋದರ ಸಹೋದರಿಯರೇ…’ ಎನ್ನುವ ಮಾತುಗಳು ಅಲ್ಲಿದ್ದವರ ಕಣ್ಣು, ಹೃದಯಗಳನ್ನು ತೆರೆಸುತ್ತವೆ. ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿ ಸ್ವಾಗತಿಸುವರು. ಮುಂದೆ ಅವರ ಮಾತಿಗೆ ಮರುಳಾಗದವರೇ ವಿರಳ. ಅನಾಮಧೇಯರಾಗಿದ್ದ ವಿವೇಕಾನಂದರು ಬೆಳಕು ಹರಿಯುತ್ತಲೇ ವಿಶ್ವವಿಖ್ಯಾತರಾಗುವರು. ಅವರನ್ನು ಒಬ್ಬ ಶ್ರೀಮಂತ ತರುಣಿ ಮನೆಗೆ ಆಹ್ವಾನಿಸಿ ಮೂರು ದಿನಗಳ ಕಾಲ ಆತಿಥ್ಯ ನೀಡುವಳು. ಅವರು ನಿರ್ಗಮಿಸುವ ಮುನ್ನ ಆ ತಾಯಿ ವಿವೇಕಾನಂದರಲ್ಲಿ “ಸ್ವಾಮಿಜೀ ನನ್ನದೊಂದು ಚಿಕ್ಕ ಬಯಕೆ ಇದೆ. ಅದನ್ನು ತಾವು ಈಡೇರಿಸಬೇಕು” ಎಂದು ಕೇಳುವಳು. ಏನಮ್ಮ ನಿನ್ನ ಬಯಕೆ ಎಂದಾಗ: ನಿಮ್ಮಷ್ಟೇ ಮೇಧಾವಿ, ಸುರದ್ರೂಪಿ ಮತ್ತು ದೃಢಕಾಯವುಳ್ಳ ಮಗುವನ್ನು ನಿಮ್ಮಿಂದ ಪಡೆಯುವ ಬಯಕೆ ಎನ್ನುವಳು. ಬಹುಶಃ ಈಗಿನ ಸನ್ಯಾಸಿಗಳಾಗಿದ್ದರೆ ಏನು ಹೇಳಬಹುದಾಗಿತ್ತು? ವಿವೇಕಾನಂದರು ಹೇಳುತ್ತಾರೆ: ತಾಯಿ ನಿನ್ನ ಬಯಕೆ ಪವಿತ್ರವಾದುದು. ಪ್ರತಿಯೊಬ್ಬ ತಾಯಿಗೂ ಇರಬೇಕಾದ ಬಯಕೆ. ಆದುದರಿಂದ ನನ್ನನ್ನೇ ನಿನ್ನ ಮಗುವನ್ನಾಗಿ ಸ್ವೀಕರಿಸಿ ನನಗೆ ತಾಯ್ತನ ಕರುಣಿಸು ಎನ್ನುವರು. ಇದು ಒಬ್ಬ ಸನ್ಯಾಸಿಗೆ ಇರಬೇಕಾದ ಗುಣ.
`ಆತ್ಮನಿವೇದನೆ’ ಕೃತಿಯಲ್ಲಿ ನಮ್ಮ ಗುರುಗಳು `ಇದುವರೆಗೂ ಯಾವ ಮಾತೆಯಲ್ಲೂ ನಾನು ಅತ್ಯಾಚಾರವನ್ನು ಮಾಡಿಲ್ಲ. ಆದ ಮಾತ್ರಕ್ಕೆ ನಾನು ಜಿತೇಂದ್ರಿಯನೆಂದೂ ಅಲ್ಲ’ ಎಂದು ಬರೆಯುತ್ತಾರೆ. ಮನಸ್ಸಿನಲ್ಲಿ ಕಾಮುಕ ಭಾವನೆ ಹುಟ್ಟಿದರೆ ಅವರು ಜಿತೇಂದ್ರಿಯರಾಗಲು ಸಾಧ್ಯವಿಲ್ಲ ಎನ್ನುವುದು ಗುರುಗಳ ಅಭಿಪ್ರಾಯ. ಸ್ವಾಮಿಗಳು ಜಿತೇಂದ್ರಿಯತ್ವ ಕಾಪಾಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಾಮನೆಗಳು ಕಾಡುವುದು ಸಹಜ. ಅವುಗಳ ಮೇಲೆ ಕಡಿವಾಣ ಹಾಕಿಕೊಳ್ಳುವ ಸಂಕಲ್ಪ ಮುಖ್ಯ. ಬದಲಾಗಿ ಕಾಮನೆಗಳ ಜೊತೆ ಓಡುತ್ತಿದ್ದರೆ ಮನುಷ್ಯ ದುರ್ಬಲವಾಗುವನು, ದುರ್ನಡತೆಗೆ ಪ್ರೇರಣೆಯಾಗುವುದು. ಆತ ತನ್ನ ಮನಸ್ಸಿನ ಮೇಲೆ ತಾನೇ ನಿಯಂತ್ರಣ ತಂದುಕೊಳ್ಳಬೇಕು. `ಆತ್ಮನಿವೇದನೆ’ಯಲ್ಲಿ `ಏಕಾಂತವು ಉತ್ತಮವಾದುದು: ಮನಸ್ಸು ವಶದಲ್ಲಿದ್ದರೆ, ಏಕಾಂತದಿಂದ ಮಹಾಹಾನಿಯು: ಮನಸ್ಸಿನ ಅಧೀನದಲ್ಲಿದ್ದರೆ’ ಎಂದಿದ್ದಾರೆ.

ಸುಮಾರು ವರ್ಷಗಳ ಹಿಂದಿನ ಘಟನೆ: ಭವಿಷ್ಯ ಹೇಳಲು ದಾಡಿವಾಲಾಗಳು ಬರುತ್ತಿರುತ್ತಾರೆ. ನೋಡಲು ಸಿಖ್ ನಂತೆ ಕಾಣುವ ಒಬ್ಬ ಒಂದು ಭಾನುವಾರ ಸಿರಿಗೆರೆಯಲ್ಲಿ ನಮ್ಮ ಭೇಟಿಗೆ ಬಂದಿದ್ದ. ಆತ ದೈಹಿಕವಾಗಿ ತುಂಬಾ ಬಲಿಷ್ಟವಾಗಿದ್ದವ. ಖಾಸಗಿಯಾಗಿ ಮಾತನಾಡಬೇಕಿದೆ ಎಂದ. ನಮಗೆ ಖಾಸಗಿತನ ಎನ್ನುವುದಿಲ್ಲ; ನಮ್ಮದೇನಿದ್ದರೂ ಬಯಲಂಗಡಿ ವ್ಯಾಪಾರ. ಎಲ್ಲರೆದುರಿಗೇ ಹೇಳಿ ಎಂದೆವು. ಆತ ಖಾಸಗಿಯಾಗಿಯೇ ಮಾತನಾಡಬೇಕು ಎಂದಾಗ ಅಲ್ಲಿದ್ದ ಭಕ್ತರು ಒಬ್ಬೊಬ್ಬರೇ ಎದ್ದು ಹೊರನಡೆದರು. ಆತ ತಕ್ಷಣ ಬಾಗಿಲು ಮುಚ್ಚಿ ಬೋಲ್ಟ್ ಹಾಕಿದ. ನಮಗೆ ಭಯ ಅವನ ಆಕಾರ ನೋಡಿ. ಸ್ವಾಮಿಜೀ ತಮಗೆ ಒಂದು ದೊಡ್ಡ ವಿಪತ್ತು ಕಾಯ್ದಿದೆ. ಅದನ್ನು ಪರಿಹರಿಸಲು ಬಂದಿರುವೆ ಎಂದ. ಮನದಲ್ಲೇ ನೀನು ಬಂದಿರುವುದೇ ಒಂದು ದೊಡ್ಡ ವಿಪತ್ತು ಎಂದುಕೊಂಡು ಏನು ಎಂದೆವು. ಇಲ್ಲಿ ಬೇಡ ಎಂದು ನಮ್ಮ ಮಲಗುವ ಕೋಣೆಗೆ ಕರೆದುಕೊಂಡು ಹೋದ. ಚಕ್ಕಲಬಕ್ಕಲ ಹಾಕಿಕೊಂಡು ಕೂರಬೇಕು ಎಂದ. ಅವನು ಹೇಳಿದಂತೆ ಕೂತಾಗ ತಮಗೆ ಒಂದು ಹೆಣ್ಣಿನ ಕಾಟ ಇದೆ. ಅದು ಪದೇ ಪದೇ ನಿಮ್ಮ ಮನಸ್ಸನ್ನು ದುರ್ಬಲಗೊಳಿಸಿ ತನ್ನ ವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದ. ನಾವು ಹೆದರಿದಂತೆ ನಟಿಸಿ ಇದಕ್ಕೆ ಪರಿಹಾರವೇನು ಎಂದಾಗ ಆತ ಒಂದು ನಾಣ್ಯವನ್ನು ನಮ್ಮ ಎಡ ಅಂಗೈಯಲ್ಲಿಟ್ಟು ಬಲಗೈನಿಂದ ಬಿಗಿಯಾಗಿ ಮುಚ್ಚಿಕೊಳ್ಳಲು ಹೇಳಿದ. ಹಾಗೇ ಮಾಡಿದ್ವಿ. ಸುಡುತ್ತಿದೆಯೇ ಎಂದ. ಸುಡುತ್ತಿದ್ದರಿಂದ ಹೌದು ಎಂದೆವು. ಈಗ ಆ ಹೆಣ್ಣು ಸುಟ್ಟು ಬೂದಿಯಾಗುತ್ತಿದ್ದಾಳೆ ನೋಡಿ ಎಂದ. ಕೈ ತೆಗೆದಾಗ ಅಲ್ಲಿ ನಾಣ್ಯದ ಜೊತೆ ಬೂದಿಯೂ ಇತ್ತು.

ಅವನ ಗುಟ್ಟನ್ನು ಅರ್ಥಮಾಡಿಕೊಳ್ಳಲು ದೊಡ್ಡ ವಿಪತ್ತನ್ನು ದೂರ ಮಾಡಿದಿರಿ ಎಂದು ಕೃತಜ್ಞತೆ ಹೇಳಿದ್ವಿ. ಇಷ್ಟಕ್ಕೇ ತಾವು ಕೃತಜ್ಞತೆ ಹೇಳುವ ಅಗತ್ಯವಿಲ್ಲ ಎಂದು ಒಂದು ಕಪ್ಪು ಮಣಿ ಕೊಟ್ಟು ಇದು ಯಾವಾಗಲೂ ನಿಮ್ಮ ಜೊತೆಯಲ್ಲೇ ಇರಬೇಕು ಎಂದ. ಅವಳು ಸುಟ್ಟು ಬೂದಿಯಾಗಿರುವಾಗ ಈ ಮಣಿಯ ಅಗತ್ಯವೇನು ಎಂದಾಗ ಮತ್ತೊಬ್ಬ ಹೆಣ್ಣು ಗಂಟುಬೀಳಬಾರದು ಎನ್ನುವ ದೂರದೃಷ್ಟಿಯಿಂದ ಎಂದ. ಅದನ್ನೂ ಪಡೆದು ಪ್ರಸಾದ ಮಾಡಿಕೊಂಡು ಹೋಗಲು ಹೇಳಿದ್ವಿ. ಏನೂ ಕೊಡುವುದಿಲ್ಲವೇ ಎಂದ. ಏನು ಕೊಡಬೇಕು ಎಂದಾಗ ಬಹುದೊಡ್ಡ ಕಂಟಕ ಕಳೆದಿದ್ದೇನೆ. ಕಾಣಿಕೆ ಕೊಡಬೇಕು ಎಂದ. ಎಷ್ಟು ಕೊಡಬೇಕು ಎಂದಾಗ ಇದೊಂದು ದೊಡ್ಡ ಗಿರಾಕಿ ಎಂದುಕೊಂಡು ಇಪ್ಪತ್ತೈದು ಸಾವಿರ ಕೊಡಿ ಎಂದ. ನಮ್ಮ ಆಫೀಸಿನಲ್ಲಿ ಚೆಕ್ ಬುಕ್ ಇದೆ ಎಂದು ಅಲ್ಲಿಗೆ ಕರೆದುಕೊಂಡು ಹೋದ್ವಿ. ಚೆಕ್ ಬುಕ್ ತೆಗೆದು ಎಷ್ಟು ಬರೆಯೋಣ ಎಂದು ಮತ್ತೊಮ್ಮೆ ಕೇಳಿದಾಗ ಅವನಿಗೆ ದಿಗಿಲಾಗಿರಬೇಕು. ನಾನು ಕೇಳಿದ್ದು ಕಡಿಮೆ ಆಯ್ತೇನೋ ಎಂದುಕೊಂಡು ಇಪ್ಪತ್ತೈದು ಸಾವಿರದ ಮೇಲೆ ಎಷ್ಟಾದರೂ ಬರೆಯಿರಿ ಎಂದ. ನಾವು ಆಫೀಸಿನ ಹುಡುಗನಿಗೆ ಒಂದು ಕೋಲು ತರಲು ಹೇಳಿದ್ವಿ. ಆತ ಕೋಲು ತರುತ್ತಲೇ ಇವನಿಗೆ ನಾಲ್ಕು ಬಾರಿಸು ಎಂದೆವು. ಯಾಕ್ರಿ ಎಂದು ಮೇಲೆದ್ದ. ಅಲ್ಲಪ್ಪ ಈಗ ನಿನ್ನನ್ನು ಕೋಲಿನಿಂದ ಹೊಡೆಸುತ್ತೇವೆ ಎನ್ನುವ ನಿನ್ನ ಭವಿಷ್ಯವೇ ನಿನಗೆ ಗೊತ್ತಿಲ್ಲ. ಹೀಗಿರುವಾಗ ನಮ್ಮ ಭವಿಷ್ಯ ನೀನೇನು ಹೇಳುವೆ? ಒಂದು ಹೆಣ್ಣಿನಿಂದ ವಿಪತ್ತಿದೆ ಎಂದೆಯಲ್ಲವೇ? ಬದಲಾಗಿ ನಾವು ಹೇಳುತ್ತೇವೆ: ಹೆಣ್ಣಿನಿಂದ ವಿಪತ್ತು ನಮಗಲ್ಲ; ನಮ್ಮಿಂದ ಆ ಹೆಣ್ಣಿಗೆ ವಿಪತ್ತು. ಏಕೆಂದರೆ ಗುರುಗಳು ಎನ್ನುವ ಸದ್ಭಾವನೆಯಿಂದ ಆಶೀರ್ವಾದ ಪಡೆಯಲು ಅನೇಕ ತಾಯಂದಿರು ನಮ್ಮ ಬಳಿ ಬರುವರು. ಆಗ ನಮ್ಮಿಂದ ಅವಳಿಗೆ ಅಪಾಯವಾಗಬಹುದೇ ಹೊರತು ಅವಳಿಂದ ನಮಗಲ್ಲ ಅಲ್ಲವೇ ಎಂದಾಗ ಆತ ನಡುಗುತ್ತ ನಿಂತ. ಅವನಿಗೆ ಛೀಮಾರಿ ಹಾಕಿ ಅಲ್ಲಿಂದ ಓಡಿಸಿದ್ವಿ.

ಯಾವುದೇ ಗುರು ಎಲ್ಲ ರೀತಿಯ ಮೌಢ್ಯಗಳಿಂದ ಮುಕ್ತನಾಗಿರಬೇಕು. ಆದರೆ ನಮ್ಮಲ್ಲಿ ಸ್ವಾಮಿಗಳಾದವರಲ್ಲೇ ಇನ್ನೂ ಅನೇಕ ಮೂಢಾಚರಣೆಗಳಿವೆ. ರಾಣೇಬೆನ್ನೂರು ಭಾಗದ ಒಂದು ಮಠದ ಸ್ವಾಮಿಗಳು ಸುಮಾರು ವರ್ಷಗಳ ಹಿಂದೆ ಪೊನ್ ಮಾಡಿ ಸ್ವಾಮೀಜಿ ಇಂಥ ದಿನ ನಮ್ಮ ಹೊಸ ಮಠದ ಪ್ರವೇಶ ಇಟ್ಟುಕೊಂಡಿದ್ದೇವೆ. ತಾವು ದಯಮಾಡಿಸಬೇಕು ಎಂದರು. ನಮ್ಮ ದಿನಚರಿ ನೋಡಿದಾಗ ಅಂದು ಬೇರೆ ಕಾರ್ಯಕ್ರಮ ಇತ್ತು. ಬೇರೆ ದಿನ ಆದರೆ ಬರಲು ಸಾಧ್ಯ ಎಂದೆವು. ಅವತ್ತು ಅಮೃತಗಳಿಗೆ ಇದೆ. ಅದು ಶ್ರೇಷ್ಠ ದಿನ. ಅವತ್ತೇ ಮಾಡಬೇಕು ಎಂದರು. ನೀವು ಬಸವಪರಂಪರೆಯ ಸ್ವಾಮಿಗಳಾಗಿ ಶುಭ ಮುಹೂರ್ತ, ಅಮೃತಗಳಿಗೆ, ದಿನ ಶ್ರೇಷ್ಠ ಎಂದು ನೋಡುವುದು ಸರಿಯೇ ಎಂದು ಕೇಳಿದ್ವಿ. ನೀವು ಬರದಿದ್ದರೂ ಚಿಂತೆಯಿಲ್ಲ. ನಾವು ಅಂದೇ ಅಮೃತಗಳಿಗೆಯಲ್ಲೇ ಕಾರ್ಯಕ್ರಮ ಮಾಡುತ್ತೇವೆ ಎಂದರು. ಇಂಥ ಸ್ವಾಮಿಗಳೇ ಹೆಚ್ಚಾದರೆ ಭಕ್ತರ ಮೌಢ್ಯ ಕಳೆಯಲು ಹೇಗೆ ಸಾಧ್ಯ? ಹೋಮ, ಯಜ್ಞ, ರುದ್ರಾಭಿಷೇಕ ಇತ್ಯಾದಿ ಲಿಂಗಾಯತ ಧರ್ಮದ ಆಚರಣೆಗಳಲ್ಲ. ಆದರೆ ವೈದಿಕ ಮೂಢಾಚರಣೆಗಳನ್ನು ಮೈಗೂಡಿಸಿಕೊಂಡು ಬಂದವರು ಇಂದಿಗೂ ಅವುಗಳಿಂದ ಹೊರಬರಲು ಸಿದ್ಧರಿಲ್ಲ. ಸ್ವಾಮಿಗಳೇ ಮನದಿಂದ, ಮಠದಿಂದ ಮೌಢ್ಯಗಳನ್ನು ಕಿತ್ತೆಸೆಯದಿದ್ದರೆ ಅಂಥವರು ಹೇಗೆ ಲಿಂಗಾಯತ ಗುರುಗಳಾಗಲು ಸಾಧ್ಯ?

2024 ಜೂನ್ 30ರಂದು ನಡೆದ ಘಟನೆ. ಉದ್ಯೋಗದಲ್ಲಿರುವ ಮತ್ತು ನಮಗೆ ಪರಿಚಿತವಿದ್ದ ಮಹಿಳೆಯೊಬ್ಬರು ಬೆಂಗಳೂರಲ್ಲಿ ಗೃಹಪ್ರವೇಶ ಇಟ್ಟುಕೊಂಡ ವಿಚಾರವನ್ನು ವಾಟ್ಸಪ್‍ನಲ್ಲಿ ಕಳಿಸಿದ್ದರು. ಬೆಳಗ್ಗೆ 8 ಗಂಟೆಗೆ ಪಾಂಡೋಮಟ್ಟಿಯ ಶ್ರೀ ಗುರುಬಸವ ಮಹಾಸ್ವಾಮಿಗಳವರ ಆಗಮನ ಮತ್ತು ಪೂಜ್ಯರ ಇಷ್ಟಲಿಂಗಾರ್ಚನೆ ಹಾಗೂ ಆಶೀರ್ವಚನ ಎಂದಿತ್ತು. ಇಷ್ಟೇ ಇದ್ದಿದ್ದರೆ ಅನುಕರಣೀಯ ಗೃಹಪ್ರವೇಶ ಎನ್ನಬಹುದಿತ್ತು. ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 2-30ರವರೆಗೆ ಹೋಮ ಮತ್ತು ನವಗ್ರಹ ಪೂಜೆ; ನಡೆಸಿಕೊಡುವವರು ಶ್ರೀ ಶಾರದಾಂಬ ಟೆಂಪಲ್‍ನ ಅರ್ಚಕರಾದ ಶ್ರೀ ಗೋಪಾಲಭಟ್ ಅವರು ಎಂದೆಲ್ಲ ಇತ್ತು. ತಕ್ಷಣ ಆ ತಾಯಿಗೆ ವಾಟ್ಸಪ್‍ನಲ್ಲೇ ‘ಶ್ರೀಗಳವರಿಂದ ಲಿಂಗಾರ್ಚನೆ ಮತ್ತು ಆಶೀರ್ವಚನ ಇದ್ದಮೇಲೆ ಹೋಮ, ನವಗ್ರಹ ಪೂಜೆ ಏಕೆ ಬೇಕು? ಹೋಮ, ನವಗ್ರಹ ಪೂಜೆ ಬಸವಪರಂಪರೆಯಲ್ಲ. ಇದನ್ನು ಮಾಡಬಾರದು. ನಿಮ್ಮಂಥ ವಿದ್ಯಾವಂತರೇ ಬದಲಾವಣೆ ತರಬೇಕು’ ಎಂದು ಬರೆದೆವು. ಅದಕ್ಕೆ ‘ಆಗಲಿ ಬುದ್ಧಿ ಮುಂದೆ ಪಾಲಿಸುತ್ತೇವೆ’ ಎನ್ನುವ ಉತ್ತರ ಬಂತು. ‘ಬಸವಣ್ಣನವರ ಭಾವಚಿತ್ರದ ಪೂಜೆ ಮಾಡಿ ವಚನಗಳನ್ನು ಹಾಡಿಸಿ ಅನುಭವ ಮಂಟಪದಲ್ಲಿ ನಡೆದಂತೆ ಬಸವತತ್ವ ಚಿಂತನೆ ನಡೆಸಿ ಬಂದವರಿಗೆಲ್ಲ ಮುಂದೆ ನಿಮ್ಮ ಮನೆಯಲ್ಲೂ ಹೀಗೇ ಮಾಡಿ ಎನ್ನುವ ಅರಿವು ಮೂಡಿಸಿದರೆ ನಿಮ್ಮ ಗೃಹಪ್ರವೇಶ ಎಲ್ಲರ ಗಮನ ಸೆಳೆಯುವುದು’ ಎಂದು ಬರೆದೆವು. ‘ಆಗಲಿ’ ಎನ್ನುವ ಪ್ರತಿಕ್ರಿಯೆ ಬಂತು. ಆದರೆ ಮುಂದೆ ಅವರ ಹಿರಿಯರು ಹೋಮ, ನವಗ್ರಹ ಪೂಜೆ ಆಗಲೇಬೇಕೆಂದು ಹಠ ಹಿಡಿದು ಮಾಡಿಸಿದರೆಂದು ತಿಳಿಯಿತು. ಆ ತಾಯಿ ಮತ್ತೆ ನಮಗೆ ಬರೆದದ್ದು `ನನಗೆ ಪೂಜೆ ಪುನಸ್ಕಾರಗಳ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ತಡವಾದರೂ ತಮ್ಮಿಂದ ತಿಳಿಯಿತು. ಮುಂದೆ ಮಗಳ ಮದುವೆಯನ್ನು ಶರಣ ಸಂಪ್ರದಾಯದಲ್ಲಿ ಮಾಡುವ ವಿವೇಕ ಮೂಡಿದೆ. ತಮ್ಮ ಆಶೀರ್ವಾದವಿರಲಿ. ವಿಭೂತಿಯ ಸಾಗರ ದರ್ಶನಕ್ಕೂ ಅರಿಶಿಷ ಕುಂಕುಮದ ಮೌಢ್ಯತೆಯ ಹೊಂಡಕ್ಕೂ ವ್ಯತ್ಯಾಸ ಅರಿವಾಯಿತು. ಇನ್ನೆಂದೂ ಇಂತಹ ಮೌಢ್ಯದ ಹಿಂದೆ ಹೋಗುವುದಿಲ್ಲ. ಕ್ಷಮಿಸಿ ಬುದ್ಧಿ’ ಎಂದು. ವೈದಿಕ ಆಚರಣೆಗಳು ಎಷ್ಟು ಆಳವಾಗಿ ಜನರನ್ನು ಆಳುತ್ತಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಇದರಿಂದ ಮುಕ್ತವಾಗಬೇಕು ಎಂದರೆ ಬಸವಪರಂಪರೆಯನ್ನು ಅರಿತು ಅದರತ್ತ ದೃಢವಾದ ಹೆಜ್ಜೆಗಳನ್ನಿಡಬೇಕು.

ಕಾವಿಧಾರಿಗಳು ಪಾರದರ್ಶಕವಾಗಿರುವುದು ಬಹುಮುಖ್ಯ. ಅಂತರಂಗ ಮತ್ತು ಬಹಿರಂಗ ಶುದ್ಧಿ ಮುಖ್ಯ. ಈ ಶುದ್ಧಿ ಕೇವಲ ಸ್ನಾನ, ಧ್ಯಾನದಿಂದ ಬರುವಂತಹುದಲ್ಲ. ಬದಲಾಗಿ ಕಳಬೇಡ, ಕೊಲಬೇಡ ಎನ್ನುವ ಸಪ್ತಶೀಲಗಳನ್ನು ವ್ಯಕ್ತಿಗತ ಬದುಕಿನಲ್ಲಿ ತಂದಾಗ ಸಾಧ್ಯ. ಸಪ್ತಶೀಲಗಳು ಬೇರೆ ಯಾರಿಗೋ ಹೇಳಿದವುಗಳಲ್ಲ. ನಮಗೇ ಹೇಳಿದವು. ನಾವೇ ಕಳವು ಮಾಡಬಾರದು, ಕೊಲ್ಲಬಾರದು… ಇವು ದೈಹಿಕವಾಗಿಯೂ, ಮಾನಸಿಕವಾಗಿಯೂ ಅನ್ವಯಿಸುವಂತಹವು. ಸಪ್ತಶೀಲಗಳಂತೆ ನಡಾವಳಿಕೆ ಇದ್ದರೆ ಇನ್ನೊಬ್ಬರನ್ನು ತಿದ್ದುವ ಹಕ್ಕು ಬರುತ್ತದೆ. ಹಾಗಾಗಿ ಅಂತರಂಗ, ಬಹಿರಂಗ ಶುದ್ಧವಾಗಿರುವಂತೆ ಎಚ್ಚರವಹಿಸಬೇಕು. ಕಾಮನೆಗಳು ಕಾಡಿದರೂ ಎಚ್ಚರ ಇದ್ದರೆ ಅವುಗಳಿಂದ ಮುಕ್ತರಾಗಲು ಸಾಧ್ಯ. ಅಕ್ಕನ ಒಂದು ವಚನ ನೋಡಿ:
ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು.

ಕರ್ಣಕ್ಕೆ ಶೃಂಗಾರ ಪುರಾತನರ ಸುಗೀತಂಗಳ ಕೇಳುವುದು.
ವಚನಕ್ಕೆ ಶೃಂಗಾರ ಸತ್ಯವ ನುಡಿವುದು.
ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ.
ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು.
ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ.
ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ
ಚೆನ್ನಮಲ್ಲಿಕಾರ್ಜುನಾ?

ಈ ವಚನ ಪ್ರತಿಯೊಬ್ಬರ ಬದುಕಿಗೂ ಅನ್ವಯಿಸುವಂತಹುದು. ಒಳ್ಳೆಯದನ್ನು ನೋಡಬೇಕು, ಒಳ್ಳೆಯದನ್ನು ಗುರುತಿಸಬೇಕು. ಪುರಾಣ ಕೇಳುವ ಬದಲು ಶರಣರ ವಚನ ಸಾಹಿತ್ಯ ಕೇಳಬೇಕು. ಆಡುವ ಮಾತುಗಳಿಗೆ ಸತ್ಯವೇ ಶೃಂಗಾರ. ಸುಳ್ಳಿನಿಂದ ಏನನ್ನೂ ಕಟ್ಟಲಾಗುವುದಿಲ್ಲ. ದಾಸೋಹ ಮಾಡಬೇಕು. ಸತ್ಸಂಗ ಬೇಕು. ಗಣಮೇಳಾಪ ಮತ್ತೆ ಮತ್ತೆ ನಡೆದಾಗ ಅದು ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುವುದು. ಮನುಷ್ಯ ಮನಸ್ಸನ್ನು ತೆರೆದಿಟ್ಟುಕೊಳ್ಳಬೇಕು. ಅದನ್ನು ಮುಚ್ಚಿಟ್ಟುಕೊಂಡರೆ ಮೃಗದಂತಾಗಬಹುದು. ಇಂದು ಏನೆಲ್ಲ ಅನಾಹುತ ನಡೆಯಲು ಕಾರಣ ಒಳಗೆ ವಿಷಪ್ಪ, ಮೇಲೆ ಬಸಪ್ಪ ಆಗಿರುವುದು. ಮನುಷ್ಯ ಒಳ-ಹೊರಗೂ ಬಸಪ್ಪನಾಗಿರಬೇಕು. ಆಗ ಅನಾಹುತಗಳಿಂದ ಮುಕ್ತರಾಗಲು ಸಾಧ್ಯ. ಇದು ಮಠಾಧಿಪತಿಗಳಿಗೆ ಅನ್ವಯಿಸುವ ಮಾತು. 12ನೆಯ ಶತಮಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಲಿಂಗಾಯತ ಧರ್ಮದಲ್ಲಿ ಮಠಾಧಿಪತಿಗಳ ಪಾತ್ರ ಇಲ್ಲವೆಂದು ತಿಳಿದುಬರುತ್ತದೆ. ಲಿಂಗಾಯತ ಕಾಯಕ ಜೀವಿಗಳ ಧರ್ಮ. ತಳಸಮುದಾಯದ ಜನರು ಲಿಂಗಾಯತ ಧರ್ಮವನ್ನು ಕಟ್ಟಿ ಬೆಳೆಸಿದವರು ಮತ್ತು ಧರ್ಮದ ದಾರಿಯಲ್ಲಿ ನಡೆದುಕೊಂಡವರು. ಭ್ರಷ್ಟತೆ ವಿರೋಧಿಸಿದರು. ಪಾರದರ್ಶಕ ಜೀವನ ನಡೆಸಿದರು. ಕಾವಿಧಾರಿಗಳಿಗೆ ಇದು ಏಕೆ ಸಾಧ್ಯವಿಲ್ಲ? ಬೇರೆಯವರು ನಮ್ಮನ್ನು ಪ್ರಶ್ನೆ ಮಾಡಬೇಕಾಗಿಲ್ಲ. ಶರಣರು ಲೋಕ ತಿದ್ದುವ ಮುನ್ನ ತಮ್ಮನ್ನು ತಿದ್ದಿಕೊಂಡರು. 12ನೆಯ ಶತಮಾನದಲ್ಲಿ ಮಠ ಎನ್ನುವ ಶಬ್ದದ ಬಳಕೆ ಇದ್ದರೂ ಮಠಗಳ ಪ್ರಸ್ತಾಪವಿಲ್ಲ. ಶರಣರ ದೃಷ್ಟಿಯಲ್ಲಿ ಭಕ್ತರ ಮನೆಗಳೇ ಮಠಗಳು. ಅಂದರೆ ಮಠಗಳಲ್ಲಿ ನಡೆಯುವ ಸತ್ಕಾರ್ಯ, ಸದ್ವಿಚಾರ, ಸತ್ಸಂಗ ಮನೆಯಲ್ಲೂ ನಡೆಯಬೇಕು. ಇದು ಶರಣರ ಆಶಯ. ಆ ಕಾರ್ಯಕ್ಕೆ ಪ್ರೇರಣೆ ನೀಡಿದ್ದು ಅನುಭವ ಮಂಟಪ.

ಇವತ್ತು ನಮ್ಮ ಎಲ್ಲ ಮಠಗಳೂ ಅನುಭವ ಮಂಟಪ, ಮಹಾಮನೆಗಳಾಗಬೇಕು. ರಕ್ತಸಂಬಂಧಿಗಳ ಮನೆಯಂತಾದರೆ ಆ ಮಠದ ಮತ್ತು ಸ್ವಾಮಿಯ ಘನತೆ, ಗೌರವ ಬೀದಿಪಾಲಾಗುವುದು. ಹಾಗಾಗಿ ಮಠಗಳ ಸ್ವಾಮಿಗಳಿಗೆ ತರಬೇತಿ ಕೊಡಬೇಕು ಎನ್ನುವ ವಾದವೂ ಇದೆ. ನಮಗೆ ಅಥವಾ ನಮ್ಮಂಥ ಅನೇಕ ಸ್ವಾಮಿಗಳಿಗೆ ಯಾವ ತರಬೇತಿಯೂ ಆಗಿಲ್ಲ. ತರಬೇತಿ ಪಡೆದವರು ಆದರ್ಶ ಸ್ವಾಮಿಗಳಾಗುವರು, ಪಡೆಯದವರು ಆಗುವುದಿಲ್ಲ ಎಂದೇನಲ್ಲ. ಶಿವಯೋಗ ಮಂದಿರದಲ್ಲಿ ಸ್ವಾಮಿಗಳಿಗೆ ತರಬೇತಿ ಕೊಡುವುದು ಹಿಂದಿನಿಂದಲೂ ನಡೆದು ಬಂದಿದೆ. ಹಿಂದೊಮ್ಮೆ ನಾವು ಅಲ್ಲಿಗೆ ಹೋಗಿದ್ವಿ. ಅಲ್ಲಿದ್ದ ವಟುಗಳ ಜೊತೆ ಮಾತನಾಡುತ್ತ ಇಲ್ಲಿ ನೋಡುವಂತಹುದು ಏನಿದೆ ಎಂದಾಗ ಅವರು ಅಲ್ಲಿಯ ಗ್ರಂಥಾಲಯ, ಗದ್ದುಗೆ ಇತ್ಯಾದಿ ತೋರಿಸಿದರು. ಒಂದೆಡೆ ಬೆರಳು ಮಾಡಿ ಅಲ್ಲೇನು ನಡೆಯುತ್ತದೆ ಎಂದಾಗ ವಿಭೂತಿ ತಯಾರು ಮಾಡುವರು ಎಂದರು. ಹೇಗೆ ತಯಾರು ಮಾಡುತ್ತಾರೆ ನೋಡೋಣ ಎಂದಾಗ ನಾವಲ್ಲಿಗೆ ಬರುವುದಿಲ್ಲ. ತಾವೇ ಹೋಗಿ ನೋಡಬಹುದು ಎಂದರು. ಏಕೆಂದಾಗ ಅಲ್ಲಿ ಮಹಿಳೆಯರು ವಿಭೂತಿ ತಯಾರು ಮಾಡುವರು. ಮಹಿಳೆಯರಿದ್ದ ತಾಣಕ್ಕೆ ನಾವು ಹೋಗುವುದಿಲ್ಲ ಎಂದರು. ನಿಮ್ಮ ತಾಯಿ ಹೆಣ್ಣಲ್ಲವೇ? ತಾಯಿಯ ಮುಖವನ್ನೇ ನೋಡುವುದಿಲ್ಲ ಎಂದರೆ ಹೇಗೆ? ಅಲ್ಲಿರುವ ಎಲ್ಲ ಮಹಿಳೆಯರನ್ನು ನಿಮ್ಮ ತಾಯಿ, ಸಹೋದರಿ ಎಂದೇಕೆ ಭಾವಿಸಬಾರದು? ನಮ್ಮ ಪ್ರಶ್ನೆಗೆ ಉತ್ತರಿಸದೆ ವಟುಗಳು ಮೌನವಾಗಿದ್ದರು. ತರಬೇತಿ ಬೇಕು. ಅದು ಅಂತರಂಗ ಮತ್ತು ಬಹಿರಂಗದ ಬೆಳಕಿಗೆ, ಶುದ್ಧಿಗೆ ಕಾರಣವಾಗಬೇಕು. ತಪ್ಪು ಕಲ್ಪನೆಗಳನ್ನು ಮೂಡಿಸಬಾರದು.

ಸ್ವಾಮಿಯಾಗುವವರು ಅಥವಾ ಆದವರು ತುಂಬಿದ ಕೊಡದೋಪಾದಿಯಲ್ಲಿರಬೇಕು. ಅವರಲ್ಲಿ ವಿನಯ- ವಿವೇಕವಿರಬೇಕು. ಆಗ ದಾರಿತಪ್ಪಲು ಸಾಧ್ಯವಿಲ್ಲ. ಮನುಷ್ಯ ಸಾಕ್ಷರನಾಗಬೇಕು ಎಂದರೆ ಅಕ್ಷರ ಕಲಿತು ಪದವಿ ಪಡೆಯುವುದಲ್ಲ. ಅಕ್ಷರದ ಅರಿವು ಅವನಲ್ಲಿ ನೈತಿಕ, ಬೌದ್ಧಿಕ, ಧಾರ್ಮಿಕ, ಆಧ್ಯಾತ್ಮಿಕ ಜಾಗೃತಿ ಮೂಡಿಸಬೇಕು. ಸ್ವಾಮಿಗಳಿಗೆ ಎಲ್ಲ ಕಾಲದಲ್ಲೂ ಗೌರವ ಇದ್ದೇ ಇದೆ. ಕಾವಿ ಧರಿಸಿದವರು ಕಾಣುತ್ತಲೇ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ನಮ್ಮ ಪರಂಪರೆಯಲ್ಲಿ ಬೆಳೆದು ಬಂದಿದೆ. ಹಾಗೆ ಕಾಲಿಗೆ ಬೀಳಿಸಿಕೊಳ್ಳುವ ಅರ್ಹತೆ ನಮಗಿದೆಯೇ? ಆತ್ಮವಂಚಕನಾಗಿ ಸಮಾಜದ್ರೋಹದ ಕಾರ್ಯ ಮಾಡುತ್ತಿದ್ದರೆ ಅಂಥವರ ಕಾಲಿಗೆ ನಮಸ್ಕಾರ ಮಾಡುವವ ಮುಗ್ಧ ಮತ್ತು ಪ್ರಾಮಾಣಿಕ. ಅವನಿಗೆ ಇವರು ನಮ್ಮವರು ಅವರು ನಮ್ಮವರಲ್ಲ ಎನ್ನುವ ತಾರತಮ್ಯವೂ ಇರುವುದಿಲ್ಲ. ಅಂಥವನಿಂದ ಕಾಲಿಗೆ ನಮಸ್ಕಾರ ಮಾಡಿಸಿಕೊಂಡರೆ ನಾನೇ ಪಾಪಿಯಾಗುತ್ತೇನೆ ಎನ್ನುವ ಪ್ರಜ್ಞೆ ಕಾಡಬೇಕು. ಹೀಗೆ ಕಾಡುತ್ತ ಆತ ಜಾಗೃತನಾದರೆ ನಿಜವಾದ ಬಸವಣ್ಣ, ಅಲ್ಲಮ, ಚನ್ನಬಸವಣ್ಣ ಮುಂತಾದ ಶರಣರಿಗೆ ಸಮನಾಗುವನು. ಇದು ಕೆಲವರಿಗೆ ಕರ್ಣಕಠೋರ ಎನಿಸಬಹುದು. ಸತ್ಯ ಯಾವಾಗಲೂ ಸಿಹಿಯಾಗಿರುವುದಿಲ್ಲ.

ಈಗಲೂ ಕೆಲವು ಮಠಾಧೀಶರು ಸನಾತನ ಪರಂಪರೆಯ ವಾರಸುದಾರರಂತೆ ವರ್ತಿಸುವರು. ವೈದಿಕ ಆಚರಣೆಗಳನ್ನು ನಿರಾಕರಿಸದೆ ಅವುಗಳನ್ನೇ ಪ್ರೀತಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮಠಾಧೀಶರೇ ಹೀಗಿದ್ದರೆ ಊರಲ್ಲಿ ಜಂಗಮರೆಂದು ಕರೆಸಿಕೊಳ್ಳುವವರು ಹೇಗಿರಬೇಕು? ಶಿಷ್ಯರ ಗತಿ ಏನಾಗಬಹುದು? ಗೃಹಪ್ರವೇಶ ಇತ್ಯಾದಿ ಕಾರ್ಯಗಳಿಗೆ ಆಹ್ವಾನಿಸಲು ಬಂದವರಿಗೆ ಹೋಮಾದಿಕ್ರಿಯೆಗಳನ್ನು ಮಾಡಿಸುವುದಾದರೆ ಬರುವುದಿಲ್ಲ, ನಮ್ಮನ್ನು ಕರೆಯಬೇಡಿ ಎಂದು ಹೇಳುತ್ತಿರುತ್ತೇವೆ. ಬಸವಣ್ಣನವರ ಭಾವಚಿತ್ರ ಇಟ್ಟು ಪುಷ್ಪ ಹಾಕಿ ನಾಲ್ಕಾರು ವಚನಗಳನ್ನು ಹೇಳಿದರೆ ಗೃಹಪ್ರವೇಶಕ್ಕೆ ಮೆರಗು ಬರುತ್ತದೆ ಎಂದು ಸೂಚಿಸುತ್ತೇವೆ. ಕೆಲವರು ಒಪ್ಪಿ ನಾವು ಅವರ ಮನೆಗೆ ಹೋಗುವ ಮೊದಲೇ ಏನೆಲ್ಲ ಕರ್ಮಠಗಳನ್ನು ಮಾಡಿ ಮುಗಿಸಿರುತ್ತಾರೆ. ಒಬ್ಬ ಭಕ್ತ ನಮ್ಮನ್ನು ಭಕ್ತಿ, ಗೌರವದಿಂದ ಗೃಹಪ್ರವೇಶಕ್ಕೆ ಆಹ್ವಾನಿಸಿದ್ದ. ಅವನಿಗೆ ಮೊದಲೇ ಹೇಗೆ ಗೃಹಪ್ರವೇಶ ಮಾಡಬೇಕೆನ್ನುವ ಸೂಚನೆ ನೀಡಿದ್ದೆವು. ಅವರ ಮನೆಯೊಳಗೆ ಒಂದು ರೂಮಿನತ್ತ ಪ್ರವೇಶ ಮಾಡಬೇಕೆನ್ನುವಷ್ಟರಲ್ಲೇ ನಮ್ಮನ್ನು ತಡೆದರು. ಕಾರಣ ಅಲ್ಲಿ ಹೋಮ ನಡೆಯುತ್ತಿತ್ತು. ರೂಮಿನ ತುಂಬ ಹೊಗೆ ತುಂಬಿದೆ. ಏನೆಲ್ಲ ಸುಧಾರಣೆಯ ಮಾತು ಹೇಳಿದರೂ ಭಕ್ತರು ಬದಲಾಗುವುದಿಲ್ಲ ಎಂದರೆ ನಾವೇ ತಪ್ಪಿದ್ದೇವೆನೋ ಎನ್ನುವ ಅಳಕು ಕಾಡುತ್ತಿದೆ. ನೀವು ಹೀಗಿರಬೇಕು ಎಂದು ಭಕ್ತರಿಗೆ ಹೇಳುವುದಕ್ಕಿಂತ ನಾವೇ ಹಾಗಿದ್ದು ಯಾವ ಕರ್ಮಠಗಳನ್ನೂ ಆಚರಿಸದಿರಬೇಕು. ಕರ್ಮಠಗಳನ್ನು ಆಚರಣೆ ಮಾಡುವವರು ಎಷ್ಟೇ ದೊಡ್ಡವರಾಗಿದ್ದರೂ ಅಂಥಲ್ಲಿಗೆ ಹೋಗಬಾರದು.

15ನೆಯ ಶತಮಾನದ ನಂತರ ಮಠೀಯ ಪರಂಪರೆ ವಿಸ್ತಾರಗೊಂಡಿದ್ದು ತಿಳಿದುಬರುತ್ತದೆ. ಒಬ್ಬ ಸ್ವಾಮಿ ಲಿಂಗೈಕ್ಯರಾದಾಗ ಅವರಿಗಾಗಿ ಗದ್ದುಗೆ ನಿರ್ಮಿಸಿ ಪೂಜಾದಿ ಕ್ರಿಯೆಗಳು ನಡೆಯಲಾರಂಭಿಸಿದವು. ಹೀಗೆ ಗದ್ದುಗೆ ಕಟ್ಟುತ್ತಾ ಅವನ್ನು ಪೂಜಿಸುತ್ತ ಅದೇ ಪರಂಪರೆ ಮುಂದುವರಿಸಿದರೆ ಎಷ್ಟು ಗದ್ದುಗೆಗಳನ್ನು ಕಟ್ಟಬೇಕು? ಗುರುಪರಂಪರೆಯನ್ನು ಗೌರವಿಸೋಣ. ಅದಕ್ಕಾಗಿ ಅವರ ಭಾವಚಿತ್ರ ಹಾಕಿ ಸ್ಮರಣೆ ಮಾಡಿದರೆ ಸಾಕು. ಬದಲಾಗಿ ದೊಡ್ಡ ಸಮಾಧಿ ಕಟ್ಟಿಸಿ ಜನರು ಅಲ್ಲಿಗೆ ಸಾಲಿಟ್ಟು ಅಡ್ಡ ಉದ್ದ ಬಿದ್ದು ಪೂಜಾದಿಕ್ರಿಯೆಗಳನ್ನು ಮಾಡಿ ಇಲ್ಲಿ ಗದ್ಗುಗೆ ಪವಾಡ ನಡೆಯುತ್ತದೆ ಎಂದು ಪ್ರಚಾರ ಮಾಡಿದರೆ ಗತಿ ಏನು? ಇಂದು ಗದ್ದುಗೆಯ ಪವಾಡಗಳು ಜಾಸ್ತಿಯಾಗುತ್ತಿವೆ. ಬಹು ಹಿಂದೆ ಓದಿದ್ದ ಕತೆ. ಮಾಸ್ತಿಯವರದೇ ಇರಬೇಕು. ಅಲ್ಲೊಂದು ಗದ್ದುಗೆಯ ಪವಾಡದ ಕತೆ ಬರುತ್ತದೆ. ಒಬ್ಬ ಸ್ವಾಮಿಗಳ ಮಠ ದೊಡ್ಡದಾಗಿ ಬೆಳೆದಿತ್ತು. ಅಲ್ಲಿದ್ದ ಗದ್ಗುಗೆಗೆ ಅಪಾರ ಭಕ್ತರು ನಿತ್ಯವೂ ಬಂದು ಹೋಗುತ್ತಿದ್ದರು. ಮುಂದೆ ಭೀಕರ ಬರಗಾಲ ಬಂದು ಮಠ ಹಾಳು ಬೀಳುವ ಸ್ಥಿತಿ ಬಂತು. ಮಠದಲ್ಲಿದ್ದವರು ತಮ್ಮ ಬದುಕಿನ ದಾರಿ ಹುಡುಕಿಕೊಂಡು ಬೇರೆ ಬೇರೆ ಕಡೆ ಹೋದರು. ಒಬ್ಬ ಮಾತ್ರ ಗುರುವಿನ ಸೇವೆ ಮಾಡಿಕೊಂಡು ಇಲ್ಲೇ ಇರುತ್ತೇನೆಂದು ಹಠ ಹಿಡಿದ. ಗುರುಗಳು- ಇಲ್ಲಿ ಏನಿದೆ ಎಂದು ಇರುತ್ತೀ? ನಾನು ಇಂದೋ ನಾಳೆಯೋ ಕಣ್ಮುಚ್ಚುವವ. ಎಲ್ಲಿಯಾದರೂ ಹೋಗಿ ಬದುಕಿನ ದಾರಿ ಕಂಡುಕೊ ಎಂದರು. ಹಾಗಿದ್ದರೆ ತಾವು ಆಶೀರ್ವಾದ ಮಾಡಿ ನನಗೆ ಏನನ್ನಾದರೂ ಕರುಣಿಸಬೇಕು ಎಂದು ಪ್ರಾರ್ಥಿಸಿದ. ಆಶೀರ್ವದಿಸಿಕೊಡಲು ಏನೂ ಇರಲಿಲ್ಲ. ಒಂದು ಕತ್ತೆಯ ಮರಿ ಮಾತ್ರ ಇತ್ತು. ಅದನ್ನೇ ಕೊಟ್ಟರು.

ಗುರು ಕರುಣಿಸಿದ ಕತ್ತೆ ಮರಿಯನ್ನು ಪ್ರೀತಿಯಿಂದ ಸ್ವೀಕರಿಸಿ ಅದು ನಡೆದ ದಾರಿಯಲ್ಲೇ ನಡೆಯಲಾರಂಭಿಸಿದ. ಎಷ್ಟೋ ದೂರ ನಡೆದಾಯ್ತು. ಕತ್ತೆಮರಿಗೆ ಆಹಾರ, ನೀರು ಇಲ್ಲದೆ ಒಂದೆಡೆ ಬಿದ್ದು ಸತ್ತೇಹೋಯ್ತು. ಶಿಷ್ಯನಿಗೆ ಅಪಾರ ದುಃಖವಾಯ್ತು. ಗುರು ಕರುಣಿಸಿದ ಕತ್ತೆಮರಿಯನ್ನು ಉಳಿಸಿಕೊಳ್ಳಲಾಗದೆ ಸಾಯಿಸಿದಂತಾಯ್ತು ಎಂದು ಪರಿತಪಿಸಿದ. ಕೊನೆಗೆ ಅಲ್ಲೇ ಒಂದು ಗಂಡಿ ತೋಡಿ ಅದರ ಸಂಸ್ಕಾರ ಮಾಡಿದ. ಆ ಗುಡ್ಡೆಯ ಮೇಲೆ ಒಂದಿಷ್ಟು ಹೂ ಎರಚಿ ದುಃಖಿತನಾಗಿ ಕಣ್ಮುಚ್ಚಿ ಕುಳಿತ. ಆ ದಾರಿಯಲ್ಲಿ ಹೋಗುವವರು ಇಲ್ಲಿ ಮಹಾನುಭಾವರ ಸಮಾಧಿ ಇರುವಂತಿದೆ ಎಂದು ನಮಸ್ಕಾರ ಮಾಡಿ ಕಾಣಿಕೆಯನ್ನು ಸಮಾಧಿ ಮೇಲೆ ಹಾಕಿ ಹೋಗಲಾರಂಭಿಸಿದರು. ಆತ ಕಣ್ಬಿಟ್ಟಾಗ ಆಶ್ಚರ್ಯ! ಸಾಕಷ್ಟು ಹಣ ಅಲ್ಲಿದೆ. ಗುರು ಕೊಟ್ಟದ್ದು ಗುಡ್ಡ ಎಂದು ಅಲ್ಲೇ ಒಂದು ಗುಡಿಸಲು ನಿರ್ಮಿಸಿ ಗದ್ಗುಗೆ ಪೂಜೆ ಮಾಡಲಾರಂಭಿಸಿದ. ಅವನ ಜೀವನಕ್ಕೆ ಬೇಕಾದಷ್ಟು ಸಂಪಾದನೆ ಆಗುತ್ತಿತ್ತು. ಬಾಯಿಂದ ಬಾಯಿಗೆ ಗದ್ದುಗೆ ಪವಾಡ ಹಬ್ಬಿ ಅಲ್ಲೊಂದು ಸುಂದರ ಸಮಾಧಿ ಮಾಡಿ ಅದರ ಸುತ್ತ ಮಂಟಪವನ್ನೇ ಕಟ್ಟಿದರು. ಈ ಭಕ್ತನನ್ನೇ ಗುರುವೆಂದು ಅವನ ವಾಸಕ್ಕೆ ಮಠವಾಯ್ತು. ಯಥೇಚ್ಛವಾಗಿ ಕಾಣಿಕೆ ಬರಲಾರಂಭಿಸಿ ಮಠವೂ ಬೆಳೆದು ಎಲ್ಲೆಡೆ ಆ ಮಠದ ಖ್ಯಾತಿ ಹಬ್ಬಿತು. ಈತನ ಗುರುಗಳಿಗೂ ಈ ಮಠದ ಸುದ್ದಿ ತಿಳಿದು ನೋಡಲು ಬಂದರು. ಈ ಭಕ್ತ ಆಗಲೇ ಕಾವಿ ಧರಿಸಿ ದೊಡ್ಡ ಗುರುವೇ ಆಗಿದ್ದ. ದೂರದಿಂದಲೇ ಗುರುವ ಕಂಡು ಓಡೋಡಿ ಹೋಗಿ ಸ್ವಾಗತಿಸಿ ಸತ್ಕಾರ ಮಾಡಿದ. ನೀವು ಯಾರು ಎಂದು ಗುರುಗಳು ಕೇಳಿದಾಗ ನಾನಲ್ಲವೇ ತಮ್ಮ ಶಿಷ್ಯ! ನನಗೆ ಆಶೀರ್ವದಿಸಿ ಒಂದು ಕತ್ತೆಯ ಮರಿ ಕೊಟ್ಟಿದ್ದು ನೆನಪಿಲ್ಲವೇ ಎಂದ. ಆ ಕತ್ತೆಮರಿ ಸತ್ತಾಗ ಇಲ್ಲೇ ಸಮಾಧಿ ಮಾಡಿದೆ. ತಮ್ಮ ಆಶೀರ್ವಾದದ ಫಲವಾಗಿ ಇಷ್ಟೆಲ್ಲ ಆಗಿದೆ ಎಂದ. ತಮ್ಮ ಮಠದ ಬೆಳವಣಿಗೆಗೆ ಕಾರಣ ಏನೆಂದು ಸಂಕೋಚದಿಂದಲೇ ಕೇಳಿದ. ನಿನಗೆ ಕೊಟ್ಟ ಕತ್ತೆ ಮರಿಯ ತಾಯಿಯ ಸಮಾಧಿ ಅಲ್ಲಿದೆ. ಆ ಸಮಾಧಿಯ ಸತ್ವವೇ ನಮ್ಮ ಮಠದ ಬೆಳವಣಿಗೆಗೆ ಕಾರಣ ಎಂದರಂತೆ!

ಸ್ವಾಮಿಗಳು ಸಹ ಹೇಗೆ ಮೂಢನಂಬಿಕೆಗಳಿಗೆ ದಾಸರಾಗುತ್ತಾರೆ ಎನ್ನುವುದಕ್ಕೆ ಸಮಾಧಿಯ ಸತ್ವ ಎನ್ನುವ ಕತೆ ಸಾಕ್ಷಿ. ಸ್ವಾಮಿಗಳೇ ದಿಕ್ಕುತಪ್ಪಿದರೆ ಭಕ್ತರು ಇನ್ನೇನಾಗಬೇಕು? ಸ್ವಾಮಿಗಳು ಪ್ರಾಜ್ಞರು, ವಿವೇಕಿಗಳು, ಜನಪರ ಕಾಳಜಿಯುಳ್ಳವರು ಆಗಿರಬೇಕಾಗುತ್ತದೆ. ಏನನ್ನು ಹೇಳಬೇಕು, ಏನನ್ನು ಹೇಳಬಾರದು ಎನ್ನುವ ಅರಿವು ಇರಬೇಕು. ಅನೇಕ ಮಠಾಧೀಶರು ಮಾಡಬೇಕಾದ ಕಾರ್ಯಗಳನ್ನು ಬದಿಗೊತ್ತಿ ಮಾಡಬಾರದವುಗಳನ್ನೇ ಮಾಡುತ್ತಲಿದ್ದಾರೆ. ರಾಜಕೀಯವನ್ನೇ ತೆಗೆದುಕೊಳ್ಳಿ. ಸ್ವಾಮಿಗಳಾದವರು ರಾಜಕೀಯ ಮಾರ್ಗದರ್ಶನ ಮಾಡಬೇಕು. ಅದನ್ನು ಬಿಟ್ಟು ನನ್ನ ಶಿಷ್ಯನಿಗೇ ಪಕ್ಷದ ಟಿಕೆಟ್ ಕೊಡಬೇಕು ಎಂದು ದುಂಬಾಲುಬೀಳುವುದಾಗಲಿ, ಅವನನ್ನೇ ಗೆಲ್ಲಿಸಬೇಕೆಂದು ಪ್ರಚಾರ ಮಾಡುವುದಾಗಲಿ, ನಮ್ಮ ಜನಾಂಗಕ್ಕೆ ನ್ಯಾಯ ದೊರೆಯಬೇಕಾದರೆ ಅವನ ಗೆಲವು ಮುಖ್ಯ ಎನ್ನುವುದಾಗಲಿ ಸಲ್ಲದು. ಇಂಥವರನ್ನೇ ಮಂತ್ರಿ, ಮುಖ್ಯಮಂತ್ರಿ ಮಾಡಬೇಕು ಎನ್ನುವುದು ಗೌರವ ತರುವ ನಡಾವಳಿಕೆ ಅಲ್ಲ. ಮಠಾಧಿಪತಿಗಳು ನಿಷ್ಠುರವಾಗಿರಬೇಕು. ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡಬೇಕು. ಅಲ್ಲಿ ಸ್ವಾರ್ಥ ಹೆಡೆಯಾಡಬಾರದು. ಸರ್ವಜ್ಞನ ವಚನವನ್ನು ನಾವು ಪದೇ ಪದೆ ನೆನಪಿಸಿಕೊಳ್ಳುತ್ತೇವೆ. ‘ಹೇಡಿಂಗೆ ಹಿರಿತನವು, ಮೂಢಂಗೆ ಗುರುತನವು, ನಾಡ ನೀಚಂಗೆ ದೊರೆತನವು ದೊರೆತಿಹರೆ ನಾಡೆಲ್ಲ ಕೆಡುಗು ಸರ್ವಜ್ಞ’. ಇಲ್ಲಿ ಹೇಡಿ, ಮೂಢ, ನಾಡ ನೀಚ ಎನ್ನುವ ಪದಗಳನ್ನು ಗಮನಿಸಬೇಕು. ಮನೆ ಜವಾಬ್ದಾರಿಯುಳ್ಳವ ಧೈರ್ಯಿಯಾಗಿರಬೇಕು. ಎಂಥದೇ ಸಮಸ್ಯೆ ಎದುರಾದರೂ ಎದುರಿಸಬೇಕು. ಬದಲಾಗಿ ತಲೆ ಮೇಲೆ ಕೈಹೊತ್ತು ಕೂರುವ ಹೇಡಿಯಾದರೆ ಆ ಮನೆಯ ಜವಾಬ್ದಾರಿ ನಿರ್ವಹಿಸಲು ಅಸಮರ್ಥನಾಗುವನು. ಎಷ್ಟೋ ಮನೆಗಳಲ್ಲಿ ಹಿರಿ ಮಗನ ಬದಲು ಕಿರಿಯ ಮಗನಿಗೆ ಜವಾಬ್ದಾರಿ ನೀಡಿರುತ್ತಾರೆ. ಕಾರಣ ಆತ ಜಾಣ್ಮೆಯಿಂದ ಮನೆತನ ನಿಭಾಯಿಸುವ ಚಾಕಚಕ್ಯತೆಯುಳ್ಳವನಾಗಿರುವುದು. ಮನೆಗಿಂತ ದೊಡ್ಡದು ಮಠ. ಮಠದ ಗುರು ಪ್ರಾಜ್ಞ, ವಿವೇಕಿ, ಸುಜ್ಞಾನಿ ಆಗಿರಬೇಕು. ಅಜ್ಞಾನಿಯಾಗಿದ್ದರೆ, ಮೂಢ- ಕಂದಾಚಾರಗಳ ಕೂಪದಲ್ಲಿ ಮುಳುಗೇಳುವ ವ್ಯಕ್ತಿಯಾಗಿದ್ದರೆ ಭಕ್ತರನ್ನು ಬೆಳೆಸಲು ಸಾಧ್ಯವೇ? ಅಂಥವನನ್ನು ಗುರುವೆಂದು ಒಪ್ಪಬಾರದು, ಮಠದಲ್ಲಿ ಅವಕಾಶ ನೀಡಬಾರದು ಎಂದೇ ಸರ್ವಜ್ಞನ ಆಶಯ. ಶಿವಯೋಗಿ ಸಿದ್ಧರಾಮೇಶ್ವರರು ಎಂತೆಂಥ ಗುರುಗಳಿದ್ದಾರೆ ಎನ್ನುವ ಪಟ್ಟಿಯನ್ನೇ ಕೊಡುತ್ತಾರೆ. ವಿತ್ತಾಪಹಾರಿ ಗುರುಗಳು, ಶಾಸ್ತ್ರಾರ್ಥ ಹೇಳುವ ಗುರುಗಳು, ಮಂತ್ರ ತಂತ್ರ ಮಾಡುವ ಗುರುಗಳು, ಸ್ವರ್ಗ ಮತ್ರ್ಯದಲ್ಲಿ ಸುಖವೀವ ಗುರುಗಳು, ವಿಷಯಂಗಳೆಲ್ಲ ಮಿಥ್ಯಂಗಳೆನ್ನುವ ಗುರುಗಳು… ಸಂಶಯಗಳನ್ನು ಜ್ಞಾನಾಗ್ನಿಯಿಂದ ದಹಿಸಿ ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ಎಂದಿದ್ದಾರೆ. ಮನೆ, ಮಠಕ್ಕಿಂತ ದೊಡ್ಡದು ನಾಡು. ನಾಡಿನ ನೇತಾರನ ಜವಾಬ್ದಾರಿ ಗುರುತರವಾದುದು. ಆತ ಪಾರದರ್ಶಕ ವ್ಯಕ್ತಿಯಾಗಿ, ಜನಕಲ್ಯಾಣ ಮಾಡುವಂಥವನಾಗಿರಬೇಕು. ಸ್ವಾರ್ಥಿಯಾಗಿ, ಭ್ರಷ್ಟನಾಗಿ, ಸರ್ವಾಧಿಕಾರಿಯಂತೆ ಅಹಂಕಾರ, ಠೇಂಕಾರದಿಂದ ವರ್ತಿಸುವ ನೀಚನಾಗಿದ್ದರೆ ನಾಡಿನ ಉದ್ಧಾರ ಸಾಧ್ಯವಿಲ್ಲ. ರಾಜಕಾರಣಿಗಳು, ಅವರ ಮಕ್ಕಳು ಹೇಗೆ ಲೈಂಗಿಕ ಮತ್ತಿತರ ಹಗರಣಗಳಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ ಎನ್ನುವುದ ನೋಡುತ್ತಲೇ ಇದ್ದೇವೆ. ಸ್ವಾಮಿಗಳೂ ರಾಜಕಾರಣಿಗಳಂತೆ ಲೈಂಗಿಕ ಹಗರಣಗಳಲ್ಲಿ ಸಿಲುಕಿರುವುದನ್ನೂ ಮರೆಯುವಂತಿಲ್ಲ. ಹಾಗಾಗಿ ಅಂಥವನಿಗೆ ನೇತಾರನ ಸ್ಥಾನ ದೊರೆಯದಂತೆ ಎಚ್ಚರವಹಿಸಬೇಕು ಎನ್ನುವ ಧೋರಣೆ ಸರ್ವಜ್ಞ ಕವಿಯದು.

ಒಬ್ಬ ಯೋಗ್ಯ ಗುರು ಜಾತಿ, ಮತ, ಪಕ್ಷ ಪಂಗಡಗಳನ್ನು ನೋಡದೆ ಅರ್ಹತೆಯುಳ್ಳವರು ಯಾರೇ ಆಗಿದ್ದರೂ ಅವರನ್ನು ನಾಡಿನ ನೇತಾರನನ್ನಾಗಿ ಆಯ್ಕೆ ಮಾಡುವಂತೆ ಕರೆಕೊಡಬೇಕು. ನಮ್ಮ ಜಾತಿ, ನಮ್ಮ ಧರ್ಮ, ನಮ್ಮವನು ಎನ್ನುವ ಗೋಡೆ ಕಟ್ಟಿಕೊಂಡು ಇವನಿಗೇ ಮತ ಕೊಟ್ಟು ಗೆಲ್ಲಿಸಬೇಕು ಎನ್ನುವ ಆದೇಶ ಹೊರಡಿಸಿದರೆ ಪರಮನೀಚರಿಗೆ ಮಣೆ ಹಾಕಿದಂತೆ. ಇದನ್ನು ಕಾವಿಧಾರಿ ಸ್ವಾಮಿಗಳು ಅರ್ಥಮಾಡಿಕೊಳ್ಳಬೇಕು. ಜಾತಿಭೇದ ಮಾಡದೆ ಲಿಂಗಾಯತರೆಲ್ಲರೂ ಒಂದು ಎನ್ನುವ ಭಾವೈಕ್ಯತೆ ಬೆಳೆಸಬೇಕು. ಲಿಂಗಾಯತರಲ್ಲೇ ಬೇರೆ ಬೇರೆ ಪರಂಪರೆಯ ಮಠಗಳಿದ್ದರೂ ನಾವೆಲ್ಲ ಬಸವಪರಂಪರೆಯ ವಾರಸುದಾರರು ಎನ್ನುವ ಪ್ರಜ್ಞೆ ಇರಬೇಕು. ಮಠಕ್ಕೆ ಬಂದ ಭಕ್ತರಿಗೆ ಆಶೀರ್ವಾದ ರೂಪದಲ್ಲಿ ಕಲ್ಲುಸಕ್ಕರೆ, ಕೊಬ್ಬರಿ, ಮಂಡಕ್ಕಿ, ಹಣ್ಣು, ದ್ರಾಕ್ಷಿ, ಅಕ್ಕಿಕಾಳು ಹೀಗೆ ಏನೇನನ್ನೋ ಕೊಡುವರು. ಇವುಗಳ ಬದಲು ಒಂದು ಚಿಕ್ಕ ವಚನ ಪುಸ್ತಕ ಕೊಡುವ ಪದ್ಧತಿ ಜಾರಿಯಲ್ಲಿ ತರಬೇಕು. ಮಠಗಳಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವಗಳು ನಡೆಯುವಂತಾಗಬೇಕು. ಅದರಿಂದ ಅನಾವಶ್ಯಕ ಖರ್ಚುಗಳನ್ನು ಮಿತಗೊಳಿಸಿ ವೈದಿಕ ಆಚರಣೆಗಳಿಗೆ ವಿದಾಯ ಹೇಳಬಹುದು. ಶರಣ ಪರಂಪರೆಯಲ್ಲಿ ಸರಳ ಮದುವೆಗಳನ್ನು ಮಾಡಬಹುದು. ವಿಧವಾ ವಿವಾಹಕ್ಕೆ ಮಾನ್ಯತೆ ನೀಡಬೇಕು. ಗೃಹಪ್ರವೇಶದ ಸಂದರ್ಭದಲ್ಲಿ ಆಕಳನ್ನು ಮನೆಯೊಳಗೆ ಹಿಡಿದುಕೊಂಡು ಬಂದು ಪೂಜಿಸುವುದು, ದಿಗ್ಬಂಧನ ಹಾಕುವುದು, ಹೋಮಾದಿ ಕ್ರಿಯೆಗಳನ್ನು ಮಾಡಿಸುವುದನ್ನು ತಪ್ಪಿಸಿ ಬಸವ ಪರಂಪರೆಯಲ್ಲಿ ಗೃಹಪ್ರವೇಶ, ಮದುವೆ, ಅಂತ್ಯಸಂಸ್ಕಾರ ಇತ್ಯಾದಿ ಕಾರ್ಯಗಳನ್ನು ಮಾಡುವಂತಾಗಬೇಕು.

ನಾವು ಕೆಲವೆಡೆ ಅಂತ್ಯಸಂಸ್ಕಾರದಲ್ಲಿ ಜಂಗಮರ ಕರ್ಮಠಗಳನ್ನು ನೋಡಿದ್ದೇವೆ. ಜಂಗಮನೊಬ್ಬ ಸತ್ತವರ ತಲೆಯ ಮೇಲೆ ಪಾದಿವಿಟ್ಟು ಪಾದಪೂಜೆ ಮಾಡಿಸಿಕೊಳ್ಳುವನು. ಕೆಲವರು ತಲೆಯ ಬದಲು ತೊಡೆಯ ಮೇಲೆ ಪಾದವಿಡುವರು. ಇದು ಶರಣ ಪರಂಪರೆ ಖಂಡಿತ ಅಲ್ಲ. ಸತ್ತವರನ್ನು ನಮ್ಮ ಪರಂಪರೆಯಲ್ಲಿ ದೇವರು ಎಂದೇ ಕರೆಯುವರು. ಅವರನ್ನು ಸಂಸ್ಕಾರ ಮಾಡುವ ಸ್ಮಶಾನಕ್ಕೆ ರುದ್ರಭೂಮಿ ಎನ್ನುವರು. ಹಾಗಾಗಿ ವೈದಿಕ ಆಚರಣೆಗಳಿಗೆ ಮಾನ್ಯತೆ ನೀಡಬಾರದೆಂದು ಭಕ್ತರನ್ನು ಎಚ್ಚರಿಸಬೇಕು. ಗಂಡ ಸತ್ತಾಗ ಹೆಂಡತಿಯ ಬಳೆ ಒಡೆಯುವುದು, ಮುಡಿದ ಹೂ ಕೀಳುವುದು ಇತ್ಯಾದಿ ಮಾಡಿಸಬಾರದು. ಕೆಲವರು ಉಳವಿ, ಧರ್ಮಸ್ಥಳ, ಗೋಕರ್ಣ, ಕಾಶಿ, ತಿರುಪತಿ ಮತ್ತಿತರ ದೇವರಿಗೆ ಹರಕೆ ಕಟ್ಟಿಕೊಳ್ಳುವರು. ಇದು ಸಲ್ಲದು. ಹಾಗೆ ಹರಕೆ ಕಟ್ಟಿಕೊಂಡು ಆ ಸ್ಥಳಗಳಿಗೆ ಹೋಗುವಾಗ ಇಲ್ಲವೇ ಬರುವಾಗ ಎಂತೆಂಥ ಅನಾಹುತಗಳಾಗಿವೆ! ಅದರ ಬದಲು ನನ್ನಲ್ಲೇ ದೇವರಿದೆ ಎಂದು ಇಷ್ಟಲಿಂಗವನ್ನೇ ನಿಷ್ಠೆಯಿಂದ ಪೂಜಿಸುವಂತೆ ಭಕ್ತರಿಗೆ ಮಾರ್ಗದರ್ಶನ ಮಾಡಬೇಕು. ಇವತ್ತಿನ ಪತ್ರಿಕೆಯಲ್ಲಿ ಉತ್ತರ ಪ್ರದೇಶದ ಹಾಥರಸ್ ಧರ್ಮಸಭೆಯಲ್ಲಿ ದೇವಮಾನವನೆಂದು ಘೋಷಿಸಿಕೊಂಡಿರುವ ಭೋಲೆ ಬಾಬಾನ ದರ್ಶನಕ್ಕಾಗಿ ನೂಕು ನುಗ್ಗಲಾಗಿ 121 ಜನ ಸತ್ತಿದ್ದಾರೆ. ಮೊದಲು ಪೊಲೀಸ್ ಕಾನ್‍ಸ್ಟೇಬಲ್ ಆಗಿದ್ದ ಆತ ಲೈಂಗಿಕ ಹಗರಣ ಮತ್ತಿತರ ಕಾರಣಕ್ಕಾಗಿ ಜೈಲಿಗೆ ಹೋಗಿ ಬಂದವ. ಅಲ್ಲಿಂದ ಹೊರಬರುತ್ತಲೇ ಸೂರಜ್ ಸಿಂಗ್ ಹೆಸರನ್ನು ಭೋಲೆ ಬಾಬಾ ಎಂದು ಬದಲಿಸಿ ಜನರನ್ನು ಮೋಡಿ ಮಾಡಿದವ. ಈಗ ಆತ ಪೊಲೀಸರಿಂದ ಕಣ್ತಪ್ಪಿಸಿಕೊಂಡು ಎಲ್ಲೋ ಅಡಗಿಕೊಂಡಿದ್ದಾನೆ. ಇಂಥ ನಕಲಿ ಬಾಬಾಗಳ ಮಾತಿಗೆ ಮರುಳಾಗಿ ಸರ್ವಸ್ವವನ್ನೂ ಧಾರೆಯೆರೆಯುವ ಜನರಿಗೆ ಏನೆನ್ನಬೇಕು? ಇಂಥ ಘಟನೆಗಳು ಜನರ ಧಾರ್ಮಿಕ ಮೌಢ್ಯಕ್ಕೆ ಹಿಡಿದ ಕನ್ನಡಿ. ಯಾವ ಬಾಬಾನ ಸ್ಪರ್ಶ ಮಾಡಿದರೂ ಅದೊಂದು ಸ್ಪರ್ಶವಷ್ಟೆ. ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗದು. ಪ್ರಯೋಜನ, ಒಳಿತು ಮತ್ತು ಕೆಡುಕು ಇರುವುದು ನಮ್ಮ ನಡಾವಳಿಕೆಯಲ್ಲೇ.

ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.

ಬಸವಾದಿ ಶರಣರ ಇಂಥ ಹಲವು ವಚನಗಳಿರುವಾಗ ಪಂಚಾಂಗ ಕೇಳುವುದು, ಮುಹೂರ್ತ ನೋಡುವುದು, ಹರಕೆ ಕಟ್ಟಿಕೊಳ್ಳುವುದು ಮೂರ್ಖತನ. ಇಂಥವುಗಳಿಂದ ಹೊರಬರುವಂತೆ ಅರಿವು ಮೂಡಿಸಬೇಕು. ಮುಖ್ಯವಾಗಿ ಸಮಾಜದಲ್ಲಿ ಸಾಕಷ್ಟು ಬಡಮಕ್ಕಳಿದ್ದಾರೆ. ಅವರ ಶಿಕ್ಷಣಕ್ಕೆ ಸ್ವಲ್ಪವಾದರೂ ಆರ್ಥಿಕ ನೆರವು ನೀಡುವಂತಾಗಬೇಕು. ಬಸವಲಿಂಗಪ್ಪನವರು ‘ಕರುಣಾ ಜೀವ ಕಲ್ಯಾಣ ಟ್ರಸ್ಟ್’ ಮಾಡಿಕೊಂಡು ಉಳ್ಳವರಿಂದ ಧನಸಹಾಯ ಪಡೆದು ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ. ಈ ಕೆಲಸವನ್ನು ಮಠಾಧೀಶರೂ ಮಾಡಬಹುದು. ಇವತ್ತು ಕುಡಿತ ಯಾರನ್ನೂ ಬಿಡುತ್ತಿಲ್ಲ. ಕೆಲವು ಸ್ವಾಮಿಗಳೂ ಕುಡಿತದ ದಾಸರಾಗಿದ್ದಾರಂತೆ. ಸ್ವಾಮಿಗಳು ದುರಭ್ಯಾಸ, ದುಶ್ಚಟಗಳ ದಾಸರಾಗದೆ ತಮ್ಮ ಸುತ್ತ ಇರುವ ಕೆಲವರನ್ನಾದರೂ ತಿದ್ದುವ ಕಾರ್ಯ ಮಾಡಬೇಕು. ಪರಿಸರ ಶುದ್ಧಿಗೆ ಒತ್ತು ಕೊಡಬೇಕು. ಮಠದ ಆವರಣದಲ್ಲಿ ಗಿಡಮರ ಬೆಳೆಸಿ ಭಕ್ತರಿಗೂ ಅವುಗಳ ಮಹತ್ವ ತಿಳಿಸಿ ಅವರೂ ಬೆಳೆಸುವಂತೆ ಅರಿವು ಮೂಡಿಸಬೇಕು. ಪರಿಸರ ಕಾಳಜಿ ಆರೋಗ್ಯಕ್ಕೂ ಕಾರಣ. ಅನೇಕ ಮಠಗಳಲ್ಲಿ ಎಂತೆಂಥದೋ ಪೌರಾಣಿಕ ದೇವರುಗಳ ಚಿತ್ರಪಟಗಳನ್ನು ಹಾಕಿ ಪೂಜೆ ಮಾಡಿಸುವರು. ಪೌರಾಣಿಕ ಪ್ರತಿಮೆಗಳು, ಚಿತ್ರಗಳನ್ನು ತೆಗೆದು ಅಲ್ಲೊಂದು ಬಸವಣ್ಣನವರ ಫೋಟೊ ಹಾಕಿದರೆ ಸಾಕು. ಜೊತೆಗೆ ತಮ್ಮ ಗುರುಗಳ ಫೋಟೊ ಹಾಕಬಹುದು. ಅಲ್ಲಿ ಮನೆದೇವರು, ಊರದೇವರು, ಮತ್ತಿನ್ನಾವುದೋ ದೇವರು ಇರುವ ಅಗತ್ಯವಿಲ್ಲ.
ಅನೇಕ ಮಠಗಳಲ್ಲಿ ನಡೆಯುವ ಕಾರ್ಯಕ್ರಮಗಳು ವೈದಿಕ ಮಂತ್ರಗಳಿಂದ ಪ್ರಾರಂಭವಾಗುತ್ತವೆ. ಮೊದಲಿಗೆ ವೇದಘೋಷ ಎನ್ನುವರು. ಪ್ರಾರ್ಥನೆ ಎಂದಾಗಲೂ ಗಣಪತಿ ಅಥವಾ ರಾಘವೇಂದ್ರ ಹೀಗೆ ಇನ್ನಾವುದೋ ಹಾಡು ಹೇಳುವರು. ಅವುಗಳ ಬದಲಾಗಿ ವಚನಗಳನ್ನು ಹೇಳಿಸಬೇಕು. ಅಲ್ಲಿ ಗಣಪತಿಪೂಜೆ ಇತ್ಯಾದಿ ನಡೆಯಬಾರದು. ಯುವ ಜನಾಂಗಕ್ಕೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಚನ ಕಮ್ಮಟ ನಡೆಸಿ ಅವರಿಗೆ ವಚನಗಳ ತಿಳಿವಳಿಕೆ ನೀಡಬೇಕು. ಆರೋಗ್ಯ ಶಿಬಿರಗಳೂ ಈ ನಿಟ್ಟಿನಲ್ಲಿ ಒಳ್ಳೆ ಕಾರ್ಯ. ಗುಟಕಾ, ಬೀಡಿ, ತಂಬಾಕ, ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸಿ ಅವುಗಳಿಂದ ಮುಕ್ತರಾಗುವಂತೆ ಸಹಾಯ ಮಾಡಬೇಕು. ಇದಕ್ಕೆ ಪೂರಕವಾಗಿ ಮಠಗಳಲ್ಲಿ ಆಗಾಗ ಸಾಮೂಹಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮಗಳಿಗೆ ಒತ್ತು ಕೊಡಬೇಕು. ಕೃಷಿಗೆ ಒತ್ತು ನೀಡಿ ಸಾವಯವ ಕೃಷಿಯತ್ತ ಕೃಷಿಕರು ವಾಲುವಂತೆ ಪ್ರೋತ್ಸಾಹಿಸಬೇಕು. ತಮ್ಮ ಊರುಗಳ ಕೆರೆ ಕಟ್ಟೆಗಳ ಹೂಳೆತ್ತಿಸಿ ಮಳೆಗಾಲದಲ್ಲಿ ಅವು ಮಳೆ ನೀರಿನಿಂದ ತುಂಬುವಂತೆ ಮಾಡಿದರೆ ವರ್ಷದುದ್ದಕ್ಕೂ ನೀರು ಲಭ್ಯವಾಗುತ್ತದೆ. ಹೀಗೆ ಎಷ್ಟೋ ಸಮಾಜಮುಖಿ ಕಾರ್ಯಗಳತ್ತ ಜನರ ಬಳಕೆ ಮಾಡಿಕೊಂಡರೆ ಸ್ವಾಮಿಗಳಿಗೆ ಮತ್ತು ಭಕ್ತರಿಗೆ ಅವಿನಾಭಾವ ಸಂಬಂಧ ಬೆಳೆದು ಪ್ರಗತಿಪರ ಕೆಲಸಗಳು ತನ್ನಷ್ಟಕ್ಕೆ ತಾನೇ ಆಗುತ್ತವೆ. ಒಟ್ಟಿನಲ್ಲಿ ಲಿಂಗಾಯತ ಮಠಗಳು ಬಸವತತ್ವವನ್ನು ಪರಿಪಾಲಿಸುವ ಕಾರ್ಯ ಮಾಡಿದರೆ ಮಠ ಮತ್ತು ಸ್ವಾಮಿತನಕ್ಕೆ ವಿಶೇಷ ಗೌರವ ಬರುವುದು.
(2024 ಜುಲೈ 1 ರಿಂದ 5 ರವರೆಗೆ ಸಾಣೇಹಳ್ಳಿಯ ಶ್ರೀಮಠದಲ್ಲಿ ಮಠಾಧೀಶರಿಗಾಗಿ ‘ವಚನ ಕಮ್ಮಟ’ ನಡೆಯಿತು. ‘ಲಿಂಗಾಯತ ಮಠಗಳು ಮತ್ತು ಬಸವತತ್ವ ಅನುಷ್ಠಾನ’ ಗೋಷ್ಠಿಯಲ್ಲಿ ನಾವು ಆಡಿದ ಮಾತುಗಳು.)

Previous post ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
Next post ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2

Related Posts

ನೆಲದ ಮರೆಯ ನಿಧಾನದಂತೆ…
Share:
Articles

ನೆಲದ ಮರೆಯ ನಿಧಾನದಂತೆ…

April 29, 2018 ಕೆ.ಆರ್ ಮಂಗಳಾ
ಜಗತ್ತಿನ ಎಲ್ಲ ನಾಗರಿಕತೆಗಳೂ ವಿಧವಿಧ ಬಗೆಯಲ್ಲಿ ಜಗದ ನಿಯಾಮಕನನ್ನು ಕುರಿತು ಯೋಚಿಸಿವೆ. ಈ ಸೃಷ್ಟಿಯ ಒಡೆಯ ಯಾರು? ಸೃಷ್ಟಿಕರ್ತ ಇದ್ದಾನೆಯೇ/ ಇಲ್ಲವೇ? ಇದ್ದರೆ, ಯಾವ...
ಜಗವ ಸುತ್ತಿಪ್ಪುದು ನಿನ್ನ ಮಾಯೆ…
Share:
Articles

ಜಗವ ಸುತ್ತಿಪ್ಪುದು ನಿನ್ನ ಮಾಯೆ…

April 29, 2018 ಕೆ.ಆರ್ ಮಂಗಳಾ
ಈ ಭೂಮಿಯ ಮೇಲೆ ನಿಂತು ನೋಡಿದರೆ ಚಂದ್ರ ಬೆಳ್ಳಿಯಂತೆ ಹೊಳೆಯುತ್ತಾನೆ, ತಾರೆಗಳು ಕಣ್ಣು ಮಿಟುಕಿಸುತ್ತವೆ, ಸೂರ್ಯ ಮುಂಜಾನೆ ಮತ್ತು ಮುಸ್ಸಂಜೆಗೆ ಕಿತ್ತಳೆಯ ಚೆಂಡಾಗುತ್ತಾನೆ....

Comments 14

  1. Dr. C.A. Somashekharappa
    Jul 25, 2024 Reply

    Pandithardhya Guru ji avara lekhana channagide.

  2. ಈಶ್ವರ್ ಮಾನ್ವಿ
    Jul 25, 2024 Reply

    ಸ್ವಾಮೀಜಿಯವರ ಒಂದೊಂದು ಮಾತೂ ಅಮೂಲ್ಯವಾಗಿವೆ. ಅವರ ಪಾರದರ್ಶಕ ಬದುಕು ಅವರ ನಡೆ-ನುಡಿಗಳಲ್ಲಿ ಎದ್ದು ಕಾಣುತ್ತದೆ. ಗುರುಗಳಿಗೆ ಶರಣಾರ್ಥಿಗಳು👏🏾

  3. Honnappa. R. Jaggal
    Jul 28, 2024 Reply

    ಸೂಪರ್

  4. ಸಿದ್ದಪ್ಪ ಮೂಲಗೆ
    Jul 28, 2024 Reply

    ತುಂಬಾ ಚೆನ್ನಾಗಿ ಬರೆದಿದ್ದಾರೆ.‌ ಶ್ರೀಗಳ ಈ ಬರೆಹದ ಓದಿ ಖುಷಿ ನೀಡಿದೆ. ಇಂತಹ ಬರಹ ಇವರಿಂದ ಮಾತ್ರ ನಿರೀಕ್ಷಿಸಲು ಸಾಧ್ಯ.

    ಇಂತಹ ಒಳ್ಳೊಳ್ಳೆ ಬರಹವನ್ನು ಓದಿಸುತ್ತಿರುವ ‘ಬಯಲು’ ಬಳಗಕ್ಕೆ ಮನದುಂಬಿ ಅಭಿನಂದನೆಗಳು.

  5. ಸಿದ್ದಪ್ಪ ಮೂಲಗೆ
    Jul 28, 2024 Reply

    ನಡೆನುಡಿ ಒಂದಾಗಿಸಿಕೊಂಡು ಬದುಕುತ್ತಿರುವ ಸ್ವಾಮಿಜಿ ಮಾತ್ರ ಇತರಹ ಬರೆಯಲು ಸಾಧ್ಯ. ಇಂತಹ ಮೊನುಚಾದ ಬರಹಗಳನ್ನು ಸಾಣೇಹಳ್ಳಿ ಶ್ರೀಗಳಲ್ಲದೇ ಇನ್ನಾರು ಬರೆಯಲು ಸಾಧ್ಯ? ಒಬ್ಬ ವಾಸ್ತವವಾದಿಯಾಗಿ ತುಂಬಾ ಮನೋಜ್ಞವಾಗಿ ಬರೆದಿದ್ದಾರೆ. ಅವರ ಬರವಣಿಗೆಯ ಶೈಲಿ ತುಂಬಾ ಇಷ್ಟವಾಗುತ್ತದೆ. ಅವರ ಬರೆಹಗಳು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಶಬ್ದಾಂಡಭರ ಮಾಡದೆ, ಎಳೆಯ ಮಕ್ಕಳಿಗೂ ಅರ್ಥವಾಗುವಂತೆ ಸರಳವಾಗಿ ಇದ್ದದ್ದು ಇದ್ದಂತೆ ಓದುಗರಿಗೆ ದಾಟಿಸುತ್ತಾರೆ. ಒಬ್ಬ ಬರಹಗಾರನ ಬರೆಹ ಒಂದೇ ಓದಿಗೆ ಅರ್ಥವಾಗಬೇಕು. ಅದು ಮತ್ತೇ ಮತ್ತೇ ತಿಣುಕಾಡಿ ಓದುವಂತಾದರೆ ನನ್ನ ಪ್ರಕಾರ ಆ ಬರಹ ‘ಯೂಸ್ ಲೆಸ್’ ಎಂದರ್ಥ.

    ಹೊಸ ತಲೆಮಾರಿನ ಮಠಾಧೀಶರು ಈ ಬರಹ ತಪ್ಪದೇ ಓದಬೇಕು.

  6. ದೇವರಾಜ್ ರಾಂಪುರ
    Jul 28, 2024 Reply

    “ಒಬ್ಬ ಯೋಗ್ಯ ಗುರು ಜಾತಿ, ಮತ, ಪಕ್ಷ ಪಂಗಡಗಳನ್ನು ನೋಡದೆ ಅರ್ಹತೆಯುಳ್ಳವರು ಯಾರೇ ಆಗಿದ್ದರೂ ಅವರನ್ನು ನಾಡಿನ ನೇತಾರನನ್ನಾಗಿ ಆಯ್ಕೆ ಮಾಡುವಂತೆ ಕರೆಕೊಡಬೇಕು.” ಯಾವ ಧರ್ಮದ ಆವರಣಗಳ ಹಂಗಿಲ್ಲದವನೇ ನಿಜ ಸಂನ್ಯಾಸಿ ಎಂಬ ವಿವೇಕಾನಂದರ ಮಾತನ್ನು ನೆನಪಿಸುತ್ತವೆ ಗುರುಗಳ ಮಾತುಗಳು.👌🏽

  7. Suryaprakash dh
    Jul 28, 2024 Reply

    ತಮ್ಮ ಪ್ರಾಯೋಗಿಕ ಅನುಭವದಂತೆ ನಡೆಯುವ ಮತ್ತು ಅಂತಹ ಭಕ್ತರ ಈ ತಮ್ಮ ರೀತಿಯ ಆನುಭವಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮ ಮಾಡಿದರೆ ಅದಕ್ಕೆ ಎಲ್ಲೆಡೆ ಪ್ರಚಾರ ಸಿಗುತ್ತದೆ ಮತ್ತು ಈ ರೀತಿ ಬದುಕುವ ಪ್ರೇರಣೆಯನ್ನು ತಾವು ಕೊಟ್ಟಂತಾಗುತ್ತದೆ ಗುರುಗಳೇ .

  8. Dr. C.A. Somashekharappa, Davangere
    Jul 28, 2024 Reply

    Lingayat Society is at cross roads. It has not been able to simply institutionalise the Basava traditions holistically. Rather it has done that in a pick and choose manner. Neither it has committed to its ideological base nor it has fully absorbed the ‘other’ one. This situation has created lot of confusion in the minds of every one excepting those who want to take undue advantage of the situation.The younger generation would go directionless if this continues further.

    One example for this is, the nature of Recruitment and Retirement in Lingayat Mathas which Dr. Panditaradya Swamiji has made out subtly in his very thought provoking write up.
    KUDOS to Guruji.
    It is unfortunate that Lingayat elites, in all fields, have become self centered and time servers. They have no guts to call spade a spade, which is contrary to what Basava preached.

  9. Dr. Mrutyunjaya
    Jul 29, 2024 Reply

    Nicely written 🙏

  10. D.S. Rajeev
    Aug 3, 2024 Reply

    ಗುರು ಹೇಗಿರಬೇಕೆನ್ನುವುದನ್ನು ಗುರುವಾಗಿ ಹೇಳಿದ ಗುರುವಿಗೆ ಶರಣು ಶರಣು.

  11. ವಿರೇಶಕುಮಾರ್ ಹೊಸಮನಿ
    Aug 3, 2024 Reply

    ಸಾಣೆಹಳ್ಳಿ ಸ್ವಾಮಿಗಳ ಮಾತು ಮತ್ತು ಬರವಣಿಗೆ ಎರಡೂ ನೇರಾನೇರ. ಅವರ ಭಾಷಣಗಳನ್ನು ಅವಕಾಶ ಸಿಕ್ಕಾಗ ತಪ್ಪದೇ ಕೇಳಿದ್ದೇನೆ. ಅವರ ಲೇಖನಗಳನ್ನು ಬಯಲು ಬ್ಲಾಗಿನಲ್ಲಿ ಪ್ರತಿತಿಂಗಳು ಓದುತ್ತೇನೆ. ಅವರ ವಿಷಯ ಆಯ್ಕೆಗಳೂ ನನಗೆ ಹಿಡಿಸುತ್ತವೆ. ಈ ಲೇಖನ ಬಹಳ ಪ್ರಖರವಾಗಿ ಬಂದಿದೆ. ಮನೆಯಲ್ಲಿ ಎಲ್ಲರೂ ಓದಿ ಮೆಚ್ಚಿಕೊಂಡಿದ್ದೇವೆ.

  12. Shivayogi Ingalagi
    Aug 4, 2024 Reply

    ಕಾವಿಧಾರಿಗಳು ಪಾರದರ್ಶಕವಾಗಿರಬೇಕು ಎಂಬ ಗುರುಗಳ ಮಾತಿಗೂ ಇಂದಿನ ಕಾವಿಧಾರಿಗಳಿಗೂ ಸಂಬಂಧವೇ ಇಲ್ಲದಂತಿದೆ. ಮಠದ ವ್ಯವಹಾರಗಳಲ್ಲಿ ಮುಳುಗಿ ಹೋಗಿರುವ ಕಾವಿಧಾರಿಗಳು ರಾಜಕಾರಣಿಗಳಿಗಿಂತಲೂ ವ್ಯವಹಾರಸ್ಥರು. ಕಾಲಿಗೆ ಬೀಳಿಸಿಕೊಳ್ಳಲು ಮಾತ್ರವೇ ಕಾವಿ, ವಿಭೂತಿ, ದಪ್ಪದಪ್ಪ ರುದ್ರಾಕ್ಷಿ ಹಾಕುತ್ತಾರಷ್ಟೇ. ಈಗಂತೂ ಹೇಸಿಗೆ ಆಗುವಷ್ಟು ಲಿಂಗಾಯತದಲ್ಲೇ ತಮ್ಮತಮ್ಮ ಪಂಗಡದ ಬಗ್ಗೆ ಮಾತನಾಡಿ, ತಾವು ಜಗದ್ಗುರುಗಳೆನ್ನುತ್ತಾರೆ.

  13. Suvarna Paramesh
    Aug 8, 2024 Reply

    ಖಡಕ್ ಬರಹ. ಪ್ರತಿಯೊಬ್ಬ ಲಿಂಗಾಯತ ಮತ್ತು ಮಠಾಧೀಶರು ಓದಲೇ ಬೇಕು.

  14. ಗಿರಿಮಲ್ಲಪ್ಪ ಆನೆಗುಂದಿ
    Aug 8, 2024 Reply

    ಮಠಕ್ಕೆ ಬರುವ ಮಹಿಳೆಯರ ಮೇಲೆ ಕೆಟ್ಟ ದೃಷ್ಟಿ ಹಾಕುವ ಸ್ವಾಮಿಗಳು ನಮ್ಮ ನಡುವೆ ಅದೆಷ್ಟು ಜನರಿದ್ದಾರೆ… ಗುರುಗಳ ಮಾತುಗಳು ಸಮಾಜಕ್ಕೆ ದಾರಿದೀಪವಾಗಿವೆ👌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ತುತ್ತೂರಿ…
ತುತ್ತೂರಿ…
June 10, 2023
ಇದ್ದಷ್ಟೇ…
ಇದ್ದಷ್ಟೇ…
January 10, 2021
ಹುಡುಕಾಟ…
ಹುಡುಕಾಟ…
August 8, 2021
ಶಿವಯೋಗ
ಶಿವಯೋಗ
July 4, 2021
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
Copyright © 2025 Bayalu