ಮೂರನೇ ಕಣ್ಣು: ಅನಿಮಿಷ(11)
(ಇಲ್ಲಿಯವರೆಗೆ: ಅಂಗ-ಲಿಂಗ ಒಂದಾಗುವ ಅನುಭವಕ್ಕೆ ಕೊರತೆಯಾದಂತೆ ವಸೂದೀಪ್ಯನಿಗೆ ಇನ್ನೇನೋ ಅರಿವಿನ ಮಾರ್ಗ ಬೇಕೆನಿಸಿತು… ಕಾಲುಗಳು ನಾಗಿಣಿಯಕ್ಕನನ್ನು ಅರಸುತ್ತಾ ಬನವಾಸಿಯ ಕಡೆ ಹೊರಟವು. ಕುರುಡಾಗಿದ್ದರೂ ಒಳಗಣ್ಣಿನಿಂದಲೇ ಎಲ್ಲವನ್ನೂ ಕಾಣಬಲ್ಲ ಮುದುಕಿಯೊಬ್ಬಳ ಸಂಸಾರದ ಸಂಗಡ ಪಯಣ ಸಾಗಿತು. ಮುಂದೆ ಓದಿ-)
ನಸುಕು ಹರಿದು ಸೂರ್ಯ ಗರಿಗೆದರಿದಾಗ ದಂಡಿನ ಇಬ್ಬರು ಬಿಲ್ಲಾಳುಗಳನ್ನು ಕತ್ತೆಯ ಯಜಮಾನ ಕರೆದುಕೊಂಡು ಬಂದಿದ್ದ. ಆಳಿಗೆ ದುಗ್ಗಾಣಿಯಂತೆ ಲೆಕ್ಕಹಾಕಿ ಮುಂಗಡವೇ ಅವರಿಗೆ ಕೊಡುವ ಕರಾರಿಗೆ ಬಾಡದ ಬಲ್ಲಾಳರು ಒಪ್ಪಿಸಿದರಾಗಿ ವಸೂದೀಪ್ಯನೇ ಮುಂದಾಗಿ ಎಲ್ಲರದ್ದೂ ಸೇರಿಸಿ ಎರಡು ನಾಣ್ಯಗಳನ್ನು ಬಿಲ್ಲಾಳುಗಳಿಗೆ ಕೊಟ್ಟ. ಬಿಲ್ಲಾಳುಗಳು ನಾಣ್ಯಗಳನ್ನ ಮನೆಯಾಕೆಗೆ ಮುಟ್ಟಿಸಿ ಬಾಣದ ಬುತ್ತಿ ಕಟ್ಟಿಸಿಕೊಂಡು ಬರುತ್ತೇವೆಂದು ಹೋದವರು ಪ್ರಯಾಣಕ್ಕೆ ಬೇಕಾದ ಸರಂಜಾಮುಗಳಾದ ಕರಿಕಂಬಳಿ, ಬಗಲ ಜೋಳಿಗೆ, ಕಿನ್ನಗತ್ತಿ, ನೀರಮಡಿಕೆ, ಹಿಡಿಗಾತ್ರದ ಸಪೂರ ಮರದ ಕಂಬಗಳನ್ನು ತಂದು ಆ ಕಂಬಗಳಿಗೆ ಕಂಬಳಿಯ ಜೋಲಿ ಕಟ್ಟಿ, ಆ ಜೋಲಿಯೊಳಗೆ ಮುದುಕಿಯನ್ನು ಕೂರಿಸಿಕೊಂಡು ಹೊರಟು ನಿಂತರು. ಹಸಿರು ಕಂಡಲ್ಲಿ ಬಾಯಿ ಹಾಕಬಾರದೆಂದು ಕತ್ತೆಗಳ ಬಾಯಿಗೆ ಮುಳ್ಳಿನ ಚೀಲ ಹಾಕಲಾಗಿತ್ತು. ಸಾಲುಗಟ್ಟಿ ಕಾಲುದಾರಿಯಲ್ಲಿ ಸೂರ್ಯನಿಗೆ ಬೆನ್ನುಮಾಡಿಕೊಂಡು ಹರದಾರಿ ನಡೆದು, ಗುಡ್ಡವೊಂದನ್ನೇರಿ ನೋಡಿದರೆ ದಟ್ಟ ಕಾನು- ಭೂಮಿ ಆಕಾಶವನ್ನು ಒಂದು ಮಾಡುವಂತೆ ಹಸಿರು ತೋರಣಗಟ್ಟಿತ್ತು. ಮುಂದಿದ್ದ ಬಿಲ್ಲಾಳುಗಳು ಮುದುಕಿಯನ್ನು ಜೋಲಿಯಲ್ಲಿ ಹೊತ್ತುಕೊಂಡೇ ತುದಿಗಾಲ ಮೇಲೆ ನಡೆಯುತ್ತಿದ್ದರು. ಅವರ ನಡಿಗೆ ಅದು ನಡಿಗೆಯೋ ಓಟವೋ ತಿಳಿಯದಂತಿತ್ತು.
ಹುಲ್ಲಹಾಸ ಮೇಲಿನ ಮಂಜು ಪಾದಕ್ಕೆ ತಾಕಿ ಜುನುಜುನು ತಂಪೆರೆದು ಆ ಹುಲ್ಲು ನಡೆಯುತ್ತಾ ಬಾದೇರಿಹುಲ್ಲಷ್ಟು, ಹೊದೆಹುಲ್ಲಾಗಿ, ಸೋಂಟದೆತ್ತರಕೆ ಎದೆಯುದ್ದಕ್ಕೆ ಹೋಗುತ್ತಾ ಮುಂದೆ ಹೋದಂತೆಲ್ಲ ಹುಲ್ಲುಗಾವಲಿನಲ್ಲಿ ಹುದುಗಿದಂತೆ ಬೆಳೆದಿತ್ತು. ಆ ಹುಲ್ಲುಗಾವಲಿನ ಆ ಯೋಜನದಾರಿಯನ್ನು ದಾಟುವುದರೊಳಗೆ ಬಗೆಬಗೆಯ ಹಾವು, ಹುಳಹುಪ್ಪಟೆಗಳು ಬಿಸಿಲ ಮೈಯುಣಿಸಲು ಕಾಲುದಾರಿಯಲ್ಲಿ ಬಿದ್ದಿದ್ದವು, ಕಾಡಮಿಕಗಳು ಹತ್ತಾರು ಕಣ್ಣಮುಂದಿನಿಂದಲೇ ದಾಟಿದ್ದವು. ಕಾಡೆಮ್ಮೆ, ಕಾಟೇರ, ಆನೆಗಳ ಘೀಳು, ಚಿಗರಿಗಳ ಚಿನ್ನಾಟ, ಉಲಿಯುವ ಹಕ್ಕಿಗಳ ಚಿಲಿಪಿಲಿಗಳು, ಮಕ್ಕಳು ಬೆರಗು ಭಯದಿಂದ ಕತ್ತೆಗಳ ಮೇಲೆ ಅವುಚಿಕೊಂಡು ಮುಂದೇನು ಕಾಣುವುದೋ ಎಂದು ಕಾತರಿಸುತ್ತಿದ್ದರು. ಅಪಾಯ ಎದುರಾಗದಿರಲೆಂದು ಬಿಲ್ಲಾಳು ಸೊಂಟಕ್ಕೆ ಕಟ್ಟಿಕೊಂಡಿದ್ದ ಕೊರಗಂಟೆಗಳ ಠಳಂಪಳ್ ಠುಳುಂ ಸದ್ದಿಗೆ ಮೇಯುತ್ತಿದ್ದ ಪ್ರಾಣಿಗಳು ನಿಂತಲ್ಲೆ ತಲೆಯೆತ್ತಿ ನೋಡುತ್ತಿದ್ದವು. ಕತ್ತೆಗಳು ಬೆದರುತ್ತಿದ್ದವು. ಎದೆಯ ಆಳದಲ್ಲಿ ಭಯಮಿಶ್ರಿತವಾದ ಢವಗುಡುವ ಸದ್ದೊಂದು ಹುಟ್ಟಿ ಅದು ನಿಧನಿಧಾನಕೆ ಮೈಗೆಲ್ಲ ವ್ಯಾಪಿಸಿದಾಗ ವಸೂದೀಪ್ಯನ ಉಸಿರಾಟದ ಕ್ರಮವೂ ಬದಲಾಯ್ತು. ಆ ಠಳಂಪಳ್ ಠುಳುಂ ಕೊರಗಂಟೆಯ ಸದ್ದು ಒಂದು ಲಯದೊಳಗೆ ಹುಲ್ಲುಗಾವಲಿನ ಏಕತಾನತೆಯನ್ನು ಜಾಗೃತಗೊಳಿಸಿದಾಗ ಮುದುಕಿ ಬನವಸೆಯ ಮಧುಕೇಶ್ವರನ ಬಗ್ಗೆ ಹಾಡತೊಡಗಿದಳು. ನಾಗಿಣಿಯಕ್ಕನ ಬಗ್ಗೆ ಕೇಳದೇ ಉಳಿಸಿಕೊಂಡಿದ್ದ ಕುತೂಹಲ ಇಮ್ಮಡಿಸಿ, ವಸೂದೀಪ್ಯ ಹಿಂದೆ ಕತ್ತೆಗಳ ಯಜಮಾನನ ಜೊತೆ ಹೆಜ್ಜೆ ಹಾಕುತ್ತಿದ್ದವನು ಲಗುಬಗೆಯಿಂದ ಆ ಸಾಲುಕತ್ತೆಗಳ ಎಡಬಲಕೆ ದಾರಿಮಾಡಿಕೊಂಡು ಮುಂದಿದ್ದ ಬಿಲ್ಲಾಳುಗಳ ಜೋಲಿಯಲ್ಲಿ ತೂಗಾಡುತ್ತಿದ್ದ ಮುದುಕಿಯ ಸಮೀಪ ಬಂದ. ಹುಲ್ಲುಗಾವಲು ಕೊನೆಗೊಂಡು, ಜುಳುಜುಳು ಹರಿಯುವ ಕಿರಿದಾದ ಹಳ್ಳವೊಂದನ್ನು ದಾಟಿದ ಮೇಲೆ ರವಸ್ಟು ಕುಳಿತು ವಿಶ್ರಮಿಸಿದರು.
“ಸಣ್ಣಸ್ವಾಮೇರು ಏನೋ ಕೇಳಬೇಕಾಗಿ ಮುಂದೆ ಬಂದಿರಿ.”
“ಈ ಪರೀ ಹುಲ್ಲುಗಾವಲು..!”
“ಈ ಹುಲ್ಲು ಇರೋದರಿಂದಾನೇ ಮೂಡಲದ ಭೂಮಿ ಫಲವತ್ತಾಗಿದೆ ನನ್ನಪ್ಪಾ. ಇಲ್ಲಿ ಸುರಿಯೋ ಮಳೆಗೆ ಧರೆ ಕುಸಿದು, ಹೊಳೆಹಳ್ಳಗಳು ಮೈದುಂಬಿಕೊಂಡು ಮಣ್ಣಿನ ರಾಶಿ ತಂದರೆ ಊರು, ಸೀಮೆಗಳು ಮಣ್ಣಿನಡಿ ಸಿಕ್ಕಿ ಮಣ್ಣಾಗುತ್ತವೆ. ಈ ಹುಲ್ಲುಗಾವಲು ಅದೆಂತ ಪ್ರವಾಹ ಬಂದರೂ ಮಣ್ಣು ಹಿಡಿದುಕೊಂಡು ನೀರಿಗೆ ದಾರಿಮಾಡುತ್ತದೆ. ಇದು ನಿನಗೆ ತಿಳಿಯದು. ನನಗೂ ತಿಳಿದಿರಲಿಲ್ಲ. ನದಿ ಉಕ್ಕಿ ಬಂದು ಊರು ಮುಳುಗಿದ್ದ ಕಣ್ಣಾರೆ ಕಂಡವರಿಂದ ಕೇಳಿ ತಿಳಿದೆ. ಅದೆಷ್ಟೋ ಊರುಗಳು, ಅದೆಷ್ಟೋ ದಳವಾಯಿ, ಬಲ್ಲಾಳರ ಗೋಪುರಗಳು, ಗುಡಿಗುಂಡಾರಗಳೂ ಈ ಮಣ್ಣೊಳಗೆ ಹುದಗಿವೆ ಸಣ್ಣಸ್ವಾಮೇರಾ.”
“ದಣಿವಾರಿದರೆ ಹೊರಡೋಣ ತಾಯಿ” ಬಿಲ್ಲಾಳುಗಳು ನಿಧಾನಿಸಲಿಲ್ಲ. ಈಗ ಮುದುಕಿ ಕತ್ತೆಯೊಂದರ ಮೇಲೆ ಕುಳಿತು, ತನ್ನ ಗೆಜ್ಜೆಕಟ್ಟಿದ್ದ ಕೈಕೋಲನ್ನು ಸಣ್ಣಸ್ವಾಮಿಯ ಕೈಗೆ ಕೊಟ್ಟಳು. ಕಾಡು ಹಾದಿತಪ್ಪಿಸುತ್ತದೆ ಎಂದು ಮಾತು ಆರಂಭಿಸಿದ ಮಾದೇವಿ, ಇಲ್ಲಿರುವ ದೈವಗಳೆಲ್ಲವೂ ದಾರಿಯ ಗುರುತುಗಳಾಗಿ, ಅಂಚಿನ ಭೂತಪ್ಪಗಳಾಗಿ, ನಾಗರಬನಗಳಾಗಿ, ಗುತ್ತಿಗಳಾಗಿ ಒಂದೊಂದು ಸೀಮೆಗುರುತಿನ ಸಂಗತಿಗಳು ಒಂದೊಂದು ಕತೆಗಳಾಗಿ ದೇವರೇ ಆದ ಬಗ್ಗೆ ಹೇಳುತ್ತಿದ್ದಳು.
“ನನ್ನದು ಮಾತಿನ ಮಂಟಪ ಸಣ್ಣಸ್ವಾಮೇರಾ.. ಯಾರಾದರೂ ಹೂಂ ಅನ್ನೋರು ಸಿಕ್ಕರೆ ಕತೆಗಳ ಮೇಲೆ ಕತೆಗಳನ್ನ ಹೇಳುತ್ತಲೇ ಇರತೀನಿ. ಈ ಹಾಡು ಕತೆಗಳು ನನ್ನ ಕಣ್ಣೊಳಗೆ ಕಾಣುವ ಬೆಳಕಿನಲ್ಲಿ ಮೂಡಿಮಸುಳತಾವೆ. ಹೌದು ನೀವು ನಾಗಿಣಿಯಕ್ಕನ ಕಾಣಲಿಕ್ಕ ಹೊರಟಿದ್ದೀರಲ್ಲ.”
“ಹೌದು ತಾಯಿ.”
“ಭಲ್ ಮಾಟಗಾತಿ ನಾಗವ್ವ, ನಾಗಿಣಿಯಕ್ಕ. ನನ್ನ ಸಾಕಿದ್ದ ಅವ್ವ ಒಬ್ಬಳಿದ್ದಳು ಗುತ್ತೆವ್ವ ಅಂತ ಹೇಳಿದಿನಲ್ಲ. ಆಕೆಯ ಸ್ವಂತ ಮಗಳಾಕೆ. ನನ್ನ ಅಕ್ಕ. ಏನು ಮಾಡೋದು ಸ್ವಾಮೇರಾ.. ಒಬ್ಬ ಹೆಣ್ಣೆಂಗಸು ತಾನು ಸಾಧಕಿ ಅಂತ ಸಿದ್ದಮಾಡಲಿಕ್ಕೆ ಭೋ ಕಷ್ಟಪಡಬೇಕು. ಅದೇ ಗಂಡಸಾದರೆ… ಬಾದರಾಯಣನ ಮಗ ಶುಕ ಹುಟ್ಟುತ್ತಲೇ ಜ್ಞಾನಿ ಅಂತ ಶಾಸ್ತ್ರಗಳು ಒಪ್ಪಕೋತಾವೆ. ಗುತ್ತೆವ್ವನ ಮಗಳು ನಾಗವ್ವ ಹುಟ್ಟುತ್ತಲೇ ಜ್ಞಾನಿ ಅಂತ ಒಪ್ಪೋದೇ ಇಲ್ಲ. ಹೆಣ್ಣೆಂಗಸು ಎಲ್ಲದಕ್ಕೂ ಪ್ರಮಾಣ ಕೊಡಬೇಕು. ಈಗ ನೋಡು ನಿನ್ನದೂ ಜೀವವೇ, ನನ್ನದೂ ಜೀವವೇ… ನೀನು ಕುಡಿಯೋ ಗಾಳಿಯನ್ನು ನಾನು ಕುಡಿತೇನೆ. ನೀನು ಹೊರಡಿಸೋ ಸ್ವರವೂ ನಿನ್ನ ದೇಹವೆಂಬೋ ಗುಹೆಯಿಂದಲೇ ಬರತದೆ, ನಾನು ಹೊರಡಿಸೋ ಸ್ವರವೂ ನನ್ನ ದೇಹವೆಂಬ ಗುಹೆಯಿಂದಲೇ ಬರತದೆ. ನಿನ್ನ ಸ್ವರಕ್ಕೆ ಸಿಗುವ ಪ್ರಮಾಣ ಹೆಣ್ಣೆಂಗಸಾದ ನನ್ನ ಸ್ವರಕ್ಕ ಸಿಗೋದಿಲ್ಲ. ನನ್ನವ್ವ ಅದನ್ನ ಯಾವತ್ತೂ ಸಹಿಸಲಿಲ್ಲ. ಸಾಯೋವರೆಗೂ… ಇದ ಕೈಗಳಿಂದ ನನ್ನವ್ವನ ದೇಹಕ್ಕೆ ಅನ್ನ-ಮಜ್ಜಿಗೆ ಮೆತ್ತಿ ಬದುಕಿಸಿಕೊಳ್ಳಲಿಕ್ಕ ನೋಡಿದೆ ಸಣ್ಣ ಸ್ವಾಮೇರಾ… ನಿತ್ರಾಣಗೊಂಡಿದ್ದಳು. ಘಟ ಚೆಲ್ಲಿದಳು.”
ತುಸು ಹೊತ್ತು ಮೌನ ಅವರಿಬ್ಬರ ನಡುವೆ ಹರಡಿಕೊಂಡು ಮುಂದೇನು ಮಾತಾಡುವುದು, ಏನಂದುಕೊಂಡಾಳು ಮುದುಕಿ ಎಂಬ ಆತಂಕದಲ್ಲಿ ವಸೂದೀಪ್ಯ ಹೆಜ್ಜೆ ಹಾಕುತ್ತಿದ್ದ. ಕುರುಚಲು ಕಾಡು ದಟ್ಟಗೊಳ್ಳುತ್ತಾ ಮುಗಿಲೆತ್ತರದ ಮರಗಳ ನಡುವೆ ಮಧ್ಯಾಹ್ನದ ಸೂರ್ಯನೂ ಮೂಡಿಮಸಳುವ ಹೊಯ್ದಾಟ ನಡೆಸಿದ್ದ. ಈ ಗುತ್ತೆವ್ವ ಯಾರು, ನಾಗಿಣಿಯಕ್ಕ ಯಾರು, ಆ ಬಾದರಾಯಣನ ಮಗ ಶುಕ ಯಾರು, ಕಣ್ಣೊಳಗೆ ಅಖಂಡ ಬೆಳಕನ್ನು ಅಡಗಿಸಿಕೊಂಡ ಸಿದ್ಧಸಾಧು ಯಾರು, ಕಟ್ಟಕಡೆಗೆ ನಾನು ಯಾರು ಎಂಬ ಮನಸ್ಸಿನ ಹೊಯ್ದಾಟದ ನಡುವೆಯೇ ಮತ್ತೊಮ್ಮೆ ವಿರಮಿಸಿ ಅಂಬಲಿ ಕಾಯಿಸಿಕೊಂಡು ಕುಡಿದು ಮತ್ತೆ ನಡೆಯತೊಡಗಿದರು.
“ಸಣ್ಣಸ್ವಾಮೇರಾ ಈ ಕಾಡಿನ ಜನ ತಂತ್ರಕ್ಕೆ ಹೆದರತಾರೆ. ಮಂತ್ರಕ್ಕೆ ಮಾವಿನಕಾಯಿ ಉದರತ್ತೆ ಅಂತ ಕಾಯ್ತಾರೆ. ದಟ್ಟ ಪೊದೆಯೊಳಗೆ ದಯ್ಯ – ಭೂತ ಇದೆಯಂತಾರೆ. ಒಮ್ಮೊಮ್ಮೆ ಗಾಳಿಯೊಳಗೆ ಮಾರಿ ಬಂದಿದ್ದಾಳೆ ಅಂತಾರೆ. ತಾವು ಗುರುತು ಮಾಡಿಕೊಂಡಿದ್ದ ಸೀಮೆ ದಾಟಿದರೆ ಬಾಣಾಮತಿ ಮಾಡಸತಾರೆ ಅಂತ ಭಾವಿಸತಾರೆ. ನನ್ನವ್ವ ಮೊದಲೆಲ್ಲ ಈ ಸೀಮೆ ಜನಗಳಿಗೆ ಬೌದ್ಧಿಣಿ, ಅಳೋಮಕ್ಕಳ ಅಳು ನಿಲ್ಲಿಸತಿದ್ದಳು, ಹಾವು ಮುಟ್ಟಿದರೆ ಔಷಧಿ ಕೊಡತಿದ್ದಳು, ಕಾಯಿಲೆ ಕಸಾರಿಕೆಗೆಲ್ಲ ಆಸರಾಗುವ ಮಾಯಿ. ಆಕೆ ಮುಟ್ಟಿದರೆ ಒಣಗಿದ್ದ ಎಲೆಬಳ್ಳಿಗಳು ಮತ್ತೆ ಚಿಗರತದೆ ಅನ್ನುವಂಥ ಸಾತ್ವಿಕಳು. ಬನವಸೆಯ ಮಂದಿಗೆಲ್ಲ ಮಹಾಮಾಯಿ ಆಗಿದ್ದವಳು. ನನ್ನಂಥ ಅನಾಥ ಮಕ್ಕಳಿಗೆ, ಮನೆಯಿಂದ ತಿರಸ್ಕೃತರಾದ ಹೆಂಗಸರಿಗೆ, ಕುಂಟ, ಕುಡ್ಡರಿಗೆ, ಮುದುತದಕರಿಗೆ ಆಸರಾಗುವ ತಾಯಿ. ಆಕೆ ಮುಟ್ಟಿದ ಅಂಟು ಘಮ್ಮೆನ್ನುವ ಧೂಪ ಆಗತಿತ್ತು. ನನ್ನವ್ವನ ಹತ್ತಿರ ಸಿಗುವ ಧೂಪಕ್ಕಾಗಿ ಭೂಮಿ ಮೇಲಿನ ರಾಜಮಾರಾಜರು, ದಳವಾಯಿಗಳು, ಬಲ್ಲಾಳರು, ಸಾಧಕ ಸತ್ಪುರಷರು ತಿಂಗಳಾನುಗಟ್ಟಲೇ ಕಾಯ್ದು ವರುಷಕ್ಕಾಗುವಷ್ಟು ಧೂಪ ತೆಗೆದುಕೊಂಡು ಹೋಗತಿದ್ದರು. ಸಣ್ಣಸ್ವಾಮೇರಾ ನಿಮಗ ಹೇಳತೇನಿ, ಒಂದು ಚಿಟಿಗೆ ಧೂಪ ಕೆಂಡದ ಮೇಲೆ ಹಾಕಿದರೆ ಸಾಕು, ಮಾಳೆಲ್ಲ ಘಮ್ಮಂತ ಪರಿಮಳ… ಓಡೋ ಮನಸು ಗಕ್ಕನೇ ನಿಲ್ಲೋವಂಥ ಸೆಳೆತ ಆ ಸುವಾಸನೆಯಲ್ಲಿ ಇರುತಿತ್ತು. ಧೂಪದ ಪರಿಮಳವೂ ಒಂದು ತತ್ವವೇ ಮರಿಸ್ವಾಮಿಗಳೇ.. ಆ ಪರಿಮಳದಲ್ಲೇ ಗುತ್ತೆವ್ವ ನಾಗವ್ವನಿಗೆ ಸತ್ಯದ ಅರಿವು ಮಾಡಿದಳು. ಆ ಸತ್ಯ ಅನ್ನುವ ಸಂಗತಿಯ ಬೆನ್ನುಬಿದ್ದು ನಾಗಿಣಿಯಕ್ಕ ಬಗೆಬಗೆಯ ತತ್ವ ವಿಚಾರಗಳ ಅರಿತವರ ಬಳಿ ಅಲೆದು ಒಂದೊಂದು ಕ್ರಮವನ್ನು ಕಲಿಯತೊಡಗಿದಳು. ತಾಳಗುಂದಕ್ಕೋಗಿ ಶಾಸ್ತ್ರದ ಬಗ್ಗೆ ಕೇಳಲಾಗಿ ಹೆಣ್ಣೆಂಗಸು ಶಾಸ್ತ್ರ ತಿಳಿಯುವುದಲ್ಲ ಆ ಸಬುದವನ್ನು ಕೇಳಬಾರದೆಂದು ಅಗ್ರಹಾರದಿಂದ ಓಡಿಸಿದರು. ಗಿರಿಯಿಂದ ಬಂದವರ ಬಳಿ ಅನುಷ್ಠಾನ ಅರಿತಳು, ತಪೋನಿರತರಿಂದ ಧ್ಯಾನ ಕಲಿತಳು. ಉಸ್ವಾಸ-ನಿಸ್ವಾಸದ ಚಕ್ರಗತಿಯನ್ನು ಕಾಪಾಲಿಕರಿಂದಲೂ, ಆಹಾರ ಸೇವಿಸದೆ ಮೈಚರ್ಮಕ್ಕೆ ಅನ್ನಮಜ್ಜಿಗೆ ಮೆತ್ತಿಕೊಂಡು ತಿಂಗಳಾನುಗಟ್ಟಲೇ ಊಟಬಿಟ್ಟಳು…”
“ಊಟವಿಲ್ಲದೆ ಬದುಕುವುದು..?”
“ಅಯ್ಯಾ ಸ್ವಾಮೇರಾ ತಿನ್ನುವುದು ಸ್ವಾದಕ್ಕೆ, ಉಪ್ಪು, ಹುಳಿ, ಖಾರ, ಸೀ ಅಡುಗೆಯಲ್ಲ ನಾಲಗೆ ರುಚಿಗೆ. ಅದಾದ ಮ್ಯಾಲೆ ಜೀವತ್ರಾಣಕ್ಕೆ… ಧ್ಯಾನಕ್ಕೆ ಕೂತವಳಿಗೆ ಇದೆ ಕೈಯಾರೆ ಮೈಗೆಲ್ಲ ಅನ್ನ-ಮಜ್ಜಿಗೆ ನುಣ್ಣಗೆ ಕಲಿಸಿ ಹಚ್ಚಿದ್ದೇನೆ. ಅವ್ವನಿಗೆ ಈಕೆಯ ಹುಚ್ಚಾಟವೆಲ್ಲ ರೋಸಿಬಂದಿತ್ತು. ಹೊಟ್ಟೆ ಹಸ್ಕೊಂಡು ಎಷ್ಟು ಧ್ಯಾನ ಮಾಡಿದರೂ ಲಕ್ಷ್ಯ ಎಲ್ಲಾ ಹಸಿವಿನ ಮ್ಯಾಲೆ ಇರತದೆ, ಹೊಟ್ಟೆತುಂಬ ಉಂಡು ಪೂಜೆ-ಪುನಸ್ಕಾರ ಮಾಡಬೇಕು ಅಂತ ಅವ್ವ ಹೇಳತಿದ್ದಳು. ಕೇಳಬೇಕಲ್ಲಾ..! ನಾಗವ್ವಂದು ಒಂದೇ ಹಠ… ಗುತ್ತೆವ್ವನ ಧೂಪದ ಪರಿಮಳವೂ ಒಂದು ಭ್ರಮೆ. ಆ ಭ್ರಮೆಗಳನ್ನು ಮೀರಿದ ಅರಿವನ್ನು ಹುಡುಕಬೇಕು ಅನ್ನೋದು. ಆಮ್ಯಾಲ ಮಲಯಾಳ ಸೀಮೆಯ ಮಾತಿನ ಮಾಂತ್ರಿಕನೊಬ್ಬ ಬಂದ ನೋಡ್ರೀ.. ಭಲ್ ಕತೆಗಾರ. ಬಾಯಿಗೆ ರಸಗವಳ ತುಂಬಕೊಂಡ ಕುಂತರೆ ಬರೀ ಗೌಡಪಾದ, ಗೋವಿಂದಪಾದ, ವಿಷ್ಣುಶರ್ಮ, ಶಂಕರಪಾದ ಅಂತ ಅರವತ್ಮೂರು ಪಾದಗಳನ್ನ ನಿವಾಳಿಸಿ ಒಗೆಯೋ ಆಚಾರ್ಯರ ಕತೆ ಹೇಳತಿದ್ದ. ನಾಗಿಣಿಯಕ್ಕನ ತಲೆ ಗಿರ್ರಂತ ತಿರುಗಿತು. ಅಲ್ಲಾ ತಲೆ ತಿರುಗಿಸಿದ ಆ ಮಾರಾಯ… ಅವನ ಮಾತು ಕೇಳ್ಕೊಂಡು ನಾಗವ್ವ ಉತ್ತರದ ಕಡೆಗೆ ಹೋದವಳು ಹನ್ನೆರಡು ವರುಷ ಹೋದಳು.”
“ತಾಯಿ ಅನ್ನಾಹಾರ ಸೇವಿಸದೆ ಬದುಕುವುದು ಸಾಧ್ಯವೇ…?”
“ಅದ್ಯಾಕ ಸಾಧ್ಯವಿಲ್ಲ ಸಣ್ಣಸ್ವಾಮೇರಾ.. ಸರಹಪಾ ಹನ್ನೇಡು ವರುಷ ತಪಕ್ಕ ಕುಂತಾಗ ಅವನ ಹೆಂಡತಿಯಾದ ಕುಂಬಾರತಿ ಮೈಗೆಲ್ಲ ನುಚ್ಚಂಬಲಿ ಮಜ್ಜಿಗೆ ಸವರಿ ಬದುಕಿಸಿಕೊಂಡಿದ್ದಳು. ಹನ್ನೇಡು ವರುಷ ಆದ ಮ್ಯಾಲ ಎಚ್ಚರಗೊಂಡ ಆ ಪುಣ್ಯಾತ್ಮ ಮೊದಲ ಕೇಳಿದ್ದೆ ಮೂಲಂಗಿ ಸಾರು ಹಾಕಿಕೊಡು ಅಂದನಂತೆ. ಆ ಹನ್ನೇಡು ವರುಷಾನೂ ಸರಹಪಾ ಮೂಲಂಗಿ ಸಾರಿನ ಘಮದಲ್ಲೇ ತಪಸ್ಸಿಗೆ ಕುಂತು ವ್ಯಯ ಮಾಡಕೊಂಡ ಅಂತ ಅವ್ವ ಗುತ್ತೆವ್ವ ಹೇಳತಿದ್ದಳು.”
“ನಾಗಿಣಿಯಕ್ಕನಿಗೆ ಸತ್ಯ ದರುಶನ ಹೇಗಾಯ್ತು ತಾಯಿ..?”
“ಸಾಧಿಸೋದು ಒಂದು ಕ್ರಮ. ಅದಕ್ಕೆ ಮನಸ್ಸನ್ನ ಹದಗೊಳಿಸಿಕೊಳ್ಳಬೇಕು ಸಣ್ಣಸ್ವಾಮೇರಾ.. ಈ ಕತೆಗಿತೆಯಲ್ಲ ಬದುಕಿಗೆ, ಬದುಕಿನ ತುಡಿತಕ್ಕೆ. ತಪಸ್ಸಿಗೆ ಹೋಗೋರಿಗೆ ಕತೆಗಳು ಯಾಕಬೇಕು?”
ಮುದುಕಿಯ ಮುಖದ ರಂಗು ಬದಲಾದಂತೆ ಕಾಣಿಸಿತು. ಹಠಮಾರಿಯ ಗಂಟುತನ ಆಕೆಯ ಮುಖದ ಅಂದವನ್ನು, ನಗುವಿನ ಚೆಲುವನ್ನು ಮತ್ತಷ್ಟು ವಿಕಾರಗೊಳಿಸಿದಂತೆ ಕಾಣತೊಡಗಿತು. ವಸೂದೀಪ್ಯ ಎಷ್ಟು ಗೋಗರೆದರೂ ಆಕೆ ಮುಂದೇನಾಯ್ತು ಎನ್ನುವುದನ್ನ ಹೇಳಲಾರದೆ ಬಿಗುಮಾನ ಮತ್ತಷ್ಟು ಬಿಗಿಮಾಡಿಕೊಂಡಳು. ಬಿಸಿಲಿನ ಮದವಿಳಿದು ಗಾಳಿ ತಣುವಾದಂತೆ ನಡೆಯುವ ದಾರಿಯೂ ಅವಸರದಲ್ಲಿ ಹಿಂದೆ ಸರಿಯುತ್ತಿತ್ತು. ನಾಗಿಣೀಯಕ್ಕನಿಗೆ ಸತ್ಯದರುಶನವಾಗುವ ಹಂತಕ್ಕೆ ಕತೆ ತಂದು ನಿಲ್ಲಿಸಿದ ಮುದುಕಿ ಮುಂದೊಂದು ಮಾತನಾಡದೆ ಗುಮ್ಮನಾಂತದ್ದು ಕಸಿವಿಸಿಯೆನಿಸಿತಾದರೂ ಹೇಳಿಯಾಳೆಂಬ ಕಾತುರ ವಸೂದೀಪ್ಯನ ಕಣ್ಣಲ್ಲಿತ್ತು. ಊಹ್ಞೂ.. ಸೂಡಿಯಿಂದ ಜೊತೆಯಾಗಿ ಬಂದ ಅನ್ಯೋನ್ಯದ ಸಂಬಂಧ ಈಗ ಇದ್ದಕ್ಕಿದ್ದಂತೆ ಹಳಸಿದಂತಾಯ್ತು. ದಣಿವಾದ ಕತ್ತೆ ಕಾಲುಗಳನ್ನು ಜಾಡಿಸುತ್ತಾ ಹೂಂಕರಿಸಿದಾಗ ಮತ್ತೊಂದು ಚಣ ವಿಶ್ರಮಿಸಿದರು. ಬಿಲ್ಲಾಳು ಗವ್ವಗತ್ತಲಾಗುವ ಮುನ್ನ ವರದೆಯ ತಟಾಕಿನ ಹೊಂಕಣದ ಸಿದ್ದನ ಗವಿ ತಲುಪಬೇಕೆಂದು ಅವಸರಿಸಿದರು. ದೂರೇನಿಲ್ಲ ಸನಿಹವೇ ಎಂಬ ಆಸೆಯನ್ನು ಕತ್ತೆಯ ಯಜಮಾನನಿಗೂ ಮಕ್ಕಳಿಗೂ ತುಂಬಿ ಮತ್ತೊಂದು ಯೋಜನ ದಾರಿ ನಡೆಸಿದಾಗ ಅಪೂಟ ಕತ್ತಲೆಂಬುದು ಬೆಳಕನ್ನು ನುಂಗಿತು.
ಆ ಹೊಂಕಣದ ಗಿರಿಯ ತುತ್ತತುದಿಯಲ್ಲಿನ ಸಿದ್ದರ ಗವಿಯ ಮುಟ್ಟಿದರೂ ಮುದುಕಿ ನಾಗಿಣಿಯಕ್ಕನ ಕತೆ ಹೇಳಲಾರದೆ ಮುಗುಮ್ಮಾಗಿ ಬಿಗುಮಾನ ತೋರಿದಳು. ವಸೂದೀಪ್ಯನಿಗೆ ರುಚಿ ಕಂಡಿದ್ದ ಬಾಳಕಥನ ಕೇಳುವ ಕುತೂಹಲ ತಡೆಯದೇ ಆಕೆ ಈಚಲು ಚಾಪೆ ಹಾಸಿದ್ದ ಕಲ್ಲಹಾಸಿನ ಪಕ್ಕದಲ್ಲೇ ತಾನೂ ಹೋಗಿ ಕುಳಿತ. ನಾಗಿಣಿಯಕ್ಕಾ ಎಂದು ಎರಡುಮೂರು ಬಾರಿ ಆಕೆಯ ಕಿವಿಗೆ ಕೇಳುವಂತೆ ಉಸುರಿದರೂ ತಾನ್ಯಾರೋ.. ಅವಳ್ಯಾರೋ ಎಂಬಂತೆ ಮುದುಕಿಯು ವರ್ತನೆ ಬದಲಿಸಿದಳು. ವಸೂದೀಪ್ಯ ಬಲಗೈ ರಟ್ಟೆಯಲ್ಲಿ ಕಟ್ಟಿದ್ದ ಲಿಂಗವನ್ನು ತೆಗೆದು ಅಂಗೈ ಮೇಲಿಟ್ಟುಕೊಂಡು ದೃಷ್ಟಿಯೋಗ ನಡೆಸಿದ. ರೆಪ್ಪೆಗಳು ಅಲುಗದಂತೆ ನಿಶ್ಚಿಂತನಾಗಿ ಎಷ್ಟು ದೃಷ್ಟಿಸಿದರೂ ಸಾಧ್ಯವಾಗದೆ ಸೋಲುತ್ತಿದ್ದ. ಇನ್ನೇನು ಲಿಂಗಾಂಗ ಸಾಮರಸ್ಯವಾಯ್ತು ಎಂದುಕೊಳ್ಳುವಷ್ಟರಲ್ಲಿ ಕಣ್ಣಮಡುವಲ್ಲಿ ನೀರು ತುಂಬಿಕೊಂಡು ಪಳಕ್ಕೆನೇ ಬಿಂದುಗಳು ಉರುಳುತ್ತಿದ್ದವು. ಹ್ಮಮ್ಮ ಎಂಬ ಹೂಂಕಾರದ ಸ್ವರವನ್ನು ಕಿರುನಾಲಗೆಯಿಂದೊತ್ತಿ… ತನ್ನ ಗುರು ಮಾಡುತ್ತಿದ್ದ ಓಂಕಾರ ನಾದಕ್ಕಾಗಿ ಬಾಯಿದೆರೆದು ಉಗ್ಗಡಿಸಿದ ಊಂಹೂ.. ಸ್ವರ ಹೊಂಡಲೇ ಇಲ್ಲ. ಆ ಗಿರಿಯ ನೆತ್ತಿಯ ಮೇಲಿನ ಗಾಳಿಯ ರಭಸ ಸ್ವರಸ್ಥಾನಕ್ಕೆ ನಿಲ್ಲದಾಯ್ತೋ ಇಲ್ಲಾ ನಾಗಿಣಿಯಕ್ಕನ ಸತ್ಯ ದರುಶನ ಹೇಗಾಯ್ತೆಂಬ ಕತೆ ಮನಸ್ಸನ್ನು ಕದಡಿತೋ ತಾನು ಮಾಡುತ್ತಿರುವ ತಪವೂ ವ್ಯರ್ಥವೆನ್ನಿಸಿ ಸುಮ್ಮನಾದ.
ಮುದುಕಿ ಮಾದೇವಿ ಅಪರಿಚಿತಳ ಹಾಗೆ ತನ್ನ ಪಾಡಿಗೆ ತಾನು ಮಧುಕೇಶ್ವರ ಅಂತ ಗಲ್ಲಗಳಿಗೆ ಅಂಗೈ ಬಡಿದುಕೊಂಡು ಆಕಳಿಕೆ ತೆಗೆದು ಮಗ್ಗಲು ಬದಲಿಸಿ ಕಣ್ಮುಚ್ಚಿದಳು. ಮತ್ತೇನಾದರೂ ನಾಗಿಣಿಯಕ್ಕ, ಗುತ್ತೆವ್ವರ ಬಗ್ಗೆ ಹೇಳುತ್ತಾಳೆಂದು ಹಂಬಲಿಸಿ ಕಾಯುತ್ತಿದ್ದ ವಸೂದೀಪ್ಯ ತನ್ನದೇ ಕಲ್ಪನಾವಕಾಶದಲ್ಲಿ ಮುದುಕಿಯ ವಿಚಿತ್ರ ನಡವಳಿಕೆಯ ಬಗ್ಗೆ ಏನೇನೋ ಯೋಚಿಸಿ ಏನೊಂದು ಕಡೆಗಾಣದಾಗಿ, ನಿದ್ದೆಯೂ ಬಾರದಾಗಿ ಆಕಾಶ ಮಂಡಲದ ಚುಕ್ಕಿಚಂದ್ರಾಮರ ದಿಟ್ಟಿಸುತ್ತ ಅಡ್ಡಾದ. ಇಲ್ಲೆಲ್ಲೋ ಕಾಣುತ್ತಿದ್ದ ಚುಕ್ಕಿಗಳು ಅಲ್ಲೆಲ್ಲಿಗೋ ಸರಿದು, ಚಂದ್ರಾಮನೂ ಆ ಬಾನಂಗಳದಲ್ಲಿ ಅವಸರವಾಗಿ ಮತ್ತೊಂದು ಮಗ್ಗುಲಿಗೆ ಓಡುತ್ತಿರುವ ಹಾಗೆ ಕಾಣಿಸುವ ಭ್ರಮೆ ಅವನದೇ ಬದುಕಿನ ಚಿತ್ರದ ಹಾಗೆ ಅಂತೆನಿಸಿತು. ಆ ಗವಿಯ ಮುಂಭಾಗದಲ್ಲಿ ಮುದುಕಿ, ನಟ್ಟುವರ ಮಕ್ಕಳು ಮಲಗಿದ್ದರೆ, ತುಸುದೂರ ನೆಲದೊಳಗೆ ಸಣ್ಣದೊಂದು ತಗ್ಗು ಮಾಡಿಕೊಂಡು, ಆ ಗುಂಡಿಯೊಳಗೆ ಗೂಡುಗಾಲು ಹಾಕಿಕೊಂಡು, ಕಂಬಳಿ ಹೊದ್ದುಕೊಂಡು ಬಿಲ್ಲಾಳುಗಳು ಮತ್ತು ಕತ್ತೆಗಳ ಯಜಮಾನರು ಸಂಪು ನಿದ್ದೆಗೆ ಜಾರಿದ್ದರು. ಮಣ್ಣೊಳಗೆ ಸಣ್ಣದೊಂದು ಗುಂಡಿ ತೋಡಿಕೊಂಡು ಪ್ರಾಣಿಗಳು ಮಲಗುತ್ತವೆ, ಆ ಬೆಚ್ಚಗಿನ ನಿದ್ದೆಗಾಗಿ ಮನಸ್ಸು ಹಂಬಲಿಸಿ ವಸೂದೀಪ್ಯನು ಸಣ್ಣಕೆ ಮಣ್ಣುಗೆಬರಿ ತಗ್ಗುಮಾಡಿಕೊಂಡು ಮಲಗಿದ. ಆಹಾ ! ಸುತ್ತ ಹರಡಿರುವ ತಣುಗಾಳಿಯಲ್ಲಿ ಭೂಮ್ತಾಯಿಯ ಕಾವಿಗೆ ಬೆಚ್ಚಗಾದಂತಾಗಿ ಅವ್ವ ಮಹಾಲೇಖೆಯ ಮಡಿಲೊಳಗೆ ಮಲಗಿದಂತೆನಿಸಿ ಸುಖದ ನಿದ್ದೆಗೆ ಜಾರಿದ.
ಬಚ್ಚಬರಿಯ ಹೊಟ್ಟೆ ಗುರುಗುಟ್ಟಿದಾಗ ಎಚ್ಚರವಾಯ್ತು. ಎಚ್ಚರಾದಾಗ ಮಣ್ಣೊಳಗಿನ ಕಾವು ಒಂದು ಕಡೆಗಾದರೆ ಮೈಯ ಮತ್ತೊಂದು ಬದಿಯಲ್ಲಿ ನೀರಹನಿಗಳ ಚುಮುಕಿಸಿದಂತೆ ತಂಪೆರದಿತ್ತು. ಕಣ್ದೆರೆದು ನೋಡಿದರೆ ಗವಿಯ ಮುಂದಲ ಬಯಲಲ್ಲಿ ಯಾರಂದರೆ ಯಾರೂ ಇದ್ದಿರಲಿಲ್ಲ. ಬೆಳಗಿನ ಬೆಳ್ಳಿಚುಕ್ಕಿ ಪ್ರಕಾಶಮಾನವಾದದ್ದೆ ಹಕ್ಕಿಗಳು ಎಚ್ಚರಗೊಂಡು ಉಲಿಯತೊಡಗಿದವು. ಮಕ್ಕಳು, ಮುದುಕಿಯೂ, ಕತ್ತೆಗಳು, ಬಿಲ್ಲಾಳುಗಳು, ಯಜಮಾನ ಯಾರಂದರೆ ಯಾರೂ ಇದ್ದಿರಲಿಲ್ಲವಾಗಿ ಧಡಗ್ಗನೆದ್ದು ಕುಳಿತ. ಮಗ್ಗುಲಲ್ಲಿ ಮಣ್ಣೊಳಗೆ ಮಡಕೆಯೊಂದನ್ನು ಅರ್ಧ ಹುಗಿದು ಅದರ ಕಂಟಕ್ಕೆ ಮುತ್ತುಗದ ಎಲೆ ಬಿಗಿಯಾಗಿ ಕಟ್ಟಿ, ಅದರ ಸುತ್ತಲೂ ಕಲ್ಲುಗಳನ್ನ ಪೇರಿಸಿ ಇಟ್ಟಿರುವುದು ಕಾಣಿಸಿತು. ಗೂಡುಕಾಲು ಕಟ್ಟಿಕೊಂಡು ಮಲಗಿದ್ದರಿಂದಲೋ ಏನೋ ಬೆನ್ನೆಲುವು ನೋಯುತ್ತಿತ್ತು. ಆ ನೋವಿನ ಆಯಾಸಕ್ಕೆ ಮತ್ತೆ ನಿದ್ದೆ ಬಂದಂತಾಗಿ ತುಸುಹೊತ್ತು ಕಣ್ಣುಚ್ಚಿದ. ಚುಮು ಚುಮು ಬೆಳಕು ಮೂಡಿದಾಗ ಆಯಾಸವೂ ಹಸಿವೂ ಮೇಳೈಸಿ ದೇಹವಷ್ಟೇ ಅಲ್ಲ ಮನಸ್ಸು ವಿಪರೀತ ಭಾರವಾದಂತಾಗಿತ್ತು.
ನನ್ನೊಬ್ಬನ ಬಿಟ್ಟು ಎಲ್ಲಿ ಹೋದರಿವರು.. ತಡರಾತ್ರಿಯೇ ಹೊರಟರೇ..? ಕಪ್ಪಡಿಸಂಗಮದಲ್ಲಿ ಇಂಥದ್ದೊಂದು ಆಯಾಸದ ನಿದ್ದೆ ಆವರಿಸಿದ್ದು ಬಿಟ್ಟರೆ ಅದರಷ್ಟೇ ಆಯಾಸ ಇಲ್ಲೂ ಆಗಿದೆಯಲ್ಲ..!
ಗವಿಯ ಮುಂದಲ ಹೊಂಡದಲ್ಲಿ ಕೈಕಾಲು ಮುಖ ತೊಳೆದು ನೆಲದಲ್ಲಿ ಹೂತಿದ್ದ ಮಡಕೆಯ ಹತ್ತಿರ ಬಂದಾಗ ಅರಿವಿಗೆ ಬರತೊಡಗಿತು ‘ನಿದ್ದೆಯನ್ನುವುದು ಅರಿವಿಗೆ ಬಾರದಂತೆ ಮಲಗಿದೆನಾ ಸಿದ್ಧಸಾಧುವೇ..! ನಿದ್ದೆಯಿಂದೆದ್ದಾಗಿನ ಹಸಿವಿಗಾಗಿ ಆ ಮುದುಕಿ ಕಾಳಜಿಯಿಂದ ಅಂಬಲಿ ಹೂತಿಟ್ಟು ಹೋದಳೆ… ಇದ್ಯಾವ ಪರಿಯ ಬೆಚ್ಚಗಿನ ನಿದ್ದೆ, ನಿದ್ದೆಯಲ್ಲೂ ಎಚ್ಚರಿರುವ ವಿವೇಕ ಬರಬೇಕು. ಆ ಮುದುಕಿ ಮಾದೇವಿ ಕಣ್ಣಕುರುಡಲ್ಲೂ ಜಾಗರೂಕಳಾಗಿರುತ್ತಾಳಲ್ಲ ಅಂಥ ಅರಿವು ಬರಬೇಕು.ʼ ತಣ್ಣಗಿನ ಅಂಬಲಿ ಒಗರೊಗರು ಹುಳಿಯಾಗಿತ್ತು. ದೇಹಕ್ಕೆ ತ್ರಾಣ ಬಂದಾದ ಮೇಲೆ ಕತ್ತೆಗಳು ನಡೆದು ಹೋದ ಹೆಜ್ಜೆಗುರುತುಗಳ ಕಾಲುದಾರಿಯಲ್ಲಿ ಬನವಸೆಯತ್ತ ನಡೆಯತೊಡಗಿದ.
(ಮುಂದುವರೆಯುವುದು…)





Comments 5
ನಂದಿನಿ ಶೇಖರ್
Oct 25, 2025ಆಗಿನ ಕಾಲದ ಧ್ಯಾನ ಮಾರ್ಗಗಳ ವಿಲಕ್ಷಣ ಅಭ್ಯಾಸಗಳನ್ನು ಓದಿ ಆಶ್ಚರ್ಯವಾಯಿತು. ಬೌದ್ಧರು, ತಾಂತ್ರಿಕರು, ಸಿದ್ಧಸಾಧುಗಳು ಲೋಕಸತ್ಯದ ಅನ್ವೇಷಣೆಗೆ ತಮ್ಮ ಜೀವನವನ್ನೇ ಮೀಸಲಿಟ್ಟ ಕತೆಗಳು ಕುತೂಹಲಕಾರಿಯಾಗಿವೆ.
ಬಿ. ಮಾಧವ, ಅರಸೀಕೆರೆ
Oct 27, 2025ಮುದುಕಿ ಇದ್ದಕ್ಕಿದ್ದಂತೆ ನಾಗಿಣಿಯಕ್ಕನ ಕತೆ ಹೇಳುವುದನ್ನು ನಿಲ್ಲಿಸಿದ್ದೇಕೆ? ವಸೂದೀಪ್ಯನ ಹಾಗೆ ನಾನೂ ಕುತೂಹಲದಿಂದ ಕೇಳುತ್ತಿದ್ದೆ.
ಬಸವರಾಜಪ್ಪ ಕವದಿ
Oct 28, 2025ಇತಿಹಾಸ ಮತ್ತು ಕತೆ ಸೇರುವ ಘಮಲು ಇಲ್ಲಿದೆ. ಬನವಾಸಿಯ ಪರಿಸರವಂತೂ ಕಣ್ಣ ಮುಂದೆ ಸುಂದರವಾಗಿ ಹರಡಿಕೊಳ್ಳುತ್ತದೆ.
ವಿಜಯೇಂದ್ರ ಪಿರಿಯಾಪಟ್ಟಣ
Oct 28, 2025ತಾನು ಮಾತಿನ ಮಂಟಪ ಎನ್ನುವ ಮುದುಕಿ, ತಾನು ಸಾಧಕಿ ಎಂದು ಸಾಬೀತುಪಡಿಸಲು ಹೆಣಗುವ ನಾಗಿಣಿಯಕ್ಕಾ, ಇಂತಹ ಮಗಳನ್ನು ಹೆತ್ತ ಗುತ್ತೆವ್ವಾ- ನೆನಪಲ್ಲಿ ಉಳಿದುಬಿಡುವ ಪಾತ್ರಗಳು…
ಕೆ.ಪಿ. ನಾಗರಾಜ್
Oct 29, 2025ಜೀವನದ ಪ್ರಯಾಣದಲ್ಲಿ ಸಿಗುವ ಅಪರಿಚಿತ ಸಂಬಂಧಗಳು ಯಾವುದೋ ಕಾರಣಕ್ಕೇ ಇರುತ್ತವೆ. ಅವು ನಮ್ಮ ಆಲೋಚನೆಗಳಿಗೆ ಪೂರಕವಾಗಿಯೇ ಇರುತ್ತವೆ. ದಾರಿ ತೋರಿಸುತ್ತವೆ. ಗುರಿಗೆ ಒಯ್ಯುತ್ತವೆ.