
ಮಾಣಿಕ್ಯದ ದೀಪ್ತಿ
೧. ಮಾಣಿಕ್ಯದ ದೀಪ್ತಿ
ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ ಸ್ಪಟಿಕದ ಶಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು.
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ
[ನುಡಿದಡೆ-ನುಡಿದರೆ, ದೀಪ್ತಿ-ಬೆಳಗು, ಪ್ರಭೆ; ಸ್ಫಟಿಕ-ಪಾರದರ್ಶಕ ಕಲ್ಲು; ಶಲಾಕೆ-ಈಟಿ; ಹೂವಿನ ಮಧ್ಯಭಾಗದಲ್ಲಿರುವ ತಂತು]
ಮಾತು ಆಡಿದರೆ ಮುತ್ತಿನ ಹಾರದ ಹಾಗೆ-ಚಂದವಾಗಿ ಇರಬೇಕು. ಮಾತು ಆಡಿದರೆ ಮಾಣಿಕ್ಯದ ಹೊಳಪಿನ ಹಾಗೆ ಇರಬೇಕು. ಮಾತು ಆಡಿದರೆ ಪಾರದರ್ಶಕವಾದ ಸ್ಫಟಿಕದ ಶಲಾಕೆಯ ಹಾಗಿರಬೇಕು. ಇಡೀ ಸೃಷ್ಟಿಯೇ ಮೆಚ್ಚಿ ಹೌದು ಹೌದು ಅನ್ನಬೇಕು. ಆಡಿದ ಮಾತಿಗೆ ಬದ್ಧವಾಗಿ ಮಾತಿನ ಮಿತಿಯನ್ನು ಮೀರದೆ ನಡೆಯಬೇಕು. ಹಾಗಿರದಿದ್ದರೆ ಕೂಡಲಸಂಗಮ ಹೇಗೆ, ಯಾಕೆ ಒಲಿಯುತ್ತಾನೆ ಎಂದು ಈ ಬಸವವಚನ ಕೇಳುತ್ತಿದೆ.
ಮಾತು ಬೆಳಕು. ಅದು ಹೊರಗಿನ ಅಲಂಕಾರವಾಗಿ, ಒಳಗಿನ ಪ್ರಭೆಯಾಗಿ, ಒಳಗು ಹೊರಗು ಭೇದವಿರದ ಅಖಂಡವಾಗಿ ಕಾಣುತ್ತದೆ ಈ ವಚನದಲ್ಲಿ. ಮಾತು ಮತ್ತು ಕ್ರಿಯೆಗಳಲ್ಲಿ ಭೇದ ಇರದಿದ್ದರೆ ಆಗ ಮಾತು, ನಡತೆ ಎರಡೂ ಸ್ಪಟಿಕದ ಶಲಾಕೆ. ಸ್ಪಟಿಕದ ಶಲಾಕೆ ಆದರ್ಶ. ಯಾಕೆಂದರೆ ಅದು ಪಾರದರ್ಶಕ, ಈಟಿಯ ಹಾಗೆ ಕಠಿಣ, ಮೊನಚು ಮತ್ತು ಹೂವಿನ ಮಧ್ಯದ ತಂತುವಿನ ಹಾಗೆ ಮೃದು; ಒಳಗಿನ ಬೆಳಕು ಹೊಂದಿರುವುದು ಮಾತಿಗೆ ಇರುವ ಸಾಧ್ಯತೆ; ಮಾತು ಕನಿಷ್ಠ ಹಿತವಾಗಿ, ಚಂದವಾಗಿ ಇರುವುದು ಅಗತ್ಯ. ಮಾತಿನ ಆದರ್ಶ ನಿಜವಾಗಲು ಆಡುವ ಮಾತು ಮತ್ತು ನಡತೆ ಎರಡರ ನಡುವೆ ಭೇದ ಇರಬಾರದು ಅನ್ನುವುದು ಈ ಸೂಕ್ತಿಯ ಶರತ್ತು. ನುಡಿಗೆ ನಡೆ, ನಡೆಗೆ ನುಡಿ ಪರಸ್ಪರ ಗಡಿರೇಖೆಯಾಗಿ ಬದುಕಬೇಕು ಅನ್ನುವುದು ಆದರ್ಶ. ನುಡಿ ನಡೆ ಒಂದಾದಾಗ ಮಾತಿಗೂ ನಡತೆಗೂ ಪಾರದರ್ಶಕತೆ, ಈಟಿಯ ಮೊನಚು ಮತ್ತು ಹೂವಿನ ಒಳಗಿನ ತಂತುವಿನ ಮೃದುತ್ವ ದೊರೆಯುತ್ತವೆ.
ವಜ್ರದಷ್ಟು ಕಠಿಣ, ಕುಸುಮದಷ್ಟು ಮೃದು ಎಂಬ ವರ್ಣನೆ ಉತ್ಪ್ರೇಕ್ಷೆಯಂತೆ, ವಿರೋಧಾಭಾಸದಂತೆ ಕೇಳುವ ಸವಕಲು ಮಾತು ಆಗಿರುವಾಗ ಬಸವ ನುಡಿಯು ಬಸವ ವ್ಯಕ್ತಿತ್ವದ ತಳಹದಿಯಾದ ದಯೆಯ ಹೂ ಮಿದುತನ ಮತ್ತು ನಡತೆಯ ಧರ್ಮ ಸ್ಪಷ್ಟತೆಯಲ್ಲಿ ವ್ಯಕ್ತವಾಗುವ ಮೊನಚು ಎರಡನ್ನೂ ಒಳಗೊಂಡ ಅದ್ಭುತ ಜೀವಂತ ರೂಪಕವಾಗಿದೆ.
೨ ಸತ್ಯವನ್ನು ಹಿಡಿದಿಡಲು ಆಗದು
ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ
ನೆನಹಿಂಗೆ ಬಾರದುದ ಕಾಂಬುದು ಹುಸಿ
ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು
[ನೆನೆಯಲಮ್ಮಬಹುದೆ-ಧ್ಯಾನಿಸಲು ಯತ್ನಿಸಬಹುದೆ; ಕಾಂಬುದು-ಕಾಣುವುದು; ಮಾಣು-ಬಿಡು]
ಘಟ್ಟಿವಾಳಯ್ಯನವರ ಈ ವಚನ ಅರಿವನ್ನು ಕುರಿತ ನಮ್ಮ ಕಲ್ಪನೆಗಳನ್ನೆಲ್ಲ ಪ್ರಶ್ನಿಸುತ್ತದೆ. ನಮ್ಮ ಶಿಕ್ಷಣ, ಸಂಸ್ಕೃತಿ ಎಲ್ಲವೂ ನೆನಪಿಗೇ ಸಂಬಂಧಿಸಿದ್ದು, ನೆನಪನ್ನೇ ಆಧರಿಸಿದ್ದು. ಆದರೆ ಸತ್ಯ ಅನ್ನುವುದು ಇದ್ದರೆ ಅದು ನೆನಪಿಗೆ ಸಿಲುಕದು. ಅರಿವಿಗೆ ಸಿಲುಕದು. ಅರಿವಿಗೆ ಬಾರದಿರುವ ಸತ್ಯ ನೆನಪಿಗೆ ಬರುತ್ತದೆಯೇ?
ಯಾವುದು ನಮ್ಮ ನೆನಪಿನಲ್ಲಿ ದಾಖಲಾಗಿದೆಯೋ ಅದನ್ನು ಮಾತ್ರ ನಾವು ಈಗ ಗುರುತಿಸುತ್ತೇವೆ. ಯಾವುದು ನೆನಪಿಗೆ ಬಾರದೋ ಅದು ನಮಗೆ ಕಾಣುವುದೂ ಇಲ್ಲ. ನೆನಪನ್ನೇ ಆಧರಿಸಿದ ನಮ್ಮ ಕಾಣ್ಕೆ, ನಮ್ಮ ಅರಿವು ಸತ್ಯವನ್ನು ಕಾಣಿಸಿಕೊಡಲಾರದು. ಮಾತಿಗೆ ಸಿಲುಕದ, ನೆನಪಿಗೆ ಆಹಾರವಾಗದ ಸತ್ಯವನ್ನೋ ದೇವರನ್ನೋ ಮುಟ್ಟುವುದು ಪೂಜಿಸುವುದು ಅಸಾಧ್ಯ ಅನ್ನುತ್ತದೆ ಈ ವಚನ.
ನಡುಗನ್ನಡದಲ್ಲಿ ‘ನೆನೆ’ ಎಂಬ ಮಾತನ್ನು ‘ಧ್ಯಾನಿಸು’ ಅನ್ನುವ ಅರ್ಥದಲ್ಲಿ ಬಳಕೆಯಾಗಿದೆ. ಧ್ಯಾನಿಸುವುದು ಏನಿದ್ದರೂ ನಮಗೆ ಗೊತ್ತಿರುವ, ನಮ್ಮ ಗ್ರಹಿಕೆಗೆ ಬಂದಿರುವ, ಧ್ಯಾನಿಸಬಲ್ಲ ಸಂಗತಿಗಳನ್ನು ಮಾತ್ರವೇ. ಇಂಗ್ಲಿಶಿನ ರಿಕಾಗ್ನಿಶನ್ ಎಂಬ ಮಾತು ಕೂಡ ʻಮರಳಿ ಗ್ರಹಿಸುವುದುʼ ಎಂಬ ಅರ್ಥದ್ದು. ಹಾಗಾದರೆ, ನಾವು ಈ ಮೊದಲು ದೇವರನ್ನು, ಸತ್ಯವನ್ನು ಕಂಡಿಲ್ಲವಾದರೆ, ಕಂಡ ನೆನಪು ನಮ್ಮಲ್ಲಿಲ್ಲವಾದರೆ ಈಗ ಒಂದು ವೇಳೆ ದೇವರು, ಸತ್ಯ ನಮ್ಮ ಕಣ್ಣೆದುರಿಗೇ ಇದ್ದರೂ ಗುರುತಿಸಲಾರೆವು. ಹೀಗಿರುವಾಗ ನಾನು ಸತ್ಯವನ್ನು ಕಂಡೆ, ದೇವರನ್ನು ಕಂಡೆ ಅನ್ನುವ ಮಾತುಗಳೇ ಸರಿಯಲ್ಲ, ಅದು ಅಸಾಧ್ಯ ಅನ್ನುತ್ತಿರುವಂತಿದೆ ಘಟ್ಟಿವಾಳಯ್ಯ.
೩ ನೀರಿನಂಥ ಮನಸ್ಸು
ಜಾತಿ ವಿಜಾತಿಯು ನೀರ್ಗುಡಿಯ ಹೋದರೆ
ಸುಡು ಹೋಗೆಂದು ನೂಂಕಿತ್ತೆ ಆ ಜಲವು!
ಆ ಜಲದಂತಾಗಬೇಡವೆ ಹಿರಿಯರಾದವರು.
ಎನ್ನ ಮನವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ
ನಿಮ್ಮದೊಂದು ಸಮತಾಬುದ್ಧಿ ಎನ್ನನೆಂದು ಬಂದು ಪೊರ್ದಿಪ್ಪುದೊ ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನದೇವರದೇವಾ
[ನೀರ್ಗುಡಿಯ=ನೀರು ಕುಡಿಯಲು, ನೂಂಕಿತ್ತೆ=ನೂಕಿತ್ತೆ, ಮನವು+ಇಚ್ಛಂದ+ವಾಗದೆ+ಒಂದೆ+ಅಂದದಲಿ+ಇಪ್ಪ (ಇರುವ); ಪೊರ್ದಿರ್ಪುದೊ=ಹೊಂದಿರುವುದೋ]
ಯಾವ ಜಾತಿಯವರೇ ಆಗಲಿ ನೀರು ಕುಡಿಯಲೆಂದು ಹೋದರೆ ‘ನೀನು ಅಯೋಗ್ಯ, ಉತ್ತಮ ಜಾತಿಯವನಲ್ಲ’ ಎಂದು ಅವನನ್ನು ನೂಕುತ್ತದೆಯೇ ನೀರು? ನಿಜವಾದ ಹಿರಿಯರಾದವರು ಹಾಗೆ ಇರಬೇಕಲ್ಲವೇ? ಮನಸ್ಸು ಇಚ್ಛಂದವಾಗದೆ (ಇಬ್ಭಾಗವಾಗದೆ) ಒಂದೇ ಅಂದದಲ್ಲಿ ಇರುವಂಥ ನಿಮ್ಮ ಸಮತಾಗುಣವನ್ನು ನನ್ನ ಮನಸ್ಸು ಎಂದು ಹೊಂದೀತು ಎಂದು ಸಿದ್ಧರಾಮ ವಚನ ಕೇಳುತ್ತಿದೆ.
ಈ ವಚನದ ದೃಷ್ಟಿಯಲ್ಲಿ ಸಮತಾ ಗುಣವೇ ದೇವರು. ಸಮತಾ ಗುಣ ಏನನ್ನೂ ಯಾರನ್ನೂ ತಿರಸ್ಕರಿಸದೆ, ಯಾವ ಕಾರಣಕ್ಕೂ ಇಬ್ಭಾಗವಾಗದೆ ಒಂದೇ ಅಂದದಲ್ಲಿ ಇರುತ್ತದೆ. ದೇವರ ಅಂಥ ಗುಣ ಬೇಕು ಹಿರಿಯರಿಗೆ. ನೀರು ಎಲ್ಲರ ದಾಹವನ್ನೂ ತಣಿಸುತ್ತದೆಯೇ ಹೊರತು ಬಾಯಾರಿದವರ ಜಾತಿ, ಅಂತಸ್ತು, ಒಳ್ಳೆಯತನಗಳನ್ನು ಗಮನಿಸಿ ಬೇರೆ ಬೇರೆ ರೀತಿಯಲಿ ವರ್ತಿಸುವುದಿಲ್ಲ.
ನಿಸರ್ಗಕ್ಕೆ ಸಮತಾಗುಣವಿರುವುದರಿಂದಲೇ ನಾವು ಬದುಕಿದ್ದೇವೆ. ಕೇವಲ ಉತ್ತಮರಿಗಾಗಿ ಮಾತ್ರ ಹೊಳೆ ಹರಿಯುವುದು, ಗಾಳಿ ಬೀಸುವುದು, ಸೂರ್ಯ ಹೊಳೆಯುವುದು ಮರ ಹಣ್ಣು ಕೊಡುವುದು ಎಂದಾಗಿದ್ದರೆ ಲೋಕದ ನೂರಕ್ಕೆ ತೊಂಬತ್ತರಷ್ಟು ಜನ ಬದುಕಲು ಆಗುತ್ತಲೇ ಇರಲಿಲ್ಲ. ಸೇಡಿಲ್ಲದ, ಕೇಡಿಲ್ಲದ, ತಿರಸ್ಕಾರವಿಲ್ಲದ ಸಮತಾಗುಣ ನನಗೆಂದು ದೊರೆಯುತ್ತದೆ? ಸಮತಾ ಗುಣವೇ ಛಂದ; ಅದೇ ನಿಯಮ. ಛಂದ ಕೆಟ್ಟರೆ ಮನಸ್ಸು ಇಬ್ಭಾಗ; ಹಾಗಾಗದೆ ಇರುವುದೇ ಅಂದ, ನೀರಿನ ಹಾಗೆ ಸಮತೆಯನ್ನು ಹೊಂದಿರುವ ಗುಣ ನನಗೆಂದು ಬಂದೀತು ಎಂದು ಸಿದ್ಧರಾಮ ವಚನ ಕೇಳುತ್ತಿದೆ.
೪ ಅರ್ಧ ಮಂಚ
ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
[ಪಡಿ-ಒಂದು ಅಳತೆ, ಅರ್ಧಸೇರು; ಒಂದಾವಿನ-ಒಂದು ಹಸುವಿನ; ಹುರುಳಿಲ್ಲದ-ಅರ್ಥವಿರದ]
ಮೋಳಿಗೆ ಮಾರಯ್ಯನವರ ವಚನ. ‘ನನ್ನದು’ ಎಂದುಕೊಂಡ ವಸ್ತುಗಳಲ್ಲೇ ಬದುಕಿನ ಸಾರ್ಥಕತೆಯನ್ನು ಕಾಣುವ ಧೋರಣೆ ಸರಿಯಲ್ಲ ಅನ್ನುತ್ತದೆ ಈ ವಚನ.
ಆನೆ, ಕುದುರೆ, ಭಂಡಾರ ಅನ್ನುವದರ ಬದಲು ಕಾರು, ಬೈಕು, ಆರಂಕಿಯ ಸಂಬಳ ಎಂದುಕೊಳ್ಳೋಣ. ಆಗ ಈ ವಚನ ನಮ್ಮ ಕಾಲದ ಬಗ್ಗೆ ಕಾಮೆಂಟರಿ ಮಾಡುತ್ತಿರುವಂತೆ ಇದೆ ಅನ್ನಿಸುವುದಿಲ್ಲವೇ ಅಷ್ಟೆಲ್ಲ ಇದ್ದರೂ ತಿನ್ನುವುದು ಮಾತ್ರ ಒಂದಳತೆ ಅನ್ನ, ಹೊಟ್ಟೆ ಹಿಡಿಸುವಷ್ಟೇ. ನನಗೆ ಸುಖಕೊಡುವ ಜೊತೆ ಜೀವಿಯೊಡನೆ ಅರ್ಧ ಮಂಚ ಹಂಚಿಕೊಳ್ಳಬೇಕು. ಹಂಚಿಕೊಂಡರೂ ಇಬ್ಬರೂ ಸ್ವಂತದ ಸುಖವನ್ನೇ ಅಪೇಕ್ಷಿಸುತ್ತಾ ಸುಖ ಸಿಕ್ಕಿದ್ದೂ ಭ್ರಮೆಯೇ ಆಗಬಹುದು. ಸುಖದ ಸಾಧನ ಅಂದುಕೊಂಡಿರುವ ದೇಹವೂ ಭೂಮಿಯ ಪಾಲು, ಜೀವಿಸಿದ್ದೇನೆನ್ನುವುದಕ್ಕೆ ಗುರುತಾಗಿ ಆಡುತ್ತಿರುವ ಉಸಿರು ಕೂಡ ಗಾಳಿಯ ಪಾಲು. ನನ್ನವಳೆಂದು ಭಾವಿಸಿದ್ದ ಹೆಂಡತಿಯೋ ಗಂಡನೋ ನನ್ನ ನಂತರ ಬೇರೆಯವರ ಪಾಲಾಗಬಹುದು. ಹಾಗಿದ್ದರೆ ನನ್ನ ಜೊತೆಗೆ ಯಾರಿದ್ದಾರೆ, ಏನಿದೆ? ಸಾವು ಒಂದೇ. ಕಾಡುವ ಏಕಾಂಗಿತನ ಕೇವಲ ಆಧುನಿಕ ಕಾಲದ್ದೂ ಅಲ್ಲ. ಅದು ಎಲ್ಲ ಕಾಲದ ಮನುಷ್ಯ ಬದುಕಿನ ಸತ್ಯ. ಇದು ಹತಾಶೆಯ ಮಾತಾಗಿ, ಅಗಾಧ ಒಂಟಿತನದ ಮಾತಾಗಿ ಕೇಳುತ್ತದೆ.
೫ ದೇವರ ಹಂಗೇಕೆ?
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ?
[ಒಕ್ಕು-(ನಾಮಪದ)ಒಳಿತು,(ಕ್ರಿ. ಕಸಕಡ್ಡಿ ಬೇರೆಮಾಡು); ಮಿಕ್ಕುದ- ಉಳಿದದ್ದನ್ನು; ಲದ್ದೆ- ಹುಲ್ಲಿನ ಹೊರೆ]
ಲದ್ದೆಯ ಸೋಮ ನುಡಿದಿರುವ ವಚನ. ನಮ್ಮ ಪಾಲಿಗೆ ಬಂದ ಕಾಯಕ ಯಾವುದಾದರೂ ಸರಿ. ನಾವೇ ಮಾಡಬೇಕಾದ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ನಮ್ಮಕಾಯಕದಿಂದ ಬಂದ ಫಲವನ್ನು ನಮಗಿಂತ ಹಿರಿಯರಾದವರಿಗೆ (ಗುರು), ಲೋಕಕ್ಕೆ (ಲಿಂಗಕ್ಕೆ), ಪ್ರಜ್ಞಾವಂತರಿಗೆ (ಜಂಗಮರಿಗೆ) ಅರ್ಪಿಸಿ, ಉಳಿದದ್ದನ್ನು ನಮ್ಮದೆಂದು ಪಡೆದುಕೊಳ್ಳಬೇಕು. ಮಾಡಬೇಕಾದದ್ದು ಇಷ್ಟೇ. ಇದರಾಚೆಗೆ ರೋಗ ಬಂದರೆ ನರಳಬೇಕು, ನೋವಾದರೆ ಒರಲಬೇಕು, ಜೀವ ಹೋದರೆ ಸಾಯಬೇಕು. ಬದುಕು ಇಷ್ಟೇ. ಇದರಲ್ಲಿ ದೇವರ ಹಂಗು ಯಾಕೆ ಬೇಕು?
ಒಕ್ಕು ಎಂಬ ಮಾತಿಗೆ ಪ್ರಸಾದ ಮತ್ತು ಶುಭದ ಹಾರೈಕೆ ಎಂಬ ಎರಡು ಅರ್ಥಗಳಿವೆ. ನಮ್ಮ ದುಡಿಮೆಯಿಂದ ದಕ್ಕಿದ್ದೇ ಪ್ರಸಾದ. ನಮ್ಮ ದುಡಿಮೆಯಿಂದ ಹಾರೈಸಬೇಕಾದದ್ದು ಒಳಿತನ್ನೇ. ಈ ದುಡಿಮೆಯ ಗುರಿಯಾದರೋ ಸ್ವಾರ್ಥವಲ್ಲ. ಬದುಕಿಗೆ ದಾರಿ ತೋರುವ ಗುರು, ವಿಶ್ವದ ಚೈತನ್ಯ, ಪ್ರಜ್ಞಾವಂತ ಜೀವಿಗಳು ಇವರೆಲ್ಲರಿಗೆ ನಮ್ಮ ದುಡಿಮೆಯ ಫಲವನ್ನು ಅರ್ಪಿಸಿ, ಉಳಿದದ್ದನ್ನು ನಮ್ಮದು ಎಂದುಕೊಳ್ಳಬೇಕು. ಬದುಕು ಎಂದರೆ ಪಡೆಯುವುದಲ್ಲ, ಕೊಡುವುದು. ಬದುಕು ಅಂದರೆ ನಿಷ್ಠೆಯ ದುಡಿಮೆ, ನಾನತ್ವವನ್ನು ಬಿಡುವುದು, ಅಷ್ಟೇ. ಇದರಾಚೆಗೆ ಏನೂ ಇಲ್ಲ. ದೇವರ ಹಂಗು ಯಾಕೆ? ಕಾಯಿಲೆ ಆದಾಗ ನರಳಬೇಕು, ಬೇರೆ ವಿಧಿಯಿಲ್ಲ. ನೋವಾದರೆ ಅಯ್ಯೋ ಎಂದು ಚೀರಬೇಕು, ಬೇರೆ ವಿಧಿಯಿಲ್ಲ. ಜೀವ ಹೋದಾಗ ಸಾಯಬೇಕು, ಬೇರೆ ವಿಧಿಯಿಲ್ಲ.
೬ ಇದು ಯಾರ ಮೈ?
ಎನ್ನೊಡಲಾದಡೆ ಎನ್ನಿಚ್ಛೆಯಲ್ಲಿರದೆ
ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ
ಅದು ಎನ್ನೊಡಲೂ ಅಲ್ಲ, ನಿನ್ನೊಡಲೂ ಅಲ್ಲ
ಅದು ನೀ ಮಾಡಿದ ಜಗದ ಬಿನ್ನಾಣದೊಡಲು ಕಾಣಾ ರಾಮನಾಥ.
ಜೇಡರ ದಾಸಿಮಯ್ಯನವರ ವಚನ. ಇದು ನನ್ನ ಮೈಯಾದರೆ ನನ್ನ ಮಾತು ಕೇಳಬೇಕು, ಕೇಳುತ್ತಿಲ್ಲ. ದೇವರೇ, ಇದು ನಿನ್ನ ಮೈಯಾದರೆ ನಿನ್ನ ಮಾತು ಕೇಳುತ್ತಿರಬೇಕು. ಕೇಳುತ್ತಿಲ್ಲವಲ್ಲಾ. ಇದು ನನ್ನ ಒಡಲೂ ಅಲ್ಲ, ನಿನ್ನ ಒಡಲೂ ಅಲ್ಲ, ಈ ಲೋಕದ ಬಿನ್ನಾಣಕ್ಕೆ ಸಿಕ್ಕಿಬಿದ್ದ ಒಡಲು.
ಜೇಡರ ದಾಸಿಮಯ್ಯನವರ ಈ ಮಾತು ನಮ್ಮ ವ್ಯಕ್ತಿತ್ವಗಳು ಆದರ್ಶಗಳಿಂದ ಅಲ್ಲ, ನಮ್ಮ ಸುತ್ತಲ ವಾಸ್ತವ ಪರಿಸರದಿಂದ ರೂಪುಗೊಳ್ಳುತ್ತದೆ ಅನ್ನುವ ನಿಲುವಿನಿಂದ ಮೂಡಿದಂತಿದೆ. ಬಿನ್ನಾಣ ಎಂಬ ಮಾತಿಗೆ ತೋರಿಕೆಯ ವೈಭವ, ಆಕರ್ಷಣೆ ಎಂಬ ಅರ್ಥಗಳಿವೆ. ಅದು ವಿಜ್ಞಾನ ಎಂಬ ಮಾತಿನ ತದ್ಭವವೂ ಹೌದು. ಈ ಲೋಕದ ವ್ಯವಹಾರದ ವಿಜ್ಞಾನ ನಮ್ಮ ನಮ್ಮ ವ್ಯಕ್ತಿತ್ವಗಳನ್ನು ತಿದ್ದುತ್ತದೆ. ʻಇದು ನಮ್ಮ ಇಚ್ಛೆ,ʼ ಅಂದುಕೊಳ್ಳುವ ನಮ್ಮ ಭಾವ ಮತ್ತು ನಮ್ಮ ದೇವರ ಕಲ್ಪನೆ ಎರಡೂ ನಮಗೆ ದೊರೆತ ಜಗತ್ತಿನ ಸಂಪರ್ಕದಿಂದಲೇ ಮೂಡಿದ್ದಲ್ಲವೇ? ಹಾಗಿದ್ದರೆ, ʻನಾವು ಹೀಗೇಕೆʼ ಅನ್ನುವ ಪ್ರಶ್ನೆಗೆ ʻನಮ್ಮ ಸುತ್ತಲ ಜಗತ್ತೇ ಕಾರಣ,ʼ ಎಂದೆನ್ನಬಹುದೇ?
ಆಗದೇನೋ. ಯಾಕೆಂದರೆ ಜಗತ್ತಿನ ಇಚ್ಛೆಯಂತೆ ನಡೆಯಬೇಕೆನ್ನುವ ಬಲವಂತ, ದೇವರ ಆದರ್ಶದಂತೆ ಇರಲಾಗದ ಯಾತನೆ ಇವುಗಳ ಇಬ್ಬಂದಿಯೇ ದಾಸಿಮಯ್ಯನವರಿಗೆ ಮುಖ್ಯವಾದಂತೆ ತೋರುತ್ತದೆ. ಇವೆಲ್ಲದರ ಮೂಲದಲ್ಲಿರುವುದು ಕೂಡ ನಾನು ಅನ್ನುವ ಕಲ್ಪನೆಯನ್ನು ವಿವರಿಸಿಕೊಳ್ಳಲಾಗದ ತೊಳಲಾಟವೇ ಇರಬಹುದು.
[ಮೈಸೂರಿನಿಂದ ಪ್ರಕಟವಾಗುವ ಆಂದೋಲನ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಸರಣಿ]
Comments 10
ಬಸವರಾಜ ಹಂಡಿ
Jun 14, 2025ಮಾಣಿಕ್ಯದ ದೀಪ್ತಿ ಲೇಖನವನ್ನು ಓದಿದಾಗ ಅದು ನನಗೆ ಆಧ್ಯಾತ್ಮ, ನೈತಿಕತೆ ಮತ್ತು ಜೀವನದ ಮೌಲ್ಯಗಳ ಬಗ್ಗೆ ಆಳವಾದ ಚಿಂತನೆಯನ್ನು ನೀಡಿತು. ವಚನ ಸಾಹಿತ್ಯದ ಸತ್ವವನ್ನು ತುಂಬಾ ಸರಳ ಹಾಗೂ ಸ್ಪಷ್ಟವಾಗಿ ಲೇಖಕರು ವಿವರಿಸಿದ್ದಾರೆ.
ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ ಪ್ರಭು ಸೇರಿದಂತೆ ಶರಣರ ವಚನಗಳ ಮೂಲಕ, ಕನ್ನಡ ನಾಡು ಧರ್ಮ, ತತ್ವ, ಮಾನವೀಯತೆಯ ಗಂಭೀರ ಸಂದೇಶಗಳನ್ನು ಹೇಗೆ ಸಾರಿದೆಯೆಂಬುದನ್ನು ಲೇಖಕರು ಸೂಕ್ಷ್ಮವಾಗಿ ಪ್ರತಿಪಾದಿಸಿದ್ದಾರೆ.
“ವಜ್ರದಷ್ಟು ಗಟ್ಟಿ, ಕುಸುಮದಷ್ಟು ಮೃದುವಾಗಿರಲಿ ನಿನ್ನ ಮಾತು” ಎಂಬ ವಚನದ ಉದಾಹರಣೆ, ನಿತ್ಯಜೀವನದಲ್ಲಿ ಮಾತಿನ ಸಂಯಮದ ಮಹತ್ವವನ್ನು ಮನದಟ್ಟಾಗಿಸಿದೆ.
ಲೇಖನದ ಶೈಲಿ ಪಾರದರ್ಶಕವಾಗಿದೆ, ಭಾಷೆ ನೈಜವಾಗಿ ಓದುಗರ ಹೃದಯಕ್ಕೆ ತಲುಪುತ್ತದೆ. ಈ ಲೇಖನ ನನ್ನೊಳಗೆ ವಚನ ಸಾಹಿತ್ಯದ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಬೇಕೆಂಬ ಉತ್ಸಾಹವನ್ನು ಉಂಟುಮಾಡಿದೆ.
ಇದು ಓದಿ ಮುಗಿಸಬಹುದಾದ ಲೇಖನವಲ್ಲ, ಬದಲಾಗಿ ಜೀವನದಲ್ಲಿ ಆಳವಾಗಿ ಅನುಭವಿಸಬಹುದಾದ ಲೇಖನ.
ಲೇಖಕರ ಪರಿಶ್ರಮ ಮತ್ತು ತಾಳ್ಮೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶರಣು ಶರಣಾರ್ಥಿಗಳು.
ಇದನ್ನು ಓದಲು ಅವಕಾಶ ಮಾಡಿಕೊಟ್ಟ ಬಯಲು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶರಣು ಶರಣಾರ್ಥಿಗಳು.
ಜಯದೇವ ಪಿ
Jun 22, 2025ವಚನಗಳನ್ನ ಯಾವ ಪೂರ್ವಾಗ್ರಹಗಳಿಲ್ಲದೆ ಪ್ರವೇಶಿಸುವುದು ಸುಲಭವಲ್ಲಾ, ಹಾಗೆ ಮುಕ್ತ ಮನಸ್ಸಿನಿಂದ ಅರ್ಥ ವ್ಯಾಖ್ಯಾನ ಮಾಡಿರುವ ಓಎಲ್ ನಾಗಭೂಷಣ ಸರ್ ಅವರಿಗೆ ಶರಣುಗಳು.
B.L. Somashekhar
Jun 22, 2025ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ- ಘಟ್ಟಿವಾಳಯ್ಯನವರ ವಚನದ ಮರ್ಮ ಓದಿ ಬೆರಗಾಗಿ ಹೋದೆ. ಶರಣರು ಖಂಡಿತವಾಗಿಯೂ ಸಾಮಾನ್ಯರಲ್ಲಾ ಸ್ವಾಮಿ…🤔
ರಾಜಶೇಖರಪ್ಪ ಉಲ್ಯಾಳ
Jun 22, 2025ಸಾವಿಂಗೆ ಸಂಗಡವಾರೂ ಇಲ್ಲ- ಕಾಡುವ ಏಕಾಂಗಿತನ ಕೇವಲ ಆಧುನಿಕ ಕಾಲದ್ದೂ ಅಲ್ಲ. ಅದು ಎಲ್ಲ ಕಾಲದ ಮನುಷ್ಯ ಬದುಕಿನ ಸತ್ಯ. ಇದು ಹತಾಶೆಯ ಮಾತಾಗಿ, ಅಗಾಧ ಒಂಟಿತನದ ಮಾತಾಗಿ ಕೇಳುತ್ತದೆ.
ಸರ್ ಶರಣು.
ಶಶಿಧರ ಎಂ.
Jun 25, 2025ಇದು ಯಾರ ಮೈ- ವಚನ ಎಷ್ಟು ಆಳವಾಗಿದೆ! ಸರ್, ನಿಮ್ಮ ವಚನ ಬಿಡಿಸುವಿಕೆಯ ರೀತಿ ತುಂಬಾ ಇಷ್ಟವಾಯಿತು. ಧನ್ಯವಾದಗಳು.
ಈಶ್ವರ್ ಬನ್ನಿಕೊಪ್ಪ
Jul 1, 2025ಈ ಮೊದಲು ದೇವರನ್ನು, ಸತ್ಯವನ್ನು ಕಂಡಿಲ್ಲವಾದರೆ, ಕಂಡ ನೆನಪು ನಮ್ಮಲ್ಲಿಲ್ಲವಾದರೆ ಈಗ ಒಂದು ವೇಳೆ ದೇವರು, ಸತ್ಯ ನಮ್ಮ ಕಣ್ಣೆದುರಿಗೇ ಇದ್ದರೂ ಗುರುತಿಸಲಾರೆವು. ಹೀಗಿರುವಾಗ ನಾನು ಸತ್ಯವನ್ನು ಕಂಡೆ, ದೇವರನ್ನು ಕಂಡೆ ಅನ್ನುವ ಮಾತುಗಳೇ ಸರಿಯಲ್ಲ, ಅದು ಅಸಾಧ್ಯ- ವಚನಗಳನ್ನ ಹೀಗೆ ನೋಡಬೇಕೆಂದು ಕಲಿಸಿಕೊಡುವ ನಿಮಗೆ ನನ್ನ ಅನಂತ ನಮನಗಳು.
Somashekhar Gudibande
Jul 1, 2025ಸರ್, ಎಲ್ಲಾ ವಚನಗಳ ಅರ್ಥಗಳು ತುಂಬಾ ಚೆನ್ನಾಗಿವೆ. ನಿಮ್ಮ ಭಾಷಣಗಳೂ ಹೀಗೆ ಆಳವಾಗಿರುತ್ತವೆ🙏👌
ಸಿ.ಪಿ.ಷಣ್ಮುಖಸ್ವಾಮಿ
Jul 4, 2025ನನ್ನೊಡಲೂ ಅಲ್ಲಾ, ನಿನ್ನೊಡಲೂ ಅಲ್ಲಾ, ಇದು ಜಗದೊಡಲು🙏
Dr. Ravishankar
Jul 4, 2025ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ- ನನ್ನನ್ನು ಪದೇ ಪದೇ ಎಚ್ಚರಿಸುವ ಮೋಳಿಗೆಯ ಮಾರಯ್ಯನವರ ವಚನ… thank you for your profound explanation
ಶಿವಶಂಕರಪ್ಪ ರಾಯಚೂರು
Jul 9, 2025ವಿಶಿಷ್ಟ ಒಳನೋಟಗಳಿಂದ ಕೂಡಿದ ವಚನ ವಿಶ್ಲೇಷಣೆ ಬಹಳವೆ ಚೆನ್ನಾಗಿದೆ… ವಂದನೆ👏🏾