Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಸವೋತ್ತರ ಶರಣರ ಸ್ತ್ರೀಧೋರಣೆ
Share:
Articles April 29, 2018 ಡಾ. ಎನ್.ಜಿ ಮಹಾದೇವಪ್ಪ

ಬಸವೋತ್ತರ ಶರಣರ ಸ್ತ್ರೀಧೋರಣೆ

ಶರಣರ ಸ್ತ್ರೀಧೋರಣೆಯ ಬಗೆಗೆ ಮಾತಾಡುವಾಗ ಅನೇಕ ವಿದ್ವಾಂಸರು ಎಲ್ಲ ಶರಣರ ಧೋರಣೆಯೂ ಒಂದೇ ತೆರನಾಗಿತ್ತು ಎಂದು ಆತುರವಾಗಿ ಸಾಮಾನ್ಯೀಕರಿಸುತ್ತಾರೆ. ಅವರು ಸ್ತ್ರೀಯರ ಬಗೆಗಿನ ಎಲ್ಲ ಶರಣರ ದೃಷ್ಟಿ ವೈದಿಕ ಮತ್ತು ಜೈನ ಸಂಪ್ರದಾಯಗಳಿಗೆ ವಿರುದ್ಧವಾಗಿತ್ತು ಮತ್ತು ಬಹಳ ಉದಾರವಾಗಿತ್ತು ಎಂದು ತೋರಿಸಲು ಪ್ರಯತ್ನಿಸುತ್ತಾರೆ. ಅವರ ಮಾತು ಹನ್ನೆರಡನೆಯ ಶತಮಾನದ ಶರಣರಿಗೆ ಮಾತ್ರ ಅನ್ವಯವಾಗುತ್ತದೆಯೆಂದಾದರೆ ಸತ್ಯ, ಎಲ್ಲ ಕಾಲದ ಶರಣರಿಗೂ ಅನ್ವಯವಾಗುತ್ತದೆಯೆಂದಾದರೆ ಅಸತ್ಯ. ಏಕೆಂದರೆ, ಕೆಲವು ಬಸವೋತ್ತರ ವಚನಕಾರರು ವಿರಕ್ತರು. ಹೆಂಗಸರ ಬಗೆಗೆ ಈ ವಿರಕ್ತ ವಚನಕಾರರ ದೃಷ್ಟಿ ಹನ್ನೆರಡನೆಯ ಶತಮಾನದ ಬಸವಾದಿ ಶರಣರ ದೃಷ್ಟಿಗೆ ವಿರುದ್ಧವಾಗಿತ್ತು ಎಂದು ತೋರಿಸುವುದು ಈ ಲೇಖನದ ಉದ್ದೇಶ.

ಹೊನ್ನು ಹೆಣ್ಣು ಮಣ್ಣು ಆಧ್ಯಾತ್ಮಿಕ ಜೀವನಕ್ಕೆ ಅಡ್ಡಿ, ಆದುದರಿಂದ ಆಧ್ಯಾತ್ಮಿಕ ಸಿದ್ಧಿಯನ್ನು ಪಡೆಯಬೇಕೆನ್ನುವವರು ಇವು ಮೂರನ್ನೂ – ಅದರಲ್ಲೂ ಹೆಣ್ಣನ್ನು – ತ್ಯಜಿಸಬೇಕು ಎಂಬುದು ಭಾರತೀಯ ಸಂಪ್ರದಾಯದಲ್ಲಿ ಬಹಳ ಹಿಂದಿನಿಂದ ಬೆಳೆದು ಬಂದಿರುವ ಒಂದು ನಂಬಿಕೆ. ಉದಾಹರಣೆಗೆ ವಿಶ್ವಾಮಿತ್ರ ತಪಸ್ಸು ಮಾಡುತ್ತಿದ್ದಾಗ ಮೇನಕೆ ಎಂಬ ದೇವತಾ ಸ್ತ್ರೀ ಬಂದು ಅವನ ತಪಸ್ಸಿಗೆ ಭಂಗ ತಂದಳು. ಇಂಥ ಪ್ರಸಂಗ ಬಹಳ ಅಪರೂಪ ಮತ್ತು ಇದನ್ನೇ ಸಾಮಾನ್ಯೀಕರಿಸಬಾರದು ಎಂದು ತೋರಿಸಲು ಅನೇಕರು ಉಪನಿಷತ್ತುಗಳ ಎರಡು ಪ್ರಸಂಗಗಳನ್ನು ಉದ್ಧರಿಸುತ್ತಾರೆ. ಋಷಿಗಳು ವಾನಪ್ರಸ್ಥಾಶ್ರಮದಲ್ಲಿಯೂ ಸನ್ಯಾಸಾಶ್ರಮದಲ್ಲಿಯೂ ತಮ್ಮ ಹೆಂಡಂದಿರೊಡನೆ ವಾಸಿಸುತ್ತಿದ್ದರು. ವಸಿಷ್ಠ ಅರುಂಧತಿಯೊಡನೆ, ಗೌತಮ ಅಹಲ್ಯೆಯೊಡನೆ ಜೀವನ ನಡೆಸುತ್ತಾ ದೊಡ್ಡ ಯೋಗಿಗಳೆನಿಸಿಕೊಂಡಿದ್ದರು. ಎರಡನೆಯದಾಗಿ, ಉಪನಿಷತ್ತುಗಳಲ್ಲಿ ಮೈತ್ರೇಯಿ, ಗಾರ್ಗಿ ಮುಂತಾದ ಸ್ತ್ರೀಯರು ಗಂಡಸರಿದ್ದ ಸಭೆಗಳಲ್ಲಿ ಗಂಡಸರೊಡನೆ ಬ್ರಹ್ಮವಿದ್ಯೆಯ ಬಗೆಗೆ ವಾದ ಮಾಡಿದರು ಎಂಬ ಪ್ರಸಂಗ ಬರುತ್ತದೆ. ಅದೇ ರೀತಿ ಗಂಡಸರಿಗಿರುವಂತೆ ಹೆಂಗಸರಿಗೂ ಬ್ರಹ್ಮವಿದ್ಯೆಯ ಅಧಿಕಾರವಿತ್ತು ಎಂಬ ಮಾತೂ ಬರುತ್ತದೆ. ಇದರಿಂದ, ಆಧ್ಯಾತ್ಮಿಕ ಸಿದ್ಧಿಗೆ ಹೆಂಡತಿ ಆವಶ್ಯಕ ಅಥವಾ ಪೂರಕ ಎಂಬುದು ಸಿದ್ಧವಾಗದಿದ್ದರೂ, ಅಡ್ಡಿಯಂತೂ ಅಲ್ಲ ಎಂಬುದು ಸಿದ್ಧವಾಗುತ್ತದೆ. ಆದರೆ ಹೆಂಗಸರಿಗೆ ಬ್ರಹ್ಮಜಿಜ್ಞಾಸೆ ಮಾಡುವ ಅಧಿಕಾರ ನಿಜವಾಗಿಯೂ ಇತ್ತೆ, ಇದ್ದರೆ ಅದರ ವ್ಯಾಪ್ತಿ ಎಷ್ಟು ಎಂಬುದು ಮುಖ್ಯ ಪ್ರಶ್ನೆ. ಬ್ರಹ್ಮದ ಬಗೆಗೆ ತೀಕ್ಷ್ಣ ರೂಪದ ಪ್ರಶ್ನೆ ಕೇಳುತ್ತಿದ್ದ ಗಾರ್ಗಿಗೆ ಆಕೆಯ ಗಂಡ, ಯಾಜ್ಞವಲ್ಕ್ಯ ಋಷಿಯು, “ಗಾರ್ಗಿ, ನಿನ್ನ ತಲೆಯು ಬಿದ್ದು ಹೋಗದಿರಬೇಕಾದರೆ ಅತಿ ಪ್ರಶ್ನೆಯನ್ನು ಮಾಡಬೇಡ” (ಬೃ.ಉಪ., 3-6-1) ಎಂದು ಎಚ್ಚರಿಸುತ್ತಾನೆ. ಆದುದರಿಂದ, ಉಪನಿಷತ್ಕಾಲದಲ್ಲಿ ಸ್ತ್ರೀಯರಿಗೆ ಬ್ರಹ್ಮಜಿಜ್ಞಾಸೆಯ ಸ್ವಾತಂತ್ರ್ಯವಿತ್ತು ಎಂದು ಬೀಗುವುದು ಸರಿಯೆ ಎಂಬುದನ್ನು ಮರುಚಿಂತಿಸಬೇಕಾಗಿದೆ.

ಒಂದು ವೇಳೆ, ಉಪನಿಷತ್ಕಾಲದ ಸ್ತ್ರೀಯರಿಗೆ ಸ್ವಾತಂತ್ಯ್ರವಿತ್ತು ಎಂದೇ ಊಹಿಸಿಕೊಂಡರೂ, ಆ ಸ್ವಾತಂತ್ರ್ಯ ಅಲ್ಪ ಕಾಲದ್ದು ಎಂಬುದನ್ನು ಮರೆಯುವಂತಿಲ್ಲ. ಏಕೆಂದರೆ ಬಾದರಾಯಣನ ಬ್ರಹ್ಮಸೂತ್ರ, ಗೌತಮನ ನ್ಯಾಯಸೂತ್ರ, ಮುಂತಾದ ಸೂತ್ರಗಳೂ ಮನುಧರ್ಮಶಾಸ್ತ್ರ ಮುಂತಾದ ಧರ್ಮಶಾಸ್ತ್ರಗಳೂ ರಚಿತವಾಗುವ ವೇಳೆಗೆ, ಅಂದರೆ ಸುಮಾರು ಕ್ರಿ.ಪೂ. ಎರಡನೆಯ ಶತಮಾನದಿಂದ ಕ್ರಿ.ಶ. ಎರಡನೆಯ ಶತಮಾನದ ಹೊತ್ತಿಗೆ, ಸ್ತ್ರೀಯರಿಂದ ಸಾಮಾಜಿಕ ಸ್ವಾತಂತ್ರ್ಯವನ್ನೂ ಮೋಕ್ಷ ಪಡೆಯುವ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳಲಾಗಿತ್ತು. ಯಜ್ಞಯಾಗಾದಿಗಳನ್ನು ಸ್ತ್ರೀಯರು ಮಾಡಬಾರದು ಎಂದು ಯಾವ ಶಾಸ್ತ್ರವೂ ನೇರವಾಗಿ ಹೇಳಿಲ್ಲ ಎಂದು ಇಂದು ಕೆಲವರು ವಾದಿಸಬಹುದು. ಆದರೆ ಬಾದರಾಯಣ ತನ್ನ ಬ್ರಹ್ಮಸೂತ್ರದಲ್ಲಿ (1.3.34-38) ಹೀಗೆ ಹೇಳುತ್ತಾನೆ: ಶೂದ್ರನಿಗೆ ಮೋಕ್ಷವಿಲ್ಲ; ಏಕೆಂದರೆ, ಮೋಕ್ಷಪ್ರಾಪ್ತಿಗೆ ಬ್ರಹ್ಮವಿದ್ಯೆ ಬೇಕು; ಬ್ರಹ್ಮವಿದ್ಯೆಗೆ ವೇದಾಧ್ಯಯನ ಬೇಕು; ವೇದಾಧ್ಯಯನಕ್ಕೆ ಉಪನಯನ ಸಂಸ್ಕಾರ ಬೇಕು; ಆದುದರಿಂದ, ಉಪನಯನ ಸಂಸ್ಕಾರವಿಲ್ಲದ ಶೂದ್ರನಿಗೆ ವೇದಾಧ್ಯಯನದ ಅಧಿಕಾರವಿಲ್ಲ, ಮತ್ತು ಆ ಕಾರಣಕ್ಕೆ ಅವನಿಗೆ ಮೋಕ್ಷವೂ ಇಲ್ಲ. ಇಲ್ಲಿ ಬಾದರಾಯಣ ಸ್ತ್ರೀಯರಿಗೆ ಮೋಕ್ಷವಿಲ್ಲ ಎಂದು ನೇರವಾಗಿ ಹೇಳದಿದ್ದರೂ ಆತ ಶೂದ್ರ ಸ್ತ್ರೀಗೂ, ತ್ರೈವರ್ಣಿಕ ಸ್ತ್ರೀಗೂ ಉಪನಯನ ಸಂಸ್ಕಾರವನ್ನು ನಿರಾಕರಿಸುವ ಮೂಲಕ, ಮೋಕ್ಷವನ್ನೂ ನಿರಾಕರಿಸಿರುವುದು ಸ್ಪಷ್ಟವಿದೆ.

ಅದೇ ರೀತಿ ಜೈನ ಸಂಪ್ರದಾಯದಲ್ಲಿ ಸ್ತ್ರೀಯರಿಗೆ ನಿರ್ವಾಣವನ್ನು ನಿರಾಕರಿಸಲಾಗಿದೆ. ಅವರು ಈ ಜನ್ಮದಲ್ಲಿ ಸಾಕಷ್ಟು ಪುಣ್ಯ ಮಾ��ಿ, ಮುಂದಿನ ಜನ್ಮದಲ್ಲಿ ಗಂಡಸರಾಗಿ ಹುಟ್ಟಿ, ಅಗತ್ಯವಾದ ಆಧ್ಯಾತ್ಮಿಕ ಸಾಧನೆ ಮಾಡಿದರೆ ಅವರು ನಿರ್ವಾಣಕ್ಕೆ ಅರ್ಹರಾಗುತ್ತಾರೆ; ಆದರೆ ಈ ಜನ್ಮದಲ್ಲಿ ಎಷ್ಟು ಆಧ್ಯಾತ್ಮಿಕ ಸಾಧನೆ ಮಾಡಿದರೂ ಅವರಿಗೆ ನಿರ್ವಾಣ ಸಾಧ್ಯವಿಲ್ಲ.
ಹೀಗೆ, ಭಾರತೀಯ ಸಂಪ್ರದಾಯದಲ್ಲಿ ಹನ್ನೆರಡನೆಯ ಶತಮಾನದ ಹೊತ್ತಿಗೆ ಸ್ತ್ರೀ ಮೋಕ್ಷಕ್ಕೆ ಅರ್ಹಳಲ್ಲ, ಅಷ್ಟೇ ಏಕೆ, ಹೆಂಗಸರೆಂದರೆ ಮಾಯೆ, ಸ್ತ್ರೀವ್ಯಾಮೋಹವಿದ್ದವರಿಗೆ ಮೋಕ್ಷವಿಲ್ಲ, ಎಂಬ ಧೋರಣೆ ಗಟ್ಟಿಗೊಂಡಿತ್ತು. ಉದಾಹರಣೆಗೆ ಅಕ್ಕ ಮಹಾದೇವಿಯೇ ತನ್ನ ವಚನಗಳಲ್ಲಿ

ಪುರುಷರ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು
ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು. (5/282)
ಎಂದೂ
ಬಿಟ್ಟೆನೆಂದರೆ ಬಿಡದೀ ಮಾಯೆ,
ಯೋಗಿಗೆ ಯೋಗಿಣಿಯಾಗಿ ಕಾಡಿತ್ತು ಮಾಯೆ,
ಸವಣಂಗೆ ಸವಣಿಯಾಗಿ ಕಾಡಿತ್ತು ಮಾಯೆ . . . (5/302)
ಎಂದೂ ಹೇಳುತ್ತಾಳೆ.

ಇದಕ್ಕೆ ವಿರುದ್ಧವಾಗಿ ಬಸವಾದಿ ಶರಣರು (1) ಮೋಕ್ಷ ಕೇವಲ ತ್ರೈವರ್ಣಿಕರಿಗಷ್ಟೇ ಅಲ್ಲ, ಶೂದ್ರರಿಗೂ ಶ್ವಪಚರಿಗೂ ಸಾಧ್ಯ (2) ಗಂಡಸರಿಗಷ್ಟೇ ಅಲ್ಲ, ಹೆಂಗಸರಿಗೂ ಸಾಧ್ಯ ಎಂದು ವಾದಿಸಿದರು. ಅದಕ್ಕೆ ಪೂರಕವಾಗಿ, ಇಷ್ಟಲಿಂಗೋಪಾಸನೆಯ ಮೂಲಕ ಅವರು ಮೋಕ್ಷ ಸಾಧಿಸಿಕೊಳ್ಳಲಿ ಎಂಬ ಉದ್ದೇಶದಿಂದ ಎಲ್ಲರಿಗೂ ಇಷ್ಟಲಿಂಗ ಪ್ರದಾನ ಮಾಡಿದರು. ಇದರಿಂದಾಗಿ, ಬ್ರಾಹ್ಮಣರಂತೆ ಶೂದ್ರ, ಅಸ್ಪೃಶ್ಯರಿಗೂ, ಗಂಡಸರಂತೆ ಹೆಂಗಸರಿಗೂ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಿತು.
(3) ಇದಲ್ಲದೆ ಅವರು ಪ್ರತಿಪಾದಿಸಿದ ಮತ್ತೊಂದು ಸಿದ್ಧಾಂತವೆಂದರೆ ಪುರುಷರ ಆಧ್ಯಾತ್ಮಿಕ ಪ್ರಗತಿಗೆ ಸ್ತ್ರೀಯರು ಮಾಯೆ ಅಥವಾ ಅಡ್ಡಿಯಲ್ಲ ಎಂಬುದು. ಅಲ್ಲಮರ ಪ್ರಕಾರ ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುವುದು ಹೆಣ್ಣೂ ಅಲ್ಲ, ಮಣ್ಣೂ ಅಲ್ಲ, ಹೊನ್ನೂ ಅಲ್ಲ, ಅವುಗಳ ಬಗೆಗಿನ ನಮ್ಮ ಆಸೆ. ಇದನ್ನು ಅವರು ಹೀಗೆ ಸ್ಪಷ್ಟಪಡಿಸುತ್ತಾರೆ:

ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ;
ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ;
ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ;
ಮನದ ಮುಂದಣ ಆಸೆಯೇ ಮಾಯೆ ಕಾಣಾ, ಗುಹೇಶ್ವರಾ (2/72)
ಅಲ್ಲಮರು ಹೇಳುವುದರಲ್ಲಿ ಒಂದು ಮನಶ್ಶಾಸ್ತ್ರೀಯ ಸತ್ಯವಿದೆ. ಆರೋಗ್ಯವಂತ ತರುಣನಿಗೆ ಸ್ತ್ರೀಮೋಹವಿರುವುದು ಸಹಜ ಮತ್ತು ಸಾಮಾನ್ಯ. ಲೈಂಗಿಕ ಆಸೆಗಳು ನೆರವೇರುವವರೆಗೂ ಅವನಿಗೆ ಆ ಆಸೆ ಮನಸ್ಸಿನಲ್ಲಿ ಆಗಾಗ್ಗೆ ಮೂಡುತ್ತಲೇ ಇರುತ್ತದೆ; ಕಾಡುತ್ತಲೇ ಇರುತ್ತದೆ. ಪೂಜೆಯ ವೇಳೆ, ಧ್ಯಾನದ ವೇಳೆ, ಗುರುಗಳ ಪ್ರವಚನದ ವೇಳೆ – ಹೀಗೆ ಎಲ್ಲ ವೇಳೆಗಳಲ್ಲೂ ಆ ಆಸೆ ಅಲೆಗಳೋಪಾದಿಯಲ್ಲಿ ಬಂದು ಕಾಡುತ್ತಲೇ ಇರುತ್ತದೆ. ಈ ಅರ್ಥದಲ್ಲಿ ಆ ಆಸೆ ಒಂದು ಮಾಯೆ; ಅದು ಗಂಡಸಿಗೆ ಹೆಣ್ಣಾಗಿ, ಹೆಂಗಸಿಗೆ ಗಂಡಾಗಿ ಬಂದು ಕಾಡುತ್ತದೆ.
ಅಲ್ಲಮ ಪ್ರಭುವಿನ ಪ್ರಕಾರ, ಸಾಧಕನಾದವನು ಲೈಂಗಿಕ ಆಸೆಗಳನ್ನು ಹತ್ತಿಕ್ಕಿದರೆ ಅಥವಾ ಸ್ತ್ರೀಯಿಂದ ದೂರ ಹೋದರೆ, ಮಾಯೆಯನ್ನು ಗೆದ್ದಂತಾಗುವುದಿಲ್ಲ. ನಾವು ಗೆಲ್ಲಬೇಕಾದುದು ಆಸೆಯನ್ನು.

ಹನ್ನೆರಡನೆಯ ಶತಮಾನದ ವಚನಕಾರರ ಪ್ರಕಾರ ಲೈಂಗಿಕ ಆಸೆಯ ಕಾಟವನ್ನು ಎರಡು ರೀತಿಗಳಲ್ಲಿ ತಪ್ಪಿಸಿಕೊಳ್ಳಬಹುದು. ಮೊದಲನೆಯದು ಆ ಆಸೆಯನ್ನು ಸೂಕ್ತ ರೀತಿಯಲ್ಲಿ ಪೂರೈಸಿಕೊಳ್ಳುವ ಮೂಲಕ. ಇದು ಹೇಗೆ ಎಂಬುದನ್ನು ಸಿದ್ಧರಾಮಯ್ಯನವರು ಹೀಗೆ ತಿಳಿಸಿಕೊಡುತ್ತಾರೆ:

ಭಕ್ತನ ಮನ ಹೆಣ್ಣಿನೊಳಗಾದಡೆ, ವಿವಾಹವಾಗಿ ಕೂಡುವುದು;
ಭಕ್ತನ ಮನ ಮಣ್ಣಿನೊಳಗಾದಡೆ, ಕೊಂಡು ಆಲಯವ ಮಾಡುವುದು; (ಇತ್ಯಾದಿ) (4/ 836)

ಇಲ್ಲಿ ಸಿದ್ಧರಾಮಯ್ಯನವರು ಭಕ್ತ ಕಾಡಿಗೆ ಹೋಗಬೇಕೆಂದಾಗಲಿ, ಹೆಣ್ಣಿನ ಬಗೆಗಿನ ಆಸೆಯನ್ನೇ ನಿರ್ಮೂಲನೆ ಮಾಡಬೇಕೆಂದಾಗಲಿ ಹೇಳುತ್ತಿಲ್ಲ – ಅವರು ಹೇಳುತ್ತಿರುವುದು ಹೆಣ್ಣಿನ ಬಗೆಗಿನ ಆಸೆಯನ್ನು ಸೂಕ್ತ ರೀತಿಯಲ್ಲಿ, ಅಂದರೆ ವೈವಾಹಿಕ ರೀತಿಯಲ್ಲಿ, ಪೂರೈಸಿಕೊಳ್ಳಬೇಕೆಂದು.
ಲೈಂಗಿಕ ಆಸೆಯನ್ನು ಹತ್ತಿಕ್ಕುವುದರ ಬದಲು, ಅಥವಾ ನಿರ್ಮೂಲನೆ ಮಾಡುವುದರ ಬದಲು, ಅಥವಾ ಹೆಣ್ಣನ್ನು ನೋಡದಂತೆ ಕಾಡಿಗೆ ಹೋಗುವುದರ ಬದಲು, ಅದನ್ನು ಪೂರೈಸಿಕೊಳ್ಳುವುದು ಲೇಸು ಎಂದು ಸಿದ್ಧರಾಮಯ್ಯನವರು ಹೇಳಿದಂತೆ ಬಸವಣ್ಣನವರೂ ಹೇಳಿದ್ದಾರೆ. ಅವರೂ ಲೈಂಗಿಕ ಆಸೆಯನ್ನು ಹತ್ತಿಕ್ಕಿದರೆ, ಅವು ನಾಶವಾಗುವುದರ ಬದಲು ಅವು ನಮ್ಮನ್ನೇ ನಾಶಮಾಡಬಹುದು ಎಂದೂ ನಮ್ಮನ್ನು ಎಚ್ಚರಿಸುತ್ತಾರೆ.
ಇಂದ್ರಿಯ ನಿಗ್ರಹವ ಮಾಡಿದರೆ ಬಂದು ಕಾಡುವವು ದೋಷಂಗಳು,
ಮುಂದೆ ಬಂದು ಕಾಡುವುವು ಪಂಚೇಂದ್ರಿಯಂಗಳು;
ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ ಚೆಂಗಳೆಯರು?
ಸತಿಪತಿರತಿ ಭೋಗವ ಬಿಟ್ಟನೆ ಸಿಂಧು ಬಲ್ಲಾಳನು? (1/ 639)
ಎಂಬ ಬಸವಣ್ಣನವರ ವಚನದಲ್ಲಿ ಮೂರು ಮುಖ್ಯ ಅಂಶಗಳು ಅಡಗಿವೆ. (1) ಇಂದ್ರಿಯ ನಿಗ್ರಹವ ಮಾಡಿದರೆ ಆ ಆಸೆಗಳು ನಾಶವಾಗುವುದರ ಬದಲು ಅವು ನಮ್ಮನ್ನು ಪದೇ ಪದೇ ಬಂದು ಕಾಡುತ್ತವೆ; ಇದರಿಂದಾಗಿ, ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಏನೂ ಸಹಾಯಕವಾಗುವುದಿಲ್ಲ. ಅದರ ಬದಲು, ಲೈಂಗಿಕ ಆಸೆ ಎಡೆಬಿಡದೆ ಕಾಡುವ ಮೂಲಕ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುತ್ತದೆ. (2) ನಿಗ್ರಹಿಸಲ್ಪಟ್ಟ ಆಸೆಗಳ ಕಾಟ ಸಾಧಕನ ದೈಹಿಕ ಮತ್ತು ಮಾನಸಿಕ ದೋಷಗಳಿಗೆ ಕಾರಣವಾಗಬಹುದು. ಅವನು ಅನೈತಿಕ ಅಥವಾ ಅಸಹಜ ದಾರಿ ಹಿಡಿಯಬಹುದು. ಅದೂ ಸಾಧಕನ ಆಧ್ಯಾತ್ಮಿಕ ಸಾಧನೆಗೆ ಅನುಕೂಲವಾಗುವುದರ ಬದಲು, ಪ್ರತಿಕೂಲವಾಗಬಹುದಲ್ಲದೆ, ಅವನನ್ನು ಅನೈತಿಕನನ್ನಾಗಿ ಮಾಡುವ ಮೂಲಕ, ಆಧ್ಯಾತ್ಮಿಕ ಸಾಧನೆಗೆ ಅಯೋಗ್ಯನನ್ನಾಗಿ ಮಾಡುತ್ತದೆ. (3) ಸಿಂಧುಬಲ್ಲಾಳ, ಸಿರಿಯಾಳ ಮುಂತಾದ ಮಹಾನ್ ಭಕ್ತರು ಆಧ್ಯಾತ್ಮಿಕ ಜೀವನದ ಸಲುವಾಗಿ ದಾಂಪತ್ಯ ಲೈಂಗಿಕ ಸುಖವನ್ನು ಕಡೆಗಣಿಸಬೇಕೆಂದು ಬೋಧಿಸಲಿಲ್ಲ. ಏಕೆಂದರೆ, ಭಕ್ತಿಗೆ ದಾಂಪತ್ಯ, ಲೈಂಗಿಕ ಸುಖ ಅಡ್ಡಬರುವುದಿಲ್ಲ ಎಂಬುದು ಅವರ ನಿಲುವಾಗಿತ್ತು. ಒಂದು ವೇಳೆ ಸಿಂಧುಬಲ್ಲಾಳ ಅಥವಾ ಸಿರಿಯಾಳ ಸ್ತ್ರೀ ಮಾಯೆ ಎಂಬ ಕಾರಣದಿಂದ ತಮ್ಮ ಸತಿಯರಿಂದ ದೂರವಿದ್ದಿದ್ದರೆ, ಆಗ ಅವರು ‘ಮಾಯೆ’ಯ ಕಾಟಕ್ಕೆ ಒಳಗಾಗುತ್ತಿದ್ದರು.
ಈ ವಿಷಯದಲ್ಲಿ ಜೇಡರ ದಾಸಿಮಯ್ಯನವರ ವಾದ ಇನ್ನೂ ಹೆಚ್ಚು ಸ್ಪಷ್ಟ ಮತ್ತು ಶಕ್ತಿಯುತವಾಗಿದೆ:
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ;
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆಸಿದಂತೆ ಕಾಣಾ ರಾಮನಾಥಾ. (7/ 861)
ಅದೇ ರೀತಿ ಅಲ್ಲಮ ಪ್ರಭುದೇವರು ಸಹಾ
ಉಭಯ ದೃಷ್ಟಿ ಏಕದೃಷ್ಟಿಯಲ್ಲಿ ಕಾಂಬಂತೆ
ದಂಪತಿ ಏಕಭಾವವಾಗಿ ನಿಂದಲ್ಲಿ
ಗುಹೇಶ್ವರ ಲಿಂಗಕ್ಕೆ ಅರ್ಪಿತವಾಯಿತ್ತು . . . (2/ 964)
ಎನ್ನುತ್ತಾರೆ. ದಾಸಿಮಯ್ಯ ಮತ್ತು ಪ್ರಭುದೇವರು ಬ್ರಹ್ಮಚಾರಿಯ ಭಕ್ತಿಗಿಂತ ದಂಪತಿಗಳ ಭಕ್ತಿ ಉತ್ತಮ ಎಂದೇಕೆ ಹೇಳುತ್ತಾರೆ? ಎಂಬುದು ಬಹಳ ಕುತೂಹಲಕಾರಿಯಾದ ಪ್ರಶ್ನೆ. ಇದಕ್ಕೆ ಉತ್ತರ ಸುಲಭ. ಮನಸ್ಸಿನಲ್ಲಿ ಸ್ತ್ರೀಯ ಬಗೆಗೆ ಆಸೆ ಇಟ್ಟುಕೊಂಡು ಅದೇ ಕಾಲದಲ್ಲಿ ಪೂಜೆ, ಧ್ಯಾನ, ಇತ್ಯಾದಿಗಳಲ್ಲಿ ತೊಡಗುವುದೆಂದರೆ, ಮನಸ್ಸು ಪೂಜೆ, ಧ್ಯಾನ ಇತ್ಯಾದಿಗಳಲ್ಲಿ ಸಂಪೂರ್ಣ ತೊಡಗಿಲ್ಲ ಎಂದೇ ಅರ್ಥ. ಆಗ ಭಕ್ತಿ ಎಂಬ ಅಮೃತದಲ್ಲಿ ಸ್ತ್ರೀಯ ಬಗೆಗಿನ ಆಸೆ ಎಂಬ ವಿಷ ಬೆರೆತಿದೆ ಎಂದು ಅರ್ಥ. ಅಂದರೆ ಅಂಥ ವಿಷಯಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಮೇಲ್ನೋಟಕ್ಕೆ ಧಾರ್ಮಿಕ ಕ್ರಿಯೆಗಳಂತೆ ಕಾಣುವ ಕ್ರಿಯೆಗಳನ್ನು ಮಾಡುವುದಕ್ಕಿಂತ, ಆ ಆಸೆಯ ಕಾಟವಿಲ್ಲದ, ನಿರ್ಮಲ ಮನಸ್ಸಿನ ದಂಪತಿಗಳು ಆಚರಿಸುವ ಭಕ್ತಿ ನಿಜವಾಗಿಯೂ ಉತ್ತಮ ಎಂಬುದು ಅಲ್ಲಮ, ದಾಸಿಮಯ್ಯರ ಅಭಿಪ್ರಾಯ.
ಹೀಗೆ ನೋಡಿದಾಗ, ಆಧ್ಯಾತ್ಮಿಕ ಜೀವನಕ್ಕೆ ದಾಂಪತ್ಯಜೀವನ ಅಡ್ಡಿಯಲ್ಲವಷ್ಟೇ ಅಲ್ಲ, ಪೂರಕ ಎಂಬುದು ಬಸವಾದಿ ಶರಣರ ಅಭಿಪ್ರಾಯ ಎಂಬುದು ಸ್ಪಷ್ಟವಾಗುತ್ತದೆ.

* * *

ಬಸವಣ್ಣನವರು ಪ್ರಾರಂಭಿಸಿದ ಕ್ರಾಂತಿ ಪೂರ್ಣವಾಗದೆ, ರಾಜಕೀಯ ಮತ್ತು ಧರ್ಮೋ-ಸಾಮಾಜಿಕ ಕಾರಣಗಳಿಂದಾಗಿ ಅವರ ಸಂಗಡಿಗರೆಲ್ಲಾ ದಿಕ್ಕಾಪಾಲಾಗಿ ಓಡಿಹೋದಾಗ, ವಚನ ರಚನೆಯ ಕೆಲಸವೂ ಕೆಲ ಕಾಲ ನಿಂತುಹೋಯಿತು. ಸುಮಾರು ಇನ್ನೂರು-ಮುನ್ನೂರು ವರ್ಷಗಳ ಕಾಲ, ಅಂದರೆ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಬರುವವರೆಗೆ, ಯಾರೂ ವಚನ ರಚನೆಯಲ್ಲಿ ತೊಡಗಿದಂತೆ ಕಾಣುವುದಿಲ್ಲ.
ಎರಡನೆಯ ಘಟ್ಟದ ವಚನರಚನೆ ಪ್ರಾರಂಭವಾದುದು ಸಿದ್ಧಲಿಂಗ ಶಿವಯೋಗಿಗಳಿಂದಾಗಿಯೆ ಎಂದು ಭಾವಿಸಿದರೆ, ಆಗ ಹನ್ನೆರಡನೆಯ ಶತಮಾನದ ಶರಣರು ರಚಿಸಿದ ವಚನಗಳಿಗೂ ಬಸವೋತ್ತರ ಶರಣರು ರಚಿಸಿದ ವಚನಗಳಿಗೂ ಇರುವ ವ್ಯತ್ಯಾಸವೊಂದು ಎದ್ದು ಕಾಣುತ್ತದೆ. ಅದೆಂದರೆ, ಸಿದ್ಧಲಿಂಗರೂ ಅವರ ವಿರಕ್ತ ಪರಂಪರೆಯಲ್ಲೇ ಬಂದ ವಚನಕಾರರೂ ಸ್ತ್ರೀಯ ಬಗೆಗೆ ತೋರಿಸುವ ತುಚ್ಛ ಭಾವನೆ. ಆಧ್ಯಾತ್ಮಿಕ ಜೀವನಕ್ಕೆ ದಾಂಪತ್ಯ ಸುಖ ಪೂರಕ, ಸ್ತ್ರೀಯು ಆಧ್ಯಾತ್ಮಿಕ ಸಾಧನೆಯಲ್ಲಿ ಪುರುಷರಿಗೆ ಸಮಾನ ಎಂಬ ಭಾವನೆ ಹೋಗಿ, ಅದರ ಜಾಗದಲ್ಲಿ ಆಕೆ ಮಾಯೆ, ಪುರುಷನ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುವವಳು, ಆದುದರಿಂದ ಆಕೆ ತುಚ್ಛ ಮತ್ತು ವರ್ಜ್ಯ, ಎಂಬ ಧೋರಣೆ ಬೆಳೆಯತೊಡಗಿತು. ಸಿದ್ಧಲಿಂಗರ ವಚನಗಳಲ್ಲಿ ಬರುವ ಈ ಮಾತುಗಳನ್ನು ಪರಿಶೀಲಿಸಿ:

1. . . ಸತಿಯರ ಸವಿನುಡಿಯ ಶಸ್ತ್ರವ ಹಾಯ್ದು,
ಅಂಗನೆಯರ ಶೃಂಗಾರವೆಂಬ ಕತ್ತಲೆಗವಿದು,
ಕಂಗಳು ಕೆಟ್ಟು, ಲಿಂಗ ನೆನಹೆಂಬ ಜ್ಯೋತಿ ನಂದಿತ್ತು ನೋಡಾ.
ಆ ಸ್ವಯಂಜ್ಯೋತಿ ಕೆಡದ ಮುನ್ನ, ಅಂಗವಿಕಾರವೆಂಬ ಅರಸು
ಅನಂತ ಹಿರಿಯರ ನುಂಗುವುದ ಕಂಡು,
ಮಹಾಜ್ಞಾನಿಗಳು ಹೇಸಿ ಕಡೆಗೆ ತೊಲಗಿದರು ನೋಡಾ . . . (11/107)

2. ದೇವಸ್ತ್ರೀಯರ ಸಂಗಕ್ಕೆ ಎಣಿಸುವುದೆಲ್ಲ ಕಾಯ ಗುಣ ಕಾಣಿರಣ್ಣ.
ಆವ ಹಾವಾದಡೇನು, ವಿಷವೊಂದೇ ನೋಡಾ . . . (11/108)

3. ಶಶಿಮುಖಿಯರ ಸಂಗಕ್ಕೆ ಎಣಿಸುವ ಪಶುಪ್ರಾಣಿಗಳು
ಪಶುಪತಿಯ ಸಂಗಕ್ಕೆ ಯಾಕೆ ಎಣಿಸಲೊಲ್ಲರಯ್ಯಾ? . . . (11/109)

4. ಉರಿಗೆ ತೋರಿದ ಬೆಣ್ಣೆ ಕರಗುವಂತೆ,
ಅಸಿಯ ಜವ್ವನೆಯರ ಕಂಡು ವಿಷಯಾತುರರಾಗಿ
ಕುಸಿವುತ್ತಿಪ್ಪರು ನೋಡಾ ಹಿರಿಯರು . . . (11/111)

5. ತುರಿಯ ಮೇಲೆ ಉಗುರನಿಕ್ಕಿದರೆ ಹಿತವಾಗಿಪ್ಪುದು;
ಒತ್ತಿ ತುರಿಸಿದಡೆ ಒಡಲೆಲ್ಲಾ ಉರಿದ ದೃಷ್ಟಾಂತದಂತೆ,
ವಿಷಯ ತೋರಿದಡೆ ಯೋನಿಚಕ್ರವ ನಿಶ್ಚಯಿಸುವುದು
ಆ ವಿಷಯ ತೀರಿದ ಬಳಿಕ ಆ ಯೋನಿ
ಸ್ನಾನದ ಕುಳಿಯಿಂದ ಕಡೆಯಾಪ್ಪುದು ನೋಡಾ.
ಸತಿ ಎಂಬುವಳು ಸತ್ತ ಶವಕಿಂತ ಕಡೆಯಾಗಿಪ್ಪಳು ನೋಡಾ.
ಅಪ್ಪಬಾರದು, ಅಪ್ಪಬಾರದು, ಅತಿ ಹೇಸಿಕೆ . . . (11/112)

ಅಂದರೆ ಸಿದ್ಧಲಿಂಗರ ಪ್ರಕಾರ ಸ್ತ್ರ್ರೀಯರಿಗೆ ಮರುಳಾಗುವವರು ಪಶುಪ್ರಾಣಿಗಳು. ಕೆಲವರು ತಪಸ್ಸಾಧನೆಯ ಮೂಲಕ ದೇವಲೋಕಕ್ಕೆ ಹೋಗುತ್ತಾರೆ. ಅಲ್ಲಿ ಊರ್ವಶಿ, ರಂಭೆ, ತಿಲೋತ್ತಮೆ, ಮುಂತಾದ ದೇವತಾಸ್ತ್ರೀಯರ ಸಂಗ ಬಯಸುತ್ತಾರೆ. ಆದರೆ, ಸಿದ್ಧಲಿಂಗರ ಪ್ರಕಾರ ಯಾವ ಸ್ತ್ರ್ರೀಯೂ ಸಂಗಕ್ಕೆ ಅರ್ಹಳಲ್ಲ. ಏಕೆಂದರೆ, ಯಾವ ಹಾವಾದರೇನು, ವಿಷವೊಂದೇ ತಾನೆ? ಅಲ್ಲದೆ, ಬಸವಾದಿ ಶರಣರು ಪರಸ್ತ್ರೀ ಸಂಗವನ್ನು ಖಂಡಿಸಿದ್ದರೆ, ಇವರು ಸ್ವಸ್ತ್ರೀ ಸಂಗವನ್ನೊಳಗೊಂಡಂತೆ ಎಲ್ಲ ಸ್ತ್ರೀಸಂಗವನ್ನೂ ಖಂಡಿಸುತ್ತಾರೆ. ‘ಸತಿ ಎಂಬುವಳು ಸತ್ತ ಶವಕಿಂತ ಕಡೆ . . . ಅಪ್ಪಬಾರದು . . . ಅತಿಹೇಸಿಕೆ’. ತಮ್ಮ ಈ ನಿಲುವನ್ನು ಸಮರ್ಥಿಸಿಕೊಳ್ಳಲು ಸಿದ್ಧಲಿಂಗರು ಹೀಗೆ ಹೇಳುತ್ತಾರೆ:

. . . ಶ್ವಾನನೊಂದು ಚರ್ಮವ ಕಚ್ಚಿತಂದು, ತಿಪ್ಪೆಯ ಕೆರೆದು ಹೂಳಿ,
ಮತ್ತೊಂದು ನಾಯಿ ಬಂದು ಕಚ್ಚಿಹಿತೆಂದು ಕಾಯ್ದುಕೊಂಡಿಪ್ಪಂತೆ,
ತಾನುಚ್ಚೆಯ ಹೊಯಿವ ಬಚ್ಚಲಗುಂಡಿಯ ಜೀವದ ಹೆಣನ
ಮನೆಯ ಮರೆಯಲಿರಿಸಿಕೊಂಡು,
ಮತ್ತೊಂದು ಬಂದು ಕಚ್ಚಿಹಿತೆಂದು
ಕುಕ್ಕ ನಾಯಂತೆ ಕಾಯ್ದುಕೊಂಡಿಪ್ಪವಂಗೆ ಶಿವಕೃಪೆಯೆಲ್ಲಿಯದೊ? . . . (11/116)
ಹೀಗೆ ಸಿದ್ಧಲಿಂಗರು ಸ್ತ್ರೀ ವಿಷಯವಾಗಿ ‘ಉಚ್ಚೆಯ ಹೊಯಿವ ಬಚ್ಚಲು ಗುಂಡಿ’, ‘ಜೀವಂತ ಹೆಣ’, ‘ಸ್ನಾನದ ಕುಳಿ’, ‘ವಿಷ’, ಮುಂತಾದ ಇನ್ನೂ ಅನೇಕ ಅಶ್ಲೀಲ ಪದಗಳನ್ನು ಬಳಸುವ ಮೂಲಕ ಎಲ್ಲ ಸ್ತ್ರೀಯರೂ ಆಧ್ಯಾತ್ಮಿಕ ಸಾಧನೆಗೆ ಅಡ್ಡಿ’ ಎಂಬ ತಮ್ಮ ನಿಲವನ್ನು ಎತ್ತಿ ಹಿಡಿದು, ಆ ಕಾರಣಕ್ಕಾಗಿ, ತಮ್ಮ ಅದಮ್ಯ ಸ್ತ್ರೀದ್ವೇಷವನ್ನು ವ್ಯಕ್ತಪಡಿಸಿದ್ದಾರೆ.
(ಮುಂದುವರೆಯುತ್ತದೆ)

Previous post ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
Next post ಮನೆ ನೋಡಾ ಬಡವರು
ಮನೆ ನೋಡಾ ಬಡವರು

Related Posts

ದಾಸೋಹ ತತ್ವ
Share:
Articles

ದಾಸೋಹ ತತ್ವ

January 10, 2021 ಡಾ. ಬಸವರಾಜ ಸಬರದ
ಶರಣರ ಸಾಮಾಜಿಕ ಸಿದ್ಧಾಂತಗಳಲ್ಲಿ ಕಾಯಕದಂತೆ ದಾಸೋಹವೂ ಒಂದು ಮಹತ್ವದ ಮೌಲ್ಯ. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಕ್ಕೊಂದು ಪೂರಕವಾಗಿವೆ. ಕಾಯಕಕ್ಕೆ ಹೇಗೆ...
ಶಿವನ ಕುದುರೆ – 2
Share:
Articles

ಶಿವನ ಕುದುರೆ – 2

June 3, 2019 ಮಹಾದೇವ ಹಡಪದ
ದಾರಿಯ ಏಕಾಂತಕ್ಕೆ ಹಾಡನ್ನು ಹಾಡಿಕೊಳ್ಳುತ್ತಾ ಕಾಡನ್ನು ಕಳೆದು ಬಟ್ಟಂಬಯಲಿನ ನಾಡಿಗೆ ಬಂದ. ಶ್ರೀಗಿರಿಗೆ ಹೋಗಬೇಕೆನ್ನುವುದು ಬಿಟ್ಟರೆ ಯಾವ ದಾರಿ, ಯಾವ ದಿಕ್ಕು ಎಂಬ ಯಾವ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
July 10, 2023
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
Copyright © 2025 Bayalu