Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪ್ರಮಾಣಗಳಿಂದ ಅಪ್ರಮಾಣದೆಡೆ…
Share:
Articles July 10, 2025 ಕೆ.ಆರ್ ಮಂಗಳಾ

ಪ್ರಮಾಣಗಳಿಂದ ಅಪ್ರಮಾಣದೆಡೆ…

ಹಿಂದಣ ಸುಖ, ಮುಂದಣ ದುಃಖಂಗಳು
ಮುಂದಣ ಸುಖ, ಹಿಂದಣ ದುಃಖಂಗಳು
ಇವ ತಾ ಸಂಧಿಸಿ ಅನುಭವಿಸಿದಲ್ಲಿ
ಸಂಚಿತ ಪ್ರಾರಬ್ಧ ಆಗಾಮಿಗಳೆಂದು
ಅಲ್ಲಿಯಲ್ಲಿ ಸಂಕಲ್ಪಿಸಿ ಕೇಳಲೇತಕ್ಕೆ?
ಹಿಂದೆ ಅಳಿದವರ ಕೇಳಿ, ಮುಂದೆ ಸಾವವರ ಕಂಡು
ಅಂದಂದಿಗೆ ನೂರು ತುಂಬಿತ್ತೆಂದು
ಸಂದೇಹ ನಿವೃತ್ತಿಯಾಗಿರಬೇಕು,
ಸಂಗನಬಸವಣ್ಣ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವನರಿವುದಕ್ಕೆ.
-ಬಾಹೂರ ಬೊಮ್ಮಣ್ಣ

ಮೈ ಸಮಯ್ ಹೂಂ– ನಿಮಗೆ ನೆನಪಿರಬಹುದು. ಅದು ಎಂಬತ್ತರ ದಶಕ. ಮಹಾಭಾರತದ ಮೆಗಾ ಧಾರಾವಾಹಿಯನ್ನು ದೇಶಕ್ಕೆ ದೇಶವೇ ಎವೆಯಿಕ್ಕದೆ ನೋಡುತ್ತಿತ್ತು. ಪ್ರತಿ ಭಾನುವಾರ ಬೆಳಿಗ್ಗೆ, ಈ ನುಡಿಗಟ್ಟು ನಮ್ಮ ಟಿವಿ ಪರದೆಗಳ ಮೇಲೆ ಪ್ರತಿಧ್ವನಿಸುತ್ತಿತ್ತು, ಕಾಲಚಕ್ರವು ಪರದೆಯ ಮೇಲೆ ಸುತ್ತುತ್ತಿತ್ತು. ಹರೀಶ್ ಭೀಮಾನಿ ಅವರ ಅಬ್ಬರದ ಆ ದನಿಯನ್ನು ಮರೆಯುವಂತೆಯೇ ಇಲ್ಲ- ಮೈ ಸಮಯ್ ಹೂಂ. ಕಾಲವೇ ಇಲ್ಲಿ ನಿರೂಪಕ ಮತ್ತು ನಡೆಯುತ್ತಿರುವ ಘಟನೆಗಳ ಅಂತಿಮ ವೀಕ್ಷಕ! ಕಾಲದ ಬಾಂದಳದಲ್ಲಿ ಎಲ್ಲರ, ಎಲ್ಲದರ ಆಟ!! ಕಾಲವೇ ಈ ಆಕಾಶ, ಈ ಭೂಮಿಯನ್ನು ಸೃಷ್ಟಿಸಿದ್ದು. ಕಾಲದಿಂದಲೇ ಸೂರ್ಯ ಬೆಳಕು, ಶಾಖ ನೀಡುವುದು. ಕಾಲಕ್ಕೆ ತಕ್ಕಂತೆ ಗಾಳಿ ಬೀಸುತ್ತದೆ, ಕಾಲಕ್ಕೆ ತಕ್ಕಂತೆ ಭೂಮಿ ಸುತ್ತುತ್ತದೆ. ಕಾಲವೇ ಅಂತಿಮ ಶಕ್ತಿ. ಕಾಲವು ಜನನ, ಮರಣ ಮತ್ತು ಬದಲಾವಣೆ ಸೇರಿದಂತೆ ಎಲ್ಲವನ್ನೂ ಆಳುತ್ತದೆ ಮತ್ತು ಯಾವುದೂ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏನು ನಡೆದಿದೆ ಮತ್ತು ಏನಾಗಲಿದೆ ಎಂಬುದು ಕಾಲದಲ್ಲೇ ಸ್ಥಾಪಿತವಾಗಿದೆ. ಕಾಲ ಚಕ್ರವನ್ನು ಯಾರಿಂದಲೂ ನಿಯಂತ್ರಿಸಲಾಗುವುದಿಲ್ಲ. ಯಾರಿಂದಲೂ ತಡೆಯಲಾಗುವುದಿಲ್ಲ. ಕಾಲವೇ ಸರ್ವಾಧಾರ… ಎಲ್ಲದರ ಮೇಲೆ ಅಂತಿಮ ನಿಯಂತ್ರಣ ಮತ್ತು ಪ್ರಭಾವವನ್ನು ಹೊಂದಿದೆ… ಘಟನೆಗಳು ಅಥವಾ ಸಂದರ್ಭಗಳನ್ನು ನಿಯಂತ್ರಿಸಲು ಮನುಷ್ಯ ಪ್ರಯತ್ನಿಸಬಹುದು, ಆದರೆ ಅಂತಿಮವಾಗಿ ಘಟನೆಗಳ ಹಾದಿಯನ್ನು ಮತ್ತು ಎಲ್ಲದರ ಏರಿಕೆ ಮತ್ತು ಪತನವನ್ನು ಕಾಲವೇ ನಿರ್ದೇಶಿಸುತ್ತದೆ!!!

ಹಾಗಾದರೆ ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆಯೇ?

ಜಗದ ಆಟಕ್ಕೆ ಕಾಲವೇ ಸಾಕ್ಷಿ ಎನ್ನುವ ಉಪಮೆ ಜಗತ್ತನ್ನು ಕಾಲಾಧೀನವಾಗಿಸುವ ಹಿನ್ನೆಲೆಯಲ್ಲಿ ಹುಟ್ಟಿಕೊಂಡದ್ದು. ನಿಜಕ್ಕೂ ಭೌತಿಕ ವಸ್ತು ಜಗತ್ತು ಕಾಲಾಧೀನವೇ? ಅಥವಾ ಕ್ರಿಯಾಧೀನವೇ? ಸನಾತನಿಗಳು ‘ಕಾಲ ಎಲ್ಲವನ್ನೂ ಬದಲಾಯಿಸುತ್ತದೆ’ ಎನ್ನುತ್ತಾರೆ. ಬುದ್ಧಗುರುವು ‘ಬದಲಾವಣೆಯೇ ಈ ಜಗದ ನಿಯಮ’ ಎನ್ನುತ್ತಾರೆ.

ಕಾಲ ಕೇವಲ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯವಲ್ಲಾ. ‘ಕಾಲ ಎಂದರೇನು?’ ಎಂಬ ಜಿಜ್ಞಾಸೆಗೆ ಉತ್ತರಿಸಲು ತಮಗೆ ಮಾತ್ರ ಹಕ್ಕಿದೆ ಎಂದು ಭೌತವಿಜ್ಞಾನಿಗಳು ಭಾವಿಸಿದ್ದರೂ ಜಗತ್ತಿನಾದ್ಯಂತ ಅನೇಕ ಚಿಂತಕರು, ತತ್ವಜ್ಞಾನಿಗಳು, ಮನಃಶಾಸ್ತ್ರಜ್ಞರು, ದಾರ್ಶನಿಕರು ಇದನ್ನು ಆಳವಾಗಿ ಪರಿಶೀಲಿಸಲು ಪ್ರಯತ್ನಿಸಿದ್ದಾರೆ. ಪುರಾತನ ಕಾಲದಿಂದ ಆರ್ವಾಚಿನದವರೆಗೂ ವಿಶ್ವ ಮತ್ತು ಭಾರತದ ತತ್ವಜ್ಞಾನಿಗಳು ಕಾಲ ಮತ್ತು ಕ್ರಿಯೆಯ ಬಗೆಗೆ ಅತ್ಯಂತ ವಿಭಿನ್ನವಾಗಿ ಹಾಗೂ ವಿಸ್ತಾರವಾಗಿ ವ್ಯಾಖ್ಯಾನಿಸಿದ್ದಾರೆ. ಕಾಲಕ್ಕೆ ಒಂದು ಸ್ವತಂತ್ರವಾದ ಅಸ್ತಿತ್ವ ಇದೆಯೇ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಅನೇಕ ತತ್ವಜ್ಞಾನಿಗಳು ತಮ್ಮದೇ ಆದ ಸೈದ್ಧಾಂತಿಕ ಮತ್ತು ತಾತ್ವಿಕ ಸ್ವರೂಪದ ತರ್ಕಗಳನ್ನು ಮಂಡಿಸಿದ್ದಾರೆ. ಐಸಾಕ್ ನ್ಯೂಟನ್, ಟಿಮ್ ಮಾಡ್ಲಿನ್ ನಂತಹ ವಿಜ್ಞಾನಿಗಳು, ಪ್ಲೇಟೋ ಹಾಗೂ ವೈದಿಕ ಸಾಹಿತ್ಯವೆನಿಸಿದ ವೇದಗಳು ಕಾಲಕ್ಕೆ ಸ್ವತಂತ್ರ ಅಸ್ತಿತ್ವವಿದೆ ಎಂದು ಹೇಳುತ್ತವೆ. ಅರಿಸ್ಟಾಟಲ್, ಸೇಂಟ್ ಆಗಸ್ಟಿನ್, ಕಾಂಟ್, ಆಲ್ಬರ್ಟ್ ಐನಸ್ಟೈನ್, ಮ್ಯಾಕ್ ಟ್ಯಾಗರ್ಟ್, ಮುಂತಾದವರು ಕಾಲಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ, ಅದು ಮನಸ್ಸಿನ ಸೃಷ್ಟಿಯಾಗಿದ್ದು ಅದೊಂದು ಬದಲಾವಣೆಯ ಅಳತೆಯ ಪ್ರಮಾಣವೆಂದಿದ್ದಾರೆ.

ಕಾಲ ಒಂದು ಶಾಸ್ತ್ರೀಯ ಪ್ರಮಾಣ:

ಪ್ರಪಂಚದಾದ್ಯಂತ ಇತಿಹಾಸದುದ್ದಕ್ಕೂ ಆಯಾ ಜನಾಂಗಗಳ ನಂಬಿಕೆಗಳೊಂದಿಗೆ ಕಾಲವೂ ಸೇರಿಕೊಂಡಿರುವುದರಿಂದ ಅದನ್ನು ‘ಶಾಸ್ತ್ರೀಯ ಪ್ರಮಾಣ’ವೆಂದು ಕರೆಯಲಾಗುತ್ತಿದೆ. ಹೇಗೆಂದರೆ ಕಾಲದ ಬಳಕೆಯನ್ನು ಮನುಷ್ಯ ಬಹಳ ಹಿಂದೆಯೇ ಕಂಡುಕೊಂಡಿದ್ದಾನೆ. ಚಂದ್ರನ ಸುತ್ತುಗಳನ್ನು ಆಧರಿಸಿ ಕ್ರಿ.ಪೂ 3100 ರಲ್ಲೇ ಈಜಿಪ್ಟಿನವರು ಕ್ಯಾಲೆಂಡರ್ ತಯಾರಿಸಿದ್ದರೆ, ಬ್ಯಾಬಿಲೋನಿಯನ್ನರು ವರ್ಷವನ್ನು 12 ಸಮಾನ ಭಾಗಗಳಾಗಿ ಮತ್ತು ದಿನವನ್ನು 24 ಗಂಟೆಗಳಾಗಿ ಕ್ರಿ.ಪೂ 2000ದಲ್ಲೇ ವಿಂಗಡಿಸಿದ್ದರು. ಮಧ್ಯ ಅಮೆರಿಕದ ಮಾಯನ್ನರು 260 ದಿನ ಮತ್ತು 365 ದಿನಗಳ ಕ್ಯಾಲೆಂಡರ್‌ಗಳನ್ನು ಮಾಡಲು ಸೂರ್ಯ, ಚಂದ್ರರನ್ನು ಮಾತ್ರವಲ್ಲದೆ ಶುಕ್ರ ಗ್ರಹವನ್ನೂ ಅವಲಂಬಿಸಿದ್ದರು. ಭೂಮಿಯ ಸುತ್ತ ಚಂದ್ರನ ಕಕ್ಷೆಯನ್ನು ಆಧರಿಸಿದ್ದು ಇಸ್ಲಾಮಿಕ್ ಕ್ಯಾಲೆಂಡರ್. ಅಲ್ಲದೆ ಆಯಾ ಪ್ರದೇಶದ, ಆಯಾ ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಬೇರೆ ಬೇರೆ ಸಮುದಾಯದವರು ಬೇರೆ ಬೇರೆ ದಿನವನ್ನು ವರ್ಷಾರಂಭವೆಂದು ಆಚರಿಸುತ್ತಾರೆ. ಉದಾಹರಣೆಗೆ ಹೆಚ್ಚಿನ ಮುಸ್ಲಿಮರು ಮೊಹರಂ ತಿಂಗಳ ಮೊದಲ ದಿನವನ್ನು ವರ್ಷದ ಆರಂಭದಿನವೆಂದು ನಂಬುತ್ತಾರೆ, ಯಹೂದಿಗಳದ್ದು ಸೆಪ್ಟೆಂಬರ್-ಅಕ್ಟೋಬರ್ ಬರುತ್ತದೆ. ಕ್ರಿಶ್ಚಿಯನ್ನರದು ಜನವರಿ 1ನೇ ತಾರೀಖು. ಪರ್ಷಿಯನ್ನರು ಝೋರೊಸ್ಟ್ರಿಯನ್ ಪದ್ಧತಿಗಳನ್ನು ಆಧರಿಸಿ, ಮಾರ್ಚ್ 21 ರಂದು ಹೊಸವರ್ಷ ಆಚರಿಸುತ್ತಾರೆ. ನಮ್ಮ ದೇಶದಲ್ಲೇ ಎಷ್ಟೊಂದು ಭಿನ್ನತೆ ಇದೆ ಎಂದರೆ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಯುಗಾದಿಯನ್ನು, ಗುಡಿ ಪಾಡ್ವವನ್ನು ಮಹಾರಾಷ್ಟ್ರದಲ್ಲಿ, ದೀಪಾವಳಿಯು ಗುಜರಾತಿ ಸಮುದಾಯಗಳಿಗೆ ಹೊಸ ವರ್ಷವಾಗಿದೆ. ಇವುಗಳಲ್ಲಿ ಇದೇ ಸತ್ಯವೆಂದು ಯಾವುದನ್ನೂ ಕಟ್ಟುನಿಟ್ಟಾಗಿ ಹೇಳಲಾಗದು. ಮನುಷ್ಯ ಅನುಸರಿಸಿಕೊಂಡು ಬಂದ ಈ ವ್ಯಾವಹಾರಿಕ ಕಾಲಪದ್ಧತಿಗಳನ್ನು ಗಮನಿಸಿದರೆ, ಕಾಲವು ಹೇಗೆ ಆಯಾ ಪ್ರದೇಶದ, ಆಯಾ ಜನಾಂಗಗಳ ಶಾಸ್ತ್ರೀಯ ಪ್ರಮಾಣವಾಗಿ ಬೆಳೆದುಬಂದಿದೆ ಎನ್ನುವುದು ಗೊತ್ತಾಗುತ್ತದೆ.

ಹಾಗಾದರೆ ಕಾಲಕ್ಕೆ ಸ್ವತಂತ್ರ ಅಸ್ತಿತ್ವವಿದೆಯೇ? ಅಥವಾ ಇಲ್ಲವೇ?

ಭಾರತದಲ್ಲಿ ಸಾಂಖ್ಯರಿಂದ ಹಿಡಿದು ಬೌದ್ಧರು, ಮಾಧ್ಯಮಿಕರು, ವೈಶೇಷಿಕರು, ಕಾಳಾಮುಖರು, ನಾಥರು, ಸಿದ್ಧರು, ಶರಣರು ತಮ್ಮ ತಮ್ಮ ರೀತಿಗಳಲ್ಲಿ ಕಾಲವನ್ನು ತರ್ಕಕ್ಕೀಡು ಮಾಡಿದ್ದಾರೆ ಮತ್ತು ಪ್ರಶ್ನಿಸಿದ್ದಾರೆ. ಬೌದ್ಧ ಮಾಧ್ಯಮಿಕ ತತ್ವಶಾಸ್ತ್ರದ ಮೂಲ ಆಚಾರ್ಯರಾದ ನಾಗಾರ್ಜುನರು ಕಾಲವನ್ನು ಕಠಿಣವಾದ ತರ್ಕಕ್ಕೀಡು ಮಾಡಿದ್ದು, ಇಂದಿಗೂ ಆಧುನಿಕ ತತ್ವಜ್ಞಾನಿಗಳು ಮಾತ್ರವಲ್ಲದೆ ಎಲ್ಲಾ ವಿದ್ವಾಂಸರು ಅವರ ತಾತ್ವಿಕ ನೋಟಗಳನ್ನು ವಿಶ್ಲೇಷಿಸುತ್ತಿರುವುದನ್ನು ನೋಡಿದರೆ ಅವುಗಳ ಗಹನತೆ ಗೊತ್ತಾಗುತ್ತದೆ. ಬುದ್ಧಗುರುವಿನ ತರುವಾಯ ಶ್ರೇಷ್ಠ ದಾರ್ಶನಿಕರೆಂದೇ ಹೆಸರಾದ ನಾಗಾರ್ಜುನರ ವಿಚಾರಗಳು ಬೌದ್ಧಧರ್ಮಕ್ಕೆ ಹೊಸ ವೈಜ್ಞಾನಿಕ ನೋಟ ಕೊಟ್ಟ ಗೌರವಕ್ಕೆ ಪಾತ್ರವಾಗಿವೆ. ತಮ್ಮ ಸಂಕೀರ್ಣವಾದ ತಾತ್ವಿಕ ಚರ್ಚೆಗಳ ಮೂಲಕ ವಾಸ್ತವದ ಸ್ವರೂಪ, ಶೂನ್ಯತೆಯ ಪರಿಕಲ್ಪನೆ ಮತ್ತು ಎಲ್ಲಾ ವಿದ್ಯಮಾನಗಳ ಪರಸ್ಪರ ಅವಲಂಬಿತ ಸ್ವರೂಪವನ್ನು ಅವರು ವಿಶ್ಲೇಷಿಸಿ, ಅನ್ವೇಷಿಸುವ ರೀತಿ ವಿಸ್ಮಯಕಾರಿಯಾಗಿದೆ.

ಬೌದ್ಧಧರ್ಮಕ್ಕೆ ಮತ್ತು ಭಾರತದ ತರ್ಕಶಾಸ್ತ್ರಕ್ಕೆ ನಾಗಾರ್ಜುನರ ಕೊಡುಗೆ ಅನನ್ಯವಾದುದು. ಅವರು ಕಾಲವನ್ನು ಕೇವಲ ಒಂದು ಭೌತಿಕ ಮತ್ತು ಮಾನಸಿಕ ಸಂಕಲ್ಪವಾಗಿ ಚರ್ಚಿಸದೆ ಶೂನ್ಯತೆಯ ತತ್ವದೊಂದಿಗೆ ಸಂಯೋಜಿಸಿ ಅದರ ಸಾಪೇಕ್ಷ ಸ್ವರೂಪವನ್ನು ಒತ್ತಿಹೇಳುತ್ತಾರೆ. ಕಾಲವನ್ನು ಸ್ವತಂತ್ರವಾಗಿ ಗುರುತಿಸಲಾಗದು, ಏಕೆಂದರೆ ಅದು ಯಾವಾಗಲೂ ಇತರ ಸಂಗತಿಗಳ ಮೇಲೆ- ವಸ್ತುಗಳು, ಚಲನೆ, ಘಟನೆಗಳು ಹಾಗೂ ಅವಸ್ಥೆಗಳ ಮೇಲೆ ಅವಲಂಬಿತವಾಗಿದೆ. ತಮ್ಮ ‘ಮೂಲಮಾಧ್ಯಮಿಕಕಾರಿಕಾ’ದ 19ನೇ ಅಧ್ಯಾಯ, ‘ಕಾಲಪರೀಕ್ಷೆ’ (ಕಾಲದ ಪರೀಕ್ಷೆ)ಯಲ್ಲಿ, ಕಾಲದ ಸ್ವಭಾವವನ್ನು ಶೂನ್ಯತಾವಾದದ ದೃಷ್ಟಿಯಿಂದ ವಿಶ್ಲೇಷಿಸುತ್ತಾರೆ. ಈ ಅಧ್ಯಾಯವು ಆರು ಶ್ಲೋಕಗಳನ್ನು ಒಳಗೊಂಡಿದ್ದು, ಕಾಲದ ಸ್ವತಂತ್ರ ಅಸ್ತಿತ್ವವನ್ನು ಪ್ರಶ್ನಿಸುತ್ತದೆ ಮತ್ತು ಅದರ ಸಾಪೇಕ್ಷತೆಯನ್ನು ತೋರಿಸುತ್ತದೆ. ಕಾಲವು ತಂತಾನೇ ಏನನ್ನೂ ಮಾಡಲಾರದು. ಏಕೆಂದರೆ ಅದಕ್ಕೆ ಸ್ವತಂತ್ರವಾದ ಅಸ್ತಿತ್ವವೇ ಇಲ್ಲ. ನಾಗಾರ್ಜುನರ ದೃಷ್ಟಿಯಲ್ಲಿ Absolute Time- ಶುದ್ಧ ಕಾಲ ಎನ್ನುವುದಕ್ಕೆ ಯಾವುದೇ ಅರ್ಥವಿಲ್ಲಾ. ಆದರೆ ಕಾಲ ಒಂದು ಸಾಂವೃತ್ತಿಕ (ವ್ಯಾವಹಾರಿಕ) ಸತ್ಯವಾಗಿದೆ ಎನ್ನುತ್ತಾರೆ.

ಏನು ಸಾಂವೃತ್ತಿಕ ಸತ್ಯವೆಂದರೆ?

ಕಾಲವನ್ನು ನಾಗಾರ್ಜುನರು ಸಾಂವೃತ್ತಿಕ ಸತ್ಯವೆಂದು ಕರೆದಿದ್ದಾರೆ. ಅಂದರೆ ವ್ಯವಹಾರದ ಜಗತ್ತಿನಲ್ಲಿ ಕಾಲವು ಒಂದು ಉಪಯುಕ್ತಕರ ಮನೋ ಸಂರಚನೆಯಾಗಿದೆ. ಸೂರ್ಯೋದಯ, ರಾತ್ರಿ, ಇತ್ಯಾದಿಗಳನ್ನು ಆಧರಿಸಿ ಕಾಲವನ್ನು ಅಳೆಯಲಾಗುತ್ತದೆ. ಇದು ವ್ಯಾವಹಾರಿಕವಾಗಿ ಮನುಷ್ಯ ಕುಲ ಕಾರ್ಯ ನಿರ್ವಹಿಸಲು ಸಹಾಯಕವಾಗಿದೆ. ಗಡಿಯಾರ, ಕ್ಯಾಲೆಂಡರ್ ಗಳು ದೈನಂದಿನ ಚಟುವಟಿಕೆಗಳಿಗಾಗಿ ನಮಗೆ ಬೇಕಾಗಬಹುದು. ನಿತ್ಯದ ಚಟುವಟಿಕೆಯಲ್ಲಿ ಸಮಯ ಪರಿಪಾಲನೆ ಮಾಡದೆ ಹೋದರೆ ನಮ್ಮ ದಿನಚರಿ ಅಸ್ತವ್ಯಸ್ತಗೊಳ್ಳಬಹುದು. ಯೋಜನೆಗಳೆಲ್ಲಾ ಅಯೋಮಯವಾಗಬಹುದು. ವೇಳೆಗೆ ಸರಿಯಾಗಿ ಪರೀಕ್ಷೆಗೆ ಹೋಗಲು, ಸರಿಯಾದ ಸಮಯಕ್ಕೆ ಬಿತ್ತನೆ ನಡೆಯಲು, ನಿಗದಿತ ಸಮಯದಲ್ಲಿ ಹಾಕಿಕೊಂಡ ಕೆಲಸ ಮುಗಿಸಲು, ಪರೀಕ್ಷೆಗೆ ಟೈಂಟೇಬಲ್ ಸಿದ್ಧಪಡಿಸಿಕೊಳ್ಳಲು, ಸೂರ್ಯೋದಯದ ಹೊತ್ತಿಗೆ ಏಳಲು, ಋತುಮಾನಕ್ಕೆ ತಕ್ಕ ಚಟುವಟಿಕೆ ನಡೆಸಲು, ಯೋಜನೆಗಳನ್ನು ರೂಪಿಸಿಕೊಳ್ಳಲು, ಸಮಯದ ಪರಿಜ್ಞಾನ ಸಹಾಯಕವಾಗುತ್ತದೆ. ನಾನು ಇಷ್ಟನೆಯ ತಾರೀಖಿನಲ್ಲಿ ಹುಟ್ಟಿದ್ದೇನೆ ಎನ್ನುವುದು ವ್ಯವಹಾರದ ಜಗತ್ತಿನಲ್ಲಿ ಉಪಯೋಗಕರ. ಇಂತಹ ಮಾಹಿತಿಗಳು ಯಾವುದೇ ಆಂತರಿಕ ಸಂಘರ್ಷ ಉಂಟುಮಾಡುವುದಿಲ್ಲ ಮತ್ತು ನಮ್ಮ ಸ್ವಾತಂತ್ರ್ಯಕ್ಕೆ ತೊಡಕಾಗುವುದಿಲ್ಲ. ಬಾಹ್ಯ ಬದುಕಿಗೆ ಕಾಲವನ್ನು ಒಂದು ಸಾಧನವಾಗಿ ಅಥವಾ ಟೂಲ್ ಆಗಿ ಬಳಸಿಕೊಳ್ಳಬಹುದು. ಆದರೆ ಕಾಲವನ್ನು ಒಂದು ಸರ್ವತಂತ್ರ ಸ್ವತಂತ್ರವೆಂದು ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅದು ಭೌತಿಕ ವಸ್ತುಗಳ ಕ್ರಿಯೆಯ ಮೇಲೆ ಅವಲಂಬಿತವಾಗಿದೆ. ಭೌತಿಕ ಕ್ರಿಯೆಯಿಲ್ಲದೆ ಕಾಲವನ್ನು ನಿರ್ಧರಿಸಲು ಯಾರಿಂದಲೂ ಸಾಧ್ಯವಿಲ್ಲಾ.

ನಾಗಾರ್ಜುನರು ಕಾಲವನ್ನು ತಮ್ಮ ಶೂನ್ಯವಾದದ ತತ್ವದೊಂದಿಗೆ ಸಂಯೋಜಿಸಿ ವಿಶ್ಲೇಷಿಸಿದ್ದಾರೆ. ಹೇಗೆಂದರೆ ಭೌತಿಕ ವಸ್ತುಗಳ ಜಗತ್ತಿಗೆ ಒಂದು ಸ್ಥಿರವಾದ ಅಸ್ತಿತ್ವ ಇಲ್ಲದಿರುವುದರಿಂದಾಗಿ ಅವುಗಳ ಅಸ್ತಿತ್ವ ಶೂನ್ಯವೆಂದೇ ಸಮರ್ಥಿಸುತ್ತಾರೆ. ಭೌತಿಕ ವಸ್ತುಗಳ ಅಸ್ತಿತ್ವವೇ ಶೂನ್ಯವಾಗಿರುವಾಗ ಕಾಲವೂ ಶೂನ್ಯವಾಗಿರಲೇ ಬೇಕಲ್ಲವೇ ಎಂಬುದು ಅವರ ಅಭಿಮತ. ಉದಾಹರಣೆಗೆ: ಮೊಳಕೆಯಲ್ಲಿ ಬೀಜ ಶೂನ್ಯವಾಗಿರುತ್ತದೆ, ಚಿಗುರಿನಲ್ಲಿ ಮೊಳಕೆ ಶೂನ್ಯವಾಗಿರುತ್ತದೆ, ಹೂವಿನಲ್ಲಿ ಮೊಗ್ಗು ಶೂನ್ಯವಾಗಿರುತ್ತದೆ, ಕಾಯಿಯಲ್ಲಿ ಹೂವು, ಹಣ್ಣಿನಲ್ಲಿ ಕಾಯಿ ಶೂನ್ಯವಾಗಿರುತ್ತದೆ… ಹೀಗೆ ಪ್ರತಿಯೊಂದು ಭೌತಿಕ ಅವಸ್ಥೆಗಳು ಶೂನ್ಯವಾಗುತ್ತಲೇ ಹೋಗುತ್ತವೆ… ಬಾಲಕಿಯಾಗಿದ್ದಾಗ ನನ್ನ ಮಗುವಿನ ಆವಸ್ಥೆ ಶೂನ್ಯವಾಯಿತು; ಯುವತಿಯಾದಾಗ ಬಾಲ್ಯದ ಆವಸ್ಥೆ ಶೂನ್ಯವಾಯಿತು; ಈಗ ಮಧ್ಯವಯಸ್ಕಳಾದಾಗ ಯೌವನದ ಆವಸ್ಥೆ ಶೂನ್ಯವಾಯಿತು… ಇದು ಕಣ್ಣ ಮುಂದಿನ ಸತ್ಯ… ಈ ಸರಣಿಯಲ್ಲಿ ಯಾವುದೇ ಒಂದು ಘಟಕಕ್ಕೆ ಸ್ಥಿರವಾದ ಮತ್ತು ಸ್ವತಂತ್ರವಾದ ಅಸ್ತಿತ್ವವಿರುವುದಿಲ್ಲ. ಒಂದಿರುವುದರಿಂದ ಮತ್ತೊಂದು ಉಂಟಾಗುತ್ತದೆ. ಆದರೆ ಭೌತಿಕ ಜಗತ್ತಿನೊಳಗಿರುವ ಇಂತಹ ಅನಂತ ಘಟಕಗಳ ಸಂಯೋಜನೆಯಲ್ಲಿ ಕಾಲವು ಒಂದು ನಿರ್ದಿಷ್ಟ ಘಟಕವಾಗಿಲ್ಲಾ. ಬೀಜ ಗಿಡವಾಗಿ ಹಣ್ಣಾಗುವ ತನಕ ನಾವು ಕಾಲವನ್ನು ಊಹಾತ್ಮಕವಾಗಿ ಊಹಿಸಿಕೊಳ್ಳುತ್ತೇವೆ ಅಷ್ಟೇ. ಕಾಲವನ್ನು ಹೀಗೆ ಊಹಿಸಿಕೊಳ್ಳುವಾಗ ಅದಕ್ಕೊಂದು ಆರಂಭ, ಮಧ್ಯ ಮತ್ತು ಅಂತ್ಯ ಬಿಂದುಗಳನ್ನು ಕಲ್ಪಿಸಿಕೊಳ್ಳುತ್ತೇವೆ. ಅನಂತ ಜಗತ್ತಿನ ಆಗುವಿಕೆಯ ಅಂತಃಪ್ರವಾಹ ಆದಿ-ಮಧ್ಯಂತ ರಹಿತವಾದದ್ದು, ಕಾಲಕ್ಕೆ ಅತೀತವಾದದ್ದು. ಆದ್ದರಿಂದ ಕಾಲವು ಶೂನ್ಯವಾಗಿದೆ ಎಂದು ವಿಶದೀಕರಿಸುತ್ತಾರೆ. ಇದು ನಾಗಾರ್ಜುನರ ‘ಕಾಲ ಪರೀಕ್ಷೆ’ಯಲ್ಲಿ ಬರುವ ಉಲ್ಲೇಖವಾಗಿದೆ.

ಪ್ರಮಾಣಗಳು:

ಪ್ರಮಾಣ ಎಂದರೆ ವಸ್ತುಗಳ ತೂಕ, ಉದ್ದ, ಗಾತ್ರ, ಸಾಂದ್ರತೆ, ಬಣ್ಣ ಇತ್ಯಾದಿಗಳನ್ನು ಅಳತೆಮಾಡುವ ಮಾಪನ. ಆದರೆ ವೈದಿಕ ತತ್ವಶಾಸ್ತ್ರದಲ್ಲಿ ಸಂಸ್ಕೃತದ ‘ಪ್ರಮಾಣ’ ಎಂಬ ಪದಕ್ಕೆ, ‘ಪುರಾವೆ’ ಅಥವಾ ‘ಜ್ಞಾನದ ಮೂಲ’ ಎಂಬರ್ಥವಿದೆ. ಪ್ರಮಾಣಗಳನ್ನು ತರ್ಕಶಾಸ್ತ್ರದ ದೆಸೆಯಿಂದ ಪ್ರತ್ಯಕ್ಷ ಪ್ರಮಾಣ ಮತ್ತು ಪರೋಕ್ಷ ಪ್ರಮಾಣ ಎಂದು ಎರಡು ಬಗೆಯಾಗಿ ವಿಂಗಡಿಸಲಾಗಿದೆ.

ಪ್ರತ್ಯಕ್ಷ ಪ್ರಮಾಣ: ನೇರ ಅನುಭವದಿಂದ ಪಡೆಯುವ ಜ್ಞಾನ. ಉದಾಹರಣೆ: ಬೆಂಕಿ ಉರಿಯುತ್ತಿದೆ. ಈ ಅನುಭವ ಒಬ್ಬ ವ್ಯಕ್ತಿಯ ಅನುಭವಕ್ಕೂ, ಇನ್ನೊಬ್ಬ ವ್ಯಕ್ತಿಯ ಅನುಭವಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲಾ. ಪ್ರತ್ಯಕ್ಷ ಪ್ರಮಾಣವು (direct knowledge) ಸಾಮಾನ್ಯವಾಗಿ ಸಾರ್ವತ್ರಿಕ ಅನುಭವಕ್ಕೆ ದಕ್ಕುವಂತಹುದ್ದಾಗಿರುತ್ತದೆ.
ಪರೋಕ್ಷ ಪ್ರಮಾಣ: ತರ್ಕ ಅಥವಾ ಲಾಜಿಕ್ ಮೂಲಕ ಪೂರ್ವ ಅನುಭವ ಅಥವಾ ನೆನಪಿನ ಸಂಚಯದ ಮೂಲಕ ತಿಳಿಯಲ್ಪಡುವ ಜ್ಞಾನದಿಂದ ಮಾಡುವ ಊಹೆಯನ್ನು ಪರೋಕ್ಷ ಪ್ರಮಾಣ (indirect knowledge) ಎನ್ನುತ್ತೇವೆ.
ಉದಾಹರಣೆಗೆ: ಹೊಗೆಯನ್ನು ನೋಡಿದ ತಕ್ಷಣ ನಾವು ಅಲ್ಲಿ ಬೆಂಕಿ ಇದ್ದೇ ಇದೆ ಎಂದು ಊಹಿಸುತ್ತೇವೆ. ಯಥಾರ್ಥದಲ್ಲಿ ಹೊಗೆ ಇದ್ದಾಗ ಬೆಂಕಿ ಇರಲೇ ಬೇಕೆಂದೇನೂ ಇಲ್ಲ. ಆದರೆ ಹೊಗೆ ಕಂಡ ತಕ್ಷಣ ಬೆಂಕಿಯ ಊಹೆ ನಮ್ಮಲ್ಲಿ ನೆನಪಿನ ಸಂಚಯದಿಂದ ಹುಟ್ಟಿಕೊಂಡು ಬಿಡುತ್ತದೆ. ಅಲ್ಲಿ ಬೆಂಕಿ ಇರುವ ನಿರ್ಧಾರ ಸಂಕಲ್ಪ ಸಿದ್ಧವಾಗುತ್ತದೆ.
ಪ್ರತ್ಯಕ್ಷ ಪ್ರಮಾಣವನ್ನು ಒಪ್ಪುವವರು ಭೌತಿಕವಾದಿಗಳೆನಿಸಿದ್ದಾರೆ. ಪರೋಕ್ಷ ಪ್ರಮಾಣವನ್ನು ಒಪ್ಪುವವರು ಭಾವನಾವಾದಿಗಳೆನಿಸಿದ್ದಾರೆ. ಹಾಗಾಗಿ ಭಾರತದ ಅವೈದಿಕ ನೆಲೆಯ ತತ್ವಶಾಸ್ತ್ರಗಳು ಕಾಲವನ್ನು ಬಹುಶಃ ಪರೋಕ್ಷ ಪ್ರಮಾಣವೆಂದು ನಂಬುತ್ತವೆ. ಪರೋಕ್ಷ ಪ್ರಮಾಣ ಕಲ್ಪನಾ ಸಿದ್ಧವಾದದ್ದು ಮತ್ತು ಅದೊಂದು ಮನೋಸಂರಚನೆ ಮಾತ್ರ.

ವೈದಿಕ ತತ್ವಶಾಸ್ತ್ರದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ತತ್ವಗಳನ್ನು ಮನುಷ್ಯನಲ್ಲಿ ಒಪ್ಪಿತ ಸತ್ಯಗಳನ್ನಾಗಿಸಲು ಈ ಪ್ರಮಾಣಗಳನ್ನು ವಿಫುಲವಾಗಿ ಬಳಸಿಕೊಂಡಿರುವುದನ್ನು ಕಾಣಬಹುದು. ವೈದಿಕ ಸಾಹಿತ್ಯವು ಪ್ರತ್ಯಕ್ಷ, ಅನುಮಾನ, ಶಬ್ದ, ಉಪಮಾನ, ಅರ್ಥಾಪತ್ತಿ ಮತ್ತು ಅನುಪಲಬ್ಧಿ ಎಂಬ ಆರು ಪ್ರಮಾಣಗಳನ್ನು ಹೇಳುತ್ತದೆ. ಈ ಪ್ರಮಾಣಗಳ ವಿಷಯದಲ್ಲಿ ವೈದಿಕ ಸಾಹಿತ್ಯಕ್ಕೂ ಮತ್ತು ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವ ಮೀಮಾಂಸೆ, ಬೌದ್ಧ ಸಾಹಿತ್ಯಕ್ಕೂ ಒಮ್ಮತದ ಅಭಿಪ್ರಾಯವಿಲ್ಲಾ. ಸಾಮಾನ್ಯವಾಗಿ ವೈದಿಕರು ವಿಷದೀಕರಿಸುವ ಆರು ಪ್ರಮಾಣಗಳನ್ನು ನ್ಯಾಯ ವೈಶೇಷಿಕರು, ಬೌದ್ಧರು, ಸಾಂಖ್ಯರು ತೀವ್ರವಾದ ತರ್ಕಕ್ಕೊಡ್ಡಿ ನಿರಾಕರಿಸಿರುವುದನ್ನು ಕಾಣಬಹುದು.

ಬಹಳ ಮುಖ್ಯವಾದ ವ್ಯತ್ಯಾಸವೆಂದರೆ ವೈದಿಕ ಸಾಹಿತ್ಯದ ತರ್ಕ ಪರೋಕ್ಷ ಜ್ಞಾನಕ್ಕೆ ಹೆಚ್ಚು ಒತ್ತುಕೊಟ್ಟರೆ ಬೌದ್ಧ, ಜೈನ, ನ್ಯಾಯ, ಸಾಂಖ್ಯರು ಪ್ರತ್ಯಕ್ಷ ಅನುಭವಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ವೇದಾಂತ ಶಾಲೆಗಳು ಆರು ಪ್ರಮಾಣಗಳನ್ನು ಅತ್ಯಂತ ವಿಶ್ವಾಸಾರ್ಹವೆಂದು ಪರಿಗಣಿಸುತ್ತವೆ. ಭೌತವಾದಿಗಳೆನಿಸಿದ ಚಾರ್ವಾಕರು ಪ್ರತ್ಯಕ್ಷ ಪ್ರಮಾಣವನ್ನು ಹೊರತುಪಡಿಸಿ ಬೇರೆಲ್ಲಾ ಪ್ರಮಾಣಗಳನ್ನು ನಿರಾಕರಿಸುತ್ತಾರೆ. ವೈದಿಕ ಶಾಸ್ತ್ರಗಳು ಪ್ರತ್ಯಕ್ಷ, ಅನುಮಾನ, ಶಬ್ದ, ಉಪಮಾನ, ಅರ್ಥಾಪತ್ತಿ ಮತ್ತು ಅನುಪಲಬ್ಧಿ ಪ್ರಮಾಣಗಳ ಮೂಲಕವೇ ಭೌತಿಕ ಜಗತ್ತಿನ ಆಗುಹೋಗುಗಳನ್ನು ನಿರ್ಧರಿಸುತ್ತವೆ. ತದನಂತರ ಬರುವ ದಾರ್ಶನಿಕ ವಿವರಣೆಗಳು ಅಂದರೆ ಆತ್ಮ- ಪರಮಾತ್ಮ, ಧರ್ಮ-ಅಧರ್ಮಗಳು ಹಾಗೂ ಇಡೀ ಸಂಸ್ಕೃತ ಸಾಹಿತ್ಯವಾದ ಪುರಾಣ, ವೇದೋಪನಿಷತ್ತುಗಳಲ್ಲಿನ ವಿವರಣೆಗಳು ಈ ಮೇಲ್ಕಂಡ ಆರೂ ಪ್ರಮಾಣಗಳನ್ನು ಆಧರಿಸಿವೆ. ಮಂಡಕೋಪನಿಷತ್ ಕಾರಿಕಾ ಭಾಷ್ಯದಲ್ಲಿ ಆದಿಶಂಕರರು ಉಪನಿಷತ್ತಿನ ವಾಕ್ಯಗಳು ಹೇಗೆ ಈ ಮೇಲಿನ ಪ್ರಮಾಣಗಳಿಗೆ ಅಧೀನವಾಗಿವೆ ಎಂದು ತೋರಿಸಿದ್ದಾರೆ. ಈಗ ಆ ಪ್ರಮಾಣಗಳನ್ನು ಒಂದಿಷ್ಟು ಸರಳವಾಗಿ ವಿವರಿಸಿಕೊಳ್ಳೋಣ.

1. ಪ್ರತ್ಯಕ್ಷ ಪ್ರಮಾಣ: ಇಂದ್ರಿಯಗಳ ಮೂಲಕ ನೇರವಾಗಿ ತಿಳಿಯುವ ಜ್ಞಾನ. ಇದನ್ನು ಪ್ರತ್ಯಕ್ಷ ಜ್ಞಾನ ಎನ್ನುತ್ತಾರೆ. ಉದಾ: ಅಲ್ಲಿ ಬೆಂಕಿ ಉರಿಯುತ್ತಿದೆ. ಇಲ್ಲಿ ವೈದಿಕ ಶಾಸ್ತ್ರಗಳು ಇಂದ್ರಿಯಜ್ಞಾನ ತಾತ್ಕಾಲಿಕವೆಂದು ಅದರ ಇರುವಿಕೆ ಮತ್ತು ನಶಿಸುವಿಕೆಗೆ ಕಾರಣವಾದ ಶಕ್ತಿಯ ಕಡೆ ಚಿಂತಿಸುವ ಜ್ಞಾನವನ್ನು ಶ್ರೇಷ್ಠವೆನ್ನುತ್ತವೆ. ಅಂದರೆ ಒಂದು ಪ್ರತ್ಯಕ್ಷ ಜ್ಞಾನವನ್ನು ಪರೋಕ್ಷ ಜ್ಞಾನವನ್ನಾಗಿಸುವ ಆಪೇಕ್ಷೆ ಇಲ್ಲಿ ಪ್ರಧಾನವಾದದ್ದು.
2. ಅನುಮಾನ ಪ್ರಮಾಣ: ಪೂರ್ವ ನೆನಪಿನಿಂದ ಇಂದಿನದ್ದನ್ನು ಊಹಿಸುವ ಜ್ಞಾನ. ಉದಾಹರಣೆಗೆ ಹೊಗೆಯನ್ನು ಕಂಡು ಅಲ್ಲಿ ಬೆಂಕಿ ಇದ್ದೇ ಇರುತ್ತದೆಂದು ಊಹಿಸುವುದು. ಅಂದರೆ ಹೊಗೆ ಇದ್ದಲ್ಲಿ ಬೆಂಕಿ ಇದ್ದೇ ಇರುತ್ತದೆಂದು ನಂಬುವುದು. ಆದರೆ ಹೊಗೆ ಇರುವ ಕಡೆಯಲ್ಲೆಲ್ಲಾ ಬೆಂಕಿ ಇದ್ದೇ ಇರುತ್ತದೆಯೇ?
3. ಶಬ್ದ ಪ್ರಮಾಣ: ಆಪ್ತವಾದ ಅಥವಾ ವಿದ್ವಾಂಸರು ಹೇಳುವ ಶಾಸ್ತ್ರಜ್ಞಾನಾಧಾರಿತ ಮಾತುಗಳನ್ನು ಪ್ರಶ್ನಿಸದೇ ನಂಬುವುದು ಅಥವಾ ಸ್ತುತ್ಯಾರ್ಹವಾದವುಗಳೆಂದು ಭಾವಿಸುವುದು. ವೇದಾಂತಿಗಳಿಗೆ ಇದು ಪರಮ ಆಪ್ತ ಪ್ರಮಾಣ. ಶಬ್ದದಿಂದಲೇ ಬ್ರಹ್ಮಜ್ಞಾನ ಸಾಧ್ಯವೆನ್ನುತ್ತಾರೆ. ನಮ್ಮ ಶರಣರು ಶಬ್ದ ಪ್ರಮಾಣವನ್ನು ‘ಭಾಷಾ ಸೂತಕ’ ಎನ್ನುತ್ತಾರೆ. ಶಬ್ದ ಪ್ರಮಾಣಕ್ಕೆ ಆಧಾರ ಶ್ರೋತೃ. ವಚನ (ಮಾತು), ಅರ್ಥ ಇವೆಲ್ಲಾ ಸಹಪ್ರಮಾಣಗಳೆನಿಸಿವೆ. ಕಾಲವೂ ಒಂದು ಶಬ್ದ ಪ್ರಮಾಣವಾಗಿದೆ ಎನ್ನುವುದನ್ನು ನಾವು ಗಮನಿಸಬೇಕಿದೆ. ಏಕೆಂದರೆ ಕಾಲಕ್ಕೆ ಒಂದು ವಸ್ತು ನಿದರ್ಶನವಿಲ್ಲಾ.
4.ಉಪಮಾನ ಪ್ರಮಾಣ: ಹೆಸರಿಲ್ಲದ ಹೊಸ ವಸ್ತುವೊಂದನ್ನು ಪರಿಚಿತ ವಸ್ತುವಿನ ಹೋಲಿಕೆಯಿಂದ ತಿಳಿಯುವುದು.
ಉದಾಹರಣೆ ಜಿಂಕೆಯನ್ನು ನೋಡದವನು ಜಿಂಕೆ ಹೇಗಿದೆ ಎಂದು ಕೇಳಿದರೆ ಮೇಕೆಯಂತಿದೆ ಎಂದು ಉಪಮೆ ನೀಡುವುದು. ವೈದಿಕ ಸಾಹಿತ್ಯದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಅವರ ಗುಣವಿಶೇಷಗಳನ್ನು ಉಪಮೆಗಳ ಮೂಲಕ ಕೊಡಲಾಯಿತು.
5. ಅರ್ಥಾಪತ್ತಿ: ಯಾವುದೇ ಅರ್ಥದ ಸಿದ್ಧಿಗೆ ಅರ್ಥಾಂತರದ ಕಲ್ಪನೆಯನ್ನು ಮಾಡುವುದು. ಈ ಪ್ರಮಾಣಕ್ಕೆ ಉದಾಹರಣೆಗಳು ಸಾಕಷ್ಟಿವೆ. ಇಂತಹ ಹೆಸರಿನ ಋಷಿ ಹತ್ತು ಸಾವಿರ ವರ್ಷ ಬದುಕಿದ್ದ, ಆ ಋಷಿ ಬರಿ ಗಾಳಿ ಸೇವಿಸಿಕೊಂಡೇ ಒಂದು ಸಾವಿರ ವರ್ಷ ಜೀವಿಸಿದ್ದ.
6. ಅನುಪಲಬ್ಧ: ಯಾವುದು ಇಂದ್ರಿಯಗಳಿಗೆ ಗೋಚರಿಸುವುದಿಲ್ಲವೋ ಅದರ ಅನುಪಸ್ಥಿತಿಯಿಂದ ಸತ್ಯವನ್ನು ಅರಿಯುವ ಜ್ಞಾನ. ನನ್ನ ನಿಲುವಂಗಿ ಕಾಣದಾಗಿದೆ ಎಂದು ಒಬ್ಬರು ಹೇಳಿದಾಗ, ನಿಲುವಂಗಿ ಈಗ ಇಲ್ಲಾ, ಆದರೆ ಮೊದಲು ಇತ್ತು ಎನ್ನುವ ಆಧಾರದಲ್ಲಿ ಈಗ ಇದ್ದೇ ಇದೆ ಎಂದು ತರ್ಕಿಸುವುದು.

ಪ್ರೀಯ ಓದುಗರೇ, ನಿಮಗೀಗ ಪ್ರಮಾಣಗಳ ಬಗ್ಗೆ ಗೊತ್ತಾಗಿರಬೇಕೆನಿಸುತ್ತದೆ. ಪ್ರತ್ಯಕ್ಷವಾದ ಭೌತಿಕ ಜಗತ್ತಿನ ಕ್ರಿಯಾಪ್ರಕ್ರಿಯಾಗಳನ್ನು ಇಟ್ಟುಕೊಂಡು ಅದರ ಹಿನ್ನೆಲೆಯಲ್ಲಿ ಮತ್ತೊಂದು ಮಾನದಂಡವನ್ನು ಊಹಿಸಿಕೊಳ್ಳುವ ಪ್ರಮಾಣ ಯಾವುದಿದೆಯೋ ಅದು ಪರೋಕ್ಷ ಪ್ರಮಾಣ. ಹಾಗಾಗಿ ಕಾಲವು ಒಂದು ಪರೋಕ್ಷ ಪ್ರಮಾಣವೆಂದು ನೆನಪಿರಲಿ. ಬೌದ್ಧ ಮಾಧ್ಯಮಿಕ ನಾಗಾರ್ಜುನರು ಈ ಕಾರಣದಿಂದಾಗಿಯೇ ಕಾಲವನ್ನು ಒಂದು ಸಾಂವೃತ್ತಿಕ ಸತ್ಯವನ್ನಾಗಿ ಮಾತ್ರ ಸ್ವೀಕರಿಸಿ, ಕಾಲಕ್ಕಿರುವ ಸ್ವತಂತ್ರ ಅಸ್ತಿತ್ವವನ್ನು ‘ಶೂನ್ಯತಾ’ ಎಂದು ಕರೆದರು.

ವೈದಿಕ ಸಾಹಿತ್ಯದ ಲೋಕಕಾರಣ ಜಿಜ್ಞಾಸೆಗಳು ಆರಂಭವಾಗಿದ್ದು ಕೂಡ ಪರೋಕ್ಷ ಪ್ರಮಾಣಗಳಿಂದಾಗಿಯೇ. ಸುತ್ತಲಿನ ಬೆಟ್ಟಗಳು, ಗುಡ್ಡಗಳು, ನದಿ, ಸರೋವರ, ಕಡಲು, ಕಣಿವೆ, ಹಳ್ಳಕೊಳ್ಳ, ಕಾಡು-ಮೇಡು, ಹೂವು- ಕಾಯಿ-ಹಣ್ಣು, ಪ್ರಾಣಿಗಳು-ಪಕ್ಷಿಗಳು, ಋತುಮಾನಗಳು, ಮಳೆ-ಬೆಳೆ… ಇವನ್ನೆಲ್ಲಾ ನೋಡುತ್ತಿದ್ದರೆ ಇದನ್ನು ಮಾಡಿದವನಾರು ಎನ್ನುವ ಅನುಮಾನ ಬರುತ್ತದೆ. ಅದೇ ರೀತಿ ನಮ್ಮ ದೇಹವನ್ನೇ ಅವಲೋಕಿಸಿದರೆ, ಹೃದಯ, ಶ್ವಾಸಕೋಶ, ಅನ್ನಾಂಗ, ಜಠರ, ರಕ್ತನಾಳಗಳು, ಕಿಡ್ನಿ, ನರವ್ಯೂಹಗಳು, ರಕ್ತ ಪರಿಚಲನೆ, ಮಿದುಳು… ಒಂದೊಂದೂ ಮತ್ತೊಂದಕ್ಕೆ ಪೂರಕವಾಗಿ ಎಷ್ಟು ಅದ್ಭುತವಾಗಿ, ಕ್ರಮಬದ್ಧವಾಗಿ ಕೆಲಸ ಮಾಡುತ್ತವೆ! ನಿಯಮಿತವಾದ ಅವುಗಳ ಕಾರ್ಯ ವೈಖರಿಯಿಂದಾಗಿ ದೇಹವನ್ನು ರಚಿಸಿದ ಒಂದು ಶಕ್ತಿ ಇರಲೇ ಬೇಕಲ್ಲಾ ಎನ್ನುವ ಅನುಮಾನಗಳು ಏಳುತ್ತವೆ… ಆ ಅನುಮಾನಕ್ಕೆ ಉತ್ತರವಾಗಿ ಬಂದದ್ದೇ ಪರಬ್ರಹ್ಮ ಕಲ್ಪನೆ. ಜಗತ್ತು ಮತ್ತು ಜೀವವನ್ನು ನೋಡಿ ಕಾಣದ ದೇವರನ್ನು ಊಹಿಸಿಕೊಂಡದ್ದು ಅನುಮಾನ ಪ್ರಮಾಣವೇ. ಜಗತ್ತಿದೆ ನಿಜ, ದೇಹವಿದೆ ನಿಜ- ಇದು ಪ್ರತ್ಯಕ್ಷ ಪ್ರಮಾಣ. ಈ ಜಗತ್ತನ್ನು ಮಾಡಿದವನೊಬ್ಬನಿದ್ದಾನೆ, ಈ ದೇಹವನ್ನು ನಿರ್ವಹಿಸುವ ಶಕ್ತಿಯೊಂದಿದೆ ಅದು ಪರಮಾತ್ಮ ಎಂದು ಅಂದುಕೊಳ್ಳುವುದು ಊಹೆ. ಯಾಕೆಂದರೆ ಅದು ಸಾರ್ವತ್ರಿಕ ಅನುಭವವಲ್ಲ. ಭೌತಿಕ ವಸ್ತುಗಳ ಕ್ರಿಯೆ ಎನ್ನುವುದು ಸಾರ್ವತ್ರಿಕ ಅನುಭವ. ‘ನೋಡಿ ಇಲ್ಲಿ ಬೆಂಕಿ ಉರಿಯುತ್ತಿದೆ’ ಎಂದರೆ ಅದು ಎಲ್ಲರಿಗೂ ಕಾಣುವ ಸತ್ಯವಾದ್ದರಿಂದ ಎಲ್ಲರೂ ಹೌದೆಂದು ಒಪ್ಪುತ್ತಾರೆ. ಯಾರೂ, ‘ಇಲ್ಲಾ, ಮಳೆ ಬೀಳುತ್ತಿದೆ’ ಎನ್ನುವುದಿಲ್ಲಾ. ಅದೇ ಈ ಜಗತ್ತಿನ ಹಿಂದೆ ದೇವರಿದ್ದಾನೆ, ಮೇಲೆ ಕುಳಿತು ಒಬ್ಬೊಬ್ಬರನ್ನೂ ಸೃಷ್ಟಿಸಿ ಭೂಮಿಗೆ ಬಿಡುತ್ತಾನೆ ಎಂದರೆ ಎಲ್ಲರೂ ಒಪ್ಪಲಾಗದು. ಒಪ್ಪಿದವರಲ್ಲಿ ಕೆಲವರು ಹೌದು ಅದು ‘ಅಲ್ಲಾ’ ಅಂದರೆ, ಕೆಲವರು ‘ಗಾಡ್’ ಎನ್ನುತ್ತಾರೆ, ಯಹೂದಿಗಳು ‘ಹಾಶೆಮ್’ ಎಂದರೆ, ವೈದಿಕರು ‘ಪರಬ್ರಹ್ಮ’ ಎನ್ನುತ್ತಾರೆ, ಮತ್ತೂ ಕೆಲವರು ‘ಯಾರೂ ಇಲ್ಲ’ ಎನ್ನುತ್ತಾರೆ… ಇವೆಲ್ಲವೂ ಅನುಮಾನ ಪ್ರಮಾಣಗಳೇ. ಪ್ರತ್ಯಕ್ಷ ಪ್ರಮಾಣಗಳಲ್ಲಾ.

ಆಗಮ-ಸಂಚಿತ-ಪ್ರಾರಬ್ಧ

ಶರಣ ಸಾಹಿತ್ಯದಲ್ಲಿ ಈ ಮೂರೂ ಸೇರಿ ಕರ್ಮತ್ರಯಗಳೆನಿಸಿಕೊಂಡಿವೆ. ಈ ಕರ್ಮತ್ರಯಗಳಿಂದ ಬಿಡಿಸಿಕೊಳ್ಳುವುದು ಅವರಲ್ಲಿ ‘ಅದ್ವಯ ಯೋಗ’ ಎನಿಸಿದೆ.
ಆಗಮ ಅಂದರೆ ಹದಿನೆಂಟು ಪುರಾಣಗಳು, ಆರು ಶಾಸ್ತ್ರಗಳು, ನಾಲ್ಕು ವೇದಗಳು, 108 ಉಪನಿಷತ್ತುಗಳು ಮತ್ತು ಬಾದರಾಯಣನ ಬ್ರಹ್ಮಸೂತ್ರಗಳು. ಇವೆಲ್ಲಗಳೂ ಸೇರಿ ಆಗಮ ಎನಿಸಿಕೊಳ್ಳುತ್ತದೆ. ಇವುಗಳನ್ನು ಓದಿದರೆ ಅನೇಕ ಅನುಮಾನಗಳು, ಗೊಂದಲಗಳು ಸೃಷ್ಟಿಯಾಗುತ್ತವೆ. ಯಾವುದಕ್ಕೂ ಸ್ಪಷ್ಟತೆ ಸಿಗುವುದಿಲ್ಲಾ… ಉದಾಹರಣೆ ಪಾಯಸ ಕುಡಿದರೆ ಹೆಣ್ಣುಮಗಳು ಬಸಿರೆ ಆಗುತ್ತಾರೆಯೇ? ಹೆಗ್ಗಣದ ಮೇಲೆ ಗಣಪತಿ ಸವಾರಿ ಮಾಡಲಿಕ್ಕೆ ಸಾಧ್ಯವಾ? ಭೂಮಿಯ ಉಪಗ್ರಹವಾದ ಚಂದ್ರನಿಗೆ ಶಾಪ ಕೊಡಲಿಕ್ಕೆ ಆದೀತೆ?… ಒಂದು ಗ್ರಂಥದಲ್ಲಿ ಭಕ್ತಿಯಿಂದ ಮೋಕ್ಷ; ಮತ್ತೊಂದರಲ್ಲಿ ಭಕ್ತಿಯಿಂದ ಮೋಕ್ಷವಿಲ್ಲ, ಜ್ಞಾನದಿಂದ ಮೋಕ್ಷ; ಇನ್ನೊಂದು ಗ್ರಂಥದಲ್ಲಿ ಜ್ಞಾನದಿಂದ ಮೋಕ್ಷವಿಲ್ಲ; ಒಂದು ಗ್ರಂಥದಲ್ಲಿ ಪರಬ್ರಹ್ಮನನ್ನು ಅನುಸಂಧಿಸಬಹುದು; ಇನ್ನೊಂದು ಗ್ರಂಥದಲ್ಲಿ ಪರಬ್ರಹ್ಮ ಇಂದ್ರಿಯಗಳಿಗೆ ಅಗೋಚರ; ಮತ್ತೊಂದು ಗ್ರಂಥದಲ್ಲಿ ಯಾವುದ್ಯಾವುದು ಇಂದ್ರಿಯಗಳಿಗೆ ಗೋಚರವಾಗುತ್ತದೋ ಅದೆಲ್ಲವೂ ಮಿಥ್ಯೆ ಅಥವಾ ಮಾಯೆ; ಪರಬ್ರಹ್ಮವು ಸ್ವಪ್ನ, ಜಾಗ್ರತಾ, ಸುಷುಪ್ತಿ ಇತ್ಯಾದಿ ಯಾವೆಲ್ಲಾ ಅವಸ್ಥೆಗಳಿಗೂ ಅತೀತವಾದದ್ದು ಎಂದು ಹೇಳುತ್ತಾ ಅಸಂಖ್ಯಾತವಾದ ಶಾಬ್ದಿಕ ಗೊಂದಲಗಳನ್ನಷ್ಟೇ ನಮ್ಮಲ್ಲಿ ಉಂಟುಮಾಡುತ್ತದೆ. ಅಂದರೆ ಪ್ರತ್ಯಕ್ಷ ಜಗತ್ತನ್ನು ನಿರಾಕರಣೆ ಮಾಡಿ, ಮನಸ್ಸಿನಲ್ಲಿ ಅನೇಕ ಅನುಮಾನಗಳನ್ನು, ಗೊಂದಲಗಳನ್ನು, ವೈರುಧ್ಯಗಳನ್ನು ಸೃಷ್ಟಿಮಾಡಲಷ್ಟೇ ಸಫಲವಾಗಿವೆ. ಪರಬ್ರಹ್ಮದ ಕುರಿತಾಗಿರುವ ಶಬ್ದ ಪ್ರಮಾಣ ಶಾಬ್ದಿಕ ಗೊಂದಲಗಳಲ್ಲಿ ಮುಕ್ತಾಯವಾಗುತ್ತದೆ. ಒಂದೊಂದು ಶಬ್ದಕ್ಕೂ ಅನೇಕ ಉಪಮೆಗಳನ್ನು ಕೊಟ್ಟು ವಸ್ತುಸ್ಥಿತಿಯ ವಿವೇಕವನ್ನೇ ನಾಶಮಾಡಿಬಿಡುತ್ತದೆ. ಒಂದು ಪದಕ್ಕೆ ಹಲವಾರು ವೈರುಧ್ಯಾತ್ಮಕ ಅರ್ಥಗಳನ್ನು ನೀಡಿ ನಮ್ಮನ್ನು ದ್ವಂದ್ವಕ್ಕೆ ಈಡುಮಾಡುತ್ತದೆ. ಇಲ್ಲದ್ದನ್ನು ಇದೇ ಎಂದೂ, ಇರುವುದನ್ನು ಇಲ್ಲೆಂತಲೂ ಹೇಳಿ ಭ್ರಮನಿರಸನಕ್ಕೆ ಒಳಗುಮಾಡುತ್ತದೆ.

ವೇದಂಗಳೆಂಬವು ಬ್ರಹ್ಮನ ಬೂತಾಟ.
ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ.
ಆಗಮಗಳೆಂಬವು ಋಷಿಯ ಮರುಳಾಟ.
ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ (ಒದ್ದಾಟ
ಇಂತು ಇವನು ಅರಿದವರ ನೇತಿಗಳೆದು
ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು!

-ಅಲ್ಲಮಪ್ರಭುದೇವರು
(ನಿಜದಲ್ಲಿ ನಿಂದಿಪ್ಪಾತನೆ ನುಡಿಗಟ್ಟನ್ನು ಗಮನಿಸಿ)

ಈ ಆಗಮಗಳು ಭಾರತೀಯ ಸಮಾಜದ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ನೋಡೋಣ.

ಸಂಚಿತ: ಪಾರಂಪರಿಕ ನೆನಪುಗಳಲ್ಲಿ ಸಂಗ್ರಹಗೊಂಡ ವಿಷಯಗಳ ರಾಶಿ. ಇವು ಪರ್ವತದಷ್ಟು ಎತ್ತರ, ಸಮುದ್ರದಷ್ಟು ಅಗಲ. ಇವುಗಳನ್ನು ನಾವು ಎಂದಿಗೂ ವಿವೇಚನೆಗೆ ಒಳಪಡಿಸುವುದಿಲ್ಲಾ. ತಲತಲಾಂತರದಿಂದ ಅವು ನಮಗೆ ಬಳುವಳಿಯಾಗಿ ಬಂದಿರುತ್ತವೆ. ಇವು ನಾವು ಬಯಸದೇ ಬಂದ ಬಳುವಳಿಗಳು! ನಮ್ಮ ಅಮ್ಮ, ಅಪ್ಪ, ತಾತ, ಮುತ್ತಾತಂದಿರು ಯಾವ ಯಾವ ನಂಬಿಕೆಗಳನ್ನು ಮತ್ತು ಭಾವನೆಗಳನ್ನು ಎಡಬಿಡದೆ ವಿಶ್ವಾಸವನ್ನಿಟ್ಟು ಪಾಲಿಸುತ್ತಿದ್ದರೋ ನಾವೂ ಅವುಗಳನ್ನು ಹಾಗೇ ನಂಬಿ ಮುಂದುವರಿಸಿಕೊಂಡು ಹೋಗುತ್ತೇವೆ. ಈ ಅಂತಃಸ್ವಭಾವಗಳಿಂದ ಪ್ರೇರೇಪಿತಗೊಂಡ ಕರ್ಮ ಅಥವಾ ಕ್ರಿಯೆಗಳನ್ನು ‘ಸಂಚಿತ’ ಎನ್ನಲಾಗುತ್ತದೆ.

ಇಲ್ಲಿ ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದದ್ದೇನೆಂದರೆ ಆಗಮದ ಅನುಶಾಸನಗಳಿಂದ ಪ್ರೇರೇಪಣೆಗೊಂಡು ನಮ್ಮ ಮನೋಭೂಮಿಕೆಯಲ್ಲಿ ಕರ್ಮ ಮತ್ತು ಕ್ರಿಯೆಗಳಾಗಿ ಅವು ಬದಲಾಗಿರುತ್ತವೆ. ರಾಮಾಯಣ, ಮಹಾಭಾರತ, ವೇದ ಉಪನಿಷತ್ತುಗಳನ್ನು ಭಾರತೀಯರು ಸಾಮಾನ್ಯವಾಗಿ ಪೂರ್ಣವಾಗಿ ಓದಿಕೊಂಡಿರುವುದಿಲ್ಲ. ಅಧ್ಯಯನ ಎಲ್ಲರಲ್ಲೂ ಸಾಧ್ಯವೇ ಇಲ್ಲಾ. ಆದರೆ ಆಶ್ಚರ್ಯವೆಂದರೆ ಈ ಆಗಮಗಳು ಆದೇಶಿಸಿರುವ ಶಾಸನವನ್ನು ಒಪ್ಪಿ ಎಲ್ಲರೂ ಅದಕ್ಕೆ ಬದ್ಧರಾಗಿರುತ್ತಾರೆ. ಇಂತಹ ಸಂಗತಿಗಳಿಗೆ ಸಾವಿರಾರು ಉದಾಹರಣೆಗಳನ್ನು ಹೇಳಬಹುದು. ರಾಮಾಯಣದಲ್ಲಿ ರಾಮ ವೈಷ್ಣವ; ರಾವಣನು ಶೈವ. ಹಾಗೆಯೇ ರಾಮ ದೈವಾಂಶ ಸಂಭೂತ, ಅವತಾರಪುರುಷ ಹಾಗೂ ಪುರುಷೋತ್ತಮ! ಅದೇ ರಾವಣನು ದುಷ್ಟ, ರಾಮನು ಶಿಷ್ಟ!!! ಅವು ನೈಜ ಸಮಾಜದಲ್ಲಿ ಎಂತಹ ಎಮೋಷನಲ್ ಗಳನ್ನು ಮತ್ತು ಅನುಚಿತ ಕ್ರಿಯೆಗಳನ್ನು ಸೃಷ್ಟಿಸಿರುತ್ತವೆ ಎಂದರೆ ವೈಷ್ಣವರು ಇಂದಿಗೂ ಶೈವರನ್ನು ತುಚ್ಛವಾಗಿ ಕಾಣುತ್ತಾರೆ. ಈಗಲೂ ಮಾಧ್ವ ಬ್ರಾಹ್ಮಣರು ಶೈವರಾದ ಶಂಕರಾಚಾರ್ಯರನ್ನು ಜರಿಯುತ್ತಲೇ ಇರುತ್ತಾರೆ. ಇದೇ ಮಾಧ್ವರಲ್ಲಿ ಶಂಕರರಿಗಿಂತಲೂ ಆತ್ಯಂತಿಕವಾಗಿ ಶೂದ್ರ ಸಮಾಜದ ಎಲ್ಲಾ ಜಾತಿಯ ಜನಾಂಗಗಳ ಬಗ್ಗೆ ಅಸಹನೆ ಇರುತ್ತದೆ. ಇದಕ್ಕೆ ಶೈವರೂ ಹೊರತಾಗಿಲ್ಲಾ. ಶೈವರು ಕೂಡ ವೈಷ್ಣವರನ್ನು ‘ಪಂಚರಾತ್ರರು’ ಎಂದು ಹೀಯಾಳಿಸುತ್ತಾರೆ. ಇಂತಹ ಅಸಂಖ್ಯಾತ ವಿಷಯಗಳು ಸಾಮಾಜಿಕ ಜೀವನದ ಮೇಲೆ ಎಷ್ಟೊಂದು ಗಾಢವಾದ ಪ್ರಭಾವವನ್ನಿಟ್ಟುಕೊಂಡಿರುತ್ತವೆಂದರೆ ಪ್ರತಿ ಸಾಮಾನ್ಯನಲ್ಲೂ ತಮ್ಮತಮ್ಮ ಧರ್ಮ, ದೇವರು, ಜಾತಿ, ಕುಲ, ಗೋತ್ರ, ಬಣ್ಣ, ಭಾಷೆ ತಮಗೆ ಹಿತವೆನಿಸುತ್ತವೆ. ತಮ್ಮ ಎದುರಿನವರ ಧರ್ಮ, ದೇವರು, ಜಾತಿ, ಕುಲ, ಗೋತ್ರ, ಬಣ್ಣ, ಭಾಷೆ ಇತ್ಯಾದಿಗಳು ಅಸಹ್ಯವೆನಿಸಿಬಿಡುತ್ತವೆ. ಎಷ್ಟೇ ವಿದ್ಯಾವಂತರಾಗಿದ್ದರೂ, ತತ್ವಜ್ಞಾನಿಗಳಾಗಿದ್ದರೂ ಈ ವಿಷಯಗಳು ಬಂದಾಗ ಭಾರತೀಯ ಮನಸ್ತತ್ವ ಕೆರಳಿಕೆಯ ಮನೋಭಾವವನ್ನು ತೋರ್ಪಡಿಸುತ್ತದೆ. ತನ್ನ ಧರ್ಮ, ದೇವರು, ಜಾತಿ, ಕುಲ, ಬಣ್ಣ, ಭಾಷೆ ಕುರಿತು ಯಾರಾದರೂ ಕೀಳಾಗಿ ಮಾತಾಡಿದರೆ ಎಲ್ಲರೂ ಭಾವನಾತ್ಮಕ ಪ್ರತಿಕ್ರಿಯೆಗೆ ಒಳಗಾಗಿ ಇವುಗಳಿಂದ ದ್ವೇಷ, ಅಸೂಯೆ, ಹಿಂಸೆ ಮುಂತಾದ ವಿಕೃತಿಗಳಿಗೆ ಒಳಗಾಗುತ್ತಾರೆ.

ಇಲ್ಲಿ ಬಹುಮುಖ್ಯವಾಗಿ ಆಗಮದ ಅನುಶಾಸನಗಳು ಮತ್ತೊಂದು ಸಂಚಿತ ಕರ್ಮಗಳಿಗೆ ಹೇಗೆ ಅಧೀನವಾಗಿವೆ ಎಂಬುದಕ್ಕೆ ಸಾವಿರಾರು ಪ್ರಸಂಗಗಳ ಮೂಲಕ ನಾವು ನಮ್ಮನ್ನು ವಿವೇಚಿಸಿಕೊಳ್ಳಬಹುದು. ಹಾಗೆ ಲೆಕ್ಕ ಹಾಕಿದರೆ ನಮ್ಮ ಭಾರತ ದೇಶದಲ್ಲಿ ನಾನೂರಕ್ಕೂ ಹೆಚ್ಚು ಧಾರ್ಮಿಕ ಪಂಥಗಳಿವೆ, 25 ಸಾವಿರಕ್ಕೂ ಹೆಚ್ಚು ಜಾತಿಗಳಿವೆ, 50ಕ್ಕೂ ಹೆಚ್ಚು ಭಾಷೆಗಳಿವೆ, 30ಕ್ಕೂ ಹೆಚ್ಚು ಬೇರೆಬೇರೆ ಬಣ್ಣದ ಜನರಿದ್ದಾರೆ. ಹೀಗೆ ಗಣಿತವೂ ನಿಬ್ಬೆರಗಾಗುವಷ್ಟು ಪ್ರತ್ಯೇಕ ಸಮಾಜಗಳನ್ನಾಗಿ ವಿಘಟಿಸಲು, ಸೀಳಿ ಚೂರುಚೂರು ಮಾಡಲು ಎಲ್ಲಾ ಆಗಮ ಶಾಸ್ತ್ರಗಳು ಕುಮ್ಮಕ್ಕು ನೀಡುತ್ತವೆ. ಅಷ್ಟೇ ಅಲ್ಲಾ, ನಮ್ಮ ನಿಜ ಜೀವನದ ಬದುಕಿನಲ್ಲಿ ಅವುಗಳೇ ನಮಗೆ ಯಾವುದು ಪ್ರಿಯ, ಯಾವುದು ಅಪ್ರಿಯ, ಯಾರು ಹಿತ, ಯಾರು ಅಹಿತ, ಯಾರು ಯಾರಿಗೆ ಪ್ರೀತಿ ಪಾತ್ರರು, ಯಾರು ಅಪ್ರಿಯರು ಎಂಬುದನ್ನು ನಿರ್ಧರಿಸಿಬಿಡುತ್ತವೆ. ಹೀಗೆ ಆಗಮ ಸಂಚಿತಗಳ ಪ್ರಭಾವ ಮನಸ್ಸಿನಲ್ಲಿ ತುಂಬಿ ಹೋಗಿರುತ್ತದೆ. ಆದರೆ ಇವುಗಳನ್ನು ನಾವು ಒಂದು ಕ್ಷಣವಾದರೂ ವಿವೇಚನೆಗೆ ಒಳಪಡಿಸಿದ್ದೇವೆಯೇ? ನನ್ನ ಧರ್ಮ, ದೇವರು, ಜಾತಿ, ಕುಲ, ಗೋತ್ರ, ಬಣ್ಣ, ಭಾಷೆಗಳು ನನ್ನ ಹತ್ತನೆಯ ಮುತ್ತಾತನಿಗೆ ಏನಿತ್ತೋ ನನ್ನ ಹತ್ತನೆಯ ಮೊಮ್ಮಗಳಿಗೂ ಅದೇ ಇರುತ್ತವೆ. ಅವು ಎಂದಿಗೂ ಅಪಡೇಟ್ ಆಗುವುದಿಲ್ಲಾ. ಇಂತಹ ಸ್ಥಿರ ಸಿದ್ಧ ಪಾರಂಪರಿಕ ನೆನಪುಗಳ ಕೆಸರಿನ ರಾಡಿಯಲ್ಲಿ ಮಾನವ ಕುಲ ಹೂತು ಹೋಗಿರುತ್ತದೆ. ಅದಕ್ಕಲ್ಲವೇ ನಮ್ಮ ಶರಣರು ತನ್ನ ತಾ ತಿಳಿದರೆ ಮೋಕ್ಷವೆಂದದ್ದು! ಈ ಆಗಮದಿಂದ ಬಿಡುಗಡೆಗೊಳ್ಳುವುದು ಶರಣ ಮಾರ್ಗದ ಆತ್ಯಂತಿಕ ಪರಮಪದವೆನಿಸಿದೆ, ನಿರಂಜನವೆನಿಸಿದೆ!!!

ಪ್ರಾರಬ್ಧ: ಪ್ರಾರಬ್ಧವೆಂದರೆ ವಿಧಿ ಎಂದರ್ಥ. ನಾವು ಇದುವರೆಗೂ ವಿವೇಚನೆಗೊಳಪಡಿಸಿದ ಧರ್ಮ, ದೇವರು, ಜಾತಿ, ಕುಲ, ಗೋತ್ರ, ಬಣ್ಣ, ಭಾಷೆ ಇವು ಯುಗಯುಗಗಳು ಕಳೆದರೂ ಬದಲಾಗುವುದಿಲ್ಲಾ, ಬದಲಾಗಲಾರವು. ಈ ಸಮಸ್ಯೆಗಳನ್ನು ಸೃಷ್ಟಿಮಾಡಿರುವ ಅಂಶ ಪ್ರಾರಬ್ಧವೆನಿಸುತ್ತದೆ. ಹಾಗಾದರೆ ದೇವರು ನಮ್ಮ ವಿಧಿಲಿಖಿತವನ್ನು ಬರೆದಿಲ್ಲಾ, ದೇವರ ಕುರಿತಾಗಿ ಸೃಷ್ಟಿಸಲ್ಪಟ್ಟ ಆಗಮಗಳು ನಮ್ಮ ಹಣೆಬರಹವನ್ನು ನಿರ್ಧರಿಸಿವೆ. ಇಲ್ಲಿ ಬಿಡುಗಡೆಯೆಂಬುದು ಒಂದು ಊಹೆಯಷ್ಟೆ!

ಈಗ ಲೇಖನದ ಪಾರಂಭದಲ್ಲಿ ಬರೆದ ವಚನದ ಕುರಿತಾಗಿ ವಿಚಾರಮಾಡೋಣ: ಶರಣರಿಗೆ ಆಗಮಸಂಚಿತ ಪ್ರಾರಬ್ಧಗಳು ಸೋಂಕಲೇ ಇಲ್ಲ. ಮತ್ತು ಕಾಲದ ಹಂಗಿಗೆ ಅವರು ಒಳಗಾಗಲಿಲ್ಲವೆಂಬುದನ್ನು ಸಾಬೀತುಪಡಿಸುವ ಈ ವಚನ ಎಷ್ಟೊಂದು ವಿಸ್ಮಯಕಾರಿ ಮತ್ತು ರೋಮಾಂಚನಕಾರಿ ಎನ್ನುವುದನ್ನು ನೋಡೋಣ. ಮೊದಲನೆಯ ಸಾಲುಗಳು “ಮುಂದಣ ಸುಖ, ಹಿಂದಣ ದುಃಖ, ಹಿಂದಣ ಸುಖ ಮುಂದಣ ದುಃಖ” ಕುರಿತು ಮಾತನಾಡುತ್ತವೆ. ನಾವು ಹಿಂದೆ ಸುಖಪಟ್ಟಿದ್ದೇವೆ- ಒಳ್ಳೆ ಬಟ್ಟೆ ಹಾಕಿದ್ದೇವೆ, ರುಚಿಕರ ಖಾದ್ಯಗಳನ್ನು ಸವಿದಿದ್ದೇವೆ, ಹಿತ ಕೊಡುವ ಸ್ನೇಹಿತರು-ಬಂಧು-ಬಳಗ, ಊಟ-ಉಪಚಾರ, ದೈಹಿಕ ಮಾನಸಿಕ ಎಲ್ಲ ಬಗೆಯ ಸುಖ ಅನುಭವಿಸಿದ್ದೇವೆ. ಆದರೆ ಅವೀಗ ಹಾಗೇ ಉಳಿದಿಲ್ಲ. ಅಗಲಲಾರೆವೆಂದ ಸ್ನೇಹಗಳು ಬಿಟ್ಟು ಹೋಗಿರುತ್ತವೆ. ಪ್ರೀತಿ-ಪ್ರೇಮದ ಭಾವಸುಖಗಳು ಹಳಸಿರುತ್ತವೆ. ತಿಂದ ಖಾದ್ಯಗಳ ಸವಿ ಮರೆತೇ ಹೋಗಿರುತ್ತದೆ. ಸಂಬಂಧಗಳಲ್ಲಿ ಯಾಂತ್ರಿಕತೆ ಕಾಣಿಸಿಕೊಂಡಿರುತ್ತದೆ. ಒಂದು ವೇಳೆ ಸುಖಗಳು ನಿತ್ಯವಾಗಿದ್ದರೆ ಅವು ಹಾಗೆಯೇ ಎಂದಿಗೂ ಉಳಿದಿರುತ್ತಿದ್ದವು… ಶಾಶ್ವತವಲ್ಲದ ಸುಖಗಳಿಗೆ ಮತ್ತೆ ಮತ್ತೆ ಹಾತೊರೆದದ್ದರಿಂದ ಅವು ಸಿಗದೆ ಫಲರೂಪದಲ್ಲಿ ದುಃಖಗಳನ್ನು ಸೃಷ್ಟಿಸುತ್ತಲೇ ಇರುತ್ತವೆ. ಹಿಂದಣ ಸುಖ ಮುಂದಣ ದುಃಖವನ್ನು ನಿರ್ಧರಿಸುತ್ತದೆ. ಮುಂದಣ ಸುಖ ಹಿಂದಣ ದುಃಖವನ್ನು ಅನುಸರಿಸುತ್ತದೆ. ಆದರೆ ಸುಖವಾಗಲಿ, ದುಃಖವಾಗಲಿ ಅವು ಅನುಭವಿಸಿದಲ್ಲೇ ಇಲ್ಲವಾಗುವಾಗ (ತಾ ಬಂದು ತಾಕಿ ಅನುಭವಿಸಿದಲ್ಲೇ ಮರೆಯಾಗುವಾಗ), ಮನುಷ್ಯನ ಮನಸ್ಸು ಸಂದೇಹಕ್ಕೆ ಬೀಳುತ್ತದೆ. ಸುಖ ಸಿಕ್ಕಾಗಲೆಲ್ಲಾ ಯಾವುದೋ ಜನ್ಮದ ಪುಣ್ಯವೋ, ಅದೃಷ್ಟವೋ ಇರಬೇಕೆಂದು ಹಿಗ್ಗಿದರೆ, ಕಷ್ಟಗಳಿಗೆ ಗುರಿಯಾದಾಗ ಯಾವುದೋ ಪಾಪಕರ್ಮವೋ, ಪ್ರಾರಬ್ಧವೋ, ವಿಧಿ ಬರಹವೋ ಕಾರಣವೆಂದು ಹಳಹಳಿಸುತ್ತದೆ. ಈ ಕರ್ಮತ್ರಯಗಳನ್ನು ‘ಕಾಲ್ಪನಿಕ ಸಂಕಲ್ಪ’ಗಳೆನ್ನುತ್ತಿದ್ದಾರೆ ಬೊಮ್ಮಣ್ಣ ಶರಣರು. ಕಾಲ್ಪನಿಕ ಸಂಕಲ್ಪಗಳು ತಮ್ಮ ಕಲ್ಪನೆಗಳಿಂದಾಗಿ ಮನಸ್ಸಿನಲ್ಲಿ ತುಂಬಾ ಶಕ್ತಿಶಾಲಿಯಾಗಿರುತ್ತವೆ. ಅವುಗಳನ್ನು ವಾಸ್ತವದಲ್ಲಿ ಮನಸ್ಸು ಹುಡುಕುತ್ತಿರುತ್ತದೆ. ಆದರೆ ಅಲ್ಲಿ ಅವುಗಳಿಗೆ ಯಾವುದೇ ವಸ್ತುನಿದರ್ಶನಗಳು ಸಿಗುವುದಿಲ್ಲ. ಹೀಗಾಗಿ ಅದು ಕಂಗಾಲಾಗುತ್ತದೆ. ಬದುಕಿನ ವಾಸ್ತವತೆಯಿಂದ ದಿಕ್ಕು ತಪ್ಪಿಸುವ ಈ ಕಲ್ಪನೆಗಳಿಂದ ಹೊರಬರಬೇಕಾದರೆ ನಿಚ್ಚಳವಾಗಿ ಜಗತ್ತನ್ನು ನೋಡಬೇಕು, “ಹಿಂದೆ ಅಳಿದವರ ಕೇಳಿ, ಮುಂದೆ ಸಾವವರ ಕಂಡು”- ಜೀವನದ ನಶ್ವರತೆಯ ಸತ್ಯವನ್ನು ಅರಿಯಬೇಕು. ಸುಖಗಳ ಬೆನ್ನು ಹತ್ತಿ ದುಃಖಗಳನ್ನು ಎದುರುಹಾಕಿಕೊಳ್ಳುತ್ತಾ ಇವೇ ಜೀವನವೆಂದು ನಚ್ಚಿ ಬದುಕಿದ್ದ ಎಷ್ಟೋ ಜನ ಸತ್ತು ಹೋಗಿಲ್ಲವೇ? ಮುಂದೆ ಬರುವವರು ಕೂಡ ಇದೇ ಹಾದಿಯಲ್ಲಿ ನಡೆದು ಸಾಯುವವರೇ ಅಲ್ಲವೇ? ಹಾಗಾಗಿ ಸಮಸ್ಯೆ ಇನ್ನೆಲ್ಲೋ ಇಲ್ಲ. ಅದು ಸಂಕಲ್ಪಗಳನ್ನು ಮಾಡಿಕೊಳ್ಳುವ ಮನಸ್ಸಿನಲ್ಲೇ ಇದೆ. ಆ ಸಂಕಲ್ಪಗಳೇ ತೃಷ್ಣೆಗಳಾಗಿ ಈಡಾಡುತ್ತಿರುತ್ತವೆ. ಸುಖದುಃಖದ ಜಂಜಾಟಗಳು ಆಗಮಸಂಚಿತಪ್ರಾರಬ್ಧದ ಮೋಸ!!! “ಸಂಚಿತ ಪ್ರಾರಬ್ಧ ಆಗಾಮಿಗಳ ಸಂಚಿನ ಸಂಕಲ್ಪವ ತಿಳಿ…” ಎಂದು ಹೇಳುತ್ತಾರೆ ಪ್ರಸಾದಿ ಭೋಗಣ್ಣ. ಅಂದರೆ ಕರ್ಮತ್ರಯಗಳ ಮೋಸವನ್ನು ಅರಿಯೆಂದು ಶರಣರು ಎಚ್ಚರಿಸುತ್ತಿದ್ದಾರೆ. ಆಗಮ-ಸಂಚಿತ-ಪ್ರಾರಬ್ಧಗಳಿಂದ ಬಿಡುಗಡೆಯಾಗುವುದೇ ನಿಜವಾದ ಸ್ವಾತಂತ್ರ್ಯವೆನ್ನುತ್ತಾರೆ ನಮ್ಮ ನೆಲದ ಸಂತರು. “ಆಗಮ ಪುರುಷರಿರಾ, ನಿಮ್ಮ ಆಗಮ ನಮಗೆ ಗಾಳಿ ಮಾತಾಗಿ ಹೋದವು” ಎನ್ನುತ್ತಾರೆ ಅಲ್ಲಮಪ್ರಭು. “ಕಾಲ ಕರ್ಮಕಲ್ಪಿತಗಳನ್ನು ಉಪಾಧಿ”ಗಳೆಂದು ಜರಿಯುತ್ತಾರೆ ಉರಿಲಿಂಗಪೆದ್ದಿ ಶರಣರು. ಉಪಾಧಿಯೆಂದರೆ ಇದೆಯೆಂದು ನಂಬಿಸುವ ಮಾಯೆ!

ಕಳೆದ ದಿನಗಳ ಕುರಿತಾಗಿರುವ ವಾಂಛೆ ಅಥವಾ ನೋವು; ನಾಳಿನ ಕುರಿತಾಗಿರುವ ಆಸೆ ಅಥವಾ ಭಯ ಪ್ರಸ್ತುತ ಕ್ಷಣಗಳನ್ನು ನಿರ್ಲಕ್ಷಿಸುತ್ತಲೇ ಹೋಗುತ್ತದೆ. ಇದು ಸಮಯ ಸೃಷ್ಟಿಸುವ ಬಹುದೊಡ್ಡ ಭ್ರಾಂತಿ! ಈ ಭ್ರಮೆಯಿಂದ ಹೊರಬರುವ ಹಾದಿಯನ್ನು ಈ ವಚನ ಸೂಚಿಸುತ್ತದೆ- ಪ್ರತಿದಿನವನ್ನು ‘ಅಂದಂದಿಗೆ ನೂರು ತುಂಬಿತ್ತು’ ಎನ್ನುವ ಸಂತೃಪ್ತ ಭಾವದಲ್ಲಿ ಬಾಳುವುದು!… ಹೀಗೆ ಬದುಕಲು ಸಾಧ್ಯವಾದರೆ ಸುಖ-ದುಃಖದ ಕೋಟಲೆಗಳು ಇಲ್ಲವಾಗಿ ಅವುಗಳಿಗೆ ಯಾರೋ-ಯಾವುದೋ ಕಾರಣವೆಂಬ ಸಂದೇಹವು ಸಂಪೂರ್ಣ ನಿವೃತ್ತಿಯಾಗುತ್ತದೆ. ತನ್ನೊಳಗೂ, ಸಮಾಜದೊಳಗೂ ಹೂತು ಹೋದ ಯಾವುವೋ ನಂಬಿಕೆಗಳಿಗೆ ತನ್ನ ಬದುಕನ್ನು ಜೀತವಿಡಬಾರದೆಂಬ ಎಚ್ಚರ ಮೂಡುತ್ತದೆ. ಅಂತಹ ಗುಲಾಮಿತನದಿಂದ ಮುಕ್ತವಾದಾಗ ಮಾತ್ರ ಸ್ವಾತಂತ್ರ್ಯದ ಘಮಲು ಅರಿವಿಗೆ ಬರುತ್ತದೆ. ಆಗ ‘ಅಂದಂದಿಗೆ’ ಅಂದರೆ ವರ್ತಮಾನದಲ್ಲಿ ಸಂಪೂರ್ಣವಾಗಿ ಬದುಕುವ ತಿಳಿವು ಪ್ರಾಪ್ತವಾಗುತ್ತದೆ. ಇದನ್ನು ಮೋಳಿಗೆಯ ಮಾರಯ್ಯನವರು “ಸಂಚಿತ ಆಗಾಮಿ ಪ್ರಾರಬ್ಧವೆಂಬ ಕರ್ಮಕಲ್ಪಿತಕ್ಕೆ ಹೊರಗಾಗಿಯಲ್ಲದೆ ಲಿಂಗವನರಿಯಬಾರದು” ಎನ್ನುತ್ತಾರೆ. ಶರಣರು ತೋರಿದ ಲಿಂಗ ಪ್ರತ್ಯಕ್ಷ ಪ್ರಮಾಣವೆಂಬುದು ನೆನಪಿರಲಿ!!

ಭೌತಿಕ ಜಗತ್ತಿನ ಆಗುಹೋಗುಗಳಿಗೆ ಕರ್ಮತ್ರಯಗಳ ಇರುವಿಕೆಯೇ ತಿಳಿಯದು… ಈ ಜಂಜಡಗಳನ್ನು ಅವು ಮುಟ್ಟಿಸಿಕೊಳ್ಳದೆ, ಸಾಯುವುದನ್ನೂ ಹುಟ್ಟುವುದನ್ನೂ ಕಿಂಚಿತ್ ಯೋಚಿಸದೆ, ಸದಾ ಆಗುವಿಕೆಯಲ್ಲಿರುತ್ತವೆ. ಈ ಕ್ಷಣದಲ್ಲಿ ಏನಿದೆಯೋ ಅದನ್ನಷ್ಟೇ ಪರಿಹಾರ ಮಾಡಿಕೊಳ್ಳುತ್ತಾ ಸಹಜ ಸುಂದರವಾಗಿ ಜೀವಿಸುವ ಸಂದೇಹ ನಿವೃತ್ತಿಯ ಅನುಭಾವವನ್ನು ವಚನ ಹೇಳುತ್ತಿದೆ! ಆ ಅನುಭಾವವೇ ಕಾಲಾತೀತ, ಧರ್ಮಾತೀತ, ಜಾತ್ಯಾತೀತ, ವರ್ಣಾತೀತ. ಭಾಷಾತೀತವಾದ ಈ ಆಳನಿರಾಳವೇ ಸಹಜಾನಂದ!!! ನಿರಾಕಾರ ನಿರಮ್ಮಳ!!!

ಕ್ರಿಯಾಧೀನವಾದ ಜಗತ್ತಿನಲ್ಲಿ ಭ್ರಮಾಧೀನರಾಗಿ ಬದುಕುತ್ತಿರುವ ಪ್ರಜ್ಞಾಹೀನ ಸ್ಥಿತಿಯನ್ನು ತೋರಿಸಿ ಎಚ್ಚರಿಸುತ್ತಿರುವ ಶರಣರ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಬೇಕಾಗಿದೆ. ಶರಣರದು 12ನೇ ಶತಮಾನ. ಸುಮಾರು 900 ವರ್ಷಗಳ ಹಿಂದೆ ಅವರು ಎಷ್ಟೊಂದು ಮಾನಸಿಕವಾಗಿ ಅಪಡೇಟ್ ಆಗಿದ್ದರೆಂಬುದನ್ನು ಇದರಿಂದ ತಿಳಿಯಬಹುದು. ಆದರೆ ಶರಣರ ಹೆಸರಿನಲ್ಲಿ ನಾವೆಷ್ಟು ಕೊಳೆ ಮತ್ತು ಕೊಚ್ಚೆಯನ್ನು ತುಂಬಿಕೊಂಡಿದ್ದೇವೆ ಎಂಬುದನ್ನು ಈ ಮೂಲಕ ಗ್ರಹಿಸಲು ಸಾಧ್ಯವಾಗುವುದಾದರೆ ಲೇಖನಕ್ಕೊಂದು ಸಾರ್ಥಕತೆ ಬರುತ್ತದೆ.
(ಮುಂದುವರಿಯುತ್ತದೆ)

Previous post ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
Next post ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ

Related Posts

ಗುರು-ಶಿಷ್ಯ ಸಂಬಂಧ
Share:
Articles

ಗುರು-ಶಿಷ್ಯ ಸಂಬಂಧ

August 8, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಡಕೆಯ ಮಾಡುವಡೆ ಮಣ್ಣೆ ಮೊದಲು, ತೊಡುಗೆಯ ಮಾಡುವಡೆ ಹೊನ್ನೆ ಮೊದಲು, ಶಿವಪಥವನರಿವಡೆ ಗುರುಪಥವೆ ಮೊದಲು, ಕೂಡಲಸಂಗಮದೇವರನರಿವಡೆ ಶರಣರ ಸಂಗವೆ ಮೊದಲು. ಸಂಗದ ಮಹತ್ವವನ್ನು ಕೆಲವು...
ಸುಂದರ, ಸೂಕ್ಷ್ಮ ದ್ವೀಪ ಜಪಾನ್
Share:
Articles

ಸುಂದರ, ಸೂಕ್ಷ್ಮ ದ್ವೀಪ ಜಪಾನ್

September 14, 2024 ಪ್ರೊ.ಸಿದ್ದು ಯಾಪಲಪರವಿ
ವಚನಗಳ ಓದಿ ಬೆಳೆದ ನಾನು ಎಲ್ಲಾ ಕಡೆ ಶರಣರನ್ನು ಹುಡುಕುತ್ತೇನೆ, ವಿಪರ್ಯಾಸವೆಂದರೆ ನನ್ನಲ್ಲಿ ಹುಡುಕುವುದ ಮರೆತು! ಈ ದೇಶದ ನೆಲದಲ್ಲಿ ಎರಡೂವರೆ ಸಾವಿರ ವರ್ಷಗಳ ಹಿಂದೆ ಬುದ್ಧ...

Comments 11

  1. Panchakshari H V
    Jul 19, 2025 Reply

    ಮಾನವನ ಕಲ್ಪನೆ ವಿಪರೀತ. ವಾಸ್ತವಿಕ ಬದುಕನ್ನು ಬಿಟ್ಟು ಅವಾಸ್ತವಕ್ಕೆ ಹೆಚ್ಚು ಪ್ರಾಧಾನ್ಯ ಕೊಟ್ಟು ಜೀವನದ ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಾನೆ.
    ಶರಣರು ಭೂತಪ್ರಾಣಿಗಳೂ ಅಲ್ಲ ಭವಿಷತ್ಕಾರರೂ ಅಲ್ಲ. ವಾಸ್ತವ ಜೀವಿಗಳು. ಅವರ ನಡೆ ಬದುಕು ಮಾನವ ಜನಾಂಗಕ್ಕೆ ಸಮಯಾತೀತವಾಗಿ ಅನುಕರಣೀಯ ಎಂಬುದು ಈ ಲೇಖನದಲ್ಲಿ ಅಚ್ಚೊತ್ತಿದಂತಿದೆ.
    ಬಹಳ ಸುಂದರ ಅರ್ಥಪೂರ್ಣ ಲೇಖನ.
    ಶರಣು

  2. Pro. K.M.Chandar, Cleveland
    Jul 19, 2025 Reply

    Mangala avarige! This is a fine article on philosophical issues beyond Time! I am in Cleveland and because of the time difference, could enjoy the points in the article! Makes for serious reading followed by contemplation! Many thanks!
    A small point: doesn’t the Buddhist concept of Shunyata closely resemble the points highlighted by the Sharanas?

  3. ಆಳಗುಂಡಿ ಅಂದಾನಯ್ಯ
    Jul 19, 2025 Reply

    ಆಳವಾದ ಜಿಜ್ಞಾಸೆಯ ಅಧ್ಯಯನ ಪೂರ್ಣ ಲೇಖನ. ಓದಿ ಆನಂದಿಸಿದೆ. ತಮಗೆ ಅಭಿನಂದನೆಗಳುರಿ. ಶರಣರು ಕಾಲವನ್ನು ತಮ್ಮ ಅರಿವು ಅಪಾರ ಒಳನೋಟದ ಚಿಂತನೆ ಮತ್ತು ಅನುಭಾವದ ಹಿನ್ನೆಲೆಯಲ್ಲಿ ‘ಜಂಗಮ’ ಎಂದು ಗುರುತಿಸಿ ಗೆದ್ದು ಗೌರವ ತೋರಿಸಿ ಮುಕ್ತ ಗೊಳಿಸಿದರು! ವಿಜ್ಞಾನ(ನಿ) ರೂಪದಲ್ಲಿ ಬಂಧಿಸಿ ಉಪಯೋಗಿಸಿದರೂ ಕೈವಶ ಮಾಡಿ ಕೊಳ್ಳಲು ಸಾಧ್ಯವಾಗಿಲ್ಲ ಬೆನ್ನತ್ತಿದೆ. ಹೀಗೆ ಪ್ರಮಾಣದಿಂದ ಅಪ್ರಮಾಣದೆಡೆಗೆ ಜ್ಞಾನ ವಿಜ್ಞಾನದ ಬಲದಿಂದ ದಾರ್ಶನಿಕರು ಶರಣರು ಆಧುನಿಕ ವಿಜ್ಞಾನ ನಿರಂತರ ನಡಿಗೆಯಲ್ಲಿವೆ. ಸಂವೇದನಾಶೀಲ ಕ್ರಿಯಾಶೀಲ ಮನಸುಗಳು ಸಾಹಿತ್ಯ ಸಂಗೀತ ಕಲೆಗಳ ಮೂಲಕ ಸಾಂಸ್ಕೃತಿಕ ಅಪ್ರಮಾಣದೆಡೆಗೆ ಜಂಗಮವಾಗಿವೆ. ಬೀಜ ಮತ್ತು ಮರದಲ್ಲಿ ಮೊದಲು ಯಾವುದು? ಎಂಬುದನ್ನು ಪೂರ್ವ ವಿರಾಮವಿಟ್ಟು ಹೇಳಲಾಗಿಲ್ಲ ಅದರಂತೆಯೇ ಪ್ರಮಾಣ ಮತ್ತು ಅಪ್ರಮಾಣದೆಡೆಗಿನ ಪಯಣ ನಿರಂತರ….. ಒಂದೆರಡು ಮಾತು ಹಂಚಿಕೊಳ್ಳಲು ಅವಕಾಶವನ್ನು ಒದಗಿಸಿದಿರಿ ಧನ್ಯವಾದಗಳು. 🌱🙏🏼

  4. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Jul 22, 2025 Reply

    ಅಪರೂಪದ ಮಾಹಿತಿಯ ಲೇಖನ. ನಿಮ್ಮ ಅಧ್ಯಯನಕ್ಕೆ ಅಭಿನಂದನೆಗಳು.. ಮುಂದಿನ ಸಂಚಿಕೆಯ ನಿರೀಕ್ಷೆ ಯಲ್ಲಿ…
    ಸಂಗ್ರಹ ಯೋಗ್ಯ.

  5. ಜಿ.ಬಿ.ಪಾಟೀಲ
    Jul 22, 2025 Reply

    ಕಾಲ—ವೈಜ್ಞಾನಿಕವಾಗಿ ಇದು ಗತಿಯ ಮಾಪನ, ಕ್ಷಣಗಳ ಹಾದಿ. ಭೌತಶಾಸ್ತ್ರದಲ್ಲಿ ಇದು ಚತುರ್ಥ ಆಯಾಮ; ಭವಿಷ್ಯ (future)ದಿಂದ ಹಾಲಿಗೆ (present) ಹಾಲಿಯಿಂದ ಭೂತ (past) ಕಾಲಕ್ಕೆ ನಿರಂತರ ಹರಿವುವ ಪ್ರಕ್ರಿಯೆ. ಇದನ್ನು ಮಾಪನ ಮಾಡಿದ್ದೇ ಮಾನವನ ದೊಡ್ಡ ಸಂಶೋಧನೆ. ತಮ್ಮ ತಮ್ಮ ಅರಿವಿಗೆ ತಕ್ಕಂತೆ ಅದನ್ನು ಸಂಶೋಧಿಸಿದ್ದಾರೆ.ನಾವು ನಿಖರವಾದದ್ದನ್ನು ಆರಿಸಿಕೊಂಡಿದ್ದೇವೆ ಎಂದು ಇಂದಿಗೆ ಅಂದುಕೊಂಡಿದ್ದೇವೆ. ಮುಂದೆ ಏನಿದೆಯೋ?

    ಆಧ್ಯಾತ್ಮಿಕ ದೃಷ್ಟಿಯಲ್ಲಿ ಕಾಲವು ಮಿತಿ ಹಾಕಿದ ಮನುಷ್ಯನ ಮನಸ್ಸಿನ ಕಲ್ಪನೆ ಮಾತ್ರ. ಸತ್ಯ ಸನಾತನ, ಕಾಲಾತೀತ; ಆದರೆ ಬದುಕು ಮಾತ್ರ ಕಾಲದ ಹಾದಿಯಲ್ಲಿ ನಡೆಯುವ ನಾಟಕ.

    ಪ್ರತಿಯೊಂದು ಶ್ವಾಸವೂ ಕಾಲದ ಸಾಗರದಲ್ಲಿ ತೇಲುವ ಅಲೆ. ಕ್ಷಣವನ್ನು ಅರಿತು ಬದುಕಿದರೆ ಜೀವನ ಸುಂದರ, ಎಂದೆಂದಿಗೂ ಉಳಿಯುವ ಇಹಪರ ಲೋಕದ ಪಾಠ. ಕಡಿಮೆ ಬಳಕೆಯಲ್ಲಿರುವ ಕನ್ನಡ ಶಬ್ದಕ್ಕೆ ಇಂಗ್ಲಿಷ್ ಪದವನ್ನು ಸೇರಿಸಿದ್ದರೆ ನಮ್ಮಂತ ಅರೆ ಕನ್ನಡದವರು ಅರ್ಥಮಾಡಿಕೊಂಡಿಯಾರು. ಪ್ರಭುದ್ದ ಲೇಖನ, ಸ್ವಲ್ಪ ದೀರ್ಘವಾಗಿದೆ ಎಂಬ ಕಲ್ಪನೆ ನನ್ನದು.

  6. Dr. Shraddhananda Swamiji, Vijayapura
    Jul 23, 2025 Reply

    I have gone through your ARTICLE. It is really the Best article about time and it will help us to become timeless I am really astonished about your vast study about time.

  7. ಮಹಾದೇವ
    Jul 24, 2025 Reply

    ಜಂತರ್ ಮಂತರ್ ವೈಜ್ಞಾನಿಕವಾಗಿ ಏಷಿಯನ್ನರು ಕಾಲದ ಕ್ರಮವನ್ನು ಕಂಡುಕೊಳ್ಳಲು ಸೃಷ್ಟಿಸಿದ ಮಹತ್ವದ ದಾಖಲೆ. ಬಹುಶಃ ಹರಪ್ಪಾ ನಾಗರೀಕತೆಯ ಅವಸಾನದ ನಂತರ ಅದು ಬೇರೆಬೇರೆ ಪ್ರಾಂತ್ಯಗಳಿಗೂ ವಿಸ್ತರಿಸಿದ್ದ ಬಗ್ಗೆ ಎಲ್ಲೋ ಓದಿರುವ ನೆನಪಿದೆ. ಆ ಜ್ಞಾನ ಮಾದರಿಯನ್ನು ಕಾಶಿಯಲ್ಲಿ ಪುನಃ ಸ್ಥಾಪಿಸಿದರೆಂಬುದಾಗಿಯೂ… ಚೀನಾ, ಜಪಾನ್, ಬರ್ಮಾಗಳಲ್ಲೂ ಅದೇ ಮಾದರಿಯ ಜಂತರ್ ಮಂತರ್ ಮನೆಗಳಿರುವುದಾಗಿಯೂ ಓದಿದ ನೆನಪು. ಇಡೀ ಏಷಿಯನ್ ತಾತ್ವಿಕ ಜಿಜ್ಞಾಸೆಯಲ್ಲಿ ಇದು ಬಹಳ ಮುಖ್ಯ ಅನಿಸುತ್ತದೆ.

    ಗತಿಸುವ ಕಾಲದ ಸ್ವರೂಪವನ್ನು ನಿಜದ ನೆಲೆಯಲ್ಲೇ ಅರಿಯಬೇಕು. ಇದಕ್ಕೆ ಎಂಥಾ ಅವರ್ನೆಸ್ ಬೇಕು. ಆ ಜಾಗೃತ ಸ್ಥಿತಿಯನ್ನು ಶರಣರೊಳಗೆ ಕೆಲವರಾದರೂ ಪಡೆದಿದ್ದಾರೆ. ಅದರಲ್ಲಿ ಅಗ್ರಗಣ್ಯರು ಅಲ್ಲಮರು.

  8. ಡಿ. ಉಮಾಪತಿ, ಬೆಂಗಳೂರು
    Jul 28, 2025 Reply

    ಅಂದಂದಿಗೆ ಬದುಕುವುದು ಎಂಬುದು ಎಷ್ಟು ದೊಡ್ಡ ಸತ್ಯ! ನಾನು ಕೂಡ ಇತ್ತೀಚಿಗೆ ಈ ಸತ್ಯದ ಸಮೀಪ ಸುಳಿದಿದ್ದೇನೆ…ಅಂದಂದಿಗೆ ಬದುಕುತ್ತಿದ್ದೇನೆ. ನಾಳೆಯನ್ನು ಹೊಸದೆಂದೂ ಭಿನ್ನವಾಗಿರುತ್ತದೆಂದೂ ಎದುರು ನೋಡುತ್ತ ಜೀವಿಸತೊಡಗಿದ್ದೇನೆ. ನನಗೆ ತಿಳಿದಿರದ ಅನೇಕ ವಿಷಯಗಳನ್ನು ನಿಮ್ಮ ಬರೆಹದಿಂದ ಅರಿತೆ. ನೀವು ಲೇಖನದ ಸಮಾಪ್ತಿಯಲ್ಲಿ ಹೇಳಿರುವ ರೊಜ್ಜು ಅತ್ಯಂತ ವಿಕಟ ವಾಸ್ತವ. ಥ್ಯಾಂಕ್ಯೂ….😍🌿
    ಶರಣ ಮತ್ತು ಬೌದ್ಧ ತಿಳಿವುಗಳು ಅದೆಷ್ಟು ಜೀವಪರ! 🙏🏾🌿

  9. Dr. K. MANJUNATH NAIK
    Jul 29, 2025 Reply

    ಉತ್ತಮ ಲೇಖನ.

  10. Dr. Mallesh K.S
    Aug 2, 2025 Reply

    I read your part 2. It tries to remove the notion of independent existence of time. While you have described it in great detail, i flet that, the discussion shifts from this soon. Only at the end, the link is again established with the notion of time. Frankly speaking, this 2nd part is quite elaborated compared to the first part and hence for the same reason, the first part scores over this.

  11. Prof C A Somashekharappa
    Aug 12, 2025 Reply

    It is a very nice write up .
    Hats off to your matured intellectual capacity.
    Keep it up.
    Somashekharappa

Leave a Reply to Dr. Mallesh K.S Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ
March 12, 2022
ಯಾಲಪದದ ಸೊಗಡು
ಯಾಲಪದದ ಸೊಗಡು
December 13, 2024
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ಹಾಯ್ಕುಗಳು
ಹಾಯ್ಕುಗಳು
November 10, 2022
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
October 21, 2024
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು
February 5, 2020
Copyright © 2025 Bayalu