Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪ್ರಭುವಿನ ಗುರು ಅನಿಮಿಷ -2
Share:
Articles September 14, 2024 ಮಹಾದೇವ ಹಡಪದ

ಪ್ರಭುವಿನ ಗುರು ಅನಿಮಿಷ -2

ಇಲ್ಲಿಯವರೆಗೆ-
(ದಂಡಿನ ಮ್ಯಾಳದ ಹುಡುಗರಿಗೆ ಯುದ್ಧ ಕೌಶಲ್ಯದ ತರಬೇತುದಾರನಾಗಿದ್ದ ತ್ರೈಲೋಕ್ಯ ಮತ್ತು ಮಹಾಲೇಖೆ ದಂಪತಿಗೆ ಸಾಧುವಿನ ಭವಿಷ್ಯವಾಣಿಯಿಂದ ಮಗು ಹುಟ್ಟುವ ಪುಣ್ಯ ಕಾಲ ಸಮೀಪಿಸಿತ್ತು. ದಂಡಿನ ಹುಡುಗರ ಪಾಠ-ಅಭ್ಯಾಸಗಳತ್ತ ನಿರ್ಲಕ್ಷ್ಯ ತೋರಿದ್ದರಿಂದ ಪುಡಾಡಿಗಳಾದ ಶಿಷ್ಯರ ಕೃತ್ಯಗಳಿಗೆ ಗುರುವಾದ ತ್ರೈಲೋಕ್ಯನು ಮಗ ಹುಟ್ಟುವ ದಿನವೇ ರಾಜನ ಶಿಕ್ಷೆಗೆ ಗುರಿಯಾದನು. ಇತ್ತ ನರಸಮ್ಮನ ಆರೈಕೆಯಲ್ಲಿ ಗಂಡು ಮಗುವನ್ನು ಹೆತ್ತ ಮಹಾಲೇಖೆ ಕಳವಳದಿಂದ ಗಂಡನ ದಾರಿ ಕಾಯತೊಡಗಿದಳು… ಮುಂದೆ ಓದಿ-)

ಇತ್ತ ಕಾನೋಜದ ದಟ್ಟ ಕಾನನದ ನಡುವೆ ಹೆಬ್ಬಂಡೆಗಳನ್ನು ಉರುಳಿಸುತ್ತ, ಅನ್ನ-ನೀರಿಗೂ ಬರವಾಗಿ ಸೊರಗಿ ಬಡಕಲಾದರೂ, ಮಹಾಲೇಖೆ ಮತ್ತು ಹುಟ್ಟಿರುವ ಕೂಸಿನ ಮುಖ ನೋಡುವ ಹಂಬಲದಲ್ಲಿ ದಿನಗಳನ್ನು ಲೆಕ್ಕ ಮಾಡುತ್ತಾ ಯಾವ ಆಪತ್ತು ತನಗೆ ಬಾರದಿರಲೆಂದು ಆ ವಿರುಪಾಕ್ಷನನ್ನು, ಚಂದ್ರಮೌಳೇಶ, ಮಹಾಕೂಟರನ್ನೂ, ಹಿರಿದಾದ ದೇಹದ ಮೇಲೆ ಇಷ್ಟೆಇಷ್ಟು ಶಿವಲಿಂಗ ಹೊತ್ತಿರುವ ನಂದಿಯನ್ನು ನೆನೆಯುತ್ತಾ ಬದುಕಿದ್ದ ತ್ರೈಲೋಕ್ಯನಿಗೆ ಮೂರು ವರ್ಷವೆಂಬುದು ಅತೀ ದೀರ್ಘವೆನಿಸತೊಡಗಿತ್ತು. ಕಲ್ಲು ಕೆಲಸ ಮಾಡುವ ಗುಡ್ಡರ ಒಡನಾಟ, ತನ್ನಂತೆ ಬಂಧಿಯಾದ ಹಲವಾರು ಜನ ಅಲ್ಲಿ ಎಷ್ಟೋ ವರ್ಷಗಳಿಂದ ಮೈಬಗ್ಗಿಸಿ ದುಡಿಯುತ್ತಿದ್ದಾರೆ. ಅವರ ಭಾವನೆಗಳಿಗೆ ಬೆಲೆಯಿಲ್ಲ. ಅವರು ಯಾರು..? ಎಲ್ಲಿಂದ ಬಂದವರು..? ಎನ್ನುವ ಯಾವ ನೆನಪಿನ ಸಂಗತಿಗಳು ಅವರೊಳಗೆ ಉಳಿದಿರಲಿಲ್ಲ. ದಿನದಿನವೂ ಅವರೊಳಗಿನ ಮನುಷ್ಯತ್ವ ಕರಕರಗಿ ನಿಧನಿಧಾನಕ್ಕೆ ತಾನೊಂದು ಕೇವಲ ದುಡಿಯಲಿರುವ ಜೀವಿ ಎಂಬಲ್ಲಿಗೆ ಕನಸುಗಳು ಮುರುಟಿದ್ದವು. ಮೃದುತ್ವಕ್ಕೆ ಹಗೆಯಾದವರಂತೆ ವರ್ತಿಸುವವರ ನಡುವೆ ತನ್ನ ಗರ್ಭಿಣಿ ಹೆಂಡತಿ ಮತ್ತು ಹುಟ್ಟಿರುವ ಮಗು ಎರಡನ್ನು ಕಣ್ಣಮುಂದೆ ಕಲ್ಪಿಸಿಕೊಳ್ಳುತ್ತ ದಿನಗಳೆಯುತ್ತಿದ್ದ. ಕಡಿದಾದ ಕಲ್ಲಿನ ಕಣಿವೆಗಳಲ್ಲಿ ತನ್ನ ಜೊತೆಗೆ ಬಂದಿದ್ದ ದಂಡಿನ ಹುಡುಗರಲ್ಲಿ ಒಂದಿಬ್ಬರು ಬಂಡೆಗಲ್ಲುಗಳ ನಡುವೆ ಸಿಲುಕಿ ಸತ್ತೇ ಹೋಗಿದ್ದರೂ, ಮತ್ತೊಬ್ಬ ಕಾಲು ಮುರಿದುಕೊಂಡು ಪಿಶಾಚಿಯಂತೆ ಒರಲುತ್ತಾ ಇಂದೋ ನಾಳೆಯೋ ಸಾವು ಬರಲೆಂದು ಬೇಡಿಕೊಳ್ಳುತ್ತಿದ್ದ. ಉಳಿದ ಹುಡುಗರು ಮಾಡಿದ ತಪ್ಪುಗಳಿಗೆ ಆಗಬೇಕಾದ ಶಿಕ್ಷೆ ಆಗಿದೆ ಎಂದುಕೊಂಡು ಬೈದರೆ ಬೈಯ್ಯಸಿಕೊಂಡು ಹೊಡೆದರೆ ಹೊಡೆಸಿಕೊಂಡು ದುಡಿಯುತ್ತಿದ್ದರು. ಅಯ್ಯೊ ತಮ್ಮಗಳ ಗುರುವಾದ ತ್ರೈಲೋಕ್ಯನಿಗೂ ಹೀಗೆ ಶಿಕ್ಷೆ ಆಗಬಾರದಿತ್ತು ಎಂದು ಕರುಣೆಯ ಕಂಗಳಲ್ಲಿ ನೋಡುತ್ತಾ, ತಮ್ಮೊಳಗೆ ತಾವು ಮರುಗಿಕೊಳ್ಳುತ್ತಾ ಅವರೂ ಬದುಕಿದ್ದರು.

ಅದೊಂದು ದಿನ ಇವರ ಗುಂಪಿನವರು ದೊಡ್ಡದೊಂದು ಹೆಬ್ಬಂಡೆಯ ನಡುವೆ ಸಿಡಿಮದ್ದು ಹಾಕಿ, ಆ ಸಿಡಿಮದ್ದಿನಿಂದ ಬಂಡೆಯನ್ನು ಎರಡಾಗಿಸುವ ಕಾಯಕದಲ್ಲಿ ನಿರತರಾಗಿದ್ದರು. ಕಿಡಿಗೇಡಿಯೊಬ್ಬ ಚಕಮಕಿ ಕಲ್ಲುಜ್ಜಿ ಸಿಡಿಗೆ ಕಿಡಿ ಹಚ್ಚಿ ದೂರ ಓಡಿಬಿಟ್ಟ. ಅಲ್ಲೇ ಮೈಬಗ್ಗಿಸಿ ಕೆಲಸ ಮಾಡುತ್ತಿದ್ದವರ ಅರಿವಿಗೆ ಬಾರದೆ ಕಲ್ಲುಬಂಡೆ ಸಿಡಿದು ಚೂರುಚೂರಾದಾಗ ಹಲಕೆಲವರ ಮೈಗಳಲ್ಲಿ ಕಲ್ಲಿನ ಚೂರುಗಳು ಸೇರಿ ರಕ್ತಮಯವಾದರು. ಕೋಡಿನಂತೆ ಎರಡಾಗಿ ಸೀಳಿದ್ದ ಕಲ್ಲಿನ ನಡುವೆ ನಿಂತು ಕೆಲಸ ಮಾಡುತ್ತಿದ್ದ ತ್ರೈಲೋಕ್ಯನು ಸಿಡಿದ ಸದ್ದಿಗೆ ಅತ್ತಕಡೆ ಹಣಿಕಿಕ್ಕಿದ್ದೆ ಅವನ ಬಲಗಣ್ಣಿನತ್ತಲೇ ಚೂರೊಂದು ಬಂದು ಪಟಾರನೇ ಬಡಿದದ್ದೆ ಮಹಾಕೂಟೇಶ ಎಂಬ ಉದ್ಘಾರ ತೆಗೆದು ಧೊಪ್ಪನೆ ನೆಲಕ್ಕುರುಳಿಬಿದ್ದ. ಅಲ್ಲೇ ಉಳಿಪೆಟ್ಟು ಕೊಟ್ಟು ಬಂಡೆಗಲ್ಲಿನಲ್ಲಿ ತೋಡು ಹಾಕುತ್ತಿದ್ದ ಶಿಲ್ಪಿಯು ಓಡಿ ಬಂದು ತ್ರೈಲೋಕ್ಯನನ್ನು ಶಿಬಿರಕ್ಕೆ ಸಾಗಿಸಿ ಔಷದೋಪಚಾರ ಮಾಡಿದ. ಕಣ್ಣಿನ ನರಗಳ ಸೆಳೆತ, ಆ ಚುಟುಚುಟು ನೊವೆ, ಸದೋದಿತ ಸುರಿಯುವ ಕಣ್ಣೀರ ತೊರೆಯಲ್ಲಿ ಅವನಿಗೆ ತಾನು ಯಾರೆಂಬುದು ಕೂಡ ಮರೆಯುವಂಥ ದುಃಸ್ಥಿತಿ ಬಂದೊದಗಿತ್ತು. ತ್ರೈಲೋಕ್ಯನ ಬಲಗಣ್ಣಿಗೆ ಬಡಿದ ಕಲ್ಲಿನ ಗಾತ್ರ ಚಿಕ್ಕದಿದ್ದ ಕಾರಣದಿಂದ ತಲೆ ಉಳಿದು ಬಲಕಣ್ಣು ಕಳೆದುಕೊಂಡ.

ಪೆಟ್ಟು ತಿಂದ ಕಣ್ಣು ವರ್ಷಗಳ ಕಾಲ ಧಾರಾಕಾರ ನೀರು ಸುರಿಸುತ್ತಲೇ ಅದು ನಂಜಾಗಿ, ಕೀವಾಗಿ ಒಸರುವಾಗ ಆ ಶಿಲ್ಪಿಯು ಅಲ್ಲೇ ಕಾಡುಗೊಂಡ ಕುಲದ ವೈದ್ಯರನ್ನು ಕರೆಯಿಸಿ ಹಸಿತೊಪ್ಪಲ ಆರೈಕೆ ಮಾಡಿಸಿ, ತುಪ್ಪದ ಕಾವು ಕೊಡೆಸುತ್ತ, ಹಾಗೋ ಹೀಗೋ ಕಣ್ಣಿನ ನಂಜು ಮಾಯವಾಗಿಸಿ ಪುಣ್ಯ ಕಟ್ಟಿಕೊಂಡ.
“ಅಯ್ಯ.. ಶಿಲ್ಪಕಾರ ನಿನ್ನ ಕಾಳಜಿಗೆ ನಾನು ಋಣಿ. ನಿನಗೆ ಪುಣ್ಯ ಬರಲಿ ನನ್ನಪ್ಪ.”
“ನೀನು ಪೆಟ್ಟು ತಿಂದಾಗ, ನಿನ್ನ ಬಾಯೊಳಗೆ ಮಹಾಕೂಟೇಶ ಎಂಬ ಶಬ್ದ ಅದುರಿತಲ್ಲ…”
“ಹೌದು.”
“ಆ ಮಹಾಕೂಟೇಶನ ನೆಲದವನು ನಾನು. ನೀನಾಡಿದ ನುಡಿಗಳು ನನ್ನ ತಾಯ್ನುಡಿಗಳು.”
“ಅಂದರೆ ನೀವು ಕನ್ನಡ ನಾಡಿನವರೇ ನನ್ನ ತಾಯಿ ವಾತಾಪಿ ಸೀಮೆಯವಳು. ಅವಳು ಆಗಾಗ ನೆನೆಯುವುದು ಮಹಾಕೂಟೇಶನನ್ನು. ಹಾಗಾಗಿ ನೀವು ನನ್ನ ಸಂಬಂಧಿಯಾದಿರಿ.”
“ನಿಮ್ಮ ತಾವು ಯಾವುದು ಅಯ್ಯಾ?”
“ನನ್ನ ತಂದೆ ವಾತಾಪಿ ಸೀಮೆಯಲ್ಲಿ ಶಿಲ್ಪಕಾರನಾಗಿ ರಕ್ತಕಲ್ಲಿನಲ್ಲಿ ಕೆಲಸ ಮಾಡುವಾಗ ಅದೇ ಊರಿನ ಆಚಾರಿಯೊಬ್ಬನ ಮಗಳ ಜೊತೆ ಪ್ರೇಮವಾಗಿ, ಆ ಪ್ರೇಮಕ್ಕೆ ಅಲ್ಲಿನವರ ವಿರೋಧವಾಗಿ ನನ್ನ ತಾಯ್ತಂದೆಯರು ಇತ್ತಲೀ ಕಾನೋಜ ದೇಶಕ್ಕೆ ಓಡಿ ಬಂದರಂತೆ. ನನ್ನ ಮನೆಯಲ್ಲಿ ಆ ರಕ್ತಕಲ್ಲಿನ ಊರಿನದ್ದೆ ಗುಣಗಾನ.”
“ಆ ರಕ್ತಕಲ್ಲಿನ ಹೆಸರೀಗ ಪಟ್ಟದಕಲ್ಲು. ನಾನು ಸಹ ಅದೇ ಊರಿನವನು ಅಯ್ಯ…”
ಆ ಶಿಲ್ಪಿಯ ಕಾರಣದಿಂದ ಬದುಕಿದ ತ್ರೈಲೋಕ್ಯನಿಗೆ ನಿಧನಿಧಾನಕ್ಕೆ ಊರಿನ ನೆನಪುಗಳು ಅಮರಿಕೊಳ್ಳತೊಡಗಿದವು. ಇಬ್ಬರೂ ಖಾಸ ಗೆಳೆಯರಷ್ಟು ಅನ್ಯೋನ್ಯವಾಗುತ್ತ ಆ ಶಿಲ್ಪಿಯ ಸಹಾಯದಿಂದ ತಾನು ಉಳಿ-ಸುತ್ತಿಗೆ ಹಿಡಿದು ಕೆಲಸ ಮಾಡುವಷ್ಟು ನಿಪುಣತೆ ಬಂದದ್ದರಿಂದ ಆ ಮೈ ಮುರಿಯುವ ಹುಂಬುತನದ ಕೆಲಸದಿಂದ ಬಿಡುಗಡೆಗೊಂಡು ನಿಧನಿಧಾನಕ್ಕೆ ಕಲ್ಲುಗಳಲ್ಲಿ ಆಕಾರ ಸೃಷ್ಟಿಸುವ, ಸೃಷ್ಟಿಸಿದ ಆಕಾರದಲ್ಲಿ ಮಗುತನ ಕೆತ್ತುವ, ತನ್ನದೇ ಮಗು ಹುಟ್ಟಿ ಬಾಳಿದ್ದರೆ ಹೇಗಿರುತ್ತಿದ್ದ ಎಂಬ ಚಿತ್ರವಿಚಿತ್ರ ಗೊಂಬೆಗಳನ್ನು ಕಲ್ಲಿನಲ್ಲಿ ತಿದ್ದಿತೀಡುವ ಕೌಶಲವನ್ನು ಕಲಿತ. ಒಂಟಿಕಣ್ಣಿನ ಧ್ಯಾನದಲ್ಲಿ ಒಂದೆರಡು ಮುಗ್ಧಮುಖದ ಜಯವಿಜಯರ ಮೂರ್ತಿಗಳನ್ನು ಆಕಾರಗೊಳಿಸಿದಾಗ ಶಿಲ್ಪಿಗಳೆಲ್ಲರಿಗೂ ಅಚ್ಚರಿಯಾಯ್ತು. ಇದೆಲ್ಲದರ ನಡುವೆ ಮೇಳದ ಹುಡುಗರು ಒಬ್ಬೊಬ್ಬರಾಗಿ ಕ್ಷೀಣಿಸುತ್ತ ನೆಲಮುಗಿಲು ಏಕಾಗಿರುವ ಕ್ಷಿತಿಜದಲ್ಲಿ ಸೇರಿಕೊಂಡು ಬೆಳಕಿನ ಪುಂಜಗಳಾಗುತ್ತಿದ್ದರು. ತಾನು ಮಾತ್ರ ಕಣ್ಣು ಕಳೆದುಕೊಂಡರೂ ಮಹಾಲೇಖೆಯ ಕಾಯುವಿಕೆಗಾಗಿ ಬದುಕುಳಿದಿದ್ದ.
***********

ಹಣೆಯ ಕುಂಕುಮ ಅಳಿಸಲೋ ಬ್ಯಾಡೋ, ಬದುಕಿದ್ದಾನೋ ಇಲ್ಲವೋ.. ಆ ಬೂದಿಸಾಧು ಹೇಳಿದ್ದ ‘ಕಳಕೊಂಡ ಪಡಕೊಳ್ಳೋ ಸುಖ’ ಇದ ಏನು ಅದು. ಗೇಣುದ್ದ ಇದ್ದ ಮಗ ಬೆಳೆದು ಮೊಣಕೈಯಷ್ಟಾದ, ಮೊಣಕಾಲ ಮ್ಯಾಲಿಂದ ಎದ್ದು ನಿಧಾನ ತಪ್ಪೆಜ್ಜೆ ಇಟ್ಟು ಅಡ್ಯಾಡುವಷ್ಟಾದ, ಕರುಗಳ ಬಾಲ ಹಿಡಕೊಂಡು ಓಡ್ಯಾಡುವಷ್ಟು ದೊಡ್ಡವನಾದರೂ ಗಂಡ ಬರಲಿಲ್ಲ. ಬಂದಾನು ಇಂದಿಲ್ಲ ನಾಳೆ ಬರತಾನು ಎನ್ನುತ್ತಲೇ ಮೂರು ವರ್ಷ ಕಳೆದವು. ಉತ್ತರದಾಗ ದಾಳಿಗಳು ನಡೆದು ದಂಡಿನ ಮಂದಿ ರಕ್ತ ಹರಿಸಿ ಆಳುತ್ತಿದ್ದ ರಾಜರ ಕೈ ಬದಲಾಯ್ತು. ರಟ್ಟರು ಹೋಗಿ ಚಾಲೂಕಿನವರು ಬಂದರು.
ಮಗ ಕೈಹಿಡಿದುಕೊಂಡು ತಾಯಿಯ ಜೊತೆ ಕುಳ್ಳುಕಟ್ಟಿಗೆ ಆರಿಸಲು ಅಡವಿ ಅರಣ್ಯ ತಿರುಗುವಷ್ಟು ದೊಡ್ಡವನಾದ.

“ಅಬ್ಬೆ ಅಪ್ಪ ಹೆಂಗಿದ್ದ?”
“ಹೆಂಗಂದರ. ದಿಟ್ಟೂ ನಿನ್ನ ಹಂಗ ಇದ್ದ. ಒಣಕೀ ಗಾತ್ರದ ತೋಳು, ಹುರಿಮೀಸಿ, ಅಗಲ ಹಣಿ, ನಿನ್ನದ ಕಣ್ಣೋಟ.”
“ಮತ್ತ ಅಪ್ಪ ಯಾವಾಗ ಬರತಾರು?”
“ಈ ಸಲ ಮಲಪ್ರಹರಿ ತುಂಬಿ ಹರಿತಾಳಲ್ಲ. ಅದಾದ ತಿಂಗಳೊಪ್ಪತ್ತಿಗೆ ಬರತಾರು.”
ವರುಷಗಳು ಉರುಳಿ ಎಂಟು ಆದಾಗ ವಸುದೀಪ್ಯನಿಗೆ ದಂಡಿನ ಮೇಳದಲ್ಲಿ ಸೇರಿಸಬೇಕೆಂದು ದಂಡಿನ ದಳವಾಯಿ ಹೇಳಿ ಕಳುಹಿಸಿದ. ನರಸವ್ವನೇ ಅಬ್ಬಬ್ಬೆಯಾಗಿ, ನರಸವ್ವನ ಮಗ ಮಾಲಿಂಗನೇ ಸೋದರಮಾವನಾಗಿ ತುಂಬಿ ಬಂದಿದ್ದ ಮಲಪ್ರಹರಿಗೆ ಬಾಗೀನ ಕೊಟ್ಟು ನಮಸ್ಕರಿಸಿ, ನಮ್ಮ ಮನೆಯ ಕುಡಿಯೊಂದು ರಣದ ಕಣಕೆ ಹೊಂಟಿದ್ದಾನವ್ವಾ ಗಂಗಾಮಾಯಿ, ನಿನ್ನ ಹರಿವಿನ ಕಸುವು ಅವನಿಗೂ ಸಿಗಲೆಂದು ಮನಸಾರೆ ಬೇಡಿಕೊಂಡು ವಸುದೀಪ್ಯನ ಮುಂಗೈಗೆ ಕಂಕಣ ಕಟ್ಟಿ, ಮೊರತುಂಬ ಜೋಳ, ಜೋಡುಗಾಯಿ, ಬಟ್ಟಲು ತುಪ್ಪ, ಒಂದ ಹಿಡಿ ಉಪ್ಪು ತೆಗೆದುಕೊಂಡು ದಂಡಿನ ಮಾರಿಗೆ ಒಪ್ಪಿಸಿದರು. ವಸುದೀಪ್ಯನ ಅಪ್ಪನೇ ನಾಯಕನಾಗಿದ್ದ ಗರಡಿಯ ಅಂಗಳಕ್ಕೆ ಮಗ ಕಾಲಿಟ್ಟಾಗ ಮಹಾಲೇಖೆಯ ಕಣ್ಣಾಲಿಗಳು ತುಂಬಿ ಬಂದವು. ಅವರೇ ಮುಂದೆ ನಿಂತು ಕಂಕಣ ಕಟ್ಟಿಸಿ ಮಗನನ್ನು ರಣಕಲಿಯಾಗಿಸಬೇಕಿದ್ದ ಗಳಿಗೆ ಮುಗಿದು ಹೋದರೂ ಮಾರಾಯ ಬರಲಿಲ್ಲವಲ್ಲ ಎಂದು ರೋದಿಸಿ ಅಳತೊಡಗಿದಳು…

ಸಿದ್ಧ ಪ್ರಸಿದ್ಧ ಸಾಧುವಿನಿಂದ ನೀತಿಪಾಠಗಳು, ತತ್ವ ಪಾಠಗಳು ಆರಂಭವಾದಾಗ ವಸೂದೀಪ್ಯ ಚಂದ್ರಮೌಳೇಶನ ಗುಡಿಯ ಆವರಣದಲ್ಲಿಯೇ ಮಲಗತೊಡಗಿದ. ಶಿವನಿಂದ ತೊಡಗಿ ಇರುವೆ ಎಂಬತ್ತೇಳು ಲಕ್ಷ ಜೀವರಾಶಿಗಳ ಹುಟ್ಟು, ಸಾವು, ನಡುವೆ ಬದುಕಬಹುದಾದ ಕೆಲ ವರ್ಷಗಳ ನೈತಿಕತೆಯ ಪಾಠಗಳು ವಸೂದೀಪ್ಯನನ್ನು ಸೆಳೆದವು. ಈ ಮಣ್ಣು, ಈ ಗಾಳಿ, ಆ ನೀರು, ಆ ಬೆಂಕಿ ಇವುಗಳನ್ನೆಲ್ಲ ತನ್ನ ಬಾವಿಯೊಳಗಿಟ್ಟುಕೊಂಡಿರುವ ಆಗಸದ ಬಗ್ಗೆ ಕುತೂಹಲ ಹೆಚ್ಚಾಗಿ ಗುಡಿಯ ಮಂಟಪ ಬಿಟ್ಟು ತನ್ನ ಗುರುವಾದ ಸಿದ್ಧ ಪ್ರಸಿದ್ದ ಸಾಧು ಮಲಗುತ್ತಿದ್ದ ನೆಲದಮೇಲೆ ಬಂದು ತನ್ನ ಗುರುವಿನ ಮಗ್ಗುಲಲ್ಲಿ ಮಲಗಿಕೊಳ್ಳತೊಡಗಿದ. ಆತ ಮಲಗಿಕೊಂಡಾಗಲೂ ಆಕಾಶದ ಚುಕ್ಕಿಗಳ ಕತೆ ಹೇಳುತ್ತಿದ್ದ. ಒಂದೊಂದು ಚುಕ್ಕಿಯದ್ದೊಂದೊಂದು ಕತೆ. ಬೆರಗು ಬೆರಳುಕಚ್ಚುವಂತೆ ಕತೆಮಾಡಿ, ತನ್ನ ಅರಿವಿಗೆ ಬಂದ ತತ್ವದ ತಿಳವಳಿಕೆಯನ್ನು ವಸೂದೀಪ್ಯನಲ್ಲಿ ಬಿತ್ತತೊಡಗಿದಾಗ ಆ ಸಿಧ್ಧಸಾಧುವಿಗೂ ಏನೋ ಒಂದು ಬಗೆಯ ಬಿಡುಗಡೆಯ ಭಾವ ಬರತೊಡಗಿತ್ತು. ಎದ್ದಾಗಲೂ, ಉಣ್ಣುವಾಗಲೂ, ಅಂಬಲಿ ಕುಡಿವಾಗಲೂ, ಸ್ನಾನ ಮಾಡುವಾಗಲೂ ಬೆನ್ನುಜ್ಜಲು ವಸೂದೀಪ್ಯನನ್ನು ಕರೆಯುವುದನ್ನು ಕಂಡ ವಾರಿಗೆಯ ಹುಡುಗರೊಳಗೆ ಅಸೂಯೆ ಮನೆ ಮಾಡುವಷ್ಟು ಒಡನಾಟವಾಯ್ತು.
“ಅಯ್ಯಾ ಶಿವ ನಮ್ಮೊಳಗಿರುವನೇ?”
“ಒಂದಂಶ ಅವನಿಂದಲೇ ನಮ್ಮ ಉಸಿರಾಟವಲ್ಲವೇ ಮಗು…”
“ಶಿವನ ಆಕಾರ ಈಗಿರುವಂತೆ ಇರುವುದು ಸರಿಯೇ?”
“ಅದು ಊದ್ರ್ವಮುಖಿ, ಬಾಯ್ದೆರೆದು ಅನಂತವಕಾಶದಲ್ಲಿಯೂ ಲೀನಗೊಳ್ಳುವ ಮಾಯಕದ ಮೂರುತಿ.”
“ಮೂರನೇ ಕಣ್ಣು..?”
“ಅರಿವಿನ ಕಣ್ಣು, ನನ್ನೊಳಗೂ ಇದೆ ನಿನ್ನೊಳಗೂ ಇದೆ.”
“ಅದರ ಇರುವಿಕೆಯನ್ನ ತಿಳಿಯುವುದು ಹೇಗೆ ಅಯ್ಯಾ?”
“ಅರಿವಿನ ಇರುವನ್ನು ಹುಡುಕಬಾರದು ಮಗು. ನಾವಿದ್ದೇವೆ ಎನ್ನುವುದು ಕೂಡ ಅರಿವು. ನಿನ್ನ ತಾಯಿ ತಂದೆಯರ ಇರುವಿಕೆಯ ಅರಿವಿನಿಂದಲೇ ನೀನು ಹುಟ್ಟಿದೆ. ನಿನ್ನ ಹುಟ್ಟು ಆ ಶಿವನ ಕರುಣೆಯಿಂದ ಆಯ್ತೆನ್ನುವುದು ಧರ್ಮ. ಈ ಧರ್ಮ ಯಾವುದೆಂದರೆ.. ನಿನ್ನ ತಾಯ್ತಂದೆಯರ ಕೂಡುವ ಬಗೆಯಲ್ಲಿ ಇರುವಂಥದ್ದು. ಈ ಎರಡು ದೇಹಗಳು ಒಂದಾಗುವ ಮೂಲಕ ಮತ್ತೊಂದು ಮೂರನೆಯ ಜೀವ ತಳೆಯುವುದಲ್ಲ ಅದನ್ನ ಸೃಷ್ಟಿಕ್ರಿಯೆ ಅನ್ನತಾರೆ. ಅದು ಶಿವ-ಶಿವೆಯರ ಸಮ್ಮಿಲನದ ಸ್ವ-ರೂಪು. ಈ ಎಲ್ಲ ಸಂಕೀರ್ಣಗಳ ಮೊತ್ತವನ್ನೆ ಈ ಊದ್ರ್ವಮುಖಿಯಲ್ಲಿ ಕಂಡಕಾರಣಕ್ಕೆ ಶಿವನಿಗೆ ಈ ಆಕಾರ ಮಗು.”
“ದಿನವೂ ನೀವು ಎದ್ದು ಶುಚಿಯಾದೊಡನೆ ಲಿಂಗ ದರುಶನ ಮಾಡುವಿರಲ್ಲ ಅಯ್ಯ”
“ಹೌದಪ್ಪಾ.. ಆ ಶಿವನ ದರುಶನವಿಲ್ಲದೆ ಒಂದು ಹನಿ ನೀರು, ಒಂದಗುಳು ಅನ್ನವನ್ನು ಬಾಯಿಗೆ ಹಾಕಬಾರದು.”
“ನೀವು ಪರದೇಶ ಸಂಚಾರಕ್ಕೆ ಹೋದಾಗ ಶಿವನ ದರುಶನ ಸಾಧ್ಯವಾಗದಿದ್ದರೆ…?”
“ಅಸಾಧ್ಯವೆನ್ನುವುದಿಲ್ಲ. ಈ ಲಿಂಗಗಳು ನಾವು ಸೃಷ್ಟಿ ಮಾಡಿರುವ ಆಕಾರಗಳು. ಆದರೆ ಆ ಪರಶಿವನೇ ತಾನು ಸದಾ ಲೋಕಸಂಚಾರಿ ಎನ್ನುವುದಕ್ಕಾಗಿ ಹೋರಿಗಳ ಬೆನ್ನ ಮೇಲೆ ಕುಳಿತಿರುತ್ತಾನೆ..”
“ಹೋರಿಗಳ ಮೇಲೆ..?”
“ಹೌದು, ದೇವರಿಗೆ ಬಿಡುವ ಗೂಳಿಯ ಬೆನ್ನಮೇಲಿನ ಇನಿಯು ಯಾವ ರೂಪದಲ್ಲಿದೆ.”
“ಲಿಂಗದ ರೂಪದಲ್ಲಿ.”
“ಹಾಂ ಅದಕೆ ನಾವು ದೇವಾಲಯಕ್ಕೆ ಹೋದಾಗ ಆ ನಂದಿಯ ಬೆನ್ನ ಮೇಲಿನ ಲಿಂಗದ ಮೂಲಕ ಗುಡಿಯೊಳಗಿನ ಶಿವನ ಕಾಣಬೇಕು. ಅವನು ಯಾವಾಗ ಲೋಕಸಂಚಾರಕ್ಕೆ ಹೋಗಿರುತ್ತಾನೋ, ಅದ್ಯಾವಾಗ ಬಂದು ಗುಡಿಯೊಳಗೆ ವಿಶ್ರಮಿಸುತ್ತಿರುತ್ತಾನೋ ಯಾರು ಬಲ್ಲರು. ಈಗ ಪರದೇಶಕ್ಕೆ ಹೋದಾಗ ಶಿವನ ಗುಡಿಗಳಿಲ್ಲದಿದ್ದರೆ ಆ ನಂದಿಯ ಹೆಗಲ ಮೇಲೆ ಸದಾಕಾಲವೂ ಆಸೀನನಾಗಿರುವ ಶಿವನ ದರುಶನಕ್ಕೆ ಯಾವ ತೊಂದರೆಯೂ ಬಾರದಲ್ಲ ಮಗು.”

ವಸೂದೀಪ್ಯನ ಕಣ್ಣೊಳಗೆ ತಾಯಿ ಹೇಳುತ್ತಿದ್ದ ಅಪ್ಪನ ಕತೆ ನೆನಪಾಯ್ತು. ದಿನವೂ ಬೆಳಗಾಗೆ ನಂದಿಯ ಹೆಗಲು ಮುಟ್ಟಿ ಸನಮಾಡುವ ಅಪ್ಪನಂತೆ ತಾನು ಬದುಕಬೇಕು ಎನಿಸಿತು. ನಂದಿಯ ಹೆಗಲ ಮೇಲಿನ ಶಿವನೇ ಸಾರ್ವಕಾಲಿಕ ಸತ್ಯ. ಅವನನ್ನೆ ನಂಬು ಎಂದು ಮನಸ್ಸು ಹೇಳಿತು. ಶಾಸ್ತ್ರಗಳನ್ನು ಆಳವಾಗಿ ಓದಬೇಕೆನಿಸಿತು. ಪುರಾಣ ಕತೆಗಳನ್ನು ಸಿದ್ದಪ್ರಸಿದ್ದ ಸಾಧುವಿನಿಂದ ಕೇಳಿ ತಿಳಿದುಕೊಳ್ಳುವ ಹಂಬಲದಲ್ಲೇ ಜೀವ ತೊಳಲಾಡುತ್ತಿತ್ತು.
ಆಗಾಗ…

ರಣಬಿಸಿಲು ಹೊಯ್ಯುವಾಗ ವಸೂದೀಪ್ಯ ಮನೆಯವರೆಗೂ ಹೋಗಿ, ಅಬ್ಬಬ್ಬೆಯನ್ನು, ಅಬ್ಬೆಯನ್ನು ಮಾವ ಮಾಲಿಂಗನನ್ನು ಮಾವನ ಮಕ್ಕಳನ್ನು ಮಾತಾಡಿಸಿಕೊಂಡು ಬರುತ್ತಿದ್ದ. ಒಮ್ಮೊಮ್ಮೆ ತಾಯಿಯನ್ನು ಕೂರಿಸಿಕೊಂಡು ಲೋಕದ ಬೆರಗುಗಳನ್ನು ಚಿತ್ರವತ್ತಾಗಿ ಹೇಳಿ ಮನಸೂರೆಗೊಂಡಾಗ ಮಹಾಲೇಖೆಯ ಕಣ್ಣೊಡಲು ತುಂಬಿ ಬರುತ್ತಿದ್ದವು. ನೆನಪಾದಾಗೊಮ್ಮೆ ಅಪ್ಪನ ಬಗ್ಗೆ ಕೇಳುತ್ತಿದ್ದ. ಸ್ವಲ್ಪ ದಿನಗಳಲ್ಲೇ ತಾನು ಕಾನೋಜ ಸೀಮೆಗೆ ಹೋಗಿ ಅಪ್ಪನನ್ನು ಹುಡುಕಿಕೊಂಡು ಬರುತ್ತೇನೆಂದು ಅಬ್ಬೆಗೆ ಧೈರ್ಯ ಹೇಳುತ್ತಿದ್ದ. ಗಂಡನ ಮುಖ ಕಾಣದೆ ಹತ್ತು ವರುಷ ಕಳೆದಾಗ ಆಕೆಯ ಮನಸ್ಸಿನಲ್ಲಿ ಬಂದಾನೆಂಬ ಭರವಸೆಯೇ ಕಮರಿತ್ತು. ಕಾಶಿಗೆ ಹೋದವರೇ ಹೊರಳಿ ಬಾರದ ದಿನಗಳಲ್ಲಿ ಶಿಕ್ಷೆಗೆ ಗುರಿಯಾದವ ಬಂದಾನೇ..? ಮೂರು ವರುಷದ ತರುವಾಯ ಆರು ವರುಷ ಕಳೆದರೂ ಆಕೆ ಕಣ್ಣುಗಳಲ್ಲಿನ ಆಸೆ ಬತ್ತಿರಲಿಲ್ಲ. ಬಂದಾನು, ಬರುತಾನು, ಬಂದೇ ಬರುವನು.. ಎಂಬ ಹಂಬಲದಲ್ಲಿ ಬೀಸುವ ಕಲ್ಲಿಗೆ ಜೋಳ ಸುರುವಿ ಹಿಟ್ಟು ಬೀಸಿಕೊಡುವ, ಕಾಳುಕಡಿ ಹಸಮಾಡಿಕೊಡುವ, ಗುಡ್ಡದಲ್ಲಿ ಕುಳ್ಳುಕಟ್ಟಿಗೆ ಆರಿಸಿ ತಂದುಕೊಡುವ, ಹಪ್ಪಳ, ಸಂಡಿಗೆ ತೀಡಿ ಕೊಡುವ ನೂರೆಂಟು ಕಾಯಕಗಳನ್ನು ಮಾಡುತ್ತ ನರಸವ್ವನ ನೆರಳಲ್ಲಿ ಭಾಳ ದೂಡುತ್ತಿದ್ದವಳಿಗೆ ನಿಟ್ಟುಸಿರಿನ ಹಾಡುಗಳ ಬಿಟ್ಟರೆ ಮಗನ ಆಟ-ಹುಡುಗಾಟಗಳೇ ಸಂಗಾತಿಗಳಾಗಿದ್ದವು. ವಸೂದೀಪ್ಯ ಕಣ್ಣಮುಂದಿದ್ದಾಗ ಲೋಕವೆಲ್ಲ ಬೆರಗೋ ಬೆರಗು ಅನ್ನುವಷ್ಟು ಹಗುರಾಗುತ್ತಿದ್ದಳು. ಅವನ ಹೊಸಕಲಿಕೆಯ ಹುಮ್ಮಸ್ಸು, ತುಸು ಜವಾಬ್ದಾರಿಯ ಮಾತುಗಳು ಆಕೆಗೆ ಸಾಂತ್ವನ ಹೇಳುತ್ತಿದ್ದವು. ಮಗ ಇಳಿಸಂಜೆಯ ಪಾಠಗಳಿಗಾಗಿ ಗುಡ್ಡದಿಂದ ದುಡುದುಡು ಇಳಿದು ರಕ್ತಬಣ್ಣದ ಆ ಮಣ್ಣನೆಲದಲ್ಲಿ ಓಡುವಾಗ ತ್ರೈಲೋಕ್ಯನದೇ ಲವಲವಿಕೆ ಕಣ್ಣಿಗೊತ್ತಿತು.

ನಿಟ್ಟನಿಲುವೇನ ದಟ್ಟಿ ಉಟ್ಟಿದ್ದೇನ ನನರಾಯ
ನೀನಿಟ್ಟ ಕಾಳುಕಡಿ ಹೊಟ್ಟೆಗಾಯ್ತ/ ನೀ ಹೋದ ಮರುದಿನ
ಬಿರುಬ್ಯಾಸಿಗಿ ರಣಬಿಸಿಲ ಅಂಗಳದಾಗ
ಬಿರುಬ್ಯಾಸಿಗಿಯ ರಣಬಿಸಿಲ ಸಲಹುವ ಸಲುವಾಗಿ
ನೀಕೊಟ್ಟ ಕೂಸು ಬೆಳೆದಾದ/ ನೀ ಹೋದ ಮರುದಿನ
ತಲೆಮಾಸದ ಶಿಶು ಶಿವನಾಗಿ ಕುಣದಾನು.
***********

ಇತ್ತ ಹೆಂಡತಿ ಮಗುವಿಗಾಗಿ ಹಂಬಲಿಸಿ ದೇಹವೆಂಬೋ ದಿಂಡು ನುಜ್ಜುಗುಜ್ಜಾಗಿ, ಒಂಟಿಕಣ್ಣಲ್ಲೇ ಶಿಲ್ಪಿಯೂ ಆಗಿ, ತಾನು ಕಂಡಿರದ ಮಗುವಿನ ಆಕಾರ ಹೀಗಿದೆಯೇ, ಹೀಗಿರಬಹುದೇ ಎಂದು ಕಲ್ಲುಗಳನ್ನ ಮೇಣದಂತೆ ತಿದ್ದಿತೀಡಿ ಗೊಂಬೆಗಳನ್ನಾಗಿಸುತ್ತ ಕಾಲಕಳೆಯುತ್ತಿದ್ದ. ಅದೊಂದು ದಿನ ಬೆಳಗಿನ ಪ್ರಹರಕ್ಕೆ ಎದ್ದು ತನ್ನೀರು ಮಿಂದು ಬಂದು, ಮನದಲ್ಲಿ ಮನೆಯದೇವರ ನೆನೆಯುತ್ತ ಮೊಂಡುಮೊಂಡಾಗಿದ್ದ ಉಳಿಗಳನ್ನು ಸಾಣೆಹಿಡಿಯಲು ಕುಳಿತಿದ್ದ. ಉಳಿದೆಲ್ಲ ಶಿಲ್ಪಿಗಳು, ಆಚಾರಿಗಳು ಇವನೊಡನೆ ಎದ್ದವರು ಪಿಸುಪಿಸು ಮಾತಾಡುತ್ತ ತಮ್ಮ ಬಟ್ಟೆಬರೆ ಉಳಿದ ವಸ್ತುಗಳನ್ನು ಗಂಟುಕಟ್ಟಿಕೊಳ್ಳುತ್ತಾ ಬಿಸಿಲೇರುವ ಮೊದಲು ಊರು ಸೇರಲು ತಯಾರಾಗುತ್ತಿದ್ದರು. ರಾಗಬದ್ದವಾಗಿ ಕಟ್ ಕಟ್ ಕಟಾಕಟಕಟ್ ಎಂದು ಕಲ್ಲು ಕಟೆಯುವ ಶಬುದ ಇಷ್ಟರಲ್ಲಾಗಲೇ ಕೇಳಬೇಕಿದ್ದುದು ಯಾಕಾಗಿ ಕೇಳಿಸುತ್ತಿಲ್ಲ ಎಂಬ ಸಂದೇಹದಲ್ಲಿ ಎದ್ದು ಸುತ್ತಲೂ ಕಣ್ಣಾಡಿಸಿದಾಗ ಯಾರೊಬ್ಬರೂ ಕೆಲಸಕ್ಕೆ ಬಂದಿರಲಿಲ್ಲ. ಆ ಮಹಾಕೂಟೇಶಾಚರ್ ಶಿಲ್ಪಿಯು ತನ್ನ ಸಾಮಾನು ಸರಾಂಜಾಮು ಸಮೇತ ಇತ್ತ ಬಂದರು.
‘ಅಪ್ಪಾ ತ್ರೈಲೋಕ್ಯ ರಾಜರೆಂಬೋ ರಾಜರು ಮತ್ತವರ ದಂಡು- ದಳವಾಯಿಗಳು ಕದನಕ್ಕೆ ಮೊದಲಾಗಿ ನಮ್ಮನಾಳುವ ಮಾನ್ಯಖೇಟದ ದೊರೆಯು ಸೋತು ಸುಣ್ಣವಾಗಿದ್ದಾನೆ. ನಾವಿರುವ ಈ ಕಾನೋಜ ಈಗ ಮತ್ತೊಬ್ಬ ರಾಜನ ನೆಲವಾಗಿದೆ. ನಾವೀಗ ನಮ್ಮ ಸ್ಥಳಗಳಿಗೆ ಹೊರಟಿದ್ದೇವೆ. ನೀನಾದರೂ ನಿನ್ನೂರಿಗೆ ನಡೆದುಬಿಡು’ ನೆನ್ನೆಯವರೆಗೂ ತನ್ನದೇ ರಾಜ್ಯದ ನೆಲದಲ್ಲಿ ಇದ್ದವನು ಇಂದು ತಾನಲ್ಲಿ ಪರದೇಶಿಯನಾಗಿ ತನ್ನೂರಿಗೆ ಹೊರಡಬೇಕಾದ ಸಂದರ್ಭ ಹೀಗೆ ಒದಗಿಬಂದದ್ದು, ಆ ಸೀಮೆಯ ದಾಟಿ ಬರಲು ನೂರೆಂಟು ಪಡಿಪಾಟಲು ಎದುರಾಗುವ ಭಯ ಕಾಡತೊಡಗಿತು.

ಹೊಸ ರಾಜರ ಗಡಿ ಯಾವುದಯ್ಯ. ಈ ಕಾಡು ಕಳೆದು, ಬಿಡುಬೀಸಾದ ಬಯಲು ಬರುವ ಭೀಡ್ ಊರಿನಾಚೆ ನಮ್ಮ ನೆಲವಂತೆ. ಹೊಸ ದೊರೆಯ ಸೈನಿಕರ ಕಣ್ಣಿಗೆ ಬೀಳದಂತೆ ಒಳದಾರಿ ಹಿಡಿದು ಊರು ಸೇರಿಕೊಳ್ಳಬೇಕಿದೆ. ಹೊರಟು ಬಾ ಬೇಗ.. ನಮ್ಮವರು ಆಗಲೇ ಕೆಲವರು ಹೊರಟಿದ್ದಾರೆ. ಮತ್ತೆ ಬಂಧನವಾದರೆ ಆಯುಷ್ಯವೇ ಮುಗಿದೀತು ಜೋಕೆ. ಕಟ್ಟಿಕೊಳ್ಳಲು ಏನೊಂದೂ ಇಲ್ಲದ ತ್ರೈಲೋಕ್ಯ ಉಟ್ಟುಡಿಗೆಯಲ್ಲೇ ಹೊರಟುಬಿಟ್ಟ. ತಿಳಿಯದ ದಾರಿಯಲ್ಲಿ ಗುಂಪುಗುಂಪಾಗಿ ತುಸುದೂರ ನಡೆದಮೇಲೆ ಗುಡ್ಡಗಳ ಇಳಿದು, ಗುಡ್ಡಗಳ ಹತ್ತುವ ಪ್ರಯಾಸದ ಕಾಡದಾರಿಯಲ್ಲಿ ಆಯಾಸಗೊಂಡವರು ಹಿಂದೆ ಉಳಿದರು. ಮುಂದಾದವರು ನೆದರಿಗೆ ಸಿಗದಂತೆ ಕ್ಷಿತಿಜದಾಚೆ ನಡೆದಿದ್ದರು. ದಿನವೆರಡು ಮಿಕ್ಕಿದಾಗ ಕುರುಚಲು ಕಾಡು ಹೊಕ್ಕಿದ್ದರು. ಇಲ್ಲಿಂದ ಮುಂದೆ ಸೈನ್ಯಗಳು ಬೀಡು ಬಿಟ್ಟಿರುವ ಸಂಗತಿ ದಾರಿಹೋಕರಿಂದ ತಿಳಿದು ಗುಂಪುಗಳ ಗುರುತು ಅಳಿಸಿ ಬಿಡಿಬಿಡಿಯಾಗಿ ನಡೆಯಬೇಕಿತ್ತು. ಮುದುತದುಕರ ಜೊತೆ ಮಾಡಿ ಕೆಲವರು ಹೊರಟರೆ, ಕೆಲವರು ವ್ಯಾಪಾರಿಗಳ ಬಂಡಿಯ ಹಿಂದೆ ಮುಂದೆ ನಡೆದರು, ಒಂದು ಗುಂಪು ಅಲ್ಲಿಂದ ಸುತ್ತು ಬಳಸಿ ಶ್ರೀಗಿರಿಯ ಭಕ್ತರ ಮಾರ್ಗದಲ್ಲಿ ನಡೆದು ಬರಲು ಹೊರಟಿತ್ತು. ಅಂಗ ಊನರು ಹೀಗೆ ಗೊಂಬೆರಾಮರು, ಹೆಳವರು, ದೊಂಬರಂಥ ಅಲೆಮಾರಿಗಳ ಜೊತೆಗೂಡಿ ಸೀಮೆ ದಾಟಬೇಕಿತ್ತು. ಮಹಾಕೂಟೇಶಾಚಾರ್ ತಮ್ಮ ಸೊಂಟದಲ್ಲಿ ಸಿಕ್ಕಿಸಿದ್ದ ಎರಡು ಬಂಗಾರದ ನಾಣ್ಯಗಳನ್ನು ತ್ರೈಲೋಕ್ಯನ ಕೈಗೆ ಕೊಟ್ಟರು.
“ಅಪ್ಪಾ ಬದುಕಿದ್ದರೆ ನಾನು ಒಮ್ಮೆಯಾದರೂ ರಟ್ಟಕಲ್ಲಿಗೆ ಬಂದು ಮಹಾಕೂಟೇಶ್ವರನ ದರುಶನ ಪಡೆಯುವ ಬಯಕೆಯಿದೆ. ನಾವು ನಿಮ್ಮ ಊರಿನಲ್ಲೇ ಸಿಗುವಂತಾಗಲಿ, ಹೆಂಡತಿ ಮಗುವಿಗಾಗಿ ಹಂಬಲಿಸುವ ನೀನು ಅಲೆಮಾರಿಗಳ ಬೆನ್ನುಬಿದ್ದು ಊರು ಸೇರಿಕೋ… ಗೋದಾವರಿ, ಮೋರೆ, ಭೀಮೆ, ಕೃಷ್ಣೆಯ ಕೊಳ್ಳಗಳನ್ನು ದಾಟಿ ಮಲಪ್ರಹರಿಯ ಸೆರಗು ಸೇರಿಕೋ.. ದಾರಿತಪ್ಪದಿರು.”

ಬಂಧುಗಳಂತೆ ಆರೈಕೆ ಮಾಡಿ ಬದುಕಿಸಿದ ಜೀವಗಳನ್ನು ಅಗಲುವಾಗ ಮನಸ್ಸು ಮುದುಡಿತ್ತು. ಒಂಟಿಯಾಗಿ ಹೆಂಡತಿ ಮಗುವನ್ನು ಹಂಬಲಿಸಿ ಲಗುಬಗೆಯಿಂದ ಹೆಜ್ಜೆ ಹಾಕತೊಡಗಿದ. ದಾರಿಯಲ್ಲಿ ಜೊತೆಯಾದ ಡೊಂಬರ ಬಂಡಿಯು ಕಲ್ಯಾಣ ಸೀಮೆಗೆ ಹೊರಟಿತ್ತು. ಅವರಾಡುವ ಆಟದಲ್ಲಿ ಕತ್ತಿವರಸೆಯನ್ನು, ಒಕ್ಕಣ್ಣಿನಲ್ಲೇ ಗುರಿಯಿಡುವ ಬಿಲ್ಲಗಾರಿಕೆಯನ್ನೂ, ದೇಹದ ಕಸರತ್ತುಗಳನ್ನೂ ಪ್ರದರ್ಶಿಸಿ ಹೊಟ್ಟೆಯ ತುಂಬಿಕೊಳ್ಳುತ್ತಾ ಗಡಿಯ ಕಣ್ಗಾವಲಿನ ಸೈನಿಕರ ಕಣ್ತಪ್ಪಿಸಿ, ದೊಂಬರಾಟದ ನೆಪದಲ್ಲಿ ಕುಲಕರ್ಣಿಗಳಿಗೆ ಸುಂಕ ಕಟ್ಟಿಯೂ ಊರೂರು ತಿರುಗುತ್ತ ಗೋದಾವರಿ ನದಿ ದಾಟಿ ಕೃಷ್ಣೆಯ ಒಡಲಿಗೆ ಬಂದುಬಿದ್ದ.

(ಮುಂದುವರೆಯುವುದು…)

Previous post ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
Next post ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ

Related Posts

  ಅವಿರಳ ಅನುಭಾವಿ-3
Share:
Articles

  ಅವಿರಳ ಅನುಭಾವಿ-3

May 6, 2020 ಮಹಾದೇವ ಹಡಪದ
ಇಲ್ಲಿಯವರೆಗೆ: ಏನಾದರೊಂದು ತರಲೆ ಮಾಡುತ್ತಾ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದ ಬಾಲಕ ಚನ್ನಬಸವ ಮಹಾಮನೆಯ ಕಣ್ಮಣಿಯಾದ. ಆತನ ಪ್ರಬುದ್ಧತೆ, ಚುರುಕುತನ ಹೀಗೊಮ್ಮೆ...
ಸತ್ಯ, ಪರೋಪಕಾರ, ಬ್ರಹ್ಮಚರ್ಯ
Share:
Articles

ಸತ್ಯ, ಪರೋಪಕಾರ, ಬ್ರಹ್ಮಚರ್ಯ

February 6, 2025 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
‘ನಾವು ಲೋಕೋದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ಯಾರೂ ತಿಳಿದುಕೊಳ್ಳಬಾರದು. ನಮ್ಮ ಪ್ರಯತ್ನ ನಮ್ಮ ಏಳೆಗೆಗಾಗಿ, ನಮ್ಮ ಬಾಳು ಸಫಲಗೊಳ್ಳುವುದಕ್ಕಾಗಿ, ನಮ್ಮ...

Comments 9

  1. Kamalakara Jawali
    Sep 19, 2024 Reply

    ಅನಿಮಿಷ ಯೋಗಿಯ ಕತೆ ಆ ದಿನಮಾನಗಳಿಗೆ ನಮ್ಮನ್ನು ನಿಶ್ಚಿತವಾಗಿ ಕರೆದೊಯ್ಯುತ್ತದೆ.

    • Mahadev
      Sep 27, 2024 Reply

      Thank u sharanare

  2. Manoj C
    Sep 22, 2024 Reply

    ಅಪ್ಪನ ಸಾಮೀಪ್ಯ ಇಲ್ಲದೆ ಮಗ ಅನಾಥನಂತೆ ಬೆಳೆಯಬೇಕಾಯಿತಲ್ಲಾ, ಜೀವನ ಒಡ್ಡುವ ಸವಾಲುಗಳು ವಿಚಿತ್ರವಾಗಿರುತ್ತವೆ.

  3. Devaraju Bidar
    Sep 30, 2024 Reply

    ತ್ರೈಲೋಕ್ಯ ಮಾಡಿದ ತಪ್ಪಿಗಿಂತ ಹೆಚ್ಚಿನ ಕಷ್ಟ ಅನುಭವಿಸುತ್ತಿದ್ದಾನೆ, ಯಾವ ತಪ್ಪಿಗೆ ಇಂತಹ ಶಿಕ್ಷೆ. ದೇವರ ನಾಡಲ್ಲಿ ಕರುಣೆ ಇಲ್ಲವೇ?

  4. ಶೇಖರ್ ಪಾಟೀಲ್
    Sep 30, 2024 Reply

    ವಸುದೀಪನ ಬಾಲ್ಯದ ಚಿತ್ರಣವು ನನಗೆ ‘ಅಲ್ಲಮ’ ಸಿನೆಮಾದ ಬಾಲಕ ಅಲ್ಲಮನ ದಿನಗಳನ್ನು ನೆನಪಿಸಿತು. ವಸುದೀಪನಿಗೆ ಸಿಕ್ಕ ಸಾಧುವಿನ ಸಾಮೀಪ್ಯ ಹಾಗೂ ಮಾರ್ಗದರ್ಶನ ಮುಂದೆ ಅವನ ಬದುಕಿನ ದಾರಿಯನ್ನು ಕಂಡುಕೊಳ್ಳುವಂತಿವೆ. ಅಪ್ಪ ತ್ರೈಲೋಕ್ಯ ಇದ್ದಿದ್ದರೆ ಮಗ ಒಬ್ಬ ಸೇನಾಪತಿಯಾಗಿ ಬೆಳೆಯುತ್ತಿದ್ದನೇನೋ. ಸಾಧುವಿನ ಸಂಗ ಅವನ ದಾರಿಯನ್ನು ಬೇರೆ ಮಾಡಿತು.

  5. ರಾಜಶೇಖರ್, ಮೈಸೂರು
    Oct 3, 2024 Reply

    ಅನಿಮಿಷ ಯೋಗಿಯ ಕತೆ ಎಂದ ಕೂಡಲೇ ಓದಲು ಕುಳಿತೆ… ನಿಜಕ್ಕೂ ಬಹಳ ಇಷ್ಟವಾಯಿತು. ಮುಂದೇನು ಎನ್ನುವ ಕುತೂಹಲ ಬರುವಂತೆ ಕತೆ ಸಾಗುತ್ತಿದೆ. ಕತೆಗಾರರಿಗೆ ಶರಣು🙏🏻🙏🏻🙏🏻

  6. Balaraj T.V
    Oct 8, 2024 Reply

    ಅನಿಮಿಷಯೋಗಿಯ ಕತೆಯನ್ನು ಮಿನಿಕತೆಯಾಗಿ ವಿಡಿಯೋದಲ್ಲಿ ಬಿಟ್ಟರೆ ಬಹಳ ಜನರನ್ನ ತಲುಪುವುದು. ಮಹಾದೇವ ಅಣ್ಣಾವರ ಶರಣರ ಕತೆಗಳನ್ನು ನಾನು ಓದಿದ್ದೇನೆ. ಆ ಶತಮಾನವನ್ನು ಹೊಕ್ಕು ಶರಣರ ಮನೆಯನ್ನು ಹೊಕ್ಕು ಅವರ ಜೀವನವನ್ನು ಚಂದಾಗಿ ಕಟೆದು ಕೊಡುತ್ತಾರೆ. ಅವರಿಗೆ ನನ್ನ ಸಪ್ರೇಮ ವಂದನೆಗಳು, ಶರಣುಗಳು.

  7. ಮಹಾಂತು ಹರಿಹರ
    Oct 13, 2024 Reply

    ಪ್ರಭುವಿನ ಗುರು ಅನಿಮಿಷ ಯೋಗಿ; ಅನಿಮಿಷ ಯೋಗಿಯ ಗುರು ಬಸವಣ್ಣನವರು ಎನ್ನುವುದು ನಿಜವೇ?

  8. ಮೈಸೂರು ಮಹದೇವ
    Oct 26, 2024 Reply

    ಶರಣು ಶರಣಾರ್ಥಿಗಳು
    ಅಲ್ಲಮಪ್ರಭು ತಂದೆಯವರ ಗುರು ಅನಿಮೀಷ ಗುರುವಿನ ಬಗ್ಗೆ ಬರೆಯುತ್ತಿರುವ ನಿಮ್ಮ ಲೇಖನ ಓದುಗರ ಮನಸ್ಸುನ್ನು ಹಿಡಿದಿಟ್ಟುಕೊಂಡು ಸಾಗುತ್ತದೆ. ಮೊದಲಿಗೆ ಲೇಖನ ದೀರ್ಘವಾಗಿದೆ ಎನಿಸಿದರೂ ಈ ಸಂಸಾರದ ಜಂಜಾಟದಲ್ಲಿ ಓದುವುದಕ್ಕೆ ಸಮಯವಿಲ್ಲ ಎಂದು ಎನಿಸಿದರೂ ಈ ಲೇಖನದ ರುಚಿ ಸ್ವಲ್ಪ ಹತ್ತಿದರೆ ಸಾಕು ಒಂದೇ ಓದಬೇಕು ನೆಲೆಸುತ್ತದೆ.
    ಕಥೆಯಲ್ಲಿ ನಾವುಗಳು ಇದ್ದೀವಿ ಅನ್ನೊ ಹಾಗೆ ಭಾಸವಾಯಿತು. ನಮ್ಮ ಅವ್ವ ಅಜ್ಜಿ ಹೇಳುತ್ತಿದ್ದ ಕಥೆಗಳ ತರಹ ನೀವು ನಿರೂಪಣೆ ಮಾಡಿದ್ದೀರಿ ಅಣ್ಣಾವ್ರೆ.
    ಒಂದು ಚಲನಚಿತ್ರವನ್ನು ನೋಡಿದ ಹಾಗೆ ಅನುಭವ ಆಗುತ್ತದೆ.
    ಇನ್ನು ಹೆಚ್ಚು ಹೆಚ್ಚು ಸೃಜನಶೀಲತೆ, ಸಾಮಾಜಿಕ ಕಳಕಳಿಯ ಬಗ್ಗೆ ಬೆಳಕು ಚೆಲ್ಲುವ ಲೇಖನಗಳು ನಿಮ್ಮಿಂದ ಹೊರಹೊಮ್ಮುಲಿ ಎಂದು ಪ್ರಾರ್ಥಿಸುತ್ತೇನೆ
    ಶರಣು ಶರಣಾರ್ಥಿಗಳು
    ಶುಭೋದಯ

Leave a Reply to Mahadev Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನುವಿನ ಉಪಟಳ
ನಾನುವಿನ ಉಪಟಳ
December 13, 2024
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಮನವೆಂಬ ಸರ್ಪ
ಮನವೆಂಬ ಸರ್ಪ
February 7, 2021
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
August 10, 2023
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
April 6, 2024
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
Copyright © 2025 Bayalu