Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೆಮ್ಮದಿ
Share:
Articles April 6, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ನೆಮ್ಮದಿ

ಮುಖ ನೋಡಿಕೊಳ್ಳಲು ಕನ್ನಡಿ ಬಳಸದಿರುವವರು ವಿರಳ. ದಿನಕ್ಕೆ ಹತ್ತಾರು ಸಲ ಕನ್ನಡಿಯ ಮುಂದೆ ನಿಲ್ಲುವವರೂ ಇದ್ದಾರೆ. ಕನ್ನಡಿಯ ಮುಂದೆ ನಿಂತು ತಮ್ಮ ಮುಖದ ಅಂದ ಚೆಂದವನ್ನು ಹೆಚ್ಚಿಸಿಕೊಳ್ಳುವರು. ಆದರೆ ಮನುಷ್ಯನಿಗೆ ನಿಜವಾದ ಸೌಂದರ್ಯ ಬರುವುದು ಮುಖದಿಂದ ಅಲ್ಲ; ಮನಸ್ಸಿನಿಂದ. ಅದನ್ನೇ ಬಸವಣ್ಣನವರು `ಮನೆ ನೋಡಾ ಬಡವರು, ಮನ ನೋಡಾ ಘನ’ ಎಂದಿದ್ದಾರೆ. ಮನ ಘನವಾಗಲು, ಅದರ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸುವ ಕನ್ನಡಿ ಯಾವುದು? ಆ ಕನ್ನಡಿಯೇ ಸಾಕ್ಷಿಪ್ರಜ್ಞೆ. ನಾನೇನೆಂದು ಬೇರೆಯವರು ಹೇಳುವ ಅಗತ್ಯವಿಲ್ಲ. ನನ್ನೊಳಗಿನ ಸಾಕ್ಷಿಪ್ರಜ್ಞೆ ನಾನು ಉತ್ತಮನೋ, ಅಧಮನೋ, ಮಧ್ಯಮನೋ, ನೀಚನೋ ಎಂದು ಸಾಕ್ಷಿ ನುಡಿಯುತ್ತಿರುತ್ತದೆ. ಆದರೆ ಸಾಕ್ಷಿಪ್ರಜ್ಞೆ ಎನ್ನುವ ಕನ್ನಡಿ ಬಳಸಿಕೊಳ್ಳುವವರು ತುಂಬಾ ವಿರಳ. ಹಾಗೆ ಬಳಸಿಕೊಂಡದ್ದೇ ಆದರೆ ವ್ಯಕ್ತಿ ತಪ್ಪು ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ.

ಗುಬ್ಬಿ ಹೆರರ ಮನೆ ತನ್ನ ಮನೆ ಎಂಬಂತೆ
ಧರೆ ಧನ ವನಿತೆಯರು ಎನ್ನವರು ತನ್ನವರೆಂದು
ಹೋರಿ ಹೋರಿ ಸಾಯುತ್ತಿದೆ ಜೀವ.
ಸರ್ವಕರ್ತೃ ಕೂಡಲಚೆನ್ನಸಂಗಯ್ಯನೆಂದರಿಯದೆ.

ಈ ಲೋಕಕ್ಕೆ ಮಾನವನೊಬ್ಬನೇ ಬಂದಿಲ್ಲ. ಅವನಂತೆ ಅನೇಕ ಜೀವಜಂತುಗಳೂ ಬಂದಿವೆ. ಎಲ್ಲ ಜೀವಜಂತುಗಳ ಜೊತೆಗೆ ಪ್ರೀತಿವಿಶ್ವಾಸದಿಂದ ಬಾಳಬೇಕಾದ್ದು ಅನಿವಾರ್ಯ. ಇದನ್ನು ಮರೆತು ಅಹಂಕಾರದಿಂದ ನಾನೊಬ್ಬ ಬಾಳಬೇಕು ಎಂದರೆ ಅವನ ಬಾಳು ಗೋಳಾಗುವುದು ಎನ್ನುವ ಎಚ್ಚರವನ್ನು ಗುಬ್ಬಿಯ ಮೂಲಕ ಹೇಳುತ್ತಾರೆ ಚೆನ್ನಬಸವಣ್ಣನವರು. ಗುಬ್ಬಿ ಯಾರದೋ ಮನೆಯ ಮುಂದೆ ಗೂಡು ಕಟ್ಟಿ ಇಡೀ ಮನೆ ತನ್ನದೆಂಬಂತೆ ಮೆರೆಯುವುದು. ಆ ಗುಬ್ಬಿಯಂತೆಯೇ ಮಾನವ, ಇಲ್ಲಿರುವ ಎಲ್ಲದೂ ತನ್ನದು ಎಂದು ಭ್ರಮಿಸಿ ಅದನ್ನು ಪಡೆಯಲಿಕ್ಕಾಗಿ ಏನೆಲ್ಲ ಹೋರಾಟ ಮಾಡುತ್ತಲೇ ಸಾಯುವನು. ಅದರ ಬದಲು ತನ್ನ ಸಂರಕ್ಷಕ ಶಿವ ಎಂದು ಭಾವಿಸಿದ್ದರೆ ಇಂಥದೆಲ್ಲ ಆಗುತ್ತಿರಲಿಲ್ಲ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ಒಂದು ಅಪರೂಪದ ವಾಟ್ಸಪ್ ಸಂದೇಶ ಬಂದಿತ್ತು. ಒಮ್ಮೆ ಹಾಲು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೆ. ದೇವರೇ ನಾನು `ಅಮೃತ’. ಇದು ಗೊತ್ತಿದ್ದೂ ನನ್ನನ್ನು ಕಾಯಿಸಿ, ಹುಳಿ ಹಿಂಡಿ ನನ್ನ ಸ್ವರೂಪವನ್ನೇ ವಿರೂಪಗೊಳಿಸುವರು. ಇದು ಸರಿಯೇ? ಕಾಯಿಸದೆ, ಹುಳಿ ಹಿಂಡದೆ ನೇರವಾಗಿ ಕುಡಿಯುವ ಹಾಗೆ ಮಾಡು ಎಂದು ಬೇಡಿಕೊಳ್ಳುವುದು. ಆಗ ದೇವರು ಹೇಳ್ತಾನಂತೆ: ನಿನ್ನನ್ನು ಕಾಯಿಸದೆ ಹಾಗೇ ಇಟ್ಟರೆ ಬೇಗ ಕೆಟ್ಟು ಹೋಗುವೆ. ಕಾಯಿಸುವುದರಿಂದ ನಿನ್ನ ಆಯುಷ್ಯ ಹೆಚ್ಚುವುದು. ಕಾಯಿಸಿದ ಹಾಲಿಗೆ ಹುಳಿ ಹಿಂಡಿದರೆ ಮೊಸರಾಗಿ ಎರಡು ದಿನ ಬಾಳುವೆ. ಮೊಸರನ್ನು ಕಡೆದು ಬೆಣ್ಣೆ ತೆಗೆದರೆ ವಾರಗಟ್ಟಲೆ ಇರುವೆ. ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿದರೆ ತಿಂಗಳುಗಟ್ಟಲೆ ಇರುವೆ. ಅದೇ ತುಪ್ಪವನ್ನು ಪ್ರಣತೆಗೆ ಹಾಕಿದರೆ ಸರ್ವರಿಗೂ ಬೆಳಕನ್ನು ಕೊಡುವೆ. ಇದರಲ್ಲಿ ನಿನಗೆ ಯಾವುದು ಬೇಕು? ಆಯ್ಕೆ ನಿನ್ನದೇ ಎನ್ನುವನು. ವಾಸ್ತವತೆಯನ್ನು ಅರಿತ ಹಾಲು `ತುಪ್ಪ ಮಾಡಿ ಎಲ್ಲರಿಗೂ ಬೆಳಕು ನೀಡಲು ಅವಕಾಶ ಕಲ್ಪಿಸು’ ಎಂದು ಕೇಳುತ್ತದೆಯಂತೆ. ಇಲ್ಲಿ ಹಾಲನ್ನು ಸಾಂಕೇತಿಕವಾಗಿಸಿಕೊಂಡು ಮನುಷ್ಯನಿಗೆ ಎಂಥ ಸಂಸ್ಕಾರ ಬೇಕು ಎನ್ನುವ ಚಿಂತನೆ ಮಾಡಬೇಕು.

ನಮ್ಮ ಬದುಕಿನಲ್ಲಿ ಹುಳಿ ಹಿಂಡುವವರೂ ಇರುತ್ತಾರೆ. ಒಂದು ದೃಷ್ಟಿಯಲ್ಲಿ ಅವರು ಸಹ ಬೇಕು. ಹುಳಿ ಹಿಂಡುವ ಮೂಲಕ ಅವರು ತಮ್ಮ ವ್ಯಕ್ತಿತ್ವವನ್ನೂ ಬೆಳೆಸಿಕೊಳ್ಳಬೇಕು; ಹುಳಿ ಹಿಂಡಿಸಿಕೊಂಡವರ ವ್ಯಕ್ತಿತ್ವವೂ ಬೆಳೆಯುವಂತಾಗಬೇಕು. ಆಗ ಆ ಹುಳಿಗೆ ಮಾನ್ಯತೆ ಬರುವುದು. ಹುಳಿ ಹಿಂಡುವುದು ಎಂದರೆ ಚಾಡಿ ಹೇಳುವುದು ಎನ್ನುವ ಭಾವವಿದೆ. ಆದರೆ ಅದನ್ನು ಹಾಗೆ ಭಾವಿಸದೆ ಒಳ್ಳೆಯ ನುಡಿಗಳು ಎಂದು ಅರ್ಥೈಸಬೇಕು. ಅದಕ್ಕಾಗಿಯೇ ದಾಸೀಮಯ್ಯನವರು `ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತಡೆ ನಿಮ್ಮನಿತ್ತೆ ಕಾಣಾ’ ಎನ್ನುವರು. ಹೊಗಳಿಕೆಯೂ ಅಷ್ಟೆ. ಅದು ಕೂಡ ಸಕಾರಾತ್ಮಕವಾಗಿಯೇ ಇದ್ದರೆ ಕ್ಷೇಮ. ಅದಕ್ಕಾಗಿ ಬಸವಣ್ಣನವರು `ಹೊಗಳಿ ಹೊಗಳಿ ಎನ್ನ ಹೊನ್ನಶೂಲದಲ್ಲಿಕ್ಕಿದರು’ ಎನ್ನುವರು. ನನಗೆ ಹೊಗಳಿಕೆ ಬೇಡ. ನನಗೆ ನಿಜಕ್ಕೂ ಒಳಿತು ಮಾಡುವ ಬಯಕೆ ನಿನಗಿದ್ದರೆ ಹೊಗಳಿಕೆಗೆ ಅಡ್ಡ ಬಾ ಎಂದು ಬಸವಣ್ಣನವರು ಶಿವನಲ್ಲಿ ಪ್ರಾರ್ಥಿಸುವರು. `ಹಂದಿ ಇದ್ದರೆ ಕೇರಿ ಚಂದ, ನಿಂದಕರಿದ್ದರೆ ಊರು ಚೆಂದ’ ಎಂದು ದಾಸರು ಹೇಳುವರು. ಹಂದಿಯನ್ನು ನಿಕೃಷ್ಠವಾಗಿ ಕಾಣುವ ಹಾಗಿಲ್ಲ. ಹಂದಿ ಸ್ವಚ್ಛತೆಗೆ ದೇವರು ಕಳಿಸಿರುವ ವಾಹನ ಎಂದೇಕೆ ತಿಳಿಯಬಾರದು. ಬೆಳಗ್ಗೆ ಬೆಳ್ಳಕ್ಕಿಗಳು ಹಾರುತ್ತ ಹಾರುತ್ತ ನೀರಿರುವ ತಾಣದಲ್ಲಿ ಕೂತು ಅಲ್ಲಿದ್ದ ಹುಳುಗಳನ್ನು ತಿನ್ನುವವು. ಆದರೂ ಬೆಳ್ಳಕ್ಕಿಗಳು ಎಷ್ಟು ಚನ್ನಾಗಿವೆ ಎಂದು ಮೆಚ್ಚುಗೆ ಸೂಚಿಸುತ್ತೇವೆ. ಹಂದಿ ತಿನ್ನುವುದು ಸಹ ಅದೇ ಕೊಳಕನ್ನು. ಅದನ್ನು ಮಾತ್ರ ಹಂದಿ ಎಂದು ಹೀಯಾಳಿಸುತ್ತೇವೆ.

ಹಂದಿ ಪರಿಸರದ ಸ್ವಚ್ಛತೆಗೆ ಕಾರಣವಾಗುವುದು. ನಮಗೆ ಬೆಳ್ಳಕ್ಕಿಯೂ ಬೇಕು, ಹಂದಿಗಳೂ ಬೇಕು. ಇವೆಲ್ಲ ಸಾಂಕೇತಿಕ. ನಿಂದಕರಿಗೆ ನಮ್ಮ ಮನೆಯ ಮುಂದೆ ಬದುಕಲು ಅವಕಾಶವೀಯಬೇಕು ಎನ್ನುವರು ತಿಳಿದವರು. ಕಾರಣ ಅವರು ನಿತ್ಯವೂ ನಮ್ಮ ದೋಷಗಳನ್ನು ಎತ್ತಿ ಹೇಳುವುದರಿಂದ ನಾವು ಒಳ್ಳೆಯವರಾಗಲು ನೆರವಾಗುವರು. ಇಂಥ ಮಾತುಗಳ ಮೂಲಕ ಮನುಷ್ಯ ತನ್ನಲ್ಲಿ ಬದಲಾವಣೆ ತಂದುಕೊಳ್ಳಬೇಕು. ಅದಕ್ಕೆ ಬೇಕಾದ್ದು ಶರಣರ ನುಡಿಮುತ್ತುಗಳು. ಆಡುವ ಮಾತಿನ ಮೇಲೆ ಹತೋಟಿ ಇರಬೇಕು. ಮಾತುಗಳು ಮಾನವನ ಅಂತರಂಗದ ಬದುಕಿನ ಕೊಳೆ ನಿವಾರಿಸುತ್ತ ವ್ಯಕ್ತಿತ್ವವನ್ನು ವಿಕಾಸಗೊಳಿಸುವಂತಿರಬೇಕು. ಮುಕ್ತಾಯಕ್ಕ ಮತ್ತು ಪ್ರಭುದೇವರ ನಡುವಿನ ಸಂವಾದ ನೆನಪಾಗುವುದು. ಮುಕ್ತಾಯಕ್ಕನ ಅಣ್ಣ `ಅಜಗಣ್ಣ’ ಆಕಸ್ಮಿಕವಾಗಿ ದುರ್ಮರಣಕ್ಕೆ ತುತ್ತಾಗುವನು. ಅಣ್ಣನ ಅಗಲಿಕೆಯನ್ನು ಅರಗಿಸಿಕೊಳ್ಳಲಾಗದ ಮುಕ್ತಾಯಕ್ಕ ಅಣ್ಣನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಪರಿಪರಿಯಾಗಿ ರೋಧಿಸುತ್ತಿದ್ದಾಳೆ. ಅವಳ ರೋಧನ ಪರಿ ಹೇಗಿದೆ ನೋಡಿ:

ಅರಿವನಣಲೊಳಗಿಕ್ಕಿ ಅಗಿವುತ್ತಿದೆ ಮತ್ರ್ಯಲೋಕವೆಲ್ಲವು.
ಅರಿವು ಉಳಿಯಲರಿಯದೆ ಕೆಟ್ಟಿತ್ತು ಲೋಕವೆಲ್ಲವು.
ನಾನೆಂತು ಬದುಕುವೆನಣ್ಣಾ?
ಕತ್ತಲೆ ಬೆಳಗ ಕಾಂಬ ಸಂದೇಹಿ ನಾನೊಬ್ಬಳು.
ಎನ್ನ ಕಣ್ಣ ಕಟ್ಟಿ ಕನ್ನಡಿಯ ತೋರಿತ್ತೊ ಅಜಗಣ್ಣಾ ನಿನ್ನ ಯೋಗ!

ಅದೇ ಸಂದರ್ಭಕ್ಕೆ ಪ್ರಭುದೇವರು ಅಲ್ಲಿಗೆ ಬಂದು ಅವಳ ದುಃಖದ ವಿಧಾನ ಕಂಡು ಪ್ರಶ್ನೆ ಮಾಡುವರು.

ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು
ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ?
ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ
ಹಂಬಲಿಸುವ ಪರಿತಾಪವೇನು ಹೇಳಾ?
ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ
ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ.
ನೀನಾರೆಂದು ಹೇಳಾ ಎಲೆ ಅವ್ವಾ?

ಅದಕ್ಕೆ ಮುಕ್ತಾಯಕ್ಕ ಕೊಡುವ ಉತ್ತರ ತುಂಬಾ ಮಾರ್ಮಿಕವಾಗಿದೆ.

ಆರೆಂದು ಕುರುಹ ಬೆಸಗೊಳಲು, ಏನೆಂದು ಹೇಳುವೆನಯ್ಯಾ?
ಕಾಯದೊಳು ಮಾಯವಿಲ್ಲ; ಭಾವದೊಳು ಭ್ರಮೆಯಿಲ್ಲ.
ಕರೆದು ಬೆಸಗೊಂಬಡೆ ಕರುಹಿಲ್ಲ.
ಒಬ್ಬರಿಗೂ ಹುಟ್ಟದೆ, ಅಯೋನಿಯಲ್ಲಿ ಬಂದು
ನಿರ್ಬುದ್ಧಿಯಾದವಳನೇನೆಂಬೆನಣ್ಣಾ?
ತಲೆಯಳಿದು ನೆಲೆಗೆಟ್ಟು ಬೆಳಗುವ ಜ್ಯೋತಿ
ಎನ್ನ ಅಜಗಣ್ಣ ತಂದೆಯ ಬೆನ್ನ ಬಳಿಯವಳಾನಯ್ಯಾ

ಹೀಗೆ ಉಭಯತರ ನಡುವೆ ಸಂವಾದ ನಡೆದಾಗ ಆ ವ್ಯಕ್ತಿ ಅಲ್ಲಮ ಎಂದು ತಿಳಿದು ಬೆರಗಾಗುವಳು. ಬೆರಗು ಏಕೆಂದರೆ ಅನುಭಾವಿಗಳು ಮೌನಿಯಾಗಿರುವರೆಂಬ ಭಾವ ಅವಳದು. ಅವಳ ಅಣ್ಣ ಅಜಗಣ್ಣ ಮಹಾನುಭಾವಿ. ಆತ ಮಾತನಾಡಿದವನಲ್ಲ. ಆದರೆ `ಅನುಭಾವಿ ಅಲ್ಲಮ’ ಎಂದೇ ಹೆಸರು ಪಡೆದಿರುವ ಈ ವ್ಯಕ್ತಿ ಇಷ್ಟೊಂದು ಮಾತನಾಡುವನೆಂದರೆ ಖಂಡಿತ ಇವನು ಅನುಭಾವಿಯಲ್ಲ. ಅನುಭಾವಿಯಾಗಿದ್ದರೆ `ಎನ್ನ ಅಜಗಣ್ಣನಂತೆ ಶಬ್ದಮುಗ್ಧವಾಗಿರಬೇಕಲ್ಲದೆ, ಶಬ್ದ ಸಂದಣಿಯ ಮಾತು ಸಯವಲ್ಲ ನೋಡಯ್ಯಾ’ ಎಂದು ಮೂದಲಿಸುವಳು. `ನುಡಿಯ ಹಂಗಿನ್ನೂ ನಿಮಗೆ ಹಿಂಗದು, ನಡೆಯನೆಂತು ಹೇಳುವಿರಿ’ ಎಂದೆಲ್ಲ ವಾದ ಮಾಡುವಳು. ಅವಳ ದೃಷ್ಟಿಯಲ್ಲಿ ಮಾತು ಸೂತಕ. ಅದಕ್ಕೆ ಪ್ರಭು ಹೇಳುವ ಮಾತುಗಳು ಅವಳ ಅಜ್ಞಾನ ನಿವಾರಿಸಿ ಅರಿವಿನ ಕಣ್ಣು ತೆರೆಸುವಂತಿವೆ.

ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ;
ತಾಳೋಷ್ಠ ಸಂಪುಟವೆಂಬುದು ನಾದಬಿಂದುಕಳಾತೀತ.
ಗುಹೇಶ್ವರನ ಶರಣರು
ನುಡಿದು ಸೂತಕಿಗಳಲ್ಲ ಕೇಳಾ ಮರುಳೆ

ಹೌದಮ್ಮಾ ಮಾತು ಸೂತಕ. ಯಾವಾಗ? ಮಾತಿನಂತೆ ಮನಸ್ಸಿಲ್ಲದಿದ್ದಾಗ. ನಡೆ ನುಡಿ ಬೇರೆ ಬೇರೆ ಆಗಿದ್ದಾಗ. ನಡೆ ನುಡಿ ಒಂದಾಗಿದ್ದಾಗ ಅದೇ ಮಾತು ಮಂತ್ರವಾಗುವುದು, ಜ್ಯೋತಿರ್ಲಿಂಗವಾಗುವುದು ಎನ್ನುವರು. ಹೀಗೆ ಮಾತಿನ ಮಹತ್ವವನ್ನು ಅರಿತು ಬದುಕನ್ನು ಕಟ್ಟಿಕೊಂಡರೆ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಮನುಷ್ಯನಿಗೆ ಸುಖ ಬೇಕು, ದುಃಖ ಬೇಡ ಎನ್ನುವರು. ಸುಖ, ದುಃಖಕ್ಕಿಂತ ಮನುಷ್ಯನಿಗೆ ಬೇಕಾಗಿರುವುದು ನೆಮ್ಮದಿ. ಮನೆ, ವಾಹನ, ಹಣ, ಬಂಗಾರ, ಆಸ್ತಿ, ಭೋಗ ಜೀವನ ಇತ್ಯಾದಿಯಲ್ಲಿ ನೆಮ್ಮದಿ ಇದೆ ಎಂದು ಅನೇಕರು ಭಾವಿಸುವರು. ಆದರೆ ಅವುಗಳಿಂದ ಸಿಗುವ ನೆಮ್ಮದಿ ಕ್ಷಣಿಕವಾದುದು. ಏಕೆಂದರೆ ಯಾರಾದರೂ ನಿಮಗೇನು ಕೊರತೆ ಬಿಡೋ ಮಾರಾಯ; ನೌಕರಿ, ಮನೆ, ಕಾರು, ತೋಟ ಏನೆಲ್ಲ ಇದೆ ಎಂದರೆ ಆ ವ್ಯಕ್ತಿ ಹೇಳುವುದೇನು? ನಂದೂ ಒಂದು ನೌಕರಿಯೇ? ನಂದೂ ಒಂದು ಮನೆಯೇ? ನಂದೂ ಒಂದು ಕಾರೇ? ನಂದೂ ಒಂದು ತೋಟವೇ? ನಂದೂ ಒಂದು ಬದುಕೇ? ಎಂದು ನಿರಾಸೆಯ ಮಾತನಾಡುವನು. ಕಾರಣ ಅವನು ಬೇರೆಯವರ ನೌಕರಿಗೆ, ಬೇರೆಯವರ ಮನೆಗೆ, ಬೇರೆಯವರ ಕಾರಿಗೆ, ಬೇರೆಯವರ ತೋಟಕ್ಕೆ, ಬೇರೆಯವರ ಬದುಕಿಗೆ ಹೋಲಿಕೆ ಮಾಡಿಕೊಳ್ಳುತ್ತಾ, ಇದ್ದ ನೆಮ್ಮದಿಯನ್ನೂ ಕಳೆದುಕೊಳ್ಳುವನು.

ಒಬ್ಬ ರೈತ ಈ ವರ್ಷ ನನಗೆ ಹತ್ತು ಚೀಲ ರಾಗಿ ಆಗಿವೆ. ಇನ್ನೂ ಎರಡು ವರ್ಷ ಮಳೆ ಬರದಿದ್ದರೂ ನೆಮ್ಮದಿಯಿಂದ ಬದುಕ್ತೇನೆ ಎನ್ನುವನು. ಇದು ನಿಜವಾದ ನೆಮ್ಮದಿ. ಮತ್ತೊಬ್ಬ ಶ್ರೀಮಂತ; ಮೂರು ಸಾವಿರ ಕ್ವಿಂಟಲ್ ಮೆಕ್ಕೆ ಜೋಳ, ನೂರು ಕ್ವಿಂಟಲ್ ಅಡಿಕೆ, ಹತ್ತು ಸಾವಿರ ತೆಂಗು ಹೀಗೆ ಏನೇನೋ ಬೆಳೆದಿರ್ತಾನೆ. ಆದರೂ ಈ ವರ್ಷ ಬಹಳ ಕಡಿಮೆ ಬೆಳೆ ಬಂತು ಎಂದು ಕೊರಗುವನು. ಮನುಷ್ಯ ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು. ನಕಾರಾತ್ಮಕ ಚಿಂತನೆ ಮಾಡುತ್ತಿದ್ದರೆ ತನ್ನ ನೆಮ್ಮದಿಗೆ ತಾನೇ ಎಳ್ಳು ನೀರು ಬಿಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದು. ನೆಮ್ಮದಿಯ ಬದುಕಿಗೆ ಬೇಕಾಗಿರುವುದು ಕೆಟ್ಟದ್ದರಲ್ಲೂ ಒಳ್ಳೆಯದನ್ನು ಕಾಣುವ ಹೃದಯವಂತಿಕೆ ಮತ್ತು ಆಶಾವಾದದ ನುಡಿಗಳು. ನಮ್ಮ ಗುರುಗಳು ಒಬ್ಬ ಜವಾನನನ್ನು ಸಹ ಪ್ರೀತಿಯಿಂದ ಮಾತನಾಡಿಸುತ್ತ ನೀನು ಯಾರಿಗೇನು ಕಡಿಮೆ ಇಲ್ಲ; ಏನು ಬೇಕಾದರೂ ಮಾಡಬಲ್ಲೆ. ನಿನ್ನಲ್ಲಿ ಏನೆಲ್ಲ ಸಾಮರ್ಥ್ಯ ಇದೆ ಎಂದು ಪ್ರೋತ್ಸಾಹದ ಮಾತುಗಳನ್ನೇ ಆಡುತ್ತಿದ್ದರು. ನೆಮ್ಮದಿಯ ಬದುಕಿಗೆ ಇಂಥ ಮಾತುಗಳ ಅಗತ್ಯವೂ ಇದೆ. ಆದರೆ ಜನರು ತುಂಬಾ ಸಿನಿಕರಾಗುತ್ತಿದ್ದಾರೆ. ಒಬ್ಬನ ಏಳಿಗೆ ಕಂಡು ಕರಬುವ, ಕಾಲು ಹಿಡಿದು ಎಳೆಯುವ ಕಪಟಿಗಳಾಗುತ್ತಿರುವುದು ನಿಜಕ್ಕೂ ವಿಷಾದನೀಯ. ಅಂಥವರು ತಮ್ಮ ನೆಮ್ಮದಿ ಕಳೆದುಕೊಳ್ಳುವುದಲ್ಲದೆ ಇತರರ ನೆಮ್ಮದಿಯನ್ನೂ ಹಾಳು ಮಾಡುವರು.

ಇಂದಂತೂ ದೇವರು, ಧರ್ಮದ ಹೆಸರಿನಲ್ಲಿ ಜನರು ಮೌಢ್ಯಗಳ ದಾಸರಾಗಿ ಇದ್ದ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಎದ್ದರೆ ಬಿದ್ದರೆ ಕಂಡ ಕಂಡ ದೇವರ ದರ್ಶನಕ್ಕೆ ಹೋಗುವರು. ಹೊತ್ತಿಗೆ, ಶಾಸ್ತ್ರ, ಜ್ಯೋತಿಷ್ಯ ಹೇಳುವವರಿಗೆ ದುಂಬಾಲು ಬೀಳುವರು. ಶಕುನ, ಸಾಲಾವಳಿ, ರಾಹುಕಾಲ, ಅಮೃತಗಳಿಗೆ, ಶುಭ ಮುಹೂರ್ತ ಎಂದು ನೋಡುತ್ತ ತಮ್ಮ ಬದುಕನ್ನು ತಾವೇ ನರಕ ಮಾಡಿಕೊಳ್ಳುವರು. ಶಕುನ, ಸಾಲಾವಳಿಗಳಿಂದ ಯಾವ ಒಳಿತೂ ಆಗದು, ಕೆಡಕೂ ಆಗದು. ರಾಹು ಕಾಲವೂ ಇಲ್ಲ, ಅಮೃತ ಗಳಿಗೆಯೂ ಇಲ್ಲ. ಹೊತ್ತಿಗೆ, ಪಂಚಾಂಗ, ಶಾಸ್ತ್ರಿಗಳ ಕೈಯಲ್ಲಿ ನಮ್ಮ ಭವಿಷ್ಯವಿಲ್ಲ. ಅದಿರುವುದು ನಮ್ಮ ಬುದ್ಧಿ ಮತ್ತು ತೋಳ್ಬಲದಲ್ಲಿ. ಬುದ್ಧಿಯ ಬಲ ಎಂದರೆ ಸತ್ಚಿಂತನೆ ಮಾಡುವುದು. ತೋಳ್ಬಲ ಎಂದರೆ ಕಾಯಕಶೀಲರಾಗುವುದು. ಅದರಿಂದ ಶಕುನ ಸಾಲಾವಳಿ, ಅಮೃತಗಳಿಗೆ, ರಾಹುಕಾಲ, ಹೊತ್ತಿಗೆ, ಶಾಸ್ತ್ರ ಇತ್ಯಾದಿ ಅರ್ಥಹೀನವಾಗುವವು. ಅವು ತಮ್ಮಷ್ಟಕ್ಕೆ ತಾವೇ ಮೌಲ್ಯ ಕಳೆದುಕೊಳ್ಳುವವು.

ಬೆಕ್ಕು ರಸ್ತೆಯಲ್ಲಿ ಅಡ್ಡ ಬಂದರೆ ವಾಹನ ನಿಲ್ಲಿಸುವರು, ಅದೊಂದು ಅಪಶಕುನ ಎಂದು. ಬೆಕ್ಕು ಅಡ್ಡ ಬಂದಾಗ ಖಂಡಿತ ವಾಹನ ನಿಲ್ಲಿಸಲೇಬೇಕು. ಅಪಶಕುನ ಎನ್ನುವ ಕಾರಣಕ್ಕಲ್ಲ; ವೇಗವಾಗಿ ಹೋದರೆ ಆ ಬೆಕ್ಕಿನ ಮೇಲೆ ಗಾಲಿ ಉರುಳಿ ಅದು ಸತ್ತು ಹೋದೀತೆಂಬ ಜೀವ ಕಾಳಜಿಯಿಂದ. ಬೆಕ್ಕು ಸಾಯದೆ ಪಕ್ಕಕ್ಕೆ ಹೋಗಿ ಬದುಕಿಕೊಳ್ಳಲಿ ಎನ್ನುವ ಕಾರಣಕ್ಕೆ ವಾಹನ ನಿಲ್ಲಿಸಬೇಕು. ಇಂಥ ಸದುದ್ದೇಶವನ್ನು ಅರ್ಥ ಮಾಡಿಕೊಳ್ಳದೆ ಮೌಢ್ಯವಾಗಿಸಿಕೊಂಡರೆ ಅದು ಅಜ್ಞಾನದ ಪರಮಾವಧಿ. ಹೀಗೆ ಬದುಕಿನಲ್ಲಿ ಅನೇಕ ಅರ್ಥಹೀನ ಮೌಢ್ಯಗಳು ಆವರಿಸಿಕೊಂಡು ಎಲ್ಲರ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿವೆ. ಪ್ರಸ್ತುತ ದಿನಮಾನಗಳಲ್ಲಿ ದೇವಾಲಯಗಳು, ಪೂಜಾರಿ ಪುರೋಹಿತರು, ಅದಕ್ಕಿಂತ ಹೆಚ್ಚಾಗಿ ದೃಶ್ಯಮಾಧ್ಯಮಗಳು ಮೌಢ್ಯವನ್ನು ಪ್ರಸಾರ ಮಾಡುವ ಗುತ್ತಿಗೆ ಹಿಡಿದಿವೆ. ಅವುಗಳಿಂದ ಮುಕ್ತವಾಗಲು ಬಸವಣ್ಣನವರು ಹೇಳಿದಂತೆ ಶಿರವನ್ನು ಹೊನ್ನ ಕಳಸವನ್ನಾಗಿ ಮಾಡಿಕೊಳ್ಳಬೇಕು. ಅಂಧಾನುಕರಣೆಯನ್ನು ಬಿಟ್ಟು ಯಾಕೆ, ಏನು, ಹೇಗೆ ಎಂದು ಪ್ರಶ್ನೆ ಮಾಡುವ ಮನಸ್ಥಿತಿ ಬೆಳೆಸಿಕೊಂಡರೆ ಮೌಢ್ಯಗಳಿಂದ ಮುಕ್ತವಾಗಬಹುದು. ನೆಮ್ಮದಿಯನ್ನೂ ಕಾಣಬಹುದು.

ಪ್ರಸ್ತುತ ದಿನಗಳಲ್ಲಿ ಪ್ರಶ್ನೆ ಕೇಳುವಂತೆಯೇ ಇಲ್ಲ. ಹಿರಿಯರನ್ನು, ಗುರುಗಳನ್ನು ಪ್ರಶ್ನಿಸುವುದೇ ಎಂದು ಮಕ್ಕಳ ತಲೆಯ ಮೇಲೆ ತಟ್ಟಿ ಕೂರಿಸುವ ಹಿರಿಯರೇ ಹೆಚ್ಚು. ಆದರೆ ಪ್ರಶ್ನೆ ಪ್ರತಿಪ್ರಶ್ನೆಗಳಿಂದಲೇ ವ್ಯಕ್ತಿತ್ವ ವಿಕಾಸವಾಗುವುದು. ಶಿಕ್ಷಣ ಕ್ಷೇತ್ರದಲ್ಲಂತೂ ಪ್ರಶ್ನೆ ಮಾಡುವುದು ತೀರಾ ಅಗತ್ಯವಾಗಬೇಕು. ಆಗಲೇ ಮಗುವಿನ ಬುದ್ಧಿ ವಿಕಾಸವಾಗುವುದು. ಪ್ರಶ್ನೆಯೇ ಬೇಡ ಎಂದರೆ ಮಗುವಿನ ಬೌದ್ಧಿಕ ಮಟ್ಟ ಕುಸಿಯುವುದು. ಶಾಲೆಗಳಲ್ಲಿ ಪ್ರಶ್ನೋತ್ತರಗಳಿಗೆ ಅವಕಾಶವೀಯದೆ ಮಕ್ಕಳ ಜೊತೆ ಕೆಟ್ಟ ಹಾಡನ್ನು ಹಾಕಿಕೊಂಡು ಶಿಕ್ಷಕರೇ ಕುಣಿಯುತ್ತಿದ್ದರೆ ಮಕ್ಕಳಲ್ಲಿ ಬೌದ್ಧಿಕ ವಿಕಾಸವಾಗಲು ಸಾಧ್ಯವೇ? ಶಿಕ್ಷಕಿಯೊಬ್ಬಳು ಕೈಯಲ್ಲಿ ಬಾಟಲಿ ಹಿಡಿದುಕೊಂಡು ಕುಡಿಯುತ್ತ ಮಕ್ಕಳೊಂದಿಗೆ ಕುಣಿಯುತ್ತಿರುವ ದೃಶ್ಯವನ್ನು ಕಂಡ ಶಿಕ್ಷಣ ಸಚಿವರು ಆ ಶಿಕ್ಷಕಿಯ ಮೇಲೆ ಕ್ರಮ ಜರುಗಿಸುವುದಾಗಿ ಹೇಳಿದ್ದರು. ಶಿಕ್ಷಕರಿಗೇ ಬದ್ಧತೆ ಇಲ್ಲದಿದ್ದರೆ ಅವರು ಹೇಗೆ ಮಕ್ಕಳಿಗೆ ಮಾರ್ಗದರ್ಶನ ಮಾಡಬಲ್ಲರು? ಮತ್ತೊಬ್ಬ ಶಿಕ್ಷಕಿ ಒಂದು ಮಗುವಿಗೆ `ಪಕ್ಕೆಲಬು’ ಎನ್ನುವ ಪದ ಕಲಿಸಿಕೊಡಲು ಏನೆಲ್ಲ ಸಾಹಸ ಮಾಡುವಳು. ಒಂದೊಂದೇ ಅಕ್ಷರ ಹೇಳಿದಾಗ ಮಗು ಸ್ಪಷ್ಟವಾಗಿ ಹೇಳುತ್ತೆ. ಎಲ್ಲ ಅಕ್ಷರಗಳನ್ನು ಕೂಡಿಸಿ ಒಮ್ಮೆಲೆ ಉಚ್ಛರಿಸಲು ಮಗುವಿನಿಂದ ಸಾಧ್ಯವಾಗುವುದಿಲ್ಲ. ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವುದು. ಮಗುವನ್ನು ತಿದ್ದಬೇಕು ನಿಜ. ಆದರೆ ಅದನ್ನೇ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಬಿಟ್ಟು ಮಗುವಿನ ಬೆಳವಣಿಗೆಯನ್ನೇ ಕುಂಠಿತಗೊಳಿಸಬಾರದು. ಅದರಿಂದ ತನಗೂ ನೆಮ್ಮದಿಯಿಲ್ಲ, ಮಗುವಿಗೂ ನೆಮ್ಮದಿ ಇಲ್ಲ.

ಶಿಕ್ಷೆ ಬೇಕು. ಆದರೆ ಅದು ಊಟಕ್ಕೆ ಉಪ್ಪಿನ ಕಾಯಂತೆ ಇದ್ದರೆ ಸಾಕು. ಶಿಕ್ಷೆಯ ಮೂಲಕ ವಿದ್ಯಾರ್ಥಿಯಲ್ಲಿ ಭಯ ಹುಟ್ಟಿಸಿ ಶಾಲೆ ಎಂದರೆ ಒಂದು ಜೈಲು, ಶಿಕ್ಷಕಿ ಎಂದರೆ ಯಮ ಎನ್ನುವಂತಾದರೆ ಯಾವ ಮಕ್ಕಳು ತಾನೆ ನೆಮ್ಮದಿಯಿಂದ ಶಾಲೆಗೆ ಬರಲು ಸಾಧ್ಯ? ಹಿಂದೆ ಊರಲ್ಲಿ ಹಿರಿಯರಾದವರು ಏನಾದರೂ ಹೇಳಿದರೆ ಕೇಳುವ ವ್ಯವಧಾನ ಇತ್ತು. ಈಗ ಪ್ರತಿಯೊಬ್ಬರೂ ತಾವೇ ಹಿರಿಯರೆಂಬಂತೆ ವರ್ತಿಸುವರು. ಇದು ನಮ್ಮ ರಾಜಕಾರಣದ ಪ್ರಭಾವ. ಇದರಿಂದ ಊರಲ್ಲಿ, ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುತ್ತಿದೆ. ಮನುಷ್ಯ ಮನಸ್ಸು ಮಾಡಿದರೆ ತನ್ನ ಉತ್ತಮ ನಡಾವಳಿಕೆ, ಸತ್ಕಾರ್ಯಗಳ ಮೂಲಕವೇ ನೆಮ್ಮದಿಯನ್ನು ತಂದುಕೊಳ್ಳಬಹುದು. ಮಂಗಚೇಷ್ಠೆಗಳನ್ನು ಬಿಟ್ಟು `ಕಾಯವೇ ಕೈಲಾಸ’, `ಕಾಯಕವೇ ಕೈಲಾಸ’ ಎನ್ನುವ ತತ್ವಕ್ಕೆ ಬದ್ಧರಾಗಿ ಬದುಕನ್ನು ಕಟ್ಟಿಕೊಳ್ಳುವ ಸಂಕಲ್ಪ ಮಾಡಿದರೆ ನೆಮ್ಮದಿಯನ್ನು ಕಂಡುಕೊಳ್ಳುವುದು ಯಾರಿಗೂ ಕಷ್ಟವೇನಲ್ಲ. ನೆಮ್ಮದಿಯ ಜೀವನಕ್ಕೆ ಅತಿಯಾದ ಆದಾಯ ಬೇಕೆಂದೇನಿಲ್ಲ. ಸರಳವಾಗಿ, ಸಾತ್ವಿಕವಾಗಿ, ನೀತಿವಂತರಾಗಿ ನಡೆಯುವಂತಾದರೆ ಕಡಿಮೆ ಆದಾಯದಲ್ಲೂ ನೆಮ್ಮದಿಯಿಂದ ಬದುಕಲು ಸಾಧ್ಯ. ಬಡತನ ಎಲ್ಲರಿಗೂ ಇದ್ದದ್ದೇ. ಬಡತನವಿದ್ದರೂ ಬದುಕು ಕಟ್ಟಿಕೊಂಡವರು ಬೇಕಾದಷ್ಟು ಜನರಿದ್ದಾರೆ. ಕಾರಣ ಅವರಿಗೆ ಬಡತನವೇ ಬದುಕಿಗೆ ಒಂದು ಭರವಸೆ ತಂದುಕೊಟ್ಟಿರುತ್ತದೆ.

ಹೆದರದಿರು ಮನವೆ, ಬೆದರದಿರು ತನುವೆ,
ನಿಜವನರಿತು ನಿಶ್ಚಿಂತನಾಗಿರು.
ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ,
ಎಲವದ ಮರನ ಇಡುವರೊಬ್ಬರ ಕಾಣೆ.
ಭಕ್ತಿಯುಳ್ಳವರ ಬೈವರೊಂದು ಕೋಟಿ,
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ.
ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ,
ಚೆನ್ನಮಲ್ಲಿಕಾರ್ಜುನಾ

ಅಕ್ಕನಂತೆ ಶರಣರ ನುಡಿಯೇ ಗತಿ, ಸೋಪಾನ ಎಂದು ಭಾವಿಸಿ ಬದುಕುವುದನ್ನು ರೂಢಿಸಿಕೊಂಡರೆ ನೆಮ್ಮದಿ ಅಂಗೈ ನೆಲ್ಲಿಯಾಗುವುದರಲ್ಲಿ ಅನುಮಾನವಿಲ್ಲ. ಅಕ್ಕ ತನ್ನ ನೆಮ್ಮದಿಗಾಗಿ ಕಂಡುಕೊಂಡ ಮತ್ತೊಂದು ದಾರಿಯನ್ನು ನೋಡಿ:

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು.
ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು.
ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು.
ಶಯನಕ್ಕೆ ಹಾಳು ದೇಗುಲಗಳುಂಟು.
ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮ ಸಂಗಾತಕ್ಕೆ ನೀನೆನಗುಂಟು

Previous post ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
Next post ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2

Related Posts

ನಾನೆಂಬುದ ಅಳಿದು…
Share:
Articles

ನಾನೆಂಬುದ ಅಳಿದು…

April 6, 2023 ಪದ್ಮಾಲಯ ನಾಗರಾಜ್
ನಾನೆಂಬುದ ಅಳಿದು ಇದಿರೆಂಬುದ ಮರೆತು ಭಾವ ದಗ್ಧವಾಗಿರಬಲ್ಲಡೆ ಅದು ಸ್ವತಂತ್ರ ಸ್ವಾತಂತ್ರ್ಯದ ಸಂವೇದನೆಯು ತಾನು ಯಾವುದಕ್ಕೆ ಗುಲಾಮನಲ್ಲ ಎಂದು ವಿಶ್ಲೇಷಿಸಿಕೊಳ್ಳುವುದರಿಂದ...
ಪ್ರಭುಲಿಂಗಲೀಲೆ…
Share:
Articles

ಪ್ರಭುಲಿಂಗಲೀಲೆ…

May 10, 2022 ಡಾ. ಚಂದ್ರಶೇಖರ ನಂಗಲಿ
ಚಾಮರಸ ವಿರಚಿತ ಪ್ರಭುಲಿಂಗಲೀಲೆಯು ಅಲ್ಲಮಪ್ರಭುವನ್ನು ಶಿವನೊಡನೆ “ತಗುಳ್ಚಿ ಪೋಲಿಪ” ಕಥನಕ್ರಮದ ಮಧ್ಯಕಾಲೀನ ಮಹಾಕಾವ್ಯ. ಇದನ್ನು Phylosophical Allegory...

Comments 12

  1. Kamalesh Jevergi
    Apr 7, 2020 Reply

    ಎಲ್ಲ ಇದ್ದೂ ನೆಮ್ಮದಿಯಿಲ್ಲದ ದಿನಗಳನ್ನು ಕಳೆಯುತ್ತಿದ್ದೇವೆ. ದಿನದಿನಕ್ಕೂ ಆತಂಕ. ಸ್ವಾಮೀಜಿಯವರ ಲೇಖನ ಸಾಂತ್ವನ ನೀಡುತ್ತದೆ.

  2. Panchakshari hv
    Apr 8, 2020 Reply

    ನೆಮ್ಮದಿ ಎಂಬುದು ಹೊರಗಿನ ಸರಕಲ್ಲ, ಒಳಗಣ ಅರಿವು ಎಂದು ಬಹಳ ಸರಳವಾಗಿ ಹಾಗೂ ಸುಂದರವಾಗಿ ತಿಳಿಸಿದ್ದೀರಿ.
    ಶರಣುಶರಣಾರ್ಥಿ

  3. Dayashankara R
    Apr 9, 2020 Reply

    ಮುಕ್ತಾಯಕ್ಕ ಮತ್ತು ಅಲ್ಲಮರ ಸಂಭಾಷಣೆಯ ಮಹತ್ವವೇನು? ಶೂನ್ಯ ಸಂಪಾದನೆಯಲ್ಲಿ ಕಾಣಿಸಿಕೊಳ್ಳುವ ಈ ಪ್ರಸಂಗ ನಿಜಕ್ಕೂ ನಡೆದದ್ದೇ ಅಥವಾ ಶೂನ್ಯ ಸಂಪಾದನಾಕಾರರು ಅವರ ಹೆಸರಲ್ಲಿ ಬರೆದರೊ ಎನ್ನುವ ಅನುಮಾನ ನನ್ನಲ್ಲಿದೆ. ಏನೇ ಆಗಲಿ ಶರಣರ ಇಂತಹ ಸಂವಾದಗಳು ಅವರ ಬದುಕಿನ ಮೇಲೆ ಬೆಳಕು ಚಲ್ಲುತ್ತವೆ.

  4. Hareesh Mysuru
    Apr 11, 2020 Reply

    ಹಾಲು ಮತ್ತು ದೇವರ ನಡುವಣ ಸಂಭಾಷಣೆ ಹೊಸ ಚಿಂತನೆಯತ್ತ ತೊಡಗಿಸುವಂತಿದೆ. ಸರಾಗವಾಗಿ ಓದಬಹುದಾದ ಸುಂದರ ಲೇಖನ.

  5. Vidya D.K
    Apr 11, 2020 Reply

    ಯಾವ ಧರ್ಮಗಳಲ್ಲಿಯೂ ಇವತ್ತು ಪ್ರಶ್ನೊತ್ತರಗಳಿಗೆ ಜಾಗವೇ ಇಲ್ಲವಾಗಿದೆ. ಪ್ರಶ್ನೆ ಮಾಡುವ ಮನಸ್ಸುಗಳನ್ನು ಸ್ವೀಕರಿಸದ ಹೊರತು ಅಲ್ಲಿ ಹೊಸ ಗಾಳಿಗೆ ಅವಕಾಶವೇ ಇರುವುದಿಲ್ಲ. ಮುಂದಿನ ಜನಾಂಗಕ್ಕೆ ಧರ್ಮಗಳು ಈ ಕಾರಣಕ್ಕೆ ಹತ್ತಿರ ಹೋಗಲಾರೆವೆನೋ…

  6. Nirmala R
    Apr 13, 2020 Reply

    ಮನುಷ್ಯ ಎಷ್ಟೆಲ್ಲಾ ಗಳಿಸಿಕೊಂಡರೂ ನೆಮ್ಮದಿ, ಸಮಾಧಾನಗಳು ದೂರವಾಗಿವೆ. ಕೊರೊನಾದ ಈ ದಿನಗಳಲ್ಲಂತೂ ಸಾವಿನ ಮುಂದೆ ಮನುಷ್ಯ ಅಸಹಾಯಕನಂತೆ ಕಾಣುತ್ತಿದ್ದಾನೆ. ನೆಮ್ಮದಿಯ ಪ್ರಾಮುಖ್ಯತೆಯನ್ನು ತಿಳಿಸುವ ನಿಮ್ಮ ಲೇಖನ ಬಹಳ ಚನ್ನಾಗಿದೆ ಸ್ವಾಮೀಜಿ.

  7. Jahnavi Naik
    Apr 17, 2020 Reply

    ಗುಬ್ಬಿ ಹೆರರ ಮನೆ ತನ್ನ ಮನೆ ಎಂಬಂತೆ… ನಮ್ಮದೂ ಅದೇ ಕತೆ, ಇಲ್ಲೇ ಝಾಂಡಾ ಹೊಡೆಯುತ್ತೇವೆಂದು ತಿಳಿದು ಎಲ್ಲರನ್ನೂ ಶೋಷಣೆ ಮಾಡುತ್ತೇವೆ.

  8. Girija K.P
    Apr 18, 2020 Reply

    ನನ್ನದೆಂಬುದು ಯಾವುದೂ ಇಲ್ಲದ ಜೀವನದಲ್ಲಿ ನೆಮ್ಮದಿ ಎನ್ನುವುದೂ ಇಲ್ಲ!!! ಯಾವಾಗಲೂ ಕೊರತೆಗಳ ಕಾಟದಲ್ಲೇ ಮನುಷ್ಯ ಮುಳುಗಿ ಹೋಗಿರುತ್ತಾನೆ. ಅದಿಲ್ಲ, ಇದಿಲ್ಲ… ಎನ್ನುವ ಕೊರತೆಯ ನಡುವೆ ನೆಮ್ಮದಿಯನ್ನು ಎಲ್ಲಿ ಹುಡುಕುವುದು?

  9. Mariswamy Gowdar
    Apr 21, 2020 Reply

    ಪ್ರತಿಯೊಬ್ಬರೂ ಒಂದೊಂದರಲ್ಲಿ ನೆಮ್ಮದಿಯನ್ನು ಹುಡುಕುತ್ತಾರೆ. ಆದರೆ ನೆಮ್ಮದಿ ಹೊರಗೆಲ್ಲೋ ಸಿಗುವಂಥ ವಸ್ತುವಲ್ಲ. ನಮ್ಮೊಳಗೆ ಹುಡುಕಬೇಕಾದ ಸಿರಿ, ಸಂಪತ್ತು. ಶರಣರು ನೆಮ್ಮದಿಗಾಗಿ ಏನು ಮಾಡಿದರು? ಕಾಯಕವನ್ನು ನೆಚ್ಚಿಕೊಂಡರೆ? ದಾಸೋಹವನ್ನು ಮಾಡಿದರೆ? ಪೂಜೆಯಲ್ಲಿ ಹುಡುಕಿದರೆ?…

  10. Kusuma Shivamogga
    Apr 24, 2020 Reply

    ನಿಜಕ್ಕೂ ಶಿಕ್ಷೆಯಿಂದ ಮಕ್ಕಳಿಗೆ ಬುದ್ದಿ ಹೇಳುವುದು ಸಾಧ್ಯವೆ ಎಂಬ ಕುರಿತು ನಾವು ಶಾಲೆಯಲ್ಲಿ ಚರ್ಚೆ ಇಟ್ಟುಕೊಂಡಿದ್ದೆವು. ಎರಡೂ ಸರಿ ಎನಿಸುತ್ತಿತ್ತು. ಶಿಕ್ಷಕಿಯಾಗಿ ನನ್ನ ಅನುಭವದಲ್ಲಿ ಹೇಳುವುದಾದರೆ ಈಗಿನ ಕಾಲದ ಮಕ್ಕಳ ವಿಷಯ ನಮ್ಮ ಕಾಲದಂತಿಲ್ಲ. ನಾವು ನಮ್ಮ ಗುರುಗಳಿಂದ ತಿನ್ನುತ್ತಿದ್ದ ಏಟುಗಳು ನಮ್ಮನ್ನು ನಿಜಕ್ಕೂ ಸರಿಯಾದ ದಾರಿಯಲ್ಲಿ ಬೆಳೆಸಿವೆ ಎಂಬುದು ನನ್ನ ನಂಬಿಕೆ. ಆದರೆ ಈಗಿನ ಮಕ್ಕಳು ತುಂಬಾ ಸೂಕ್ಷ್ಮ, ಶಿಕ್ಷೆ ಸ್ವಲ್ಪ ಕಠಿಣವಾದರೂ ಆತ್ಮಹತ್ಯೆಗೆ ಯತ್ನಿಸಿಬಿಡುತ್ತಾರೆ! ನನಗಂತೂ ಗೊಂದಲವಾಗಿದೆ ಗುರುಗಳೇ.

  11. Neelamma Revaadi
    Apr 25, 2020 Reply

    ಅಂತರಂಗದ ಸೌಂದರ್ಯವನ್ನು ನೋಡಿಕೊಳ್ಳುವ ಕನ್ನಡಿ ಸಾಕ್ಷಿಪ್ರಜ್ಞೆ, ಸ್ವಾಮಿಗಳ ಆಶೀರ್ವಚನ ನೆಮ್ಮದಿಯ ತಾಣವನ್ನು ತೋರಿಸುತ್ತದೆ.

  12. Archana Kani
    May 5, 2020 Reply

    ಅಜಗಣ್ಣ-ಮುಕ್ತಾಯಕ್ಕರ ಕುರಿತು ನನಗೆ ಎಲ್ಲಿಯೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ದಯವಿಟ್ಟು ಶ್ರೀಗಳವರು ವಿವರವಾಗಿ ಈ ಅಪೂಋ್ವ ಅಣ್ಣ-ತಂಗಿಯ ಕುರಿತು ಬಯಲುನಲ್ಲಿ ಒಂದು ಲೇಖನ ಬರೆಯಬೇಕೆಂದು ತಮ್ಮಲ್ಲಿ ಪ್ರಾರ್ಥನೆ.

Leave a Reply to Mariswamy Gowdar Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಗುಟುಕು ಆಸೆ…
ಗುಟುಕು ಆಸೆ…
May 8, 2024
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
August 2, 2019
ಇದ್ದಷ್ಟೇ…
ಇದ್ದಷ್ಟೇ…
January 10, 2021
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2
May 8, 2024
ಆಸರೆ
ಆಸರೆ
August 6, 2022
Copyright © 2025 Bayalu