Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೀರಿನ ಬರ ನೀಗುವುದು ಹೇಗೆ?
Share:
Articles May 1, 2019 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ನೀರಿನ ಬರ ನೀಗುವುದು ಹೇಗೆ?

ನದಿಯ ನೀರು ಹೋದುವಯ್ಯಾ ಸಮುದ್ರಕ್ಕೆ,
ಸಮುದ್ರದ ನೀರು ಬಾರವಯ್ಯಾ ನದಿಗೆ.
ನಾನು ಹೋದೆನಯ್ಯಾ ಲಿಂಗದ ಕಡೆಗೆ;
ಲಿಂಗ ಬಾರದು ನೋಡಯ್ಯಾ ನನ್ನ ಕಡೆಗೆ.
ಮಗ ಮುನಿದಡೆ ತಂದೆ ಮುನಿಯುವನು;
ನಾ ಮುನಿದಡೆ ನೀ ಮುನಿಯೆ ನೋಡಯ್ಯಾ.
ಕಪಿಲಸಿದ್ಧಮಲ್ಲಿನಾಥಾ.

ಭಕ್ತ ದಾರಿಬಿಟ್ಟರೂ ದೇವರು ಆತನ ಕೈ ಹಿಡಿದು ಮೇಲೆತ್ತುವನು ಎನ್ನುವ ಭಾವ ಮುಖ್ಯ. ಅದಕ್ಕೆ ಪೂರಕವಾಗಿ ಲೌಕಿಕ ನಿದರ್ಶನಗಳನ್ನು ನೀಡುವರು ಶಿವಯೋಗಿ ಸಿದ್ಧರಾಮೇಶ್ವರರು. ಅವರು ಮೊದಲಿಗೆ ಒತ್ತು ಕೊಟ್ಟುದೇ ಗಿಡ-ಮರಗಳನ್ನು ಬೆಳೆಸಲು, ಕೆರೆ-ಕಟ್ಟೆಗಳನ್ನು ನಿರ್ಮಿಸಲು. ಆಗ ನೀರಿಗೆ ಬರ ಬರುವುದಿಲ್ಲ. ನದಿಯ ನೀರು ಸಮುದ್ರ ಸೇರಬಲ್ಲುದೆ ಹೊರತು ಸಮುದ್ರದ ನೀರು ನದಿಗೆ ಬರಲು ಸಾಧ್ಯವಿಲ್ಲ. ಹಾಗಾಗಿ ನದಿಯ ನೀರು ಸಮುದ್ರ ಸೇರದಂತೆ ಕಾಯ್ದುಕೊಳ್ಳಬೇಕಾದ ಹೊಣೆ ನಮ್ಮದು. ಜನರು ಕಂಡ ಕಂಡ ದೇವಾಲಯ (ಸ್ಥಾವರ ಗುಡಿಯ ದೇವರು) ಹುಡುಕಿಕೊಂಡು ಹೋಗುವರು. ದೇವಾಲಯದ ದೇವರು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಅದಕ್ಕಾಗಿ ಬಾಹ್ಯ ದೇವಾಲಯದ ಹುಚ್ಚನ್ನು ಬಿಟ್ಟು ಶ್ರೀಗುರುವಿನಿಂದ ಇಷ್ಟಲಿಂಗ ದೀಕ್ಷೆ ಪಡೆದು ಅಂಗದ ಮೇಲೆ ಲಿಂಗ ಧರಿಸಿ ಪೂಜಿಸಬೇಕು. ಮಗ ಮುನಿಸಿಕೊಂಡು ತಂದೆಯ ಬಗ್ಗೆ ಏನೇನೋ ಮಾತನಾಡಬಹುದು. ಆದರೆ ತಂದೆ ಮಗನ ಮೇಲೆ ಮುನಿಸಿಕೊಳ್ಳದೆ ಅವನನ್ನು ತಿದ್ದುವ ಕಾರ್ಯ ಮಾಡುವನು. ಅಂತೆಯೇ ಭಕ್ತ ತಪ್ಪು ಮಾಡಿದರೂ ದೇವರು ಅದನ್ನು ತನ್ನ ಹೊಟ್ಟೆಯೊಳಗೆ ಹಾಕಿಕೊಂಡು ಆ ಭಕ್ತನನ್ನು ಸನ್ಮಾರ್ಗದೆಡೆಗೆ ಕೈ ಹಿಡಿದು ಮುನ್ನಡೆಸುವನು. ಇಲ್ಲಿ ಲೌಕಿಕ ಕಲ್ಯಾಣದೊಂದಿಗೆ ಆತ್ಮ ಕಲ್ಯಾಣದ ದಾರಿಯ ಹೊಳಹುಗಳಿವೆ.

ಕಳೆದ ವಾರ ಹೊನ್ನಾಳಿ ತಾಲ್ಲೂಕಿನ ಬಿದರಗಡ್ಡೆ ಗ್ರಾಮಕ್ಕೆ ಹೋಗಿದ್ವಿ. ಮಣ್ಣಿನ ರಸ್ತೆ. ನೀರೇ ಅಪರೂಪ ಎನ್ನುವ ಪರಿಸ್ಥಿತಿ ಇರುವಾಗ ರಸ್ತೆಯುದ್ದಕ್ಕೂ ಹರಿದಾಡುವಂತೆ ಟ್ಯಾಂಕರ್ನಿಂದ ನೀರು ಹಾಕಿದ್ದರು. ಅಲ್ಲಿ ನೀರಿಗೆ ಬರವಿದ್ದಂತೆ ಕಾಣಲಿಲ್ಲ. ಅಲ್ಲಿಯ ಜನರು `ಬುದ್ಧಿ, ನಮ್ಮೂರಿನ ಮೂರು ಕಡೆ ನದಿ ಹರಿಯುತ್ತಿದೆ. ನಮಗೆ ನೀರಿಗೆ, ಬೆಳೆಗೆ ಬರವಿಲ್ಲ’ ಎಂದು ಖುಷಿಯಿಂದ ಹೇಳುತ್ತಿದ್ದರು. ನೀರಿಗೆ ಬರವಿಲ್ಲ ಎಂದಾಗ ವಾಟ್ಸಪ್‍ನಲ್ಲಿ ಹರಿದಾಡುತ್ತಿದ್ದ ಚಿತ್ರಣ ಕಣ್ಮುಂದೆ ಸುಳಿಯುತ್ತಿತ್ತು. ಸಾವಿರಾರು ಮೈಲು ದೂರ ಕಾಣುವ ಭಯಂಕರ ಮರಳುಗಾಡು. ಒಬ್ಬ ವ್ಯಕ್ತಿ ತತ್ರಾಣಿಯಲ್ಲಿ (ಮಣ್ಣಿನಿಂದ ಮಾಡಿದ್ದು) ನೀರು ತುಂಬಿಕೊಂಡು ಮರಳುಗಾಡಿನ ವೀಕ್ಷಣೆಗೆ ಬಂದಿದ್ದಾನೆ. ಒಂದೆಡೆ ಆತ ಕುಳಿತು ಕೈಯಿಂದ ಮರಳನ್ನು ಆಚೀಚೆಗೆ ಸರಿಸುತ್ತಿದ್ದಂತೆ ಅವನ ಕಣ್ಣಿಗೆ ಚಿನ್ನದ ಸರಗಳು ಕಾಣಿಸಿಕೊಳ್ಳುವವು. ಆತನ ಮುಖ ಅರಳುವುದು. ಮತ್ತಷ್ಟು ಮರಳನ್ನು ತೆಗೆಯುತ್ತಲೆ ಮತ್ತೆ ಕೆಲವು ಚಿನ್ನದ ಸರಗಳು! ಅವನ ಸಂತೋಷ ಕೇಳಬೇಕೇ? ತತ್ರಾಣಿಯಲ್ಲಿದ್ದ ನೀರನ್ನು ಚೆಲ್ಲಿ ಎಲ್ಲ ಸರಗಳನ್ನು ಅದರಲ್ಲಿ ತುಂಬಿಕೊಂಡು ಖುಷಿಯಿಂದ ಹೊರಡುತ್ತಾನೆ. ಸ್ವಲ್ಪ ದೂರ ಹೋಗುತ್ತಲೇ ಪಾದದ ಕೆಳಗೆ ಸುಡುವ ಮರಳು, ನೆತ್ತಿಯ ಮೇಲೆ ಉರಿಬಿಸಿಲು. ದಾಹ ಹೆಚ್ಚಾಯ್ತು. ಎಲ್ಲಿಯೂ ನೀರು ಕಾಣುತ್ತಿಲ್ಲ. ನನ್ನಲ್ಲೇ ನೀರಿನ ತತ್ರಾಣಿ ಇದೆಯಲ್ಲ ಎಂದು ಅದರತ್ತ ನೋಡುತ್ತಾನೆ. ಅದರೊಳಗೆ ನೀರಿಲ್ಲ. ಅವನಿಗೀಗ ನೀರು ಬೇಕೇ ಬೇಕು. ನೀರಿಗಾಗಿ ಒದ್ದಾಡಿ ಬಂಗಾರದ ಸರಗಳನ್ನೆಲ್ಲ ಬಿಸಾಡುವನು. ಬಂಗಾರದ ಸರಗಳಿಗಿಂತ ನೀರು ಬೆಲೆಯುಳ್ಳದ್ದಾಗಿ ಕಾಣುವುದು. `ಜೀವಜಲ’ ಅವನಲ್ಲಿಲ್ಲ, ಅವನ ಒದ್ದಟ ಶಿವನಿಗೆ ಮಾತ್ರ ಗೊತ್ತು.

ನಮ್ಮ ವಾಟ್ಸಪ್‍ಗೆ ಬಂದ ಮತ್ತೊಂದು ಮಾಹಿತಿ: ವಾಟರ್ ಎನ್ನುವ ಇಂಗ್ಲಿಷಿನ ಸುದ್ದಿ. `ನಮ್ಮಜ್ಜ ನೀರನ್ನು ನದಿಗಳಲ್ಲಿ ನೋಡುತ್ತಿದ್ದ. ನಮ್ಮಪ್ಪ ಅದೇ ನೀರನ್ನು ಬಾವಿಗಳಲ್ಲಿ ಕಾಣುತ್ತಿದ್ದ. ನಾವು ನಲ್ಲಿಗಳಲ್ಲಿ ನೋಡುತ್ತಿದ್ದೆವು. ನಮ್ಮ ಮಕ್ಕಳು ಬಾಟಲ್‍ಗಳಲ್ಲಿ ನೋಡುತ್ತಿದ್ದಾರೆ. ಮೊಮ್ಮಕ್ಕಳು ಮಾತ್ರೆಗಳ ರೂಪದಲ್ಲಿ ನೋಡಬಹುದು. ಇಷ್ಟಾದರೂ ನಾವು ನೀರಿನ ಬಗ್ಗೆ ಉದಾಸೀನ ಮಾಡುತ್ತ ಹೋದರೆ ಮುಂದೆ ಅದು ಕಣ್ಣೀರಲ್ಲಿ ಮಾತ್ರ ಕಾಣಬಹುದು’. ಇದರ ಬಗ್ಗೆ ಗಂಭೀರ ಚಿಂತನೆ ನಡೆಸಿ ನೀರಿನ ಉಳಿತಾಯ, ಮಿತ ಬಳಕೆಯ ಬಗ್ಗೆ ಯೋಚನೆ, ಯೋಜನೆ ಹಾಕಿಕೊಳ್ಳುವ ಅಗತ್ಯವಿದೆ. ಇತಿಹಾಸವನ್ನು ಓದುತ್ತಿದ್ದರೆ ನದಿ ದಡಗಳಲ್ಲೇ ಸಂಸ್ಕೃತಿ ಬೆಳೆದದ್ದು. ಈಗ ನದಿಗಳೇ ಬತ್ತಿ ಅಲ್ಲಿ ಬರೀ ಮರಳು ಕಾಣುತ್ತಿದೆ. ಬಾವಿಗಳಲ್ಲಿ ನೀರನ್ನು ಕೇಳಲೇಬೇಕಾಗಿಲ್ಲ. ಬಸವಣ್ಣನವರು ಹೇಳುವಂತೆ `ಕೆರೆ ಹಳ್ಳ ಬಾವಿಗಳು ಬತ್ತಿದರೆ ಗೊಳ್ಳೆ ಗೊರಚೆ ಚಿಪ್ಪುಗಳ ಕಾಣಬಹುದು’ ಎನ್ನುವ ಪರಿಸ್ಥಿತಿ. ನಲ್ಲಿಗಳಲ್ಲಂತೂ ನೀರು ಬರುವುದು ದುಸ್ತರ. ನೀರನ್ನು ಕೊಂಡು ಕುಡಿಯುವ ಪರಿಸ್ಥಿತಿ ಬಂದಿದೆ. 25-30 ವರ್ಷಗಳ ಹಿಂದೆ ಯಾರಾದರೂ ನೀರನ್ನು ಕೊಂಡು ಕುಡಿಯಬೇಕಾಗುತ್ತದೆ ಎಂದು ಹೇಳಿದ್ದರೆ ಹುಚ್ಚ ಎನ್ನುತ್ತಿದ್ದರು. ಯಾಕೆಂದರೆ ಪ್ರಕೃತಿಯಲ್ಲಿ ಉಚಿತವಾಗಿ ಸಿಗುವುದು ನೀರು, ಗಾಳಿ, ಬೆಳಕು ಎನ್ನುವ ಭ್ರಮೆ ಮನುಷ್ಯನಲ್ಲಿ ತುಂಬಿತ್ತು. ಈಗ ನೀರು, ಗಾಳಿ, ಬೆಳಕಿಗೂ ಹಣ ಕೊಡಬೇಕಾಗಿದೆ. ಹಣ ಕೊಟ್ಟರೂ ಬೇಕಾದಷ್ಟು ನೀರು ಸಕಾಲದಲ್ಲಿ ದೊರೆಯುತ್ತದೆ ಎಂದು ಹೇಳಲಾಗದು. ಹಾಗಾಗಿ ಈಗ ಕದ್ದು ಕುಡಿಯುವ ಸ್ಥಿತಿ.

ಮನೆಗೆ, ಮನೆಯೊಳಗಿನ ಟ್ರಂಕ್, ಬೀರು, ಟ್ರಜರಿಗಳಿಗೆ ಬೀಗ ಹಾಕುವ ಪದ್ಧತಿ ಹೊಸದೇನಲ್ಲ. ಆದರೆ ಬಸವ ನಾಡಿನ ತಿಕೋಟ ತಾಲ್ಲೂಕಿನ ಕಳ್ಳವಟಗಿ ಬಳಿಯ ಶ್ರೀಪತಿ ತಾಂಡಾ-3ರಲ್ಲಿ ವಾಸವಾಗಿರುವ ಲಂಬಾಣಿ ಜನರು ಮನೆಗೆ ಬೀಗ ಹಾಕುವುದನ್ನು ಮರೆತರೂ ಮನೆ ಮುಂದಿನ ನೀರಿನ ಬ್ಯಾರಲ್‍ಗೆ ಬೀಗ ಹಾಕುವುದನ್ನು ಮರೆಯುವುದಿಲ್ಲವಂತೆ. ಯಾರಾದರೂ ಕದಿಯಬಹುದು ಎಂದು ಹಗಲು ರಾತ್ರಿ ಕಾವಲಿರುತ್ತಾರಂತೆ. ಇದು ನೀರಿನ ಬವಣೆಗೆ ಹಿಡಿದ ಕನ್ನಡಿ. ಕಾರಣ ಅವರು 14 ಕಿ ಮೀ ದೂರದಿಂದ ನೀರು ತರಬೇಕಂತೆ.

ಕಳೆದ ವಾರ ಮುತ್ತಗದೂರು, ಗ್ಯಾರಳ್ಳಿ, ಸಾಸಲು ಮತ್ತಿತರ ಗ್ರಾಮಗಳ ಹತ್ತಿಪ್ಪತ್ತು ಯುವಕರು ನಮ್ಮಲ್ಲಿಗೆ ಬಂದಿದ್ದರು. ‘ಬುದ್ಧಿ, ನಮ್ಮ ತೋಟಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಸಿದ್ದನಮಠದ ಪಕ್ಕ ಒಂದು ಚಾನಲ್ ಇದೆ. ಅಲ್ಲಿಂದ ಟ್ಯಾಂಕರ್‍ನಲ್ಲಿ ನೀರು ತರುತ್ತೇವೆ. ಆದರೆ ಈಗ ಸಿದ್ದನಮಠದ ಕೆಲವರು ತಡೆಯುತ್ತಿದ್ದಾರೆ. ರಸ್ತೆ ಹಾಳಾಗುತ್ತಿದೆ. ಮಕ್ಕಳು ಮರಿ ಓಡಾಡಲು ಹೆದರುವ ಸ್ಥಿತಿ ಬಂದಿದೆ. ಇನ್ನುಮುಂದೆ ಇಲ್ಲಿ ನಿಮ್ಮ ಲಾರಿಗಳು ಬರಕೂಡದು ಎನ್ನುತ್ತಾರೆ. ಲಾರಿಗಳು ಬರುವಾಗ ಬೇಕೆಂದೇ ಮಕ್ಕಳನ್ನು ಬೀದಿಗೆ ಕಳಿಸುತ್ತಾರೆ. ಸೈಕಲ್, ಬೈಕ್ ನಿಲ್ಲಿಸುತ್ತಾರೆ. ದನಕರುಗಳನ್ನು ಬಿಡುತ್ತಾರೆ. ಅವರಲ್ಲಿ ಕೆಲವರು ಪ್ರತಿದಿನ ನಮ್ಮಿಂದ ಹಣ ಬಯಸುತ್ತಾರೆ. ತೋಟ ಉಳಿಸಿಕೊಳ್ಳಲು ಪ್ರತಿದಿನ ನಾಲ್ಕೈದು ಸಾವಿರ ಹಣ ಖರ್ಚು ಮಾಡುತ್ತಿದ್ದೇವೆ. ಅವರಿಗೆ ನಿತ್ಯ ಹೇಗೆ ಹಣ ಕೊಡಲು ಸಾಧ್ಯ? ತಾವು ಶಾಸಕರಿಗೆ ಒಂದು ಮಾತು ಹೇಳಿ ತೊಂದರೆ ಕೊಡದಂತೆ ವ್ಯವಸ್ಥೆ ಮಾಡಿಸಬೇಕು’ ಎಂದರು. ಅಡಕೆ ತೋಟಕ್ಕೆ ಎಲ್ಲಿಂದಲೋ ನೀರು ಹೊಡೆದು ಬದುಕಿಸುವುದು ಹೇಗೆ? ನಮ್ಮ ಶ್ರೀಮಠದ ತೋಟಕ್ಕೆ ನಿತ್ಯ 25,000 ಲೀಟರ್ ನೀರನ್ನು ಮಠದ ಟ್ಯಾಂಕರ್‍ನಿಂದ 15-20 ಮೈಲಿ ದೂರದಿಂದ ಹೊಡೆಸುತ್ತಲಿದ್ದೇವೆ. ಎಷ್ಟೇ ನೀರು ಹೊಡೆದರೂ ನೀರನ್ನೇ ಉಣಿಸಿಲ್ಲವೇನೋ ಎನ್ನುವಂತೆ ಆರಿಹೋಗಿರುತ್ತದೆ. ಇದರ ಮೇಲೆ ವಾಹನ ಚಾಲಕರು ಡಿಜಲ್ ಖಾಲಿ ಎಂತಲೋ, ಎಂಜಿನ್ ಕೆಟ್ಟಿದೆ ಎಂತಲೋ, ಕರೆಂಟ್ ಇಲ್ಲವೆಂತಲೋ ನೆಪ ಹೇಳುತ್ತ ಕಳ್ಳಾಟ ಆಡುವರು.

ಇವತ್ತು ನಿಜಕ್ಕೂ ಯಾರು ಶ್ರೀಮಂತ? ಹತ್ತಾರು ಎಕರೆ ಅಡಕೆ ತೋಟ ಇದ್ದವ ಶ್ರೀಮಂತನಲ್ಲ. ತಿಂಗಳಿಗೆ ಲಕ್ಷಗಟ್ಟಲೆ ವೇತನ ಪಡೆಯುವವ ಶ್ರೀಮಂತನಲ್ಲ. ಕಾರು, ಬಂಗಲೆ ಇರುವವ ಶ್ರೀಮಂತನಲ್ಲ. ಬ್ಯಾಂಕ್‍ನಲ್ಲಿ ಡೆಪಾಜಿಟ್ ಇಟ್ಟವ ಶ್ರೀಮಂತನಲ್ಲ. ಉನ್ನತ ಹುದ್ದೆಯಲ್ಲಿದ್ದವ ಶ್ರೀಮಂತನಲ್ಲ. ಶಾಸಕನೋ, ಮಂತ್ರಿಯೋ, ಮುಖ್ಯಮಂತ್ರಿಯೋ ಆದವ ಶ್ರೀಮಂತನಲ್ಲ. ಕೇಜಿಗಟ್ಟಲೆ ಬಂಗಾರ ಇದ್ದವ ಶ್ರೀಮಂತನಲ್ಲ. ನಗರಗಳಲ್ಲಿ ಹತ್ತಾರು ಮನೆ, ನಿವೇಶನ ಇರುವವ ಶ್ರೀಮಂತನಲ್ಲ. ಸಾಕಷ್ಟು ದನಕರುಗಳಿದ್ದವ ಶ್ರೀಮಂತನಲ್ಲ. ನೂರಾರು ಎಕರೆ ಜಮೀನು ಇದ್ದವ ಶ್ರೀಮಂತನಲ್ಲ. ಹಾಗಿದ್ದರೆ ಯಾರು ಶ್ರೀಮಂತ? ಶ್ರೀಮಂತಿಕೆಯ ಪರಿಕಲ್ಪನೆ ಬದಲಾಗುತ್ತಿದೆ. ಬೋರಿನಲ್ಲಿ ನಿರಂತರವಾಗಿ ನೀರು ಬರುತ್ತಿದ್ದರೆ ಅವನು ಶ್ರೀಮಂತ. ಇಂಥ ಶ್ರೀಮಂತರು ಎಷ್ಟು ಜನರಿದ್ದಾರೆ? ಹೇಳುವುದು ಕಷ್ಟ.

ಹೊಸದುರ್ಗ ತಾಲ್ಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರೀಕ್ಷಿತ ಮಳೆ ಇಲ್ಲ. ಇದ್ದಬದ್ದ ಬೋರುಗಳಲ್ಲಿ ಬರುತ್ತಿದ್ದ ಅಲ್ಪಸ್ವಲ್ಪ ನೀರು ಸಹ ನಿಂತುಹೋಗಿದೆ. ಇರುವ ತೋಟಗಳನ್ನು ಉಳಿಸಿಕೊಳ್ಳಲು, ಕುಡಿಯಲು ಮತ್ತೆ ಮತ್ತೆ ಕೊಳವೆ ಬಾವಿಗಳನ್ನು ತೋಡಿಸುತ್ತಲೇ ಇದ್ದಾರೆ. ಕೆಲವರಿಗೆ ನೀರು ಬಂದರೆ ಮತ್ತೆ ಕೆಲವರಿಗೆ ಕಣ್ಣೀರು ಬರುತ್ತಿದೆ. ನೀರು ಬಂದರೂ ಮಿಷನ್ ಕೂರಿಸಿ ಒಂದೆರಡು ಗಂಟೆ ನೀರು ಬಂದು ಒಮ್ಮೆಲೆ ನಿಂತುಹೋಗುವವು. ಶ್ರೀಮಠದ ಕುಡಿಯುವ ಮತ್ತು ತೋಟದ ಬಳಕೆಗೆಂದು ಜಲತಜ್ಞರನ್ನು ಕರೆಸಿ ಕಳೆದ ತಿಂಗಳು 900 ಅಡಿಗಳಂತೆ ಐದು ಕೊಳವೆ ಬಾವಿಗಳನ್ನು ತೋಡಿಸಿದರೂ ನೀರಿಲ್ಲ. ಜನರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ತಜ್ಞರನ್ನು ಕೇಳಿದರೆ ಮಳೆಪ್ರಮಾಣ ಹೇಳಿಕೊಳ್ಳುವಷ್ಟು ಕಡಿಮೆ ಆಗಿಲ್ಲ ಎನ್ನುವರು. ಹಾಗಿದ್ದರೆ ನೀರು ಎಲ್ಲಿಗೆ ಹೋಯ್ತು? ಸಾವಿರಾರು ಅಡಿ ಆಳ ತೋಡಿದರೂ ನೀರಿನ ಪಸೆಯೇ ಇಲ್ಲವಲ್ಲ? ಇಂಥ ಸಂಕಷ್ಟಕ್ಕೆ ಕಾರಣ ಯಾರು? ಉತ್ತರಕ್ಕಾಗಿ ಯಾರನ್ನೋ ಭವಿಷ್ಯ ಕೇಳಬೇಕಾಗಿಲ್ಲ. ನಾವೇ ನಮ್ಮ ಹಿಂದಿನವರ ಮತ್ತು ಇಂದಿನವರ ಬದುಕಿನ ಸಿಂಹಾವಲೋಕನ ಮಾಡಿದರೆ ಉತ್ತರ ಸಿಗುವುದು.

ನೀರನ್ನು ಹಿಡಿದಿಡುವ ಶಕ್ತಿ ಇರುವುದು ಭೂಮಿ, ಅರಣ್ಯ, ಬಾವಿ, ಕೆರೆ, ಹಳ್ಳ, ಹೊಳೆಗಳಿಗೆ. ಹಿಂದೆ ಎಲ್ಲೆಡೆ ಬಾವಿಗಳು ತುಂಬಿ ತುಳುಕುತ್ತಿದ್ದವು. ಕೆರೆಕಟ್ಟೆಗಳಲ್ಲಿ ವರ್ಷದುದ್ದಕ್ಕೂ ನೀರಿರುತ್ತಿದ್ದವು. ನದಿಗಳು ಸದಾ ತುಂಬಿ ಹರಿಯುತ್ತಿದ್ದವು. ಹಳ್ಳಗಳಲ್ಲಿ ನೀರು ಜಿನುಗುತ್ತಿತ್ತು. ಅಲ್ಲೇ ಜನ, ಜಾನುವಾರುಗಳ ಸ್ನಾನಾದಿ ಕ್ರಿಯೆಗಳು ನಡೆಯುತ್ತಿದ್ದವು. ದುರಾಸೆಯ ಮಾನವ ಅರಣ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ನಾಶ ಮಾಡಿದ. ಬಾವಿಗಳನ್ನು ಮುಚ್ಚಿದ. ಕೆರೆಗಳ ಪ್ರದೇಶವನ್ನು ಒತ್ತುವರಿ ಮಾಡಿದ. ಹಳ್ಳ-ಹೊಳೆಗಳ ಮರಳು ತೆಗೆದು ಅಲ್ಲಿ ನೀರು ನಿಲ್ಲದಂತೆ ಮಾಡಿದ. ಯಥೇಚ್ಛವಾಗಿ ಮಳೆ ಬಂದರೂ ಆ ನೀರನ್ನು ಹಿಡಿದಿಡುವ ಸಾಮರ್ಥ್ಯ ಇಲ್ಲದೆ ಅದು ಓಡುತ್ತ ಎತ್ತೆತ್ತಲೋ ಹೋಯ್ತು. ಅದಕ್ಕಾಗಿ ಹೇಳುವುದು: ಓಡುವ ನೀರನ್ನು ನಿಧಾನವಾಗಿ ನಡೆಯುವಂತೆ, ನಡೆಯುವ ನೀರು ಒಂದೆಡೆ ನಿಲ್ಲುವಂತೆ, ನಿಂತ ನೀರು ಅಲ್ಲೇ ಇಂಗುವಂತೆ ಮಾಡಬೇಕು ಎಂದು. ಈ ಕ್ರಮವನ್ನು ಇಂದು ಯಾರು ಅನುಸರಿಸುತ್ತಿದ್ದಾರೆ? ಹಿಂದೆ ಕೃಷಿಕರ ಎಲ್ಲ ಜಮೀನುಗಳಿಗೂ ಬದುಗಳಿರುತ್ತಿದ್ದವು. ಬದುಗಳ ಮೇಲೆ ಗಿಡಮರಗಳಿರುತ್ತಿದ್ದವು. ಮಳೆಯ ನೀರು ಅವರ ಹೊಲ ಬಿಟ್ಟು ಬೇರೆಡೆ ಹೋಗದೆ ಅಲ್ಲೇ ನಿಂತು ಭೂಮಿ ಆ ನೀರನ್ನು ಸಂತೋಷದಿಂದ ಕುಡಿದು ತನ್ನ ದಾಹವನ್ನು ತೀರಿಸಿಕೊಳ್ಳುತ್ತಿತ್ತು. ಪರಿಣಾಮ ಅಂತರ್ಜಲ ತನ್ನಿಂದ ತಾನೇ ಹೆಚ್ಚಾಗುತ್ತಿತ್ತು. ಆದರೆ ಕೃಷಿಕರು ಬದುಗಳನ್ನು ತೆಗೆದುಹಾಕಿದರು. ಮಳೆ ಬಂದರೆ ನೀರು ಅಲ್ಲಿ ನಿಲ್ಲಲು ಅವಕಾಶವಿಲ್ಲದೆ ರಭಸವಾಗಿ ಹರಿಯಲಾರಂಭಿಸಿತು. ತಾನು ಮಾತ್ರ ಹರಿಯದೆ ತನ್ನೊಂದಿಗೆ ಭೂಮಿಯ ಮೇಲ್ಪದರದ ಫಲವತ್ತಾದ ಮಣ್ಣನ್ನು ಸಹ ತೆಗೆದುಕೊಂಡು ಹೋಗಲಾರಂಭಿಸಿತು. ಮುಂದೆ ಹೊರಗಿನ ಎಷ್ಟೇ ಮಣ್ಣು ಹೊಡೆದರೂ ಭೂಮಿಯ ಮೇಲ್ಪದರದ ಮಣ್ಣಿನ ಸತ್ವವನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ. ಮನುಷ್ಯ ತನ್ನ ತಪ್ಪಿನ ಅರಿವುಳ್ಳವನಾಗಿ ಮೊದಲು ತನ್ನ ಭೂಮಿಗೆ ಬದುಗಳನ್ನು ಹಾಕಿಕೊಳ್ಳಬೇಕು.

ಪ್ರತಿಯೊಂದು ಜಮೀನಿನಲ್ಲೂ ಕೃಷಿಹೊಂಡಗಳಿರುವಂತೆ ಎಚ್ಚರವಹಿಸಬೇಕು. ಮಳೆ ಬಂದಾಗ ಆ ಹೊಂಡಗಳು ತುಂಬಿಕೊಂಡರೆ ಭೂಮಿ ಯಾವಾಗಲೂ ತನುವಾಗಿರುತ್ತದೆ. ಜೊತೆಗೆ ಕೆರೆ ಕಟ್ಟೆಗಳ ಹೂಳೆತ್ತಿಸಿ ಅವು ಮಳೆ ನೀರಿನಿಂದ ತುಂಬಿಕೊಳ್ಳುವ ವ್ಯವಸ್ಥೆ ಮಾಡಬೇಕು. ಆಗ ಮನುಷ್ಯ ನೆಮ್ಮದಿಯಿಂದ ಬಾಳಲು ಸಾಧ್ಯ. ಎಲ್ಲೆಡೆ ಇಂದು ನೀರಿನ ಹಾಹಾಕಾರವಿದೆ. ವಿಶ್ವಸಂಸ್ಥೆಯ ವರದಿಯೊಂದು ಆಘಾತಕಾರಿಯಾಗಿದೆ. ಆ ವರದಿಯ ತಲೆಬರಹ: 2025ರ ವೇಳೆಗೆ 180 ಕೋಟಿ ಜನರಿಗೆ ಕುಡಿಯಲು ನೀರಿಲ್ಲ. ವಿಶ್ವಸಂಸ್ಥೆ, ಮಾ, 22: ಮಾನವಕುಲ ಎದುರಿಸಬೇಕಾದ ಘೋರ ಪರಿಸ್ಥಿತಿಯೊಂದರ ಬಗ್ಗೆ ವಿಶ್ವಸಂಸ್ಥೆ ಬೆಳಕು ಚೆಲ್ಲಿದೆ. 2025ರ ವೇಳೆಗೆ ಜಗತ್ತಿನ ಸುಮಾರು 180 ಕೋಟಿ ಜನರು ಸ್ಪಷ್ಟ ನೀರಿನ ಕೊರತೆಯನ್ನು ಎದುರಿಸಲಿದ್ದಾರೆ ಎಂದು ಅದು ಎಚ್ಚರಿಸಿದೆ. ಅಷ್ಟೇ ಅಲ್ಲ; ಜಾಗತಿಕ ಜನಸಂಖ್ಯೆಯ ಮೂರನೆಯ ಎರಡರಷ್ಟು ಭಾಗ ನೀರಿನ ಕೊರತೆಯ ಪರಿಸ್ಥಿತಿಯಲ್ಲಿ ಬದುಕಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದೆ. ಜಾಗತಿಕ ಸಿಹಿನೀರಿನ ಮೂಲಗಳನ್ನು ಸಂರಕ್ಷಿಸಲು ಹಾಗೂ ನೀರಿನ ಕೊರತೆಯನ್ನು ತಪ್ಪಿಸಲು ಅರಣ್ಯಗಳನ್ನು ರಕ್ಷಿಸುವುದು ಮಹತ್ವದ ಕ್ರಮವಾಗಿದೆ ಎಂಬುದಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಪರಿಣಿತರು ಅಭಿಪ್ರಾಯಪಟ್ಟರು ಎಂದು ಕ್ಸಿನುವ ವಾರ್ತಾ ಸಂಸ್ಥೆ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ ಅಂಗವಾಗಿ ಸೋಮವಾರ ಅರಣ್ಯ ಮತ್ತು ನೀರು ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಜನರು ಪ್ರತಿದಿನ ಬಳಸುವ ಸಿಹಿನೀರಿನ ಮುಕ್ಕಾಲು ಭಾಗ ಅರಣ್ಯಾವೃತ ಜಲಾನಯನ ಪ್ರದೇಶಗಳಿಂದ ಬರುತ್ತಿದೆ ಹಾಗೂ 160 ಕೋಟಿಗೂ ಅಧಿಕ ಜನರು ಆಹಾರ, ನೀರು, ಔಷಧಗಳು ಮತ್ತು ಇಂಧನಕ್ಕಾಗಿ ಅರಣ್ಯಗಳನ್ನೇ ಆಶ್ರಯಿಸುತ್ತಿದ್ದಾರೆ ಎಂದು ಅರಣ್ಯ ಪರಿಣಿತರು ಹೇಳಿದರು. ಎಲ್ಲಿ ಮತ್ತು ಹೇಗೆ ಮಳೆ ಬೀಳಬೇಕು ಎಂಬುದರ ಮೇಲೆ ಅರಣ್ಯಾವೃತ ಜಲಾನಯನ ಪ್ರದೇಶಗಳು ಮತ್ತು ಜೌಗು ಪ್ರದೇಶಗಳು ಪರಿಣಾಮ ಬೀರುತ್ತವೆ ಎಂದು ಪರಿಣಿತರು ತಿಳಿಸಿದರು. ಅಂತರ್ಜಲ ಮರುಪೂರೈಕೆ ಮತ್ತು ಸವಕಳಿ ನಿಯಂತ್ರಣ ಸೇರಿದಂತೆ ನೀರಿನ ಬಳಕೆ ಮತ್ತು ನಿಯಂತ್ರಣದಲ್ಲಿ ಅರಣ್ಯಗಳು ಪ್ರಮುಖ ಪಾತ್ರ ನಿಭಾಯಿಸುತ್ತವೆ ಎಂದು ಅವರು ಹೇಳಿದರು. `ಅರಣ್ಯಗಳು ಈ ಗ್ರಹದ ನೈಸರ್ಗಿಕ ಜಲ ಗೋಪುರಗಳು’ ಎಂದು ವಿಶ್ವಸಂಸ್ಥೆಯ ಅರಣ್ಯಗಳ ಕುರಿತ ಸಚಿವಾಲಯದ ನಿರ್ದೇಶಕ ಮ್ಯಾನುಯಲ್ ಸೊಬ್ರಾಲ್ ಫಿಲ್ಹೊ ಹೇಳಿದರು.

ಮೇಲ್ಕಂಡ ಮಾಹಿತಿಯನ್ನು ಜನರು ಗಂಭೀರವಾಗಿ ತೆಗೆದುಕೊಳ್ಳಬೇಕು. ಅರಣ್ಯೀಕರಣಕ್ಕೆ ಹೆಚ್ಚು ಒತ್ತು ಕೊಡಬೇಕು. ಕೃಷಿಕರು ಕೇವಲ ಅಡಕೆ, ತೆಂಗು, ದಾಳಿಂಬೆ ಇತ್ಯಾದಿ ತೋಟದ ಬೆಳೆಗಳಿಗೆ ಒತ್ತುಕೊಟ್ಟು ಆಹಾರ ಪದಾರ್ಥಗಳ ಬೆಳೆಯನ್ನೇ ಮರೆತಿದ್ದಾರೆ. ವೈಜ್ಞಾನಿಕವಾಗಿ ಕೃಷಿ ಮಾಡಬೇಕೆಂದರೆ ತಜ್ಞರು ಹೇಳುವುದು: ನಮಗೆ ಒಂದೆಕರೆ ಭೂಮಿ ಇದೆ ಎಂದರೆ ಅದರ 33% ಭಾಗದಲ್ಲಿ ಅರಣ್ಯ, 33% ಭಾಗದಲ್ಲಿ ತೋಟಗಾರಿಕೆ, 33% ಭಾಗದಲ್ಲಿ ಆಹಾರ ಧಾನ್ಯ, ಉಳಿದ 1% ಭಾಗದಲ್ಲಿ ಕುರಿ, ದನಕರುಗಳಿಗೆ ಬೇಕಾದ ಮೇವು ಬೆಳೆಸಬೇಕಂತೆ. ಆಗ ನೀರಿನ ಸಮಸ್ಯೆಯೂ ಕಡಿಮೆ ಆಗುವುದು. ಜೊತೆಗೆ ರೈತನಿಗೆ ನಿರಂತರ ಆದಾಯ ದಕ್ಕುವುದು. ಇದರ ಜೊತೆಗೆ ಕೊಳವೆ ಬಾವಿಗಳನ್ನು ತೋಡಿಸುವತ್ತ ಗಮನ ಹರಿಸದೆ ಇರುವ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಬೇಕು. ಅದಕ್ಕಾಗಿ ಕೊಳವೆ ಬಾವಿಯ ಸುತ್ತ 10*10 ಆಳ, ಉದ್ದ, ಅಗಲ ಮಣ್ಣು ತೆಗೆದು ಅದಕ್ಕೆ ಮರಳು, ಸಣ್ಣ ಜೆಲ್ಲಿ, ದೊಡ್ಡ ಜಲ್ಲಿ, ಇಟ್ಟಿಗೆ ಇತ್ಯಾದಿಗಳಿಂದ ತುಂಬಿದರೆ ಕೊಳವೆ ಬಾವಿಯ ಅಂತರ್ಜಲ ತನ್ನಷ್ಟಕ್ಕೆ ತಾನೇ ಹೆಚ್ಚುವುದು ಎನ್ನುವರು. ಇದರತ್ತ ಜನರು ಗಮನ ಹರಿಸಬೇಕು. ಮಳೆ ಕೊಯ್ಲು ಸಹ ತುಂಬಾ ಮುಖ್ಯ. ಆಗ ನೀರಿನ ಬರವನ್ನು ಸ್ವಲ್ಪವಾದರೂ ನೀಗಿಕೊಳ್ಳಲು ಸಾಧ್ಯ. ಈ ದಿಶೆಯಲ್ಲಿ ಸಾರ್ವಜನಿಕರು ಗಮನ ಹರಿಸಿ ಜಮೀನಿಗೆ ಬದುಗಳನ್ನು ಹಾಕಿಸುವ, ಕೆರೆಕಟ್ಟೆಗಳನ್ನು ಅಭಿವೃದ್ಧಿಪಡಿಸುವ, ಕೃಷಿ ಹೊಂಡಗಳನ್ನು ಮಾಡಿಕೊಳ್ಳುವ, ಅರಣ್ಯ-ತೋಟಗಾರಿಕೆ-ಆಹಾರದ ಬೆಳೆ ಬೆಳೆಯುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.

ನಿಜಕ್ಕೂ ಬೆಲೆ ಕಟ್ಟಲಾಗದ ಅಮೂಲ್ಯ ವಸ್ತು ನೀರು. ಮೂರನೆಯ ಮಹಾಯುದ್ಧ ನಡೆದಲ್ಲಿ ಅದು ನೀರಿಗಾಗಿ ಎನ್ನುವ ಅಭಿಪ್ರಾಯವಿದೆ. ಹಾಗಾಗಿ ನೀರಿನ ಮಿತ ಬಳಕೆ, ಉಳಿಕೆ ಬಗ್ಗೆ ಏನಾದರೂ ಕಾರ್ಯಕ್ರಮ ರೂಪಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಕುತ್ತಿಗೆಗೆ ಬರುವವರೆಗೂ ಹೊಸ ದಾರಿ ಕಂಡುಕೊಳ್ಳದಿರುವುದು ಮಾನವನ ಸ್ವಭಾವ. ಮುಂದೆ ದೊಡ್ಡ ಅಪಾಯ ಇದೆ ಎಂದು ಗೊತ್ತಿದ್ದರೂ ಕುರುಡರಂತೆ ಅದರಲ್ಲಿ ಬೀಳುತ್ತೇವೆ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ನೀರಿನ ಸಮಸ್ಯೆ ತುಂಬಾ ಉಲ್ಬಣಗೊಂಡಿದೆ. ಜನಜೀವನ ಚೆನ್ನಾಗಿರಬೇಕೆಂದರೆ ಮುಖ್ಯವಾಗಿ ನೀರು, ಮರ ಬೇಕು; ಮದ್ಯ, ಮೌಢ್ಯ ಬೇಡ ಎನ್ನುವ ಆಂದೋಲನ ನಡೆಯಬೇಕಾಗಿದೆ.

ನೀರು ಪ್ರಳಯವಾದಲ್ಲಿ ತೋಡಲುಂಟೆ ಬಾವಿಯ?
ಆರನರಿತು, ಮೂರ ತಿಳಿದು, ಬೇರೊಂದು ಇದೆಯೆಂದು ಲಕ್ಷಿಸಿದಲ್ಲಿ
ಆ ಲಕ್ಷ ನಿರ್ಲಕ್ಷವಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ.

ನೀರು ನಿತ್ಯೋಪಯೋಗಿ. ಎಲ್ಲೆಡೆ ನೀರೇ ತುಂಬಿಕೊಂಡಿದ್ದರೆ ಬಾವಿಯನ್ನು ತೋಡುವ ಅಗತ್ಯವಿಲ್ಲ. ಮಾನವ ದುರಾಸೆಗಾಗಿ ಬಾವಿಗೆ ಬದಲು ಬೋರು ತೋಡಿಸಿದ. ಈಗ ಅದರ ದುರಂತದ ಅರಿವು ಅವನಿಗಾಗಿದೆ. ಅಂತೆಯೇ ಮಾನವ ತನ್ನಲ್ಲಡಗಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ದುರ್ಗುಣಗಳನ್ನರಿತು, ಹುಟ್ಟು-ಬದುಕು-ಸಾವಿನ ಗುಟ್ಟನರಿತರೆ ಮತ್ತೊಂದರ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಸಾರ್ಥಕ ಬದುಕು ಬೇಕೆಂದರೆ ಮತ್ತೇನೋ ಇದೆ ಎನ್ನುವುದನ್ನು ನಿರ್ಲಕ್ಷಿಸಬೇಕು. ಇಲ್ಲಿರುವ ಲೌಕಿಕ, ಆಧ್ಯಾತ್ಮಿಕ ಅರಿವು ತುಂಬಾ ಸೂಕ್ಷ್ಮ. ತನ್ನ ತಾನರಿವ ಬಗೆ. ಇದೇ ಸಮೃದ್ಧಿಯ ಸೋಪಾನ.

Previous post ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
Next post ಶಿವನ ಕುದುರೆ – 2
ಶಿವನ ಕುದುರೆ – 2

Related Posts

ಲಿಂಗಾಚಾರ
Share:
Articles

ಲಿಂಗಾಚಾರ

May 6, 2021 ಡಾ. ಪಂಚಾಕ್ಷರಿ ಹಳೇಬೀಡು
ಈ ಹಿಂದಿನ ಎರಡು ಸಂಚಿಕೆಗಳಲ್ಲಿ ಸದಾಚಾರ ಮತ್ತು ಶಿವಾಚಾರ ಕುರಿತು ಚಿಂತನೆ ಮಾಡಿದ್ದೇವೆ. ಪ್ರಸ್ತುತ ಸಂಚಿಕೆಯಲ್ಲಿ ಲಿಂಗಾಚಾರವನ್ನು ಸ್ವಲ್ಪ ವಿವರವಾಗಿ ಅರಿತು ಸಂಬಂಧಿಸಿದ...
ಕಾಲನೆಂಬ ಜಾಲಗಾರ…
Share:
Articles

ಕಾಲನೆಂಬ ಜಾಲಗಾರ…

January 7, 2019 ಕೆ.ಆರ್ ಮಂಗಳಾ
ಡಿಸೆಂಬರ್ ತಿಂಗಳ ಕೊರೆವ ಚಳಿಯ ಕೊನೆಯ ರಾತ್ರಿ. ಎಲ್ಲೆಡೆ ಝಗಮಗಿಸುವ ಬೆಳಕು. ಹಾಡು-ಕುಣಿತ-ಕೇಕೆಗಳ ಸಂಭ್ರಮ. ಪ್ರಪಂಚದಾದ್ಯಂತ ನವ ವರ್ಷ ಸ್ವಾಗತಿಸುವ ಸಡಗರ, ಉತ್ಸಾಹ. ಗಂಟೆ...

Comments 13

  1. Gururaj Manahalli
    May 1, 2019 Reply

    ಶರಣ ಸಾಣೇಹಳ್ಳಿ ಸ್ವಾಮಿಗಳು ನೀರಿನ ಬಗ್ಗೆ ತುಂಬಾ ಸೊಗಸಾಗಿ ಮತ್ತು ಮುಂದೆ ನೀರಿನ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ.

    ನಮ್ಮೂರು (ಹೆಬ್ಬಾಳ , ಬಸವನ ಬಾಗೇವಾಡಿ , ವಿಜಯಪುರ ), ನಾವು ಚಿಕ್ಕವರು ಇದ್ದಾಗ ನಮ್ಮೂರಲ್ಲಿ ನೀರಿನ ಸಮಸ್ಯೆ ತುಂಬಾ ಇತ್ತು, ಸುಮಾರು ೧ ಕಿಮಿ ಅಥವಾ ೨ ಕಿಮಿ ಹೋಗಿ ಕುಡಿಯುವ ನೀರು ತರ್ತಾ ಇದ್ದಿವೆ ಆದರೆ ಕಳೆದ ೮ ವರ್ಷಗಳಿಂದ ನಮ್ಮೂರಿಗೆ ಕೃಷ್ಣ ನದಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ ಇದರಿಂದ ನಮ್ಮೂರಿನ ಜನಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಯಿತು. ಆದ್ರೆ ಇಂದು ನಮ್ಮೂರಲ್ಲಿ ತುಂಬಾ ನೀರನ್ನು ಹರಿದು ಹೋಗಲು ಬಿಡುತ್ತಿದ್ದಾರೆ. ಸರಿಯಾಗಿ ಉಪಯೋಗಿಸಿಟ್ಟಿಲ್ಲ. ನಾವೇನಾದ್ರು ನಲ್ಲಿ ಬಂದು ಮಾಡಲು ಹೇಳಿದ್ರೆ ನಮ್ಮ ನಲ್ಲಿ ಹಾಳಾಗುತ್ತೆ ನೀರು ಬಿಡುವನು ಬಂಡ ಮಾಡಬೇಕು ಆಂತಾರೆ.

  2. Dr. Nandeesh Hiregowdar
    May 2, 2019 Reply

    ಸಮಕಾಲೀನ ಸಮಸ್ಯೆ ನೀರು. ಇಡೀ ಜೀವ ಸಂಕುಲ ನೀರಿಲ್ಲದೆ ಬಾಳಲಾರದು. ನಗರಗಳು, ಹಳ್ಳಿಗಳು ದಿನದಿಂದ ದಿನಕ್ಕೆ ಸಾಕಷ್ಟು ಶುದ್ಧ ನೀರಿಲ್ಲದೆ ಕಂಗಾಲಾಗಿವೆ. ಸ್ವಾಮೀಜಿಯ ಜಲಕಾಳಜಿ ಸ್ತುತ್ಯಾರ್ಹ.

  3. ಡಾ. ಪಂಚಾಕ್ಷರಿ ಹಳೇಬೀಡು
    May 4, 2019 Reply

    ನೀರಿನ ಮೌಲ್ಯ ಇನ್ನೂ ಎಷ್ಟೋ ಜನರಿಗೆ ಗೊತ್ತಿಲ್ಲ. ನೀರನ್ನು ಮಿತಬಳಕೆ ಮಾಡಬೇಕು ಎಂಬ ಪರಿಜ್ಞಾನ ಬಹಳ ಸಂಖ್ಯೆಯ ವಿದ್ಯಾವಂತರಿಗೆ ಅರಿವಿಲ್ಲ. ಬೆಂಗಳೂರಿನಲ್ಲಿ ಸ್ವಚ್ಛವಾದ ಡಾಂಬರ್ ಅಥವಾ ಸಿಮೆಂಟ್ ರಸ್ತೆಗಳ ಮೇಲೆ ಗೃಹಿಣಿಯರು ಬಕೆಟ್ ಗಟ್ಟಲೆ ಶುದ್ಧವಾದ ಕಾವೇರಿ ನೀರನ್ನು ಚೆಲ್ಲುತ್ತಾರೆ. ಇನ್ನೊಂದೆಡೆ ಅದೇ ಬೆಂಗಳೂರಿನ ಬಡವರಿಗೆ ನೀರೆಂಬುದು ಆಗೊಮ್ಮೆ ಈಗೊಮ್ಮೆ ಸಿಗುವ ಬಂಗಾರದಂತೆ.

    ಉತ್ತಮ ಲೇಖನದ ಮೂಲಕ ನೀರಿನ ಕುರಿತಾಗಿ ಜಾಗೃತಿ ಮೂಡಿಸಿದ ಗುರುಗಳಿಗೆ ಶರಣುಶರಣಾರ್ಥಿ

  4. jyoti hittinamane
    May 6, 2019 Reply

    ನೀರಿಗಾಗಿ ಯುದ್ಧ ಎನ್ನುವ ದಿನಗಳಿಗೆ ಕಾಲಿಟ್ಟಿದ್ದೇವೆ. ಸಮಸ್ಯೆಯ ಮೂಲದಲ್ಲೇ ಪರಿಹಾರ ಹುಡುಕುವ ಸ್ವಾಮೀಜಿಯ ಕಳಕಳಿ, ಜವಾಬ್ದಾರಿ ನಮ್ಮೆಲ್ಲರಲ್ಲೂ ಬರಲಿ. ಸಮಯೋಚಿತ ಲೇಖನಕ್ಕಾಗಿ ಧನ್ಯವಾದ.

  5. ರಾಮಚಂದ್ರಪ್ಪ ಬಿಳಿಚೋಡು
    May 6, 2019 Reply

    “ನಮ್ಮ ಶ್ರೀಮಠದ ತೋಟಕ್ಕೆ ನಿತ್ಯ 25,000 ಲೀಟರ್ ನೀರನ್ನು ಮಠದ ಟ್ಯಾಂಕರ್ನಿಂದ 15-20 ಮೈಲಿ ದೂರದಿಂದ ಹೊಡೆಸುತ್ತಲಿದ್ದೇವೆ. ಎಷ್ಟೇ ನೀರು ಹೊಡೆದರೂ ನೀರನ್ನೇ ಉಣಿಸಿಲ್ಲವೇನೋ ಎನ್ನುವಂತೆ ಆರಿಹೋಗಿರುತ್ತದೆ.” ಎಂದು ಸಮಸ್ಯೆ ಬಗ್ಗೆ ಸ್ವಾಮಿಗಳು ಹೇಳಿದ್ದಾರೆ. ಶ್ರೀಮಠದಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು ಎಂಬುದು ನನ್ನ ಸಲಹೆ. ನನ್ನ ಸಮಸ್ಯೆ ಇನ್ನೂ ಭೀಕರವಾಗಿತ್ತು. ಮಳೆಕೊಯ್ಲಿನಿಂದಾಗಿ ಈಗ ಎರಡು ವರ್ಷಗಳಿಂದ ಬಹಳ ಅನುಕೂಲವಾಗಿದೆ.

  6. dr. Jeevan K.P
    May 7, 2019 Reply

    ನಿಜ, ನೀರಿನ ಬಗ್ಗೆ ಆತಂಕಗೊಳ್ಳುವ ದಿನಗಳು ಇವು. ನಮ್ಮೂರಲ್ಲಿ ಬೋರವೆಲ್ಲುಗಳು ಬತ್ತುತ್ತಿವೆ. ಬೆಂಗಳೂರಿನಲ್ಲಂತೂ ಸಮಸ್ಯೆ ಶೋಚನೀಯ. ಎಲ್ಲರೂ ಯುದ್ಧ ತಯಾರಿಯಂತೆ ನೀರಿನ ರಕ್ಷಣೆಗಾಗಿ ನಿಲ್ಲದೇ ಹೋದರೆ ಭೂಮಿ ನೀರಡಿಸಿ ಸಾಯುವ ಸಮಯ ಹತ್ತಿರಾಗುತ್ತದೆ. ಸ್ವಾಮಿಗಳ ಕಳಕಳಿ ಎಲ್ಲರನ್ನೂ ಎಚ್ಚರಿಸುವಂತಾಗಲಿ.

  7. Dr.mallesh, Mysuru
    May 9, 2019 Reply

    ನನ್ನ ಲೇಖನದ ಜೊತೆಯಲ್ಲಿಯೇ ಪ್ರಕಟಗೊಂಡಿರುವ ಇನ್ನುಳಿದ 3 ಲೇಖನಗಳು ಮನಸೆಳೆಯುವಂತಹವು. ಪ್ರಸ್ತುತ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ನೀರಿನ ಬವಣೆಯನ್ನು ಕುರಿತ ಸ್ವಾಮೀಜಿಯವರ ಲೇಖನ ಅವರ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸಿತು. ನೀರಿನ ಬಳಕೆ ಬಗ್ಗೆ ನಮಗಿರಬೇಕಾದ ನಿಲುವು ಮತ್ತು ಎಚ್ಚರಿಕೆಗಳ ಬಗ್ಗೆ ಅವರ ಮನಸ್ಸು ಸ್ಪಂದಿಸಿರುವುದು ಅವರ ಜನಪರ ಕಾಳಜಿಯನ್ನು ಪ್ರತಿಬಿಂಬಿಸಿದೆ. ಶ್ರೀ ಮಠದ ನಿರ್ವಹಣೆಯ ಜೊತೆಗೆ ಸಮಾಜದ ಹಿತಚಿಂತನೆಯ ಬಗೆಗೂ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಸ್ವಾಮೀಜಿಯವರ ವ್ಯಕ್ತಿತ್ವ ನನ್ನ ಮನಸೆಳೆಯಿತು. ಒಟ್ಟಾರೆ ಹೇಳುವುದಾದರೆ ನನ್ನ ಮನಸ್ಸು ಇಚ್ಚಿಸಿ ಕಲ್ಪಿಸಿಕೊಂಡಿರುವ ಧಾರ್ಮಿಕ ಗುರುವೊಬ್ಬರಿಗಿರಬೇಕಾದ ಸನ್ನಡತೆಯನ್ನು ತಮ್ಮ ಅತ್ಯಂತ ವಿಚಾರಪೂರಿತ ಲೇಖನದ ಮೂಲಕ ತೋರಿರುವ ಕಾಯಕನಿರತ ಶ್ರೀಗಳವರು ಅಭಿನಂದನಾರ್ಹರು.

    ಭೋಲಾನನ್ನು ವಿಭಿನ್ನ ರೀತಿಯಲ್ಲಿ ಸಾಕ್ಷಾತ್ಕರಿಸಿರುವುದು ಕನ್ನಡದಲ್ಲಿ ವ್ಯಕ್ತಿ ಚಿತ್ರಣದ ಬರವಣಿಗೆಯ ಪರಂಪರೆಗೆ ಹೊಸ ದಾರಿಯನ್ನು ತೋರಿಸಿದೆ. ಕಲ್ಪನೆಯೂ ಚಿಂತನೆಯ ಒಂದು ಕ್ರಮ ಎಂದು ಲೇಖಕರು ಭಾವಿಸಿ ಬರೆದಿರುವುದು ಆ ಲೇಖನ ದೊಳಗಿನ ಸಂದೇಶವನ್ನು ಸಂವಹನಗೊಳಿಸುವಲ್ಲಿ ಸಾರ್ಥಕ್ಯ ಪಡೆದಿದೆ. ಮುಂದಿನ ಭಾಗವನ್ನು ತಿಳಿದುಕೊಳ್ಳಲು ಓದುಗರನ್ನು ತುದಿಗಾಲಲ್ಲಿ ನಿಲ್ಲಿಸಿದೆ.

    ಅರಿವಿಂದ ಅರಿವ…. ಲೇಖನ ಅತ್ಯಂತ ಸಾಂದ್ರ ಲೇಖನ. ವ್ಯಕ್ತಿ ಮತ್ತು ಸಮಷ್ಟಿಯ ಬದುಕು ಪಟ್ಟಭದ್ರ ಹಿತಾಸಕ್ತಿಗಳ ಮೂಸೆಯಲ್ಲಿ ಸಿಲುಕಿ ತನ್ನ ನಿಜ ನಿಲವನ್ನು ಮನಗಾಣುವುದಿರಲಿ ಏನೆಂದು ತಿಳಿಯಲೂ ಅಶಕ್ತವಾಗಿ ಆತ್ಮಸ್ಥೈರ್ಯ ಕಳೆದುಕೊಂಡು ರೋಗಗ್ರಸ್ತವಾಗಿರುವುದನ್ನು ಗಾಢವಾಗಿ ಚಿತ್ರಿಸಿದ್ದಾರೆ. ನಮ್ಮನ್ನೇ ನಾವು ಅವಲೋಕಿಸಿಕೊಳ್ಳಬೇಕಾದಂತಹ ಅನೇಕ ವಿಚಾರಗಳನ್ನು ಮನ ಮುಟ್ಟುವಂತೆ ಎಚ್ಚರಗೊಳ್ಳುವಂತೆ ಅರುಹಿದ್ದಾರೆ. ಮೊದಲ ಓದಿಗೆ ಸಂಪೂರ್ಣ ದಕ್ಕದ ಮತ್ತೆ ಮತ್ತೆ ಮೆಲುಕು ಹಾಕಿ ಅರ್ಥ ಮಾಡಿಕೊಳ್ಳಬೇಕಾದಂತಹ ವಿಚಾರಗಳು ಸಾಕಷ್ಟಿವೆ.

    ಆ ಮೂವರು ಲೇಖಕರಿಗೂ ‘ಬಯಲು’ ಬಳಗಕ್ಕೂ ನನ್ನ ಮನದಾಳದ ನಮನಗಳು.

    ಕೆ. ಎಸ್. ಮಲ್ಲೇಶ್

  8. ಸವಿತಾ ರಾಜಶೇಖರ ಪಾಟಿಲ್
    May 10, 2019 Reply

    ನೀರಿನ ಸಮಸ್ಯೆಗೆ ನೆಲ ತತ್ತರಿಸುತ್ತಿರುವುದು ಕಣ್ಣಿಗೆ ರಾಚುತ್ತಿರುವ ಸತ್ಯ. ಸ್ವಾಮೀಜಿ, ನಿಮ್ಮ ನೇತೃತ್ವದಲ್ಲಿ ಜಲ ಆಂದೋಲನ ನಡೆಯುವಂತಾದರೆ ನಾವು ಕನ್ನಡಿಗರು ಬದುಕುತ್ತೇವೆ. ನೀರಿನ ಸ್ವಾವಲಂಬನೆ ಎಲ್ಲಕ್ಕಿಂತ ಮುಖ್ಯ.

  9. Shivaprasad Patel
    May 10, 2019 Reply

    ಕಣ್ಣು ತೆರೆಸುವಂತಿದೆ ಸ್ವಾಮಿಗಳ ನೀರಿನ ಕಾಳಜಿ. ಸರ್ಕಾರದ ಕೆಲಸ ಇದಲ್ಲ, ಇದು ನಮ್ಮೆಲ್ಲರ ಕೆಲಸ.

  10. mahadev hadapad
    May 10, 2019 Reply

    ಶರಣಾರ್ಥಿಗಳು ಬುದ್ಧಿ
    ನಿಮ್ಮ ಲೇಖನ ನಮ್ಮ ಬಯಲು ಮ್ಯಾಗ್ಜಿನ್ ಪುಟದಲ್ಲಿ ಬಂದಿರುವುದ ಕಂಡು ಸಂತಸವಾಯ್ತು. ಶ್ರೀಮಠದಿಂದ ಒಂದು ಪತ್ರಿಕೆ ತರಬೇಕೆಂದು ನನ್ನ ಬಹಳ ದಿನದ ಆಸೆ ಇದೆ. ಜೊತೆಗೆ ನಾನು ಮಠದಲ್ಲಿದ್ದಾಗ ಮಕ್ಕಳಿಗಾಗಿ ತರುತ್ತಿದ್ದ ಪತ್ರಿಕೆಯನ್ನು ನಿಲ್ಲಿಸಿರುವುದು ಕೇಳಿ ಅಷ್ಟೇ ಬೇಸರವೂ ಆಯ್ತು.

  11. Sharanu
    May 11, 2019 Reply

    ಕಳೆದ ಮಾರ್ಚ್ ತಿಂಗಳಲ್ಲಿ ಹೋಳಿ ಹಬ್ಬದ ಹೆಸರಿನಲ್ಲಿ ಭಾರತೀಯರು ಜಪಾನನಂತಹ 15 ದೇಶಗಳಿಗೆ ಆಗುವಷ್ಟು ನೀರನ್ನು ಅಪಾರ ಪ್ರಮಾಣದಲ್ಲಿ ರಸ್ತೆಗಳಲ್ಲಿ ಚೆಲ್ಲಾಡಿ ವ್ಯರ್ಥ ಮಾಡಿದ್ದಾರೆ,ಆದರೆ ಇಂದು ಭಾರತದ ಬಹುತೇಕ ನಗರಗಳಲ್ಲಿ,ತಾಲೂಕುಗಳಲ್ಲಿ ಮತ್ತು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹೋರಾಟ ನಡೆದಿದೆ,ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ಸಹ ನೀರು ಸಿಗುತ್ತಿಲ್ಲ…ಮಾಡಿದ್ದು ಉಣ್ಣೋ ಮಹಾರಯ..

  12. ಜಿ ಸಿ ತಿಪ್ಪೇರುದ್ರಪ್ಪ
    May 13, 2019 Reply

    ಹರಿಹರ ದಲ್ಲಿ ಒಂದು ಕಾರ್ಖಾನೆ ಇತ್ತು ಮೈಸೂರು ಕಿರ್ಲೋಸ್ಕರ್ ಅದನ್ನು ಉಳಿಸಿ ಬೆಳೆಸಲು ಯಾವುದೇ ಪಕ್ಷದ ಶಾಸಕರು ಪ್ರಯತ್ನ ಮಾಡಲೇ ಇಲ್ಲ ಆ ಕಂಪನಿ ಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡ್ತಾ ಇದ್ದರು. ಸಾವಿರಾರು ಮರಗಳು ಇದ್ದವು ಈಗ ಆ ನೂರಾರು
    ಎಕರೆ ಆಸ್ತಿ ಎಲ್ಲಾ ನಿವೇಶನ ಮಾಡ್ತಾ ಇದ್ದಾರೆ ..ಧೈರ್ಯ ಮಾಡಿ ಸ್ಥಳೀಯ ರಾಜಕಾರಣಿಗಳು ಅದನ್ನು ಇವತ್ತು ಉಳಿಸಿದ್ದ್ರೆ ಸಾವಿರಾರು ಕಾರ್ಮಿಕರಿಗೆ ಮತ್ತು ಸಾವಿರಾರು ಮರಗಳು ಉಳಿದಿರುತ್ತಿದ್ದವು ದೇಶದಲ್ಲಿ ಮುಂದಿನ ದಿನಗಳಲ್ಲಿ ಈ ಸ್ವಾರ್ಥ ಜನರಿಂದ ಎಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಊಹಿಸುವುದು ಕಷ್ಟವಾಗಿದೆ ಶರಣು ಶರಣಾರ್ಥಿಗಳು

  13. Vishweshwaraiah Hiremath
    May 14, 2019 Reply

    ವಚನಗಳಗುಂಟ ನೀರಿನ ರಕ್ಷಣೆಯ ಮಾರ್ಗಗಳನ್ನು ಬೋಧಿಸಿದ ಗುರುಗಳಿಗೆ ವಂದನೆಗಳು

Leave a Reply to Shivaprasad Patel Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು
July 10, 2025
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ವಚನ – ಚಿಂತನ
ವಚನ – ಚಿಂತನ
October 10, 2023
ನೀನು ನಾನಲ್ಲ…
ನೀನು ನಾನಲ್ಲ…
July 21, 2024
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
Copyright © 2025 Bayalu