Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
Share:
Articles June 14, 2024 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು

ಬಸವಣ್ಣನವರ ‘ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯಾ’ ಎನ್ನುವ ವಚನದ ಅಂತ್ಯದಲ್ಲಿ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎನ್ನುವ ಸಾಲು ಬರುತ್ತದೆ. ಸ್ಥಾವರ ಎಂದರೆ ಚಲನೆ, ಅರಿವು ಇಲ್ಲದ್ದು. ನಾಶವಾಗುವ ಗುಣವುಳ್ಳುದು. ಜಂಗಮ ಎಂದರೆ ಅರಿವು, ಜ್ಞಾನ, ವಿವೇಕ, ಚಲನಶೀಲ, ಬೆಳಕು ಎಂದೆಲ್ಲ ಅರ್ಥಗಳಿವೆ. ಸ್ಥಾವರಕ್ಕೆ ಅವಸಾನ ಇದೆ. ಜಂಗಮಕ್ಕೆ ಅವಸಾನ ಇಲ್ಲ ಎನ್ನುವುದು ಬಸವಣ್ಣನವರ ಸ್ಪಷ್ಟ ಅಭಿಪ್ರಾಯ. ಇಲ್ಲಿ ಸ್ಥಾವರ ಎನ್ನುವುದನ್ನು ದೇವಾಲಯದಲ್ಲಿರುವ ಪ್ರತಿಮೆಗೆ ಹೋಲಿಸಿದರೆ ಜಂಗಮವನ್ನು ಮಾನವನ ದೇಹ ಎನ್ನುವ ದೇವಾಲಯಕ್ಕೆ ಹೋಲಿಸಿದ್ದಾರೆ. ಗುಡಿಯಲ್ಲಿರುವ ಪ್ರತಿಮೆ ಸ್ಥಾವರ. ಅದಕ್ಕೆ ಚೈತನ್ಯ, ಅರಿವು, ಚಲನೆ ಇತ್ಯಾದಿ ಗುಣಗಳಿಲ್ಲ. ಹಾಗಾಗಿ ಅದು ನಾಶವಾಗುವುದು. ಅದೇ ದೇಹವೆನ್ನುವ ದೇವಾಲಯ ಜಂಗಮ. ಇದಕ್ಕೆ ನಾಶವಿಲ್ಲ. ಹೀಗೆನ್ನುತ್ತಲೇ ದೇವಾಲಯವಾದರೂ ನೂರಾರು ವರ್ಷ ಬಾಳುವುದು. ಮಾನವನ ದೇಹಾಲಯ ಹೆಚ್ಚು ಕಾಲ ಬಾಳುವುದಿಲ್ಲ. ಹಾಗಾಗಿ ಇದನ್ನು ಜಂಗಮ ಎನ್ನುವುದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಬಹುದು. ಇದಕ್ಕೆ ಸರಳ ಉತ್ತರವೆಂದರೆ ದೇಹ ಬಿದ್ದುಹೋದರೂ ದೇಹದಲ್ಲಿರುವ ಪ್ರತಿ ಕಣಕಣವೂ ಜಂಗಮ. ಪ್ರಾಣ ಇಲ್ಲವಾದ ಬಳಿಕ ಪಂಚಭೂತಗಳಿಂದಾದ ಶರೀರದ ಅಂಗಾಂಶಗಳು ಪಂಚಭೂತಗಳನ್ನು ಕೂಡಿಕೊಳ್ಳುತ್ತವೆ. ಅದು ಜಂಗಮ, ಜಂಗಮಕ್ಕೆ ಸಾವಿಲ್ಲ ಎಂದು ಪರಿಭಾವಿಸಬೇಕು. `ಲಿಂಗದಿಂದುದಯಿಸಿದ ಲಿಂಗೈಕ್ಯಂಗೆ ಆ ಲಿಂಗದಲ್ಲಿಯಲ್ಲದೆ ಬೇರೆಡೆಯುಂಟೆ?’ ಎಂದು ಬಸವಣ್ಣನವರು ಕೇಳಿದ್ದಾರೆ. ಮಾನವ ಶರೀರ ಬಂದಿರುವುದು ಶಿವನಿಂದ. ಮತ್ತೆ ಅದು ಹೋಗಿ ಸೇರುವುದು ಸಮಷ್ಟಿಯ ಶಿವನಲ್ಲಿಗೆ. ಈ ಅರ್ಥದಲ್ಲಿಯೂ ದೇಹವೆನ್ನುವ ದೇವಾಲಯ ಜಂಗಮ. ಅವರದೇ ಮತ್ತೊಂದು ವಚನ:

ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೆ,
ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ.
‘ಸ್ಥಾವರ ಜಂಗಮ ಒಂದೆ’ ಎಂದುದು ಕೂಡಲಸಂಗನ ವಚನ.

‘ಉಳ್ಳವರು ಶಿವಾಲಯವ ಮಾಡುವರು’ ಎನ್ನುವ ವಚನದಲ್ಲಿ ಸ್ಥಾವರವೇ ಬೇರೆ, ಜಂಗಮವೇ ಬೇರೆ; ಸ್ಥಾವರಕ್ಕೆ ನಾಶ ತಪ್ಪಿದ್ದಲ್ಲ, ಜಂಗಮಕ್ಕೆ ನಾಶವಿಲ್ಲ ಎನ್ನುವ ಬಸವಣ್ಣನವರು ಈ ವಚನದಲ್ಲಿ ‘ಸ್ಥಾವರ ಜಂಗಮ ಒಂದೆ’ ಎಂದಿರುವುದು ಆಶ್ಚರ್ಯ ಎನಿಸುವುದು ಸಹಜ. ಮೊದಲೇ ಹೇಳಿದಂತೆ ಸ್ಥಾವರ ಮತ್ತು ಜಂಗಮ ಶಬ್ದಗಳಿಗೆ ಒಂದೇ ಅರ್ಥವಿಲ್ಲ. ವಿಶ್ವದಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರ ಹೀಗೆ ಅಸಂಖ್ಯಾತ ಆಕಾಶ ಕಾಯಗಳು ಜಂಗಮತ್ವದ ನಿರಂತತೆಯಲ್ಲಿ ಹುಟ್ಟುತ್ತಾ, ನಶಿಸುತ್ತಾ ಇರುತ್ತವೆ. ಜಂಗಮಶೀಲತೆ ಒಂದೇ ನಿರಂತರ ಸತ್ಯ. ಕಾಲಘಟ್ಟದ ವಸ್ತುಗಳಿಗೆ ರೂಪಾಂತರವಿದೆಯೇ ವಿನಾ ಅವು ನಾಶವಾಗಲಾರವು. ಮನುವಾದಿಗಳು ಜಡಸಂಸ್ಕೃತಿಗೆ ಜೋತುಬಿದ್ದು ಸ್ಥಾವರಗಳನ್ನು ಬಿಗಿಯಾಗಿ ಹಿಡಿದುಕೊಂಡರು. ಅದೊಂದು ರೀತಿಯಲ್ಲಿ ಅಜ್ಞಾನವನ್ನು ಅಪ್ಪಿಕೊಂಡಂತೆ. ಅದೇ ಚೈತನ್ಯದ ಪ್ರತೀಕವಾದ ಅರಿವೆಂಬ ದೇವರನ್ನು ಅವರು ಮರೆತರು. ವೈದಿಕ ಪರಂಪರೆಯವರು ಸ್ಥಾವರದ ಪ್ರತೀಕವಾದ ದೇವಾಲಯ ಮಾತ್ರ ಜಂಗಮ ಎಂದು ಭಾವಿಸಿ ಅದಕ್ಕೇ ಅಂಟಿಕೊಂಡರು. ಸ್ಥಾವರದ ಮೂಲಕವೇ ಜಂಗಮತ್ವಕ್ಕೆ ಮನ್ನಣೆ ಎನ್ನುವುದು ಅವರ ಸಿದ್ಧಾಂತ.

ಆಸ್ತಿ ಹಂಚಿಕೆಯ ಸಂದರ್ಭದಲ್ಲಿ ಚರ ಆಸ್ತಿ ಮತ್ತು ಸ್ಥಿರ ಆಸ್ತಿ ಎನ್ನುವ ಪದಗಳ ಬಳಕೆಯಾಗುವುದು. ಚರ ಎಂದರೆ ಚರಿಸುವಂತಹುದು. ಅದನ್ನೇ ಜಂಗಮ ಎಂದರು. ಸ್ಥಿರ ಎಂದರೆ ಚಲಿಸದಿರುವುದು. ಅದನ್ನೇ ಸ್ಥಾವರ ಎಂದರು. ಭಾರತೀಯ ದಾರ್ಶನಿಕರು ಪಂಚಭೂತಗಳಿಂದ ಈ ಜಗತ್ತು ಸೃಷ್ಟಿಯಾಗಿದೆ ಎಂದರೆ ಆಧುನಿಕ ವಿಜ್ಞಾನ 106 ಮೂಲಭೂತ ವಸ್ತುಗಳಿಂದ ಆಗಿದೆ ಎನ್ನುವುದು. ಪ್ರತಿಯೊಂದು ವಸ್ತುವಿನಲ್ಲೂ ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನಗಳಿರುತ್ತವೆ. ಎಲೆಕ್ಟ್ರಾನ್ ನಿರಂತರ ಚಲನೆಯಲ್ಲಿರುತ್ತದೆ. ಒಂದು ಬಂಡೆ ಬಾಹ್ಯ ನೋಟಕ್ಕೆ ಸ್ಥಾವರ ಎನಿಸಬಹುದು. ಮೈಕ್ರೋಸ್ಕೋಪ್‍ನಲ್ಲಿ ನೋಡಿದರೆ ಆ ಬಂಡೆಯೊಳಗೂ ಚಲನೆ ಇರುತ್ತದೆಯಂತೆ. ಅಂದರೆ ಎಲ್ಲವೂ ಜಂಗಮವೇ. ನಮ್ಮ ಭಾವನೆಗಳು ಕೆಲವೊಮ್ಮೆ ಸ್ಥಾವರವಾಗಬಹುದು. ಅವು ಹಾಗಾಗದೆ ಜಂಗಮವಾಗಬೇಕು. ಈ ನೆಲೆಯಲ್ಲೇ ಸ್ಥಾವರ-ಜಂಗಮ ಒಂದಾಗಿತ್ತು ಎನ್ನುವುದು. ಮನುಷ್ಯ ಸ್ಥಾವರವಾಗದೆ ಜಂಗಮತ್ವ ಮೈಗೂಡಿಸಿಕೊಂಡು ಸದಾ ಸಂತೋಷದಿಂದ ಜೀವನ ಮಾಡುವುದನ್ನು ರೂಢಿಸಿಕೊಳ್ಳಬೇಕು.

ಸ್ಥಾವರ ಮತ್ತು ಜಂಗಮ ಇವು ಸ್ವಾರಸ್ಯಕರ ವಿಷಯಗಳು. ಬಸವಣ್ಣನವರು ಮಾತ್ರವಲ್ಲ; ಬೇರೆ ಬೇರೆ ಶರಣರು ಸ್ಥಾವರ, ಜಂಗಮ ಬೇರೆ ಬೇರೆ ಎಂದು ಹೇಳಿದ್ದರೂ ಮತ್ತೊಂದೆಡೆ ಅವೆರಡೂ ಒಂದೇ ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ಜಗತ್ತೇ ಜಂಗಮಮಯ. ವ್ಯಕ್ತಿಯಲ್ಲಿ ಜಂಗಮತ್ವ ಬಂದಾಗ ಅವನ ಜೀವನೋತ್ಸಾಹ ಹೆಚ್ಚಿ ಆತ ಸುಖವಾಗಿರಲು ಸಾಧ್ಯ. ಬಹುತೇಕ ಜನರು ಜಂಗಮತ್ವದ ಬದಲು ಸ್ಥಾವರಕ್ಕೆ ಆದ್ಯತೆ ಕೊಡುತ್ತಿರುವುದರಿಂದ ಚಲನಶೀಲತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಂಥವರು ಸದಾ ಜೀವನೋತ್ಸಾಹ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜಂಗಮ ಎಂದರೆ ತಂಗಾಳಿ, ಜ್ಞಾನ, ವಿಶಾಲತೆ, ಹೃದಯವಂತಿಕೆ. ಜಂಗಮ ಒಬ್ಬ ವ್ಯಕ್ತಿ, ಒಂದು ಧರ್ಮ ಅಥವಾ ಒಂದು ಸಮಾಜಕ್ಕೆ ಸೀಮಿತವಾದದ್ದಲ್ಲ. ಜಂಗಮ ಜಾತಿಯಾಧಾರಿತವಾದುದಲ್ಲ. ನೀತಿ ಮತ್ತು ತತ್ವಾಧಾರಿತವಾದುದು. ಕೆಲವರ ತಲೆ ಬೋಳಾಗಿದ್ದರೂ ಮನಸ್ಸು ಬೋಳಾಗಿರುವುದಿಲ್ಲ. ಹಾಗಾಗಿ `ತನುಬೋಳಾದಡೇನಯ್ಯಾ, ಮನ ಬೋಳಾಗದನ್ನಕ್ಕರ’ ಎನ್ನುತ್ತಾರೆ ಚೆನ್ನಬಸವಣ್ಣನವರು. ಜಂಗಮನ ಲಕ್ಷಣವೆಂದರೆ ತತ್ವಾಧಾರಿತ ನಿಲುವನ್ನು ಹೊಂದಿ ಅದರಂತೆ ಬದುಕುವುದು. ಮನುಷ್ಯನ ತಲೆ ಬೋಳಾಗುವ ಮುನ್ನ ಆತನ ಮನಸ್ಸು ಬೋಳಾಗಬೇಕು. ಗಂಗೆ ನಿರಂತರವಾಗಿ ಹರಿದು ತನ್ನ ಶುಭ್ರತೆ ಕಾಪಾಡಿಕೊಳ್ಳುವಂತೆ ವ್ಯಕ್ತಿಯಲ್ಲಿ ಜ್ಞಾನ ನಿರಂತರವಾಗಿ ಹರಿದಾಡುತ್ತಿದ್ದರೆ ಆತನೇ ಜಂಗಮ. ಆಗಲೇ ಅವನ ಜಂಗಮತ್ವಕ್ಕೆ ನೆಲೆ, ಬೆಲೆ.

ವಿಷಾದದ ಸಂಗತಿ ಎಂದರೆ ಇಂದು ಭಾರತಕ್ಕೆ ಭಾರತವೇ ಸ್ಥಾವರಕ್ಕೆ ಮುಗಿಬಿದ್ದಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಎಂದು ಘೋಷಣೆ ಆಯ್ತು. ಅಂದು ಇಡೀ ದೇಶವೇ ವಿಚಿತ್ರ ಸಂಭ್ರಮದಲ್ಲಿತ್ತು. ಆ ಸಂಭ್ರಮವನ್ನು, ವೈಭವೀಕರಣವನ್ನು ಮಾಧ್ಯಮಗಳೂ ಎಡಬಿಡದೆ ಪ್ರಸಾರ ಮಾಡಿದವು. ಹಳ್ಳಿ ನಗರವೆನ್ನದೆ ಎಲ್ಲೆಡೆ ರಾಮಮಂದಿರದ ನೆನಪಿನಲ್ಲಿ ಸಾಮೂಹಿಕ ಪ್ರಸಾದದ ವ್ಯವಸ್ಥೆ ಮಾಡಿ ಸ್ಥಾವರಾವಲಂಬಿಗಳು ಕುಣಿದು ಕುಪ್ಪಳಿಸಿದರು. ಕುಡಿದು ಸಹ ಕುಪ್ಪಳಿಸಿರಬಹುದು. ‘ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಸರ್ಕಾರ ಘೋಷಣೆ ಮಾಡಿದಾಗ ಕರ್ನಾಟಕದ ಜನರು ಹಾಗೆ ಸಂಭ್ರಮಿಸಲಿಲ್ಲ. ಅಂದರೆ ಅವರಿನ್ನೂ ಬಸವಣ್ಣನವರನ್ನು ಅರ್ಥ ಮಾಡಿಕೊಂಡಿಲ್ಲ ಎಂದೇ ಅರ್ಥ. ಬೇರೆಯವರು ಹೋಗಲಿ; ಬಸವಣ್ಣನವರ ಅನುಯಾಯಿಗಳು ಸಹ ಸಂಭ್ರಮಾಚರಣೆ ಮಾಡಲಿಲ್ಲ. ವೈರುಧ್ಯ ಎಂದರೆ ಇದೇ ಅಲ್ಲವೇ? ರಾಮಮಂದಿರ ನಿರ್ಮಾಪಕರು ಮತ್ತು ಪ್ರೋತ್ಸಾಹಕರದು ಸ್ಥಾವರದ ಲಕ್ಷಣ. ಅದೇ ಬಸವಣ್ಣನವರದು ಜಂಗಮತ್ವದ ಲಕ್ಷಣ. ಶೋಷಿತರ ಬದುಕಿಗೆ ಭರವಸೆ ತುಂಬಿದ, ದಲಿತರ ಉದ್ಧಾರಕ್ಕಾಗಿ ಶ್ರಮಿಸಿದ, ಮಹಿಳಾ ಸ್ವಾತಂತ್ರ್ಯ ಎತ್ತಿ ಹಿಡಿದ, ನಿರ್ಲಕ್ಷಿತ ಸಮಾಜವನ್ನು ಮುಂದೆ ತರಲು ಪ್ರಯತ್ನಿಸಿದ ಒಬ್ಬ ಮಹಾನುಭಾವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದಾಗ ನಮ್ಮ ಜನರ ವರ್ತನೆ ಹೇಗಿತ್ತು ಎಂದು ಪರಾಮರ್ಶೆ ಮಾಡಿಕೊಳ್ಳಬೇಕಿದೆ. ಮೋದಿಯವರು ಉತ್ತರ ಭಾರತದಲ್ಲಿ ಲೋಕಸಭಾ ಚುನಾವಣಾ ಸಂರ್ದರ್ಭದಲ್ಲಿ ಮಾತನಾಡಿದ್ದು ಬರೀ ರಾಮನನ್ನು ಕುರಿತೇ. ರಾಮನನ್ನು ಮುಂದಿಟ್ಟುಕೊಂಡು ಮೋದಿಯವರನ್ನೂ ಒಳಗೊಂಡಂತೆ ಬಹುತೇಕ ರಾಜಕೀಯ ನೇತಾರರು ಜನರ ಭಾವನೆಗಳ ಜೊತೆ ಚಲ್ಲಾಟವಾಡುತ್ತಿದ್ದಾರೆ. ಯಾರೊಬ್ಬರೂ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಜಾತಿಯ ಹೆಸರಿನಲ್ಲಿ ದ್ವೇಷ ಬಿತ್ತುವ ಕಾರ್ಯ ನಡೆಯುತ್ತಲೇ ಇದೆ. ಅವರಾರಿಗೂ ‘ಅರಿವು ಆಧಾರಿದ ಸಮಾಜ’ ಬೇಕಿಲ್ಲ. ಕೆಲವರಂತೂ ಕಂಡ ಕಂಡ ದೇವಾಲಯಗಳನ್ನು ಸುತ್ತಿ ದೆವ್ವದ ಕೆಲಸ ಮಾಡುತ್ತಿದ್ದಾರೆ. ಹತ್ತಾರು ಹೆಣ್ಣು ದೇವಾಲಯಗಳ ಬೆನ್ನು ಬಿದ್ದು ತಮ್ಮ ಲೈಂಗಿಕ ಹಗರಣಗಳನ್ನು ಮುಚ್ಚಿಕೊಳ್ಳುವ ಹುನ್ನಾರ ನಡೆಸಿದ ನಾಯಕರೂ ನಮ್ಮಲ್ಲಿದ್ದಾರೆ. ಕನ್ಯಾರಾಶಿಯವರಿಗೆ ಕೇತು ಕಾಡುತ್ತದೆಯಂತೆ. ರಾಹು, ಕೇತು ಹೊರಗಿಲ್ಲ. ಅವು ಮಾನವನ ಒಳಗೇ ಇವೆ. ಅದಕ್ಕಾಗಿಯೇ ಬಸವಣ್ಣನವರು ‘ದೂಷಕರ ಧೂಮಕೇತುಗಳು ನಿಮ್ಮ ಶರಣರು’ ಎಂದಿದ್ದಾರೆ. ಕನ್ಯಾರಾಶಿಯವರೇ ಕನ್ಯೆಯ ಹಿಂದೆ ಬಿದ್ದು ಫಜೀತಿ ಮಾಡಿಕೊಂಡಿದ್ದಾರೆ. ಜೇಲಿನಿಂದ ಬಿಡುಗಡೆ ಹೊಂದಿದವರು ಮತ್ತೆ ಹೆಣ್ಣು ದೇವರ ಹಿಂದೆ ಸುತ್ತಿದ್ದೇ ಸುತ್ತಿದ್ದು. ಅಂಥವರೆಲ್ಲ ಸ್ಥಾವರದ ಆರಾಧಕರೇ ಹೊರತು ಜಂಗಮ ಪ್ರೇಮಿಗಳಲ್ಲ. ಅಂದರೆ ಅಜ್ಞಾನ ಪ್ರಿಯವಾದಷ್ಟು ಜ್ಞಾನ ಅವರಿಗೆ ಪ್ರಿಯವಾಗುವುದಿಲ್ಲ.

ಮೋಸಗಾರರು, ಮೂಢರು, ಮೂರ್ಖರೇ ಹೆಚ್ಚಾಗಿ ಸ್ಥಾವರ ದೇವರಿಗೆ ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ, ಯಜ್ಞ, ಹೋಮಾದಿ ಕ್ರಿಯೆಗಳನ್ನು ಮಾಡಿಸುವರು. ಇದಕ್ಕೆ ವಿದ್ಯಾವಂತರೂ ಹೊರತಲ್ಲ. ಕಾಶಿ, ರಾಮೇಶ್ವರ, ತಿರುಪತಿ, ಧರ್ಮಸ್ಥಳ, ಅಯೋಧ್ಯೆ ಮತ್ತಿತರೆ ಧಾರ್ಮಿಕ ಸ್ಥಳಗಳಿಗೆ ಇಂಥವರೇ ಹೆಚ್ಚು ಪ್ರವಾಸ ಮಾಡುವುದು. ಅಯೋಧ್ಯೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ಅದೆಷ್ಟೋ ಪಾಲು ಹೆಚ್ಚಾಗಿದೆಯಂತೆ. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’, ‘ಸ್ಥಾವರ ಜಂಗಮ ಒಂದೆಂಬರು’ ಎನ್ನುವ ನುಡಿಗಳಲ್ಲಿ ವೈರುಧ್ಯ ಇದೆಯೇ? ಖಂಡಿತ ಇಲ್ಲ. ಸ್ಥಾವರವನ್ನೇ ಪೂರ್ಣ ನಂಬಿಕೊಂಡರೆ ಅದಕ್ಕೆ ಅಳಿವಿದೆ. ನನ್ನ ಜಮೀನು ನೂರು ಎಕರೆ ಇದೆ, ಅರಮನೆಯಂಥ ಮನೆ ಕಟ್ಟಿದ್ದೇನೆ, ಕೋಟ್ಯಾಂತರ ಹಣ ಖರ್ಚು ಮಾಡಿ ದೇವಾಲಯ ಕಟ್ಟಿದ್ದೇನೆ ಎಂದರೆ ಅವುಗಳಿಗೆಲ್ಲ ಅಳಿವಿದೆ. ಆರಂಭದಲ್ಲೇ ಹೇಳಿದಂತೆ ಜಂಗಮ ಎಂದರೆ ಅರಿವು, ಜ್ಞಾನ, ವಿಚಾರ, ಜ್ಯೋತಿ, ಬೆಳಕು. ಬೆಳಕಿಗೆ ನಾಶವೇ ಇಲ್ಲ. ಹಾಗಾಗಿ ಮನುಷ್ಯ ಸ್ಥಾವರವಾಗದೆ ಜಂಗಮವಾಗುವುದನ್ನು ರೂಢಿಸಿಕೊಳ್ಳಬೇಕು. ಸ್ಥಾವರವಾದರೆ ಆತ ನಾಶ ಹೊಂದುವುದು ಸಹಜ. ಭೂಮಿ ಸ್ಥಾವರವಾದರೂ ಅದನ್ನು ಉತ್ತಿ, ಬಿತ್ತಿ, ಬೆಳೆ ತೆಗೆಯುತ್ತಿದ್ದರೆ ಅದು ಸಹ ಜಂಗಮವಾಗುವುದು. ಈ ಅರ್ಥದಲ್ಲಿ ಸ್ಥಾವರ ಜಂಗಮ ಒಂದೆನ್ನುವುದು. ಹಾಗಂತ ಜಂಗಮ ಮರೆತು ಸ್ಥಾವರಕ್ಕೆ ಅಂಟಿಕೊಳ್ಳಬಾರದು. ಅಂಟಿಕೊಂಡದ್ದೇ ಆದರೆ ವ್ಯಕ್ತಿಯ ಬೆಳವಣಿಗೆ ಸ್ಥಗಿತವಾಗುವುದು. ಇವತ್ತಿನ ದಿನಮಾನಗಳಲ್ಲಿ ಬಹುತೇಕ ಜನರು ಜಂಗಮ ತತ್ವವನ್ನು ದೂರೀಕರಿಸಿ ಸ್ಥಾವರ ತತ್ವವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಸ್ಥಾವರ ತತ್ವವನ್ನು ಅಪ್ಪಿಕೊಳ್ಳುವುದು ಎಂದರೆ ಬದುಕು ನಿಂತ ನೀರಾಗುವುದು. ನಿಂತ ನೀರು ಮಲೆತು ದುರ್ವಾಸನೆಯಿಡುವುದು. ಅದು ಅನಾರೋಗ್ಯಕ್ಕೆ ಕಾರಣವಾಗುವುದು. ಅಯೋಧ್ಯೆ ಮುಂತಾದ ಧಾರ್ಮಿಕ ಕೇಂದ್ರಗಳು ಒಂದರ್ಥದಲ್ಲಿ ನಿಂತ ನೀರಿದ್ದಂತೆ. ಅವು ಎಂದೂ ಮನುಷ್ಯನ ಜಡತ್ವ ಹೋಗಲಾಡಿಸಿ ಜಂಗಮತ್ವ ತಂದುಕೊಡಲು ಸಾಧ್ಯವಿಲ್ಲ.

ಪ್ರಕೃತಿ, ಮಳೆ, ಬೆಳೆ, ಹಾಡುವ ಹಕ್ಕಿ, ಸುಳಿವ ಗಾಳಿ ಇವೆಲ್ಲ ಜಂಗಮದ ಲಕ್ಷಣಗಳು. ಮನುಷ್ಯ ಅವುಗಳಂತೆ ಜಂಗಮತ್ವದ ಲಕ್ಷಣ ಮೈಗೂಡಿಸಿಕೊಳ್ಳಬೇಕು. ಆತ ಮನಸ್ಸು ಮಾಡಿದರೆ ಸ್ಥಾವರವನ್ನೂ ಜಂಗಮವಾಗಿ ಮಾಡಿಕೊಳ್ಳಬಹುದು. ಸ್ಥಾವರವನ್ನು ಜಂಗಮ ಮಾಡಿಕೊಳ್ಳುವುದು ಹೇಗೆ? ಭೂಮಿ ತನ್ನಷ್ಟಕ್ಕೆ ತಾನೇ ಇದ್ದಾಗ ಅದು ಸ್ಥಾವರ. ಅದರಲ್ಲಿ ನಮಗೆ ಬೇಕಾದ ಬೆಳೆಯನ್ನು ತೆಗೆಯುತ್ತಿದ್ದರೆ ಅದು ಜಂಗಮ. ಕೆಲವರು ಸ್ಥಾವರಕ್ಕೆ ಅಂಟಿಕೊಂಡು ಅದರಲ್ಲಿ ಏನನ್ನೂ ಬೆಳೆಯದೆ ನನಗೆ ಸಾವಿರ ಎಕರೆ ಜಮೀನಿದೆ ಎಂದು ಬಡಬಡಿಸಿದರೆ ಏನು ಪ್ರಯೋಜನ? ವ್ಯಕ್ತಿ ವಾಸ ಮಾಡುವ ಮನೆ ‘ಅನುಭವ ಮಂಟಪ’ ಅಥವಾ ‘ಮಹಾಮನೆ’ ಆದಾಗ ಅದು ಸ್ಥಾವರತ್ವ ಕಳೆದುಕೊಂಡು ಜಂಗಮತ್ವ ಪಡೆದುಕೊಳ್ಳುವುದು. ಬಸವಣ್ಣನವರು ಕಲ್ಯಾಣದಲ್ಲಿ ಸ್ಥಾಪಿಸಿದ ‘ಅನುಭವ ಮಂಟಪ’ ಮತ್ತು ‘ಮಹಾಮನೆ’ ಎಂದೂ ಸ್ಥಾವರವಾಗಲಿಲ್ಲ. ಆದರೆ ಮನುಷ್ಯ ಇದು ನನ್ನ ಮನೆ, ನಾನು ಕಟ್ಟಿದ್ದು, ನನ್ನ ಕಾರು ಎಂದುಕೊಂಡರೆ ಅವೇ ಸಂಕುಚಿತ ದೃಷ್ಟಿಕೋನ ಬೆಳೆಸಿ ಆ ವ್ಯಕ್ತಿಯನ್ನು ಸಹ ಸ್ಥಾವರಗೊಳಿಸುತ್ತವೆ. ಆತನಿಗೆ ಜಂಗಮತ್ವದ ವಿಶಾಲ ಮನೋಭಾವನೆ ಬರುವುದಿಲ್ಲ. ಇದು ಬರಬೇಕು ಎಂದರೆ ಆತ ನಿಜಾರ್ಥದಲ್ಲಿ ಜಂಗಮನಾಗಬೇಕು. ಆಗ ನನಗಿಂತ ಹೆಚ್ಚು ಜಂಗಮಶೀಲತ್ವ ವ್ಯಕ್ತಿಗಳು ಇದ್ದಾರೆ ಎನ್ನುವುದರ ಅರಿವಾಗುವುದು. ಮಳೆ ಬಂದಾಗ ಪ್ರಕೃತಿಯಲ್ಲಿ ಹೊಸತನ ಕಾಣುವುದು. ಭೂಮಿಗೆ ಚೈತನ್ಯ ಬರುವುದು. ಹಕ್ಕಿ ಪಕ್ಷಿಗಳು ಗರಿಬಿಚ್ಚಿ ಹಾರಾಡುವವು. ಮನುಷ್ಯನಿಗೆ ಏನೋ ಒಂದುರೀತಿಯ ಸಂತೋಷ. ಹಾಗಾಗಿ ಯಾವಾಗಲೂ ಸ್ಥಾವರವನ್ನು ಸಹ ಜಂಗಮವನ್ನಾಗಿ ಬದಲಾಯಿಸಿಕೊಳ್ಳುವ ಜಾಣ್ಮೆ ಮಾನವ ಕುಲದ್ದಾಗಬೇಕು.

ಸ್ಥಾವರವನ್ನು ನಿರಾಕರಣೆ ಮಾಡುವುದಲ್ಲ; ಅದನ್ನು ಜಂಗಮಶೀಲ ಮಾಡಿಕೊಳ್ಳುವ ಪ್ರಯತ್ನ ಮುಖ್ಯ. ಅದರಲ್ಲಿ ಮನುಷ್ಯ ಯಶಸ್ವಿಯಾದರೆ ಆಗ ಆತನೂ ಜಂಗಮವಾಗುವನು. ಜಡವಾದುದು ನಿಂತ ನೀರಾಗುವುದು. ನಿಂತ ನೀರು ಮಲೆತು, ದುರ್ವಾಸನೆ ಪಸರಿಸುತ್ತ ಅನಾರೋಗ್ಯಕ್ಕೆ ಕಾರಣವಾಗುವುದು. ಆ ವಾತಾವರಣದಲ್ಲಿ ಯಾರೂ ಬದುಕಲು ಆಗುವುದಿಲ್ಲ. ಅದೇ ನೀರನ್ನು ವ್ಯವಸಾಯಕ್ಕೆ ಬಳಸಿದರೆ, ಗಿಡಗಳಿಗೆ ಉಣಿಸಿದರೆ ನಿಂತ ನೀರು ಸಹ ಜಂಗಮವಾಗುವುದು. ನಮ್ಮ ದೇಹ ಒಂದರ್ಥದಲ್ಲಿ ಸ್ಥಾವರ. ಅದು ಕಾಯಕಶೀಲವಾಗಿದ್ದರೆ ಜಂಗಮ. ಜಡತ್ವ ಆವರಿಸಿದ್ದರೆ ವ್ಯಕ್ತಿ ಸೋಮಾರಿಯಾಗಿ ಏನನ್ನೂ ಮಾಡದೆ ಸ್ಥಾವರ ಆಗುವನು. ಸ್ಥಾವರ ಕಳೆದುಕೊಳ್ಳಬೇಕೆಂದರೆ ಕ್ರಿಯಾಶೀಲನಾಗಿ ಕಾಯಕದಲ್ಲಿ ಮಗ್ನನಾಗಬೇಕು.

ಜಂಗಮಕ್ಕಿರುವ ಶಕ್ತಿ ಸ್ಥಾವರಕ್ಕಿಲ್ಲ. ಜನರು ಸ್ಥಾವರವನ್ನೇ ಅತಿಯಾಗಿ ನಂಬಿಕೊಂಡು ಜಂಗಮತ್ವದ ಕಡೆ ವಾಲುತ್ತಿಲ್ಲ. ನನ್ನ ಮನೆ, ನನ್ನ ಹೊಲ, ನನ್ನ ಮಠ, ನಾನು ಮಾಡಿದ್ದು ಹೀಗೆ ಹೇಳುವುದು ಸ್ಥಾವರ. ಇನ್ನೊಂದರ್ಥದಲ್ಲಿ ‘ನಾನು’ ಎನ್ನುವುದು ‘ಸ್ಥಾವರ’, ‘ನಾವು’ ಎನ್ನುವುದು ‘ಜಂಗಮ’. ಅಳಿವಿಲ್ಲದ ಜಂಗಮತ್ವ ಮೈಗೂಡಿಸಿಕೊಂಡರೆ ಮನುಷ್ಯ ಸದಾ ಎಚ್ಚರದಲ್ಲಿರ್ತಾನೆ. ಕ್ರಿಯಾಶೀಲನಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವನು. ಅವನ ಮನಸ್ಸು ದೆವ್ವದ ಆಗರವಾಗುವುದಿಲ್ಲ. ಕೆಲವೊಮ್ಮ ಮನಸ್ಸು, ಬುದ್ಧಿ, ವಿಚಾರಗಳು ಸಹ ಸ್ಥಾವರವಾಗುವವು. ಅವು ಜಂಗಮವಾದಾಗ ಏನೆಲ್ಲ ಸಾಧನೆ ಮಾಡಲು, ಸಂತೋಷ ಅನುಭವಿಸಲು ಸಾಧ್ಯ. ಶರಣರನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳಲು ಕಾರಣ ಅವರು ಜಂಗಮತ್ವ ಉಳಿಸಿಕೊಂಡದ್ದು. ಅವರಂತೆ ಪ್ರತಿಯೊಬ್ಬರೂ ಬದುಕಿನಲ್ಲಿ ಜಂಗಮತ್ವ ಉಳಿಸಿಕೊಳ್ಳುವಂತಹ ಕಾಯಕವನ್ನು ಪ್ರತಿ ಹಂತದಲ್ಲೂ ಮಾಡಬೇಕು.

ಜಂಗಮ ತತ್ವವನ್ನು ಅರ್ಥೈಸಿಕೊಂಡವರು ಜಂಗಮಸೇವೆಯನ್ನು ಮಾಡಲೇಬೇಕು. ಆದರೆ ಇನ್ನೂ ಎಷ್ಟೋ ಜನರು ಸ್ಥಾವರದಲ್ಲೇ ಬಿದ್ದು ಒದ್ದಾಡುತ್ತಿದ್ದಾರೆ. ಅಂದರೆ ಅವರು ಜಂಗಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಒಬ್ಬ ಇಷ್ಟಲಿಂಗ ಪೂಜಕ ಜಂಗಮವಾಗುವುದು ಆತ ಸಮಾಜ ಸೇವೆ ಮಾಡಿದಾಗ. ವ್ಯಕ್ತಿ ತನಗಾಗಿ ಮಾತ್ರ ಬದುಕದೆ ಇತರರಿಗಾಗಿ ಬದುಕಿದಾಗ ಜಂಗಮನಾಗುವನು. ಸಮಾಜದ ಬಗ್ಗೆ ಕಾಳಜಿ ಇಲ್ಲದೆ ನಿರಂತರ ಇಷ್ಟಲಿಂಗ ಪೂಜೆ ಮಾಡಿದರೆ ಅದೂ ಸ್ಥಾವರ ಪೂಜೆ ಎನ್ನುವ ಅರ್ಥ ಬಸವಣ್ಣನವರದು. ಹಾಗಾಗಿ ಅವರು ಹೇಳುವುದು: ಎರೆದಡೆ ನನೆಯದು, ಮರೆದಡೆ ಬಾಡದು, ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ; ಕೂಡಲಸಂಗಮದೇವಾ, ಜಂಗಮಕ್ಕೆರಗಿದಡೆ ಸ್ಥಾವರ ನನೆಯಿತ್ತು ಎಂದು. ಬಸವಣ್ಣನವರೇ ಮತ್ತೊಂದು ವಚನದಲ್ಲಿ ಹೇಳುವುದನ್ನು ನೋಡಿ:

ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು.
ನೀರನೊಲ್ಲದು, ಬೋನವ ಬೇಡದು, ಕರೆದೊಡೆ ಓ ಎನ್ನದು.
ಸ್ಥಾವರ ಪೂಜೆ, ಜಂಗಮದ ಉದಾಸೀನ-
ಕೂಡಲಸಂಗಯ್ಯನೊಲ್ಲ ನೋಡಾ.

ನೀರು, ಹಾಲು, ತುಪ್ಪ ಹೀಗೆ ಬೇರೆ ಬೇರೆ ಪದಾರ್ಥಗಳಿಂದ ಲಿಂಗದ ಮೇಲೆ ಅಭಿಷೇಕ ಮಾಡಿ ಮಾಡಿ ಆ ಲಿಂಗ ನೆನೆದು ಕರಿಗಟ್ಟಿತ್ತು ಎನ್ನುವರು. ಅವರು ಬಳಸಿರುವ ಪದಗಳನ್ನು ಗಮನಿಸಿರಿ. ಲಿಂಗ ನೀರನೊಲ್ಲದು, ಬೋನವ ಬೇಡದು, ಕರೆದೊಡೆ ಓ ಎನ್ನದು. ಸ್ಥಾವರ ಪೂಜೆ ಮಾಡಿ ಜಂಗಮದ ಉದಾಸೀನ ಮಾಡಿದರೆ ಆ ದೇವ ಒಲಿಯುವುದಾದರೂ ಹೇಗೆ? ಇಂಥ ಪ್ರಶ್ನೆಯನ್ನು ವಿವಿಧ ಅಧಿಕಾರ ಸ್ಥಾನದಲ್ಲಿರುವ ನೇತಾರರು ಮತ್ತೆ ಮತ್ತೆ ಹಾಕಿಕೊಳ್ಳಬೇಕಿದೆ. ಬಸವಣ್ಣನವರ ಮತ್ತೊಂದು ವಚನ ಹೇಳುವುದು:

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು,
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ.
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ.

ಜನರ ರೀತಿ ನೀತಿಗಳೇ ತುಂಬಾ ವಿಚಿತ್ರ. ಕಲ್ಲಿನ ನಾಗಪ್ಪನಿಗೆ ನಾಗರ ಪಂಚಮಿಯಂದು ಹಾಲು ಎರೆಯುವರು. ಇವರ ಭಕ್ತಿಗೆ ಮೆಚ್ಚಿ ನಿಜವಾದ ನಾಗರ ಹಾವು ಪ್ರತ್ಯಕ್ಷವಾದರೆ ಸಂತೋಷಪಡಬೇಕಿತ್ತು. ಆದರೆ ಅವರು ಮಾಡುವುದೇನು? ಅಯ್ಯೋ ಹಾವು, ಹಾವು ಎಂದು ಕಲ್ಲು, ಕೋಲುಗಳಿಂದ ಅದನ್ನು ಹೊಡೆದು ಸಾಯಿಸುವರು. ಇದು ಭಕ್ತಿಯೇ? ಬಸವಣ್ಣನವರು ಅಷ್ಟಕ್ಕೇ ನಿಲ್ಲಿಸದೆ ಮತ್ತೊಂದು ಉದಾಹರಣೆ ಕೊಡುವರು. ಯಾರಾದರೂ ಹಸಿದುಕೊಂಡು ಅಮ್ಮಾ ಒಂದು ತುತ್ತು ಅನ್ನ ಕೊಡಿ ಎಂದರೆ ‘ಈಗ ಬಿಡುವಿಲ್ಲ, ಮುಂದೆ ಹೋಗು’ ಎಂದು ಅವನನ್ನು ಕಳಿಸುವರು, ಅದೇ ಉಣ್ಣದ ಲಿಂಗಕ್ಕೆ ನೈವೇದ್ಯ ಮಾಡುವರು. ಇಂಥ ದ್ವಂದ್ವ ನೀತಿ ಕಂಡ ಬಸವಣ್ಣನವರು ಕೊನೆಗೆ ಎಚ್ಚರಿಸುವುದು ‘ಕೂಡಲಸಂಗನ ಶರಣರ ಕಂಡು ಉದಾಸೀನ ಮಾಡಿದಡೆ ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ’ ಎಂದು. ಶರಣರನ್ನು ಉದಾಸೀನ ಮಾಡಿದರೆ ಮಣ್ಣಿನ ಹೆಂಟೆಗೆ ಕಲ್ಲು ಬಿದ್ದರೆ ಪುಡಿ ಪುಡಿಯಾಗುವಂತೆ ನಿಮ್ಮ ಸ್ಥಿತಿಯೂ ಆಗುವುದು ಎಂದು ಎಚ್ಚರಿಸಿದ್ದಾರೆ. ಈ ನೆಲೆಯಲ್ಲಿ ಮನುಷ್ಯ ಮೊದಲು ತನ್ನ ಎದೆಯ ಕೃಷಿಕನಾಗಬೇಕು. ಅದೇ ನಿಜವಾದ ಜಂಗಮತ್ವ. ಎದೆಯ ಕೃಷಿಕರಾದಾಗ ಅಲ್ಲಿ ಅಹಿಂಸೆ, ಸತ್ಯ, ಪರೋಪಕಾರ, ಲೋಕೋದ್ಧಾರ ಅನ್ನುವ ವಿಚಾರಗಳನ್ನು ಪೋಷಿಸಲು ಸಾಧ್ಯ. ಧರ್ಮ ಎಂದರೆ ಒಂದುಗೂಡಿಸುವುದು. ಏಕತೆ ಭಾವನೆ ಬೆಳೆಸುವುದು. ಒಡೆಯುವುದು ಧರ್ಮವಲ್ಲ. ಧರ್ಮ ಹೇಳುವುದೇ ಒಂದಾದರೆ ಅದರ ಬೋಧಕರು ನಡೆವುದೇ ಬೇರೊಂದಾದಲ್ಲಿ ಅವರನ್ನು ನಂಬುವುದಾದರೂ ಹೇಗೆ? ದೊಡ್ಡ ಸ್ಥಾನದಲ್ಲಿರುವವರು ನಾನು ಹೇಳಿದ ಹಾಗೆ ಮಾಡು ಎನ್ನುವರೇ ಹೊರತು ನಾನು ಮಾಡಿದಂತೆ ಮಾಡು ಎನ್ನುವುದಿಲ್ಲ. ಅಂದರೆ ಅವರ ನಡೆ, ನುಡಿಗೆ ಸಂಬಂಧವೇ ಇರುವುದಿಲ್ಲ.

ಈ ದೇಶದಲ್ಲಿ ಅದೆಷ್ಟೋ ಲಕ್ಷ ಕೋಟ್ಯಾಧಿಪತಿಗಳು ಆಗಿಹೋಗಿದ್ದರೂ ಅವರು ಇತಿಹಾಸದಲ್ಲಿ ಉಳಿಯಲಾಗಿಲ್ಲ. ಕಾರಣ ಅವರು ಸ್ಥಾವರಕ್ಕೆ ಅಂಟಿಕೊಂಡವರು. ಅದೇ ಬಸವಾದಿ ಶಿವಶರಣರು ಇಂದಿಗೂ ಉಳಿಯಲು ಕಾರಣ ಅವರ ಜಂಗಮ ಪ್ರೇಮ. ಅವರು ಆಸೆ ಆಮಿಷಗಳಿಗೆ ಒಳಗಾಗದೆ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದದ್ದು. ಅವರು ಜಗತ್ತಿನ ಅಂಧಕಾರ ಕಳೆದು ಬೆಳಕು ಕೊಡುವ ಕಾರ್ಯ ಮಾಡಿದ್ದು. ಸರ್ವಜ್ಞನಿಗೆ ಮೈತುಂಬ ಬಟ್ಟೆ ಕೂಡ ಇರಲಿಲ್ಲ. ಅವನು ಭೂಮಾಲಿಕನಲ್ಲ. ಯಾವ ಅಧಿಕಾರವೂ ಇರಲಿಲ್ಲ. ಆದರೂ ಕರ್ನಾಟಕದ ಮೂಲೆಮೂಲೆಯಲ್ಲೂ ಆತನ ಹೆಸರು ಹೇಳುವರು. ಅಂದರೆ ಮೌಲ್ಯ, ಆದರ್ಶ, ಜ್ಞಾನ, ಪಾರದರ್ಶಕ ವ್ಯಕ್ತಿತ್ವ ಮುಖ್ಯವೇ ಹೊರತು ಹಣ. ಅಧಿಕಾರ, ಐಶ್ವರ್ಯಗಳಲ್ಲ. ಅದಕ್ಕೆ ಬಸವಣ್ಣನವರು ಹೇಳಿದ್ದು:

ಆನೆಯನೇರಿಕೊಂಡು ಹೋದಿರೇ ನೀವು,
ಕುದುರೆಯನೇರಿಕೊಂಡು ಹೋದಿರೇ ನೀವು,
ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ!
ಸತ್ಯದ ನಿಲವನರಿಯದೆ ಹೋದಿರಲ್ಲಾ,
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ!
ಅಹಂಕಾರವೆಂಬ ಸದಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವರನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!

ಶರಣರ ದಾರಿಯಲ್ಲಿ ಸಾಗುವ ಪ್ರಯತ್ನ ಮುಖ್ಯ. ಕಾಶ್ಮೀರದ ರಾಜ ಮಹಾದೇವ ಭೂಪಾಲ ರಾಜಪದವಿ ತಿರಸ್ಕರಿಸಿ ಸಾಮಾನ್ಯರಂತೆ ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಡಿದು ಮಾರಿ ಜೀವನ ನಡೆಸಿದರು. ಇದೊಂದು ಆಶ್ಚರ್ಯಕರ ಮತ್ತು ಐತಿಹಾಸಿಕ ಸತ್ಯ ಘಟನೆ. ಇವತ್ತು ಒಬ್ಬ ಗ್ರಾಮಪಂಚಾಯತಿ ಸದಸ್ಯನನ್ನು ಮಾತನಾಡಿಸುವುದೇ ಕಷ್ಟ. ಆದರೆ ರಾಜ ವೈಭವ ಬಿಟ್ಟು ಬಂದದ್ದು ಸಾಮಾನ್ಯ ಸಂಗತಿ ಅಲ್ಲ. ಇದೇ ಜಂಗಮತ್ವದ ಲಕ್ಷಣ. ಇತಿಹಾಸದಲ್ಲಿ ಉಳಿಯಬೇಕೆಂದು ಕೋಟಿ ಕೋಟಿ ಹಣ ಖರ್ಚು ಮಾಡಿ ದೇವಸ್ಥಾನಗಳನ್ನು ಕಟ್ಟುತ್ತಾರೆ. ‘ಎರೆದಡೆ ನೆನೆಯದು, ಮರೆದಡೆ ಬಾಡದು’ ಎನ್ನುವ ತತ್ವವನ್ನು ಅಂಥವರ ಮುಂದೆ ಹೇಳುವುದು ಕೋಣನ ಮುಂದೆ ಕಿನ್ನುರಿ ಬಾರಿಸಿದಂತೆ. ವ್ಯಕ್ತಿ ಸ್ಥಾವರವನ್ನು ಮೀರಿ ನಿಂತರೆ ಜಂಗಮತ್ವ ಅಳವಡಿಸಿಕೊಳ್ಳಲು ಸಾಧ್ಯ. ‘ಜಂಗಮಕ್ಕೆರೆದಡೆ ಸ್ಥಾವರ ನೆನೆಯಿತ್ತು’ ಎಂದರೆ ಸ್ಥಾವರಕ್ಕಿಂತ ಶ್ರೇಷ್ಠವಾಗಿರುವುದು ಜಂಗಮ ಎಂದೇ ಅರ್ಥ. ಅಂಥ ಶ್ರೇಷ್ಠತೆಯನ್ನು ಮಾನವ ಮೈಗೂಡಿಸಿಕೊಳ್ಳಬೇಕು. ಅದನ್ನೇ ಪ್ರಸಾರ, ಪ್ರಚಾರ ಮಾಡುತ್ತ ಜಂಗಮದ ದಾರಿಯಲ್ಲಿ ನಡೆಯಬೇಕು. ಎದೆಯ ಕೃಷಿಕನಾಗಬೇಕು ಎನ್ನುತ್ತಲೇ ನೆನಪಾಗುವುದು ಪ್ರಭುದೇವರ ವಚನ:

ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.

ವ್ಯಕ್ತಿ ಸ್ಥಾವರ ಕೃಷಿಯಲ್ಲಿ ಯಶಸ್ವಿಯಾಗಿದ್ದರೂ ಅಲ್ಲಮರು ಹೇಳುವಂತಹ ಕೃಷಿ ಮಾಡುವಲ್ಲಿ ಪೂರ್ಣ ವಿಫಲನಾಗಿದ್ದಾನೆ. ಬಾಹ್ಯ ಕೃಷಿಯೊಂದಿಗೆ ಅಂತರಂಗದ ಕೃಷಿಯತ್ತ ಗಮನ ಹರಿಸಿದರೆ ಸ್ಥಾವರತ್ವದಿಂದ ಜಂಗಮತ್ವದೆಡೆಗೆ ಸಾಗಲು ಸಾಧ್ಯ. ಸ್ಥಾವರ ವ್ಯಕ್ತಿಯನ್ನು ಜಡತ್ವದ ಕಡೆ ಕರೆದೊಯ್ದು ಆಳವಾದ ತಗ್ಗಿಗೆ ತಳ್ಳುವುದು. ಜಂಗಮ ಹರಿಯುವ ನೀರಿನತ್ತ ಕರೆದೊಯ್ಯುವುದು. ಹಾಗಾಗಿ ಮನುಷ್ಯ ಮೌಲ್ಯಗಳಿಂದ ಜಂಗಮವಾಗಬೇಕು. ‘ನೀನೊಲಿದರೆ ಕೊರಡು ಕೊನರುವುದಯ್ಯ’ ಎನ್ನುವ ವಚನವನ್ನೇ ತೆಗೆದುಕೊಳ್ಳಿ. ಮನುಷ್ಯ ಜಂಗಮವಾದರೆ ಕೊರಡಿನಂತಿದ್ದವ ಚಿಗುರುವನು. ಅವನಲ್ಲಿ ಕ್ರಿಯಾಶೀಲತೆ ಬಂದರೆ ಕೊರಡುತನ ಕಳೆದುಕೊಂಡು ಅಮೃತಕೊಡುವ ಕಾರ್ಯ ಮಾಡುವನು. ಹೀಗೆ ಮನುಷ್ಯ ಸ್ಥಾವರದಿಂದ ಜಂಗಮದ ಕಡೆ ಸಾಗಬೇಕು. ವಿಷಾದದ ಸಂಗತಿ ಎಂದರೆ ಜಂಗಮದಿಂದ ಸ್ಥಾವರದ ಕಡೆ ಹೋಗುತ್ತಿರುವುದು. ಮಗು ಹುಟ್ಟಿದಾಗ ಕ್ರಿಯಾಶೀಲವಾಗಿರುವುದು, ಅಳುವುದು ಜಂಗಮದ ಲಕ್ಷಣ. ಮನುಷ್ಯ ಸ್ಥಾವರತ್ವ ಮೀರಿ ನಿಲ್ಲುವ ಪ್ರಯತ್ನ ಮಾಡಬೇಕು. ಅಂದರೆ ಸ್ಥಾವರಕ್ಕೆ ಅಂಟಿಕೊಳ್ಳದೆ ಜಗದಗಲ ಮುಗಿಲಗಲ ಮಿಗೆಯಗಲ ಆಗಬೇಕು. ಆಗ ಜೀವನದಲ್ಲಿ ಅದ್ಭುತ ಸಾಧನೆ ಮಾಡಲು ಸಾಧ್ಯ. ಸ್ಥಾವರವಾದವರನ್ನು ಲೋಕ ಬೇಗ ಮರೆಯುವುದು, ಜಂಗಮರಾದವರನ್ನು ಸದಾ ಸ್ಮರಿಸುವುದು.

Previous post ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
Next post ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್

Related Posts

ಒಳಗನರಿವ ಬೆಡಗು
Share:
Articles

ಒಳಗನರಿವ ಬೆಡಗು

September 10, 2022 ಡಾ. ಚಂದ್ರಶೇಖರ ನಂಗಲಿ
ಕೊಳಗದ ತೋರಿಹ ಕೆಚ್ಚಲು ಮಾನದ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು! ತಾಳಮರದುದ್ದವೆರಡು ಕೋಡು ನೋಡಾ! ಅದನರಸ ಹೋಗಿ ಆರುದಿನ! ಅದು ಕೆಟ್ಟು ಮೂರು ದಿನ! ಅಘಟಿತಘಟಿತ ಗುಹೇಶ್ವರ!...
ಅಷ್ಟಾವರಣವೆಂಬ ಭಕ್ತಿ ಸಾಧನ
Share:
Articles

ಅಷ್ಟಾವರಣವೆಂಬ ಭಕ್ತಿ ಸಾಧನ

August 6, 2022 ಡಾ. ಪಂಚಾಕ್ಷರಿ ಹಳೇಬೀಡು
ಆವರಣವೆಂದರೆ ರಕ್ಷಾಕವಚ. ಅತ್ಯಂತ ಸೂಕ್ಷ್ಮವಾದ ಮತ್ತು ಅತಿ ಬೆಲೆಬಾಳುವ ವಸ್ತುಗಳನ್ನು ರಕ್ಷಿಸಿಡಲು ಮನೆಗಳಲ್ಲಿ, ಕಛೇರಿಗಳಲ್ಲಿ, ಬ್ಯಾಂಕು, ಇತ್ಯಾದಿ ಸ್ಥಳಗಳಲ್ಲಿ ಅನೇಕ...

Comments 12

  1. Nanjunda Mysore
    Jun 16, 2024 Reply

    ಸ್ಥಾವರದಿಂದ ಜಂಗಮದ ಕಡೆ ಸಾಗಲೇ ಬೇಕಾದ ದಾರಿಗಳನ್ನು ತೋರಿದ ಸುಂದರ ಲೇಖನ ✍️🏾🙏🏿

  2. ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ
    Jun 17, 2024 Reply

    ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗಳು ಯಥಾವತ್ ಸಮಾಜ ನಿರ್ಮಾಣದ ಕಾರ್ಯ ಏಕೆ? ಹೇಗೆ ಮುಖ್ಯ?ಎನ್ನುವುದನ್ನು ಮಾನವೀಯ ಮೌಲ್ಯಗಳ ಮೂಲಕ ಮುಖಾಮುಖಿ ಮಾಡಿಸಿದ್ದಾರೆ.
    ತಮ್ಮೆಲ್ಲರ ಶ್ರಮ, ಶ್ರದ್ಧೆ ಭಕ್ತಿಯ ಬೆಳಕಿಗೆ ನಮೋ ನಮಃ.

  3. ಮರುಳಸಿದ್ದಪ್ಪ ನವಲಗುಂದ
    Jun 22, 2024 Reply

    ಭೂಮಿ ಸ್ಥಾವರವಾದರೂ ಅದನ್ನು ಉತ್ತಿ, ಬಿತ್ತಿ, ಬೆಳೆ ತೆಗೆಯುತ್ತಿದ್ದರೆ ಅದು ಸಹ ಜಂಗಮವಾಗುವುದು. ಈ ಅರ್ಥದಲ್ಲಿ ಸ್ಥಾವರ ಜಂಗಮ ಒಂದೆನ್ನುವುದು. ಹಾಗಂತ ಜಂಗಮ ಮರೆತು ಸ್ಥಾವರಕ್ಕೆ ಅಂಟಿಕೊಳ್ಳಬಾರದು. ಅಂಟಿಕೊಂಡದ್ದೇ ಆದರೆ ವ್ಯಕ್ತಿಯ ಬೆಳವಣಿಗೆ ಸ್ಥಗಿತವಾಗುವುದು- ಪೂಜ್ಯರ ನುಡಿಗಳು ದಾರಿ ತೋರುವ ದೀಪಗಳು. ಎಲ್ಲರೂ ಓದಲೇ ಬೇಕಾದ ಸುಂದರ ಲೇಖನ 🙏🏿

  4. ಶ್ರೇಯಸ್ ಭದ್ರಣ್ಣ, ಶಿರೂರು
    Jun 22, 2024 Reply

    ಜಂಗಮ ಬದುಕನ್ನು ಸ್ಥಾವರ ಮಾಡಿಕೊಂಡವರನ್ನು ಎಚ್ಚರಿಸುವ ಮೌಲ್ಯಯುತ ಲೇಖನ 👌🏽

  5. A thinker, Clubhouse
    Jun 26, 2024 Reply

    ಶತಮಾನಗಳಿಂದ ಅಸಂಭವ, ಅವಿವೇಕತನದಿಂದ ಕೂಡಿದ ಕಾಲ್ಪನಿಕ ಕಪೋಲಕಲ್ಪಿತ ಕಟ್ಟುಕಥೆಗಳ ರಾಮಾಯಣ, ಭಾಗವತಾದಿ ಪುರಾಣಗಳನ್ನು ಓದಿಕೊಂಡು, ಕೇಳಿಕೊಂಡು ಬಂದ ಜನರು ಸ್ಥಾವರದಂತಾಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

  6. Shraddhananda swamiji, Vijayapura
    Jun 26, 2024 Reply

    ಜಂಗಮಕ್ಕೆ ಎರೆದರೆ ಸ್ಥಾವರ ನೆನೆಯುತ್ತದೆ ಎನ್ನುವುದು ಸತ್ಯ ಸಂಗತಿ. ಆದರೆ ಪ್ರಾಥಮಿಕ ಶಾಲಾ ಹಂತದಲ್ಲಿ ಇರುವವರಿಗೆ ವಿಶ್ವವಿದ್ಯಾಲಯದ ವಿಷಯವನ್ನು ಬೋಧಿಸುವುದು ಹೇಗೆ?

  7. Pro. G.T. Govindappa
    Jun 26, 2024 Reply

    ಹೌದು. ಲಿಂಗಾಯತರು, ವೀರಶೈವರು ಎಂದು ಕರೆದು ಕೊಳ್ಳುವವರಿಗೇ ಬಸವಣ್ಣನವರ ಅರಿವಿಲ್ಲ. ಇನ್ನು ಅವರನ್ನು ಸಾಮಾನ್ಯರಿಗೆ ತಲುಪಿಸುವವರಾರು.
    ಸಾಣೆ ಹಳ್ಳಿ ಶ್ರೀಗಳನ್ನು ಬಿಟ್ಟರೆ ಇತರ ಯಾವ ಸ್ವಾಮೀಜಿಯೂ ಮಾತಾಡುತ್ತಿಲ್ಲ. ಹಿಂದೆಂದಿಗಿಂತಲೂ ಇಂದು ಬುದ್ಧ ಬಸವರ ಅವಶ್ಯಕತೆ ಸಮಾಜಕ್ಕೆ ಹೆಚ್ಚಿದೆ.

  8. ಶ್ರೀಶೈಲ ಮಸೂತಿ, ಬೆಂಗಳೂರು
    Jun 27, 2024 Reply

    ಜಡತ್ವದಿಂದ ಕ್ರಿಯಾಶೀಲ ಕ್ರಿಯಾತ್ಮಕದತ್ತ ಸಾಗುವ ನಮ್ಮ
    ಬದುಕು ನಿಜವಾದ ಬದುಕು. ನಾವು ಜಂಗಮಪ್ರಾಣಿಯಾಗದೆ ಲಿಂಗಪ್ರಾಣಿಯಾಗಲು ಸಾಧ್ಯವಿಲ್ಲ ಎಂಬ ಸತ್ಯ ಬಿಚ್ಚಿಟ್ಟು ಮನಸ್ಸಿಗೆ ನಾಟುವಂತೆ
    ಬರೆದ ಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿಯವರಿಗೆ ಧನ್ಯವಾದಗಳು 🙏🙏

  9. ದಾನಮ್ಮ ಕಡಿವಾಳ
    Jun 27, 2024 Reply

    ಸ್ಥಾವರವನ್ನು ಜಂಗಮಶೀಲ ಮಾಡಿಕೊಳ್ಳುವುದು ಹೇಗೆಂದು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟ ಗುರುಮೂರ್ತಿಗಳಿಗೆ ಶರಣು.

  10. ಭದ್ರಣ್ಣ ಜ.
    Jun 30, 2024 Reply

    “ರಾಮಮಂದಿರದ ಉದ್ಘಾಟನೆ ಹೊತ್ತಿನಲ್ಲಿ ಇಡೀ ದೇಶವೇ ವಿಚಿತ್ರ ಸಂಭ್ರಮದಲ್ಲಿತ್ತು. ಆ ಸಂಭ್ರಮವನ್ನು, ವೈಭವೀಕರಣವನ್ನು ಮಾಧ್ಯಮಗಳೂ ಎಡಬಿಡದೆ ಪ್ರಸಾರ ಮಾಡಿದವು. ಹಳ್ಳಿ ನಗರವೆನ್ನದೆ ಎಲ್ಲೆಡೆ ರಾಮಮಂದಿರದ ನೆನಪಿನಲ್ಲಿ ಸಾಮೂಹಿಕ ಪ್ರಸಾದದ ವ್ಯವಸ್ಥೆ ಮಾಡಿ ಸ್ಥಾವರಾವಲಂಬಿಗಳು ಕುಣಿದು ಕುಪ್ಪಳಿಸಿದರು. ಕುಡಿದು ಸಹ ಕುಪ್ಪಳಿಸಿರಬಹುದು. ‘ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಸರ್ಕಾರ ಘೋಷಣೆ ಮಾಡಿದಾಗ ಕರ್ನಾಟಕದ ಜನರು ಹಾಗೆ ಸಂಭ್ರಮಿಸಲಿಲ್ಲ. ಅಂದರೆ ಅವರಿನ್ನೂ ಬಸವಣ್ಣನವರನ್ನು ಅರ್ಥ ಮಾಡಿಕೊಂಡಿಲ್ಲ ಎಂದೇ ಅರ್ಥ”
    ಲಿಂಗಾಯತ ಸಮಾಜವು ಗುರುಗಳ ಈ ಮಾತುಗಳನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳಬೇಕು.👌🏽🙏🏿

  11. Ramesh Hadapad
    Jul 3, 2024 Reply

    ಒಳ್ಳೆಯ ಬರಹ ಮತ್ತು ನುಡಿ ಚಿತ್ರ ಬರೆಯುವ ಮೂಲಕ ಲೇಖನ ಸುಂದರ. ವಂದನೆಗಳು.

  12. Leelavathi J.P
    Jul 9, 2024 Reply

    Very interesting topic.

Leave a Reply to ಮರುಳಸಿದ್ದಪ್ಪ ನವಲಗುಂದ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
ಯಾಕೀ ಗೊಡವೆ?
ಯಾಕೀ ಗೊಡವೆ?
August 10, 2023
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಮೀನಿನ ಬಯಕೆ
ಮೀನಿನ ಬಯಕೆ
June 10, 2023
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ನಾನುವಿನ ಉಪಟಳ
ನಾನುವಿನ ಉಪಟಳ
December 13, 2024
ಅನಿಮಿಷನ ಕಥೆ- 6
ಅನಿಮಿಷನ ಕಥೆ- 6
April 11, 2025
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
Copyright © 2025 Bayalu