Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕುವೆಂಪು ಮತ್ತು ಬ್ರೆಕ್ಟ್
Share:
Articles August 11, 2025 ಡಾ. ಚಂದ್ರಶೇಖರ ನಂಗಲಿ

ಕುವೆಂಪು ಮತ್ತು ಬ್ರೆಕ್ಟ್

ಜರ್ಮನಿ ರಂಗಭೂಮಿಯ ಸಾಧಕ, ನಾಟಕಕಾರ ಮತ್ತು ಕವಿ ಬರ್ಟೊಲ್ಟ್ ಬ್ರೆಕ್ಟ್ ಹೇಳುವ ‘ಎಪಿಕ್ ಥಿಯೇಟರ್’ ಮತ್ತು ನಮ್ಮ ರಾಷ್ಟ್ರಕವಿ ಕುವೆಂಪು ಹೇಳಿರುವ ‘ಮನೋ ರಂಗಭೂಮಿ’ ಇವೆರಡರ ತಿರುಳು ಒಂದೇ ಆಗಿದೆ. ವರ್ತಮಾನದ ಸಾಮಾಜಿಕ ಸತ್ಯ ದರ್ಶನವನ್ನು ಗತಕಾಲದ ಪುರಾಣ, ಇತಿಹಾಸ, ಜಾನಪದ ಆಲಂಬನದ ಮೂಲಕ ಗುಪ್ತವಾಗಿ ಮಾರುವೇಷ ತೊಡಿಸಿ ಹೇಳುವ ಕ್ರಮ ಬ್ರೆಕ್ಟ್ ಮತ್ತು ಕುವೆಂಪು ಇಬ್ಬರಲ್ಲೂ ಕಂಡು ಬರುತ್ತದೆ. ಬ್ರೆಕ್ಟ್ ಮತ್ತು ಕುವೆಂಪು ಅವರುಗಳ ನಾಟಕ ಚಕ್ರವನ್ನು ನಾವು ಕುಂಬಾರ ಕಲೆಗೆ ಹೋಲಿಸಬಹುದು. ಜೇಡಿಮಣ್ಣಿನ ಮುದ್ದೆಯನ್ನು ತಿರುಗು ಚಕ್ರದ ಮಧ್ಯೆ ಇಟ್ಟು ಕುಂಬಾರನು ಮಡಕೆ ಮಾಡುವಂತೆ, ಬ್ರೆಕ್ಟ್ ಮತ್ತು ಕುವೆಂಪು ತಮ್ಮ ಪ್ರಜ್ಞಾಚಕ್ರದಲ್ಲಿ ಇತಿಹಾಸ, ಪುರಾಣದ ಕ್ರಿಯೆ ಕಾಲ ದೇಶಗಳನ್ನು ಇಟ್ಟು ಪ್ರಸ್ತುತ ಕಾಲದ ಸಾಮಾಜಿಕ ಸತ್ಯದರ್ಶನ ಮತ್ತು ಸಾಮಾಜಿಕ ಪರಿವರ್ತನೆಯ ಆಶಯಗಳನ್ನು ಬೆಸೆದು ವಿವಿಧ ನಾಟಕ ಕೃತಿಗಳನ್ನು ರೂಪಿಸಿದ್ದಾರೆ.

ಕುವೆಂಪು ನಾಟಕ ಚಕ್ರವನ್ನು ಗಮನಿಸಿ. ಅವರು ಸಾಮಾಜಿಕ ನಾಟಕವನ್ನು ರಚಿಸಿಲ್ಲ. ಅವರ ಎಲ್ಲಾ ನಾಟಕಗಳು ಪೌರಾಣಿಕ ಅಥವಾ ಐತಿಹಾಸಿಕ ಕಥಾವಸ್ತು ಆಧರಿಸಿವೆ. ಹಾಗೆ ನೋಡಿದರೆ ಕಥಾವಸ್ತುವನ್ನು ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ, ಕಾಲ್ಪನಿಕ ಎಂದು ಪ್ರತ್ಯೇಕ ವಿಂಗಡಣೆ ಮಾಡುವುದು ಸರಿಯಲ್ಲ. ಸಾಹಿತ್ಯದಲ್ಲಿ ವಸ್ತುವನ್ನು ಪ್ರತ್ಯೇಕತೆ ದೃಷ್ಟಿಯಿಂದ ಪರಿಭಾವಿಸುವುದು ಪೂರ್ಣದೃಷ್ಟಿ ಆಗುವುದಿಲ್ಲ. ಪುರಾಣ ಅಥವಾ ಇತಿಹಾಸವನ್ನು ಆಲಂಬನ ವಿಭಾವ ಮಾಡಿಕೊಂಡು ಸಾಮಾಜಿಕ ಸತ್ಯಗಳನ್ನು ಬಗೆದು ತೋರುವ ಅನ್ಯೋಕ್ತಿ ಅಥವಾ allegory ವಿಧಾನವನ್ನು ಗ್ರಹಿಸಬೇಕು.ಕುವೆಂಪು ಅವರ ಶೂದ್ರ ತಪಸ್ವಿ, ಜಲಗಾರ, ಶ್ಮಶಾನ ಕುರುಕ್ಷೇತ್ರಂ ನಾಟಕಗಳನ್ನು ನೋಡುತ್ತಿದ್ದರೆ ಅವು Camouflageಗೆ ಸಂಬಂಧಪಟ್ಟ ನಿಸರ್ಗದ ವಿಸ್ಮಯ ದೃಶ್ಯಗಳನ್ನು ನೆನಪಿಗೆ ತರುತ್ತವೆ. ಉದಾಹರಣೆಗೆ ನೋಡುವುದಕ್ಕೆ ಮಡಚಿದ ತರಗೆಲೆಯಂತೆ ಕಾಣುವ ಜೀವಿಯೊಂದು, ರೆಕ್ಕೆ ಅಗಲಿಸಿದರೆ ಬಣ್ಣದ ಚಿಟ್ಟೆಯಾಗಿ ಬಿಡುತ್ತದೆ. ಇದು ‘ತರಗೆಲೆ : ಬಣ್ಣದ ಚಿಟ್ಟೆ ಪರಿಣಾಮ’ವನ್ನು (Dry Leaf : Butter Fly Effect) ಹೋಲುತ್ತದೆ. ಮೇಲ್ನೋಟಕ್ಕೆ ಅವರ ರಚನೆಗಳು ಪೌರಾಣಿಕ ನಾಟಕದಂತೆ ತೋರಿದರೂ ಒಳಹೊಕ್ಕು ನೋಡಬಲ್ಲ ಸಹೃದಯರಿಗೆ ಇದರಲ್ಲಿ ಅಡಗಿದ ಸಾಮಾಜಿಕ ಸತ್ಯದರ್ಶನ ಮತ್ತು ಸಾಮಾಜಿಕ ಪರಿವರ್ತನೆಗೆ ಸಂಬಂಧಪಟ್ಟ ಜೀವನದ ಆಶಯಗಳು ಮನದಟ್ಟಾಗುತ್ತವೆ.

ಬ್ರೆಕ್ಟ್ ಎಪಿಕ್ ಥಿಯೇಟರ್ ಅನ್ನು Distancing, Strange thing, Alienation, Historification ಇತ್ಯಾದಿಯಾಗಿ ಕರೆದಿದ್ದಾರೆ. ಸಾಮಾಜಿಕ ಪ್ರೇಕ್ಷಕರ ಸಮಕಾಲೀನ ಕ್ರಿಯೆ ಕಾಲ ದೇಶಗಳನ್ನು ಅಪರಿಚಿತಗೊಳಿಸುವ ಬಗೆ ಇಲ್ಲಿದೆ. ಕುವೆಂಪು ಅವರು ಬಾಹ್ಯವಿಧವಾದ ರಂಗಭೂಮಿಯನ್ನು ನಿರಾಕರಿಸುತ್ತಾ ‘ಮನೋರಂಗಭೂಮಿ’ಯ ಕಲ್ಪನೆಯನ್ನು ಕೊಟ್ಟಿದ್ದಾರೆ. ಬ್ರೆಕ್ಟ್ ಹೇಳುವ ಮಾನಸಿಕ ಅಂತರವನ್ನು ಕಾಯ್ದುಕೊಳ್ಳಲು, ಸಾಮಾಜಿಕ ಪ್ರೇಕ್ಷಕರ ಸಮಕಾಲೀನ ಕ್ರಿಯೆ ಕಾಲ ದೇಶಗಳನ್ನು ಅಪರಿಚಿತಗೊಳಿಸಲು ಪುರಾಣ, ಇತಿಹಾಸ ವಸ್ತುವನ್ನು ಆಲಂಬನ ಮಾಡಿಕೊಂಡಿದ್ದಾರೆ. ಇದು ಇಷ್ಟಕ್ಕೇ ಸೀಮಿತವಾಗದೆ, ಪ್ರೇಕ್ಷಕರು ತಮ್ಮ ಕಲ್ಪನಾಶಕ್ತಿ ಮತ್ತು ವಿಚಾರಕ್ರಾಂತಿಯನ್ನು ಕಳೆದುಕೊಳ್ಳಬಾರದೆಂದು ಕುವೆಂಪು ಎಚ್ಚರಿಸುತ್ತಾ ‘ಮನೋರಂಗಭೂಮಿ ತತ್ವ’ವನ್ನು ಎತ್ತಿ ಹಿಡಿದಿದ್ದಾರೆ. ರಂಗಭೂಮಿಗೂ ಪ್ರೇಕ್ಷಕರಿಗೂ ಮಧ್ಯೆ ಪ್ರಜ್ಞಾಪೂರ್ವಕವಾದ ಮಾನಸಿಕ ಅಂತರವನ್ನು ಬ್ರೆಕ್ಟ್ ಹೇಳಿದ್ದರೆ, ಕುವೆಂಪು ಅವರು ಪ್ರೇಕ್ಷಕರೇ ‘ಜೀವಂತ ರಂಗಭೂಮಿ’ ಆಗುವುದಕ್ಕೆ ಒತ್ತು ನೀಡಿದ್ದಾರೆ. ಇದನ್ನು ‘ಬ್ಯುಲ್ಟ್ ಇನ್ ಥಿಯೇಟರ್’ ಅಥವಾ ‘ಮನಸ್ಸೇ ರಂಗಭೂಮಿ’ ತತ್ವ ಎಂದು ಕರೆಯಬಹುದು. ಇದು ಬಸವಣ್ಣನವರ ದೇಹವೇ ದೇವಾಲಯ (ಬ್ಯುಲ್ಟ್ ಇನ್ ಟೆಂಪಲ್) ತತ್ವಕ್ಕೆ ಸಮಾನವಾಗಿದೆ.

ಶೂದ್ರ ತಪಸ್ವಿ (1944)

ಸಂಸ್ಕೃತದ ಉತ್ತರ ರಾಮಾಯಣದಲ್ಲಿ ಶಂಭೂಕ ವಧಾ ಪ್ರಸಂಗವಿದೆ. ಶಂಭೂಕನ ತಪಸ್ಸಿನ ಪರಿಣಾಮವಾಗಿ ವರ್ಣಾಶ್ರಮ ಧರ್ಮದ ಉಲ್ಲಂಘನೆಯಾಗಿದೆ. ಇದರಿಂದಾಗಿ ತನ್ನ ಮಗ ಅಕಾಲ ಮರಣಕ್ಕೆ ತುತ್ತಾಗಿದ್ದಾನೆಂದು ಆರೋಪಿಸುವ ಬ್ರಾಹ್ಮಣನೊಬ್ಬನು ಶ್ರೀರಾಮನ ಸನ್ನಿಧಿಗೆ ಬಂದು ಬೇಡಿಕೊಳ್ಳುತ್ತಾನೆ. ಶ್ರೀರಾಮನು ವರ್ಣಧರ್ಮ ಪರಿಪಾಲಕನಾಗಿ ಶಂಭೂಕನ ಆಶ್ರಮಕ್ಕೆ ಬಂದು ಶಂಭೂಕನ ಶಿರಚ್ಛೇದ ಮಾಡುತ್ತಾನೆ. ಬ್ರಾಹ್ಮಣನ ಮಗ ಬದುಕಿಕೊಳ್ಳುತ್ತಾನೆ. ಸಾಮಾಜಿಕ ಜಡತ್ವದ ಈ ಕಥಾವಸ್ತುವನ್ನು ಕುವೆಂಪು ಸಾಮಾಜಿಕ ಚಲನಶೀಲತೆ ಮತ್ತು ಸಾಮಾಜಿಕ ಪರಿವರ್ತನೆಯ ನಾಟಕವನ್ನಾಗಿ ಮಾರ್ಪಡಿಸಿದ್ದಾರೆ. ಅಮೂರ್ತವಾದ ಮೃತ್ಯು ಮತ್ತು ವೃಕ್ಷ ಭೈರವರನ್ನು ಮೂರ್ತರೂಪದಲ್ಲಿ ತೋರಿಸುವ ಕುವೆಂಪು ಅವರು ಇದಕ್ಕಾಗಿ personification ಅಂದರೆ ವ್ಯಕ್ತಿರೂಪಾಂತರದ ತಂತ್ರವನ್ನು ಆಧರಿಸಿ ಮೃತ್ಯುದೇವತೆ ಮತ್ತು ವೃಕ್ಷಭೈರವ ಸಂವಾದವನ್ನು ಸೃಷ್ಟಿಸಿದ್ದಾರೆ. ಇವರಿಬ್ಬರೂ ಶಂಭೂಕನ ಆಶ್ರಮದ ಹಿತಕ್ಕೆ ರಕ್ಷಣೆಗೆ ಬದ್ಧರಾಗಿದ್ದಾರೆ. ಆದರೆ ಪರಸ್ಪರ ಅಂತರಂಗವನ್ನು ಅರಿಯದೆ ಮುಖಾಮುಖಿಯಾಗಿ ಮಾತನಾಡುತ್ತಾರೆ. ಚರ್ಚೆ ಮತ್ತು ಸಂವಾದದ ನಂತರ ಇವರಿಬ್ಬರ ವಿರುದ್ಧಭಾವ ಶಮನವಾಗುತ್ತದೆ.

ಈ ನಾಟಕದಲ್ಲಿ ಬರುವ ಬ್ರಾಹ್ಮಣ ಒಬ್ಬ ಸನಾತನಿ. ವರ್ಣಧರ್ಮ ಪಾಲನೆಯ ಮೂಲಕ ದತ್ತವಾಗಿ ಬರುವ ಎಲ್ಲಾ ಸವಲತ್ತುಗಳನ್ನು ಆನುಭವಿಸುತ್ತಿರುವ ಫಲಾನುಭವಿ. ಈತ ತನ್ನ ಮಗನ ಆಕಸ್ಮಿಕ ಮರಣಕ್ಕೆ ಶಂಭೂಕ ಮಹರ್ಷಿಯ ತಪೋಮಗ್ನತೆಯೇ ಕಾರಣವೆಂದು ಬೊಬ್ಬೆ ಹಾಕುತ್ತಾನೆ. ಇದಕ್ಕಾಗಿ ಶ್ರೀರಾಮನ ಬಳಿಗೆಯ್ದು , ವರ್ಣಧರ್ಮದ ಉಲ್ಲಂಘನೆ ಮಾಡಿರುವ ಶಂಭೂಕನ ವಧೆ ಮಾಡಲು ಶ್ರೀರಾಮನನ್ನು ಒತ್ತಾಯಿಸಿ ಶಂಭೂಕಾಶ್ರಮಕ್ಕೆ ತಾನೇ ಖುದ್ದಾಗಿ ಕರೆತಂದು ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಒತ್ತಾಯಿಸುತ್ತಾನೆ.

ಬ್ರಾಹ್ಮಣ:
ಶೂದ್ರನ್ ತಪಂಗೆಯ್ವೊಂದು ಅಧರ್ಮಕ್ಕೆ
ವರ್ಣಾಶ್ರಮ ಧರ್ಮದುಲ್ಲಂಘನೆಯ ಪಾಪಕ್ಕೆ
ನಿನ್ನ ಬಾಲಪ್ರಜೆಯೊರ್ವನ್ ಬಲಿಯಾದನ್
ಮುಂದಾವ ಮಹತ್ಕಾರ್ಯಮಂ ಗೆಯ್ಯಲಿರ್ದನೋ?
ಆವ ಶಾಸ್ತ್ರವನೊರೆಯಲಿರ್ದನೋ?
ಆವ ಕಬ್ಬಮಂ ಕಟ್ಟಲಿರ್ದನೋ?
ಆವ ತಪದಿಂದಾವ ಸಿದ್ಧಿಯಂ ಪಡೆಯಲಿರ್ದನೋ?
ಆ ಪ್ರಜೆ ಶೂದ್ರನ ತಪೋದುಷ್ಕೃತಿಗೆ ಬೇಳ್ವೆಯಾದನ್ ಪಾವಗಿದು ತೀರ್ದನ್ !

ಶ್ರೀರಾಮ:
ಈ ವರ್ಣ ಗರ್ವಾಂಧಂಗೆ
ಈ ಶಾಸ್ತ್ರಮೂರ್ಖಂಗೆಂತೊ ಬುದ್ಧಿಗಲಿಪೆನ್
ಶಂಭೂಕನ್ ಮಹಾಯೋಗಿ
ತಪಸ್ವಿಯ ತಿರಸ್ಕೃತಿಗೆ ಮುನಿದ ಧರ್ಮಂ
ತಂದುದೀತನ ಮುದ್ದು ಕಂದಂಗೆ
ನನ್ನ ರಾಜ್ಯದೊಳುಂ ಅಕಾಲ ಮೃತ್ಯುವಂ!
ತನ್ನ ತಪ್ಪನೆ ತಿಳಿಯಲಾರದೀತನ್-
ಮರೆಯಿಂದಮೆನ್ನನ್
ಬಹಿರಂಗಮಾ ಶಂಬೂಕಯೋಗಿಯನ್
ನಿಂದಿಸುತ್ತಿರ್ಪನ್!

ಬ್ರಾಹ್ಮಣ:
– ಇದೇನ್?
ತಪಂಗೆಯ್ವ ಪಾಷಂಡಿಗೆ ಕೈ ಮುಗಿವನೋ?
ಮೇಣ್ ಬಿಲ್ಗೆ ಹೆದೆಯಂ ಬಲಿವ ಬಿಜ್ಜೆಯ ಪಾಂಗೊ?
ಅರಿಯೆನೀ ಪಾರ್ಥಿವೇಂದ್ರನ ವಿಚಿತ್ರಕೃತಿಯಂ!
– ಕೇಳ್ ವರ್ಣಾಶ್ರಮ ಧರ್ಮಪಾಲಕ
ಪಾಲ್ ಪೂಜ್ಯಮಾದೊಡಂ
ತ್ಯಾಜ್ಯಮಾ ನಾಯ ಪಾಲ್ !
ನಾಯ ಪಾಲ್ಗೆಣೆ ಶೂದ್ರನ ತಪಂ !
ಶೂದ್ರನ ತಪಸ್ಸು ಮತ್ತು ನಾಯಿ ಹಾಲು ಇವೆರಡೂ ಸ್ವೀಕಾರಕ್ಕೆ ಯೋಗ್ಯವಲ್ಲ. ಹಾಲಾಗಿದ್ದರೂ ನಾಯಿಹಾಲು ಹೇಗೆ ತ್ಯಾಜ್ಯವೋ ಹಾಗೇ ಶೂದ್ರನ ತಪಸ್ಸು ಪರಿತ್ಯಾಜ್ಯವಾದುದು ಎಂಬ ಪ್ರತಿಪಾದನೆಯನ್ನು ಬ್ರಾಹ್ಮಣ ಮಾಡುತ್ತಾನೆ. ಅಷ್ಟೇ ಅಲ್ಲ ಶೂದ್ರನ ತಪೋಕರ್ಮವು ಧರ್ಮಶಾಸ್ತ್ರ ಗ್ರಂಥಗಳ ಉಲ್ಲಂಘನೆ ಆಗಿರುವುದರಿಂದ, ಶೂದ್ರತಪಸ್ವಿಯನ್ನು ವಧಿಸಬೇಕೆಂದು ಬ್ರಾಹ್ಮಣನು ಶ್ರೀರಾಮನಿಗೆ ಒತ್ತಾಯಿಸಿ, ರಾವಣನನ್ನು ಸಂಹಾರ ಮಾಡಿದ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಲು ಒತ್ತಾಯಿಸುತ್ತಾನೆ. ವಾಲ್ಮೀಕಿಯ ರಾಮ ಬ್ರಾಹ್ಮಣನ ಆದೇಶದಂತೆ ನಡೆದು ಶಂಭೂಕನ ಶಿರಚ್ಛೇದ ಮಾಡುತ್ತಾನೆ. ಆದರೆ ಕುವೆಂಪು ರಾಮನು ಉಚಿತಾನುಚಿತ ವಿವೇಕವುಳ್ಳವನು, ಸುಜ್ಞಾನಿ.
ಶ್ರೀರಾಮ: (ಬ್ರಹ್ಮಾಸ್ತ್ರಕ್ಕೆ ನಮಸ್ಕರಿಸುತ್ತಾ) “ಅರಸಿ ಕೊಲ್ ಅರಗುಲಿಯನ್!” ಎಂದು ಪ್ರಾರ್ಥಿಸುತ್ತಾನೆ.

ಅರಗುಲಿ ಎಂದರೆ ಧರ್ಮಘಾತಕ. ಯಾರು ಧರ್ಮವನ್ನು ಉಲ್ಲಂಘನೆ ಮಾಡಿದ್ದಾರೋ ಅವನನ್ನು ಹುಡುಕಿ ಕೊಲ್ಲು ಎಂದು ಕುವೆಂಪು ರಾಮನು ಜಾಣ್ಮೆ ಮತ್ತು ಸಂಯಮದಿಂದ ವರ್ತಿಸುತ್ತಾನೆ. ಈ ಸಂದರ್ಭದಲ್ಲಿ ನನಗೆ ನನ್ನ ಗೆಳೆಯ
ರಮೇಶಚಂದ್ರ ದತ್ತ ನಿರ್ದೇಶನದ ಶೂದ್ರ ತಪಸ್ವಿ ನಾಟಕ ಪ್ರದರ್ಶನ ನೆನಪಾಗುತ್ತದೆ. ಬ್ರಹ್ಮಾಸ್ತ್ರವನ್ನು ರಮೇಶಚಂದ್ರದತ್ತ ಮೂರ್ತರೂಪದಲ್ಲಿ ತೋರಿಸುತ್ತಾ ಕೋಲಾ ವೇಷಧಾರಿ ಮತ್ತು ಮೃತ್ಯುದೇವತೆಯನ್ನು ಒಬ್ಬರ ಹಿಂದೊಬ್ಬರಂತೆ ತೋರಿಸುತ್ತಾರೆ. ಕೋಲಾ ವೇಷದ ಬ್ರಹ್ಮಾಸ್ತ್ರ ಆವೇಶದಿಂದ ತಪೋಮಗ್ನ ಶೂದ್ರತಪಸ್ವಿಯ ಕಡೆಗೆ ನುಗ್ಗುತ್ತದೆ. ಆದರೆ, ಶೂದ್ರತಪಸ್ವಿಯ ಬಳಿಗೆ ಬಂದು ಶಾಂತವಾಗಿ, ಆತನಿಗೆ ಪ್ರದಕ್ಷಿಣೆ ಹಾಕಿ ಬ್ರಾಹ್ಮಣನ ಕಡೆಗೆ ಮುಖ ಮಾಡುತ್ತದೆ.

ಈ ಸಂದರ್ಭದಲ್ಲಿ ಬ್ರಹ್ಮಾಸ್ತ್ರ, ಕೋಲಾ ವೇಷಧಾರಿಯ ಔಚಿತ್ಯವನ್ನು ಗ್ರಹಿಸಬೇಕು. ಕೋಲಾ ವೇಷವನ್ನು ಕುಲೀನ ಜನರಾರೂ ತೊಡುವುದಿಲ್ಲ. ಅಸ್ಪೃಶ್ಯರೇ ಕೋಲಾ ವೇಷ ತೊಡುವುದು. ಶ್ರೀರಾಮನು ಕೋಲಾ ವೇಷದ ಬ್ರಹ್ಮಾಸ್ತ್ರಕ್ಕೆ ನಮಸ್ಕಾರ ಮಾಡುವುದೆಂದರೆ, ಅಸ್ಪೃಶ್ಯರಿಗೆ ನಮಸ್ಕಾರ ಮಾಡಿದಂತೆಯೇ. ಇದು ಕುವೆಂಪು ಅವರ ಆಶಯಕ್ಕೆ ಪೂರಕವಾಗಿದೆ. ಕಾಂತಾರ ಸಿನೆಮಾದ ಕೋಲಾ ವೇಷದ ಜನಪ್ರಿಯತೆ ಎಲ್ಲರಿಗೂ ಗೊತ್ತಿದೆ. ಕಾಂತಾರ ಸಿನೆಮಾಗಿಂತ ಮುಂಚೆಯೇ ರಮೇಶಚಂದ್ರ ದತ್ತ ಅವರು ಕೋಲಾ ವೇಷದ ಬ್ರಹ್ಮಾಸ್ತ್ರವನ್ನು ರಂಗದ ಮೇಲೆ ತಂದಿದ್ದರೆಂಬುದನ್ನು ಇಲ್ಲಿ ಸ್ಮರಿಸಬೇಕು.

ಕೋಲಾ ವೇಷದ ಬ್ರಹ್ಮಾಸ್ತ್ರ ತನ್ನ ಕಡೆಗೆ ನುಗ್ಗಿ ಬರುವುದನ್ನು ಮನಗಂಡ ಬ್ರಾಹ್ಮಣನಿಗೆ ಮರಣಭೀತಿ ಉಂಟಾಗಿ, ಶ್ರಿರಾಮನನ್ನು ಶರಣು ಕೋರುತ್ತಾನೆ. ಶ್ರಿರಾಮನು ಶೂದ್ರ ತಪಸ್ವಿಗೆ ಮೊರೆ ಹೋಗಲು ಹೇಳುತ್ತಾನೆ. ತನ್ನ ತಪ್ಪನ್ನು ಅರಿತ ಬ್ರಾಹ್ಮಣನ ಮನಃಪರಿವರ್ತನೆಯಾಗುತ್ತದೆ. ಶೂದ್ರ ತಪಸ್ವಿಗೆ ಕೈಮುಗಿದು ಕ್ಷಮಾಯಾಚನೆ ಮಾಡುತ್ತಾನೆ. ತನ್ನ ಸುತ್ತಲೂ ಇಷ್ಟೆಲ್ಲಾ ಗಲಭೆ, ಗೊಂದಲ, ಅನಾಹುತ ನಡೆಯುತ್ತಿದ್ದರೂ ಶೂದ್ರತಪಸ್ವಿ ಮೌನವಾಗಿ ತಪೋಮಗ್ನ ಆಗಿರುತ್ತಾನೆ. ನಿಃಶಬ್ದವು ಸುಂದರ (ಸೈಲೆನ್ಸ್ ಈಸ್ ಬ್ಯೂಟಿಫುಲ್) ಎಂಬುದಕ್ಕೆ ಇಡೀ ನಾಟಕ ನಿದರ್ಶನ.

ದ್ವಿಜ ಶಬ್ದದ ಮರುವ್ಯಾಖ್ಯಾನವನ್ನು ಕುವೆಂಪು ಈ ನಾಟಕದಲ್ಲಿ ತಂದಿದ್ದಾರೆ. ದ್ವಿಜ ಎಂದರೆ, (೧) ತಾಯಿ ಹೊಟ್ಟೆಯಲ್ಲಿ ಒಮ್ಮೆ (೨) ಉಪನಯನದಲ್ಲಿನ ಜನಿವಾರ ಧಾರಣೆಯಲ್ಲಿ ಒಮ್ಮೆ- ಒಟ್ಟು ಎರಡು ಸರ್ತಿ ಜನಿಸಿದವರು ಎಂದರ್ಥ. ಕುವೆಂಪು ಈ ಸ್ಥಾವರ ದೃಷ್ಟಿಯನ್ನು ನಿರಾಕರಿಸಿದ್ದಾರೆ. ಬ್ರಾಹ್ಮಣ ಕುಮಾರನು ತಾಯಿಗರ್ಭದಲ್ಲಿ ಒಮ್ಮೆ ಮತ್ತು ಶೂದ್ರತಪಸ್ವಿಯ ಮಹಿಮೆಯಿಂದ ಈಗ ಎರಡು ಸರ್ತಿ ಜನಿಸಿದಂತಾಯಿತು ಎಂದು ವ್ಯಾಖ್ಯಾನಿಸಿದ್ದಾರೆ:

ಶ್ರೀರಾಮ:
ನಮಸ್ಕರಿಸು ಮಹಾ ತಪಸ್ವಿಗೆ, ದ್ವಿಜ ಕುಮಾರ !
ಋಷಿಕೃಪೆಯಿಂ ನೀನೀಗಳ್ ದಿಟದಿಂ ದ್ವಿಜನ್
ತಪಂ ತಾನಿರ್ಪೆಡೆಯೊಳೆ ದೂರಕರ್ಮಿ !

ಶೂದ್ರತಪಸ್ವಿ ನಾಟಕವು ಸನಾತನ ವರ್ಣಾಶ್ರಮದ ಕಟು ವಿಡಂಬನೆಯಾಗಿದೆ. ವರ್ಣಗರ್ವಾಂಧರು ಮತ್ತು ಶಾಸ್ತ್ರಮೂರ್ಖರಿಗೆ ಗುಣಪಾಠ ಹೇಳುವಂತಿರುವ ಈ ನಾಟಕವು ಆರಂಭದಲ್ಲೇ ಹೇಳಿದಂತೆ, ಪುರಾಣದ ಮಾರುವೇಷ ತೊಟ್ಟ ಪ್ರಸ್ತುತ ಕಾಲದ ಸಾಮಾಜಿಕ ವಿಡಂಬನೆಯಾಗಿದೆ.

ಜಲಗಾರ ( 1928 ) = ಜಾಡಮಾಲಿ

ಬೀದಿಯಲ್ಲಿ ಕಸ ಗುಡಿಸುವ ಜಲಗಾರ ಕಾಯಕಯೋಗಿ. ಶರಣರ ಕಾಯಕವೇ ಕೈಲಾಸ ತತ್ವದ ಪ್ರತೀಕವಾಗಿ ಜಲಗಾರ ಕಂಡುಬರುತ್ತಾನೆ. ವಿದ್ಯೆ ಮತ್ತು ಎದೆಯರಿವುಗಳ ವ್ಯತ್ಯಾಸ ಬಲ್ಲವನು: ಆತ ಕಾಯಕಯೋಗಿ, ಕಾಯಕವೇ ಶಿವಪೂಜೆ.
ಅರಿಸ್ಟಾಟಲ್ ಹೇಳಿರುವ ಐಕ್ಯತ್ರಯಗಳು: ಕ್ರಿಯೈಕ್ಯ + ಕಾಲೈಕ್ಯ + ಸ್ಥಳೈಕ್ಯ ಕುವೆಂಪು ನಾಟಕಗಳಲ್ಲಿ ಪಾಲನೆ ಆಗಿದೆ. ಶೂದ್ರತಪಸ್ವಿ , ಜಲಗಾರ, ಶ್ಮಶಾನ ಕುರುಕ್ಷೇತ್ರಂ , ಬೆರಳ್ಗೆ ಕೊರಳ್ ಮುಂತಾದ ನಾಟಕಗಳು ಸೂರ್ಯೋದಯದಿಂದ ಆರಂಭವಾಗಿ ಸೂರ್ಯಾಸ್ತಕ್ಕೆ ಕೊನೆಗೊಳ್ಳುವ ನಾಟಕಗಳೇ ಆಗಿವೆ. ಜಲಗಾರ ನಾಟಕದ ಆರಂಭದಲ್ಲಿ ಉಷಃಕಾಲ ಮತ್ತು ಅಂತ್ಯದಲ್ಲಿ ಸಂಧ್ಯಾಕಾಲದ ವರ್ಣನೆಯಿದೆ. ಉಷೆ ಮತ್ತು ಸಂಧ್ಯೆಯರ ಪರ್ಸಾನಿಫಿಕೇಷನ್ ನಾಟಕದಲ್ಲಿದೆ.

“ಬಿಜ್ಜೆಯೇಂ ತೋರ್ಕುಮೇ ಎದೆಯರಿವು ತೋರದಾ ಪರಮನಂ?” ವಿದ್ಯಾವಂತ ಯುವಕರಲ್ಲಿ ಕಂಡುಬಾರದ ಎದೆಯ ಅರಿವು ಜಲಗಾರನಲ್ಲಿದೆ. ದುಡಿಮೆಯೇ ದೇವರು ಎಂದರಿತ ಜಲಗಾರನ ನುಡಿಗಳಿವು: ನನ್ನ ಭಾಗಕೆ ಪೊರಕೆ ಆರತಿ, ಗುಡಿಸುವುದೆ ನನ್ನ ದೇವರಪೂಜೆ! – ತೆರಳು ಯುವಕನೆ ತೆರಳು! ಶಿವನ ಗುಡಿಯೊಳಗರಸು, ನಾನು ಪುಡಿಯೊಳಗವನನು ಅರಸುವೆನು. [ಗುಡಿ * ಪುಡಿ = ದೇಗುಲ ಮತ್ತು ಕಸ, ಕಸ = ಉಪಯೋಗಕ್ಕೆ ಬಾರದ ತ್ಯಾಜ್ಯವಸ್ತು.]

ಚತುರ್ವರ್ಣಗಳಲ್ಲಿ ಮೊದಲೆರಡು- ಬುದ್ಧಿಶಕ್ತಿಯನ್ನು ಪ್ರತಿನಿಧಿಸುವ ಬ್ರಾಹ್ಮ ಮತ್ತು ದೇಹಶಕ್ತಿಯನ್ನು ಪ್ರತಿನಿಧಿಸುವ ಕ್ಷಾತ್ರ, ಇವೆರಡೂ ಒಂದಾಗಿ ಉಳಿದೆಲ್ಲಾ ಜನಶಕ್ತಿಯನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಆಳಿದ ಇತಿಹಾಸವೇ ಭಾರತದಲ್ಲಿ ಮಾತ್ರವಲ್ಲ ವಿಶ್ವವ್ಯಾಪಿಯಾಗಿದೆ. ಇದನ್ನರಿತ ವಿಚಾರವಂತ ತರುಣರು ಮುಗ್ಧ ಜನತೆಯನ್ನು ಎಚ್ಚರಿಸಬೇಕು ಎಂಬ ಆಶಯ ಕುವೆಂಪು ಅವರಲ್ಲಿದೆ:

ಎರಡನೆಯ ತರುಣ:
“ಮೊದಲ ಠಕ್ಕನು ಮೊದಲ ಬೆಪ್ಪನಂ ಸಂಧಿಸಲು
ಸಂಭವಿಸಿತೆಂಬರೀ ಮತ ಎಂಬ ಮತಿವಿಕಾರಂ!
ದೊರೆ ಪುರೋಹಿತರ್ ಅವಳಿಮೊಲೆಯೂಡಿ ಸಲಹಿದರದಂ
ಮತದ ಮದಿರೆಯನೀಂಟಿ ಮಂಕು ಬಡಿದಿದೆ ಜನಕೆ.
ಕೊನೆ ದೊರೆಯ ಕೊರಳಿಗಾ ಕೊನೆ ಪುರೋಹಿತನ ಕರುಳ್
ಉರುಳಾಗುವ ವರೆಗೆ ಸುಖವಿಲ್ಲ ಈ ಧರೆಗೆ!”…

ರೈತಾಪಿ ಜನರು ಬಹುಮುಗ್ಧರು. ಗುಡಿ ಗೋಪುರಗಳೆಂದರೆ ಬಲು ಭಕ್ತಿ. ರೈತಾಪಿ ವರ್ಗವನ್ನು ಪ್ರತಿನಿಧಿಸುವ ರೈತನು ಜಲಗಾರ ನಾಟಕದಲ್ಲಿದ್ದಾನೆ. ರೈತನಿಗೂ ಜಲಗಾರನಿಗೂ ಮಧ್ಯೆ ನಡೆಯುವ ಮಾತುಕತೆಯನ್ನು ಕುವೆಂಪು ಅವರು ಜೆನ್ ಕಥಾ ಪ್ರಸಂಗದಂತೆ ಕಟ್ಟಿ ಕೊಟ್ಟಿದ್ದಾರೆ:

ರೈತ ಮತ್ತು ಜಲಗಾರ ಸಂವಾದ:

ರೈತ: ಜಲಗಾರ, ಏನಿನ್ನೂ ಕೆಲಸ ಪೂರೈಸಲಿಲ್ಲವೇ ?
ಜಲಗಾರ: ಇಲ್ಲ , ಕರ್ಮ ಮುಗಿಯುವ ಕಾಲ ಬಂದಿಲ್ಲವಿನ್ನೂ, ಶಿವನ ಗುಡಿಯಿಂದೇನು ತಂದಿರುವೆ ರೈತ?
ರೈತ: ಜಲಗಾರ, ಪುಣ್ಯವಿಲ್ಲವೋ ನಿನಗೆ, ಜಾತ್ರೆಯದು ವೈಭವದ ಜಾತ್ರೆ! ಜನವೇನು, ಧನವೇನು! ಆ ಗಲಭೆಯೇನು! ನೋಟಗಳೋ ಬಹುರಮ್ಯ! ನಾನದನು ಹೇಳಿ ಮುಗಿಸಲಾರೆ!
ಜಲಗಾರ: ಇರಲಿಯದು, ಶಿವನ ಗುಡಿಯಿಂದೇನು ತಂದಿರುವೆ?
ರೈತ: ಆಹಾ, ಶಿವನ ಗುಡಿ ದೊಡ್ಡ ಗುಡಿ ! ಏನು ಚಿತ್ರದ ಕೆಲಸ ! ವಿಗ್ರಹವು ಬಲು ಚಂದ! ಜೋಯಿಸರ ಮಡಿಪಂಚೆ ಜರತಾರಿಯಪ್ಪಾ! ಆ ಪರಿಯ ವೈಭವವ ನಾನಂತು ನೋಡಿಲ್ಲ!
ಜಲಗಾರ: ಅದಂತಿರಲಿ, ರೈತ, ಶಿವನ ಗುಡಿಯಿಂದೇನು ತಂದಿರುವೆ ?
ರೈತ: ಹಳ್ಳಿಯ ಗಮಾರ ಮೇಲೂರ ಜಲಗಾರ ನಿನಗೇನು ಗೊತ್ತು! ಆ ಅಂದ, ಆ ಚಂದ! ಆರತಿಯ ನೋಡಿದೆನು! ಗಂಟೆ ಜಾಗಟೆಗಳನು ಬಾರಿಸಿದೆ! ಮಂತ್ರ ಹೇಳಿದರದನು ಕೇಳಿದೆ! ಹಣ್ಕಾಯಿ ಮಾಡಿಸಿದೆ! ಕರ್ಪೂರ ಉರಿಸಿದೆ! ಹರಕೆಯನು ಸಲ್ಲಿಸಿದೆ! ಮತ್ತೇನು!
ಜಲಗಾರ: ಅದಂತಿರಲಿ, ಶಿವನ ಗುಡಿಯಿಂದೇನು ತಂದಿರುವೆ ಹೇಳು?
ರೈತ: ಹಣ್ಣು ಕಾಯಿ ಹೂವು ಕರ್ಪೂರ ಕುಂಕುಮ ಇವುಗಳನು ತಂದಿರುವೆ!
ಜಲಗಾರ: ಶಿವನ ತರಲಿಲ್ಲವೆ?
ರೈತ: ಮರುಳು ಜಲಗಾರ, ನಿನ್ನೊಡನೆ ಮಾತೇಕೆ!

ಈ ರೈತ ಮತ್ತು ಜಲಗಾರ ಸಂವಾದ ನಿಃಶಬ್ದವಾಗಿ ಒಳಗಿನ ಕಣ್ಣನ್ನು ತೆರೆಸುತ್ತದೆ. ಹೊರಗಿನ ಶಬ್ದಮಯ ಜಗತ್ತು ಮತ್ತು ನಿಃಶಬ್ದದ ಒಳಜಗತ್ತು ಇವೆರಡರ ಅಂತರವನ್ನು ಕುವೆಂಪು ಅನುಭವಿಸಿ ಹೇಳಿದ್ದಾರೆ. ಈ ರೈತ ಮತ್ತು ಜಲಗಾರ ಸಂವಾದದ ಇಡೀ ದೃಶ್ಯವು ಜೆನ್ ಕಥಾ ಪ್ರಸಂಗದಂತಿದೆ. ಶಿವನ ಗುಡಿಗೆ ಹೋಗಿ ಬಂದವರಲ್ಲಿ ಎದೆಯ ಅರಿವು ಇಲ್ಲದ್ದನ್ನು ಈ ಸಂವಾದ ಭಾಗವು ತೋರಿಸಿ ಕೊಡುತ್ತದೆ.

ಬೆಳಿಗ್ಗೆಯಿಂದ ಕಸಗುಡಿಸುತ್ತಾ ಕಾಯಕಮಗ್ನನಾಗಿದ್ದ ಜಲಗಾರ ಸ್ವಲ್ಪ ಹೊತ್ತು ಬಿಡುವಾಗಿ ಕುಳಿತುಕೊಳ್ಳುತ್ತಾನೆ: “ಕುಳಿತಿಲ್ಲಿ ಶಿವನಂ ಧ್ಯಾನಿಸುವೆ. ಸದ್ದಿಲ್ಲದ ಏಕಾಂತದಲ್ಲಿಯೇ ಭಕ್ತಿಲತೆ ಚಿಗುರಿ ಪರಮಾತ್ಮನ ಅಡಿಯೆಲರುಗಳ ಮುಟ್ಟುವುದು – ಲೋಕವರಿಯದು ಸಿದ್ಧರೆನಿತಿಹರು ಜಲಗಾರರಾಗೆಂದು…

ಸದ್ದುಗದ್ದಲ, ಮಂಗಳವಾದ್ಯಗಳ ಬಾಜಾ ಭಜಂತ್ರಿ, ಮೆರವಣಿಗೆ, ಆಡಂಬರದಲ್ಲಿ ಮುಳುಗಿ ಹೋದವರಿಗೆ ಸತ್ಯ ದರ್ಶನವಾಗುವುದಿಲ್ಲ. ಸದ್ದಿಲ್ಲದ ಏಕಾಂತದಲ್ಲಿಯೇ (ಶಬ್ದದೊಳಗಿನ ನಿಃಶಬ್ದದಂತೆ ) ಭಕ್ತಿಲತೆ ಚಿಗುರಿ ಪರಮಾತ್ಮನ ಅಡಿದಾವರೆಗಳನ್ನು ಮುಟ್ಟುವುದು ಎಂಬ ಪ್ರತಿಪಾದನೆಯಲ್ಲಿ ಭಾರತೀಯ ಭಕ್ತಿಪಂಥದ ಸ್ಫೂರ್ತಿ ಅಡಗಿದೆ.

ಜನಜಂಗುಳಿಯ ಜಾತ್ರೆ ನಡೆಯುತ್ತಿರುವ ಶಿವಗುಡಿಯಲ್ಲಿ ಶಿವನಿಲ್ಲ ! ಪುಡಿಯನ್ನು ಗುಡಿಸುತ್ತಿರುವ ಕಾಯಕಯೋಗಿ ಜಲಗಾರನ ಬಳಿ ಶಿವನಿರುವನೆಂಬುದನ್ನು ಕುವೆಂಪು ಎತ್ತಿ ಹಿಡಿದಿದ್ದಾರೆ. ಅಷ್ಟೇ ಅಲ್ಲ ! ಬೀದಿಕಸ ಗುಡಿಸುವ ಜಲಗಾರ ಮತ್ತು ಬ್ರಹ್ಮಾಂಡದ ಬೀದಿಗಳ ಕಸದರಾಶಿ ಗುಡಿಸುವ ಜಗದ ಜಲಗಾರ (ಮೈಕ್ರೋ ಮತ್ತು ಮ್ಯಾಕ್ರೋ) ಎಂಬ ಅನನ್ಯ ಗ್ರಹಿಕೆಯನ್ನು ಕುವೆಂಪು ನಮ್ಮ ಮುಂದಿಟ್ಟಿದ್ದಾರೆ:

ಜಲಗಾರ ಮತ್ತು ಶಿವನ ಸಂವಾದ:

ಶಿವ: …ಬ್ರಹ್ಮಾಂಡ ಒತ್ತುತಿಹ ಕಸದರಾಸಿಯ ಮೇಲೆ ಹತ್ತಿ , ನಿಂತು, ನರ್ತನವೆಸಗುತಿಹ ತೋಟಿ ನಾನು! ನಿಜಶಿವನು ಜಲಗಾರ! ನಿನ್ನ ಮುಂದಿಹನು ನೋಡು!
ಜಲಗಾರ: ಹೇ ದೇವ ನೀನು ಮತ್ತೆಲ್ಲಿರುವೆ?
ಶಿವ: ಬೀದಿ ಗುಡಿಸುವ ಬಡವನೆದೆಯಲ್ಲಿ ನಾನಿರುವೆ, ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ, ಎಲ್ಲಿ ಹೊಲೆಯನು ನನ್ನ ಕಾರ್ಯದಲಿ ತೊಡಗಿಹನೊ ಅಲ್ಲಿ ನಾನವನ ಪಕ್ಕದೊಳಿರುವೆ! ಕುಂಟರನು ಕುರುಡರನು ದೀನರನು ಅನಾಥರನು ಕೈ ಹಿಡಿದು ಪೊರೆಯುತಿಹನ ಎಡೆಯಿರುವೆ!
ಊರತೋಟಿಯು ನೀನು, ಜಗದ ತೋಟಿಯು ನಾನು! ಬಾ ಎನ್ನ ಸೋದರನೆ, ನೀನೆನ್ನ ನಿಜಭಕ್ತ! ನಿನ್ನದೇ ಶಿವಭಕ್ತಿ , ನೀನೇ ಶಿವಭಕ್ತ! ನೀನೇ ನಾನಾಗಿಹೆನು, ನಾನೇ ನೀನಾಗಿರುವೆ! ಶಿವ ನೀನು! ಶಿವ ನೀನು!
[ಜಲಗಾರ ಮತ್ತು ಶಿವ ಇವರಿಬ್ಬರ ಸಮಾನಧರ್ಮ ಅಸ್ಪೃಶ್ಯತೆ ಎಂಬ ಗ್ರಹಿಕೆ ಅತ್ಯಪೂರ್ವವಾಗಿದೆ]

ಇವೇ ನಾಟಕದ ಕೊನೆಯ ನುಡಿಗಳು. ಶಿವನಿಗೂ ಜಲಗಾರನಿಗೂ ಮಧ್ಯೆ ಅದ್ವೈತ ಸಂಬಂಧವನ್ನು ಸಾಕ್ಷಾತ್ ಶಿವನೇ ಹೇಳುತ್ತಿರುವ ಮಾತಿನಿಂದ ನಾಟಕವು ಕೊನೆಯಾಗಿದೆ ಎಂಬುದು ಗಮನಾರ್ಹ.

ಸೋದರಿಭಾಷೆಯಾದ ತೆಲುಗಿನಲ್ಲಿ – గబ్బిలము ಎಂಬ ಖಂಡಕಾವ್ಯ ರಚನೆಯಾಗಿದ್ದು గుర్రం జాషువా ಇದರ ಕರ್ತೃ ಆಗಿದ್ದಾರೆ. ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯ ಸಮಾಜದಲ್ಲಿ ಅವಮಾನದಿಂದ ನರಳುತ್ತಾ ಸಾಮಾಜಿಕ ಬಹಿಷ್ಕೃತನಾಗಿ, ಊರಾಚೆಯಲ್ಲೇ ಜೀವಿಸುತ್ತಿರುವ ಅಸ್ಪೃಶ್ಯನೊಬ್ಬನು ತನ್ನ ನೋವನ್ನು ಪರಮೇಶ್ವರನಿಗೆ ಅರಹುವಂತೆ ತೊಗಲು ಬಾವಲಿಯನ್ನು ಸಂದೇಶಹಾರಿಯಾಗಿ ಪರಿಗ್ರಹಿಸಿ, ಇದರ ಮೂಲಕ ದುಃಖ ತೋಡಿಕೊಳ್ಳುತ್ತಾನೆ. ಕಾಳಿದಾಸನು ಮೇಘಸಂದೇಶದ ಮೂಲಕ ವಿರಹಾಗ್ನಿ ಪೀಡಿತನಾದ ಯಕ್ಷನೊಬ್ಬನು ತನ್ನ ಪ್ರೇಯಸಿಗೆ ಸಂದೇಶ ಕಳಿಸುವಂತೆ, ಇಲ್ಲಿ ಕ್ಷುದಾಗ್ನಿ ಪೀಡಿತ ಅಸ್ಪೃಶ್ಯನು ಜಗದ್ರಕ್ಷಕನಾದ ಪರಮೇಶ್ವರನಿಗೆ ಇತ್ತ ಪ್ರಾಣಿಯೂ ಅಲ್ಲದ ಅತ್ತ ಪಕ್ಷಿಯೂ ಅಲ್ಲದ ತೊಗಲುಬಾವಲಿ ಮೂಲಕ ತನ್ನ ಅವಮಾನ ಮತ್ತು ಸಾಮಾಜಿಕ ಬಹಿಷ್ಕಾರದ ನೋವನ್ನು ತೋಡಿಕೊಳ್ಳುತ್ತಾನೆ. ಅಸ್ಪೃಶ್ಯ ಮತ್ತು ತೊಗಲುಬಾವಲಿ ಸಮಾನಧರ್ಮಿಗಳೆಂದು ಜಾಷುವಾ ಹೇಳಿದ್ದಾರೆ. ಇವರಿಬ್ಬರೂ ಹಾಳುಕುಟೀರ ಕೊಂಪೆಗಳಲ್ಲಿ ವಾಸ ಮಾಡುವವರು. ಇವರಿಬ್ಬರಿಗೆ ಬಾಳಿನಲ್ಲಿ ಬೆಳಕು ಇಲ್ಲ. ಕತ್ತಲೆಯಲ್ಲಿ ಮುಳುಗಿ ಹೋದವರು. ಕುಲೀನರಿಗೆ ರಾಜಹಂಸಗಳು, ಗಿಳಿಗಳು ಸಂದೇಶಹಾರಿಗಳಾಗಿ ಸಿಗುತ್ತವೆ. ಕುಲಹೀನನಾದ ತನಗೆ ನಿಕೃಷ್ಟವಾದ ತೊಗಲುಬಾವಲಿಯೇ ಸಮದುಃಖಿಯೆಂದು ಜಾಷುವಾ ಕಲ್ಪಿಸಿಕೊಂಡು ಬರೆದಿದ್ದಾರೆ:
“ಆಲಯಂಬುನ ನೀವು ತಲಕ್ರಿಂದುಗಾ ವ್ರೇಲಾಡುವೇಳ ಶಿವುನಿ ಚೆವಿ ನೀಕು ಕೊಂತ ಚೇರುವುಗಾ ನುಂಡು, ಮಾನಿ ಖಗರಾಜ್ಞಿ! ಪೂಜಾರಿ ಲೇನಿವೇಳ ಶಿವುನಿಕಿ ವಿನ್ನವಿಂಪುಮು ನಾದು ಜೀವಿತಗಾಥಾ!” (ಅಂದರೆ- ಆಲಯದಲ್ಲಿ ನೀನು ತಲೆಕೆಳಗಾಗಿ ನೇತಾಡೋ ವೇಳೆ ಶಿವನ ಕಿವಿ ನಿನಗೆ ಹತ್ತಿರವಾಗಿರುವುದು! ಸ್ವಾಭಿಮಾನಿ ಪಕ್ಷಿ ರಾಣಿ, ಪೂಜಾರಿಯಿಲ್ಲದ ವೇಳೆ ಶಿವನಿಗೆ ಬಿನ್ನವಿಸು ನನ್ನ ಜೀವನಗಾಥೆ!)

ತೆಲುಗು ಸಾಹಿತ್ಯದಲ್ಲಿ ಯುಗಪ್ರವರ್ತಕನಾದ ಕವಿಯೆಂದು ಹೆಸರಾದ ಗುರ್ರಂ ಜಾಷುವಾ ಅವರು ಮುಂದೆ ಬಂದ ತೆಲುಗು ವಿಪ್ಲವ ಕಾವ್ಯಪ್ರವಾಹಕ್ಕೆ ಭಾವಗಂಗೋತ್ರಿಯಾಗಿ ಕಂಡುಬರುತ್ತಾರೆ.

ಶ್ಮಶಾನ ಕುರುಕ್ಷೇತ್ರಂ: (1931)

ಈ ನಾಟಕದ ಆರಂಭದಲ್ಲಿ ದ್ವಾಪರಯುಗ ಮುಗಿದು ಕಲಿಯುಗ ಆರಂಭವಾಗುವ ಸೂಚನೆಯಿದೆ. ಕುರುಕ್ಷೇತ್ರ ಯುದ್ಧದ ಕಡೆಯದಿನ, ಊರುಭಂಗ ಮತ್ತು ಮುಕುಟ ಭಂಗಕ್ಕೊಳಗಾಗಿ ದುರ್ಯೋಧನ ಧರಾಶಾಯಿಯಾಗಿದ್ದಾನೆ. ಅಶ್ವತ್ಥಾಮನು ರಾತ್ರಿಯಲ್ಲಿ ಪಾಂಡವರ ಪಾಳೆಯಕ್ಕೆ ದಾಳಿಯಿಟ್ಟು ಉಪಪಾಂಡವರನ್ನು ಹತ್ಯೆ ಮಾಡಿದ್ದಾನೆ. ದ್ವಾಪರ ಮತ್ತು ಕಲಿಯ ಸಂಧಿಕಾಲ ಹಾಗೂ ಯುಗ ಪರಿವರ್ತನೆಯ ಮೂರ್ತರೂಪವಾಗಿ ಪರ್ಸಾನಿಫಿಕೇಷನ್ ಮೂಲಕ ಕುವೆಂಪು ಅವರು ದ್ವಾಪರನ ನಿರ್ಗಮನ ಮತ್ತು ಕಲಿಯ ಆಗಮನ ಪ್ರಸಂಗವನ್ನು ಸೃಷ್ಟಿಸಿದ್ದಾರೆ. ಇವರಿಬ್ಬರ ಭೇಟಿ ಮತ್ತು ಸಂವಾದದಲ್ಲಿ (೧) ದ್ವಾಪರನ ವಿಷಾದ ಮತ್ತು ನಿರಾಶೆ (೨) ಕಲಿಯ ಉತ್ಸಾಹ ಮತ್ತು ಭರವಸೆ ಕಂಡು ಬರುತ್ತದೆ. ಕಲಿಯ ನುಡಿಗಳಿವು:

“ಸಾವಿನಲಿ ಹೊಸಬಾಳು ಹುದುಗಿಹುದು; ನಾಶದಲಿ ನವಸೃಷ್ಟಿ ಪವಡಿಸಿದೆ, ನೂರು ಮಾತಿಂದೇನ್? ಸಾವೆ ಹೊಸಬಾಳಿಗಾಧಾರಮಾಗಿರ್ಪುದು ! ನಾಶಮೇ ನವಸೃಷ್ಟಿಗುತ್ಸಾಹಮಾದಪುದು !”
ಇದನ್ನು ವಿಧ್ವಂಸಕ ಆವಿಷ್ಕಾರ (Disruptive Innovation) ಎಂದು ಕರೆಯುತ್ತಾರೆ. ಪಂಪ, ರನ್ನರ ಮಾರ್ಗವನ್ನು ಅನುಸರಿಸಿ, ಕುವೆಂಪು ತಮ್ಮ ನಾಟಕದಲ್ಲೂ ಮರುಳುಗಳ ಪ್ರಸಂಗವನ್ನು ತಂದಿದ್ದಾರೆ:

ಮರುಳುಗಳ ಮಾತುಕತೆ: “ಮಾನವರ್ ಕೊಲೆಗೆ ಕೈಯಿಡೆ ಮಾರಿಯನ್ ಮೀರ್ದಪರ್!”… ಹಿಟ್ಲರ್ ನಡೆಸಿದ ಯಹೂದಿಗಳ ಮಾರಣಹೋಮವನ್ನು ಸ್ಮರಿಸಿಕೊಂಡರೆ, ಮರುಳುಗಳ ಮಾತಿನ ಪುರುಳು ಮನದಟ್ಟಾಗುತ್ತದೆ. ಈ ನಾಟಕದಲ್ಲಿ ಬುದ್ಧಗುರುವಿನ ಕರುಣಾ ಮೈತ್ರಿಯ ತತ್ವ ಧರ್ಮರಾಯನ ಮೂಲಕ ಅಭಿವ್ಯಕ್ತಿಗೊಂಡಿದೆ:

ಧರ್ಮರಾಯ:
“ಕಟ್ಟಕಡೆಯೊಳ್ ಎಮಗೆ ಕರುಣೆಯೇ ಶರಣ್ಯಂ…
ಕರವಾಲಕಿಂತಲುಂ ಕರ್ಕಶಂ ಕರುಣೆ;
ಶತ್ರುಗಳನೊಲಿಸುವುದು ಮಿತ್ರರನ್ ಮಾಡಿ.
ಭಗವಂತನೆರ್ದೆಗಿಂತಲುಂ ಕೋಮಲಂ ಕರುಣೆ
ಪರಮಾತ್ಮನೆರ್ದೆಯನೇ ಸೂರೆಗೊಂಡಪುದಲ್ತೆ ?
ಕೊಡುವವನ ಹರಸುವುದು, ಕೊಳ್ಳುವನ ಸಲಹುವುದು;
ಕರುಣೆಯೆಂಬೈಶ್ವರ್ಯಂ: ಆಳಿದೊಡಂ, ಉಳಿದೊಡಂ,
ಪೋದೊಡಂ, ಬಂದೊಡಂ, ಪಡೆದವನದಾವಗಂ
ಶ್ರೀಮಂತನಾಗಿರ್ಪನ್ ! ಪಡೆದು ಕೊಡುವರ್ಗೆ ಅದು ಮುಕ್ತಿಗೆ ಮಹಾದ್ವಾರಂ !…

ಹದಿನೆಂಟು ದಿನಗಳ ಕುರುಕ್ಷೇತ್ರ ಯುದ್ಧದ ರಕ್ತಪ್ರವಾಹದಲ್ಲಿ ಕೌರವ, ಕುಂತಿ ಮತ್ತು ಸಾಮಾನ್ಯಜನರು ಕರುಣಾ ಮೈತ್ರಿಯ ಕಾರ್ತಿಕದೀಪಗಳನ್ನು ತೇಲಿ ಬಿಡುತ್ತಾರೆ. ಕುಂತಿಯು ಕರ್ಣನ ಕಳೇವರ ಸಹಿತ ಕೋರುವ ಕೊನೆಯಾಸೆ ಈ ದೃಷ್ಟಿಯಿಂದ ಗಮನಾರ್ಹ. ಕೌರವನಿಗೆ ಕರ್ಣನ ಜೊತೆ ದಹನ ಮಾಡಿಸಿಕೊಳ್ಳುವುದು ಕೊನೆಯಾಸೆ ಆಗಿದ್ದರೆ, ಕುಂತಿಗೆ ತನ್ನ ಮೊದಲನೇ ಮಗ ಕರ್ಣನಿಗೆ ಉಚಿತ ರೀತಿಯಲ್ಲಿ ದಹನ ಮಾಡಿಸುವ ಕೊನೆಯಾಸೆ ಇರುತ್ತದೆ. ಇದು ಸ್ನೇಹಪಾಶ ಮತ್ತು ರಕ್ತಪಾಶದ ಸಂಘರ್ಷ. ಇದರಲ್ಲಿ ಗೆಲ್ಲುವುದು ಸ್ನೇಹಪಾಶವೆಂದು ಕುವೆಂಪು ಮನಗಾಣಿಸಿರುವುದು ಅತ್ಯಂತ ಸೂಕ್ತವಾಗಿದೆ.

ಸಾಮಾನ್ಯಜನರ ಪ್ರತಿನಿಧಿಗಳಾಗಿ ಮುದುಕಿ ಮತ್ತು ಮಾತೆಯ ಆಕ್ರಂದನ ಕೇಳಿಬರುತ್ತದೆ. ಇವರು ಯುದ್ಧದಲ್ಲಿ ಮಡಿದ ತನ್ನವರನ್ನು ಹುಡುಕುತ್ತಾ ಬರುತ್ತಾರೆ. ಮುದುಕಿಯ ಮಗ ಮತ್ತು ತಾಯಿಯ ಮಗ ಒಬ್ಬರನ್ನೊಬ್ಬರು ಕೊಂದುಕೊಂಡಿರುತ್ತಾರೆ. ಇದನ್ನು ಕಂಡು ದುಃಖಿಸುವ ಮುದುಕಿ ಮತ್ತು ಮಾತೆ ಹಾಕುವ ಶಾಪವಿದು: “ಪಾಂಡವರು ಹಾಳಾಗಲಿ : ಕೌರವರು ಹಾಳಾಗಲಿ”

ಈ ನಾಟಕವನ್ನು ಹೇಗೆ ಮುಕ್ತಾಯ ಮಾಡುವುದು ? ಎಂಬುದೊಂದು ಸವಾಲು. ದಾರ್ಶನಿಕ ಕವಿಯಾದ ಕುವೆಂಪು ತಮ್ಮ ಅದ್ಭುತ ಕಾಣ್ಕೆಯಿಂದ ರುದ್ರ ಮತ್ತು ಕೃಷ್ಣ ಸಂವಾದದ ಮೂಲಕ ಭವಿಷ್ಯತ್ ಭಾರತದ ಮುಂಗಾಣ್ಕೆ ಕೊಟ್ಟಿದ್ದಾರೆ. ಬ್ರಿಟಿಷ್ ರಾಜ್ ಹಿಡಿತದಿಂದ ಪಾರಾಗುವ ಸ್ವತಂತ್ರ ಭಾರತದ ಉದಯ, ನವಭಾರತದ ಪ್ರಗತಿಶೀಲತೆ, ಪ್ರಜಾಪ್ರಭುತ್ವದ ಆಳ್ವಿಕೆ: ಶ್ರೀ ಸಾಮಾನ್ಯನೇ ಭಗವನ್ ಮಾನ್ಯಂ ಎಂಬ ಕಾಣ್ಕೆಯಿಂದ ನಾಟಕ ಅಂತ್ಯವಾಗುತ್ತದೆ.

ನಾಟಕ ವೀಕ್ಷಣೆಯಲ್ಲಿ ಪ್ರೇಕ್ಷಕರು ತಲ್ಲೀನತೆ ಅಥವಾ ತಾದಾತ್ಮ್ಯರಾಗುವುದು ಅಪಾಯಕಾರಿ. ಭಾವನಾವಶತೆಗೆ ಒಳಗಾದಾಗ ವಿಚಾರಶಕ್ತಿಗೆ ಧಕ್ಕೆಯಾಗುತ್ತದೆ. ಆದ್ದರಿಂದ ಬ್ರೆಕ್ಟ್ ಮತ್ತು ಕುವೆಂಪು ಇಬ್ಬರೂ ಮಾನಸಿಕ ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ಒತ್ತು ನೀಡಿದ್ದಾರೆ. ಬ್ರೆಕ್ಟ್ ಎಪಿಕ್ ಥಿಯೇಟರ್ ಮತ್ತು ಕುವೆಂಪು ಅವರ ಮನೋರಂಗಭೂಮಿ ಇವೆರಡೂ ಪ್ರೇಕ್ಷಕರ ವಿಮರ್ಶಾತ್ಮಕ ಎಚ್ಚರವನ್ನು ಬಯಸುವ ಸಮಾನಾಂತರ ರಂಗಪರಿಕಲ್ಪನೆಗಳಾಗಿವೆ.

ಕುವೆಂಪು ಅವರು ಒಂದು ಹೆಜ್ಜೆ ಮುಂದಿಟ್ಟು ಪ್ರೇಕ್ಷಕರು ಪ್ರಜ್ಞಾಪೂರ್ವಕವಾಗಿ ಸ್ವತಃ ತಾವೇ ‘ಜೀವಂತ ರಂಗಭೂಮಿ’ ಆಗುವ ಮಾನಸಿಕ ಪರಿಪಾಕಕ್ಕೆ ಕರೆ ನೀಡಿದ್ದಾರೆ. ಜಮೈಕಾ ದೇಶದ ಗಾಯಕ, ಹಾಡುಗಳ ಕರ್ತೃ ಮತ್ತು ಸಂಗೀತ ಸಂಯೋಜಕನಾದ ಬಾಬ್ ಮಾರ್ಲೆ ಹೇಳುವ ಮಾತುಗಳು ಈ ಸಂದರ್ಭದಲ್ಲಿ ಸ್ಮರಿಸಲು ಯೋಗ್ಯವಾಗಿದೆ: “You have to train your mind to be stronger than your feelings. Or else you gone lose yourself” [ ಭಾವನಾವಶರಾಗದಂತೆ ನಿಮ್ಮ ಮನಸ್ಸನ್ನು ಶಕ್ತಿಶಾಲಿಯಾಗಿಟ್ಟುಕೊಳ್ಳುವ ತರಬೇತಿಯನ್ನು ನೀವು ಪಡೆಯಬೇಕು. ಇಲ್ಲದಿದ್ದಲ್ಲಿ ನಿಮ್ಮನ್ನು ನೀವು ಕಳೆದುಕೊಳ್ಳುತ್ತೀರಿ] ಅರಿಸ್ಟಾಟಲ್ ಪ್ರತಿಪಾದನೆ ಮಾಡಿದ್ದು ‘ಭಾವರೇಚನ ಸಿದ್ಧಾಂತ’ (ತಿಯರಿ ಆಫ್ ಕೆಥಾರ್ಸಿಸ್) ಎಂದು ಹೆಸರಾಗಿದೆ. ಬ್ರೆಕ್ಟ್ ಮತ್ತು ಕುವೆಂಪು ಪ್ರತಿಪಾದನೆ ಮಾಡಿದ್ದು ‘ಭಾವ ಪ್ರತಿರೋಧ ಸಿದ್ಧಾಂತ’ (ತಿಯರಿ ಆಫ್ ರೆಸಿಸ್ಟೆನ್ಸ್) ಎಂಬುದನ್ನು ರಂಗಪ್ರಿಯರು ಮರೆಯಬಾರದು.

Previous post ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
Next post ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…

Related Posts

ದೇಹ ದೇವಾಲಯ
Share:
Articles

ದೇಹ ದೇವಾಲಯ

June 12, 2025 ಡಾ. ಬಸವರಾಜ ಸಬರದ
ಶರಣರ ದೇವರ ಪರಿಕಲ್ಪನೆ ಹೇಗೆ ಹೊಸದೊ, ಅದೇ ರೀತಿ ಅವರ ದೇವಾಲಯ ಕಲ್ಪನೆಯೂ ಹೊಸತಾಗಿದೆ. ಹೊರಗಿನ ಮೂರ್ತಿ ದೇವರುಗಳನ್ನು ನಿರಾಕರಿಸಿದ ಮೇಲೆ ಅವರಿಗೆ ದೇವಾಲಯಗಳ ಅಗತ್ಯವೇ...
ಹಿರಿಯರ ಹಾದಿ…
Share:
Articles

ಹಿರಿಯರ ಹಾದಿ…

July 4, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಾತನ್ನು ಯೋಗ ಎನ್ನುವರು. ಅದು ಪ್ರವಚನ ಯೋಗ. ಕೇಳುಗರು ಸಹ ಮನಸ್ಸಿಟ್ಟು ಕೇಳಬೇಕು. ಅದು ಶ್ರವಣ ಯೋಗ. ಅದನ್ನು ಪ್ರಸಾದವಾಣಿ ಎನ್ನುವರು. ಮಠ ಸಾತ್ವಿಕತೆಯ, ಧರ್ಮದ, ಸುಜ್ಞಾನದ...

Comments 8

  1. ಸಿ.ಎಂ. ಹರೀಶ್
    Aug 17, 2025 Reply

    ಇಬ್ಬರು ನಾಟಕಕಾರರ ಅನನ್ಯ ತುಲನೆ…. ಕುವೆಂಪು ಈ ಕಾಲದಲ್ಲಿ ನಮ್ಮೊಂದಿಗೆ ಇರಬೇಕಿತ್ತು.

  2. Girish Kavali
    Aug 26, 2025 Reply

    ರಾಷ್ಟ್ರಕವಿ ಕುವೆಂಪು ಅವರು ಪ್ರಖರವಾದ ವಿಚಾರವಂತರು. ಅವರ ನಾಟಕಗಳಲ್ಲಿ ಅಡಗಿರುವ ಮಹತ್ವವನ್ನು ತೋರಿಸಿಕೊಟ್ಟಿದ್ದಾರೆ ಪ್ರೊ.ನಂಗಲಿ ಅವರು. ಅವರ ಸಾಹಿತ್ಯವನ್ನು ತಕ್ಕಮಟ್ಟಿಗೆ ಓದಿದ್ದೆ. ಈಗ ಅವರ ನಾಟಕಗಳನ್ನು ಓದಲೇ ಬೇಕೆನಿಸಿದೆ. Thank you Bayalu 🙏

  3. Dr. C.A. SOMASHEKHARAPPA
    Aug 27, 2025 Reply

    Dramaturgy a perspective in Sociology which highlights that society is a theatre in itself and all the members being actors, I.e., dramatists. We are all players in everyday life. Indeed everyday life is equated to drama, a real and live, and both natural and constructed drama. In modern Societies it is much of constructed.

  4. ಶಶಿಧರ ಪ
    Aug 29, 2025 Reply

    ಕುವೆಂಪು ಅವರ ವೈಚಾರಿಕ ಪ್ರಜ್ಞೆ ಕಂಡು ಬೆರಗಾಗಿ ಹೋದೆ. ಪೌರಾಣಿಕ ಕತೆಗಳಿಗೆ ಮಾನವೀಯ ಸ್ಪರ್ಶ ಕೊಟ್ಟಿದ್ದಾರೆ. Thanks for this article ♥️

  5. ರಾಜಶೇಖರ್ ಹಿರೇಮನಿ
    Aug 29, 2025 Reply

    ರಾಮಾಯಣ ದರ್ಶನಂನಲ್ಲೂ ಕುವೆಂಪು ಅವರು ಪ್ರತಿ ಸನ್ನಿವೇಶವನ್ನೂ ಹೀಗೇ ಆಧುನಿಕ ಮನೋಭಾವದಿಂದ ಬರೆದಿದ್ದಾರೆ. ಬೆರಳ್ಗೆ ಕೊರಳ್ ನಾಟಕವೂ ಅದ್ಭುತವಾಗಿದೆ. ಚಂದ್ರಶೇಖರ ನಂಗಲಿಯವರ ವಿಶ್ಲೇಷಣೆ, camouflage ಹೋಲಿಕೆ ಸರಿಯಾಗಿದೆ.

  6. ವಿದ್ಯಾ ಪಾಟೀಲ್
    Aug 29, 2025 Reply

    ಚಂದ್ರಶೇಖರ್ ನಂಗಲಿ ಸರ್ ಅವರ ಲೇಖನ ಕುವೆಂಪು ಮತ್ತು ಬ್ರೆಕ್ಟ್, ಕುವೆಂಪು ರವರ ಮನೋರಂಗ ಭೂಮಿ ಮತ್ತು ಬ್ರೆಕ್ಟ್ ನ ಎಪಿಕ್ ಥಿಯೇಟರ್ ಇವರಿರ್ವರ ಸಮಾನಾಂತರ ರಂಗ ಪರಿಕಲ್ಪನೆಗಳು ಹೇಗೆ ವೈಚಾರಿಕತೆ ಯ ಮನೋಭಾವವನ್ನು ಉದ್ದಿಪಿಸಿ, ಸೃಜನಾತ್ಮಕತೆಯನ್ನು ಹುಟ್ಟಿಸಿ ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿಟ್ಟು ವಿಚಾರಶಕ್ತಿಯನ್ನು ಹಿಡಿಯಬೇಕು, ಭಾವುಕರಾದಾಗ ವಿಚಾರಶಕ್ತಿಗೆ ಧಕ್ಕೆಯಾಗುತ್ತದೆ ಎಂಬ ಸತ್ಯವನ್ನು ತಿಳಿಯಬೇಕು ಎಂದು ಹೇಳುತ್ತಾ ಕುವೆಂಪು ರವರ ಶೂದ್ರ ತಪಸ್ವಿ, ಜಲಗಾರ, ಸ್ಮಶಾನ ಕುರುಕ್ಷೇತ್ರಮ್ ನಾಟಕಗಳಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯ ವರ್ಗಗಳು ಇನ್ನಿತರ ವರ್ಗಗಳ ಮೇಲೆ ಸಾಧಿಸಿದ ಆಳ್ವಿಕೆ, ಎದೆಯ ಅರಿವು ಇಲ್ಲದೆ ಶಿವನ ಗುಡಿಗೆ ಹೋಗಬಾರದೆನ್ನುವ ಪರಿ, ಕಾಯಕಯೋಗಿ ಜಲಗಾರನಲ್ಲಿ ಶಿವನಿರುವುದನ್ನು, ಸದ್ದಿಲ್ಲದ ಏಕಾಂತದಲ್ಲಿ ಭಕ್ತಿಲತೆ ಚಿಗುರೊಡೆಯುವುದು ಎಂಬ ಲೇಖನದ ಸಾಲುಗಳು ನಮ್ಮ ವಿಚಾರಶಕ್ತಿಗೆ ಮೇವಾಗಿ ಶರಣರ ಸರಳ ಜೀವನ ಉನ್ನತ ವಿಚಾರಗಳ ಪ್ರತಿಬಿಂಬವೆ ಇದರಲ್ಲಿ ಕಾಣಬರುತ್ತಿದೆ ಎಂದೆನಿಸುತ್ತಿದೆ. ತಮ್ಮ ಬರಹದ ಮೂಲಕ ವಿಚಾರಧಾರೆಯನ್ನು
    ವ್ಯಕ್ತಪಡಿಸಿದ ನಂಗಲಿ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

  7. ಸಹನಾ ಚಂದ್ರಶೇಖರ್
    Aug 31, 2025 Reply

    ಶೂದ್ರತಪಸ್ವಿ, ಜಲಗಾರ… ನಾಟಕಗಳು ಸನಾತನ ವರ್ಣಾಶ್ರಮದ ಕಟು ವಿಡಂಬನೆ ಮಾಡುತ್ತವೆ. ಗರ್ವಾಂಧರು ಮತ್ತು ಶಾಸ್ತ್ರಮೂರ್ಖರಿಗೆ ಗುಣಪಾಠ ಹೇಳುವಂತಿರುವ ಕುವೆಂಪು ಅವರ ವಿಚಾರಗಳನ್ನು ತೋರಿಸಿಕೊಟ್ಟ ಲೇಖಕರಿಗೆ ಧನ್ಯವಾದ.🙏🙏

  8. ಚಿರಂಜೀವಿ ಭದ್ರಾವತಿ
    Aug 31, 2025 Reply

    ಪುರಾಣದ ಮಾರುವೇಷ ತೊಟ್ಟ ನಾಟಕಗಳ ಅಸಲಿ ರೂಪ ಗೊತ್ತಾಯಿತು. ಈ ನಾಟಕಗಳನ್ನು ಶಾಲಾ, ಕಾಲೇಜುಗಳಲ್ಲಿ ಮಾಡಿಸುವಂತಹ ಉಪಾಧ್ಯಾಯರು ಬೇಕು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ಕಣ್ಣ ದೀಪ
ಕಣ್ಣ ದೀಪ
September 7, 2021
ಬೆಳಗಾವಿ ಅಧೀವೇಶನ: 1924
ಬೆಳಗಾವಿ ಅಧೀವೇಶನ: 1924
December 13, 2024
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
Copyright © 2025 Bayalu