Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕುಂಬಾರ ಲಿಂಗಾಯತರು
Share:
Articles April 9, 2021 Bayalu

ಕುಂಬಾರ ಲಿಂಗಾಯತರು

-ಬಸವರಾಜ ಕುಂಚೂರು
ಲಿಂಗವಂತ ಕುಂಬಾರರ ಎಲ್ಲ ಆಚರಣೆಗಳೂ ಮಿಕ್ಕ ಲಿಂಗವಂತರಂತೆಯೇ ಇವೆ. ಅಂದರೆ ಹೆರಿಗೆಯಾದ ಮೇಲೆ ಬಾಣಂತಿ ಮತ್ತು ಕೂಸಿಗೆ ತಿಂಗಳೊಪ್ಪತ್ತು ಬೇವಿನ ಎಲೆ ಹಾಕಿ ಕಾಯಿಸಿದ ನೀರಿನಿಂದ ಸ್ನಾನ ಮಾಡಿಸುವರು. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಬಾಣಂತಿಗೆ ತಿನ್ನಲು ಕೊಬ್ಬರಿಕಾರ ಕೊಡುವ ರೂಢಿಯಿದೆ. ಮದುವೆ ಜಲಸಾಕ್ಷಿಯಾಗಿ ನಡೆಯುವುದಲ್ಲದೆ, ಅಗ್ನಿಸಾಕ್ಷಿಯಾಗಿ ನಡೆಯುವುದಿಲ್ಲ. ಮದುವೆಯ ನಿಶ್ಚಿತಾರ್ಥಕ್ಕೆ ಹಿರೇವೀಳ್ಯ, ದೊಡ್ಡವೀಳ್ಯ ಎಂದು ಕರೆಯುವರು. ಇದು ಸಾಮಾನ್ಯವಾಗಿ ಹೆಣ್ಣಿನ ಮನೆಯಲ್ಲಿ ನಡೆಯುವುದು. ಮದುಮಕ್ಕಳಿಗೆ ಕೋರೂಟ ಪದ್ಧತಿ ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿದೆ. ಪಟ್ಟಣ ಪ್ರದೇಶಗಳಲ್ಲಿ ಯಾರೂ ಮಾಡುವುದಿಲ್ಲ. ಗ್ರಾಮಗಳಲ್ಲಿ ಮಾತ್ರ ಉಳಿದುಕೊಂಡಿದೆ. ಒಳಕಲ್ಲು ಪೂಜೆ, ಒನಕೆ ಪೂಜೆ ಎಲ್ಲಾ ನಡೆಯುವವು. ಬೆಳಗಿನ ಜಾವ ಕುಂಬಾರನ ಮನೆಗೆ ಹೋಗಿ ಐರಾಣಿ ಗಡಿಗೆ ತರುವರು.
ತಾಳಿಯ ದಿನದ ಕಾರ್ಯಕ್ರಮವೆಂದರೆ ಗಂಗಮ್ಮನಿಗೆ ( ಬಾವಿ ಇಲ್ಲವೆ ಹಳ್ಳ) ಹೋಗಿ, ಕುಂಬಾರನ ಮನೆಯಿಂದ ತಂದ ಮಗಿ, ಬಿಂದಿಗೆಗಳಲ್ಲಿ ನೀರು ತುಂಬಿಕೊಂಡು ಬರುವರು. ನಾಲ್ಕು ಕಡೆ ಮಗಿಗಳನ್ನಿಟ್ಟು ಹಸಿ ನೂಲು ಕಟ್ಟಿ ಸುರಿಗಿ ತಯಾರು ಮಾಡುವರು. ಸುರಿಗಿಯ ಒಳಾಂಗಣದಲ್ಲಿ ಮಣಿ ಹಾಕಿ, ವಧು-ವರರಿಗೆ ಪ್ರತ್ಯೇಕವಾಗಿ ಅರಿಶಿಣ ಹಚ್ಚಿ ಸ್ನಾನ ಮಾಡಿಸುವರು. ನಂತರ ಗಂಡಿಗೆ ಬಾಸಿಂಗ, ಹೆಣ್ಣಿಗೆ ದಂಡೆ ಕಟ್ಟುವ ಕಾರ್ಯ ನಡೆಯುವುದು.
ಮದುವೆಯಲ್ಲಿ ತಾಳಿ ಕಟ್ಟಿದ ಮೇಲೆ ಹಾಲು ಧಾರೆ ಎರೆಯುವ ಕ್ರಮಕ್ಕೆ “ಹಾಲು ಹಾಕುವುದು” ಎನ್ನುವರು. ಇದು ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಲಿಂಗವಂತ ಕುಂಬಾರರಲ್ಲಿ ಇದೆ. ಉತ್ತರ ಕರ್ನಾಟಕದ ಕುಂಬಾರರಲ್ಲಿ ಈ ಪದ್ಧತಿ ಇಲ್ಲ. ಗಂಡ ಸತ್ತ ಹೆಣ್ಣು ಮರುಮದುವೆಯಾಗುವುದನ್ನು “ಸೀರೆ ಉಡಕಿ” ಎನ್ನುವರು.

ಕುಂಬಾರ ವೃತ್ತಿ:
ಭೂಮಿಯ ಮೇಲ್ಪದರಿನ ಎಲ್ಲಾ ಪ್ರದೇಶದ ಮಣ್ಣು ಮಡಕೆ ಮಾಡುವ ಗುಣಧರ್ಮವನ್ನು ಹೊಂದಿರುವುದಿಲ್ಲ. ಆದ್ದರಿಂದ ಅಂತಹ ಮಣ್ಣನ್ನು ಬಲಪಡಿಸಲು ಕೆಲವೊಂದು ಖನಿಜಗಳನ್ನು ಸೇರಿಸಬೇಕಾಗುತ್ತದೆ.
ಹಸಿಮಣ್ಣಿನ ಮಡಕೆಗಳನ್ನು ಆವಿಗೆಯಲ್ಲಿಟ್ಟು ಸುಡಲು ಉರವಲು ಬಹಳ ಮುಖ್ಯ. ಕುಂಬಾರರು ಸಾಮಾನ್ಯವಾಗಿ ಸ್ಥಳೀಯವಾಗಿ ದೊರಯುವ ಕಟ್ಟಿಗೆ, ಮುಳ್ಳು, ಬೇಸಾಯದ ತ್ಯಾಜ್ಯ ವಸ್ತುಗಳನ್ನು ಕೂಡ ಮಡಿಕೆಗಳನ್ನು ಸುಡಲು ಬಳಸುವರು.
ಮಡಕೆ ತಯಾರಿಸಲು ತಿಗರಿ, ಸೊಳ, ಕೋಲು, ಆವಿಗೆ ಮುಖ್ಯ ಉಪಕರಣಗಳು. ಈಗ ವಿದ್ಯುತ್ ಚಾಲಿತ ಚಕ್ರ, ಆವಿಗೆಗಳು ಬಂದಿವೆ. ಈ ಉಪಕರಣಗಳನ್ನು ಬಳಸಿ ಕುಂಬಾರನು ಗಡಿಗೆ, ಕೊಡ, ಬಾನಿ ಮೊದಲಾದ ಗೃಹೋಪಯೋಗಿ, ಮಡಕೆ, ಐರಣಿ, ಗುಗ್ಗಳ ಕೊಡ- ಜೋಕುಮಾರ ಮೊದಲಾದ ಸಾಂಸ್ಕೃತಿಕ ಸಂದರ್ಭದ, ಹೂದಾನಿ- ಮುಖವಾಡ ಮೊದಲಾದ ಅಲಂಕಾರಿಕ ಮಡಕೆಗಳನ್ನು ಸಿದ್ಧಪಡಿಸುತ್ತಾನೆ.

ಕರ್ನಾಟಕದಲ್ಲಿ ಕುಂಭೋದ್ಯಮ ಕೇಂದ್ರಗಳು:
ಬೆಳಗಾವಿ ಜಿಲ್ಲೆಯ ಖಾನಾಪುರ, ಬೆಂಗಳೂರು ನಗರ ಮತ್ತು ರಾಮನಗರದಲ್ಲಿಯ ಕುಂಭೋದ್ಯಮ ಕೇಂದ್ರಗಳು ಮುಖ್ಯವಾದವುಗಳು. ಗ್ರಾಮೀಣ ಗುಡಿ ಕೈಗಾರಿಕೆಗಳ ಪುನರುಜ್ಜೀವನಕ್ಕಾಗಿ 1957ರಲ್ಲಿ ಖಾನಾಪುರ ಕೇಂದ್ರ ಆರಂಭವಾಯಿತು. ಈ ಕೇಂದ್ರದಲ್ಲಿ ಆಧುನಿಕ ಭೌತ ಮತ್ತು ರಾಸಾಯನಿಕ ಪ್ರಯೋಗಾಲಯಗಳಿವೆ. ತೈಲ, ಅನಿಲ, ವಿದ್ಯುತ್ ಉಪಯೋಗಿಸುವ ಆಧುನಿಕ ಆವಿಗೆಗಳಿವೆ. ವಿದ್ಯುತ್ ಚಾಲಿತ ಚಕ್ರಗಳಿವೆ. ದೇಶದ ನಾನಾ ಭಾಗಗಳಿಂದ ಕುಂಭಕಲೆಯ ತರಬೇತಿಗಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಅವರಿಗ ಸ್ಟೈಪಂಡ್ ನೀಡಲಾಗುವುದು. ಹಾಸ್ಟೆಲಿನ ಸೌಕರ್ಯ ಕೂಡ ಇದೆ. ಈ ಕಾರ್ಯಾಗಾರದಲ್ಲಿ ಆಧುನಿಕ ಕುಂಭಕಲೆಯ ಕುರಿತು ತರಬೇತಿ ನೀಡಲಾಗುವುದು. ಕುಂಭಕಲೆಯಲ್ಲಿ ಆರು ತಿಂಗಳ ಮತ್ತು ವರ್ಷಾವಧಿಯ ತರಬೇತಿಗಳಲ್ಲದೆ, ವಿಶೇಷ ಉಪನ್ಯಾಸಕ್ಕಾಗಿ ದೇಶ, ವಿದೇಶದ ಕುಂಭ ಪರಿಣಿತರನ್ನು ಆಹ್ವಾನಿಸುವ ಏರ್ಪಾಡು ಇದೆ. ಖಾನಾಪುರ ಕೇಂದ್ರ ದೇಶದಲ್ಲಿಯೇ ಅತ್ಯಂತ ಉತ್ತಮ ಕುಂಭ ಕಲೆಯ ಕೇಂದ್ರವೆಂದು ಹೇಳಬಹುದು. ಇಲ್ಲಿ ಮಾಸ್ಟರ್ ಪಾಟರ್ ತರಬೇತಿ ಪಡೆದ ಲಕ್ಷ್ಮಣಗೌಡ ಕುಂಬಾರ ಇವರ ಕುಂಬಾರಿಕೆಯ ಕುಶಲ ಕೆಲಸಕ್ಕೆ 1999ರಲ್ಲಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರಿಂದ ರಾಷ್ಟ್ರೀಯ ಪುರಸ್ಕಾರ ದೊರೆಯಿತು.
ಬೆಂಗಳೂರು ಪಾಟರಿ ಟೌನ್ ಎಂದು ಹೆಸರು ಪಡೆದಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನುರಿತ ಕುಂಬಾರರಿದ್ದಾರೆ. ರಾಮನಗರ ಕೇಂದ್ರದಲ್ಲಿ ತಯಾರಾಗುವ ಟೆರ್ರಾಕೊಟ ಮಣ್ಣಿನ ವಸ್ತುಗಳು ಪರದೇಶಕ್ಕೆ ರಫ್ತಾಗುತ್ತವೆ.
ಯಂತ್ರ ನಾಗರಿಕತೆಯಿಂದಾಗಿ ಗ್ರಾಮೀಣ ಕಸಬುಗಳೆಲ್ಲ ನೆಲಕಚ್ಚಿದವು. ಅದಕ್ಕೆ ಕುಂಬಾರಿಕೆ ಹೊರತಾಗಿಲ್ಲ. ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್ ಬಲಕೆಯಿಂದಾಗಿ ಕುಂಬಾರಿಕೆಗೆ ದೊಡ್ಡ ಪೆಟ್ಟಾಯಿತು. ನಗರೀಕರಣದಿಂದಾಗಿ ಮಡಕೆ ಮಾಡುವ ಮಣ್ಣು, ಉರುವಲಿಗೆ ಬೇಕಾದ ಕಟ್ಟಿಗೆ ಕೂಡ ಸಿಗುವುದು ದುರ್ಲಭವಾಯಿತು. ಹಾಗೂ ಹೀಗೂ ಮಾಡಿದರೂ ಅವುಗಳನ್ನು ಕೊಂಡುಕೊಳ್ಳುವವರು ಇಲ್ಲವಾಗಿ, ಕುಂಬಾರರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಬೇಸಾಯ ಮಾಡಲು ಹೊಲವಿಲ್ಲ, ಕುಂಬಾರಿಕೆಗೆ ಬಲವಿಲ್ಲ.

ಆಧುನಿಕತೆಯತ್ತ ಕುಂಬಾರ ವೃತ್ತಿ:
ಕುಂಬಾರಿಕೆ ಗ್ರಾಮೀಣ ಪ್ರದೇಶದಲ್ಲಿ ನೆಲ ಕಚ್ಚಿದೆಯಾದರೂ, ನಗರ ಪ್ರದೇಶಗಳಲ್ಲಿ ಹೊಸ ರೂಪ ತಳೆದು ಮರುಜೀವ ಪಡೆಯುತ್ತಿದೆ. ಕುಂಬಾರಿಕೆ ಅಡಿಗೆ ಮನೆಯಿಂದ ಅಲಮಕರಣ ಜಗತ್ತಿಗೆ ಜಿಗಿದಿದೆ. ಸ್ಟಾರ್ ಹೊಟೆಲಿನಲ್ಲಿ, ದೊಡ್ಡ ದೊಡ್ಡ ಮಹಲುಗಳಲ್ಲಿ ಮಿಂಚತೊಡಗಿದೆ. ತೋಟಗಾರಿಕೆಯು ಇದಕ್ಕೆ ದೊಡ್ಡ ಆಸರೆಯಾಗಿದೆ. ಹೂದಾನಿಗಳು, ನೀರು ತುಂಬಿಡುವ ಹೂಜಿಗಳು, ನೀರನ್ನು ತಂಪಾಗಿಡುವ ಫ್ರಿಜ್, ತರಕಾರಿ ಇಡುವ ಶೀತಕ, ತಂದೂರಿ ಒಲೆಗಳಿಗೆ ಬೇಡಿಕೆ ಬಂದಿದೆ. ಅಲಂಕಾರಿಕ ವಸ್ತುಗಳಾದ ಆನೆ, ಒಂಟೆ, ಮುಖವಾಡಗಳು, ದೀಪಧಾರಿಗಳು, ಲ್ಯಾಂಪಗಳು, ಪೆನ್ ಸ್ಟ್ಯಾಂಡ್ ಮುಂತಾದ ಟೆರ್ರಕೊಟಾ ವಸ್ತುಗಳಿಗೆ ಬೇಡಿಕೆ ಹೆಚ್ಚಾಗ ತೊಡಗಿದೆ. ಕುಂಬಾರಿಕೆಯ ಒಂದು ಭಾಗವಾದ ಗ್ಲೇಜ್ಡ್ ಹಂಚುಗಳಿಗೆ, ಮಾಡಿನ ಹಂಚುಗಳಿಗೆ, ಪಿಂಗಾನಿಯ ಪಾತ್ರೆಗಳಿಗೆ ಬೇಡಿಕೆ ಕಡಿಮೆ ಏನಿಲ್ಲ. ಆದರೆ ಇವೆಲ್ಲಾ ಬಡ ಕುಂಬಾರನ ಕೈತಪ್ಪಿ ಬಂಡವಾಳಶಾಹಿಗಳ ವಶಕ್ಕೆ ಹೋಗಿವೆ. ಯಂತ್ರ ನಾಗರಿಕತೆ ಕುಂಬಾರನಿಗೆ ವರವಾಗುವ ಬದಲು ಶಾಪವಾಗಿದೆ.

ಕುಂಬಾರ ಜನಾಂಗದ ಗಣ್ಯರು:
ಲಿಂಗಾಯತ ಕುಂಬಾರ ಜನಾಂಗದಲ್ಲಿ ಕುಂಬಾರ ಗುಂಡಯ್ಯ, ಇವನ ಪುಣ್ಯಸ್ತ್ರೀ ಕೇತಲದೇವಿ ತುಂಬಾ ಪ್ರಸಿದ್ಧ ಪ್ರಾಚೀನ ಶರಣರು. 15ನೆಯ ಶತಮಾನದ ಸರ್ವಜ್ಞ ಕನ್ನಡ ಸಾಹಿತ್ಯದಲ್ಲಿಯೇ ಏಕಮೇವಾದ್ವಿತೀಯ ಸಂತಕವಿ. ಇತ್ತೀಚಿಗಿನ ಬಳ್ಳಾರಿ ಜಿಲ್ಲೆಯ ಸಿಂಧಗೇರಿ ಶರಣ ಕಂಬಾರ ಮಲ್ಲಪ್ಪ ತಾತ, ಹಾವೇರಿ ಜಿಲ್ಲೆಯ ಮಾವೂರಿನ ಮೌನಿ ಶರಣ ಬಸವಣ್ಣೆಪ್ಪ ಸುಪ್ರಸಿದ್ಧ ಸಂತರಾಗಿ ಬಾಳಿದವರಾಗಿದ್ದಾರೆ.
ಕಲೆ ಕುಂಬಾರನ ಹುಟ್ಟಿನಿಂದಲೇ ಬಂದಿದೆ. ಕೆಸರು ಅವನ ಕೈಚಳಕದಿಂದ ಕಲೆಯಾಗುತ್ತಿದೆ. ಹಾರ್ನಳ್ಳಿಯ ಬಾನಿಗಳು, ಬೇವೂರಿನ ಕುಡಿಕೆ ಮತ್ತು ಗಂಟೆ, ಖಾನಾಪುರ ಮಡಕೆಗಳು, ಲಕ್ಷ್ಮೇಶ್ವರದ ತತ್ರಾಣಿ, ಹರಿಹರದ ಜೂಜಿನ ಕೊಡ, ತೇರದಾಳದ ಒಲೆ, ಮಾಗಡಿ- ಶಿವಮೊಗ್ಗ-ಬೆಳಗಾವಿಯ ಗಣಪತಿ ಪ್ರಸಿದ್ಧವಾಗಿವೆ. ಕುಂಬಾರಿಕೆಯ ಜೊತೆಗೆ ಆಟ, ದೊಡ್ಡಾಟ, ಗೊಂಬೆಯಾಟ, ನಾಟಕ, ಸಂಗೀತ, ಚಿತ್ರಕಲೆ, ಹೀಗೆ ಅನೇಕ ಕಲೆಗಳಲ್ಲಿ ಪರಿಣಿತರಾರದ ಕುಂಬಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಾದ್ಯಗಳ ಕಲಾ ಪ್ರೌಢಿಮೆಯಲ್ಲಿ ಹೆಸರು ಪಡೆದವರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕರಡಿ ವಾದ್ಯ ಬಾರಿಸುವುದು ಅವರ ಜನ್ಮಸಿದ್ಧ ಕಲೆಯಾಗಿದೆ. ಗ್ರಾಮಗಳಲ್ಲಿ ಕುಂಬಾರನಿಲ್ಲದ ಭಜನೆ ಮೇಳಗಳೇ ಇರುವುದಿಲ್ಲ. ವೀರಭದ್ರದೇವರ ಗುಗ್ಗಳ ಸಮಯದಲ್ಲಿ ಸಮಾಳ ಬಾರಿಸುವುದರಲ್ಲಿಯೂ ಕುಂಬಾರರು ಎತ್ತಿದ ಕೈ. ಪುರವಂತಿಕೆ ಮಾಡುವುದರಲ್ಲಿಯೂ ನಿಷ್ಣಾತರು. ಐರಾಣಿಯ ಗಡಿಗೆಗಳ ಜೊತೆಯಲ್ಲಿ ಬಾಸಿಂಗವನ್ನು ಕೂಡ ಮಾಡುವರು.
ಲಿಂಗಾಯತ ಕುಂಬಾರರಲ್ಲಿ ಅತ್ಯಂತ ಪ್ರಸಿದ್ಧ ಚಿತ್ರಕಾರನೊಬ್ಬ ಬೆಳಕಿಗೆ ಬಾರದ ಕರುನಾಜನಕ ಕಥೆಯಿದೆ. ವಿಜಾಪುರ ಜಿಲ್ಲೆಯ ಕೋಟ್ಯಾಳದ ಬಡ ಕುಂಬಾರನ ಮನೆಯಲ್ಲಿ ಸುಮಾರು 1902-1906ರಲ್ಲಿ ಜನಿಸಿದ ಭರಮಣ್ಣಪ್ಪ ಕುಂಬಾರನೇ ಆ ನತದೃಷ್ಟ. ಕಲಾಶಾಲೆಯ ಮೆಟ್ಟಿಲು ಹತ್ತದ ಭರಮಣ್ಣ ಹುಟ್ಟು ಕಲಾವಿದನಾಗಿದ್ದ. ಯೋಗಾಯೋಗವೆಂಬಂತೆ ಸ್ವತಃ ಚಿತ್ರಕಲಾವಿದರಾಗಿದ್ದ ಔಂದ್ ಸಂಸ್ಥಾನದ ರಾಜಾ ಶ್ರೀ ಬಾಳಾಸಾಹೇಬ್ ಪಂತ ಅವರ ಗಮನಕ್ಕೆ ಆಕಸ್ಮಿಕವಾಗಿ ಕುಂಬಾರ ಭರಮಣ್ಣಪ್ಪನ ಚಿತ್ರಗಳು ಬಂದವು. ಕೂಡಲೇ ಭರಮಣ್ಣಪ್ಪನನ್ನು ರಾಜಮರ್ಯಾದೆಯೊಂದಿಗೆ ಬರಮಾಡಿಕೊಂಡು, ಆಸ್ಥಾನ ಕಲಾವಿದನನ್ನಾಗಿ ಮಾಡಿದರು. ಅರಮನೆಯಲ್ಲಿದ್ದುಕೊಂಡು ಭರಮಣ್ಣ ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಿದ. ಭಾರತದ ಮೌಲಿಕ ಗ್ರಂಥಗಳಲ್ಲಿನ ಚಿತ್ರಗಳನ್ನು ರಚಿಸಿದ. ಅರಮನೆ, ಗುರುಮನೆಗಳಲ್ಲದೆ ಆತನ ಚಿತ್ರಗಳು ದೇಶದ ತುಂಬಾ ಹರಡಿದವು. ಕಲಾಸೇವೆಯಿಂದ ತೃಪ್ತನಾದ ರಾಜನು ಭರಮಣ್ಣನಿಗೆ ‘ಚಂದ್ರವರ್ಮ’ ಎಂಬ ಬಿರುದನ್ನು ನೀಡಿ, ಕೈಗೆ ಬಂಗಾರದ ಖಡೆ ಹಾಕಿ ರಾಜ ಮರ್ಯಾದೆಯಿಂದ ಸನ್ಮಾನಿಸಿದನು.
ವೀರಶೈವ ಧರ್ಮದ ಅನೇಕ ಪ್ರಸಂಗಗಳು, ಶಿವಲೀಲೆಗಳು, ಶರಣರ ಪವಾಡಗಳು, ಕೋಳೂರು ಕೊಡಗೂಸು, ಗೊಲ್ಲಾಳೇಶ್ವರ ಮಹಿಮೆ, ಭಕ್ತ ಸಿರಿಯಾಳ, ಶರಣ ಬಸವೇಶ್ವರ, ಬಸವೇಶ್ವರ, ಚನ್ನಬಸವೇಶ್ವರ, ದತ್ತಾತ್ರೇಯ, ಶಿವಾಜಿ, ಸರಸ್ವತಿ, ಶಿಲಾಬಾಲಕಿಯರು, ರಾಜಮಹರಾಜರುಗಳು… ಹೀಗೆ ಇವನು ಸಾವಿರಾರು ಚಿತ್ರಗಳನ್ನು ರಚಿಸಿದ್ದು ತಿಳಿದು ಬರುತ್ತದೆ.
ಸ್ವಾತಂತ್ರ್ಯಾ ನಂತರ ಔಂದ್ ಸಂಸ್ಥಾನ ಕೈಬಿಟ್ಟಿದ್ದರಿಂದ ಚಂದ್ರವರ್ಮನು ಆಸ್ಥಾನವನ್ನು ತೊರೆಯಬೇಕಾದ ಕಹಿ ಪ್ರಸಂಗ ಒದಗಿತು. 1957ರಲ್ಲಿ ತೀವ್ರ ಸ್ವರೂಪದ ಕಾಯಿಲೆಯಿಂದ 50ನೆಯ ವಯಸ್ಸಿಗೆ ರಾಜಾಶ್ರಯ ತಪ್ಪಿದ ಭರಮಣ್ಣ ಕುಂಬಾರ ಅನಾಥನಾಗಿ ಕಾಲಗರ್ಭ ಸೇರಬೇಕಾಯಿತು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸರ್ವಜ್ಞನ ನಂತರ ಸುಮಾರು 500 ವರ್ಷಗಳ ಕಾಲ ಲಿಂಗವಂತ ಕುಂಬಾರರು ಕಾಣುತ್ತಿಲ್ಲ. ಆ ಬಳಿಕ ಕಾಣುವ ಮೊದಲ ಸಾಹಿತಿಯೆಂದರೆ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕುಂಬಾರ ಹಾಲಪ್ಪ ಮತ್ತು ಕೊಟ್ರಮ್ಮ ದಂಪತಿಗಳ ಮಗ ಕುಂಬಾರ ವೀರಭದ್ರಪ್ಪ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರ ‘ಅರಮನೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಕುಂವಿ ಎಂದೇ ಖ್ಯಾತರಾಗಿರುವ ಇವರು ನವ್ಯೋತ್ತರ ಕಥಾಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಕುಂಬಾರ ಜನಾಂಗ ಕುರಿತ ‘ಕುಂಬಕಲ್ಪ’ ಹೆಸರಿನ ಮಾಸಪತ್ರಿಕೆಯನ್ನು ಲಿಂಗವಂತ ಕುಂಬಾರರಾದ ನೀಲಕಂಠಪ್ಪ ಕುಂಬಾರ ಇವರು ಗದಗ-ಬೆಟಗೇರಿಯಿಂದ ಪ್ರಕಟಿಸುತ್ತಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯದ ಗ್ರಂಥಾಲಯ ವಿಜ್ಞಾನದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಸೇವೆ ಸಲ್ಲಿಸಿ ಗ್ರಂಥಾಲಯ ವಿಭಾಗದ ರೂವಾರಿ ಎನಿಸಿದ ಡಾ. ಎಂ.ಆರ್.ಕುಂಬಾರ ಅವರು ಗ್ರಂಥಾಲಯ ವಿಜ್ಞಾನದಲ್ಲಿ ಗುರು-ಶಿಷ್ಯ ಪರಂಪರೆಯ ನಿರ್ಮಾಪಕರೆನಿಸಿದ್ದಾರೆ. ಇವರ ಮುಂದುವರಿಕೆಯಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದ ಗಣ್ಯವ್ಯಕ್ತಿಯೆಂದರೆ ಇದೇ ವಿಶ್ವವಿದ್ಯಾಲಯದ ಸುಪ್ರಸಿದ್ಧ ಪ್ರಾಧ್ಯಾಪಕ ಡಾ.ಸಿ.ಆರ್. ಕರಿಸಿದ್ದಪ್ಪ ಕುಂಬಾರ ಅವರು. ಅವರಂತೆ ಅಮೆರಿಕಾ ದೇಶದ ನ್ಯೂಯಾರ್ಕ್ ನಗರದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಮಹಾದೇವ ಕುಂಬಾರರು ಒಬ್ಬರು. ಅವರ ಐದಾರು ಕುಟುಂಬಗಳ ವಂಶಸ್ಥರು ಅಮೆರಿಕೆಯಲ್ಲಿದ್ದಾರೆ.
ಈ ಸಮಾಜದಲ್ಲಿ ತಪ್ಪದೇ ಹೆಸರಿಸಬೇಕಾದವರು, ಶ್ರೀ ಮಾಗಡಿ ಶಿವಣ್ಣನವರು. ಇವರು ದಾವಣಗೆರೆಯ ನಿಟುವಳ್ಳಿ ಭಾಗದ ಸಿದ್ಧಲಿಂಗೇಶ್ವರ ಬಡಾವಣೆಯಲ್ಲಿಯ ಬೃಹತ್ ಸಿದ್ಧಗಂಗಾ ಪ್ರೌಢಶಾಲೆಯ ರೂವಾರಿಯಾಗಿದ್ದಾರೆ. ನಮ್ಮ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಇದರ ಏಳ್ಗೆಗೆ ಹೆಂಡತಿ, ಮಕ್ಕಳು, ಸೊಸೆ, ಇಡೀ ಕುಟುಂಬವೇ ಅರ್ಪಿಸಿಕೊಂಡಿದೆ.
ಕರ್ನಾಟಕದಲ್ಲಿ ಹೆಸರಿಸಬಹುದಾದ ಇನ್ನೆರಡು ಪ್ರಾಥಮಿಕ ಶಿಕ್ಷಣ ಸಂಸ್ಥೆಗಳೆಂದರೆ ಬೆಳಗಾವಿಯಲ್ಲಿ ಸಂಗೂತಾಯಿ ಕಟ್ಟೀಮನಿ ನಡೆಸುತ್ತಿರುವ ಕಾನ್ವೆಂಟ್ ಮಾದರಿಯ ವಾಯ್. ಕೆ. ಕಟ್ಟೀಮನಿ ವಿದ್ಯಾಸಂಸ್ಥೆ, ಮತ್ತೊಂದು ಹಾಸನದಲ್ಲಿ ಶಂಕರ್ ಕುಂಬಾರ ನಡೆಸುತ್ತಿರುವ ಸರ್ವಜ್ಞ ವಿದ್ಯಾಸಂಸ್ಥೆ ಎಂದು ಹೇಳಬಹುದು.
ಲಿಂಗವಂತ ಕುಂಬಾರ ಜನಾಂಗದಲ್ಲಿ ಮೊದಲ ಡಾಕ್ಟರೇಟ್ ಪದವಿ ಪಡೆದ ಕೀರ್ತಿ ಹಾಸನದ ದೇವರಾಜ್ ಸರ್ಕಾರ್ ಅವರಿಗೆ ಸಲ್ಲುತ್ತದೆ. ಇವರು ಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಲವಾರು ವರುಷ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾದರು.
ರಾಜಕೀಯ ಕ್ಷೇತ್ರದಲ್ಲಿ ಲಿಂಗವಂತ ಕುಂಬಾರರು ಇಲ್ಲವೆಂದೇ ಹೇಳಬಹುದು. ಒಂದು ಸಮಾಧಾನದ ಸಂಗತಿಯೆಂದರೆ ಮಹಾರಾಷ್ಟ್ರದ ಕೊಲ್ಲಾಪುರದ ರತ್ನಪ್ಪ ಕುಂಬಾರ ಮಹಾರಾಷ್ಟ್ರ ರಾಜ್ಯ ಸರ್ಕಾರದ ಮಂತ್ರಮಂಡಲದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು. ಇದಲ್ಲದೆ ಮಹಾರಾಷ್ಟ್ರ ರಾಜ್ಯದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ, ಅನೇಕ ಸಂಘಸಂಸ್ಥೆಗಳ ಅಧ್ಯಕ್ಷರಾಗಿ ಜನಹಿತ ಕಾರ್ಯಗಳನ್ನು ಮಾಡಿ ಹೆಸರು ಗಳಿಸಿದವರು.
ಕರ್ನಾಟಕದಲ್ಲಿ ಮೀಸಲಾತಿಯಿಂದಾಗಿ ಕುಂಬಾರ ಸಮಾಜದ ಪುರುಷರು, ಮಹಿಳೆಯರು ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಅಲ್ಲಲ್ಲಿ ಸದಸ್ಯರಾಗಿರುವುದು, ಅಧ್ಯಕ್ಷರಾಗಿರುವುದು ಕಂಡುಬರುತ್ತಿದೆ.

ಜಾಗ್ರತೆಯ ಹೊಸ್ತಿಲಲ್ಲಿ…
ಮೂರು-ನಾಲ್ಕು ದಶಕದ ಕೆಳಗೆ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಹಿಂದುಳಿದಿದ್ದ, ಲಿಂಗವಂತ ಕುಂಬಾರ ಜನಾಂಗದಲ್ಲಿದ್ದ ಜಾಗೃತಿಯ ಗಾಳಿ ಬೀಸ ತೊಡಗಿದೆ. ವೈದ್ಯರು, ಎಂಜಿನಿಯರ್, ವಕೀಲರು, ಪ್ರಾಧ್ಯಾಪಕರು, ನ್ಯಾಯಾಧೀಶರು ಮೊದಲಿಗೆ ಬೆರಳೆಣಿಕೆಯಷ್ಟು ಜನ ಕೂಡ ಇರಲಿಲ್ಲ. ಈಗ ಹೆಚ್ಚಿಲ್ಲವಾದರೂ ಕಡಿಮೆ ಸಂಖ್ಯೆಯಲ್ಲಾದರೂ ಇದ್ದಾರೆ. ಇತ್ತೀಚೆಗೆ ಸಾಕಷ್ಟು ಸಂಖ್ಯೆಯಲ್ಲಿ ಯುವತಿ-ಯುವಕರು ಉನ್ನತ ಅಭ್ಯಾಸದಲ್ಲಿ ತೊಡಗಿದ್ದಾರೆ. ಅನೇಕ ಲಿಂಗವಂತ ಕುಂಬಾರರು ವೈದ್ಯರಾಗಿ, ಎಂಜಿನಿಯರ್ ಆಗಿ, ಪ್ರಾಧ್ಯಾಪಕರಾಗಿ, ನ್ಯಾಯವಾದಿಗಳಾಗಿ, ನ್ಯಾಯಾಧೀಶರಾಗಿ ಪರದೇಶದಲ್ಲಿ ನೆಲೆಸಿರುವುದು ತಿಳಿದುಬರುತ್ತದೆ. ವ್ಯಾಪಾರ, ಉದ್ದಿಮೆ, ಒಕ್ಕಲುತನದಲ್ಲಿ ಇವರ ಪ್ರಗತಿ ಏನೂ ಇಲ್ಲವೆಂದೇ ಹೇಳಬಹುದು. ಗ್ರಾಮೀಣ ಪ್ರದೇಶದ ಕುಂಬಾರರ ಸ್ಥಿತಿ ಬಹಳ ಶೋಚನೀಯವಾಗಿದೆ. ಕುಂಬಾರಿಕೆಗೆ ಮಾನ್ಯತೆಯೂ ಇಲ್ಲ, ಬೆಲೆಯೂ ಇಲ್ಲ. ಬಹಳಷ್ಟು ದುಃಸ್ಥಿತಿಯಲ್ಲಿರುವ ಇವರಿಗೆ ಸರ್ಕಾರದಿಂದ ದೊರೆಯಬಹುದಾದ ಸವಲತ್ತುಗಳನ್ನು ಕೂಡ ಪಡೆಯಲು ಸಾಧ್ಯವಾಗದೆ, ಅಸಹಾಯಕ ಸ್ಥಿತಿಯಲ್ಲಿ ದಿನ ನೂಕುತ್ತಿದ್ದಾರೆ. ಇವರ ಪ್ರಗತಿಯ ಬಗ್ಗೆ ರಚನಾತ್ಮಕ ಸಮಗ್ರ ಯೋಜನೆಯನ್ನು ಕುಂಬಾರ ಸಮಾಜ, ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳುವುದು ಅವಶ್ಯವಿದೆ.
ನೆರವು:
1. ಕುಂಬಾರ ಜನಾಂಗೀಯ ಅಧ್ಯಯನ- ಬಸವರಾಜ ಕುಂಚೂರು
2. ಹೊಸತು ಹೊಸತು- ಡಾ.ಎಂ. ಚಿದಾನಂದಮೂರ್ತಿ
3. ಕುಂಬಾರ ವೃತ್ತಿ ಪದಕೋಶ- ಎಸ್. ಎಸ್. ಅಂಗಡಿ

Previous post ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
Next post ಶಿವಾಚಾರ
ಶಿವಾಚಾರ

Related Posts

ಖಾಲಿ ಕೊಡ ತುಳುಕಿದಾಗ…
Share:
Articles

ಖಾಲಿ ಕೊಡ ತುಳುಕಿದಾಗ…

October 5, 2021 ಲಕ್ಷ್ಮೀಪತಿ ಕೋಲಾರ
“Be vacant and you will remain full”- Lao Tsu ತಾವೋನ ‘ಖಾಲಿ’ಯ ಬಗ್ಗೆ ಇತ್ತೀಚೆಗೆ ನನ್ನ ವ್ಯಸನ ಜಾಸ್ತಿಯಾಗುತ್ತಿದೆ. ತಾವೋನ ಖಾಲಿ ಎಷ್ಟು ಖಾಲಿಯಲ್ಲವೆಂದರೆ ಅದು...
ಬೌದ್ಧ ಕಾವ್ಯದೃಷ್ಟಿ
Share:
Articles

ಬೌದ್ಧ ಕಾವ್ಯದೃಷ್ಟಿ

May 8, 2024 ಡಾ. ನಟರಾಜ ಬೂದಾಳು
ಇಂತಹ ಒಂದು ತಲೆಬರಹ ಅನೇಕ ವಿವಾದಗಳನ್ನು ಸೃಷ್ಟಿಸುತ್ತದೆ. ಮೊದಲನೆಯದು: ಈಗಾಗಲೇ ಇರುವ ಭಾರತೀಯ ಕಾವ್ಯಮೀಮಾಂಸೆ ಎಂದು ತನ್ನಷ್ಟಕ್ಕೆ ತಾನು ಕರೆದುಕೊಂಡು ಕೂತಿರುವ ಸಂಸ್ಕೃತ...

Comments 6

  1. Indudhar
    Apr 11, 2021 Reply

    ನಮ್ಮದೂ ಕುಂಬಾರಿಕೆಯ ವೃತ್ತಿ, ಲಿಂಗಾಯತ ಕುಂಬಾರರ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ನೀಡಿದ ಬರಹ. ಹೀಗೆಯೇ ಲಿಂಗಾಯತ ಸಮಾಜದಲ್ಲಿರುವ 99 ವೃತ್ತಿಗಳ ಮಾಹಿತಿ ನೀಡಿದರೆ ಬಹಳ ಅನುಕೂಲವಾಗುತ್ತದೆ.

  2. ವಿಜಯಕುಮಾರ್ ಶಿವಮೊಗ್ಗ
    Apr 13, 2021 Reply

    ಮಡಕೆಗಳಿಗೆ ಆಧುನಿಕ ಸ್ಪರ್ಷ ಸಿಗುತ್ತಿದ್ದು, ಅಲಂಕಾರಿಕ ವಸ್ತುಗಳಾಗಿ ಈಗ ಎಲ್ಲ ಕಡೆ ಬೇಡಿಕೆ ಕುದುರಿಸಿಕೊಳ್ಳುತ್ತಿವೆ. ಉತ್ತಮ ಮಾಹಿತಿ ಲೇಖನ.

  3. Umesh Patri
    Apr 15, 2021 Reply

    ಪ್ರಸಿದ್ಧ ಚಿತ್ರಕಾರನಾಗಿದ್ದ ಭರಮಣ್ಣಪ್ಪ ಕುಂಬಾರನ ಕತೆ ಓದಿ ಹೆಮ್ಮೆ ಎನಿಸಿತು. ಕುಂಬಾರರ ಕುರಿತಾದ ಮಾಹಿತಿ ಕಣಜದಂತಿರುವ ಈ ಲೇಖನವನ್ನು ಪ್ರತಿಯೊಬ್ಬರೂ ಓದಬೇಕು.

  4. Akshay B.R
    Apr 20, 2021 Reply

    ಬಯಲ ಲೇಖನಗಳೆಲ್ಲವೂ ಸಂಗ್ರಹಯೋಗ್ಯವಾಗಿವೆ. ಧನ್ಯವಾದಗಳು ಅಕ್ಕಾ.

  5. Mallikarjuna
    Apr 30, 2021 Reply

    ಕುಂಬಾರ ಜನಾಂಗ ಕುರಿತ ‘ಕುಂಬಕಲ್ಪ’ ಹೆಸರಿನ ಮಾಸಪತ್ರಿಕೆಯ ವಿಳಾಸ ತಿಳಿಸುವಿರಾ?

  6. Chinmayi
    May 15, 2021 Reply

    ಉತ್ತಮ ಲೇಖನ

Leave a Reply to Umesh Patri Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ಗೇಣು ದಾರಿ
ಗೇಣು ದಾರಿ
July 10, 2023
ವಚನ – ಚಿಂತನ
ವಚನ – ಚಿಂತನ
October 10, 2023
ಕಾಯಕಯೋಗಿನಿ ಕದಿರ ರೆಮ್ಮವ್ವೆ
ಕಾಯಕಯೋಗಿನಿ ಕದಿರ ರೆಮ್ಮವ್ವೆ
April 29, 2018
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
Copyright © 2025 Bayalu