Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
Share:
Articles July 21, 2024 ಪದ್ಮಾಲಯ ನಾಗರಾಜ್

ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2

ಐದು ಮನವ ಕುಟ್ಟಿ ಒಂದು ಮನವ ಮಾಡು, ಕಂಡಾ ಮದವಳಿಗೆ!
ಇದು ನಮ್ಮ ಬಾಳುವೆ, ಮದವಳಿಗೆ!
ಇದು ನಮ್ಮ ವಿಸ್ತಾರ, ಮದವಳಿಗೆ!
ಮದವಳಿದು ನಿಜವುಳಿದ ಬಳಿಕ ಅದು ಸತ್ಯ ಕಾಣಾ,
ಕೂಡಲಸಂಗಮದೇವಾ.

ಇಲ್ಲಿ ‘ಮದವಳಿಗೆ’ ಎಂಬ ಕ್ರಿಯಾವಾಚಕವನ್ನು ಗಮನಿಸಿ. ಬದುಕಿನೊಂದಿಗೆ ಭಾಷೆಯೊಂದು ಸಂಬಂಧಿಸಿಕೊಂಡಾಗ ಒಂದು ಸ್ವತಂತ್ರ ಭಾಷೆ ಸಂಭವಿಸಿ, ಅದು ಉತ್ತಮ ಕಾರ್ಯಸಾಧನೆಯಾಗಿ ಒಡಮೂಡುತ್ತದೆ ಎಂಬುದನ್ನು ಈ ಪದ ಸ್ಪಷ್ಟಪಡಿಸುತ್ತದೆ.
ಮದವನ್ನು ಅಳಿಸುವ ಕ್ರಿಯಾಪದವನ್ನಾಗಿ ‘ಮದವಳಿಗೆ’ ಎಂಬ ಶಬ್ದವನ್ನಿಲ್ಲಿ ಕಟ್ಟಲಾಗಿದೆ. ಐದು ಚಿತ್ತಗಳ ಕಾರ್ಯಪ್ರವೃತ್ತಿಗಳನ್ನು ಹಾಳುಗೆಡುಹದೇ ಗತ್ಯಂತರವಿಲ್ಲ. ಐದು ಚಿತ್ತಗಳ ಕಾರ್ಯ ಸ್ಥಗಿತಗೊಳಿಸುವುದೆಂದರೂ, ಮದ ಅಥವಾ ಅಹಮಿಕೆಯನ್ನು ಸ್ಥಗಿತಗೊಳಿಸುವುದೆಂದರೂ ಎರಡೂ ಒಂದೇ. ಏಕೆಂದರೆ ಐದು ಚಿತ್ತಗಳ ಕಾರ್ಯವನ್ನು ‘ಅಹಂ’ ಎಂಬ ಕಾರಣ ನಿರ್ದೇಶಿಸುತ್ತಿದೆ. ಕಾರ್ಯ ಸ್ಥಗಿತಗೊಂಡರೆ ಕಾರಣವೂ ಸ್ಥಗಿತಗೊಂಡಂತೆಯೇ ಅಲ್ಲವೇ? ಈ ಐದು ಚಿತ್ತಗಳ ಕಾರಣ ಮತ್ತು ಕಾರ್ಯಗಳನ್ನು ಅಳಿಸಿ ಹಾಕುವುದರಲ್ಲಿ ಶರಣರ ಅಂತರಂಗ ಸಾಧನೆ ಅಡಗಿದೆ. ಮದವಳಿಸಿಕೊಳ್ಳುವಲ್ಲಿ ಶರಣರ ಅಂತರಂಗಿಕ ಪರಿಶ್ರಮ ಏನಿದೆಯೋ ಆ ಪರಿಶ್ರಮವನ್ನು ಬಿಂಬಿಸುವ ಕಥನಗಳಲ್ಲಿ ಅವರ ಬಾಳುವೆಯ ಘಮಘಮಲಿದೆ. ಅಹಂಕಾರ ರಹಿತರಾಗಲು ಅವರು ತಮಗೆ ತಾವು ವಿಧಿಸಿಕೊಂಡ ನಿಯಮಗಳೇನಿವೆಯೋ ಆ ನಿಯಮಗಳಲ್ಲಿ ಅವರ ತಾತ್ವಿಕ ವಿಸ್ತಾರದ ವಿವರಣೆಗಳಿವೆ. ಒಟ್ಟು ಈ ವಚನದ ಸಾರವು ಯಾವುದೇ ವಿಧವಾದ ಕಠಿಣ ಪರಿಶ್ರಮ ಹಾಕದೇ ಐದು ಚಿತ್ತಗಳ ಕಾರ್ಯ-ಕಾರಣ ಸಂಬಂಧವನ್ನು ಮುರಿಯಲಾಗದು. ಆದ್ದರಿಂದ ಕೊನೆಯಸಾಲು ಮದವಳಿಯದೇ ನಿಜದ ಹಾದಿ ತೆರೆದುಕೊಳ್ಳಲಾಗದೆಂಬುದನ್ನು ಕಟ್ಟುನಿಟ್ಟಾಗಿ ಈ ವಚನ ಹೇಳುತ್ತದೆ.

ಕ್ರಿಯಾಮಥನವಿಲ್ಲದೆ ಕಾಣಬಂದುದೆ ಇಕ್ಷುವಿನೊಳಗಣ ಮಧುರ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ತಿಲದೊಳಗಣ ತೈಲ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕ್ಷೀರದೊಳಗಣ ಘೃತ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕಾಷ್ಠದೊಳಗಣ ಅಗ್ನಿ?
ಇದು ಕಾರಣ,
ನಮ್ಮ ಗುಹೇಶ್ವರಲಿಂಗವ ತನ್ನೊಳಗೆ ಅರಿದೆನೆಂಬ ಮಹಂತಂಗೆ
ಸತ್‍ಕ್ರಿಯಾಚರಣೆಯೆ ಸಾಧನ ಕಾಣಿಭೋ.

ಕಬ್ಬನ್ನು ನಾಶಮಾಡದೇ ಅದರಲ್ಲಿನ ಸಿಹಿಯನ್ನು ಪಡೆಯಲಾದೀತೆ? ಎಳ್ಳನ್ನು ನಾಶ ಮಾಡದೆ ಅದರಲ್ಲಿನ ಎಣ್ಣೆ ಕಾಣಲಾದೀತೆ? ಇಂಧನವಿಲ್ಲದೆ ಅಗ್ನಿಯೊಂದು ಸಾಧ್ಯವಾಗುವುದೇ? ಎಂಬ ಈ ದೃಷ್ಟಾಂತಗಳನ್ನು ನೀಡುತ್ತಾ ಲಿಂಗವನ್ನು ತನ್ನೊಳಗೆ ಅರಿದಿಹೆನೆಂಬ ಮಹಾಂತನಿಗೆ ‘ಸತ್ಕ್ರಿಯಾಚರಣೆ’ ಎಂಬ ಸಾಧನ (tool) ಬೇಕೇ ಬೇಕು. ಈ ವಚನದ ಕೊನೆಯ ಸಾಲು ಕಾಯಕಕ್ಕೆ ‘ಸತ್ಕ್ರಿಯಾಚರಣೆ’ ಎಂಬ ಹೊಸತೊಂದು ಆಯಾಮವನ್ನು ನೀಡುವುದನ್ನು ಗಮನಿಸಬೇಕು.

ಶರಣರು ಲಿಂಗಾನುಭವಿಗಳಾಗುವಲ್ಲಿ ಕಾಯಕವನ್ನು ಒಂದು ಪ್ರಬಲ ಸಾಧನವನ್ನಾಗಿ ಹೇಗೆ ಬಳಸಿಕೊಂಡರು ಎಂಬುದನ್ನು ಕಂಡುಕೊಳ್ಳುವುದು ಈ ಲೇಖನದ ಉದ್ದೇಶವಾಗಿದೆ. ಲಿಂಗ ಭವರೋಗಕ್ಕಿರುವ ದಿವೌಷಧಿ. ಈ ಔಷಧ ಕಾಯದೊಳಗೆ ಕಾಯಕದ ಕಾರ್ಯಾಗಾರದಲ್ಲಿ ತಯಾರಾಗುವಂತಹದ್ದು. ಆದ್ದರಿಂದ ಐದು ಚಿತ್ತಗಳಿಂದಾದ ಭವರೋಗದ ಜಾಡನ್ನು ಸರಿಯಾಗಿ ಪರಿಗ್ರಹಿಸದೇ ಲಿಂಗಾನುಭವಕ್ಕೆ ಏಕಾಏಕಿಯಾಗಿ ಹಾರಿಬಿಡುತ್ತೇನೆಂದುಕೊಂಡರೆ ಅದು ಸಾಧ್ಯವಿಲ್ಲ. ಭವರೂಪಿ ಐದು ಚಿತ್ತಗಳ ಕುರಿತು ಶರಣರು ಇನ್ನೇನು ಹೇಳುತ್ತಾರೆ ನೋಡೋಣ…
ಬಸವಣ್ಣನವರು ಈ ಐದು ಚಿತ್ತಗಳನ್ನು ತನ್ನತ್ತ ಸುಳಿಯಬೇಡಿರೆಂದು ಅವುಗಳನ್ನು ಪರಿಪರಿಯಾಗಿ ಬೇಡುತ್ತಾರೆ.

ಬೆಲ್ಲವ ತಿಂದ ಕೋಡಗದಂತೆ ಸಿಹಿಯ ನೆನೆಯದಿರಾ, ಮನವೆ,
ಕಬ್ಬ ತಿಂದ ನರಿಯಂತೆ ಹಿಂದಕ್ಕೆಳಸದಿರಾ, ಮನವೆ.
ಗಗನವನಡರಿದ ಕಾಗೆಯಂತೆ ದೆಸೆದಸೆಗೆ ಹಂಬಲಿಸದಿರಾ, ಮನವೆ.
ಕೂಡಲಸಂಗನ ಶರಣರ ಕಂಡು ಲಿಂಗವೆಂದೆ ನಂಬು, ಮನವೆ.

ಆರತವಡಗದು, ಕ್ರೋಧ ತೊಲಗದು.
ಕ್ರೂರ ಕುಭಾಷೆ, ಕುಹಕ ಬಿಡದನ್ನಕ್ಕ
ನೀನೆತ್ತಲು ಶಿವನೆತ್ತಲು ಹೋಗುತ್ತ ಮರುಳೆ.
ಭವರೋಗವೆಂಬ ತಿಮಿರ ತಿಳಿಯದನ್ನಕ್ಕ
ಕೂಡಲಸಂಗನ ಶರಣರ ಕಂಡು ಲಿಂಗವೆಂದೇ ನಂಬು ಮನವೇ.

ಅಲ್ಲಮರು ಈ ಚಿತ್ತಗಳನ್ನು ‘ಮನದ ಮುಂದಣ ಕತ್ತಲು’ ಎಂದರೆ, ಶರಣರು ಈ ಐದು ಚಿತ್ತಗಳನ್ನು ಅಂತರೇಂದ್ರಿಯಗಳೆನ್ನುತ್ತಾರೆ. ಅಂತರೇಂದ್ರಿಯಗಳು ಜ್ಞಾನೇಂದ್ರಿಯಗಳಲ್ಲ. ಜ್ಞಾನೇಂದ್ರಿಯಗಳ ಮೂಲಕ ಅಂತರೇಂದ್ರಿಯಗಳೇ ತಮಗೆ ಇಷ್ಟಬಂದಂತೆ ಲೋಕ ಸಮಸ್ತವನ್ನೂ ಗ್ರಹಿಸುತ್ತವೆ. ಈ ಗ್ರಹಿಕೆಗನುಗುಣವಾಗಿ ಕಾಯ ಅಂತರೇಂದ್ರಿಯಗಳ ಗುಲಾಮನಾಗಿದೆ.
1.ತಾನು ಹಿಂದೆ ಅನುಭವಿಸಿದ ಸುಖಗಳನ್ನೆಲ್ಲಾ ನೆನಪಿನ ಸಂಗ್ರಹದಲ್ಲಿ ಉಳಿಸಿಕೊಂಡ ಮನದ ಅಂತಃ ಪ್ರವಾಹದಲ್ಲಿ ಮತ್ತೆ ಮತ್ತೆ ಅದೇ ಸುಖಗಳಿಗೆ ಹಂಬಲಗಳನ್ನು ಹೊತ್ತು ತಂದು ಅವಕಾಶಕ್ಕಾಗಿ ತುಡಿಯುತ್ತಿದೆ.
2.ತಲ್ಲಣಿಸುತ್ತಿರುವ ದ್ರೋಹ ಚಿತ್ತವು ತನ್ನ ಸುಖಾಪೇಕ್ಷೆಯ ಹಿತಗಳಿಗನುಗುಣವಾಗಿ ವರ್ತಿಸದಾ ವ್ಯಕ್ತಿ ಮತ್ತು ಸಂದರ್ಭಗಳನ್ನು ತನ್ನ ಹಿತದ ಪರವಾಗಿ ರೂಪಿಸಿಕೊಳ್ಳುವ ಪ್ರಯತ್ನದಲ್ಲಿರುತ್ತದೆ. ಇಂತಹ ತನ್ನ ಪ್ರಯತ್ನ ವಿಫಲವಾದಾಗ ದ್ವೇಷ, ಅಸಹನೆಯ ಭಾವ! ಸಫಲವಾದಾಗ ಪ್ರೀತಿ ಮತ್ತು ಸಹ್ಯ ಭಾವ! ಅಸಹನೆಗಳು ಕ್ರೂರ, ಕುಭಾಷೆ, ಕುಹಕಗಳ ನಿರ್ಮಾಣದಲ್ಲಿ ತೊಡಗಿರುತ್ತವೆ.
3.ತುಡಿಯುತ್ತಿರುವ ಸುಖಾಪೇಕ್ಷೆ ಹಾಗೂ ತಲ್ಲಣಿಸುತ್ತಿರುವ ಆತ್ಮದ್ರೋಹಕ್ಕೆ ಪರಿಹಾರವಾಗಿ ತನ್ನೊಳಗೆ ಅತ್ಯಮೂಲ್ಯವಾದ ಶಕ್ತಿ ಇದ್ದಾಗ್ಯೂ ಆ ಶಕ್ತಿಯನ್ನು ಬಳಸದಾ ಚಿತ್ತ ಸೋಮಾರಿತನಕ್ಕೆ ಒಳಗಾಗಿಸಿಕೊಳ್ಳುತ್ತದೆ.
4.ಆ ಸೋಮಾರಿತನ ಮತ್ತದೇ ಸುಖೀವ್ಯಸನದ ಪೀಪಾಸು! ಅತೃಪ್ತತೆಯಲ್ಲಿ ನರಳಿ ಎಂದೂ ತೃಪ್ತವಾಗದಾ ಭ್ರಮನಿರಸನಕ್ಕೆ ದೂಡಿಕೊಳ್ಳುತ್ತದೆ.
5.ಈ ನಾಲ್ಕು ಚಿತ್ತಗಳ ಫಲ ಸತ್ಯ ಯಾವುದು? ನಿತ್ಯ ಯಾವುದು? ಎಂದು ಅರಿಯುವಲ್ಲಿ ವಿಫಲವಾಗುವುದು. ಜೀವನ ಪರಮಾರ್ಥವನ್ನು ಗ್ರಹಿಸಲು ಅಸಾಧ್ಯವಾದ ದುರ್ಬಲ ಚಿತ್ತವನ್ನು ಪಡೆದು ಎಲ್ಲೂ ವಿರಮಿಸದೆ ಅತ್ತಿಂದಿತ್ತ ಇತ್ತಿಂದತ್ತ ಚಂಚಲಿಸುವ ಚಿತ್ತ ಚಾಂಚಲ್ಯಕ್ಕೆ ಜೋತು ಬೀಳುತ್ತದೆ. ಇಲ್ಲಿ ತಿಳಿದುಕೊಳ್ಳಬೇಕಾಗಿರುವುದೇನೆಂದರೆ…
ಈ ಅಗಾಧವಾದ ಮನಸ್ಸು ಅಥವಾ ಚಿತ್ತ ಸೃಷ್ಠಿಯು ನನ್ನದೇ! ಮತ್ತದನ್ನು ದಾಟಿಕೊಳ್ಳಲು ಸಾಧ್ಯವಾಗದಾ ದೌರ್ಬಲ್ಯವೂ ನನ್ನದೇ! ಅದು ಬೇಡುವುದನ್ನೆಲ್ಲಾ ಅದಕ್ಕೆ ಕೊಟ್ಟೂ ಕೊಟ್ಟೂ ಅದನ್ನು ಜಾಡಿಗೆ ಬೀಳಿಸಿದ್ದೂ ನಾನೇ! ನನ್ನದೇ ಜಾಲ, ನಾನೇ ಅದರ ಬಂಧೀ! ನಾನೇ ಅದರ ಕತೃ, ನಾನೇ ಅದರ ಬೋಕ್ತೃ! ಕಾರಣವೂ ನಾನೇ, ಕಾರ್ಯವೂ ನನ್ನದೇ, ಅದರ ಫಲವನ್ನು ಉಣ್ಣಬೇಕಾದವನೂ ನಾನೇ!

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೆ ಸುತ್ತಿ ಸಾವಂತೆ,
ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ.
ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ.

ಈ ಐದು ಚಿತ್ತಗಳ ಮನೋಗತ ಲೀಲಾವಿಲಾಸವನ್ನು ಅಲ್ಲಮಪ್ರಭು ‘ಬಿಂದುವಿನ ಕೊಡ’ ಎನ್ನುತ್ತಾರೆ. ವ್ಯಕ್ತಿ ಮತ್ತು ಸಮಾಜ ತನ್ನೊಳಗೆ ತಾನೇ ಸೃಷ್ಟಿಸಿಕೊಂಡ ಮಿಥ್ಯಾದೃಷ್ಟಿ (ಬಿಂದು)ಗಳನ್ನು ತುಂಬಿದ ಕೊಡಕ್ಕೆ ಹೋಲಿಸುತ್ತಾ “ಬಿಂದುವಿನ ಕೊಡವನ್ನು ಹೊತ್ತುಕೊಂಡು ಅಂದಚೆಂದಗೆಟ್ಟು ಆಡುವರಯ್ಯಾ ಗುಹೇಶ್ವರ ನಿರಾಳವೇ, ಐದರಿಂದ ಕೆಟ್ಟಿತ್ತು ಮೂರು ಲೋಕ” ಎನ್ನುತ್ತಾರೆ. ಈ ಐದು ಚಿತ್ತಗಳಿಂದ ಕಾಯಲೋಕ, ಮನೋಲೋಕ ಮತ್ತು ಜನಲೋಕ ಎಂಬ ಮೂರು ಲೋಕವೂ ಕೆಟ್ಟಿತ್ತು.

ಈ ಐದು ಚಿತ್ತಗಳು ಕಾಯ, ಮನಸ್ಸು ಮತ್ತು ಸುತ್ತಲಿನ ಸಮಾಜದಲ್ಲಿ ವ್ಯಾಪಿಸಿಕೊಂಡು ಕಾರ್ಯಶೀಲವಾಗಿರುವ ಬಗೆಯನ್ನು ಶರಣರು ಟ್ರೇಸ್ ಮಾಡಿರುವ ವಿಧಾನವು ಆಧುನಿಕ ಮನಃಶಾಸ್ತ್ರೀಯ ವಿಜ್ಞಾನದ ರೋಗ ಪತ್ತೆ ಹಚ್ಚುವ ವಿಧಾನವನ್ನು ಅಕ್ಷರಶಃ ಹೋಲುತ್ತದೆ.
ಒಂದು ಸಮಾಜದ ಚಿತ್ತದಲ್ಲಿರುವ ಭ್ರಾಮಕ ವರ್ತನೆಗಳೇ ವ್ಯಕ್ತಿಯ ಚಿತ್ತದಲ್ಲಿರುವ ಭ್ರಾಮಕ ನಡಾವಳಿಗಳು ಮತ್ತು ವರ್ತನೆಗಳನ್ನು ರೂಪಿಸಿ, ನಿರ್ದೇಶಿಸುತ್ತಿರುತ್ತವೆ. ವ್ಯಕ್ತಿ ಮತ್ತು ಸಮಾಜದಲ್ಲಿರುವ ಈ ಅನುಚಿತವಾದ ಭ್ರಾಮಕ ಚಿತ್ತದ ಮುಖ್ಯ ಲಕ್ಷಣವೇನೆಂದರೆ ಅದರೊಳಗೆ ಮತೀಯ ಅಹಮಿಕೆಗಳಿರುತ್ತವೆ. ಅವು ಜಾತಿ ಮತ್ತು ಸಂಪ್ರದಾಯಗಳಿಂದ ಛಿದ್ರಛಿದ್ರವಾಗಿ ಪ್ರತ್ಯೇಕಗೊಂಡಿರುತ್ತವೆ. ಅದರೊಳಗೆ ಕಾಲ್ಪನಿಕ ಧಾರ್ಮಿಕ ಉನ್ಮಾದಗಳಿರುತ್ತವೆ. ದ್ವೇಷ, ಅಸೂಯೆಗಳೆಂಬ ಭಾವನಾತ್ಮಕ ಪ್ರಚೋದನೆಗಳಿಗೆ ತಕ್ಕ ಪ್ರತಿಕ್ರಿಯೆಗಳಿವೆ. ಅಧಿಕಾರ ಲೋಲುಪತೆಗಳಿವೆ. ಶೋಷಣೆಗಳಿವೆ, ಯುದ್ಧಭೀತಿಯಂತಹ ಹಿಂಸೆಗಳಿವೆ. ಸ್ವಾರ್ಥ, ಕ್ರೌರ್ಯ, ಕುಹಕ, ಇತ್ಯಾದಿ, ಇತ್ಯಾದಿ ಪಾರಂಪರಿಕವಾದ ಭ್ರಾಮಕ ವರ್ತನೆಗಳಿಂದ ಅದು ತುಂಬಿ ಹೋಗಿರುತ್ತದೆ. ವ್ಯಕ್ತಿ ಮತ್ತು ಸಮಾಜದ ವರ್ತನೆಗಳನ್ನು ಪ್ರಯತ್ನಪೂರ್ವಕವಾಗಿ ಹೋಗಲಾಡಿಸದಿದ್ದಲ್ಲಿ ಮಾನವರೆಲ್ಲರೂ ಒಳಗೊಂಡು ಬಾಳುವ ಸ್ವಾಸ್ಥ್ಯ ಮನೋಭಾವ ಸಾಧ್ಯವಿಲ್ಲ. ಸಕಲ ಜೀವಿಗಳಿಗೂ ಲೇಸನ್ನು ಬಯಸುವ ಅತ್ಯುತ್ಕೃಷ್ಟವಾದ ಅಂತಃಶಕ್ತಿಯಿರುವ ಧರ್ಮವೊಂದನ್ನು ಈ ಲೋಕದಲ್ಲಿ ನಿಜಗೊಳಿಸಲಾಗದೆಂಬುದನ್ನು ಶರಣರು ಚೆನ್ನಾಗಿ ಅರಿತಿದ್ದರು. ವಚನಗಳ ಅಧ್ಯಯನದಿಂದಲೂ ಇದು ಇನ್ನಷ್ಟು ಖಚಿತವಾಗುತ್ತದೆ.

ಈ ಐದು ಚಿತ್ತಗಳ ಪಾರಂಪರಿಕ ಕೊಳಕನ್ನು ಹೋಗಲಾಡಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಶರಣರನ್ನು ಬಿಟ್ಟಿಲ್ಲ. ಆದ್ದರಿಂದ ಶರಣರು ಈ ಭವಭಾರಿಯನ್ನು ದಾಟಿಕೊಂಡೇ ಮುಂದೆ ಸಾಗಬೇಕಾಯಿತು. ಏಕೆಂದರೆ ಇವೆಲ್ಲವೂ ತಾನು ಶರಣಮಾರ್ಗಕ್ಕೆ ಬಾರದ ಮುನ್ನ ತನ್ನೊಳಗೆ ತಾನು ಸಿಕ್ಕಿ ಹಾಕಿಕೊಂಡಿದ್ದ ಕದಳಿ! ಇಲ್ಲಿ ದಾಟದೆ ಬೇರೆ ಯಾವ ಗತ್ಯಂತರವೂ ಇಲ್ಲ. ಗುರುವಿನ ಅರಿವಿನಂತೆ ತಮ್ಮನ್ನು ತಾವು ನಿತ್ಯ ಸತ್ಯವಾಗಿಹ ಅರಿವಿನೆಡೆಗೆ ಸಾಗಬೇಕೆಂದರೆ ಚಂಚಲತೆಯಿಂದ ಅತ್ತಿತ್ತ ಹರಿದಾಡುತ್ತಲೇ ಇರುವ ಈ ಚಿತ್ತವನ್ನು ವಿರಮಿಸಿಕೊಳ್ಳುವಂತೆ ಮಾಡದೇ ಬೇರೆ ಗತ್ಯಂತರವಿಲ್ಲ.

ಶರಣರು ಈ ಚಿತ್ತಚಾಂಚಲ್ಯವನ್ನು ನಿರೋಧಿಸಿಕೊಳ್ಳಲು ಪಟ್ಟ ಪರಿಶ್ರಮ ಮತ್ತು ಶ್ರದ್ಧೆ ಸಾವಿರಾರು ವಚನಗಳಲ್ಲಿ ಬಗೆಬಗೆಯಾಗಿ ದಾಖಲಾಗಿದೆ. ಮಹಾಸಮುದ್ರದಲ್ಲಿನ ಅಲೆಗಳು ಒಂದರ ನಂತರ ಮತ್ತೊಂದು ಎಡೆಬಿಡದೆ ಸಾಗಿ ಬರುವಂತೆ, ಚಿತ್ತ ಸಾಗರದಲ್ಲಿಯೂ ಒಂದರ ನಂತರ ಮತ್ತೊಂದು ವಿಷಯವು ಅದರದೇ ಆದ ಅಮಲುಗಳನ್ನು ಹೊತ್ತು ತಂದು ಮುಂದೆ ದಬ್ಬುತ್ತದೆ. ಪ್ರತಿಯೊಂದು ವಿಷಯವೂ ತನ್ನಿಚ್ಛೆಯಂತೆ ತನಗೆ ಬೇಕಾದುದನ್ನು ಪಡೆಯುವ ಹಂಬಲವನ್ನು ಮುಂದಿಡುತ್ತದೆ. ಮಗುವಿನಂತೆ ಹಠಕ್ಕೆ ಬಿದ್ದು ಒತ್ತಾಯಿಸುತ್ತದೆ. ಕಾಯಗುಣ ಅದಕ್ಕೆ ಪ್ರತಿಸ್ಪಂದಿಸಿ ಅದಕ್ಕೆ ಅನುವಾಗುವಂತೆ ಪ್ರವರ್ತಿಸಿದರೆ ಕ್ಷಣ ತೃಪ್ತತೆಯನ್ನು ಪಡೆದು ಸ್ವಲ್ಪ ಕಾಲದ ನಂತರ ಮತ್ತದೇ ಒತ್ತಾಯವಾಗಿ ಮುಂದೆ ಬರುತ್ತದೆ. ಚಿತ್ತವನ್ನು ಎಂದಿಗೂ ಪೂರ್ಣ ತೃಪ್ತಿಪಡಿಸಲಾಗದಾ ಕಡು ಚಾಕರಿ ಈ ಮೊಂಡು ಕಾಯದ್ದು. ಭಾವಾವೇಶಗಳೂ ಇದಕ್ಕೆ ಹೊರತಾಗಿಲ್ಲ. ಭಯ, ಅಸೂಯೆ, ಅಸಮಾಧಾನ, ಚಡಪಡಿಕೆ, ಇತ್ಯಾದಿಗಳು ನೆನಪಿನ ಸಂಗ್ರಹದಿಂದ ಅಂತರ್ ಚಿಲುಮೆಯಂತೆ ಚಿಮ್ಮಿ ಕಾಯದ ಮೇಲೆ ಕೆಸರೆರಚುತ್ತವೆ. ಪ್ರತಿ ಕೆರಳುವಿಕೆಯೂ ಆಳದ ಅಂತಃ ಪ್ರಜ್ಞೆಯನ್ನು ನಿಶ್ಯಕ್ತಗೊಳಿಸಿ ಮತಿಹೀನತೆ(ಪ್ರಜ್ಞೆ ಇಲ್ಲದಾ/ ಅರಿವಿಲ್ಲದಾ)ಯಲ್ಲಿ ಮುಳುಗಿಸುತ್ತವೆ.

ಚೇಳಿಂಗೆ ಬಸುರಾಯಿತ್ತೆ ಕಡೆ! ಬಾಳೆಗೆ ಫಲವಾಯಿತ್ತೆ ಕಡೆ!
ರಣರಂಗದಲ್ಲಿ ಕಾದುವ ಓಲೆಕಾರಂಗೆ ಓಸರಿಸಿತ್ತೆ ಕಡೆ!
ಮಾಡುವ ಭಕ್ತಂಗೆ ಮತಿಹೀನವಾದಡೆ ಅದೇ ಕಡೆ
ಕೂಡಲಸಂಗಮದೇವಾ.

ಚೇಳು ಬಸಿರಾದಡೆ ಅದರ ಜೀವ ಮುಗಿಯುತ್ತದೆಂದೇ ಅರ್ಥ. ಏಕೆಂದರೆ ಅದರ ಮರಿಗಳು ತನ್ನ ತಾಯಿಯನ್ನೇ ಮೊದಲ ಆಹಾರವಾಗಿ ಪಡೆಯುತ್ತವೆ. ಬಾಳೆ ಫಸಲು ಬಂದರೆ ಅದಕ್ಕೆ ಅದೇ ಕಡೆ. ಏಕೆಂದರೆ ಅದರ ಜೀವನ ಅಲ್ಲಿಗೆ ಮುಗಿಯುತ್ತದೆ. ಯುದ್ಧ ಭೂಮಿಯಲ್ಲಿ ಕಾದಾಡುವ ಸೈನಿಕ ತನ್ನ ಶಕ್ತಿಗುಂದಿ ಹಿಂಜರಿದರೆ ಅವ ಅಲ್ಲಿಯೇ ಶತೃಗಳಿಂದ ಹತನಾಗುತ್ತಾನೆ. ಹಾಗೆಯೇ ಅಂತರಂಗದ ಶುದ್ಧಿಗಾಗಿ ಚಿತ್ತದೊಂದಿಗಿನ ಹೋರಾಟದಲ್ಲಿ ಶ್ರದ್ಧೆಯಿಟ್ಟಿರುವ ಭಕ್ತನಿಗೆ ಅದೇ ಚಿತ್ತದ ಚಂಚಲತೆಯಿಂದ ಮತಿಹೀನಕ್ಕೆ ಗುರಿಯಾದರೆ ಅವನಿಗೆ ಮತ್ತೆಂದೂ ಅರಿವಿನ ಹಾದಿ ಪ್ರವೇಶಿಸುವ ಸೌಭಾಗ್ಯವಿಲ್ಲ. ಈ ವಚನದ ಮೂಲಕ ಅರಿವಿಗಿರುವ ಏಕೈಕ ದಾರಿಯೊಂದನ್ನು ಸೂಚಿಸಲಾಗಿದೆ.
ಮತ್ತೊಂದು ಕಡೆ ಅಲ್ಲಮರು ಚಿತ್ತ ಚಾಂಚಲ್ಯವನ್ನು ಬಗೆಹರಿಸಿಕೊಳ್ಳುವುದರ ಮಹತ್ವದ ಬಗ್ಗೆ ಹೇಳುತ್ತಾರೆ-

ಅರಿವಿನ ನಿರಿಗೆಗಾಣದೆ ಗಿರಿಯ ಕೋಡುಗಲ್ಲ ಮೇಲೆ
ತಲೆಯೂರಿ ತಪಸ್ಸು ಮಾಡಿದಡಿಲ್ಲ, ಇಲ್ಲದ ಕಾಲಕ್ಕಿಲ್ಲ,
ಗಾತ್ರವ ದಂಡಿಸಿದಡಿಲ್ಲ, ಪೃಥ್ವಿಯ ತಿರುಗಿದಡಿಲ್ಲ,
ತೀರ್ಥಂಗಳ ಮಿಂದು ನಿತ್ಯನೇಮಂಗಳ ಮಾಡಿ
ಜಪಸಮಾಧಿಯಲ್ಲಿ ನಿಂದಡಿಲ್ಲ,
ಪೂಜಾಕೋಟಿಸಮಂ ಸ್ತೋತ್ರಂ, ಸ್ತೋತ್ರಕೋಟಿಸಮಂ ಜಪಃ
ಜಪಕೋಟಿ ಸಮಂ ಧ್ಯಾನಂ, ಧ್ಯಾನಕೋಟಿರ್ಮನೋ ಲಯಃ_
ಎಂದುದಾಗಿ,
ಸುತ್ತಿಸುಳಿವ ಮನವ ಚಿತ್ತಿನಲ್ಲಿರಿಸಿ, ಚಿತ್ತು ಲಯವಾದಡೆ ನಿತ್ಯಪ್ರಕಾಶ!
ಗುಹೇಶ್ವರಲಿಂಗವ ಮತ್ತೆ ಅರಸಲುಂಟೆ?

ಬೆಟ್ಟದ ಮೇಲಿನ ಲಂಬಾಕಾರದ ಕಲ್ಲನ್ನು ಕೋಡುಗಲ್ಲು ಎನ್ನಲಾಗುತ್ತದೆ. ಅಂತಹ ಕೋಡುಗಲ್ಲಿನ ಮೇಲೆ ತಲೆಕೆಳಗೆ ನಿಂತು ತಪಸ್ಸು ಮಾಡಿದರೂ, ಶರೀರವನ್ನು ನೇಮ ನಿಷ್ಠೆಗಳಿಂದ ಬಳಲಿಸಿ ಯೋಗ ಪ್ರಾಣಾಯಾಮಗಳಿಂದ ದೇಹ ದಂಡಿಸಿದರೂ, ಇಡೀ ಭೂಖಂಡವನ್ನು ಪ್ರದಕ್ಷಿಣೆ ಹಾಕಿದರೂ, ಪುಣ್ಯತೀರ್ಥಂಗಳಲ್ಲಿ ಸ್ನಾನ ಮಾಡಿದರೂ, ವಿವಿಧ ರೀತಿಯ ಜಪತಪ ಸಮಾಧಿಗಳನ್ನು ಮಾಡಿದರೂ ಪ್ರಾಣಲಿಂಗ ಸಂಬಂಧ ಸಾಧ್ಯವಿಲ್ಲಾ. ಈ ವಚನದ ಹೋಲಿಕೆ ಕೋಟಿ ಪೂಜೆಗಳು ಒಂದು ಸ್ತೋತ್ರಕ್ಕೆ ಸಮ! ಕೋಟಿ ಸ್ತೋತ್ರಗಳು ಒಂದು ಜಪಕ್ಕೆ ಸಮ! ಕೋಟಿ ಜಪಗಳು ಒಂದು ಧ್ಯಾನಕ್ಕೆ ಸಮ! ಕೋಟಿ ಧ್ಯಾನಗಳು ಒಂದು ಮನೋಲಯಕ್ಕೆ ಸಮ ಎಂದು ಹೇಳಿ, ಸುತ್ತಿ ಸುಳಿವ ಮನವ ಚಿತ್ತಿನಲ್ಲಿರಿಸಿ, ಆ ಚಿತ್ತ ಲಯವಾದೊಡೆ ಅದೇ ಪ್ರಾಣಲಿಂಗವೆಂಬ ಸ್ವಯ ಎನ್ನುತ್ತದೆ.
ಬಹಳ ಮುಖ್ಯವಾದ ಎರಡು ಕಾರಣಗಳಿಂದ ಈ ವಚನಕ್ಕೆ ತನ್ನದೇ ಆದ ವಿಶಿಷ್ಠ ಮಹತ್ವವಿದೆ. 1. ಜೀವನ್ಮುಕ್ತಿಗಾಗಿ ಈಗಾಗಲೇ ನಮಗೆ ವಿಧಿಸಲ್ಪಟ್ಟಿರುವ ವೈದಿಕ ಸಂಪ್ರದಾಯಗಳ ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿಯಂತಹ ಯೌಗಿಕ ಜ್ಞಾನಗಳನ್ನು ನಿರಾಕರಣೆ ಮಾಡುವುದರ ಮೂಲಕ 2. ಕ್ಷಣಕ್ಷಣವೂ ಸುಳಿದಾಡುವ ಚಂಚಲತೆಯ ಚಿತ್ತದಿಂದಾಚೆಗಿರುವ ಈ ಅನಂತ ನಿಸರ್ಗ ತತ್ವದೊಂದಿಗೆ ತನಗಿರುವ ಅನೂಹ್ಯವಾದ ಹಾಗೂ ಅಖಂಡವಾದ ಸಂಬಂಧದೊಂದಿಗಿನ ಅನುಸಂಧಾನ. ಕಣ್ಣೆದುರಿನಲ್ಲೇ ಲೋಕಸತ್ಯದಲ್ಲಿ ಅಡಗಿರುವ ಪ್ರಾಣಚೇತನದ ನಿರಂತರತೆಯಲ್ಲಿ ನನ್ನನ್ನು ಗ್ರಹಿಸಿಕೊಳ್ಳುವ ಅರಿವಿನ ಮಾರ್ಗ! ಸದಾ ಬದಲಾಗುತ್ತಲೇ ಇರುವ ಭೌತಿಕ ದ್ರವ್ಯದ ಪರಿಣಾಮಿಯಾಗಿರುವ ಪ್ರಾಣಲಿಂಗ ಚೇತನದ ಜಂಗಮಾವಸ್ಥೆಗೆ ಕಣ್ತೆರೆಯುವ ಅರಿವಿನ ಪಥ!!!

ಜ್ಞಾನ ಮತ್ತು ಅರಿವು ಬೇರೆ ಬೇರೆ. ಜ್ಞಾನಕ್ಕೆ ಆಧಾರ ಶಾಸ್ತ್ರಗ್ರಂಥಗಳು. ಅರಿವಿಗೆ ಆಧಾರ ಸ್ವಾನುಭವ. ಜ್ಞಾನವು ಚಿತ್ತಸದೃಶ. ಅರಿವು ಲೋಕಸದೃಶ. ಜ್ಞಾನ ವಿಸರ್ಜನೆಯನ್ನು ಪ್ರತಿಯೊಂದು ವಚನವೂ ಒಂದಿಲ್ಲ ಮತ್ತೊಂದು ರೀತಿಯಲ್ಲಿ ಅಭಿವ್ಯಕ್ತಿಸುತ್ತವೆ. ಏಕೆಂದರೆ ಜ್ಞಾನ ಧರ್ಮಾಧಿಕಾರಗಳ ಸೃಷ್ಠಿ. ಧರ್ಮಾಧಿಕಾರದ ಮೂಲಕ ಇಡೀ ಜನಸಮೂಹವನ್ನು ಧರ್ಮಾಧಿಕಾರದಲ್ಲಿ ಹಿಡಿತ ಸಾಧಿಸುವ ಪರಮೋದ್ದೇಶ ಶಾಸ್ತ್ರಗ್ರಂಥಗಳಿಗಿರುತ್ತದೆ. ಧರ್ಮಾಧಿಕಾರದಲ್ಲಿ ಸಮಾನತೆ, ಭಾತೃತ್ವ ಮತ್ತು ಸ್ವಾತಂತ್ರ್ಯವಾದ ಚಿಂತನೆಗಳು ಎಂದಿಗೂ ಹುಟ್ಟಲು ಸಾಧ್ಯವಿರುವುದಿಲ್ಲ. ಅರಿವಿನ ಮಾರ್ಗವು ಒಬ್ಬ ವ್ಯಕ್ತಿಗಿರುವ ನಿಸರ್ಗದತ್ತವಾದ ಸ್ವಾತಂತ್ರ್ಯ ಚಿಂತನೆ ಮತ್ತು ಒಳಗೊಂಡು ಬಾಳಬೇಕಾದ ಅರಿವನ್ನು ಒದಗಿಸುತ್ತವೆ. ಅರಿವು ತನ್ನ ಸುತ್ತಲಿನ ನಿಸರ್ಗ ವಿವೇಕದೊಂದಿಗೆ ತನಗಿರುವ ಅಂತಃಸಂಬಂಧದೆಡೆಗೆ ತನ್ನ ಅರಿವನ್ನು ವಿಸ್ತರಿಸಿಕೊಂಡರೆ ಜ್ಞಾನವು ಅದರದೇ ಆದ ಕಾಲ್ಪನಿಕ ಆವರಣದಿಂದಾಚೆಗೆ ಜಿಗಿಯದೇ ತನ್ನನ್ನು ನಿರ್ಬಂಧಿಸಿಕೊಳ್ಳುತ್ತದೆ.

ಬಹುತೇಕ ವಿಶ್ವದ ಎಲ್ಲಾ ಜ್ಞಾನಶಾಖೆಗಳೂ ಐದು ಚಿತ್ತಗಳಿಂದಲೇ ಸೃಷ್ಟಿಸಲ್ಪಟ್ಟಿರುತ್ತವೆ. ಆದ್ದರಿಂದ ಸೃಷ್ಟಿಸಲ್ಪಟ್ಟಿರುವ ಎಲ್ಲಾ ಜ್ಞಾನಗಳನ್ನು ಐದು ಚಿತ್ತಗಳು ಅತ್ಯಂತ ವೇಗವಾಗಿಯೂ, ಸುಲಭವಾಗಿಯೂ ಗ್ರಹಿಸಿಕೊಂಡುಬಿಡುತ್ತವೆ. ಅರಿವು ಹಾಗಲ್ಲ, ಐದು ಚಿತ್ತಗಳು ನಿಶ್ಚಲ ನಿರ್ವಾತವಾದಾಗ ಅದು ಪ್ರಕಾಶಿಸುತ್ತದೆ. ಅರಿವಿಗೆ ಯಾವುದೇ ತೆರನಾದ ಪೂರ್ವಾಗ್ರಹಗಳೂ ಇರುವುದಿಲ್ಲ. ಅರಿವು ವರ್ತಮಾನದ ವಿವೇಕದೊಂದಿಗೆ ಸ್ಪಂದಿಸುತ್ತದೆ. ಆದ್ದರಿಂದ ಅರಿವು, ಭೂತ ಭವಿಷ್ಯತ್ತುಗಳಿಲ್ಲದಾ ವರ್ತಮಾನಿಕ ಸತ್ಯ. ಪ್ರಾಣಲಿಂಗ ವರ್ತಮಾನ ಸತ್ಯದಲ್ಲಿರುತ್ತದೆ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ವಚನಗಳು ಜ್ಞಾನವನ್ನು ‘ಕಲ್ಪಿತ’ ಎಂತಲೂ ಅರಿವನ್ನು ‘ಅಕಲ್ಪಿತ’ ಎಂತಲೂ ನಿರ್ವಚಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕೆಲವೊಂದು ವಚನಗಳ ಓದು ಶರಣಮಾರ್ಗವನ್ನು ‘ಅರಿವಿನ ಮಾರ್ಗ’ ಎಂದು ಗ್ರಹಿಸಿಕೊಳ್ಳಲಾಗದೇ ಶರಣರನ್ನು ಜ್ಞಾನಮಾರ್ಗದಲ್ಲಿ ಅಪವ್ಯಾಖ್ಯಾನಿಸಿರುವುದುಂಟು. ಈ ತಪ್ಪು ಗ್ರಹಿಕೆಯಿಂದಾಗಿ ವೇದವೇದಾಂತ ಪ್ರಣೀತವಾದ ಮಹಾದ್ವೈತ, ವಿಶಿಷ್ಟಾದ್ವೈತ, ಶಕ್ತಿವಿಶಿಷ್ಟಾದ್ವೈತ ಹಾಗೂ ಯೋಗವಾಸಿಷ್ಠಗಳೊಂದಿಗೆ ವಚನಗಳನ್ನು ಸಮೀಕರಿಸುತ್ತಿರುವುದು ದುರಂತ! ಶರಣರನ್ನು ಯಾವುದೇ ಒಂದು ಪಥ ಅಥವಾ ದರ್ಶನ ಶಾಸ್ತ್ರದ ನೆಲೆಗಟ್ಟಿನಲ್ಲಿ ಗ್ರಹಿಸುವಿಕೆಯು ವೈದಿಕರ ಸಾಂಸ್ಕೃತಿಕ ರಾಜಕಾರಣಕ್ಕೆ ಸಶಕ್ತ ಹತಾರವಾಗುತ್ತದೆ. ಈ ಹತಾರ ಶರಣ ತತ್ವಕ್ಕೆ ಬಹಳ ದೊಡ್ಡ ಮಾರಕವಾಗಿದೆ. ಶರಣರು ಯಾವ ಪಾಂಥಿಕ ನೆಲೆಗಳ ಮೇಲೆ ಬಂಡಾಯ ಹೂಡಿದರೋ ಆ ಬಂಡಾಯ ಶಕ್ತಿಯನ್ನು ಅದೇ ವೈದಿಕ ಪಂಥಗಳ ನೆಲೆಗಳಿಗೆ ಅನುಕೂಲವಾಗುವಂತೆ ಮಾಡುವ ಇಂತಹ ಅಪವ್ಯಾಖ್ಯಾನಗಳು ಮಾನವೀಯತೆಯನ್ನು ಮೆರೆದ ತತ್ವಗಳಿಗೆ ತುಂಬಾ ಅಪಾಯಕಾರಿಯಾಗಿವೆ. ಕೆಲವೊಮ್ಮೆ ವಚನ ಸಾಹಿತ್ಯದ ಸರಿಯಾದ ಅಧ್ಯಯನದ ಕೊರತೆಯಿಂದಲೂ ಇಂತಹ ಅಪವ್ಯಾಖ್ಯಾನಗಳು ಮುನ್ನೆಲೆಗೆ ಬಂದು ಬಿಡುವ ಸಂಭವ ಕೂಡಾ ಉಂಟು. ಹನ್ನೆರಡನೇ ಶತಮಾನದ ಹೊತ್ತಿಗೆ ಭಾರತದಲ್ಲಿ ಎಷ್ಟು ಪಂಥಗಳು ಅಸ್ತಿತ್ವದಲ್ಲಿದ್ದವೋ ಅವೆಲ್ಲವುಗಳನ್ನು ಒಂದೂ ಬಿಡದಂತೆ ಎಲ್ಲವನ್ನೂ ಅವರು ಬಯಲಿಗೆಳೆದು ನಿರಾಕರಿಸಿದ್ದಾರೆ. ಯಾವುದೋ ಒಂದೆರಡು ವಚನಗಳು ಮತ್ಯಾವುದೋ ಪಂಥಕ್ಕೆ ಹತ್ತಿರವಾಗಿವೆ ಅಂದ ಮಾತ್ರಕ್ಕೆ ಇಡೀ ಶರಣ ಮಾರ್ಗವನ್ನು ಒಂದು ದರ್ಶನಶಾಸ್ತ್ರಕ್ಕೆ ಸಮೀಕರಿಸುವುದು ಎಷ್ಟು ಸರಿ ಎಂಬುದನ್ನು ವಿವೇಚಿಸಿಕೊಳ್ಳಬೇಕಿದೆ. ಶರಣರ ಅರಿವಿನ ಮಾರ್ಗ ಯಾವುದೇ ಪಂಥಗಳ, ಧರ್ಮಶಾಸ್ತ್ರಗಳ ತಾತ್ವಿಕ ವಿವಕ್ಷೆಗಳಿಗೆ ಅತೀತವಾದದ್ದು. ಅದಕ್ಕೆ ಯಾವುದೇ ಧರ್ಮದ ಅಥವಾ ತತ್ವದ ಹಂಗಿಲ್ಲ. ವರ್ತಮಾನದ ಲೋಕ ತಲ್ಲಣಗಳಿಗೆ ಅತ್ಯುಪಯುಕ್ತ ಮೌಲ್ಯಗಳನ್ನು ತುಂಬಿದ ಅರಿವಿನ ಮಾರ್ಗ ಇದಾಗಿದೆ. ಇಂತಹ ಅವರ ಅರಿವಿನ ಮಾರ್ಗದ ಕುರಿತು ವಿವರಿಸಲ್ಪಡುವ ಬೇಕಾದಷ್ಟು ವಚನಗಳು ನಮಗೆ ಲಭ್ಯವಾಗಿವೆ. ಈ ಲೇಖನದ ಮಿತಿಯನ್ನಾಧರಿಸಿ ಇಲ್ಲೊಂದು ವಚನವನ್ನು ನೀಡಬಹುದಾಗಿದೆ.

ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ!
ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು.

ಇಲ್ಲಿ ಸಕಲ ವೇದಶಾಸ್ತ್ರಗಳೆಲ್ಲವೂ ನೇಣಿನಂತೆ, ಅಜ್ಞಾನವೆಂಬ ತೊಟ್ಟಿಲು ಮುರಿಯಬೇಕು, ವೇದ ಶಾಸ್ತ್ರಗಳ ನೇಣ ಹರಿಯಬೇಕು. ಜ್ಞಾನವೆಂಬ ಶಿಶುವನ್ನು ತೂಗಿ ಜೋಗುಳ ಹಾಡುತ್ತಿರುವ ಭ್ರಾಂತಿಯ ತಾಯ ಜೋಗುಳ ನಿಲ್ಲಬೇಕು. ಶಾಸ್ತ್ರಜ್ಞಾನಗಳು ಕೇವಲ ಗ್ರಾಂಥಿಕ ಮಾತ್ರ ಅಲ್ಲ; ಅವು ನಮ್ಮ ಚಿತ್ತವನ್ನು ರೂಪಿಸಿರುತ್ತವೆ ಎಂಬುದನ್ನು ಅಲ್ಲಮರು ಈ ವಚನದಲ್ಲಿ ಅದ್ಭುತ ರೂಪಕ ಪ್ರಸಂಗವನ್ನಾಗಿಸಿ ನಮ್ಮ ಮುಂದಿಟ್ಟಿದ್ದಾರೆ. ಜ್ಞಾನವೆಂಬ ಶಿಶು ಎಂದಿರುವುದರಿಂದ, ಜ್ಞಾನವನ್ನಿಲ್ಲಿ ಶಿಶುವನ್ನಾಗಿಸಿದೆ- ಜ್ಞಾನದ ಕುರಿತಾಗಿ ವ್ಯಾಮೋಹ ತಾಳಿರುವ ನಮ್ಮೊಳಗಿನ ಭ್ರಾಂತಿಗೆ ತಾಯಿ ಎನ್ನಲಾಗಿದೆ, ಭ್ರಾಂತಿಯೆಂಬ ತಾಯ ವ್ಯಾಮೋಹದಿಂದ ಹುಟ್ಟಿದ್ದು ಜ್ಞಾನ ಎಂದಾಯ್ತು. ಅದೆಷ್ಟೇ ಶ್ರೇಷ್ಠವಾದ ಜ್ಞಾನವಾದರೂ ಅದು ಭ್ರಾಂತಿಯಿಂದಲೇ ಹುಟ್ಟಿದೆ. ಭ್ರಾಂತಿಯ ಮೂಲ ಆಸೆಯೇ ಆಯ್ತು! ಆಸೆ ಯಾವುದಾದರೇನು, ಅದು ಆಸೆ ತಾನೇ? ಆದ್ದರಿಂದ ಭ್ರಾಂತಿ, ಆಸೆ, ಜ್ಞಾನ ಇವೆಲ್ಲವೂ ವ್ಯಾಮೋಹದಿಂದಲೇ ಆಯ್ತು. ವ್ಯಾಮೋಹ ಚಿತ್ತದ ಸೃಷ್ಠಿ. ಆದ್ದರಿಂದ ಶರಣರು ಮನುಷ್ಯ ಸೃಷ್ಠಿಯ ವ್ಯಾಮೋಹದಲ್ಲಿ ಏನನ್ನೂ ಹುಡುಕುವುದಿಲ್ಲ. ಏಕೆಂದರೆ ಅದು ಕಾಲ್ಪನಿಕ; ಕಲ್ಪನೆಯು ಅವರ ಪ್ರಕಾರ ಲಿಂಗಕ್ಕೆ ದೂರ. “ಲಿಂಗವರಿದಿಹೆನೆಂದರೆ ಮನವಿಲ್ಲದಿರಬೇಕು.” ಹಾಗಾದರೆ ಶರಣರ ಅರಿಮೆಯ ಅರಿವಿನ ತಾಣ ಯಾವುದು?

ಕಾಯದಿಂದ ಲಿಂಗದರುಶನ, ಕಾಯದಿಂದ ಜಂಗಮ ದರುಶನ,
ಕಾಯದಿಂದ ಪ್ರಸಾದಸಂಪತ್ತು.
ಕೂಡಲಚೆನ್ನಸಂಗಯ್ಯಾ
ಆ ಕಾಯದಲ್ಲಿ ನಿಮ್ಮುವ ಕಂಡೆನಯ್ಯಾ.

ಈ ವಚನದಿಂದ ಹೃದ್ಗೋಚರವಾಗುವುದೆಂದರೆ ಕಾಯದೊಳಗೆ ಚಿತ್ತ ಮತ್ತು ಮನಸ್ಸಿನ ಹಂಗಿಗೆ ಒಳಗಾಗದೇ ಕಾಯದ ಪ್ರತಿಕಣಕಣದಲ್ಲಿ ಚೈತನ್ಯ ಶಕ್ತಿಯಾಗಿ ಮೈದುಂಬಿಕೊಂಡಿರುವ ಲಿಂಗದೊಳು ತಾನಾಗಿರಬೇಕು.
ಈ ಲಿಂಗ ಚಿತ್ತ ವ್ಯಾಮೋಹದಿಂದ ಕಲ್ಪಿಸಿಕೊಂಡದ್ದಲ್ಲ. ಭಾವಿಸಿಕೊಂಡದ್ದೂ ಅಲ್ಲ. ತಾನೇ ಸ್ವಯಂ ಕಲ್ಪನೆಯಿಂದ ರೂಪಿಸಿಕೊಂಡದ್ದಲ್ಲ. ಅದು ಅನಂತ ನಿಸರ್ಗ ಲೋಕಾವಸ್ಥೆಯ ಮೂಲದಲ್ಲಿರುವ ಜೈವಿಕ ಸತ್ಯ. ಅಲ್ಲೇ ಲಿಂಗಪ್ಪನೆಂಬ ವಿದ್ರೋಹಿ ಅರಿವಿಗನಿರುವ ಜಾಗ!!!

ಕಾಮಿಸಿ ಕಲ್ಪಿಸಲಿಲ್ಲ, ಕಲ್ಪಿಸಿ ಭಾವಿಸಲಿಲ್ಲ,
ಭಾವಿಸಿ ರೂಪಿಸಲಿಲ್ಲ, ರೂಪಿಸಿ ಭೇದಿಸಲಿಲ್ಲ.
ಇದು ಕಾರಣ, ಕೂಡಲಚೆನ್ನಸಂಗಮದೇವಾ,
ಸರ್ವಾಂಗಲಿಂಗವಾದಲ್ಲಿ ಅನರ್ಪಿತವಿಲ್ಲ.

ಈ ಲೇಖನ ಈಗ ಬಹಳ ಮುಖ್ಯವಾದ ಘಟ್ಟವೊಂದನ್ನು ತಲುಪಿದೆ ಎನ್ನಬಹುದು. ಭಿನ್ನಭಿನ್ನ ಖಂಡಗಳಾಗಿ ವಿಘಟನೆಯಾಗಿದ್ದ ಒಂದು ಸಮಾಜದಲ್ಲಿ ಎಲ್ಲಾ ಮನುಷ್ಯರೂ ಸಮ ಎಂದು ಸಾಬೀತುಪಡಿಸಲು ಹಾಗೂ ಆರ್ಥಿಕ ಮತ್ತು ನಿತ್ಯ ಬಳಕೆಯ ಉತ್ಪಾದನೆಗಳಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂದರಿತು ಅವುಗಳ ಸಮಾನ ಹಂಚಿಕೆಗೆ ಕಾಯಕ ಹೇಗೆ ಒಂದು ಪ್ರಬಲ ಅಸ್ತ್ರವಾಗಿತ್ತೋ ಎಂಬುದನ್ನು ನಾವು ಈ ಹಿಂದೆ ನೋಡಿದೆವು. ಇವೆಲ್ಲಕ್ಕಿಂತಲೂ ಮಿಗಿಲಾಗಿ ಕಾಯಕವೆಂಬ ಸತ್ಕ್ರಿಯಾಚರಣೆಯ ಮೂಲಕ ಅಂತರಂಗದಲ್ಲಿ ಸದಾ ತುಡಿಯುತ್ತಲೇ ಇರುವ ಐದು ಚಿತ್ತಗಳಿಗೆ ಚಿಕಿತ್ಸೆ ನೀಡುತ್ತಾ, ಈ ಐದರ ರುಚಿಗಳನ್ನು ನಿರಸನಕ್ಕೊಳಗಾಗಿಸಿ ಕಾಯದೊಳಗಿರುವ ಪ್ರಾಣಲಿಂಗದ ಮಹಾ ಅರಿವಿನೆಡೆಗೆ ಶರಣರ ಲಿಂಗಪ್ರವೇಶ ಪಡೆದ ಬಗೆ ಮಹತ್ವಕಾಂಕ್ಷೆಯದು. ಕಾಯವೆಂಬ ಸ್ವರೂಪದ ಮೂಲಕ ಅರಿವೆಂಬ ಪ್ರಾಣಲಿಂಗದ ನಿರೂಪಕ್ಕೆ ಸಂಗಮಿಸುವ ಬೆಡಗಿದು. ಭ್ರಾಂತಿಯಿಂದ ನಿಸರ್ಗದ ವಸ್ತುಸ್ಥಿತಿಯಲ್ಲಿರುವ ಅರಿವನ್ನು ಗುರುವಾಗಿಸಿಕೊಳ್ಳುವ ಲಿಂಗಾಚಾರವು ಕಾಯಕದ ಮೂಲಕ ಜರುಗುವುದಾದರೂ ಹೇಗೆ?

ಶರಣರಲ್ಲಿ ಲಿಂಗಾಂಗ ಸಂಗ ಅಥವಾ ಲಿಂಗಾಂಗ ಸಮರಸ ಸಿದ್ಧಿಗಾಗಿ ಕಾಯಕವು ಆತ್ಯಂತಿಕವಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಲಿಂಗ- ಅಂಗಗಳ ಸಮರಸ ಎಂದರೆ ಅಂಗವೆಂದರೆ ದೇಹ ಅಥವಾ ಕಾಯ; ಲಿಂಗವೆಂದರೆ ನಿಸರ್ಗತತ್ವದ ಆಳದಲ್ಲಿರುವ ಜೀವೋನ್ಮಾದಕ ಚೈತನ್ಯ! ಇದನ್ನೇ ಪ್ರಾಣಲಿಂಗವೆಂದರು. ಪ್ರಾಣಲಿಂಗವೇ ಅವರ ಏಕೋದ್ವಯವಾದ ದೈವ. ಸಕಲ ವಸ್ತು ಪಡಿಪದಾರ್ಥ ಹಾಗೂ ಸಚರಾಚರ ಜೀವಗಳಲ್ಲಿ ಸಮಾನವಾಗಿ ತುಂಬಿ ಚಲನಶೀಲವಾಗಿರುವ ಈ ಜೀವೋನ್ಮಾದಕ ಶಕ್ತಿಯು ಪ್ರಾಣಾಧಾರ ಶಕ್ತಿಯೂ ಆಗಿದೆ.

ಕಾಯವೆ ಪೀಠಿಕೆ ಪ್ರಾಣವೆ ಲಿಂಗವಾಗಿರಲು,
ಬೇರೆ ಮತ್ತೆ ಕುರುಹೇಕಯ್ಯಾ?
ಕುರುಹುವಿಡಿದು ಕೂಡುವ ನಿರವಯವುಂಟೆ? ಜಗದೊಳಗೆ.
ನಷ್ಟವ ಕೈಯಲ್ಲಿ ಹಿಡಿದು ದ್ರಷ್ಟವ ಕಂಡೆಹೆನೆಂದಡೆ,
ಕಪಿಲಸಿದ್ಧಮಲ್ಲಿನಾಥಯ್ಯನು ಸಾಧ್ಯವಹ ಪರಿಯ ಹೇಳಾ ಪ್ರಭುವೆ.

ಇಲ್ಲಿ “ದ್ರಷ್ಟವ ಕಂಡಿಹೆನೆಂದರೆ” ಎಂಬ ವಾಕ್ಯದಲ್ಲಿ ‘ದ್ರಷ್ಟ’ ಎಂಬ ಪದ ಕಣ್ಣೆದುರಿಗಿನ ಲೋಕವನ್ನು ಪರಿಶೀಲಿಸಿ ತಿಳಿದ ಸತ್ಯ ಎಂದಾಗುತ್ತದೆ. ದ್ರಷ್ಟದಿಂದಲೇ ದೃಷ್ಟಾಂತ ಪ್ರಾಪ್ತಿ. ಈ ವಚನವು ನಿಸರ್ಗದ ಆಳದಲ್ಲಿರುವ ಪ್ರಾಣಚೈತನ್ಯವೇ ಶರಣರ ಲಿಂಗ ಅಥವಾ ದೈವ(ಶಿವ)ವೆಂಬುದನ್ನು ನಿಖರವಾಗಿ ಸ್ಪಷ್ಟೀಕರಿಸುತ್ತದೆ. ಇಂತಹ ಸ್ಪಷ್ಟನೆಯನ್ನು ನೀಡುವ ನೂರಾರು ವಚನಗಳು ವಚನ ಸಂಗ್ರಹದಲ್ಲಿ ಕಾಣಸಿಗುತ್ತವೆ.

ಲಿಂಗವೆ ಪ್ರಾಣ, ಪ್ರಾಣವೆ ಲಿಂಗವಾಯಿತ್ತು.
ಆ ಲಿಂಗವೆ ಲಿಂಗಾಂಗವಾಯಿತ್ತು.
ಗುಹೇಶ್ವರಲಿಂಗದಲ್ಲಿ
ಸರ್ವಾಂಗ ಪ್ರಾಣಲಿಂಗ ಸ್ವಾಯತವಾಯಿತ್ತು ಕಾಣಾ ಚೆನ್ನಬಸವಣ್ಣಾ.

ಆದಿಮಧ್ಯಂತರಹಿತವಾಗಿ, ಬಹಿರಂತರ್ಗತ ಬೇಧವಿಲ್ಲದೇ ನಿರಂತರ ಜಂಗಮಶೀಲವಾಗಿರುವ (ಪರಿವರ್ತನಾಶೀಲ) ಪ್ರಾಣಲಿಂಗದ ಅನುಭವ ಅರಿವಿನ ಮೂಲಕವೇ ಆಗಬೇಕು. ಶರಣರಿಗೆ ಜ್ಞಾನ ಮತ್ತು ಅರಿವು ಬೇರೆ ಬೇರೆ. ಜ್ಞಾನ ಅಂತಃಕರಣೇಂದ್ರಿಯಗಳ ಸೃಷ್ಠಿ, ಇಂದ್ರಿಯಾದಿಗಳಿಂದ ಸೃಷ್ಟಿಸಲ್ಪಟ್ಟ ಜ್ಞಾನದಿಂದ ಈ ವಿಶ್ವದಲ್ಲಿ ಏನೇನನ್ನು ತಿಳಿಯಲು ಸಾಧ್ಯವಿದೆಯೋ ಅದೆಲ್ಲವೂ ಜ್ಞಾನವೇ ಆಗಿದೆ. ಜ್ಞಾನವು ಐದು ಚಿತ್ತಗಳ ತಾಯಿ! ಜ್ಞಾನವು ನೆನಪಿನ ಸಂಗ್ರಹವಾಗಿರುವುದರಿಂದ ಪೂರ್ವೋತ್ತರೀಯ.

ಅರಿವಿಗೆ ನೆನಪಿನ ಸಂಗ್ರಹವಿರುವುದಿಲ್ಲ. ಅರಿವು ತಕ್ಷಣದ ವಿವೇಕದಲ್ಲಿರುತ್ತದೆ. ಅರಿವು ಪ್ರಜ್ಞೆಗೆ ಸಮಾನಾರ್ಥ. ವಚನಗಳು ಅರಿವನ್ನು ಎಚ್ಚರ, ಅಂತರ್ಬೋಧೆ, ಗುರು, ಶಿವ, ಸದಮಲಜ್ಞಾನ, ನಿಜಜ್ಞಾನ, ಚಿತ್ತಸತ್ಯ, ಲಿಂಗ, ಸುಯಿಧಾನ, ಸನ್ನಿಹಿತ ಎಂಬಿತ್ಯಾದಿ ಶಬ್ದಗಳಿಂದ ಸಂವಾದಿಸಿವೆ. ಜ್ಞಾನಕ್ಕೆ ನಿರ್ದಿಷ್ಟವಾದ ಭಾಷೆ ಇರುವುದರಿಂದ ಅದು ಸದಾ ಪ್ರತಿಕ್ರಿಯೆಯಲ್ಲಿರುತ್ತದೆ. ಅರಿವು ಸಂಜ್ಞಾ ಪ್ರಧಾನವಾದದ್ದರಿಂದ ಅದು ಸದಾ ಪ್ರಕ್ರಿಯೆಯಲ್ಲಿರುತ್ತದೆ. ನಮ್ಮ ಶರೀರದ ಸರ್ವಾವಯವಗಳ ಕಾರ್ಯ ಮತ್ತು ಬಹಿರ್ ಲೋಕದಲ್ಲಿ ನಡೆಯುತ್ತಿರುವ ನಿಸರ್ಗದತ್ತ ಕ್ರಿಯೆಗಳೆಲ್ಲವೂ ಅದರ ಲೀಲಾವಿಲಾಸವೇ ಆಗಿದೆ. ಆದ್ದರಿಂದ ಜ್ಞಾನವನ್ನು ನಾಮವೆಂತಲೂ ಅರಿವನ್ನು ರೂಪವೆಂತಲೂ ವಚನಗಳು ಸಂವಾದಿಸುತ್ತವೆ. ಬುದ್ಧಗುರುಗಳು ಸಹ ಇದನ್ನೇ ‘ಅನಂತ ಪಜ್ಞಮಯಿ’ ಎಂದು ಹೇಳಿದರು. ಅಂದರೆ ಸಚರಾಚರ ನಿಸರ್ಗವು ಪ್ರಜ್ಞೆಯಿಂದ ತುಂಬಿತುಳುಕಾಡುತ್ತದೆ ಎಂದಾಗುತ್ತದೆ.

ವಚನ ಧರ್ಮದ ಪ್ರಕಾರ ಜ್ಞಾನ ಮೂಲದಲ್ಲಿರುವ ಐದು ಚಿತ್ತಗಳ ಚಂಚಲತೆ ದುರ್ಬಲವಾಗುತ್ತಾ ಸಾಗುತ್ತಿದ್ದಂತೆ ಅರಿವಿನ ಸುಳುಹು ಸರ್ವಾಂಗದಲ್ಲಿಯೂ ಸುಳಿದಾಡುವ ವಿದ್ಯಮಾನ. ಅರಿವು ಜ್ಞಾನದ ಆವರಣಕ್ಕೂ ಮೀರಿದ ಅಂತರ್ ನೋಟದಿಂದ ಸಾಧ್ಯವಾಗಬೇಕು. ಒಂದು ಕಡೆ ಸದಾ ಮುಗಿಬೀಳುತ್ತಲೇ ಇರುವ ಐದು ಚಿತ್ತಗಳ ಕೇಡನ್ನು ನಿವಾರಿಸಿಕೊಳ್ಳಬಹುದಾದದ್ದು ಕಾಯಕದಿಂದಲೇ! ಮತ್ತೊಂದು ಕಡೆ ಅರಿವು ಹೃದ್ಗೋಚರವಾಗುವುದೂ ಕಾಯಕದಿಂದಲೇ! ಇದು ಹೇಗೆಂದರೆ ಒಂದನ್ನು ಕಳೆದುಕೊಳ್ಳುವುದರ ಮೂಲಕ ಮತ್ತೊಂದನ್ನು ಪಡೆಯುವ ನಿಸರ್ಗ ನಿಯಮದಂತೆ, ಕೇಡಿನ ಚಂಚಲತೆ ಕಳೆದುಕೊಂಡಷ್ಟು ಅರಿವು ಅಂತರ್ಬೋಧೆಯಾಗುತ್ತಾ ಆಳಕ್ಕಿಳಿಯುತ್ತದೆ. ಆದ್ದರಿಂದ ಶರಣರಿಗೆ ಲೋಕದೊಂದಿಗೆ ಮಾಡುವ ಕಾಯಕ ಒಂದು ಮಹತ್ತರ ಪ್ರತ್ಯಕ್ಷ ಧ್ಯಾನ!!!

ಅಂಗದ ಮೇಲಣ ಲಿಂಗ ಹಿಂಗದಂತಿರಬೇಕು,
ಅಂಗಕ್ಕೆ ಲಿಂಗಕ್ಕೆ ಸಂಬಂಧವೇನೊ ಮನ ಮುಟ್ಟದನ್ನಕ್ಕರ?
ಕಾಯ ಕಾಯಕವ ಮಾಡುತ್ತಿರಲು,
ಮನವು ಲಿಂಗದಲ್ಲಿ ಬೆರಸಿ ತೆರಹಿಲ್ಲದಿಪ್ಪ ಮಡಿವಾಳನ ಪರಿಯ ನೋಡಾ!
ಅಂಗ ಲಿಂಗ ಸಂಗವೆಂಬ ಸಂದು ಸಂಶಯವಳಿದು,
ಸರ್ವಾಂಗಲಿಂಗಸಂಬಂಧಿ
ಕೂಡಲಚೆನ್ನಸಂಗಯ್ಯನಲ್ಲಿ
ಮಡಿವಾಳ ಮಾಚಯ್ಯನು!

ಶರೀರ ಮತ್ತು ಲಿಂಗವೆಂಬ ಅರಿವಿಗಿರುವ ಸಂಬಂಧವೇನೆಂಬುದು ಅರಿವಾಗುವ ತನಕಾ ಕಾಯವು ಕಾಯಕ ಮಾಡುತ್ತಿರಬೇಕು. ಇದು ಕಾಯ; ಇದು ಪ್ರಜ್ಞೆ ಎಂಬ ಬೇಧವಿಲ್ಲದೆ ಲಿಂಗಾಂಗಗಳು ಸಂಗಮಿಸಿದರೆ ಅದು ಸರ್ವಾಂಗ ಲಿಂಗಸಂಬಂಧ. ಇದು ಕಾಯದಲ್ಲಿ ಕೈಲಾಸ; ಕಾಯಕವು ಕೈಲಾಸವಾಗುವ ಪರಿ. ಈ ಹಿನ್ನೆಲೆಯಲ್ಲಿ ಕಾಯಕದ ಮಹತ್ವ ಎಷ್ಟೆಂಬುದನ್ನು ನಾವು ಗುರ್ತಿಸಿಕೊಳ್ಳಬಹುದು.

ಈಗ ಸಾಮಾನ್ಯರಾದ ನಮ್ಮ ಅನುಭವದ ಮೂಲಕ ಕಾಯಕದ ಉಪಯುಕ್ತತೆಯನ್ನು ಒಂಚೂರು ಅವಲೋಕಿಸೋಣ… ದೈಹಿಕ ಶ್ರಮದಿಂದ ಕೂಡಿದ ಕಾಯಕ ಮಾಡುವಾಗ ದೇಹವು ಹೆಚ್ಚು ಚೇತನಾಶಾಲಿಯಾಗಿರುತ್ತದೆ. ಮನಸ್ಸಿನಲ್ಲಿಯೂ ಉತ್ಸಾಹ ಮತ್ತು ಸ್ವಾಸ್ಥ್ಯ ಚಿಂತನೆ ಮೈದೋರಿರುತ್ತದೆ. ಇದು ಎಲ್ಲರ ಅನುಭವವೂ ಹೌದು. ಒಂದು ನವನವೀನತೆ ದೈಹಿಕ ಶ್ರಮದಿಂದ ಸಾಧ್ಯವಾಗಲು ಕಾರಣ ನಮ್ಮ ದೇಹಕ್ಕೆ ಬೇಡದ ಅನೇಕ ರಾಸಾಯನಿಕಗಳು ದೈಹಿಕ ಶ್ರಮದಿಂದ ಕರಗಿ ಹೋಗುತ್ತವೆ. ಬಹು ಮುಖ್ಯ ಸಂಗತಿಯೆಂದರೆ ಶ್ರಮವನ್ನಾಧರಿಸಿದ ಯಾವುದೇ ಕೆಲಸವನ್ನು ಮಾಡುವಾಗ ನಮ್ಮ ಮನಸ್ಸು ಚಂಚಲವಾಗಿರುವುದಿಲ್ಲ. ಚಂಚಲತೆ ಇದ್ದಾಗ ನಮ್ಮಿಂದ ಒಂದು ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಸಾಮರ್ಥ್ಯವಿರುವುದಿಲ್ಲ. ಏಕೆಂದರೆ ಚಂಚಲತೆ ಒಮ್ಮೆಗೇ ಮನಸ್ಸನ್ನೂ ಮತ್ತು ದೇಹವನ್ನೂ ಪ್ರತ್ಯೇಕಿಸಿಬಿಟ್ಟಿರುತ್ತದೆ.
ಯಾವುದೇ ಒಂದು ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕೆಂದಾಗ ನಮಗೆ ನಮ್ಮ ಶರೀರದ ಮೇಲೆಯೂ ಗಮನವಿರಬೇಕು. ನಾವು ಕೈಗೊಂಡಿರುವ ಕೆಲಸದ ಮೇಲೂ ಗಮನವಿರಬೇಕು. ನಮ್ಮ ದೇಹವನ್ನು ವರ್ತಮಾನದಲ್ಲಿ ಜರುಗಬೇಕಾದ ಕೆಲಸಕ್ಕೆ ಸರಿಯಾಗಿ ಸಂಯೋಜಿಸುವ ಪ್ರಕ್ರಿಯೆಯೇ ಕಾಯಕ!!!

ನಮ್ಮ ‘ಗಮನಿಸುವಿಕೆ’ಯನ್ನು ನಾವು ಮತ್ತೆ ಮತ್ತೆ ಗಮನಿಸುತ್ತಿರಬೇಕು. ಹೀಗಾದಾಗ ನಮ್ಮ ಗಮನಿಸುವಿಕೆಯಲ್ಲಿಯೇ ಅನೇಕ ಲೋಪದೋಷಗಳನ್ನು ನಾವು ಪತ್ತೆ ಹಚ್ಚಬಹುದು. ಐದು ಚಿತ್ತಗಳು ನಮ್ಮ ಮೇಲೆ ಹರಿದು ಬರಲು ಅವುಗಳಿಗೆ ಕೈಕಾಲು ಇತ್ಯಾದಿ ಅವಯವಗಳೇನೂ ಇಲ್ಲ. ಏಕೆಂದರೆ ಐದು ಚಿತ್ತಗಳು ಪದಾರ್ಥ ರೂಪಿಯಲ್ಲ; ಭಾವ ರೂಪಿ ಅಥವಾ ಭ್ರಾಂತುರೂಪಿ. ನಮ್ಮ ಗಮನ ಅವುಗಳನ್ನು ಅನುಸಂಧಾನಿಸಿದಾಗ ನಮ್ಮ ಗಮನದ ಮೇಲೇರಿಯೇ ಅವು ನಮ್ಮನ್ನು ಆವರಿಸಿಕೊಂಡುಬಿಡುತ್ತವೆ. ಆದ್ದರಿಂದ ಕಾಯಕವು ಐದು ಚಿತ್ತಗಳ ಭವ ನಿವಾರಣೆಯಾಗುವಲ್ಲಿ ಸಕಾರಣ ಪ್ರಯತ್ನಪೂರ್ವಕ ಮಹಾವ್ರತವೂ ಆಗಿದೆ. ಕಾಯದೊಳಗೆ ಅರಿವಿನ ಕೈಲಾಸವನ್ನು ಸ್ವಪ್ರಯತ್ನದಿಂದಲೇ ಕಟ್ಟಬೇಕು. ಅರಿವು ಜ್ಞಾನೇಂದ್ರಿಯಗಳಿಂದಾಗಲೀ, ಅಂತರೇಂದ್ರಿಯಗಳಿಂದಾಗಲೀ ಅರಿವಾಗುವಂತಹದ್ದಲ್ಲ. ಯಾವ ಇಂದ್ರಿಯಗಳ ಸಹಾಯವಿಲ್ಲದೆಯೂ ಜೀವಶಕ್ತಿಯ ವಿವೇಕದಿಂದ ಬೋಧವಾಗುವಂತಹದ್ದು. ಆ ಅರಿವಿಗೆ ಭವ ಯಾವುದು? ಭವರಹಿತವಾವುದು? ಲಿಂಗವಾವುದು? ಎಲ್ಲವೂ ಸಹಜವಾಗಿಯೇ ಗೊತ್ತಿದೆ. ಆದರೆ ಕರಣೇಂದ್ರಿಯಗಳಿಂದ ಕೆರಳಲ್ಪಟ್ಟಿರುವ ಚಿತ್ತದ ಹಾರಾಟ ಕೂಗಾಟಗಳಲ್ಲಿ ಅರಿವಿನ ಬೋಧೆ ಕ್ಷೀಣಗೊಂಡಿದೆ. ಅರಿವಿನ ಸ್ವಭಾವ ಪೂರ್ತಿಯಾಗಿ ಕ್ರಿಯಾತ್ಮಕವಾದದ್ದು. ಅದರ ಪ್ರಕ್ರಿಯೆಯೊಳಗೆ ‘ನಾನು’ವನ್ನು ಅರ್ಪಿತಗೊಳಿಸುವ ಕಾಯಕವನ್ನು ನಾವು ಮಾಡದಿದ್ದರೆ ಲಿಂಗಾನುಭವ ಸೂರೆಗೊಳ್ಳದು. ಅರಿವಿನಿಂದ ಅರಿತು ಚಿತ್ತ ಸಮೂಹದ ಕೇಡನ್ನು ಅಂಟದೇ ಇದ್ದರಿಂದ ಬಸವಣ್ಣನವರಿಗಾದ ಅನುಭವವನ್ನು ಒಂದೆಡೆ ಹೀಗೆ ಹೇಳುತ್ತಾರೆ:

ಅರಿವಿಂದರಿದು ಏನುವ ತಟ್ಟದೆ ಮುಟ್ಟದೆ ಇದ್ದೆನಯ್ಯಾ,
ಅಂತರಂಗ ಸನ್ನಿಹಿತ, ಬಹಿರಂಗ ನಿಶ್ಚಿಂತನಾಗಿದ್ದೆನಯ್ಯಾ.
ಸ್ವಾತಿಯ ಬಿಂದುವ ಬಯಸುವ ಚಿಪ್ಪಿನಂತೆ
ಗುರುಕಾರುಣ್ಯವ ಬಯಸುತ್ತಿದ್ದೆ, ಕೂಡಲಸಂಗಮದೇವಾ.

ಇಲ್ಲಿ ಗಮನಿಸಬೇಕಾದ್ದು ಏನೆಂದರೆ ಅರಿವಿಂದ ಅರಿವಾದ ಮೇಲೆ ಚಿತ್ತ ಸಮೂಹವನ್ನು ಮುಟ್ಟದೇ/ ಗಮನಿಸದೇ ಇದ್ದುದರಿಂದ ನಾನು ಗುರುಕಾರುಣ್ಯದ ಸನಿಹದಲ್ಲಿದ್ದೇನೆ! ಕಪ್ಪೆ ಚಿಪ್ಪು ಸ್ವಾತಿಯ ಬಿಂದುವನ್ನು ನುಂಗಿದರೆ ಹೇಗೆ ಬೆಲೆಬಾಳುವ ವಸ್ತುವಾಗುತ್ತದೋ ಹಾಗೆ ಗುರುಕಾರುಣ್ಯವನ್ನು ಪಡೆದು ತಾನು ಲೋಕಹಿತದಲ್ಲಿ ಬೆಳಗಬೇಕೆಂದು ಪರಿತಪಿಸುತ್ತಾರೆ. ಲಿಂಗದರಿವು ಪೂರ್ಣವಾಗುವುದು ಎಂದರೆ ಚಿತ್ತಸಮೂಹದಿಂದ ತಾನು ಪೂರ್ಣವಾಗಿ ವಿಮುಕ್ತನಾಗುವುದೆಂದರ್ಥ!

ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು.
ಬೀಜ ನಷ್ಟವಾದಲ್ಲದೆ ಸಸಿ ಗತವಾಗದು.
ನಾಮ ನಷ್ಟವಾದಲ್ಲದೆ ನೇಮ ನಷ್ಟವಾಗದು.
ಮೊದಲು ಕೆಟ್ಟಲ್ಲದೆ ಲಾಭದಾಸೆ ಬಿಡದು.
ಗುಹೇಶ್ವರನೆಂಬ ಲಿಂಗದ ನಿಜವನೆಯ್ದುವಡೆ,
ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು.

ತಾಯಿ ಬಂಜೆಯಾದರೆ ಶಿಶು ನಾಶವಾದಂತೆ ಅಲ್ಲವೆ? ಐದು ಚಿತ್ತ ಸಮೂಹಗಳ ‘ಭ್ರಾಂತಿ’ ತಾಯಿ ಬಂಜೆಯಾಗದ ಹೊರತು ಆ ಚಿತ್ತದ ಸಹ ಉತ್ಪನ್ನಗಳಾದ ಉದ್ರೇಕಿತ ಚಿತ್ತಾವರಣಗಳು ನಾಶವಾಗಲಾರವು. ನಾಮವೆಂಬ ಚಿತ್ತ ಸಮೂಹ ನಷ್ಟವಾಗದಿದ್ದರೆ ಆ ಚಿತ್ತಗಳ ಕಾರ್ಯವನ್ನನುಸರಿಸಿದ ‘ನೇಮ’ (ಆಚಾರ) ನಷ್ಟವಾಗದು. ಈ ಐದರಲ್ಲಿ ನಾವು ಕೆಡುವ ತನಕ ‘ಆಸೆ’ ಎಂಬ ಲಾಭ ಬಿಟ್ಟಿರಲಾರದು. ಗುಹೇಶ್ವರನೆಂಬ ಲಿಂಗದರಿವು ಅಂತರ್ಬೋಧೆಯಾಗುವಲ್ಲಿ ಕಾಯಕದಿಂದ ಅರಿವಿನೆಡೆಗೆ ಕಣ್ತೆರೆಯಬಲ್ಲ ಕ್ರಿಯಾಮಥನವಿಲ್ಲದೆ ಭವ ನಾಸ್ತಿಯಾಗದು.
ಇದು ಶರಣರು ನಡೆದ ಕ್ರಿಯಾಚಾರದ ನೆಲೆ. ಆದರೆ ಶರಣಪಥ ಲಿಂಗಾನುಭವದ ಹಂತಕ್ಕೆ ಮಾತ್ರ ನಿಲ್ಲುವದಲ್ಲ. ಮತ್ತೆ ಗುರುಕಾರುಣ್ಯವೇ ಹಿರಿದೆನ್ನುತ್ತದೆ. ತನ್ನೊಳಗಿನ ಅರಿವು ತನ್ನನ್ನೇ ಕರುಣಿಸಿಕೊಳ್ಳುವ ಮಹಾಬೆಡಗಿದು. ಗುರುಕಾರುಣ್ಯ ಐದು ಪ್ರಸಾದ ಸಂಪತ್ತುಗಳನ್ನು ಕರುಣಿಸುತ್ತದೆ. ಅಂದರೆ ಶರಣನ ಅರಿವು ಪರಿಣಾಮಿಸುವ ಅವಸ್ಥೆಗಳಿವು. ಅವು 1. ಭಕ್ತಿ, 2. ಲಿಂಗಾನುಭವ, 3. ಸಮತೆ (ಸಾಮರಸ್ಯ), 4. ದಯೆ, 5. ಅನುಭಾವ.

ಶರಣ ಭಕ್ತಿ ಅನಂತ ನಿಸರ್ಗ ಸತ್ಯದಲ್ಲಡಗಿರುವ ಪ್ರಾಣಚೈತನ್ಯವೇ ಈ ಲೋಕದ ನೈಜ ವಸ್ತುಸ್ಥಿತಿಯೆಂದರಿತು, ಸಕಲ ಜೀವಗಳಲ್ಲೂ ತುಂಬಿರುವ ಆ ಪ್ರಾಣಚೈತನ್ಯವನ್ನೇ ದೈವವೆಂದು ಸ್ವೀಕರಿಸುತ್ತದೆ. ಶರಣರ ಲಿಂಗಾನುಭವ ಆ ಪ್ರಾಣಚೈತನ್ಯ ಸದಾ ಬದಲಾಗುತ್ತಿರುವ ಜಂಗಮತತ್ವವೆಂದರಿತು ಎಲ್ಲೂ ನೆಲೆ ನಿಲ್ಲದೆ ಸದಾ ಆಗುತ್ತಲೇ ಇರುವ ಆ ಜಂಗಮಾವಸ್ಥೆಗೆ ಸಚರಾಚರ ಭೌತಿಕ ವಸ್ತು, ಪ್ರಾಣಾದಿಗಳೆಲ್ಲವೂ ಅಧೀನಾಂಶಗಳೆಂದು ಅರಿತಿರುವುದರಿಂದ ಯಾವುದೇ ಒಂದು ಜೀವಿಯೇ ಆಗಲಿ, ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ ಎಂಬರಿವಾಗಿ ಎಲ್ಲವನ್ನೂ ಎಲ್ಲರನ್ನೂ ಸಮತೆಯಿಂದ ಒಳಗೊಂಡು ದಯೆ, ಪ್ರೀತಿಯಿಂದ ಬಾಳುತ್ತದೆ. ಶರಣರ ಅನುಭಾವದಲ್ಲಿ ಪ್ರಾಣಚೈತನ್ಯವೇ ತಾನಾಗಿರುವ ಬೆಡಗಿದೆ. ಆ ಬೆಡಗು ನೋವಿನಿಂದ, ಅಸಮಾನತೆಯಿಂದ, ಅಭದ್ರತೆಯಿಂದ, ಹಸಿವಿನಿಂದ ಹೀಗೆ ಚಿತ್ತಸಮೂಹವೆಂಬ ಇಲ್ಲದಾ ಕೇಡಿನಲ್ಲಿ ಬಿದ್ದು ಹೊರಳಾಡುತ್ತಿರುವ ಸಕಲ ಮಾನವಕೋಟಿಗೂ ಆ ಚಿತ್ತ ಸಮೂಹದಿಂದ ಒಮ್ಮೆಗೆ ಬಿಡುಗಡೆಗೊಳಿಸಿ ಸರ್ವಜೀವಿಗಳ ಆವರಣದಲ್ಲಿ ‘ಆಳ-ನಿರಾಳ’ವೆಂಬ ಅನುಭಾವವನ್ನು ತುಂಬಿಸಬೇಕೆಂಬ ಕಳಕಳಿಯಿದೆ. ಇದನ್ನೇ ಅವರು ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ ಎನ್ನುತ್ತಾರೆ.

ಈ ನಿಜಮಾರ್ಗದ ಹೊರತಾಗಿ ಮನದ ಮೂಲಕ ತಮ್ಮತಮ್ಮ ಇಷ್ಟದಂತೆ ಕಲ್ಪಿಸಿಕೊಂಡ ಶಿವ ಮತ್ತು ಅನ್ಯಲಿಂಗಗಳ ಪೂಜೆಗಳಲ್ಲಿ ತೊಡಗುವುದು ಶರಣರಲ್ಲಿ ಅನಾಚಾರವೆನಿಸಿಕೊಂಡಿದೆ.

ಅಂಗದ ಮೇಲೆ ಲಿಂಗಯುಕ್ತವಾದ ಭಕ್ತನು
ಆ ಭಕ್ತಿಯಾಚಾರದ ನೆಲೆಯನರಿಯದೆ
ಸಂಬಂಧಕ್ಕನ್ಯವಾದ ನಂದಿ ವೀರಭದ್ರ ಮತ್ತೆ ಲಿಂಗಂಗಳೆಂಬಿವಾದಿಯಾದ
ಭವಿಶೈವದೈವಂಗಳ ಹೆಸರಿನಲ್ಲಿ ಮೀಸಲುವಿಡಿದು ಬಾಸಣಿಸಿ
ಮನದೈವಕ್ಕೆಂದು ನೇಮಿಸಿ ಮಾಡಿದ ಪಾಕವ
ತನ್ನ ಕರಸ್ಥಲದ ನಿಜ ವೀರಶೈವಲಿಂಗಕ್ಕೆ
ಓಗರವೆಂದರ್ಪಿಸುವದು ಅನಾಚಾರ, ಪಂಚಮಹಾಪಾತಕ. (ಚೆನ್ನಬಸವಣ್ಣ)

Previous post ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
Next post ಹುಡುಕಾಟ
ಹುಡುಕಾಟ

Related Posts

ಹೀಗೊಂದು ತಲಪರಿಗೆ…
Share:
Articles

ಹೀಗೊಂದು ತಲಪರಿಗೆ…

June 5, 2021 ಸ್ಮಶಾನವಾಸಿ
ಹೀಗೆ ಒಂದು ದಿನ ಆಕಸ್ಮಿಕವಾಗಿ ನನಗೊಬ್ಬ ವ್ಯಕ್ತಿ ಪರಿಚಯವಾದರು. ಆತ ಸ್ಮಶಾನವಾಸಿ. ಹಾಗೆಂದು ಬೂದಿ ಮೆತ್ತಿಕೊಂಡು ಸುಡುಗಾಡಿನಲ್ಲಿ ಬೀಡಿ ಸೇದುತ್ತಾ, ಗಾಂಜಾ ಹೊಡೆಯುತ್ತಾ...
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
Share:
Articles

ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ

January 7, 2019 ಮಹಾದೇವ ಹಡಪದ
ಒಂದಾನೊಂದು ಕಾಲದಲ್ಲಿ ಸಿಂಧಿ ಅನ್ನೋ ನಾಡಲ್ಲಿ ಸುಪ್ರಸಿದ್ದ ಕಳ್ಳನಿದ್ದ. ಅವನು ಆಕಾರದಲ್ಲಿ ಕುಳ್ಳನಾಗಿದ್ದರೂ ಬುದ್ದಿಯಲ್ಲಿ ಬಲು ಜಾಣ. ಹಂಗಾಗಿ ಅವನು ಕಳ್ಳರಿಗೆಲ್ಲ ನಾಯಕನಾಗಿ,...

Comments 15

  1. ಚಂದ್ರಶೇಖರ ಧನ್ನೂರು
    Jul 25, 2024 Reply

    ಓದುತ್ತಾ ಹೋದಂತೆ ಮಹಾಗ್ರಂಥವೊಂದರ ಒಳಹೊಕ್ಕಂತೆ ಭಾಸವಾಯಿತು. ಎಲ್ಲಿಂದ ಎಲ್ಲಿಗೆ ಶರಣರ ಪ್ರಯಾಣ ಸಾಗಿದೆ!! ಕಾಯಕದ ಒಳನೋಟ ಕಂಡು ನಿಜಕ್ಕೂ ದಂಗಾಗಿ ಹೋದೆ.🙏🏿

  2. J.M.Mahadev
    Jul 28, 2024 Reply

    ಅರಿವು ಮತ್ತು ಜ್ಞಾನಕ್ಕೆ ಇರುವ ವ್ಯತ್ಯಾಸ ಓದಿ ಆಶ್ಚರ್ಯವಾಯಿತು. ಶರಣರನ್ನು ನಾನು ಜ್ಞಾನಿಗಳೆಂದೇ ಕರೆಯುತ್ತಿದ್ದೆ. ಆ ಪದದ ದೋಷ ತಿಳಿಸಿದ ನಾಗರಾಜ್ ಅವರು, ಅನೇಕ ಹೊಸ ಹೊಸ ವಿಚಾರಗಳನ್ನು ಈ ಲೇಖನದಲ್ಲಿ ವಿವರಿಸಿ ಕೊಟ್ಟಿದ್ದಾರೆ. ವಚನಗಳಿಗೆ ಇಲ್ಲಿ ಕೊಡಲಾದ ವ್ಯಾಖ್ಯಾನಗಳು unique ಆಗಿವೆ.

  3. ಮಲ್ಲಿಕಾರ್ಜುನ ಜಿಗಜಿಣಗಿ
    Jul 28, 2024 Reply

    ಚಿತ್ತಗಳ ಚಿತ್ತಾರ ಮನಸ್ಸಿನಲ್ಲಿದೆ. ಚಿತ್ತ ಬಂದತ್ತ ಅಲೆಯುವವರಿಗೆ ಲಿಂಗದ ನಿಜ ಗೊತ್ತಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಅಲ್ಲಮಪ್ರಭು. ಆ ಮಾತುಗಳ ಗಹನ ತಿಳಿಯಲು ಈ ಲೇಖನ ಓದಬೇಕು. ಶರಣ ನುಡಿಗಡಣದಲ್ಲಿ ಅದ್ದಿ ತೆಗೆದ ಅನುಭೂತಿ!!!! ನಾಗರಾಜ ಶರಣರಿಗೆ🙏🙏

  4. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Jul 29, 2024 Reply

    ನಿಜ ಪದ್ಮಾಲಯರ ಓದೇ ಹೀಗೆ.ಸರಳವಾಗಿ ಪ್ರವೇಶ ಮಾಡಿ ಗವ್ವೆನ್ನುವ ಕತ್ತಲಿಂದ ಹೊರತರುವುದು.ಎಲೆಗಳು ಬೇರೆ ಬೇರೆಯಾದರೂ ಬೇರು ಒಂದೇ.. ಹೊಸಾ ಓದಿಗೆ ನಾವು ತೆರೆದುಕೊಂಡಿರಬೇಕು.

  5. ಗುರುಸಿದ್ದಪ್ಪ ಯಾಳಗಿ
    Aug 2, 2024 Reply

    “ಶರೀರ ಮತ್ತು ಲಿಂಗವೆಂಬ ಅರಿವಿಗಿರುವ ಸಂಬಂಧವೇನೆಂಬುದು ಅರಿವಾಗುವ ತನಕಾ ಕಾಯವು ಕಾಯಕ ಮಾಡುತ್ತಿರಬೇಕು. ಇದು ಕಾಯ; ಇದು ಪ್ರಜ್ಞೆ ಎಂಬ ಬೇಧವಿಲ್ಲದೆ ಲಿಂಗಾಂಗಗಳು ಸಂಗಮಿಸಿದರೆ ಅದು ಸರ್ವಾಂಗ ಲಿಂಗಸಂಬಂಧ.” ಈ ಲೇಖನವು ನೀಡುವ ಇಂತಹ ಗ್ರಹಿಕೆಗಳು ವಚನಗಳ ಅಧ್ಯಯನಕ್ಕೆ ಕನ್ನಡಿ ಹಿಡಿಯುವಂತಿವೆ. ಅರಿವು – ಜ್ಞಾನ ಬೇರೆ ಬೇರೆ ಹೇಗೆನ್ನುವುದನ್ನೂ ಇಲ್ಲಿ ವಿಸ್ತರಿಸಿ ವಿಸ್ತರಿಸಿದ್ದಾರೆ. ಅಪರೂಪದ ಲೇಖನಕ್ಕೆ ಧನ್ಯವಾದ. ಲೇಖಕರಿಗೆ ವಂದನೆ🙏

  6. Susheela T.G
    Aug 2, 2024 Reply

    ಈ ಲೇಖನ ಓದಿ, ಮೊದಲ ಭಾಗ ಓದಿದೆ. ಪುನ ಈ ಲೇಖನ ಓದಿದೆ. ತಕ್ಕ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಮೂರ್ನಾಲ್ಕು ದಿನಗಳೇ ಬೇಕಾದವು. ಹೊಸತನದಿಂದ ಕೂಡಿದ ವಿಚಾರಗಳು ನಮ್ಮ ಧರ್ಮದ ಅಗಾಧತೆಯನ್ನು ನಾವು ಸರಿಯಾಗಿ ತಿಳಿಯದೇ ಎಲ್ಲೋ ಎಡವಿದ್ದೇವೆಯೇ ಎಂದು ನನಗೆ ಪದೇಪದೇ ಅನಿಸಿದ್ದು ನಿಜ. ಇಲ್ಲಿ ಪ್ರತಿ ಸಾಲನ್ನೂ quote ಮಾಡಬಹುದು.

  7. ಮಾತೆ ಬಸವಾಂಜಲಿ, ಮೈಸೂರು
    Aug 2, 2024 Reply

    ಅದ್ಭುತವಾದ ವಿಚಾರ 💐🙏🏻💐

  8. KARUNAJEEVA TRUST, DAVANGERE
    Aug 3, 2024 Reply

    ತುಂಬಾ ಚೆನ್ನಾದ ವಿಶ್ಲೇಷಣೆ ನಾಗರಾಜ್ ಸರ್ ದು. 👏🏻👏🏻🙏🏽🙏🏽👍👍 ಅತ್ಯುತ್ತಮ ಲೇಖನ.ಕೃತಜ್ಞತೆಗಳು,
    ಬಸವ

  9. ಬಸವಲಿಂಗಾ ಹುಣಸಗಿ
    Aug 4, 2024 Reply

    ಈ ಅಗಾಧವಾದ ಮನಸ್ಸು ಅಥವಾ ಚಿತ್ತ ಸೃಷ್ಠಿಯು ನನ್ನದೇ! ಮತ್ತದನ್ನು ದಾಟಿಕೊಳ್ಳಲು ಸಾಧ್ಯವಾಗದಾ ದೌರ್ಬಲ್ಯವೂ ನನ್ನದೇ! ನನ್ನದೇ ಜಾಲ, ನಾನೇ ಅದರ ಬಂಧೀ! ನಾನೇ ಅದರ ಕತೃ, ನಾನೇ ಅದರ ಬೋಕ್ತೃ! ಕಾರಣವೂ ನಾನೇ, ಕಾರ್ಯವೂ ನನ್ನದೇ, ಅದರ ಫಲವನ್ನು ಉಣ್ಣಬೇಕಾದವನೂ ನಾನೇ!- ಈ ಕರ್ಮವನ್ನೇ ಭವ ಎಂದು ಕರೆದಿದ್ದಾರೆ. ನನ್ನನ್ನು ನನ್ನಿಂದ ಬಿಡಿಸಿಕೊಳ್ಳಲು ಬಸವಣ್ಣನವರು ಕೊಟ್ಟ ಪ್ರಬಲವಾದ ಅಸ್ತ್ರ ಕಾಯಕ ಎಂದು ನನಗೆ ಈ ಇಡೀ ಲೇಖನ ಓದಿದಾಗ ಅರ್ಥವಾಯಿತು. ಲೀಖಕರು ಇನ್ನೂ ಹಲವಾರು ಉತ್ತಮ ವಿಚಾರಗಳನ್ನು ಇದರಲ್ಲಿ ಮಾತನಾಡಿದ್ದಾರೆ. ಭವರೋಗಕ್ಕೆ ಇಷ್ಟಲಿಂಗಕ್ಕಿಂತ ಕಾಯಕವೇ ಸೂಕ್ತ ಮದ್ದು ಎಂದು ಲೇಖಕರು ಪ್ರತಿಪಾದಿಸಿದ್ದಾರೆ.

  10. Gangadhara Hatti
    Aug 4, 2024 Reply

    ಮಾಡುವ ಕೆಲಸಕ್ಕೂ, ಪ್ರಾಣಲಿಂಗಕ್ಕೂ; ಲಿಂಗಾಂಗ ಸಮರಸಕ್ಕೂ, ಕಾಯಕಕ್ಕೂ ಸಂಬಂಧವಿದೆಯೇ ಎಂಬ ಅನುಮಾನದಿಂದ ಲೇಖನ ಓದಲು ಆರಂಭಿಸಿದೆ. ಶರಣರಾದ ನಾಗರಾಜ್ ಅವರು ಎಲ್ಲೆಲ್ಲಿಂದ ಎಲ್ಲೆಲ್ಲಿಗೋ ಸುಸಂಬದ್ಧವಾಗಿ ಕರೆದೊಯ್ಯುವುದನ್ನು ಕಂಡು ದಂಗಾಗಿ ಹೋದೆ. ಗಹನವಾದ ಲೇಖಕರ ವಿಚಾರಗಳು ಮನನವಾಗಲು ನಿಧಾನವಾಗಿ ಓದಬೇಕು. ಕೆಲವು ಕಡೆ ನಿಂತು, ನಿಂತು ಯೋಚಿಸುತ್ತಾ ಮುಂದೆ ಹೋಗಬೇಕು.

  11. Naveeena h a
    Aug 4, 2024 Reply

    ಶರಣರ ಪ್ರಾಣ ಲಿಂಗ ಎನ್ನುವ ಸ್ಥಿತಿಗೆ ಹೋಗುವ ದಾರಿಯಾದರು ಯಾವುದು ಅದು ಜಪವೇ, ಧ್ಯಾನವೇ, ಪೂಜೆಯೇ?
    ಕಾಯಕವೇ ಕೈಲಾಸ ಎಂದರು ಬಸವಣ್ಣನವರು, ಕಾಯಕ ಮಾಡಿ ಎಲ್ಲರೂ ಹಂಚಿಕೊಂಡು ತಿನ್ನುವ ದಾಸೋಹ ಪರಿಕಲ್ಪನೆ ಸ್ಥಾಪಿಸಿ ಸಂಗ್ರಹಣೆ ನಿರಾಕರಿಸಿ ಸಮ ಸಮಾಜ ಸ್ಥಾಪನೆಗೆ
    ಬಸವಣ್ಣನವರು ಭದ್ರಬುನಾದಿ ಹಾಕಿದರು, ಎಂದಷ್ಟೇ ಸಮಾನತೆಯ ಹಂಬಲದಲ್ಲಿರುವ ನಮ್ಮಂತವರು ಶರಣರ ಕಾಯಕವನ್ನು ಅರ್ಥೈಸಿಕೊಂಡೆವು. ಆದರೆ ನಿಜಶರಣ ಪದ್ಮಾಲಯ ನಾಗರಾಜ್ ಸರ್ರವರು ಕಾಯಕವೆಂಬುದು ಕೇವಲ ಜೀವನಾಶ್ರಯ ಮತ್ತು ಸಮ ಸಮಾಜದ ಪರಿಕಲ್ಪನೆ ಅಷ್ಟೇ ಅಲ್ಲ ಕಾಯಕ ಪ್ರಾಣಲಿಂಗದೆಡೆಗೆ ಹೊಯ್ಯುವ ಮಾರ್ಗವು ಹೌದು ಎಂಬ ಅದ್ಭುತ ವ್ಯಾಖ್ಯಾನವನ್ನ ವಚನಗಳನ್ನ ಉದಾಹರಿಸಿ ನೀಡಿದ್ದಾರೆ. ಐದು ಚಿತ್ತಗಳ ಬ್ರಾಂತಿ ನಾಶದಿಂದ ಅನಂತ ಆಗುವಿಕೆಯಲ್ಲಿರುವ ಪ್ರಾಣ ಲಿಂಗ ಎಂಬ ಚೇತನ ಸ್ಥಿತಿಗೆ ಕಣ್ಣು ತೆರೆಸುವ ಮಾರ್ಗವಾಗಿ ಕಾಯಕ ನೆರವಾಗುತ್ತದೆ ಎಂಬುದು ಪದ್ಮಾವಲಯ ಗುರುಗಳ ನಿರಂತರ ಪ್ರತ್ಯಕ್ಷ ಧ್ಯಾನ ಮತ್ತು ಅವರ ಒಡನೋಟಕ್ಕೆ ದಕ್ಕಿರುವ ಮಹಾಪ್ರಸಾದವೇ ಸರಿ. ಇಂತಹ ಮಾರ್ಗದಾತರನ್ನ ಗುರುವಾಗಿ ಪಡೆದ ನಾವುಗಳು ನಿಜಕ್ಕೂ ಧನ್ಯರು.🙏☸️🙏☸️🙏

  12. ಶೇಖರ್ ಪಾಟೀಲ್
    Aug 8, 2024 Reply

    ಲೇಖನದ ಉದ್ದಕ್ಕೂ ಬಳಸಲಾದ ವಚನಗಳು- ಐದು ಮನವ ಕುಟ್ಟಿ ಒಂದು ಮನವ ಮಾಡು, ಕ್ರಿಯಾಮಥನವಿಲ್ಲದೆ ಕಾಣಬಂದುದೆ, ಬೆಲ್ಲವ ತಿಂದ ಕೋಡಗದಂತೆ, ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ, ಚೇಳಿಂಗೆ ಬಸುರಾಯಿತ್ತೆ ಕಡೆ!, ಅಜ್ಞಾನವೆಂಬ ತೊಟ್ಟಿಲೊಳಗೆ… ಎಲ್ಲವೂಗಳ ಒಳಾರ್ಥಗಳು ಲೇಖಕರ ವಿಚಾರವನ್ನು ಆಶ್ಚರ್ಯಕರ ರೀತಿಯಲ್ಲಿ ಸಮರ್ಥಿಸುತ್ತವೆ. ಕಾಯಕವೇ ಶರಣರ ಪೂಜೆ ಹೇಗೆ ಮತ್ತು ಯಾಕೆ ಎನ್ನುವುದನ್ನು ತೋರಿಸಿಕೊಟ್ಟ ನಾಗರಾಜ್ ಶರಣರಿಗೆ ಶಿರಸಾಷ್ಟಾಂಗ ನಮಸ್ಕಾರ.

  13. ಟಿ.ಸಿ. ದೇವರಾಜು
    Aug 8, 2024 Reply

    ಐದು ಚಿತ್ತಗಳ ಕುರಿತಾಗಿ ಬರೆದ ಭಾಗವನ್ನು ಮನಸ್ಸು ಕೊಟ್ಟು ಪದೆ ಪದೇ ಓದಿದಾಗ ಮನಸ್ಸಿನ ವಿರಾಟ್ ಸ್ವರೂಪ, ಅದರ ಸಂಗ್ರಹಣೆ, ಅದರ ಆಟಗಳು ಗೊತ್ತಾಗಿ, ದಿಕ್ಕೇ ತೋಚದಷ್ಟು ದಿಗ್ಭ್ರಮೆ ಆಯ್ತು. ಕಣ್ಣೆದುರಿಗೆ ಮನಸ್ಸನ್ನು ಮ್ಯಾಪಿನಂತೆ ಹಾಸಿ ಅದರ ಆಂತರ್ಯ ತೋರಿಸಿದಂತಾಯಿತು. ಲೇಖಕರು ಮನಶಾಸ್ತ್ರದ ಪ್ರೊಫೆಸರೆ?

  14. ಗಿರಿಮಲ್ಲಪ್ಪ ಆನೆಗುಂದಿ
    Aug 8, 2024 Reply

    ಲೇಖನದ ಪ್ರತಿ ಸಾಲು ಮತ್ತು ಪ್ರತಿ ವಿಚಾರ ನನಗೆ ಹೊಸದು. 1.ಮದವಳಿಗೆ ಅಂದರೆ ಮದವನ್ನು ಅಳಿಸುವುದು!! 2. ‘ಭ್ರಾಂತಿ’ ತಾಯಿ ಬಂಜೆಯಾಗದ ಹೊರತು ಆ ಚಿತ್ತದ ಸಹ ಉತ್ಪನ್ನಗಳಾದ ಉದ್ರೇಕಿತ ಚಿತ್ತಾವರಣಗಳು ನಾಶವಾಗಲಾರವು.3. ಚಿತ್ತ ಲಯವಾದೊಡೆ ಅದೇ ಪ್ರಾಣಲಿಂಗವೆಂಬ ಸ್ವಯ….. ಹೀಗೆ ಉದ್ದಕ್ಕೂ ಪಟ್ಟಿ ಮಾಡಿಕೊಂಡು ಓದಿದರೆ, ಆಗಾಗ ನೋಡಿಕೊಳ್ಳಲು ಸಹಾಯಕವಾಗುತ್ತದೆ.

  15. ನಾಗೇಂದ್ರ ಚಡಚಣ
    Aug 11, 2024 Reply

    ಶರಣರ ಅರಿವಿನ ಪಥವನ್ನೇ ಕಟೆದು ತೋರಿಸುವಂತಹ ಲೇಖನ. ಇಂತಹ ಅಮೂಲ್ಯ ನೋಟಗಳನ್ನು ಹೊತ್ತು ತರುವ ಬಯಲುಗೆ ಶರಣು. ಲೇಖಕರ ಪಾದಗಳಿಗೆ🙏🏻

Leave a Reply to Naveeena h a Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನಸ್ಸು
ಮನಸ್ಸು
September 7, 2020
ಯಾಕೀ ಗೊಡವೆ?
ಯಾಕೀ ಗೊಡವೆ?
August 10, 2023
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
Copyright © 2025 Bayalu