Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
Share:
Articles December 9, 2025 ಮಲ್ಲಿಕಾರ್ಜುನ ಕಡಕೋಳ

ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ

ನಮ್ಮೂರು ಕಡಕೋಳದ ಪ್ರತಿಯೊಂದು ಓಣಿಯಲ್ಲೂ ಮಡಿವಾಳಪ್ಪ ಮತ್ತು ಅವರ ಶಿಷ್ಯರ ತತ್ವಪದಗಳನ್ನು ಲೋಕ ಸಂವೇದನೆಯ ಜವಾರಿ ದರವು, ದನಿಯಲ್ಲಿ ಹಾಡುವವರಿದ್ದಾರೆ. ಅದೊಂದು ನೈಸರ್ಗಿಕ ಪ್ರಕ್ರಿಯೆಯಂತೆ ಬೆಳೆದುಬಂದ ಪರಂಪರೆಯೇ ಆಗಿದೆ. ಯಾವುದೇ ಸಂಗೀತ ಶಾಲೆ, ಕಾಲೇಜು, ಶಾಸ್ತ್ರೀಯ ಸಂಗೀತ ಶಿಸ್ತು ನೆಲೆಗಳಲ್ಲಿ ಅಕಾಡೆಮಿಷಿಯನ್ ತರಹ ಅವರು ವ್ಯಾಸಂಗ ಮಾಡಿ ಬಂದವರಲ್ಲ.

ಅದು ಅಗ್ದೀ ಸಹಜವಾಗಿ ಹೂವು ಅರಳಿದಂತೆ, ಸೂರ್ಯಚಂದ್ರರ ಬಿಸಿಲು ಬೆಳದಿಂಗಳು ಮತ್ತು ಸೃಷ್ಟಿಯ ಗಾಳಿ ಬೆಳಕುಗಳು ಹರಡಿದಂತೆ. ಒಂದು ಖುಷಿಯ ವಿಷಯವೆಂದರೆ, ನಿಸರ್ಗ ಸುಬಗದಂತಹ ಜನಸಂಸ್ಕೃತಿಯ ಈ ಹಾಡುಗಾರಿಕೆ ಎಲ್ಲ ಜಾತಿ, ಮತ, ಪಂಥ, ಪಂಗಡ, ಧರ್ಮದವರನ್ನು ತಮ್ಮ ನಿತ್ಯ ಬದುಕಿನ ಉಸಿರಿನ ಭಾಗದಂತೆ ಬಿಗಿದಪ್ಪಿಕೊಂಡಿದೆ. ದಲಿತರಾದಿಯಾಗಿ ಮುಸ್ಲಿಮರು ಅದಕ್ಕೆ ಹೊರತಲ್ಲ. ಮಡಿವಾಳಪ್ಪನ ಪದಗಳೆಂದರೆ ನಮ್ಮೆಲ್ಲರ ಮನೆಯ ನಿತ್ಯದ ಹೊಟ್ಟೆ ಹಸಿವು ನೀಗಿಸುವ ರೊಟ್ಟಿಯಂತೆ.

ಮತ್ತೊಂದು ವಿಶೇಷವೆಂದರೆ ಬಹುಪಾಲು ಅವರೆಲ್ಲ ಅನಕ್ಷರಸ್ಥರು. ಯಾರೊಬ್ಬರೂ ಸಂಗೀತ ಪರಿಕರಶಾಸ್ತ್ರ ಅಭ್ಯಾಸದ ಎಲೈಟ್ ಸ್ಕೂಲ್ ಆಫ್ ಥಾಟ್ಸ್ ಸಿಸ್ಟಮ್ ಗಳಲ್ಲಿ ರೂಪುಗೊಂಡವರಲ್ಲವೇ ಅಲ್ಲ. ಆದರೆ ಯಾವೊಬ್ಬ ಸಂಗೀತ ಸೆಲೆಬ್ರಿಟಿಗಿಂತ ಕಮ್ಮೀ ಇಲ್ಲದಂತೆ ಹಾರ್ಮೋನಿಯಂ, ಕ್ಯಾಸಿಯೋ, ತಬಲಾ, ದಮಡಿ, ಕಂಜರಾ, ಚಿನ್ನಿ, ಚಳ್ಳಮ ನುಡಿಸುವುದರಲ್ಲಿ ಪರಿಣಿತರು. ನೆನಪಿರಲಿ ಅವರು ಏಕತಾರಿ ನುಡಿಸುವುದರಲ್ಲೂ ಅಷ್ಟೇ ಜಾಣರು. ಅವರೆಲ್ಲರೂ ಅಕ್ಷರಶಃ ಏಕಲವ್ಯರು. ಹಾಡುಗಾರಿಕೆಯಲ್ಲಿ ಯಾವುದೇ ಸಂಗೀತ ವಿದ್ವಾಂಸರು, ಗವಾಯಿಗಳಿಗೆ ಎಳ್ಳರ್ಧ ಕಾಳಿನಷ್ಟು ಕಮ್ಮೀ ಇಲ್ಲದ ಮಹಾನ್ ಪ್ರತಿಭೆಗಳು. ಅದು ಭಜನೆಯೆಂಬ ತತ್ವಪದ ಗಾಯನ ಮಾತ್ರವಲ್ಲದೇ ಜಾನಪದದ ಹತ್ತಾರು ಪ್ರಾಕಾರಗಳಲ್ಲಿಯೂ ನಿಪುಣರು.

ಪ್ರಾಯಶಃ ಅದು ಅನುಭಾವದ ಹರಿಕಾರ ನಮ್ಮ ಮುತ್ಯಾ ಮಡಿವಾಳಪ್ಪನ ಕಾಲದಿಂದಲೂ ನಡೆದುಬಂದ ಗುಡ್ ಹೆರಿಟೇಜ್. ಮಡಿವಾಳಪ್ಪನ ತರುವಾಯ ಅವರ ಅನುಭಾವಧಾರೆಯ ಪ್ರತೀಕದಂತೆ ಬಾಳಿ ಬದುಕಿದ ಇಬ್ಬರು ಭೀಮಾಶಂಕರರು ನಮ್ಮೂರಿನಲ್ಲಿ ಆಗಿ ಹೋಗಿದ್ದಾರೆ.

ಒಬ್ಬರು ಮಠದ ಬಳಿಯ ಬೆಂಚಿಯೊಳಗಿನ ಭೀಮಾಶಂಕರರು. ಬೆಂಚಿಯೊಳಗೆ ಸಿದ್ದಲಿಂಗಯ್ಯ ಮುತ್ಯಾ ಅವರ ಗದ್ದುಗೆ ಬಾಜೂಕೆ ಇವರ ಗದ್ದುಗೆ ಇದೆ. ಮತ್ತೊಬ್ಬರು ಮಠದ ಕೆಳಗಿನ ಗವಿ ಭೀಮಾಶಂಕರ ಅವಧೂತರು. ಇವರದು ನೆಲಗವಿಯೊಳಗೆ ಗದ್ದುಗೆ ಇದೆ. ಇವರ ಕಡೆಗಾಲದ ಜತೆಗಾರರಾದ ಇನ್ನೋರ್ವ ಪ್ರಾತಃಸ್ಮರಣೀಯರಿದ್ದಾರೆ. ಅವರು ಮಡಿವಾಳಪ್ಪ ಮತ್ತವರ ಶಿಷ್ಯರು ವಿರಚಿಸಿದ ತತ್ವಪದಗಳ ಸಂಗ್ರಹ ಮತ್ತು ಪ್ರಕಟಣೆಗೆ ತನ್ನ ಬದುಕನ್ನೇ ಮುಡಿಪಿಟ್ಟವರು. ಅವರೇ ಅಣಜಗಿ ಗೌಡಪ್ಪ ಸಾಧುಗಳು. ಇವರ ಗದ್ದುಗೆ ಜೆಂಬೇರಾಳದಲ್ಲಿದೆ. ಹೀಗೇ ತರುವಾಯ ತರುವಾಯದಂತೆ ನಡೆದು ಬಂದ ತತ್ವಪದಗಳ ಬಹುದೊಡ್ಡ ಹಾಡುಸರಣಿಯ ಹೊಳೆ ನಮ್ಮೂರಲ್ಲಿ ಹರಿಗಡಿಯದೇ ಹರಿದು ಬಂದಿದೆ. ಆಧುನಿಕತೆಯ ಭರಾಟೆಯಲ್ಲಿ ವಿಸ್ಮರಣೆಗೆ ಸರಿದು ಹೋಗುತ್ತಿರುವ ಕಡಕೋಳ ನೆಲದ ನೆನಪುಗಳನ್ನು ಶ್ರೀಮಠದ ಪೂಜ್ಯರ ಪಟ್ಟಾಧಿಕಾರ ರಜತ ಮಹೋತ್ಸವದ ನೆಪದಲ್ಲಿ ದಾಖಲೆಗೆ ಸೇರಿರುವುದು ಸಂತಸ. ಅದು ಅಕ್ಷರಶಃ ಮರೆತ ಹೆಜ್ಜೆ ಗುರುತುಗಳ ಗುಲ್ದಾಸ್ಥ. ಅದು *ಕಡಕೋಳ ನೆಲದ ನೆನಪುಗಳು* ಹೆಸರಲ್ಲಿ ಬೆಳ್ಳಿಹಬ್ಬದ ಪುಸ್ತಕ ಮಾಲೆಯಾಗಿ ಪ್ರಕಟವಾಗಿದ್ದು ಸ್ವಾಗತಾರ್ಹ. ಅದೊಂದು ಗುಡ್ ಲೆಗಸಿ ಅಂತಲೇ ಹೇಳಬಹುದು.

ಮರೆತು ಹೋಗುತ್ತಿರುವ ಈ ಹೆಜ್ಜೆ ಗುರುತುಗಳು ಕಡಕೋಳ ಪರಿಸರ ಮೀರಿ ದೂರದ ಮಹಾರಾಷ್ಟ್ರದ ಮಿರಜ, ಸಾಂಗ್ಲಿ, ಸೊಲ್ಲಾಪುರದವರೆಗೂ ಸಾಗಿ ಹೋಗಿವೆ. ಗವಿ ಭೀಮಾಶಂಕರರು ಅನುಭಾವದ ವಾರಸುದಾರರಂತೆ ಕನ್ನಡನಾಡಿನ ಗಡಿದಾಟಿ ಮಹಾರಾಷ್ಟ್ರದವರೆಗೂ ಅದನ್ನು ಕೊಂಡೊಯ್ದರು. ಸೊಲ್ಲಾಪುರದಲ್ಲಿ ಭೀಮಾಶಂಕರ ಅವಧೂತರು ಕಟ್ಟಿದ ‘ಕಡಕೋಳ ಮಡಿವಾಳಪ್ಪ’ ಹೆಸರಿನ ಮಠವೇ ಅದಕ್ಕೆ ಸಾಕ್ಷಿ. ಅಷ್ಟೇ ಯಾಕೆ ಖುದ್ದು ಭೀಮಾಶಂಕರ ಮಹಾರಾಜರೇ ತತ್ವಪದಗಳ ತವನಿಧಿಯೇ ಆಗಿದ್ದರು.

ಗವಿ ಭೀಮಾಶಂಕರರು ನಾದ ತನ್ಮಯತೆಯಿಂದ ಏಕತಾರಿ ನುಡಿಸುತ್ತಾ ಭಾವ ಪರವಶರಾಗಿ ತತ್ವಪದ ಹಾಡುವುದನ್ನು ಕೇಳುವುದು ಮತ್ತು ನೋಡುವುದೇ ಸಂಭ್ರಮ ಆಗಿತ್ತೆಂದು ಅವರನ್ನು ಒಡನಾಡಿದವರ ಮಾತುಗಳಿಂದಲೇ ಖುದ್ದಾಗಿ ಕೇಳಿದ್ದೇನೆ. ನಮ್ಮೂರಿನ ಈ ಇಬ್ಬರು ಭೀಮಾಶಂಕರರ ಕುರಿತು ಇನ್ನೊಮ್ಮೆ ವಿವರವಾಗಿ ಬರೆಯುವೆ. ಭೀಮಾಶಂಕರ ಅವಧೂತರ ಗವಿಯ ಮುಂದಿರುವ ನಿಗಿನಿಗಿ ಕೆಂಡದ ಧುನಿ. ಅದೊಂದು ಪುಟ್ಟ ಅಗ್ನಿದಿವ್ಯದ ವಿಮಲ ಸರೋವರ. ಇವತ್ತಿಗೂ ಮಡಿವಾಳಪ್ಪನ ಜಾತ್ರೆಯ ಸಂದರ್ಭದಲ್ಲಿ ಬೃಹತ್ ವೃತ್ತಾಕಾರದ ಧುನಿಯ ಸುತ್ತಲೂ ಪರ ಊರುಗಳಿಂದ ಬಂದ ಸಾಧು, ಸಂತರ ಏಕತಾರಿ ಪದಸಂವಾದಗಳ ಹಾಡಿನ ಜೀವನದಿಯೇ ಉಕ್ಕುತ್ತದೆ. ಅದನ್ನು ಕಂಡು ಕೇಳಿಯೇ ಆನಂದಿಸಬೇಕು.

ಮೂವತ್ತಾರು ವರ್ಷಗಳ ಹಿಂದೆ ತೀರಿಹೋದ ನನ್ನಪ್ಪ ಸಾಧು ಶಿವಣ್ಣ ಮತ್ತು ಈಗ್ಗೆ ಹತ್ತು ವರ್ಷಗಳ ಹಿಂದೆ ತೀರಿಹೋದ ನನ್ನವ್ವ ನಿಂಗಮ್ಮತಾಯಿ ಇಬ್ಬರೂ ಭೀಮಾಶಂಕರ ಅವಧೂತರ ಶಿಶು ಮಕ್ಕಳಾಗಿದ್ದರು. ಗುರು ಭೀಮಾಶಂಕರ ಅವಧೂತರ ಸಾಧನೆಯ ಗರಡಿಯಲ್ಲಿ ಪಳಗಿ ಅವರಿಂದ ನೂರಾರು ತತ್ವಪದಗಳನ್ನು ಹಾಡಲು ಕಲಿತಿದ್ದರು. ಪ್ರತಿ ಪದಕ್ಕು ಟೀಕು (ಪದಾರ್ಥ) ಹೇಳುತ್ತಿದ್ದರು. ಟೀಕು ತಾರಕಕ್ಕೆ ಹೋಗಿ ಒಮ್ಮೊಮ್ಮೆ ಅವ್ವ ಟೀಕಾಬಾಯಿಯೇ ಆಗುತ್ತಿದ್ದಳು. ಆದರೆ ಅಪ್ಪ ಮಾತ್ರ ಟೀಕಾಚಾರ್ಯ ಆದ ನೆನಪು ನನಗಿಲ್ಲ. ಹೀಗೆ ನಾನು ಹುಟ್ಟಿ ಬೆಳೆದ ಬಾಲ್ಯದ ನಮ್ಮ ಮನೆ ತತ್ವಪದಗಳ ಹಾಡುಗಾರಿಕೆಯ ಜಾತ್ಯತೀತ ಗರಡಿಮನೆಯೇ ಆಗಿತ್ತು.

ಅವರ ವಾರಗೆಯ ಗುರ್ತಾಯಿ ಲಕ್ಷ್ಮೀದೇವಿ (ಭೀಮಾಶಂಕರರು ಅವರನ್ನು ಪರಮಶಂಕರಿ ಎಂದು ಕರೆಯುತ್ತಿದ್ದರಂತೆ ) ಮತ್ತು ಅವರದೇ ಕಿರು ತಲೆಮಾರಿನ ಮಹಾಂತಪ್ಪ ಸಾಧು, ನಿಂಗಪ್ಪ ಪೂಜೇರಿ, ಮಳ್ಳಿ ಗುರವ್ವ, ಹುಡೇದ ಭೀಂಬಾಯಿ, ಹುಡೇದ ಸಿದ್ಧಪ್ಪ ಮತ್ತು ಯಲ್ಲಪ್ಪ, ಮಾಲಿ ಮಾಂತಪ್ಪಗೌಡ, ಬಡಿಗೇರ ಇಮಾಮಸಾಬ, ಗುತ್ತೇದಾರ ಅಬ್ದುಲಸಾಬ, ಹಿರೇಗೋಳ ಹಣಮಂತರಾಯ, ಚಪರಾಶಿ ಸಾಯಿಬಣ್ಣ ಮತ್ತು ನಮ್ಮ ನಡುವಿನ ಮುದ್ದಾ ಭೀಮರಾಯ ಇನ್ನೂ ಅನೇಕರು ಭೀಮಾಶಂಕರ ಅವಧೂತರು ಹಾಡುತ್ತಿದ್ದ ಪದಗಳ ಗಾಯನ ಸೊಗಸನ್ನು ಆರ್ದ್ರತೆ ತುಂಬಿ ಅನುಭಾವಿಸಿದವರು. ಒಬ್ಬೊಬ್ಬರು ನೂರಾರು ತತ್ವಪದಗಳನ್ನು ಜೀವತುಂಬಿ, ಭಾವತುಂಬಿ ಹಾಡುವ ಮೂಲಕ ಪದಗಳನ್ನೇ ಜೀವದ ಉಸಿರಾಗಿಸಿಕೊಂಡವರು. ಪದಗಳನ್ನೇ ಬಾಳಿ ಬದುಕಿದವರು.

ತನ್ಮೂಲಕ ಅವರು ಪರವಶಗೊಳ್ಳುವ ಸಾಧನ ಕ್ರಿಯೆ ನನ್ನನ್ನು ದಿಙ್ಮೂಢನನ್ನಾಗಿಸುತ್ತಿತ್ತು. ಹೌದು ಭೀಮಾಶಂಕರ ಅವಧೂತರ ಗವಿ ಪರಂಪರೆಗೆ ಅಂಥದೊಂದು ದಿವಿನಾದ ಶಕ್ತಿಇದೆ. ಅದು ಶಾಕ್ತ ಮತ್ತು ಸಾಧು ಸಂತರ ತತ್ವಪದಗಳ ಹಾಡುಗಾರಿಕೆಯ ಆರೂಢ ಮಾರ್ಗದ ಜಂಗಮ ನಡೆ. ಅದು ತತ್ವಪದಗಳ ಶಕ್ತಿಮೇಳ. ಅದರ ಹಾದಿ ಅನಾದಿ ಮತ್ತು ಅಪರಂಪಾರ. ತಾವು ಹಾಡಿದ ಹಾಡುಗಳ ಒಳಾಳಕ್ಕಿಳಿದು ನೋಡುವ, ಹಾಗೆ ನೋಡಿದ್ದನ್ನು ಒಡೆದು ಹೇಳುವ ನಿಗೂಢಾರ್ಥಗಳ ಅನುಸಂಧಾನವದು. ತನ್ನೊಳಗಿನ ಒಳಗನ್ನು ಹುಡುಕಿಕೊಳ್ಳುವ ಅಂತರಂಗದ ಅರಿವಿನ ಶೋಧನೆ.

ಅಂತಹ ಅರಿವನ್ನು ಆಗುಮಾಡುವ ಕ್ರಿಯಾನುಸಂಧಾನದ ಸಾಧು ಸಾಂಗತ್ಯ. ಅದು ತತ್ವಪದಗಳ ಲೋಕ ಮೀಮಾಂಸೆಯೂ ಹೌದು. ಇದು ಮೊನ್ನೆ ಮೊನ್ನೆವರೆಗೂ ಮಹಾಂತಪ್ಪ ಸಾಧುಗಳು ಕಾಲವಾಗುವವರೆಗೂ ನಡೆದುಬಂದ ಸಂಪ್ರದಾಯವೇ ಆಗಿದೆ. ಮಹಾಂತಪ್ಪ ಸಾಧು ಏಕಾಂತದಲಿ ಗವಿಯೊಳಗೆ ಅವಿತು ಪರಮಶಂಕರಿಯ ಸಿದ್ದಪತ್ರಿ ನಾದೋನ್ಮಾದದಲ್ಲಿ ತೇಲುವುದೇ ವಿಭಿನ್ನ ಪ್ರೀತಿ. ಗವಿಯ ಭೀಮಾಶಂಕರ ಅವಧೂತರ ಸಿದ್ಧ ಸಾಧನೆಯ ಗುರುಮಾರ್ಗದ ನಡೆಯಲ್ಲಿ ಈಗೀಗ ವ್ಯಕ್ತಿಗತ ಮಾದರಿ ಸ್ಥಿತ್ಯಂತರಗಳನ್ನು ಗುರುತಿಸಬಹುದಾಗಿದೆ.

ಬೆಂಚಿಯೊಳಗಿನ ಭೀಮಾಶಂಕರರು (ಅವರನ್ನು ಭೀಮರಾಯ ಸಾಧು ಎಂತಲೂ ಕರೆದುದುಂಟು) ಭಕ್ತಿಮಾರ್ಗದ ಸಾಧಕರಾಗಿದ್ದರು. ಅವರದು ಭಕ್ತಿಯೋಗ. ತನ್ನ ಜೀವಿತದ ಕಡೆಯ ಗಳಿಗೆವರೆಗೂ ಅವರು ಮಡಿವಾಳಪ್ಪನವರ ಕರ್ತೃ ಗದ್ದುಗೆ ಏರಿದವರಲ್ಲ. ಮಡಿವಾಳ ಶಿವಯೋಗಿಯ ಗುರುಮಾರ್ಗದ ಮೆಟ್ಟಿಲುಗಳನ್ನು ಏರುವ ಅರ್ಹತೆಗೆ ತಲುಪಬೇಕೆಂಬ ವಿನಮ್ರ ಮತ್ತು ವಿನೀತ ಭಾವ ಅವರಲ್ಲಿತ್ತು. ಆ ಮೂಲಕವೇ ಅವರೊಳಗೆ ಮಡಿವಾಳಪ್ರಜ್ಞೆ ಅವತರಿಸಿತ್ತು. ಅದೇ ಕಾಲದ ಸೆರಗಿನಂಚಿಗೆ ಸೇರುವ ಗವಿ ಭೀಮಾಶಂಕರರದು ದೇವಿ ಆರಾಧನೆಯ ಶಾಕ್ತ ಸಂಪ್ರದಾಯ. ಪದತತ್ವಗಳ ತಾದಾತ್ಮ್ಯ ಮತ್ತು ಅನುಭೂತಿ ಪಂಥ ಅವರದು.

ಇಬ್ಬರಿಗೂ ಮನದೊಳಗೆ ಮಡಿವಾಳಪ್ರಭುವೇ ಮಹಾಗುರು. ಇಬ್ಬರೂ ಗುರುಪಂಥದ ಪರಮಾನುಯಾಯಿಗಳು. ಅನುಭಾವದಡಿಗೆ ಮಾಡಿದವರು. ಮಾಡಿದ್ದನ್ನು ಇತರರಿಗೂ ನೀಡಿದವರು. ತತ್ವಗಳನ್ನು ಉಣಬಡಿಸಿದವರು. ಗುರುಮಾರ್ಗದ ದಾರಿಯಲಿ ಗುರುತರ ಹೆಜ್ಜೆಗಳನ್ನಿಡುತ್ತಾ ಗಂಭೀರ ನಡೆಗಳನ್ನು ನಡೆದು ಬಂದವರು. ಸೋಹಂ ಅನ್ನದೇ ದಾಸೋಹಂ ಅಂದವರು. ಹೀಗೆ ತತ್ವಪದಗಳನ್ನು ನೆಲಮೂಲದ ಬೇರುಸಂಸ್ಕೃತಿ ನೆಲೆಯಾಗಿಸಿ ನಿತ್ಯ ಬದುಕಿನೊಂದಿಗೆ ತಳಕು ಹಾಕಿಕೊಂಡವರು ಇವರು.

ವರ್ತಮಾನದಲ್ಲಿ ಈ ಹಾಡು ಪರಂಪರೆ ನವ ಸ್ಥಿತ್ಯಂತರದ ರೂಪ ತಾಳಿದೆ. ಅದಕ್ಕೆ ಆಧುನಿಕತೆಯ ನವಿರು ಸ್ಪರ್ಶ‌. ಅಷ್ಟು ಸುದೀರ್ಘ ಹಾದಿಯನ್ನು ನಡೆದು ಬಂದ ಪದಗಳು ಅಲ್ಲೆಲ್ಲೋ ಸ್ಥಗಿತಗೊಂಡಂತೆ ಭಾಸವಾಗುತ್ತಿದೆ. ಸಹಜವಾಗಿ ಐಡೆಂಟಿಟಿ ಕ್ರೈಸಸ್ ಗಳು ಆದ್ಯತೆಯಂತೆ ಭಜನೆಕಾರರನ್ನು ಕಾಡಿವೆ. ಲೋಕ ಸಂಸ್ಕೃತಿಯೊಂದು ವ್ಯಕ್ತಿನೆಲೆಯ ಅಸ್ಮಿತೆಯ ಹುಡುಕಾಟದಲಿ ಕಳೆದು ಹೋಗುವ ದಿನಮಾನಗಳಿವು. ಕಳೆದೆರಡು ದಶಕಗಳಿಂದ ನಮ್ಮೂರ ತತ್ವಪದ ಭಜನೆಗಳ ತಂಡದಲ್ಲಿ ಅನೇಕ ಹೊಸ ಮನ್ವಂತರದ ಮುಖಗಳು. ಹುಡೇದ ನರಸಪ್ಪ, ಮಾಲಿ ರೇವಣ್ಣಗೌಡ, ಪೋಲಿಸ್ ಗೌಡಪ್ಪಗೌಡ, ಮಾಲಿ ಶಿವರಾಯಗೌಡ, ಹಿರೇಗೋಳ ಯಂಕಣ್ಣ, ಬಡಿಗೇರ ಮಾನಯ್ಯ, ಪೋಲಿಸ್ ಶಿವನಗೌಡ, ದುದ್ದಣಗಿ ಮಹಾಂತೇಶ, ನಾಯ್ಕೋಡಿ ಬಸವರಾಜ, ಹೊಸಮನಿ ಮಲಕಪ್ಪ ಅದರಲ್ಲೂ ಕಟ್ಟೀಮನಿ ಮಾದಾರ ಮಾಂತಪ್ಪ ಮತ್ತು ಸಾಯಿಬಣ್ಣ ಸೋದರರ ವಿನೂತನ ಶೈಲಿಯ ಭಜನೆ ಜನ ಮನ್ನಣೆ ಗಳಿಸಿದೆ.

ಇತ್ತೀಚೆಗೆ ಕೊರೊನಾ ಕಾಲದಲ್ಲಿ ನಿಧನರಾದ ನಮ್ಮೂರಿನ ಮತ್ತು ನನ್ನ ವಾರಗೆಯ ತಿಪ್ಪಣ್ಣ ಗವಾಯಿ ಅಂತಹ ಹುಡುಕಾಟದಲ್ಲಿದ್ದರು. ಅವರೊಬ್ಬ ಪ್ರತಿಭಾವಂತ ಗಾಯಕ. ಆತನಿಗೆ ಆಲಾಪನೆ ಮಾಡಿ ಶಾಸ್ತ್ರೀಯ ಲೆವೆಲ್ಲಿನಲ್ಲಿ, ಟೀವಿ ಮತ್ತಿತರೆ ವಾಹಿನಿಗಳಲ್ಲಿ ಬರುವ ಜನಪ್ರಿಯ ಮಾದರಿಯಲ್ಲಿ ಹಾಡುವ ಕ್ಲಾಸಿಕ್ ಮಾನದಂಡದ ತವಕ. ಅದರಿಂದ ಬಹುದೊಡ್ಡ ಮಾನ್ಯತೆ ದಕ್ಕಬಹುದೆಂಬ ಹುಸಿ ಪ್ರತಿಷ್ಟೆಯ ಪ್ರಭಾವ ಜಾಲದಲ್ಲಿ ಅನೇಕರು ಬಂಧಿಯಾಗುತ್ತಿದ್ದಾರೆ. ಆ ಮೂಲಕ ನೆಲಮೂಲದ ಬೇರು ಸಂಸ್ಕೃತಿಯ ಹಾಡುಗಾರಿಕೆ ಮತ್ತು ಸಂಗೀತ ಪರಿಕರಗಳು ಕಾರ್ಪೊರೇಟ್ ತೆಕ್ಕೆಗೆ ಈಡಾಗುತ್ತಿರುವುದು ಮಾತ್ರ ಖೇದಕರ.

Previous post ಹಣತೆಯ ಹಂಗು
ಹಣತೆಯ ಹಂಗು
Next post ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)

Related Posts

ಗುರು-ಶಿಷ್ಯ ಸಂಬಂಧ
Share:
Articles

ಗುರು-ಶಿಷ್ಯ ಸಂಬಂಧ

August 8, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಡಕೆಯ ಮಾಡುವಡೆ ಮಣ್ಣೆ ಮೊದಲು, ತೊಡುಗೆಯ ಮಾಡುವಡೆ ಹೊನ್ನೆ ಮೊದಲು, ಶಿವಪಥವನರಿವಡೆ ಗುರುಪಥವೆ ಮೊದಲು, ಕೂಡಲಸಂಗಮದೇವರನರಿವಡೆ ಶರಣರ ಸಂಗವೆ ಮೊದಲು. ಸಂಗದ ಮಹತ್ವವನ್ನು ಕೆಲವು...
ವಚನಗಳಲ್ಲಿ ಶಿವ
Share:
Articles

ವಚನಗಳಲ್ಲಿ ಶಿವ

September 4, 2018 ಡಾ. ಪಂಚಾಕ್ಷರಿ ಹಳೇಬೀಡು
ಪುರಾಣಗಳಲ್ಲಿ ಶಿವನನ್ನು  ಒಬ್ಬ ವ್ಯಕ್ತಿಯಾಗಿ ಬಿಂಬಿಸಲಾಗಿದೆ. ಆತನಿಗೆ ಪಾರ್ವತಿ ಮತ್ತು ದಾಕ್ಷಾಯಣಿ ಎಂಬ ಹೆಂಡತಿಯರೂ ಗಣೇಶ ಕಾರ್ತಿಕೇಯ ಎಂಬ ಇಬ್ಬರು ಮಕ್ಕಳೂ ಇದ್ದರೆಂದು...

Comments 7

  1. ಗದಿಗೆಪ್ಪ ಸವಣೂರು
    Dec 15, 2025 Reply

    ಮಡಿವಾಳಪ್ಪ ನಮ್ಮ ಅಪ್ಪ, ಗುರು, ದೇವರು, ಅವನ ಪದಾ ಹಾಡೋದಕ್ಕೂ ಚಂದಾ, ಕೇಳೋದಕ್ಕೂ ಚಂದಾ. ಜಾತ್ರಿ ಅಂದ್ರ ಜಾತ್ರಿ!

  2. ಸಿದ್ದಣ್ಣ ಧನ್ನೂರು
    Dec 15, 2025 Reply

    ಲೇಖಕರ ತಾಯಿ, ತಂದೆಯರು ಭೀಮಾಶಂಕರ ಅವಧೂತರ ಶಿಶು ಮಕ್ಕಳಾಗಿದ್ದರೆಂಬುದನ್ನು ಓದಿ ಅಚ್ಚರಿಯಾಯಿತು. ಅನುಭಾವಿಗಳ ಮನೆತನದ ವಾತಾವರಣ ಪಡೆದ ಶರಣ ಮಲ್ಲಿಕಾರ್ಜುನ ಅವರಿಗೆ ಶರಣುಗಳು🙏🙏🙏

  3. ನಿಜಗುಣ ಸಿ
    Dec 16, 2025 Reply

    ಕಡಕೋಳ ನೆಲದ ನೆನಪುಗಳನ್ನು ಹೆಕ್ಕಿ ತೆಗೆದು ಹೃದಯ ತುಂಬಿ ಬರೆದ ಬರವಣಿಗೆಗೆ ನಮನಗಳು🙏🙏

  4. ಚನ್ನಬಸವ ಹುಕ್ಕೇರಿ
    Dec 20, 2025 Reply

    ಗಾಯನದ ಮೋಡಿಯಲ್ಲಿ ತತ್ವಪದಗಳು ಎದೆಯನ್ನು ಪ್ರವೇಶಿಸುವ ರೀತಿಯೇ ಅಗಮ್ಯ.

  5. ನಂಜಪ್ಪ ತಾತಾ, ನಂಜನಗೂಡು
    Dec 21, 2025 Reply

    ಬಯಲುನಲ್ಲಿ ಉತ್ತಮ ಲೇಖನಗಳು ಬರುತ್ತವೆ. ಪಂಚೇಂದ್ರಿಯಗಳ ಕಾಠಿಣ್ಯ ಕಳೀಬೇಕು. ಇದ್ದಲ್ಲೇ ಐಕ್ಯವಾಗಿ ಬಾಳಬೇಕು. ತತ್ವಪದಗಳು ಮಾರ್ಗದರ್ಶನ ಮಾಡುತ್ತವೆ.

  6. P. Sudeep
    Dec 26, 2025 Reply

    ನಿಜವೇ ಸರ್. ಹೆಜ್ಜೆಗಳು ಮರೆತು ಹೋಗಿವೆ, ತತ್ವಗಳು ಕಾಣೆಯಾಗಿವೆ….. ಈಗ ಕೇವಲ ಅವರುಗಳ ಆರಾಧನೆಯಲ್ಲಿ ಜನಜಂಗುಳಿ ತಲ್ಲೀನವಾಗಿದೆ.

  7. ಷಣ್ಮುಖಪ್ಪ ಜಿ
    Dec 29, 2025 Reply

    ಭಜನಾಪದಗಳಾಗಿರುವ ತತ್ವಪದಗಳಿಗೆ identify crisis ಕಾಡಿದ್ದೂ ನಿಜ. ವಿದ್ವನರ ಹಾಡುಗಾರಿಕೆಗೆ ಇವು ಕಾಯ್ದು ಕೂತಿಲ್ಲಾ. ಜನಸಾಮಾನ್ಯರ ನಾಲಿಗೆಯಲ್ಲಿ ಬೆರೆತುಹೋದರೆ ಸಾಕು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ನಾನೆಂಬ ನಿನಾದ…
ನಾನೆಂಬ ನಿನಾದ…
January 15, 2026
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
May 8, 2024
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
Copyright © 2026 Bayalu