Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಫ್ರಿಕಾದ ಸೂರ್ಯ
Share:
Articles December 13, 2024 ಕೆ.ಆರ್ ಮಂಗಳಾ

ಆಫ್ರಿಕಾದ ಸೂರ್ಯ

“ದೇವರು ನಮಗೆ ನೀಡಿದ ಉತ್ಕೃಷ್ಟ ಕೊಡುಗೆ ನೆಲ್ಸನ್ ಮಂಡೇಲಾ. ಅವರು ನನಗೆ ಹೃದಯ ವೈಶಾಲ್ಯತೆಯ ಆದರ್ಶ. ಇಂಥ ಹಿರಿಯ ಬದುಕನ್ನು ಪ್ರಭಾವಿಸಿದ ಶ್ರೇಯ ಮಹಾತ್ಮ ಗಾಂಧೀಜಿಗೆ ಸಲ್ಲುತ್ತದೆ… ಸ್ವಾರ್ಥ-ಹಿಂಸೆಗಳು ತುಂಬಿದ ಇಂದಿನ ದಿನಗಳಲ್ಲಿ ಆರೇಳು ದಶಕಗಳ ಹಿಂದಿಗಿಂತಲೂ ಗಾಂಧೀಜಿ ಹೆಚ್ಚು ಪ್ರಸ್ತುತವೆನಿಸುತ್ತಾರೆ…” ನೊಬೆಲ್ ಶಾಂತಿ ಪುರಸ್ಕೃತ ಆಫ್ರಿಕಾದ ಡೆಸ್ಮಂಡ್ ಟುಟು ಬೆಂಗಳೂರಿಗೆ ಬಂದಿದ್ದಾಗ ಹೇಳಿದ ಮಾತುಗಳು.

“ರಾಜಕೀಯದಲ್ಲಿ ಅಹಿಂಸೆಯು ಮೊದಲು ಬೇರು ಬಿಟ್ಟಿದ್ದೇ ದಕ್ಷಿಣ ಆಫ್ರಿಕಾದಲ್ಲಿ. ಯಾಕೆಂದರೆ ಮಹಾತ್ಮ ಗಾಂಧೀಜಿಯ ರಾಜಕೀಯ ಕಾರ್ಯಾಚರಣೆಗಳು ಇಲ್ಲಿಯೇ ಶುರುವಾದದ್ದು. ಮುಂದೆ ಅವರ ಈ ತತ್ವಗಳು ಭಾರತಕ್ಕೆ ಸ್ವಾತಂತ್ರ್ಯ ಒದಗಿಸುವಲ್ಲಿ ಮಹತ್ತರ ಪಾತ್ರವಹಿಸಿದವು. ಗಾಂಧೀಜಿ ಬದುಕು ನಮ್ಮ ನಾಡಿನ ಮಾರ್ಟಿನ್ ಲೂಥರ್ ಕಿಂಗ್ ಅವರ ಹೋರಾಟದ ಸ್ಫೂರ್ತಿಯ ಸೆಲೆಯಾಗಿತ್ತು…” – ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ, ನೆಲ್ಸನ್ ಮಂಡೇಲಾ ಅವರ ಹೋರಾಟವನ್ನು ತಮ್ಮ ಮಕ್ಕಳ ಮನಸ್ಸಿಗೆ ಇಳಿಸುತ್ತಾ ಹೇಳಿದ ಇತಿಹಾಸದ ಒಂದು ತುಣುಕು ಪಾಠ.

ಗಾಂಧೀಜಿ, ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲಾ- 20ನೇ ಶತಮಾನ ಕಂಡ ಮಹಾನ್ ನಾಯಕರು. ಈ ಮಾನವತಾವಾದಿಗಳದು ಕಾಲ-ದೇಶಾತೀತವಾದ ಸಂಬಂಧ. ಶಸ್ತ್ರಾಸ್ತ್ರಗಳ ಹಂಗಿಲ್ಲದೇ ತಮ್ಮ ಜೀವಮಾನ ಪೂರ್ತಿ ವರ್ಣಭೇದ ನೀತಿಯ ವಿರುದ್ಧ ನ್ಯಾಯ ಮತ್ತು ಸಮಾನ ಹಕ್ಕುಗಳಿಗಾಗಿ, ನಿಗ್ರಹಕ್ಕೊಳಗಾದ ಜನರ ವಿಮೋಚನೆಗಾಗಿ ಹೋರಾಡಿದ ನೆಲ್ಸನ್ ಮಂಡೇಲಾ ತಮ್ಮ 95ನೆಯ ವಯಸ್ಸಿನಲ್ಲಿ ಕೊನೆಯುಸಿರೆಳೆದು ಇದೇ ಡಿಸೆಂಬರಿನ 5ನೇ ತಾರೀಖಿಗೆ ಹನ್ನೊಂದು ವರ್ಷಗಳು ಸಂದವು. ರಾಜಕೀಯ ವ್ಯವಸ್ಥೆಗಳು ಕೃತಕವಾದವುಗಳು, ನಾಗರಿಕ ಸಂಘರ್ಷದ ನಂತರ ಸಾಂವಿಧಾನಿಕ ರಾಜ್ಯವನ್ನು ಸ್ಥಾಪಿಸಲು ಸಂಕೀರ್ಣವಾದ ಕೆಲಸದ ಅಗತ್ಯವಿದೆ ಎಂದು ಅಹಿಂಸಾತ್ಮಕ ಮಾರ್ಗದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಬಹುದು ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಂತೆ ದುಡಿದವರು ಮಂಡೇಲಾ. “ಒಡೆಯುವುದು ಮತ್ತು ನಾಶಮಾಡುವುದು ಸುಲಭ. ಶಾಂತಿ ಮತ್ತು ಕಟ್ಟುವ ಕೆಲಸಕ್ಕೆ ಕೈ ಹಾಕುವವರು ಮಾತ್ರ ವೀರರು” ಎಂಬ ಅವರ ಮಾತು ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯವಾಗಿ ಕಾಣುತ್ತಿದೆ. ಹೆಚ್ಚುತ್ತಿರುವ ಜಾಗತಿಕ ಹಿಂಸಾಚಾರದ 21 ನೇ ಶತಮಾನದ ಬಿಕ್ಕಟ್ಟುಗಳನ್ನು ಎದುರಿಸಲು ಗಾಂಧಿ-ಮಂಡೇಲಾ ಪರಂಪರೆಯನ್ನು ಹೊಸ ತಲೆಮಾರಿನವರು ನೆನೆಯುವುದು ಅನಿವಾರ್ಯ. ಮಾನವೀಯ ನೆಲೆಯಲ್ಲಿ ನೆಲ್ಸನ್ ಮಂಡೇಲಾ ರೂಪಿಸಿಕೊಂಡ ಹೋರಾಟದ ಒಂದು ಪುಟ್ಟ ಪರಿಚಯ ಈ ಲೇಖನ.

ಆಫ್ರಿಕಾ ಖಂಡದ ಸ್ವಾತಂತ್ರ್ಯ ಹೋರಾಟಗಳ ಮೇಲೆ ಮಹಾತ್ಮ ಗಾಂಧೀಜಿಯ ಪ್ರಭಾವವನ್ನು ನಿಚ್ಚಳವಾಗಿ ಕಾಣಬಹುದು. ಅಹಿಂಸೆಯು ಎಲ್ಲಾ ಪ್ರಮುಖ ಆಫ್ರಿಕನ್ ಒಕ್ಕೂಟಗಳ ಅಧಿಕೃತ ನಿಲುವಾಗಿತ್ತು. ದಕ್ಷಿಣ ಆಫ್ರಿಕಾದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್‍ಸಿ) ಕೂಡ ಹಿಂಸೆಯ ಅಪ್ಪಟ ವಿರೋಧಿಯಾಗಿತ್ತು. ಗಾಂಧೀಜಿ ಭಾರತಕ್ಕೆ ಮರಳುವಾಗ ತಮ್ಮ ವಿಚಾರಗಳನ್ನು ಮುನ್ನಡೆಸಿಕೊಂಡು ಹೋಗುವವರು ಈ ನೆಲದಿಂದಲೇ ಬರುವರೆಂಬ ಆಶಯ ವ್ಯಕ್ತಪಡಿಸಿದ್ದರು. ಆ ನಂಬಿಕೆ ಹುಸಿಯಾಗಲಿಲ್ಲ. ಸ್ವಾತಂತ್ರ್ಯಕ್ಕಾಗಿ ಹಾಗೂ ವರ್ಣಬೇಧ ನೀತಿಯ ವಿರುದ್ಧ ದನಿ ಎತ್ತಿದ ಆಲಿವರ್ ಟಾಂಬೊ, ವಾಲ್ಟರ್ ಸಿಸುಲು, ಯೂಸಫ್ ಡಾಡೂ, ಆಲ್ಬರ್ಟ್ ಲುತಾಲಿ ಮುಂತಾದ ಧುರೀಣರ ನಡುವೆ ನೆಲ್ಸನ್ ಮಂಡೇಲಾ ಹೆಸರು ಅಜರಾಮರ.

ಟೆಂಬು ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಮಂಡೇಲಾ ಗಾಂಧೀಜಿಯಂತೆ ಕಾನೂನು ಪದವೀಧರರು. ವಸಹಾತು ದಬ್ಬಾಳಿಕೆಗೆ, ಅವಮಾನಗಳಿಗೆ ತುತ್ತಾದವರು. ಆಡಳಿತ ನಡೆಸುತ್ತಿದ್ದ ನ್ಯಾಷನಲ್ ಪಕ್ಷದ ವರ್ಣಬೇಧ ನೀತಿಯನ್ನು ವಿರೋಧಿಸುವ ಮೂಲಕ ಅವರ ರಾಜಕೀಯ ಹೆಜ್ಜೆಗಳು ಆರಂಭವಾದವು. ಎಎನ್‍ಸಿ ಸೇರಿದಾಗ ಅವರಿಗೆ 26ರ ಹರಯ. ನಾಗರಿಕ ಪ್ರತಿಭಟನೆ ಹಾಗೂ ಅಹಿಂಸಾತ್ಮಕ ಅಸಹಕಾರದ ಮಾದರಿಯಲ್ಲಿ ಚಳವಳಿ ಆರಂಭವಾಗಿತ್ತು. ಮಂಡೇಲಾ ಈ ಸಂಘಟನೆಯ ಮುಖ್ಯ ಸ್ವಯಂಸೇವಕರಾಗಿದ್ದರು. ಅವರ ಚಟುವಟಿಕೆಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದವು. ಆರೋಪ, ಬಂಧನ, ವಿಚಾರಣೆಗಳಿಗೆ ಒಳಗಾಗುತ್ತಿದ್ದರೂ ಮಂಡೇಲಾ ಹೋರಾಟದಿಂದ ಹಿಮ್ಮೆಟ್ಟಲಿಲ್ಲ.

ನಮ್ಮ ಜಲಿಯನ್ ವಾಲಾಭಾಗ್ ಹತ್ಯಾಕಾಂಡದಂತಹ ಹೃದಯ ವಿದ್ರಾವಕ ಘಟನೆ ಅಲ್ಲಿಯೂ ನಡೆಯಿತು. ಅದು 1960ರ ಸಮಯ. ಶರ್ಪವಿಲ್ಲೆಯಲ್ಲಿ 60 ಮಂದಿ ಶಾಂತಿಯುತ ಪ್ರತಿಭಟನೆಕಾರರನ್ನು ನಿರ್ದಯವಾಗಿ ಕೊಲ್ಲಲಾಗಿತ್ತು. ಅಲ್ಲಿದ್ದ ಬಹುತೇಕರು ಮಹಿಳೆಯರು ಮತ್ತು ಮಕ್ಕಳು. ಮಂಡೇಲಾ ಇದರಿಂದ ತೀವ್ರ ಆಘಾತಕ್ಕೆ ಒಳಗಾದರು. ಅಹಿಂಸಾತ್ಮಕ ಮಾರ್ಗ ಅದೆಷ್ಟು ದುರ್ಗಮವಾದದ್ದು ಎಂಬ ಸತ್ಯ ಕಣ್ಣ ಮುಂದೆ ಕ್ರೂರವಾಗಿ ನಿಂತಿತ್ತು. “ಸಾಮ್ರಾಜ್ಯಶಾಹಿಗೆ ಕೇಳುವುದು ಬಲಪ್ರಯೋಗದ ಭಾಷೆ ಮಾತ್ರ. ಸ್ವಲ್ಪ ಮಟ್ಟಿನ ಹಿಂಸೆ ಇಲ್ಲದೆ ಯಾವ ದೇಶವೂ ಸ್ವಾತಂತ್ರ್ಯವಾಗದು” ಎಂಬ ನಿರ್ಧಾರ ಅವರ ಹೋರಾಟಕ್ಕೆ ಸೈನ್ಯದ ಅನಿವಾರ್ಯತೆಯನ್ನು ಸೃಷ್ಟಿಸಿತು. ಹೀಗೆ ಸಮಯ, ಸಂದರ್ಭಕ್ಕೆ ತಕ್ಕಂತೆ ಮಂಡೇಲಾ ತಮ್ಮ ಹೋರಾಟದ ತಂತ್ರವನ್ನು ಕೆಲ ಕಾಲ ಬದಲಿಸಿಕೊಂಡರೂ ಅಹಿಂಸಾತ್ಮಕ ಹೋರಾಟದಿಂದ ವಿಮುಖವಾಗಲಿಲ್ಲ. “ಹೇಡಿತನ ಮತ್ತು ಹಿಂಸೆಯ ನಡುವಿನ ಆಯ್ಕೆ ನನ್ನೆದುರು ಬಂದಲ್ಲಿ ನಾನು ಹಿಂಸೆಯನ್ನೇ ಆರಿಸಿಕೊಳ್ಳುವುದು… ಘನತೆ ಗೌರವದ ರಕ್ಷಣೆಯ ವಿಚಾರದಲ್ಲಿ ನಾನು ನಿಸ್ಸಹಾಯಕ ಹೇಡಿಯಂತೆ ನಿಲ್ಲುವುದಕ್ಕೆ ಬದಲು ಅಸ್ತ್ರವನ್ನು ಹಿಡಿಯಬಯಸುತ್ತೇನೆ” ಎಂಬ ಗಾಂಧೀಜಿಯ ಮಾತನ್ನು ಉಲ್ಲೇಖಿಸುವ ಮಂಡೇಲಾ ಪ್ರಸಂಗ ಬಂದಲ್ಲಿ ಅಸ್ತ್ರ ಪ್ರಯೋಗಕ್ಕೆ ಗಾಂಧೀಜಿಯ ಸಮ್ಮತಿಯ ಮುದ್ರೆ ಇತ್ತು ಎಂದು ತಮ್ಮ ಅಂದಿನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ.

ಸಾಮ್ರಾಜ್ಯಶಾಹಿಯ ಕಬಂಧ ಬಾಹುಗಳು ಸುಲಭವಾಗಿ ಬಗ್ಗುವಂತಿರಲಿಲ್ಲ. ಚಳವಳಿಯ ಬೆನ್ನೆಲುಬು ಮುರಿಯಲು ಮಂಡೇಲಾ ಹಾಗೂ ಇತರೆ ಏಳು ಹಿರಿಯ ನೇತಾರರನ್ನು 1964ರಲ್ಲಿ ಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಸೆರೆಮನೆಯಲ್ಲಿ ಮಂಡೇಲಾ ಕಳೆದದ್ದು ಬರೊಬ್ಬರಿ 27 ವರ್ಷ! ಬದುಕಿನ ಸುಂದರ ಸಮಯ ಯೌವನವೇ ಎನ್ನುವುದಾದರೆ ಅವರು ಅದರಿಂದ ಸಂಪೂರ್ಣ ವಂಚಿತರಾಗಿದ್ದರು…

ಸೆರೆಯ ವಾಸ ಕಠೋರವಾಗಿತ್ತು. ದೈತ್ಯಾಕಾರದ ಗೋಡೆಗಳ ನಡುವೆ ದೂಳು ತುಂಬಿದ ನೆಲ. ಅರೆಗತ್ತಲ ಪುಟ್ಟ ಕೋಣೆ. ಬಿಳಿಯ ಕೈದಿಗಳಿಗಿಂತ ಕಡಿಮೆ ಊಟ ಸಿಗುತ್ತಿತ್ತು, ಅವರಿಗಿಂತ ಹೆಚ್ಚು ಶ್ರಮದ ಕೆಲಸ ಮಾಡಬೇಕಿತ್ತು. ಚಳಿಗಾಲದಲ್ಲಿ ತೆಳ್ಳನೆಯ ಹೊದಿಕೆಯಡಿ ಜುನುಗುಡುವ ನೆಲದ ಮೇಲೆ ನಡುಗುತ್ತಾ ದಿನಕಳೆಯಬೇಕಿತ್ತು. ಇಂಥ ಕೆಟ್ಟ ವಾತಾವರಣದಲ್ಲಿ ಮಂಡೇಲಾ ಪದೇ ಪದೇ ಕಾಯಿಲೆ ಬೀಳುತ್ತಿದ್ದರು. ಕ್ಷಯರೋಗ ಅಂಟಿತು. ಕೊನೆಗಾಲದಲ್ಲಿ ಅವರನ್ನು ತೀವ್ರವಾಗಿ ಪೀಡಿಸಿದ ಶ್ವಾಸಕೋಶದ ಸೋಂಕಿಗೆ ಈ ದುರ್ಗಮ ದಿನಗಳೇ ಕಾರಣ. ಜೊತೆಗೆ ಕಿತ್ತುತಿನ್ನುವ ಒಂಟಿತನ. ಮಂಡೇಲಾ ಅಂತರ್ಮುಖಿಯಾದರು. “ನನ್ನ ಜೀವನವೇ ಒಂದು ಹೋರಾಟ” ಎನ್ನುತ್ತಿದ್ದ ಅವರ ಮಾತು ಅವರ ಆತ್ಮಚರಿತ್ರೆ “ಲಾಂಗ್ ವೇ ಟು ಫ್ರೀಡಂ” ಓದಿದವರಿಗೆ ವೇದ್ಯವಾಗುತ್ತದೆ.

ಹತಾಶೆಯ ಸಂದರ್ಭಗಳು ನಕಾರಾತ್ಮಕವಾಗಿ ಯೋಚಿಸುವಂತೆ ಮಾಡುತ್ತವೆ. ಆದರೆ ಮಂಡೇಲಾ ಧೃತಿಗೆಡಲಿಲ್ಲ. “ಮೂಲಭೂತವಾಗಿ ನಾನೊಬ್ಬ ಆಶಾವಾದಿ. ಅದು ನನಗೆ ಸ್ವಭಾವತಃ ಬಂದದ್ದೋ ಬೆಳೆಸಿಕೊಂಡದ್ದೋ ಗೊತ್ತಿಲ್ಲ. ಮಾನವೀಯತೆಯ ಮೇಲಿನ ನನ್ನ ನಂಬುಗೆ ಪರೀಕ್ಷೆಗೆ ಒಳಗಾಗುವಂಥ ಗಾಢ ಅಂಧಕಾರದ ಕ್ಷಣಗಳು ಸಾಕಷ್ಟು ಎದುರಾಗಿವೆ, ಆದರೆ ನಾನು ಹತಾಶೆಗೊಳ್ಳಲಿಲ್ಲ…” ಸರಳುಗಳಾಚೆಗಿನ ಪ್ರತಿ ಬೆಳಗನ್ನೂ ಅವರು ಇಂಥ ನಂಬುಗೆಯಿಂದ ಆಹ್ವಾನಿಸಿದರು. ಸೂರ್ಯನನ್ನು ಕಾಣಲು ಅವರ ಕಣ್ಣು ತವಕಿಸುತ್ತಿದ್ದವು. ಆದರೆ ಬಿಡುಗಡೆಗಾಗಿ ತಮ್ಮ ರಾಜಕೀಯ ನಿಲುವಿನಲ್ಲಿ ರಾಜೀ ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ಅಂಥ ಅನೇಕ ಅವಕಾಶಗಳನ್ನು ಅವರು ನಿರಾಕರಿಸುತ್ತಾ ಬಂದರು. ಹೊರಜಗತ್ತಿನ ಸಂಪರ್ಕವಿಲ್ಲದಿದ್ದರೂ ಅವರ ಕೈದಿ ಸಂಖ್ಯೆ- 46664 ಚಳವಳಿಗಾರರ ಉತ್ಸಾಹದ ಬಾಯ್ಮಾತಾಯಿತು. ಅವರ ತ್ಯಾಗ, ಸಂಯಮಗಳು ವರ್ಣಬೇಧ ನೀತಿಯ ವಿರೋಧದ ಹೋರಾಟಕ್ಕೆ ಹೊಸ ಚೈತನ್ಯ ತುಂಬುತ್ತಿದ್ದವು.

ರಾಬಿನ್ ದ್ವೀಪದಲ್ಲಿದ್ದ ಮಂಡೇಲಾ ಅವರ ಸೆರೆಮನೆಯ ಕೋಣೆಯಲ್ಲಿ ಗಾಂಧೀಜಿಗೆ ಸಂಬಂಧಿಸಿದ ಅನೇಕ ಪುಸ್ತಕಗಳಿದ್ದವು. ಏಕಾಂತದ ಸಾಂಗತ್ಯದಲ್ಲಿ ನಡೆಸಿದ ಅಧ್ಯಯನ, ಚಿಂತನೆಗಳಿಂದ ತಮ್ಮ ಸಿಟ್ಟನ್ನು ರಚನಾತ್ಮಕವಾಗಿ ಹರಿಬಿಡಲು ಅವರಿಗೆ ಸಾಧ್ಯವಾಯಿತು. ನೋವು, ಆಕ್ರೋಶ, ಕಹಿ ಭಾವನೆಗಳು ಕರಗಿ ಹೋಗಿದ್ದವು. ಬಹುಸಂಖ್ಯಾತ ಕಪ್ಪುವರ್ಣೀಯರ ಸಬಲೀಕರಣದ ಅಗತ್ಯವನ್ನು ಅಲ್ಪಸಂಖ್ಯಾತ ಬಿಳಿಯರ ಸಾಮ್ರಾಜ್ಯಕ್ಕೆ ಮನಗಾಣಿಸುವುದು ಸುಲಭದ ಕಾರ್ಯವಲ್ಲ. ಅದೂ ಶಾಂತಿಯುತ ಮಾತುಕತೆಗಳಿಂದ ಓಲೈಸಲು ಅದಮ್ಯ ಆತ್ಮಶಕ್ತಿ ಬೇಕು. ದೇಶ ಬದಲಾಗಬೇಕಾದರೆ ಮೊದಲ ಪರಿವರ್ತನೆ ತನ್ನಿಂದಲೇ ಆಗಬೇಕೆಂಬ ನಂಬಿಕೆ ಜಾಗ್ರತವಾಯಿತು. ಕಪ್ಪು ವರ್ಣೀಯರ ಹಿತಾಸಕ್ತಿಯ ಜೊತೆಗೆ ಸಮಸ್ತ ಶೋಷಿತರ ಪರವಾಗಿ ಅವರ ವಿಚಾರಗಳು ಗಟ್ಟಿಗೊಂಡವು. ಬಹುಜನಾಂಗೀಯ ರಾಷ್ಟ್ರವನ್ನಾಗಿ ದಕ್ಷಿಣ ಆಫ್ರಿಕಾದ ಚುಕ್ಕಾಣಿ ಹಿಡಿಯಬಲ್ಲ ಸಮರ್ಥ ನಾಯಕರಾಗಿ ಮಂಡೇಲಾ ಸೆರೆಮನೆಯಲ್ಲಿಯೇ ರೂಪುಗೊಳ್ಳುತ್ತಿದ್ದರು. ಬಂಧನದಿಂದ ಹೊರಬಂದಾಗ ಇಡೀ ಜಗತ್ತೇ ಅವರ ಬಿಡುಗಡೆಗಾಗಿ ಪ್ರಾರ್ಥಿಸಿತ್ತು, ಕಾತರಿಸಿತ್ತು, ಸಂಭ್ರಮಿಸಿತ್ತು.

ಆಗ ಅವರಿಗೆ 72 ವರ್ಷ!

ಗಾಳಿಗೆ ಗುದ್ದುತ್ತಾ, ವಿಜಯದ ಹೆಬ್ಬೆಟ್ಟು ತೋರಿಸುತ್ತಾ ನಗುನಗುತ್ತಾ ಹೊರ ಬಂದ ಮಂಡೇಲಾ ಅವರನ್ನು ಕಂಡು ಅಂದು ಬಿಕ್ಕಿದವರು ಅದೆಷ್ಟೋ… ಜೋರಾಗಿ ಅತ್ತವರು ಅದೆಷ್ಟೋ… ಅದೊಂದು ಅಪೂರ್ವ ಕ್ಷಣ. ವೈಯಕ್ತಿಕ ಸುಖ-ಸಂತೋಷಗಳನ್ನು, ಯೌವನವನ್ನು, ಕುಟುಂಬವನ್ನು ತನ್ನ ಜನರಿಗಾಗಿ ಒತ್ತೆ ಇಟ್ಟ ಆ ಅಮೂಲ್ಯ ತ್ಯಾಗಕ್ಕೆ ಶಬ್ದ ನೀಡಲಾಗದ ಭಾವಪೂರ್ಣ ಸ್ವಾಗತ… ಜಗತ್ತಿನ ಕಣ್ಣಲ್ಲಿ ಆಫ್ರಿಕಾದ ಚಿತ್ರಣವೇ ಬದಲಾಗಿತ್ತು. ಆಫ್ರಿಕಾದ ಅಖಂಡತ್ವದ ಪ್ರತೀಕವಾಗಿ ನಿಂತಿದ್ದರು ಮಂಡೇಲಾ.

ಶಕ್ತಿಯು ದೈಹಿಕ ಸಾಮರ್ಥ್ಯದಿಂದ ಬರುವಂತಹುದ್ದಲ್ಲ, ಅದಮ್ಯ ಸಂಕಲ್ಪದಿಂದ ಹುಟ್ಟುವಂತಹುದು. ವಯಸ್ಸು ಮಾಗಿದ್ದರೂ ಮಂಡೇಲಾ ಅವರಲ್ಲಿ ಇದ್ದದ್ದು ಅದೇ ಉತ್ಸಾಹ, ಹೋರಾಟ ಮುಂದುವರಿಸುವ ಬೃಹತ್ ಯೋಜನೆ. ಕೇವಲ ಮತ ಚಲಾಯಿಸುವುದರಿಂದ ಜನರಿಗೆ ನಿಜವಾದ ಅಧಿಕಾರ ನೀಡಿದಂತಾಗುವುದಿಲ್ಲ. ವರ್ಣಬೇಧನೀತಿಯನ್ನು ಬುಡಸಮೇತ ನಾಶಪಡಿಸಬೇಕಿತ್ತು. ಕರಿಯರಲ್ಲಿ ಬೇರೂರಿದ ಕೀಳರಿಮೆ, ಹಿಂಜರಿಕೆಗಳನ್ನು ಅವರ ಮನದಿಂದ ಕಿತ್ತೊಗೆಯದ ಹೊರತು ನಿಜವಾದ ಕ್ರಾಂತಿ ಸಾಧ್ಯವಿರಲಿಲ್ಲ. ಗುಲಾಮಗಿರಿಯ ಸರಪಳಿಯಿಂದ ಮುಕ್ತಿ ಪಡೆಯುವುದಷ್ಟೇ ಸ್ವಾತಂತ್ರ್ಯವಲ್ಲಾ, ಬೇರೆಯವರ ಸ್ವಾತಂತ್ರ್ಯದ ಗೌರವ ಹೆಚ್ಚುವಂತೆ ಹೇಗೆ ಬದುಕಬೇಕೆಂಬುದನ್ನು ಕಲಿಸಲಿಕ್ಕೂ ಮುಂದಾದರು. “ಸಮಾನ ಅವಕಾಶಗಳನ್ನು ಪಡೆದು ಸಾಮರಸ್ಯದಿಂದ ಎಲ್ಲರೂ ಒಂದಾಗಿ ಬದುಕಲು ಸಾಧ್ಯವಾಗುವಂತಹ ಪ್ರಜಾತಾಂತ್ರಿಕ ಮತ್ತು ಮುಕ್ತ ಸಮಾಜದ ಕಲ್ಪನೆಯನ್ನು ಹೃದಯದಲ್ಲಿ ಪೋಷಿಸಿಕೊಂಡು ಬಂದಿರುವೆ. ಬದುಕಲು- ಸಾಧಿಸಲು ನನಗೆ ಭರವಸೆ ನೀಡುವ ಆದರ್ಶ ಇದು. ಅಗತ್ಯ ಬಿದ್ದರೆ ಈ ಆದರ್ಶಕ್ಕಾಗಿ ಪ್ರಾಣ ಕೊಡಲೂ ಸಿದ್ಧ.” ಎಂಬ ಅವರ ನಡೆ-ನುಡಿ ಆಫ್ರಿಕಾದ ಬಿಳಿಯರಲ್ಲಿಯೂ ವಿಶ್ವಾಸ ಹುಟ್ಟಿಸಿದವು.

ಜನ ನಾಯಕ – ವಿಶ್ವ ನಾಯಕ

ಮಂಡೇಲಾ ಅವರದು ಇಡೀ ರಾಷ್ಟ್ರ ಒಂದೇ ಉಸಿರಿನಂತೆ ನಿಲ್ಲಲು ಪ್ರೇರಣೆ ನೀಡುವಂತಹ ಕ್ರಿಯಾಶೀಲ ವ್ಯಕ್ತಿತ್ವ. ಸರಳತೆ, ವಿನಮ್ರತೆಗಳ ಜೊತೆ ಛಲ ಬಿಡದ ಗಟ್ಟಿತನ. ಸರ್ವಾಧಿಕಾರದ ನಡೆಯಿಂದ ಸದಾ ದೂರ. ಪ್ರತಿಯೊಬ್ಬರ ಮಾತಿಗೂ ಅವರಲ್ಲಿ ಜಾಗವಿತ್ತು. “ನಾಯಕ ಕುರುಬನಂತೆ… ಹಿಂಡಿನ ಹಿಂದೆ ಇರುತ್ತಾನೆ. ಇತರರು ಅನುಸರಿಸುವಂತೆ ಚುರುಕಾಗಿರುವವರನ್ನು ಮುಂದೆ ಬಿಟ್ಟು ಅವರಾರಿಗೂ ಗೊತ್ತಾಗದಂತೆ ಎಲ್ಲರನ್ನೂ ಹಿಂದಿನಿಂದಲೇ ನಿಯಂತ್ರಿಸುತ್ತಾನೆ” ಎನ್ನುವ ಅವರ ಪ್ರಬುದ್ಧ ನಾಯಕತ್ವದಲ್ಲಿ ಮನಸ್ತಾಪಗಳು ಕರಗಿಹೋದವು.

ಅವರ ನಾಯಕತ್ವದ ಗುಣಗಳು ಅರಳಿದ್ದು ಕೂಡಾ ಗಾಂಧೀಜಿಯ ಚೈತನ್ಯದಲ್ಲಿ. ಬ್ರಿಟಿಷರ ಜೊತೆಗಿನ ಮಾತುಕತೆಯಲ್ಲಿ ಗಾಂಧೀಜಿ ತೋರುತ್ತಿದ್ದ ಅಪಾರ ಸಂಯಮ ಹಾಗೂ ಸಹ ಹೋರಾಟಗಾರರಲ್ಲಿ ಮೂಡಿಸುತ್ತಿದ್ದ ಸಾಮರಸ್ಯ ಮಂಡೇಲಾ ಅವರನ್ನು ತೀವ್ರವಾಗಿ ಸೆಳೆದಿದ್ದವು. ತಮ್ಮ ರಾಜಕೀಯದ ನಡೆಯಲ್ಲಿ ಅವರು ಅನುಸರಿಸಿದ್ದೂ ಇದೇ ತಂತ್ರ. ಕಪ್ಪುವರ್ಣೀಯರ ಬೇಗುದಿ, ಆಕ್ರೋಶಗಳನ್ನು ತಹಬದಿಗೆ ತರುವುದು ದೊಡ್ಡ ಸವಾಲಾಗಿತ್ತು. ಹರತಾಳಗಳಲ್ಲಿ ಕಾಣಿಸುತ್ತಿದ್ದ “ಮಂಡೇಲಾ ನಮಗೆ ಗನ್ ಕೊಡಿ”, “ಯುದ್ಧದಿಂದಲೇ ಜಯ” ಎಂಬ ಪ್ಲಕಾರ್ಡ್‍ಗಳು ಹಿಂಸೆಗೆ ತಹತಹಿಸುವಂತಿದ್ದವು. ಪ್ರಮುಖ ಕಪ್ಪುನಾಯಕ ಕ್ರಿಸ್ ಹನಿಯ ಭೀಕರ ಹತ್ಯೆಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಯಾವ ಸಮಯದಲ್ಲಾದರೂ ನಾಗರಿಕ ಯುದ್ಧ ಸಂಭವಿಸಬಹುದಾದ ದಕ್ಷಿಣ ಆಫ್ರಿಕಾದ ಆ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಮಂಡೇಲಾ ನಿಭಾಯಿಸಿದ ರೀತಿ ಅತ್ಯದ್ಭುತ. ಯಾವುದೇ ಬಂದೂಕಿಗಿಂತ ಬಲಶಾಲಿಯಾದದ್ದು ವಿಶ್ವಾಸದ ರಾಜಕೀಯ ಮಾತುಕತೆ ಎಂದು ಮಂಡೇಲಾ ಗಟ್ಟಿಯಾಗಿ ನಿಂತರು. “ಶೋಷಕನ ವಿರುದ್ಧ ಸತ್ಯಾಗ್ರಹ ಹೂಡಿದ ಗಾಂಧೀಜಿಯ ಆಶಯ ಆತನ ನಾಶವಾಗಿರಲಿಲ್ಲ. ಬದಲಿಗೆ ಆತ ಪರಿವರ್ತನೆಗೊಂಡು ಶೋಷಿತರೊಂದಿಗೆ ಅನ್ಯಾಯ ಸರಿಪಡಿಸುವ ಮಾರ್ಗಗಳನ್ನು ಹುಡುಕಬೇಕೆಂಬ ಹಂಬಲವಾಗಿತ್ತು. ನಾವು ನಮ್ಮ ಹೊಸ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಶಾಂತಿಯುತ ಮಾತುಕತೆಗಳಿಂದ ಸಾಧ್ಯವಾಗಿಸಿಕೊಂಡದ್ದು ಇಂಥ ವಿಚಾರದ ಮೇಲೆಯೇ” ಎನ್ನುತ್ತಾರೆ.

ಇಂತಹ ಪ್ರಾಜ್ಞ ನಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಮನ್ನಣೆ ದೊರಕಿಸಿಕೊಟ್ಟಿತು. ವಿಶ್ವಸಂಸ್ಥೆಯು ಅವರು ಹುಟ್ಟಿದ ದಿನ ಜುಲೈ 18ನೇ ತಾರೀಖನ್ನು ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿವಸ ಎಂದು ಘೋಷಿಸಿತು. “ಅಭಿವೃದ್ಧಿ ಮತ್ತು ಶಾಂತಿ ಎರಡೂ ಬೇರ್ಪಡಿಸಲಾಗದ ಅಖಂಡ ತತ್ವಗಳು. ಶಾಂತಿ ಮತ್ತು ಆಂತರಿಕ ಭದ್ರತೆ ಇಲ್ಲದೆ ದೇಶಗಳು ತಮ್ಮ ನಾಡಿನ ದೀನರ, ಶೋಷಿತರ ಏಳ್ಗೆಗಾಗಿ ಗಮನ ಹರಿಸುವುದು ಸಾಧ್ಯವಿಲ್ಲ.”- 1993ರಲ್ಲಿ ಮಂಡೇಲಾ ನೊಬೆಲ್ ಶಾಂತಿ ಪುರಸ್ಕಾರ ಪಡೆದಾಗ ಹೇಳಿದ ಮಾತು. ಮರುವರ್ಷವೇ ಸ್ವತಂತ್ರ ದಕ್ಷಿಣ ಆಫ್ರಿಕಾದ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು ಮಂಡೇಲಾ.

ಅಲ್ಪಸಂಖ್ಯಾತ ಬಿಳಿಯರ ಆಳ್ವಿಕೆ ಕೊನೆಗೊಂಡ ಬಳಿಕ ನಾನಾ ಬುಡಕಟ್ಟುಗಳ, ಒಳಪಂಗಡಗಳ ಸಾಂಪ್ರದಾಯಿಕ ವೈಷಮ್ಯಗಳ ದುಳ್ಳುರಿಯಲ್ಲಿ ದಕ್ಷಿಣ ಆಫ್ರಿಕಾ ಬೆಂದುಹೋಗಿಬಿಡಬಹುದಿತ್ತು. ಅಂತರ್ಯುದ್ಧ ಸಂಭವಿಸಿ ಅರಾಜಕತೆ ಏರ್ಪಟ್ಟು ದೇಶ ರಕ್ತಸಿಕ್ತವಾಗಬಹುದಿತ್ತು. ಏಕೆಂದರೆ ಕ್ಷಿಪ್ರ ಕ್ರಾಂತಿ, ದಂಗೆಗಳು ಸಹಜವೆನಿಸುವಷ್ಟು ಆಗಾಗ ಆಫ್ರಿಕಾದಲ್ಲಿ ಭುಗಿಲೇಳುತ್ತಿದ್ದವು. ಆದರೆ ಮಂಡೇಲಾ ಅವರ ದಕ್ಷ ನಾಯಕತ್ವದಿಂದಾಗಿ ಅಂತಹ ಅನಾಹುತಗಳು ಬೆಂಕಿಯುಗುಳುವ ಮುನ್ನವೇ ಅಲ್ಲಲ್ಲೇ ತಣ್ಣಗಾದವು.

ಅವರ ಮಂತ್ರ ಸಾಮರಸ್ಯದೊಂದಿಗೆ ಶಾಂತಿ. “ಯುದ್ಧವಿಲ್ಲದ ಸ್ಥಿತಿಯೇ ಶಾಂತಿಯೆಂದಲ್ಲಾ. ಜಾತಿ, ಧರ್ಮ, ಮತ, ವರ್ಗ, ವರ್ಣ, ಜನಾಂಗ, ಲಿಂಗ ಅಥವಾ ಇನ್ನಾವುದೇ ಸಾಮಾಜಿಕ ಬೇಧಗಳಿಲ್ಲದೆ ಪ್ರತಿಯೊಬ್ಬರೂ ಅಭಿವೃದ್ಧಿಯಾಗುವಂತಹ ವಾತಾವರಣದ ನಿರ್ಮಾಣವೇ ಶಾಂತಿ.” ಎನ್ನುತ್ತಾ ಬದಲಾವಣೆಗಳಿಗೆ ಹೆಗಲು ಕೊಟ್ಟರು. ಸಂವಿಧಾನಕ್ಕೆ, ಕಾನೂನಿನ ಪ್ರಭುತ್ವಕ್ಕೆ ಮನ್ನಣೆ ತೋರದ ನಾಡಿನಲ್ಲಿ, “ನಾವು ಸಂವಿಧಾನಕ್ಕೆ ಬದ್ಧರಾಗಲೇ ಬೇಕು. ಅಧ್ಯಕ್ಷರಿಂದ ಹಿಡಿದು ಯಾರೇ ತಪ್ಪೆಸಗಲಿ ಅವರಿಗೆ ಇಲ್ಲಿ ವಿನಾಯಿತಿ ಇರುವುದಿಲ್ಲ” ಎಂದು ಮನಗಾಣಿಸಿದರು. “ಸಾಧಿಸುವ ತನಕ ಎಲ್ಲವೂ ಅಸಾಧ್ಯವೇ” ಎಂಬ ತಮ್ಮ ಎಂದಿನ ಛಲದಂತೆ ಹನ್ನೊಂದು ಆಡಳಿತ ಭಾಷೆಗಳನ್ನೂ ಹಾಗೂ ನಾಲ್ಕು ಭಾಷೆಗಳಲ್ಲಿ ರಾಷ್ಟ್ರಗೀತೆಯನ್ನೂ ಉಳಿಸಿಕೊಂಡು ಅಪಾರ ವೈವಿಧ್ಯದ ನಾಡಿನಲ್ಲಿ ಸಾಮರಸ್ಯ ಸಾಧ್ಯವೆಂಬುದನ್ನು ತೋರಿಸಿಬಿಟ್ಟರು. ಆ ಮೂಲಕ ಕಾಮನಬಿಲ್ಲಿನ ನಾಡು ಎಂಬ ಹೆಮ್ಮೆಯನ್ನು ದಕ್ಷಿಣ ಆಫ್ರಿಕಾ ತನ್ನದಾಗಿಸಿಕೊಂಡಿತು.

ನಾಯಕತ್ವವು ಸ್ಥಾನಮಾನಕ್ಕೆ ಜೋತುಬೀಳುವಂತಹುದಲ್ಲ, ಕಾರ್ಯವೈಖರಿಯಿಂದ ಹೊರಹೊಮ್ಮುವಂಥದು ಎಂಬ ಮಾತಿಗೆ ಮಂಡೇಲಾ ಉತ್ತಮ ನಿದರ್ಶನ. ಎರಡನೇ ಅವಧಿಗೆ ಸಂವಿಧಾನದಲ್ಲಿ ಅವಕಾಶವಿದ್ದಾಗ್ಯೂ ಅಧ್ಯಕ್ಷರಾಗಿ ಅವರು ಮುಂದುವರೆಯಲಿಲ್ಲ. ಘನತೆಯಿಂದ ಅಧಿಕಾರ ಬಿಟ್ಟುಕೊಟ್ಟರು. “ಲಕ್ಷಾಂತರ ಜನ ಬಡತನ ಹಾಗೂ ಅಭದ್ರತೆಯಿಂದ ಬಳಲುತ್ತಿರುವಾಗ ವಿಶ್ರಾಂತಿ ತೆಗೆದುಕೊಳ್ಳುವುದು ಸಾಧ್ಯವಿಲ್ಲಾ…” ಎಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರು. ಬಡತನ ನಿವಾರಣೆ ಅನುಕಂಪದಿಂದ ಮಾಡುವ ಕೆಲಸವಲ್ಲ, ಅದು ನ್ಯಾಯ ಒದಗಿಸುವ ಕಾರ್ಯ. ಗುಲಾಮಗಿರಿ, ವರ್ಣಬೇಧದಂತೆ ಬಡತನ ಕೂಡ ನೈಸರ್ಗಿಕವಾದದ್ದಲ್ಲ. ಮಾನವ ನಿರ್ಮಿತವಾದ ಈ ಸ್ಥಿತಿಯನ್ನು ಮೀರಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಆ ನಿಟ್ಟಿನತ್ತ ಮುಂದಿನ ನಾಯಕರನ್ನು ಹುರಿದುಂಬಿಸಿದರು. ಇಂಥ ಸ್ಫೂರ್ತಿದಾಯಕ ನಾಯಕತ್ವದ ಫಲವಾಗಿಯೇ ಆಫ್ರಿಕನ್ ಫೋರಂ ಎಂಬ ಸಂಪರ್ಕ ಜಾಲ ನಿರ್ಮಾಣವಾದದ್ದು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್ ಸೇರಿದಂತೆ ಆಫ್ರಿಕಾದ ಪ್ರಮುಖ ಮುಖ್ಯಸ್ಥರು ಇಲ್ಲಿದ್ದು ಆಫ್ರಿಕಾದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯತ್ತ ತಮ್ಮ ಅನುಭವದ ಮಾರ್ಗದರ್ಶನ ನೀಡುತ್ತಿದ್ದರು.

ಮಂಡೇಲಾ ತಮ್ಮ ರಾಜಕೀಯ ಗುರು ಗಾಂಧೀಜಿಯನ್ನು ಮರೆಯಲಿಲ್ಲ. “ದಕ್ಷಿಣ ಆಫ್ರಿಕಾದ ಪರಿವರ್ತನೆಯಲ್ಲಿ ಗಾಂಧೀಜಿಯ ವಿಚಾರಗಳು ಪ್ರಮುಖ ಪಾತ್ರ ವಹಿಸಿವೆ. ಆ ವಿಚಾರಗಳಿಂದಾಗಿ ನಮಗೆ ವರ್ಣಬೇಧ ನೀತಿಯಿಂದ ಹೊರಬರಲು ಸಾಧ್ಯವಾಯಿತು. ಗಾಂಧೀಜಿ ನಮ್ಮ ಇತಿಹಾಸದ ಅವಿಭಾಜ್ಯ ಅಂಗ” ಎನ್ನುತ್ತಾರೆ. ಟೈಮ್ ಪತ್ರಿಕೆಗೆ ಗಾಂಧೀಜಿ ಕುರಿತು ಅವರು ಬರೆದ ಪವಿತ್ರ ಯೋಧ ಎಂಬ ತಮ್ಮ ಲೇಖನದಲ್ಲಿ, “ನಾವಿಂದು ನಿರುದ್ಯೋಗದ ಅರ್ಥವ್ಯವಸ್ಥೆಗಳಲ್ಲಿ, ಕೆಲವರ ಹೊಟ್ಟೆ ಮಾತ್ರ ತುಂಬಿ ಬಹುತೇಕರು ಹಸಿವಿನಿಂದ ನರಳುತ್ತಿರುವ ಸಮಾಜಗಳಲ್ಲಿ ಬಾಳುತ್ತಿದ್ದು, ನಮ್ಮ ಜಾಗತೀಕರಣದ ಮೂಲ ಆಶಯದ ಬಗ್ಗೆ ಪರಾಮರ್ಶಿಸಬೇಕಾದ ಹಾಗೂ ಪರ್ಯಾಯವಾಗಿ ಗಾಂಧಿ ತತ್ವಗಳ ಬಗ್ಗೆ ಆಲೋಚಿಸಬೇಕಾದ ತುರ್ತು ಸಂದರ್ಭ ಒದಗಿ ಬಂದಿದೆ” ಎಂದು ತಮ್ಮ ಬದುಕು ಹಾಗೂ ವಿಚಾರಗಳನ್ನು ಮುಟ್ಟಿದ ಗಾಂಧೀಜಿಯನ್ನು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ.

ಗಾಂಧಿ ತತ್ವಗಳ ಹಾದಿಯಲ್ಲಿ ಸ್ವಾತಂತ್ರ್ಯ ದಕ್ಕಿಸಿಕೊಂಡ ಭಾರತ, ಮಂಡೇಲಾ ಮಾರ್ಗದರ್ಶನದಲ್ಲಿ ಬಿಡುಗಡೆಗೊಂಡ ದಕ್ಷಿಣ ಆಫ್ರಿಕಾದ ಇಂದಿನ ಪರಿಸ್ಥಿತಿಗಳನ್ನು ನೋಡಿದರೆ ನಿರಾಶೆ ಮೂಡುವುದು ನಿಜ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ. ಆಡಳಿತ ವ್ಯವಸ್ಥೆ ದುರ್ಬಲವಾಗಿದೆ. ಜಾತಿ-ಧರ್ಮಗಳಿಂದ ರಾಜಕೀಯ ಕೊಚ್ಚೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲೂ ನಿರುದ್ಯೋಗದ ಭೂತ, ನಗರಗಳಲ್ಲಿ ಸ್ಲಂಗಳು ಉಸಿರಾಡುತ್ತಿವೆ, ಅಪರಾಧಗಳು ಹೆಚ್ಚಿವೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಬಾಪು ಮತ್ತು ಮಂಡೇಲಾ ಭರವಸೆಯ ನಾಯಕರಂತೆ ಗೋಚರಿಸುತ್ತಾರೆ, ನಮ್ಮ ಕತ್ತಲೆಯ ಕೂಪದಲ್ಲಿ ಭವಿಷ್ಯದ ನಕ್ಷತ್ರಗಳಂತೆ ಮಿಂಚುತ್ತಾರೆ.

[ಪರಿವರ್ತನೆಯ ಪಥ: ಗಾಂಧೀಜಿ ದಕ್ಷಿಣ ಆಫ್ರಿಕಾಕ್ಕೆ ಬಂದಾಗ ಅವರಿಗಿನ್ನೂ 23ರ ಎಳೆಯ ಹರಯ! ಬಂದ ವಾರದಲ್ಲೇ ಅವರಿಗೆ ವರ್ಣಬೇಧನೀತಿಯ ದರ್ಶನವಾಗಿತ್ತು. ದೇಹದ ಬಣ್ಣ ಮಾತ್ರದಿಂದಲೇ ಜನರನ್ನು ಕೀಳಾಗಿ ಕಾಣುವ ಈ ದೇಶದಿಂದ ಭಾರತಕ್ಕೆ ಹಿಂದಿರುಗಿಬಿಡಬೇಕೆಂಬ ಯೋಚನೆ ಆ ಕ್ಷಣ ಮೂಡಿದರೂ ಈ ಅವಮಾನಕ್ಕೆ ಉತ್ತರ ಕಂಡುಕೊಳ್ಳಬೇಕೆಂಬ ಆಲೋಚನೆ ಅವರ ಮನಸ್ಸನ್ನು ತುಂಬಿಬಿಟ್ಟಿತು. ಕಪ್ಪು ವರ್ಣೀಯರನ್ನು ಹಾಗೂ ಅಲ್ಲಿಗೆ ದುಡಿಯಲು ಬಂದಿದ್ದ ಭಾರತೀಯರನ್ನು ಬ್ರಿಟಿಷ್ ಸಾಮ್ರಾಜ್ಯ ನಡೆಸಿಕೊಳ್ಳುತ್ತಿದ್ದ ರೀತಿ, ಸರ್ಕಾರದ ದ್ವಿನೀತಿ ಕಾನೂನುಗಳು ಅವರ ನಿದ್ದೆಗೆಡಿಸಿದವು. ಕೀಳರಿಮೆಯಲ್ಲಿ ಹಿಡಿಯಾಗಿದ್ದ ಅಲ್ಲಿಯ ಜನರ ದುರ್ಬರ ಬದುಕನ್ನು ಸಹ್ಯವಾಗಿಸಲು ಅನೇಕ ಶಾಂತಿಯುತ ಮಾರ್ಗಗಳನ್ನು ಕಂಡುಕೊಂಡರು. ಟಾಲಸ್ಟಾಯ್ ಫಾರಂ, ಇಂಡಿಯನ್ ಒಪಿಸಿಯನ್… ನಂತಹ ಗುರುತರ ಪ್ರಯತ್ನಗಳು ಅಲ್ಲಿ ಜರುಗಿದವು. 21 ವರ್ಷಗಳ ತರುವಾಯ ಅವರು ಅಲ್ಲಿಂದ ಭಾರತಕ್ಕೆ ಹೊರಟಾಗ ವಸಹಾತುಶಾಹಿಯಿಂದ ಮುಕ್ತವಾಗ ಬಯಸುವ ಭೂಮಿಕೆ, ಹೊಸ ಸಾಮಾಜಿಕ ವ್ಯವಸ್ಥೆಯ ನೀಲನಕ್ಷೆ ದಕ್ಷಿಣ ಆಫ್ರಿಕಾದಲ್ಲಿ ತಯಾರಾಗಿತ್ತು. ಈ ಪ್ರಕ್ರಿಯೆಯಲ್ಲಿ ಗಾಂಧಿ ಕೂಡ ಸಂಪೂರ್ಣ ಬದಲಾಗಿದ್ದರು. ನಾಚಿಕೆ ಸ್ವಭಾವದ ಅತಿ ಸಾಮಾನ್ಯ ಯುವಕನಿಂದ ನೇರ ನಡೆ-ನುಡಿಯ ಸಕ್ರೀಯ ಪ್ರಬುದ್ಧ ರಾಜಕೀಯ ನೇತಾರರಾಗಿ ಗಮನ ಸೆಳೆದಿದ್ದರು. “ಭಾರತವು ದಕ್ಷಿಣ ಆಫ್ರಿಕಾಕ್ಕೆ ಬ್ಯಾರಿಸ್ಟರ್ ಗಾಂಧಿಯನ್ನು ಕೊಟ್ಟರೆ ದಕ್ಷಿಣ ಆಫ್ರಿಕಾ ಭಾರತಕ್ಕೆ ಮಹಾತ್ಮ ಗಾಂಧೀಜಿಯನ್ನು ಮರಳಿ ನೀಡಿತು” ಎನ್ನುತ್ತಾರೆ ಮಂಡೇಲಾ.]

Previous post ಬೆಳಗಾವಿ ಅಧೀವೇಶನ: 1924
ಬೆಳಗಾವಿ ಅಧೀವೇಶನ: 1924
Next post ಯಾಲಪದದ ಸೊಗಡು
ಯಾಲಪದದ ಸೊಗಡು

Related Posts

ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)
Share:
Articles

ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)

September 6, 2023 Bayalu
ಆಧುನಿಕತೆಯು ವ್ಯಕ್ತಿತ್ವ ಮತ್ತು ವೈಯಕ್ತಿಕ ಬೆಳವಣಿಗೆಗೆ ಹೇಗೆ ಮಹತ್ವವನ್ನು ನೀಡಿದೆಯೋ ಹಾಗೆಯೇ ಸಾಮೂಹಿಕ ಬೆಳವಣಿಗೆಗೆ ಇಂಬು ನೀಡಿದೆ. ಸಂಘ-ಸಂಸ್ಥೆಗಳ ಹುಟ್ಟು, ಬೆಳವಣಿಗೆ...
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
Share:
Articles

ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ

April 29, 2018 ಡಾ. ಶಶಿಕಾಂತ ಪಟ್ಟಣ
ಹನ್ನೆರಡನೆಯ ಶತಮಾನದಲ್ಲಿ ನಡೆದ ಅಪೂರ್ವ ವೈಚಾರಿಕ ಕ್ರಾಂತಿ ಒಂದು ಪವಾಡವೇ ಎನ್ನಬಹುದು. ಶತಮಾನದಿಂದ ಜಿಡ್ಡು ಗಟ್ಟಿ ಮೃತಪ್ರಾಯವಾಗಿದ್ದ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ...

Comments 6

  1. Vijaya Kapparad, Dharawad
    Dec 18, 2024 Reply

    ಆಫ್ರಿಕಾದ ಸೂರ್ಯ ಓದಿದೆ ತುಂಬಾ ಚೆನ್ನಾಗಿ ಬಂದಿದೆ.

  2. Somashekhara T
    Dec 25, 2024 Reply

    ಮಂಡೇಲಾ ಅವರನ್ನು ಮರೆತೇ ಹೋಗಿದ್ದೆವೇನೊ ಎನ್ನುವಾಗ ಸಂದರ್ಭಕ್ಕೆ ತಕ್ಕ ಹಾಗೆ ನೆನಪಿಸಿ, ಅವರ ಸಂಗಡ ಗಾಂಧಿ ತಾತನ ಮಹತ್ವವನ್ನೂ ನೆನಪಿಸಿಕೊಟ್ಟಿದ್ದೀರಿ, thank you.

  3. ಗೋಪಿನಾಥ ಜಾಧವ್
    Jan 6, 2025 Reply

    ನೆಲ್ಸನ್ ಮಂಡೆಲಾ ಅಂದರೆ ನನಗೆ ಅವರ ಮುಖದ ಮೇಲಿನ ಧೈರ್ಯದ, ನಗುಮುಖದ ನೆರಿಗೆಗಳೇ ನೆನಪಾಗುತ್ತವೆ. ನಮ್ಮ ಗಾಂಧೀಜಿ ಅವರ ಹೋರಾಟದಲ್ಲಿ ಬೆಳಕಾದ ಸ್ಮರಣೆ ನಮ್ಮಲ್ಲೂ ಭರವಸೆಯ ಬೆಳಕನ್ನು ಹುಟ್ಟಿಸುತ್ತದೆ.

    • Gunashekhar P
      Jan 12, 2025 Reply

      Beautiful article akka

  4. ಜಿ.ಎಸ್. ರಾಘವೇಂದ್ರ
    Jan 12, 2025 Reply

    ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್, ಆಂಗ್ ಸಾನ್ ಸೂಕಿ, ದಲೈ ಲಾಮಾ, ಬರಾಕ್ ಒಬಾಮ… ಗಾಂಧೀಜಿಯಿಂದ, ಗಾಂಧೀ ತತ್ವಗಳಿಂದ ಪ್ರಭಾವಿತರಾದ ಮಹಾನುಭಾವರು. ಅವರಿಗೆ ಅರ್ಥವಾಗುವ ಬಾಪು ನಮ್ಮ ದೇಶದವರಿಗೆ ಅರ್ಥವಾಗದೇ ಇರೋದು ಈ ದೇಶದ ದುರಂತವಲ್ಲವೆ?

  5. Dr. VIJAYAKUMAR KAMMAR
    Jan 12, 2025 Reply

    Good article

Leave a Reply to Vijaya Kapparad, Dharawad Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಮನವೆಂಬ ಸರ್ಪ
ಮನವೆಂಬ ಸರ್ಪ
February 7, 2021
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ನೋಟದ ಕೂಟ…
ನೋಟದ ಕೂಟ…
May 10, 2023
ಶರಣ- ಎಂದರೆ…
ಶರಣ- ಎಂದರೆ…
March 6, 2020
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
Copyright © 2025 Bayalu