Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅವಿರಳ ಅನುಭಾವಿ: ಚನ್ನಬಸವಣ್ಣ
Share:
Articles March 6, 2020 ಮಹಾದೇವ ಹಡಪದ

ಅವಿರಳ ಅನುಭಾವಿ: ಚನ್ನಬಸವಣ್ಣ

ಜಾಜಿ ಮಲ್ಲಿಗೆ ಅರಳಿ ಹೂಬಿಟ್ಟ ಹೊತ್ತು. ಊರೆಲ್ಲ ಘಮ್ಮೆನ್ನುವ ಪರಿಮಳ ಹೊತ್ತು ಸೂಸುವ ಆ ತಂಗಾಳಿಯಲಿ ಚುಮುಚುಮು ಬೆಳಕಿನ ಕಿರಣಗಳು ಗುಡ್ಡವನ್ನೆಲ್ಲ ಕೆಂಪೇರಿಸಿ ಹೊಂಬಣ್ಣದ ಚೆಲುವನ್ನು ಬಿತ್ತಿದ್ದವಲ್ಲಾ..! ಅದೇ ಆ ಸಮಯಕ್ಕೆ ಸರಿಯಾಗಿ ಸೂಲಗಿತ್ತಿ ಬಿಸ್ತೆವ್ವನ ಅಂಗೈಯೊಳಗೆ ಟ್ಯಾಂ.. ಎಂದಳುವ ಮಗುವೊಂದು ಜನಿಸಿತು. ಇಡೀ ದೇಹದ ಕಸುವನೆಲ್ಲ ಕಸಿದುಕೊಂಡು ಹುಟ್ಟಿದ್ದ ಆ ಕೂಸಿನ ಮೂಗು ತಿಕ್ಕಿ ಹಣೆಗದ್ದ ತಿಕ್ಕಿ ತೀಡಿ, ಆಯಾಸಗೊಂಡು ಮಲಗಿದ್ದ ತಾಯಿಯ ಮಗ್ಗುಲಲ್ಲಿ ಮಲಗಿಸಿದಾಗ ಆ ಕೂಸಿನ ಕೈ ತಾಯಿಯ ಎದೆಗೆ ತಾಕಿ ಬಿರಿದಿದ್ದ ಎದೆ ಜುಮ್ಮೆಂದಿತು.

ಆರೈಕೆ ಮಾಡುತ್ತಿದ್ದ ಬಿಸ್ತೆವ್ವನ ಪಕ್ಕದಲ್ಲೇ ನಿಂತಿದ್ದ ಗಂಗಾಂಬೆಯನ್ನು ‘ಅವರು ಬಂದಾರೇನು..’ ಎಂದು ಕೇಳಿದಾಗ ಹೊರಗಿನ ಸಮಾಚಾರ ಒಂದೂ ತಿಳಿಯದ ಆ ತಾಯಿ ಗೋಣಾಡಿಸಿದಳಷ್ಟೆ.. ಅಕ್ಕನ ಮಗಳ ಮುಖದಲ್ಲಿ ತಮ್ಮ ಹುಟ್ಟಿದ್ದಾನೆಂಬ ಸಂಭ್ರಮವೇ ಸಾಕಿತ್ತು ಹೊರಗೋಡಿ ಆತಂಕದಲ್ಲಿ ಕುಳಿತಿದ್ದವರಿಗೆ ‘ನನಗೊಬ್ಬ ಬಹದ್ದೂರ ತಮ್ಮ ಹುಟ್ಟಿದ್ದಾನೆ’ ಎಂದು ಗಂಗಾಂಬೆ ಹೇಳಿದಳು. ವಾರೆಗಣ್ಣಲ್ಲಿ ಅವರ ಮುಖ ನೋಡಿದಾಗ ಯಾವ ಸಂಭ್ರಮವೂ ಇಲ್ಲದ ಇನ್ನಾವ ಆತಂಕವೂ ಇಲ್ಲದ ನಿರಾಳತೆಯ ಹೊರತು ಮತ್ತೇನೂ ಕಾಡದ ಬಸವಣ್ಣನವರ ಮುಖದಲ್ಲಿ ಅರಳುವ ನಗುವೇ ಆಕರ್ಷಕವಾಗಿತ್ತು.

ಕಾಶಿಯಾತ್ರೆಗೆ ಹೋಗಿ ಬರುತ್ತೇನೆಂದು ಹಠಮಾಡಿ ಹೊರಟವರು ಆರು ತಿಂಗಳು ಕಳೆದರೂ ಮರಳಿ ಬಂದಿರಲಿಲ್ಲ ಎಂಬ ಕೊರಗು ಕೊರೆಯುತ್ತಿತ್ತು. ಕಪ್ಪಡಿಸಂಗಮದಿಂದ ಹೊರಟು ಕಲ್ಯಾಣಕ್ಕೆ ಬಂದರೂ ತಿಳಿಯಾಗದ ತಳಮಳ ಮಗನ ಮುಖ ನೋಡಿದಾಗ ಹಗೂರವಾದಂತಾಗಿತ್ತು. ಎಲ್ಲದನ್ನೂ ಎಲ್ಲರನ್ನೂ ನಿರುಮ್ಮಳಾಗಿ ಕಾಣುವ ಬಸವಣ್ಣನದೇ ಥೇಟ್ ಹೋಲಿಕೆಯ ಆ ಮಗುವಿಗೆ ಚನ್ನಬಸವ ಅಂತ ಹೆಸರಿಟ್ಟಾಗ ಅಳುವ ಮಗು ಕಿಲಕಿಲ ನಕ್ಕಿತು.

ಮನೆತುಂಬ ಬಂಧುಗಳು, ಒಬ್ಬರ ಕೈಯಿಂದ ಮತ್ತೊಬ್ಬರ ಕೈಯಲ್ಲಿ ಆಡಾಡುತಾ, ಲೀಲಾವಿನೋದದ ನಡುವೆ ಅಂಗೈಯೊಳಗಿನ ಕೂಸು ನೆಲದ ಮೇಲಾಡತೊಡಗಿತು. ಎದೆಕೊಟ್ಟು ಮುಂದಕ್ಕೆ ಹರಿಯಿತು, ಮೊಣಕಾಲೂಡಿ ಹರಿದಾಡಿತು, ತನ್ನ ಪಾದಗಳ ಮೇಲೆ ತಾನು ನಿಂತೆದ್ದಾಗ ಆ ಕೂಸಿನ ಕೈಯೊಳಗಿನ ಆಟದ ಗೆಜ್ಜೆಯ ಬದಲು ಬಿದಿರು ಬೆತ್ತದಿಂದ ಮಾಡಿದ್ದ ಬಿಲ್ಲು ಬಾಣದ ಆಟಿಕೆಗಳಿದ್ದವು. ಚನ್ನಬಸವ ಬೆಳೆದಂತೆಲ್ಲ ಮಾತುಗಳಿಗೆ ಜೀವಬಂದು ಕಾಯಕದಿಂದಲೇ ಸ್ವರ್ಗವ ನಿರ್ಮಿಸುವ ಕಲ್ಪನೆಯು ಸಾಕಾರಗೊಳ್ಳತೊಡಗಿತ್ತಲ್ಲ ಅದೇ ಆಗ ಮಹಾಮನೆಯ ಅಂಗಳದಲ್ಲಿ ದಾಸೋಹ ನಡೆಯತೊಡಗಿತ್ತು, ಅರಿವನ್ನು ಅರಿಯಲು ಅನುಭವಮಂಟಪ ಆರಂಭವಾಗಿತ್ತು. ತಿಳಿದವರು ತಿಳಿಯುವಂತೆ, ತಿಳಿಯದವರು ತಿಳಿಯಲಿಚ್ಚಿಸುವಂತೆ ಒಂದೊಂದೆ ಮೆಟ್ಟಿಲುಗಳನಿಟ್ಟು ಅರಿವೆ ಗುರು, ದಯವೇ ಧರ್ಮ ಎಂಬಿತ್ಯಾದಿ ಬದುಕಿನ ಒಳಮರ್ಮಗಳನ್ನು ಚರ್ಚಿಸುತ್ತಾ  ಗುರು, ಲಿಂಗ, ಜಂಗಮ, ದಾಸೋಹ, ಪಾದೋದಕ, ಪ್ರಸಾದಾದಿ ಸಂಗತಿಗಳನ್ನ ಘನವಾಗಿ ಚರ್ಚಿಸಲು ಆರಂಭಿಸುವ ಹೊತ್ತಿಗಾಗಲೇ ಚನ್ನಬಸವಣ್ಣ ಎಳವೆಯ ಮುಗ್ಧ ಕೌತುಕವನ್ನು ದಾಟಿ ಹುಡುಗಾಟಿಕೆಯ ಹುಡುಗನಾಗಿ ಬೆಳೆದು ನಿಂತಿದ್ದ.

ಮುದುತದುಕರನ್ನು ಕಂಡರೆ ವಿನಯದಿಂದ ಬರಮಾಡಿಕೊಂಡು ಆರೈಕೆ ಮಾಡಿ ಉಪಚರಿಸುವ ಶರಣರ ನಡುವೆ ಚನ್ನಬಸವಣ್ಣ ತಿಳ್ಳಿಯಾಡುವ ಹುದ್ದರಿಯಂತೆ (ಬೆಳದಿಂಗಳಾಟ) ಕಿಡಿಗೇಡಿತನ ಮಾಡಿ ಅವರ ಅಸಹಾಯಕತೆಯನ್ನು ಕಂಡು ನಕ್ಕುಬಿಡುತ್ತಿದ್ದ. ಅವನ ಆಟದ ಮೋಜುಗಳು ಒಂದೇ ಎರಡೇ.. ಅಕ್ಕನಾಗಮ್ಮಳೂ ಬೇಸತ್ತು ಹೋಗುವಷ್ಟು ದಿನವಿಡಿ ಕುಣಿದು ಕುಪ್ಪಳಿಸುತ್ತಿದ್ದ. ಬಂದವರ ಮೇಲೆಲ್ಲ ಬಾಣವನ್ನು ಬಿಟ್ಟಂತೆ ಮಾಡುವುದು, ಅವರು ಹೆದರಿಕೊಂಡಂತೆ ಮಾಡಿದಾಗ ಸಂಭ್ರಮಿಸಿ ನಗುವುದು, ಮಣ್ಣಿನ ದಿಬ್ಬಗಳ ಮೇಲೆ ನಿಂತು ತಾನೇ ರಾಜ ಎಂಬಂತೆ ಆಜ್ಞೆಮಾಡುವುದು, ಪುಷ್ಕರಣಿಯಿಂದ ನೀರು ತರುವ ಹೆಂಗಸರ ಮಡಿಕೆಗಳಿಗೆ ಕಲ್ಲುಹೊಡೆದು ತೂತು ಮಾಡುವುದು, ಅಸಹಾಯಕ ಮುದುಕರ ಕೈಕೋಲು ತಪ್ಪಿಸಿ ಜಾರಿ ಬೀಳುವಂತೆ ಮಾಡಿ ನಗುವುದು ಹೀಗೆ ಒಂದಿಲ್ಲೊಂದು ಕಿಡಿಗೇಡಿ ದುಂಡಾವರ್ತನೆಯಲ್ಲಿ ಚನ್ನಬಸವಣ್ಣ ಬೆಳೆಯುತ್ತಿರಲಾಗಿ ಶರಣರಿಗೆ ಮಹಾಮನೆಯ ಈ ಮಗುವಿನ ಆಟೋಟಗಳನ್ನು ಸಂಭ್ರಮಿಸಬೇಕೋ ಇಲ್ಲವೇ ಸಹಿಸಿಕೊಬೇಕೊ ಎಂಬ ಗೊಂದಲವಾಗುತ್ತಿರಲು ಅದೊಂದು ದಿನ ಕಕ್ಕಯ್ಯನೆಂಬ ಹಿರಿಯ ಶರಣನ ರುಮಾಲಿನಲ್ಲಿ ವಿಷದ ಮುಳ್ಳುಮುರಿದ ಕರೀಚೇಳನ್ನು ತಂದು ಹಾಕಿಟ್ಟು ದೂರದಲ್ಲಿ ನಿಂತು ನೋಡುತ್ತಿದ್ದ.
ಈಗ ಅವರು ಹೆದರಿಕೊಳ್ಳುತ್ತಾರೆ… ತಲೆಗೆ ಹಾಕಿಕೊಳ್ಳುವ ರುಮಾಲು ತೆಗೆದೊಗೆದು ಓಡಿ ಬಿಡುತ್ತಾರೆ… ! ಹ..ಹ..ಹ..
ಸಂಭ್ರಮಿಸುವ ಕ್ಷಣ ಈಗ ಇನ್ನೇನು ಬಂದುಬಿಟ್ಟಿತು ಎಂದುಕೊಳ್ಳುತ್ತಾ ಬಾಗಿಲ ಮರೆಯಲ್ಲಿ ನಿಂತು ನೋಡುತ್ತಿದ್ದವನ ಎದುರಿಗೆ ಅಣ್ಣನವರು ಧುತ್ತನೆ ಪ್ರತ್ಯಕ್ಷರಾಗಿಬಿಟ್ಟರು. ಹುಡುಗಾಟಿಕೆಯ ಗುಟ್ಟು ಬಲ್ಲವರಂತೆ ಅವನು ನೆದರಿಟ್ಟು ಕಾಯುತ್ತಿದ್ದ ಕಕ್ಕಯ್ಯನವರ ಆ ಪೇಟಾದತ್ತ ಹೊರಟರು.
“ನಿಲ್ಲಿರಿ ಕಕ್ಕಯ್ಯನವರೇ…”
ಅಣ್ಣನವರೇ ಬಂದು ಸ್ವತಃ ಬಾಗಿ ರುಮಾಲನ್ನೆತ್ತಿ ಅದರೊಳಗೆ ಬಾಲಕ್ಕೆ ನಾರು ಕಟ್ಟಿಬಿಟ್ಟಿದ್ದ ಚೇಳನ್ನೆತ್ತಿ ತೋರಿದರು. ಮಹಾಮನೆಯಲ್ಲಿ ನೆರೆದಿದ್ದ ಶರಣರೆಲ್ಲ ಏನೋ ಪವಾಡವೇ ಘಟಿಸುತ್ತಿದೆ ಎಂಬಂತೆ ಕಣ್ಣಬಾಯಿ ಬಿಟ್ಟು ನೋಡುತ್ತಿರಲು, ಅದೇ ನಗುಮುಖದಲ್ಲೇ ಕಕ್ಕಯ್ಯನವರಿಗೆ ರುಮಾಲು ತೊಡಿಸಿ ಊನಗೊಂಡಿದ್ದ ಚೇಳನ್ನು ನಾರಿನಿಂದ ಬಿಡಿಸಿ ಅಂಗಳದಲ್ಲಿ ಬಿಟ್ಟರು. ಜೀವಭಯದಿಂದ ಆ ಕರೀಚೇಳು ಲುಟುಪುಟು ಓಡಿ ಕಲ್ಲಪೊಟರೆಯಲ್ಲಡಗಿತು.

ತಾನು ಮಾಡಿದ ತಪ್ಪಿಗೆ ಮಾವ ಶಿಕ್ಷೆ ಕೊಡುತ್ತಾರೆಂಬ ಭಯ ಕಾಡಲಾರಂಭಿಸಿದ್ದೆ ಅಂಜುತ್ತಾ ಅಳಕುತ್ತಾ ಅಕ್ಕ ಗಂಗಾಂಬಿಕೆಯ ಪಕ್ಕಕ್ಕೆ ಜರುಗಿ ಅಡಗಿಕೊಂಡ.
“ಗಂಗಾಂಬೆ, ಚನ್ನನಿಗೆ ಸಿಹಿ ಅಂಬಲಿ ಕೊಡು. ಆಡಿ ಹಸಿದಿದ್ದಾನೆ.”
ಯಾವ ಅಳಕೂ ಇಲ್ಲದ ಅವರ ಮಾತಿನಲ್ಲಿ ಪ್ರೀತಿ ಇತ್ತೇ ಹೊರತು ಬೈದು ಬುದ್ದಿ ಹೇಳಬಹುದಾದ ಲಕ್ಷಣ ಕಾಣಿಸಲಿಲ್ಲ. ಹೊರಗೆ ಮಹಾಮನೆಯ ಅಂಗಳದಲ್ಲಿ ಅಮ್ಮನ ಜೊತೆ ಅಕ್ಕ ನೀಲಾಂಬಿಕೆಯು ಸಂಡಿಗೆಯನ್ನು ಬಿಡುತ್ತಾ ಕುಳಿತಲ್ಲಿಗೆ ಓಡಿಹೋದ ಅವನೊಳಗೆ ಭಯವು ಹಾಗೇ ಇತ್ತಾದರೂ ಮಾವ ಬೈದು ಬಿಡಲೊಮ್ಮೆ ಎಂಬುದು ಕಾಡತೊಡಗಿತು. ಅರೆಮನಸ್ಸಿನಿಂದ ಒಳಹೊರಗೆ ಓಡಾಡಿ ಮತ್ತೆ ಹುಸಿಕಟ್ಟೆಯನ್ನೇರಿ ಮಾವನ ಮುಂದೆ ಹೋಗಿ ನಿಂತ.
“ಚನ್ನ, ನೀನು ಹಾಡಬಲ್ಲೆಯಾ..?”
“ಹೂಂ.. ಹಾಡುತ್ತೇನೆ.”
“ಓದಬಲ್ಲೆಯಾ..?”
“ಓದುತ್ತೇನೆ.”
“ಇಕೋ ಈ ವಚನದ ಸಾಲುಗಳನ್ನ ಓದಿಕೊಂಡು ರಾಗವಾಗಿ ಹಾಡಬಹುದೇ…”
“ಈಗಲೇ..!?”
“ಈಗ ಬೇಡ ಸಂಜೆಯ ಗೋಷ್ಠಿಯ ಹೊತ್ತಿಗೆ ಹಾಡುವಿಯಂತೆ.”
“ಆಗಲಿ…”
ಆ ವಚನದ ಒಂದೊಂದು ಸಾಲುಗಳೂ ಅವನೊಳಗೆ ಲಯವಾಗಿ ಮಿಡಿಯತೊಡಗಿದಾಗ ಹಿಂಸೆಯ ಆಟದೊಳಗೆ ಹುಸಿ ಮೋಜು ಮಾಯವಾಗಿ ನಾದದೊಳಗಿನ ರಂಜನೆಯ ಬೀಜ ಪುಟಿದೊಡೆಯಿತು ನೋಡಾ.. ಆಹಾ ಆ ಬಾಲಕನ ನಾಲಿಗೆಗೆ ಸ್ವರಪ್ರಸ್ಥಾನ ಹೊಂದುತ್ತ ಹೊರಟಂತೆ ಅರ್ಥದ ಅರಿವನ್ನು ಹುಡುಕಲಾರಂಬಿಸಿತ್ತು ಮನವು.
ಅಂಗಳದಲ್ಲಿ ಸಂಡಿಗೆಯ ಹಾಸು ಹೊಯ್ಯುತ್ತಿದ್ದ ಅಮ್ಮನ ಬಳಿ ಓಡಿದ..
“ಅಬ್ಬೆ..! ಈ ಕಳಬೇಡ ಅಂದರೇನು..?”
“ನೀಲಕ್ಕಾ, ಕೊಲಬೇಡ ಅಂದರೇನು..?”
“ಗಂಗಕ್ಕಾ, ಹುಸಿಯ ನುಡಿಯಲುಬೇಡ ಅಂದರೇನು..?”

ಚನ್ನಬಸವಣ್ಣ ಮಹಾಮನೆಯಲ್ಲಿರುವ ಒಬ್ಬೊಬ್ಬರನ್ನೇ ಹಿಡಿದು ಮಾತಾಡಿಸತೊಡಗಿದ. ಶಿವನಾಗಿಮಯ್ಯ, ಕಕ್ಕಯ್ಯ, ಅಪ್ಪಣ್ಣ, ಚಿಕ್ಕಯ್ಯ, ಬೊಮ್ಮಯ್ಯ.. ಅಯ್ಯಾ ಎಂದೆನುತಾ ಒಬ್ಬೊಬ್ಬರನ್ನೇ ಕೇಳುತ್ತಾ ಹೊರಟಂತೆ ಒಂದೊಂದು ಶಬ್ದದ ಅರ್ಥವೂ ಒಬ್ಬೊಬ್ಬ ಶರಣ ತನ್ನ ಅನುಭವದ ಆಧಾರದಲ್ಲಿ ಭಿನ್ನಭಿನ್ನವಾಗಿ ಹೇಳತೊಡಗಿದಾಗ ಆ ವಚನದ ಬಗ್ಗೆಯೇ ವಿಚಿತ್ರ ಆಕರ್ಷಣೆ ಶುರುವಾಯ್ತು. ಎಲ್ಲರ ಅನುಭವವನ್ನಾಧರಿಸಿ ತನಗೆ ತಿಳಿದ ಸತ್ಯದ ಅರ್ಥದೊಂದಿಗೆ ಹಾಡಬೇಕೆಂದು ಶುರುವಾದ ಈ ಪಯಣವು ದೇವರನೊಲಿಸುವ ಪರಿ ಇಂತಿರಲು ನಾನು ಹಾಡಲಾದೀತೆ ಎಂಬ ಅನುಮಾನವನ್ನು ಬಿತ್ತಿತು.
ನಗುನಗುತಾ ಓಡಾಡುವ ಒಬ್ಬೊಬ್ಬ ಶರಣನ ಖುಷಿಯ ಕಾರಣ ತಿಳಿದುಕೊಳ್ಳಲು ಹವಣಿಸಿದ. ಎಲ್ಲಿಂದಲೋ ಬಂದವರು ಇಲ್ಲಿ ನಮ್ಮವರೇ ಆಗಿ ಓಡಾಡುವ ಜೀವಾಳ ಯಾವುದು..? ಯಾಕೋ ಹೊರಕೇರಿಯ ಬೀದಿಗೆ ಹೋಗಬೇಕೆನಿಸಿತು.
ಅದೊಂದು ವಿಚಿತ್ರವಾದ ಕೇರಿ…
ನಾಕು ಮೂಲೆಗೊಂದಷ್ಟು ಕಲ್ಲಿಟ್ಟು, ಮೇಲೆ ತೊಗರಿಕಟ್ಟಿಗೆಯ ಛಾವಣಿ ಹೊದಿಸಿ ಕಟ್ಟಿಕೊಂಡಿರುವ ಗೂಡುಗಳು.. ಯಾವ ಬೇಲಿಗಳೂ ಇಲ್ಲದ ಸಾಲುಸಾಲು ಗುಡಿಸಲುಗಳ ಮುಂದೆ ಅರೆಬರೆ ಮೈಬಿಟ್ಟು ಕುಳಿತಿದ್ದ ಜನಗಳು, ಬೆನ್ನಿಗೆ ಹೊಟ್ಟೆ ಅಂಟಿಸಿಕೊಂಡ ಅವರ ದೇಹಗಳು ಇವನನ್ನ ನೋಡಿದ್ದೆ ಒಬ್ಬೊಬ್ಬರಾಗಿ ಎದ್ದು ನಿಂತು ರಾಮರಾಮ ಹೇಳತೊಡಗಿದರು. ಮಹಾಮನೆಗೆ ಬಂದು ಹೋಗುವ ಒಂದಿಬ್ಬರು ಬಂದು ಮನೆಗೆ ಕರೆದರು. ಯಾರ ಜೊತೆಯಲ್ಲೂ ಹೋಗಲೊಲ್ಲದ ಮನಸ್ಸು ದೂರದಲ್ಲಿ ಚರ್ಮ ಹದಮಾಡುವ ಕಾಯಕದಲ್ಲಿ ತೊಡಗಿದ್ದ ಅತೀ ಎತ್ತರದ ಮನುಷ್ಯನೊಬ್ಬನನ್ನ ಕಂಡದ್ದೆ ಕುತೂಹಲ ತಡೆಯದೆ ಅತ್ತ ಕಡೆಗೆ ಹೊರಟ.
“ಅಯ್ಯಾ.. ನೀವು ಬಂದಿರಿ. ಬನ್ನಿ ಅಯ್ಯಾ” ಎಂದೆನ್ನುತಾ ಕಕ್ಕಯ್ಯನವರು ಕಾಯಕವನ್ನು ಬದಿಗೊತ್ತಿ ಕಲ್ಲುಕುಟರೆ ಮ್ಯಾಲೆ ಕಂಬಳಿ ಹಾಸಿ, “ಕೂಡಿರಿ ಅಯ್ಯಾ” ಎಂದರು. ಚರ್ಮ ಹದ ಹಾಕಿದ್ದ ಬಾನಿಯ ಬಾಯಮುಚ್ಚಿದರು, ವಾಸನೆ ಬರದಿರಲೆಂದು.
“ಕಕ್ಕಯ್ಯಾ ನಾನು ನಿಮ್ಮ ಕೂಡ ಹುಡುಗಾಟಿಕೆ ಮಾಡಿದ್ದನ್ನು ಕ್ಷಮಾ ಮಾಡ್ರೀ…”
“ಅಯ್ಯೋ, ಇದೇನು ಅಯ್ಯಾ ಹಿಂಗ ಕೇಳ್ತೀರಿ..! ನೀವೇನು ಮಾಡಿದಿರಿ..?”
“ಹೌದು, ನನಗೆ ಗೋಳುಕೊಟ್ಟು ನಗುವುದೊಂದೇ ತಿಳಿದಿತ್ತು. ಹಾಗಾಗಿ ನಿಮ್ಮ ರುಮಾಲಿನೊಳಗೆ ಚೇಳನ್ನಿಟ್ಟಿದ್ದೆ. ಮಾವ ಬಂದು ತೆಗೆದು ತೋರಿದರಲ್ಲ. ಆ ಚೇಳು….”
“ನನಗೆ ಗೊತ್ತಿತ್ತು ಅಯ್ಯಾ, ಅದು ನೀವು ತಂದು ಹಾಕಿರುವ ಚೇಳೆಂದು.”
“ಗೊತ್ತಿತ್ತೆ..? ಮತ್ಯಾಕೆ ನನ್ನ ದಂಡಿಸಲಿಲ್ಲ.”
“ಅಯ್ಯಾ ಆ ಚೇಳನ್ನು ನನ್ನ ಕೈ ಮುಟ್ಟಲಿಲ್ಲ, ಮನ ಮುಟ್ಟಿಯಾಗಿತ್ತು. ಆ ವಿಷದ ನಂಜಿನ ಕಾರಣದಿಂದ ಈ ಕೊಂಪೆಯಲ್ಲಿ ಹೀಗೆ ಬದುಕಿದ್ದವನನ್ನು ಅಣ್ಣನವರು ಕೈಹಿಡಿದು ಮೇಲೆತ್ತಿ ಅಭಿನವ ಮಲ್ಲಿಕಾರ್ಜುನನನ್ನು ಎದುರಿಗಿಟ್ಟು ನೀನು ಆಯ್ದುಕೊಳ್ಳುವುದು ಯಾವುದೆಂದು ನೀನೆ ನಿರ್ಧರಿಸಿಕೋ ಎಂದರೇ ಹೊರತು ನನ್ನ ಅರಿವನ್ನು ತಿದ್ದಿದರೆಂದು ನನಗೆ ಯಾವತ್ತೂ ಅನಿಸಲಿಲ್ಲ ಅಯ್ಯಾ.. ಅವರು ನನ್ನೊಳಗೆ ಕೇಳಿಸುವಂತೆ ಹೇಳಿದ್ದೊಂದೇ ಮಾತು ಅರಿವೇ ಗುರು.”
“ಅರಿವೇ ಗುರು..!”

ಚನ್ನಬಸವಣ್ಣ ಕೇರಿಯಿಂದೆದ್ದು ಹೊರಟೇಬಿಟ್ಟ. ಆಗ ಅವನ ತಲೆಯಲ್ಲಿ ಓಡಾಡುವ ಸಂಗತಿಯೆಂದರೆ ಅರಿವನ್ನು ಅರಿಯುವುದಾದರೂ ಹೇಗೆ ಎಂಬುದಾಗಿತ್ತು. ಹೊರಕೇರಿಯ ಮೂಲೆಯಲ್ಲಿ ತಿರುಗಿ ಕಲ್ಯಾಣದ ರಾಜಬೀದಿಗೆ ಹೋಗಿಮುಟ್ಟುವ ಬಳಿಗಾರ ಓಣಿಯಲ್ಲಿ ಹೊರಟಾಗ ಸೊಡ್ಡಳ ಬಾಚರಸರು ಇದಿರಾದಾಗ ತಲೆಬಾಗಿ ಶರಣು ಮಾಡಿದಾಗ ತನಗರಿವಿಲ್ಲದಂತೆ ಅದೇ ಬಸವಣ್ಣನವರ ತುಂಬುಮುಖದ ನಗೆಯಂತೆಯೇ ವಿನಯದಿಂದ ತಲೆಬಾಗಿಸಿ ಶರಣಾರ್ಥಿ ಎಂದನು.

ಅರೇ ಇದೇನಾಯ್ತು ಸೋಜಿಗ. ಈ ದಿನ ಬೆಳಗ್ಗೆ ಬಂದಾಗ ಬಾಚರಸನೊಬ್ಬ ಮಾವನ ಮನೆಗೆ ಬರುವ ಊಳಿಗದವನಂತೆ ಕಾಣುತ್ತಿದ್ದವನ ಮುಂದೆ ನಾನೂ ತಲೆಬಾಗಿಸಿದೆನೆ..?

ರಾಜಬೀದಿಯಲ್ಲಿನ ತನ್ನ ದೊಡ್ಡಪ್ಪನ ಮನೆಗೆ ಹೋಗಬೇಕಿದ್ದವನು ತಪ್ಪಿ ಜೇನರ ಓಣಿಯಲ್ಲಿ ಹಾದು ಶಾಂತರಸರ ಮನೆಗೆ ಬಂದನು. ತಾಳೆಗರಿಗಳದ್ದೇ ಭಂಡಾರ, ಒಂದೊಂದು ಮಾತೂ ತಪ್ಪಿಹೋಗಬಾರದು, ವಚನದ ಲಯವೂ ತಪ್ಪಬಾರದೆಂಬ ಭಯದಲ್ಲಿ ಜಾಗರೂಕನಾಗಿ ಶರಣರು ಆಡಿದ್ದ ಮಾತುಗಳನ್ನೇ ಮತ್ತೊಮ್ಮೆ ಆಡಿಕೊಳ್ಳುತ್ತಾ, ತಾಳೆಗರಿಗಳಲ್ಲಿ ಚಿತ್ತಾರ ಬಿಡಿಸುವವನ ಏಕಾಗ್ರ ಮೂರ್ತಿಯಂತೆ ಶಾಂತರಸರು ಹಕ್ಕಿಯ ಗರಿಯೊಂದನ್ನು ಹಿಡಿದು ಕುಳಿತಿದ್ದರು. ಅವರ ಅಕ್ಷರಗಳೋ ಮುತ್ತಿನಂತೆ ತಿಳಿತಿಳಿಯಾಗಿ ಹೊಳೆವ ನಕ್ಷತ್ರಗಳಂತೆ ಒಂದೊಂದು ಗರಿಗಳಲ್ಲೂ ಮೂಡುತ್ತಾ ಅದನ್ನು ಕಾಯಕದವನೊಬ್ಬ ದಾರದಿಂದ ಕೂಡಿಸಿ ಕಟ್ಟುತ್ತಾ ಇದ್ದನು.
“ಓ ಚನ್ನಬಸವಣ್ಣಾ… ಬಾರಪ್ಪ ಚಿಕ್ಕದಣ್ಣಾಯಕ, ಏನ  ಬಂದಿರಿ, ಹದುಳವೇ..?”
ಅರೇ ಅವರಾಡುವ ಮಾತುಗಳು ಮುದ್ದಾದ ಮುತ್ತುಗಳಂತೆಯೇ ಲಯಬದ್ಧವಾಗಿ ಕೇಳಿದಾಗ ಥಟ್ಟನೇ ಮಾವ ಬಸವಣ್ಣ ಕೊಟ್ಟಿದ್ದ ವಚನದ ಹಾಡುವ ಲಯವೂ ಸಿಕ್ಕಂತಾಗಿ, ಸೊಂಟದಲ್ಲಿ ಸಿಕ್ಕಿಸಿದ ತಾಳೆಗರಿಯನ್ನು ತೆಗೆದು ಹಾಡಿದಂತೆ ಓದಿಕೊಳ್ಳತೊಡಗಿದ.

ಆಹಾ ಅದೇನು ಕಂಠ, ಸ್ಪುಟ-ದಿಟವಾಗಿ ಒಂದೊಂದೇ ಅಕ್ಷರಗಳನ್ನು ರಾಗಬದ್ದವಾಗಿ ಹಾಡತೊಡಗಿದಾಗ ಶಾಂತರಸರ ಮುಖದಲ್ಲಿ ನಗುವರಳಿತು. ಕಂಬಳಿ ಹಾಸಿ ಕುಳಿತುಕೊಳ್ಳಲು ಹೇಳಿದಾಗ ಚನ್ನಬಸವಣ್ಣ ಈ ವಚನಗಳನ್ನು ನಾನು ಓದಬಹುದೇ ಎಂದು ಕೇಳಿದ.
“ಚಿಕ್ಕದಣ್ಣಾಯಕ, ಅದು ಇರೋದೆ ಓದಲು.”

ಹಸಿದವನ ಮುಂದೆ ಅನ್ನವಿಟ್ಟಂತೆ ಚೂರುಚೂರೇ ರುಚಿ ಹತ್ತಿದವನಂತೆ ಸವಿಯತೊಡಗಿದ. ಹುಟ್ಟಿದಂದಿನಿಂದ ತನ್ನ ಬಹಳಷ್ಟು ಸಮಯವನ್ನು ಬಲದೇವರಸರ ಮನೆಯಲ್ಲೆ ಕಳೆದಿದ್ದ ಚನ್ನಬಸವಣ್ಣ ಇದೀಗ ತಾನೆ ಮಹಾಮನೆಯ ಅಂಗಳಕ್ಕೆ ತೆರೆದುಕೊಂಡವನಂತೆ ಓದಲು ಮುಂದಾದ. ದಿನದ ಬೆಳಕು ಕಳೆದು ಕತ್ತಲಾವರಿಸುತ್ತಿದ್ದಂತೆ ಶಾಂತರಸರೇ ಅವನನ್ನು ಎಚ್ಚರಿಸಿ ಮನೆಗೆ ಹೋಗಲು ಹೇಳಿದಾಗ ಹಸಿಹಸಿಯಾಗಿ ಮೂಡಿದ್ದ ಸಾವಿರ ಪ್ರಶ್ನೆಗಳು ತಲೆಯೊಳಗೆ ಸುಳಿದಾಡತೊಡಗಿದವು. ಇತ್ತ ಮನೆಯಲ್ಲಿ ಅಕ್ಕಂದಿರರು, ಅಮ್ಮ ನಾಗಮ್ಮನೂ ಕಲ್ಯಾಣದ ಬೀದಿಬೀದಿಯಲ್ಲೆಲ್ಲ ಬಾಲಕ ಚನ್ನಬಸವಣ್ಣ ಎಲ್ಲೂ ಕಾಣುತ್ತಿಲ್ಲವೆಂದು ಹುಡುಕಾಡಿ ಬೇಸತ್ತು ಮನೆಗೆ ಬಂದರು.

ಶಾಂತರಸರ ಜೊತೆಗೂಡಿ ಮಹಾಮನೆಗೆ ಬಂದಾಗ ನೆರೆದ ಶರಣರಾದಿಯಾಗಿ ಎಲ್ಲರೂ ಕೌತುಕದಿಂದ ಎಲ್ಲಿ ಹೋಗಿದ್ದಿರಿ..? ಎಂದು ಕೇಳಿ ತಿಳಿದರು. ಅಣ್ಣಬಸವಣ್ಣನವರು ಆ ದಿನ ರಾತ್ರಿ ರಾಜ ಬಿಜ್ಜಳನೊಡನೆ ಎಲ್ಲೋ ರಾಜಕಾರ್ಯದ ನಿಮಿತ್ತ ಹೋಗಬೇಕಿದ್ದುದರಿಂದ “ಕಕ್ಕಯ್ಯನವರೇ ವಿಷಯ ಪ್ರಸ್ತಾಪಿಸಿ ಮಾತಾಡಿಸಿ” ಎಂದು ಹೇಳಿ ಮುಂದಲ ನಾಲ್ಕಾರು ದಿನದ ಪ್ರಯಾಣಕ್ಕಾಗಿ ಅಗತ್ಯದ ಸಾಮಾನು ಸರಂಜಾಮನ್ನು ಜೋಳಿಗೆಗೆ ಹಾಕತೊಡಗಿದರು.
“ಈ ದಿವಸ ಆರಂಭದಲ್ಲಿ ಹಾಡುವುದಕ್ಕೆ ಅಣ್ಣನವರು ಯಾರಿಗೆ ಹೇಳಿದ್ದಾರೆ..?”
ಎಂದು ಕಕ್ಕಯ್ಯನವರು ಮಾದರಸರ ಕಡೆಗೆ ನೋಡಿದಾಗ ಮಹಾಮನೆಯ ಕಂಬಕ್ಕೊರಗಿ ನಿಂತಿದ್ದ ಚನ್ನಬಸವಣ್ಣ ತಾನು ಎಂಬುದಾಗಿ ಸನ್ನೆ ಮಾಡಿ ಎಲ್ಲರ ಸಮ್ಮುಖದಲ್ಲಿ ಬಂದು ನಿಂತ. ಮಾದರಸರ ತಂಬೂರಿಯ ನಾದಕ್ಕೆ ಸ್ವರ ಕೂಡಿಸಿ, “ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ…” ಎಂದು ಸುಶ್ರಾವ್ಯವಾಗಿ ಹಾಡತೊಡಗಿದಾಗ ಇಡೀ ಸಭೆಯೇ ಮಂತ್ರಮುಗ್ಧವಾಗಿತ್ತು.
ಅಂದಿನ ಅನುಭಾವದಲ್ಲಿ ಭಾಗವಹಿಸಲಾಗದ ಸ್ಥಿತಿಯು ಒಂದೆಡೆಯಾದರೆ ಇನ್ನೊಂದೆಡೆ ಕಾಯಕ ಬಿಡಲೊಲ್ಲದ ಸೆಳೆತದಲ್ಲಿದ್ದ ಬಸವಣ್ಣನವರಿಗೂ ಚನ್ನಬಸವನ ಹಾಡು ಬಲು ಇಂಪಾಗಿ ಕೇಳಿಸಿ ಚಣ ನಿಂತು ಅವನ ಭಾವತುಂಬಿದ ಸ್ವರವನ್ನು ಕೇಳಿಯೇ ಹೊರಟರು.
ಆ ದಿನ ಅನುಭಾವದಲ್ಲಿ ಮಾತಾಡಿದ ಶರಣರೆಲ್ಲರನ್ನೂ ಪ್ರಶ್ನಿಸಿದ, ಪ್ರಶ್ನಿಸುತ್ತಲೇ ಹೋದ… ಗುರು ಎಂದರೇನು, ಲಿಂಗದ ಮಹತ್ತೇನು, ಜಂಗಮದ ಚಲನಶೀಲತೆಯನ್ನು ಕಾಣೋದು ಹೇಗೆ..? ಹೀಗೆ ಹತ್ತಾರು ಪ್ರಶ್ನೆಗಳು… ಅವರವರ ಅನುಭಾವಕ್ಕೆ ಸಿಕ್ಕಿದಷ್ಟನ್ನು ವಿವರಿಸಿದ ಶರಣರು, ಚನ್ನಬಸವಣ್ಣನಲ್ಲಿ ಆಗಿರುವ ಈ ಪರಿಣಾಮದ ಬಗ್ಗೆ ಮಾತಾಡಿಕೊಳ್ಳುತ್ತಲೇ ಅನುಭವಮಂಟಪದ ಅಂದಿನ ಚರ್ಚೆಯನ್ನು ನಿಲ್ಲಿಸಿದರು.

(ಮುಂದುವರೆಯುತ್ತದೆ)

 

 

 

 

Previous post ಶರಣ- ಎಂದರೆ…
ಶರಣ- ಎಂದರೆ…
Next post ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ

Related Posts

ಪ್ರಭುಲಿಂಗಲೀಲೆ…
Share:
Articles

ಪ್ರಭುಲಿಂಗಲೀಲೆ…

May 10, 2022 ಡಾ. ಚಂದ್ರಶೇಖರ ನಂಗಲಿ
ಚಾಮರಸ ವಿರಚಿತ ಪ್ರಭುಲಿಂಗಲೀಲೆಯು ಅಲ್ಲಮಪ್ರಭುವನ್ನು ಶಿವನೊಡನೆ “ತಗುಳ್ಚಿ ಪೋಲಿಪ” ಕಥನಕ್ರಮದ ಮಧ್ಯಕಾಲೀನ ಮಹಾಕಾವ್ಯ. ಇದನ್ನು Phylosophical Allegory...
ಗುರುವೇ ತೆತ್ತಿಗನಾದ
Share:
Articles

ಗುರುವೇ ತೆತ್ತಿಗನಾದ

April 29, 2018 ಕೆ.ಆರ್ ಮಂಗಳಾ
ಜಾಗತಿಕ ಇತಿಹಾಸದಲ್ಲಿಯೇ ಹನ್ನೆರಡನೆಯ ಶತಮಾನ ಪ್ರಬುದ್ಧ ಚಿಂತನೆಗಳು ನಡೆದ ಕಾಲಮಾನ. ಅದುವರೆಗೆ ಮನುಷ್ಯನ ಜೀವನವನ್ನೂ, ಮನಸ್ಸನ್ನೂ ಆಳುತ್ತಿದ್ದ ಕರ್ಮಠ ವ್ಯವಸ್ಥೆಗಳನ್ನು...

Comments 16

  1. Harsha m patil
    Mar 7, 2020 Reply

    ಬಾಲಕ ಚನ್ನಬಸವಣ್ಣನನ್ನು ಸುಂದರವಾಗಿ ಚಿತ್ರಿಸಿದ್ದೀರಿ. ಕತೆಗಾರ ಮಹಾದೇವ ಅವರ ವ್ಯಕ್ತಿಚಿತ್ರಣ ಆಳವಾಗಿದ್ದು, ಹೃದಯಸ್ಪರ್ಶಿಯಾಗಿದೆ.

  2. ಅಪ್ಪಾಜಿಗೌಡ, ಸೊಲ್ಲಾಪುರ
    Mar 7, 2020 Reply

    ಅಕ್ಕಾ, ನೀವು ಹೇಳಿದ್ದು ನಿಜ, ಶರಣರ ಕತೆಗಳನ್ನು ಬರೆಯುವ ಅರ್ಹ ವ್ಯಕ್ತಿ ಮಹಾದೇವ ಹಡಪದ ಅವರು. ಶರಣ ತತ್ವಗಳಿಗೆ ಚ್ಯುತಿ ಬಾರದಂತೆ ಬರೆಯುತ್ತಾರೆ. ನೈಜವಾಗಿ ಕತೆ ಹೇಳುತ್ತಾರೆ. ಅವರನ್ನು ಕತೆಗಳ ಮೂಲಕ ಪರಿಚಯಿಸಿದ ಬಯಲು ಬ್ಲಾಗಿಗೆ ನಾವು ಚಿರಋಣಿ.

  3. Mahantesh
    Mar 8, 2020 Reply

    ಚನ್ನಬಸವಣ್ಣನನ್ನು ಮನ ತುಂಬುವಂತೆ ಕತೆಯಲ್ಲಿ ಹೇಳಿದ್ದೀರಿ. ಶರಣಾರ್ಥಿ ಅಣ್ಣಾ.

  4. Halappa Bhavi
    Mar 8, 2020 Reply

    ಮಗುವನ್ನು ದಂಡಿಸದೇ ಸರಿದಾರಿಗೆ ತಂದ ಅಪ್ಪ ಬಸವಣ್ಣ ನಮಗೆ ಈ ವಿಷಯದಲ್ಲೂ ದಾರಿದೀಪವಾದರು.

  5. Panchakshari Hv
    Mar 9, 2020 Reply

    ಚೆನ್ನಬಸವಣ್ಣನವರ ಬಾಲ್ಯದ ಕಥಾ ಪ್ರಸಂಗ ಸೊಗಸಾಗಿ ಮೂಡಿ ಬಂದಿದೆ.

  6. Manjunath
    Mar 9, 2020 Reply

    ಕತೆ ಚೆನ್ನಾಗಿದೆ ಸರ್

  7. Sushma karaga
    Mar 11, 2020 Reply

    ಚನ್ನಬಸವಣ್ಣನ ಹೃದಯ ಪರಿವರ್ತನೆಗಾಗಿ ಕಾಯುತ್ತಿದ್ದಂತೆ ಭಾಸವಾಯಿತು. ಹೂವು ಸಹಜವಾಗಿ ಅರಳಿದಂತೆ ಅವನ ಮನಸ್ಸು ವಚನಗಳಿಗಾಗಿ ಅರಳಿದ್ದು ಅದ್ಭುತ!!

  8. Mariswamy Gowdar
    Mar 11, 2020 Reply

    ಖುದ್ದು ಚನ್ನಣ್ಣನನ್ನು ನೋಡಿದ ಅವುಭವ ನೀಡಿದ ಮಹಾದೇವ ಶರಣರಿಗೆ ಶರಣಾರ್ಥಿಗಳು. ನಿಮ್ಮ ಎಲ್ಲಾ ಶರಣರ ಕತೆಗಳನ್ನು ಓದುವ ಬಯಕೆಯಾಯಿತು. ಸುಂದರ ನಿರೂಪಣೆ, ಮನ ಮುಟ್ಟುವ ಪಾತ್ರ ಚಿತ್ರಣ.

  9. Jahnavi Naik
    Mar 12, 2020 Reply

    ನಿಜ, ನಿಜ, ಚನ್ನಬಸವ ಬಸವಣ್ಣನದೇ ಥೇಟ್ ಹೋಲಿಕೆ ಇರುವ ಕೂಸು… ಅದಕ್ಕೇ ಚನ್ನಬಸವ, beautiful story.

  10. ಶ್ರೀಹರಿ ದೂಪದ
    Mar 14, 2020 Reply

    ಚೆನ್ನಬಸವನ ಬೆಳದಿಂಗಳ ಆಟ ಮತ್ತು ಅವನ ಅರಿವಿನ ಪರಿಧಿಯ ಮಾತುಗಳು ಇಷ್ಟವಾದವು.

  11. ಸೋಮಶೇಖರ, ಗದಗ
    Mar 14, 2020 Reply

    ಸೊಗಸಾಗಿದೆ ಸರ್….. ಸುಲಲಿತವಾಗಿ ಓದಿಸಿಕೊಂಡಿತು. ಮುಂದಿನ ಭಾಗ ಯಾವಾಗ ಬರುತ್ತೆ ತಿಳಿಸಿರಿ.

  12. ಪುನೀತ ಕಬ್ಬೂರ
    Mar 14, 2020 Reply

    ಅಣ್ಣ ಕಣ್ಣು ಹನಿಯಾಯ್ತು….. ಪೂರ್ತಿ ಲೇಖನ ಕಳಿಸಿಕೊಡಿ ಅಣ್ಣ ದಯಮಾಡಿ.

  13. Manjanna Bylur
    Mar 15, 2020 Reply

    ಅಬ್ಬಬ್ಬಾ ನಮ್ಮ ಚನ್ನಬಸವಣ್ಣನವರು ಬಾಲ್ಯದಲ್ಲಿ ಹೀಗಿದ್ದರೆ!? ಕತೆ ಕುತೂಹಲಕಾರಿಯಾಗಿದೆ.

  14. ಶರಣಬಸಪ್ಪ ಕಲ್ಯಾಳ
    Mar 20, 2020 Reply

    ಕತೆಯೊಳಗೆ ನಾನೂ ಸೇರಿ ಹೋದೆ, 12ನೆ ಶತಮಾನಕ್ಕೆ ಧುಮುಕಿದ ಅನುಭವ ನೀಡಿತು.

  15. Vishnu
    Mar 20, 2020 Reply

    ಚನ್ನಬಸವಣ್ಣನ ಕತೆಯನ್ನು ಕಾದಂಬರಿಯಾಗಿಸಿ. ಪಾತ್ರಗಳಲ್ಲಿ ಲವಲವಿಕೆ, ಜೀವಂತಿಕೆಯನ್ನು ತರುವುದೇ ಕತೆಗಾರನ ಯಶಸ್ಸು

  16. Channappa Vali
    Mar 24, 2020 Reply

    ಕಣ್ಣೆದುರು ಹಾದು ಬರುತ್ತಾನೆ ಚನ್ನಬಸವಣ್ಣ….. ಅವಿರಳ ಜ್ಞಾನಿಯ ಬಾಲ್ಯ ಸುಂದರವಾಗಿದೆ.

Leave a Reply to Harsha m patil Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ತನ್ನ ಪರಿ ಬೇರೆ…
ತನ್ನ ಪರಿ ಬೇರೆ…
February 5, 2020
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
February 6, 2025
ಅನುಭವ ಮಂಟಪ
ಅನುಭವ ಮಂಟಪ
April 11, 2025
Copyright © 2025 Bayalu