Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಲ್ಲಮಪ್ರಭುದೇವರ ಸ್ವರವಚನಗಳು
Share:
Articles December 9, 2025 ಡಾ. ವೀರಣ್ಣ ರಾಜೂರ

ಅಲ್ಲಮಪ್ರಭುದೇವರ ಸ್ವರವಚನಗಳು

ಶರಣರ ಅನುಭಾವದ ಅಭಿವ್ಯಕ್ತಿಯೇ ವಚನ. ಅದೊಂದು ಮುಕ್ತಕರೂಪ. ಅದರೊಳಗೆ ಒಂದು ಅಂಕಿತವಿರುತ್ತದೆ. ಆ ಅಂಕಿತವು ಅವರವರ ಸಾಕ್ಷಿಪ್ರಜ್ಞೆ. ಆ ಸಾಕ್ಷಿಯಾಗಿ ಶರಣರು ವಚನಗಳಲ್ಲಿ ಮಾತನಾಡಿದ್ದಾರೆ. ಸಮಾಜೋಧಾರ್ಮಿಕ ದೃಷ್ಟಿಯ ಒಂದು ಉಪಸೃಷ್ಟಿಯಾಗಿ ವಚನಗಳು ಹುಟ್ಟಿಕೊಂಡಿರುವುದನ್ನು ಗಮನಿಸಬಹುದು. ಆದರೆ ಶರಣರು ವಚನಗಳನ್ನ ಮಾತ್ರ ಬರೆದು, ವಚನ ಸಾಹಿತ್ಯ ಎನ್ನುವಂತಹ ಹೊಸರೂಪವನ್ನು ಸೃಷ್ಟಿ ಅಷ್ಟೇ ಮಾಡಲಿಲ್ಲ. ಹಾಡುಗಬ್ಬ ಪರಂಪರೆಗೆ ಸ್ವರವಚನಗಳನ್ನು ಬರೆಯುವ ಮೂಲಕ ತಮ್ಮ ವಿಶೇಷ ಕೊಡುಗೆ ನೀಡಿದ್ದಾರೆ.

ಹಾಡುಗಬ್ಬ ಪರಂಪರೆ ಜನಪದದಿಂದಲೇ ಆರಂಭವಾಗುತ್ತದೆ. ಆದರೆ ನಮಗೆ ಲಿಖಿತರೂಪದಲ್ಲಿ ಸಿಗುವಂತಹದ್ದು 12ನೇ ಶತಮಾನದಿಂದಲೇ ಎನ್ನಬಹುದು. ಹಾಗಾಗಿ ಸ್ವರವಚನಗಳಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಮಹತ್ತರ ಸ್ಥಾನವನ್ನು ಕಲ್ಪಿಸಿಕೊಟ್ಟವರು ಶರಣರು. ವಚನಗಳನ್ನು ರಾಗವಾಗಿ ಹಾಡಬಹುದಾದರೂ, ಸ್ವರವಚನಗಳು ಸಂಪೂರ್ಣವಾಗಿ ಹಾಡಿನ ರೂಪದಲ್ಲಿಯೇ ಇರುತ್ತವೆ. ಅಂದರೆ ವಚನಗಳು ಗದ್ಯರೂಪ ಅಥವಾ ಮುಕ್ತಕ ರೂಪದಲ್ಲಿದ್ದರೆ ಸ್ವರವಚನಗಳು ರಾಗ, ತಾಳ ಸಮನ್ವಿತವಾಗಿ ಹಾಡುವುದಕ್ಕಾಗಿಯೇ ರಚಿತವಾದವುಗಳು. ಈ ಸ್ವರವಚನಗಳ ಸ್ವರೂಪ ಹೇಗಿರುತ್ತದೆಂದರೆ ಆರಂಭದಲ್ಲಿ ಪಲ್ಲವಿ ಇದ್ದು, ಮುಂದೆ ಮೂರರಿಂದ ಏಳು ನುಡಿಗಳಿರುತ್ತವೆ. ಕೊನೆಯ ನುಡಿಯಲ್ಲಿ ಆಯಾ ಶರಣರ ಅಂಕಿತಗಳಿರುತ್ತವೆ. ವಚನಗಳಲ್ಲಿರುವಂತೆ ಇವೂ ಶರಣತತ್ತ್ವವನ್ನೇ ಪ್ರತಿಪಾದಿಸುತ್ತವೆ, ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಉದ್ದೇಶ ಇಲ್ಲಿಯೂ ಇರುತ್ತದೆ.

ಇದುವರೆಗೆ ಹನ್ನೆರಡನೆಯ ಶತಮಾನದ ಶರಣರ ಸುಮಾರು 275 ಸ್ವರವಚನಗಳು ನಮಗೆ ದೊರೆತಿವೆ. ಬೇರೆಬೇರೆ ಸಂಕಲನದ ಮೂಲಕ ಅವುಗಳ ಅಧಿಕೃತತೆ ನಮಗೆ ಗೊತ್ತಾಗಿದೆ. (ಬಸವಯುಗದ ಸ್ವರವಚನ ಸಂಪುಟ ಎನ್ನುವ ಸಂಪುಟವನ್ನು ಈ ಹಿಂದೆ ಸಂಪಾದಿಸಿ ಪ್ರಕಟಿಸುವ ಅವಕಾಶ ನನಗೆ ದೊರಕಿತ್ತು.) ಅಂದರೆ 23 ಶರಣರ 275 ಸ್ವರ ವಚನಗಳು ನಮಗೆ ಈವರೆಗೆ ದೊರಕಿವೆ. ಮುಂದೆ ಈ ಪರಂಪರೆ ನೂರೊಂದು ವಿರಕ್ತರ ಕಾಲಕ್ಕೆ ಬಹಳ ವ್ಯಾಪಕವಾಗಿ ಮುಂದುವರೆದಿದೆ. ಅದು ನಂತರ ಕೈವಲ್ಯ ಸಾಹಿತ್ಯವಾಗಿ, ಭಜನಾ ಪದಗಳಾಗಿ, ತತ್ವಪದಗಳಾಗಿ ಬೇರೆ ಬೇರೆ ರೂಪಗಳನ್ನು ಪಡೆದುಕೊಂಡಿದೆ. ಆದರೆ ಈ ಸ್ವರವಚನಕ್ಕೂ ಬೇರೆ ಬೇರೆ ಭಕ್ತಿಗೀತೆ- ತತ್ವಪದಗಳಿಗೂ ವ್ಯತ್ಯಾಸಗಳಿವೆ.

‘ಸ್ವರವಚನ’ಗಳಲ್ಲಿ ವಚನದ ಎಲ್ಲ ಲಕ್ಷಣಗಳೂ ಅಂದರೆ ಹಾಡುವ ರೀತಿಯನ್ನು ಬಿಟ್ಟರೆ, ವಚನದ ಧ್ಯೇಯ, ದೃಷ್ಟಿ, ಧೋರಣೆ ಎಲ್ಲವನ್ನೂ ಕಾಣಬಹುದು. ವಚನದ ಸಾರವೇ ಹಾಡಿನ ರೂಪದಲ್ಲಿ ಅನುರೂಪಿತವಾಗಿರುತ್ತದೆ. ಈ ಸ್ವರವಚನಗಳು ಬಿಡಿಬಿಡಿಯಾಗಿ ಕೆಲವು ಕಡೆ ಸಿಕ್ಕರೆ, ಹಸ್ತಪ್ರತಿಯಲ್ಲಿ ಇಡಿಯಾಗಿ ಸಿಗುವುದು 15ನೇ ಶತಮಾನದ ಸಂಕಲನಗಳಲ್ಲಿ. ಹೀಗಾಗಿ 15ನೇ ಶತಮಾನವನ್ನು ನಾವು ‘ವಚನ ಸಂಕಲನ ಯುಗ’ ಎಂದು ಕರೆಯುತ್ತೇವೆ. ಅಲ್ಲಿ ಬೇರೆ ಬೇರೆ ಅನುಭಾವಿಗಳು ವಚನಗಳನ್ನ ಬೇರೆ ಬೇರೆ ದೃಷ್ಟಿಕೋನದ ಹಿನ್ನೆಲೆಯಲ್ಲಿ ಸ್ಥಲಕಟ್ಟಿಗೆ ಅಳವಡಿಸಿದರು. ಆ ಸಂದರ್ಭದಲ್ಲಿ ವಚನಗಳ ಜೊತೆಗೆ ಸ್ವರ ವಚನಗಳನ್ನ ಸಹ ಸ್ಥಲಕಟ್ಟಿನ ಕ್ರಮದೊಳಗೆ ಅಳವಡಿಸಿಕೊಂಡಿದ್ದಾರೆ. ಕೆಲವು ಸಂಕಲನಗಳು ಕೇವಲ ಸ್ವರ ವಚನಗಳಿಗೆ ಮೀಸಲಾಗಿವೆ. ಇನ್ನೂ ಕೆಲವು ಸಂಕಲನಗಳು ವಚನ ಮತ್ತು ಸ್ವರ ವಚನ ಎರಡನ್ನೂ ಒಳಗೊಂಡಿವೆ. ಅವುಗಳಲ್ಲಿ ಎರಡು ಸಂಕಲನಗಳು ಅದರಲ್ಲಿಯೂ ‘ಗಣವಚನ ರತ್ನಾವಳಿ’ ಎಂಬ ಸಂಕಲನದಲ್ಲಿ ಕೇವಲ ಸ್ವರ ವಚನಗಳಿದ್ದು, 216 ಸ್ಥಲಗಳ, 216 ಪ್ರತಿಸ್ಥಲಗಳಿಗೆ ಒಂದೊಂದು ಸ್ವರ ವಚನಗಳನ್ನು ಹೊಂದಿಸಲಾಗಿದೆ. ಈ ಅಪೂರ್ವ ಕೃತಿಯಲ್ಲಿ ವಿವಿಧ ಶರಣರ 216 ಸ್ವರವಚನಗಳು ಒಂದೆಡೆ ಸಂಕಲನಗೊಂಡಿರುವುದು ವಿಶೇಷ. ಅದೇ ರೀತಿಯಾಗಿ ‘ಪರಮ ಮೂಲ ಷಟ್‍ಸ್ಥಲ’, ‘ಸೂಕ್ಷ್ಮಮಿಶ್ರ ಷಟ್‍ಸ್ಥಲ’ ಎಂಬ ಸಂಕಲನ ಕೃತಿಗಳಿವೆ. ಹಾಗೆಯೆ ‘ವೀರಶೈವ ಚಿಂತಾಮಣಿ’, ‘ಷಟ್‍ಸ್ಥಲ ಜ್ಞಾನಸಾರಾಮೃತ’ ಹೀಗೆ ಬೇರೆ ಬೇರೆ ಸ್ಥಲಕಟ್ಟಿನ ವಚನಗಳ ಜೊತೆಗೆ ಸ್ವರವಚನಗಳನ್ನು ಜೋಡಿಸಿರುವ ಕೃತಿಗಳು ನಮಗೆ ಸಿಗುತ್ತವೆ.

ಬಸವಯುಗದ ಶರಣರಲ್ಲಿ ಹೆಚ್ಚು ಸ್ವರವಚನಗಳನ್ನು ಬರೆದವರು ಚನ್ನಬಸವಣ್ಣ. ಅವರ 73 ಸ್ವರವಚನಗಳು ಲಭ್ಯವಿವೆ. ಬಸವಣ್ಣನವರು 28, ಆದಯ್ಯನವರು 22, ನೀಲಮ್ಮ ತಾಯಿ 15, ಅಕ್ಕಮಹಾದೇವಿ 43. ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಪ್ರಭುದೇವರದು ಮೂರನೇ ಸ್ಥಾನ, ಮೊದಲನೇ ಸ್ಥಾನ ಚೆನ್ನಬಸವಣ್ಣ, 2ನೇ ಸ್ಥಾನ ಅಕ್ಕಮಹಾದೇವಿಯವರದು. ಪ್ರಭುದೇವರು ರಚಿಸಿದ ಒಟ್ಟು ಸ್ವರವಚನಗಳ ಸಂಖ್ಯೆ 41.

ಅಲ್ಲಮಪ್ರಭುದೇವರು ವಚನಗಳ ಜೊತೆಗೆ ಸೃಷ್ಟಿಯವಚನ, ಕಾಲಜ್ಞಾನ ವಚನ ಮತ್ತು ಸ್ವರ ವಚನಗಳಂತಹ ವಿವಿಧ ಪ್ರಕಾರದ ರಚನೆಗಳನ್ನು ಮಾಡಿರುವ ವಿವರ ದೊರೆಯುತ್ತದೆ. ಆದರೆ ಅವರ ವಚನಗಳ ಬಗ್ಗೆ ನಡೆದಷ್ಟು ಅಧ್ಯಯನ ಮತ್ತು ಚಿಂತನೆಗಳು ಉಳಿದ ಪ್ರಕಾರಗಳ ಬಗ್ಗೆ ನಡೆದಿಲ್ಲ. ಸ್ವರವಚನಗಳ ಬಗ್ಗೆ ಯಾವುದೇ ಲೇಖನಗಳು ಪ್ರಕಟವಾಗಿಲ್ಲ ಅಥವಾ ಉಪನ್ಯಾಸಗಳೂ ನಡೆದಿಲ್ಲ. ಪ್ರಭುದೇವರ ಸ್ವರವಚನಗಳು, ಎಲ್ಲೆಲ್ಲಿ ಎಷ್ಟೆಷ್ಟು ಸಿಗುತ್ತವೆಂದರೆ- ಏಕೋತ್ತರ ಶತಸ್ಥಲದೊಳಗೆ, ಶಿವಯೋಗ ಪ್ರದೀಪಿಕೆಯೊಳಗೆ, ಗಣವಚನ ರತ್ನಾವಳಿಯಲ್ಲಿ, ಪರಮಮೂಲ ಷಟ್‍ಸ್ಥಲ ಸಂಕಲನದಲ್ಲಿ, ಶೂನ್ಯ ಸಂಪಾದನೆಯೊಳಗೆ ಮತ್ತು ಸೂಕ್ಷ್ಮಮಿಶ್ರ ಸಂಕಲನದೊಳಗೆ. ‘ಪರಮಾನಂದ ಸುಧೆ’ ಎನ್ನುವಂತಹ ಸ್ಥಲಕಟ್ಟಿನ ಕೃತಿಯೊಳಗೆ ಈ ಎಲ್ಲಾ 41 ಸ್ವರವಚನಗಳನ್ನು ವಿಷಯಗಳಿಗೆ ಅನುಗುಣವಾಗಿ ವಿವಿಧ ಸ್ಥಲಕಟ್ಟಿಗೆ ವಿಭಜಿಸಿ ಕೊಟ್ಟಿದ್ದಾರೆ. ಆದುದರಿಂದಲೇ ವಿವಿಧ ಸಂಕಲನಗಳಲ್ಲಿ ಅವು ಚದುರಿ ಹೋಗಿವೆ. ಈಗ ಏಕೋತ್ತರ ಶತಸ್ಥಲದೊಳಗೆ ಒಂದೊಂದು ಸ್ಥಲಕ್ಕೆ ಅಂದರೆ 101 ಸ್ಥಲಕ್ಕೆ 101 ಸ್ವರವಚನಗಳನ್ನು ಹಾಗೂ ವಚನಗಳನ್ನು ಜೋಡಿಸಿದ್ದಾರೆ. ವಚನ, ಸ್ವರವಚನಗಳಿಂದ ಮಿಶ್ರವಾದಂತಹ ಈ ಏಕೋತ್ತರ ಶತಸ್ಥಲದೊಳಗೆ 101 ಸ್ಥಲದ ವಿಷಯವನ್ನೆ ಹೇಳುವಂತಹ ವಚನಗಳು ಮತ್ತು ಸ್ವರವಚನಗಳಿವೆ. ಪ್ರಭುದೇವರ ಸ್ವರವಚನಗಳು 101 ಸ್ಥಲದ ವಿಷಯವನ್ನೆ ಹೇಳುತ್ತವೆ. ಅಲ್ಲಿ ಷಟ್‍ಸ್ಥಲ ಸಿದ್ಧಾಂತ ಬೇರೆಬೇರೆ ರೀತಿಯಲ್ಲಿ ಪರಿಕ್ರಮಿಸಿದ್ದು ಉಂಟು. ‘ಪರಮ ಮೂಲ ಜ್ಞಾನ ಷಟ್‍ಸ್ಥಲ’, ‘ವಿಶೇಷಾನುಭವ ಷಟ್‍ಸ್ಥಲ’ ಮತ್ತು ಸೂಕ್ಷ್ಮಮಿಶ್ರ ಷಟ್‍ಸ್ಥಲ ಸಂಕಲನಗಳಲ್ಲೂ ಪ್ರಭುದೇವರ ಸ್ವರ ವಚನಗಳಿವೆ.

ಚನ್ನಬಸವಣ್ಣನವರು 36 ಸ್ಥಲಗಳನ್ನು ನಿರೂಪಿಸುತ್ತಾರೆ. ಒಂದೊಂದು ಸ್ಥಲದೊಳಗೆ ಅಂದರೆ ಯಾವ ಸ್ಥಲದೊಳಗೆ ಶರಣ ನಿಂತಿರುತ್ತಾನೋ ಆ ಸ್ಥಲದೊಳಗೆ 6 ಸ್ಥಲಗಳ ಅನುಭವವನ್ನು ಪಡೆಯಬೇಕು. ಇದು ಮೆಲ್ಲಮೆಲ್ಲನೆ ಭಕ್ತ ಅಲ್ಲ, ಬದಲಿಗೆ ಆ ಭಕ್ತಸ್ಥಲದೊಳಗೆ ನಿಂತವನೇ ಮಾಹೇಶ್ವರ ಸ್ಥಲ, ಪ್ರಸಾದಿ ಸ್ಥಲ, ಪ್ರಾಣಲಿಂಗಿ ಸ್ಥಲ, ಶರಣಸ್ಥಲ, ಐಕ್ಯಸ್ಥಲದ ಅನುಭವವನ್ನು ಪಡೆಯಬೇಕು ಎನ್ನುವ ತಾತ್ವಿಕ ಜಿಜ್ಞಾಸೆಯ ಕೃತಿ ಮಿಶ್ರ ಷಟಸ್ಥಲ. ಇಲ್ಲಿ ಎರಡು ಸ್ವರ ವಚನಗಳು ಬರುತ್ತವೆ, ಬೇರೆ ವಚನಗಳೂ ಇವೆ. ಹಾಗೇನೇ ‘ಪರಮಾನಂದ ಸುಧೆ’ ಎನ್ನುವ ಕೃತಿಯಲ್ಲಿ ಯೋಗಿಕ ವಿಚಾರಗಳಿವೆ. ಹಾಗಾಗಿ ಅದು ಯೋಗ ಪಾದದೊಳಗೆ ಆ ಒಂದು ವಚನ ಬಳಕೆಯಾಗಿರುವುದರಿಂದ ಯೋಗದ ವಿಚಾರವನ್ನು ಆ ಸ್ವರವಚನ ಪ್ರಕಟಿಸುತ್ತದೆ ಎಂದು ತಿಳಿಯಬಹುದು. ಇನ್ನು ‘ಶಿವಯೋಗ ಪ್ರದೀಪಿಕೆ’ ಎನ್ನುವ ಇನ್ನೊಂದು ಕೃತಿಯಲ್ಲಿ 11 ಸ್ವರ ವಚನಗಳು ಬಳಕೆಯಾಗಿವೆ. ಈ ವಚನಗಳಲ್ಲಿ ಶಿವಯೋಗದ ಸ್ವರೂಪವನ್ನ ಹೇಳಲಾಗಿದೆ. ಷಟ್‍ಸ್ಥಲದೊಳಗೆ ಮುಖ್ಯವಾದ ಭಾಗವೆಂದರೆ, ಆನಂದ ಭಕ್ತಿ. ಆನಂದ ಭಕ್ತಿಯ ಮುಖ್ಯ ಲಕ್ಷಣ- ‘ಶರಣಸತಿ, ಲಿಂಗಪತಿ’ ಭಾವ. ಲಿಂಗ ವಿಕಳಾವಸ್ಥೆಯ ಭಾವವೂ ಹೌದು. ಶಿವಯೋಗ ಪ್ರದೀಪಿಕೆಯಲ್ಲಿ ಬರುವ ಎಲ್ಲ ಸ್ವರವಚನಗಳು ಹೇಳುವುದು ‘ಶರಣ ಸತಿ ಲಿಂಗಪತಿ’ ಭಾವದ ಅಭಿವ್ಯಕ್ತಿ. ಒಂದು ರೀತಿಯಲ್ಲಿ ಬೆಡಗಿನ ರೂಪದಲ್ಲಿ ಶಿವಯೋಗದ ರಹಸ್ಯವನ್ನು ಹೇಳುತ್ತವೆ. ಈ ಸ್ವರೂಪದ ಭಾವ ಶರಣನು ಗಂಡೆ ಇರಲಿ, ಹೆಣ್ಣೆ ಇರಲಿ, ತಾನು ಸತಿ, ಲಿಂಗ ಪತಿ ಎಂಬ ಭಾವದಿಂದ ಲಿಂಗವನ್ನು ಅನುಸಂಧಾನಿಸುವುದು. ಕೊನೆಗೆ ಸಮರಸಭಕ್ತಿ ಬರುತ್ತದೆ. ಐಕ್ಯಸ್ಥಲಕ್ಕೆ ಹೋಗುವ ಪೂರ್ವದ ಒಂದು ಹಂತ ಇದು. ಅಲ್ಲಿ ಶರಣ ಸತಿ-ಲಿಂಗ ಪತಿಯ ಸಮರಸವಿದೆ. ಆ ಸ್ಥಲದೊಳಗೆ ನಿಂತ ಪ್ರಭುದೇವರು 11 ವಚನಗಳನ್ನು ಶಿವಯೋಗಕ್ಕೆ ಸಂಬಂಧಿಸಿದ ಹಾಗೆ ಬರೆಯುತ್ತಾರೆ.

ಶೂನ್ಯಸಂಪಾದನೆಯೊಳಗೆ ಒಂಭತ್ತು ಸ್ವರ ವಚನಗಳು ಬರುತ್ತವೆ. ಮುಖ್ಯವಾಗಿ ಆ ಸ್ವರವಚನಗಳಲ್ಲಿ ಕಾಣುವಂತಹ ವಿಷಯ ಶರಣರ ಸ್ತುತಿ, ಪ್ರಶಂಸೆ. ಬೇರೆ ಬೇರೆ ಪ್ರಸಂಗಗಳಲ್ಲಿ ಶರಣರನ್ನು ಪರೀಕ್ಷೆಗೆ ಒಳಪಡಿಸಿ, ಅವರ ಘನತೆಯನ್ನು ಎತ್ತಿ ತೋರಿ ಮುಕ್ತವಾಗಿ ಮೆಚ್ಚಿಕೊಳ್ಳುವುದು ಅಲ್ಲಮರ ವಿಶೇಷ ವ್ಯಕ್ತಿತ್ವ. ಶೂನ್ಯ ಸಂಪಾದನೆಯೊಳಗೆ ಮುಖ್ಯವಾಗಿ ಮರುಳು ಶಂಕರದೇವರ ಸಂಪಾದನೆಯಲ್ಲಿ ಒಂದು ಘಟನೆ ಬರುತ್ತದೆ. ಅದೇ ರೀತಿ ಘಟ್ಟಿವಾಳಯ್ಯನ ಸಂಪಾದನೆಯಲ್ಲಿ ಇನ್ನೊಂದು ಘಟನೆ ಬರುತ್ತದೆ. ಬಸವಣ್ಣನವರ ಐಕ್ಯ ಸ್ಥಿತಿ ಏನೆಂಬುದನ್ನ ವರ್ಣನೆ ಮಾಡುವಂತಹ ಸ್ವರವಚನವೂ ಇದೆ. ಇಲ್ಲೇ ಉಳಿದ 3-4 ವಚನಗಳಲ್ಲಿ ಶರಣ ಮರುಳ ಶಂಕರದೇವ ಮತ್ತು ಘಟ್ಟಿವಾಳಯ್ಯನವರನ್ನು ಮೆಚ್ಚಿ ಮಾತನಾಡಿದ ಸಂದರ್ಭ ಬರುತ್ತದೆ. ಒಟ್ಟಿನಲ್ಲಿ ಪ್ರಭುದೇವರ ಸ್ವರವಚನಗಳ ವಸ್ತು ಅಂದರೆ, ಅದು ಷಟ್‍ಸ್ಥಲವೂ ಹೌದು, ಅದು ನೂರೊಂದು ಸ್ಥಲವೂ ಹೌದು, ಅದು ಸೂಕ್ಷ್ಮಮಿಶ್ರಸ್ಥಲವೂ ಹೌದು. ಆಮೇಲೆ ಶಿವಯೋಗಕ್ಕೆ ಸಂಬಂಧಿಸಿದ್ದೂ ಹೌದು. 216 ಸ್ಥಲಕ್ಕೆ ಸಂಬಂಧಿಸಿದ್ದು ಹೌದು. ಇದರಿಂದ ಹೆಚ್ಚಿನ ಮಟ್ಟಿಗೆ ಸ್ವರವಚನಗಳ ವಸ್ತು ತಾತ್ವಿಕವಾದದ್ದು ಎಂದು ನಾವು ತಿಳಿಯಬಹುದು. ವಚನದೊಳಗೆ ಬೇರೆ ಬೇರೆ ರೀತಿಯ ಭಾವಗಳನ್ನ ಕಾಣುತ್ತೇವೆ. ಅಲ್ಲಿ ಅಂತರಂಗ ನಿರೀಕ್ಷಣೆ, ಸಮಾಜ ವಿಮರ್ಶೆ ಮೊದಲಾದ ಅನೇಕ ಅಂಶಗಳು ಇರುತ್ತವೆ. ಆದರೆ ಸ್ವರ ವಚನಗಳಲ್ಲಿ ಒಟ್ಟಿಗೆ ಕಾಣಿಸುವುದು ತಾತ್ವಿಕ ವಿವೇಚನೆ ಮಾತ್ರ. ಅಂತರಂಗ ನಿರೀಕ್ಷಣೆ, ಸಮಾಜ ವಿಮರ್ಶೆಗೆ ಇಲ್ಲಿ ಹೆಚ್ಚು ಗಮನಕೊಟ್ಟಿರುವುದಿಲ್ಲ.

ಪ್ರಭುದೇವರ ಸ್ವರ ವಚನಗಳ ತಾತ್ವಿಕ ಸಂಗತಿಗಳನ್ನು ಒಟ್ಟಾರೆಯಾಗಿ ನೋಡುವುದಾದರೆ, ಅದರಲ್ಲಿ ಕಂಡುಬರುವ ಮುಖ್ಯ ಅಂಶಗಳು ಹೀಗಿವೆ- ಪಿಂಡ, ಪಿಂಡಜ್ಞಾನದ ಸ್ವರೂಪ, ಸೃಷ್ಟಿಯ ವಿಕಾಸ, ವಾಗದ್ವೈತ ನಿರಸನ, ಭಕ್ತಿಯಿಂದ ಹಿಡಿದು ಐಕ್ಯದವರೆಗೆ ಷಟ್‍ಸ್ಥಲಗಳ ವಿಕಾಸ, ಮಿಶ್ರಷಟ್‍ಸ್ಥಲಗಳ ಸೂಕ್ಷ್ಮ ವಿವೇಚನೆ, ಷಟ್‍ಸ್ಥಲಗಳಿಗೆ ಸಂಬಂಧಿಸಿದ ಷಡ್ವಿಧ ಭಕ್ತಿ, ಜ್ಞಾನ- ಕ್ರಿಯೆಗಳ ರೂಪ, ಜ್ಞಾನಾಗಮ, ಜ್ಞಾನ ನಿಷ್ಪತ್ತಿ, ಜ್ಞಾನ ಶೂನ್ಯಸ್ಥಿತಿಯ ರೀತಿ, ಅಕಾಯ- ಸಕಾಯ, ಅಂಗ- ಲಿಂಗ, ದೇಹ -ನಿರ್ದೇಹ, ಅಂತರಂಗ -ಬಹಿರಂಗ ಶುದ್ಧಿ, ಶರಣನ ನಿಲುವು, ಭವಿ ಭಕ್ತನ ಲಕ್ಷಣ, ಲಿಂಗೈಕ್ಯ ಸಮರಸಭಾವ, ಐಕ್ಯನ ಪರಿಪೂರ್ಣತೆ. ಹೀಗೆ ಮಹಾಲಿಂಗ ನಿರಾಕಾರದಿಂದ ಆಕಾರಕ್ಕೆ ಬಂದು, ಮತ್ತೆ ನಿರಾಕಾರದಲ್ಲಿ ಒಂದಾಗುವ ಕುರಿತ ವಿವರಗಳನ್ನೆಲ್ಲ ಈ ಸ್ವರವಚನಗಳಲ್ಲಿ ಕಾಣಬಹುದು. ಕೆಲವು ಉದಾಹರಣೆಗಳ ಮೂಲಕ ಪ್ರಭುದೇವರ ಸ್ವರವಚನಗಳ ಸ್ವರೂಪವನ್ನು ನೋಡಬಹುದು. ಶರಣರ ನಿಲುವನ್ನು ಕುರಿತು ಹೇಳುವ ಸ್ವರವಚನ ಶರಣನ ನಿಲುವು ಹೇಗಿರುತ್ತದೆ, ಶರಣ ಎಂದರೆ ಯಾರು? ಶರಣನ ವ್ಯಕ್ತಿತ್ವ ಎಂತಹದ್ದು ಎನ್ನುವುದನ್ನು ಸೊಗಸಾಗಿ ತೋರಿಸುತ್ತದೆ:

ಶರಣ ಕರ್ಮಕಾಯನೂ ಅಲ್ಲ,
ಬ್ರಹ್ಮ ಮೂರುತಿಯಲ್ಲ,
ಪರಜನ್ಮವ ನುಡಿವಲ್ಲಿ ತಾನಿಲ್ಲದ ನಿರ್ಮೋಹಿ
ಈ ನಿರ್ಮೋಹಿ ಆದಂತಹವನು ಶರಣ.
ಆತ ಅವಿರಳ ಲಿಂಗದ ಕಳೆಯ ಬೆಳಕು.
ಭವದ ಕುಳವನು ಏರಿದ ನಿಭ್ರಾಂತ,
ಸ್ವಯಂ ಸುಖವನೊಂದು ಮಾಡಿ ತ್ರಿಬಂಧನೇರಿದ ನಿಷ್ಕಾಮಿ.
ಈ ಗುಹೇಶ್ವರನೆಂಬ ಲಿಂಗದ ಹಂಗಳಿದವನು.

ಅಲ್ಲಮರು, ‘ಲಿಂಗದ ಹಂಗನ್ನು ಅಳಿದವನು ಶರಣ’ ಎಂದು ಹೇಳುವ ಮಾತನ್ನು ಗಮನಿಸಿ. ನಿತ್ಯನಿರಂಜನ, ನಿತ್ಯಮುಕ್ತ, ಅಗಮ್ಯ, ಅಪ್ರತಿಮ, ಷಡುವರ್ಣರಹಿತ ಇನ್ನೂ ಅನೇಕ ರೀತಿಯಲ್ಲಿ ಶರಣನ ಲಕ್ಷಣಗಳನ್ನು ಸ್ವರವಚನಗಳಲ್ಲಿ ಹೇಳುತ್ತಾರೆ.
ಮಿಶ್ರಷಟ್‍ಸ್ಥಲ ಎಂದರೆ ಒಂದೇ ಸ್ಥಲದೊಳಗೆ ಎಲ್ಲ ಸ್ಥಲಗಳ ಒಂದು ಭಾವ ಪ್ರಕಟವಾಗುತ್ತದೆ. ಅದಕ್ಕೊಂದು ಉದಾಹರಣೆ ‘ಶರಣನೊಳಗಣ ಭಕ್ತನ ಲಕ್ಷಣ’ ಅಂದರೆ ಶರಣಸ್ಥಲದೊಳಗೆ ಭಕ್ತನ ಲಕ್ಷಣ ಹೇಗಿರುತ್ತದೆ ಎಂಬುದು. ಹುಸಿ, ಕುಟಿಲ, ಕುಹಕ, ಕ್ರೋಧ, ಆಸೆ, ಆಮಿಷ, ತಾಮಸ, ವಿಷಯಂಗಳು ಅಳಿದು, ಸದ್ಗುಣ, ವಿನಯ, ಸಮತೆ ನೆಲೆಗೊಂಡಿರುವುದು ನಿಃಕಳಂಕದ ನಿಜ ನಿಲುವು. ಲಿಂಗಾನುಭಾವದೊಳು ನೈತಿಕವಾದ ಬದುಕು ಉಳ್ಳಂತಹವನೇ ನಿಜವಾದ ಭಕ್ತ. ಅವನೇ ಶರಣನೊಳಗಣ ಭಕ್ತ.
ಕೇವಲ ಮಾತನಾಡುವ ಜನರ ಕುರಿತಾಗಿ, ಅಂದರೆ ಮಾತಿನ ಚಪಲಿಗರನ್ನು ವಿಡಂಬಿಸಿದ್ದಾರೆ ಅಲ್ಲಮರು. ಬರೀ ಮಾತಿನ ಮಲ್ಲರು ಹೇಗಿರುತ್ತಾರೆಂದರೆ, ಪ್ರಭುದೇವರು ಹೇಳುತ್ತಾರೆ:

ಆಶೆಯಾಮಿಷ ಮನದಲ್ಲಿ
ಭಾಷೆ ಪಲ್ಲಟ ನುಡಿಯಲ್ಲಿ
ಕ್ಲೇಷ ಕೋಪ, ವಿಷಯಂಗಳು ಹಿಂಗದಿರೆ
ಈಶ್ವರನ ಪೂಜಿಸುವುದೆಂತು

ಸತ್ಯಶುದ್ದವುಳ್ಳ ದೇವರ ಬಿಟ್ಟು,
ಮಿಥ್ಯ ದೇವತೆಗಳ ನೆರೆ ನಂಬಿ
ಸತ್ತು ಹೋದರು, ನಿತ್ಯವನರಿಯದೆ
ಕರ್ತೃ ಗುಹೇಶ್ವರನ ಅವರೆತ್ತ ಬಲ್ಲರು?

ಅಂದರೆ ಗುರುಕೊಟ್ಟ ಇಷ್ಟಲಿಂಗವನ್ನು ಬಿಟ್ಟು, ಸ್ಥಾವರ ಲಿಂಗಕ್ಕೆ ಮೊರೆ ಹೋದ ಜನ ಹೇಗೆ ತಮ್ಮ ಬದುಕನ್ನು ಹಾಳು ಮಾಡಿಕೊಂಡರು ಎಂಬುದನ್ನು ಸೂಚ್ಯವಾಗಿ ಹೇಳುತ್ತಾರೆ. ಮಿಥ್ಯವಾದಿಗಳಿಗೆ ಗೋಚರಿಸದಂತಹ ಪ್ರಾಣಲಿಂಗದ ಸ್ವರೂಪ ಹೇಗಿರುತ್ತದೆ ಎಂಬುದನ್ನು ಈ ನುಡಿಯಲ್ಲಿ ತೋರಿಸುತ್ತಾರೆ.

ಇನ್ನೊಂದು ಸ್ವರವಚನದ ಒಂದು ನುಡಿಯೊಳಗೆ ಪ್ರಾಣಲಿಂಗ ಹೇಗಿರುತ್ತದೆ ಎಂದು ಹೀಗೆ ಹೇಳುತ್ತಾರೆ: ‘ಕತ್ತಲೆಯೊಳು ಜ್ಯೋತಿಯಡಗಿದಂತಿರ್ದು’ ಹೇಗೆ ಕತ್ತಲೆಯೊಳಗೆ ಬೆಳಕು ಕಣ್ಣಿಗೆ ಕಾಣಿಸದೇ ಇರುವುದೋ ಹಾಗೆ. ‘ಮುತ್ತಿನೊಳಗೆ ಉದಕದಂತಿರ್ದುದು’ ಮುತ್ತಿನೊಳಗೆ ನೀರಿದೆ ಆದರೆ ಕಾಣಿಸುವುದಿಲ್ಲ, ಹಾಗೆ. ಬಿತ್ತಿಯ ಮೇಲೆ ಬರೆಯದ ಮುನ್ನಿನ ಚಿತ್ರದ ಪರಿಯಂತೆ… ಶರಣನ ಪ್ರಾಣಲಿಂಗಿಯ ಸ್ವರೂಪ ಮಿಥ್ಯವಾದಿಗಳ ಕಣ್ಣಿಗೆ ಕಾಣಿಸುವುದಿಲ್ಲ ಎನ್ನುವುದನ್ನು ಈ ಸ್ವರವಚನದೊಳಗೆ ಹೇಳುತ್ತಾರೆ.
ಇನ್ನು ಭವಿ ಯಾರು? ಭಕ್ತ ಯಾರು? ಎನ್ನುವ ಸಾಕಷ್ಟು ವಿಚಾರಗಳು ವಚನಗಳಲ್ಲಿ ಬರುತ್ತವೆ. ಇಲ್ಲಿ ಪ್ರಭುದೇವರು ಈ ಸ್ವರವಚನದೊಳಗೆ ಭವಿ-ಭಕ್ತರ ಲಕ್ಷಣವನ್ನು ಹೀಗೆ ಕಾಣಿಸುತ್ತಾರೆ-

ಭವಿಗಳ ಭಕ್ತರ ರೀತಿ ನೀತಿ
ರಾಗ: ಶುದ್ಧಕಾಂಬೋಧಿ

ಭವಿಗಳ ಭಕ್ತರ ರೀತಿಯ ನೀತಿಯ
ವಿವರಿಸಿ ಹೇಳುವೆನೆಲ್ಲರಿಗೆ

ತರ್ಕಿಸಿ ಬೀಳುವ ಬಿಂದುವ ಯೋನಿಗೆ
ಇಕ್ಕುವ ದುರ್ಮುಖಿ ತಾನೆ ಭವಿ
ಹೊಕ್ಕು ಸುಷುಮ್ನೆಯ ಮೇಲಕೆ ಬಿಂದುವ
ಸಿಕ್ಕಿಸುವಾತನು ಶಿವಭಕ್ತ.

ಅದುಬೇಕಿದುಬೇಕೆನುತಲಿ ಮನದಲಿ
ಕುದಿದು ಬೇವಾತನು ತಾನೆ ಭವಿ
ಹೃದಯದೊಳೊಂದನು ನೆನೆಯದೆ ನಿಶ್ಚಿಂತ
ಪದುಳದೊಳಿರ್ಪನು ಶಿವಭಕ್ತ.

ಕಾಯ ಕರಣಗಳಿಗಾಳಾಗಿಯೆ ಮನ
ಸಾಯಸಗೊಳುತಿಹ ತಾನೆ ಭವಿ
ಆಯತವರಿತಂಗ ಕರಣಾದಿಗಳಿಗೆ
ನಾಯಕನಾಗಿಹ ಶಿವಭಕ್ತ.

ಅಂಗದೊಳಗೆ ಮದ ಅರ್ಥದೊಳಗೆ ಮೋಹ
ನಂಗಳ ಮಾಡುವ ತಾನೆ ಭವಿ
ಹಿಂಗದ ಗುರುಲಿಂಗ ಜಂಗಮ ತ್ರಿವಿಧಕ್ಕೆ
ಅಂಗವಿಸುವಾತನು ಶಿವಭಕ್ತ.

ಜೀವನ ಪರಮನ ಯೋಗವರಿಯದ
ಸಾರಿಗೆ ಸಂದೇಹಿ ತಾನೆ ಭವಿ
ದೇವರ ದೇವ ಗೊಹೇಶ್ವರಲಿಂಗದಲ್ಲಿ
ಸಾವಿಲ್ಲದಿರುತಿಹ ಶಿವಭಕ್ತ.

‘ಅದೂ ಬೇಕು, ಇದು ಬೇಕೆನುತಲಿ, ಮನದಲಿ ಕುದಿದು ಬೇವಾತನು ತಾನೇ ಭವಿ’ ಎಲ್ಲ ತನಗೇ ಬೇಕು ಎನ್ನುವಂತಹವನು ಆಸೆಬುರುಕ ವ್ಯಕ್ತಿ ಅಥವಾ ಭವಿ. ‘ಅದೂ ಬೇಕು ಇದೂ ಬೇಕು ಎಂದು ಮನದಲಿಕುದಿದು ಬೇವಾತನು ತಾನೇ ಭವಿ ಹೃದಯದೊಳೊಂದನು ನೆನೆಯದೇ ನಿಶ್ಚಿಂತಪದದೊಳಿರ್ಪನು ನಿಜಭಕ್ತ’ ಏನನ್ನು ಬಯಸದೇ ಇರುವವನೇ ನಿಜಭಕ್ತ. ಕಾಯಕರಣಗಳಿಗೆ ಈಡಾಗಿ, ಆಳಾಗಿ ಬದುಕುತ್ತಿರುವನೆ ಭವಿ. ‘ಆಯಾಸ, ಆಯಾತವರಿತು ಅಂಗ ಕರಣಾದಿಗಳಿಗೆ ನಾಯಕನಾಗಿರುವವನೇ ಭಕ್ತ’, ಹೀಗೆ ಭವಿ- ಭಕ್ತರ ನಡುವಣ ವ್ಯತ್ಯಾಸಗಳನ್ನು ಹೇಳುತ್ತಾ ಹೋಗುತ್ತಾರೆ.

ಇನ್ನೊಂದು ಸ್ವರ ವಚನದೊಳಗೆ ಶಿವ ಹೇಗೆ ಇರುತ್ತಾನೆಂದರೆ, ಯಾರು ಭಾಷೆಗೆ ತಪ್ಪದೆ ಜಂಗಮ ದಾಸೋಹ ಮಾಡುತ್ತಾರೋ ಅವರಲ್ಲಿ ಶಿವ ಇರುತ್ತಾನೆ. ಯಾರು ಲೇಸನ್ನು ಬಯಸುತ್ತಾರೋ ಅವರಲ್ಲಿ ಶಿವನು ಇರುತ್ತಾನೆ. ‘ನಿಜವುಳ್ಳವಹರಲ್ಲಿ ಇಹ, ನಿಷ್ಠಾಪರರೊಳಿಹ, ಭಜಕರೊಳಿಹ, ಭಕ್ತರೊಳಿಹ’, ನಿಷ್ಠಾವಂತರಲ್ಲಿ ನಿಜಭಕ್ತರಲ್ಲಿ ಇರುತ್ತಾನೆ. ಆದರೆ ರೋಷಕ್ಕಂಜದ ದುವ್ರ್ಯಸನಿಗಳಲ್ಲಿ ಇರುವುದಿಲ್ಲ. ಕುಜನರಲ್ಲಿ ಕೊಟ್ಟು ತೆಗೆಯುವರಲ್ಲಿ, ಗರ್ವಿತರಲ್ಲಿ ಇರುವುದಿಲ್ಲ. ಶಿವಯೋಗ ಪ್ರದೀಪಿಕೆಯೊಳಗೆ ಅಲ್ಲಮರು ಎಲ್ಲವನ್ನು ಬೆಡಗಿನ ರೂಪದಲ್ಲಿ ಹೇಳಿದ್ದಾರೆ.

ಬೆಡಗಿನ ವಚನದ ಮಾದರಿಯನ್ನು ಹೋಲುವ ಒಂದು ಸ್ವರ ವಚನವನ್ನು ಕಾಲ ಚಕ್ರದ ಬಗ್ಗೆ ಪ್ರಭುದೇವರು ಬರೆಯುತ್ತಾರೆ:
ಭಾಗ ಕರಿದು ಭಾಗ ಬಿಳಿದು

ಏ ಏ ಗರುಡ!
ಒಂದು ಕೊಂಬಿನ ಮೇಲೆ ಎರಡು ಪಕ್ಷಿ ಗೂಡನಿಕ್ಕಿ
ಒಂದಿಳಿದಡೆ ಮತ್ತೊಂದಿಳಿಯದು ನೋಡಾ!

ತಲೆಗಳು ನಾಲ್ಕು, ಕಾಲುಗಳು ಹನ್ನೆರಡು,
ಪಕ್ಕವಾರು ಗರಿ ಮುನ್ನೂರರವತ್ತು
ಇದರ ಭೇದವ ನಮ್ಮ ಗುಹೇಶ್ವರನೇ ಬಲ್ಲ
ಜಡಜೀವಿಗಳಿಗಿದು ತಿಳಿಯದು ನೋಡಾ.

‘ಭಾಗ ಕರಿದು ಭಾಗ ಬಿಳಿದು’ ಈ ಲೋಕ ಎಂಬುದು ಒಂದು ಭಾಗ ಕಪ್ಪಿದೆ ಇನ್ನೊಂದು ಭಾಗ ಬಿಳಿ ಇದೆ. ಇಲ್ಲಿ ಕಪ್ಪು ಕೃಷ್ಣ ಪಕ್ಷ ನಮ್ಮವರು ಕಲ್ಪಿಸಿದ್ದು. ಇನ್ನೊಂದು ಶುಕ್ಲ ಪಕ್ಷ. ಗರುಡ ಎಂದರೆ ಕಾಲ, ಕಾಲನೆಂಬ ಪಕ್ಷಿ ಇದೆ. ಆ ಪಕ್ಷಿಗೆ ಒಂದು ಕರಿ, ಇನ್ನೊಂದು ಬಿಳಿ ರೆಕ್ಕೆಗಳಿವೆ. ಇಲ್ಲಿ ಕೊಂಬು ಎಂದರೆ ಶಿಖರ. ಮೇರು ಶಿಖರದ ಮೇಲಿಂದಲೇ ಸೂರ್ಯ, ಚಂದ್ರರು ಮೂಡುತ್ತಾರೆ. ಸೂರ್ಯ- ಚಂದ್ರ ಎನ್ನುವಂತ ಎರಡು ಪಕ್ಷಿಗಳು ಆ ಗೂಡಿನಿಂದಲೇ ಹೊರಗೆ ಬರುತ್ತವೆ. ಒಂದು ಬಂದಾಗ ಇನ್ನೊಂದು ಬರುವುದಿಲ್ಲ. ಅದನ್ನೆ ‘ಒಂದಿಳಿದಡೆ ಮತ್ತೊಂದಿಳಿಯದು’ ಎಂದಿದ್ದಾರೆ. ಮುಂದೆ ಈ ಕಾಲಚಕ್ರವನ್ನು ನಾವು ಹೇಗೆ ವಿಭಜಿಸಿದ್ದೇವೆ ಎನ್ನುವುದನ್ನು ಕುರಿತು ಹೇಳುತ್ತಾರೆ. ತಲೆಗಳು ನಾಲ್ಕು, ಇಲ್ಲಿ ತಲೆ ಎಂದರೆ ಜಾವ. ಒಂದು ಹಗಲನ್ನು ನಾವು ಮೂರು-ಮೂರು ತಾಸಿಗೆ ವಿಭಾಗಿಸಿದ್ದೇವೆ. 4*3-12, ಕಾಲವನ್ನ 4 ಭಾಗಮಾಡಿರುತ್ತೇವೆ. ತಲೆಗಳು 4, ಕಾಲುಗಳು 12, ಅಂದರೆ ಒಂದು ವರ್ಷಕ್ಕೆ 12 ತಿಂಗಳು. ಪಕ್ಕವಾರು ಅಂದರೆ ಆರು ಪಕ್ಷಗಳು, 360 ದಿನಗಳು… ಹೀಗೆ ಕಾಲದ ಸ್ವರೂಪವನ್ನು ಹೇಳುತ್ತಾ ಇದರ ಬೇಧವ ನಮ್ಮ ಗುಹೇಶ್ವರನೇ ಬಲ್ಲ, ಜಡ ಜೀವಿಗಳಿಗಿದು ತಿಳಿಯದು ನೋಡಾ ಎನ್ನುತ್ತಾರೆ. ಇದು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಇದು ಶರಣನಿಗೆ ಮಾತ್ರ ಅರ್ಥವಾಗುತ್ತದೆ, ಅಂದರೆ ಶರಣನು ಈ ಕಾಲವನ್ನು ಮೀರಿ ನಡೆಯುವವನು, ಆತನಿಗೆ ಕಾಲದ ಬಾಧೆಗಳಿಲ್ಲಾ. ಶರಣರ ಕಾಲಾತೀತ ನಿಲುವನ್ನ ಸಂಕೇತದ ಮೂಲಕ ತಿಳಿಸಿದ್ದಾರೆ.

ಪ್ರಭುದೇವರ ಎಲ್ಲಾ ಸ್ವರವಚನದೊಳಗೆ ಹೀಗೆ ತಾತ್ವಿಕವಾದ ವಿಚಾರಗಳು ವಿಫುಲವಾಗಿ ಕಂಡುಬರುತ್ತವೆ. ಮೊದಲೇ ಹೇಳಿದ ಹಾಗೆ ಇಲ್ಲಿ ಸಾಮಾಜಿಕ ಸಂಗತಿಗಳಾಗಲಿ, ಸಾಮಾಜಿಕ ವಿಮರ್ಶೆಯಾಗಲಿ ಅಷ್ಟಾಗಿ ಕಾಣಿಸುವುದಿಲ್ಲ. ಸಾಹಿತ್ಯಿಕ ಅಂಶಗಳನ್ನು ಗುರುತಿಸಬಹುದು. ಸತಿ- ಪತಿ ಭಾವ ವಚನಗಳಲ್ಲಿ ಮಧುರವಾದ ಭಾವ, ಭಾಷೆ, ದೃಷ್ಟಾಂತ, ಪ್ರತಿಮೆಗಳು… ಈ ಎಲ್ಲವೂ ಸಾಹಿತ್ಯದ ಸೊಬಗನ್ನ ತೋರಿಸಿಕೊಡುತ್ತವೆ. ವಚನಗಳಲ್ಲಿ ಇದ್ದಂತಹ ಭಾವವನ್ನೆ ಸ್ವರವಚನದೊಳಗೆ ಶರಣರು ನಿರೂಪಿಸುವುದಕ್ಕೆ ಪ್ರಯತ್ನಿದ್ದಾರೆ. ಪ್ರಭುದೇವರು ಅದೇ ರೀತಿಯಲ್ಲಿ ಅದನ್ನು ಪರಿಪೂರ್ಣವಾಗಿ ಮಾಡಿರುವುದನ್ನು ಕಾಣಬಹುದು. ಪ್ರಭುದೇವರ ಬೆಡಗಿನ ಭಾಷೆಯ ಸ್ವರೂಪದ, ಅನುಭಾವದ ನೆಲೆಗಳು ಇಲ್ಲಿವೆ. ಆದರೆ ವಚನಗಳಷ್ಟು ನಿಚ್ಚಳವಾಗಿ ಕಾಣಿಸುವುದಿಲ್ಲ. ಏನೇ ಇರಲಿ ವಚನಗಳ ಜೊತೆಗೆ, ಸ್ವರ ವಚನಗಳನ್ನು ಬರೆಯುವ ಮೂಲಕ ಪ್ರಭುದೇವರು ಹಾಡುಗಬ್ಬ ಪರಂಪರೆಗೆ, ಹಾಡುಗಬ್ಬ ಪ್ರಕಾರಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಅವರ ಸ್ವರ ವಚನಗಳ ಅಧ್ಯಯನವೆಂದರೆ ಸೂಕ್ಷ್ಮವಾದ ಮತ್ತು ತಲಸ್ಪರ್ಶಿಯಾದಂತಹ ವ್ಯಾಪಕ ಅಧ್ಯಯನ. ಇಂತಹ ಸಂಶೋಧನೆ ನಡೆದರೆ ಪ್ರಭುದೇವರ ನಾನಾ ಸ್ವರ ವಚನಗಳ ಪ್ರಕಾರವೇನು, ಅವು ಏನನ್ನು ಹೇಳುತ್ತವೆ, ಅವುಗಳ ತತ್ವ ಶ್ರೀಮಂತಿಕೆ ಎಂತಹುದು, ಅವು ಸೂಚಿಸುವ ನಿಲುವೇನು ಎನ್ನುವುದನ್ನು ಗುರುತಿಸಲಿಕ್ಕೆ ಸಾಧ್ಯವಾಗುತ್ತದೆ. ಅದನ್ನು ಮುಂದಿನ ಪೀಳಿಗೆ ಮಾಡಬೇಕು ಎಂಬ ಸದಾಶಯ ನನ್ನದು.

Previous post ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
Next post ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು

Related Posts

ಪ್ರಭುವಿನ ಗುರು ಅನಿಮಿಷ -2
Share:
Articles

ಪ್ರಭುವಿನ ಗುರು ಅನಿಮಿಷ -2

September 14, 2024 ಮಹಾದೇವ ಹಡಪದ
ಇಲ್ಲಿಯವರೆಗೆ- (ದಂಡಿನ ಮ್ಯಾಳದ ಹುಡುಗರಿಗೆ ಯುದ್ಧ ಕೌಶಲ್ಯದ ತರಬೇತುದಾರನಾಗಿದ್ದ ತ್ರೈಲೋಕ್ಯ ಮತ್ತು ಮಹಾಲೇಖೆ ದಂಪತಿಗೆ ಸಾಧುವಿನ ಭವಿಷ್ಯವಾಣಿಯಿಂದ ಮಗು ಹುಟ್ಟುವ ಪುಣ್ಯ ಕಾಲ...
ಶರಣನಾಗುವುದು…
Share:
Articles

ಶರಣನಾಗುವುದು…

February 10, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಚಿಕ್ಕೊಪ್ಪದಲ್ಲಿ ಬಸವ ಬೆಳವಿಯ ಪ್ರವಚನಪಟು ಶ್ರೀ ಶರಣ ಬಸವ ಅಪ್ಪಗಳ ಪ್ರವಚನ. ಅದರ ಸಮಾರೋಪ ಸಮಾರಂಭಕ್ಕೆ ಅಲ್ಲಿನ ಕಾರ್ಯಕರ್ತರು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ಆಸರೆ
ಆಸರೆ
August 6, 2022
ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
February 6, 2025
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಇದ್ದಷ್ಟೇ…
ಇದ್ದಷ್ಟೇ…
January 10, 2021
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ತತ್ವಪದಕಾರರ  ಸಾಮರಸ್ಯ ಲೋಕ
ತತ್ವಪದಕಾರರ ಸಾಮರಸ್ಯ ಲೋಕ
September 6, 2023
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
Copyright © 2025 Bayalu