ಹೀಗೊಂದು ತಲಪರಿಗೆ (ಭಾಗ-4)
ಶರಣರ ಉದಾತ್ತ ಬದುಕಿನ ಘಮ ನಿಸ್ಸಂದೇಹವಾಗಿ ಅವರ ವಚನಗಳಲ್ಲಿದೆ. ಸುಮಾರು ಒಂಭತ್ತು ನೂರು ವರ್ಷಗಳೇ ಸರಿದಿದ್ದರೂ ವಚನಗಳನ್ನು ಓದುತ್ತಿದ್ದರೆ ಶರಣರು ಇಲ್ಲೇ ಇದ್ದಾರೆ ಎನ್ನುವ ಭಾವ ಮೂಡುತ್ತದೆ. ಅವರು ಎಲ್ಲೂ ತಮ್ಮ ಜೀವನದ ಚರಿತ್ರೆಯನ್ನು ಹೇಳಿಕೊಳ್ಳದಿದ್ದರೂ ಆಶ್ಚರ್ಯವೆಂದರೆ ಅವರ ವಚನಗಳೇ ಅವರ ವ್ಯಕ್ತಿಚಿತ್ರಣವನ್ನು ಕಟ್ಟಿಕೊಡುತ್ತವೆ. ಬೇರೆ ಬೇರೆ ಕಾಯಕಗಳ, ಬೇರೆ, ಬೇರೆ ಸಾಮಾಜಿಕ ಸ್ತರಗಳ, ಬೇರೆ, ಬೇರೆ ಓದಿನ ಮಟ್ಟದ ಎಲ್ಲ ಶರಣರನ್ನು ಅರಿವಿನ ಸೂತ್ರವೊಂದು ಪೋಣಿಸಿದಂತೆ ತೋರುತ್ತದೆ. ಗ್ರಂಥಗಳಲ್ಲಿ ದಾಖಲಾದ ಜ್ಞಾನಕ್ಕೆ ಆದ್ಯತೆ ನೀಡದ ವಚನಗಳನ್ನು ಅದೇ ಜ್ಞಾನದ ಮೂಲಕ ಹಿಡಿಯ ಹೋದರೆ ಎಡವಿ ಬೀಳುತ್ತೇವೆ. ಹಾಗೆ ಅಡಿಗಡಿಗೆ ಮುಗ್ಗರಿಸುತ್ತಿದ್ದ ನನ್ನನ್ನು ಸ್ಮಶಾನವಾಸಿಯ ಅಂತಃಕರಣ ಹಿಡಿದೆತ್ತಿ ನಿಲ್ಲಿಸುತ್ತಿತ್ತು. ಮೂಲ ಗ್ರಹಿಕೆಯಲ್ಲೇ ಎಲ್ಲೋ ಎಡವಟ್ಟಾಗಿದೆ ಎಂದು ನನಗೆ ಸ್ಪಷ್ಟವಾಗಿತ್ತು. ನನ್ನ ಯಾವುದೇ ಗೊಂದಲವನ್ನೂ ನಿರಾತಂಕವಾಗಿ ನಾನಿಲ್ಲಿ ಕೇಳಬಹುದು ಎನ್ನುವ ವಾತಾವರಣ ನಮ್ಮ ನಡುವೆ ಸೃಷ್ಟಿಯಾಗಿತ್ತು. ಯಾಕೆಂದರೆ ಇಲ್ಲಿ ಪ್ರಶ್ನೆಗಳಿಗೆ ಕಲಿತ ಜ್ಞಾನದ ಉತ್ತರಗಳಿರಲಿಲ್ಲ, ಬದಲಿಗೆ ಅನುಭಾವದ ಅಂತರಗಂಗೆಯೇ ಉಕ್ಕುತ್ತಿತ್ತು…
ಮಂಗಳಾ: ವಚನ ನಿಘಂಟುವಿನಲ್ಲಿ ‘ಅರಿವು’ ಶಬ್ದಕ್ಕೆ ಜ್ಞಾನ ಎಂದು ಅರ್ಥ ಸೂಚಿಸಲಾಗಿದೆ. ಆದರೆ ಶರಣರು ಅರಿವು-ಜ್ಞಾನಗಳನ್ನು ಬೇರೆಬೇರೆಯಾಗಿ ಪರಿಭಾವಿಸಿದ್ದಾರೆ ಎಂದೆನಿಸುತ್ತದೆ. ನೀವೇನು ಹೇಳುತ್ತೀರಿ?
ಸ್ಮಶಾನವಾಸಿ: ನಮ್ಮ ಭಾರತದ ಬಹು ಸಂಸ್ಕೃತಿಗಳು ರೂಪುಗೊಂಡಿದ್ದು ‘ಜ್ಞಾನ ಮೀಮಾಂಸೆ’ ಮತ್ತು ‘ಅರಿವಿನ ಮೀಮಾಂಸೆ’ಗಳ ಮಧ್ಯೆ ನಡೆದ ಹೋರಾಟ ಸಂಘರ್ಷಗಳಿಂದ ಎಂಬ ಅಂಶ ನಮ್ಮ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಹಳ ಮಹತ್ತರವಾದುದು. ಜ್ಞಾನ ಮೀಮಾಂಸೆ ನಿಘಂಟುಗಳ ಹಂಗಿನಲ್ಲಿ ಬದುಕುತ್ತದೆ. ಆದರೆ ಅರಿವಿನ ಮೀಮಾಂಸೆ ನಿಘಂಟುವಿನ ಹಂಗನ್ನು ತೊರೆದು ಅದು ಪ್ರಕ್ರಿಯಾ ಮೀಮಾಂಸೆಗೆ ತನ್ನನ್ನು ದೂಡಿಕೊಳ್ಳುತ್ತದೆ. ಹಾಗಾದರೆ ಪ್ರಕ್ರಿಯಾ ಮೀಮಾಂಸೆ ಎಂದರೇನು? ಒಬ್ಬ ವ್ಯಾಪಾರಿ ಅಥವಾ ಒಬ್ಬ ರೈತ ಅಥವಾ ಒಬ್ಬ ಕುರಿ ಕಾಯುವವ ಅಥವಾ ಅಡುಗೆ ಮಾಡುವ ಸದ್ಗೃಹಿಣಿ… ಇವರಲ್ಲಿ ಯಾರನ್ನಾದರೂ ತೆಗೆದುಕೊಳ್ಳಿ. ಇವರುಗಳು ಪ್ರತಿನಿತ್ಯ ಮಾಡುವ ಕೆಲಸಗಳಲ್ಲಿ ಪಳಗಿದಷ್ಟೂ ಅವರ ಅನುಭವವು ತಮ್ಮತಮ್ಮ ಕಾಯಕದಲ್ಲಿ ಹೆಚ್ಚು ಕುಶಾಲವಂತರನ್ನಾಗಿಸುತ್ತದೆ. ಇಷ್ಟೇ ಅಲ್ಲಾ, ಹಕ್ಕಿ ಹಾರುವುದು! ಮೀನು ಈಜುವುದು! ಒಂದು ಪ್ರಾಣಿ ತನ್ನ ಆಹಾರವನ್ನು ಗುರುತಿಸಿಕೊಳ್ಳುವುದು! ತನ್ನನ್ನು ಸಂರಕ್ಷಿಸಿಕೊಳ್ಳುವುದು! ಒಂದು ಸಣ್ಣ ಮಗು ತೆವಳುವುದರಿಂದ ಮೊದಲ್ಗೊಂಡು ಸರಾಗವಾಗಿ ನಡೆಯುವುದರವರೆಗೂ ಇರುವ ಪ್ರಕ್ರಿಯೆಗಳೆಲ್ಲಾ ಅತ್ಯಂತ ನೈಸರ್ಗಿಕವಾಗಿರುತ್ತವೆ. ಇವರಿಗೆಲ್ಲಾ ನಿಘಂಟುಗಳಿಂದ ಪ್ರಯೋಜನ ಇದೆ ಎಂದು ಹೇಳುತ್ತೀರಾ?
ಈಗ ಜ್ಞಾನ ಮೀಮಾಂಸೆಗಳ ವಿಷಯಕ್ಕೆ ಬರೋಣ… ಹಲವು ಧರ್ಮಗಳ ಮತ್ತು ದೈವಗಳ, ದೇಶ-ದೇಶಗಳ ಮಧ್ಯೆ ಇರುವ ಸರಹದ್ದುಗಳ, ಮನುಷ್ಯನ ಕಪೋಲಕಲ್ಪಿತ ನಂಬುಗೆಗಳ ಹಾಗೂ ರಾಜಕೀಯ ಸಿದ್ಧಾಂತಗಳು ರೂಪಿಸಿರುವ ಪಠ್ಯಗಳನ್ನು ಓದಿಕೊಳ್ಳುವಾಗ ಅಲ್ಲಿನ ಅಧಿಕಾರ ಸ್ವಾಯತ್ತತೆಯ ಭಾಷೆಯನ್ನು ನೀವು ಗ್ರಹಿಸಿಕೊಳ್ಳಬೇಕೆಂದರೆ ನಿಘಂಟುಗಳ ಅವಲಂಬನೆ ನಿಮಗೆ ಬೇಕಾಗುತ್ತದೆ. ಯಾಕೆಂದರೆ ಭಾಷೆಯು ಸಹ ಅಧಿಕಾರ ಶಕ್ತಿಯಾಗಿ ಬದಲಾಗಬೇಕೆಂದರೆ ಅದಕ್ಕೆ ಅದರದೇ ಆದ ಅರ್ಥಸಂಹಿತೆಯೂ ಬೇಕಾಗುತ್ತದೆ. ಇದೊಂದು ಸೃಷ್ಟಿಸಲ್ಪಟ್ಟ ಭಾಷಾ ರಾಜಕಾರಣವೂ ಆಗಿದೆ. ಆದ್ದರಿಂದ ಒಟ್ಟು ಜ್ಞಾನ ಮೀಮಾಂಸೆ ಸಿದ್ಧ ಮಾದರಿಯದು. ಅಂದ ಮೇಲೆ ನಿಘಂಟುಗಳೂ ಸಿದ್ಧ ಮಾದರಿಯವು ಎಂದು ಹೇಳಲೇ ಬೇಕಲ್ಲವೇ?
ಈಗ ನಿಮ್ಮ ಪ್ರಶ್ನೆಗೆ ಬರೋಣ… ವಚನಗಳನ್ನು ಓದುವಾಗ ಅರಿವು ಎಂಬ ಶಬ್ದಕ್ಕೆ ಜ್ಞಾನ ಎಂದು ನಿಘಂಟುವಿನಲ್ಲಿ ಸೂಚಿಸಲಾಗಿದೆ. ಇದು ಸರಿಯೇ? ವಚನಗಳಿಗೆ ಪುರೋಹಿತಶಾಹಿ ಸಿದ್ಧಾಂತಗಳ ಬಣ್ಣ ಹಚ್ಚಿ ವಚನಗಳಲ್ಲಿರುವ ಮಾನವ ಘನತೆಯನ್ನು ವಿರೂಪಗೊಳಿಸುವ ನಯವಂಚಕತನವಿದೆಂದು ಹೇಳಲೇ ಬೇಕು. ಜ್ಞಾನವೆಂಬುದು ಹಲವು ಶಾಸ್ತ್ರಗಳ ಗೂಡಿನಲ್ಲಿ ಮಾತ್ರ ಜೀವಿಸುತ್ತದೆ. ಅರಿವು ಎಂಬುದು ಜೀವವಿರುವ ಎಲ್ಲಾ ಮನುಷ್ಯರ ಹೃದಯ ತುಷ್ಠಿಯಲ್ಲಿ ಜೀವಂತವಿರುತ್ತದೆ. ಈ ನೆಲೆಯಿಂದ ವಚನಗಳನ್ನು ನೋಡುವುದಾದರೆ ಅವರು ‘ಜ್ಞಾನ’ವನ್ನು ನಿರಾಕರಿಸಿ ಅರಿವಿನಲ್ಲಿ ಜೀವಿಸಿರುವುದು ನಮಗೆ ಹೃದ್ಗೋಚರಿಸತೊಡಗುತ್ತದೆ.
ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನವೆಂಬ
ಜ್ಞಾನತ್ರಯಂಗಳೇನಾದುವು
ಕೂಡಲಸಂಗಮದೇವಾ
ನಿಮ್ಮನರಿಯದ ಜ್ಞಾನವೆಲ್ಲಾ ಅಜ್ಞಾನ.
ಶ್ವಾನ ಜ್ಞಾನ- ನಾಯಿಯಂತೆ ಸದಾ ಬೊಗಳುತ್ತಿರುವ ಜ್ಞಾನ. ಇಂತಹ ಜ್ಞಾನಿಗಳನ್ನು ನೀವೂ ಕಂಡಿರುತ್ತೀರಿ. ನಾನು ಹೇಳುತ್ತಿರುವುದು ಸತ್ಯವಾದ್ದರಿಂದ ನೀವು ನನ್ನ ಮಾತನ್ನು ಗೌರವಿಸಿ ಹಾಗೆಯೇ ನಡೆದುಕೊಳ್ಳಬೇಕೆಂದು ಇಂತಹವರು ಅನುಶಾಸನಗಳನ್ನು ಹೊರಡಿಸುತ್ತಿರುತ್ತಾರೆ. ಇತರರು ಇವರನ್ನು ನಂಬದಿದ್ದ ಪಕ್ಷದಲ್ಲಿ ಸಾಮ, ದಾನ, ಭೇದ, ದಂಡ ಇತ್ಯಾದಿ ಕಠಿಣ ಶಿಕ್ಷೆಗಳನ್ನೂ ನೀಡುತ್ತಿರುತ್ತಾರೆ. ನಾನು ಹೇಳುತ್ತಿರುವ ವಿಷಯದೊಂದಿಗೆ ನಾನು ಜೀವಿಸುತ್ತಿದ್ದೇನೆಯೋ ಇಲ್ಲವೋ ಎಂದು ಪರಾಮರ್ಶಿಸಿಕೊಳ್ಳದೇ ಕೇವಲ ಇತರರಿಗಾಗಿಯೇ ಇವರು ಹೇಳುತ್ತಿರುತ್ತಾರೆ. ಇಂತಹವರ ಒಡನಾಟ ತಂಬಾ ಕಠೋರವಾಗಿರುತ್ತದೆ. ಇವರು ಸುಳ್ಳನ್ನು ನಿಜವೆಂತಲೂ, ನಿಜವನ್ನು ಸುಳ್ಳೆಂತಲೂ ಸಮರ್ಥಿಸಿಕೊಳ್ಳುವುದರಲ್ಲಿ ನಿಸ್ಸೀಮರು. ದಯಾಪರವಾದ ಸ್ನೇಹ ಇವರೊಂದಿಗೆ ಸಾಧ್ಯವಿರುವುದಿಲ್ಲ. ಆಜ್ಞಾಧಾರಕ ಮತ್ತು ಆಜ್ಞಾಪಾಲಕ ಅಷ್ಟೇ ಅಲ್ಲಿ ಮುಖ್ಯ.
ಗಜ ಜ್ಞಾನ: ಗಜ ಎಂದರೆ ಆನೆ ಎಂದಾಗುತ್ತದೆ. ವಚನಗಳಲ್ಲಿ ಆನೆ ಅಹಂನ ರೂಪಕ. ಮನುಷ್ಯನ ಅಂತರಂಗದಾ ಗೌಪ್ಯ ಸಮಪಾತಳಿಯಲ್ಲಿರುವ ಅಹಂಕಾರ ರೂಪದಲ್ಲಿರುವ ಸ್ವಾರ್ಥಗಳು, ವಿಜೃಂಬಣೆಗಳು, ಸುಖಲೋಲುಪತೆಗಳು, ಸ್ವಹಿತಾಸಕ್ತಿಗಳು, ಶ್ರೇಷ್ಠತೆಯ ಅಮಲು-ತೆವಲುಗಳು, ನಯವಂಚಕತನಗಳು, ವಿಚಾರ ಭ್ರಷ್ಠತೆಗಳು, ದ್ವೇಷಾಸೂಯೆಯ ಸ್ವಭಾವಗಳು, ಇವುಗಳ ಕುರಿತಾಗಿಯೇ ಮಾತನಾಡುತ್ತಾ ಇವುಗಳೆಲ್ಲವನ್ನೂ ಸತ್ಯವೆಂದು ನಂಬಿ ಇವುಗಳಿಗೆ ಪ್ರತಿಕ್ರಿಯಿಸುತ್ತಾ ಗುಲಾಮನಾಗುವುದು. ಹಾಗೂ ಇತರರು ಇವುಗಳಿಗೆ ಗುಲಾಮರಾಗುವಂತೆ ಪ್ರಚೋದಿಸುವುದು.
ಕುಕ್ಕುಟ ಜ್ಞಾನ: ಕುಕ್ಕುಟ ಎಂದರೆ ಕೋಳಿ! ಅಂದರೆ ತಿಪ್ಪೆ ಕೆದಕುವ ಕೆಲಸ. ಇತರರಲ್ಲಿ ಎಷ್ಟೇ ಗುಣಗಳಿದ್ದರೂ ಅವರಲ್ಲಿರುವ ದೋಷಗಳನ್ನೇ ಪದೇ ಪದೇ ಎತ್ತಿ ತೋರಿಸಿ, ಅವರನ್ನು ಹೆಚ್ಚು ದುರ್ಬಲರನ್ನಾಗಿಸುವುದು ಇಂಥವರ ಕೆಲಸ. ಪ್ರತಿಯೊಬ್ಬರಲ್ಲೂ ಇರಬಹುದಾದ ಮಾನವ ಘನತೆಗಾಗಿ ಇಲ್ಲಿ ಯಾವ ಅವಕಾಶವೂ ಇರುವುದಿಲ್ಲ. ಬದಲಾಗಿ ಪಾಪ ಭೀತಿಯನ್ನುಂಟು ಮಾಡಿ ವಿಧಿಯನ್ನು ನಂಬಿಸಲಾಗುತ್ತದೆ. ತದನಂತರ ಕದಳೀವನ ತಂತಾನೇ ಒದಗುತ್ತದೆಯಲ್ಲವೇ?
ಬಸವಣ್ಣನವರು ಈ ವಚನದಲ್ಲಿ ಈ ಮೂರು ಜ್ಞಾನತ್ರಯಗಳನ್ನು ವಿಡಂಬಿಸಿ ಕೊನೆಯ ಸಾಲಿನಲ್ಲಿ ಹೇಳುತ್ತಾರೆ: “ಕೂಡಲ ಸಂಗಮದೇವ ನಿಮ್ಮನರಿಯದಾ ಜ್ಞಾನವೆಲ್ಲಾ ಅಜ್ಞಾನ”- ಅರಿಯುವ ಪ್ರಕ್ರಿಯೆ ಇಲ್ಲಿ ಚಾಲನೆ ಪಡೆದುಕೊಳ್ಳುತ್ತದೆ. ಹಾಗಾದರೆ ಅರಿಯುವಿಕೆ ಹೇಗೆ? ಅವರೇ ಒಂದು ವಚನದಲ್ಲಿ ಹೇಳುತ್ತಾರೆ-
ಅರಿದರಿದು ಎನಗಿಂದು ಕಣ್ಗೆ ಮಂಗಳವಾಯಿತ್ತು,
ಒಂದಹುದು ಒಂದಾಗದೆಂಬ ಭ್ರಮೆಯವನಲ್ಲ,
ಬೇಕು ಬೇಡೆಂಬ ಜಂಜಡದವನಲ್ಲ,
ಅರಿಮೆ ಎನ್ನೊಳಗೆ ಪ್ರಾದುರ್ಭವಿಸಿ ನನಗೆ ಮಂಗಳವಾಗುತ್ತಿದೆ. ಹೇಗೆಂದರೆ ನನ್ನ ಅರಿಮೆಗೆ ನಾಳೆ ಕೂಡಲಸಂಗನಲ್ಲಿ ಒಂದಾಗುತ್ತೇನೆಂಬ ಗುರಿಯಿಲ್ಲ; ಒಂದಾಗುವುದಿಲ್ಲವೆಂಬ ಭ್ರಮನಿರಸನವೂ ಇಲ್ಲ. ನನಗೆ ನನ್ನ ಕೂಡಲಸಂಗಮನಲ್ಲಿ ಸಖ್ಯ ಬೇಕು- ಬೇಡೆಂಬ ಜಂಜಾಟವೂ ಇಲ್ಲ. ಏಕೆಂದರೆ ನಾಳೆ ಎಂಬುದು ನನಗೆ ಇದೆಯೋ ಇಲ್ಲವೋ ಯಾರು ಹೇಳಬಲ್ಲರು? ಆದರೆ ಈ ಕ್ಷಣವು ನನಗಿದೆ. ಅಲ್ಲಿ ನಾನು ನಿರ್ವಹಿಸಬೇಕಾದ ಅರಿಮೆಯೊಂದಿದೆ. ಅದಾವುದು? ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಸಿಗುತ್ತದೆ-
ಹಾಳೂರೊಳಗೊಂದು ಮನೆಯ ಮಾಡಿ ಬದುಕ ಹೋದಡೆ,
ಕಾಳೋರಗ ಬಂದು ಕಡಿಯಿತ್ತು ನೋಡಾ !
ಕೇರಿ ಕೇರಿಯೊಳಗೆಲ್ಲಾ ಹರಿದಾಡುತ್ತಿದ್ದವು,
ಮಾರಿಯ ತೋರದ ಮದಗಜಂಗಳು.
ಚಿತ್ರಗುಪ್ತನ ಕೈಯ ಚಿತ್ರವ ತಿಳಿದು ನೋಡಿದಡೆ,
ಹಾಳೂರು ಹಾಳಾಯಿತ್ತು ಗುಹೇಶ್ವರಾ!
ಹಾಳೂರೊಳಗೊಂದು ಮನೆಯ ಮಾಡಿ ಬದುಕ ಹೋದಡೆ- ಎಂದಿಗೂ ಶಾಶ್ವತವಲ್ಲದಾ ಊರು, ಜ್ಞಾನತ್ರಯಗಳಿಂದಾದ ಊರು. ಇಲ್ಲಿ ಬದುಕೋಣವೆಂದರೆ ಅವುಗಳ ಫಲ ಕಾಳಿಂಗ ಸರ್ಪಕ್ಕಿಂತಲೂ ವಿಷ. ಅಂತಹ ವಿಷವನ್ನು ಹಚ್ಚಿಸಿಕೊಳ್ಳಬೇಕಾಗುತ್ತದೆ. ಇಂತಹ ವಿಷಪೂರಿತ ಹಾವುಗಳು ಕೇರಿಕೇರಿಯೆಲ್ಲಾ ಹದಿದಾಡುತ್ತಿದ್ದವು- ಅಂದರೆ ಮಾನಸ ಸಂಚಾರದ ಕೇರಿಗಳಲ್ಲಿ ವಿಷವೇ ಹರಿದಾಡುತ್ತಿದೆ.
ಚಿತ್ರಗುಪ್ತನ ಕೈಯ ಚಿತ್ರವ ತಿಳಿದು ನೋಡಿದಡೆ- ವಿಧಿಲಿಖಿತದಂತಾಗಿರುವ ಈ ನನ್ನ ಹಣೆಬರಹವನ್ನು ಯಾರು ಬರೆದಿರಬಹುದೆಂದು ಕಂಡುಹಿಡಿಯುವ ಮನೋವೈಜ್ಞಾನಿಕ ವಿವೇಕದನುಭವ ಇಲ್ಲಿ ಅಂಕುರಿಸಿಬಿಡುತ್ತದೆ. ಯಾರೋ ಹೇರಲ್ಪಟ್ಟ ಜ್ಞಾನಗಳನ್ನು ಒಪ್ಪಿ ನಡೆಯುವ ಅಜ್ಞಾನವನ್ನು ಅರಿಯುವುದು ಇಲ್ಲಿನ ವೈಶಿಷ್ಟ್ಯಪೂರ್ಣ ಪ್ರಕ್ರಿಯೆ. ಅಂದರೆ ಹೇರಲ್ಪಟ್ಟ ಜ್ಞಾನವನ್ನೇ ಪರಾಮರ್ಶೆಗೊಡ್ಡಿ ಅದರಿಂದಾದ ಅಜ್ಞಾನದಿಂದ ಹೊರಬರುವುದು ಇಲ್ಲಿನ ಅರಿವಿನ ಪ್ರಕ್ರಿಯೆ. ಈ ಪ್ರಕ್ರಿಯೆಯೇ ಪರಿಶ್ರಮ. ಇದನ್ನೇ ವಚನಗಳು ಭಕ್ತಿ ಎಂದದ್ದು. ಹೀಗೆ ಮಾಡುವುದಾದರೆ ಹಾಳೂರು ಹಾಳಾಯಿತ್ತು ಗುಹೇಶ್ವರಾ- ಮಾನಸ ಸಂಚಾರದಲ್ಲಿ ಸಂಚಲಿತವಾಗಿರುವ ಜ್ಞಾನ* ಅಜ್ಞಾನಗಳ ಮೋಸವನ್ನು ತಿಳಿದು ನೋಡಿದ ತಕ್ಷಣ ಈಗಾಗಲೇ ಇಲ್ಲೇ ಮನಸ್ಸೆಂಬ ಹಾಳೂರು ಹಾಳಾಗಿತ್ತು.
ಆದ್ದರಿಂದಲೇ ಬಸವಣ್ಣನವರು ಅನುಭವ ಮಂಟಪದ ಶರಣರನ್ನೆಲ್ಲಾ ಅರಿವಿಗರೆಂದು ಕೊಂಡಾಡಿದರು.
ಅರಿವನ್ನಕ್ಕರ ಅರ್ಚಿಸಿದೆ ಅರಿವನ್ನಕ್ಕರ ಪೂಜಿಸಿದೆ,
ಅರಿವನ್ನಕ್ಕರ ಹಾಡಿ ಹೊಗಳಿದೆ.
ಅರಿವುಗೆಟ್ಟು ಮರಹು ನಷ್ಟವಾಗಿ,
ಭಾವ ನಿರ್ಭಾವವಾಗಿ ನಿಜವೊಳಕೊಂಡಿತ್ತಾಗಿ,
ಕೂಡಲಸಂಗಯ್ಯನಲ್ಲಿ
ಸರ್ವನಿವಾಸಿಯಾಗಿರ್ದೆನು.
ಅರಿವು ಮತ್ತು ಜ್ಞಾನಗಳು ಬೇರೆ ಬೇರೆ ಎಂದಾಗ ನಿಮಗೆ ಸ್ವಲ್ಪ ಕನಫ್ಯೂಸ್ ಆಗಬಹುದು. ಎಡಬಿಡದೆ ಪ್ರತಿಕ್ಷಣವೂ ಪ್ರವಾಹದೋಪಾದಿಯಲ್ಲಿ ಪ್ರವಹಿಸುತ್ತಿರುವ ಮನಸ್ಸಿನಲ್ಲಿ ಜ್ಞಾನ ಯಾವುದು? ಅರಿವು ಯಾವುದು ಎಂಬ ಸಂಕಟ ಎದುರಾಗಬಹುದು.
ಮನಸ್ಸಿನ ಹೊರಪದರದಲ್ಲಿ ಜ್ಞಾನಗಳು ಮನೆಮಾಡಿಕೊಂಡಿರುತ್ತವೆ. ತೂಕವಿಲ್ಲದಾ ವಸ್ತುಗಳು ನೀರಿನಲ್ಲಿ ತೇಲುತ್ತಿರುವ ರೀತಿಯಲ್ಲಿ ಇವು ಇರುತ್ತವೆ. ಜ್ಞಾನಗಳು ಅನುಕರಣೆಯಿಂದ ನಮ್ಮೊಳಗೆ ಪ್ರವೇಶ ಪಡೆದುಕೊಂಡಿರುತ್ತವೆ ಹಾಗೂ ಇವು ನಿಸರ್ಗ ತತ್ವಕ್ಕೆ ವಿರೋಧಿಯಾಗಿರುತ್ತವೆ. ಎಲ್ಲಾ ಜ್ಞಾನಗಳೂ ಪೂರ್ವಾರ್ಜಿತವಾದವುಗಳು, fake knowledge ಸಹ ಆಗಿರುತ್ತವೆ. ಇಂತಹ ಜ್ಞಾನಗಳ ಮುಖ್ಯಲಕ್ಷಣವೇನೆಂದರೆ… ಅವು ಕಾಲದೊಂದಿಗೆ ಎಂದೆಂದಿಗೂ ಬದಲಾಗುವುದಿಲ್ಲ. ನಮ್ಮ ಮತ, ಜಾತಿ, ಧರ್ಮ, ಸ್ವಯಂಸಿದ್ಧ ಆಧ್ಯಾತ್ಮಗಳು, ಸ್ವಯಂ ಕೇಂದ್ರಿತ ಹಿತಾಸಕ್ತಿಗಳು, ವ್ಯಕ್ತಿ ಕೇಂದ್ರಿತ ಅಭಿಪ್ರಾಯ ಮತ್ತು ಆದರ್ಶಗಳ, ಇಷ್ಟನಿಷ್ಟಗಳು, ಪ್ರೀತಿಪಾತ್ರರು, ನಮ್ಮ ಶತೃಗಳು ಇವುಗಳ ಸುತ್ತ ಜ್ಞಾನಗಳು ಸುತ್ತು ಹಾಕುತ್ತಿರುತ್ತವೆ. ಆದ್ದರಿಂದಲೇ ಜ್ಞಾನವನ್ನು ಹೇರಲ್ಪಟ್ಟ ಜ್ಞಾನ ಎನ್ನುತ್ತೇವೆ.
ಜಲಾಲುದ್ದೀನ್ ರೂಮಿ ಒಂದು ಕಡೆ ಹೇಳುತ್ತಾನೆ- “ಪದಗಳನ್ನೇ ಬಳಸದಾ ಧ್ವನಿಯೊಂದು ಇರುತ್ತದೆ, ಸಾಧ್ಯವಾದರೆ ಕೇಳಿಸಿಕೊಳ್ಳಿ” ಎಂದು. “ಅರಿವುಗೆಟ್ಟ ಮರಹು ನಷ್ಠವಾಗಿ ಭಾವ ನಿರ್ಭಾವವಾಗಿ ನಿಜವೊಳಗೊಂಡಿತ್ತಾಗಿ ಕೂಡಲಸಂಗಯ್ಯನಲ್ಲಿ ಸರ್ವ ನಿವಾಸಿಯಾಗಿರ್ದೆನು”- ಎಂಬ ಸಾಲು ಇದನ್ನೇ ಹೇಳುತ್ತದೆ. ಎಲ್ಲಾ ಜ್ಞಾನಗಳು ಮುಖ್ಯವಾಗಿ ಬಂದು ಹೋಗುತ್ತಿರುತ್ತವೆ. ಯಾವುದೇ ಒಂದು ನಿರ್ದಿಷ್ಟ ಜ್ಞಾನದಲ್ಲೇ ನಾವು ಇದ್ದು ಬಿಡಲು ಸಾಧ್ಯವಿಲ್ಲ. ಒಂದರ ನಂತರ ಮತ್ತೊಂದು ಸಾಗರದ ಅಲೆಗಳಂತೆ ಬಂದು ಹೋಗುತ್ತಿರುತ್ತವೆ. ಒಂದು ಕ್ಷಣವಿದ್ದ ಜ್ಞಾನ ಮತ್ತೊಂದು ಕ್ಷಣದಲ್ಲಿ ‘ಮರೆವೆ’ಯಾಗಿರುತ್ತದೆ. ಆದಾಗ್ಯೂ ಎಲ್ಲಾ ಜ್ಞಾನಗಳ ಫಲ emotionals ಮತ್ತು ಅನುಚಿತವಾದ ನಂಬುಗೆಗಳನ್ನು ಸೃಷ್ಟಿಸಿ ಬದುಕಿನ ಕುರಿತ ಪರಮಾರ್ಥವನ್ನು ತಿಳಿಯದಂತೆ ಮಾಡುತ್ತಿರುತ್ತವೆ. ಪರಮಾರ್ಥದ ನಿಜವು ಪದಗಳಿಲ್ಲದಾ ಅಥವಾ ಸ್ವಗತವಿಲ್ಲದ ಧ್ವನಿ! ಭಾಷೆಯ ನುಡಿಗೆ ದೊರಕದಾ ಸತ್ವ, ಬಸವಣ್ಣನವರ ಕೂಡಲಸಂಗಮದೇವಾ. ಅಂತಹದ್ದೊಂದು ತನ್ನೊಳಗೆ ಅಡಗಿ ಸರ್ವಾಂಗದೊಳಗೂ ಆವರಿಸಿಕೊಂಡಿರುವ ಪ್ರಾಣಲಿಂಗಶಕ್ತಿಯನ್ನು ನುಡಿಯಲ್ಲಿ ಹೇಳಲು ಸಾಧ್ಯವಾಗದೇ ಅಲ್ಲವರೂ ಒದ್ದಾಡಿದ್ದುಂಟು!!
ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ,
ಪ್ರಾಣವ ಬರೆಯಬಹುದೆ ಅಯ್ಯಾ?
ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ
ಮಾಡಬಹುದಲ್ಲದೆ,
ಭಕ್ತಿಯ ಮಾಡಬಹುದೆ ಅಯ್ಯಾ?
ಪ್ರಾಣವಹ ಭಕ್ತಿಯ ತನ್ಮಯ ನೀನು.
ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ.
ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ, ಪ್ರಾಣವ ಬರೆಯಬಹುದೆ ಅಯ್ಯಾ?- ಎಂತಹ ಅದ್ಭುತ ಚಿತ್ರವನ್ನಾದರೂ ಬರೆಯಬಹುದು. ಆದರೆ ಪ್ರಾಣವನ್ನು ಬರೆಯಲಾಗದು. ಅದನ್ನೊಂದು ರೂಪಕವನ್ನಾಗಿಸಲಾಗದು. ಏಕೆಂದರೆ ನಾವು ಹುಟ್ಟಿದಾರಭ್ಯದಿಂದ ಸಾಯುವ ತನಕ ನಮಗೆ ಒಂದೇ ಪ್ರಾಣ ಇರಲಾರದು. ಅದು ಸಹ ಆಗುತ್ತಾ ಕ್ಷಣ ಕ್ಷಣ ಶಕ್ತಿ ಸಂಚಯವನ್ನುಂಟು ಮಾಡುತ್ತಾ ಚಲನಶೀಲವಾಗಿರುತ್ತದೆ.
ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ, ಭಕ್ತಿಯ ಮಾಡಬಹುದೆ ಅಯ್ಯಾ?- ಆಗಮಾದಿ ಶಾಸ್ತ್ರೋಪನಿಷತ್ತುಗಳು ಹೇಳುವ ಸ್ಥಾವರ ಭಕ್ತಿ, ಯೋಗ, ಧ್ಯಾನಾದಿಗಳನ್ನು ಸದಾ ನಾನು ಅನುಸರಿಸುತ್ತೇನೆಂದು ದೀಕ್ಷೆಯನ್ನು ತೆಗೆದುಕೊಂಡು ಅಂತೆಯೇ ಮಾಡಲೂಬಹುದು. ಆದರೆ ಶರಣರ ಭಕ್ತಿಯನ್ನು ಮಾಡಲು ಸಾಧ್ಯವೇ? ಕಷ್ಟಸಾಧ್ಯವಾದದ್ದು, ಏಕೆಂದರೆ “ಪ್ರಾಣವಹ ಭಕ್ತಿಯ ತನ್ಮಯ ನೀನು”- ಅಂದರೆ ಮನೋಚಾಲನೆಗಳನ್ನು ಉಪೇಕ್ಷಿಸಿಕೊಂಡು ತನ್ನ ಅತ್ಯಂತ ಸತ್ಯವಾದ ಪ್ರಾಣದಲ್ಲಿ ನಿವಸಿಸಲು ಮಾಡುವ ಪರಿಶ್ರಮ ಭಕ್ತಿ! ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ- ತನ್ನ ದೇಹ ಸರ್ವವನ್ನೂ ವ್ಯಾಪಿಸಿರುವ ಪ್ರಾಣದಲ್ಲಿ ನಿವಸಿಸಿ ನೋಡಿದಾಗ ಮಾತ್ರ ಗುಹೇಶ್ವರನೆಂಬ ಸತ್ಯವುಂಟೇ ವಿನಾ ಜ್ಞಾನದಲ್ಲಿ ನಿವಸಿಸುವವನಿಗೆ ಗುಹೇಶ್ವರನೆಂಬ ಸತ್ಯ ಇಲ್ಲವೇ ಇಲ್ಲ!!
ಈಗ ಅರಿವು ಎಂಬುದು ನಿಮ್ಮಲ್ಲಿ ಅಂತಃಸ್ಪೃಹೆಯಾಗಿರಬೇಕೆಂದು ಅಂದುಕೊಂಡಿದ್ದೇನೆ. ಅರಿವಿಗೆ ಭಾಷೆ ಇಲ್ಲ. ಅದು ನಮ್ಮ ಸಾವಯವ ಆವಾಸಸ್ಥಾನ. ಅದನ್ನು ಪ್ರಜ್ಞೆ ಎಂತಾದರೂ ಕರೆಯಿರಿ, ಪ್ರಾಣಲಿಂಗವೆಂತಾದರೂ ಕರೆದುಕೊಳ್ಳಿ. ಜ್ಞಾನವು ಸೀಮಿತ ಜ್ಞಾನಿ! ಪ್ರಜ್ಞೆಯಿಂದ ನೀವು ನಿಮ್ಮನ್ನು ಹಾಗೂ ಈ ಅನಂತ ವಿಶ್ವದ ನಿಜವನ್ನೂ ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು. ಇಂತಹ ಶರಣರ ಕುರಿತಾಗಿ ಯಾರೂ ಯಾವ ಅಭಿಪ್ರಾಯವನ್ನೂ ಹೇಳಲಾಗದು. ಅವರ ಕುರಿತಾಗಿ ಮೌನವೇ ಎಲ್ಲವನ್ನೂ ಅಳೆಯುತ್ತದೆ.
ಅರಿವಿನಲ್ಲಿ ಉದಯಿಸಿ ಮರಹು ನಷ್ಟವಾಗಿರ್ದ
ಶರಣನ ಪರಿಯನರಸಲುಂಟೆ ? ಗತಿಯ ಹೇಳಲುಂಟೆ ?
ಶಿಶು ಕಂಡ ಕನಸಿನಂತಿಪ್ಪರು ಗುಹೇಶ್ವರಾ ನಿಮ್ಮ ಶರಣರು!
ಸದಾ ಪ್ರಜ್ಞೆ ಅಥವಾ ಪ್ರಾಣಲಿಂಗದಲ್ಲಿ ನಿವಸಿಸುವ ಶರಣ ಏನನ್ನೂ ಬೇಕೆಂದು ಬಯಸಲಾರ. ಬೇಡವೆಂದು ನಿರಾಕರಿಸಲಾರ! ಪರಮಾರ್ಥವನ್ನು ಅದು ಇದೆಯೆಂದು ಗೂಟ ಹೊಡೆದುಕೊಳ್ಳಲಾರ, ಇಲ್ಲವೆಂದು ನಿರಾಕರಿಸಲಾರ! ಯಾವುದನ್ನೂ ನಂಬಲಾರ, ನಂಬದೇ ಬಿಡಲಾರ! ಇವೆಲ್ಲವುಗಳಿಗಿಂತಲೂ ಈ ಕ್ಷಣದಲ್ಲಿ ಅವನಿಗಿರುವ ಸಾಮಾಜಿಕ ಜವಾಬ್ದಾರಿಗಳು ಮತ್ತು ನಿಸರ್ಗಪರ ಜವಾಬ್ದಾರಿಗಳನ್ನು ಅತ್ಯಂತ ಆರೋಗ್ಯಪೂರ್ಣವಾಗಿ ನಿಭಾಯಿಸುತ್ತಾನಾದ್ದರಿಂದ- ಶಿಶುಕಂಡ ಕನಸಿನಂತಿಪ್ಪರು- ಮಗು ಕಂಡ ಕನಸು ಯಾವುದು ಎಂದು ಹೇಳಲು ಬ್ರಹ್ಮನಿಗಾಗಲಿ, ಅವರಪ್ಪನಿಗಾಗಲಿ, ಹಾಗೂ ಆ ಶಿಶುವಿಗೂ ಹೇಗೆ ಸಾಧ್ಯವಿಲ್ಲವೋ ಹಾಗೆ ಅವರನ್ನು ಇದಂಮಿತ್ತಂ ಎಂದು ಗ್ರಹಿಸಲಾಗದು. ಆದ್ದರಿಂದ-
ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ ?
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ತಾನು ನಡೆದು ಬಂದ ಹಾದಿಯನ್ನು ಪರಾಮರ್ಶಿಸಿಕೊಂಡು ಅದನ್ನ ಅಲ್ಲಿಯೇ ಒಗೆದುಬಿಟ್ಟು, ಯಾವುದರಿಂದ ತನ್ನ ಈ ಕ್ಷಣದ ಅಸ್ತಿತ್ವ ಸಾಧ್ಯವಿದೆ ಎಂದು ತಿಳಿದು ನೋಡಬೇಕು. ಈ ಪ್ರಕ್ರಿಯೆ ಮತ್ತು ಪರಿಶ್ರಮಕ್ಕೆ ಗುರುವಿನ ಮಾರ್ಗ ಮತ್ತು ಗುರುವಿನ ಸಾಂಗತ್ಯದ ಅವಶ್ಯಕತೆ ಇರುತ್ತದೆ. ಗುರು ಮಾರ್ಗ ಒಂದು ಕ್ರಮ ಶಿಕ್ಷಣ ಮತ್ತು ಅಪರೂಪದಲ್ಲಿ ಒದಗಿ ಬರುವ ಸೌಭಾಗ್ಯವೂ ಹೌದು.
ಗುರು ಕಾರುಣ್ಯವೆ ಶಿವಾಚಾರ, ಗುರು ಕಾರುಣ್ಯವೆ ಸದಾಚಾರ,
ಗುರು ಕಾರುಣ್ಯವೆ ಪ್ರಸಾದರುಚಿ.
ಮುಂದೆ ಗುರು, ಹಿಂದೆ ಲಿಂಗ ಕೂಡಲಸಂಗಮದೇವಾ.
***************************
ಅರಿವು, ಜ್ಞಾನ, ಪ್ರಜ್ಞೆ… ಹೀಗೆ ಒಂದೊಂದೇ ಪದಗಳು ತಮ್ಮ ಸುತ್ತಣ ಪದರುಗಳನ್ನು ಬಿಚ್ಚಿಕೊಳ್ಳುತ್ತಾ ನಮ್ಮ ಹೃದಯಕ್ಕೆ ಇಳಿಯುತ್ತಿದ್ದವು. ಆಗ ನಮ್ಮೊಂದಿಗೆ ಇದ್ದ ಕೆಲವು ಗುರುಪಥದ ಸಾಧಕರಲ್ಲಿ ಪರಮಶಿವಯ್ಯ ಎನ್ನುವವರೂ ಒಬ್ಬರು. ಬಹಳ ಆಸ್ಥೆಯಿಂದ ಎಲ್ಲವನ್ನೂ ಆಲಿಸುತ್ತಿದ್ದ ಅವರು ಕೆಲವು ಪ್ರಶ್ನೆಗಳನ್ನು ಮುಂದಿಟ್ಟರು.
ಪರಮಶಿವಯ್ಯ: ತುಂಬಾ ಆಳವಾದ ಸಂಖಾರ ಯಾವುದು?
ಸ್ಮಶಾನವಾಸಿ: ತನ್ನ ಬದುಕಿನ ನಿಜ ವಸ್ತುಸ್ಥಿತಿಗಿಂತಲೂ ಅಮಿತವಾದ ಆಸೆಗಳು ತುಂಬಾ ಆಳವಾದ ಸಂಖಾರಗಳಾಗಿವೆ.
ಪರಮಶಿವಯ್ಯ: ಅತ್ಯಂತ ಪ್ರಬಲವಾದ ಇಂದ್ರಿಯಾಸಕ್ತಿ ಯಾವುದು? ಇವುಗಳನ್ನು ಮೀರುವ ಉಪಾಯಗಳೇನು? ಈ ವಿಷಯಗಳಿಂದ ದೂರವಿರುವುದು ಹೇಗೆ?
ಸ್ಮಶಾನವಾಸಿ: ಎಲ್ಲಾ ಇಂದ್ರಿಯಾಸಕ್ತಿಗಳು ಪ್ರಬಲವಾದವುಗಳೇ ಆಗಿವೆ. ಇವುಗಳನ್ನು ಮೀರುವ ತಂತ್ರ ಅಥವಾ ಉಪಾಯ ಈ ನೆಲದ ಸತ್ವವನ್ನು ಬಲ್ಲ ವಿವೇಕಿಗಳ ಕೈಯಲ್ಲಿದೆ.
ಒಂದೆತ್ತಿಗೈವರು ಗೊಲ್ಲರು,
ಅಯ್ವರಯ್ವರಿಗೆ ಐದೈದಾಗಿ ಐವರಾಳಯ್ಯಾ.
ತಮ್ಮ ತಮ್ಮಿಚ್ಛೆಗೆ ಹರಿಹರಿದಾಡಿ
ತಾವು ಕೆಟ್ಟು, ಎತ್ತನು ಕೆಡಿಸಿದರಯ್ಯಾ.
ಎತ್ತಿನ ಹೊಯ್ಲಿನ್ನಾರಿಗೆ ಹೇಳುವೆ
ಕೂಡಲಸಂಗಮದೇವಯ್ಯಾ.
ಒಂದು ಮನಸ್ಸಿಗೆ ಐದು ಜನ, ನೋಡೋದೊಂದು, ಕೇಳೋದೊಂದು, ರುಚಿ ನೋಡೋದೊಂದು, ಸ್ಪರ್ಶ ಮಾಡೋದೊಂದು, ವಾಸನೆ ನೋಡೋದೊಂದು, ಹೀಗೆ. ಐದು ಜನ ಆ ಎತ್ತನ್ನ ಮೇಯಿಸ್ತಾ ಇದಾರೆ. ಈ ಒಬ್ಬೊಬ್ಬರಿಗೂ ಐದೈದು ಆಳುಗಳು… ಅಂದ್ರೆ ಇಪ್ಪತ್ತೈದಾಯ್ತು… ಈ ಇಪ್ಪತ್ತೈದು ಜನ ತಮಗೆ ಇಷ್ಟ ಬಂದಹಾಗೆ ಹರದಾಡಿ ಎತ್ತನ್ನ ಕೆಡಿಸಿದರು. ಅಂದ್ರೆ ಮನಸ್ಸನ್ನ ಕೆಡಿಸಿದರು, ಹಾಳುಮಾಡಿದರು. ಪಾಪ, ಆ ಎತ್ತಿನ ಸಂಕಟವನ್ನ ಇನ್ನಾರಿಗೆ ಹೇಳಲಿ ಅಂತಾರೆ ಬಸವಣ್ಣ. ಎಷ್ಟು ಚೆನ್ನಾಗಿ ಹೇಳಿದಾರೆ ನೋಡಿ.
ಈ ವಚನದಲ್ಲಿ ನಿಮ್ಮ ಪ್ರಶ್ನೆಗೆ ಬೇಕಾದ ಎಲ್ಲಾ ಉತ್ತರವಿದೆ, ಹುಡುಕಿಕೊಳ್ಳಿ.
Comments 25
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Oct 6, 2021ಎಷ್ಟೊಂದು ಸರಳವಾಗಿ, ಸಹಜವಾಗಿ ಈ ಜ್ಞಾನ ಮತ್ತು ಅರಿವು ಗಳ ಮೀಮಾಂಸೆ ಗಳನ್ನು ನಮ್ಮ ಸ್ಮಶಾನ ವಾಸಿ ಗಳು ಬಿಡಿಸಿದಲಲ್ಲಾ., ಅಬ್ಬಾ… ಮತ್ತೆ ಕಾಯುತಿರುವೆ… ವಚನಗಳ ಓದಿಗೆ ಈ ಮೂಲಕ ಸಹಾಯ ಮಾಡುತಿರುವ ಈರ್ವರಿಗೂ ಧನ್ಯವಾದಗಳು.
ದೇವರಾಜ ಬಸವನಪುರ
Oct 6, 2021ಅಕ್ಕಾ, ನೀವು ಇನ್ನಷ್ಟು ಪ್ರಶ್ನೆಗಳನ್ನು ಕೇಳಬೇಕಿತ್ತು. ಲೇಖನ ಬೇಗ ಮುಗಿಯಿತೆಂದು ಭಾಸವಾಯಿತು. ಅರಿವಿನ ಮಹಾಪೂರವೇ ಹರಿದಂತಿದೆ ಇಲ್ಲಿ.
Harsha Dodderi
Oct 7, 2021ಜ್ಞಾನತ್ರಯಗಳ ವಿವರಣೆ ನೋಡಿ ಆಶ್ಚರ್ಯವೆನಿಸಿತು, ಇಷ್ಟು ಸೊಗಸಾಗಿ ನಾನೆಲ್ಲೂ ಕೇಳಿರಲಿಲ್ಲ. ಇವರೆಲ್ಲಾ ನಮ್ಮ ಅಕ್ಕಪಕ್ಕದಲ್ಲೇ ಇದ್ದಾರೆ.
Omkarappa Bellur
Oct 7, 2021ವಚನಗಳಲ್ಲಿ ಅರಿವು ಹಾಸುಹೊಕ್ಕಾಗಿದೆ. ಆದರೆ ಅರಿವನ್ನು ಹೀಗೆ ಎಳೆಎಳೆಯಾಗಿ ಹೇಳಿದವರು ನಿಮಗೆ ಸಿಕ್ಕ ಸ್ಮಶಾನವಾಸಿಗಳೇ. ಅಬ್ಬಾ! ನನಗಂತೂ ಬಹಳ ಆನಂದವಾಯಿತು. ಆ ಶರಣರಿಗೆ ಶರಣುಗಳು ತಾಯಿ.
Prabhudeva Budihal
Oct 7, 2021ಅಕ್ಕಮಹಾದೇವಿ- ಅರಿವು ಕಣ್ತೆರೆಯದವರಲ್ಲಿ ಆರತಿಯ ನೊಲ್ಲೆಯಯ್ಯಾ ನೀನು- ಅಂತ ಯಾಕೆ ಹೇಳಿದಳೆಂಬುದು ಈಗ ನಿಚ್ಚಳವಾಯಿತು. ಜ್ಞಾನದ ಗಳಿಕೆಗಾಗಿ ಬೆನ್ನುಹತ್ತಿದ ನಮಗೆ ಅರಿವಿನ ದಿಗ್ದರ್ಶನ ಸಾಧ್ಯವೇ?
ಬಸವರಾಜ ಗೂ ಸೂಳೀಭಾವಿ
Oct 10, 2021ತಮ್ಮ ಲೇಖನಗಳನ್ನು ಓದಿದಾಗ, ಮನಸ್ಸು ಹಗುರಾಗಿ ಹಕ್ಕಿಯಂತೆ ಹಾರುತ್ತದೆ. ಅನೇಕ ವರ್ಷಗಳಿಂದ ಮನಸ್ಸಿಗಂಟಿದ ಸತ್ಯವೆಂದು ತಿಳಿದ ಮಿಥ್ಯವೆಂಬ ಮಲೀನ ಜಿಡ್ಡನ್ನು ತೆಗೆದುಹಾಕಲು ತಮ್ಮ ಲೇಖನಗಳು ಸಹಕಾರಿಯಾಗಿವೆ. ಬಸವಾದಿಶರಣರ ವಚನಗಳನ್ನು ಸರಳವಾಗಿ ನಿರ್ವಚನ ಮಾಡಿ ಉಣಬಡಿಸುತ್ತಿರುವುದಕ್ಕೆ, ಮನಪೂರ್ವಕ ಧನ್ಯವಾದಗಳು.
ಬಸವರಾಜ ಹಂಡಿ
Oct 11, 2021ಈ ಹಿಂದಿನ ಕ್ಷಣದವರಗೆ ನನ್ನ ತಿಳಿವಳಿಕೆ ಜ್ಞಾನ ಮತ್ತು ಅರಿವು ಎರಡು ಒಂದೆ ಅಂತ ಆಗಿತ್ತು. ನಾನು ಈ ಲೇಖನ ಓದಿರದಿದ್ದಲ್ಲಿ ಇದೆ ತಪ್ಪಾದ ತಿಳುವಳಿಕೆಯಲ್ಲಿ ನನ್ನ ಜೀವನ ಮುಗಿದು ಹೋಗಿಬಿಡುತ್ತಿತ್ತು.ಈ ಲೇಖನವನ್ನು ಎಲ್ಲ ಲಿಂಗಾಯತ ಸ್ವಾಮೀಜಿಗಳು ಓದಲೇಬೇಕು.
ಈ ಲೇಖನ ಓದುವಾಗ ನನಗೆ ಅನಿಸಿದ್ದು – ಅರಿವು ಜಂಗಮ; ಜ್ಞಾನ ಸ್ಥಾವರ ಅಂತ ಹೇಳಬಹುದು.
ನೋಡಿ ಈ ಕೆಳಗಿನ ಸಾಲುಗಳಲ್ಲಿ ಎಂತಹ ಎಚ್ಚರಿಕೆ ಇದೆ-
“ಗ್ರಂಥಗಳಲ್ಲಿ ದಾಖಲಾದ ಜ್ಞಾನಕ್ಕೆ ಆದ್ಯತೆ ನೀಡದ ವಚನಗಳನ್ನು ಅದೇ ಜ್ಞಾನದ ಮೂಲಕ ಹಿಡಿಯ ಹೋದರೆ ಎಡವಿ ಬೀಳುತ್ತೇವೆ.”
ವಚನಗಳನ್ನು ಓದಿಕೊಳ್ಳುವಲ್ಲಿ ಮೇಲಿಂದ ಮೇಲೆ ಇದೆ ತಪ್ಪನ್ನು ನಾವು ಮಾಡುತ್ತಿದ್ದೇವೆ. ವಚನಗಳನ್ನು ನಾವು ಜ್ಞಾನದ ಮೂಲಕ ಕಟ್ಟಿ ಹಾಕಿದ್ದೇವೆ.
ಮಂಗಳಾ ಶರಣೆ ಹಾಗೂ ಸ್ಮಶನವಾಸಿ ಎಷ್ಟು ಪರಿಶ್ರಮಪಟ್ಟಿದ್ದಾರೆ ಎಂಬುದನ್ನು ತಿಳಿಬೇಕು ಅಂದರೆ ಎಷ್ಟು ಸೂಕ್ತವಾದ ವಚನಗಳನ್ನು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ ನೋಡಿದರೆ ಗೊತ್ತಾಗುತ್ತದೆ.
ಗುರು ಮಾರ್ಗ ಒಂದು ಕ್ರಮ ಶಿಕ್ಷಣ ಮತ್ತು ಅಪರೂಪದಲ್ಲಿ ಒದಗಿ ಬರುವ ಸೌಭಾಗ್ಯವೂ ಹೌದು.
ನಾವು ಗುರು ಮಾರ್ಗನಲ್ಲಿ ಇದ್ದೇವೆ ಎಂಬುದು ನನ್ನ ಜೀವನದ ಅತ್ಯಂತ ಖುಷಿ ಕೊಡುವ ವಿಚಾರ.
ಮಂಗಳಾ ಶರಣೆ, ಸ್ಮಶಾನವವಾಸಿ ಹಾಗು ಪರಮಶಿವಯ್ಯ ಶರಣರಿಗೆ ನಮ್ಮೆಲ್ಲರಿಂದ ಧನ್ಯವಾದಗಳು ಮತ್ತು ಶರಣು ಶರಣಾರ್ಥಿಗಳು.
ನೀಲಕಂಠ ಸ್ವಾಮಿ
Oct 12, 2021ನಾನು ಬಹುವಾಗಿ ಡಿಕ್ಷನರಿಗಳನ್ನು ಅವಲಂಬಿಸುವವನು. ಅದರಲ್ಲೂ ವಚನಗಳನ್ನು ಓದುವಾಗ ವಚನ ಪಾರಿಭಾಷಿಕ ಪದಕೋಶವನ್ನು ಮಗ್ಗುಲಲ್ಲೇ ಇಟ್ಟುಕೊಂಡಿರುತ್ತೇನೆ. ಈ ಲೇಖನ ಓದುವಾಗ ಆಸರೆಯಾಗಬೇಕಾದ ಪದಕೋಶಗಳೇ ದಿಕ್ಕುತಪ್ಪಿಸುತ್ತವೆ ಎನ್ನುವ ಆಘಾತಕಾರಿ ವಿಷಯ ಗೊತ್ತಾಯಿತು. ಇನ್ನು ನನ್ನಂಥವರನ್ನು ಕಾಯೋರು ಯಾರು?
ದೇವು ಧನ್ನೂರು
Oct 12, 2021ಸಂಖಾರ ಎಂದರೆ ಸಂಸ್ಕಾರ ಎಂದು ಅಂದುಕೊಂಡಿದ್ದೆ. ಆದರೆ ಸಂಖಾರವೆಂದರೆ ಇಂದ್ರಿಯಾಸಕ್ತಿಗಳೆಂದು ತಿಳಿಯಿತು. ಸಂಖಾರದಲ್ಲೇ ಇಡೀ ಪ್ರಪಂಚ ಮುಳುಗಿ ಹೋಗಿದೆ. ಮನಸ್ಸೇ ಸಂಖಾರಗಳ ಆಗರ!
ಚಂದ್ರಶೇಖರ ಜವಳಿ
Oct 12, 2021ಪ್ರಜ್ಞೆ ಅಥವಾ ಪ್ರಾಣಲಿಂಗದಲ್ಲಿ ನಿವಸಿಸುವ ಶರಣ ಏನನ್ನೂ ಬೇಕೆಂದು ಬಯಸಲಾರ… ನಿಜವಾದ ಮಾತು ಶರಣರು ಹೀಗೇ ಇದ್ದವರು. ಅವರ ವಚನಗಳನ್ನು ಓದುತ್ತಿದ್ದರೆ ಯಾವುದಕ್ಕೂ ಅಂಟಿಕೊಳ್ಳದ ಅವರ ನಡೆ-ನುಡಿಗಳ ಮರ್ಮ ಗೊತ್ತಾಗುತ್ತದೆ. ಅದ್ಭುತವಾದ ಸಂಭಾಷಣೆ… ಶರಣು. ಶರಣು.
ಈಶ್ವರಪ್ಪ ಮುದ್ದೆಬಿಹಾಳ
Oct 13, 2021ಅನುಭವ ಮಂಟಪದ ಶರಣರೆಲ್ಲಾ ಅರಿವಿಗರು.. ಆ ಅರಿವು ಅವರ ವಚನಗಳಲ್ಲಿ ತುಂಬಿಕೊಂಡಿದೆ. ಕಾಯಕಜೀವಿಗಳು ಜ್ಞಾನಿಗಳಲ್ಲ, ಅರಿವಿಗರು!!! ಶಿವ ಅರಿವು ಪ್ರಿಯ.
Karibasappa Gowdar
Oct 16, 2021ಅರಿವು- ಜ್ಞಾನಗಳ ನಡುವೆ ಇಷ್ಟೊಂದು ಅಂತರವಿರುವುದು ಗೊತ್ತಿರಲಿಲ್ಲ!! ವಚನಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಅಗಾಧವಾದ ತಿಳುವಳಿಕೆಯ ಆಗರವೇ ಅಲ್ಲಿರುವುದು ಗಮನಕ್ಕೆ ಬರುತ್ತದೆ. ಇಂಥ ಕಣ್ತೆರೆಸುವ ಅರಿವು ನೀಡಿದ್ದಕ್ಕೆ ಬಯಲು ಬಳಗಕ್ಕೆ ಶರಣು.
Kamalakka Chamarajpet
Oct 16, 2021ಅರಿವಿನ ಆಗರವಾಗಿದೆ ಈ ಸಂದರ್ಶನ. ಸಂದರ್ಶಕರಿಗೂ, ಗುರು ಸಮಾನರಾದ ಸ್ಮಶಾನವಾಸಿಯವರಿಗೂ ವಂದನೆಗಳು.
Siddalingappa Beluru
Oct 21, 2021ಇದೇನಿದು, ಸ್ಮಶಾನವಾಸಿಗಳಂತೀರಿ… ಹೀಗೆ ಪರಂಪರೆ, ಸಂಸ್ಕೃತಿ, ವಚನ, ಇತಿಹಾಸ- ಎಲ್ಲವೂಗಳನ್ನೂ ಪುಂಖಾನುಪುಂಖವಾಗಿ ಮಾತನಾಡುತ್ತಾರೆ!! ಅರಿವು-ಜ್ಞಾನಗಳ ವ್ಯತ್ಯಾಸವನ್ನು ನನ್ನ ಮನಕ್ಕೆ ಮುಟ್ಟುವಂತೆ ನುಡಿದ ಸಂತರಿಗೆ ಶರಣುಗಳು. ಅರಿವಿನ ಅರಿವು ಬೆಳಗಾಯಿತ್ತು- ಎನ್ನುವ ಬಿಬ್ಬಿ ಬಾಚಯ್ಯನವರ ವಚನ ಈ ಸಂದರ್ಶನ ಓದಿದಾಗ ಭಾಸವಾಯಿತು.
Varun J.P
Oct 21, 2021ನಿಜಕ್ಕೂ ಅರಿವು- ಜ್ಞಾನಗಳು ಬೇರೆ ಬೇರೆ ಎಂದಾಗ ನನಗೆ ಗೊಂದಲವಾಯಿತು. ವಚನಗಳಲ್ಲಿ ಯಾವುದಕ್ಕೆ ಅರಿವು ಎಂದಿದ್ದಾರೆ ಎಂದು ಹುಡುಕಲು ಪ್ರಯತ್ನಿಸಿದೆ, ಅಷ್ಟಾಗಿ ಗೊತ್ತಾಗಲಿಲ್ಲ. ಈ ಪ್ರಶ್ನೆ ಮೊದಲಿನಿಂದಲೂ ನನ್ನಲ್ಲಿ ಇತ್ತು. ಇಲ್ಲಿನ ವಿಚಾರಗಳು ನನ್ನ ಗೊಂದಲಗಳನ್ನು ನಿವಾರಿಸಿದವು, ಧನ್ಯವಾದಗಳು.
ಬಸಲಿಂಗಪ್ಪ ಗುಡೇದ
Oct 23, 2021ಪೂಜೆ-ಧ್ಯಾನ-ಇಷ್ಟಲಿಂಗ ಧರಿಸುವುದೇ ಭಕ್ತಿ ಎಂದು ತಲತಲಾಂತರದಿಂದ ನಮ್ಮ ಮನೆತನದಲ್ಲಿ ಬಂದ ನಂಬಿಕೆ. ಇದನ್ನು ಓದಿದಾಗ ನನಗೆ ಗಾಬರಿಯಾಗಿದ್ದು ಸುಳ್ಳಲ್ಲಾ. ಬಸವಣ್ಣ ಮತ್ತು ಶರಣರು ಶಿವನನ್ನು ಪೂಜಿಸಿ, ಲಿಂಗೈಕ್ಯರಾದವರು. ಭಕ್ತಿ ಎಂದರೆ ದೇವರಲ್ಲಿ ನಿಷ್ಠೆ, ನಂಬಿಕೆಗಳಿಗಿಂತ ಬೇರೆಯದನ್ನೇ ಶರಣರು ಹೇಳಿದ್ದಾರೆ ಎಂದು ನೀವು ವಚನಗಳ ಮುಖಾಂತರ ಬರೆದದ್ದನ್ನು ನೋಡಿ ನಿಜಕ್ಕೂ ದಿಗ್ಭ್ರಾಂತಿಯಾಯಿತು. ನನ್ನ ಭಕ್ತಿಯ ಕೊರತೆಯನ್ನು ತೋರಿಸಿದ ನಿಮ್ಮ ಪಾದಗಳಿಗೆ ವಂದನೆಗಳು.
Jayaprakash Solapur
Oct 23, 2021ಹಾಗಾದರೆ ಪರಂಪರೆಯಿಂದ ಬಂದ ಯಾವ ಜ್ಞಾನಗಳಲ್ಲೂ ಹುರುಳಿಲ್ಲವೇ? ಅವೆಲ್ಲವೂ fake ಎನ್ನುತ್ತೀರಾ? ಮೂಢನಂಬಿಕೆಗಳನ್ನು ಗಟ್ಟಿಯಾಗಿಸುವ ಪದ್ಧತಿಗಳನ್ನು ತಪ್ಪೆನ್ನುವಾ. ಆದರೆ ಎಷ್ಟೋ ಹಿರಿಯರ ನಂಬಿಕೆಗಳು ಅವರ ಅನುಭವದ ನುಡಿಗಳಾಗಿರುತ್ತವಲ್ಲವೇ? ಅವುಗಳನ್ನು ಪರೀಕ್ಷಿಸಿ ಒಪ್ಪಿಕೊಳ್ಳುವುದೂ ಅರಿವೇ ಇರಬೇಕು, ಅಲ್ಲವೇ?
Jyothi Hulyal
Oct 27, 2021ಜಲಾಲುದ್ದೀನ್ ರೂಮಿ ಮಾತು- “ಪದಗಳನ್ನೇ ಬಳಸದಾ ಧ್ವನಿಯೊಂದು ಇರುತ್ತದೆ, ಸಾಧ್ಯವಾದರೆ ಕೇಳಿಸಿಕೊಳ್ಳಿ” ಅರಿವಿನ ಕುರಿತಾಗಿ ಎನ್ನುವುದು ಓದಿ ಬಹಳ ಆಶ್ಚರ್ಯವಾಯಿತು, ಸಂತೋಷವಾಯಿತು. ಅತ್ಯುತ್ತಮ ಬರಹ. ಅಕ್ಕಾ, ವಂದನೆಗಳು.
ಚಂದ್ರಶೇಖರ ಸಾಲಿ
Oct 27, 2021ಹಾಳುರೊಳಗೊಂದು ಮನೆಯ ಮಾಡಿ ವಚನವನ್ನು ನೀವು ಬಿಡಿಸಿ ಹೇಳಿದ ಬಗೆ ಬಹಳ ವಿನೂತನವಾಗಿದೆ. ಯಾಕೆಂದರೆ ಇದು ಬೆಡಗಿನ ವಚನವಾಗಿದ್ದು, ಕೆಲವು ಸಾಹಿತಿಗಳು ಇದನ್ನು ಬೇರೆಯದೇ ಅರ್ಥದಲ್ಲಿ ವಿವರಿಸಿದ್ದನ್ನು ಓದಿದ್ದೇನೆ. ವಚನಗಳನ್ನು ನೀವು ನೋಡುವ ರೀತಿ ನನಗೆ ಅವರೆಲ್ಲರಿಗಿಂತ ವಿಭಿನ್ನವಾಗಿ ಕಾಣಿಸಿತು. ಪ್ರಶ್ನೋತ್ತರದ ಸಂಭಾಷಣೆ ಅನೇಕ ಗೊತ್ತಿಲ್ಲದ ಮಾಹಿತಿಗಳನ್ನು ನೀಡುತ್ತಿದೆ. ಇಂತಹ ಬರವಣಿಗೆಗಳು ಆಸಕ್ತರಿಗೆ ಪ್ರಯೋಜನಕಾರಿಯಾಗಿವೆ.
Raju Gubbi
Nov 1, 2021ಪ್ರಶ್ನೋತ್ತರ ಮಾಳಿಕೆ ಓದಿ, ನನ್ನ ಯಾವ ಆಲೋಚನೆ ಅರಿವು, ಯಾವುದು ಜ್ಞಾನ ಎಂದು ಪತ್ತೆ ಹಚ್ಚಿಕೊಳ್ಳಲು ಹೋದೆ, ತಲೆಯಲ್ಲಿ ಓದಿದ್ದೆಲ್ಲವೂ ಜ್ಞಾನವೇ ಆಗಿತ್ತು. ಹೃದಯದ ಮಾತಿಗೆ ಅರಿವು ಎನ್ನಬಹುದೇ? ಬುದ್ಧಿವಂತಿಕೆಯ ವರ್ತನೆಗಳನ್ನು ಜ್ಞಾನದ ಫಲ ಎಂದು ಗುರುತಿಸುವುದಾದರೆ ಅರಿವಿನ ವರ್ತನೆಗಳು ಹೇಗಿರುತ್ತವ? ಸ್ವಾರ್ಥರಹಿತವಾಗಿ ಮಾಡುವುದೆಲ್ಲವೂ ಅರಿವಿನ ಕ್ರಿಯೆಗಳೇ ಎನ್ನುವ ತೀರ್ಮಾನಕ್ಕೆ ಬಂದೆ.
Shekhar, Talikote
Nov 1, 2021ಯಾವುದೋ ಗ್ರೂಪಿನಲ್ಲಿ ಬಯಲು ಲಿಂಕ್ ಸಿಕ್ಕಿತು… ಮೂರು ದಿನಗಳಿಂದ ರಾತ್ರಿಯೆಲ್ಲಾ ಕುಳಿತು ಓದುತ್ತಿದ್ದೇನೆ… ತುಂಬಾ ತುಂಬಾ ಇಷ್ಟವಾಯಿತು. ತಲಪರಿಗೆಯ ಸಂವಾದ ಮುಂದುವರಿಯಲಿ.
Panchakshari HV
Nov 8, 2021ಜ್ಞಾನವೆಂಬುದು ಹಲವು ಶಾಸ್ತ್ರಗಳ ಗೂಡಿನಲ್ಲಿ ಮಾತ್ರ ಜೀವಿಸುತ್ತದೆ. ಅರಿವು ಎಂಬುದು ಜೀವವಿರುವ ಎಲ್ಲಾ ಮನುಷ್ಯರ ಹೃದಯ ತುಷ್ಠಿಯಲ್ಲಿ ಜೀವಂತವಿರುತ್ತದೆ. ಈ ನೆಲೆಯಿಂದ ವಚನಗಳನ್ನು ನೋಡುವುದಾದರೆ ಅವರು ‘ಜ್ಞಾನ’ವನ್ನು ನಿರಾಕರಿಸಿ ಅರಿವಿನಲ್ಲಿ ಜೀವಿಸಿರುವುದು ನಮಗೆ ಹೃದ್ಗೋಚರಿಸತೊಡಗುತ್ತದೆ.
ಅಂತರಂಗದ ಕಣ್ಣುತೆರೆಸುವ ಸಾಲುಗಳು.
Varun J.P
Nov 14, 2021ತಲಪರಿಗೆಯನ್ನು ಓದಲು ಕಾಯುತ್ತಿದ್ದೆ… ಇಂತಹ ಚಿಂತನೆಗಳನ್ನು ಮುಂದುವರಿಸಿರಿ.
Ravikiran, Mumbai
Nov 18, 2021ಗಂಭೀರ ಚಿಂತನೆಗಳಿಗೆ ಒಡ್ಡುವ ತಲಪರಿಗೆಯ ಪ್ರಶ್ನೋತ್ತರಗಳು ಲಿಂಗಾಯತದ ಮರ್ಮವನ್ನು ಬೇಧಿಸುವ ಪ್ರಯತ್ನವೆಂಬಂತೆ ನನಗೆ ತೋರುತ್ತಿದೆ. ವಚನಗಳಲ್ಲಿ ಹುದುಗಿರುವ ಅಗೋಚರ ಅರ್ಥಪದರುಗಳನ್ನು ಎಳೆಎಳೆಯಾಗಿ ಹೇಳುತ್ತಿರುವ ಇಲ್ಲಿನ ಮಾತುಗಳು ಶರಣರ ಅಂತರಂಗಕ್ಕೆ ನಮ್ಮನ್ನು ಕರೆದೊಯ್ಯುವಂತೆ ಪ್ರೇರೇಪಿಸುತ್ತವೆ. ನಿಮ್ಮ ಈ ಅಗಾಧ ಪ್ರಯತ್ನಕ್ಕೆ ಅನಂತ ಶರಣುಗಳು. ಲೇಖನ ಕಳಿಸಿದ್ದಕ್ಕೆ ಧನ್ಯವಾದಗಳು.
ವಿಶ್ವೇಶ್ವರಯ್ಯ, ದಾವಣಗೆರೆ
Nov 25, 2021ಲೇಖನಗಳು ಬಹಳ ಚೆನ್ನಾಗಿವೆ. ನಮ್ಮ ಆಲೋಚನೆಗಳನ್ನು ಬೇರೊಂದು ದಿಕ್ಕಿಗೆ ಕೊಂಡೊಯ್ಯುತ್ತವೆ.