ಹೀಗೊಂದು ತಲಪರಿಗೆ (ಭಾಗ-2)
ಹನ್ನೆರಡನೆ ಶತಮಾನದ ಶರಣರ ಆಚಾರ-ವಿಚಾರಗಳು ಹೇಗಿದ್ದಿರಬಹುದು, ಅವರ ನಿತ್ಯದ ಬದುಕು ಹೇಗಿದ್ದೀತು ಎನ್ನುವ ಪ್ರಶ್ನೆಗಳು ಆಗಾಗ ನನ್ನ ತಲೆಯಲ್ಲಿ ಗುಂಯ್ಗುಡುತ್ತಿರುತ್ತವೆ. ಈ ಜಗತ್ತಿನಲ್ಲಿ ತನ್ನದೆನ್ನುವುದು ಏನೂ ಇಲ್ಲ, ತಾನೂ ಏನೂ ಅಲ್ಲ ಎನ್ನುವ ಸತ್ಯದೊಂದಿಗೆ ಬದುಕುವ ಆ ಸರಳತೆ, ಆ ಸಹಜತೆ, ಆ ನೇರ ಮಾತು… ಕಾಯಕಕ್ಕೆ ಆತುಕೊಂಡ, ದಾಸೋಹಕ್ಕೆ ಬಾಗಿಕೊಂಡ ಆ ಜೀವಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗದೇ ಸುಮ್ಮನಾಗುತ್ತೇನೆ. ಯಾವುದೋ ಪುಣ್ಯದ ಬಲವೋ ಎಂಬಂತೆ ಹೀಗೆ ಎಲ್ಲೋ ಸಿಕ್ಕ ಈ ಸ್ಮಶಾನವಾಸಿಯೊಂದಿಗೆ ಮಾತಿಗಿಳಿಯುತ್ತಿದ್ದಂತೆ ನನ್ನ ಮನಸ್ಸು ಈತ ನಿಶ್ಚಿತವಾಗಿ ಹನ್ನೆರಡನೆ ಶತಮಾನದ ಶರಣನೇ ಎಂದು ಹೇಳತೊಡಗಿತು. ಎಷ್ಟೆಲ್ಲಾ ಗೊತ್ತಿದ್ದರೂ ಏನೂ ತೋರ್ಪಡಿಸಿಕೊಳ್ಳದ ನಿರ್ಭಾವುಕ (unassuming) ಚಹರೆ, ಅನುಭವಕ್ಕೆ ದಕ್ಕಿದುದನ್ನು ಮೊಗೆಮೊಗೆದು ತಿಳಿಸಿಕೊಡುವ ಅಕ್ಕರತೆ, ಮಾತಿನ ನಡುವೆ ಆಗಾಗ ಬರುವ ನಿಷ್ಕಲ್ಮಶವಾದ ದೊಡ್ಡ ನಗು, ಯಾವುದಕ್ಕೂ ಅಂಟಿಕೊಳ್ಳದ ಸ್ವಭಾವ, ಕೈಗೆತ್ತಿಕೊಂಡ ಕೆಲಸದಲ್ಲಿನ ತನ್ಮಯತೆ, ಸುತ್ತಣ ನಿಸರ್ಗದೊಂದಿಗೆ ಒಂದಾಗಿ ಕಾಣುವ ಜೀವ ಭಾವ. ನನ್ನ ಗೊಂದಲಗಳನ್ನೆಲ್ಲಾ ನಿವಾರಿಸುವ ನಾಡ ಮದ್ದಿನಂತಿತ್ತು ಅವರ ಮಾತುಗಳ ಸ್ಪಷ್ಟತೆ.
ಹಾಂ, ಮುಂದಿನ ಸಂಭಾಷಣೆಗೂ ಮುನ್ನ ತಲಪರಿಗೆ ಎಂದರೇನೆಂದು ಅನೇಕರು ಹಿಂದಿನ ಸಂಚಿಕೆಯಲ್ಲಿ ಪ್ರಶ್ನಿಸಿದ್ದಾರೆ. ಇದೊಂದು ಅಚ್ಚಕನ್ನಡ ಶಬ್ದ. ತಲಪರಿಗೆ ಎಂದರೆ ನೀರಿನ ಚಿಲುಮೆ. ನಿಸರ್ಗದಲ್ಲಿನ ನೀರಿನ ಬುಗ್ಗೆಗಳನ್ನು ನೀವು ನೋಡಿರುತ್ತೀರಿ. ಅವುಗಳ ಸುತ್ತ ಹಸಿರಿನ ವಾತಾವರಣವಿರುತ್ತದೆ. ನೆಲದ ಒಡಲಲ್ಲೆಲ್ಲೋ ಅಗೋಚರವಾದ ನೀರಿನ ಸೆಲೆಗಳನ್ನುಳ್ಳ ಈ ಚಿಲುಮೆಗಳು ತಮ್ಮ ಪಾಡಿಗೆ ತಾವು ನೀರುಕ್ಕಿಸುತ್ತಿರುತ್ತವೆ. ನೀರಡಿಸಿದ ಯಾರಾದರೂ ಸರಿ, ಪ್ರಾಣಿ, ಪಕ್ಷಿ, ಗಿಡ-ಮರ-ಬಳ್ಳಿಗಳು… ಅವರಿಗೆಲ್ಲ ಜೀವ ರಕ್ಷಕವಾಗಿ ಈ ತಿಳಿನೀರು ಸದಾ ನಿಸರ್ಗದಲ್ಲಿ ದೊರೆಯುತ್ತದೆ.
ಮಂಗಳಾ: ನಿಮ್ಮ ಮಾತುಗಳಲ್ಲಿ ಆಧ್ಯಾತ್ಮಿಕತೆ ಬಗ್ಗೆ ಅಸಡ್ಡೆ ಭಾವನೆ ಇದ್ದಂತಿದೆಯಲ್ಲಾ?
ಸ್ಮಶಾನವಾಸಿ: ಅಸಡ್ಡೆ ಮಾತ್ರವಲ್ಲ! ಈ ಶಬ್ದ ನನ್ನೊಳಗೆ ಹುದುಗಿರುವ ಸ್ವಯಂ ಶಕ್ತಿಯನ್ನು ಕುಗ್ಗಿಸಿ ಬಿಡುತ್ತದೆ. ನನ್ನ ಆಯುಷ್ಯದ ಬಹುತೇಕ ಭಾಗ ಆಧ್ಯಾತ್ಮದ ಹುಡುಕಾಟದಲ್ಲಿ ಕಳೆದುಹೋಗಿದೆ. ಶಾಸ್ತ್ರಗ್ರಂಥಗಳಲ್ಲಿ, ಧಾರ್ಮಿಕ ಬೋಧನೆಗಳಲ್ಲಿ, ತಾವು ಸಾಧನಾಶೀಲರೆಂದು ಹೇಳಿಕೊಳ್ಳುವವರ ಜೀವನದ ಸಂಗತಿಗಳಲ್ಲಿ. ಆಧ್ಯಾತ್ಮಿಕ ತಾಣಗಳಲ್ಲಿ ಆಧ್ಯಾತ್ಮದ ಘಮಲೇ ಇಲ್ಲ! ಈಗ ನೀವು ಯಾವುದನ್ನು ಆಧ್ಯಾತ್ಮ ಎಂದು ಭಾವಿಸಿದ್ದೀರೋ ಅಂತಹ ಆಧ್ಯಾತ್ಮಿಕ ಪರಿಕಲ್ಪನೆಗೆ ಅಧಿಕಾರ ಶಕ್ತಿಗಳು ಉದ್ದೇಶಪೂರ್ವಕವಾಗಿ ಇಲ್ಲದಾ ಕೋಡುಗಳನ್ನೂ ವಿಚಿತ್ರವಾದ ಬಾಲಂಗೋಚಿಗಳನ್ನೂ ಕಟ್ಟಿ ವಿಪರೀತಾರ್ಥಗಳನ್ನು ತುಂಬಿಸಿ ಬಿಟ್ಟಿವೆ. ಇಂತಹ ಸಿದ್ಧಗೊಂಡಿರುವ ಆಧ್ಯಾತ್ಮಿಕ ಭಾಷೆಗೆ ಆಕರ್ಷಿತರಾಗಿ ಮೋಸ ಹೋದರೆ ನಿಮ್ಮ ಅಮೂಲ್ಯವಾದ ಜೀವನಾವಧಿ ಕಳೆದೇ ಹೋಗುತ್ತದೆ. ಈ ವಿಷಯ ನಿಮಗೆ ಸ್ಪಷ್ಟವಾಗ ಬೇಕಾದರೆ ಭಾರತೀಯ ಆಧ್ಯಾತ್ಮಿಕ ಸಂಘರ್ಷದ ಇತಿಹಾಸದ ಅರಿವಿರಬೇಕಾಗುತ್ತದೆ. ಆದರೆ ನೀವು ಯಾರೋ ಹೇಳಿದ್ದನ್ನ ನಂಬಿ ಇದು ಆಧ್ಯಾತ್ಮ, ಇದು ಶ್ರೇಷ್ಠವಾದ ಆಯ್ಕೆ ಎಂದುಕೊಂಡಿದ್ದೀರಿ! ಇಷ್ಟು ಮಾತ್ರದಿಂದ ನಿಮಗೆ ಏನೂ ಪ್ರಯೋಜನವಿಲ್ಲ.
ಯಾರೋ ಪಡೆದಂತಹ ಆಧ್ಯಾತ್ಮಿಕ ಅನುಭವ ನನ್ನ ಅನುಭವಕ್ಕೂ ಸಿಗುತ್ತದೆಂಬ ಊಹೆ ಆಧ್ಯಾತ್ಮವಾಗಲಾರದು! ಯಾರೋ ರಚಿಸಿದ ಶಾಸ್ತ್ರಗ್ರಂಥಗಳಲ್ಲಿ ನಿರೂಪಿಸಲ್ಪಟ್ಟಿದ್ದು ಮತ್ತು ಯಾರೋ ಗಳಿಸಿದ ಆನಂದ ನನಗೂ ಪ್ರಾಪ್ತಿಯಾಗುತ್ತದೆಂಬುದು ಕೇವಲ ಊಹೆಯಷ್ಟೇ ಆಗಿದೆ. ‘ಆಧ್ಯಾತ್ಮ’- ಎಂಬ ಪದ ಶರಣ ಸಾಹಿತ್ಯದಲ್ಲಿ ಇಲ್ಲವೇ ಇಲ್ಲ. ಆದರೆ ಸ್ವತಂತ್ರವಾದ ಚಿಂತನಾಧಾರೆಯಿಂದ ಕಂಡುಕೊಳ್ಳಬಹುದಾದ ಸೃಜನಶೀಲ ಶೈವ ಪ್ರತಿಭೆ ಅಲ್ಲಿ ತುಂಬಿ ತುಳುಕಾಡಿದೆ. ಬಸವಣ್ಣ ಯಾರೋ ಹೇಳಿದ್ದನ್ನಾಗಲಿ, ಶಾಸ್ತ್ರಗ್ರಂಥಗಳಿಂದ ಪಡೆದ ಅನುಭವವನ್ನಾಗಲಿ ಒಪ್ಪಲಿಲ್ಲ. ಇಂತಹದ್ದನ್ನೆಲ್ಲ ಅನ್ಯರು ‘ಉಂಡುಬಿಟ್ಟದ್ದು’ ಎಂದು ಅಲ್ಲಗಳೆಯುತ್ತಾರೆ.
ಉಂಡುದು ಬಂದಿತ್ತೆಂಬ ಸಂದೇಹಿ ಮಾನವ ನೀ ಕೇಳಾ:
ಉಂಡುದು ಏನಾಯಿತ್ತೆಂಬುದ ನಿನ್ನ ನೀ ತಿಳಿದು ನೋಡಾ,
ಉಂಡುದು ಆಗಳೆ ಅಪೇಯವಾಗಿತ್ತು.
ಆ ಉಂಡುದನುಣಬಂದ ಹಂದಿಯ ಬಾಳುವೆಯವರ ಕಂಡು
ಆನು ಮರುಗುವೆನಯ್ಯಾ, ಕೂಡಲಸಂಗಮದೇವಯ್ಯಾ.
ಉಂಡುದು ಆಗಲೇ ಅಪೇಯವಾಗಿತ್ತು- ಒಮ್ಮೆ ತಿಂದದ್ದು ತಿಂದ ಕ್ಷಣದಲ್ಲೇ ತಾನಾಗಲಿ, ಅನ್ಯರಾಗಲಿ ತಿನ್ನಲು ಅರ್ಹತೆಯನ್ನು ಕಳೆದುಕೊಂಡಿತ್ತು. ಅಂದರೆ ಎಲ್ಲಾ ಮನುಷ್ಯನನುಭವಗಳೂ ಅನುಭವಿಸಿದ ನಂತರದ ಕ್ಷಣದಲ್ಲಿ ಇಲ್ಲವಾದವು… ಘಟಿಸುವ ಎಲ್ಲಾ ಸಂಘಟನೆಗಳೂ ಸಂಘಟಿಸಿದ ಕ್ಷಣ ಮುಗಿದಾಗ ವಿಘಟಿಸಲ್ಪಟ್ಟಿದ್ದವು. ಎಲ್ಲಾ ಸಂರಚನೆಗಳು ರಚಿಸುವ ನಂತರದ ಕ್ಷಣದಲ್ಲಿ ನಿರಚನೆಗೊಂಡವೆಂಬ ಚಲನಶೀಲ ಪ್ರಾಕೃತಿಕ ಧರ್ಮದ ನಿಯಮವನ್ನು ನೋಡು. ಇದು ಬಿಟ್ಟು ಇದು ನಮ್ಮ ಪರಂಪರೆಯ ಸನಾತನ ದಿವ್ಯಾನುಭವ ಎಂದು ಅದನ್ನ ಗುಡ್ಡೆ ಹಾಕಿಕೊಂಡು ಕೂತು ಅವುಗಳಲ್ಲೇ ಕಾಲಕಳೆಯುವವನ ಬಾಳು ‘ಉಂಡುದುನುಣ ಬಂದ ಹಂದಿಯ ಬಾಳುವೆ’ ಎಂದು ಬಸವಣ್ಣ ಅಂದೇ ಮರುಗಿದರು. ಆದ್ದರಿಂದ ಮಾನವ ಜೀವನದ ಸಂಕೀರ್ಣವಾದ ಸವಾಲುಗಳಿಗೆ ಮತ್ತು ಜೀವನದ ನೈಜ ಸಂಗತಿಗಳಿಗೆ ಎದೆಗೊಟ್ಟು ನಿಲ್ಲುವ ವಿವೇಕ ಯಾವುದಿದೆಯೋ ಅದು ಆಧ್ಯಾತ್ಮವೆನಿಸುತ್ತದೆ. ಮಾನವ ಪ್ರೀತಿಯನ್ನು ಉದ್ದೀಪಿಸುವ ಸತ್ವ ಯಾವುದಿದೆಯೋ ಅದು ಆಧ್ಯಾತ್ಮವೆನಿಸುತ್ತದೆ. ದುರಂತವೆಂದರೆ ಅಂತಹದ್ದೊಂದು ಆಧ್ಯಾತ್ಮ ನಿಮಗೆ ಸಿಗುವ ಸಂಭವವೇ ಇಲ್ಲ. ಆದ್ದರಿಂದ ನಾನು ಆಧ್ಯಾತ್ಮದ ಬದಲಿಗೆ ಅದನ್ನು ಜೀವನದ ಸತ್ಯವನ್ನು ಒಪ್ಪಿಕೊಂಡು ಬದುಕುವ ಪರಮ ಕೌಶಲ್ಯ ಎಂದು ನಂಬುತ್ತೇನೆಯೇ ವಿನಾ ಆಧ್ಯಾತ್ಮ ಎಂದಲ್ಲ. ಬೇಕಾದರೆ ಜೀವನ ಕೌಶಲ್ಯವನ್ನಾಗಿ ಶರಣರ ಭಕ್ತಿಯನ್ನ ಅವಲೋಕಿಸಿ ನೋಡಿ ಇದರ ನಿಜ ತಿಳಿವು ನಿಮಗೆ ಖಂಡಿತಾ ಗೊತ್ತಾಗುತ್ತದೆ.
ಮಂಗಳಾ: ಹಾಗಾದರೆ ಜೀವನ ಕೌಶಲ್ಯದ ಕುರಿತು ಒಂದಿಷ್ಟು ಹೇಳುತ್ತೀರಾ?
ಸ್ಮಶಾನವಾಸಿ: ಶರೀರಕ್ಕೆ ಒಮ್ಮೆ ಮಾತ್ರ ಮರಣವಿರುತ್ತದೆ. ಆದರೆ ಮನಸ್ಸಿಗೆ ತಪ್ಪು ಮಾಡಿದಾಗಲೆಲ್ಲಾ ಸಾವೇ! ಪ್ರತಿ ತಪ್ಪನ್ನೂ ಮಾಡುವಾಗ ಮನಸ್ಸು ಪ್ರೇರಣಾ ಶಕ್ತಿ ಶರೀರ ಅದನ್ನು ಹಿಂಬಾಲಿಸಿ ಅನುಸರಿಸುತ್ತದೆ. ಆದ್ದರಿಂದ ಶರಣರ ಭಕ್ತಸ್ಥಲ ಮನಸ್ಸೇ ಆಗಿದೆ.
ಮನವೆ ಸರ್ಪ ತನು ಹೇಳಿಗೆ :
ಹಾವಿನೊಡತಣ ಹುದುವಾಳಿಗೆ !
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೆ ಗಾರುಡ, ಕೂಡಲಸಂಗಮದೇವಾ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ- ಇಲ್ಲಿ ಬಸವಣ್ಣನವರು ವಿಶಿಷ್ಟವಾದ ಪೂಜೆಯೊಂದನ್ನು ಹೇಳುತ್ತಿದ್ದಾರೆ. ಅದು ಸ್ಥಾವರ ಪೂಜೆ ಅಲ್ಲವೇ ಅಲ್ಲ. ಆತನ ಪೂಜೆ ಎಂತಹುದೆಂದರೆ ಮನವೆಂಬ ಸರ್ಪ ತನ್ನನ್ನು ಕೊಂದು ಹಾಕುವುದೆಂಬ ಎಚ್ಚರವನ್ನು ವಹಿಸಿದರೆ ಮಾತ್ರ ಅಲ್ಲೊಂದು ಪವಾಡ ನಡೆಯುತ್ತದೆ. ಗಾರುಡ ಎಂದರೆ ಪವಾಡ ಮಾಡುವವ ಎಂದರ್ಥ.
ನಮ್ಮೊಳಗೆ ಮನೋಗತವಾಗಿರುವ ವಿದ್ವಂಸಾತ್ಮಕವಾದ ಶತೃಗಳು ಇಲ್ಲವಾಗಿದ್ದಾಗ ಹೊರಗಿನ ಶತೃಗಳು ನಮ್ಮನ್ನು ಏನೂ ಮಾಡಲಾರರು. ಯಾವ ವ್ಯಕ್ತಿ ಪರಿಶುದ್ಧವಾದ ಆಲೋಚನೆಗಳೊಂದಿಗೆ ಜೀವಿಸುತ್ತಾನೋ ಅಥವಾ ಸರಿಯಾದ ಕೆಲಸ (ಕಾಯಕ) ಮಾಡುತ್ತಾನೋ ಅಂತಹವರಿಗೆ ಸಹಜ ಸುಖ ನೆರಳಿನಂತೆ ಹಿಂಬಾಲಿಸುತ್ತಿರುತ್ತದೆ. ಶರಣರ ಶಿವಯೋಗ ಸಹಜ ಸುಖವನ್ನು ಅನ್ವೇಷಿಸುತ್ತದೆ. ಆ ಅನ್ವೇಷಣೆ ಚಂಚಲ ಮನಸ್ಸನ್ನು ಪ್ರಶಾಂತತೆಗೆ ತರುವ ಪ್ರಯತ್ನ ಕೂಡಾ ಹೌದು. ಆದ್ದರಿಂದ ಈ ಮನಸ್ಸನ್ನು ಸಹಜ ಸ್ಥಿತಿಗೆ ತರಬೇಕೆಂದೆನಿಸಿದವರು ಎಂತಹ ಒತ್ತಡದ ಸಂದರ್ಭಗಳಲ್ಲೂ ಉದ್ರೇಕಕ್ಕೆ ಒಳಗಾಗದೆ ಮಾತನಾಡುತ್ತಾರೆ. ಇಲ್ಲದಿದ್ದರೆ ಸುಮ್ಮನಿರುತ್ತಾರೆ. ಅವರು ಏಕಾಂತವಾಗಿದ್ದಾಗಲೂ ಮನಸ್ಸಿನೊಂದಿಗೆ ಮಾತನಾಡರು. ಅಂತಹವರಿಗೆ ಬಹಿರಂಗ ಅಂತರಂಗಗಳಲ್ಲಿ ನಡೆಯಲ್ಪಡುವ ಸಂಭಾಷಣೆಗಳಲ್ಲಿ ಯಾವ ಅಭಿಪ್ರಾಯಗಳೂ ಇರುವುದಿಲ್ಲ. ಯಾಕೆಂದರೆ ಅವರಿಗೆ ಗೊತ್ತಿದೆ… ಆಕರ್ಷಕವಾದ ಸಂಭಾಷಣೆಗಳು ಸಿದ್ಧಾಂತಗಳ ಸುತ್ತ ಗಿರಕಿ ಹೊಡೆಯುತ್ತಿರುತ್ತವೆ, ಸಿದ್ಧಾಂತಗಳು ಇತರರ ಮೇಲೆ ಅನುಶಾಸನ ಹೊರಡಿಸುತ್ತವೆ. ನೀಚಾತಿ ನೀಚವಾದ ಸಂಭಾಷಣೆಗಳು ವ್ಯಕ್ತಿಗಳ ಸುತ್ತ ತಿರುಗುತ್ತವೆ. ಮನಸ್ಸು ಹೇಳಿದ್ದನ್ನೆಲ್ಲ ಕೇಳುವುದಲ್ಲ. ನಿನ್ನ ಸರಿಯಾದ ವಿವೇಕಕ್ಕೆ ಮನಸ್ಸು ಶರಣು ಶರಣೆನ್ನಬೇಕು.
ಪರಚಿಂತೆ ಎನಗೇಕಯ್ಯಾ? ಎಮ್ಮ ಚಿಂತೆ ಎಮಗೆ ಸಾಲದೆ?
ಕೂಡಲಸಂಗಯ್ಯನು ಒಲಿದಾನೋ ಒಲಿಯನೋ
ಎಂಬ ಚಿಂತೆ ಹಾಸಲುಂಟು, ಹೊದೆಯಲುಂಟು.
ಕೂಡಲಸಂಗಯ್ಯನು ಒಲಿದಾನೋ ಒಲಿಯನೋ- ಅಮನಸ್ಕವೆಂಬ ಅನುಭಾವದ ಕೂಡಲಸಂಗಯ್ಯ ಒಲಿದಾನೋ ಒಲಿಯನೋ ಎಂಬ ಆತುರದ ನಿರೀಕ್ಷೆಯಲ್ಲಿ ಬಸವಣ್ಣನವರು ಮನಶುದ್ಧಿಗೊಳಿಸಿಕೊಳ್ಳುವಲ್ಲಿ ಈ ವಚನ ಹಾಡಿದರು.
ಆದ್ದರಿಂದ ನಿಜಸುಖಕ್ಕಾಗಿ ಕಾತರಿಸುವವರು ತನ್ನಲ್ಲಿರುವುದರ ಕುರಿತಾಗಿ ಮಾತ್ರ ಯೋಚಿಸುತ್ತಾರೆ. ನಿಜಸುಖವರಿಯದೇ ಹೊರಗನೇ ನೋಡುವವರು ತಮ್ಮಲ್ಲಿ ಇಲ್ಲದರ ಕುರಿತು ಆಲೋಚಿಸಿ ದುರ್ಬಲರಾಗುತ್ತಾರೆ. ಸದಾ ನಿಜಸುಖದಲ್ಲಿರುವವರು ತನ್ನ ಸುಖವನ್ನು ಇತರರಿಗೆ ಹಂಚುತ್ತಾರೆ. ಇದು ಆನಂದದ ರಹಸ್ಯ. 12ನೇ ಶತಮಾನದ ಅನುಭವ ಮಂಟಪದಲ್ಲಿ ಎಲ್ಲಾ ಶರಣರಿಗೂ ಇದು ಸಾಧ್ಯವಾಗಿತ್ತು.
ಲಕ್ಷೋಪಲಕ್ಷ ಮಾತನಾಡುವುದಕ್ಕಿಂತ ಶಕ್ತಿಯನ್ನೂ, ಶಾಂತಿಯನ್ನೂ ನೀಡಬಲ್ಲ ಒಂದು ಮಾತು ಸಾಕು. ನಿನ್ನ ಸಂಕಟಗಳಿಗೆ, ಭಯಗಳಿಗೆ, ನೋವುಗಳಿಗೆ ಕಾರಣ ಯಾವುದೇ ಇರಬಹುದು. ಆ ಕಾರಣಗಳನ್ನಿಟ್ಟುಕೊಂಡು ಇತರರಿಗೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡಬೇಡ. ಮನಸ್ಸು ಸಹಜ ಸುಂದರವಾಗಿದ್ದಾಗ ಶರೀರದ ಸ್ವಾಸ್ಥ್ಯವೂ ಸಹಜವಾಗಿರುತ್ತದೆ. ಏಕೆಂದರೆ ಎಲ್ಲವೂ ಅನಿತ್ಯ ಅನಿಶ್ಚಿತವಾಗಿರುವುದರಿಂದ ನಿಶ್ಚಿತ ಜ್ಞಾನಗಳನ್ನಿಟ್ಟುಕೊಂಡು ನಿನಗೆ ನೀನೇ ಭಾರವಾಗಬೇಡ. ಎಂತಹ ಕಷ್ಟ ಸನ್ನಿವೇಶಗಳೂ ಬದಲಾಗುತ್ತವೆ ಎಂಬ ಚಲನಶೀಲ ಸತ್ಯದಲ್ಲಿ ಜೀವಿಸು. ತನ್ನ ಬಗ್ಗೆ ಇತರರಿಗೆ ಒಳ್ಳೆಯ ಅಭಿಪ್ರಾಯವಿರಲಿ ಎಂದು ನಿರೀಕ್ಷಿಸಬೇಡ. ಇತರರ ಅಭಿಪ್ರಾಯಗಳನ್ನು ರಿಪೇರಿ ಮಾಡಲೂ ಹೋಗಬೇಡ. ನಿಜವಾಗಲೂ ನಿನ್ನ ನಿಜಜೀವನದ ಗುರಿ ಏನೆಂದು ಪ್ರತಿಕ್ಷಣ ಪರಿಶೀಲಿಸಿಕೋ. ಮೊದಲು ನಿನ್ನ ಅಂತರಂಗವನ್ನೊಮ್ಮೆ ಪರಿಶುದ್ಧಗೊಳಿಸಿಕೋ. ಆನಂತರ ನಿನ್ನ ಸಮಾಜದ ಪ್ರಶ್ನೆ. ನಿನ್ನ ಪ್ರಿಯವಾದವರಿಂದ ಕೇವಲ ಸುಖವಷ್ಟೇ ಸಿಗಲಾರದು. ಸಂಕಟ, ನೋವು, ಶೋಷಣೆ ಎಲ್ಲವೂ ಕೊಡುಗೆಯಾಗಿ ಸಿಗುತ್ತವೆ. ಏಕೆಂದರೆ ನೀನೂ ಅದನ್ನೇ ಮಾಡುತ್ತಿದ್ದೀಯಾ. ಆದ್ದರಿಂದ ಅವು ಪ್ರತಿಫಲವಾಗಿ ಬಂದಿವೆ. ಈ ಇಕ್ಕಟ್ಟಿನಿಂದ ನೀನು ಪಾರಾಗಲು ಬಯಸಿದ್ದಲ್ಲಿ ನಿನ್ನೊಳಗಣ ರಾಜಕೀಯವನ್ನು ನೀನು ಸರಿಯಾಗಿ ತಿಳಿಯುವ ಪ್ರಯತ್ನ ಮಾಡು. ಅತಿಯಾಗಿ ಮಾತನಾಡಿ ನಿಮ್ಮ ಅಜ್ಞಾನವನ್ನು ನೀವೇ ನಿರೂಪಿಸಕೊಳ್ಳಬೇಡಿ. ಮೌನವಾಗಿರಿ, ಈ ಕ್ಷಣದ ಕೆಲಸ ಕಾರ್ಯದಲ್ಲಿ (ಕಾಯಕ) ಉತ್ಸಾಹವನ್ನು ಹೆಚ್ಚಿಸಿಕೊಳ್ಳಿ.
ಅವಲಕ್ಷಣ ನಾಯನುಡಿಯ ನಾಲಗೆಯ ಸಡಗರ
ಡೊವಿಗೆ ಮೃತ್ಯುವಿನ ನುಡಿಗೊಳಗಾಯಿತ್ತು.
ಬೇಡವೋ ಪರವಾದಿ ಗಳುಹದಿರು.
ಬೇಡವೊ ದೂಷಕ ಬಗುಳದಿರು.
ನಾಲಿಗೆಯ ಸಡಗರವನ್ನು ಸಾಧ್ಯವಾದರೆ ಮುರಿಯಲು ಪ್ರಯತ್ನಿಸು. ಕೂಡಲಸಂಗಯ್ಯನಲ್ಲಿಗೆ ಹೋಗಲು ಇದು ದಾರಿ ದೀವಿಗೆ. ಇದಲ್ಲವೇ ಜೀವನ ಕೌಶಲ್ಯ!
ಮಂಗಳಾ: ಮಾತು ಜ್ಯೋತಿರ್ಲಿಂಗವಾಗುವುದು ಯಾವಾಗ?
ಸ್ಮಶಾನವಾಸಿ: ಮನಸ್ಸಿನ ದ್ವಂದ್ವಗಳು ಹರಿದು ಬಿದ್ದಾಗ… ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು ಎಂದರು ಬಸವಣ್ಣ. ಸಾಮರಸ್ಯ ಸಮಚಿತ್ತ ಒಂದು ಕೃಷಿ ಅಥವಾ ಅಂತಹ ಕಾಯಕ ನಿನ್ನೊಳಗೆ ಮಾಡಲನುವಾದಾಗ ತಂತಾನೆ ಮಾತು ಜ್ಯೋತಿರ್ಲಿಂಗವಾಗುತ್ತದೆ. ಈ ಪಯಣ ಬಲು ಕಷ್ಟ. ಅದರಲ್ಲೂ ತಗಲಾಕಿಕೊಳ್ಳಬೇಡಮ್ಮಾ. ಮೂರ್ಖತನ ನಿನ್ನನ್ನು ಅಪ್ಪಿಕೊಂಡು ಬಿಡುತ್ತದೆ.
ಮಂಗಳಾ: ಹಿಂದೊಮ್ಮೆ ನೀವು ತಿಳಿದ ಜ್ಞಾನವನ್ನ ತ್ಯಾಗ ಮಾಡು ಎಂದಿದ್ದಿರಿ, ಅದ್ಹೇಗೆ?
ಸ್ಮಶಾನವಾಸಿ: ತಾನು ಮತ್ತು ಎದುರಿನ ವ್ಯಕ್ತಿಗಳ ಮುಖಾಮುಖಿಯಲ್ಲಿ ಉಂಟಾಗುವ ಜ್ಞಾನ ಹಿಂದಿನ ಕೊಳಕದು. ಇವುಗಳೊಂದಿಗೆ ಸ್ಪರ್ಶ ಏರ್ಪಟ್ಟಾಗ ಕುಭಾವಗಳು ಕೆರಳುತ್ತವೆ. ಇದೇ ಭವಭಾರ. ಈ ಹಿಂದಿನ ಕೊಳಕಿನ ಜ್ಞಾನವನ್ನು ನಿರಾಕರಿಸಿದರೆ… ಹೊಚ್ಚ ಹೊಸದಾದ ಸ್ವತಂತ್ರಪುರದ ಬಾಗಿಲು ನಿನಗಾಗಿ ತೆರೆದುಕೊಳ್ಳುತ್ತದೆ.
ಮಂಗಳಾ: ಜೀವನದಲ್ಲಿ ಯಾವುದು ಮಹತ್ವವಾದದ್ದು?
ಸ್ಮಶಾನವಾಸಿ: ಯಾವುದೂ ಇಲ್ಲ! ಕಂಡುಹಿಡಿದು ನೋಡೋದಾದ್ರೆ ಯಾವುದೂ ಮಹತ್ವವಾದದ್ದಲ್ಲ!! ಎಲ್ಲಕ್ಕೂ ಮಹತ್ವದ ಕಿರೀಟವನ್ನು ನಾವೇ ಕೂಡಿಸಿ ಬಿಡುತ್ತೇವೆ. ಸದಾ ಇರಬೇಕಾದ ಇಂಗಿತ ಜ್ಞಾನ ಒಂದಿರಬೇಕು. ಅದನ್ನ ಶರಣರು ಸಮಯಾಚಾರ ಎಂದು ಕರೆದರು. ಸಮಯಾಚಾರವೆಂದರೆ ಆ ತಾಕ್ಷಣದ ಎಚ್ಚರ. ಇದನ್ನ ನೀನೇ ನಿನ್ನೊಳು ಅಭ್ಯಾಸ ಬಲದಿಂದ ವೃದ್ಧಿಸಿಕೊಳ್ಳಬೇಕು. ಅದನ್ನ ತೊರೆದು ನಿನ್ನ ಅರಿವನ್ನು ಶೋಧಿಸಿ ಕೂತರೆ ಮತಿ ಭ್ರಾಂತಿಯಾಗುತ್ತದೆ. ಇದು ಬೇಡ. ನಿನ್ನ ಈ ಕ್ಷಣದ ಸಮಸ್ಯೆ ಏನೆಂದು ಸರಿಯಾಗಿ ಅರ್ಥ ಮಾಡಿಕೋ.
ಮಂಗಳಾ: ಶರಣ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬಲ್ಲವ… ಅಲ್ಲವೇ?
ಸ್ಮಶಾನವಾಸಿ: ಸುಖ ಬಂದಡೆ ಪುಣ್ಯದ ಫಲವೆನ್ನೆನು,
ದುಃಖ ಬಂದಡೆ ಪಾಪದ ಫಲವೆನ್ನೆನು.
ನೀ ಮಾಡಿದಡಾಯಿತ್ತೆಂದೆನ್ನೆನು,
ಕರ್ಮಕೆ ಕರ್ತುವೆ ಕಡೆಯೆಂದೆನ್ನೆನು,
ಉದಾಸೀನವಿಡಿದು ಶರಣೆನ್ನೆನು.
ಕೂಡಲಸಂಗಮದೇವಾ, ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ-
ಸಂಸಾರವ ಸವೆಯೆ ಬಳಸುವೆನು.
ಶರಣ ಸುಖಾಪೇಕ್ಷಿಯಲ್ಲ, ದುಃಖಕ್ಕೊಳಗಾಗುವವನೂ ಅಲ್ಲ. ಎಲ್ಲವೂ ಪರಮಾತ್ಮನ ಇಚ್ಛೆಯೆಂಬ ನಿರ್ಧಾರದಿಂದ ಜಡವಾಗಿ ಇರುವವನೂ ಅಲ್ಲ. ಎಲ್ಲಾ ಕರ್ಮಗಳಿಗೂ ಕರ್ತನೇ ಕಾರಣ ಎಂದು ತಿಳಿದು ಆ ಸಿದ್ಧಾಂತಕ್ಕೆ ಜೋತು ಬೀಳುವವನೂ ಅಲ್ಲ. ಇಲ್ಲವೇ ಅಜಾಗರೂಕತೆಯಿಂದ ಎಲ್ಲವನ್ನೂ ಉದಾಸೀನ ಮಾಡುವವನೂ ಅಲ್ಲ. ಈ ಹಿಂದೆ ಕಟ್ಟಿಕೊಂಡು ಕೂತು ಅಂಟಿಕೊಂಡಿರುವ ಸಂಸಾರವೆಂಬ ಮನದ ಸಿಕ್ಕುಗಳನ್ನು ಗುರುವೆಂಬ ಕೂಡಲಸಂಗಮನಿಂದಾದ ಉಪದೇಶದಿಂದ ಬಿಡಿಸಿಕೊಂಡು ಹಸನಾಗಿ ಬಾಳುವ ಜಾಣ್ಮೆಯುಳ್ಳವನು.
Comments 21
Basavaraj Bengaluru
Jul 5, 2021ಪ್ರಶ್ನೋತ್ತರದ ಎರಡೂ ಭಾಗಗಳು ತುಂಬಾ ಚನ್ನಾಗಿದ್ದವು. ತಲಪರಿಗೆ ಎಂದು ಯಾಕೆ ಹೆಸರಿಟ್ಟಿರಿ ಎಂದು ಈಗ ಅರ್ಥವಾಯಿತು. ಹೀಗೆ ಬರೆಯುತ್ತಲೇ ಇರಿ… ಶರಣರನ್ನು ನೋಡಿದ ನಿಮ್ಮ ಭಾಗ್ಯವನ್ನು ನಮಗೂ ಹಂಚಿದ್ದಕ್ಕೆ ವಂದನೆಗಳು.
ಗುರುರಾಜ್ ಹೊಸಳ್ಳಿ
Jul 6, 2021ಲೇಖನದಲ್ಲಿ ಹೊಸತನವಿದೆ, ನಿಮ್ಮ ಪ್ರಶ್ನೆಗೆ ಸ್ಮಶಾನವಾಸಿ ಶರಣರು ನೀಡಿದ ವಿಭಿನ್ನ ಉತ್ತರಗಳು ನನ್ನ ಆಲೋಚನೆಗಳನ್ನೇ ಕೆಣಕುವಂತಿವೆ.
ಶ್ರೀಕಂಠಪ್ಪ ಯಲಬರ್ಗಾ
Jul 7, 2021ಈಗ ಆಧ್ಯಾತ್ಮ ಎನ್ನುವ ಪದ ತಾವು ಹೇಳಿದಂತೆ ಅಕ್ಷರಶಃ ವ್ಯಾಪಾರೀಕರಣಗೊಂಡಿದೆ. ಈಗ ಚಾಲ್ತಿಯಲ್ಲಿರುವ ಮಹಾ ಮಹಾ ಗುರುಗಳ ಹತ್ತಿರ ಹೋಗಿ ಅಡ್ಡಾಡಿ, ಅವರು ಹೇಳೋದನ್ನೆಲ್ಲಾ ಮಾಡಿ ನನ್ನ ಸಮಯ ಬಹಳ ವ್ಯರ್ಥವಾಗಿದೆ. ಬಸವಣ್ಣನವರ ವಚನಗಳನ್ನ ಹಿಡಿದು ಕುಳಿತಿದ್ದೇನೆ, ಆದರೆ ಏನೂ ಸರಿಯಾಗಿ ಗೊತ್ತಾಗುತ್ತಿಲ್ಲ. ಅವರ ಆಧ್ಯಾತ್ಮ ಕಾಯಕವೆಂದು ಅಂದುಕೊಂಡು ನನ್ನ ಕೆಲಸವನ್ನು ನಿಷ್ಠೆಯಿಂದ ಮುಂದುವರಿಸಿದ್ದೇನೆ.
Vinod Mangalore
Jul 7, 2021ಲೇಖನದ ಒಂದೊಂದು ಸಾಲೂ ಬರೆದಿಟ್ಟುಕೊಳ್ಳುವಂತಿವೆ. ಶರಣರು ಜೀವನ ಕೌಶಲ್ಯವನ್ನು ಹೇಳಿಹೋಗಿದ್ದಾರೆ, ನಾವು ಅದನ್ನು ಕಾಣಲರಿಯದ ಕುರುಡು ಮತಾಂಧರಾಗಿದ್ದೇವೆ. ಶರಣರನ್ನು ನೋಡಿದ ಪುಣ್ಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ವಂದನೆಗಳು ಅಕ್ಕಾ.
ಸಿದ್ದಯ್ಯ ಅಂತರಗಂಗೆ
Jul 8, 2021ಇರುವುದನ್ನು ಅರಿಯದೇ ಇಲ್ಲದುದಕ್ಕಾಗಿ ಪರಿತಪಿಸುವವರು ನಾವು. ಇಲ್ಲದ್ದರ ಕಲ್ಪನೆಯಲ್ಲಿ ಕೊರಗುವವರು ನಾವು. ನಮ್ಮಂಥವರಿಗೆ “ನಾವು ಇತ್ತಿತ್ತಲೇ….. ಶರಣರು ಅತ್ತತ್ತಲೇ…” ಉತ್ತರ ಕೊಡುವುದರ ಜೊತೆಜೊತೆಗೆ ಕಿವಿಹಿಂಡಿ ಬುದ್ಧಿವಾದ ಹೇಳುವ ಸ್ಮಶಾನವಾಸಿಗಳ ಪಾದಗಳಿಗೆ ಶರಣು ಶರಣು.
Indudhar
Jul 12, 2021ಧಾರ್ಮಿಕ ಭಾವಕ್ಕಿಂತ ಆಧ್ಯಾತ್ಮಿಕತೆ ತುಂಬಾ ದೊಡ್ಡದು ಎಂದು ನಾನು ನಂಬಿದ್ದೇನೆ. ಧರ್ಮ ಬಾಹ್ಯಾಚರಣೆಗೆ ಸಂಬಂಧಿಸಿದ್ದರೆ ಆಧ್ಯಾತ್ಮಿಕ ಮೋಕ್ಷ ಸಾಧನೆಗೆ ಸಂಬಂಧಿಸಿದ್ದು, ಆಧ್ಯಾತ್ಮಜೀವಿಗಳು ಶಾಂತಿಪ್ರಿಯರು. ಶರಣರು ಆಧ್ಯಾತ್ಮಜೀವಿಗಳು. ಆದರೆ ನಿಮ್ಮ ಮಾತುಗಳು ನಿಜಕ್ಕೂ ನನ್ನಲ್ಲಿ ಹೊಸ ವಿಚಾರದ ಅಲೆಗಳನ್ನು ಎಬ್ಬಿಸಿವೆ. ನೀವು ಆಧ್ಯಾತ್ಮ ಅನ್ನೋ ಪದವನ್ನ ಯಾಕೆ ತುಚ್ಚವಾಗಿ ಕಾಣುತ್ತೀರಿ ಎನ್ನುವುದು ನನಗೆ ಗೊತ್ತಾಯಿತು. ಬಯಲು ನನ್ನನ್ನು ಹೀಗೆ ಯಾವಾಗಲೂ ಹೊಸ ವಿಚಾರಗಳಿಂದ ಹೊಸ ದಿಕ್ಕುಗಳತ್ತ ತಿರುಗಲು ಪ್ರೇರೇಪಿಸುತ್ತಲೇ ಇರುತ್ತದೆ.
renukaiah
Jul 13, 2021‘ಉಂಡುದುನುಣ ಬಂದ ಹಂದಿಯ ಬಾಳುವೆ’- ಎಂದು ಬಸವಣ್ಣನವರು ಎಚ್ಚರಿಸಿದ ಮಾತು ನಮಗೆ ಇದುವರೆಗೆ ಕಾಣಲೇ ಇಲ್ಲ ತಾಯಿ… ನಾವು ಉಣಬೇಕು, ನಾವು ಅನುಭವಿಸಬೇಕು ಅಂತ ಅವತ್ತು ಅಪ್ಪ ಬಸವಣ್ಣ ವಚನ ಬರೆದು ಹೋಗಿದ್ದಾನೆ. ನಾವು ಶರಣರ ಅನುಭಾವ ಮಾತಾಡುವುದರಲ್ಲೇ ಜೀವನ ಮುಗಿಸಿ ಬಿಟ್ಟೆವು!!!
Gangadhar navale
Jul 14, 2021ಜೀವನ ಕೌಶಲ್ಯದ ವಿಷಯ ಬಹಳ ಮುಖ್ಯವಾದದ್ದು. ಅದನ್ನು ಕಲಿಸಿಕೊಟ್ಟ ಶರಣರ ವಿಚಾರಗಳನ್ನು ಮನಸ್ಸಿಗೆ ಮುಟ್ಟುವಂತೆ ವಿವರಿಸಿದ್ದೀರಿ. ಇದನ್ನು ಓದುತ್ತಿದ್ದರೆ ನಮಗೆ ಶರಣರ ವಿಚಾರಗಳು, ವಚನಗಳು ಎಷ್ಟೊಂದು ಮೌಲ್ಯಯುತವಾಗಿವೆ ಎಂಬುದು ಗೊತ್ತಾಗುತ್ತದೆ. ನಿಮ್ಮ ಪ್ರಶ್ನೋತ್ತರ ಮಾಲಿಕೆ ನನಗೆ ಬಹಳ ಹಿಡಿಸಿತು. ಶರಣು ಶರಣು.
H.M. Patil
Jul 15, 2021ಯಾವುದೂ ಜೀವನದಲ್ಲಿ ಮಹತ್ವವಾದುದೇ ಅಲ್ಲವೆಂದರೆ ಇಷ್ಟೆಲ್ಲಾ ಲೋಕದ ವ್ಯವಹಾರಗಳು, ಚಿತ್ರವೈಚಿತ್ರ್ಯಗಳು ಯಾಕಾದವು? ಜೀವನವೇ ಮಹತ್ವವಾದುದು ಎಂದು ಶರಣರು, ಸಂತರು ಬದುಕಿ ತೋರಿದರು.
H V Jaya
Jul 16, 2021ಈ ಲೇಖನ ಏನೋ ಒಂದು ರೀತಿಯಲ್ಲಿ ವಿಶೇಷವಾಗಿದೆ. “ಆಧ್ಯಾತ್ಮ” ಇದರ ಬಗ್ಗೆ ಒಂದು ವಿಶೇಷವಾದ ಅರ್ಥ. ಪ್ರತಿಯೊಂದೂ ಸಾಲಿನಲ್ಲೂ ಅರ್ಥಗರ್ಭಿತವಾದ ಪದಗಳು.ಮನದ ಆಳದಲ್ಲಿ ಬೇರೂರುವಂತಹ ಲೇಖನ . ತುಂಬಾ ಚನ್ನಾಗಿದೆ.
ಶರಣು ಶರಣಾರ್ಥಿಳು
Panchakshari H v
Jul 16, 2021ಎಂಥಾ ಜ್ಞಾನದ ಚಿಲುಮೆ! ವಸ್ತುವನ್ನು ವಾಸ್ತವವಾಗಿ ನೋಡುವ , ಅನುಭವಿಸುವ ರೀತಿಯೇ ಅನನ್ಯ!
ಉಂಡುದುನುಣ ಬಂದ ಹಂದಿಯ ಬಾಳುವೆ’ ಎಂದು ಬಸವಣ್ಣ ಅಂದೇ ಮರುಗಿದರು ಎಂಬುದು ಬಹಳ ಅರ್ಥಪೂರ್ಣ ನುಡಿಗಟ್ಟು.
Rajesh Bhadravathi
Jul 17, 2021ಯಾರೋ ಪಡೆದಂತಹ ಆಧ್ಯಾತ್ಮಿಕ ಅನುಭವ ನನ್ನ ಅನುಭವಕ್ಕೂ ಸಿಗುತ್ತದೆಂಬ ಊಹೆ ಆಧ್ಯಾತ್ಮವಾಗಲಾರದು!- ಈ ಮಾತು ನನ್ನನ್ನು ಎರಡು ಮೂರು ದಿನಗಳಿಂದ ಇನ್ನಿಲ್ಲದಂತೆ ಕಾಡಿದೆ. ಊಹೆಗಳಲ್ಲಿಯೇ ನನ್ನ ಆಧ್ಯಾತ್ಮದ ಹುಡುಕಾಟ ಕಳೆದುಹೋಗಿದೆ. ನನಗಂತೂ ಯಾವ ಅನುಭವವೂ ಆಗಲಿಲ್ಲ. ನನ್ನ ಪೂರ್ವಜನ್ಮದ ಪಾಪ, ಶಾಪ ಎಂದುಕೊಂಡು ಹಳಹಳಿಸುತ್ತಿರುವಾಗ ಈ ಲೇಖನ ಕಳಿಸಿದಿರಿ. ಅಕ್ಕಾ, ಮತ್ತೆ ನನ್ನ ಹುಡುಕಾಟಕ್ಕೆ ಭರವಸೆಯನ್ನು ತುಂಬಿದ ನೈಜ ಮಾತುಗಳು ಇಲ್ಲಿವೆ. ಖುದ್ದಾಗಿ ನಿಮ್ಮೊಡನೆ ಮಾತನಾಡುವೆ. ಅನಂತ ಶರಣುಗಳು.
ವಿಶ್ವಾಸ್ ಹತ್ತಿ, ವಿಜಯಪುರ
Jul 18, 2021ನಾಲಿಗೆಯ ಸಡಗರದಲ್ಲಿ ಮೆರೆಯುವವರೇ ಸುತ್ತಲೂ ತುಂಬಿದ್ದಾರೆ. ನಾಲಿಗೆ ಎಲ್ಲಿ ಉದ್ದವಾಗಿರುತ್ತದೋ ಅಲ್ಲಿ ಒಣಮಾತುಗಳ ಪ್ರದರ್ಶನ ತುಂಬಿರುತ್ತದೆ. ಅಂತಹ ಮಾತುಗಳು ಯಾರನ್ನೂ ಬದಲಾಯಿಸಲಾರವು. ಕೇವಲ ಬುದ್ಧಿ ಸಾಮರ್ಥ್ಯ ಪ್ರದರ್ಶನಕ್ಕೆ ಮಾತ್ರ ಇವು ಉಪಯೋಗವಾಗುತ್ತವೆ. ಮೌನಮುನಿಯೊಬ್ಬರನ್ನು ನೀವು ಮಾತನಾಡಿಸಿದಂತಿದೆ ಈ ಮಾತುಕತೆ. ನನಗೆ ತುಂಬಾ ಹಿಡಿಸಿತು.
Shobha Teacher, Bhalki
Jul 18, 2021ಮಾನವ ಜೀವನದ ಸಂಕೀರ್ಣ ಸವಾಲುಗಳಿಗೆ ಹಾಗೂ ನೈಜ. ಸಂಗತಿಗಳಿಗೆ ಎದೆಗೊಟ್ಟು ನಿಲ್ಲುವ ವಿವೇಕ ಯಾವುದಿದೆಯೋ ಅದು ಆಧ್ಯಾತ್ಮವೆನಿಸುತ್ತದೆ. ಹೌದು ನನಗೂ ಇದು ತುಂಬಾ ಸತ್ಯವೆನಿಸುತ್ತದೆ.
ಬಸವರಾಜ. ಗೂ. ಸೂಳೀಭಾವಿ
Jul 18, 2021” ನಮ್ಮ ಜೀವನದಂತೆ, ನಮ್ಮ ಲೇಖನ ”
“ರೋಗಿ ಬಯಸಿದ್ದು ಹಾಲು ಅನ್ನ, ಡಾಕ್ಟರ ಹೇಳಿದ್ದು ಹಾಲು ಅನ್ನ.” ಬಸವಾದಿಶರಣರ ಶರಣರ ಬಗೆಗೆ ನನ್ನ ಮನದಲ್ಲಿ ಹೊಳೆಯುವ ಕೆಲವು ವಿಚಾರಗಳಿಗೆ ಸ್ಪಷ್ಟತೆ ಸಿಗದೆ ಇರುವಾಗ, ಸರಿಯಾಗಿ, ತಮ್ಮ ಅತೀ ಅಮೂಲ್ಯವಾದ ಲೇಖನಗಳು ಬಂದು, ನನ್ನ ಮನಸ್ಸಿನ ವಿಚಾರಗಳಿಗೆ ಒಂದು ಸ್ಪಷ್ಟತೆ ಸಿಕ್ಕು, ಮನಸ್ಸು ನಿರಮ್ಮಳತೆಗೆ ಜಾರುತ್ತದೆ.
ಬಸವಾದಿಶರಣರ ವಚನ ಸಾಹಿತ್ಯವನ್ನು ಸರಿಯಾಗಿ ಜನರಿಗೆ ತಲುಪಿಸದೆ, ಸಂಪೂರ್ಣ ವ್ಯಾಪಾರೀಕರಣ ಮಾಡಿಕೊಂಡಿದ್ದಾರೆ ನಮ್ಮ ಮಠಮಾನ್ಯಗಳು, ಸ್ವಾಮಿಗಳು ಹಾಗೂ ಕೆಲವು ಲೇಖಕರು.
ಆದರೆ ತಾವು ಮಾತ್ರ ತಮ್ಮ ಲೇಖನಗಳ ಮೂಲಕ, ಬಸವಾದಿಶರಣರ ಮೂಲ ಅಸಲಿ ಸಾರವನ್ನು ವಚನಗಳನ್ನು ಉಲ್ಲೇಖಿಸಿ, ನಮಗೆಲ್ಲಾ ಉಣಬಡಿಸುತ್ತಿರುವಿರಿ.
ಸರಳವಾದ, ನೈಜತೆಯಿಂದ ಕೂಡಿರುವ ಹಾಗೂ ಜನರ ಬಾಳನ್ನು ಹಸನು ಮಾಡುವ ಇಂತಹ ಲೇಖನಗಳು ಮೂಡಲಿ. ಶರಣು ವಂದನೆಗಳು.
ಬಸವರಾಜ ಹಂಡಿ
Jul 18, 2021ತಲಪರಿಗೆ ಆನ್ನುವ ಶಬ್ದಕ್ಕೆ ಎಷ್ಟು ಚೆನ್ನಾಗಿ ಅರ್ಥ ಇದೆಯೋ ಅಷ್ಟೆ ಚೆನ್ನಾಗಿ ಹಾಗು ಪರಿಣಾಮಕಾರಿ ಆಗಿ ಲೇಖನ ಮೂಡಿಬಂದಿದೆ.
ಸ್ಮಶಾನವಾಸಿ ಕೊಡುವ ಉತ್ತರಗಳು ಬಹಳ ಅರ್ಥಪೂರ್ಣವಾಗಿ ಹಾಗು ತಪಪರಿಗೆಯ ಅನುಭವವನ್ನು ಉಂಟು ಮಾಡುತ್ತವೆ. ಈ ತರ ಉತ್ತರಗಳಿಗೆ ಮಂಗಳಾ ಶರಣೆ ಕೇಳಿದ ಗಂಭೀರ ಪ್ರಶ್ನೆಗಳೇ ಕಾರಣ.
ಈ ಲೇಖನ ಓದಿದ ನಂತರ ಕಳೆದ 40 ವರ್ಷಗಳಲ್ಲಿ ಉಂಟಾದ ಮನೋ ಸಂರಚನೆಗಳು ಹಾಗು ತಪ್ಪು ಗ್ರಹಿಕೆಗಳಿಂದ ಉಂಟಾದ ಜ್ಞಾನಗಳು ಪಲ್ಲಟಗೊಂಡುವು.
ಬಹಳ ಸಲ ನಾವು ಶಬ್ದಸುಖಕ್ಕೆ ಹಾಗು ಅಭಿಮಾನಗಳಿಗೆ ಅಂಟಿಕೊಂಡಿರುತ್ತೇವೆ. ಇದು ನಮ್ಮನ್ನು ಆಳವಾದ ಅಧ್ಯಯನದಿಂದ ಉಂಟಾಗುವ ಅನುಭಾವವನ್ನು ಕಸಿದುಕೊಳ್ಳುತ್ತದೆ. ನಾವು ಕೇವಲ ಮೇಲಿನ ಪದರದಲ್ಲಿ ಇರುತ್ತೇವೆ ಮತ್ತು ಸತ್ಯ ಅಂತ ತಿಳಿದುಕೊಂಡಿರುತ್ತೇವೆ.
ಈ ಅದ್ಬುತವಾದ ಹಾಗು ವಿರಳವಾದ ಜ್ಞಾನದಾಸೋಹಕ್ಕೆ ನಾವು ಸ್ಮಶಾನವಾಸಿ ಹಾಗು ಮಂಗಳಾ ಶರಣೆಗೆ ಚಿರಋಣಿ. ಧನ್ಯವಾದಗಳು ಹಾಗು ಶರಣು ಶರಣಾರ್ಥಿ
Jyothilingappa
Jul 19, 2021ಉಣಿಸುತಲೇ ಇರಲಿ ಈ ಸ್ಮಶಾನ ವಾಸಿಗಳು…
ಎದೆಗೊಟ್ಟು ನಿಲ್ಲುವ ವಿವೇಕ, ಮಾನವ ಪ್ರೀತಿ ಉದ್ದೀಪಿಸುವ ತತ್ವ.. ಇಂತಹ ಹೊಸ ಹೊಸ ವ್ಯಾಖ್ಯಾನ ಗಳನ್ನ ನಮಗೆ ಉಣಬಡಿಸುವ ಇಬ್ಬರಿಗೂ ಧನ್ಯವಾದಗಳು.
ವಿದ್ಯಾಧರ ಗೋಕಾಕ್
Jul 21, 2021ಅಂತರಂಗವನ್ನು ಪರಿಶುದ್ಧಗೊಳಿಸಿಕೊಳ್ಳುವ ಅನೇಕ ಸಲಹೆಗಳನ್ನು ಲೇಖನದಲ್ಲಿ ಓದಿದೆ. ನಿನ್ನನ್ನು ನೀನು ರಿಪೇರಿ ಮಾಡಿಕೊ ಎಂದ ಮಾತು ಬಹಳ ಮುಖ್ಯವೆನಿಸಿತು. ಕೆಟ್ಟ ಮೆಷಿನ್ನು ಸರಿಯಾದ ಸರಕನ್ನು ತಯಾರಿಸುತ್ತದೆಂದು ನಿರೀಕ್ಷಿಸುವುದು ಮೂರ್ಖತನವೇ…
Prakash S Desmukh
Jul 22, 2021ಅರ್ಥವಿಲ್ಲದೆ , ಅಂಧಾನುಕರಣೆಯಿಂದ ಬರೀ ದೇವರು-ದೈವತ್ವಕ್ಕೆ ಜೋತುಬಿದ್ದು ಸೋಗಿನ ಆಧ್ಯಾತ್ಮಿಕ ಅನುಸಂಧಾನಕರಿಗೆ ಇದೊಂದು ಆದರ್ಶ ಸಮಯಾಚಾರದ
ಮಡಪತಿ.ವಿ.ವಿ
Jul 22, 2021ಅದ್ಭುತವಾದ ಲೇಖನ. ಆಧ್ಯಾತ್ಮಿಕ ನಿಲುವುಗಳು ಪ್ರಶ್ನೋತ್ತರ ರೂಪದಲ್ಲಿ ಬಸವಾದಿ ಶರಣರ ವಚನಗಳ ಉಲ್ಲೇಖಗಳು ಸುಂದರವಾಗಿ ಮನಗೊಂಡು ನಿಂತಿದೆ.
ಶರಣು ಶರಣಾರ್ಥಿ ಅಕ್ಕಾ ಅವರೆ.
👏👏🙏🙏🙏
ಗುರುಬಸಪ್ಪ ಸೊಲ್ಲಾಪುರ
Aug 5, 2021ನಮ್ಮೊಳಗೆ ಮನೋಗತವಾಗಿರುವ ವಿದ್ವಂಸಾತ್ಮಕವಾದ ಶತೃಗಳು ಇಲ್ಲವಾಗಿದ್ದಾಗ ಹೊರಗಿನ ಶತೃಗಳು ನಮ್ಮನ್ನು ಏನೂ ಮಾಡಲಾರರು. ಯಾವ ವ್ಯಕ್ತಿ ಪರಿಶುದ್ಧವಾದ ಆಲೋಚನೆಗಳೊಂದಿಗೆ ಜೀವಿಸುತ್ತಾನೋ ಅಥವಾ ಸರಿಯಾದ ಕೆಲಸ (ಕಾಯಕ) ಮಾಡುತ್ತಾನೋ ಅಂತಹವರಿಗೆ ಸಹಜ ಸುಖ ನೆರಳಿನಂತೆ ಹಿಂಬಾಲಿಸುತ್ತಿರುತ್ತದೆ…. ಅದ್ಭುತವಾದ ಮಾರ್ಗದರ್ಶನ. ಶರಣು ಶರಣು.