ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಮಾಡಿ ಉಣ್ಣೋ ಬೇಕಾದಷ್ಟು/
ಬೇಡಿ ಉಣ್ಣೋ ನೀಡಿದಷ್ಟು
ಮಾಡಿದವಗ ಮಡಿಗಡಬ/
ಮಾಡದವಗ ಬರೀಲಡಬ//
ಇವು ಕಡಕೋಳ ಮಡಿವಾಳಪ್ಪನವರ ತತ್ವಪದವೊಂದರ ಆಯ್ದ ಸಾಲುಗಳು. ಈ ಇಡೀ ತತ್ವಪದ ಬಸವಣ್ಣನವರ ಕಾಯಕ ಮತ್ತು ದಾಸೋಹ ಸಂಕಲ್ಪ ಪ್ರಜ್ಞೆಗಳನ್ನು ಏಕಕಾಲಕ್ಕೆ ಸಂವೇದಿಸುತ್ತದೆ. ಅದರೊಂದಿಗೆ ಉಲ್ಲೇಖಿಸಲೇ ಬೇಕಿರುವ ಮತ್ತೊಂದು ಎಚ್ಚರವೆಂದರೆ ದುಡಿಯುವ ಮತ್ತು ದುಡಿದುದಕ್ಕೆ ಹಕ್ಕಿನಿಂದ ಪಡೆದುಣ್ಣುವ ಕಾರ್ಲ್ ಮಾರ್ಕ್ಸ್ ಶ್ರಮಸಂಸ್ಕೃತಿಯ ವಿಚಾರಧಾರೆಗಳನ್ನು, ಕಾರ್ಲ್ ಮಾರ್ಕ್ಸ್ ಕಾಲದ ಪೂರ್ವದಲ್ಲೇ ಈ ತತ್ವಪದ ಹೇಳುತ್ತದೆ.
ಎಲ್ಲೋ ಹುಡುಕಿದೆ ಇಲ್ಲದ ದೇವರ,
ಕಲ್ಲು ಮಣ್ಣುಗಳ ಗುಡಿಯೊಳಗೆ.
ಇದು ನಮ್ಮ ಕಾಲದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಕವಿತೆ. ಪ್ರಗತಿಪರ ಆಶಯಗಳ ಈ ಕವಿತೆ ಕುರಿತು ನಮಗೆಲ್ಲ ಎಲ್ಲಿಲ್ಲದ ಪ್ರೀತಿ. ಅಂದಹಾಗೆ ಇಂತಹದ್ದೇ ಇನ್ನಷ್ಟು ಪ್ರಖರ ವಿಚಾರಗಳ ಮಡಿವಾಳಪ್ಪನವರ ತತ್ವಪದ ಹೀಗಿದೆ :
ಪುಣ್ಯದಿಚ್ಛೆಗಾಗಿ ಯಾತ್ರೆ ಮಾಡುವರೋ/ ನದಿಯೊಳು
ಕಣ್ಣು ಮೂಗು ಬಾಯಿ ಮುಕುಳಿ ತೊಳಕೊಂಬುವರೋ//
ಅನ್ಯಾಯದ ಮಾತು ಒಂದೂ ಅರಿಯರೋ/ ಇಂಥ
ಟೊಣ್ಣೆ ಸೂಳೆಮಕ್ಕಳಿಗಿನ್ನು ಯಾರು ಹೇಳುವರೋ//
ಕಲ್ಲು ಮಣ್ಣು ದೇವರೆಂದು ಪೂಜೆ ಮಾಡುವರೋ/
ಬಹಳ ಬಲ್ಲಿದರು ಬಂದರೆ ಕೊಲ್ಲು ಎಂಬುವುರೋ//
ಈ ಎರಡು ತತ್ವಪದಗಳನ್ನು ಗಟ್ಟಿಯಾಗಿ ಕಟ್ಟಿ ಹಾಡಿದವರು ಕಡಕೋಳ ಮಡಿವಾಳಪ್ಪ. ಅಜಮಾಸು ಇನ್ನೂರೈವತ್ತಕ್ಕು ಹೆಚ್ಚು ವರ್ಷಗಳ ಹಿಂದೆಯೇ ಯಾವ ಮುಲಾಜು, ಭಿಡೆ ಮುರವತ್ತುಗಳಿಗೆ ಈಡಾಗದೇ ಹಸಿಗೋಡೆಗೆ ಹಳ್ಳು ಹೊಡೆದಂತೆ ಪ್ರತಿಭಟನೆಯ ಪ್ರಗತಿಪರ ಕಾವ್ಯ ರಚಿಸಿದರು. ಜೀವಪರ ಚಿಂತನೆಗಳ ಇಂತಹ ನೂರಾರು ತತ್ವಪದಗಳನ್ನು ಸೃಷ್ಟಿಸಿದ ಅವರನ್ನು ಕನ್ನಡ ಕಾವ್ಯ ಮೀಮಾಂಸೆ ಲೋಕ ಗುರುತಿಸಲಿಲ್ಲ.
ಅಷ್ಟೇ ಯಾಕೆ ಒಟ್ಟಾರೆ ತತ್ವಪದಗಳನ್ನು ಸತ್ತವರ ಮನೆಯ ಹೆಣದ ಸಾನಿಧ್ಯದ ಮತ್ತು ಅಮವಾಸ್ಯೆ ಕತ್ತಲೆ ಹಾಡುಗಳಂತೆ ಗುರುತಿಸಿತು. ಹೆಚ್ಚೆಂದರೆ ವಿಶ್ವವಿದ್ಯಾಲಯಗಳ ವಿದ್ವಾಂಸ ಜಗತ್ತು ಪಿಎಚ್.ಡಿ. ಪದವಿಗೋ, ಸೆಮಿನಾರ್ ಮತ್ತಿತರೆ ವೇದಿಕೆಗಳ ವಸ್ತುವಾಗಿ ಇಲ್ಲವೇ ಕುಳುಬಾನ ಒಟ್ಟಿದಂತಹ ಪುಸ್ತಕಗಳ ತಮ್ಮ ಪಾಂಡಿತ್ಯ ಪ್ರದರ್ಶನಗಳಿಗಾಗಿ ಬಳಕೆ ಮಾಡಿಕೊಂಡುದುದೇ ಅಧಿಕ. ಆದರೆ ಇವತ್ತಿಗೂ ಭಜನೆಗಳ ಮೂಲಕ ನಮ್ಮ ಜನಪದ ಲೋಕದ ಸಿರಿಕಂಠಗಳು ಈ ಪದಗಳನ್ನು ಜತನವಾಗಿಟ್ಟು ಕೊಂಡಿವೆ. ಏಕತಾರಿ ನುಡಿಸಿ ಹಾಡುತ್ತಾ ಬಂದಿರುವ ಗಾಯನ ಪರಂಪರೆ ಮತ್ತು ತಮ್ಮ ಗೋಚರಿಕೆಯ ಅರ್ಥಗ್ರಹಿಕೆಗಳೊಂದಿಗೆ ಬದುಕುತ್ತಿದ್ದಾರೆ. ಅದೇನೋ ಅವರುಗಳನ್ನು ವಕ್ತೃಗಳೆಂಬ ವಕ್ರ ವಕ್ರ ಪದಗಳಿಂದ ಪಂಡಿತಲೋಕ ಕರೆದು ಪ್ರೀತಿಸುವುದೇ ವಿಚಿತ್ರ ಸೊಗಸು.
ಸಾಮಾಜಿಕ ಕ್ರಾಂತಿಯ ವಚನಕಾರರ ಶರಣ ಚಳವಳಿ ಮತ್ತು ಭಕ್ತಿ ಮಾರ್ಗದ ದಾಸೋತ್ತರ ಬಹುದೊಡ್ಡ ಆಂದೋಲನವೆಂದರೆ ತತ್ವಪದಗಳದ್ದು. ವಚನಗಳಿಗಿಂತಲೂ ತತ್ವಪದಗಳ ರಾಚನಿಕ ಸ್ವರೂಪ ಅತ್ಯಂತ ಸರಳ. ಲೋಕ ಬದುಕಿನ ನಿತ್ಯ ಸಂಗತಿಗಳು ತತ್ವಪದಗಳ ತಾತ್ವಿಕ ಭೂಮಿಕೆಯ ಜವಾರಿತನದ ಉಪಮೆ, ರೂಪಕಗಳಾಗಿ ಅನೇಕ ಪದಗಳ ಗರ್ಭಗಳಲ್ಲಿ ಪಾತ್ರಗೊಂಡಿವೆ. ಆದರೆ ಗುರುಮಾರ್ಗ ಪರಂಪರೆಯೇ ತತ್ವಪದಗಳ ಬಹುಳ ಪ್ರಜ್ಞೆಯ ಮೂಲಧಾತು. ಅಂತೆಯೇ ತತ್ವಪದಗಳ ಜಗತ್ತು ಹತ್ತು ಹಲವು ಬಗೆಯ ಅನರ್ಘ್ಯ ಜಾತಿ ಗಿಡ ಮರಗಳ ಮಹೋನ್ನತ ಕಾಡು. ಕುಂಡದ ಹೂಗಳು ಇಲ್ಲವೇ ಸಣ್ಣಪುಟ್ಟ ಉದ್ಯಾನದ ಹೂದೋಟಗಳಂತಲ್ಲ.
ಮಾಹಿತಿಯೊಂದರ ಪ್ರಕಾರ ಕರ್ನಾಟಕದಲ್ಲಿ ಎಲ್ಲಾ ಜಾತಿ, ಮತ, ಧರ್ಮಗಳ ಅಜಮಾಸು ಐದುನೂರು ಮಂದಿ ತತ್ವಪದಕಾರರ ಐತಿಹಾಸಿಕ ಪರಂಪರೆಯೇ ಇದೆ. ಅವರನ್ನು ಅವಧೂತ, ಆರೂಢ, ಅಚಲ ಮುಂತಾದ ಪ್ರಾದೇಶಿಕ ಸಂವೇದನೆ ಮತ್ತು ಸಂಪ್ರದಾಯಗಳಿಂದಲೂ ಗುರುತಿಸಲಾಗಿದೆ. ಇವರು ಬೆವರು ಮತ್ತು ಭಕ್ತಿ ಸಂಸ್ಕೃತಿ ಮೂಲಕ ನಿಜದ ನೆಲೆಯ ಸಾಕ್ಷಾತ್ಕಾರ ಮಾಡಿ ತೋರಿದವರು. ಅನೇಕರು ತತ್ವಪದಗಳನ್ನು ಬರೆಯದೆಯೂ ಬಹುತ್ವದ ಬಹುದೊಡ್ಡ ಅನುಭಾವದ ಬದುಕನ್ನು ಬಾಳಿ ಬದುಕಿ, ಜೀವಕಾಳಿನ ಸಮಷ್ಟಿ ಸ್ವಾಸ್ಥ್ಯ ಕಾಪಾಡಿದ್ದಾರೆ. ಜತೆಗೆ ಪರತತ್ವದ ಮಾರ್ಗ ಕಂಡುಕೊಂಡಿದ್ದಾರೆ.
ತತ್ವಪದಕಾರರಲ್ಲಿ ಕಡಕೋಳ ಮಡಿವಾಳಪ್ಪನವರಿಗೆ ಅಗ್ರಮಾನ್ಯ ಸ್ಥಾನ. ಅವರನ್ನು ‘ತತ್ವಪದಗಳ ಅಲ್ಲಮ’ರೆಂದು ಗುರುತಿಸಲಾಗಿದೆ. ಮಡಿವಾಳಪ್ಪನವರ ಬದುಕು ಮತ್ತು ಸಾಧನೆ ಹಲವು ಅನನ್ಯತೆಗಳನ್ನು ಹೊಂದಿದೆ. ವಿಧವೆ ಕರಿಕುಲದ ಗಾಣಿಗರ ಗಂಗಮ್ಮಳ ಮಗನಾಗಿ ಹುಟ್ಟಿದ ಮಡಿವಾಳಪ್ಪನವರ ಹುಟ್ಟೇ ಬಹುದೊಡ್ಡ ಬಂಡಾಯ. ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫರಿಗಿಂತ ಅರ್ಧ ಶತಮಾನ ಕಾಲ ಮೊದಲೇ ಬಾಳಿ ಬದುಕಿದವರು. ಕ್ರಿ.ಶ. ಸುಮಾರು ೧೭೭೦ – ೧೮೬೦ ಅವರ ಜೀವಿತಾವಧಿ. ಹುಟ್ಟೂರು ಕಲಬುರ್ಗಿ ಜಿಲ್ಲೆಯ ಬಿದನೂರು. ಅದೇ ಕಲಬುರ್ಗಿ ಜಿಲ್ಲೆಯ ಇಂದಿನ ಯಡ್ರಾಮಿ ತಾಲೂಕಿನ ‘ಕಡಕೋಳ’ ಅವರ ಕಾಯಕ ಭೂಮಿ. ಅಂತೆಯೇ ಅವರು ಕಡಕೋಳ ಮಡಿವಾಳಪ್ಪನೆಂದೇ ಲೋಕಕ್ಕೆ ಬೆಳಕಾದವರು. ಶಿಶುನಾಳ ಶರೀಫ ಮತ್ತು ಕಡಕೋಳ ಮಡಿವಾಳಪ್ಪನವರಲ್ಲಿ ಮಹತ್ತರ ಸಾಮ್ಯತೆಗಳಿವೆ. ಬ್ರಾಹ್ಮಣನೊಬ್ಬ ಶರೀಫನ ಸಂದರ್ಭದಲ್ಲಿ ಗುರುವಾಗಿ ಬಂದರೆ, ಮಡಿವಾಳಪ್ಪನವರ ಸಂದರ್ಭದಲ್ಲಿ ಶಿಷ್ಯನಾಗಿ ಬರುತ್ತಾನೆ. ಶರೀಫರದು ಖಾದರಲಿಂಗ ಪರಂಪರೆ, ಮಡಿವಾಳಪ್ಪನವರದು ಜೀತಪೀರ ಮಹಾಂತ ಪರಂಪರೆ. ಇಬ್ಬರ ಪರಂಪರೆ ಪ್ರಜ್ಞೆಗಳು ಕನ್ನಡ ಸಾಹಿತ್ಯ ಚರಿತ್ರೆಯ ಮೈಲುಗಲ್ಲುಗಳು.
ಅಂತಹ ಮಾನವೀಯ ಸಾಮರಸ್ಯದ ಮಹಾನಿಧಿಯೇ ಆಗಿದ್ದ ಕಡಕೋಳ ಮಡಿವಾಳಪ್ಪನವರ ಜೀವಿತಾವಧಿಯ ದ್ವಿಶತಮಾನೋತ್ಸವ ಮತ್ತು ಕಡಕೋಳ ಶ್ರೀಮಠದ ಡಾ. ರುದ್ರಮುನಿ ಶಿವಾಚಾರ್ಯರ ಪಟ್ಟಾಧಿಕಾರ ರಜತ ಮಹೋತ್ಸವ ಕಳೆದ ೨೦೨೨ ರ ಎಪ್ರಿಲ್ ಮಾಹೆಯಲ್ಲಿ ಜರುಗಿತು. ಕಳೆದ ಡಿಸೆಂಬರ್ ೧೫ ಮತ್ತು ೧೬ ರಂದು ಎರಡು ದಿನಗಳ ಕಾಲ ಮಡಿವಾಳಪ್ಪನವರ ಅನುಭಾವ ಜಾತ್ರೆ. ಕಡಕೋಳ ಮಹಾಮಠದಲ್ಲಿ ತನ್ನಿಮಿತ್ತ ಪುರಾಣ ಪ್ರವಚನ, ತತ್ವಪದಗಳ ಗಾಯನ ಸೇರಿದಂತೆ ಹತ್ತು ಹಲವು ವಿಧಾಯಕ ಕಾರ್ಯಕ್ರಮಗಳು ಜರುಗಿದವು. ಪಾಲ್ಗೊಳ್ಳುವ ಸಹಸ್ರಾರು ಭಕ್ತರಿಗೆ ನಿತ್ಯವೂ ತ್ರಿವಿಧ ದಾಸೋಹ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹರಗುರು ಚರಮೂರ್ತಿಗಳು, ಸಾಹಿತಿ, ಸಂಸ್ಕೃತಿ ಚಿಂತಕರು, ಸಾಮಾಜಿಕ ಹೋರಾಟಗಾರರು, ರಾಜಕಾರಣಿಗಳು ಪಾಲ್ಗೊಳ್ಳುವ ಮೂಲಕ ಸಾಂಸ್ಕೃತಿಕ ಮಹಾ ಬೆಳಗನೇ ಮೂಡಿಸಿತು.
ಕಡಕೋಳ ಮತ್ತು ಮಡಿವಾಳಪ್ಪ ಇವೆರಡೂ ಬೇರ್ಪಡಿಸಲಾಗದ ಗಂಡಭೇರುಂಡ ಸಂಬಂಧಗಳು. ಮಡಿವಾಳಪ್ಪ ಮತ್ತು ಮಡಿವಾಳೋತ್ತರ ‘ಕಡಕೋಳ ನೆಲದ ನೆನಪುಗಳು’ ಅಲ್ಲಿನ ಹಿರೇಹಳ್ಳದ ನೀರ ನೆರಳಿನಂತೆ ಹರಿದ ಧಾರೆಗಳವು. ಮಡಿವಾಳಪ್ಪನವರ ಪದಗಳನ್ನು ಬೇರೆಯವರು ಎಷ್ಟೇ ಚೆಂದ ಹಾಡಿರಬಹುದು. ಆದರೆ ಕಡಕೋಳ ನೆಲದವರ ಕಂಠದಲ್ಲಿ ಕೇಳಿದಾಗ ನಮಗೆ ಹಂಡೆ ಹಾಲು ಕುಡಿದ ಖಂಡುಗ ಖುಷಿ. ಅಂತಹ ಖರೇ ಖರೇ ನೆನಪಿನ ಬೆವರು ಮತ್ತು ಭಕ್ತಿಯ ಅನುಸಂಧಾನಗಳು, ನೆನಪುಗಳ ಸಿರಿಗೆ ಗರಿ ಮೂಡಿಸಬಲ್ಲವು.
ಕಲ್ಯಾಣದ ಅಲ್ಲಮರ ವಚನ ಕಾಲದ ಮಾದರಿಯ ಅನುಭವ ಮಂಟಪ ಕಡಕೋಳದಲ್ಲಿ ಜರುಗಿದೆ. ಅಂದು ಅಲ್ಲಿ ಅಲ್ಲಮರಿದ್ದರೆ ಇಲ್ಲಿ ಮಡಿವಾಳಪ್ಪನವರಿದ್ದಾರೆ. ಅಲ್ಲಿ ವಚನಕಾರರಿದ್ದರೇ ಇಲ್ಲಿ ತತ್ವಪದಕಾರರು. ಅಲ್ಲಿ ಎಲ್ಲ ಜಾತಿಯವರಿದ್ದರು. ಇಲ್ಲಿಯೂ ಹಾಗೇಯೇ. ಬ್ರಾಹ್ಮಣ ಕುಲದ ಖೈನೂರು ಕೃಷ್ಣಪ್ಪ, ಮುಸ್ಲಿಮರ ಚನ್ನೂರ ಜಲಾಲಸಾಹೇಬ, ಕಬ್ಬಲಿಗರ ಕಡ್ಲೇವಾಡ ಸಿದ್ದಪ್ಪ, ಲಿಂಗವಂತರ ಭಾಗಮ್ಮ, ಹೂಗಾರ ಕುಲದ ರಾಮಪ್ಪ ಪಾಲ್ಗೊಳ್ಳುತ್ತಾರೆ. ಹೀಗೆ ಅನುಭವ ಮಂಟಪ ಮಾದರಿಯ ಅನೇಕ ದೃಷ್ಟಾಂತಗಳನ್ನು ಮಡಿವಾಳಪ್ಪನವರ ಸಂದರ್ಭದಲ್ಲಿ ಕಾಣಬಹುದು.
ಅರಳಗುಂಡಗಿಯಲ್ಲಿ ಶರಣಬಸಪ್ಪ ಮತ್ತು ಮಡಿವಾಳಪ್ಪನವರ ಸುಮಧುರ ಬಾಂಧವ್ಯದ ಶರಣತ್ವ ಸಂಬಂಧಗಳು ಸನಾತನವಾದಿಗಳಿಗೆ ಮುಳುವಾಗುತ್ತವೆ. ವಿಧವೆಯ ಮಗ ಮಡಿವಾಳಪ್ಪನವರ ಲಿಂಗದೀಕ್ಷೆ ಮತ್ತು ಅಯ್ಯಾಚಾರ ಪ್ರಸಂಗಗಳಿಗೆ ಎದುರಾಗುವುದು ಮಡಿವಾಳಪ್ಪನವರ ಹುಟ್ಟಿನ ಕಾರಣಗಳು. ಕರ್ಮಠ ಪ್ರಜ್ಞೆಯ ವೈದಿಕ್ಯದ ಮನಸುಗಳು ಕಠೋರವಾಗಿ ಕಾಡುತ್ತವೆ. ಹಳೇಪ್ಯಾಟಿ ಬಸಯ್ಯನಂತಹ ಕೆಲವು ಮನುವಾದಿಗಳು ಸಮಾನ ಮನಸ್ಕರಿಬ್ಬರ ವಿರುದ್ಧ ಎತ್ತಿಕಟ್ಟುತ್ತಾ ಕತ್ತಿ ಮಸೆಯುತ್ತವೆ. ತನ್ಮೂಲಕ ಕಲ್ಯಾಣ ಕ್ರಾಂತಿಯ ನೆನಪುಗಳು ಅರಳಗುಂಡಗಿಯಲ್ಲಿ ಉತ್ಪಾತಗೊಳ್ಳುತ್ತವೆ.
ಪರಿಣಾಮ ಸುಶೀಲ ಮನದ ಕರುಣಾಗುರು ಶರಣಬಸಪ್ಪ ಮತ್ತು ಮಡಿವಾಳಪ್ಪ ಇಬ್ಬರೂ ಅರಳಗುಂಡಗಿ ತ್ಯಜಿಸಬೇಕಾಗಿ ಬರುತ್ತದೆ. ಕಲ್ಯಾಣ ಕ್ರಾಂತಿಯಷ್ಟು ಪ್ರಖರತೆ ಇಲ್ಲಿ ಢಾಳಾಗಿ ಕಾಣದಿದ್ದರೂ ಘಟನೆಗಳ ಹಿಂದಿರುವ ಮನುಷ್ಯ ವಿರೋಧಿ ಅಮಾನವೀಯ ಒಳಹೇತುಗಳ ಸಾಮ್ಯತೆಯಲ್ಲಿ ಯಾವುದೇ ಫರಕುಗಳಿಲ್ಲ. ಕಲ್ಯಾಣ ಕ್ರಾಂತಿಯ ಆ ಎಲ್ಲ ಘೋರ ನೆನಪುಗಳು ಇಲ್ಲಿ ಸರಳವಾಗಿ ತಳಕು ಹಾಕಿಕೊಂಡಿವೆ. ಮಡಿವಾಳಪ್ಪ ಮತ್ತು ಶರಣಬಸಪ್ಪನ ಕೊಲೆಯ ಸಂಚುಗಳು ಕಲ್ಯಾಣ ಕ್ರಾಂತಿಯ ಹಲವು ಹೋಲಿಕೆಗಳಿಗೆ ಹಾದಿಯಾಗುತ್ತವೆ.
ಲೋಕಸಂಚಾರಿ ಮಡಿವಾಳಪ್ಪ ಶ್ರೇಷ್ಠ ಕೃಷಿಕರಾಗಿದ್ದರು. ಅವರು ಮಾಡಿದ ತೋಟಪಟ್ಟಿ ಕೃಷಿಯೇ ಇವತ್ತಿಗೂ ಕಡಕೋಳ ಮಠದ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ಮನುಷ್ಯನ ಶರೀರಕ್ಕೆ ಬರುವ ರೋಗಗಳಿಗೆ ನೀಡುವ ಸೂಕ್ತ ಚಿಕಿತ್ಸೆ ಸೇರಿದಂತೆ ಭವರೋಗಗಳಿಗೂ ನೀಡುವ ಸೂಕ್ಷ್ಮ ಚಿಕಿತ್ಸೆ ಬಲ್ಲವರಾಗಿದ್ದರು. ಆದರೆ ಮಡಿವಾಳಪ್ಪನವರಿಗೆ ಉಂಡುಡಲು ಯಥೇಚ್ಛವಾಗಿದ್ದುದು ಹೋರಾಟ. ಅವರ ತತ್ವಪದಗಳು ಹೋರಾಟದ ಪ್ರತ್ಯುತ್ಪನ್ನಗಳಂತಿವೆ. ಅಂತೆಯೇ ಇಂದಿಗೂ ಅವರು ನಮ್ಮೆಲ್ಲರ ಬದುಕಿನ ಪ್ರತಿನಿಧಿ. ಬೈಗುಳಗಳಿಗೆ ಸಂಸ್ಕಾರ ಕೊಟ್ಟುದುದು ಅವರ ಪ್ರತಿಭಟನಾ ಕಾವ್ಯ.
ವರ್ತಮಾನದ ಭಾರತಕ್ಕೆ ಬೇಕಿರುವ ಸೂಕ್ತ ಪರಿಹಾರಗಳು, ತತ್ವಪದಕಾರರು ಮತ್ತು ತತ್ವಪದಗಳಲ್ಲಿವೆ. ಕನ್ನಡ ಸಂಸ್ಕೃತಿ ಇಲಾಖೆ ತತ್ವಪದಗಳ ಸಂಗ್ರಹ ಕಾರ್ಯ ಮಾಡಿದೆ. ಆದರೆ ಅವುಗಳ ಗಹನ ಅಧ್ಯಯನ, ಸಂಶೋಧನೆಗಳು ಜರೂರಾಗಿ ಜರುಗಬೇಕಾದ ಅಗತ್ಯವಿದೆ. ಅದಕ್ಕಾಗಿ ಮಡಿವಾಳಪ್ಪನವರ ಜೀವಿತಾವಧಿಯ ದ್ವಿಶತಮಾನೋತ್ಸವ ಜರುಗಿದ ನೆನಪಿಗಾಗಿ ಸರಕಾರವು ‘ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ’ ರಚಿಸಲು ಮುಂದಾಗಲಿ. ಅದು ಕಡಕೋಳದಲ್ಲೇ ಆಗಲಿ. ಈಗ ಆರಂಭಗೊಳ್ಳುವ ಮುಂಗಡ ಪತ್ರ ಅಧಿವೇಶನದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರವನ್ನು ಸರಕಾರ ಘೋಷಣೆ ಮಾಡಲಿ.
Comments 10
Siddappa Kavadi
Feb 13, 2023ಕಡಕೋಳ ಮಡಿವಾಳಪ್ಪನವರ ಭಾವಚಿತ್ರ ನೋಡಿದರೆ ಅವರು ತತ್ವಪದಕಾರರೂ ಹೌದು, ಶರಣರೂ ಹೌದು ಎನಿಸಿತು. ನನಗೆ ಅವರ ಕೃತಿಗಳು ಅಷ್ಟಾಗಿ ಗೊತ್ತಿಲ್ಲವಾದ್ದರಿಂದ ಈ ಲೇಖನ ಹೊಸ ವಿಚಾರಗಳನ್ನು ಕೊಟ್ಟಿದ್ದಕ್ಕೆ ಲೇಖಕರಿಗೆ ಶರಣಾರ್ಥಿಗಳು.
ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
Feb 13, 2023ಸಾಮರಸ್ಯದ ಮಹಾನದಿ ಕಡಕೋಳ ಮಡಿವಾಳಪ್ಪ ಲೇಖನ 👍👍👌👌🙏🏻🙏🏻
VIJAYAKUMAR Ganiger
Feb 16, 2023ತತ್ವಪದತತ್ವಪದಗಳ ಅಲ್ಲಮ’ ಕಡಕೋಳ ಮಡಿವಾಳಪ್ಪ ಶರಣರ ಪರಿಚಯ ತಂಬಾ ಚೆನ್ನಾಗಿ ಮೂಡಿಬಂದಿದೆ.
Danappa Katagi
Feb 16, 2023ತತ್ವಪದಕಾರರ ಕುರಿತು ಒಂದು ಚಿತ್ರಣ ನೀಡಿದ ಬರವಣಿಗೆಯಲ್ಲಿ ಗೊತ್ತಿಲ್ಲದ ವಿಷಯಗಳನ್ನು ಅರಿತುಕೊಂಡೆ, ಅವುಗಳಲ್ಲಿ ಅವಧೂತ, ಆರೂಢ, ಅಚಲರು ತತ್ವಪದಕಾರರಲ್ಲೇ ಬರುತ್ತಾರೆನ್ನುವ ವಿಚಾರವೂ ಒಂದು.
ದೇವಪ್ಪ ಬಾಗಲೂರು
Feb 18, 2023ಕಲ್ಯಾಣದ ಅಲ್ಲಮರ ವಚನ ಕಾಲದ ಮಾದರಿಯ ಅನುಭವ ಮಂಟಪ ಕಡಕೋಳದಲ್ಲಿದೆ ಎಂಬ ವಿಷಯ ತಿಳಿದು ಆಶ್ಚರ್ಯವಾಯಿತು. ಅದರ ಒಂದು ಚಿತ್ರ ಹಾಕಿ ಸರ್.
ಸುರೇಶ ಪಾಟೀಲ
Feb 18, 2023ವಿಧವೆಯ ಮಗ ಮಡಿವಾಳಪ್ಪ- ಎನ್ನುವ ಮಾತು ಬಳಸಿದ್ದೀರಿ. ನಾನೂ ಮಡಿವಾಳಪ್ಪನವರ ಹುಟ್ಟಿನ ಕೆಲವು ಕತೆಗಳನ್ನು ಕೇಳಿದ್ದೇನೆ…. ವ್ಯಕ್ತಿಯ ಜೀವನದಲ್ಲಿ ಅವೆಲ್ಲ ಪರಿಗಣಿಸುವ ಸಂಗತಿಗಳೇ?
veerabhadrappa Bangalore
Feb 21, 2023ಮಡಿವಾಳಪ್ಪನವರು ರೈತರಾಗಿದ್ದರೆ? ಹಾಗಾದರೆ ಅವರು ಭೂತಾಯಿಯ ಹತ್ತಿರವಿದ್ದು ಕಾಯಕ ಮಾಡಿದವರು, ಉತ್ತಿ ಬಿತ್ತುವ ಶ್ರಮದ ಬೆವರಿನಲ್ಲಿ ಅವರ ತತ್ವಪದಗಳು ಮೂಡಿಬಂದಿವೆ, ನಿಜಕ್ಕೂ ನನಗೆ ಇದು ರೋಮಾಂಚನ ನೀಡಿದ ಸಂಗತಿ. ಹೋರಾಟದ ಬದುಕನ್ನು ಮೈಗೂಡಿಸಿಕೊಂಡ ಮಡಿವಾಳಪ್ಪನವರು ಕೃಷಿಕರಾದದ್ದರಿಂದಲೇ ಯಾವುದಕ್ಕೂ, ಯಾರಿಗೂ ಜಗ್ಗದ ಗಟ್ಟಿಗರಾಗಿದ್ದರು.
Shivasharanappa T
Feb 21, 2023ಶರಣಬಸಪ್ಪ ಅವರು ಮಡಿವಾಳಪ್ಪನವರ ಶಿಷ್ಯರೇ? ಇವರಿಬ್ಬರನ್ನು ಕೊಲ್ಲಲು ಯಾಕೆ ಒಳಸಂಚುಗಳು ನಡೆದಿದ್ದವು? ಇವರಿಬ್ಬರ ಸಂಬಂಧವನ್ನು ವಿವರವಾಗಿ ತಿಳಿಸಿದ್ದರೆ ಸ್ಪಷ್ಟತೆ ಸಿಗುತ್ತಿತ್ತು. ಯಾಕೆಂದರೆ ಮಹಾ ವ್ಯಕ್ತಿಗಳನ್ನು ಮುಗಿಸಲು ಎಲ್ಲಾ ಕಾಲದಲ್ಲೂ ಸಂಚುಗಳು ನಡೆದಿರುವುದನ್ನು ಇತಿಹಾಸ ದೃಢಪಡಿಸುತ್ತದೆ.
Kiran P.K
Feb 24, 2023ಕೃಷಿಕರೂ, ಗುರುಗಳೂ, ವೈದ್ಯರೂ ಆಗಿದ್ದ ಕಡಕೋಳ ಮಹಂತ ಮಡಿವಾಳಪ್ಪನವರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಶರಣುಶರಣಾರ್ಥಿ.
Savitha B
Feb 27, 2023ಮಾಡಿ ಉಣ್ಣೋ ಬೇಕಾದಷ್ಟು- ಎನ್ನುವ ಮಡಿವಾಳಪ್ಪನವರ ತತ್ವಪದ ದುಡಿದು ಉಣ್ಣುವ ಶರಣರ ಬದುಕಿನ ಮುಂದುವರಿಕೆಯೇ ಆಗಿದೆ. ಸುಂದರವಾದ ಲೇಖನ. ಮಡಿವಾಳಪ್ಪನವರ ಭಾವಚಿತ್ರವನ್ನು ಇದೇ ಮೊದಲ ಸಲ ನೋಡಿದೆ,ಥ್ಯಾಂಕ್ಯೂ.