
ಸತ್ಯ, ಪರೋಪಕಾರ, ಬ್ರಹ್ಮಚರ್ಯ
‘ನಾವು ಲೋಕೋದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ಯಾರೂ ತಿಳಿದುಕೊಳ್ಳಬಾರದು. ನಮ್ಮ ಪ್ರಯತ್ನ ನಮ್ಮ ಏಳೆಗೆಗಾಗಿ, ನಮ್ಮ ಬಾಳು ಸಫಲಗೊಳ್ಳುವುದಕ್ಕಾಗಿ, ನಮ್ಮ ಜೀವಸಂಸ್ಕಾರಕ್ಕಾಗಿ’. ಇದು ಡಿವಿಜಿ ಅವರ ನುಡಿ. ಹೌದು, ಈ ನುಡಿಮುತ್ತಿನಲ್ಲಿ ಸತ್ಯವಿದೆ. ನಾವೆಲ್ಲ ಕೆಲಸ ಮಾಡುವುದು ನಮ್ಮ ನಮ್ಮ ಏಳಿಗೆ, ಸಫಲತೆ, ಸಂಸ್ಕಾರಕ್ಕಾಗಿ. ಹಾಗಂತ ನಮ್ಮ ಈ ಕೆಲಸದಲ್ಲಿ ಲೋಕೋದ್ಧಾರ ಅಡಗಿಲ್ಲ ಎಂದಲ್ಲ. ಆತ್ಮೋದ್ಧಾರ ಲೋಕೋದ್ಧಾರಕ್ಕೂ ಕಾರಣವಾಗುವುದು. ಆತ್ಮಕಲ್ಯಾಣ ಲೋಕಕಲ್ಯಾಣಕ್ಕೂ ದಾರಿಯಾಗುವುದು. ಹಾಗಾಗಿ ಮನುಷ್ಯ ಆತ್ಮೋದ್ಧಾರ ಮಾಡಿಕೊಳ್ಳುವಾಗಲೂ ಸತ್ಯದ ದಾರಿಯಲ್ಲೇ ನಡೆಯಬೇಕಾಗುತ್ತದೆ. ಸತ್ಯದ ದಾರಿ ಬಿಟ್ಟರೆ ಆತ್ಮೋದ್ಧಾರವೂ ಆಗುವುದಿಲ್ಲ, ಲೋಕೋದ್ಧಾರವೂ ಆಗುವುದಿಲ್ಲ. ಹಾಗಂತ ನಾವು ಮಾಡುವ ಕೆಲಸ ಕಾರ್ಯಗಳು ಲೋಕಕಲ್ಯಾಣಕ್ಕಾಗಿ ಎನ್ನುವ ಭ್ರಮೆಯೂ ಬೇಡ. ಸತ್ಯದ ದಾರಿ ಬದುಕಿನ ಬಂಡವಾಳವಾಗಬೇಕು. ಸತ್ಯದ ದಾರಿ ಎನ್ನುವಾಗ ಜನವರಿ 4 ರ ಪ್ರಜಾವಾಣಿ ಪತ್ರಿಕೆಯಲ್ಲಿ ‘ಸತ್ಯದ ಮಿಂಚು ದರ್ಶನ ಮಾಡಿಸಿದ ಹೆಚ್ಚಿನ ಪುಸ್ತಕಗಳು- ಕೆಲವು ನಿಜ ಕತೆಗಳನ್ನು ಹೇಳಿವೆ’ ಎನ್ನುವ ಯೋಗೇಂದ್ರ ಯಾದವ್ ಅವರ ಲೇಖನ ನೆನಪಾಗುವುದು. ಅದರಲ್ಲಿ ‘ನಮ್ಮ ಕಾಲದಲ್ಲಿ ಸತ್ಯವು ನಿರಾಶ್ರಿತ. ಭೂಮಿಯ ಮೇಲಿರುವ ತನ್ನ ಮನೆಯಿಂದ ಹೊರದಬ್ಬಲ್ಪಟ್ಟು ದೇಶಭ್ರಷ್ಟವಾಗಿ, ಆಶ್ರಯಕ್ಕಾಗಿ ಅಲೆದಾಡುತ್ತಿದೆ. ನಮ್ಮ ಹಳ್ಳಿಯ ದೂರದ ಈ ನೆಂಟನಿಂದ ತೀರಾ ಮುಜುಗರಕ್ಕೆ ಒಳಗಾಗಿರುವ ನಾವು, ಡ್ರಾಯಿಂಗ್ ರೂಂನ ಸಂಭಾಷಣೆಗಳಿಂದಲೂ ವಾಟ್ಸ್‍ಆಪ್ ಗ್ರೂಫಗಳಿಂದಲೂ ವಿನಯಪೂರ್ವಕವಾಗಿ ದೂರಕ್ಕೆ ತಳ್ಳಿದ್ದೇವೆ. ಬೀದಿಯಲ್ಲಿರುವ ಭಿಕ್ಷುಕನಂತೆ ಇದು ಅಗೋಚರ’. ನಮ್ಮ ಕಾಲದಲ್ಲಿ ಸತ್ಯದ ಪರಿಸ್ಥಿತಿ ಏನಾಗಿದೆ ಎನ್ನುವುದಕ್ಕೆ ಹಿಡಿದ ಕನ್ನಡಿಯಂತಿವೆ ಈ ಮಾತುಗಳು.
ಸತ್ಯವನ್ನು ನಮ್ಮ ವಿವೇಕ, ಮನಸ್ಸು, ಹೃದಯದಿಂದ ಹೊರದಬ್ಬಿರುವುದರಿಂದಲೇ ಏನೆಲ್ಲ ಸಮಸ್ಯೆಗಳು ಸೃಷ್ಟಿಯಾಗುತ್ತಲಿವೆ. ಸತ್ಯ ಎನ್ನುವುದು ಕೇವಲ ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಿಂದ ಮಾತ್ರ ದೂರವಾಗಿಲ್ಲ. ಯಾದವ್ ಅವರು ಹೇಳುವಂತೆ ಅದನ್ನು `ನಮ್ಮ ಡ್ರಾಯಿಂಗ ರೂಂ, ಸಂಭಾಷಣೆ, ವಾಟ್ಸ್‍ಆಪ್ ಗ್ರೂಫಗಳಿಂದಲೂ ವಿನಯ ಪೂರ್ವಕವಾಗಿ ದೂರಕ್ಕೆ ತಳ್ಳಿದ್ದೇವೆ’. ಈ ಅರಿವು ಪ್ರತಿಯೊಬ್ಬರಿಗೂ ಇಲ್ಲವೆಂದಲ್ಲ. ಇದ್ದರೂ ಸತ್ಯದ ಬಗ್ಗೆ ಉಪೇಕ್ಷೆ ಹೆಚ್ಚಾಗಿದೆ. ಬಾಯಲ್ಲಿ `ಸತ್ಯಮೇವ ಜಯತೆ’ ಎಂದು ಹೇಳಿದರೂ ಸತ್ಯವನ್ನು ಕ್ಷಣ ಕ್ಷಣಕ್ಕೂ ಸಾಯಿಸುವ ಕಾರ್ಯ ಉನ್ನತ ಸ್ಥಾನದಲ್ಲಿರುವವರಿಂದ ನಡೆಯುತ್ತಲೇ ಇದೆ. ಸುಳ್ಳು ವಿಜೃಂಭಿಸುತ್ತಲಿದೆ. ಸ್ಥಾನ, ಹಣ, ವಿದ್ಯೆ ಇತ್ಯಾದಿ ಬಲದಿಂದ ನಾನು ಹೇಳುವುದೇ ಸತ್ಯ. ನನ್ನ ಮಾತನ್ನು ನಂಬುತ್ತೀರೋ ಅವರ ಮಾತನ್ನು ನಂಬುತ್ತೀರೋ ಎಂದು ಎಗ್ಗಿಲ್ಲದೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳನ್ನೇ ಪ್ರತಿಪಾದಿಸುವ ಆತ್ಮವಂಚಕತನ ಎಲ್ಲೆಡೆ ವಿಸ್ತರಿಸುತ್ತಲಿದೆ. ಇದೇ ಎಲ್ಲ ಅಪಾಯಗಳ ತವರುಮನೆ ಎನ್ನುವ ಅರಿವುಳ್ಳವರಾಗಬೇಕಿದೆ. ಹಾಗಂತ ಸತ್ಯ ಸಂಪೂರ್ಣ ಮನುಕುಲದಿಂದ ದೂರವಾಗಿದೆ ಎಂದು ಅರ್ಥವಲ್ಲ. ಈಗಲೂ ಸತ್ಯದ ದಾರಿಯಲ್ಲಿ ನಡೆಯುವ, ನಡೆದಂತೆ ನುಡಿಯುವ ಸಾತ್ವಿಕರು ಎಲೆಮರೆಯ ಕಾಯಂತೆ ಅಲ್ಲಲ್ಲಿ ಇದ್ದಾರೆ. ಅವರಿಂದ ನಾವು ಪ್ರೇರಣೆ ಪಡೆಯಬೇಕಾಗಿದೆ.
ಸತ್ಯವನ್ನು ನಾವು ಆಶ್ರಯಿಸಿದಾಗ ಮಾತ್ರ ನಮ್ಮ ಬದುಕು ಸುಂದರವೂ, ಸುಖಮಯವೂ ಆಗುವಲ್ಲಿ ಅನುಮಾನವಿಲ್ಲ. ಸತ್ಯ ಕೇವಲ ಪುಸ್ತಕಗಳಲ್ಲಿ, ಉಪದೇಶಗಳಲ್ಲಿ ಇದ್ದರೆ ಸಾಲದು. ಅದು ವ್ಯಕ್ತಿಯ ನಡೆ, ನುಡಿಯಲ್ಲಿರಬೇಕು. ಜನರು ಸತ್ಯವನ್ನು ಎಲ್ಲೆಲ್ಲೋ ಹುಡುಕುವ ಸಾಹಸದಲ್ಲಿ ಅದು ತಮ್ಮಲ್ಲೇ ಇದೆ ಎನ್ನುವುದನ್ನು ಮರೆಯುತ್ತಿದ್ದಾರೆ. ಸತ್ಯ ಶಾಶ್ವತ ಮತ್ತು ಸಾರ್ವಕಾಲಿಕ ಮೌಲ್ಯ. ಅದು ಎಂದೂ ತನ್ನ ಮೌಲ್ಯವನ್ನು ಕಡಿಮೆ ಮಾಡಿಕೊಳ್ಳುವುದಿಲ್ಲ. ಹಾಗಾಗಿಯೇ ‘ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ’ ಎನ್ನುವುದು. ವ್ಯಕ್ತಿ ತಾನು ಸತ್ಯವನ್ನು ಸಾಯಿಸಿದ್ದೇನೆ ಎಂದುಕೊಂಡರೂ ಅದು ತಾತ್ಕಾಲಿಕ ಸತ್ಯವಷ್ಟೇ. ನ್ಯಾಯಾಲಯದಲ್ಲಿ ಸತ್ಯವನ್ನು ಸಾಯಿಸಿ ನಾನು ವಿಜಯಶಾಲಿಯಾದೆ ಎಂದು ವಕೀಲರು, ಕಕ್ಷಿದಾರರು ಬೀಗಬಹುದು. ಆದರೆ ಅವರ ಅಂತರಾತ್ಮಕ್ಕೆ ತಾನು ಸತ್ಯಕ್ಕೆ ಅಪಚಾರ ಮಾಡಿದ ಪಾಪಪ್ರಜ್ಞೆ ಕಾಡುತ್ತಲೇ ಇರುತ್ತದೆ. ಸತ್ಯ ಹೇಳಿದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ ಎಂದು ಹಲವರು ಹಲಬುವರು. ಸತ್ಯ ನುಡಿದು ಆ ಕ್ಷಣದಲ್ಲಿ ಸಾಯಬಹುದು. ಆದರೆ ಅವರು ಶಾಶ್ವತವಾಗಿ ಬದುಕಿರುತ್ತಾರೆ. ಇದಕ್ಕೆ ಸತ್ಯಹರಿಶ್ಚಂದ್ರ ಸಾಕ್ಷಿಯಾಗಿದ್ದಾರೆ.
ಗಾಂಧೀಜಿ ಸತ್ಯದ ದಾರಿಯಲ್ಲಿ ನಡೆದ ಕಾರಣಕ್ಕಾಗಿಯೇ ಇಂದಿಗೂ ಸ್ಮರಣೀಯರಾಗಿದ್ದಾರೆ. ಪುಸ್ತಕದಲ್ಲಿರುವ ಸತ್ಯ ಮನುಷ್ಯನ ಮಾತು, ಕೃತಿಯಲ್ಲಿ ವ್ಯಕ್ತವಾಗಬೇಕು. ಅದು ಕೇವಲ ನಾಲಗೆಯ ಮೇಲಿರದೆ ಹೃದಯ ಮತ್ತು ವಿವೇಕದ ಭಾಗವಾಗಬೇಕು. ಈ ನೆಲೆಯಲ್ಲಿ ನೆನಪಾಗುವ ವಚನ ‘ಸತ್ಯದ ನುಡಿ ತೀರ್ಥ, ಭಕ್ತಿಯ ನಡೆ ತೀರ್ಥ, ಮುಕ್ತಿಯ ಪ್ರಸಂಗ ಉಳ್ಳಡೆ ತೀರ್ಥ, ಹರಿವ ನದಿ ಎತ್ತಣಾ ತೀರ್ಥ! ರಾಮನಾಥ’.
ತೀರ್ಥಕ್ಷೇತ್ರಗಳು ಪವಿತ್ರ ಎಂದು ಭಾವಿಸಿ ಎಲ್ಲೆಲ್ಲೋ ಸುತ್ತುವವರನ್ನು ಈಗಲೂ ಕಾಣುತ್ತಿದ್ದೇವೆ. ಹರಿಯುವ ನದಿ ತೀರ್ಥವಲ್ಲ ಎಂದು ದಾಸಿಮಯ್ಯನವರು ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೇ ಅವರು ಮೌನವಹಿಸದೆ ಸತ್ಯವನ್ನು ನುಡಿಯುವುದು, ಸತ್ಯದಂತೆ ನಡೆಯುವುದೇ ತೀರ್ಥ ಎಂದು ಪ್ರತಿಪಾದಿಸಿದ್ದಾರೆ. ಸತ್ಯ ಶಾಶ್ವತ ಮೌಲ್ಯ ಎಂದಾಗ ಅನೇಕ ಶರಣರ ವಚನಗಳು ನಮಗೆ ನೆನಪಾಗುತ್ತಿವೆ. ಬಸವಣ್ಣನವರ ‘ದಯವಿಲ್ಲದ ಧರ್ಮವದೇವುದಯ್ಯಾ’, ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಬೇಡ’, ‘ಸತ್ಯವ ನುಡಿಯುವುದೇ ದೇವಲೋಕ’, ‘ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ’ ಇಂಥ ವಚನಗಳು ಸತ್ಯದ ಶಾಶ್ವತ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹುಗಳಾಗಿವೆ. ಇವು ಸತ್ಯದ ದಾರಿಯಲ್ಲಿ ನಡೆಯಲು ಬೇಕಾದ ಸೂತ್ರಗಳನ್ನು ತಿಳಿಸಿಕೊಟ್ಟಿವೆ. ನಮ್ಮ ಗುರುಗಳು ತಮ್ಮ ದಿನಚರಿ ‘ಆತ್ಮನಿವೇದನೆ’ಯಲ್ಲಿ ಬರೆದಿರುವ ಕೆಲವು ಮಾತುಗಳು ಗಮನಾರ್ಹವಾಗಿದೆ. ‘ಸತ್ಯವೇ ಸುಧಾರಸವು. ಸತ್ಯವನ್ನು ಹಿಡಿದಿರುವವನು ಸರ್ವತ್ರವೂ ಜಯವನ್ನು ಹೊಂದುತ್ತಾನೆ’. ‘ಸತ್ಯದ ರಕ್ಷಣೆಗಾಗಿ ಜೀವಿಸು. ಪ್ರಾಣವೇ ಹೋಗಲಿ ಅಂಜುವೆಯಾಕೆ? ಅದು ಅನಿತ್ಯ ಹೋಗೇ ತೀರಬೇಕು. ಅದಕ್ಕಾಗಿ ಚಿಂತೆ ಏಕೆ?’ ಎಷ್ಟೋ ಜನರು ಆಹಾರ ಸ್ವೀಕರಿಸುವಾಗ ಆಹಾ! ಅಮೃತಕ್ಕೆ ಸಮಾನ ಎಂದು ಉದ್ಘರಿಸುವರು. ಆದರೆ ಶಾಶ್ವತ ಅಮೃತ ಎಂದರೆ ಸತ್ಯ.
ಸತ್ಯವ್ರತವನ್ನು ಪರಿಪಾಲಿಸುವ ವ್ಯಕ್ತಿಗೆ ಸೋಲೆನ್ನುವುದೇ ಇರುವುದಿಲ್ಲ. ತಾತ್ಕಾಲಿಕ ‘ಸೋಲು’ ನೋವನ್ನು ನೀಡಿದರೂ ಕೊನೆಗೆ ಗೆಲ್ಲುವುದು ಸತ್ಯವೇ. ಇದಕ್ಕೆ ನಮ್ಮ ನಡುವೆ ಬೇಕಾದಷ್ಟು ನಿದರ್ಶನಗಳಿವೆ. ಹಾಗಾಗಿ ಸತ್ಯಕ್ಕಾಗಿಯೇ ಮನುಷ್ಯ ಜೀವಿಸುವುದನ್ನು ರೂಢಿಸಿಕೊಳ್ಳಬೇಕಿದೆ. ಸತ್ಯ ಹೇಳಿದರೆ ಪ್ರಾಣವೇ ಹೋದರೂ ಚಿಂತೆಯಿಲ್ಲ; ಸತ್ಯಕ್ಕಾಗಿ ಅವನು ಪ್ರಾಣ ಬಿಟ್ಟ ಎನ್ನುವುದು ಸತ್ತಮೇಲೂ ಉಳಿಯುವ ಶಾಶ್ವತ ಮೌಲ್ಯ ಎಂದರಿಯಬೇಕು. ಗಾಂಧೀಜಿಯವರ ಬದುಕನ್ನೇ ಗಮನಿಸಿದರೆ ಅವರು ಮೊದಲು ದೇವರೇ ಸತ್ಯ ಎನ್ನುವ ನಂಬಿಕೆಯುಳ್ಳವರಾಗಿದ್ದರು. ನಂತರ ಸತ್ಯವೇ ದೇವರು ಎನ್ನುವ ವಿಶ್ವಾಸ ತಳೆದರು. ಸತ್ಯದ ದಾರಿಯಲ್ಲಿ ನಡೆಯುವುದರಿಂದ ಲೋಕಕ್ಕೆ ಏನಾಗುತ್ತದೆ ಎನ್ನುವುದಕ್ಕಿಂತ ವ್ಯಕ್ತಿಗೆ ಮನೋಬಲ, ಆತ್ಮಬಲ ಗಟ್ಟಿಗೊಳ್ಳುವುದು. ಮನುಷ್ಯ ಸತ್ಯವನ್ನು ಮರೆಮಾಚಿ ಅದಕ್ಕೆ ಅಸತ್ಯದ ಹೊದಿಕೆ ಹೊದಿಸಿದರೆ ಅವನ ಅಂತರಾತ್ಮವೇ ಅವನನ್ನು ಎಚ್ಚರಿಸಿ ನೀನು ಹೋಗುವ ದಾರಿ ಸರಿಯಿಲ್ಲ ಎಂದು ತಿವಿಯುವುದು. `ಆತ್ಮನಿವೇದನೆ’ ಕೃತಿಯಲ್ಲಿ ಮತ್ತೆ ನಮ್ಮ ಗುರುಗಳು ಹೇಳುವುದು `ಸತ್ಯ, ಬ್ರಹ್ಮಚರ್ಯ, ಪರೋಪಕಾರ ಈ ಮೂರು ಪರಮೇಶ್ವರನಲ್ಲಿಗೆ ಕರೆದುಕೊಂಡು ಹೋಗಲು ಸಾಧನಗಳು, ಸತ್ಯವೇ ರಥ, ಬ್ರಹ್ಮಚರ್ಯವೇ ಸಾರಥಿ, ಪರೋಪಕಾರವೇ ಅಶ್ವ.
ಬ್ರಹ್ಮಚರ್ಯವಿಲ್ಲದವನು ಎಷ್ಟು ಮಾತ್ರಕ್ಕೂ ಸತ್ಯವನ್ನು ಕಾಪಾಡಲಾರನು, ಸತ್ಯವನ್ನು ಕಾಪಾಡಲಸಮರ್ಥನಾದವನು ಎಂದೆಂದಿಗೂ ಪರೋಪಕಾರವನ್ನು ಮಾಡಲಾರನು. ಈ ಮೂರೂ ಇಲ್ಲದವನೆಂದಿಗೂ ಈ ಜಗತ್ತಿನಲ್ಲಿ ಸುಖಿಸಲಾರನು. ಮನುಷ್ಯನ ಸುಖಜೀವನಕ್ಕೆ ಈ ಮೂರು ಸಾಧನಗಳು. ನನ್ನ ಅನುಭವದ ಮಾತಿದು’. ಸತ್ಯ, ಬ್ರಹ್ಮಚರ್ಯ ಮತ್ತು ಪರೋಪಕಾರ ಪರಸ್ಪರ ಪೂರಕವಾದವು. ಒಂದು ಮತ್ತೊಂದರ ಮಹತ್ವವನ್ನು ಎತ್ತಿಹಿಡಿಯುವುದು. ಬ್ರಹ್ಮಚರ್ಯ ಕಾಪಾಡಿಕೊಳ್ಳದವ ಸತ್ಯವನ್ನೂ ಕಾಪಾಡಲು ಸಾಧ್ಯವಿಲ್ಲ. ಸತ್ಯವನ್ನು ಕಾಪಾಡದವ ಪರೋಪಕಾರವನ್ನೂ ಮಾಡಲಾರ. ಬ್ರಹ್ಮಚರ್ಯ ಎಂದರೆ ಕೇವಲ ಲೈಂಗಿಕ ವಿಷಯಕ್ಕೆ ಅನ್ವಯಿಸಬೇಕಿಲ್ಲ. ನಮ್ಮ ಪಂಚೇಂದ್ರಿಯಗಳ ಲಂಪಟತನವನ್ನು ಕಳೆದುಕೊಂಡು ಅವು ಆದರ್ಶ ಪಥದಲ್ಲಿ ನಮ್ಮನ್ನು ಮುನ್ನಡೆಸಿದರೆ ಅದು ಸಹ ಬ್ರಹ್ಮಚರ್ಯವೇ. ಬ್ರಹ್ಮಚರ್ಯ ಗೃಹಸ್ಥ ಮತ್ತು ಸನ್ಯಾಸಿ ಇಬ್ಬರಿಗೂ ಅನ್ವಯಿಸುವುದು. ಈ ಮೂರೂ ದೇವರ ಸಾಕ್ಷಾತ್ಕಾರಕ್ಕೆ ಕಾರಣವಾಗುವಂತಹುಗಳು. ಹಾಗಾಗಿ ನಮ್ಮ ಗುರುಗಳು ಅವುಗಳಿಗೆ ಹೆಚ್ಚಿನ ಒತ್ತು ಕೊಟ್ಟದ್ದರಿಂದ ತಮ್ಮ ಬದುಕಿನ ಅವಧಿಯಲ್ಲಿ ಬರಿಗೈನಿಂದಲೇ ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು.
‘ಬ್ರಹ್ಮಚರ್ಯವಿಲ್ಲದವನು ಎಷ್ಟು ಗುಣಗಳನ್ನು ಸಂಪಾದಿಸಿದರೂ ಸ್ಥಿರವಾಗಿ ನಿಲ್ಲುವುದಿಲ್ಲ. ತೂತಿನ ಮಡಕೆಗೆ ನೀರು ಹಾಕಿದಂತಾಗುತ್ತದೆ. ಮಾನವನ ಸುಖಜೀವನಕ್ಕೆ ಬ್ರಹ್ಮಚರ್ಯವೇ ಮುಖ್ಯವಾದುದೆಂಬುದನ್ನು ನಾನು ದೃಢವಾಗಿ ಹೇಳಬಲ್ಲೆನು. ಬ್ರಹ್ಮಚರ್ಯವಿಲ್ಲದವನು ಶಾಂತಿಯನ್ನು ಪಡೆಯಲಾರನು’. ‘ಬ್ರಹ್ಮಚರ್ಯ ಬಾಹಿರನು ಮಾಡದ ಪಾಪವೇ ಇಲ್ಲ. ಯಾವ ಗುಣವನ್ನೇ ಸಂಪಾದಿಸಬೇಕಾದರೆ ಮೊದಲು ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳಬೇಕು. ಅಂಟಿಲ್ಲದಿದ್ದರೆ ಪದಾರ್ಥಗಳು ಪರಸ್ಪರ ಕೂಡಿಕೊಳ್ಳುವುದಿಲ್ಲ. ಮನುಷ್ಯನಿಗೆ ಭೂಮಿಯು ಆಧಾರವಾಗಿರುವಂತೆ ಸುಖಜೀವನಕ್ಕೆ ಬ್ರಹ್ಮಚರ್ಯವು ಆಧಾರವಾಗಿದೆ. ಯಾವನಲ್ಲಿ ಬ್ರಹ್ಮಚರ್ಯವಿಲ್ಲವೋ ಅವನಲ್ಲಿ ಯಾವ ಗುಣವೂ ಇಲ್ಲ’. ಇವತ್ತು ಅನೇಕ ರೀತಿಯ ಅತ್ಯಾಚಾರ, ವಂಚನೆ, ಮೋಸ, ಸುಳ್ಳು ವಿಜೃಂಭಿಸಲು ಕಾರಣವೇ ಸತ್ಯ, ಬ್ರಹ್ಮಚರ್ಯ ಮತ್ತು ಪರೋಪಕಾರ ಬುದ್ಧಿ ಇಲ್ಲದಿರುವುದು. ಹಾಗಾಗಿ ನಮ್ಮ ಗುರುಗಳು `ಬ್ರಹ್ಮಚರ್ಯ ಬಾಹಿರನು ಮಾಡದ ಪಾಪವೇ ಇಲ್ಲ’ ಎಂದಿರುವಲ್ಲಿ ಅತಿಶಯೋಕ್ತಿ ಏನಿಲ್ಲ. ಗುರುಗಳು ತಮ್ಮ ಕಾಲದ ಸಮಾಜ ಮತ್ತು ಗುರುವರ್ಗದ ನಡಾವಳಿಕೆಯನ್ನು ಕಂಡು ತುಂಬಾ ಕಟುವಾಗಿ ಬರೆಯುತ್ತಾರೆ. ಹಾಗೆ ಬರೆಯಲು ಕಾರಣ ಅವರಿಗೆ ಜನರ ನಡಾವಳಿಕೆ ಅದರಲ್ಲೂ ಸ್ವಾಮಿಗಳ ವರ್ತನೆ. ಅದರಿಂದ ಅವರಿಗೆ ಸಾಕಷ್ಟು ನಿರಾಸೆಯೂ ಆಗಿರಬೇಕು. ಹಾಗಾಗಿ `ಪ್ರಪಂಚದಲ್ಲಿ ಸತ್ಯವು ಉಳಿದಿಲ್ಲ. ಇಲ್ಲಿ ಸತ್ಯಕ್ಕೆ ಬೆಲೆಯಿಲ್ಲ’ ಎಂದು ಬರೆಯುತ್ತಾರೆ. ಸತ್ಯಕ್ಕೆ ಬೆಲೆಯಿಲ್ಲ ಎನ್ನುವುದಕ್ಕಿಂತ ಅದಕ್ಕೆ ಬೆಲೆ ಖಂಡಿತ ಇದೆ. ಯಾರು ಸತ್ಯಕ್ಕೆ ಬೆಲೆ ಕೊಡುವುದಿಲ್ಲವೋ ಅವನಿಗೆ ಬೆಲೆ ಬರಲು ಸಾಧ್ಯವಿಲ್ಲ. ಸತ್ಯಕ್ಕೆ ನಾವು ಬೆಲೆ ಕೊಟ್ಟರೆ ಅದು ನಮ್ಮ ಬೆಲೆಯನ್ನು ಕಾಪಾಡುವುದು. ನಮ್ಮ ಬೆಲೆ ಹೆಚ್ಚಾಗಬೇಕೆಂದರೆ ನಾವು ಸತ್ಯದ ದಾರಿಯಲ್ಲಿ ಹೆಜ್ಜೆ ಹಾಕಬೇಕು. ಹರಿಶ್ಚಂದ್ರನ ಕತೆ ಪೌರಾಣಿಕವೋ, ಐತಿಹಾಸಿಕವೋ ಎನ್ನುವುದು ಮುಖ್ಯವಲ್ಲ. ಆತ ಸತ್ಯದ ದಾರಿಯಲ್ಲಿ ನಡೆದ ಎನ್ನುವುದು ಗಮನಾರ್ಹ. ಅದರಿಂದಾಗಿ ಇಂದಿಗೂ ಸತ್ಯಹರಿಶ್ಚಂದ್ರನನ್ನು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳುವುದು.
ಗಾಂಧೀಜಿ ಎಂಥ ಸಂದರ್ಭದಲ್ಲೂ ಸುಳ್ಳಿನ ಸಹವಾಸ ಮಾಡಲಿಲ್ಲ. ಅವರು ಓದುವಾಗ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ತಪ್ಪು ಉತ್ತರ ಬರೆದಾಗ ಅಧ್ಯಾಪಕರು ಪಕ್ಕದವನ ಉತ್ತರ ನೋಡಿ ಬರೆದುಕೊ ಎಂದರೂ ಅವರ ಮನಸ್ಸು ಒಪ್ಪುವುದಿಲ್ಲ. ಅವರು ಸತ್ಯವನ್ನು ಪರಿಪಾಲಿಸಿದ್ದರಿಂದ ಅಧ್ಯಾಪಕರ ಮಾತು ಕೇಳಲಿಲ್ಲ. ಮನುಷ್ಯ ಯಾವಾಗಲೂ ಸತ್ಯದ ದಾರಿಯಲ್ಲೇ ನಡೆದಾಗ ಅವನ ಮನೋಬಲ, ಆತ್ಮಬಲ ಹೆಚ್ಚಾಗುವುದು. ಸತ್ಯವನ್ನು ಅಪ್ಪಿಕೊಂಡ ಸಂದರ್ಭದಲ್ಲಿ ಏನೆಲ್ಲ ಸತ್ಪಪರೀಕ್ಷೆಯ ಸಂದರ್ಭಗಳೂ ಎದುರಾಗಿ ಏನೆಲ್ಲ ಕಷ್ಟ ನಿಷ್ಠುರಗಳೂ ಬರಬಹುದು. ಅವುಗಳಿಗೆ ಎದೆಗುಂದಬೇಕಾಗಿಲ್ಲ.
ಕಷ್ಟಗಳು ಹೆಚ್ಚಾಗಿ ಬರುವುದು ಸತ್ಯವಂತರಿಗೇ ಹೊರತು ಸುಳ್ಳುಗಾರರಿಗೆ ಅಲ್ಲ. ಏಕೆಂದರೆ ಸುಳ್ಳನ್ನು ನಂಬಿದವರು ಸಂದರ್ಭಕ್ಕೆ ತಕ್ಕಂತೆ ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತಿರುತ್ತಾರೆ. ಅವರ ನಿಜಬಣ್ಣ ಬಯಲಾದಾಗ ಸಾಕಷ್ಟು ನಿಂದೆ, ಅವಹೇಳನಕ್ಕೆ ಒಳಗಾಗುತ್ತಾರೆ. ಸತ್ಯವಂತನೂ ನಿಂದೆ, ಅವಹೇಳನಕ್ಕೆ ಒಳಗಾದರೂ ಕೊನೆಗೆ ಅವನೇ ಎಲ್ಲರ ಕಣ್ಮಣಿ ಆಗುವನು. ಹಾಗಾಗಿ ಸತ್ಯದ ಪ್ರತಿಪಾದನೆ ಬಹುಮುಖ್ಯ. ಅದು ವ್ಯಕ್ತಿಗತ ಮತ್ತು ಸಾರ್ವಜನಿಕವಾಗಿ ಆತನ ಘನತೆಯನ್ನು ಇನ್ನಷ್ಟು ಹೆಚ್ಚಿಸುವುದು. ಜಗತ್ತಿನ ಇತಿಹಾಸವನ್ನು ನೋಡಿದರೆ ಸತ್ಯವಂತರು ಇಂದಿಗೂ ಜೀವಂತವಾಗಿದ್ದಾರೆ. ಕೆಲವು ಸುಳ್ಳುಗಾರರೂ ಜೀವಂತವಾಗಿದ್ದರೂ ಅವರನ್ನು ಯಾವ ವಿಭಾಗಕ್ಕೆ ಸೇರಿಸುತ್ತಾರೆ ಎನ್ನುವುದನ್ನು ಗಮನಿಸಬೇಕು. ಸತ್ಯದ ದಾರಿಯಲ್ಲಿ ಶ್ರೇಷ್ಠತೆ, ಸಂತೋಷ, ನೆಮ್ಮದಿ ಇದೆ.
ಸತ್ಯದಂತೆ ಕ್ಷಮಾಗುಣವೂ ಹೆಚ್ಚು ಸತ್ವಶಾಲಿ. ಕೇಡು ಬಯಸಿದವನಿಗೂ ಒಳಿತು ಹಾರೈಸುವುದು ಸತ್ಯವಂತನ ವ್ರತ. ಕಾರಣ ಅವನಲ್ಲಿ ಪರೋಪಕಾರ ಮತ್ತು ಕ್ಷಮಾಗುಣ ಇದ್ದೇ ಇರುವುದು. ಸತ್ಯವಂತ ಮತ್ತೊಬ್ಬರ ದೋಷಗಳನ್ನು ಸಹ ಕ್ಷಮಿಸಿ ಅವನನ್ನು ಪರಿವರ್ತನೆ ಮಾಡಲು ಪ್ರಯತ್ನಿಸುವನು. ಸತ್ಯವಂತ ಪ್ರೀತಿಯ ಸಾಕಾರಮೂರ್ತಿಯಾಗಿರುತ್ತಾನೆ. ಅವನಲ್ಲಿ ಕರುಣೆ, ದಯೆ ಸಹಜವಾಗಿಯೇ ಸ್ಥಾಯಿಯಾಗಿರುತ್ತವೆ. ಕ್ಷಮಾಗುಣ ಇಲ್ಲದಿದ್ದರೆ ಅದು ನಮ್ಮ ಮನಸ್ಸನ್ನೇ ದುರ್ಬಲಗೊಳಿಸುವುದು. ಅದಕ್ಕಾಗಿ ಬಸವಣ್ಣನವರು ‘ತನಗೆ ಮುನಿವವಗೆ ತಾ ಮುನಿಯಲೇಕಯ್ಯಾ’ ಎಂದು ಕೇಳುವರು. ಅವರೇ ತಮ್ಮ ಮತ್ತೊಂದು ವಚನದಲ್ಲಿ ‘ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ’ ಎನ್ನುವರು. ಏಸುವಿಗೆ ಮಳೆ ಜಡಿದು ಹಿಂಸಿಸಿದಾಗಲೂ ತಂದೆಯೇ ತಾವೇನು ಮಾಡುತ್ತೇವೆ ಎನ್ನುವುದು ಇವರಿಗೆ ಗೊತ್ತಿಲ್ಲ. ಇವರನ್ನು ಕ್ಷಮಿಸು’ ಎನ್ನುವರು. ಕ್ಷಮೆಯಲ್ಲಿ ನಿಜವಾದ ಆನಂದವಿರುತ್ತದೆ. ಪ್ರಜ್ಞೆ ಜಾಗೃತವಾಗಿರುತ್ತದೆ. ಸತ್ಯ, ಬ್ರಹ್ಮಚರ್ಯ ಮತ್ತು ಪರೋಪಕಾರ ಹಾಗೂ ಕ್ಷಮಾಗುಣದಿಂದ ನಮಗೇ ಹೆಚ್ಚಿನ ಶಕ್ತಿ ಸಂಪಾದಿಸಲು, ಧೈರ್ಯವಾಗಿ ಬಾಳಲು ಸಾಧ್ಯವಾಗುತ್ತದೆ. ಅಹಂಕಾರ ಇದ್ದವರು ಎಂದಿಗೂ ಕ್ಷಮಾಗುಣ ಬೆಳೆಸಿಕೊಳ್ಳುವುದಿಲ್ಲ ಎನ್ನುವರು. ಅಹಂಕಾರ ಇರುವವರು ಒಂದರ್ಥದಲ್ಲಿ ಅಜ್ಞಾನಿಗಳೇ. ಸುಜ್ಞಾನಿಗಳಿಗೆ ಅಹಂಕಾರ ಸಾತ್ವಿಕ ಗುಣವಾಗಿ ಪರಿವರ್ತನೆಯಾಗಿರುತ್ತದೆಯಂತೆ. ಬಸವಣ್ಣನವರು ‘ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!’ ಎನ್ನುವರು. ಅವರು ಹೇಳುವುದು ಸಹ ಅಹಂಕಾರಿಗಳಾಗಿ ಹಾಳಾಗುವುದು ಬೇಡ ಎಂದು. ‘ಕ್ಷಮಯಾ ಧರಿತ್ರೀ’ ಎನ್ನುವ ಮಾತೊಂದಿದೆ. ಭೂಮಿಗೆ ಯಾರೇ ಕೇಡುಬಯಸಿದರೂ ಅದು ಪ್ರತಿಯಾಗಿ ಯಾರಿಗೂ ಕೇಡು ಬಯಸುವುದಿಲ್ಲ. ಬದಲಾಗಿ ಅದು ಕ್ಷಮಿಸುವ ಗುಣ ಹೊಂದಿರುತ್ತದೆ. ಬಸವಣ್ಣನವರು ಕಳ್ಳರನ್ನು ಸಹ ಕ್ಷಮಿಸುವರು. ಇದು ದೊಡ್ಡವರ ದೊಡ್ಡ ಗುಣ. ದೇವಲೋಕ, ಮತ್ರ್ಯಲೋಕ ಬೇರೆ ಬೇರೆ ಇಲ್ಲ. ಸತ್ಯ ನುಡಿಯುವುದೇ ದೇವಲೋಕ, ಮಿಥ್ಯ ನುಡಿಯುವುದೇ ಮತ್ರ್ಯ ಲೋಕ. ಮತ್ರ್ಯಲೋಕವನ್ನು ದೇವಲೋಕವನ್ನಾಗಿ ಮಾಡಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಆಗಲೇ ಜಗತ್ತಿನ ಕಲ್ಯಾಣವಾಗಿ ಶಾಂತಿ, ಸುಖ, ನೆಮ್ಮದಿ, ಸಮಾಧಾನ ನೆಲೆಗೊಳ್ಳಲು ಸಾಧ್ಯ. ಬಸವಣ್ಣನವರು ಹೇಳುವಂತೆ ಸತ್ಯವೆಂಬ ಕೂರಲಗನ್ನು ಹಿಡಿದು ನಮ್ಮನ್ನು ನಾವು ಗೆಲ್ಲೋಣ.
Comments 7
ಶಿವಕುಮಾರ್ ಪಾಟೀಲ್
Feb 17, 2025ಶರಣರು ಬ್ರಹ್ಮಚರ್ಯವನ್ನು ಪಾಲಿಸಬೇಕೆಂದು ಎಲ್ಲಿ ಹೇಳಿದ್ದಾರೆ? ನನಗೆ ತಿಳಿದಂತೆ ಬ್ರಹ್ಮಚರ್ಯ ಎನ್ನುವುದು ಲಿಂಗಾಯತರಿಗೆ ಸಂಬಂಧ ಪಡದ ವಿಚಾರ.
ಅನಿಲ್ ಹೊಸಕಟ್ಟೆ
Feb 22, 2025ಗೃಹಸ್ಥರಲ್ಲಿ ಬ್ರಹ್ಮಚರ್ಯವನ್ನು ಕಾಣಬಹುದು, ಸ್ವಾಮಿಗಳಲ್ಲಿ ಬ್ರಹ್ಮಚರ್ಯ ಕಾಣುವುದು ಸಾಧ್ಯವಿಲ್ಲದ ಕಾಲಮಾನದಲ್ಲಿ ನಾವಿದ್ದೇವೆ ಗುರುವೇ😒
ವೀರೇಂದ್ರಪ್ಪ ಗಾಣಿಗೇರ
Feb 23, 2025ಬ್ರಹ್ಮಚರ್ಯದ ಅಗತ್ಯತೆಯನ್ನು ಪೂಜ್ಯರು ದೃಢ ಮಾತುಗಳಲ್ಲಿ ಒತ್ತಿ ಹೇಳಿದ್ದಾರೆ. ಆದರೆ ನಮ್ಮ ಶರಣರು ಬ್ರಹ್ಮಚಾರಿಗಳಲ್ಲವಲ್ಲಾ😏
ಎನ್.ವಿ.ಪಾಟೀಲ್
Feb 26, 2025ಸತ್ಯ ಕೇವಲ ಪುಸ್ತಕಗಳಲ್ಲಿ, ಉಪದೇಶಗಳಲ್ಲಿ ಇದ್ದರೆ ಸಾಲದು. ಅದು ವ್ಯಕ್ತಿಯ ನಡೆ, ನುಡಿಯಲ್ಲಿರಬೇಕು… ಸತ್ಯ ಅಂದರೆ ಏನು? ಒಬ್ಬರಿಗೆ ಸತ್ಯವೆಂದು ಕಂಡದ್ದು ಮತ್ತೊಬ್ಬರಿಗೆ ಸುಳ್ಳಾಗಿ, ಭ್ರಮೆಯಾಗಿ ಕಾಣುವಾಗ, ನಿಜಕ್ಕೂ ಸತ್ಯ ಅಂದರೇನು ಅನ್ನೋ ಪ್ರಶ್ನೆ ನನ್ನನ್ನ ಅನೇಕ ಸಲ ಕಾಡಿದೆ ಗುರುಗಳೇ… ಪ್ರಸ್ತುತ ಲೇಖನದಲ್ಲೂ ನನಗೆ ಸತ್ಯದ ಸ್ಪಷ್ಟ ಚಿತ್ರಣ ಸಿಗಲಿಲ್ಲ…..🙏
ಸುಗುಣಾ ಜಿ.
Mar 1, 2025ಸತ್ಯದ ನುಡಿ ತೀರ್ಥ, ಭಕ್ತಿಯ ನಡೆ ತೀರ್ಥ, ಮುಕ್ತಿಯ ಪ್ರಸಂಗ ಉಳ್ಳಡೆ ತೀರ್ಥ, ಹರಿವ ನದಿ ಎತ್ತಣಾ ತೀರ್ಥ! ರಾಮನಾಥ… ನೀರಲ್ಲಿ ಮುಳಿಗೇಳಲು ಧಾವಿಸುತ್ತಿರುವ ಲಿಂಗಾಯತರಿಗೆ ಇಂತಹ ವಚನಗಳು ಕೇಳುವುದಿಲ್ಲ…
ಫಾಲಾಕ್ಷಿ ಜಗಳೂರು
Mar 3, 2025ಗೃಹಸ್ಥರೂ ಬ್ರಹ್ಮಚಾರಿಗಳಾಗಬಹುದೆಂದು ತೋರಿಸಿದ ಶರಣರು ಸನ್ಯಾಸತ್ವಕ್ಕೆ ಅಂತಹ ಮಹತ್ವವನ್ನೇನೂ ನೀಡಿರಲಿಲ್ಲ ಎನ್ನುವುದು ಸತ್ಯ. ಅಲ್ಲಮಪ್ರಭುಗಳು- “ನಮ್ಮ ಗುಹೇಶ್ವರ ಲಿಂಗದಲ್ಲಿ ಅಖಂಡ ಬ್ರಹ್ಮಚಾರಿ ಬಸವಣ್ಣನೊಬ್ಬನೆ” ಎಂಬ ಮಾತಿನ ಅಂತರಾಳ ಗಮನಿಸಬೇಕು.
ಸಂಗೀತಾ ಚಂದ್ರು
Mar 4, 2025`ಸತ್ಯ, ಬ್ರಹ್ಮಚರ್ಯ, ಪರೋಪಕಾರ ಈ ಮೂರು ಪರಮೇಶ್ವರನಲ್ಲಿಗೆ ಕರೆದುಕೊಂಡು ಹೋಗಲು ಸಾಧನಗಳು, ಸತ್ಯವೇ ರಥ, ಬ್ರಹ್ಮಚರ್ಯವೇ ಸಾರಥಿ, ಪರೋಪಕಾರವೇ ಅಶ್ವ.’- ಗುರುಗಳ ಮಾತು 100% ಕರೆಕ್ಟ್.