ಶಿವನ ಕುದುರೆ – 2
ದಾರಿಯ ಏಕಾಂತಕ್ಕೆ ಹಾಡನ್ನು ಹಾಡಿಕೊಳ್ಳುತ್ತಾ ಕಾಡನ್ನು ಕಳೆದು ಬಟ್ಟಂಬಯಲಿನ ನಾಡಿಗೆ ಬಂದ. ಶ್ರೀಗಿರಿಗೆ ಹೋಗಬೇಕೆನ್ನುವುದು ಬಿಟ್ಟರೆ ಯಾವ ದಾರಿ, ಯಾವ ದಿಕ್ಕು ಎಂಬ ಯಾವ ಕಟ್ಟಳೆಯೂ ಇಲ್ಲದ ಕಾರಣ ಅನುಭವಕ್ಕೆ ದಕ್ಕುವ ಪ್ರತಿ ಗಳಿಗೆಯನ್ನೂ ಆನಂದಿಸುತ್ತಿದ್ದ. ಅದಕ್ಕೆ ಪ್ರತಿಯಾಗಿ ನಗುತ್ತಿದ್ದ. ಲೋಕವ ಕಂಡು ನಗುವವನನ್ನು ಜಗತ್ತು ಮರುಳ ಎಂದರೂ ಆ ಮರಳುತನದಲ್ಲಿ ಮಾಯೆಯ ಬದುಕು ಅನಾದಿಕಾಲದಿಂದಲೂ ಇದ್ದುದೇ ಆದ್ದರಿಂದ ನಡೆಯುತ್ತಲೇ ಹಾಡುತ್ತಿದ್ದ, ಜಗತ್ತನ್ನು ಕಾಣುತ್ತಲೇ ನಗುತ್ತಿದ್ದ. ಹೀಗೆ ವಾರೊಪ್ಪತ್ತು ನಡೆದು ಆಯಾಸವಾದಲ್ಲಿ ಗುಡ್ಡರ ಹಟ್ಟಿಯೊಂದರಲ್ಲಿ ನಾಲ್ಕಾರು ದಿನ ತಂಗಿದ. ಯಾವ ಊರು ಯಾವ ಸೀಮೆಯಲ್ಲೂ ಕಾಣದ ಬದುಕಿನ ರೀತಿ ಆ ಗುಡ್ಡರ ಹಟ್ಟಿಯಲ್ಲಿತ್ತು.
ಆ ಹಟ್ಟಿಯ ಮಕ್ಕಳು, ‘ನಾ ರಾಜ ನೀ ಬಸವರಾಜ’ ಅಂತ ಆಡುವ ಆಟವ ಕಂಡು ಬೆರಗಾದ. ಒಬ್ಬ ರಾಜನಂತೆ ಮತ್ತೊಬ್ಬ ಮಂತ್ರಿಯಂತೆ ಆ ಮಂತ್ರಿಗೆ ಬಡಬಗ್ಗರನ್ನ ಕಂಡರೆ ಅತಿಯಾದ ಪ್ರೀತಿ, ಅಸಹಾಯಕರ ಮೇಲೆ ಕನಿಕರ, ಹಸಿದವರ ಹೊಟ್ಟೆನೂ ತುಂಬಬೇಕು, ರಾಜ್ಯದ ಜನತೆ ಸುಖದಿಂದ ಬಾಳಬೇಕು. ನೆಮ್ಮದಿಯ ಜೀವನ ನಡೆಸಬೇಕಾದರೆ ದುಡಿಯುವವನು ಹಂಚಿ ತಿನ್ನಬೇಕು. ಆ ಹಂಚಿಕೆ ಅನ್ನೋದು ದಾನದ ರೂಪದಲ್ಲಿ ಮತ್ಯಾರಿಗೋ ಒಬ್ಬನಿಗೆ ನೀಡುವ ಬದಲು ಅದು ಸಮಾಜಕ್ಕೆ ಕೊಡುವಂತಾಗಬೇಕು ಅನ್ನೋ ಕಲ್ಪನೆಯ ಆಟವದು.
ಆ ಹುಡುಗರೆಲ್ಲ ಒಬ್ಬರಿಗೊಬ್ಬರು ಶರಣು ಮಾಡುತ್ತಾ ಹಟ್ಟಿಯ ಮುಂದಲ ಮುತ್ತುಗದ ಎಲೆ ತಂದು ಊಟಕ್ಕಿಟ್ಟರು. ಕುದುರೆ ಹತ್ತಿದ ಹುಡುಗನೊಬ್ಬ ಧೀರನಂತೆ ಹಟ್ಟಿಯನ್ನೊಂದು ಸುತ್ತು ಹಾಕಿ ಬಂದಾಗ ಆ ಹುಡುಗರೆಲ್ಲ ‘ಅಣ್ಣಾ ಶರಣು ಶರಣಾರ್ಥಿ’ ಅಂದರು. ಅಷ್ಟೊತ್ತಿಗೆ ಓಲಗದಲ್ಲಿ ಬಂದ ರಾಜನಂತದೇ ವೇಷಧಾರಿಯೂ ತಲೆಬಾಗಿ ಶರಣು ಮಾಡುತ್ತಾ ಒಳಗೆ ಬಂದು ‘ಏನಪ್ಪಾ ಬಸವಣ್ಣ, ಇಡೀ ಊರವರೇ ಹೇಳತಾರೆ ನಿನ್ನ ಮಾಮನೆ ಊಟದ ರುಚಿ ಬಗ್ಗೆ, ಇವತ್ತು ನಾನೇ ಉಂಡು ನೋಡೋಣಾ ಅಂತ ಬಂದೆ’ ಅಷ್ಟು ಹೇಳಿದ್ದೆ ಉಳಿದ ಹುಡುಗರು ರಾಜನಾದಂತ ರಾಜನನ್ನೂ ಸದರಿ ಪಂಕ್ತಿಯೊಳಗೆ ಕೂರಿಸಿ ಊಟಕ್ಕೆ ಹಾಕುತ್ತಾರೆ. ಒಬ್ಬ ಸೈನಿಕ ‘ರಾಜರು ಜನಸಾಮಾನ್ಯರ ಜೊತೆ ಊಟಮಾಡೋದೇ’ ಅಂತ ಜಗಳ ತೆಗೆಯುತ್ತಾರೆ. ಆಗ ರಾಜನೇ ಎದ್ದು ನಿಂತು ಆ ಸೈನಿಕನನ್ನು ಉಳಿದ ಹುಡುಗರನ್ನು ಸಮಾಧಾನ ಮಾಡಿ ‘ಬಸವಣ್ಣ ಕಟ್ಟಿದ ಮಾಮನೆಯೊಳಗೆ ರಾಜನೂ ಮಂತ್ರಿಯೂ, ದಳಪತಿಯೂ, ಸೈನಿಕನೂ, ಲೆಖ್ಖಿಗನೂ, ಊಳಿಗದವನು ಎಲ್ಲಾ ಒಂದೆ. ಇದು ಶರಣರ ಮಾಮನೆ ಇಲ್ಲಿ ನಾನೂ ಒಬ್ಬ ಶರಣನೇ ಸೈ’ ಎಂದು ಸಮಾಧಾನ ಪಡಿಸಿ ಉಂಡಂತೆ ನಟಿಸಿ ಏಳುತ್ತಾರೆ. ಇಡೀ ಆಟದಲ್ಲಿ ಜಗಳ ಹಚ್ಚುವವರ ನಡುವೆ ನಗುವ ಧೀರನಂತೆ ಆ ಬಸವರಾಜ ಕಂಡನು. ಆ ಹುಡುಗನ ಹೆಗಲ ಮೇಲೆ ಕೈಹಾಕಿ ಮಾತಾಡಿಸಿದ–
ಇದು ಯಾವ ಬಗೆಯ ಆಟ..?
ಶರಣರ ಆಟ..
ಈ ಶರಣರು ಅಂದರೆ ಯಾರು..?
ಅವರು ಕಲ್ಯಾಣದವರು…
ಬಸವರಾಜ ಅಂದರೆ ಯಾರು…?
ಅವರು ಈ ದೇಶದ ಪ್ರಧಾನರು, ಅಷ್ಟೆ ಅಲ್ಲ ಅವರು ನಮಗೆಲ್ಲಾ ಅಣ್ಣಾ.
ನೀವು ಅವರನ್ನ ನೋಡಿದಿರೇನು..?
ಹೂಂ, ಅವರನ್ನ ಮುಟ್ಟಿ ಮಾತಾಡಿಸಿದ್ದೇವೆ.
ಏನು..? ದೇಶದ ಪ್ರಧಾನರನ್ನು ಮುಟ್ಟಿ ಮಾತಾಡಿಸಿದ್ದೀರಾ..?
ಹೌದು, ಅವರು ನಮ್ಮಂಗೆ ಮನುಷ್ಯರೇ. ನಮ್ಮ ಹಟ್ಟಿಗೆ ಬಂದರೆ ಇದೇ ಕಟ್ಟೆಯ ಮೇಲೆ ಕುಳಿತು ವಿಶ್ರಮಿಸತಾರೆ, ನಾವು ಉಣ್ಣೋ ತಟ್ಟೆಯಲ್ಲಿಯೇ ಉಣ್ಣತಾರೆ, ನಾವು ಕುಡಿಯೋ ಮಡಕೆಯಲ್ಲಿಯೇ ನೀರು ಕುಡಿತಾರೆ. ಆಯಾಸವಾದರೆ ಇಲ್ಲಿಯೇ ಮಲಗುತ್ತಾರೆ.
ಇದೆಲ್ಲವೂ ಒಬ್ಬ ಪ್ರಧಾನರಿಂದ ಸಾಧ್ಯವೇ..? ಯಾವ ರಾಜರ ಅಧೀನಕ್ಕೂ ಒಳಪಡದೆ ದೂರದೂರವೇ ನಿಂತು ಆ ಕಣಿವೆ ನಾಡಿನಲ್ಲಿ ಕುದುರೆಯ ಮೇಲೆ ಬಂದು ಹೋಗುವ ದಣ್ಣಾಯಕರನ್ನು ನೋಡಿದ್ದ ಇವನಿಗೆ ಇದ್ಯಾರೋ ಈ ಸೀಮೆಯ ಸಾಮಾನ್ಯನೊಬ್ಬನ ಕತೆಯಿರಬೇಕೆನಿಸಿತು. ಬಹುಶಃ ಮಕ್ಕಳ ಆಟದಲ್ಲಿ ಚೂರು ರೋಚಕತೆ ಸೇರಿಕೊಂಡಿರಬಹುದು ಎಂದುಕೊಂಡ. ಆ ದಿನದ ರಾತ್ರಿ ಅಲ್ಲಿ ಕಳೆದಿದ್ದು ಶ್ರೀಗಿರಿಯ ದಾರಿಯ ಕೇಳಿ ತಿಳಿದು ಮರುದಿನ ಕೋಳಿ ಕೂಗಿಗೆ ಹಟ್ಟಿಯಿಂದೆದ್ದು ಮತ್ತೆ ನಡೆಯತೊಡಗಿದ.
**** **** ****
ಅಲೆಯುತ್ತ ಭೀಮಾ ನದಿಗುಂಟ ಪಡುವಣ ದಿಕ್ಕಿಗೆ ನಡೆದು ಬರುತ್ತಿರಲು ಅನತಿ ದೂರದಲ್ಲೊಂದು ಕಾಗಿಣಾ ಎನ್ನುವ ಕವಲು ಹಳ್ಳವು ಹರಿದು ಬರುತ್ತಿತ್ತು. ಆ ಹಳ್ಳದ ದಂಡೆಯ ಮೇಲೆ ನೆಲೆಸಿರುವಂಥಾ ಮಾನ್ಯಖೇಟ ಎಂಬ ರಾಜಧಾನಿಗೆ ಬಂದು ತಲುಪಿದಾಗ ಸುಡೋ ಸೂರ್ಯ ನೆತ್ತಿಯಮೇಲೆ ಸ್ತಬ್ಧನಾಗಿ ನಿಂತಂತೆ ತೋರಿತು. ಹಾಳುಮಂಟಪದ ಮುಂದೆ ಒಲೆ ಹೂಡಿದ್ದ ವೇಷಧಾರಿಯೊಬ್ಬ ಅಂಬಲಿ ಬೇಯಿಸುವುದು ಕಂಡಿತು. ಅದೆಷ್ಟು ದೂರದಿಂದ ಹಗಲೂರಾತ್ರಿ ಎನ್ನದೇ ನಡೆದು ಬಂದಿದ್ದನೋ ಮಾರಾಯ, ಕಾಲೊಳಗೆ ಹುಣ್ಣುಗಳಾಗಿ ರಕ್ತವಸರುತ್ತಿದ್ದರೂ ಆ ಸುಡುವ ಮಣ್ಣೊಳಗೆ ಕಾಲೆಳೆಯುತ್ತಾ ಇನ್ನೇನು ಈ ಪ್ರಯಾಣವನ್ನು ಕೊನೆಮೊದಲಿಲ್ಲದ ಯಾವುದೋ ಬಿಂದುವಿನಲ್ಲಿ ಅಂತ್ಯಗೊಳಿಸಿದೆನೆಂದು ಉಸಿರುಬಿಡುತ್ತಾ ಆ ಹಾಳುಮಂಟಪಕ್ಕೆ ಬಂದನು.
ಅಂಬಲಿ ಬೇಯಿಸುತ್ತಿದ್ದ ಆ ಪುಣ್ಯಾತ್ಮನು ಬಾಯಾರಿದ ಇವನನ್ನು ಕಂಡದ್ದೇ ಸಂತಸಗೊಂಡು, ಬಾಯಾರಿದ ಅವನ ಬಾಯಿಗೆ ಸಣ್ಣದೊಂದು ಕಣ್ಣಿ ಬೆಲ್ಲ ಕೊಟ್ಟು, ತಂಬಿಗೆ ನೀರು ತಂದು ಕುಡಿಸಿ, ನಯವಿನಯದಿಂದಲೇ ‘ಅಯ್ಯಾ ವಿರಮಿಸಿರಿ ಇಲ್ಲಿಯೇ.. ಅಂಬಲಿ ಬೇಯುತ್ತಿದೆ, ಊಟ ಮಾಡೋಣ ಜೊತೆಗೂಡಿ. ಹೀಗೆ ಹೋಗಿ ಮಿಂದು ಬರುತ್ತೇನೆ’ ಎಂದು ಹೇಳಿದ. ಆ ಮನುಷ್ಯ ಕಾಗಿಣಾ ಹಳ್ಳದಲ್ಲಿ ಮೈತೊಳೆದುಕೊಂಡು ಬಂದು, ಜೋಳಿಗೆಯೊಳಗಿನ ಕಂಬಳಿ ತೆಗೆದು ಹಾಸಿಕೊಂಡು, ಧೂಪ–ದೀಪಗಳನ್ನು ಹೊತ್ತಿಸಿ, ಎದೆಯ ಮೇಲಿನ ನಾಗಿನಾಥನನ್ನು ಅಂಗೈಯಲ್ಲಿರಿಸಿಕೊಂಡು ಧ್ಯಾನಕ್ಕೆ ಕುಳಿತ. ಆಹಾ.. ಅದೊಂದು ಉನ್ಮತ್ತ ಕ್ರಿಯೆ. ತನ್ನೊಳಗೆ ತಾನು ಹೊಕ್ಕು ತನ್ನಂತರಂಗವ ನೋಡಿಕೊಳ್ಳುತ್ತಿರುವನೋ ಎಂಬಷ್ಟು ತಲ್ಲೀನತೆ ಅವನ ಪೂಜೆಯೊಳಗಿರುವುದನ್ನು ಕಂಡು ಇವನು ಬೆರಗಾದ.
ಪೂಜೆ ಮುಗಿಸಿ ಎದ್ದಾಗಲೂ ಬಿಟ್ಟ ಕಣ್ಣ ಬಿಟ್ಟಂತೆ ಕೂತಿದ್ದ ಶಂಕರನು ಮರುಳನಂತೆ ನಗೆಯಾಡಿದ, ಆ ನಗೆಯಲ್ಲಿ ಕುತೂಹಲವಿತ್ತು. ತಾನು ಆ ದೇಶದಿಂದ ಹೊರಟು ಏನೆಲ್ಲಾ ಭಕ್ತಿಯ ವಿಧಾನಗಳನ್ನು ಎಂತೆಂಥಾ ಭಕ್ತರನ್ನು ಕಂಡು ಈ ದೇಶಕ್ಕೆ ಬಂದವನು, ಬರುವಾಗ್ಗೆ ಏನೆಲ್ಲಾ ಅನುಭವಿಸಿ ಸುತ್ತಲಾರದ ಈ ಭೂಮಿಯನ್ನು ಸುತ್ತಿ ತೀರುವೆನೆಂದು ಬಂದೆನಲಾ.. ಈ ಮನುಷ್ಯ ಇಡೀ ಪ್ರಪಂಚವನ್ನು ಅಂಗೈಯಲ್ಲಿರಿಸಿಕೊಂಡು ಪರವಶತೆಯ ಉತ್ತುಂಗ ಮುಟ್ಟಿದನಲ್ಲಾ ಎಂಬ ಸೋಜಿಗದ ನಗುವದು. ಪೂಜೆ ಮುಗಿಸಿ ಅಂಬಲಿಯನು ಬಡಿಸಿ, ತಾನು ತಿಂದು ಪಾತ್ರೆಯನ್ನು ತೊಳೆದು ಜೋಳಿಗೆಗೆ ಹಾಕಿಕೊಂಡು, ಮತ್ತೊಂದು ಜೋಳಿಗೆಯಲ್ಲಿನ ತನ್ನ ವೇಷದ ಬಟ್ಟೆಯೊಂದು ಹರಿದಿರುವುದ ಕಂಡು ದಾರಕ್ಕೆ ಸೂಜಿ ಪೋಣಿಸಿ ಹೊಲೆಯತೊಡಗಿದ.
‘ಅಯ್ಯಾ… ಯಾವೂರಾತು..? ನೋಡಿದರೆ ಈ ದೇಶದವರಲ್ಲ ಎನಿಸುವುದು’
‘ಅದೇನು ಕಂಡು ಹೀಗೆ ಹೇಳಿದಿರಿ..!’
‘ಕೋಲುಮುಖ, ಉದ್ದುದ್ದ ಕೈ–ಕಾಲುಗಳು, ಕೆಂಗೂದಲು, ನಸುಕೆಂಪಿನ ಮೈದೊಗಲಿನವರು ಯಾರಿದ್ದಾರೆ ಸ್ವಾಮಿ ಈ ದೇಶದಲ್ಲಿ. ನೋಡಿದರೆ ನೀವು ಹಿಮಾಲಯದಿಂದ ಅತ್ತಲಿನ ಸೀಮೆಯವರು ಎಂಬುದು ತಿಳಿಯುತ್ತದೆ. ರಾಜಕಾರ್ಯದ ನಿಮಿತ್ತ ಗುಪ್ತಚಾರರಾಗಿ ಬಂದಿರೋ ಅಥವಾ ದಿಕ್ಕುತಪ್ಪಿ ಕಾಡುಗಳ್ಳರ ಕೈಗೆ ಇರುವುದನೆಲ್ಲಾ ಒಪ್ಪಿಸಿ ಹೀಗೆ ಅಬ್ಬೇಪಾರಿ ಆದಿರೋ..!’
ನಗುವೊಂದನ್ನೇ ಉತ್ತರವಾಗಿ ನೀಡಿದ ಭೋಲಾ ತಾನು ಗುಪ್ತಚರನೂ, ರಾಜತಾಂತ್ರಿಕನೂ, ಅಲೆಮಾರಿಯೂ ಅಲ್ಲ.. ಶುದ್ಧಸಿದ್ಧ ಪ್ರಸನ್ನ ಮರುಳಶಂಕರ ಎಂದುತ್ತರಿಸಿದ. ಲಿಂಗವೆಂದರೇನು..? ಅದು ಪೂಜಿಸಿಕೊಳ್ಳಲು ಮಾತ್ರ ಇರುವುದೋ ಅಥವಾ ನಡೆ–ನುಡಿ ಒಂದಾದ ಭಕುತಿ ಈ ದೇಶದಲ್ಲಾದರೂ ಸಾಧ್ಯವಾಗಿರುವುದೋ ಎಂದು ಕೇಳಿದ. ಅಂಥದ್ದೊಂದು ಶಿವಭಕ್ತರ ನಾಡಿಗೆ ನೀವು ಬಂದಿದ್ದೀರೆಂದು ಬಹೂರೂಪಿ ಚೌಡಯ್ಯನವರು ಹೇಳಿದಾಗ… ಆಹಾ ಆ ಭಕ್ತರ ಭಕ್ತಿಯನು ಮನದುಂಬಿ ನಾ ಕಾಣಬೇಕೆಂದು ಅವನ ಮನ ಹಂಬಲಿಸಿತು.
ಯಾಕೆ ಸ್ವಾಮಿ ಮೌನವಾದಿರಿ..?
ಇದು ಯಾವ ರಾಜ್ಯ..?
ಮಾನ್ಯಖೇಟ..
ಆ ನಡೆ–ನುಡಿ ಒಂದಾದ ಭಕ್ತರಿರುವ ಊರಾವುದು..?
ಕಲ್ಯಾಣ..
ಇದಕ್ಕೆ ಆದ್ಯರಾರು..
ಅಣ್ಣಾ ಬಸವಣ್ಣ..
ಆತನ ಎದೆಯೊಳಗೆ ಚಕ್ಕನೇ ಬೆಳಕಾಡಿದಂತಾಯ್ತು. ಅವರು ದೇಶದ ಪ್ರಧಾನರೇನು ಎಂದು ಮರು ಪ್ರಶ್ನಿಸಿದಾಗ ಚೌಡಯ್ಯನವರು ತಲೆಯಾಡಿಸಿದರು. ನೆನ್ನೆ ದಿನ ಕಂಡ ಹುಡುಗರಾಟ ಬರೀ ಹುಡುಗಾಟವಲ್ಲ..! ಭಳೀರೇ.. ನಾ ಕಂಡು ಮನದಣಿಯೇ ಅನುಭವಿಸಬೇಕು ಆ ಭಕ್ತಿಯನು ಎಂದು ಮನಸಿನಲ್ಲಿಯೇ ಅಂದಾಜಿಸಿದ. ಅವರಿಬ್ಬರು ಗುರು, ಲಿಂಗ, ಜಂಗಮ, ದಾಸೋಹ ಮತ್ತು ಆದ್ಯರಿಂದ ಆರಂಭವಾದ ಶರಣರ ಪರಂಪರೆಯ ಬಗ್ಗೆ ಬಹಳ ಹೊತ್ತು ಮಾತಾಡಿಕೊಂಡರು. ಸಂಜೆಯಾಗುತ್ತಿದ್ದಂತೆ ಮಳಖೇಡದಲ್ಲಿ ದೇಮವ್ವನ ಮೆರವಣಿಗೆ ಹೊರಟಿರುವುದ ಕಂಡ ಚೌಡಯ್ಯನು ‘ನಾನು ಈ ದಿವಸ ಇಲ್ಲಿಗೆ ಬಂದ ಕಾರಣವೆಂದರೆ, ವೇಷವ ತೊಟ್ಟು ಶಿವಗಣವಾದ ಭೃಂಗೀಶನ ಕತೆ ಆಡಬೇಕಿದೆ. ತಡವಾಯ್ತು ಬರುವಿರಾದರೆ ನನ್ನೊಡನೆ ಬನ್ನಿ’ಎನ್ನುತಾ ವೇಷ ಧರಿಸಲು ತೊಡಗಿದನು.
ಆಹಾ.. ನೋಡನೋಡುವುದರೊಳಗೆ ಚಿಟಿಕೆ, ತಾಳ, ತಂಬೂರಾದಿಯಾಗಿ ಹದ ಮಾಡಿಕೊಂಡು, ಡಮರುಗವ ನುಡಿಸಿ, ಸ್ವರಕೆ ಸ್ವರವ ಪೋಣಿಸಿ, ದೇಹಕ್ಕೆ ಬಣ್ಣವ ಲೇಪಿಸಿಕೊಂಡು ಎಡಕಾಗಿ ಮುತ್ತಿನ ಕಿರೀಟ, ಮುತ್ತುಗಳಿಂದ ಅಲಂಕೃತವಾದ ತಾಯಿ ರೂಪವ ಧರಿಸಿ ಬಲಭಾಗದಲಿ ಜಟೆ, ಗಂಗೆ, ಹುಲಿಚರ್ಮ, ತ್ರಿಶೂಲ, ರುಂಡಮಾಲೆಯ ಶಿವನ ರೂಪಧಾರಣ ಮಾಡಿಕೊಂಡು ಒಡ್ಡೋಲಗದ ಕತೆಯ ಭಾಗವೊಂದನ್ನು ಪೂರ್ವದಲ್ಲಿ ಗುಣಗುಣಿಸಿ, ಹೆಜ್ಜೆ ಕಿತ್ತಿಟ್ಟು ದೇಮವ್ವನ ಮೆರವಣಿಗೆ ಕಡೆಗೆ ಹೊರಟರೆ ಸಾಕ್ಷಾತ್ ಶಿವ–ಪಾರ್ವತಿಯರು ಜೋಡಾಗಿ ಭೂಮಿಗಿಳಿದು ಬಂದಂತೆ ಕಾಣುತ್ತಿದ್ದನು ಶಿವಶರಣ ಚೌಡಯ್ಯನು. ಆ ದಿನದ ಆಟವೋ ನೋಡುಗರೆಲ್ಲ ಬೆಕ್ಕಸ ಬೆರಗಾಗಿ ಶಿವನನ್ನೇ ಸಾಕ್ಷಾತ್ ಧ್ಯಾನಿಸುವ ಭಂಗಿಯಲ್ಲಿ ಕುಳಿತುಬಿಟ್ಟಿದ್ದರು.
ತಡರಾತ್ರಿಗೆ ಹಾಳುಮಂಟಪಕ್ಕೆ ಮಲಗಲು ಬಂದಾಗ ಮರುಳಶಂಕರನ ಮೈಯೇ ಎಚ್ಚರವಾದಂತೆ ದೇಹದ ದಣಿವೆಲ್ಲ ಹಾರಿ ಕಲ್ಯಾಣದ ಹಾದಿಗಾಗಿ ತುಡಿಯುತ್ತಿತ್ತು. ಆದರೆ ಚೌಡಯ್ಯನವರು ಈಗಷ್ಟೇ ಆರಂಭಿಸಿದ್ದ ಯಾತ್ರೆಯನ್ನು ಪೂರೈಸಲು ತಿಂಗಳೊಪ್ಪತ್ತು ಹಿಡಿಯುವುದೆಂದಾಗ, ಅವರಿಂದ ಕಲ್ಯಾಣಕ್ಕೆ ಹೋಗುವ ಹಾದಿ ಕೇಳಿ ತಿಳಿದು ರಾತೋರಾತ್ರಿ ಹೊರಟೇಬಿಟ್ಟರು.
**** **** ****
ಕಲ್ಯಾಣವೆಂಬುದು ಹೊರಗಿಲ್ಲ ಎದೆಯೊಳಗಿದೆ. ಇದು ತನ್ನದೇ ಕಲ್ಪನೆಯ ಪ್ರತಿರೂಪವೆಂಬಂತೆ ಮರುಳಶಂಕರ ಬೀದಿಬೀದಿ ಸುತ್ತಿದ. ಎದುರುಗೊಂಡವರು ತಲೆಬಾಗಿ ಒಂದಿಸುವ ವಿನಯವಂತ ಜನ, ಒಂದಿಲ್ಲೊಂದು ಕೆಲಸದಲ್ಲಿ ನಿರತರೇ ಆದ್ದರಿಂದ ಅವರವರು ಮಾಡುವ ಕಾಯಕಗಳೇ ಇಲ್ಲಿ ಮಾತಾಡುತ್ತಿವೆಯಲ್ಲಾ..! ಎಂದು ಮನದಲ್ಲಿಯೇ ಅನುಭವಿಸಿದ. ಕಗ್ಗತ್ತಲ ಕಾನನದೊಳಗೆ ಏಕಾಂತದ ಹಾದಿ ಸವೆಸಲು ಹಾಡುತ್ತಿದ್ದ ಹಾಡಿನ ಸೊಲ್ಲುಗಳು ಇಲ್ಲಿ ಮೂಲೆಮೂಲೆಯಲ್ಲಿ ವಚನಗಳ ರೂಪದಲ್ಲಿ ಕೇಳಿಸುತ್ತಿವೆ. ಆಹಾ ಈ ಭಕ್ತರ ಮಾತು–ಕತೆಯೂ, ಕಾಯ–ಕಾಯಕವೂ, ನಡೆ–ನುಡಿ ಸಿದ್ಧಾಂತಗಳಾಗಿ ತೋರುತ್ತಿವೆ ಇನ್ನು ನನಗೇಕೆ ಮಾತುಗಳ ಹಂಗು..? ಎಂದೆನುತಾ ಆ ದಿವಸ ಮೌನಿಯಾದರು. ಈ ಕಲ್ಯಾಣವೆಂಬ ಮಹಾಸಾಗರವ ಹೊಕ್ಕ ಮೇಲೆ ಅವರ ಅಂತರಂಗದ ಹಸಿವು ತುಸುತುಸು ಹಿಂಗುತ್ತಿರುವ ಅನುಭವವಾಗಿ ನೀರಡಿಕೆ, ಹಸಿವು, ನಿದ್ರೆಯೆಂಬುದು ಯಾವುದೂ ಅರಿವಿಗೆ ಬಾರದಂತೆ ಬದುಕಲಾರಂಭಿಸಿದರು.
ಮಾಮನೆಯ ಮುಂದಲ ಕುಳಿಯೇ ಆವಾಸಸ್ಥಾನವಾಯ್ತು. ಶರಣರ ಹೊಟ್ಟೆ ತಣಿಸಿ ಒಕ್ಕುಮಿಕ್ಕಿದ ಪ್ರಸಾದ ರುಚಿಯಲ್ಲೇ ಬದುಕಿನ ಅರ್ಥವೂ ಇದೆಯನಿಸತೊಡಗಿತು. ದಿನಗಳು ಉರುಳಿದಂತೆ ವರುಷವಾಗಿ, ಆ ವರುಷಗಳು ಒಂದು ಗೊಂಚಲಾಗಿ ಹನ್ನೆರಡು ವರ್ಷಗಳ ಕಾಲ ಅಲ್ಲಿಯೇ ಬದುಕಿ ಕಲ್ಯಾಣಕ್ಕೆ ಸಾಕ್ಷಿಯಾದರು.
ಅದೊಂದು ದಿನ ಬೆಳಗಿನ ಪೂಜೆಗೆ ಸರಿಯಾಗಿ ತಾನೇ ಶಂಕರನೆಂಬಂತೆ ಓಲಾಡುವ ಲೀಲಾಪುರುಷನೊಬ್ಬ ಅಚ್ಚುಕಟ್ಟಾದ ಶಿವಭಕ್ತನೊಬ್ಬನನ್ನು ಜೊತೆ ಮಾಡಿಕೊಂಡು ಬಂದು ಮಹಾಮನೆಯ ಮುಂಬಾಗಿಲ ಮುಂದೆ ನಿಂತಾಗ… ಮೊತ್ತಮೊದಲ ಬಾರಿಗೆ ಮರುಳಶಂಕರದೇವ ಮೆಲುವಾಗಿ ತುಟಿ ಕೀಲಿಸಿ ನಕ್ಕರು. ಅದೇನು ಕಂಚಿನಕಂಠ ಅವರದ್ದು. ಸಿಡಿಲಬ್ಬರದಂತೆ ಬಸವ ಬಂದೆದುರಾಗಲಿ ಶಿವಭಕ್ತರನೆಂದು ಉಲಿದನು. ಅವರು ಅಲ್ಲಮದೇವರು. ಮಾತು ಮಾತು ಪೋಣಿಸಿ ಹೂಕಟ್ಟಿದಂತೆ ಇಡೀ ಲೋಕವ ಕಂಡ ಅನುಭವ ಅವರ ಮಾತಿನಲ್ಲಿತ್ತು. ಒಳಗಿನಿಂದ ಬರುವವರು ಬಂದು ಸ್ವಾಗತಿಸಿದರೆ ಅಹಂಕಾರ ಮಣ್ಣಾದೀತೆಂಬ ಭವಿ–ಭಕುತರ ನಡುವಿನ ಮಾತುಕತೆಯದು. ಪರಿಚಾರಕರು ಬಂದರು, ಅಪ್ಪಣ್ಣ ಬಂದರು… ಮಹಾಮನೆಯೊಳಗೆ ಹೋಗಿ ಮತ್ತೆ ಬಂದರು. ಲಿಂಗಜಂಗಮರ ಸಂಗಮವೇ ತಾನಾದ ಸಂಗನ ಬಸವಣ್ಣ ಮಿಕ್ಕುಳಿದ ಶರಣರ ಜೊತೆಗೂಡಿ ತಾವಾಗಿಯೇ ಎದ್ದು ಬಂದರು ಸ್ವಾಗತಿಸಲು. ವಚನಗಳು ಮಥಿಸಿಮಥಿಸಿ ನಾದ ಹುಟ್ಟಿತು. ಲಿಂಗ–ಜಂಗಮರ ನಡುವಿನ ಆ ಮಾತಿನ ನಾದವು ಬೆಣ್ಣೆಯಷ್ಟು ಮೃದುತ್ವ ಸಾಧಿಸಿತು. ಅಧಿಕಾರ ಮತ್ತು ಧರ್ಮಗಳ ನಡುವೆ ಹೊಸಚಲನೆಯೊಂದರ ಆಗಮನವಾದಂತೆ ಇಡೀ ಕಲ್ಯಾಣವೇ ಸಂಭ್ರಮದ ತುತ್ತತುದಿಯಲ್ಲಿದ್ದಾಗ, ಆ ಪುಣ್ಯಾತ್ಮ ಮಹಾಮನೆಯೊಳಗೆ ಹೊರಟು ನಿಂತಿದ್ದವನು ಗಕ್ಕನೇ ನಿಂತೇ ಬಿಟ್ಟ.
ಯಾವ ಬಗೆಯಲ್ಲಿ ತುಟಿಕೀಲಿಸಿ ಮರುಳಶಂಕರದೇವರು ನಕ್ಕಿದ್ದರೋ ಅದೇ ಮಂದಹಾಸ ಆ ಅಲ್ಲಮನ ಮುಖದಲ್ಲೂ ಮೂಡಿತು.
‘ಬಸವಣ್ಣ ನಿನ್ನ ಧರ್ಮದ ಕಾರಣದಿಂದ ಲಿಂಗದ ಮುಂದೊಂದು ಅತಿಶಯ ಇರುವುದಲ್ಲಾ, ಒಳಗಣ್ಣ ತೆರೆದು ನೋಡಬಾರದೇನಪ್ಪಾ..’
‘ಅತಿಶಯವೇ..’
‘ಹೌದು, ಗುಪ್ತ ಭಕ್ತನ ರೂಪದಲ್ಲಿ ಹೀಗೆ ಇರುವರು ನೋಡಾ ಶಿವಶರಣರು. ಇದು ಸಾಧಾರಣ ಕುದುರೆಯಲ್ಲ, ಶಿವನ ಕುದುರೆ. ತೊಗಟೆಯೊಳಗೆ ತೊಗಟೆಯಾಗಿ, ಬಂದುದನು ಅನುಭವಿಸುತ್ತಾ ದೂರದ ಊರಿನಿಂದ ಬಂದ ಕುದುರೆ ಇಲ್ಲಿಹುದು. ಪ್ರಸಾದವೇ ಪ್ರಾಣ, ಪ್ರಸಾದವೇ ಕಾಯ, ಪ್ರಸಾದವೇ ಜ್ಞಾನ, ಧ್ಯಾನ, ಭೋಗವಾಗಿಸಿಕೊಂಡಿರುವ ಈ ನಿಜಪ್ರಸಾದಿಯ ಗುರುತು ಸಿಕ್ಕಲಿಲ್ಲವೇನಪ್ಪಾ..’
ಎಂದೆನುತಾ… ಮೂಗಿನ ಹೊಳ್ಳೆಗಳನ್ನು ಹಿಗ್ಗಿಸುತಾ ಉಸಿರಿನೆಳೆಯಲ್ಲಿಯೇ ಶಿವಭಕ್ತನ ಇರುವಿಕೆಯನ್ನು ಕಂಡ ಅಲ್ಲಮರು, ಪ್ರಸಾದದ ಎಲೆಗಳನ್ನು ಓಸರಿಸಿ ಮರುಳಶಂಕರದೇವರನು ಕಾಣಿಸಿದರು. ಆಗ ಬಸವಣ್ಣನವರು ನೊಂದುಕೊಳ್ಳುತ್ತಲೇ, ‘ಅಯ್ಯಾ ನಿಮ್ಮ ಶರಣರು ಬಂದು ಬಾಗಿಲೊಳಗಿರಲು, ಕಣ್ತೆರೆದು ನೋಡಲಾರದಷ್ಟು ಅರುವುಗೆಟ್ಟೆನಲ್ಲಾ’ ಎಂದೆನುತಾ ಹಳಹಳಿಸಿದರು.
‘ಬಸವಣ್ಣಾ ಮಾಗುವುದಕೆ ಕಾಲವೂ ಹಣ್ಣಾಗಬೇಕಲ್ಲವೇ.. ಹೂ ಮಿಡಿಯ ಹರಿದು ಒತ್ತಿ ಹಣ್ಣು ಮಾಡಲಾದೀತೆ..? ಇದು ಸಾಕ್ಷಾತ್ ಶಿವನ ಕುದುರೆ ಕಾಣುವ ಕಾಲಕ್ಕೆ ಕಾಣಬಲ್ಲುದೇ ಹೊರತು ಸದಾಕಾಲವು ಕಾಣಬೇಕೆಂದರೆ ಹೇಗೆ? ಮರಹು ಇದ್ದರೆ ತಾನೇ ಅರಿವಿಗೂ ಚೈತನ್ಯ…’
ಹೀಗೆ ಶರಣರ ಬಳಗವು ಮರುಳಶಂಕರದೇವರನ್ನು ಕರೆದುಕೊಂಡು ಮಹಾಮನೆಯೊಳಗೆ ಬರುತ್ತಿರಲು ಆತನಿಗೋ ಗಟ್ಟಿಯಾಗಿ ತಾನು ಕಂಡ ಕಲ್ಯಾಣವನ್ನು ಹಾಡಾಗಿ ಹಾಡಬೇಕೆನಿಸಿತು. ದನಿಯೂ ಶೃತಿಗೊಂಡು ರಾಗವಾಗಿ ಹೊರಡುತ್ತಿದ್ದಂತೆಯೇ ಆ ಧ್ವನಿಯ ಮಾಧುರ್ಯಕ್ಕೆ ಕಲ್ಯಾಣವೇ ತಲೆದೂಗತೊಡಗಿತು. ತಾನು ಕಾಣಬೇಕೆಂದು ಹೊರಟಿದ್ದ ಶ್ರೀಗಿರಿಯ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯ ಇಲ್ಲಿಯೇ ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವಾಗಿ ಗೋಚರಿಸಿದಂತೆ ಸುಶ್ರಾವ್ಯವಾಗಿ ಹಾಡತೊಡಗಿದ.
ಬಸವಣ್ಣ ಚನ್ನಬಸವಣ್ಣ ಪ್ರಭುದೇವ ಮಡಿವಾಳ ಮಾಚಯ್ಯ
ಸಿದ್ಧರಾಮಯ್ಯ ಸೊಡ್ಡಳಬಾಚರಸರು ಹಡಪದಪ್ಪಣ್ಣ
ಪಡಿಹಾರಿ ಉತ್ತಣ್ಣ ಅವ್ವೆ ನಾಗಾಯಿ ಕೋಲಶಾಂತಯ್ಯ
ಡೋಹರ ಕಕ್ಕಯ್ಯ ಮೊಗವಾಡದ ಕೇಶಿರಾಜದೇವರು
ಖಂಡೆಯ ಬೊಮ್ಮಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಥಮಗಣಂಗಳ
ವರಪ್ರಸಾದವ ಕೊಂಡು ಬದುಕಿದೆನಯ್ಯಾ..
ಎಷ್ಟೋ ದಿನದಿಂದ ಮೌನವಾಗಿದ್ದ ಏಕಾಂತವೂ ಇಂದು ಶೃತಿಗೊಂಡಂತೆ ಶರಣರೆಲ್ಲ ಪವಾಡವೇ ನಡೆಯುತ್ತಿದೆ ಎಂಬಂತೆ ನೋಡುತ್ತಿದ್ದರು. ದೂರದಲ್ಲಿ ಆಗಷ್ಟೇ ವೇಷವ ಕಳಚಿ ನಿಂತಿದ್ದ ಚೌಡಯ್ಯನು ಮರುಳಶಂಕರನ ಗುರುತು ಕಂಡು ಮಂದಸ್ಮಿತನಾದನು. ಹೀಗೆ ಶಿವನ ಕುದುರೆಯಾದಂಥ ಮರುಳಶಂಕರದೇವರು ಮುಂದಿನ ಎಲ್ಲಾ ಮಹಾಮನೆಯ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಂಡು, ಶರಣರೊಳಗೆ ಶರಣನಾಗಿ ಗುಪ್ತಭಕ್ತಿಯನ್ನೇ ಕಾಯಕ್ಕೆ ಕಾಯಕವಾಗಿಸಿ ಒಂದಷ್ಟು ದಿನ ಕಲ್ಯಾಣದಲ್ಲಿಯೇ ಬದುಕಿ ಕೊನೆಗಾಲದಲ್ಲಿ ಶ್ರೀಗಿರಿಯತ್ತ ಪ್ರಯಾಣ ಬೆಳೆಸಿದರು.
Comments 15
manju sp
Jun 5, 2019ಮೊದಲ ಕತೆ ಓದಿದ್ದೆ. ಇದು ಹೆಂಗ ಮುಗಿಯುತ್ತೆ ಅನ್ನೋ ಕುತೂಹಲವಿತ್ತು. ಚನ್ನಾಗಿ ಬಂದಿದೆ
Kamala l. akki
Jun 9, 2019ಕತೆ ಕುತೂಹಲದ ಜೊತೆಗೆ ಶರಣರ ಬಗೆಗೆ ತೀವ್ರ ಆಸಕ್ತಿಯನ್ನು ಹುಟ್ಟಿಸುತ್ತದೆ. ಒಬ್ಬೊಬ್ಬರ ಬದುಕೂ ಭಿನ್ನ, ಸುಂದರ. ಶರಣರು ಸಾಧಕರು, ಬದುಕನ್ನು ಕಂಡುಂಡ ಅವರ ಪರಿ ಅಚ್ಚರಿ. ಮರಳಶಂಕರದೇವರ ಗುಪ್ತಭಕ್ತಿ ಬಹಳ ಆಶ್ಚರ್ಯಕರವಾಗಿದೆ.
Dr. Mallikarjuna
Jun 10, 2019ಕಲ್ಯಾಣದ ಬಸವಣ್ಣನವರ ವ್ಯಕ್ತಿತ್ವ ಹೇಗೆ ಎಲ್ಲ ಕಡೆಯೂ ಹರಡಿತ್ತು ಎನ್ನುವುದನ್ನೂ ಕತೆಗಾರರು ಮಕ್ಕಳ ಆಟದ ಮೂಲಕ ಚಿತ್ರಿಸಿರುವುದು ಹೆಚ್ಚು ಪರಿಣಾಮಕಾರಿಯಾಗಿದೆ. ನಾಟಕದ ಪಟ್ಟುಗಳು ಹಡಪದ ಅವರಿಗೆ ಸಿದ್ಧಿಸಿವೆ. ಬ್ಯೂಟಿಫುಲ್ ಸ್ಟೋರಿ.
deveeramma pavate
Jun 10, 2019ಮರುಳಶಂಕರದೇವರು ಶಿವನ ಕುದುರೆಯಾದದ್ದು ಹೇಗೆನ್ನುವ ನನ್ನ ಕುತೂಹಲವನ್ನು ಕತೆ ತಣಿಸಿದೆ. ಭೋಲಾ ಶಂಕರನ ಶರಣ ಪಯಣ ಮಾರ್ಮಿಕವಾಗಿ ಮೂಡಿಬಂದಿದೆ. ಹಿಂದಿನ ಭಾಗದ ಮುಂದುವರಿಕೆಯಲ್ಲಿ ಭೋಲಾ, ಮರುಳಶಂಕರನಾಗಿ ಪರಿವರ್ತನೆ ಪಡೆದದ್ದು ನಿಸರ್ಗದ ಸಹಜ ಬದಲಾವಣೆಯಂತೆ ಕಾಣುತ್ತದೆ.
ಮಲ್ಲಪ್ಪ ಹೊಂಗಲ್
Jun 12, 2019ಕಥೆ ತುಂಬಾ ಚೆನ್ನಾಗಿತ್ತು. ಓದುಗನನ್ನು ಓದಿಸುತ್ತಾ ಹೋಗುತ್ತದೆ
ಪ್ರೊ. ಭದ್ರಯ್ಯ ಬಿರಾದಾರ
Jun 13, 2019ಲೋಕವ ಕಂಡು ನಗುವವನನ್ನು ಜಗತ್ತು ಮರುಳ ಎಂದರೂ ಆ ಮರಳುತನದಲ್ಲಿ ಮಾಯೆಯ ಬದುಕು ಅನಾದಿಕಾಲದಿಂದಲೂ ಇದ್ದುದೇ… ಎತ್ತಲೋ ಒಯ್ಯುವ ಮಾತುಗಳು… ಶಿವನ ಕುದುರೆ ಏರಿಸಿಕೊಂಡು ಹಾರಿಸಿಕೊಂಡು ಒಯ್ಯುತ್ತದೆ
Jagadeesh anekal
Jun 14, 2019ಕತೆಯಲ್ಲಿ ಪ್ರಾಸಂಗಿಕವಾಗಿ ಬಂದ ಬಹುರೂಪಿ ಚೌಡಯ್ಯನವರ ಕಾಯಕ ಕುತೂಹಲ ಹುಟ್ಟಿಸಿತು. ಅವರ ಕತೆಯನ್ನೂ ಬರೆಯಬೇಕೆಂಬುದು ಮಹಾದೇವ ಹಡಪದ ಶರಣರಲ್ಲಿ ನನ್ನ ವಿನಂತಿ.
ಭಾರತಿ ಬಳ್ಳಿಗಾವಿ
Jun 14, 2019ರಾಜ –ಬಸವರಾಜ ಆಟ ಕಥೆಗಾರರ ಸುಂದರ ಕಲ್ಪನೆ. 12ನೇ ಶತಮಾನವನ್ನು ನೆನಪಿಸುವ ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತಿವೆ.
ಡಾ. ಶಶಿಕುಮಾರ್ ವಸ್ತ್ರದ
Jun 16, 2019ಮರುಳಶಂಕರದೇವರನ್ನುಅಲ್ಲಮರು ಗುರುತಿಸಿದ್ದು ಅದ್ಭುತ ಗಳಿಗೆ. “ಲಿಂಗದ ಮುಂದೊಂದು ಅತಿಶಯ” ಎನ್ನುವ ಅವರ ಉದ್ಗಾರ, ತೊಗಟೆಯೊಳಗೆ ತೊಗಟೆಯಾದವ ಎನ್ನುವ ಪದ ಬಳಕೆಗಳು ಗುಪ್ತ ಶರಣರ ವ್ಯಕ್ತಿತ್ವವನ್ನು ಹಿಡಿದಿಡಲು ಸುಂದರವಾಗಿ ಕತೆಗಾರರು ಬಳಕೆ ಮಾಡಿದ್ದಾರೆ. ಶಿವನ ಕುದುರೆ ಎನ್ನುವ ಟೈಟಲ್ ಅದ್ಹೇಗೆ ಇದಕ್ಕೆ ಒಪ್ಪುತ್ತದೆಂಬ ನನ್ನ ಅನುಮಾನಕ್ಕೆ ಉತ್ತರ ಸಿಕ್ಕಿತು.
Geetha Jayraj
Jun 17, 2019ದಾಸೋಹ ಭಾವವನ್ನು ತುಂಬಿಕೊಂಡ ಕಲ್ಯಾಣದ ವಾತಾವರಣದಲ್ಲಿ ಮರುಳಶಂಕರ ಶರಣರು ಕರಗಿ ಹೋದರೆ? ಮಾತು ಕಳೆದುಕೊಂಡರೆ?… ಶಿವನ ಕುದುರೆಗೆ ಯಾರ ಹಂಗು ಯಾಕೆ ಬೇಕು. ಮನಮುಟ್ಟುವಂತಿದೆ ಕತೆ. ಮಹಾದೇವ ಶರಣರಿಗೆ ಶರಣು ಶರಣಾರ್ಥಿ.
Mariswamy Gowdar
Jun 21, 2019ರಾಜ-ಬಸವರಾಜರ ಆಟ ಸೂಪರ್. ಮರುಳ ಶಂಕರ ದೇವರ ವಚನಗಳನ್ನು ಅಲ್ಲಲ್ಲಿ ಬಳಸಿಕೊಂಡಿದ್ದರೆ ಚೆನ್ನಾಗಿತ್ತು. ವಚನಗಳಲ್ಲಿ ಅವರ ವ್ಯಕ್ತಿತ್ವ ತೋರಿಸುವುದರಿಂದ ಕತೆಗೆ ಮತ್ತಷ್ಟು ಬಲ ಸಿಗುತ್ತದೆ ಎನ್ನುವುದು ನನ್ನ ಭಾವನೆ.
ಮಂಜುಳಾ ಫಾಲಾಕ್ಷಯ್ಯ
Jun 21, 2019ಸುಂದರವಾದ ಮಾರ್ಮಿಕ ಕತೆ, ಇದನ್ನು ನೀವು ರಂಗಪ್ರಯೋಗಕ್ಕೆ ಅಳವಡಿಸಲು ಸಾಧ್ಯವೇ? ನಡುವೆ ವಚನಗಳನ್ನು ಬಳಸಿಕೊಂಡು ಸುಂದರ ನಾಟಕ ರೂಪಿಸಿ, you can do it sir.
Jyothi Hulyal
Jun 24, 2019ಶರಣರ ಸಂಗದಲ್ಲಿ ಮೌನವಾಗಿ ಉಳಿದ ಮರುಳ ಶಂಕರದೇವರ ವ್ಯಕ್ತಿತ್ವ ಮನಸ್ಸನ್ನು ತೀವ್ರವಾಗಿ ಕಾಡುತ್ತದೆ. ಅವರು ಹಾಗೆ ಮೌನವಾಗಿ ಅದೆಷ್ಟು ವರುಷ ಕಳೆದರು!! ಶರಣರ ಪರಿಯನ್ನು ಅರಿಯುವುದೇ ಕಷ್ಟ.
Madhakar Bannuru
Jun 28, 2019ಶಿವನ ಕುದುರೆ ನನ್ನನ್ನೂ ಏರಿಸಿಕೊಂಡು ಕಲ್ಯಾಣಕ್ಕೆ ತಂದಿತು. ನಮ್ಮ ಶರಣರ ಕತೆಗಳು ಎಷ್ಟು ಅದ್ಭುತವಾಗಿವೆ! ಹೀಗೆ ಕತೆ ಹೊಸೆದರೆ ಮನೆಯ ಮಕ್ಕಳಿಗೆ ಸುಲಭವಾಗಿ ಶರಣರ ಬದುಕನ್ನು ಪರಿಚಯಿಸಬಹುದು. ಕತೆಗಾರ ಮಹಾದೇವ ಶರಣರಿಗೆ ಥ್ಯಾಂಕ್ಸ.
ಸೋಮಶೇಖರ, ಹಾಸನ
Jun 30, 2019ಕತೆಯ ಎರಡೂ ಭಾಗಗಳನ್ನು ಓದಿದೆ, wonderful, ತುಂಬಾ ಚೆನ್ನಾಗಿದೆ ಅಕ್ಕಾ. ಮಹಾದೇವ ಹಡಪದ ಅವರು ಹಿಂದೆ ಬರೆದ ಕತೆಗಳನ್ನೂ ಓದಿ, ಅಭಿಪ್ರಾಯ ತಿಳಿಸುವೆ.