ಶರಣನಾಗುವುದು…
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಚಿಕ್ಕೊಪ್ಪದಲ್ಲಿ ಬಸವ ಬೆಳವಿಯ ಪ್ರವಚನಪಟು ಶ್ರೀ ಶರಣ ಬಸವ ಅಪ್ಪಗಳ ಪ್ರವಚನ. ಅದರ ಸಮಾರೋಪ ಸಮಾರಂಭಕ್ಕೆ ಅಲ್ಲಿನ ಕಾರ್ಯಕರ್ತರು ನಮ್ಮನ್ನು ಆಹ್ವಾನಿಸಿದ್ದರು. ಅವರು 27 ದಿವಸಗಳ ಪ್ರವಚನದಲ್ಲಿ ಬಸವ ಸ್ಮರಣೆಯನ್ನು ಮಾಡ್ತಾ ಅಲ್ಲಿನ ಧರ್ಮಾಸಕ್ತರನ್ನು ಸಹ ಬಸವ ಸ್ವರೂಪಿಗಳಾಗುವ ಹಾಗೆ ಪರಿವರ್ತನೆ ಮಾಡಿದ್ದಾರೆ ಅನ್ನಿಸಿತು. ಕಾರಣ ಅಲ್ಲಿನ ಏಳೆಂಟು ಜನ 5-6 ನೆಯ ತರಗತಿಯ ಮಕ್ಕಳು ಬಂದು ನಮಸ್ಕಾರ ಮಾಡಿದರು. ವಚನ ಹೇಳ್ತೀರಾ ಅಂದಾಗ ಅವರು ನಿರ್ಭಿಡೆಯಿಂದ ಏಳೆಂಟು ವಚನಗಳನ್ನು ಹೇಳಿದರು. ಇವುಗಳನ್ನು ಎಲ್ಲಿ ಕಲಿತಿದ್ದೀರಿ ಅಂದಾಗ ಈ ಶಿಬಿರದಲ್ಲಿ ಅಂದರು. ಒಂದು ಪ್ರವಚನದಿಂದ ಇದಕ್ಕಿಂತ ಹೆಚ್ಚಿನ ಸಾಧನೆ ಏನೂ ಬೇಕಿಲ್ಲ ಅನಿಸಿತು. ಇವತ್ತು ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕೊಟ್ಟರೆ ನಾಳೆ ಅವರು ನಾಡಿನ ಆಸ್ತಿಯಾಗುತ್ತಾರೆ. ವಯಸ್ಸಾದವರಿಗೆ ಸಂಸ್ಕಾರ ಕೊಟ್ಟರೆ ಅವರಿಂದ ಹೆಚ್ಚು ಫಲ ನಿರೀಕ್ಷಿಸಲಾಗದು. ಹಾಗಾಗಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಜನರನ್ನು ಮೂರು ರೀತಿಯ ವರ್ಗೀಕರಣ ಮಾಡುತ್ತಿದ್ದರು. 1) ತುಂಬಿದ ಚೀಲ 2) ತೂತುಬಿದ್ದ ಚೀಲ 3) ಖಾಲಿ ಚೀಲ. ತುಂಬಿದ ಚೀಲ ಅಂದರೆ ಈಗಾಗಲೇ 60 ವರ್ಷ ದಾಟಿದವರು. ನಾವು ಕೂಡ ಆ ವರ್ಗಕ್ಕೆ ಸೇರಿದವರು. ಬೇಕಾದ್ದೋ, ಬೇಡವಾದದ್ದೋ ಹೀಗೆ ಏನೇನೋ ತುಂಬಿಕೊಂಡಿದ್ದೇವೆ. ಸದರಿ ಚೀಲದಲ್ಲಿ ಇನ್ನೇನನ್ನೂ ತುಂಬಲು ಸಾಧ್ಯವಿಲ್ಲ. ಹಾಗಾಗಿ ಈ ಚೀಲಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಿಲ್ಲ. ತೂತುಬಿದ್ದ ಚೀಲ ಅಂದರೆ ಯುವಕ-ಯುವತಿಯರು. ಅವರಿಗೆ ಉತ್ಸಾಹ ಇದೆ. ಏನಾದರೂ ತುಂಬೋಣ ಅಂದರೆ ಚೀಲ ತೂತುಬಿದ್ದಿದೆ. ತುಂಬಿದ ತಕ್ಷಣ ಸೋರಿ ಹೋಗುತ್ತೆ. ಆ ಚೀಲದ ತೂತನ್ನು ಹೊಲಿಯುವ ವ್ಯವಧಾನ ನಮ್ಮ ಜನರಿಗೆ ಇಲ್ಲ. ಹಾಗಾಗಿ ಅವರ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಿಲ್ಲ. ಮೂರನೆಯ ಚೀಲ ಈಗ ತಾನೆ ಫ್ಯಾಕ್ಟರಿಯಿಂದ ಹೊಸದಾಗಿ ಬಂದಿದೆ. ಅದೇ ನಮ್ಮ ಮಕ್ಕಳು. ಆ ಚೀಲದಲ್ಲಿ ಮಣ್ಣು, ಗೊಬ್ಬರ, ಕಾಳು, ಹಣ ಏನು ಬೇಕಾದರೂ ತುಂಬಬಹುದು. ತುಂಬಿಸಿಕೊಳ್ಳುವ ಸಾಮರ್ಥ್ಯ ಖಾಲಿ ಚೀಲಕ್ಕೆ ಇದೆ. ತುಂಬುವ ವ್ಯಕ್ತಿ ವಿವೇಕಿಯಾಗಿರಬೇಕು. ಏನು ತುಂಬಬೇಕು ಎನ್ನುವ ವಿವೇಕ ಇದ್ದಲ್ಲಿ ಆ ಚೀಲದ ಮೌಲ್ಯ ಹೆಚ್ಚಾಗುತ್ತೆ.
ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳಿಗೆ ಶರಣ ಪರಂಪರೆಯ ಬೀಜಗಳನ್ನು ಬಿತ್ತುವ ಕೆಲಸ ಆಗಬೇಕಿದೆ. ಎಂತೆಂಥದೋ ಬೀಜಗಳನ್ನು ಬಿತ್ತಿದರೆ ಒಳ್ಳೆಯ ಫಲ ಪಡೆಯುವುದು ತುಂಬಾ ಕಷ್ಟ. ಶರಣರ ವಚನಗಳ ಬೀಜಗಳನ್ನೇ ಮಕ್ಕಳ ಮನೋಭೂಮಿಕೆಯಲ್ಲಿ ಬಿತ್ತಿದರೆ ಅವರು ಮುಂದೆ ಅಡ್ಡದಾರಿ ಹಿಡಿಯಲು ಸಾಧ್ಯವಿಲ್ಲ. ಒಂದು ಮಗು ‘ಕಳಬೇಡ, ಕೊಲಬೇಡ…’ ಎನ್ನುವ ವಚನ ಹೇಳಿದಾಗ ನಮ್ಮೊಂದಿಗಿದ್ದ ಅಧ್ಯಾಪಕರೊಬ್ಬರು ಕೇಳಿದರು: ‘ಮಗು ನೀನು ಇದರ ಅರ್ಥ ಹೇಳ್ತೀಯಾ?’ ಅಂದರು. ಮಗು ಪ್ರಯತ್ನ ಮಾಡ್ತೇನೆ ಅಂದು ಸ್ಪಷ್ಟವಾಗಿ ಆ ವಚನದ ವಿವರಣೆಯನ್ನು ನೀಡ್ತು. ನಾವು ಆ ಮಗುವನ್ನು ಕೇಳಿದ್ವಿ: ‘ದೇವರನ್ನು ಒಲಿಸುವಂಥ ದಾರಿ ಯಾವುದು?’ ಎಂದು. ಧ್ಯಾನ ಮಾಡಬೇಕು, ಪೂಜೆ ಮಾಡಬೇಕು ಅಂತ ಹೇಳ್ತು. ನೋಡಮ್ಮಾ ಬಸವಣ್ಣನವರು ಎಲ್ಲಿಯೂ ಧ್ಯಾನ, ಮೌನ, ಪ್ರಾರ್ಥನೆ, ಸ್ನಾನ, ಎಡೆಹಿಡಿಯುವುದು, ಕಾಯಿ ಒಡೆಯುವುದನ್ನು ಹೇಳಿಲ್ಲ. ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗಬೇಕು. ಅಂತರಂಗ, ಬಹಿರಂಗ ಶುದ್ಧಿಯನ್ನು ಮಾಡಿಕೊಳ್ಳುವುದು ಹೇಗೆ? ಪೂಜಾರಿ-ಪುರೋಹಿತರನ್ನು, ಸ್ವಾಮಿಗಳನ್ನು ಕೇಳಿದರೆ ಗಂಗಾ ಸ್ನಾನ, ಕಾಶಿವಿಶ್ವನಾಥನ ದರ್ಶನ ಅಂತ ಹೇಳಬಹುದೇನೋ. ಬಸವಣ್ಣನವರು ಹೇಳಿದ್ದು ಗಂಗಾಸ್ನಾನವೂ ಅಲ್ಲ, ಕಾಶಿವಿಶ್ವನಾಥನ ದರ್ಶನವೂ ಅಲ್ಲ. ಏಳು ಸೂತ್ರಗಳನ್ನು ಬದುಕಿನಲ್ಲಿ ಅನುಸರಿಸಲು ಹೇಳಿದ್ದಾರೆ. ಅವೇ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಕು, ಇದಿರ ಹಳಿಯಲುಬೇಡ ಎನ್ನುವ ನೀತಿಸಂಹಿತೆಗಳು. ಇವುಗಳಿಗೆ ಸಪ್ತಶೀಲಗಳು ಎನ್ನುವರು. ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಅಂತರಂಗ, ಬಹಿರಂಗ ಶುದ್ಧಿಯಾಗಿ ಭಗವಂತ ತನ್ನಷ್ಟಕ್ಕೆ ತಾನೇ ಒಲಿಯುತ್ತಾನೆ.
ಬಸವಣ್ಣನವರು ಸಪ್ತಶೀಲಗಳನ್ನು ಹೇಳಿದರೆ ಗಾಂಧೀಜಿಯವರು ಸಪ್ತಪಾತಕಗಳನ್ನು ಹೇಳ್ತಾರೆ. ಅಲ್ಲಿ ಏನೂ ವ್ಯತ್ಯಾಸ ಇಲ್ಲ. ಆದರೆ ಇವತ್ತಿನ ಸ್ಥಿತಿ ಹೇಗಾಗಿದೆ ಅಂದರೆ ಸಪ್ತಶೀಲಗಳಂತೆ ನಡೆಯುತ್ತಿಲ್ಲ. ಸಪ್ತಪಾತಕಗಳನ್ನು ಬಿಡುತ್ತಿಲ್ಲ. ಈ ತೊಳಲಾಟದಲ್ಲಿ ಸ್ವಾಮಿಗಳು, ರಾಜಕಾರಣಿಗಳು, ಸಾಮಾನ್ಯ ಜನರೂ ಒದ್ದಾಡ್ತಿದ್ದಾರೆ. ಹಾಗಾದರೆ ಇದರಿಂದ ಹೊರಬರಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ಅದು ನಮ್ಮ ಮನೆಯಿಂದ, ಮನಸ್ಸಿನಿಂದ ಪ್ರಾರಂಭವಾಗಬೇಕು. ಮನೆಯ ಜನರಲ್ಲಿ ಒಳ್ಳೆಯ ಸಂಸ್ಕಾರ ಇದ್ದರೆ, ಅವರು ನಿತ್ಯ ಇಷ್ಟಲಿಂಗ ಪೂಜೆ ಮಾಡುತ್ತಿದ್ದರೆ, ಹಣೆಗೆ ಭಸ್ಮ ಧರಿಸಿಕೊಳ್ಳುತ್ತಿದ್ದರೆ, ವಚನಗಳನ್ನು ಹೇಳುತ್ತಿದ್ದರೆ ಮಕ್ಕಳಿಗೆ ಏನನ್ನೂ ಹೇಳಬೇಕಾಗಿಲ್ಲ. ಮನೆಯ ಹಿರಿಯರನ್ನು ಅವರು ಅನುಕರಣೆ ಮಾಡುತ್ತಾರೆ. ಸಾಮಾನ್ಯವಾಗಿ ಮಕ್ಕಳು ಅನುಕರಣಾಪ್ರಿಯರು. ಅಪ್ಪ, ಅವ್ವ, ಅಕ್ಕ, ಅಣ್ಣ ಹೀಗೆ ಮನೆಯ ಸದಸ್ಯರು ಏನು ಮಾಡುವರೆಂದು ನೋಡಿ ಅವರನ್ನೇ ಅನುಕರಣೆ ಮಾಡುವರು. ನಿಜಕ್ಕೂ ಅವರು ಮಕ್ಕಳಿಗೆ ಮಾರ್ಗದರ್ಶನ ಮಾಡುವ ಮಟ್ಟದಲ್ಲಿದ್ದಾರೆಯೇ ಎಂದು ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ. ಬಸವಣ್ಣನವರು ಮತ್ತು ಅವರ ತತ್ವಾದರ್ಶಗಳು ಕೇವಲ ವಚನಗಳಲ್ಲಿ ಇಲ್ಲ. ವ್ಯಕ್ತಿಗತ ಬದುಕಿನ ಶುದ್ಧಿಯಲ್ಲಿ ಇವೆ. ನಡೆ, ನುಡಿ, ಭಾಷೆ, ಭಾವ, ಬದುಕು ಎಲ್ಲವೂ ಶುದ್ಧಿಯಾಗಬೇಕು. ಆಗ ಬಸವಣ್ಣನವರು ವ್ಯಕ್ತಿಯ ಅಂತರಂಗದೊಳಗೆ ಪ್ರವೇಶ ಮಾಡಲು ಸಾಧ್ಯ. ಎದ್ದರೆ, ಬಿದ್ದರೆ ಬಸವ, ಬಸವ, ಬಸವ ಅಂದರೆ ಪ್ರಯೋಜನ ಇಲ್ಲ. ಇವತ್ತು ಎಷ್ಟೋ ಜನರು ಬಸವಣ್ಣನವರನ್ನು ನೆನಪಿಸಿಕೊಳ್ತಾರೆ; ಬಸವತತ್ವಗಳನ್ನು ಗಾಳಿಗೆ ತೂರುತ್ತಾರೆ. ಅದು ಇಂಥದ್ದೇ ಕ್ಷೇತ್ರ ಎನ್ನುವಂತಿಲ್ಲ. ಧಾರ್ಮಿಕ, ರಾಜಕೀಯ, ಸಾಮಾಜಿಕ ಹೀಗೆ ಪ್ರತಿಯೊಂದು ಕ್ಷೇತ್ರದ ನೇತಾರರೂ ಅಡ್ಡದಾರಿ ತುಳಿಯುವಲ್ಲಿ ಸ್ಪರ್ಧೆಯನ್ನೇ ನಡೆಸಿದ್ದಾರೆ. ಇವರನ್ನು ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎಂದು ನಿರಾಶಾವಾದಿಗಳಾಗಬೇಕಿಲ್ಲ. ಆಶಾವಾದಿಗಳಾಗಿದ್ದರೆ ಬೇಕಾದಷ್ಟು ಬದಲಾವಣೆ ಮಾಡಲು ಅವಕಾಶ ಇದೆ.
ಬಹುತೇಕ ನಗರ, ಪಟ್ಟಣಗಳಲ್ಲಿ ಉತ್ಸವಾದಿ ಕಾರ್ಯಗಳಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ನಡೆಯುವುದು ಸಹಜ. ಅಂದು ನಾವು ಕಂಡದ್ದು ಸ್ತ್ರೀ-ಪುರುಷರು, ಮಕ್ಕಳು ತಲೆಯ ಮೇಲೆ ವಚನಗಳ ಕಟ್ಟುಗಳನ್ನಿಟ್ಟುಕೊಂಡು, ವಚನಗಳನ್ನು ಹಾಡುತ್ತ ಹೆಜ್ಜೆ ಹಾಕುತ್ತಿದ್ದರು. ಇದು ಸಹ ಗಮನಾರ್ಹ ಪರಿವರ್ತನೆ. ವಚನಗಳನ್ನು ತಲೆಮೇಲೆ ಹೊತ್ತವರು ಕ್ರಮೇಣ ಆ ವಚನಗಳನ್ನು ತಲೆಯೊಳಗಡೆ ತುಂಬಿಕೊಳ್ಳುವಂತೆ ಆಗಬೇಕು. ತಲೆಮೇಲೆ ಇಟ್ಟುಕೊಳ್ಳೋದು ಸುಲಭ. ತಲೆಯ ಒಳಗಡೆ ಇಟ್ಟುಕೊಳ್ಳುವುದು ಅಷ್ಟು ಸುಲಭ ಅಲ್ಲ. ಸಂಕಲ್ಪ ಮಾಡಿದರೆ ಅದು ಸಹ ಸುಲಭ ಆಗುವುದರಲ್ಲಿ ಅನುಮಾನವಿಲ್ಲ. ಇವತ್ತು ಪ್ರತಿಯೊಬ್ಬರೂ ಆಸೆಪಡುವುದು ಹೊನ್ನು, ಹೆಣ್ಣು, ಮಣ್ಣಿಗಾಗಿ. ಇವೇ ನಿಜವಾದ ಸಂಪತ್ತು, ಆಸ್ತಿ ಎಂದು ಭಾವಿಸಿಕೊಂಡವರಿಗೆ ಕೊರತೆ ಇಲ್ಲ. ಅಲ್ಲಮಪ್ರಭುದೇವರು `ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ, ನಿನ್ನೊಡವೆ ಎಂಬುದು ಜ್ಞಾನರತ್ನ, ಅಂತಪ್ಪ ರತ್ನವಕೆಡಗುಡದೇ ಅಲಂಕರಿಸಿದೆಯಾದಡೆ ಗುಹೇಶ್ವರ ಲಿಂಗದಲ್ಲಿ ನಿನಗಿಂತ ಸಿರಿವಂತರು ಬೇರಿಲ್ಲ ಕಾಣಾ’ ಎಂದಿದ್ದಾರೆ. ನಿಜವಾದ ಶ್ರೀಮಂತಿಕೆ ಅಧಿಕಾರದಲ್ಲಿ, ಕಾವಿ ಧರಿಸುವಲ್ಲಿ, ಮಠ ಕಟ್ಟುವಲ್ಲಿ, ಆಸ್ತಿ ಕೊಳ್ಳುವಲ್ಲಿ ಇಲ್ಲ. ಅದಿರುವುದು ಸುಜ್ಞಾನದಲ್ಲಿ. ಆಗ ವ್ಯಕ್ತಿಯ ಅರಿವು-ಆಚಾರ ಒಂದಾಗುವವು. ನಡೆ-ನುಡಿಗಳಲ್ಲಿ ಅಂತರ ಇರುವುದಿಲ್ಲ. ಇವತ್ತು ಅನೇಕ ಜನ ಜ್ಞಾನರತ್ನವನ್ನು ಬಯಸ್ತಾ ಇಲ್ಲ. ಒಂದು ಎಕರೆ ಜಮೀನು ಇದ್ದರೆ ಇನ್ನೊಂದು ಎಕರೆ ಕೊಳ್ಳಬೇಕು, ಎರಡು ಎಕರೆ ಇದ್ದದ್ದನ್ನು ನಾಲ್ಕು ಎಕರೆ ಮಾಡಬೇಕು, ನಾಲ್ಕು ಎಕರೆ ಆದ್ಮೇಲೆ ಎಂಟು ಎಕರೆ ಹೀಗೆ ಆಶಾಗೋಪುರ ಕಟ್ಟುತ್ತಲೇ ಇರುವರು. ಏನೆಲ್ಲವನ್ನೂ ಸಂಪಾದಿಸಿದ ವ್ಯಕ್ತಿ ಈ ಲೋಕವನ್ನು ಬಿಟ್ಟು ಹೋದ್ಮೇಲೆ ಅವನಿಗೆ ನಿಜಕ್ಕೂ ಬೇಕಾಗಿದ್ದು ಕೇವಲ ಮೂರಡಿ-ಆರಡಿ ಭೂಮಿ. ಅದಕ್ಕಿಂತ ಹೆಚ್ಚು ಬೇಕಾ? ಈ ಲೋಕವನ್ನು ಬಿಟ್ಟು ಹೋದಾಗ ಯಾರಾದರೂ ತಾವು ಸಂಪಾದಿಸಿದ ಸಂಪತ್ತನ್ನು ಕಟ್ಟಿಕೊಂಡು ಹೋಗುವರೇನು? ಬರುವಾಗಲೂ ಬೆತ್ತಲೆ, ಹೋಗುವಾಗಲೂ ಬೆತ್ತಲೆ. ಮಧ್ಯೆ ಬರೀ ಕತ್ತಲೆ. ಆ ಕತ್ತಲೆಯಿಂದ ಬೆಳಕಿನ ಕಡೆ ಹೋಗಬೇಕಾಗಿದೆ. ಹಾಗಾಗಿ ಅಲ್ಲಮಪ್ರಭುದೇವರು ಮಾನವನ ನಿಜವಾದ ಒಡವೆ ಜ್ಞಾನರತ್ನ ಎನ್ನುವರು. ಅದನ್ನು ಅರ್ಥ ಮಾಡಿಕೊಂಡು ಶರಣರ ವಿಚಾರಗಳನ್ನು ಆಚರಣೆಯಲ್ಲಿ ತಂದರೆ ಯಾರು ಬೇಕಾದರೂ ಶ್ರೀಮಂತರಾಗಲು ಸಾಧ್ಯ.
ಒಂದು ಅಪರೂಪದ ಕತೆ ನಮಗೆ ನೆನಪಾಗುತ್ತೆ. ಒಬ್ಬನಿಗೆ ಸಾವಿರಾರು ಎಕರೆ ಭೂಮಿಯ ಒಡೆಯನಾಗಬೇಕೆಂಬ ಆಸೆ. ಹೇಗೆ ಆಗೋದು? ರಾತ್ರಿಯೆಲ್ಲಾ ಯೋಚನೆ ಮಾಡಿದ. ನಿದ್ರೆ ಇಲ್ಲ. ಒದ್ದಾಟ. ಬೆಳಗ್ಗೆ ಡಂಗೂರ ಸಾರುವ ಶಬ್ದ ಕೇಳುತ್ತದೆ. ನೋಡಿ ನಮ್ಮ ರಾಜರು ಒಂದು ಹೊಸ ಯೋಜನೆ ರೂಪಿಸಿದ್ದಾರೆ. ಹೆಚ್ಚು ಭೂಮಿಯ ಒಡೆಯರಾಗಬೇಕೆಂದರೆ ಅಂಥವರು ನಾಳೆ ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಇಲ್ಲಿನ ಸ್ಮಶಾನದಿಂದ ಓಟ ಪ್ರಾರಂಭಿಸಿ ಸೂರ್ಯಾಸ್ತದೊಳಗೆ ವಾಪಾಸ್ ಹೊರಟ ಸ್ಥಳ ಮುಟ್ಟಬೇಕು. ಅಷ್ಟೂ ಜಮೀನು ಅವರದೇ. ಈತ ಮತ್ತೆ ಮತ್ತೆ ಡಂಗೂರ ಸಾರುವವನ ಮಾತು ಕೇಳ್ತಾನೆ. ಎಲ್ಲಿಲ್ಲದ ಖುಷಿಯಾಗುತ್ತೆ. ಮರುದಿನ ಆತ ಎಲ್ಲರಿಗಿಂತ ಮುಂಚೆ ಆ ಸ್ಥಳಕ್ಕೆ ಬಂದು ಸೂರ್ಯೋದಯವಾಗುತ್ತಲೇ ಎಲ್ಲರ ಜೊತೆ ಓಟ ಪ್ರಾರಂಭಿಸಿದ. ಕೆಲವರು ಮಧ್ಯದಲ್ಲೇ ನಿಂತರು. ಕೆಲವರು ಮುಂದೆ ಹೋಗಿ ನಿಂತರು. ಇನ್ನು ಕೆಲವರು ಓಡೋದಕ್ಕೆ ಆಗಲ್ಲ ಅಂತ ಹೇಳಿದರು. ಇವನು ಮಾತ್ರ ಓಡಿದ, ಓಡಿದ ಓಡಿದ. ಆಗಲೇ ಮಧ್ಯಾಹ್ನ ಎರಡು ಗಂಟೆ. ಮತ್ತೆ ವಾಪಾಸ್ ಹೋಗಿ ಗುರಿ ಮುಟ್ಟಬೇಕಲ್ಲಾ ಅಂತ ಹಿಂದಕ್ಕೆ ತಿರುಗಿದ. ಊಟ ಇಲ್ಲ, ನೀರಿಲ್ಲ, ವಿಶ್ರಾಂತಿ ಇಲ್ಲ. ಓಡ್ತಾನೇ ಇದಾನೆ. ಓಡಿ ಗುರಿ ಮುಟ್ಟಿದ ಸಂತೋಷದಲ್ಲಿ ಬಿದ್ದ ನೆಲಕ್ಕೆ. ಮೇಲೆ ಏಳಲೇ ಇಲ್ಲ. ಉಸಿರು ನಿಂತುಹೋಯಿತು. ಅವನಿಗೆ ಬೇಕಾಗಿದ್ದು ಎಷ್ಟು ಭೂಮಿ? ಅವನು ಬಿದ್ದಿದ್ನಲ್ಲಾ ಅಷ್ಟೇ. ಇಷ್ಟು ಭೂಮಿಗಾಗಿ ಪ್ರಾಣವನ್ನೇ ಕಳೆದುಕೊಂಡ. ಮನುಷ್ಯನ ಆಸೆಗೆ ಒಂದು ಮಿತಿ ಇರಬೇಕು. ಅತಿಯಾದಾಗ ಅಮೃತವೂ ವಿಷವಾಗುತ್ತದೆ. ಅದಕ್ಕಾಗಿಯೇ ಬುದ್ಧ ‘ಆಸೆಯೇ ದುಃಖಕ್ಕೆ ಮೂಲ’ ಎಂದದ್ದು. ಹಾಗಂದಮಾತ್ರಕ್ಕೆ ಆಸೆ ಬೇಡ ಎಂದಲ್ಲ; ಬೇಕು. ಆಸೆಯೇ ಬದುಕಿನ ಬಂಡವಾಳ. ಆದರೆ ಅದು ದುರಾಸೆಯಾಗದ ಹಾಗೆ ಎಚ್ಚರವಹಿಸಬೇಕು. ದುರಾಸೆಯಾದಲ್ಲಿ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಂತೆ. ಇದನ್ನು ಬಸವಣ್ಣನವರು ಸೊಗಸಾಗಿ ಹೇಳಿದ್ದಾರೆ. `ವಸ್ತ್ರದೊಳಗೊಂದೆಳೆಯ, ಹೊನ್ನಿನೊಳಗೊಂದೊರೆಯ ಇಂದಿಗೆ ನಾಳಿಂಗೆ ಬೇಕೆಂದೆನಾದೊಡೆ ತಲೆದಂಡ’
ಸಂಗ್ರಹ ಪ್ರವೃತ್ತಿ ಶರಣರಲ್ಲಿ ಇರಲಿಲ್ಲ. ಕಾಯಕದಿಂದ ಬಂದದ್ದು ಮಾತ್ರ ಸ್ವೀಕಾರಾರ್ಹ. ಅದನ್ನು ಸಹ ತಾನೊಬ್ಬ ಬಳಸದೆ, ಕೂಡಿಡದೆ ಸಮಾಜದ ಒಳಿತಿನ ಕಾರ್ಯಗಳಿಗೆ ದಾಸೋಹ ರೂಪದಲ್ಲಿ ಕೊಡಬೇಕು. ಬೀದಿಯ ಕಸ ಗುಡಿಸುವ ಸಾಮಾನ್ಯ ಹೆಣ್ಣುಮಗಳು ಸತ್ಯಕ್ಕ. ಆಕೆಯ ಸಂಕಲ್ಪ ಏನೆಂದರೆ ನಾನು ಕಸ ಗುಡಿಸುವಾಗ ಬೀದಿಯಲ್ಲಿ ಚಿನ್ನ, ವಸ್ತು, ಒಡವೆ ಬಿದ್ದಿದ್ದರೆ ಕೈಮುಟ್ಟಿ ಎತ್ತದೆ ಅದೂ ಒಂದು ಕಸ ಎಂದು ಗುಡಿಸಿ ಹಾಕುತ್ತೇನೆ ಎನ್ನುವುದು. ಇಂತಹ ಸಂಕಲ್ಪ ಪ್ರತಿಯೊಬ್ಬರಿಗೂ ಬಂದರೆ ಈ ನಾಡಿನಲ್ಲಿ ಬಡತನಕ್ಕೆ ಇಂಬಿರುವುದಿಲ್ಲ. ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸಬಹುದು. ಆದರೆ ಸ್ಥಿತಿ ವಿಚಿತ್ರವಾಗಿದೆ. ಒಂದೆಡೆ ಅತಿಯಾದ ಶ್ರೀಮಂತಿಕೆ. ಭೋಗ ಜೀವನ. ಮತ್ತೊಂದೆಡೆ ಎಷ್ಟೇ ದುಡಿದರೂ ಒಂದು ತುತ್ತು ಅನ್ನಕ್ಕೂ ಗತಿಯಿಲ್ಲದ ದುಃಸ್ಥಿತಿ. ಹೀಗಾಗಲು ಕಾರಣ ಶರಣರ ಆಲೋಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು. ಅರ್ಥ ಮಾಡಿಕೊಂಡವರು ಆಚರಣೆಯಲ್ಲಿ ತಾರದಿರುವುದು. ಹೇಳೋದೇ ಒಂದು, ಮಾಡೋದೇ ಮತ್ತೊಂದು. ‘ಹೇಳೋದು ಆಚಾರ, ತಿನ್ನೋದು ಬದನೆಯ ಕಾಯಿ’. ಹಾಗಾಗಿ ಸಮಾಜದಲ್ಲಿ ಅಲ್ಲೋಲ-ಕಲ್ಲೋಲ, ಏರು-ಪೇರು ಆಗ್ತಾ ಇದೆ. ಸಮಾನತೆಯನ್ನು ತರಲಿಕ್ಕೆ ಸಾಧ್ಯ ಆಗ್ತಾ ಇಲ್ಲ. ಲಕ್ಕಮ್ಮ, ಮಾರಯ್ಯ ಶರಣ ದಂಪತಿಗಳು. ಅವರ ನಿತ್ಯ ಕಾಯಕ ಬಿದ್ದ ಅಕ್ಕಿಯನ್ನು ಆಯ್ದು ತಂದು ಪ್ರಸಾದ ಮಾಡಿ ಬೇರೆಯವರಿಗೆ ನೀಡಿ ನಂತರ ತಾವು ಸ್ವೀಕರಿಸುವುದು. ಒಂದು ದಿನ ಮಾರಯ್ಯ ಅಗತ್ಯಕ್ಕಿಂತ ಹೆಚ್ಚು ಅಕ್ಕಿಯನ್ನು ತರ್ತಾನೆ. ನಮ್ಮ ತಾಯಂದಿರಾಗಿದ್ದರೆ ಖುಷಿಪಡ್ತಾ ಇದ್ದರು. ನಮ್ಮ ಯಜಮಾನರಿಗೆ ಒಳ್ಳೆಯ ಬುದ್ಧಿ ಬಂದಿದೆ. ಒಂದು ಕೆಜಿ ಅಕ್ಕಿಯ ಬದಲಾಗಿ ಹತ್ತು ಕೆಜಿ ಅಕ್ಕಿ ತಂದಿದ್ದಾರೆ ಅಂತ ಅವರಿಗೆ ಬೇಕಾದ ಭಕ್ಷ್ಯ-ಭೋಜ್ಯಗಳನ್ನು ಮಾಡಿ ನೀಡುತ್ತಿದ್ದರು. ಆದರೆ ಲಕ್ಕಮ್ಮ ಖುಷಿಪಡದೆ ನೊಂದುಕೊಂಡು ಗಂಡನಿಗೆ ಹೇಳ್ತಾಳೆ: ‘ಈಸಕ್ಕಿಯಾಸೆ ನಿಮಗೇಕೆ? ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೇ ಎಲೆ ಅಯ್ಯಾ? ನಿಮಗೆ ಇಂಥ ದುರಾಸೆ ಏಕೆ ಬಂತು? ನಾವು ಶರಣರು. ಇದ್ದದ್ದರಲ್ಲೇ ಸಂತೃಪ್ತಿ ಪಡೆಯಬೇಕು. ಜಾಸ್ತಿ ಸಿಗ್ತು ಅಂತ ತಂದರೆ ಇನ್ನೊಬ್ಬರ ಹೊಟ್ಟೆಯ ಮೇಲೆ ಹೊಡೆದಂತೆ. ಈ ಅಕ್ಕಿಯನ್ನು ಎಲ್ಲಿಂದ ತಂದಿದ್ದೀರೋ ಅಲ್ಲೇ ಸುರಿದು ಅಲ್ಲಿರುವ ಶರಣರನ್ನು ಪ್ರಸಾದಕ್ಕೆ ಕರೆದುಕೊಂಡು ಬನ್ನಿ’ ಎನ್ನುವಳು.
ಮೊದಲೇ ಅಕ್ಕಿ ಆಯ್ದು ಊಟ ಮಾಡುವ ಕಾಯಕ ಅವರದು. ತಂದ ಅಕ್ಕಿಯನ್ನೆಲ್ಲಾ ಸುರುವಿ ಬಂದರೆ ಮನೆಗೆ ಬರುವ ಶರಣರಿಗೆ ಹೇಗೆ ಪ್ರಸಾದ ಮಾಡಲು ಸಾಧ್ಯ ಎನ್ನುವ ಅನುಮಾನ ಯಾರಿಗಾದರೂ ಬರಬಹುದು. ‘ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು’ ಎನ್ನುವ ಉತ್ತರ ಲಕ್ಕಮ್ಮನದು. ಸತ್ಯಶುದ್ಧ ಕಾಯಕ ಮಾಡುವವರಿಗೆ ಬಡತನವೇ ಇಲ್ಲ. ಭಗವಂತ ಕೊಟ್ಟೇ ಕೊಡ್ತಾನೆ ಎನ್ನುವ ವಿಶ್ವಾಸ ಲಕ್ಕಮ್ಮನದು. ಹಾಗಾಗಿ ಆ ತಾಯಿ ಶರಣರು ಬಯಸಿದ್ದನ್ನೆಲ್ಲ ಮಾಡಿ ನೀಡಿದಳಂತೆ. ಇಲ್ಲಿ ಗಮನಿಸಬೇಕಾದ್ದು ಕಾಯಕ ಮತ್ತು ದಾಸೋಹ ತತ್ವಗಳ ಮಹತ್ವವನ್ನು. ಕಾಯಕ ಅಂದರೆ ಸತ್ಯಶುದ್ಧವಾದ ಕೆಲಸ. ಮಾಡುವ ಕೆಲಸದಿಂದ ವ್ಯಕ್ತಿಗೂ ಒಳಿತಾಗಬೇಕು, ಸಮಾಜಕ್ಕೂ ಒಳಿತಾಗಬೇಕು. ಯಾರಿಗೂ ಕೇಡಾಗಬಾರದು. ಅಂತಹ ಉದ್ಯೋಗವನ್ನು ಮಾತ್ರ ಕಾಯಕ ಎನ್ನುವರು. ಭ್ರಷ್ಟಾಚಾರ ಕಾಯಕವಾಗುವುದಿಲ್ಲ. ಸುಲಿಗೆ ಮಾಡುವುದು ಕಾಯಕವಾಗುವುದಿಲ್ಲ. ಕಾಯಕ ಪ್ರತಿಯೊಬ್ಬರೂ ಮಾಡಬೇಕಾದ್ದು. ‘ಗುರುವಾದಡೂ ಕಾಯಕದಿಂದಲೇ ಜೀವನ್ಮುಕ್ತಿ. ಲಿಂಗವಾದಡೂ ಕಾಯಕದಿಂದಲೇ ಶಿಲೆಯ ಕುಲ ಹರಿಯುವುದು. ಜಂಗಮವಾದಡೂ ಕಾಯಕದಿಂದಲೇ ವೇಷದ ಪಾಶ ತೊಲಗುವುದು’ ಎಂದು ಗುರು, ಲಿಂಗ, ಜಂಗಮರಿಗೂ ಕಾಯಕವನ್ನು ಕಡ್ಡಾಯಗೊಳಿಸಿದರು ಶರಣರು. ಕಾಯಕ ತತ್ವದೊಂದಿಗೆ ಸಮ್ಮಿಳಿತವಾಗಿರುವುದು ದಾಸೋಹ ತತ್ವ. ನಾನು ದುಡಿದು ಸಂಪಾದನೆ ಮಾಡಿದ್ದೇನೆ. ಇದು ನನ್ನದೇ ಎನ್ನುವ ಸ್ವಾರ್ಥ ಬಂದರೆ ಅದು ಶರಣತತ್ವಕ್ಕೆ ವಿರೋಧ. ದಾಸೋಹ ಪ್ರಜ್ಞೆ ಎಂದರೆ ಕಾಯಕದಿಂದ ಬಂದುದನ್ನು ಇಂದು ನಾಳೆಗೆ, ಮಕ್ಕಳು ಮರಿಗಳಿಗೆ ಬೇಕೆಂದು ಕೂಡಿಡದೆ ಸಮಾಜದ ಒಳಿತಿನ ಕಾರ್ಯಗಳಿಗೆ ನೀಡುವಂಥದ್ದು.
ಚಿಕ್ಕೊಪ್ಪದಲ್ಲಿ ಪ್ರವಚನ ನಡೆದದ್ದು ಗೃಹಸ್ಥರಾದ ಚೆನ್ನಪ್ಪನವರ ಮನೆಯ ಹೊರಾಂಗಣದಲ್ಲಿ. ಅಲ್ಲಿಯ ಸಂದರ್ಭ, ಸನ್ನಿವೇಶ ಗಮನಿಸಿದಾಗ ಚೆನ್ನಪ್ಪ ದಂಪತಿಗಳು ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಅರ್ಥಮಾಡಿಕೊಂಡು ಆಚರಣೆಯಲ್ಲಿ ತರುತ್ತಿದ್ದಾರೆ ಎಂದು. ತಿಂಗಳ ಪ್ರವಚನದ ವ್ಯವಸ್ಥೆಗೆ ಅವರು ಯಾರಿಂದಲೂ ಹಣ ಬೇಡಿಲ್ಲ ಎಂದು ತಿಳಿಯಿತು. ತಮ್ಮ ಕಾಯಕದಿಂದ ಬಂದುದರಲ್ಲೇ ಇಂತಹ ಕಾರ್ಯಗಳಿಗೆ ದಾಸೋಹ ತತ್ವದಂತೆ ವಿನಿಯೋಗ ಮಾಡುತ್ತ ಬಂದಿದ್ದಾರಂತೆ. ಒಂದು ಮಠದ ಆವರಣದಲ್ಲಿ ಇಷ್ಟು ಚೆನ್ನಾಗಿ ಸಭೆ ಸಮಾರಂಭದ ವ್ಯವಸ್ಥೆ ಆಗುವುದು ಕಷ್ಟಸಾಧ್ಯ. ಒಬ್ಬ ಭಕ್ತನ ಮನೆಯಲ್ಲಿ ಈ ರೀತಿಯ ಕಾರ್ಯಕ್ರಮದ ವ್ಯವಸ್ಥೆ ಆಗಿದೆ ಅಂದರೆ ಅವರು ನಿಜವಾದ ಬಸವತತ್ವದ ಪ್ರೇಮಿಗಳು ಅನಿಸಿತು.
12ನೆಯ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಗೃಹಸ್ಥರಿಗೇ ಹೆಚ್ಚಿನ ಅವಕಾಶವಿತ್ತು. ಅವರ ಉದ್ದೇಶ ಪ್ರತಿಯೊಬ್ಬ ಭಕ್ತರ ಮನೆಗಳು ಅನುಭವ ಮಂಟಪ ಮತ್ತು ಮಹಾಮನೆ ಆಗಬೇಕು ಎನ್ನುವುದಾಗಿತ್ತು. ಅಂದರೆ ಅನುಭವ ಮಂಟಪ ಮತ್ತು ಮಹಾಮನೆಯಲ್ಲಿ ನಡೆಯುವ ಚಿಂತನ-ಮಂಥನ, ದಾಸೋಹ ಕಾರ್ಯಗಳು ಗೃಹಸ್ಥರ ಮನೆಗಳಲ್ಲೂ ನಡೆಯಬೇಕು ಎನ್ನುವುದಾಗಿತ್ತು. ಈ ನೆಲೆಯಲ್ಲೇ ಬಸವಣ್ಣನವರು ನಂಬಿದ್ದು, ಪ್ರೀತಿಸಿದ್ದು ಮಠಗಳನ್ನಾಗಲಿ, ಶ್ರೀಮಂತರನ್ನಾಗಲಿ, ಮೇಲ್ವರ್ಗದವರನ್ನಾಗಲಿ ಅಲ್ಲ. ಅವರು ನಂಬಿದ್ದು ಸಮಾಜದಿಂದ ಬಹಿಷ್ಕೃತರಾಗಿದ್ದ, ತಲೆ ಎತ್ತಿ ಬಾಳಲು ಅವಕಾಶ ಇಲ್ಲದ ತಳಸಮುದಾಯದವರನ್ನು. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಸೂಳೆ ಸಂಕವ್ವೆ, ಕಾಳವ್ವೆಯಂಥವರನ್ನು. ಅವರ ಹೆಸರುಗಳೇ ಅವರು ಅತ್ಯಂತ ತಳವರ್ಗದವರು ಎಂದು ಸೂಚಿಸುತ್ತಿವೆ. ಇಂಥವರನ್ನು ಗೌರವಿಸುವ ಮೂಲಕ ಅವರಿಂದಲೇ ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಬಸವಣ್ಣನವರು ಯಶಸ್ವಿಯಾದರು. ಆದರೆ ಇವತ್ತು ಯಾರನ್ನು ಪ್ರೀತಿಯಿಂದ ಹತ್ತಿರ ಕರೆದುಕೊಳ್ಳಬೇಕಾಗಿತ್ತೋ ಅವರನ್ನು ದೂರ ಇಡಲಾಗುತ್ತಿದೆ. ದೂರ ಇಡಬೇಕಾದವರನ್ನು ಹತ್ತಿರ ಕರೆದುಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ಸಮಾಜದಲ್ಲಿ ಅಸಮತೋಲನ, ಅಸಮಾನತೆ ಹೆಚ್ಚಾಗ್ತಾ ಇದೆ. ಇದನ್ನು ನಿವಾರಣೆ ಮಾಡಬೇಕು ಅಂದರೆ ಶರಣರ ವಿಚಾರಗಳನ್ನು ಹೇಳುವುದಷ್ಟೇ ಅಲ್ಲ; ಆಚರಣೆಯಲ್ಲೂ ತರಬೇಕು. ಆಗ ಮಾತ್ರ ಮನೆ, ಮಠ, ಸಮಾಜದಲ್ಲಿ ಸುಧಾರಣೆಯಾಗಲು ಸಾಧ್ಯ.
ಕರ್ನಾಟಕವನ್ನು `ಕಲ್ಯಾಣ’ ನಾಡು ಎಂದು ಕರೆಯುವ ವಾಡಿಕೆ ಇದೆ. ಕಲ್ಯಾಣ ನಾಡು ಎಂದರೆ ಬಸವಾದಿ ಶರಣರ ನಾಡು. ಅಂದರೆ ಶರಣರ ಆಲೋಚನೆಗಳು ಪ್ರತಿಯೊಬ್ಬರ ಬದುಕಿನಲ್ಲಿ ಸಾಕಾರಗೊಳ್ಳಬೇಕು. ಕೆಲವರು ಪದೇ ಪದೇ ಆ ವ್ಯಕ್ತಿ ತುಂಬಾ ಸಾತ್ವಿಕ, ಸಭ್ಯ, ಬಸವತತ್ವನಿಷ್ಠ ಎಂದು ಹೇಳುವುದುಂಟು. ‘ಸಾತ್ವಿಕ’, ‘ಸಭ್ಯ’ ಮತ್ತು ‘ಬಸವತತ್ವ ನಿಷ್ಠ’ ಈ ಪದಗಳನ್ನು ಗಮನಿಸಬೇಕು. ಪ್ರತಿಯೊಬ್ಬರೂ ಈ ಪದಗಳಿಗೆ ಅನ್ವಯವಾಗುವ ಹಾಗೆ ಬದುಕಿದರೆ ಬಸವತತ್ವ ಅವರ ಬದುಕಿನ ಮೇಲೆ ಪರಿಣಾಮ ಬೀರಿದೆ ಅಂತ. ಇಲ್ಲವಾದರೆ ‘ಹತ್ತರ ಕೂಡ ಹನ್ನೊಂದು ಪರ್ಶಿಕೂಡ ಗೋವಿಂದ’ ಎನ್ನುವಂತೆ ಆಗುವುದು. ಪ್ರವಚನ ಕೇಳುವಾಗ, ಧಾರ್ಮಿಕ ಸಮಾವೇಶಗಳಲ್ಲಿ ಕೂತಾಗ ಆಡುವ ಮಾತುಗಳನ್ನು ಕೇಳಿ ತಲೆದೂಗುವರು. ಕೇಳಿದ್ದನ್ನು ನೆನಪಿನಲ್ಲಿಟ್ಟುಕೊಂಡು ಆಚರಣೆಯಲ್ಲಿ ತರುವವರು ಮಾತ್ರ ತುಂಬಾ ವಿರಳ. ಮೂರು ಗೊಂಬೆಗಳ ಒಂದು ಕತೆ ನೆನಪಾಗುವುದು. ನೋಡಲು ಮೂರೂ ಗೊಂಬೆಗಳು ತದ್ರೂಪಿಯಂತಿವೆ. ಕಿಂಚಿತ್ತೂ ವ್ಯತ್ಯಾಸವಿಲ್ಲ. ಆದರೆ ಆ ಗೊಂಬೆಗಳ ಬೆಲೆ ಮಾತ್ರ ಒಂದೇ ರೀತಿ ಇಲ್ಲ. ಒಂದು ಗೊಂಬೆಗೆ ನೂರು ರೂಪಾಯಿ. ಮತ್ತೊಂದಕ್ಕೆ ಐನೂರು ರೂಪಾಯಿ. ಇನ್ನೊಂದಕ್ಕೆ ಸಾವಿರ ರೂಪಾಯಿ. ಏಕೆ ಹೀಗೆ ಎಂದರೆ ಒಂದು ಗೊಂಬೆ ಈ ಕಿವಿಯಲ್ಲಿ ಕೇಳಿದ್ದನ್ನು ಆ ಕಿವಿಯಲ್ಲಿ ಬಿಡುವುದು. ಮತ್ತೊಂದು ಗೊಂಬೆ ಕಿವಿಯಲ್ಲಿ ಕೇಳಿದ್ದನ್ನು ಬಾಯಿಯ ಮೂಲಕ ಹೊರಹಾಕುವುದು. ಇನ್ನೊಂದು ಗೊಂಬೆ ಕಿವಿಯಿಂದ ಕೇಳಿದ್ದನ್ನು ಮನದಾಳದಲ್ಲಿ ಮಥಿಸಿ ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ಬೇರೆಯವರಿಗೂ ಉಪದೇಶ ಮಾಡುವುದು. ಇಲ್ಲಿ ಗೊಂಬೆ ಸಾಂಕೇತಿಕ. ಅವು ಮೂರು ವರ್ಗದ ಮನುಷ್ಯರ ಪ್ರತಿರೂಪಗಳು. ಮೌಲ್ಯಯುಕ್ತ ಮನುಷ್ಯ ಕೇಳಿದ್ದನ್ನು ಅಂತರಂಗಕ್ಕೆ ಇಳಿಸಿಕೊಳ್ತಾನೆ. ಆಚರಣೆಯಲ್ಲಿ ತರ್ತಾನೆ. ಬೇರೆಯವರಿಗೂ ಹೇಳ್ತಾನೆ. ಈ ಕೆಲಸ ಆದಾಗ ಸಮಾಜ ಇನ್ನಷ್ಟು ಪ್ರಗತಿಯನ್ನು ಸಾಧಿಸಲಿಕ್ಕೆ ಸಾಧ್ಯ. ಪ್ರವಚನ ಕೇಳುವ, ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಗತ ಬದುಕಿನಲ್ಲಿ ವಿಕಾರಗಳನ್ನು ಕಳೆದುಕೊಂಡು ವಿಕಾಸ ಮಾರ್ಗದತ್ತ ಸಾಗಬೇಕು. ಆಗಲೇ ವ್ಯಕ್ತಿ ಶರಣನಾಗಲು ಸಾಧ್ಯ.
Comments 9
ಗಿರೀಶ್ ಮಾಳಿ, ಸುಂಕಾಪುರ
Feb 13, 2023ಜನರನ್ನು ಚೀಲದ ವರ್ಗೀಕರಣದಲ್ಲಿ ವಿಭಜಿಸಿದ ರೀತಿ ಚೆನ್ನಾಗಿದೆ. ಯುವಜನರ ಚೀಲ ಯಾಕೆ ಹರಿದು ಹೋಗಿರುತ್ತದೆ? ಅವರನ್ನು ಬದಲಿಸಲು ಸಾಧ್ಯವಾಗದೇ ಇರುವುದು ನಿಜಕ್ಕೂ ತುಂಬಾ ಯೋಚನೆಗೀಡುಮಾಡುವ ವಿಷಯ. ಗುರುಗಳ ಲೇಖನ ಅವರ ಮಾತುಗಳಂತೆಯೇ ಸರಳ ಹಾಗೂ ಆಸಕ್ತಿಕರವಾಗಿದೆ.
ಮಾಗುಡಿ ಚನ್ನಪ್ಪ, ಚಿಕ್ಕಮಗಳೂರು
Feb 13, 2023ಅಂತರಂಗ ಬಹಿರಂಗ ಶುದ್ಧಿಯಾದರೆ ಭಗವಂತ ತನ್ನಷ್ಟಕ್ಕೆ ತಾನೇ ಒಲಿಯುತ್ತಾನೆ ಎನ್ನುವ ಸಾರ್ವಕಾಲಿಕ ಸಂದೇಶವನ್ನು ಕೊಟ್ಟ ಬಸವಣ್ಣನವರ ಧರ್ಮದಲ್ಲಿ ಯಾಕೆ ಏನೇನೋ ಪೂಜೆ ಪುನಸ್ಕಾರಗಳು, ಜಪತಪಗಳು ಸೇರಿಕೊಂಡಿವೆ? ಹೇಳುವುದು ಒಂದು, ಮಾಡುವುದು ಮತ್ತೊಂದು ಆಗುವುದಿಲ್ಲವೇ? ಸರಳಾತಿ ಸರಳ ಧರ್ಮದಲ್ಲಿ ಸಂಕೀರ್ಣ ಅರ್ಥಾಚಾರಗಳು ಸೇರಿಕೊಂಡದ್ದು ಪ್ರಕ್ಷಿಪ್ತವಾಗುವುದಿಲ್ಲವೇ?
ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
Feb 13, 2023ಶರಣನಾಗುವುದು ಲೇಖನ ತುಂಬಾ ಅರ್ಥಪೂರ್ಣವಾಗಿದೆ. 👌👌🙏🏻🙏🏻
Jayaraj P.S
Feb 16, 2023ಬುದ್ಧ ಹೇಳಿದ ಪಂಚಶೀಲಗಳು, ಬಸವಣ್ಣನವರು ಹೇಳಿದ ಸಪ್ತಶೀಲಗಳು, ಗಾಂಧೀಜಿಯ ಸಪ್ತಪಾತಕಗಳು ಎಷ್ಟು ನಮ್ಮ ಬದುಕಿಗೆ ಅಗತ್ಯವಾದ ನೀತಿಗಳು ಎನ್ನುವುದನ್ನು ಬಾಲ್ಯದಿಂದಲೇ ಶಿಕ್ಷಣದಲ್ಲಿ ಅಚ್ಚೊತ್ತಿದಂತೆ ಮಕ್ಕಳಿಗೆ ಕಲಿಸಬೇಕು. ಜಪಾನಿನಲ್ಲಿ ಹೀಗೆ ಬಾಲ್ಯದಲ್ಲಿಯೇ ಅನೇಕ ಮೌಲ್ಯಗಳನ್ನು ಬಿತ್ತುತ್ತಾರೆಂದು ಕೇಳಿದ್ದೇನೆ, ಇದು ನಮ್ಮಲ್ಲಿ ಸಾಧ್ಯವಾದರೆ ಮಾತ್ರ ನಮ್ಮ ದೇಶಕ್ಕೆ ಭವಿಷ್ಯವಿದೆ, ಅಲ್ಲವೇ ಗುರುಗಳೇ?
ಅಂದಾನಪ್ಪಾ ಹಲಸಂಗಿ
Feb 18, 2023ಹಿಂದಿಗಿಂತಲೂ ಲಿಂಗಾಯತ ಸಮಾಜದಲ್ಲಿ ಅನೇಕ ಸುಧಾರಣೆಗಳಾಗಿವೆ, ಅವರ ಆಚಾರ ವಿಚಾರಗಳೂ ವೈದಿಕ ಪ್ರಭಾವದಿಂದ ಹೊರಬರುತ್ತಿವೆ… ಆದರೆ ಈ ಬದಲಾವಣೆ ತೀರಾ ಮಂದಗತಿಯಲ್ಲಿದೆ, ಅಲ್ಲವೆ ಗುರುಗಳೇ?
Gavisiddesha P.R
Feb 21, 2023ಕೊನೆಯಪಕ್ಷ ಸಮಾಜದಲ್ಲಿ ಲಿಂಗಾಯತರಾದರೂ ಶರಣರಾದರೆ ಈ ರಾಜ್ಯ ಕಲ್ಯಾಣ ರಾಜ್ಯ ಆಗುವುದರಲ್ಲಿ ಸಂದೇಹವೇ ಇಲ್ಲ! ಶರಣನಾಗುವುದೆಂದರೆ ಸಾಮಾನ್ಯವಲ್ಲಾ, ಆತ ಶುದ್ಧಾತ್ಮ, ಸಕಲ ಜೀವಾತ್ಮರಿಗೆ ಲೇಸ ಬಯಸುವ ವಿವೇಕವಂತ. ಪ್ರತಿ ಮಠವೂ ಲಿಂಗಾಯತರನ್ನು ಶರಣರನ್ನಾಗಿ ಮಾಡುವಲ್ಲಿ ದೊಡ್ಡ ಜವಾಬ್ದಾರಿ ಹೊತ್ತುಕೊಳ್ಳಬೇಕು.
ಗೌರಿಶಂಕರ ಬೇಗೂರು
Feb 24, 2023ಆಸೆಯಿಂದ ಹೊರಬಂದವರು ಮಾತ್ರ ಶರಣರಾಗಲುಬಹುದು. ಬುದ್ಧನ ತತ್ವವೂ ಇದನ್ನೇ ಹೇಳುತ್ತದೆ. ನಿತ್ಯ ದಾಸೋಹಿಗಳಾದ ಶರಣರು ನಿತ್ಯ ಮುಕ್ತರು.
ಹರಪ್ರಸಾದ್ ಚಿತ್ರದುರ್ಗ
Feb 24, 2023ಲಿಂಗಾಯತ ಸಮುದಾಯದ ಸ್ವಾಮಿಗಳಲ್ಲಿಯೇ ನಿಮ್ಮದು ನೇರ ನಡೆ-ನುಡಿಯ ವ್ಯಕ್ತಿತ್ವದ ಅಪರೂಪದ ಗುರುಗಳು ನೀವು. ಪತ್ರಿಕೆಗಳಲ್ಲಿ ಪ್ರಕಟವಾಗುವ ಮತ್ತು ಬಯಲು ವೆಬ್ ನಲ್ಲಿ ಬರುವ ನಿಮ್ಮ ಲೇಖನಗಳನ್ನು ತಪ್ಪದೆ ಓದುತ್ತೇನೆ. ನಿಮ್ಮನ್ನೊಮ್ಮೆ ಮುಖತಃ ಭೇಟಿಯಾಗಬೇಕು ಗುರುಗಳೇ. ಲಿಂಗಪೂಜೆಯ ವಿಷಯದಲ್ಲಿ ನನ್ನಲ್ಲಿರುವ ಗೊಂದಲಗಳಿಗೆ ನಿಮ್ಮ ಬಳಿ ಉತ್ತರ ಕೇಳಬೇಕು. ಶರಣುಶರಣಾರ್ಥಿಗಳು.
ಮಂಜುನಾಥ ಹಲಗಿ
Feb 27, 2023ಯುವಜನರನ್ನು ಸರಿ ಮಾಡದಿದ್ದರೆ ಯಾವ ದೇಶಕ್ಕೂ ಭವಿಷ್ಯವೇ ಇರುವುದಿಲ್ಲ. ಅವರನ್ನು ತೂತು ಚೀಲಗಳೆಂದು ಪಕ್ಕಕ್ಕೆ ತಳ್ಲಲಾಗದು. ಯುವಕ, ಯುವತಿಯರನ್ನು ಎಚ್ಚರಿಸಲು ಲಿಂಗಾಯತ ಸಮಾಜ ಏನಾದರೂ ಕ್ರಮಗಳನ್ನು ಕೈಗೊಳ್ಳಲೇ ಬೇಕಾಗುತ್ತದೆ, ಈ ಕುರಿತು ಶ್ರೀಮಠದಿಂದ ಏನಾದರೂ ಮತ್ತೆ ಕಲ್ಯಾಣದ ರೀತಿಯಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಳ್ಳಬಹುದೇ, ದಯವಿಟ್ಟು ಯೋಚನೆ ಮಾಡಬೇಕಾಗಿ ವಿನಂತಿ.