ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
“ಬಸವೇಶ್ವರರ ಜೀವನ ಚರಿತ್ರೆಗೆ ಶಾಸನಗಳು, ರಾಜಕೀಯ ಅವಶೇಷಗಳು, ಶರಣರ ಚರಿತ್ರೆಗಳು, ಪುರಾಣಗಳು, ಅವರವೇ ಆದ ವಚನಗಳು, ಜನಪದ ಸಂಪ್ರದಾಯಗಳು ಮತ್ತು (ಆಧುನಿಕ ಲೇಖಕರ) ಕೆಲವು ವಿಮರ್ಶಾತ್ಮಕ ಜೀವನ ಚರಿತ್ರೆಗಳು ಮುಂತಾದವುಗಳು ಮೂಲಾಧಾರಗಳಾಗಿವೆ. ಇಷ್ಟಾಗಿಯೂ ಸಂಪೂರ್ಣ ನಂಬಲರ್ಹವಾದ ಸಾಕಷ್ಟು ಐತಿಹಾಸಿಕ ಅಂಶಗಳ ಕೊರತೆಯು ಎದ್ದು ಕಾಣುತ್ತದೆ. ಬಸವಣ್ಣನವರದು ವೈವಿಧ್ಯಮಯ ಜೀವನವಾಗಿತ್ತು- ಆತ ಶರಣನು, ಕವಿಯು, ರಾಜಕೀಯ ಕಾರ್ಯಕರ್ತನು, ಸಮಾಜ ಸುಧಾರಕನು, ಮಂತ್ರಿಯು- ಇಂಥವರನ್ನು ಹೊಗಳುವವರು, ವಕ್ರದೃಷ್ಟಿಯಿಂದ ನೋಡುವವರು ಮತ್ತು ತಿರಸ್ಕರಿಸುವವರು ಇದ್ದರೆಂದು ಹೇಳಿದರೆ ಆಶ್ಚರ್ಯ ಪಡಬೇಕಾಗಿಲ್ಲ” (ಪುಟ-139)
“ಬಸವೇಶ್ವರರ ಕ್ರಾಂತಿಬೀಜಗಳು – ಇವು ಕೇವಲ ಸುಧಾರಣೆಗಳಿಗಾಗಿ ಅಲ್ಲ., ಕ್ರಾಂತಿಗಾಗಿ- ಮಂಗಳವೇಡೆಯಲ್ಲಿ ಬಿತ್ತಲ್ಪಟ್ಟವು ಮತ್ತು ಅವು ಬೆಳೆದು ಫಲ ಕೊಟ್ಟದ್ದು ಕಲ್ಯಾಣದಲ್ಲಿ” (ಪುಟ-143)
ಮೇಲಿನ ಮಾತುಗಳನ್ನು ಕವಿ ವೆಲೆಬಿಲ್ ಎಂಬ ಪಾಶ್ಚಾತ್ಯ ವಿದ್ವಾಂಸರು ತಮ್ಮ ಬಸವಣ್ಣನವರ ವಚನಗಳ ಆಂಗ್ಲ ಅನುವಾದದ ಗ್ರಂಥದಲ್ಲಿ ಬಸವಣ್ಣನವರನ್ನು ಬಣ್ಣಿಸಿರುವರು.
[Zvelebi (K.V): Lord of the meeting rivers:Devotional Poems of Basavanna:
“The biography of Basavanna has many sources: inscriptions, edicts, hagiographie,puranas, his own poems, folk-traditions and a few attempts at critical biographies and yet, there is a marked absence of sufficient truly reliable historical material. Since Basava was so many things- a saint, a poet, a political activist, a social reformer, a minister- it is not surprising that he should have been both praised as well as slendered and condemned. What follows is a reconstructed life-story of Basava, based on most of the available sources and presented critically yet with sympathy and understanding.
The seeds of Basava’s revolution- for indeed. It was no more a reform but revolution-were sown at Mangalaweda and they grew and fore fruit in Kalyana”]
ಇದೇ ರೀತಿ ಆರ್.ಬ್ಲೇಕ್ ಮೈಕೆಲ್ ಅವರೂ ಬಸವಣ್ಣನವರ ವಚನಗಳನ್ನಾಧರಿಸಿ ಹೇಳಿದ ಮಾತುಗಳು ಗಮನಾರ್ಹವಾಗಿವೆ. “ವೀರಶೈವ ಮತಗಳ ಮೂಲ” ಎಂಬ ತಮ್ಮ ಗ್ರಂಥದಲ್ಲಿ ಹೇಳುವುದೇನೆಂದರೆ, “ವೀರಶೈವರು 12ನೆ ಶತಮಾನದ ಶರಣ ಚಳುವಳಿಯ ಮೂಲಪುರುಷರಾದ ಹೆಸರಾಂತ ಬಸವೇಶ್ವರರ ವಚನಗಳನ್ನಾಧರಿಸಿ ಸಂಸ್ಕೃತದಲ್ಲಿರುವ ಹಿಂದೂ ಕೃತಿಗಳನ್ನು ತಿರಸ್ಕರಿಸುವರು. ಪಂಚಸೂತಕಗಳನ್ನು ಆಚರಿಸುವುದಿಲ್ಲ. ಬಸವಣ್ಣನವರೇ ಹೇಳುವಂತೆ- ಲಿಂಗಾಯತರು ಶುದ್ಧ ಶಾಖಾಹಾರಿಗಳಾಗಿರುವರು, ಜಾತಿಪದ್ಧತಿಯನ್ನು ತಿರಸ್ಕರಿಸುವರು.”
ಡೇವಿಡ್ ಎನ್.ಲೊರೆಂಜಿನ್ “ಕಾಪಾಲಿಕರು ಮತ್ತು ಕಾಳಾಮುಖರು” (The Kapalikas and Kalamukhas: Two lost Saivite sects; Motilal Banasari das, Delhi,1992) ಎಂಬ ಗ್ರಂಥವನ್ನು ವಿದ್ವತ್ಪೂರ್ಣವಾಗಿ ಬರೆದಿರುವರು. ಈ ಮಹತ್ವದ ಗ್ರಂಥ ರಚನೆಯಲ್ಲಿ ಮುಖ್ಯವಾಗಿ ಶಿಲಾಶಾಸನಗಳನ್ನು ಅವಲಂಬಿಸಿರುವರು. ತಮ್ಮ ವಾದ ನಿರ್ಣಯಗಳಿಗೆ ಕೆಲವು ಸಲ ಸಾಹಿತ್ಯಾಧಾರಗಳನ್ನು ಅಲ್ಲಲ್ಲಿ ಬಳಸಿಕೊಂಡಿರುವರು. ಲೊರೆಂಜಿನ್ ತಮ್ಮ ಗ್ರಂಥದಲ್ಲಿ ವೀರಶೈವರ ಬಗೆಗೆ ಅನೇಕ ವಿಚಾರಗಳನ್ನು ಶಾಸನಗಳ ಆಧಾರದ ಮೇಲೆ ಬರೆದಿರುವರು. ಅವರ ಕೆಲವು ಅಭಿಪ್ರಾಯಗಳನ್ನು ಸಂಕ್ಷೇಪಿಸಿ ಕೆಳಗೆ ಕೊಡುತ್ತೇವೆ:
ಕಾಳಾಮುಖ ಸಂಪ್ರದಾಯದ ಗುರುಗಳು ನ್ಯಾಯ ಮತ್ತು ವೈಶೇಷಿಕ ತತ್ವಶಾಸ್ತ್ರಗಳಲ್ಲಿ ವಿಶೇಷ ಪರಿಣಿತರಾಗಿದ್ದರು. ಅವರು ತಮ್ಮ ಹೆಸರುಗಳ ಕೊನೆಯಲ್ಲಿ ‘ಪಂಡಿತ’, ‘ಪಂಡಿತದೇವ’ ಎಂಬ ವಿಶೇಷಣಗಳನ್ನು ಹಚ್ಚಿಕೊಳ್ಳುವುದು ವಾಡಿಕೆ. ಅವರು ಸಂಸ್ಕೃತದಲ್ಲಿ ಉದ್ದಾಮ ಪಂಡಿತರಾಗಿರುತ್ತಿದ್ದರು. ಮಠ-ಮಂದಿರಗಳಿಗೆ ಅಧಿಪತಿಗಳಾಗಿರುತ್ತಿದ್ದರು. ಅವರು ಉಳಿದ ವೈದಿಕ ಪುರೋಹಿತರಂತೆ ಇರಲಿಲ್ಲ. ಅವರು ಆಜೀವ ಬ್ರಹ್ಮಚಾರಿಗಳಾಗಿರುತ್ತಿದ್ದರು. ‘ಪರಮ ನೈಷ್ಠಿಕರೆಂದೂ, ತಪೋಧನ’ರೆಂದೂ ಪ್ರಸಿದ್ಧಿ ಪಡೆದಿದ್ದರು. ಅಪವಾದಕ್ಕೆ ಕೆಲವರು ಸಂಸಾರಿಗಳಾಗಿದ್ದರೆಂದೂ ತಿಳಿದು ಬರುತ್ತದೆ. ಲಭ್ಯವಿದ್ದ ಬಸವಪೂರ್ವ ಶಾಸನಗಳಲ್ಲಿ ಅವರಿಗೆ ‘ಜಂಗಮ’ರೆಂದು ಕರೆಯಲಾಗಿದೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಬಳಸಿದ ‘ಜಂಗಮರು’ ಎಂಬ ಪದವು ಈ ಕಾಳಾಮುಖ ಜಂಗಮರನ್ನೇ ನಿರ್ದೇಶಿಸುತ್ತದೆ. ಸಮಾಜ ಸುಧಾರಣೆಯ ಕಳಕಳಿಯುಳ್ಳವರಾದ ಕಾಳಾಮುಖರು (ಜಂಗಮರು) ಬಸವಣ್ಣನವರ ಪೂರ್ವದಲ್ಲಿ ಸಂಘಟಿತರಾಗಿದ್ದರು. ಬಸವಣ್ಣನವರ ಹೊಸ ಸಮಾಜ ಸುಧಾರಣೆಯಲ್ಲಿ ಇವರು ಸಹಕರಿಸಿದರು (ಪುಟ-241).
ಬಸವ ಪುರಾಣವಾಗಲಿ, ಬಿಜ್ಜಳರಾಯ ಚರಿತ್ರೆಯಾಗಲಿ, ಬಸವಣ್ಣನವರು ಐಕ್ಯರಾದ ಅನೇಕ ವರ್ಷಗಳ ನಂತರ ಬರೆಯಲ್ಪಟ್ಟಿವೆ. ಆದ್ದರಿಂದ ಬಸವಣ್ಣನವರ ಜೀವನ ಚರಿತ್ರೆಗೆ ಸಂಬಂಧಿಸಿ ಹೇಳಲ್ಪಟ್ಟಿರುವ ಶಾಸನಾಧಾರಗಳಿಲ್ಲದೆ ಅವೆಲ್ಲವನ್ನೂ ಸತ್ಯವೆಂದು ಹೇಳುವುದು ಸಾಧ್ಯವಿಲ್ಲ (ಪುಟ-168).
13ನೆಯ ಶತಮಾನದಲ್ಲಿ ಬರೆಯಲ್ಪಟ್ಟ ಸಂಸ್ಕೃತದ ‘ಸಿದ್ಧಾಂತ ಶಿಖಾಮಣಿ’ ಗ್ರಂಥದಲ್ಲಿ ಪ್ರತಿಪಾದಿತವಾದ ಅನೇಕ ತತ್ವಗಳು ಪಾಶುಪತ ಮತ್ತು ಕಾಳಾಮುಖ ತತ್ವಗಳಿಗೆ ಸ್ವಲ್ಪ ಹೋಲುತ್ತವೆ. 14ನೆಯ ಶತಮಾನದ ಶ್ರೀಪತಿ ಪಂಡಿತಾರಾಧ್ಯನು ಬರೆದ ಬ್ರಹ್ಮಸೂತ್ರಗಳ ವ್ಯಾಖ್ಯಾನದಲ್ಲಿ ಹರದತ್ತನ ಪಾಶುಪತ ಗಣಕಾರಿಕಾ ಗ್ರಂಥದಿಂದ ಎತ್ತಿ ಉದಹರಿಸಿರುವರು (ಪುಟ-171).
ವೀರಶೈವ ಮತದ ತಿರುಳೆಂದರೆ ‘ಷಟಸ್ಥಲ ಸಿದ್ಧಾಂತ’ ಕ್ರಿಸ್ತ ಧರ್ಮದ ಪ್ರೊಟೆಸ್ಟಂಟ್ ಮತ ಸ್ಥಾಪಕ ಲೂಥರನಂತೆ ಬಸವಣ್ಣನಿರುವರು.
ಬಸವಣ್ಣನವರ ಪೂರ್ವದಲ್ಲಿ ಮತ್ತು ತದನಂತರ ಕೆಲವು ವರುಷ ಕಾಳಾಮುಖರು ಕರ್ನಾಟಕದ ಉತ್ತರ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ಶಿವಮೊಗ್ಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲೂ, ಆಂಧ್ರಪ್ರದೇಶದ ಉಸ್ಮಾನಾಬಾದ ಜಿಲ್ಲೆಯಲ್ಲೂ ಅವರ ಮಠಗಳಿದ್ದವು. ಶಾಸನಗಳ ಆಧಾರದ ಮೇಲೆ ಹೇಳುವುದಾದರೆ ಕ್ರಿ.ಶ 1250ರ ಹೊತ್ತಿಗೆ ಕಾಳಾಮುಖರ ಎಲ್ಲ ಮಠಗಳು ವೀರಶೈವ ಮಠಗಳಾಗಿ ಪರಿವರ್ತಿತವಾದದ್ದು ಸ್ಪಷ್ಟವಾಗಿ ತಿಳಿದು ಬರುತ್ತದೆ (ಪುಟ-239).
ಲಿಂಗಾಯತ ವಿಷಯ ಕುರಿತಂತೆ ಇತ್ತೀಚಿನ ಪಾಶ್ಚಾತ್ಯ ಸಂಶೋಧಕರಲ್ಲಿ ಜೆ.ಪಿ.ಶೌಟನ್ ಪ್ರಮುಖರು. ಇವರು ನೆದರ್ಲ್ಯಾಂಡಿನವರು. ಕ್ರೈಸ್ತಧರ್ಮ ಮತ್ತು ಸಮಾಜಶಾಸ್ತ್ರಗಳಲ್ಲಿ ಬಲ್ಲಿದರು. ಆಮಸ್ಟರಡ್ಯಾಮ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್.ಡಿ ಪದವಿಯನ್ನು ಪಡೆದವರು. ಲಿಂಗಾಯತ ಧರ್ಮದ ವಿಶೇಷ ಸಂಶೋಧನ ಅಭ್ಯಾಸಕ್ಕಾಗಿ ದಕ್ಷಿಣ ಹಿಂದೂಸ್ಥಾನಕ್ಕೆ ವಿಶೇಷವಾಗಿ ಕರ್ನಾಟಕಕ್ಕೆ ಅನೇಕ ಸಲ ಭೇಟಿಯಿತ್ತಿರುವರು. ಕನ್ನಡ ಕಲಿತು ವಚನಶಾಸ್ತ್ರದಲ್ಲಿ ಪರಿಣತಿ ಪಡೆದವರು. ಅವರು ‘ಅನುಭಾವಿಗಳ ಕ್ರಾಂತಿ’ ಎಂಬ ಉತ್ಕೃಷ್ಟ ಗ್ರಂಥವನ್ನು ಬರೆದಿರುವರು. ಇದರಲ್ಲಿ 1. ಜಾತಿ, 2.ಕಾಯಕ ಮತ್ತು ಆಸ್ತಿ, 3. ಸ್ತ್ರೀಯರ ಸ್ಥಾನಮಾನ, 4. ಶಿಕ್ಷಣ, ಎಂಬ ನಾಲ್ಕು ವಿಷಯಗಳನ್ನು ತೌಲನಿಕ ದೃಷ್ಟಿಯಿಂದ ವಿಶ್ಲೇಷಿಸಿರುವರು. ಅನೇಕ ಉಪಯುಕ್ತ ಚಿತ್ರಗಳನ್ನು ಸೇರಿಸಿರುವರು. ಲಿಂಗಾಯತ ಧರ್ಮ, ಶರಣ ಸಾಹಿತ್ಯ ಇವುಗಳ ಅಭ್ಯಾಸಿಗಳಿಗೆ ಅತ್ಯಂತ ಉಪಯುಕ್ತವಾದ ಗ್ರಂಥಸೂಚಿಯನ್ನು ಕೊನೆಯಲ್ಲಿ ಜೋಡಿಸಿರುವರು. ಬೆಂಗಳೂರಿನಲ್ಲಿ ಜನಿಸಿದ್ದ ರೆ. ಜೇಮ್ಸ್ ಮ್ಯಾಥ್ಯೂ ಅವರಿಗೆ ವಿದ್ವಾಂಸರಾದ ಜೆ.ಎನ್.ಫರಿಕಾರ್ ಅವರು 1914ರಲ್ಲಿ ಎರಡು ಪತ್ರಗಳನ್ನು ಬರೆದಿರುವರು. ಇಲ್ಲಿಯವರೆಗೆ (1914) ಬರೆದ ಅನೇಕ ಲೇಖಕರು ಲಿಂಗಾಯತ ಧರ್ಮವನ್ನು ನಿಜವಾದ ಅರ್ಥದಲ್ಲಿ ಅರಿತುಕೊಂಡಿಲ್ಲವೆಂದು ಹೇಳಿದ ಮಾತುಗಳನ್ನು ಸ್ಮರಿಸಿಕೊಂಡಿರುವ ಶೌಟನ್ ಅವರು ಪ್ರಸ್ತುತ ಗ್ರಂಥದಲ್ಲಿ ಲಿಂಗಾಯತ ಧರ್ಮವನ್ನು ಕುರಿತು ತಮ್ಮ ಆಳವಾದ ಅಭ್ಯಾಸದ ಹಿನ್ನೆಲೆಯಲ್ಲಿ ಬರೆದಿರುವರು.
“ವೀರಶೈವ ಚಳವಳಿ (ಧರ್ಮ)ಯನ್ನು ಬಸವಣ್ಣನವರು 12ನೆಯ ಶತಮಾನದ ಕೊನೆಯ ಅರ್ಧಭಾಗದಲ್ಲಿ ಸ್ಥಾಪಿಸಿದರು. ಈ ಕಾರ್ಯದಲ್ಲಿ ಅಲ್ಲಮ, ಸಿದ್ಧರಾಮ, ಚನ್ನಬಸವ, ಅಕ್ಕಮಹಾದೇವಿ ಮುಂತಾದ ಶರಣರು ಸಹಾಯ ಮಾಡಿದರು” ಎಂದು ಹೇಳಿರುವರು.
ಆ ಕೃತಿಯನ್ನು ಬಸವಾದಿ ಶರಣರ ಬಗೆಗೆ ಬರೆದ ಒಳ್ಳೆಯ ಕೃತಿಯೆಂದು ಹೇಳಬಹುದು.
ಪಂಚಾಚಾರ್ಯರ ಪೈಕಿ ರೇವಣಾರಾಧ್ಯ, ಮರುಳಾರಾಧ್ಯ ಇವರಿಬ್ಬರು ಹನ್ನೆರಡನೆಯ ಶತಮಾನದಲ್ಲಿ ಜೀವಿಸಿದ್ದರೆಂದು ಹೇಳಿರುವರು. ಶ್ರೀಶೈಲ, ಕೇದಾರ ಮತ್ತು ಉಜ್ಜಯಿನಿ ಪೀಠಗಳು ಬಸವಣ್ಣನವರಿಗಿಂತ ಪೂರ್ವದಲ್ಲಿ ಇದ್ದಿರಬಹುದಾದರೂ ಅವು ಲಿಂಗಾಯತೇತರ ಧರ್ಮಗಳಿಗೆ ಸಂಬಂಧಿಸಿದವುಗಳಾಗಿವೆ. ಆದ್ದರಿಂದ ಈ ಐವರು (ಪಂಚಾಚಾರ್ಯರು) ಅಂದಿನ ಮಠಗಳಿಗೆ ಮುಖ್ಯಸ್ಥರಾಗಿ ನೇಮಿಸಲ್ಪಟ್ಟವರೆಂದು ಹೇಳಬಹುದು. ಪಂಚಾಚಾರ್ಯರ ಪೌರಾಣಿಕ ಕಥೆಯನ್ನು ವಿವರಿಸುವ ಮೂಲಗ್ರಂಥವು 16ನೆಯ ಶತಮಾನದ ಕೊನೆಯ ಭಾಗದಲ್ಲಿ ರಚಿಸಲ್ಪಟ್ಟಿದೆ. ಇದರಲ್ಲಿ ನಾಲ್ಕು ಆಚಾರ್ಯರ ಚರಿತ್ರೆ ಅಡಕವಾಗಿದೆ. ಯಾವುದೊಂದು ಹಿಂದೂ ಸಮಾಜವು ಗೌರವಿಸಲ್ಪಡಬೇಕಾದರೆ ಕಾಶಿ (ವಾರಣಾಸಿ)ಯಲ್ಲಿ ತನ್ನದೊಂದು ಮಠವನ್ನು ಹೊಂದಿರಬೇಕೆಂಬ ನಂಬಿಕೆಯ ಪ್ರಕಾರ ಕಾಶಿಯಲ್ಲಿ ಐದನೆಯ ಆಚಾರ್ಯರ ಮಠವು ಅನಂತರದ ಕಾಲದಲ್ಲಿ ಸ್ಥಾಪಿಸಲ್ಪಟ್ಟಂತೆ ತೋರುತ್ತದೆ ಎಂದು ಮುಂತಾಗಿ ಅವರು ಅಭಿಪ್ರಾಯಪಟ್ಟಿರುವರು.
ಮೂಲಕತೃ ಬಸವಣ್ಣ
ನಮ್ಮ ಸುತ್ತಮುತ್ತಲಿನ ಸೃಷ್ಟಿಯು ಅವ್ಯಕ್ತವಾದ ಅಗಣಿತ ಶಕ್ತಿಗಳ ಕೇಂದ್ರವಾಗಿದೆ. ಸೃಷ್ಟಿಯಲ್ಲಿಯ ಯಾವುದೊಂದು ಅವ್ಯಕ್ತ ಶಕ್ತಿಯನ್ನು ವ್ಯಕ್ತರೂಪದಲ್ಲಿ ತೆರೆದು ತೋರಿಸಿದವನಿಗೆ ವಿಜ್ಞಾನಿಯೆನ್ನುತ್ತೇವೆ. ಪೃಥ್ವಿಯಲ್ಲಿ ಗುರುತ್ವಾಕರ್ಷಣ ಶಕ್ತಿಯು ಆದಿಕಾಲದಿಂದ ಅವ್ಯಕ್ತರೂಪದಲ್ಲಿತ್ತು. ಅದನ್ನು ವ್ಯಕ್ತರೂಪದಲ್ಲಿ ಪ್ರಕಟಿಸಿದವನು ಸರ್ ಐಸಾಕ್ ನ್ಯೂಟನ್. ಇದೇ ರೀತಿ ಮಾನವನ ಮನೋಮಂಡಲದಲ್ಲಿ ಅನೇಕ ಅದ್ಭುತ ವಿಚಾರಗಳು ಆದಿ ಕಾಲದಿಂದಲೂ ಹುದುಗಿಕೊಂಡಿವೆ. ಅವುಗಳನ್ನು ಆಗಾಗ ಮಾನವನು ವ್ಯಕ್ತಪಡಿಸಿರಬಹುದು. ಆದರೆ ಇಂಥ ಅದ್ಭುತ ಹೊಸ ವಿಚಾರಗಳನ್ನು ಸುವ್ಯವಸ್ಥಿತವಾಗಿ ಉತ್ಕೃಷ್ಟ ರೀತಿಯಲ್ಲಿ ಇತರರ ಮನ ನಾಟುವಂತೆ ಯಾವನು ಪ್ರಕಟಪಡಿಸುವನೋ ಆ ವಿಚಾರಗಳ ಕರ್ತ್ರು ಅವನೇ ಆಗುತ್ತಾನೆ. ಈ ಮಾತನ್ನು ಈ ಕೆಳಗಿನ ಆಂಗ್ಲ ಉಕ್ತಿ ಸ್ಪಷ್ಟಪಡಿಸುತ್ತದೆ.
Though old the thoughts and oft expressed,
It is his at last who says it best
(O.S.Marden in his book ‘Pushing to the front’)
ಬಸವಪೂರ್ವ ಯುಗದ ಧಾರ್ಮಿಕ ಗ್ರಂಥಗಳಲ್ಲಿ ಲಿಂಗ, ಗುರು, ಮಹೇಶ್ವರ, ಪಾದೋದಕ, ಗಣಾಚಾರ, ಜಂಗಮ, ಶರಣ, ಪ್ರಸಾದ, ವಿಭೂತಿ, ಮಂತ್ರ, ಶಿವಾಚಾರ, ಪ್ರಾಣಲಿಂಗಿ, ಸದಾಚಾರ, ರುದ್ರಾಕ್ಷಿ, ಭೃತ್ಯಾಚಾರ, ಲಿಂಗಾಚಾರ, ಐಕ್ಯ ಮುಂತಾದ ಶಬ್ದಗಳು ಪ್ರಾಚೀನ ಧಾರ್ಮಿಕ ಗ್ರಂಥಗಳಲ್ಲಿ ಸಾಮಾನ್ಯ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿವೆ. ಆದರೆ ಈ ಶಬ್ದಗಳಲ್ಲಿ ವಿಶಿಷ್ಟ ಅರ್ಥಗಳನ್ನು ತುಂಬಿ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಕಟ್ಟಿನಲ್ಲಿ ಎರಕ ಹೊಯ್ದು ಲಿಂಗಾಯತ ಎಂಬ ಹೊಸ ಧರ್ಮದ ತಳಹದಿಯಾಗಿ ಬಳಸಿಕೊಟ್ಟದ್ದರಲ್ಲಿ ಬಸವಣ್ಣನವರ ಹಿರಿಮೆ ಅಡಗಿದೆ. ಆದುದರಿಂದ ಮಾರ್ಡೆನ್ ಪಂಡಿತರು ಹೇಳುವಂತೆ-
ಲಿಂಗಾಯತ ಧರ್ಮ ಬಸವಣ್ಣನವರು ಸೃಷ್ಟಿಸಿದ ಹೊಸ ಧರ್ಮದ ಮಹಾಮನೆಯಾಗಿದೆ. ಕೂಡಲಸಂಗನ ಈ ಮಹಾಮನೆಯೊಳು ಧರ್ಮಸಂತಾನ ಭಂಡಾರಿ ಬಸವಣ್ಣನವರು ಮುಹೂರ್ತಗೊಂಡಿರುವರು. ಕ್ರಿಸ್ತ ಧರ್ಮ, ಇಸ್ಲಾಂ ಧರ್ಮ, ಬುದ್ಧ ಧರ್ಮ, ಜೈನ ಧರ್ಮ, ಸಿಖ್ ಧರ್ಮ- ಈ ಪ್ರಚಲಿತ ಧರ್ಮಗಳಿಗೆ ಸ್ವತಂತ್ರವಾದ ಅಸ್ತಿತ್ವವುಂಟು. ಸ್ವತಂತ್ರ ಅಸ್ತಿತ್ವವುಳ್ಳ ಧರ್ಮವಾಗಬೇಕಾದರೆ ಅದರಲ್ಲಿ ಕೆಳಗೆ ಕಾಣಿಸಿದ ಪ್ರಮುಖ ಲಕ್ಷಣಗಳಿರಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ-
ಭಾರತೀಯ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಮತ್ತು ವಕೀಲರು ನ್ಯಾಯ ನಿರ್ಣಯ ಮಾಡುವಲ್ಲಿ ಕೆಲವು ಪ್ರಮುಖ ಮೂಲಗ್ರಂಥಗಳನ್ನು ಅವಲೋಕಿಸುವುದು ಬಳಕೆಯಲ್ಲಿದೆ. ಸಾಮಾಜಿಕ, ಧಾರ್ಮಿಕ ಸಮಸ್ಯೆಗಳನ್ನೊಳಗೊಂಡ ತಂಟೆ, ತಕರಾರು, ವ್ಯಾಜ್ಯಗಳನ್ನು ಸಾರಾಸಾರವಾಗಿ ವಿಚಾರಿಸಿ, ವಿಮರ್ಶಿಸಿ ತೀರ್ಪು ಕೊಡುತ್ತಾರೆ. ಅಂತಹ ಹೆಸರಾಂತ ಗ್ರಂಥಗಳಲ್ಲೊಂದಾದ ‘ಹಿಂದೂ ಲಾ ಆಂಡ್ ಯೂಸೇಜ್’ (ಹಿಂದೂ ಶಾಸನ ಮತ್ತು ವಹಿವಾಟು) ಎಂಬ ಗ್ರಂಥವನ್ನು ಪ್ರಸಿದ್ಧ ಆಂಗ್ಲ ವಿದ್ವಾಂಸ ಜಾನ್.ಡಿ.ಮಾಯಿನ್ 1878ರಲ್ಲಿ ಬರೆದು ಪ್ರಕಟಿಸಿದ್ದಾರೆ. 1986ರವರೆಗೆ 12 ಸಲ ಅದರ (ತಿದ್ದಿದ) ಆವೃತ್ತಿ ಮರುಮುದ್ರಣಗೊಂಡಿದೆ.
ಈ ಗ್ರಂಥವನ್ನು ಭಾರತದ ಸರ್ವ ಶ್ರೇಷ್ಠ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಕಾಲಕಾಲಕ್ಕೆ ಪರಿಷ್ಕರಿಸಿ ಪ್ರಕಟಿಸುತ್ತ ಬಂದಿದ್ದಾರೆ. ಈ ಗ್ರಂಥದ 12ನೆಯ ಆವೃತ್ತಿಯನ್ನು ನಿವೃತ್ತ ನ್ಯಾಯಾಧೀಶ ಅಲ್ಲಾದಿ ಕುಪ್ಪುಸ್ವಾಮಿಯವರು ಪರಿಷ್ಕರಿಸಿದ್ದು, ಹೊಸದಿಲ್ಲಿಯ ‘ಭಾರತ್ ಲಾ ಹೌಸ್’ ಪ್ರಕಾಶನ ಅದನ್ನು ಪ್ರಕಟಿಸಿದೆ. ಈ ಗ್ರಂಥವನ್ನು ಅವಲೋಕಿಸುತ್ತಿರುವಾಗ ಅದರ ಮೊದಲನೆಯ ಅಧ್ಯಾಯದ (ಪುಟ 4-5) ಐದನೆಯ ಪ್ಯಾರಾದಲ್ಲಿ ಈ ಕೆಳಗಿನ ವಾಕ್ಯಗಳು ನನ್ನ ಗಮನ ಸೆಳೆದವು:
“ಹಿಂದೂ ಧರ್ಮಕ್ಕೆ ಏಕೈಕ ಪ್ರವಾದಿ ಇಲ್ಲ. ಅದು ಏಕಮೇವ ದೇವರನ್ನು ಪೂಜಿಸುವುದಿಲ್ಲ. ಅದು ಏಕೈಕ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸುವುದಿಲ್ಲ. ನಿಜವಾಗಿ ಹೇಳುವುದಾದರೆ, ರೂಢಿ ಮೂಲಕವಾಗಿ ಬೆಳೆದು ಬಂದ ಯಾವುದೊಂದು ಧರ್ಮ ಅಥವಾ ಪಂಥದ ಲಕ್ಷಣಗಳನ್ನು ತೃಪ್ತಿಕರವಾಗಿ ಅದು ಹೊಂದಿದೆ ಎಂದು ಹೇಳಲಿಕ್ಕಾಗದು. ವಿಶಾಲಾರ್ಥದಲ್ಲಿ ವರ್ಣಿಸುವುದಾದರೆ ಅದೊಂದು ಜೀವನ ಕ್ರಮವೇ ಹೊರತು ಮತ್ತೇನೂ ಅಲ್ಲ.”
“ಬುದ್ಧನು ಬೌದ್ಧ ಧರ್ಮ ಪ್ರಾರಂಭಿಸಿದನು, ಮಹಾವೀರನು ಜೈನ ಧರ್ಮವನ್ನು ಸ್ಥಾಪಿಸಿದನು. ಬಸವಣ್ಣನು ಲಿಂಗಾಯತ ಧರ್ಮದ ಸ್ಥಾಪಕನು. ಜ್ಞಾನೇಶ್ವರಿ ಮತ್ತು ತುಕಾರಾಮರು ‘ವಾರಕರಿ’ ಪಂಥವನ್ನು ಪ್ರಾರಂಭಿಸಿದರು. ಗುರುನಾನಕ ಸಿಖ್ ಧರ್ಮಕ್ಕೆ ಪ್ರೇರಣೆ ನೀಡಿದರೆ, ದಯಾನಂದ ಸರಸ್ವತಿ ಆರ್ಯಸಮಾಜ ಸ್ಥಾಪಿಸಿದರು. ಚೈತನ್ಯ ಭಕ್ತಿ ಪಂಥ ಪ್ರಾರಂಭಿಸಿದರು. ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ಬೋಧನೆಯ ಪರಿಣಾಮವಾಗಿ ಅತ್ಯಂತ ಆಕರ್ಷಕವಾಗಿ, ಪ್ರಗತಿಪರವಾಗಿ, ಕ್ರಿಯಾಶೀಲವಾಗಿ ಹಿಂದೂ ಧರ್ಮವು ಅರಳಿತು…”
[Myne (John D): Hindu law and usage: First Edition 1878, 12th Edition 1986; Bharat Law House, Delhi, p: 4-5.
Hindu religion does not claim any Prophet. It does not worship any one God. It does not follow any one set of religious rites or performance. Infact it does not appear to satisfy the narrow traditional features of any religion or creed. It may be broadly described as a way of life and nothing more.”
“Buddha started Buddhism, Mahaveer founded Jainism, Basava became founder of Lingayat Religion, Dhyaneshwari and Tukaram initiated Varakari cult, Gurunanak inspired Sikhism, Dayanand founded Arya Samaj, Chaitanya began Bhakti cult and as a result of teachings of Ramakrishna and Vivekanand Hindu religion flowered into its attractive, progressive and dynamic form.”]
ಜಾನ್.ಡಿ. ಮಾಯಿನ್ ವಿದ್ವಾಂಸರ ಅವತರಣಿಕೆಯಲ್ಲಿ ನಾವು ಈ ಕೆಳಕಂಡ ಮೂರು ಮುಖ್ಯ ಅಂಶಗಳನ್ನು ಗಮನಿಸಬಹುದು-
1.ಹಿಂದೂ ಧರ್ಮ ಎಂಬ ಒಂದು ಧರ್ಮವಿಲ್ಲ. ಅದೊಂದು ಜೀವನ ಕ್ರಮ. ಆದರೆ ಕ್ರಮಬದ್ಧ ಜೀವನಕ್ಕೆ ಅಲ್ಲಿ ಎಡೆಯಿಲ್ಲ.
2.ಹಿಂದೂ ಜೀವನಕ್ರಮವನ್ನು ಪ್ರತಿಭಟಿಸಿ ಬೌದ್ಧ, ಜೈನ, ಲಿಂಗಾಯತ, ಸಿಖ್ ಧರ್ಮಗಳು ಹುಟ್ಟಿ, ಉದಾತ್ತ ತತ್ವಗಳನ್ನೊಳಗೊಂಡು ಬೆಳೆದು ಅರಳಿ ನಿಂತಿವೆ. ವಾರಕರಿ ಪಂಥ, ಆರ್ಯಸಮಾಜ, ಭಕ್ತಿ ಪಂಥ, ರಾಮಕೃಷ್ಣ ಮಿಷನ್ ಗಳೂ ಹಿಂದೂ ಜೀವನಕ್ರಮದಲ್ಲಿ ಪ್ರತ್ಯೇಕವಾಗಿ ಬೆಳೆದು ನಿಂತಿವೆ. ಇವೆಲ್ಲಾ ಹಿಂದೂಸ್ಥಾನ ಇಲ್ಲವೇ ಇಂಡಿಯಾದಲ್ಲಿ ಜನ್ಮ ತಾಳಿದುದರಿಂದ ಆಚಾರ-ವಿಚಾರಗಳಲ್ಲಿ ಪ್ರತ್ಯೇಕವಾಗಿದ್ದರೂ ಅವೆಲ್ಲವುಗಳನ್ನು ‘ಹಿಂದೂ ಧರ್ಮ’ ಎಂಬ ಒಂದೇ ಪದದಿಂದ ನಿರ್ದೇಶಿಸಲಾಗುತ್ತದೆ. ಆದುದರಿಂದ ‘ಹಿಂದೂ ಧರ್ಮ’ ಎಂಬ ಪದಕ್ಕೆ ವಿಶೇಷ ಅರ್ಥವಿಲ್ಲ.
3.ಬೌದ್ಧ ಧರ್ಮ ಸ್ಥಾಪಕ ಬುದ್ಧ, ಜೈನ ಧರ್ಮ ಸ್ಥಾಪಕ ಮಹಾವೀರ, ಹಾಗೆಯೇ ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣ ಎಂಬ ಮಾತನ್ನು ಕಹಳೆಯೋಪಾದಿಯಲ್ಲಿ ಕೂಗಿ ಕೂಗಿ ಹೇಳುತ್ತದೆ ಮಾನ್ಯ ಮಾಯಿನ್ ವಿದ್ವಾಂಸರ ಮಾತು.
ಬಸವಣ್ಣನವರ ಘನ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಕಾರ್ಯದಲ್ಲಿ ಅನೇಕ ವೀರಶೈವರೇ ಇಂದು ಮುಂದಾಗಿರುವುದನ್ನು ನೋಡುತ್ತಿದ್ದೇವೆ. ಅಂಥವರು ಮಾಯಿನ್ ವಿದ್ವಾಂಸರ ಅಭಿಪ್ರಾಯವನ್ನು ನೋಡಿ ಮನ ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ.
(ಮುಗಿಯಿತು)
Comments 5
Padmalaya
Dec 7, 2020ವೀರಶೈವರ ಹದಿನೈದು ಹದಿನಾರನೇ ಶತ ಮಾನದ ಧಾರ್ಮಿಕ ಸಂಕರದ ಬರಹಗಳಿಂದ ಲಿಂಗಾಯತ ಧರ್ಮವು ರೂಪಿಸಿದ ಲಿಂಗಾಂಗ ಸಾಮರಸ್ಯ ವಿರೂಪಗೊಂಡಿತು.ಈಗ ಲಿಂಗಾಯತರು ತಮ್ಮ ನಿಜ ಚೆರಿತ್ರೆಯನ್ನ ಇತಿಹಾಸದ ಪುಟಗಳಿಂದ ಹಕ್ಕಿ ತೆಗೆಯಬೇಕಾಗಿದೆ.ಈ ನಿಟ್ಟಿನಲ್ಲಿ ಗುಂಜಾಳರ ಲೇಖನಗಳು ಬಹೋಪಕಾರಿ.
ಜಯಪ್ರಕಾಶ್ ಉಳ್ಳಾಗಡ್ಡಿ
Dec 16, 2020ಲೇಖನಗಳ ಸರಣಿ ಸಂಗ್ರಹಯೋಗ್ಯವಾಗಿತ್ತು. ಗುಂಜಾಳ ಶರಣರಿಗೆ ಶರಣು
Tippeswamy
Jan 4, 2021ಲೇಖನದಲ್ಲಿ ಉಲ್ಲೇಖಿಸಿದ ಮಹನೀಯರ ಮಾತುಗಳ ಆಳಕ್ಕೆ ಇಳಿದು ನೋಡಬೇಕಾಗಿದೆ. ಹಿರಿಯರಾದ ಗುಂಜಾಳ ಶರಣರಿಗೆ ನಮಸ್ಕಾರಗಳು
Devaraj B.S
Jan 4, 2021ಬಸವಪೂರ್ವ ಯುಗದ ಧಾರ್ಮಿಕ ಗ್ರಂಥಗಳಲ್ಲಿ ಲಿಂಗ, ಗುರು, ಮಹೇಶ್ವರ, ಪಾದೋದಕ, ಗಣಾಚಾರ, ಜಂಗಮ, ಶರಣ, ಪ್ರಸಾದ, ವಿಭೂತಿ, ಮಂತ್ರ, ಶಿವಾಚಾರ, ಪ್ರಾಣಲಿಂಗಿ, ಸದಾಚಾರ, ರುದ್ರಾಕ್ಷಿ, ಭೃತ್ಯಾಚಾರ, ಲಿಂಗಾಚಾರ, ಐಕ್ಯ ಮುಂತಾದ ಶಬ್ದಗಳು ಪ್ರಾಚೀನ ಧಾರ್ಮಿಕ ಗ್ರಂಥಗಳಲ್ಲಿ ಸಾಮಾನ್ಯ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿವೆ. ಆದರೆ ಈ ಶಬ್ದಗಳಲ್ಲಿ ವಿಶಿಷ್ಟ ಅರ್ಥಗಳನ್ನು ತುಂಬಿ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಕಟ್ಟಿನಲ್ಲಿ ಎರಕ ಹೊಯ್ದು ಲಿಂಗಾಯತ ಎಂಬ ಹೊಸ ಧರ್ಮದ ತಳಹದಿಯಾಗಿ ಬಳಸಿಕೊಟ್ಟದ್ದರಲ್ಲಿ ಬಸವಣ್ಣನವರ ಹಿರಿಮೆ ಅಡಗಿದೆ…
Indudhar
Jan 4, 2021Superb, what a blog it is! This web site provides helpful information to us, keep it up.