ವಚನ ಸಾಹಿತ್ಯದ ಸಂಕೀರ್ಣತೆ
ಕನ್ನಡವು ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದು. ತಮಿಳಿನ ನಂತರ ಶಾಸನಾನ್ಮತಕವಾಗಿ ಶಾಸ್ತ್ರೀಯ ಭಾಷೆಯ ಸ್ಥಾನ ಪಡೆದ ಎರಡನೇ ದ್ರಾವಿಡ ಭಾಷೆ. ಮೌಲ್ಯಯುತ ಸಾಹಿತ್ಯಕ್ಕಾಗಿ ರಾಷ್ಟ್ರಮಟ್ಟದಲ್ಲಿ ದೊರಕುವ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ಗರಿಷ್ಠ ಎಂಟು ಸಲ ತನ್ನ ಮುಡಿಗೇರಿಸಿಕೊಂಡ ಭಾರತೀಯ ಏಕೈಕ ಭಾಷೆ ಎಂಬ ಹಿರಿಮೆ ಮತ್ತು ಗರಿಮೆ ಕನ್ನಡ ಭಾಷೆಯದ್ದು. ಸಾಹಿತ್ಯಕ್ಕಾಗಿ ಪ್ರಾಪ್ತವಾಗುವ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿˌ ಸರಸ್ವತಿ ಸಮ್ಮಾನ್, ಇತ್ಯಾದಿಗಳೊಂದಿಗೆ ಇನ್ನೂ ಅನೇಕ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಅತ್ಯಂತ ಸಮೃದ್ಧ ಭಾಷೆ.
ಪ್ರಾಚೀನ ಹಳೆಗನ್ನಡ ಸಾಹಿತ್ಯದಿಂದ ಹಿಡಿದು ಇಂದಿನ ಅಧುನಿಕ ಸಾಹಿತ್ಯದವರೆಗೆ ಕನ್ನಡದ ಸಾಹಿತ್ಯ ಕೃತಿಗಳು ಜಾಗತಿಕ ಮನ್ನಣೆಗೂ ಪಾತ್ರವಾಗಿವೆ. ಕನ್ನಡ ಭಾಷೆಯು ಕಾವ್ಯˌ ಕಥೆˌ ಕಾದಂಬರಿˌ ನಾಟಕ, ವಿಮರ್ಶೆˌ ಮಹಾಕಾವ್ಯ ಇತ್ಯಾದಿ ಎಲ್ಲಾ ಪ್ರಕಾರಗಳಲ್ಲಿ ಸಮೃದ್ಧಿಯಾಗಿ ಬೆಳೆದಿದೆ. ಅವೆಲ್ಲವುಗಳಲ್ಲಿ ಭಕ್ತಿ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶೇಷ ಪ್ರಕಾರವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ವಚನ ಮತ್ತು ದಾಸ ಸಾಹಿತ್ಯಗಳು ಪ್ರಮುಖವಾದವುಗಳು. ದಾಸ ಸಾಹಿತ್ಯವು ಬಹುತೇಕ ತನ್ನ ಹರವನ್ನು ದೈವ ಸ್ಮರಣೆಯ ಉದ್ದೇಶಗಳಾಚೆಗೆ ಚಾಚದಂತೆ ನಿರ್ಬಂಧಿಸಿ ರೂಪುಗೊಂಡರೆ ವಚನ ಸಾಹಿತ್ಯವು ಇತಿಹಾಸದ ವಿಶಿಷ್ಟ ಸನ್ನಿವೇಶದಲ್ಲಿ ಜನ್ಮತಳೆದು, ತನ್ನ ವ್ಯಾಪ್ತಿಗೆ ಸೀಮೆಯನ್ನು ಗುರುತಿಸಲಾರದೇ ಅಗಾಧವಾಗಿ ಹರಡಿಕೊಂಡಿದೆ.
ವಚನ ಸಾಹಿತ್ಯವನ್ನು ವಚನ ಚಳುವಳಿ ಎಂದೇ ಪ್ರಾಜ್ಞರು ಗುರುತಿಸುತ್ತಾರೆ. ಭಾರತೀಯ ಸಾಹಿತ್��� ಪ್ರಕಾರಗಳಲ್ಲಿ ತನ್ನ ಹುಟ್ಟಿನಿಂದಲೇ ವಿಶೇಷವೆನಿಸಿಕೊಂಡದ್ದು ವಚನ ಸಾಹಿತ್ಯ. ತಲೆಮಾರುಗಳಿಂದ ಸುಶಿಕ್ಷಿತ ಹಾಗೂ ಸಂಸ್ಕಾರಬದ್ಧವಾಗಿ ಶಿಕ್ಷಣ ಪಡೆದ ಪಂಡಿತೋತ್ತಮರಿಂದಲ್ಲದೆˌ ಶತ ಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದಲೇ ವಂಚಿಸಲ್ಪಟ್ಟ ಶ್ರಮ ಸಂಸ್ಕೃತಿಯ ನಿರಕ್ಷರಕುಕ್ಷಿ ಪಾಮರರಿಂದ ವಚನಗಳು ರಚನೆಯಾದದ್ದು ಗಮನಿಸಲೇಬೇಕಾದ ಅಂಶ. ವಚನ ಚಳುವಳಿಯ ಮುಖ್ಯ ಉದ್ದೇಶ ಸಾಹಿತ್ಯ ರಚನೆಯಾಗಿರದೆ ಅದೊಂದು ಸಾಮಾಜ ಸುಧಾರಣೆˌ ಆತ್ಮಾವಲೋಕನˌ ಆಧ್ಯಾತ್ಮ ಸಾಧನೆˌ ಅಕ್ಷರ ಜಾಗೃತಿ ಮುಂತಾದ ಅನೇಕ ಸಾಧನೆಗಳ ಹಂಬಲದಿಂದ ಮೈದಳೆದ ಬಹುದ್ದೇಶ ಚಳುವಳಿ.
ಹನ್ನೆರಡನೇ ಶತಮಾನದ ಶರಣರ ವಚನ ಚಳುವಳಿಯ ಆರಂಭಕ್ಕೂ ಮುನ್ನ ಕನ್ನಡದಲ್ಲಿ ಜನಸಾಮಾನ್ಯನ ತಿಳಿವಳಿಕೆಗೆ ಸರಿಹೊಂದುವ ಮಟ್ಟದ ಸರಳ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿತ್ತು. ಬಹುತೇಕ ಅಕ್ಷರ ವ್ಯವಸಾಯ ಅಗ್ರಹಾರದ ಪಂಡಿತರ ಕಪಿಮುಷ್ಠಿಯಲ್ಲಿದ್ದ ಸಂಕೀರ್ಣ ಕಾಲಘಟ್ಟ ಅದು. ಶತಮಾನಗಳಿಂದ ಅಸ್ತಿತ್ವವೇ ಇಲ್ಲದೆ ಹೀನ ಬಾಳುವೆಗೆ ದೂಡಲ್ಪಟ್ಟಿದ್ದ ಸಮಾಜದ ದುಡಿವ ವರ್ಗದ ಜನರೆಡೆಗೆ ಶಿಕ್ಷಣವನ್ನು ಒಯ್ದ ಶ್ರೇಯ ಬಸವಾದಿ ಶರಣರಿಗೆ ಸಲ್ಲುತ್ತದೆ. ಶಿಕ್ಷಣವನ್ನು ಜನಸಾಮಾನ್ಯನಿಗೆ ಮುಟ್ಟಿಸುವುದರೊಟ್ಟಿಗೆ ಅವರಲ್ಲಿ ಜ್ಞಾನˌ ಸ್ವಾಭಿಮಾನ ಮತ್ತು ಸಾಹಿತ್ಯ ರಚನೆಗೆ ಪ್ರೇರಣೆ ನೀಡಿ ಆ ಮೂಲಕ ಹುಟ್ಟುಪಡೆದದ್ದೇ ವಚನ ಸಾಹಿತ್ಯವೆಂಬ ಅದ್ಭುತ ಪರಿಕಲ್ಪನೆ. ವಚನ ಚಳುವಳಿಯು ಸಾಮೂಹಿಕ ಜನಾಂದೋಲನದ ಸ್ವರೂಪ ಪಡೆದು ಅಸಂಖ್ಯಾತ ರೈತರುˌ ಕಾರ್ಮಿಕರು ಒಂದೆಡೆ ಸೇರಿˌ ತಮ್ಮ ವೈಚಾರಿಕ ಚಿಂತನೆಗಳಿಗೆ ಅಕ್ಷರ ರೂಪ ನೀಡಿದ ಒಂದು ವಿನೂತನ ಸಾಹಿತ್ಯ ಚಳುವಳಿ.
ಸಾಹಿತ್ಯ ಎನ್ನುವುದು ಜನಸಾಮಾನ್ಯನಿಗೆ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವಲ್ಲ. ಅದು ಆಸಕ್ತಿಯುಳ್ಳ ಅಕ್ಷರಸ್ಥನ ಬೌದ್ದಿಕ ಹಸಿವನ್ನು ನಿವಾರಿಸುವ ಒಂದು ಸಂಕೀರ್ಣ ಆಹಾರ. ಆದರೆ ಸಾಹಿತ್ಯವು ಕೇವಲ ಬೌದ್ದಿಕ ಅಗತ್ಯಕ್ಕೆ ಸೀಮಿತವಾಗಿರದೆ ವ್ಯಕ್ತಿಯ ಜ್ಞಾನ ದಾಹˌ ಆಧ್ಯಾತ್ಮದ ಅಗತ್ಯ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಪೂರೈಸಿಕೊಳ್ಳುವ ಮಹತ್ತರ ಸಾಧನವೆನ್ನುವುದನ್ನು ಮರೆಯಬಾರದು. ವಚನ ಚಳುವಳಿಯ ಪೂರ್ವದಲ್ಲಿ ಸಾಹಿತ್ಯದ ಮಾಧ್ಯಮವು ಸಂಪೂರ್ಣವಾಗಿ ಬೆರಳೆಣಿಕೆಯಷ್ಟು ಜನರ ಕೈಯಲ್ಲಿತ್ತು. ಪಂಡಿತ ವರ್ಗದ ಭಾಷಾ ಕಟ್ಟಳೆಯನ್ನು ಮುರಿದು ಸರಳವಾಗಿ ಜನ ಸಾಮಾನ್ಯರು ಸಂವಾದಿಸುವ ಕನ್ನಡದಲ್ಲಿಯೇ ವಚನಗಳನ್ನು ರಚಿಸಿದ ಶರಣರ ನಿರ್ಧಾರವೇ ಅಂದು ನಡೆದ ಮಹತ್ತರವಾದ ಕ್ರಾಂತಿಯ ಸಂಕೇತ. ರಾಜರ ಆಸ್ಥಾನದ ಗಿಳಿಯಂತಿದ್ದ ಸಾಹಿತ್ಯ ಹೊಲ ಗದ್ದೆಗಳಲ್ಲಿ ದುಡಿವವರ ಅಂಗಳಕ್ಕೆ ಬಂದು ಬೆಳೆಯಿತು.
ವಚನ ಸಾಹಿತ್ಯದ ಮೇಲೆ ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆˌ ನಿರಂತರವಾಗಿ ನಡೆಯುತ್ತಿವೆ. ಸಾಮಾನ್ಯವಾಗಿ ಕಬ್ಬಿಣದ ಕಡಲೆಯಂತಿದ್ದ ಸಂಸ್ಕೃತ ಭಾಷೆಗಿಂತ ಕನ್ನಡ ಭಾಷೆ ಸುಲಲಿತ ಮತ್ತು ಸರಳ ಎಂದು ನಾವೆಲ್ಲ ಭಾವಿಸುತ್ತೇವೆ. ಇಲ್ಲಿಯವರೆಗಿನ ವಚನ ಸಾಹಿತ್ಯದ ಮೇಲಿನ ವಿಮರ್ಶೆಗಳು ಶರಣ ಸಾಹಿತ್ಯವು ಅತ್ಯಂತ ಸರಳವೆಂದೇ ಸಾರುತ್ತ ಬಂದಿವೆ. ಮೇಲ್ನೋಟಕ್ಕೆ ವಚನ ಸಾಹಿತ್ಯ ತನ್ನ ಸರಳತೆಯಿಂದ ಖ್ಯಾತಿ ಪಡೆದಿದ್ದರೂ ಲಿಂಗಾಯತ ಧರ್ಮದ ಆಧ್ಯಾತ್ಮ ಸಾಧನೆಯ ಆಧಾರ ತತ್ವಗಳಾದ ಅಷ್ಟಾವರಣˌ ಪಂಚಾಚಾರ ಮತ್ತು ಷಟಸ್ಥಲಗಳ ಅನುಭೂತಿಯನ್ನು ಸಾರುವ ಬಸವಣ್ಣನವರ ವಚನಗಳು ಮತ್ತು ನಿರಾಕಾರ ತತ್ವದ ಅರಿವಿನ ಕಠಿಣ ಹಾದಿಯ ಸಾಧನಾ ಕ್ರಮಗಳ ಕುರಿತು ಬರೆದ ಅಲ್ಲಮರ ಬೆಡಗಿನ ವಚನಗಳ ಸಂಕೀರ್ಣತೆ ಸಾಮಾನ್ಯ ಓದುಗನ ತಿಳಿವಳಿಕೆಯ ಕ್ಷಿತಿಜವನ್ನು ಮುಟ್ಟಲಾರವು. ಪ್ರಖಂಡ ಜ್ಞಾನದ ತಿಳಿವಿನಿಂದ ಕೂಡಿದ ಆಳವಾದ ಆಧ್ಯಾತ್ಮ ಸಾಧನೆಯ ಬೆಡಗಿನ ವಚನಗಳು, ವಚನ ಸಾಹಿತ್ಯವೆಂದರೆ ಅತಿ ಸರಳ ಎನ್ನುವ ಸಾಮಾನ್ಯ ನಂಬಿಕೆಯನ್ನು ಹುಸಿಗೊಳಿಸುತ್ತವೆ.
ಶರಣರ ವಚನಗಳ ಮತ್ತೊಂದು ವೈಶಿಷ್ಠ್ಯವೆಂದರೆ ಲಿಂಗಾಯತ ಸಾಹಿತ್ಯದ ಪಾರಿಭಾಷಿಕ ಶಬ್ದಗಳ ಸೃಷ್ಟಿ ಮತ್ತು ಅವುಗಳ ಯಥೇಚ್ಛ ಬಳಕೆ. ವಚನಗಳ ರಚನೆ ಸರಳವಾಗಿ ಕಂಡರೂ ಅವುಗಳ ಅರ್ಥ ಬಹಳ ಗಹನವಾದದ್ದು. ಅಂತಹ ವಚನಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಓದುಗನಿಗೆ ವಿಶೇಷ ಜ್ಞಾನದ ಅಗತ್ಯವಂತೂ ಖಂಡಿತ ಇದೆ. ಶರಣರ ಪ್ರಯೋಗಶೀಲ ಮನೋಧರ್ಮ, ವಾಸ್ತವದ ಬದುಕಿನ ಮೌಲ್ಯಗಳ ಗ್ರಹಿಕೆˌ ಪಾರಮಾರ್ಥಿಕ ಸಾಧನೆಗೆ ಬೇಕಾಗಬಹುದಾದ ಆಳವಾದ ಆಧ್ಯಾತ್ಮದ ಅರಿವು ಮತ್ತು ಜನಸಾಮಾನ್ಯನ ಒಳಿತನ್ನು ಅಪೇಕ್ಷಿಸುವ ಉದಾತ್ತ ಉದ್ದೇಶಗಳು ಶರಣರನ್ನು ಮತ್ತು ಅವರ ವಚನ ಸಾಹಿತ್ಯವನ್ನು ಒಂದು ಜನಾಂಗಕ್ಕೆ ಸೀಮಿತಗೊಳಿಸುವುದಿಲ್ಲ. ವಚನಗಳು ಇಡೀ ಮನುಕುಲವನ್ನು ಮತ್ತು ಸಕಲ ಚರಾಚರ ಜೀವಿಗಳ ಒಳಿತನ್ನು ಅಪೇಕ್ಷಿಸುವ ಪರಿಕಲ್ಪನೆಯಿಂದ ರೂಪುಗೊಂಡ ಹೋರಾಟದ ಉತ್ಪನ್ನಗಳು ಎಂದೇ ಹೇಳಬೇಕು.
ವಚನ ಸಾಹಿತ್ಯವು ಕೇವಲ ಒಂದು ಸಾಹಿತ್ಯ ಪ್ರಕಾರವಾಗಿರದೆ ಸರ್ವಾಂಗೀಣ ಆಂದೋಲನವಾಗಿ ಹೊರಹೊಮ್ಮಿದಂಥದು. ಮಹತ್ವದ ಚಳುವಳಿಯಲ್ಲಿ ಹುಟ್ಟು ಪಡೆದ ವಚನಗಳು ವೈಚಾರಿಕ ವಿಷಯಗಳನ್ನಷ್ಟೇ ಪ್ರತಿನಿಧಿಸದೆ ಎಲ್ಲ ರಂಗಗಳಲ್ಲಿನ ಸಮಗ್ರವಾದ ಸುಧಾರಣೆಗೆ ಕೈ ಹಾಕಿದವು. ಅವುಗಳಲ್ಲಿ ದೇವನನ್ನು ಅರಿಯುವ ಆಧ್ಯಾತ್ಮ ಮಾರ್ಗದ ಮಜಲುಗಳನ್ನು ಶರಣರು ಬಹಳ ಮಾರ್ಮಿಕವಾಗಿ ದಾಖಲಿಸಿದ್ದಾರೆ. ಉದಾಹರಣೆಗೆ ಬಸವಣ್ಣನವರು ಸ್ಥಾಪಿಸಿದ ಮಹಾಮನೆಯ ಕುರಿತು ಅಲ್ಲಮಪ್ರಭುಗಳು ಬರೆದ ಈ ಕೆಳಗಿನ ವಚನವು ತನ್ನ ಗಾಢವಾದ ಅರ್ಥ ಮತ್ತ��� ಸಂಕೀರ್ಣವಾದ ರಚನೆಯಿಂದ ಗಮನ ಸೆಳೆಯುತ್ತದೆ:
“ಆದಿಯ ಲಿಂಗವ ಮೇದಿನಿಗೆ ತಂದು,
ಮರ್ತ್ಯಲೋಕದಲ್ಲಿ ಮಹಾಮನೆಯ ಕಟ್ಟಿದನಯ್ಯಾ ಸಂಗನಬಸವಣ್ಣನು.
ಆ ಮನೆಯ ನೋಡಲೆಂದು ಹೋದಡೆ,
ಆ ಗೃಹ ಹೋಗದ ಮುನ್ನವೆ ಎನ್ನ ನುಂಗಿತ್ತಯ್ಯಾ!
ಅದಕ್ಕೆ ಕಂಭ ಒಂದು, ತೊಲೆ ಆರು, ಜಂತೆವಲಗೆ ಮೂವತ್ತಾರು
ಧರೆಯಾಕಾಶವ ಹೊದ್ದದ ಕೆಸರುಗಲ್ಲು
ಒಂಬತ್ತು ಬಾಗಿಲು, ಬಿಯ್ಯಗವಿಕ್ಕಿಹವು.
ಬೇರೊಂದು ಬಾಗಿಲು ಉರಿಯನುಗುಳುತಿರ್ಪುದು.
ಮುತ್ತಿನ ಕಂಭದ ಮೇಲುಕಟ್ಟಿನ ಮೇಲೆ ಮಾಣಿಕ್ಯದ ಶಿಖರಿ!
ಆ ಶಿಖರಿಯ ತುದಿಯಲ್ಲಿ ಬಿಳಿಯ ಹೊಂಗಳಸವಿಪ್ಪುದು.
ಅದು ಕಾಬವರಿಗೆ ಕಾಣಬಾರದು.
ಕಾಣಬಾರದವರಿಗೆ ಕಾಣಬಪ್ಪುದು.
ಅಲ್ಲಿ ಹತ್ತು ಮಂದಿ ಪರಿಚಾರಕರು ಎಡೆಯಾಡುತಿಪ್ಪರು.
ಇಬ್ಬರು ದಡಿಕಾರರು ಬಾಗಿಲ ಕಾಯ್ದಿಪ್ಪರು.
ಒಬ್ಬಾಕೆ ಎಡೆಯಾಡುತ್ತಿಪ್ಪಳು.
ಒಬ್ಬಾಕೆ ಲಿಂಗಾರ್ಚನೆಗೆ ನೀಡುತ್ತಿಪ್ಪಳು.
ಒಬ್ಬಾಕೆ ಸುಯಿಧಾನಂಗಳೆಲ್ಲವನು ಶೋಧಿಸಿ ತಂದುಕೊಡುತ್ತಿಪ್ಪಳು.
ಒಬ್ಬಾಕೆ ಉರಿಯಿಲ್ಲದಗ್ನಿಯಲಿ ಪಾಕವ ಮಾಡುತ್ತಿಪ್ಪಳು.
ಒಬ್ಬಾಕೆ ಲಿಂಗಜಂಗಮಕ್ಕೆ ಮಾಡಿ, ನೀಡಿ, ಊಡಿ, ಉಣಿಸಿ
ತೃಪ್ತಿಯ ಮಾಡುತ್ತಿಪ್ಪಳು_
ಒಂದಡ್ಡಣಿಗೆಯ ಮೇಲೆ,
ಐದು ಅಗಲೊಳಗೆ ಇಟ್ಟ ಬೋನವನು ಒಬ್ಬನುಂಡಡೆ,
ಪ್ರಮಥಗಣಂಗಳೆಲ್ಲರೂ ಆತನ ಒಕ್ಕುದ ಕೊಳಲೆಂದು ಬಂದು,
ಆ ಮನೆಯ ಹೊಕ್ಕು ನಿಶ್ಚಿಂತನಿವಾಸಿಗಳಾದರು.
ಗುಹೇಶ್ವರನ ಶರಣ ಸಂಗನಬಸವಣ್ಣನ ಮಹಾಮನೆಯ ಕಂಡು
ಧನ್ಯನಾದೆನು ಕಾಣಾ ಸಿದ್ಧರಾಮಯ್ಯ.”
ವಚನದ ರಚನೆ ಬಹಳ ಸಂಕೀರ್ಣವಾಗಿದ್ದು ಮನುಷ್ಯನ ದೇಹˌಮನಸ್ಸುಗಳ ಸಂಯೋಗದಿಂದ ಶಿವಯೋಗ ಸಾಧನೆಯನ್ನು ಸಾಧಿಸುವ ಬಗೆ ಅಲ್ಲಮರ ಬೆಡಗಿನ ಶಬ್ದಗಳಲ್ಲಿ ಬಹು ಮಾರ್ಮಿಕವಾಗಿ ವಿವರಿಸಲ್ಪಟ್ಟಿದೆ.
ನಿರಾಕಾರನಾದ ದೇವನನ್ನು ವಿಶ್ವಾಕಾರದ ಇಷ್ಟಲಿಂಗ ರೂಪದಲ್ಲಿ ತಂದು ಅದನ್ನು ಅಂಗದ ಮೇಲೆ ಸ್ಥಾಪಿಸಿˌ ಜೀವಾತ್ಮನ ವಾಸಸ್ಥಾನವಾದ ದೇಹವನ್ನು ಪರಮಾತ್ಮನ ಮಹಾಮನೆಯನ್ನಾಗಿ ಮಾಡಿದರು ಬಸವಣ್ಣನವರು ಎಂದು ಜಗತ್ತಿನ ವೈಜ್ಞಾನಿಕ ಪೂಜಾ ವಿಧಾನದ ಅವಿಷ್ಕಾರವನ್ನು ಅಲ್ಲಮರು ವರ್ಣಿಸುತ್ತಾರೆ. ಲಿಂಗಧಾರಣೆಯ ಕಾರಣದಿಂದ ಭಕ್ತನ ಕಾಯ ದೈವೀಕರಣಗೊಂಡು ಮಹಾಮನೆಯಾದ ಪರಿಣಾಮವಾಗಿ ನಾನು, ನನ್ನದೆಂಬ ಭ್ರಮೆಗಳು ನಷ್ಟವಾದವು ಎನ್ನುತ್ತಾರೆ. ಮೂಳೆˌ ಮಾಂಸಗಳಿಂದ ರಚನೆಯಾದ ದೇಹದ ಸುಂದರ ವರ್ಣನೆ ಇಲ್ಲಿದೆ. ಈ ಮಹಾಮನೆ ಎಂಬ ದೇಹಕ್ಕೆ ಒಂದು ಕಂಬˌ ಆರು ತೊಲೆˌ ಮೂವತ್ತಾರು ಜಂತೆವಲಗೆಗಳಿದ್ದುˌ ಅದು ಲಿಂಗತತ್ವದ ಆಧಾರದಲ್ಲಿ ಪೃಥ್ವಿˌ ಅಪ್ಪು ˌತೇಜˌ ವಾಯು, ಆಕಾಶˌ ಆತ್ಮಗಳೆಂದು ಆರು ಉಪ ತತ್ವಗಳನ್ನು ಪ್ರತಿನಿಧಿಸುತ್ತದೆ. ಈ ಆರು ಉಪ ತತ್ವಗಳಿಂದ ಪಂಚ ಜ್ಞಾನೇಂದ್ರಿಯಗಳುˌ ಪಂಚ ತನ್ಮಾತ್ರೆಗಳು, ಪಂಚ ಕರ್ಮೇಂದ್ರಿಯಗಳು ಮತ್ತು ಅವುಗಳ ತನ್ಮಾತ್ರೆಗಳು, ನಾಲ್ಕು ಅಂತಃಕರಣಗಳು ಹಾಗೂ ಜೀವಾತ್ಮ, ಹತ್ತು ವಿದ್ಯಾತತ್ವಗಳು ಸೇರಿ ಒಟ್ಟು ಮುವತ್ತಾರು ತತ್ವಗಳಿಂದ ಈ ದೇಹವೆಂಬ ಮಹಾಮನೆಯ ಸ್ಥೂಲ ಮತ್ತು ಸೂಕ್ಷ್ಮ ರಚನೆಯನ್ನು ವಿವರಿಸುತ್ತಾರೆ. ಧರೆ ಮತ್ತು ಆಕಾಶವನ್ನು ಬೆಸೆಯುವ ಕೆಸರಗಲ್ಲಿನಂತೆ ಆರು ಹಂತಗಳ ಷಟ್ ಚಕ್ರವೆಂಬ ಕೆಸರುಗಲ್ಲು ಅಂಗ ಮತ್ತು ಲಿಂಗತತ್ವಗಳನ್ನು ಸಂಯೋಗಗೊಳಿಸುತ್ತದೆ.
ಈ ಮಹಾಮನೆ ಎಂಬ ದೇಹವು ನವರಂಧ್ರಗಳನ್ನು ಹೊಂದಿದ್ದುˌ ಸದಾ ಜಾಗೃತವಾಗಿರುವ ಅರಿವೆಂಬ ಒಳಗಣ್ಣಿನ ಮೂಲಕ ಬಾಹ್ಯ ಲೌಕಿಕ ವಿಷಯಗಳನ್ನು ಒಳ ಪ್ರವೇಶಿಸದಂತೆ ನಿಷೇಧಿಸಿದೆ.
ಯೋಗ ಮತ್ತು ಆಧ್ಯಾತ್ಮ ಸಾಧನೆಯ ಮಹತ್ವದ ಮಜಲುಗಳಾದ ಸುಷುಮ್ನ ನಾಡಿˌ ಅದರ ತುತ್ತ ತುದಿಯಲ್ಲಿರುವ ಸಹಸ್ರಾರವೆಂಬಲ್ಲಿ ಸದಾ ಶುದ್ಧಜ್ಞಾನವು ನೆಲೆಗೊಂಡಿದ್ದು ಅದರ ಅನುಭವವು ಅಂತರ್ಮುಖಿಗೆ ಗೋಚರಿಸುವುದು, ಬಹಿರಂಗ ವ್ಯಾಪಾರಿಗೆ ಕಾಣಲಾರದು. ಹತ್ತು ತರಹದ ವಾಯುಗಳು ಸತತ ಕಾರ್ಯನಿರತವಾಗಿದ್ದು ಇದಕ್ಕೆ ಪೂರಕವಾಗಿ ಸೂರ್ಯ ಮತ್ತು ಚಂದ್ರ ನಾಳಗಳು ಉಚ್ಛ್ವಾಸ ಮತ್ತು ನಿಶ್ವಾಸಗಳ ಮೂಲಕ ನಿರಂತರ ಉಸಿರಾಟದಲ್ಲಿ ನಿರತವಾಗಿವೆ. ಅಂಗದ ಅನುಭವವನ್ನು ಲಿಂಗಾನುಭಾವವಾಗಿ ಮಾರ್ಪಡಿಸುವಲ್ಲಿ ಇಚ್ಛಾˌ ಜ್ಞಾನˌ ಕ್ರಿಯಾˌ ಆದಿˌ ಪರಾ ಮತ್ತು ಚಿಚ್ಛಕ್ತಿಗಳು ನಿರತವಾಗಿರುವವು. ನಿಭ್ರಾಂತಿ ಎಂಬ ಅಡ್ಡಣಿಗೆಯ ಮೇಲೆ ಪಂಚೀಕರಣಗೊಂಡ ತನುವಿನ ಪ್ರಸಾದ ಮಹಾಲಿಂಗವೆಂಬ ದೇವರು ಭಕ್ಷಿಸಲು ಸಕಲ ಕರಣೇಂದ್ರಿಯಗಳು ಆ ಮಹಾಪ್ರಸಾದದ ಧನಾತ್ಮಕ ಪರಿಣಾಮದ ಮೂಲಕ ಜೀವಾತ್ಮವು ದೇವಾತ್ಮವಾಗಿˌ ಅಂಗವೇ ಲಿಂಗವಾಗಿ ಆ ದೇವನು ವಾಸಿಸುವ ನಿಶ್ಚಿಂತ ನಿಜನಿವಾಸವಾಯಿತು ನೋಡಾ ಸಿದ್ಧರಾಮಯ್ಯ ಎಂದು ಬಸವಣ್ಣನವರ ಲಿಂಗಾಂಗ ಸಾಮರಸ್ಯ ಪರಿಕಲ್ಪನೆಯ ಅತ್ಯುನ್ನತ ಆಧ್ಯಾತ್ಮ ಸಾಧನೆಯ ಮಹಾಮನೆಯ ಕುರಿತು ಸಿದ್ಧರಾಮೇಶ್ವರರಿಗೆ ಅಲ್ಲಮರು ವಿವರಿಸುವ ಈ ವಚನ ಅತ್ಯಂತ ಸಂಕೀರ್ಣ ಮತ್ತು ಜಟಿಲವಾದ ಹೋಲಿಕೆಗಳಿಂದ ರಚನೆಯಾಗಿದೆ.
ಇದೇ ರೀತಿ ಶಿವಶರಣ ಆದಯ್ಯನವರ ಬೆಡಗಿನ ವಚನಗಳು ನಿಗೂಢ ಅರ್ಥ ಮತ್ತು ಬೆಡಗಿನ ಶಬ್ದ ಪ್ರಯೋಗಗಳಿಂದ ವಚನ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಮೇಲ್ನೋಟಕ್ಕೆ ಅತ್ಯಂತ ಸರಳವಾಗಿ ಗೋಚರಿಸುವ ಈ ಬೆಡಗಿನ ವಚನಗಳು ಬಹಳ ಸಂಕೀರ್ಣವಾದ ಅರ್ಥವಿವರಣೆಗಳನ್ನು ಹೊಂದಿದ್ದುˌ ಇಂಥ ಬೆಡಗಿನ ವಚನಗಳಿಗೆ ಟೀಕುಗಳನ್ನು ಬರೆಯಲು ವಿಶೇಷ ವಿದ್ವಾಂಸರ ಅಗತ್ಯವಿರುತ್ತದೆ. ಶಿವಶರಣ ಆದಯ್ಯನವರ ಅಂಥ ಒಂದು ವಚನ:
“ಕೊಡಗೂಸಿಂಗೆ ಕಡುಬೇನೆಯಾದುದ ಕಂಡೆˌ
ಹಡದಿರ್ದ ಶಿಶುವ ಕೊಡಗೂಸು ನುಂಗಿದ ಕಂಡೆˌ
ಹಿಡಿದಿರ್ದ ಕೋಳಿ ಒಡನುಂಬುದ ಕಂಡೆˌ
ಒಡನಿರ್ದ್ದನಿಲ ಬಿಡುಮುತ್ತಾದುದ ಕಂಡೆˌ
ಕೊಡನೊಳಗೊಂದು ಕಡೆಯಿಲ್ಲದ ರತ್ನವ ಕಂಡೆˌ
ಸೌರಾಷ್ಟ್ರ ಸೋಮೇಶ್ವರನ ನೆಡೆವಿಡವಿಲ್ಲದಿಪ್ಪ ಬೆಡಗ ಕಂಡೆ.”
ಇದರ ಭಾವಾರ್ಥ ಹೀಗಿದೆ:
ಕೊಡಗೂಸಿಂಗೆ ಕಡುಬೇನೆಯಾದುದ ಕಂಡೆ- ಕೊಡಗೂಸೆಂಬ ಸುಜ್ಞಾನೋದಯವಾದ ಶರಣ ಸತಿಗೆ ಪರಶಿವ ತತ್ವದಲ್ಲಿ ಬೆರೆಯಬೇಕೆಂಬ ತೂರ್ಯಾವಸ್ಥೆಯನ್ನು ಬಲ್ಲೆ.
ಹಡದಿರ್ದ ಶಿಶುವ ಕೊಡಗೂಸು ನುಂಗಿದ ಕಂಡೆ- ಈ ರೀತಿ ತೂರ್ಯಾವಸ್ಥೆಯಲ್ಲಿ ಮುದಗೊಂಡ ಭಕ್ತಿಯಿಂದ ಉಪಾವಸ್ಥೆಯ ಮಾಡುತಿದ್ದ ಶರಣ ಸತಿಯ ಆತ್ಮ ಅಂತರ್ಗತವಾಗಿರುವ ಚಿತ್ ಪ್ರಭಾಲಿಂಗವೆ ಗುರು ಮುಖದಿಂದ ಬಹಿಷ್ಕರಿಸಿ ಇಷ್ಟಲಿಂಗ ಸ್ವರೂಪವಾಗಿ ಮೂರ್ತಿಗೊಂಡುˌ ಆ ಸತ್ಕ್ರೀಯಾಲಿಂಗವನ್ನು ಚಿತ್ ಸ್ವರೂಪನಾದ ಶರಣ ತನ್ನ ಸುಜ್ಞಾನ ಪ್ರಕಾಶದಲ್ಲಿ ಅವಗ್ರಹಿದ್ದನ್ನು ಬಲ್ಲೆ.
ಹಿಡಿದಿರ್ದ ಕೋಳಿ ಒಡನುಂಬುದ ಕಂಡೆ -ಈ ಚಿದ್ರೂಪನಾದ ಶರಣನ ಸುಜ್ಞಾನ ಪ್ರಕಾಶದಲ್ಲಿ ಸಂಬಂಧವಾದ ಸತ್ ಪ್ರಣವ ಲಿಂಗವು ಷಡೇಂದ್ರಿಯಗಳಲ್ಲಿ ಷಡ್ವಿಧಲಿಂಗವಾಗಿˌ ಷಡ್ವಿಧ ಪಧಾರ್ಥವ ಕೈಗೊಂಡುದನ್ನು ಬಲ್ಲೆ.
ಒಡನಿದ್ದನಿಲ ಬಿಡುಮುತ್ತಾದುದ ಕಂಡೆ- ಇಂತಪ್ಪ ಮುಕ್ತಿಸ್ವರೂಪನಾದ ಶರಣನ ಅಂತರಂಗದೊಳಗಿದ್ದ ಅಜ್ಞಾನವು ಸುಜ್ಞಾನ ಪ್ರಕಾಶದಿಂದ ನಿವೃತ್ತಿಯಾಗುವುದನ್ನು ಬಲ್ಲೆ.
ಕೊಡನೊಳಗೊಂದು ಕಡೆಯಿಲ್ಲದ ರತ್ನವ ಕಂಡೆ- ಆ ಮುಕ್ತಿಸ್ವರೂಪನಾದ ಶರಣನ ಚಿದ್ ಭಂಡಾರದಲ್ಲಿ ವೇದಾಗಮಂಗಳಿಗೆ ಅತೀತವಾದ ಚಿತ್ ಪ್ರಭಾವಲಿಂಗವು ಮೂರ್ತಿಗೊಂಡಿಹುದನ್ನು ಸುಜ್ಞಾನ ದೃಷ್ಟಿಯಿಂದ ಬಲ್ಲೆ.
ಸೌರಾಷ್ಟ್ರ ಸೋಮೇಶ್ವರನ ನೆಡೆವಿಡವಿಲ್ಲದಿಪ್ಪ ಬೆಡಗ ಕಂಡೆ- ಇಂತು ಸರ್ವಾಂಗವು ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಸಮರಸವಾದ ಶರಣಂಗೆˌ ಶರಣ-ಲಿಂಗವೆಂಬ ಭೇದ ಭಾವವಿಲ್ಲದ ಪರಿ ಚೋದ್ಯ ಎಂದರಿದೆ ಎಂಬುದು ಅರ್ಥ.
ಅಲ್ಲಮ ಮತ್ತು ಆದಯ್ಯನವರ ತಲಾ ಒಂದು ವಚನವನ್ನು ನಾನು ಇಲ್ಲಿ ಸಾಂಕೇತಿಕವಾಗಿ ಉದಾಹರಣೆ ರೂಪದಲ್ಲಿ ವಚನ ಸಾಹಿತ್ಯದ ಸಂಕೀರ್ಣತೆಯನ್ನು ವಿವರಿಸಲು ಬಳಸಿಕೊಂಡಿದ್ದೇನೆ. ಅಲ್ಲಮ ಮತ್ತು ಇನ್ನೂ ಅನೇಕ ವಚನಕಾರರ ಸಾಕಷ್ಟು ವಚನಗಳು ಓದುಗನಲ್ಲಿ ಕುತುಹಲ ಮೂಡಿಸುವ ಸೃಷ್ಟಿ ರಹಸ್ಯದ ವಿಷಯಗಳನ್ನೊಳಗೊಂಡಿದ್ದು, ವಚನ ರಚನೆ ಕೂಡಾ ತುಂಬಾ ಸಂಕೀರ್ಣವಾಗಿವೆ. ಬಸವಣ್ಣನವರ ಷಟಸ್ಥಲದ ವಚನಗಳೂ ಇಂಥದ್ದೇ ಸಂಕೀರ್ಣ ವಸ್ತು ಮತ್ತು ರಚನೆಯನ್ನು ಹೊಂದಿವೆ. ಶರಣರು ಬಸವಣ್ಣನವರ ಪ್ರಭಾವದಿಂದಾಗಿ ಸ್ವತಂತ್ರವಾಗಿ ಚಿಂತಿಸುವ ಶಕ್ತಿ ಪಡೆದು ಅಗಾಧ ಜ್ಞಾನ ಸಂಪಾದಿಸಿ ವಚನಗಳ ರಚನೆಗಿಳಿದದ್ದು ಸಾಮಾನ್ಯವಾದ ವಿಷಯವಲ್ಲ. ಈ ಶರಣ ಸಂಕುಲವೆಲ್ಲ ದುಡಿವ ವರ್ಗದ ವಿಭಿನ್ನ ಕಾಯಕಗಳ ಹಿನ್ನೆಲೆಯನ್ನು ಹೊಂದಿದ್ದು, ವಿದ್ಯೆ ಪಡೆದ ಪ್ರಥಮ ಪೀಳಿಗೆಯವರಾಗಿಯೂ ಈ ತರಹದ ಗಂಭೀರವಾದ ವಚನ ಸಾಹಿತ್ಯ ರಚನೆ ಮಾಡಿದ್ದು ಕನ್ನಡಿಗರು ಹೆಮ್ಮೆಪಡುವ ವಿಷಯವೇ ಸರಿ.
Comments 2
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.ಮಂಡ್ಯ ಜಿಲ್ಲೆ.
Feb 5, 2022ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಚಡ್ಯ ಜಿಲ್ಲೆ
Jan 21, 2024ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com