Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಚನ – ಸಾಂಸ್ಕೃತಿಕ ತಲ್ಲಣಗಳು
Share:
Articles November 1, 2018 ಡಾ. ನಟರಾಜ ಬೂದಾಳು

ವಚನ – ಸಾಂಸ್ಕೃತಿಕ ತಲ್ಲಣಗಳು

ವಚನಗಳನ್ನು ಏಕೆ ಓದುತ್ತಿದ್ದೇವೆ ಮತ್ತು ಹೇಗೆ ಓದುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನು ಇದಿರಾಗದೆ ಗತ್ಯಂತರವಿಲ್ಲ. ವಚನಗಳನ್ನು ಓದುವವರೆಲ್ಲ ಅದರ ಅನುಸಂಧಾನಕ್ಕೆ, ಪಾಲನೆಗೆ ಅಥವಾ ಅನ್ವಯಿಸಿಕೊಳ್ಳುವುದಕ್ಕೆ ಓದುತ್ತಾರೆ ಎಂದೇನಿಲ್ಲ. ವಚನಗಳು ಒಂದು ಸಾಂಸ್ಕೃತಿಕ ಆಕರ. ಹಾಗಾಗಿ ಅದಕ್ಕೊಂದು ಶಕ್ತಿಯಿದೆ. ಅದನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಅನೇಕ ಶಕ್ತಿ ಕೇಂದ್ರಗಳು ಈಗ ವಚನಗಳನ್ನು ನಿಯಂತ್ರಿಸುತ್ತಿವೆ. ವಚನ ಕಟ್ಟಿ ಬಾಳಿದ ವಚನಕಾರರು ಇದನ್ನೇನೂ ನಿಯಂತ್ರಿಸಲಾರರು. ಇಡಿಯಾಗಿ ವಚನಸಾಹಿತ್ಯವನ್ನು ಷಟ್‍ಸ್ಥಲವೋ, ಗುರುಲಿಂಗಜಂಗಮ ತ್ರೈವಿಧ್ಯವೋ, ಕುರುಹನ್ನು ಹಿಡಿದು ಕುರುಹ  ದಾಟುವ ಲಿಂಗಾಯತವೋ – ಇಂತಹ ಒಂದು ಓದಿಗೆ ಸೀಮಿತಗೊಳಿಸಲಾಗದು.

ವಚನಗಳನ್ನು ವಚನ ಚಳವಳಿಯನ್ನು ಓದುವ ಪರಿಭಾವಿಸುವ ಅನೇಕ ಮಾದರಿಗಳು ನಮ್ಮ ನಡುವೆ ಇವೆ. ವಚನಗಳನ್ನು ಓದಿ ವ್ಯಾಖ್ಯಾನಿಸುವ ಒಂದು ದೀರ್ಘವಾದ ಸಂಪ್ರದಾಯವೇ ಇದೆ.  ಈ ಹೊತ್ತಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ತಾತ್ವಿಕ ತುರ್ತುಗಳಿಗೆ ದಂದುಗಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಓದಬೇಡಿ ಅಂದಿನ ಸಂದರ್ಭದಲ್ಲಿಯೇ ಇಟ್ಟು ಓದಿ ಎನ್ನುವ ಒತ್ತಾಯಗಳೂ ಇವೆ. ಆದರೆ ನನಗೆ ವಚನ ಮತ್ತು ವಚನ ಚಳವಳಿ ಒಂದು ಸಾಂಸ್ಕೃತಿಕ ವಸಾಹತುಶಾಹಿಯ ವಿರುದ್ಧ ನಡೆದ ಸ್ವಾಂತಂತ್ರ್ಯ ಚಳವಳಿಯಂತೆಯೇ ಗೋಚರಿಸುತ್ತದೆ.  ಏಕೆಂದರೆ ಅದೇ ಸಾಂಸ್ಕೃತಿಕ ವಸಾಹತುಶಾಹಿಯ ಅಡಿಯಲ್ಲಿಯೇ ಇಂದಿಗೂ ಈ ನೆಲ ನಲುಗುತ್ತಲೇ ಇದೆ.  ಈ ನಾಡಿಗೆ ಸ್ವಾಂತಂತ್ರ್ಯೋತ್ತರ ಕಾಲವೆನ್ನುವುದು ಇಂದಿಗೂ ಪ್ರಾಪ್ತವಾಗಿಲ್ಲದೇ ಇರುವುದರಿಂದ ವಚನಗಳು ಮತ್ತು ಆ ಚಳವಳಿ ಈ ಹೊತ್ತಿನ ಅಗತ್ಯವಾಗಿಯೂ ನಮ್ಮ ಕಣ್ಣೆದುರಿಗೆ ಇದೆ.

ನಮ್ಮದು ಸುಮಾರು ಮೂರ್ನಾಲ್ಕು ಸಾವಿರ ವರುಷಗಳ ಸಾಂಸ್ಕೃತಿಕ ವಸಾಹತು.  ಈ ದೃಷ್ಟಿಯಿಂದ ನೋಡಿದರೆ ಹನ್ನೆರಡನೆಯ ಶತಮಾನ ಮತ್ತು ಇಪ್ಪತ್ತೊಂದನೆಯ ಶತಮಾನದ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲವೆಂದೇ ಅನ್ನಿಸುತ್ತದೆ.  ವಚನಯುಗದ ಸಾಂಸ್ಕೃತಿಕ ಪಲ್ಲಟಗಳನ್ನು ಕುರಿತು ಮಾತನಾಡುವಾಗ ತಾತ್ವಿಕತೆ ಮತ್ತು ಅನ್ವಯಗಳೆರಡರಲ್ಲಿಯೂ ಉಂಟಾದ ಪ್ರಮುಖ ಪಲ್ಲಟಗಳು ತೀವ್ರವಾದ ತಲ್ಲಣಗಳಿಗೆ ಕಾರಣವಾಗಿವೆ ಎನ್ನುವುದಂತೂ ನಿಶ್ಚಿತ.  ಹಾಗಾಗಿ ಇಂತಹ ಸಂಗತಿಗಳನ್ನು ಇದಿರಾಗುವುದೆಂದರೆ ಗಂಭೀರವಾದ ವಾಗ್ವಾದ ಮತ್ತು ಸಂಘರ್ಷ ಅನಿರೀಕ್ಷಿತವೇನಲ್ಲ.

ನನಗೆ ಕಲ್ಯಾಣವೆನ್ನುವುದು ವಚನವೆನ್ನುವುದು ಒಂದು ಸಂವಿಧಾನ. ಈ ನೆಲದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ತೆಗೆದುಕೊಂಡು ಪರಿಹಾರಕ್ಕಾಗಿ ಕಲ್ಯಾಣದ ಬಾಗಿಲಿಗೆ ಹೋಗುವುದು ಇಲ್ಲಿಯ ಜಾಯಮಾನ. ಇಂದಿಗೂ ಕಲ್ಯಾಣವೆಂದರೆ ಎಲ್ಲರನ್ನೂ ಅಪ್ಪಿ ಒಳಗೆ ಕರೆದ ಆವರಣ. ಗಮನಿಸಿ ಕೆಲವು ಕಡೆ ಭಕ್ತರ ಧನ ಬೇಕು, ಭಕ್ತಿ ಬೇಕು, ಹಾಡು ಬೇಕು ಸಂಗೀತ ಬೇಕು ಆದರೆ ನೀಡಿದ ಮನುಷ್ಯ ಬೇಡ. ಹಾಗೆ ಹೊರಗೆ ನಿಲ್ಲಿಸಲ್ಪಟ್ಟವರು ಯಾರು ಎಂದು ಗಮನಿಸಿ. ಅವರೆಲ್ಲ ಹಿಂದೂಗಳಾಗಿದ್ದರೆ? ಈಗಲಾದರೂ ಹಾಗೆ ಅವರನ್ನು (ಅವರನ್ನು ಎನ್ನುವುದಕ್ಕಿಂತ ನಮ್ಮನ್ನು ಎಂದುಕೊಳ್ಳುವುದೇ ಸರಿ) ಹಿಂದೂಗಳೆಂದು ಗುರುತಿಸಿದ್ದಾರಾ? ವ್ಯಕ್ತಿಯನ್ನು ಮೊದಲು ಯಾವ ಜಾತಿ ಎಂದು ಗುರುತಿಸಿ ಅದನ್ನು ಒಪ್ಪಿಕೊಂಡ ಮೇಲಷ್ಟೆ ಧರ್ಮದ ಪ್ರಶ್ನೆ. ಮೊದಲನೆಯದಕ್ಕೆ ನಾವು ಒಪ್ಪಿಗೆ ಕೊಟ್ಟ ಮೇಲೆ ನಮ್ಮನ್ನು ಮುಟ್ಟಬಹುದೆ ಮುಟ್ಟಬಾರದೆ ಒಳಗೆ ಬಿಡಬಹುದೆ ಅಥವಾ ಹೊರಗೆ ನಿಲ್ಲಿಸಬೇಕೆ ಎಂಬುದರ ತೀರ್ಮಾನ.  ಇದು ವಚನ ಚಳವಳಿಯ ಮುಖ್ಯವಾದ ಪಲ್ಲಟ ಮತ್ತು ತಲ್ಲಣದ ಆಯಾಮವಾಗಿರುವುದರಿಂದ ಇಂದಿಗೂ ಅದರ ಪ್ರಸ್ತುತತೆ ಇದೆ ಎನ್ನುವುದು ನಿರ್ವಿವಾದ.

ಹೊರಗಿನ ಈ ವಸಾಹತುಶಾಹಿ ಈ ನೆಲದ ಪ್ರಮುಖ ಅಸ್ಮಿತೆಯ ಮೇಲೆ ಗುರಿಯಿಟ್ಟು ನಡೆಸಿದ ಆಕ್ರಮಣದ ನಿಲುವುಗಳನ್ನು ಗಮನಿಸಿದರೆ ಇದರ ಒಳ ಹೊರಗುಗಳು ಅರಿವಿಗೆ ಬರುತ್ತವೆ. ವಸಾಹತುಶಾಹಿಯ ಆಕ್ರಮಣಕಾರಿ ನಿಲುವುಗಳು ಮತ್ತು ಅದಕ್ಕೆ ಶರಣರು ತೋರಿದ ಪ್ರತಿಕ್ರಿಯೆಯೇ ಈ ಮಾತುಕತೆಯ ಮುಖ್ಯ ಆಯಾಮ.

ವರ್ಣಾಶ್ರಮದ ಹೇರಿಕೆ:
ಈ ಹೊತ್ತಿಗೂ ಭಾರತದ ಬದುಕನ್ನು ನಿಯಂತ್ರಿಸುತ್ತಿರುವ ಸಾಂಸ್ಕೃತಿಕ ಸಂವಿಧಾನವೆಂದರೆ ಋಗ್ವೇದದ ಹತ್ತನೆಯ ಮಂಡಲದ ತೊಂಭತ್ತನೆಯ ಸೂತ್ರವಾದ ಪುರುಷ ಸೂಕ್ತವೆ. ಇದನ್ನು ನಾವು ನೀವು ಓದಿರಲಿ ಓದಿಲ್ಲದಿರಲಿ, ಪಾಲನೆಯನ್ನಂತೂ ನಮ್ಮಿಂದ ಮಾಡಿಸಲಾಗುತ್ತಿದೆ.  ಜಾತಿ ಶ್ರೇಣೀಕರಣಕ್ಕೆ ಇದರ ಮೂಲಕ ಪಡೆದ ಒಪ್ಪಿಗೆಯನ್ನು ನಾವು ಇನ್ನೂ ಹಿಂಪಡೆಯಲು ಆಗಿಲ್ಲ. ಅಲ್ಲಲ್ಲೆ ಉದಾಹರಣೆಗೆ ವಚನ ಚಳವಳಿಯಂತಹ ನಡೆಗಳು ಇಂತಹ ಹಿಂಪಡೆಯುವ ಪ್ರಯತ್ನಗಳನ್ನು ಮಾಡಿವೆ. ನಂತರದ ದಿನಮಾನಗಳಲ್ಲಿ ಮತ್ತೆ ಅದನ್ನೆ ಗಟ್ಟಿಗೊಳಿಸಿರುವುದೂ ಉಂಟು. ಕರ್ಣದಲ್ಲಿ ಜನಿಸಿದವರುಂಟೆ ಎಂದು ಕಟುವಾಗಿ ಪ್ರಶ್ನಿಸಿದ ವಚನವನ್ನೇ ನಾನು ಮುಂದುಮಾಡುತ್ತಿದ್ದೇನೆ.

ಗೋತ್ರ ನಾಮವ ಬೆಸಗೊಂಡಡೆ
ಮಾತು ನೂಕದೆ ಸುಮ್ಮನಿದ್ದಿರೇನಯ್ಯಾ?
ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ?
ಗೋತ್ರನಾಮ, ಮಾದಾರ ಚೆನ್ನಯ್ಯ
ಡೋಹರ ಕಕ್ಕಯ್ಯನೆಂಬುದೇನು ಕೂಡಲ ಸಂಗಯ್ಯಾ.

ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬವನ ಕುಲವೇನೋ!
ದೇವಾ ನೀನೊಲಿದವನ ಸ್ವಾಮೀ ನೀ ಹಿಡಿದವನ ಕುಲವೇನೋ!
ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ
ನಿಮ್ಮಿಂದಧಿಕ ಕೂಡಲಸಂಗಮದೇವಾ.

ವೇದದವರನೊಲ್ಲದೆ ನಮ್ಮ ಮಾದಾರ ಚೆನ್ನಯ್ಯಂಗೊಲಿದ
ಶಾಸ್ತ್ರದವರನೊಲ್ಲದೆ ನಮ್ಮ ಶಿವರಾತ್ರಿಯ ಸಂಕಣ್ಣಂಗೊಲಿದ
ಆಗಮದವರನೊಲ್ಲದೆ ನಮ್ಮ ತೆಲುಗು ಜೊಮ್ಮಯ್ಯಂಗೊಲಿದ
ಪುರಾಣಕರ್ಮಿಗಳೆಂಬ ವಿಶಿಷ್ಟ ಬ್ರಹ್ಮರನೊಲ್ಲದೆ ಉದ್ಭಟಯ್ಯಂಗೊಲಿದ
ಅಣ್ಣ ಕೇಳಾ ಸೋಜಿಗವ
ದಾಸ ದುಗ್ಗಳೆಯರಿಗೊಲಿದ ಮುಕ್ಕಣ್ಣ ಸೊಡ್ಡಳ
ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡನು.

ವಚನಗಳ ಓದನ್ನು ನಿಯಂತ್ರಿಸುವ ಸಂಪಾದನಾ ರಾಜಕಾರಣವೊಂದು ನಮ್ಮಿಂದ ವಚನಗಳನ್ನು ನಿರ್ದಿಷ್ಟವಾದ ಕ್ರಮದಲ್ಲಿಯೇ ಓದಲು ಒತ್ತಾಯಿಸುವ ಮತ್ತು ಅಂತಹ ಓದಿಗೆ ಒಂದು ರೀತಿಯ ಒಪ್ಪಿಗೆಯನ್ನು ಉತ್ಪಾದಿಸಿಕೊಂಡಿದೆ. ಇದನ್ನು ದಾಟಿ ವಚನಗಳನ್ನು ನೋಡದ ಹೊರತು ನಮಗೆ ಭಿನ್ನ ನೋಟಗಳು ದೊರಕಲಾರವು. ಮೊದಲನೆಯದಾಗಿ ವಚನಗಳ ಓದಿನ ಶ್ರೇಣೀಕರಣವನ್ನು ಮುರಿಯದ ಹೊರತು ಮತ್ತು ವಚನಗಳನ್ನು ಸಮಾನಾಂತರ ಕ್ರಮದಲ್ಲಿ ಓದದ ಹೊರತು ಇಂತಹ ಹೊಸ ವಿಸ್ತರಣೆಗಳು ನಮಗೆ ದೊರಕಲಾರವು. ವಚನ ಚಳವಳಿಯ ಸಮಸ್ತ ಏಳುಬೀಳುಗಳನ್ನು ಅಲ್ಲಮನ ಮೂಲಕ, ಮಾದಾರ ಧೂಳಯ್ಯ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಕನ್ನಡಿ ಕಾಯಕಯ ಅಮ್ಮಿದೇವ, ಸೊಡ್ಡಳ ಬಾಚರಸರ ಮೂಲಕ, ಹೆಂಡದ ಮಾರಿತಂದೆ, ಅಂಬಿಗರ ಚೌಡಯ್ಯ ಮುಂತಾದವರ ಮೂಲಕ ಗ್ರಹಿಸುವ ಓದುಗಳನ್ನು ಇದಿರಾಗಬೇಕಾಗಿದೆ.

ಹೊರಗೆ ನಿಂತವರನ್ನೆಲ್ಲ ಕರೆದು ಮಾತನಾಡಿಸಿದ್ದು ನಿಜವಾಗಿ ವಚನ ಚಳವಳಿಯ ಘನತೆಯ ಪ್ರತೀಕ. ಹಾಗೆಂದ ಮಾತ್ರಕ್ಕೆ ಅವರು ಪ್ರತಿಪಾದಿಸಿದ ತಾತ್ವಿಕ ನಿಲುವುಗಳಿಗೂ ಮಾನ್ಯತೆ ದೊರಕಿತೆ? ಎನ್ನುವುದು ಕೂಡ ಅಷ್ಟೇ ಗಂಭೀರವಾಗಿ ಚರ್ಚಿಸಬೇಕಾದ ಸಂಗತಿ. ಮಾದಾರ ಚೆನ್ನಯ್ಯ, ಹೊಲೇರ ಹೊನ್ನಪ್ಪ, ಅಂಬಿಗರ ಚೌಡಯ್ಯ, ವಡ್ಡರ ಸಿದ್ಧರಾಮ, ಒಕ್ಕಲಿಗರ ಮುದ್ದಣ್ಣ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ಕುಂಬಾರ ಗುಂಡಯ್ಯ, ಗಾಣಿಗರ ದಾಸಯ್ಯ, ಕುರುಬರ ಬೀರಯ್ಯ, ದೊಂಬರ ಕ್ಯಾತಯ್ಯ, ಹಗ್ಗ ನುಲಿಯೋ ಚಂದಯ್ಯ, ಹೆಂಡದ ಮಾರಿತಂದೆ, ಕನ್ನದ  ಮಾರಿತಂದೆ ಇವರ ತಾತ್ವಿಕತೆಗೆ ಕಲ್ಯಾಣದೊಳಕ್ಕೆ ಪ್ರವೇಶ ಸಿಕ್ಕಿತೆ? ಸಿಕ್ಕಿದ್ದರೆ ಮಂಟೇದಲ್ಲಮ ಗುರುವು ಕಲ್ಯಾಣವನ್ನು ತೊರೆದು ಮಾದರ ಕೇರಿಗೆ ತಾನೂ ಹೋದುದಲ್ಲದೆ, ಬಸವಣ್ಣ ನೀಲಾಂಬಿಕೆಯರನ್ನು ಕರೆತರಬೇಕಿತ್ತೆ? ಈ ಕೆಳಜಾತಿಯ ವಚನಕಾರರನ್ನು ತತ್ವಶಾಸ್ತ್ರದ ಪ್ರಧಾನಧಾರೆಗಳಾಗಲೀ ಕಿರುಧಾರೆಗಳಾಗಲೀ ಅಷ್ಟೇ ಏಕೆ ಸ್ವತಃ ವಚನ ಪಂಥಿಗಳೇ ತಿರುಗಿ ನೋಡುವುದಿಲ್ಲ.

ಸಂಪಾದನಾಕಾರರು ಅಲ್ಲಮನನ್ನು ಕೇಂದ್ರದಲ್ಲಿರಿಸಿಕೊಂಡು ಸಂಪಾದನೆಯನ್ನು ಓದನ್ನು ನಡೆಸಿದರೂ ನಂತರದಲ್ಲಿ ಲಿಂಗಾಯಿತ ನಡೆಯಲ್ಲಿ ಆಚಾರದಲ್ಲಿ ಉಳಿದ ಶರಣರೆಂದರೆ ಬಸವಣ್ಣ, ಚೆನ್ನ ಬಸವಣ್ಣ ಮತ್ತು ಸಿದ್ಧರಾಮ ಮಾತ್ರ.  ಅಲ್ಲಮನಾಗಲೀ, ಅಕ್ಕನಾಗಲೀ, ಮಾದಾರ ಧೂಳಯ್ಯನಾಗಲೀ, ಹಡಪದ ಅಪ್ಫಣ್ಣನಾಗಲೀ ಇಲ್ಲ. ಅವರೆಲ್ಲ ಕೇವಲ ವಿಚಾರದಲ್ಲಿ ಇದ್ದಾರೆ ಎನ್ನಲಡ್ಡಿಯಿಲ್ಲ.

ವಚನಕಾರರ ಅತ್ಯಂತ ಪ್ರಮುಖ ನಿಲುವಾದ ಶಬ್ದಪ್ರಮಾಣ ನಿರಾಕರಣೆ (ವೇದೋಪನಿಷತ್ತುಗಳು) ಮತ್ತು ವೈದಿಕ ಆಚರಣೆಗಳ ನಿರಾಕರಣೆಯು  ಇಂದು ಹಿನ್ನೆಲೆಗೆ ಸಂದಿದೆ.  ಹಾಗೆ ಮಾಡಲು ರಾಜಕೀಯ ನಿಲುವುಗಳು ಪರೋಕ್ಷವಾಗಿ ಪ್ರಭಾವಿಸುತ್ತಿವೆ. ಕೆಳಗಿನ ವಚನಗಳು ಕೇವಲ ಓದುಪಠ್ಯಗಳಾಗಿ ನಮ್ಮ ನಡುವೆ ಇವೆ:

ವೇದೋಪನಿಷತ್ತುಗಳೆಂಬ ಪ್ರಮಾಣಗಳ ನಿರಾಕರಣೆ:

ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ
ವೇದ ಘನವೆಂಬೆನೆ? ಪ್ರಾಣಿವಧೆಯ ಹೇಳುತ್ತಿದೆ
ಸ್ಮೃತಿ ಘನವೆಂಬೆನೆ? ಮುಂದಿಟ್ಟು ಅರಸುತ್ತಿದೆ
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ ತ್ರಿವಿಧ ದಾಸೋಹದಲಲ್ಲದೆ ಕಾಣಬಾರದು
ಕೂಡಲಸಂಗಮದೇವನ.

ಆದಿಪುರಾಣ ಅಸುರರಿಗೆ ಮಾರಿ ವೇದಪುರಾಣ ಹೋತಿಂಗೆ ಮಾರಿ
ರಾಮಪುರಾಣ ರಕ್ಕಸರಿಗೆ ಮಾರಿ ಭಾರತ ಪುರಾಣ ಗೋತ್ರಕ್ಕೆ ಮಾರಿ
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲಸಂಗಮದೇವಾ.

ಹೊಲೆಯೊಳಗೆ ಹುಟ್ಟಿ ಕುಲವನರಸುವೆ
ಎಲವೋ ಮಾತಂಗಿಯ ಮಗನೀನು
ಸತ್ತುದನೆಳೆವನೆತ್ತಣ ಹೊಲೆಯ? ಹೊತ್ತು ತಂದು ನೀವು ಕೊಲುವಿರಿ
ಶಾಸ್ತ್ರವೆಂಬುದು ಹೋತಿಂಗೆ ಮಾರಿ ವೇದವೆಂಬುದು ನಿಮಗೆ ತಿಳಿಯದು
ನಮ್ಮ ಕೂಡಲಸಂಗನ ಶರಣರು
ಕರ್ಮವಿರಹಿತರು ಶರಣ ಸನ್ನಿಹಿತರು ಅನುಪಮ ಚಾರಿತ್ರರು
ಅವರಿಗೆ ತೋರಲು ಪ್ರತಿ ಇಲ್ಲವೋ.

ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ
ಮಟ್ಟಿಯನಿಟ್ಟ ದ್ವಿಜರ ಮಾತೇಕೆ?
ಹಗಲುಗಾಣದ ಗೂಗೆ ಇರುಳಾಯಿತ್ತೆಂದಡೆ ಜಗಕ್ಕೆ ಇರುಳಪ್ಪುದೆ ಮರುಳೆ?
ಹೋಮದ ನೆವದಲ್ಲಿ ಹೋತನು ಕೊಂದು ತಿಂಬ ಗೆಲುವದೇನು
ಅನಾಮಿಕರೊಡನಾಡಿ ಕೂಡಲಸಂಗಮದೇವಾ. 

ಅರಿದರಿದು ನಾಲ್ಕು ವೇದ ಹದಿನಾರು ಶಾಸ್ತ್ರ
ಹದಿನೆಂಟು ಪುರಾಣ ಇಪ್ಪತ್ತೆಂಟಾಗಮ
ಇಂತಿವೆಲ್ಲವನೋದಿ ಕೇಳಿ, ಹೋಮವನಿಕ್ಕಿ ಹೋತನ ಕೊಂದು
ತಿಂಬುವುದಾವಾಚಾರದೊಳಗೊ?
ನಮ್ಮ ಕೂಡಲ ಸಂಗಮದೇವಂಗೆ
ಅಧಿದೇವತೆಗಳ ಸರಿಯೆಂಬುವರ ಬಾಯಲ್ಲಿ ಸುರಿಯವೆ ಬಾಲಹುಳಗಳು. 

ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು
ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ
ಇವ ಕುಟ್ಟಲೇಕೆ ಕುಸಕಲೇಕೆ
ಅತ್ತಲಿತ್ತ ಹರಿವ ಮನದ ಶಿರವನರಿದಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ .  (ಅಕ್ಕ ಮಹಾದೇವಿ) 

ವೇದ ಹುಟ್ಟುವುದಕ್ಕೆ ಮುನ್ನವೆ ಓದಿದವರಾರು
ಶಾಸ್ತ್ರ ಹುಟುವುದಕ್ಕೆ ಮುನ್ನವೆ ಕಲಿತವರಾರು
ಪುರಾಣ ಹುಟ್ಟುವುದಕ್ಕೆ ಮುನ್ನವೆ ಕೇಳಿದವರಾರು
ಉತ್ಪತ್ತಿ ಸ್ಥಿತಿ ಲಯಕ್ಕೆ ಮುನ್ನವೆ ನಾನೆಂಬುವರಾರು
ಮನಸಂದ ಮಾರೇಶ್ವರಾ .     (ಮನಸಂದ ಮಾರಿತಂದೆ)

ವೇದ ಪ್ರಮಾಣಲ್ಲ, ಶಾಸ್ತ್ರ ಪ್ರಮಾಣಲ್ಲ
ಶಬ್ದ ಪ್ರಮಾಣಲ್ಲ, ಕಾಣಿಭೋ ಲಿಂಗಕ್ಕೆ
ಅಂಗಸಂಗದ ಮಧ್ಯದಲ್ಲಿದ್ದುದ
ಬೈಚಿಟ್ಟು ಬಳಸಿದ – ಗುಹೇಶ್ವರ, ನಿಮ್ಮ ಶರಣ.  (ಅಲ್ಲಮಪ್ರಭು) 

ವೇದ ವೇಧಿಸಲರಿಯದೆ ಕೆಟ್ಟವು
ಪುರಾಣ ಪೂರೈಸಲರಿಯದೆ ಕೆಟ್ಟವು
ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು
ಹಿರಿಯರು ತಮ್ಮ ತಾವರಿಯದೆ ಕೆಟ್ಟರು
ತಮ್ಮ ಬುದ್ದಿ ತಮ್ಮನೆ ತಿಂದಿತ್ತು; ನಿಮ್ಮನೆತ್ತ ಬಲ್ಲರು ಗುಹೇಶ್ವರ. (ಅಲ್ಲಮಪ್ರಭು) 

ವೇದವೆಂಬುದು ಓದಿನ ಮಾತು
ಶಾಸ್ತ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಠಿ
ತರ್ಕವೆಂಬುದು ತಗರ ಹೋರಟೆ
ಭಕ್ತಿಯೆಂಬುದು ತೋರುಂಬ ಲಾಭ
ಗುಹೇಶ್ವರನೆಂಬುದು ಮೀರಿದ ಘನವು  (ಅಲ್ಲಮಪ್ರಭು)

ವೇದಕ್ಕೆ ಒರೆಯ ಕಟ್ಟುವೆ
ಶಾಸ್ತ್ರಕ್ಕೆ ನಿಗಳನಿಕ್ಕುವೆ
ತರ್ಕದ ಬೆನ್ನ ಬಾರನೆತ್ತುವೆ
ಆಗಮದ ಮೂಗ ಕೊಯಿವೆ
ನೋಡಯ್ಯ ಮಹಾದಾನಿ ಕೂಡಲ ಸಂಗಮದೇವಾ
ಮಾದಾರಚೆನ್ನಯ್ಯನ ಮನೆಯ ಮಗ ನಾನು   (ಬಸವಣ್ಣ)

ಹುಟ್ಟು ಮತ್ತು ಹುಟ್ಟನ್ನಾಧರಿಸಿದ ಸಂಸ್ಕಾರದ ಆರೋಪದಲ್ಲಿ ನೆಲೆಗೊಳಿಸಲಾದ ಗುರುತುಗಳ ಮೂಲಕ ದೇಹವನ್ನು ವಿಭಜಿಸುವಲ್ಲಿ ಈ ಶಬ್ದಪ್ರಮಾಣದ ಕೊಡುಗೆ ವಿಶೇಷವಾದುದು. ಜನಿವಾರ ಅಂತಹ ಗುರುತುಗಳಲ್ಲೊಂದು. ಹರಿಹರನ ಬಸವರಾಜದೇವರ ರಗಳೆಯಲ್ಲಿ ‘ಕರ್ಮಲತೆಯಂತಿದ್ದ ಜನಿವಾರವನ್ನು ಕಿತ್ತೆಸೆಯುವ’ ಸಂಕೇತ ನಿರಾಕರಣೆಯಿದೆ. ಆದರೆ ಈ ಗುರುತಿನ ರಾಜಕಾರಣ ಕೇವಲ ವೈದಿಕಕ್ಕಷ್ಟೇ ಸೀಮಿತವಲ್ಲ. ಬಯಲನ್ನೇ ಧ್ಯಾನಿಸಿದ ಶರಣ ಚಳುವಳಿಯೂ ಈ ಮೋಸಕ್ಕೆ ತುತ್ತಾದುದು ಚಾರಿತ್ರಿಕ ಸತ್ಯ. ಆದರೆ ಸಂಕೇತಗಳ ನಿರಾಕರಣವು ಕನ್ನಡ ವಿವೇಕದ ಸಹಜ ಉದ್ಯೋಗ. ಹಾಗಾಗಿ ಅದು ಇದನ್ನೂ ಸಮರ್ಥವಾಗಿಯೇ ಎದುರಾಗಿದೆ. ಉದಾಹರಣೆಗೆ ವಚನಕಾರರ ಮುಂದುವರಿಕೆಯಂತೆ ಕಂಡೂ ತಾತ್ವಿಕವಾಗಿ ಅದರ ಮುಂದುವರಿಕೆ ಎನಿಸದ ಕೊಡೇಕಲ್ ಬಸವಣ್ಣನ ಪರಂಪರೆಯು “ಮಠೀಯವಾಗುತ್ತಾ, ಮತೀಯವಾಗುತ್ತಾ ಹೋದ ವೀರಶೈವಕ್ಕೆ ಅನುಭಾವಿಗಳು ಕೊಟ್ಟ ಉತ್ತರದಂತೆ”( ರಹಮತ್ ತರೀಕೆರೆ: ಕರ್ನಾಟಕದ ಸೂಫಿಗಳು, ಪು.85) ಲಿಂಗಧಾರಣ ಆಚರಣೆಯನ್ನೇ ನಿಷ್ಠುರ ವಿಮರ್ಶೆಗೆ ಒಳಪಡಿಸುತ್ತದೆ. ಮಂಟೇಸ್ವಾಮಿ ಕಾವ್ಯದಲ್ಲಂತೂ ಈ ಸಂಕೇತ ನಿರಾಕರಣೆ ಇನ್ನೂ ನಿಷ್ಠುರವಾಗಿದೆ. ಅಲ್ಲಿ ಧರೆಗೆ ದೊಡ್ಡೋರಾದ ಮಂಟೇದಲ್ಲಮನ ಕಲ್ಯಾಣ ಪ್ರವೇಶವೇ, ‘ಏನೀ ಬಸವಣ್ಣ, ಕೋಳೀಗ್ ಲಿಂಗ, ಕೋತೀಗ್ ಲಿಂಗ, ನಾಯಿಗೆ ಲಿಂಗ, ನರೀಗ್ ಲಿಂಗ. ಸಿಕ್ಕಸಿಕ್ಕದವ್ರಿಗೆಲ್ಲಾ ಲಿಂಗ ಕಟ್ಕೊಂಡ್ ಕಲ್ಯಾಣ ಅಂತ ಮಾಡ್ಕೊಂಡಿದ್ನಲ್ಲಾ ಇದನ್ ನೋಡ್ಬೇಕು ಅಂತ”(ಕೃಪೆ, ನೀಲಗಾರ ಗುರುರಾಜಮೈಸೂರು ಹಾಡಿದ ಮಂಟೇಸ್ವಾಮಿ ಪಠ್ಯ). ಹೀಗೆ ಬಂದ ಮಂಟೇದಲ್ಲಮ ಬಸವಣ್ಣನ ಕಲ್ಯಾಣಕ್ಕೆ ಕೊರಳಲ್ಲ್ ಲಿಂಗ ಇದ್ದವರಿಗಷ್ಟೇ ಪ್ರವೇಶ ಅನ್ನೋ ಸುದ್ದಿ ಕೇಳಿದ್ದೇ ‘ನಿಂತಜಾಗದಲ್ಲೇ ಶರೀರವಾದ ಶರೀರವೇ ಗತನಾತ ಹೊಡೆಯುವ ನೊಣಸೊಳ್ಳೆ ಸೊಂಯ್ಯೋ ಅಂತ ಕಿರುಚ್ತಾ ಇರೋ ಹಂಗೆ, ಕುಷ್ಟ್ರೋಗ ಹಿಡ್ದ್ ಕೀವುರಕ್ತ ಸೋರುವ ಶರೀರವಾಗಿ ನಿಲ್ಲುತ್ತಾನೆ!”. ಲಿಂಗ ಕಟ್ಟೋ ಶರೀರವೇ ಗತನಾತ ಹೊಡೆಯುವ ಶರೀರವಾಗುವ ಈ ಚಿತ್ರಕ್ಕೇ ನಿಲ್ಲದೆ, ಕಾವ್ಯದಲ್ಲಿ ಮಂಟೇದಲ್ಲಮಪ್ರಭೂ ಕಲ್ಯಾಣದಲ್ಲಿ ಮಾಡಿದ ಘನಕಾರ್ಯಗಳೂ ಪ್ರಸ್ತಾಪಿತವಾಗುತ್ತವೆ. ಮುಖ್ಯವಾಗಿ ಕಟ್ಟಿದ್ದ ಲಿಂಗಗಳನ್ನು ಕಳಚಿಸುವುದು, ಲಿಂಗವನ್ನು ಮಾದಿಗರ ಹರಳಯ್ಯನ ಮನೆಯ ಮುಂದಿದ್ದ ಚರ್ಮಹದಮಾಡುವ ಉಗುನಿಗುಂಡಿಯಲ್ಲಿ ತೊಳೆದು ಶುದ್ಧಿ ಮಾಡಿದ್ದು ಮತ್ತು ಕಲ್ಯಾಣದ ಕಲ್ಯಾಣಿಯಲ್ಲಿದ್ದ ಅದೆಷ್ಟೋ ವರ್ಷಗಳ ಕೊಚ್ಚೆ ನೀರನ್ನು ರಂಡುಪುಂಡು ಜಂಗಮರ ಕೈಲಿ ಖಾಲಿ ಮಾಡಿಸಿ ಹೊಸ ಪನ್ನೀರು ಬರುವಂತೆ ಮಾಡಿದ್ದು. ಅದರ ಜೊತೆಗೆ ಕಲ್ಯಾಣಕ್ಕಾಗಮಿಸಿದ ಅಲ್ಲಮಪ್ರಭುವಿನ ಚಿತ್ರವೂ ಶೂನ್ಯಸಂಪಾದನೆಗಿಂತ ಭಿನ್ನವಾಗುತ್ತದೆ. ಶೂನ್ಯಸಂಪಾದನೆಯಲ್ಲಿ ಪ್ರಭು ಕಲ್ಯಾಣಕ್ಕೆ ಬಂದಾಗ ಇದ್ದ ನಿಜ ಶರಣರೆಂದರೆ ಬಸವರಾಜ ದೇವರು, ಹಡಪದಪ್ಪಣ್ಣ, ಸಿದ್ಧರಾಮಯ್ಯದೇವರು, ಚಿಕ್ಕದಣ್ಣಾಯಕ ಚೆನ್ನಬಸವಣ್ಣನವರು, ಸೊಡ್ಡಳ ಬಾಚರಸ, ಕಿನ್ನರ ಬೊಮ್ಮಣ್ಣ ಮುಂತಾದವರು. ಆದರೆ ಮಂಟೇಸ್ವಾಮಿ ಕಾವ್ಯದಲ್ಲಿ ಪರಂಜ್ಯೋತಿ ಮಂಟೇದಲ್ಲಯ್ಯ ಕಲ್ಯಾಣ ಪಟ್ಟಣಕ್ಕೆ ಬಂದಾಗ ನಿಜ ಶರಣರಾದ ಭಗುತಿವುಳ್ಳ ಬಸವಣ್ಣ, ಹೊಲಿಯರ ಹೊನ್ನಪ್ಪ, ಮಾದಿಗರ ಚೆನ್ನಯ್ಯ, ಮಡಿವಾಳ ಮಾಚಪ್ಪ, ಕುಂಬಾರ ಗುಂಡಯ್ಯ, ಗಾಣಿಗರ ದಾಸಯ್ಯ, ಕುರುಬರ ಬೀರಪ್ಪ, ದೊಂಬರ ಕ್ಯಾತಯ್ಯ, ತುರುಕರ ಬೀರಯ್ಯ, ಅಂಬಿಗರ ಚೌಡಯ್ಯ ಹಾಗೂ ಅವರ ಜೊತೆ ಅಂಗಾಲ ಜಡೆಯವರು, ಮುಂಗಾಲ ಜಡೆಯವರು, ರಂಡು ಪುಂಡು ಜಂಗಮರು ಪಿತಿಪಿತಿ ಅನ್ನುತ್ತಿದ್ದರು ಎನ್ನುವ ಮೂಲಕ ಅದು ಅಧಿಕಾರದ ಮುದ್ರೆಯಿರದ ನೆಲಮೂಲದ ಕುಲಗಳನ್ನೆಲ್ಲಾ ಒಂದು ತೆಕ್ಕೆಯಲ್ಲಿ ತಂದುಕೊಳ್ಳುತ್ತದೆ, ಎಂದೂ ಅಧಿಕಾರದ ಜೊತೆಗಿರದ, ಸಂಕೇತದ ಕಷ್ಟವಿರದ, ಆದರೆ ದೇಹಶ್ರಮದ ದಟ್ಟ ಕ್ರಿಯಾಶೀಲತೆಯ ಸಮೂಹವನ್ನು ಕೂಡಿಕೊಳ್ಳುತ್ತದೆ.

ಇಂತಹ ವಚನದ ಓದುಗಳು ಮತ್ತೆ ಮುನ್ನೆಲೆಗೆ ಬರಲು ಸಾಧ್ಯವೆ?

Previous post ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
Next post ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ

Related Posts

ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
Share:
Articles

ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…

June 3, 2019 ಪದ್ಮಾಲಯ ನಾಗರಾಜ್
ಆದಿಮಾವಸ್ಥೆಯ ಕಾಲದಿಂದ ಇಲ್ಲಿಯ ತನಕವೂ ಮನುಷ್ಯನಿಗೆ ವಿಶ್ವಸೃಷ್ಟಿಯ ಮೂಲಕಾರಣವು ಏನಿರಬಹುದು? ಎಂಬ ಪ್ರಶ್ನೆ ಬಹಳವಾಗಿ ಕಾಡಿದೆ. ಬಯಸದೇ ಬಂದಿರುವ ಜೀವಿಗಳ ಹುಟ್ಟು, ಮರಣ, ರೋಗ...
ನೀರಿನ ಬರ ನೀಗುವುದು ಹೇಗೆ?
Share:
Articles

ನೀರಿನ ಬರ ನೀಗುವುದು ಹೇಗೆ?

May 1, 2019 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ನದಿಯ ನೀರು ಹೋದುವಯ್ಯಾ ಸಮುದ್ರಕ್ಕೆ, ಸಮುದ್ರದ ನೀರು ಬಾರವಯ್ಯಾ ನದಿಗೆ. ನಾನು ಹೋದೆನಯ್ಯಾ ಲಿಂಗದ ಕಡೆಗೆ; ಲಿಂಗ ಬಾರದು ನೋಡಯ್ಯಾ ನನ್ನ ಕಡೆಗೆ. ಮಗ ಮುನಿದಡೆ ತಂದೆ...

Comments 17

  1. ಬಸವರಾಜ ಹಂಡಿ
    Nov 2, 2018 Reply

    ವಚನ – ಸಾಂಸ್ಕೃತಿಕ ತಲ್ಲಣಗಳು

    ಡಾ. ನಟರಾಜ ಬೂದಾಳು ಶರಣರು ಬರೆದ ಲೇಖನ ನಮ್ಮ ಮನಸ್ಸನ್ನೇ ತಲ್ಲಣ ಗೋಳುಸುತ್ತದೆ. ಅತಿ ವಿರಳ ದೃಷ್ಟಿಕೋನದಿಂದ ವಚನಗಳನ್ನು ನೋಡಿದ್ದಾರೆ ಹಾಗು ಬೇರೆ ನೆಲೆಯಲ್ಲಿ ನಿಂತು ವಚನಗಳನ್ನು ವಿಶ್ಲೇಷಣೆ ಮಾಡಿದ್ದಾರೆ.
    ಬಹಳಷ್ಟು ವಿಷಯಗಳು ನನ್ನ ಗ್ರಹಿಕೆಗೆ ಬರಲಿಲ್ಲ. ಇನ್ನು 2-3 ಸಲ ಈ ಲೇಖನವನ್ನು ಓದಿ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ.
    ಡಾ. ನಟರಾಜ ಬೂದಾಳು ಶರಣರಗೆ ಶರಣು.

  2. Pro. Mahadev Karadi
    Nov 2, 2018 Reply

    ವಚನಗಳ ಓದನ್ನು ನಿಯಂತ್ರಿಸುವ ರಾಜಕಾರಣ ಯಾವುದೇ ರೂಪದಲ್ಲಿರಲಿ ಅದನ್ನು ತಿರಸ್ಕರಿಸಬೇಕು. ಹೊಸ ದೃಷ್ಟಿಕೋನದ ನೋಟಗಳು ವಚನಗಳಿಗೆ ಸಿಗಬೇಕು. ಆ ಮೂಲಕ ಶರಣರ ಬದುಕಿಗೆ ನ್ಯಾಯ ಒದಗಿಸಬೇಕು. ಸರ್, ನಿಮ್ಮ ವಿಚಾರ ನನಗೆ ಸರಿ ಎನಿಸಿತು.

  3. Dr. Mallikarjuna
    Nov 3, 2018 Reply

    ಭಾರತದ ಮೇಲೆ ತನ್ನ ಅಂಕುಶವನ್ನು ಇವತ್ತಿಗೂ ಇಟ್ಟಿರುವ ವರ್ಣಾಶ್ರಮ ಧರ್ಮಕ್ಕೆ ಸವಾಲಿನ ಹಾಗೆ ಬಂದ ಶರಣ ಚಳುವಳಿ ನಂತರದ ದಿನಗಳಲ್ಲಿ ಗಟ್ಟಿಯಾಗದೇ ಇರುವುದಕ್ಕೆ ಸಮಾಜದ ಒಳಸಂಚುಗಳೇ ಕಾರಣ. ನಿಮ್ಮ ಲೇಖನವನ್ನು ನನ್ನ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿದ್ದೇನೆ. ಪ್ರತಿಯೊಬ್ಬರೂ ಓದಬೇಕಾದ ಲೇಖನ ಇದು.

  4. Mahadevi Karatagi
    Nov 3, 2018 Reply

    ವಚನ ಸಾಹಿತ್ಯವನ್ನು ಧರ್ಮದ ಚೌಕಟ್ಟನ್ನು ದಾಟಿ ನೋಡಬೇಕು ಎನ್ನುವುದು ಸತ್ಯದ ಮಾತು. ಜಾತಿ, ಧರ್ಮಗಳ ಗೊಂದಲ, ಗೋಜಲುಗಳು ಮುಕ್ತವಾದ ಓದನ್ನು ತಡೆಹಿಡಿಯಬಾರದು, ಸರ್ ನಿಮ್ಮ ಲೇಖನ ಬಹಳ ಇಷ್ಟವಾಯಿತು.

  5. navya patil
    Nov 3, 2018 Reply

    ಸಾಂಸ್ಕೃತಿಕ ತಲ್ಲಣಗಳು- ನನ್ನಲ್ಲಿಯೂ ತಲ್ಲಣ ಹುಟ್ಟಿಸಿತು, ಸರ್, ಎಲ್ಲ ಚಳುವಳಿಗಳನ್ನು ಬಲಿ ತೆಗೆದುಕೊಳ್ಳುವ ಧಾರ್ಮಿಕ ರಾಜಕಾರಣ ಇರುವವರೆಗೆ ಪ್ರಗತಿಪರ ವಿಚಾರಗಳಿಗೆ ಉಳಿಗಾಲವಿಲ್ಲ ಈ ದೇಶದಲ್ಲಿ.

  6. Vinay Kanchikere
    Nov 5, 2018 Reply

    ಸಾಂಸ್ಕೃತಿಕ ವಸಾಹತು ಎನ್ನುವ ಶಬ್ದವನ್ನು ಇದೇ ಮೊದಲ ಬಾರಿಗೆ ಕೇಳಿದೆ. ನಿಮ್ಮ ವಿಚಾರಗಳು ಯೋಚನೆಗೆ ಒಡ್ಡಿದವು. ಈ ಕುರಿತು ನೀವು ಮತ್ತೊಂದು ಲೇಖನ ಬರೆಯಿರಿ ಸರ್, ನಿಮ್ಮಿಂದ ತಿಳಿದುಕೊಳ್ಳುವುದು ಬಹಳ ಇದೆ.

  7. Rajeshwari Dambal
    Nov 5, 2018 Reply

    ಜಾತಿಗಳನ್ನು ನಿರಾಕರಣೆ ಮಾಡಿದ ಶರಣರ ಧರ್ಮದಲ್ಲಿ ಇವತ್ತು ಜಾತಿಗಳು ತುಂಬಿದ್ದು ದೊಡ್ಡ ದುರಂತ. ಸುಳ್ಳು ವೈದಿಕ ಆಚರಣೆಗಳು ತುಂಬಿಕೊಂಡಿವೆ, ನಿಜವಾದ ಶರಣರ ಆಶಯಗಳು ಮೂಲೆಗುಂಪಾಗಿವೆ. ಇವನ್ನೆಲ್ಲ ಯೋಚಿಸುವಂತೆ ಮಾಡುತ್ತದೆ ನಿಮ್ಮ ಲೇಖನ, ಥ್ಯಾಂಕ್ಯೂ ಗುರುಗಳೇ.

  8. Dr. Panchakshari hv
    Nov 5, 2018 Reply

    ಮತ್ತೆ ವೈದಿಕ ಆಚರಣೆಗಳು ಮುನ್ನೆಲೆಗೆ ಬಂದಿವೆ. ವೈಚಾರಿಕತೆ ಹಿಂದೆ ಸರಿದಿದೆ. ವಚನಗಳು ಆಚರಣೆಗೆ ಇಳಿಯುತ್ತಿಲ್ಲ, ವಿಚಾರಕ್ಕಷ್ಟೇ ಸೀಮಿತವಾಗಿವೆ.

    ಅರ್ಥವತ್ತಾದ ಲೇಖ‌ನ.

    ಧನ್ಯವಾದಗಳೊಂದಿಗೆ ಶರಣಾರ್ಥಿ.

  9. Devaraj B.S
    Nov 7, 2018 Reply

    ಜಾತಿಹೀನರ ಮನೆಯ ಜ್ಯೋತಿ ಹೀನವೇ?- ಕೆಳ ವರ್ಗದವರನ್ನು ಒಳಗೆ ಸೇರಿಸಿಕೊಳ್ಳಲು ಹಿಂದುಮುಂದು ನೋಡುತ್ತಿರುವ ಈ ಆಧುನಿಕ ಸಮಾಜದಲ್ಲಿ ಜಾತಿ ಶ್ರೇಣೀಕರಣವನ್ನು ತೆಗೆದು ಹಾಕುವುದು ಸಾಧ್ಯವೇ? ಜಾತಿಯ ಬೇರುಗಳು ಇನ್ನೂ ಗಟ್ಟಿಯಾಗುತ್ತಿವೆ, ಧರ್ಮಯುದ್ಧಗಳು ಬೇರೆ ಬೇರೆ ಸ್ವರೂಪ ಪಡೆಯುತ್ತಿವೆ. ಶರಣರಂತೆ ನಾವೂ ಒಂದು ಚಳುವಳಿ ಮಾಡುವುದು ಆಗಲಾರದೇ? ನಿಮ್ಮ ಲೇಖನ ಇಂತಹ ಅನೇಕ ವಿಚಾರಗಳನ್ನು ನನ್ನಲ್ಲಿ ಹುಟ್ಟಿಸಿತು.

  10. pro shivaranjini
    Nov 7, 2018 Reply

    ಜಾತಿ, ಕುಲ, ಧರ್ಮಗಳನ್ನೂ ದಾಟಿದ ವಚನಗಳಿಗೆ ಖಂಡಿತವಾಗಿ ನಿರ್ದಿಷ್ಟ ಓದಿನ ಅಗತ್ಯವಿಲ್ಲ ಸರ್. ಆದಾಗ್ಯೂ ಅವುಗಳನ್ನು ಪಂಗಡಕ್ಕೆ ಕಟ್ಟಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ದೊಡ್ಡ ಅನಾಹುತವಾಗುತ್ತದೆ. ಶರಣರ ಜ್ಞಾನ, ಜೀವನ ಎಲ್ಲರಿಗೂ ಸಿಗಬೇಕಾದುದೇ ನಿಜವಾದ ವಿವೇಕ.

  11. ನಾಗೇಶ ಬಿಡಗಲು
    Nov 8, 2018 Reply

    ಸರ್ ಬಹಳ ಇಷ್ಟವಾದ ಲೇಖನ. ಇಂದಿನ ಸಾಂಸ್ಕೃತಿಕ ರಾಜಕಾರಣದ ಸಂದರ್ಭದಲ್ಲಿ ವಚನಗಳನ್ನ ವಿಭಿನ್ನ ದೃಷ್ಟಿಕೋನದಿಂದ ಓದಬೇಕಿದೆ. ವಚನಚಳುವಳಿಯ ಮಿತಿಗಳನ್ನು, ಅದು ಆಚರಣೆಗೆ ಬರದೆ ಕೇವಲ ಮಠೀಯ ವ್ಯವಸ್ಥೆಯಾಗಿ ಉಳಿದು ಮತ್ತೊಂದು ಬಲವಾದ ಜಾತಿಯಾದದನ್ನು ಮುಂದಿನವರು ನೋಡಿದ್ದು ಎಲ್ಲವನ್ನೂ ಹೊಸ ದೃಷ್ಟಿಯಿಂದ ನೋಡಬೇಕಿದೆ. ವಚನ ಚಳವಳಿ ಒಂದು ವಿಫಲ ಚಳವಳಿಯಾದರೂ ಮತ್ತೆ ಮತ್ತೆ ನಾವು ಅದರತ್ತ ಮುಖಮಾಡಲೇ ಬೇಕಿದೆ,
    ಧನ್ಯವಾದಗಳು ನಟರಾಜ ಬೂದಾಳ ಸರ್

  12. dr.subramanya Swamy
    Nov 9, 2018 Reply

    ಬುದಾಳ್ ರವರು ಬಹಳ ಮೌಲಿಕವಾದ ಓದಿನ ಹಾಗೂ ಇಂದು ವಚನಗಳನ್ನು ಅರ್ಥೈಸಿ
    ಆಳವಡಿಸಿಕೂಳ್ಳಬಹುದಾದ ಮಾರ್ಗದ ಪ್ರಜ್ಞೆಯನ್ನು ಕಟ್ಟಿಕೂಟ್ಟಿದ್ದಿರೆ.

  13. vidhyadhara swamy
    Nov 10, 2018 Reply

    ಯಾವುದೇ ತತ್ವಗಳು ಬಳಕೆಗೆ ಬಂದಾಗಲೇ ಅವುಗಳ ಬೆಲೆ. ಮಾತುಗಳಲ್ಲಿ ಉಳಿಯುವ ತತ್ವಗಳು ಸತ್ವಹೀನವಾಗಿರುತ್ತವೆ. ವಚನ ಯುಗದ ನಂತರದ ದುರಂತಕ್ಕೆ ಇದೇ ಕಾರಣ. ನಿಮ್ಮ ಮಾತುಗಳು ಚಿಂತನ ಯೋಗ್ಯವಾಗಿವೆ- ಸಾಂಸ್ಕೃತಿಕ ತಲ್ಲಣಗಳಿಗೆ ಸಕಾರಣ ಗುರುತಿಸಿದ್ದೀರಿ.

  14. bhanumathi Divyal
    Nov 10, 2018 Reply

    ನೀವು ಯಾವುದನ್ನು ಗುರುತಿನ ರಾಜಕಾರಣ ಎಂದು ಹೇಳಿದ್ದೀರಿ? ವೈದಿಕರನ್ನು ಮಾತ್ರವಲ್ಲ ಬಯಲನ್ನು ಧ್ಯಾನಿಸಿದ ಶರಣರೂ ಈ ಮೋಸಕ್ಕೆ ತುತ್ತಾಗಿದ್ದಾರೆಂದರೆ ಏನು ಅರ್ಥ? ನಿಮ್ಮ ಪ್ರಕಾರ ಇಷ್ಟಲಿಂಗವೂ ಕುರುಹಿನ ರಾಜಕಾರಣವೇ? ದಯವಿಟ್ಟು ಸ್ಪಷ್ಟಪಡಿಸಿ.

  15. ಗಾಣಿಗೇರ ರುದ್ರಪ್ಪ
    Nov 12, 2018 Reply

    ಸರ್, ಲಿಂಗಾಯತದ ನಿಜ ನಡೆ ಹಾಗೂ ಆಚರಣೆಗಳಲ್ಲಿ ಇಂದು ಬಸವಣ್ಣನವರಿಂದ ಹಿಡಿದು ಯಾವ ಶರಣರೂ ಇಲ್ಲ. ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮಯ್ಯ ಇವರಲ್ಲಿ ಒಬ್ಬರನ್ನು ಲಿಂಗಾಯತವು ಸರಿಯಾಗಿ ಹಿಡಿದುಕೊಂಡಿದ್ದರೂ ಸಾಕಿತ್ತು….. ಸನಾತನದ ವಿಚಾರಗಳನ್ನು ಒಳಗೆ ಬಿಟ್ಟುಕೊಂಡ ಲಿಂಗಾಯತದಲ್ಲಿ ಶರಣರು ಇರಲು ಸಾಧ್ಯವೇ?

  16. ಧನಂಜಯ ಗೋಖಲೆ, ಹುಬ್ಬಳ್ಳಿ
    Nov 29, 2018 Reply

    ಲೇಖನ ಆಪ್ತವಾಗಿದೆ, ವಿಚಾರ ಪ್ರಚೋದಿತವಾಗಿದೆ. ಇಂದಿನ ತಲೆಮಾರಿನ ಜನರ ಮುಂದೆ ನಿಜವಾದ ಸಮಸ್ಯಯನ್ನು ನಗ್ನವಾಗಿ, ಆತ್ಮೀಯವಾಗಿ ನಿಲ್ಲಿಸಿದ್ದೀರಿ.
    -ಧನಂಜಯ ಗೋಖಲೆ

  17. NAGESHA B
    Sep 4, 2021 Reply

    ಈ ಲೇಖನವನ್ನು ಎರಡನೇ ಸಲ ಓದುತ್ತುದ್ದೇನೆ. ತುಂಬಾ ಅರ್ಥಪೂರ್ಣವಾದ ಲೇಖನ. ಸಾಂಸ್ಕೃತಿಕ ವಸಾಹತುಶಾಹಿ ಪರಿಕಲ್ಪನೆ ಈ ಸಂಗತಿಗಳನ್ನು ಅರ್ಥೈಸಿಕೊಳ್ಳಲು ನಿಜಕ್ಕೂ ಸಹಾಯಕವಾಗಿದೆ. ಅಲ್ಲಮಪ್ರಭುವಿನ “ಅಜ್ಞಾನವೆಂಬ ತೊಟ್ಟಿಲೊಳಗೆ
    ಜ್ಞಾನವೆಂಬ ಶಿಶುವ ಮಲಗಿಸಿ
    ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ
    ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು
    ಜೋಗುಳ ನಿಂದಲ್ಲದೆ
    ಗುಹೇಶ್ವರನೆಂಬ ಲಿಂಗವ ಕಾಣಬಾರದು”

    ಇಲ್ಲಿ ಬರುವ ಅಜ್ಞನವೆಂಬ ತೊಟ್ಟಿಲು, ವೆದಶಾಸ್ತ್ರವೆಂಬ ನೇಣು, ಭ್ರಾಂತಿಯೆಂಬ ತಾಯಿ ಇವುಗಳೆಲ್ಲ ಆದುನಿಕ ಪೂರ್ವ ಬೌದ್ಧಿಕ ವಸಾಹತುಶಾಹಿಯ ಸ್ವರೂಪವನ್ನೇ ಸೂಚಿಸುತ್ತಿದೆ ಎಂದು ನನ್ನ ಭಾವನೆ. ೨೦೦ ವರ್ಷಗಳ ಆಧುನಿಕ ಬ್ರಿಟೀಷ್ ವಸಾಹತುಶಾಹಿಗಿಂತ ಸಾವಿರಾರು ವರ್ಷಗಳ ವೈದಿಕ ವಸಾಹತುಶಾಹಿಯ ಬಿಗಿಹಿಡಿತ ಇನ್ನೂ ಹೆಚ್ಚಿನದು.
    ಇನ್ನು ಗುರುತಿನ ರಾಜಕಾರಣ ಕುರಿತು ಹೇಳುವುದಾದರೆ: ಚಳವಳಿಯೊಂದಕ್ಕೆ ಬೇಕಾದ ಅಗತ್ಯ ಕಟ್ಟಪಾಡಿನ ರಿತಿಯಲ್ಲಿ ಒಂದಿಷ್ಟು ಗುರುತುಗಳು ಅನಿವಾರ್ಯವಾಗಿದ್ದಂತೆ ತೋರುತ್ತದೆ. ಆದರೆ ಆ ಗುರುತುಗಳನ್ನು ಎಲ್ಲರೂ ಕಡ್ಡಾಯವಾಗಿ ಸ್ವೀಕರಿಸಿರಲಿಲ್ಲವೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆಯಲ್ಲ? ಈ ಕುರಿತು ಮತ್ತಷ್ಟು ಯೋಚಿಸಬೇಕಾಗುತ್ತದೆ. ಚಳವಳಿಯ ಆಶಯಗಳು ನಂತರದಲ್ಲಿ ವಿರೂಪಗೊಂಡಿರುವುದು ನಿಜ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತುತ್ತೂರಿ…
ತುತ್ತೂರಿ…
June 10, 2023
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಲಿಂಗಾಚಾರ
ಲಿಂಗಾಚಾರ
May 6, 2021
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
ಎರವಲು ಮನೆ…
ಎರವಲು ಮನೆ…
August 10, 2023
Copyright © 2025 Bayalu