
ವಚನಗಳ ಮಹತ್ವ
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತುಂಬಾ ವಿಶೇಷ ಸ್ಥಾನ ವಚನ ಸಾಹಿತ್ಯಕ್ಕೆ ಇದೆ. ವಚನ ಗದ್ಯ, ಪದ್ಯವನ್ನೊಳಗೊಂಡ ವಿಶಿಷ್ಟ ಸಾಹಿತ್ಯ. ವಚನಗಳಲ್ಲಿ ಧರ್ಮ, ನೀತಿ, ತತ್ವ, ಆಧ್ಯಾತ್ಮ, ಸಮಾಜ, ವಿಜ್ಞಾನ, ಮನೋವಿಜ್ಞಾನ, ರಾಜಕೀಯ ಹೀಗೆ ಪರಿಶುದ್ಧ ಜೀವನಕ್ಕೆ ಬೇಕಾದ ಎಲ್ಲ ಸಂಗತಿಗಳೂ ಅಡಕವಾಗಿವೆ. ವಚನಗಳಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲ ಎಂದರೆ ಹೆಚ್ಚು ಅರ್ಥಪೂರ್ಣ ಎನಿಸಬಹುದು. ವೇದ, ಉಪನಿಷತ್ತು, ಭಗವದ್ಗೀತೆ ಮತ್ತಿತರ ಧಾರ್ಮಿಕ ಗ್ರಂಥಗಳಲ್ಲಿರುವ ತತ್ವಗಳಿಗಿಂತ ಹೆಚ್ಚಿನ ವಿಚಾರಗಳು ಇಲ್ಲಿ ಅಡಕವಾಗಿವೆ ಎಂದರೆ ಅತಿಶಯೋಕ್ತಿ ಏನಲ್ಲ. 12ನೆಯ ಶತಮಾನದ ಶರಣರೇ ವಚನಗಳ ಹಿರಿಮೆ-ಗರಿಮೆಯನ್ನು ಕುರಿತು ಆಡಿರುವ ಮಾತುಗಳು ವಾಸ್ತವತೆಗೆ ಹಿಡಿದ ಕನ್ನಡಿಯಾಗಿವೆ. ಆದಯ್ಯನವರ ಒಂದು ವಚನವನ್ನು ಮೊದಲು ನೋಡಬಹುದು:
ಹಿಂದಣ ಕಥೆಯ ಮುಂದೆ ಪೇಳುವ ಕಾವ್ಯವಲ್ಲ.
ಮುಂದಣ ಕಥೆಯನಿಂದು ಹೇಳುವ ನಾಟಕವಲ್ಲ.
ಬಂದ ಶಬ್ದವ ಸಂದಿಲ್ಲದುಸುರುವೆನೆಂಬ ಅಭ್ಯಾಸಿಯಲ್ಲ.
ಛಂದ ವಿಚ್ಛಂದಯೆಂಬ ಸಂದೇಹಿಯಲ್ಲ.
ಸೌರಾಷ್ಟ್ರ ಸೋಮೇಶ್ವರಾ
ನಿಮ್ಮ ಶರಣರ ಸ್ವಯಾನುಭಾವದ ಪರಿ ಬೇರೆ.
ಸಾಹಿತ್ಯದಲ್ಲಿ ಕತೆ, ಕಾವ್ಯ, ನಾಟಕ, ಚುಟುಕು ಹೀಗೆ ವಿವಿಧ ಪ್ರಕಾರಗಳಿವೆ. ಆದಯ್ಯನವರು ಹೇಳುವಂತೆ ವಚನಗಳು ಹಿಂದೆ ನಡೆದ ಘಟನೆಯನ್ನು ಮುಂದೆ ಹೇಳುವ ಕಾವ್ಯವಾಗಲಿ, ಮುಂದೆ ನಡೆಯಬಹುದಾದದ್ದನ್ನು ಇಂದು ಹೇಳುವ ನಾಟಕವಾಗಲಿ ಅಲ್ಲ. ವೇದೋಪನಿಷತ್ತುಗಳ ಮಂತ್ರಗಳನ್ನು ಹ್ರಸ್ವ, ದೀರ್ಘ, ಪೂರ್ಣವಿರಾಮ, ಅಲ್ಪವಿರಾಮ, ವಿವರಣೆ, ಪ್ರಶ್ನಾರ್ಥಕ, ಉದ್ಘಾರ ಇಂಥ ಚಿನ್ಹೆಗಳಿಗೆ ಅನುಗುಣವಾಗಿ ತಪ್ಪಿಲ್ಲದೆ ಹೇಳುವವರು ಇದ್ದಾರೆ. ಆದರೆ ಅವರಿಗೆ ಅದರ ಅರ್ಥ ತಿಳಿದಿರಬಹುದು, ತಿಳಿಯದಿರಬಹುದು. ಆ ಮಂತ್ರಗಳು ಹೇಳುವ ವಿವೇಕದ ನುಡಿಗಳನ್ನು ಅವರು ತಮ್ಮ ಜೀವನದಲ್ಲಿ ಪಾಲಿಸಬಹುದು, ಪಾಲಿಸದಿರಬಹುದು. ಕೆಲವರಂತೂ ವೇದಮಂತ್ರಗಳನ್ನು ಕಂಠಪಾಠ ಮಾಡಿ ರಾಗಬದ್ಧವಾಗಿ, ಶುದ್ಧವಾಗಿ ಎಲ್ಲರೂ ತಲೆದೂಗುವಂತೆ ಹೇಳಬಹುದು. ಅದೇ ಮುಖ್ಯವಲ್ಲ. ಒಂದರ್ಥದಲ್ಲಿ ಅದು ಗಿಳಿಯ ಓದು, ತಂತಿಯ ಹಾಡು, ನವಿಲಿನ ನರ್ತನದಂತೆ ಆಗಬಹುದು. ಆದರೆ ವಚನಗಳು ಹಾಗಲ್ಲ. ವಚನಕಾರರಿಗೆ ವ್ಯಾಕರಣ, ಛಂದಸ್ಸು, ಕಾವ್ಯ, ಕಥೆಯ ಬಂಧ ಮುಖ್ಯವಲ್ಲ. ಅವರ ವಚನಗಳು ವ್ಯಕ್ತಿಗತ ಅನುಭವದ ರಸಪಾಕ. ಅಲ್ಲಿ ಅನುಭವ ಮತ್ತು ಅನುಭಾವಗಳ ಸಂಗಮವಿದೆ. ಆನೆಯನ್ನು ಕನ್ನಡಿಯಲ್ಲಿ ಹಿಡಿದಿಟ್ಟಂತೆ ಹೇಳಬೇಕಾದ್ದನ್ನು ಕೆಲವೇ ಸಾಲುಗಳಲ್ಲಿ ಹೇಳುವ ಹೊಸ ಸಾಹಿತ್ಯ ಪರಂಪರೆಗೆ ಕಾರಣರಾದವರು ಬಸವಾದಿ ಶಿವಶರಣರು. ಅಂಥ ಸಾಹಿತ್ಯ ಆ ಮೊದಲು ವಿಶ್ವಸಾಹಿತ್ಯದಲ್ಲೇ ಇರಲಿಲ್ಲ ಎಂದರೆ ಅತಿಶಯೋಕ್ತಿ ಏನಲ್ಲ. ಶರಣರು ತಮ್ಮ ವಿದ್ವತ್ತಿನ ಪ್ರದರ್ಶನಕ್ಕಾಗಿ, ಪ್ರಶಸ್ತಿ ಪುರಸ್ಕಾರಕ್ಕಾಗಿ ಇಲ್ಲವೇ ರಾಜ ಮನ್ನಣೆಗಾಗಿ ಸಾಹಿತ್ಯ ರಚಿಸಿದವರಲ್ಲ. ಈ ನಿಟ್ಟಿನಲ್ಲಿ ಬಸವಣ್ಣನವರ ವಚನವನ್ನು ಗಮನಿಸಬಹುದು.
ತಾಳಮಾನ ಸರಿಸಮನರಿಯೆ,
ಓಜೆ ಬಜಾವಣೆಯ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ.
`ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎನ್ನುವುದು ಮುಖ್ಯ. ನಿನಗೆ ಎಂದರೆ ವಿಶ್ವಚೈತನ್ಯ ಶಿವನಿಗೆ. ಶರಣರಿಗೆ ಸಂಗೀತದ ರಾಗ, ತಾಳ, ಲಯ ಮುಖ್ಯವಲ್ಲ. ಛಂದಸ್ಸಿನ ನಿಯಮಾವಳಿಗಳ ಹಂಗೂ ಬೇಕಾಗಿಲ್ಲ. ಬದಲಾಗಿ ಶಿವನೇ ನಿನ್ನ ವಿಶ್ವಚೈತನ್ಯದ ವ್ಯಕ್ತಿತ್ವಕ್ಕೆ ಕುಂದುಬಾರದ ಹಾಗೆ ನನಗೆ ತಿಳಿದಂತೆ ಹಾಡುವೆ ಎನ್ನುವರು. ವಚನಗಳು ಒಂದರ್ಥದಲ್ಲಿ ಗೀತಮಾತುಗಳಿದ್ದಂತೆ. ಹೀಗಾಗಿ ಶರಣರು ತಮ್ಮ ಶುದ್ಧ ಬದುಕಿನ ಮೂಲಕ ಸಾಹಿತ್ಯಕ್ಕೆ ಹೊಸ ಮೆರಗು ನೀಡಿ ಸಾಹಿತ್ಯವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅಪರೂಪದ ಕ್ರಾಂತಿ ಮಾಡಿದ ಕ್ರಾಂತಿವೀರರು. ಧರ್ಮ, ಅಧ್ಯಾತ್ಮ ಕೇವಲ ಸಾಧು-ಸಂತರಿಗೆ, ಸ್ವಾಮಿಗಳಿಗೆ, ವಿಶೇಷ ವ್ಯಕ್ತಿಗಳಿಗೆ ಎನ್ನುವ ಭಾವನೆಯನ್ನು ಕಿತ್ತೆಸೆದು ಸಾಮಾನ್ಯರೂ ಆ ದಾರಿಯಲ್ಲಿ ನಡೆಯಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟವರು ಬಸವಾದಿ ಶಿವಶರಣರು. ಅದಕ್ಕೆ ಅವರ ವಚನಗಳೇ ಸಾಕ್ಷಿ ನುಡಿಯುತ್ತವೆ. ಅವರು ಕೇವಲ ಸಾಹಿತ್ಯ ರಚನೆಯ ಮೂಲಕ ಕ್ರಾಂತಿ ಮಾಡಿದವರಲ್ಲ. ಅವರ ನಡೆ-ನುಡಿಯ ಹೊಂದಾಣಿಕೆಯ ಮೂಲಕವೇ ಕ್ರಾಂತಿ ಮಾಡಿದವರು. ಅದಕ್ಕಾಗಿ ಬಳಸಿದ ವಚನ ಸಾಹಿತ್ಯ ಕೂಡ ವಿಶೇಷ ಮನ್ನಣೆ ಗಳಿಸಿಕೊಂಡಿದೆ. ಕ್ರಾಂತಿಯ ಬೀಜಗಳೇ ವಚನಗಳು. ವಿಶ್ವಸಾಹಿತ್ಯದಲ್ಲಿ ಎಷ್ಟೇ ಅದ್ಭುತ ಧಾರ್ಮಿಕ, ಸಾಮಾಜಿಕ ಪರಿವರ್ತನೆಯ ಸಾಹಿತ್ಯ ಮೂಡಿಬಂದಿದ್ದರೂ ವಚನ ಸಾಹಿತ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ. ಕಾರಣ ಅವು ಎಲ್ಲ ಕಾಲಕ್ಕೂ, ಎಲ್ಲ ಜನರಿಗೂ ಸಲ್ಲುವಂತಹ, ಹೃದಯದಿಂದ ಮೂಡಿಬಂದಿರುವ ಅಮೃತ ಬಿಂದುಗಳು. ಈ ನೆಲೆಯಲ್ಲೇ ವಚನಗಳ ಹೆಗ್ಗಳಿಕೆ ಕುರಿತು ಸಿದ್ಧರಾಮೇಶ್ವರರು ಹೇಳಿರುವ ನುಡಿಗಳು ಚಿಂತನಾರ್ಹವಾಗಿವೆ.
ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ.
ಎಮ್ಮ ವಚನದ ನೂರೆಂಟರಧ್ಯಯನಕ್ಕೆ
ಶತರುದ್ರಯಾಗ ಸಮ ಬಾರದಯ್ಯಾ.
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರಿ ಲಕ್ಷ ಜಪ ಸಮ ಬಾರದಯ್ಯಾ.
ಕಪಿಲಸಿದ್ಧಮಲ್ಲಿಕಾರ್ಜುನಾ.
ಸಿದ್ಧರಾಮೇಶ್ವರರ ಈ ಮಾತುಗಳಲ್ಲಿ ಅತಿಶಯೋಕ್ತಿ ಇದೆ ಎನಿಸುವುದಿಲ್ಲ. ವ್ಯಾಸನ ಹದಿನೆಂಟು ಪುರಾಣಗಳ ಹಿರಿಮೆ ಕುರಿತು ಹೇಳುವುದುಂಟು. ಆದರೆ ಶರಣರ ಒಂದು ವಚನಕ್ಕೆ ವ್ಯಾಸನ ಒಂದು ಪುರಾಣ ಸಮನಾಗುವುದಿಲ್ಲ. ಆ ಪುರಾಣಕ್ಕಿಂತ ಶ್ರೇಷ್ಠ ಒಂದೇ ಒಂದು ವಚನ. ಯಜ್ಞ-ಯಾಗಗಳ ಮಹತ್ವನ್ನು ಈಗಲೂ ಹೇಳುತ್ತ ಆಚರಿಸುತ್ತ ಬರುತ್ತಿರುವುದನ್ನು ನಿತ್ಯವೂ ಕಾಣುತ್ತೇವೆ. ಆದರೆ ಶರಣರ ವಚನದ ನೂರೆಂಟರಧ್ಯಯನಕ್ಕೆ ಶತರುದ್ರಯಾಗ ಸಮ ಬರುವುದಿಲ್ಲ. ಗಾಯತ್ರಿ ಮಂತ್ರ ಪಠಣದ ಬಗ್ಗೆ ಹಲವರಿಗೆ ವಿಶೇಷ ಗೌರವ, ನಂಬಿಕೆ. ಗಾಯತ್ರಿ ಜಪ ಮಾಡುವವರು ಶ್ರೇಷ್ಠರು ಎನ್ನುವ ಭಾವನೆ ಇದೆ. ಆದರೆ ಶರಣರ ವಚನದ ಸಾವಿರ ಪಾರಾಯಣಕ್ಕೆ ಲಕ್ಷ ಗಾಯತ್ರಿ ಜಪ ಮಾಡಿದರೂ ಸಮ ಬರುವುದಿಲ್ಲ. ಹೀಗೆ ಹೇಳುವ ಮೂಲಕ ಜನರ ಅರಿವಿನ ಕಣ್ಣು ತೆರೆಸುವ ಕಾರ್ಯವನ್ನು ಸಿದ್ಧರಾಮೇಶ್ವರರು ಮಾಡಿದ್ದಾರೆ. ವಚನ ಸಾಹಿತ್ಯ ನಿಜಕ್ಕೂ ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ. ನಮ್ಮಲ್ಲಿ `ಪರುಷ ಮುಟ್ಟಿದ ಲೋಹದಂತೆ’ ಎನ್ನುವ ರೂಪಕವನ್ನು ಆಗಾಗ ಕೊಡುವರು. ಆದರೆ ಶರಣರದು ಇನ್ನೂ ಒಂದು ಹೆಜ್ಜೆ ಮುಂದೆ. ಅವರದು `ಪರುಷ ಮುಟ್ಟಿದ ಲೋಹದಂತೆ’ ಅಲ್ಲ; `ಜ್ಯೋತಿ ಮುಟ್ಟಿದ ಜ್ಯೋತಿಯಂತೆ’. ಪರುಷಮಣಿ ಒಂದು ಕಾಲ್ಪನಿಕ ಹರಳು. ಅದು ಯಾವ ಲೋಹವನ್ನು ಮುಟ್ಟಿದರೂ ಆ ಲೋಹ ಚಿನ್ನವಾಗಿ ಮಾರ್ಪಡುವುದು ಎನ್ನುವ ನಂಬಿಕೆ ಇದೆ. ಆಶ್ಚರ್ಯದ ಸಂಗತಿ ಎಂದರೆ ಪರುಷ ಮುಟ್ಟಿದ ಲೋಹ ಚಿನ್ನವಾದರೂ ಆ ಚಿನ್ನ ಮತ್ತೊಂದು ಲೋಹವನ್ನು ಮುಟ್ಟಿದಾಗ ಅದು ಚಿನ್ನ ಆಗುವುದಿಲ್ಲ. ಶರಣರ ಪರಿ ಹಾಗಲ್ಲ. ಅವರದು ಜ್ಯೋತಿ ಮುಟ್ಟಿದ ಜ್ಯೋತಿ. ಒಂದು ಜ್ಯೋತಿಯಿಂದ ಮುಟ್ಟಿಸಿಕೊಂಡ ಮತ್ತೊಂದು ಜ್ಯೋತಿ ಬೆಳಕು ಕೊಡುವುದಲ್ಲದೆ ತಾನು ಬೇರೊಂದು ಜ್ಯೋತಿಯನ್ನು ಮುಟ್ಟಿದರೆ ಅದೂ ಬೆಳಕು ಕೊಡುವುದು. ಆ ಜ್ಯೋತಿ ಮತ್ತೊಂದು ಜ್ಯೋತಿಯನ್ನು ಮುಟ್ಟಿದರೆ ಮುಟ್ಟಿಸಿಕೊಂಡದ್ದೂ ಜ್ಯೋತಿಯಾಗಿಯೇ ಬೆಳಗುವುದು. ಅಲ್ಲಿ ಯಾವ ಜ್ಯೋತಿಯೂ ಕನಿಷ್ಠವಲ್ಲ, ಶ್ರೇಷ್ಠವಲ್ಲ. ಎಲ್ಲ ಜ್ಯೋತಿಗಳಿಗೆ ಸಮಾನ ಗೌರವ ಇದೆ. ಪರುಷಮಣಿ ಹಾಗಲ್ಲ. ಪರುಷಮಣಿಯ ಸ್ವರ್ಶದಿಂದ ಚಿನ್ನವಾದ ಲೋಹ ತಾನು ಮತ್ತೊಂದು ಲೋಹವನ್ನು ಮುಟ್ಟಿದರೆ ಅದನ್ನು ಚಿನ್ನವನ್ನಾಗಿ ಮಾಡಲು ಸಾಧ್ಯವಿಲ್ಲ. ಈ ದಿಶೆಯಲ್ಲಿ ಇತರ ಲೋಹ, ಚಿನ್ನಗಳಿಂದ ಪ್ರತ್ಯೇಕತೆ ಕಾಯ್ದುಕೊಳ್ಳುವ ಪರುಷಮಣಿ ತಾನೇ ಶ್ರೇಷ್ಠವೆಂದು ಬೀಗುವುದು.
12ನೆಯ ಶತಮಾನದಲ್ಲಿ ಬಸವಾದಿ ಶಿವಶರಣರ ಸಂಪರ್ಕಕ್ಕೆ ಬಂದವರೆಲ್ಲರೂ ಶರಣರೇ ಆದರು. ತಳವರ್ಗದಿಂದ ಬಂದ ಕಾಯಕಜೀವಿಗಳು ಸಹ ಬಸವಣ್ಣ, ಅಲ್ಲಮ, ಅಕ್ಕ, ಚೆನ್ನಬಸವಣ್ಣನವರಂತೆ ಅನುಭಾವಿಗಳಾದರು. ಜಗತ್ತಿನ ಯಾವ ಧಾರ್ಮಿಕ ಪರಂಪರೆಯಲ್ಲೂ ಇಂಥ ಪರಿವರ್ತನೆ ಕಾಣಲು ಸಾಧ್ಯವಿಲ್ಲ. ಬಸವಣ್ಣನವರಷ್ಟೇ ವಿಶೇಷ ಮನ್ನಣೆ ಚಪ್ಪಲಿ ಹೊಲಿಯುವ ಧೂಳಯ್ಯನವರಿಗೂ ಇತ್ತು. ಚೆನ್ನಬಸವಣ್ಣನವರಷ್ಟೇ ಗೌರವ ಅಕ್ಕಮಹಾದೇವಿಯವರಿಗೂ ಇತ್ತು. ಶಿವಯೋಗಿ ಸಿದ್ಧರಾಮೇಶ್ವರರಿಗಿದ್ದ ಸ್ಥಾನ ಒಬ್ಬ ಸೂಳೆ ಸಂಕವ್ವೆಗೂ ಇತ್ತು. ಹೀಗಾಗಿ ಶರಣರ ವ್ಯಕ್ತಿತ್ವವನ್ನು ಇತರ ಯಾವ ಸಂತರಿಗೂ ಹೋಲಿಸಲು ಸಾಧ್ಯವಿಲ್ಲ. ಹಾಗಾಗಿಯೇ `ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟ’ ಎಂದು ಬಸವಣ್ಣನವರು ಹೇಳಿದ್ದು. ಕೇವಲ ವಚನದಲ್ಲಿ ಇಂಥ ಮಾತು ಹೇಳಲಿಲ್ಲ; ಈ ಲೋಕ ಭಗವಂತನ ಟಂಕಸಾಲೆ ಎನ್ನುವುದನ್ನು ಸಾಧಿಸಿ ತೋರಿಸಿದರು. ಹಾಗಾಗಿಯೇ ಕಲ್ಯಾಣದವರು ಮಾತ್ರವಲ್ಲ; ಬೇರೆ ಬೇರೆ ರಾಜ್ಯ, ದೇಶಗಳಿಂದಲೂ ಧರ್ಮಾಸಕ್ತರು ಅಲ್ಲಿಗೆ ಬಂದರು. ಏಕಕಾಲದಲ್ಲಿ ಸಾವಿರಾರು ಜನ ಅನುಭಾವಿಗಳಾದರು. ಅವರಲ್ಲಿ ಪುರುಷರು ಮಾತ್ರ ಇರಲಿಲ್ಲ; ಮಹಿಳೆಯರೂ ಇದ್ದುದು ವಿಶೇಷ. ಒಂದರ್ಥದಲ್ಲಿ ಕಲ್ಯಾಣದಲ್ಲಿದ್ದ ಅನುಭವಮಂಟಪವೇ ಕರ್ತಾರನ ಕಮ್ಮಟವಾಗಿತ್ತು. ಆ ಕಮ್ಮಟ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾಗಿತ್ತು. ವ್ಯಕ್ತಿ ತನಗೆ ತಾನೇ ಬದಲಾಗಲು ಬೇಕಾದ ಆತ್ಮಬಲ, ಮನೋಸ್ಥೈರ್ಯ ಬೆಳೆಸುತ್ತಿತ್ತು. ಮತ್ರ್ಯಲೋಕವನ್ನು ವ್ಯಕ್ತಿ ತನ್ನನ್ನು ತಾನು ಪರಿವರ್ತನೆ ಮಾಡಿಕೊಳ್ಳುವ ಭೂಮಿಕೆಯನ್ನಾಗಿ ಮಾಡಿದವರು ಶರಣರು. ಆ ಪರಿವರ್ತನೆಯ ಫಲಿತಾಂಶಗಳೇ ವಚನಗಳು. ಚೆನ್ನಬಸವಣ್ಣನವರು ಹೇಳುವಂತೆ `ಮತ್ರ್ಯರ ಮನದ ಮೈಲಿಗೆಯ ಕಳೆಯಲೆಂದು ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು ಕೂಡಲಚೆನ್ನಸಂಗನ ಶರಣರು’.
ವಚನಗಳನ್ನು ಕುರಿತು `ಹಾಲ ತೊರೆಗೆ ಬೆಲ್ಲದ ಕೆಸರು ಸಕ್ಕರೆಯ ಮಳಲು, ತವರಾಜದ ನೊರೆತೆರೆಯಂತೆ ಆದ್ಯರ ವಚನವಿರಲು, ಬೇರೆ ಬಾವಿಯ ತೋಡಿ ಉಪ್ಪನೀರನುಂಬುವನ ವಿಧಿಯಂತಾಯಿತ್ತೆನ್ನ ಮತಿ’ ಎನ್ನುವರು ಬಸವಣ್ಣ. ಬಸವಣ್ಣನವರ ವಚನಗಳು ಮಾತ್ರವಲ್ಲ; ಆದ್ಯ ವಚನಕಾರ ಎಂದು ಪ್ರಖ್ಯಾತರಾಗಿರುವ ಜೇಡರ ದಾಸಿಮಯ್ಯನವರ ವಚನಗಳನ್ನೇ ನೋಡಿದರೆ ಅವು ಹಾಲಿನ ತೊರೆ ಇದ್ದಂತೆ. ಅದಕ್ಕೆ ಬೆಲ್ಲದ ಕೆಸರು ಸೇರಿದರೆ ಹಾಲಿಗೆ ಇನ್ನೂ ವಿಶೇಷ ರುಚಿ ಬರುವುದು. ಸಕ್ಕರೆಯನ್ನು ಅದರಲ್ಲಿ ಕರಗಿಸಿದರೆ ಹಾಲಿನ ರುಚಿ ಅವರ್ಣನೀಯ. ಹೀಗಿರುವಾಗ ಬೇರೆ ಬಾವಿ ತೋಡಿ ಉಪ್ಪು ನೀರನ್ನು ಕುಡಿಯುವ ಹೀನಗತಿ ಯಾರಿಗೂ ಬರಬಾರದು ಎನ್ನುವರು. ಅಂದರೆ ವಚನ ಸಾಹಿತ್ಯ ಎನ್ನುವ ಅಮೃತವೇ ನಮ್ಮ ಮುಂದೆ ಇರುವಾಗ ಮತ್ತೊಂದು ಬಾವಿ ತೋಡಿ ಉಪ್ಪುನೀರನ್ನು ಕುಡಿಯುವುದು ಎಂದರೆ ಬೇರೆ ಸಾಹಿತ್ಯದ ಹಿಂದೆ ಸುಳಿಯುವುದು. ಇದು ಬೇಕೇ ಎನ್ನುವ ಪ್ರಶ್ನೆ. ವಚನ ಸಾಹಿತ್ಯದಲ್ಲೇ ಎಲ್ಲ ತತ್ವ, ಸತ್ವ, ವಿಚಾರ, ಆಚಾರ, ಅಧ್ಯಾತ್ಮ, ಲೌಕಿಕ, ಪಾರಮಾರ್ಥಿಕ ವಿಚಾರಗಳು ಅಡಗಿರುವಾಗ ಬೇರೆಡೆ ಹುಡುಕಿಕೊಂಡು ಹೋಗುವ ಪರಿಸ್ಥಿತಿ ತಂದುಕೊಳ್ಳಬೇಡಿ ಎನ್ನುವ ಎಚ್ಚರಿಕೆಯನ್ನು ಬಹುತೇಕ ಶರಣರು ನೀಡಿದ್ದಾರೆ. ಸಿದ್ಧರಾಮೇಶ್ವರರು `ಸ್ಮೃತಿಗಳು ಸಮುದ್ರದ ಪಾಲಾಗಲಿ, ಶ್ರುತಿಗಳು ವೈಕುಂಠವ ಸೇರಲಿ, ಪುರಾಣಗಳು ಅಗ್ನಿಯ ಸೇರಲಿ, ಆಗಮಗಳು ವಾಯುವ ಹೊಂದಲಿ’ ಎನ್ನುವ ಮೂಲಕ ಸ್ಮೃತಿ, ಶ್ರುತಿ, ಪುರಾಣ, ಆಗಮಗಳಿಗಿಂತ ಹೆಚ್ಚಿನ ಸ್ಥಾನ ಶರಣರ ವಚನಗಳಿಗಿದ್ದು ಅವು ಹೃದಯದಲ್ಲಿ ಅಡಕಗೊಳ್ಳಲಿ ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ. ದಾಸಿಮಯ್ಯನವರು `ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಡಶರಣರ ನುಡಿಗಡಣವೇ ಕಡೆಗೀಲು’ ಎಂದಿದ್ದಾರೆ. ಬದುಕಿನ ಬಂಡಿ ಸರಿಯಾಗಿ ನಡೆಯಬೇಕೆಂದರೆ ವಚನ ಸಾಹಿತ್ಯವನ್ನು ಕಡೆಗೀಲನ್ನಾಗಿ ಮಾಡಿಕೊಳ್ಳಬೇಕು. ಅವರೇ ತಮ್ಮ ಮತ್ತೊಂದು ವಚನದಲ್ಲಿ ಹೇಳುವುದನ್ನು ನೋಡಿ:
ಕರಿಯನಿತ್ತಡೆ ಒಲ್ಲೆ
ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ
ನಿಮ್ಮನಿತ್ತೆ ಕಾಣಾ ರಾಮನಾಥ
ಅಧಿಕಾರದ ಸಂಕೇತ ಆನೆ. ಅಂಥ ಅಧಿಕಾರ ಕೊಟ್ಟರೂ ಬೇಡ ಎನ್ನುವರು. ಇಂದು ಅಧಿಕಾರ ಪಡೆಯಲು ಎಷ್ಟೆಲ್ಲ ಪೈಪೋಟಿ, ಕುತಂತ್ರ ನಡೆಯುತ್ತಿದೆ. ಆದರ್ಶಗಳನ್ನು ಗಾಳಿಗೆ ತೂರಿಯಾದರೂ ಗ್ರಾಮಪಂಚಾಯತಿ, ಜಿಲ್ಲಾಪಂಚಾಯತಿ, ಶಾಸಕ, ಮಂತ್ರಿ ಹೀಗೆ ಬೇರೆ ಬೇರೆ ಅಧಿಕಾರದ ಸ್ಥಾನಗಳನ್ನು ಗಿಟ್ಟಿಸಿಕೊಳ್ಳಬೇಕು ಎನ್ನುವ ಹಪಾಹಪಿ ಮಿತಿಮೀರಿದೆ. ಆದರೆ ದಾಸಿಮಯ್ಯನವರು ಅಧಿಕಾರ ಕೊಟ್ಟರೂ ಬೇಡ ಎನ್ನುವರು. ಇಂದಂತೂ ಸಂಪತ್ತಿಗೆ ಹಾತೊರೆಯದಿರುವವರು ಯಾರು? ಯಾವ ಮಾರ್ಗದಿಂದಲಾದರೂ ಸಂಪತ್ತು ಬಂದರೆ ಸಾಕು ಎನ್ನುವವರು ಎಲ್ಲೆಡೆ ಇದ್ದಾರೆ. ಅಂಥ ಸಂಪತ್ತನ್ನು ಕೊಟ್ಟರೂ ಬೇಡ ಎನ್ನುವರು ದಾಸಿಮಯ್ಯ. ಒಂದು ರಾಜ್ಯವನ್ನೇ ಕೊಡುತ್ತೇನೆ ಎಂದರೂ ಒಪ್ಪುವುದಿಲ್ಲ. ಬಸವಾದಿ ಶರಣರ ಮುತ್ತಿನಂತಹ ನುಡಿಗಳು ಒಂದುಕ್ಷಣ ಕಿವಿಯಮೇಲೆ ಬಿದ್ದರೆ ದೇವರನ್ನೇ ಬಿಟ್ಟುಕೊಡುವೆ ಎನ್ನುವರು. ಅಧಿಕಾರ, ಸಂಪತ್ತು, ರಾಜ್ಯ, ದೇವರಿಗಿಂತ ಹಿರಿಯ ಸ್ಥಾನವನ್ನು ವಚನ ಸಾಹಿತ್ಯಕ್ಕೆ ನೀಡಿರುವುದು ವೇದ್ಯ. ಕಾರಣ ವಚನಗಳು ಲಿಂಗದ ನಡೆ, ನುಡಿಗಳ ಪ್ರತೀಕಗಳು. ಈ ದಿಶೆಯಲ್ಲಿ ಚೆನ್ನಬಸವಣ್ಣನವರ ವಚನ ಗಮನಾರ್ಹ.
ಜ್ಞಾನದೀಪ್ತಿಯ ಬೆಳಗುವ ತೈಲವಾವುದೆಂದರೆ:
ಸದುಮಾನ್ಯರ ನುಡಿಗಡಣದಿಂದೊಸರುವ ಒಸರು
ಅದು ತಾನೆಂಬ ಅರಿವಿನ ನಿಶ್ಚಯವ ತೋರುವುದು.
ಹೀನ ಜಡತೆಯ ಮುಸುಕಿದ ಗಂದಿಕೆ ತಿಳಿದು
ಭಾನು ಬಂದರೆ ಜಗದ ಭ್ರಮೆ ಹರಿವಂತೆ ಹರಿವುದು.
ಬುಧರೊಳು ನೀನಿರಲು ಕರ್ಮಹರಿವುದು,
ಕೂಡಲಚೆನ್ನಸಂಗಮದೇವಾ.
ಜ್ಞಾನದೀಪ್ತಿಯನ್ನು ಬೆಳಗುವ ತೈಲ ವಚನಗಳು ಎನ್ನುವುದನ್ನು ಗಮನಿಸಬೇಕು. ಅವು ತಾನು ಯಾರು ಎನ್ನುವ ಅರಿವನ್ನು ಮಾಡಿಕೊಡುವವು. ಜಡತ್ವ ನಿವಾರಿಸಿ ಚೈತನ್ಯ ಕರುಣಿಸುವವು. ಸೂರ್ಯ ಉದಯವಾಗುತ್ತಲೇ ಜಗತ್ತಿನ ಕತ್ತಲೆ ಕರಗುವಂತೆ ಶರಣರ ಸಂಪರ್ಕದಲ್ಲಿದ್ದರೆ ಎಲ್ಲ ಕರ್ಮಗಳು ಹರಿದುಹೋಗುವವು ಎನ್ನುವ ಮೂಲಕ ಶರಣರ ಮತ್ತು ಅವರ ವಚನಗಳ ಶಕ್ತಿ ಸಾಮರ್ಥ್ಯ ಎಂತಹುದು ಎನ್ನುವುದನ್ನು ತಿಳಿಸಿದ್ದಾರೆ. ಹಾವಿನಹಾಳ ಕಲ್ಲಯ್ಯನವರ ವಚನ ನೋಡಿ:
ಕೇಳಿರೆ ಕೇಳಿರೆ ಶಿವವಚನ, ಗುರುವಚನ
ಪುರಾತರ ವಚನಾನುಭವ ಕೇಳಿ ಬದುಕಿರಯ್ಯಾ.
ಕೇಳಿದ ಸದ್ಭಕ್ತರೆಲ್ಲರು ಕೃತಾರ್ಥರಪ್ಪರು.
ತನು ಕರಗಿ, ಮನ ಕೊರಗಿ, ಭಾವ ಬೆಚ್ಚದೊ!
ಅಹಂಕಾರವಳಿದು, ಶರಣರ ಅನುಭಾವವ ಕೇಳಿದಡೆ,
ಅದೇ ಮುಕ್ತಿ ನೋಡಿರೆ.
ಇಂತಲ್ಲದೆ ಮನೋವ್ಯಾಕುಲನಾಗಿ, ತನುಮುಟ್ಟಿ ಕೇಳಿದಡೆ,
ಉಪದೇಶವೆಂತು ಸಲುವುದಯ್ಯಾ?
ಎಂತಳವಡುವುದಯ್ಯಾ?
ಮಹಾಲಿಂಗ ಕಲ್ಲೇಶ್ವರಾ, ಗುರುವಚನ ಪರಾಙ್ಮುಖಂಗೆ
ಎಂದೆಂದೂ ಭವ ಹಿಂಗದು ನೋಡಾ.
ಭವಬಂಧನ ಕಳಚಿಕೊಳ್ಳಲು ಶಿವವಚನ ಮತ್ತು ಗುರುವಚನ ಸಹಕಾರಿ. ಶರಣರ ಅನುಭವಾಮೃತದ ನುಡಿಗಳೇ ಶಿವವಚನ ಮತ್ತು ಗುರುವಚನ. ಅವುಗಳನ್ನು ಮತ್ತೆ ಮತ್ತೆ ಕೇಳಬೇಕು. ಹಾಗೆ ಕೇಳುವ ಮೂಲಕ ಕೃತಾರ್ಥತೆ ಪಡೆಯಲು ಸಾಧ್ಯ. ಅದರಿಂದ ದೇಹ ಕರಗುವುದು. ಮನಸ್ಸಿನ ಮಾಲಿನ್ಯ ನಿವಾರಣೆಯಾಗುವುದು. ಭಾವ ಸದ್ಭಾವ ಆಗುವುದು. ಅಷ್ಟೇ ಅಲ್ಲ ಅಹಂಕಾರ ಅಳಿಯುವುದು. ಅದೇ ಮುಕ್ತಿಯ ಮಾರ್ಗ. ಮನುಷ್ಯ ಮನೋವ್ಯಾಕುಲತೆಗೆ ಒಳಗಾಗಿ ಕಾಟಾಚಾರಕ್ಕೆ ಶಿವವಚನ, ಗುರುವಚನ ಕೇಳಿದರೆ ಆ ಉಪದೇಶ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಗುರುವಚನ ಕೇಳದೆ ಅವುಗಳಿಂದ ದೂರ ಇರುವವರಿಗೆ ಭವಮಾಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಹೀಗೆ ಹೇಳುವ ಮೂಲಕ ವಚನಗಳನ್ನು ಶಿವವಚನ, ಗುರುವಚನ ಎಂದು ಗೌರವಿಸಿದ್ದಾರೆ ಹಾವಿನಹಾಳ ಕಲ್ಲಯ್ಯನವರು. ಅಲ್ಲಮಪ್ರಭುದೇವರು ಶರಣರ ವಚನದ ನೆಲೆಯಲ್ಲಿ ಬೆಳಗಿನ ಜಾವ ಬೇಗ ಎದ್ದು ಲಿಂಗಪೂಜೆ ಮಾಡಿಕೊಂಡು ಶಿವಭಕ್ತರ ಮುಖವನ್ನು ನೋಡಬೇಕು. ಇದೇ ಮನುಷ್ಯಜನ್ಮದಲ್ಲಿ ಹುಟ್ಟಿಬಂದದ್ದಕ್ಕೆ ಸಾರ್ಥಕ ಎನ್ನುವರು. ಶರಣರ ವಚನಗಳನ್ನು ಕೇಳುವ ಮೂಲಕ ಅಂಗದ ಭಂಗ ಹಿಂಗಿದವು, ಪ್ರಸಾದದ ಪರುಷವ ಕಂಡೆ ಎನ್ನುವರು ಮೋಳಿಗೆ ಮಾರಯ್ಯ.
ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು.
ಕರ್ಣಕ್ಕೆ ಶೃಂಗಾರ ಪುರಾತನರ ಸುಗೀತಂಗಳ ಕೇಳುವುದು.
ವಚನಕ್ಕೆ ಶೃಂಗಾರ ಸತ್ಯವ ನುಡಿವುದು.
ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ.
ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು.
ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ.
ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ
ಚೆನ್ನಮಲ್ಲಿಕಾರ್ಜುನಾ?
ಶೃಂಗಾರದ ಪರಿಕಲ್ಪನೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವುದು ಸಹಜ. ಶರಣರ ಶೃಂಗಾರದ ಪರಿಕಲ್ಪನೆ ಹೇಗಿದೆ ನೋಡಿ: ಕಣ್ಣುಗಳಿಗೆ ಶೃಂಗಾರ ಕಾಡಿಗೆ ಹಚ್ಚುವುದಲ್ಲ. ಬದಲಾಗಿ ಗುರು ಹಿರಿಯರನ್ನು ನೋಡುವುದು. ಕಿವಿಗಳಿಗೆ ಶೃಂಗಾರ ಪುರಾತನರ ವಚನಗಳನ್ನು ಕೇಳುವುದು. ವಚನಗಳಿಗೆ ಶೃಂಗಾರ ಸತ್ಯವನ್ನೇ ಆಡುವುದು. ಪರಸ್ಪರ ಸಂಭಾಷಣೆಗೆ ಶೃಂಗಾರ ಸದ್ಭಕ್ತರ ಅಮೃತ ನುಡಿಗಳು. ಕೈಗಳಿಗೆ ಶೃಂಗಾರ ಒಳಿತಿನ ಕಾರ್ಯಗಳಿಗೆ ದಾಸೋಹ ರೂಪದಲ್ಲಿ ನೀಡುವುದು. ಬದುಕಿಗೆ ಶೃಂಗಾರ ಗಣಮೇಳಾಪ ಅಂದರೆ ಶರಣರ ಜೊತೆ ಬಾಳುವುದು. ಇವುಗಳಿಲ್ಲದಿದ್ದರೆ ಜೀವನ ವ್ಯರ್ಥ ಎನ್ನುವ ಭಾವ ಮಹಾದೇವಿಯಕ್ಕನವರದು. ವಚನಗಳನ್ನು ಓದಿದ, ಕೇಳಿದ ಮಾತ್ರಕ್ಕೆ ವ್ಯಕ್ತಿಯಲ್ಲಿ ಪರಿವರ್ತನೆ ಆಗುವುದೆಂದು ಹೇಳಲಾಗದು. ಇವತ್ತು ಎಷ್ಟೋ ಜನರು ಮಾತು ಮಾತಿಗೆ ಶರಣರ ವಚನಗಳನ್ನು ಉದಾಹರಿಸುವರು. ಆದರೆ ಅವರ ಬದುಕು ಶುದ್ಧವಾಗಿರುವುದಿಲ್ಲ. ವಚನವೇ ಬೇರೆ, ಅವರ ಬದುಕೇ ಬೇರೆ ಎನ್ನುವಂತಿರುತ್ತದೆ. ಇಂಥದನ್ನು ಕಂಡ ಮಡಿವಾಳ ಮಾಚಿದೇವರು ವಚನದ ಮೂಲಕವೇ ಎಚ್ಚರಿಸುತ್ತಾರೆ.
ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ
ಭಕ್ತರಪ್ಪರೆ ಅಯ್ಯಾ?
ವಚನ ತನ್ನಂತಿರದು, ತಾನು ವಚನದಂತಿರ.
ಅದೆಂತೆಂದಡೆ:
ತನುಮನಧನವನೆಲ್ಲ ಹಿಂದಿಟ್ಟುಕೊಂಡು,
ಮಾತಿನ ಬಣವೆಯ ಮುಂದಿಟ್ಟುಕೊಂಡು,
ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ,
ಆ ತೆರನಾಯಿತೆಂದ ಕಲಿದೇವರದೇವಯ್ಯ.
ಕೇವಲ ವಚನ ನುಡಿಯುವವರನ್ನು ಬಯಲುರಂಜಕರೆನ್ನುವರು. ಅವರು ಭಕ್ತರಾಗಲು ಸಾಧ್ಯವಿಲ್ಲ. ಭಕ್ತರಾಗಬೇಕಾದರೆ ವಚನದ ಆಶಯದಂತೆ ಬದುಕನ್ನು ಬದಲಾಯಿಸಿಕೊಳ್ಳಬೇಕು. ಆದರೆ ವಚನ ಅವರ ಬದುಕಿನಂತೆ ಇರುವುದಿಲ್ಲ. ಅವರ ಬದುಕು ವಚನದಂತೆ ಇರುವುದಿಲ್ಲ. ವಚನವೇ ಬೇರೆ, ಬದುಕೇ ಬೇರೆ. ಅದು ಹೇಗೆ ಎನ್ನುವುದಕ್ಕೆ ನಿದರ್ಶನ ನೀಡುವರು. ವಚನ ಹೇಳುವುದು ಭಕ್ತನಾದವ ತನು, ಮನ, ಧನದ ಮೋಹ ಕಳೆದುಕೊಂಡಿರಬೇಕು. ಬದಲಾಗಿ ತನು ಮನ ಧನದ ಮೋಹವನ್ನು ಹೆಚ್ಚಿಸಿಕೊಂಡು ಮಾತಿನಲ್ಲೇ ಮನೆ ಕಟ್ಟುವವರನ್ನು ಒಡೆಯನನ್ನು ಕಂಡು ನಾಯಿ ಬಾಲ ಅಲ್ಲಾಡಿಸಿದಂತೆ ಎಂದು ಛೇಡಿಸಿದ್ದಾರೆ. ವಚನಗಳ ರಚನೆಗೆ, ಓದಿಗೆ ಬೆಲೆ ಬರುವುದು ಬದುಕೇ ವಚನವಾಗಿ ಮಾರ್ಪಟ್ಟಾಗ. ಇವತ್ತು ಶರಣರಂತೆ ವಚನಗಳನ್ನು ರಚಿಸುವವರಿದ್ದಾರೆ. ಆದರೆ ಅವರ ವಚನ ಬುದ್ಧಿಯ ಪ್ರದರ್ಶನವೇ ಹೊರತು ಆತ್ಮದರ್ಶನದ ಇಲ್ಲವೇ ಆದರ್ಶ ಬದುಕಿನ ಪ್ರತಿಬಿಂಬ ಆಗಿರುವುದು ತುಂಬಾ ವಿರಳ. ಹೀಗಿದ್ದಾಗ ಆ ವಚನ ರಚನೆ ಬಯಲರಂಜನೆ. ಇದೇ ಅಭಿಪ್ರಾಯ ಮೋಳಿಗೆ ಮಾರಯ್ಯನವರದೂ ಆಗಿದೆ.
ಆದ್ಯರ ವಚನವ ನೋಡಿ, ಓದಿ ಹೇಳಿದಲ್ಲಿ ಫಲವೇನಿ ಭೋ?
ತನ್ನಂತೆ ವಚನವಿಲ್ಲ, ವಚನದಂತೆ ತಾನಿಲ್ಲ.
ನುಡಿಯಲ್ಲಿ ಅದ್ವೈತವ ನುಡಿದು, ನಡೆಯಲ್ಲಿ ಅಧಮರಾದಡೆ,
ಶಿವಶರಣರು ಮೆಚ್ಚುವರೆ?
ಇದು ಕಾರಣ, ಅವರ ನಡೆ ನುಡಿ ಶುದ್ಧವಿಲ್ಲವಾಗಿ.
ಅವರಿಗೆ ಗುರು ಲಿಂಗ ಜಂಗಮ ಪಂಚಾಕ್ಷರವಿಲ್ಲ.
ಇಂತಿವಿಲ್ಲದೆ ಬರಿಯ ಮಾತಿನಲ್ಲಿ ಬೊಮ್ಮವ ನುಡಿವ
ಬ್ರಹ್ಮೇತಿಕಾರರ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನ.
ಪುರಾತನರ ಅಥವಾ ಬಸವಾದಿ ಶರಣರ ವಚನಗಳನ್ನು ಓದಿದರೆ/ ಅವುಗಳನ್ನು ಮತ್ತೊಬ್ಬರಿಗೆ ಹೇಳಿದರೆ ಫಲ ದಕ್ಕುವುದಿಲ್ಲ. ಅದಕ್ಕೆ ಕಾರಣ ವಚನದಂತೆ ನಡೆಯುತ್ತಿಲ್ಲ ಎನ್ನುವುದು. ಮಾತಿನಲ್ಲಿ ಅದ್ವೈತ ತತ್ವ ಹೇಳಿ ನಡೆಯಲ್ಲಿ ಅದಕ್ಕೆ ವಿರುದ್ಧವಾದ ಕೆಟ್ಟಕೆಲಸವನ್ನೇ ಮಾಡುತ್ತಿದ್ದರೆ ಶರಣರು ಮೆಚ್ಚರು. ಯಾರಿಗೆ ನಡೆ, ನುಡಿ ಶುದ್ಧವಿರುವುದಿಲ್ಲವೋ ಅವರಿಗೆ ಗುರು, ಲಿಂಗ, ಜಂಗಮ, ಪಂಚಾಕ್ಷರ ಇಲ್ಲ. ಇವಿಲ್ಲದೆ ಬರಿಯ ಮಾತಿನಲ್ಲೇ ಪರಬ್ರಹ್ಮದ ವಿಚಾರ ಹೇಳಿದರೆ ಅಂತಹವರನ್ನು ಶಿವ ಮೆಚ್ಚುವುದಿಲ್ಲ. ಶರಣರ ಮತ್ತು ಅವರ ವಚನಗಳ ಮಹತ್ವ ಕುರಿತು ಮೋಳಿಗೆ ಮಹಾದೇವಿಯವರು ಆದ್ಯರ ವಚನವನ್ನು ಕೇಳಿ ಎನ್ನಂಗದ ಭಂಗ ಹಿಂಗಿತ್ತು ಎನ್ನುವರು. ವಚನವನ್ನು ಹೇಳುವ, ಕೇಳುವ, ಓದುವ ಮೂಲಕ ವ್ಯಕ್ತಿಗತ ವಿಕಾರಗಳು ದೂರವಾಗಿ ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗಬೇಕು. ಆಗ ವಚನಗಳನ್ನು ಓದಿದ್ದು, ಹೇಳಿದ್ದು ಸಾರ್ಥಕವಾಗುವುದು. ವಚನಗಳು ಶರಣರ ಅನುಭಾವದ ದಿವ್ಯ ಬೆಳಕು. ಆ ಬೆಳಕಿನಿಂದ ವ್ಯಕ್ತಿಗತ ಬದುಕಿನ ಕತ್ತಲೆ ಕಳೆದುಕೊಂಡು ಬೆಳಕನ್ನು ತುಂಬಿಕೊಳ್ಳಬೇಕು. ಆರಂಭದಲ್ಲೇ ಹೇಳಿದಂತೆ ವಚನಗಳಲ್ಲಿ ಮನುಕುಲದ ಉನ್ನತಿಗೆ ಬೇಕಾದ ತತ್ವಸಿದ್ಧಾಂತಗಳು ಇವೆ. ನೊಂದವರಿಗೆ ಸಾಂತ್ವನದ ಸಂದೇಶವಿದೆ. ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಆತ್ಮೋದ್ಧಾರ ಮತ್ತು ಲೋಕೋದ್ಧಾರಕ್ಕೆ ಬೇಕಾದ ಎಲ್ಲ ತತ್ವಗಳೂ ಅಡಕವಾಗಿವೆ. ವಚನ ಸಾಹಿತ್ಯಕ್ಕೆ ಮತ್ತಾವ ಸಾಹಿತ್ಯವನ್ನೂ ಹೋಲಿಸಲು ಸಾಧ್ಯವಿಲ್ಲ. ಹಿಮಾಲಯಕ್ಕೆ ಹಿಮಾಲಯವೇ ಸಮ ಎನ್ನುವಂತೆ.
Comments 12
Vinay Bengaluru
Oct 7, 2021ವಚನಗಳನ್ನೇ ಬಗೆಬಗೆದು ವಚನಗಳ ಮಹತ್ವವನ್ನು ನಮಗೆ ಉಣಬಡಿಸಿದ ಪೂಜ್ಯರಿಗೆ ವಂದನೆಗಳು. ಆ ಮಹತ್ವವನ್ನು ನಾವೂ ಅರಿಯಬೇಕು, ನಮ್ಮ ಮುಂದಿನ ಪೀಳಿಗೆಗೂ ಮನದಟ್ಟು ಮಾಡಿಸಬೇಕು. ಓದಿನ ಆಸಕ್ತಿ ಹಿಂಗುತ್ತಿರುವ ಈ ದಿನಮಾನಗಳಲ್ಲಿ ಇದೊಂದು ದೊಡ್ಡ ಸವಾಲೇ ಸರಿ.
Shambhulingaiah
Oct 7, 2021ವಚನಗಳನ್ನು ಪೋಣಿಸಿ ಸುಂದರವಾದ ಮಾಲೆ ಕಟ್ಟಿದಂತೆ ವಚನಗಳ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ವಚನಗಳ ಅಗತ್ಯವೂ ಅವುಗಳ ಮಹತ್ವದಲ್ಲೇ ಅಡಕವಾಗಿದೆ.
ಜ್ಞಾನೇಶ್ ಕಮತಗಿ
Oct 11, 2021ಸ್ವಯಾನುಭವವನ್ನು ಹೇಳುವ ವಚನಗಳು ಕಲ್ಪನೆಯ ಕತೆಗಳೂ ಅಲ್ಲ, ಕಾವ್ಯಗಳೂ ಅಲ್ಲ. ಶಿವ ಮೆಚ್ಚುವಂತೆ ಜೀವನ ನಡೆಸುವುದನ್ನು ಹೇಳುವ ಉಕ್ತಿಗಳು. ಶ್ರೀಗಳಿಗೆ ಪ್ರಣಾಮಗಳು.
ವೀರಯ್ಯ ಹಿರೇಮಠ
Oct 11, 2021ಆತ್ಮದರ್ಶನ ಮಾಡಿಸುವ ವಚನಗಳು ಜನಸಾಮಾನ್ಯರಿಗೆ ಅರ್ಥವಾಗದ, ಪ್ರಯೋಜನಕ್ಕೆ ಬಾರದ ಸಂಸ್ಕೃತ ಶ್ಲೋಕಗಳಿಗಿಂತಲೂ ಶ್ರೇಷ್ಠವಾದವುಗಳು. ಸ್ವಾಮೀಜಿಗಳ ಆಶೀರ್ವಚನ ಮನಮುಟ್ಟುವಂತಿದೆ.
ಸೋಮಶೇಖರ, ಹಾಸನ
Oct 11, 2021ಭವಬಂಧನದಿಂದ ಮುಕ್ತರಾಗಲು ವಚನಗಳು ಬೇಕೇ ಬೇಕು ಎನ್ನುವ ಹಾವಿನಹಾಳ ಕಲ್ಲಯ್ಯನವರ ವಚನಾಮೃತ ಬಹಳ ಅರ್ಥಗರ್ಭಿತವಾಗಿದೆ. ಅತ್ಯುತ್ತಮ ಲೇಖನಗಳನ್ನು ಪ್ರತಿ ತಿಂಗಳು ನಮಗೆ ನೀಡುತ್ತಿರುವ ಬಯಲು ಬ್ಲಾಗಿಗೆ ಧನ್ಯವಾದಗಳು.
ಕುಮಾರಪ್ಪ ಹೊನಕುಂಟೆ
Oct 16, 2021‘ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ – ಎನ್ನುವ ಮಾತಲ್ಲೇ ಶರಣರ ಸ್ವತಂತ್ರ ಮನೋಭಾವವಿದೆ. ಆ ಸ್ವತಂತ್ರ ಮನಸ್ಸಿನ ರಚನೆಗಳೇ ವಚನಗಳು. ಸ್ವತಂತ್ರ ಮನಸ್ಸು ನಿರ್ಭಯವಾಗಿದ್ದು ಸತ್ಯವನ್ನೇ ಹೇಳುತ್ತದೆ.
Nagendra v.p
Oct 17, 2021ಶಿವನೇ ನಿನ್ನ ವಿಶ್ವಚೈತನ್ಯದ ವ್ಯಕ್ತಿತ್ವಕ್ಕೆ ಕುಂದುಬಾರದ ಹಾಗೆ ನನಗೆ ತಿಳಿದಂತೆ ಹಾಡುವೆ ಎನ್ನುವರು- ಅಂತ ಬರೆದಿರುವರು. ವಿಶ್ವ ಚೈತನ್ಯಕ್ಕೆ ವ್ಯಕ್ತಿತ್ವ ಇರುತ್ತದೆಯೆ? ಅದಕ್ಕೆ ಕುಂದು ಮೇಲು ಅನ್ನೋದಿದೆಯೇ? ಇವೆಲ್ಲ ನಮ್ಮ ನಮ್ಮ ಅಂದರೆ ಮನುಷ್ಯನ ಕಲ್ಪನೆಗಳಲ್ಲವೇ?
Prasad Patil
Oct 21, 2021ಭವಬಂಧನ ಕಳಚಿಕೊಳ್ಳಲು ಶಿವವಚನ ಮತ್ತು ಗುರುವಚನ ಸಹಕಾರಿ ಎನ್ನುವುದು ನಿಜ. ಹಿಂದೆ ಹೀಗೆ ಪುರಾಣ-ಪ್ರವಚನಗಳನ್ನು ಎಲ್ಲಾ ವಯಸ್ಸಿನವರು ಕೇಳಲು ಹೋಗುತ್ತಿದ್ದರು. ಆದರೆ ಈಗ ಗುರುಗಳ ಮಾತು ಕೇಳಲು ಸಮಯವೇ ಇರುವುದಿಲ್ಲ. ಜೊತೆಗೆ ಈಗಿನ ಗುರುವರ್ಯರು ಕಾಣಿಕೆ ಬಿಟ್ಟು ಮತ್ತೇನೂ ಹೇಳುವುದಿಲ್ಲ. ಸತ್ವವಿಲ್ಲದ ಸ್ವಾಮಿಗಳ ಮಾತುಗಳಿಗಿಂತ ಶರಣರ ವಚನಗಳನ್ನೇ ಗುರುವಿನ ಜಾಗದಲ್ಲಿ ಇಟ್ಟುಕೊಂಡರೆ ಒಳ್ಳೆಯದು.
Lalithamma
Oct 21, 2021ಸದಾ ಕಾಲಕ್ಕೂ ವಚನಗಳು ಮನುಷ್ಯನಿಗೆ ದಾರಿ ದೀಪವಾಗಿ ನಿಲ್ಲಬಲ್ಲವು. ಅನುಭಾವದ ನುಡಿಗಳು ಕಾಲಾತೀತವಾಗಿವೆ.
Omkaraiah, Dharwad
Oct 21, 2021ವಚನಗಳಲ್ಲಿ ನೀತಿ ಇದೆ, ವಿಚಾರವಿದೆ, ಬದುಕಿನ ಅತ್ಯಮೂಲ್ಯ ಪಾಠಗಳಿವೆ. ಕಂದಾಚಾರಗಳಿಗೆ ಎಳ್ಳುನೀರು ಬಿಟ್ಟ ವಚನಗಳನ್ನು ಪ್ರತಿಯೊಬ್ಬರೂ ಎಲ್ಲಾ ಧರ್ಮ-ಜಾತಿಗಳವರೂ ಓದಲೇ ಬೇಕು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಚಡ್ಯ ಜಿಲ್ಲೆ
Dec 23, 2023ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಚಡ್ಯ ಜಿಲ್ಲೆ
Jul 21, 2024ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com