ಮೈಸೂರು ಜನಗಣತಿಯ ಮಹತ್ವ (1871)
ಇತ್ತೀಚಿನ ದಿನಗಳಲ್ಲಿ (ಅಂದರೆ 21ನೇ ಶತಮಾನದ ಎರಡನೇ ದಶಕದಲ್ಲಿ) ಲಿಂಗಾಯತರಲ್ಲಿ ಮೂಡಿರುವ ಧಾರ್ಮಿಕ-ಪ್ರತ್ಯೇಕತೆಯ ಚಳುವಳಿಯ ಕೂಗು ವಚನ-ಆಧಾರಿತವಾದುದು. ವಚನಗಳ ಆಶಯದಂತೆ ಲಿಂಗಾಯತ ಸಮುದಾಯವನ್ನು ಮರುರೂಪಿಸಬೇಕೆಂದು ಈ ಚಳುವಳಿಯು ಒತ್ತಾಯಿಸುತ್ತದೆ. ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಗುರುತಿನ ಬಗ್ಗೆ ಅದು ಒತ್ತಾಯಿಸುತ್ತದೆ. ಈ ಒತ್ತಾಯದ ಭರದಲ್ಲಿ ಚಳುವಳಿಗಾರರು ಆಧುನಿಕ ಲಿಂಗಾಯತರ ಇತಿಹಾಸದ ಬಗ್ಗೆ ಅನೇಕ ಅನುಮಾನಗಳು ಮತ್ತು ಪ್ರಶ್ನೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಅದರಲ್ಲಿ ಪ್ರಮುಖವಾಗಿ ‘ಲಿಂಗಾಯತರು ಬ್ರಾಹ್ಮಣೀಕೃತ ಹಿಂದು ಧರ್ಮದ ಒಂದು ಭಾಗವೆ?’ ಎಂಬ ಮುಖ್ಯವಾದ ಪ್ರಶ್ನೆಯನ್ನು ಚಳುವಳಿಗಾರರು ಎತ್ತಿದ್ದಾರೆ. ಈ ಚಳುವಳಿಯ ಮುಂಚೂಣಿಯಲ್ಲಿರುವ ಎಸ್.ಎಮ್. ಜಾಮದಾರರವರು ಆಧುನಿಕ ಇತಿಹಾಸದಲ್ಲಿ (ಮುಖ್ಯವಾಗಿ ವಸಾಹತುಶಾಹಿ ಕಾಲದ ಮೈಸೂರು ಸಂಸ್ಥಾನದಲ್ಲಿ) ಲಿಂಗಾಯತರು ಎಸಗಿರುವ ಕೆಲವೊಂದು ಐತಿಹಾಸಿಕ ಮತ್ತು ಧಾರ್ಮಿಕ ತಪ್ಪುಗಳನ್ನು ಉದಾಹರಿಸುತ್ತಾ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ ವಸಾಹತುಶಾಹಿ ಕಾಲದಲ್ಲಿ ನಡೆದ ಜನಗಣತಿಯಲ್ಲಿ ಆಗಿನ ಬ್ರಾಹ್ಮಣೀಕೃತ ಲಿಂಗಾಯತರು (ವಿಶೇಷವಾಗಿ ಮೈಸೂರಿನ ಶಾಸ್ತ್ರಿಗಳು ಮತ್ತು ವೇದಮೂರ್ತಿಗಳು) ಶ್ರೇಷ್ಠತೆಗಾಗಿ ತಮ್ಮನ್ನು ತಾವು ಬ್ರಾಹ್ಮಣರೆಂದು ಬರೆಸಿಕೊಂಡಿದ್ದರಿಂದ ಉಂಟಾದ ಅಚಾತುರ್ಯದಿಂದ ಲಿಂಗಾಯತರ ಪ್ರತ್ಯೇಕ ಧಾರ್ಮಿಕ ಗುರುತು ಸದಾ ಕಾಲ ನೆನೆಗುದಿಗೆ ಬೀಳುವ ಹಾಗೆ ಆಯಿತು. ಅವರು ಹೇಳುವ ಹಾಗೆ-
Lingayats were classified as a separate religion up until the 1871 Mysuru census, and it was only in 1881 that Lingayats were classified as a caste under Hindu religion while Veerashaivas are not mentioned in it. There was no explanation given for this change (1).
12ನೇ ಶತಮಾನದಿಂದ 19ನೇ ಶತಮಾನದ ಮೊದಲ ಜನಗಣತಿಯವರೆಗೆ ಪ್ರತ್ಯೇಕ ಧಾರ್ಮಿಕ ಗುರುತನ್ನು ಹೊಂದಿದ್ದ ಲಿಂಗಾಯತರು ನಂತರದ ಜನಗಣತಿಯಲ್ಲಿ ವರ್ಣಾಶ್ರಮ ಆಧಾರಿತ ಶೂದ್ರ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರಿಂದ ಲಿಂಗಾಯತರು ಗೊಂದಲಕ್ಕೀಡಾದರು ಎಂದು ಅಭಿಪ್ರಾಯಪಡುತ್ತಾರೆ. ವೇದ, ಸಂಸ್ಕೃತ ಹಾಗು ಪುರಾಣಾಧಾರಿತ ಅಡಿಪಾಯದ ಮೇಲೆ ತಮ್ಮ ಬ್ರಾಹ್ಮಣ್ಯವನ್ನು ಸಾಧಿಸಲು ಹೋಗಿ ಆಗಿನ ಕೆಲವೇ ಕೆಲ ವೀರಶೈವರು ಮತ್ತಷ್ಟು ಗೊಂದಲವನ್ನು ಸೃಷ್ಟಿ ಮಾಡಿದರು ಎಂದು ಜಾಮದಾರರು ಭಾವಿಸುತ್ತಾರೆ. ಆಗಿನಿಂದ ಇಂದಿನವರೆಗು ಲಿಂಗಾಯತರು ತಮ್ಮ ಧಾರ್ಮಿಕ ಪ್ರತ್ಯೇಕ ಗುರುತಿಗಾಗಿ ಹೋರಾಟವನ್ನು ಮಾಡುತ್ತಿದ್ದಾರೆಂದು ಅವರು ವಾದಿಸುತ್ತಾರೆ. ಜಾಮದಾರರ ವಾದಗಳ ಹಿನ್ನಲೆಯಲ್ಲಿ ಕೆಲವೊಂದು ಪ್ರಶ್ನೆಗಳು ಉದ್ಬವಿಸುತ್ತವೆ. ವಚನಗಳು ಕನ್ನಡಿಗರ ಸ್ಮೃತಿ ಪಟಲದಲ್ಲಿ ಬೇರೂರುವ ಮೊದಲು ಮತ್ತು ಲಿಂಗಾಯತರು ವಚನಗಳನ್ನು ಜಾಗತಿಕ ಸಾಹಿತ್ಯ ಎಂದು ಬಿಂಬಿಸುವ ಪೂರ್ವದಲ್ಲಿ ವಚನಗಳ ಆಶಯಗಳಿಗೆ ವ್ಯತಿರಿಕ್ತವಾಗಿ ಸೃಷ್ಠಿಗೊಂಡ ಐತಿಹಾಸಿಕ ಘಟನೆಗಳು ಯಾವುವು? ಅವುಗಳಿಗೂ ವಸಾಹತುಶಾಹಿ ಕಾಲದ ಜನಗಣತಿಗೂ ಯಾವ ರೀತಿಯ ಸಂಬಂಧಗಳಿವೆ?
ವಚನಗಳನ್ನು ಲಿಂಗಾಯತರ ಅಸ್ಮಿತೆಯ ಭಾಗವನ್ನಾಗಿ ನೋಡುವ ಮೊದಲು ಲಿಂಗಾಯತ ಸಮುದಾಯದಲ್ಲಿ ಉಂಟಾದ ಐತಿಹಾಸಿಕ ಸಮುದ್ರ ಮಂಥನವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಬಹಳಷ್ಟು ಲಿಂಗಾಯತರಿಗೆ ಮತ್ತು ಕನ್ನಡಿಗರಿಗೆ ಇತಿಹಾಸದ ಈ ಭಾಗವು ಅಗೋಚರ. ಇತಿಹಾಸದಲ್ಲಿ ಆಗಿ ಹೋದ ಈ ‘ಪ್ರಮಾದ’ವನ್ನು ತಿಳಿಸುವುದಕ್ಕೋಸ್ಕರ ಮೈಸೂರು ಸಂಸ್ಥಾನದಲ್ಲಿ ನಡೆದ ಜನಗಣತಿಯಲ್ಲಿ ಲಿಂಗಾಯತರು ಯಾವ ಮತ್ತು ಯಾಕೆ ತಪ್ಪನ್ನು ಎಸಗಿದರು ಎಂದು ವಿಶ್ಲೇಷಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಜಾಮದಾರರು ಈಗ ಎತ್ತಿರುವ ಪ್ರಶ್ನೆಗಳಿಗೆ ಸಂವಾದಿಯಾಗಿ ಸುಮಾರು 80 ವರ್ಷಗಳ ಹಿಂದೆ ಕೆಲವು ಲಿಂಗಾಯತ ವಿದ್ವಾಂಸರು ಮಂಡಿಸಿದ ವಾದಗಳನ್ನು ಗಮನಿಸುವುದರ ಮೂಲಕ ಈ ಲೇಖನವನ್ನು ಮುಂದುವರೆಸಬಹುದು.
ಕ್ರಿಸ್ತ ಶಕ 1871, 1881, 1891ರ ಸೆನ್ಸೆಸ್ಸುಗಳ ಕಾಲದ ಲಾಗಾಯತು ಲಿಂಗಾಯತರ ಪಂಗಡಗಳಲ್ಲಿ ಬ್ರಾಹ್ಮಣರೆಂದು ಹೇಳಿಕೊಳ್ಳುವುದಕ್ಕೆ ಅತ್ಯಂತ ಆಶೆಯುಂಟಾಗಿರುತ್ತದೆ. ಇದಕ್ಕೆ ಮೂಲವೇನೆಂದರೆ, 1871 ಮತ್ತು 1881ನೇ ವರ್ಷಗಳಲ್ಲಿ ಆರಾಧ್ಯರ ಸಮೇತವಾಗಿ ಲಿಂಗಾಯತರು ಅಕ್ರಮ ಪಂಕ್ತಿಯಲ್ಲಿ ಸೇರಿಸಲ್ಪಟ್ಟರು. ಇದಕ್ಕೆ ಲಿಂಗಾಯತರು ಅಸಮಾಧಾನ ಹೊಂದಿರುವರಾಗಿ ಭಾವಿಸಿ, ತಾವು ಗೊತ್ತಿಲ್ಲದೆ, ಜನಪರಿಗಣಿತಿಯಲ್ಲಿ ಪ್ರತ್ಯೇಕವಾಗಿ ಸೇರಿಸಲ್ಪಡಬೇಕೆಂದು ಹೇಳುವುದರ ಬದಲಾಗಿ, ತಾವು ಲಿಂಗಾಯತ ಬ್ರಾಹ್ಮಣರೆಂದು ಕರೆದುಕೊಳ್ಳುವುದಕ್ಕೆ ಹಕ್ಕನ್ನು ಮುಂದೆ ಚಾಚಿದರು. ಆಗಿನಿಂದಲೂ ಲಿಂಗಾಯತರಲ್ಲಿ ವಿವಿಧ ಪಂಗಡಗಳವರು ತಮ್ಮ ತಮ್ಮ ಅಧಿಕ್ಯದ ವಿಷಯವಾಗಿ ಪರಿಜ್ಞಾನವುಳ್ಳವರಾಗಿ ತಮ್ಮ ತಮ್ಮ ಜಾತಿಯ ಶ್ರೇಷ್ಟತ್ವವನ್ನು ಮುಂದೆ ಚಾಚುವುದಕ್ಕೆ ಪ್ರಯತ್ನ ಪಡುತ್ತಲಿದ್ದಾರೆ. ಈಗಲೂ ಕೂಡ ಲಿಂಗಿ ಬ್ರಾಹ್ಮಣ ಅಥವಾ ವೀರಶೈವ ಬ್ರಾಹ್ಮಣ ಎಂಬ ಶಬ್ದ ಪ್ರಯೋಗಗಳು ಅನೇಕ ಸ್ಥಲಗಳಲ್ಲಿ ಉಪಯೋಗಿಸಲ್ಪಡುತ್ತದೆ. (ಜೀರಗೆ ಬಸವಲಿಂಗಪ್ಪ, 1933)
ಈ ಮೇಲಿನ ಮಾತುಗಳು ಅಂದಿನ ಪ್ರಸಿದ್ಧ ಲಿಂಗಾಯತ ವಿದ್ವಾಂಸರಾದ ಜೀರಗೆ ಬಸವಲಿಂಗಪ್ಪನವರದ್ದು. ಅವರ ಈ ವಿಚಾರಗಳು ಇತಿಹಾಸದಲ್ಲಿ ಲಿಂಗಾಯತರು ಕಳೆದುಕೊಂಡ ಒಂದು ಸುವರ್ಣಾವಕಾಶವನ್ನು ಬೇಸರದಿಂದ ನೆನೆಪಿಸಿಕೊಂಡ ಮಾತುಗಳಾಗಿವೆ. ಒಂದು ಹೆಜ್ಜೆ ಮುಂದೆ ಹೋಗಿ “ಜನಪರಿಗಣಿತಿಯಲ್ಲಿ ಪ್ರತ್ಯೇಕವಾಗಿ ಸೇರಿಸಲ್ಪಡಬೇಕೆಂದು ಹೇಳುವುದರ ಬದಲಾಗಿ, ತಾವು ಲಿಂಗಾಯತ ಬ್ರಾಹ್ಮಣರೆಂದು ಕರೆದುಕೊಳ್ಳುವುದಕ್ಕೆ ಹಕ್ಕನ್ನು ಮುಂದೆ ಚಾಚಿದರು” ಎಂಬ ಅಂಶವನ್ನು ಅವರು ವಿಷಾದದಿಂದ ಗಮನಿಸುತ್ತಾರೆ. ಇತಿಹಾಸದಲ್ಲಿ ಆಗಿ ಹೋದ ಅಚಾತುರ್ಯದ ಬಗ್ಗೆ ಅವರು ಖೇದವನ್ನು ವ್ಯಕ್ತಪಡಿಸುತ್ತಾರೆ. “ಜನಪರಿಗಣಿತಿಯಲ್ಲಿ ಪ್ರತ್ಯೇಕವಾಗಿ ಸೇರಿಸಲ್ಪಡಬೇಕೆಂದು ಹೇಳುವುದರ ಬದಲಾಗಿ…” ಎಂಬ ಮಾತುಗಳಲ್ಲಿ ಲಿಂಗಾಯತರ ಪ್ರತ್ಯೇಕ ಗುರುತಿನ ಬಗ್ಗೆ ಕಳಕಳಿಯಿದ್ದು ಅದನ್ನು ಸಾಧಿಸಲು ಇದ್ದಂತ ಸದಾವಕಾಶವನ್ನು ಲಿಂಗಾಯತರು ಕಳೆದುಕೊಂಡಿದುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ವೀರಶೈವ ಬ್ರಾಹ್ಮಣ ಎಂದು ಕರೆಸಿಕೊಳ್ಳಲು ಬಯಸುವ ಹಿರಿಯರಿಂದ ಲಿಂಗಾಯತರಲ್ಲಿ ಸಾಮಾಜಿಕ ಶ್ರೇಣೀಕರಣ ದಟ್ಟವಾಗಿ ಬೆಳೆಯಿತು ಎಂದು ಅವರು ಅಭಿಪ್ರಾಯಪಡುತ್ತಾರೆ. ಈ ವಿದ್ವಾಂಸರ ಮಾತುಗಳಲ್ಲಿ ಮತ್ತೊಂದು ಅಸಮಾಧಾನದ ಅಂಶವನ್ನು ಕಾಣುತ್ತೇವೆ. ಬ್ರಾಹ್ಮಣ್ಯದ ಬಗ್ಗೆ ಆಗಿನ ಕೆಲವೇ ಕೆಲವು ವೀರಶೈವರಲ್ಲಿದ್ದ ಒಲವು ಮತ್ತು ಅಭಿಮಾನವನ್ನು ಜೀರಿಗೆ ಬಸವಲಿಂಗಪ್ಪನಂತವರು ಅಸಮಾಧಾನದಿಂದ ಕಾಣುತ್ತಾರೆ. ಆಗಿನ ಕೆಲವು ವೀರಶೈವರು ಅಭಿಮಾನ-ಶೂನ್ಯರಾಗಿದ್ದರು ಎಂಬುದೆ ಈ ಅಸಮಧಾನದ ಒಳ ಇಂಗಿತ. ಈ ಬ್ರಾಹ್ಮಣ್ಯದ ಅಭಿಮಾನ ಪೊಳ್ಳುತನದಿಂದ ಕೂಡಿದ್ದು, ಅದರಿಂದ ಏನೂ ಉಪಯೋಗವಾಗದೇ ನಿರರ್ಥಕವಾಯಿತು ಎಂದು ಇವರು ತಮ್ಮ ಲೇಖನದಲ್ಲಿ ವಾದಿಸಿದ್ದಾರೆ.
ಜೀರಿಗೆ ಬಸವಲಿಂಗಪ್ಪನವರು ಭಾವಿಸಿರುವ ಲಿಂಗಾಯತರ ಅಚಾತುರ್ಯವು 1871 ಜನಗಣತಿಯಿಂದ ಪ್ರಾರಂಭವಾದುದಲ್ಲ. ಲಿಂಗಾಯತರು ಸುವರ್ಣಾವಕಾಶವನ್ನು ಕಳೆದುಕೊಂಡದ್ದು 1881 ಮತ್ತು 1891 ಜನಗಣತಿಯ ನಂತರ. 1871ರ ಜನಗಣತಿಯು ಲಿಂಗಾಯತರಿಗೆ ಪ್ರತ್ಯೇಕ ಧರ್ಮಕ್ಕೆ ಸೇರಿಸುವ ಒಂದು ಸುವರ್ಣಾವಕಾಶವನ್ನು ನೀಡಿದ ಒಂದು ಜನಗಣತಿ. ವಸಾಹತುಶಾಹಿಯ ಕಾಲಘಟ್ಟದಲ್ಲಿ, ವಿಶೇಷವಾಗಿ ಮೈಸೂರಿನಲ್ಲಿ, ಪ್ರಪ್ರಥಮ ಔಪಚಾರಿಕವಾದ ಹಾಗು ಅಧಿಕೃತವಾದ ಜನಗಣತಿ ಆಗಿದ್ದು 1871ರಲ್ಲಿ. ಈ ಪ್ರಪ್ರಥಮ ಜನಗಣತಿಯು ಲಿಂಗಾಯತ ಸಮುದಾಯಕ್ಕೆ ಅತ್ಯಂತ ಮಹತ್ವವುಳ್ಳ ಜನಗಣತಿ. ಏಕೆಂದರೆ ಈ ಜನಗಣತಿಯಲ್ಲಿ ಲಿಂಗಾಯತ ಸಮುದಾಯದವರನ್ನು ಹಿಂದು ಸಮಾಜ/ಧಾರ್ಮಿಕ ಚೌಕಟ್ಟಿನಲ್ಲಿ ಇರಿಸದೆ, ಪ್ರತ್ಯೇಕ ಸ್ಥಾನ-ಮಾನದಲ್ಲಿ ಇರಿಸಲಾಗಿದೆ. ಅಂದರೆ 1871ರ ಜನಗಣತಿಯಲ್ಲಿ ಲಿಂಗಾಯತರನ್ನು ಪ್ರತ್ಯೇಕ ವರ್ಗಕ್ಕೆ ಸೇರಿಸಲಾಗಿತ್ತು. ಈ ಪ್ರತ್ಯೇಕತೆ ಹಿಂದು ಸಮಾಜದ ಚಾತುರ್ವರ್ಣದ ಪರಿಧಿಯೊಳಗೆ ಇರದೆ, ಭಿನ್ನವಾದ, ಪ್ರತ್ಯೇಕ ಅಸ್ತಿತ್ವವನ್ನು ಪಡೆದುಕೊಂಡಿತ್ತು. ಇತ್ತೀಚೆಗೆ ಲಿಂಗಾಯತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ನಡೆದ ಹೋರಾಟಗಳ ಹಿನ್ನಲೆಯಲ್ಲಿ ಈ ಜನಗಣತಿ ಬಹಳ ಮುಖ್ಯವೆನಿಸುತ್ತದೆ. ಈ ಜನಗಣತಿಯಲ್ಲಿ ಮೈಸೂರು ಪ್ರಾಂತದ ಲಿಂಗಾಯತರ ಬಗ್ಗೆ ಇರುವ ವಿವರಣೆಗಳೇನು? ಹಿಂದು ಸಮಾಜಕ್ಕೂ ಮತ್ತು ಲಿಂಗಾಯತರಿಗೆ ಆಗ ಯಾವ ಶ್ರೇಣಿಯಲ್ಲಿ ಇರಿಸಲಾಯಿತು?
1871ರ ಜನಗಣತಿಯಲ್ಲಿ ಹಿಂದುಗಳನ್ನು ನಾಲ್ಕು ವರ್ಣದಡಿಯಲ್ಲಿ ಗುರುತಿಸಲಾಯಿತು- ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಹಿಂದುಗಳಲ್ಲಿ ಕಾಣಬರುವ ಸಹಸ್ರಾರು ಸಂಖ್ಯೆಯ ಜಾತಿಗಳನ್ನು ಈ ನಾಲ್ಕು ವರ್ಣಗಳಡಿಯಲ್ಲಿ ಗುರುತಿಸಲಾಗಿದೆ/ಸೇರಿಸಲಾಗಿದೆ. ಆದರೆ ಲಿಂಗಾಯತರನ್ನು ಇದ್ಯಾವುದೇ ವರ್ಗ/ಜಾತಿಯಲ್ಲಿ ಗುರುತಿಸದೆ ಅವರೊಂದು ಪ್ರತ್ಯೇಕ ವರ್ಗ/ಧರ್ಮವೆಂದು ನಮೂದಿಸಲಾಯಿತು. ಅಂದರೆ ಅವರನ್ನು ಬ್ರಾಹ್ಮಣೀಕೃತ ಹಿಂದು-ಚಾತುರ್ವರ್ಣದೊಳಗೆ ಗುರುತಿಸದೆ ‘ಇತರ ಕ್ರಮಗಳು’ ಎಂಬ ವರ್ಗದಡಿಯಲ್ಲಿ ನಮೂದಿಸಲಾಯಿತು. ‘ಇತರ ಕ್ರಮಗಳು’ ಅಂದರೆ ಚಾತುರ್ವರ್ಣೇತರ ಸಾಮಾಜಿಕ ವ್ಯವಸ್ಥೆವುಳ್ಳ ಭಾಗ. ಹೀಗೆ ಲಿಂಗಾಯತರನ್ನು ಪ್ರತ್ಯೇಕವಾಗಿ ಗುರುತಿಸಿರುವುದಕ್ಕೆ ಕಾರಣವನ್ನು ಅಂದಿನ 1871 ರ ಮೈಸೂರು ಜನಗಣತಿಯ ಕಮಿಷನರ್ರಾದಂತಹ ಎ.ಡಬ್ಲ್ಯು.ಸಿ. ಲಿಂಡ್ಸೆಯ ಮಾತುಗಳಲ್ಲೆ ನೋಡಬಹುದು-
This cannot be termed a caste. It is a religion to which many castes belong. In the returns, however, the term is common both as a religion and caste. Some of the people have returned themselves as belonging to particular castes and Lingaytas in religion, while the greater number call themselves Lingayats in caste and Lingayats in religion. In compiling the returns, the whole number have been considered as Lingayats in castes and entered accordingly (1871: 78)(2).
ಕೆಲವರು ಲಿಂಗಾಯತ ಜಾತಿಯೆಂದು, ಮತ್ತಿತರರು ಲಿಂಗಾಯತ ಧರ್ಮವೆಂದು ಹೇಳಿಕೊಂಡಿರುವುದು ಸರಿಯಾದ ಕ್ರಮವಲ್ಲವೆಂದು ಲಿಂಡ್ಸೆಯ ಅಭಿಮತ. ತಮ್ಮನ್ನು ತಾವು ಸೆನ್ಸಸ್ನಲ್ಲಿ ಗುರುತಿಸಿಕೊಳ್ಳುವುದರಲ್ಲಿ ಲಿಂಗಾಯತರಲ್ಲಿ ಇದ್ದ ಅನಿಶ್ಚಿತತೆ ಮತ್ತು ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಲಿಂಡ್ಸೆ ತನ್ನ ವರದಿಯಲ್ಲಿ ಮಾಡಿದ್ದಾನೆ. ‘ಇತರ ಕ್ರಮಗಳು’ಅಡಿಯಲ್ಲಿ ಲಿಂಗಾಯತರ 22 ಉಪ-ಜಾತಿಗಳನ್ನು ನಮೂದಿಸಲಾಗಿದೆ. ಅಂದರೆ ಲಿಂಗಾಯತ ಧರ್ಮದಲ್ಲಿ ಈ ಎಲ್ಲಾ ಜಾತಿಗಳು ಉಪ-ಜಾತಿಗಳಾಗಿ ನಮೂದಿಸಲ್ಪಟ್ಟಿವೆ. ಈ ಉಪ-ಜಾತಿಗಳ ಪಟ್ಟಿಯಲ್ಲಿ ಪಂಚಾಚಾರ ಮತ್ತು ಆರಾಧ್ಯರನ್ನು (ಲಿಂಗಾಯತರಲ್ಲಿ ಅಂದು ಓದು ಸಂಸ್ಕೃತಿಯನ್ನು ಹೆಚ್ಚಾಗಿ ಕಾಣುವುದೆ ಇವರಲ್ಲಿ) ಸೇರಿಸಿರುವ ಅಂಶ ನಮ್ಮ ವಿಶೇಷ ಗಮನ ಸೆಳೆಯುತ್ತದೆ. ವಿಶೇಷವೇನೆಂದರೆ ಹತ್ತು ವರ್ಷಗಳ ನಂತರ ನಡೆಯುವ ಎರಡನೇ ಸೆನ್ಸಸ್ (1881)ನಲ್ಲಿ ಲಿಂಗಾಯತರ ಇತರ ಜಾತಿಗಳ ಜೊತೆಗೆ ಇವೆರಡು ಜಾತಿಗಳನ್ನು ಶೂದ್ರರ ವರ್ಗಕ್ಕೆ ಸೇರಿಸಿದಾಗ ಈ ಎರಡು ಜಾತಿಗಳ ವಿದ್ಯಾವಂತ ಪಂಡಿತರು ಬಲವಾದ ಪ್ರತಿರೋಧವನ್ನು ವ್ಯಕ್ತಪಡಿಸಿ, ತಾವು ಬ್ರಾಹ್ಮಣರಷ್ಟೆ ಶೇಷ್ಠರು ಎಂದು ವಾದಿಸಿದರು. ಜೀರಿಗೆ ಬಸವಲಿಂಗಪ್ಪನವರು ಇಂತಹ ವಿದ್ವಾಂಸರನ್ನು ಕುರಿತೆ ಮೇಲಿನ ಅಚಾತುರ್ಯದ ಮತ್ತು ತಪ್ಪಿ ಹೋದ ಸುವರ್ಣಾವಕಾಶದ ಮಾತುಗಳನ್ನಾಡಿದರು.
ಒಂದು ವಿಷಯ ಇಲ್ಲಿ ಸ್ಪಷ್ಟ. ಲಿಂಗಾಯತರು ತಮ್ಮದೇ ಆದ ಪ್ರತ್ಯೇಕ ಧಾರ್ಮಿಕ ಅಸ್ತಿತ್ವವನ್ನು ಹೊಂದಿರುವುದರಿಂದ ಅವರನ್ನು ಹಿಂದು ವರ್ಣಾಶ್ರಮದಡಿಯಲ್ಲಿ ನೋಡುವುದು ತಪ್ಪು ಎಂದು ಲಿಂಡ್ಸೆ ತನ್ನ ಸೆನ್ಸಸ್ ವರದಿಯಲ್ಲಿ ಸ್ಪಷ್ಟವಾಗಿ ಸೂಚಿಸಿರುವ ಹಾಗೆ ಕಾಣುತ್ತದೆ. ಹಾಗಾದರೆ ಯಾವ ಆಧಾರದ ಮೇಲೆ ಲಿಂಡ್ಸೆ ಲಿಂಗಾಯತರನ್ನು ಒಂದು ಧರ್ಮವೆಂದು ಕರೆಯುತ್ತಾನೆ? ಯಾವ ಕಾರಣಕ್ಕಾಗಿ ಲಿಂಗಾಯತರನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ? ಲಿಂಗಾಯತರ ಆಚಾರ-ವಿಚಾರಗಳು ಬ್ರಾಹ್ಮಣ/ಬ್ರಾಹ್ಮಣ್ಯಕ್ಕೆ ಸಮನಾಗಿರುವ ಅಥವಾ ತದ್ವಿರುದ್ದವಿರುವ ಅಂಶ ಲಿಂಗಾಯತರನ್ನು ಬ್ರಾಹ್ಮಣ ಆಧಾರಿತ ವರ್ಣಾಶ್ರಮದಡಿಯಲ್ಲಿ ಸೇರಿಸದಿರಲು ಅವನಿಗೆ ಮುಖ್ಯ ಕಾರಣ. ಇದಕ್ಕೆ ಪೂರಕವಾಗಿ ಅವನು ಬರೆದಿರುವ ವಿಚಾರಗಳನ್ನು ಗಮನಿಸೋಣ-
They (ಲಿಂಗಾಯತರು) are as rigorous as Brahmans in their abstinence from eating meat and drinking liquor, and more bigoted in the strict observance of the customs and rules. In this caste only are women during their periodical illness admitted into society. Their priests will not permit themselves to be touched by anyone who does not wear the Linga (1874, ಪುಟ 78)(3).
ಲಿಂಗಾಯತರು ಆಚಾರ-ವಿಚಾರಗಳಲ್ಲಿ ಬ್ರಾಹ್ಮಣರಷ್ಟೆ ಸ್ವತಂತ್ರರು ಮತ್ತು ಕಠಿಣವಾದಿಗಳು ಎಂಬ ಅಂಶ ಅವರನ್ನು ಪ್ರತ್ಯೇಕ ವರ್ಗಕ್ಕೆ ಸೇರಿಸಲು ಲಿಂಡ್ಸೆಗೆ ಪೂರಕವಾಗಿ ಕಾಣುತ್ತದೆ. ಅಂದರೆ ಬ್ರಾಹ್ಮಣರು ತಮ್ಮ ಕಠಿಣವಾದಿಗಳ (ಆಚಾರ-ವಿಚಾರಗಳು, ಸಂಪ್ರದಾಯ ಮತ್ತು ತಾತ್ವಿಕ ಚಿಂತನೆಗಳು) ದೆಸೆಯಿಂದ ತಮ್ಮನ್ನು ಬೇರೆಯವರಿಂದ ಪ್ರತ್ಯೇಕವೆಂದು ಘೋಷಿಸುವುದಾದರೆ ಮತ್ತು ಬ್ರಿಟೀಷ್ ಸರ್ಕಾರ ಅವರ ಘೋಷಣೆಗೆ ಮನ್ನಣೆ ನೀಡುವುದಾದರೆ, ಅಷ್ಟೇ ಕಠಿಣವಾದಿಗಳಾದ ಲಿಂಗಾಯತರು ಕೂಡ ಪ್ರತ್ಯೇಕ ಗುರುತಿಗೆ (ಧಾರ್ಮಿಕ ಮತ್ತು ಸಾಮಾಜಿಕವಾಗಿ) ಅರ್ಹರು ಎಂಬುದು ಲಿಂಡ್ಸೆಯ ಅಭಿಮತ. ಇದೇ ಕಾರಣಕ್ಕೆ ಈ ಸೆನ್ಸಸ್ನಲ್ಲಿ ಜೈನರನ್ನು ಕೂಡ ಲಿಂಗಾಯತರ ಸಾಲಿಗೆ ಸೇರಿಸುತ್ತಾನೆ. ಏಕೆಂದರೆ ಅವರು ಕೂಡ ಬ್ರಾಹ್ಮಣರಷ್ಟೆ ಬಿಗುವಾದ, ಭಿನ್ನವಾದ ಮತ್ತು ಸ್ವತಂತ್ರವಾದ ನಂಬಿಕೆ, ಆಚಾರ-ವಿಚಾರಗಳನ್ನು ಉಳ್ಳವರಾಗಿದ್ದಾರೆ. ಜೊತೆಗೆ ಜೈನರ ಅನೇಕ ಬ್ರಾಹ್ಮಣ-ವಿರೋಧಿ ಅಥವ ಬ್ರಾಹ್ಮಣ ವಿಚಾರಗಳಿಗೆ ಪರ್ಯಾಯವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಲೋಕದೃಷ್ಟಿಯನ್ನು ಲಿಂಡ್ಸೆ ಓದುಗರ ಗಮನಕ್ಕೆ ತಂದಿದ್ದಾನೆ. ಹಾಗಾಗಿ ಲಿಂಗಾಯತರು ಮತ್ತು ಜೈನರನ್ನು ‘ಇತರ ಕ್ರಮಗಳು’ ಅಡಿಯಲ್ಲಿ ನಮೂದಿಸಲಾಗಿದೆ. ಲಿಂಡ್ಸೆ ಈ ರೀತಿಯಾಗಿ ಬರೆಯುವ ಮೊದಲು ಲಿಂಗಾಯತರ ಲೋಕದೃಷ್ಟಿಯ ಬಗ್ಗೆ ಅದಾಗಲೇ ಅನೇಕ ಪಾಶ್ಚಾತ್ಯ ವಿದ್ವಾಂಸರು ತಮ್ಮ ಲೇಖನಗಳಲ್ಲಿ ಚರ್ಚಿಸಿದ್ದರು. ಬಹುಶಃ ಈಗಾಗಲೇ ಲಭ್ಯವಿದ್ದ ಮಾಹಿತಿಗಳ ಆಧಾರದ ಮೇಲೆ ಲಿಂಡ್ಸೆ ಲಿಂಗಾಯತರ ಬಗ್ಗೆ ತನ್ನ ನಿಲುವುಗಳನ್ನು ವ್ಯಕ್ತಪಡಿಸಿದ್ದಾನೆಂದು ತಿಳಿಯಬಹುದು. ಈ ಮಾಹಿತಿಗಳಲ್ಲಿ ನಮಗೆ ಸಾಮಾನ್ಯವಾಗಿ ಕಾಣುವುದು ಲಿಂಗಾಯತರ ವೈದಿಕಶಾಹಿ/ಬ್ರಾಹ್ಮಣಶಾಹಿ ವಿರೊಧಿ ವಿಚಾರಗಳು, ಜೈನರಿಗಿಂತ ಭಿನ್ನವಾದ ಸ್ವತಂತ್ರ ಆಚಾರ-ವಿಚಾರಗಳು.
1871ರ ನಂತರ ನಡೆದ ದಶವಾರ್ಷಿಕ ಜನಗಣತಿಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಕಮಿಷನರುಗಳು ಬ್ರಾಹ್ಮಣ ಸಮಾಜಕ್ಕೆ ಸೇರಿದವರು. ಮೊದಲ ಜನಗಣತಿಯನ್ನು ಹೊರತುಪಡಿಸಿ ಉಳಿದ ಜನಗಣತಿಗಳ ಉನ್ನತ ಅಧಿಕಾರಿಗಳು (ಸೆನ್ಸಸ್ ಕಮಿಷನರುಗಳು) ಬ್ರಾಹ್ಮಣರು. ಸೆನ್ಸಸ್ ರಿಪೋರ್ಟ್ಗಳನ್ನು ಬರೆದಿರುವ ಈ ಅಧಿಕಾರಿಗಳು (1881ರ ಜನಗಣತಿಯ ವಿವಾದದಿಂದ ಶುರುವಾಗಿ) ಲಿಂಗಾಯತರ ಪ್ರತ್ಯೇಕತೆಯ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ತಾಳಿದರು. ಬ್ರಾಹ್ಮಣರ ಹಿಡಿತದಲ್ಲಿದ್ದ ಜನಗಣತಿಯ ಪ್ರಕ್ರಿಯೆಯನ್ನು ಲಿಂಗಾಯತರು ಅನುಮಾನದಿಂದ ನೋಡಿರುವ ಅನೇಕ ಪ್ರಸಂಗಗಳು ಇತಿಹಾಸದಲ್ಲಿ ಕಳೆದು ಹೋಗಿವೆ. ಅವನ್ನು ಕೆದಕಿ, ಹುಡುಕಿ, ಕೂಲಂಕಷವಾಗಿ ವಿಶ್ಲೇಷಿಸುವ ಐತಿಹಾಸಿಕ ಅವಶ್ಯಕತೆ ಈಗ ಇದೆ.
———–
1. https://www.thenewsminute.com/article/we-were-separate-hindus-till-1871-lingayat-leader-hails-ktaka-govts-move-78207. Read on 8th May, 2019.
2. ಸೆನ್ಸಸ್ ರಿಪೋರ್ಟ್ (ಮೈಸೂರು, 1871), ಮೈಸೂರು ವಿಶ್ವವಿದ್ಯಾಲಯದ ಪತ್ರಗಾರ. ಅನುಬಂಧ 2 ನೋಡಿ.
3. ಅದೇ.
Comments 13
Naveen Hulikunte
Mar 12, 2023ಮೈಸೂರು ಜನಗಣತಿಯ ಮಾಹಿತಿಯ ಆಧಾರದ ಮೇಲೆ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಹೆಚ್ಚಿನ ಬಲದಿಂದ ಮುನ್ನಡೆಯಬಹುದು. ಕಾನೂನಿನ ಹೋರಾಟದಲ್ಲು ನ್ಯಾಯ ನಮ್ಮ ಕಡೆಗೇ ಇದೆ. Thanks for sharing this valuable information sir.
ಕಾರ್ತಿಕ್ ಶಿವಮೊಗ್ಗ
Mar 12, 2023‘ಲಿಂಗಾಯತರು ಬ್ರಾಹ್ಮಣೀಕೃತ ಹಿಂದು ಧರ್ಮದ ಒಂದು ಭಾಗವೆ?’ ಎನ್ನುವುದು ಚಳುವಳಿಗಾರರ ಈಗಿನ ಪ್ರಶ್ನೆಯಾಗಿ ಉಳಿದಿಲ್ಲ. ಹಿಂದೂ ಧರ್ಮದ ಕಗ್ಗಂಟಿನಿಂದ ನಾವು ದೂರವಾದವು ಎನ್ನುವುದನ್ನು ಹೇಗೆ ನಿರೂಪಿಸುವುದು ಎಂಬುದು ಅವರ ಬಹುದೊಡ್ಡ ಪ್ರಶ್ನೆಯಾಗಿದೆ. ಜನಸಾಮಾನ್ಯರು ಹಿಂದೂ ಪದಕ್ಕೆ ಅನಗತ್ಯವಾಗಿ ವಿಪರೀತ ಅಂಟಿಕೊಂಡಿರುವುದರಿಂದ ಇದು ನಿಜಕ್ಕೂ ಸವಾಲಾಗಿ ಬಿಟ್ಟಿದೆ. ಲೇಖಕರ ಪ್ರಸ್ತುತ ವಿಚಾರಗಳು ಕಠಿಣ ಹಾದಿಯನ್ನು ಸುಲಭಮಾಡಲು ಪ್ರಯತ್ನಿಸುತ್ತಿವೆ.
ವಿರೂಪಾಕ್ಷ ಸಿ.ಪಿ
Mar 12, 2023ನಾವು ಬ್ರಾಹ್ಮಣರಷ್ಟೇ ಶ್ರೇಷ್ಠರು ಎನ್ನುವ ಹುಚ್ಚು ಲಿಂಗಾಯತರನ್ನು ಇಂದಿಗು ಬಿಟ್ಟಿಲ್ಲ. 19ನೇ ಶತಮಾನದಲ್ಲಿ ಜನಗಣತಿಯ ಸಂದರ್ಭದಲ್ಲಿ ನಡೆದ ಆ ಐತಿಹಾಸಿಕ ದ್ರೋಹ ಲಿಂಗಾಯತರಲ್ಲಿರುವ ಉನ್ನತ ಕುಲದವರೆಂಬ ಭ್ರಮೆಗೆ ಸಾಕ್ಷಿಯಾಗಿ ಕಣ್ಣಿಗೆ ರಾಚುವಂತಿದೆ.
ಸುದೇಶ್ ಜಮಖಂಡಿ
Mar 13, 20231871- ಲಿಂಗಾಯತರು ಹೇಗೆ ತಮ್ಮನ್ನು ಪ್ರತ್ಯೇಕ ಧರ್ಮವಾಗಿ ಗುರುತಿಸಿಕೊಳ್ಳಲು ಸೋತು ಹೋದರು ಎನ್ನುವುದನ್ನು ಆಧಾರ ಸಹಿತ ನಿರೂಪಿಸಿರುವಿರಿ. ಶ್ರೇಷ್ಟತೆಯ ಆಸೆಗೆ ಜೊಲ್ಲು ಸುರಿಸಿದ ಕೆಲವೇ ಕೆಲವರ ದುರಾಸೆಯಿಂದಾಗಿ ಇವತ್ತು ಇಡೀ ಸಮಾಜ ಗೊಂದಲದಲ್ಲಿ ಅಷ್ಟೇ ಅಲ್ಲಾ, ಪ್ರಪಾತದಲ್ಲಿ ಸಿಲುಕಿಕೊಂಡಿದೆ.
Guruprasad Chitradurga
Mar 14, 2023ವಚನಗಳ ಆಶಯಗಳಿಗೆ ವಿರುದ್ಧವಾಗಿ ನಡೆದ ಐತಿಹಾಸಿಕ ಸಂದರ್ಭಗಳು ಲಿಂಗಾಯತ ಸಮಾಜದಲ್ಲಿ ಬಹಳಷ್ಟು ನಡೆದು ಹೋಗಿವೆ. ಅವುಗಳನ್ನು ಸಾಂದರ್ಭಿಕವಾಗಿ ಅವಲೋಕಿಸುವ ಅಗತ್ಯವಿದೆ. ಲೇಖನ ನೀಡುವ ಮಾಹಿತಿಯನ್ನು ಬಂಧುಗಳ ನಡುವೆ ಹಂಚಿಕೊಂಡೆ, thank you 🙏🏽
ಶಿವರುದ್ರಪ್ಪ ಜಾಲಿಹಳ್ಳಿ
Mar 15, 2023ಪ್ರತ್ಯೇಕ ಧರ್ಮದ ಜಾಗದಲ್ಲಿ ನಮೂದಿತವಾಗಿದ್ದ ಲಿಂಗಾಯತ ಧರ್ಮವು ಕೆಲವು ಸ್ವಾರ್ಥಿಗಳ ಕೈಗೆ ಸಿಕ್ಕು ಹಿಂದೂ ಧರ್ಮದಡಿ ಜಾತಿಯಾಗಿ ಬಿದ್ದ ಚರಿತ್ರೆಯ ಆ ಪುಟಗಳೇ ಇಂದಿನ ಲಿಂಗಾಯತರ ದುಃಸ್ಥಿತಿಗೆ ಕಾರಣವೆನ್ನುವುದು ನನ್ನ ಬಲವಾದ ನಂಬಿಕೆ. ನೀವೂ ಅದನ್ನೇ ಸಮರ್ಥವಾಗಿ ನಿರೂಪಿಸಿದ್ದೀರಿ.
ವಿಶ್ವನಾಥ ಹಿರೇಮಠ
Mar 15, 2023ಆ ಜನಗಣತಿಯಲ್ಲಿ ವೀರಶೈವ ಎನ್ನುವ ಹೆಸರು ಇರಲೇ ಇಲ್ಲವೇ? ಮೈಸೂರು ಭಾಗದಲ್ಲಿ ಲಿಂಗಾಯತರಿಗೆ ಲಾಗಾಯ್ತಿನಿಂದಲೂ ವೀರಶೈವರೆಂದೇ ಕರೆಯುವ ವಾಡಿಕೆ. ಆದಾಗ್ಯೂ ಜನಗಣತಿಯಲ್ಲಿ ಲಿಂಗಾಯತಕ್ಕೆ ಪರ್ಯಾಯವಾಗಿ ಅಥವಾ ಅದರ ಸಮಾನಾರ್ಥವಾಗಿ ವೀರಶೈವ ಪದ ಇದ್ದಿರಲೇ ಬೇಕೆಂದು ನಾನು ಭಾವಿಸಿದ್ದೆ. ಅದರ ಮೇಲೆ ತಮ್ಮ ಸಂಶೋಧನೆಯ ಬೆಳಕು ಚೆಲ್ಲುತ್ತೀರಾ?
Lingaraj Dharawad
Mar 17, 2023ಲಿಂಡ್ಸೆ ಅವರ ವಿಚಾರಗಳನ್ನು ಓದಿ ಮಹದಾನಂದವಾಯಿತು.1. ಲಿಂಗಾಯತರು ತಮ್ಮದೇ ಆದ ಪ್ರತ್ಯೇಕ ಧಾರ್ಮಿಕ ಅಸ್ತಿತ್ವವನ್ನು ಹೊಂದಿರುವುದರಿಂದ ಅವರನ್ನು ಹಿಂದು ವರ್ಣಾಶ್ರಮದಡಿಯಲ್ಲಿ ನೋಡುವುದು ತಪ್ಪು. 2. ಲಿಂಗಾಯತರು ಆಚಾರ-ವಿಚಾರಗಳಲ್ಲಿ ಬ್ರಾಹ್ಮಣರಷ್ಟೆ ಸ್ವತಂತ್ರರು ಮತ್ತು ಕಠಿಣವಾದಿಗಳು ಎಂಬ ಅಂಶ ಅವರನ್ನು ಪ್ರತ್ಯೇಕ ವರ್ಗಕ್ಕೆ ಸೇರಿಸಲು ಕಾರಣ.
Vijay Boratti
Mar 20, 2023Reply to mr. Vishwanath hiremath—
Yes, i do agree with you that the term virashaiva was widely used during those days. So was the term lingayat. For the convenience of my arguments i have used the latter term. Both terms have historical meanings. (For typing convenience i have replied in English. Excuse me, sir).
Srinath Rayasam
Mar 21, 2023ಲಿಂಗಾತರ ದೌರ್ಭಾಗ್ಯವೆಂದರೆ ಅವರು ರಾಜಕೀಯ ಹಗ್ಗಜಗ್ಗಾಟದಲ್ಲಿ ಬಲಿಪಶುಗಳಾಗುತ್ತಿದ್ದಾರೆ ! ಒಂದು ಕಾಲದಲ್ಲಿ ( ಈಗಲೂ) ಮುಂದುವರೆದ ಜಾತಿಯವರಾಗಿದ್ದವರು ಈಗ 2A ಸೌಲಭ್ಯಗಳನ್ನು ಪಡೆಯಲು ಹೋರಾಡಬೇಕಾದ ಪರಿಸ್ಥಿತಿ ತಂದುಕೊಂಡಿದ್ದಾರೆ ! ಇದು ಸ್ವಯಂಕೃತ ಅಪರಾಧವೆಂದರೆ ತಪ್ಪಾಗದು !
Manjunatha Swamy
Mar 21, 2023ಲಿಂಗಾಯತ ಒಕ್ಕೂಟ ವ್ಯವಸ್ಥೆ ಮಾಡಬೇಕು. ಇತಿಹಾಸದಲ್ಲಿ ಹಾಗೂ ಈಗಲೂ ಆಗುತ್ತಿರುವ ಅನ್ಯಾಯಗಳನ್ನು ಬೆಳಕಿಗೆ ತರಬೇಕಾಗಿದೆ.
ವಿಶ್ವನಾಥ ಹಿರೇಮಠ
Mar 22, 2023ನನ್ನ ಪ್ರಶ್ನೆಗೆ ಉತ್ತರಿಸಿದ್ದಕ್ಕೆ ಧನ್ಯವಾದಗಳು ಸರ್. ವೀರಶೈವ ಮತ್ತು ಲಿಂಗಾಯತದ ನಡುವೆ ದೊಡ್ಡ ಕಂದರವೇ ಇದೆ ಎನ್ನುವುದನ್ನು ಇತ್ತೀಚೆನ ಅನೇಕರ ಬರವಣಿಗೆಗಳಲ್ಲಿ ಓದಿದ್ದೇನೆ. ನಮ್ಮ ಮೈಸೂರು ಭಾಗದಲ್ಲಿ ವೀರಶೈವ ನಡಾವಳಿಗಳೇ ಲಿಂಗಾಯತರ ಮನೆಗಳಲ್ಲಿ ಢಾಳಾಗಿ ಕಾಣುತ್ತಿವೆ. ಉತ್ತರಕರ್ನಾಟಕದಲ್ಲಿರುವವರು ಲಿಂಗಾಯತರು, ಮೈಸೂರು ಭಾಗದಲ್ಲಿರುವವರು ವೀರಶೈವರು ಎಂದರೆ ಸರಿಯಾದೀತೇನೋ…..
Jayadev G
Apr 6, 2023Your mode of describing the past happenings with documents in this article is actually worth reading, thanks a lot.