
ಬೆಳಗಾವಿ ಅಧೀವೇಶನ: 1924
“ಹನ್ನೆರಡನೆಯ ಶತಮಾನದಲ್ಲಿ ಆಗಿಹೋದ ಬಸವಣ್ಣನವರು ಈ ಕಾಲದಲ್ಲಿ ಇರುತ್ತಿದ್ದರೆ ಜಗತ್ತಿಗೇ ಪೂಜ್ಯವ್ಯಕ್ತಿಯಾಗಿ ಪರಿಣಮಿಸುತ್ತಿದ್ದರು. ಅವರು ಉಪದೇಶಿಸಿದ ತತ್ವಗಳಲ್ಲಿ ಅಸ್ಪೃಶ್ಯತಾ ನಿವಾರಣೆ ಮತ್ತು ಕಾಯಕ ತತ್ವಗಳು ಬಹುಮುಖ್ಯವಾದವು. ಅವುಗಳನ್ನು ಆಚರಣೆಗೆ ತಂದರೆ ಭಾರತ ಭೂಮಿಯನ್ನಷ್ಟೇ ಏಕೆ ಇಡೀ ಜಗತ್ತನ್ನೇ ಉದ್ಧಾರ ಮಾಡಬಲ್ಲಿರಿ…”
-ಮಹಾತ್ಮ ಗಾಂಧೀಜಿ, 1924, ಬೆಳಗಾಂ
ಬೆಳಗಾವಿಯಲ್ಲಿ 1924, ಡಿಸೆಂಬರಿನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆ ಈಗ ನೂರರ ಸಂಭ್ರಮ. ಮಹಾತ್ಮಾ ಗಾಂಧೀಜಿಯ ಅಧ್ಯಕ್ಷತೆಯಲ್ಲಿ ನಡೆದ ಈ ಅಧಿವೇಶನವು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಹುರುಪು ತುಂಬಿದ್ದರಿಂದ ಸ್ವಾತಂತ್ರ್ಯ ಪೂರ್ವದ ಐತಿಹಾಸಿಕ ಘಟನೆಗಳಲ್ಲಿ ಇದು ಮುಖ್ಯವಾದದ್ದೆಂದು ಪರಿಗಣಿಸಲ್ಪಟ್ಟಿದೆ. ರಾಷ್ಟ್ರಮಟ್ಟದ ಸ್ವಾತಂತ್ರ್ಯ ಹೋರಾಟಗಾರರ ದೊಡ್ಡ ದಂಡೇ ಈ ಅಧಿವೇಶನಕ್ಕಾಗಿ ಬೆಳಗಾವಿಗೆ ಬಂದಿಳಿದಿತ್ತು. ಸರ್ದಾರ್ ವಲ್ಲಬಾಯ್ ಪಟೇಲ್, ರಾಜೇಂದ್ರ ಪ್ರಸಾದ್, ರಾಜಾಜಿ, ಮೋತಿಲಾಲ್ ನೆಹರು, ಜವಹರಲಾಲ್ ನೆಹರು, ಡಾ.ಅನ್ನಿಬೆಸೆಂಟ್, ಸರೋಜಿನಿ ನಾಯ್ಡು, ಲಾಲಾ ಲಜಪತರಾಯ್, ರಾಜಗೋಪಾಲಾಚಾರಿ, ಮೌಲಾನಾ ಅಬುಲ್ ಕಲಾಂ ಆಜಾದ್, ರಾಜೇಂದ್ರ ಪ್ರಸಾದ್, ವಲ್ಲಭಭಾಯಿ ಪಟೇಲ್, ರಂಗಸ್ವಾಮಿ ಅಯ್ಯಂಗಾರ್, ಚಿತ್ತರಂಜನದಾಸ್, ಪಂಡಿತ್ ಮದನ್ ಮೋಹನ್ ಮಾಳ್ವಿಯಾ, ಅಲಿ ಸಹೋದರರಂತಹ ದಿಗ್ಗಜರ ಉಪಸ್ಥಿತಿಯನ್ನು ಗಮನಿಸಿದರೆ ಆ ಅಧಿವೇಶನದ ಅಗಾಧತೆಯನ್ನು ಕಣ್ಮುಂದೆ ತಂದುಕೊಳ್ಳಬಹುದು. ಗಾಂಧೀಜಿಯ ಕರ್ಣಧಾರತ್ವದ ಮೊದಲ ಹಾಗೂ ಕೊನೆಯ ಅಧಿವೇಶನವಾದ ಇದು ಅನೇಕ ಕಾರಣಗಳಿಂದ ಕನ್ನಡಿಗರ ಪಾಲಿಗೆ ಅತ್ಯಂತ ಮುಖ್ಯವಾದ ಸಂದರ್ಭ. ಅದರಲ್ಲಿಯೂ ಯುಗಪುರುಷ ಬಸವಣ್ಣನವರು ಆಧುನಿಕ ಭಾರತದ ಸಂತ ಮಹಾತ್ಮ ಗಾಂಧೀಜಿಗೆ ಪರಿಚಯವಾದ ಅಮೃತ ಗಳಿಗೆ ಅದಾಗಿತ್ತು. ಹನ್ನೆರಡನೆಯ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಇತಿಹಾಸದ ಮರೆಗೆ ಸರಿದ ಬಸವಣ್ಣನವರ ಸಮಾಜಮುಖಿ ಕಾರ್ಯಗಳು ಆಧುನಿಕ ಭಾರತದ ಹಿಂದಿ ಭಾಷಿತ ಜನರಿಗೆ ಪರಿಚಯವಾಗಲು, ಅದರಲ್ಲೂ ಆಗಿನ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಮತ್ತು ದೇಶಪ್ರೇಮಿಗಳ ಕಿವಿಗೆ ಬೀಳಲು ಈ ವೇದಿಕೆ ಬಹುದೊಡ್ಡ ಪಾತ್ರವಹಿಸಿತು. ಕಿಕ್ಕಿರಿದ ಜನಸ್ತೋಮದ ಆ ಐತಿಹಾಸಿಕ ಸಂದರ್ಭದಲ್ಲಿ ಈ ಸುವರ್ಣ ಗಳಿಗೆಯನ್ನು ಸೃಷ್ಟಿಸಿಕೊಂಡವರು ಕರ್ನಾಟಕದ ಗಾಂಧಿ ಎಂದೇ ಹೆಸರಾದ ಹರ್ಡೇಕರ್ ಮಂಜಪ್ಪನವರು.
ಸಮಾನತೆಯ ಹರಿಕಾರರೆಂದು ಬುದ್ಧ, ಬಸವ, ಗಾಂಧಿ ಮತ್ತು ಬಾಬಾಸಾಹೇಬರನ್ನು ಸ್ಮರಿಸಿಕೊಳ್ಳುವ ಇವತ್ತಿನ ಆಧುನಿಕ ಮನಸ್ಸುಗಳಿಗೆ ಗಾಂಧೀಜಿಗೆ ಬಸವಣ್ಣನವರ ಬಗ್ಗೆ ತಿಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತೆಂಬ ಅಗಾಧ ಕುತೂಹಲ ಹುಟ್ಟಿಕೊಳ್ಳುತ್ತದೆ. ಹರ್ಡೇಕರ್ ಮಂಜಪ್ಪನವರು ಹೇಗೆ ಆ ಸುಸಂದರ್ಭವನ್ನು ಬಳಸಿಕೊಂಡರು ಎನ್ನುವುದು ಅವರ ಜೀವನಚರಿತ್ರೆಯಲ್ಲಿ ಅಷ್ಟಿಷ್ಟು ಮಾಹಿತಿ ಸಿಗುತ್ತದೆ. ‘ಸತ್ಯಾಗ್ರಹಿ ಬಸವೇಶ್ವರ’ ಎಂಬ ಪುಸ್ತಕವನ್ನು ಬರೆದು ಬಿಡೆ ಲಕ್ಷ್ಮಣರಾಯದಿಂದ ಹಿಂದಿ ಮತ್ತು ಮರಾಠಿ ಭಾಷೆಗೆ ತರ್ಜಮೆ ಮಾಡಿಸಿ ಗಾಂಧೀಜಿ ಆದಿಯಾಗಿ ಅಧಿವೇಶನದಲ್ಲಿ ಭಾಗಿಯಾದ ಎಲ್ಲ ರಾಷ್ಟ್ರೀಯ ನಾಯಕರುಗಳಿಗೆ ಉಚಿತವಾಗಿ ಪುಸ್ತಕ ನೀಡುವುದರ ಮೂಲಕ ಗಾಂಧೀಜಿಗೆ ಬಸವಣ್ಣನವರನ್ನು ತಿಳಿಸುವ ಹರ್ಡೇಕರ್ ಮಂಜಪ್ಪನವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದು.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಯಶಸ್ಸಿನ ರೂವಾರಿಗಳಲ್ಲಿ ಹರ್ಡೇಕರ್ ಮಂಜಪ್ಪನವರು ಮೊದಲಿಗರು. ಕಾರಣ ಅವರು ಕಟ್ಟಿದ್ದ ‘ಬಸವೇಶ್ವರ ಸೇವಾದಳ’ ಎಂಬ ಸಂಘಟನೆಯು ಆ ಬೃಹತ್ ಕಾಂಗ್ರೆಸ್ ಅಧಿವೇಶನದ ಯಶಸ್ವಿಗೆ ಅಹರ್ನಿಶಿ ದುಡಿಯಿತು. ಒಂದು ರೀತಿಯಲ್ಲಿ, ಬಸವಣ್ಣನವರ ಸಮಸಮಾಜದ ಕನಸಿನ ಆಶಯಗಳನ್ನೇ ಹೊತ್ತುಕೊಂಡು ಕಾಂಗ್ರೆಸ್ ಅಧಿವೇಶನ ಸಾಗಿತ್ತು ಎನ್ನಬಹುದು. ಕಾರ್ಯಕ್ರಮ ನಡೆದ ಮತ್ತು ಭಾಗವಹಿಸಿದವರು ಉಳಿದುಕೊಂಡಿದ್ದ ಸ್ಥಳವನ್ನು ನಿರ್ಮಲವಾಗಿಡಲು ನೈರ್ಮಲ್ಯ ಸಮಿತಿಯು ಈ ಸೇವಾ ದಳದ ಸಹಕಾರದಲ್ಲಿ ಮಾಡಿದ ವ್ಯವಸ್ಥೆಗಳು ವಿಶೇಷವಾಗಿ ಆಕರ್ಷಕವಾಗಿದ್ದವು. ಸ್ವಚ್ಛತೆ ತಳವರ್ಗದವರ ಜವಾಬ್ದಾರಿ ಎನ್ನುವ ಜಿಡ್ಡುಗಟ್ಟಿದ ಸಾಂಪ್ರದಾಯಿಕ ಸಮಾಜದಲ್ಲಿ ಅದು ಮೇಲ್ವರ್ಗದವರ ಜವಾಬ್ದಾರಿಯೂ ಹೌದು, ನಮ್ಮ ಸ್ವಚ್ಛತೆ ಕುರಿತು ನಾವೇ ಕಾಳಜಿ ವಹಿಸಬೇಕು ಎಂದು ಯುವಕರಿಗೆ ಕಾಕಾ ಖಾಲೇಕರ ಅವರು ಕರೆ ಕೊಟ್ಟಾಗ ಮೇಲ್ವರ್ಗದ ನೂರಾರು ಯುವಕರು, ಭಂಗಿಗಳ ಜೊತೆ ಸೇರಿ, ನಗುಮೊಗದಿಂದಲೇ ಅಧಿವೇಶನದ ಶೌಚ ಕೂಪ ಮತ್ತು ಸ್ವಚ್ಚತೆ ಕುರಿತು ಕಾಳಜಿ ವಹಿಸಿದ್ದನ್ನು ನೋಡಿದರೆ ಬಸವಣ್ಣನವರ ಆಶಯಗಳನ್ನು ಅಳವಡಿಸಿಕೊಂಡ ಸಮಾನತೆಯ ವಾತಾವರಣವೇ ಅಲ್ಲಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಮೈದಳೆದ ಕಾಂಗ್ರೆಸ್ ಅಧಿವೇಶನ ಮುಂದೆ ಹೇಗೆ ಸಾಗಿತು ಮತ್ತು ಅದರ ಹಿನ್ನೆಲೆ ಮುನ್ನೆಲೆಗಳೇನು ಎನ್ನುವುದನ್ನು ತಿಳಿಯುವ ಒಂದು ಚಿಕ್ಕ ಪ್ರಯತ್ನವೇ ಈ ಲೇಖನ.
ಬೆಳಗಾವಿಯೇ ಏಕೆ?
ಸ್ವಾತಂತ್ರ್ಯ ಚಳವಳಿಗಾಗಿ ದೇಶದ ದಕ್ಷಿಣ ಭಾಗದ ಜನರನ್ನು ಒಗ್ಗೂಡಿಸುವಲ್ಲಿ ಬೆಳಗಾವಿ ಪ್ರಮುಖ ಪಾತ್ರ ವಹಿಸಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು 1885ರಲ್ಲಿ ಸ್ಥಾಪಿಸಿದ ಎ.ಓ.ಹ್ಯೂಮ್ ಅವರು ಕಾಂಗ್ರೆಸ್ ಆದರ್ಶಗಳನ್ನು ಪ್ರಚಾರ ಮಾಡಲು 1893ರಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದರು. ಕಾಂಗ್ರೆಸ್ಸಿನ ಎರಡೂ ಬಣಗಳಿಗೆ ನೆಲೆಯಾಗಿದ್ದ ಬೆಳಗಾವಿಗೆ ಬಾಲಗಂಗಾಧರ ತಿಲಕ್ ಕೂಡ 1906 ರಲ್ಲಿ ಭೇಟಿ ನೀಡಿದ್ದರು. ಈ ಅಧಿವೇಶನಕ್ಕೂ ಮೊದಲೇ ಮಹಾತ್ಮಾ ಗಾಂಧೀಜಿ 1916 ರಲ್ಲಿ ನಗರಕ್ಕೆ ಭೇಟಿ ನೀಡಿದ್ದರು. ಮತ್ತು ನಂತರ 1924 ರಲ್ಲಿ ಅವರು ಕಾಂಗ್ರೆಸ್ ಸಮಿತಿಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.
ಬೆಳಗಾವಿಯಲ್ಲಿ 39ನೆಯ ಕಾಂಗ್ರೆಸ್ ಅಧಿವೇಶನ ಗೊತ್ತುಪಡಿಸಿದ್ದು ಕೂಡ ಒಂದು ಕುತೂಹಲದ ಸಂಗತಿಯೇ. ಅದರ ಹಿಂದಿನ ವರ್ಷ ಅಂದರೆ 1923ರಲ್ಲಿ ಆಂಧ್ರಪ್ರದೇಶದ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಮುಂದಿನ ಕಾಂಗ್ರೆಸ್ ಅಧಿವೇಶನವನ್ನು ಕರ್ನಾಟಕದಲ್ಲಿ ಮಾಡುವುದಾಗಿ ಘೋಷಿಸಲಾಯಿತು. ಧಾರವಾಡ, ಬೆಳಗಾವಿ, ವಿಜಯಪುರ, ಅಂಕೋಲಾ, ಬೆಂಗಳೂರು ಮತ್ತು ಮೈಸೂರಿನ ಹೆಚ್ಚಿನ ಸಂಖ್ಯೆಯ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತಮ್ಮ ಪ್ರದೇಶಗಳಲ್ಲಿ ಕಾಂಗ್ರೆಸ್ ಅಧಿವೇಶನವನ್ನು ನಡೆಸಬೇಕೆಂದು ಬಯಸಿದ್ದರು. ಸದಾಶಿವರಾಯರು ಮಂಗಳೂರಿನಲ್ಲಿ, ಕೌಜಿಲಗಿ ಹನುಮಂತರಾಯರು ಬಿಜಾಪುರದಲ್ಲಿ, ಗಂಗಾಧರ್ ರಾವ್ ದೇಶಪಾಂಡೆ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಮಾಡಬೇಕೆಂದು ತಮ್ಮ ಹಕ್ಕೊತಾಯ ಮಂಡಿಸಿದ್ದರು. ಕೊನೆಗೆ ಯಾವುದೂ ತೀರ್ಮಾನಕ್ಕೆ ಬಾರದೆ ಇದ್ದಾಗ ಮತಕ್ಕೆ ಹಾಕಿ ಬೆಳಗಾವಿಯನ್ನು ಆಯ್ಕೆ ಮಾಡಲಾಯಿತು. ಇನ್ನು ಬೆಳಗಾವಿ ಅಧಿವೇಶನಕ್ಕೆ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಜಿಜ್ಞಾಸೆ ಮೂಡಿದಾಗ ಅನೇಕರ ಚಿತ್ತ ಸರೋಜಿನಿ ನಾಯ್ಡು ಅವರತ್ತ ಹೊರಳಿತ್ತು. ಆದರೆ ಅಸಹಕಾರ ಚಳುವಳಿಯಿಂದ ಜೈಲು ಸೇರಿದ್ದ ಮಹಾತ್ಮ ಗಾಂಧೀಜಿ ಅನಾರೋಗ್ಯದ ಕಾರಣ ಜೈಲಿನಿಂದ ಹೊರಬಂದಿದ್ದರು. ಆಗ ಮಹಾತ್ಮ ಗಾಂಧೀಜಿಯನ್ನು ಒಡನಾಡಿಗಳು ಕೇಳಿದಾಗ ಅವರು ಸಂತೋಷದಿಂದಲೇ ಒಪ್ಪಿಕೊಂಡರು.
ಗಂಗಾಧರ್ ರಾವ್ ದೇಶಪಾಂಡೆ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ಮಾಧವರಾವ್ ಕೆಂಭಾವಿ, ಬಿ ಬಿ ಪೋದ್ದಾರ, ಎಸ್ ಎಲ್ ಸೋಮನ್ ಅವರು ಆಯ್ಕೆಯಾದರು. ಜೊತೆಗೆ 19 ಜನ ಉಪಾಧ್ಯಕ್ಷರನ್ನು ನೇಮಕ ಮಾಡಲಾಯಿತು. ಕಾರ್ಯಕ್ರಮದ ಯಶಸ್ವಿನ ರೂವಾರಿಗಳಾಗಿ ಹೊರಹೊಮ್ಮಿದವರು ಗಂಗಾಧರ ದೇಶಪಾಂಡೆ ಮತ್ತು ಹರ್ಡೇಕರ್ ಮಂಜಪ್ಪನವರು.
ಬೆಳಗಾವಿ ಅಧಿವೇಶನದ ಸಿದ್ಧತೆಗಳು ಪ್ರಾರಂಭವಾದಾಗ, ದೇಶಪಾಂಡೆ ಅವರು ನಗರದ ಶಹಾಪುರ ಪ್ರದೇಶದಲ್ಲಿ ಗಾರ್ಮೆಂಟ್ ವ್ಯಾಪಾರ ನಡೆಸುತ್ತಿದ್ದ ಮಾರ್ವಾಡಿ ಸಮುದಾಯದಿಂದ 30,000 ರೂ.ಗಳನ್ನು ಸಂಗ್ರಹಿಸಿದರು. ಅವರ ಬೆನ್ನಿಗೆ ನಿಂತವರು ಹರ್ಡೇಕರ್ ಮಂಜಪ್ಪ ಮತ್ತು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರು. ಅಧಿವೇಶನಕ್ಕೆ ದೇಶದ ಬೇರೆ ಬೇರೆ ಭಾಗಗಳಿಂದ ಹದಿನೇಳು ಸಾವಿರಕ್ಕೂ ಹೆಚ್ಚಿನ ಜನ ಆಗಮಿಸಿದ್ದರು. ಹತ್ತು ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಸುಮಾರು ಎಪ್ಪತ್ತು ಸಾವಿರ ಜನ ಬಂದು ಹೋದರೆಂದು ಅಂದಾಜಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಾರೀ ಸಂಖ್ಯೆಯ ಪ್ರತಿನಿಧಿಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವ ವ್ಯತ್ಯಯವೂ ಆಗಬಾರದೆಂದು 4370 ರೂಪಾಯಿ 3 ಆಣೆ ಖರ್ಚಿನಲ್ಲಿ 50#40#40 ಅಳತೆಯ ಬಾವಿಯನ್ನು ನಿರ್ಮಿಸಲಾಯಿತು. ಬಾವಿ ತೋಡುವ ಸಂದರ್ಭದಲ್ಲಿ ಒಂದು ದುರ್ಘಟನೆಯೂ ನಡೆದುಹೋಯಿತು. ಹರಪನಹಳ್ಳಿ ಎನ್ನುವ ಹದಿಮೂರು ವರ್ಷದ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಅಸುನೀಗಿದ. ಪ್ರತಿನಿತ್ಯ ಕುದುರೆ ಏರಿ ಎಲ್ಲಾ ಕೆಲಸಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಗಂಗಾಧರರಾವ್ ದೇಶಪಾಂಡೆ ಅವರು, ಅಚಾತುರ್ಯವಾಗಿ ಸಂಭವಿಸಿದ ಈ ಘಟನೆಯನ್ನು ಕೆಟ್ಟ ಶಕುನವೆಂದು ಭಾವಿಸಬಾರದೆಂದು ಜನರಲ್ಲಿ ತಿಳುವಳಿಕೆ ಮೂಡಿಸಿ, ಕೆಲಸ ನಿಂತುಹೋಗದಂತೆ ನೋಡಿಕೊಂಡರು. ಆದರೆ ಬಾವಿಯ ಪಕ್ಕದಲ್ಲಿಯೇ ಇದ್ದ ಬ್ರಿಟಿಷ್ ಕ್ಯಾಂಪಿನ ಅಧಿಕಾರಿಗಳು, “ನೀವು ಬಾವಿ ತೋಡಿದರೆ ನಮ್ಮ ಬ್ರಿಟಿಷ್ ಕ್ಯಾಂಪಿನ ಬಾವಿಯ ಸೆಲೆಗಳು ಬತ್ತಿ ನೀರು ಕಡಿಮೆಯಾಗುತ್ತದೆ” ಎಂದು ತಕರಾರು ತೆಗೆಯುತ್ತಾರೆ. ಆದರೆ ಅದ್ಯಾವುದನ್ನು ಲೆಕ್ಕಿಸದ ಕಾರ್ಯಕಾರಿ ಸಮಿತಿಗಳು ಬಾವಿಯನ್ನು ಪೂರ್ಣ ಪ್ರಮಾಣದಲ್ಲಿ ತೋಡಿ ಮುಗಿಸಿ, ಅದಕ್ಕೆ ‘ಪಂಪಾ ಸರೋವರ’ ಎಂದು ನಾಮಕರಣ ಮಾಡಿದರು. ಮುಂದೆ ಇದನ್ನು ಬೆಳಗಾವಿಯ ಜಿಲ್ಲಾಡಳಿತವು ‘ಕಾಂಗ್ರೆಸ್ ಬಾವಿ’ ಎಂದು ಕರೆದು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿ ಸುರಕ್ಷಿತವಾಗಿ ಸಂರಕ್ಷಣೆ ಮಾಡುತ್ತಿದೆ. ಅಂದು 39ನೆಯ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳವನ್ನು ಹಿಂದಿನ ಜಿಲ್ಲಾಡಳಿತ ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಕಾಪಿಟ್ಟುಕೊಂಡು ಬಂದಿದ್ದಾರೆ. ಅಂದಿನ ಸಮಾವೇಶದಲ್ಲಿ ಭಾಗಿಯಾದ ನಾಯಕರುಗಳ ಉಬ್ಬು ಚಿತ್ರಗಳು, ಗಾಂಧೀಜಿ ಧ್ಯಾನಸ್ಥ ಸ್ಥಿತಿಯಲ್ಲಿರುವ ಮೂರ್ತಿ, ಗ್ರಂಥಾಲಯ ಉದ್ಯಾನವನ ಎಲ್ಲವನ್ನೂ ಶಿಸ್ತಿನಿಂದ ಕಾಪಾಡಿಕೊಂಡು ಇತಿಹಾಸದ ಮನಸ್ಸುಗಳನ್ನು ತನ್ನತ್ತ ಸೆಳೆಯುವಂತೆ ಮಾಡಿದ್ದಾರೆ.
ಬಾಪು ತಂದ ಹುರುಪು
ಅಹಮದಾಬಾದಿನಿಂದ ಅಧಿವೇಶನಕ್ಕೆ ರೈಲು ನಿಲ್ದಾಣದಲ್ಲಿ ಬಂದಿಳಿದ ಗಾಂಧೀಜಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ರೈಲಿನಿಂದ ಇಳಿದ ತಕ್ಷಣ ಗಾಂಧೀಜಿ ಬಾಗಿ, ತಮ್ಮ ಹಣೆಯನ್ನು ಬೆಳಗಾವಿ ಮಣ್ಣಿಗೆ ಸ್ಪರ್ಶಿಸಿದರು. ಅಲ್ಲಿಂದ ಒಂದು ಕಿ.ಮೀ ದೂರದಲ್ಲಿರುವ ಸ್ಥಳಕ್ಕೆ 9429ನೇ ನಂಬರಿನ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಹಿಂದಿನ ಅಂದರೆ ಆಂಧ್ರದ ಕಾಕಿನಾಡದ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದವರು ಗಾಂಧೀಜಿಯನ್ನು ಅಧಿವೇಶನದ ಸ್ಥಳಕ್ಕೆ ಕರೆದುಕೊಂಡು ಬಂದರು.
ಗಾಂಧೀಜಿಯ ವಾಸಕ್ಕೆ ಸಂಪೂರ್ಣವಾಗಿ ಖಾದಿಯಿಂದಲೇ ಒಂದು ಕುಟೀರ ನಿರ್ಮಿಸಲಾಗಿತ್ತು. ಇದನ್ನು ಗಾಂಧೀಜಿ, ‘ಖಾದಿಯ ಅರಮನೆ’ ಎಂದು ಕರೆದರು. ಖಾದಿಯ ಆ ಗುಡಿಸಲು ನಿರ್ಮಾಣಕ್ಕೆ 300 ರೂ ವೆಚ್ಚವಾದದ್ದು ಗೊತ್ತಾದಾಗ, ಸರಳತೆಯ ಪ್ರತೀಕವಾದ ಗಾಂಧೀಜಿ ಬೇಸರಿಸಿಕೊಂಡರು. ನಂತರ ಸಂಘಟಕರು ಆ ಕುಟೀರವನ್ನು 200 ರೂ.ಗೆ ಹರಾಜು ಹಾಕಿ ಕಾಂಗ್ರೆಸ್ ಖಾತೆಗೆ ಜಮಾ ಮಾಡಿದರು.
ಬೆಳಗಾವಿಯ ಈಗಿನ ಟಿಳಕವಾಡಿಯ ಒಂದನೇ ಮತ್ತು ಎರಡನೇ ಗೇಟಿನ ಸುಮಾರು 85 ಎಕರೆ ವಿಸ್ತಾರವಾದ ಮೈದಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಮರಣೆಗಾಗಿ ‘ವಿಜಯನಗರ’ ಎಂದು ಹೆಸರಿಟ್ಟು ಸ್ವಾಗತ ಮಂಟಪವನ್ನು ರಚಿಸಲಾಗಿತ್ತು. ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ಗೋಪುರದ ಮಾದರಿಯಲ್ಲಿ ಸಮಾವೇಶದ ಸ್ವಾಗತ ಕಮಾನನ್ನು ನಿರ್ಮಿಸಲಾಗಿತ್ತು. ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಾಂಗ್ರೆಸ್ ಅಧಿವೇಶನದಲ್ಲಿ ಮತ್ತು ಸ್ವಾತಂತ್ರೋತ್ತರ ಭಾರತದಲ್ಲಿ ಮರುಸೃಷ್ಟಿ ಮಾಡುವ ಉದ್ದೇಶದಿಂದ ಕನ್ನಡದ ನಾಯಕರು ಈ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಈಗ ಸಮಾವೇಶ ಜರುಗಿದ 85 ಎಕರೆ ಪ್ರದೇಶ ಮಾತ್ರ ಎತ್ತ ಹುಡುಕಿದರೂ ಸಿಗಲಾರದು. ಬೃಹದಾಕಾರದ ಸಿಮೆಂಟ್ ಕಟ್ಟಡಗಳ ಮಧ್ಯೆ ಅಷ್ಟೂ ಜಾಗ ಕಣ್ಮರೆಯಾಗಿ ಹೋಗಿದೆ!
ಅಧಿವೇಶನಕ್ಕೆ ಹಾಕಲಾಗಿದ್ದ ಬೃಹತ್ ಶಾಮಿಯಾನ ನೋಡಿದ ದೇಶದ ಎಲ್ಲೆಡೆಯಿಂದ ಬಂದ ಪ್ರತಿನಿಧಿಗಳು ದಿಗ್ಭ್ರಮೆಗೊಂಡರು. ಅತ್ಯಂತ ವಿಶಾಲವಾಗಿದ್ದ ಅದರ ಅಲಂಕಾರಕ್ಕೆ ತಗುಲಿದ ವೆಚ್ಚ ತಿಳಿದ ಗಾಂಧೀಜಿ ಅದನ್ನೂ ವಿರೋಧಿಸಿದರು. ಪ್ರತಿನಿಧಿ ನಿಯೋಗ ಶುಲ್ಕವನ್ನು ಇಳಿಸಬೇಕು ಎಂದು ಮನವಿ ಮಾಡಿದರು. ಅವರ ಇಚ್ಚೆಯ ಮೇರೆಗೆ ಶುಲ್ಕವನ್ನು ಹತ್ತು ರೂಪಾಯಿಯಿಂದ ಒಂದು ರೂಪಾಯಿಗೆ ಇಳಿಸಲಾಯಿತು. ಪ್ರಾಸಂಗಿಕವಾಗಿ, ಅಧಿವೇಶನ ನಡೆಯುವಾಗ ಹಿಂಡಲಗಾ ಕೇಂದ್ರ ಕಾರಾಗೃಹವು ಸ್ವಾತಂತ್ರ್ಯ ಹೋರಾಟಗಾರರಿಂದ ತುಂಬಿ ತುಳುಕುತ್ತಿತ್ತು.
ಸಮ್ಮೇಳನಕ್ಕೆ ಬಂದ ಎಲ್ಲರಿಗೂ ರುಚಿಕಟ್ಟಾದ ಮತ್ತು ಶುಚಿಯಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಏಕಕಾಲಕ್ಕೆ ನಾಲ್ಕು ಸಾವಿರ ಜನರು ಒಟ್ಟಿಗೆ ಊಟಕ್ಕೆ ಕೂರುವಷ್ಟು ದೊಡ್ಡದಾದ ಪೆಂಡಾಲನ್ನು ಹಾಕಿಸಲಾಗಿತ್ತು. ಪ್ರತಿನಿಧಿಗಳಿಗೆ ಯಾವುದಕ್ಕೂ ಕೊರತೆ ಆಗದಂತೆ ಸಾಕಷ್ಟು ಮತ್ತು ಉಂಡಷ್ಟು ತುಪ್ಪ ಮತ್ತು ಶ್ರೀಕಂಡಗಳನ್ನು ಬಡಿಸಲಾಗುತ್ತಿತ್ತು.
ಬೆಳಗಾವಿಯಲ್ಲಿ 21.12.1924 ರಿಂದ 30.12.1924ರ ವರೆಗೆ ಹತ್ತು ದಿನಗಳ ಕಾಲ ಅಧಿವೇಶನ ಜರುಗಿತು. ಇಲ್ಲಿಯೇ ಮೊದಲ ಬಾರಿಗೆ ರಾಷ್ಟ್ರೀಯ ಧ್ವಜಾರೋಹಣದೊಂದಿಗೆ ಅಧಿವೇಶನ ಪ್ರಾರಂಭವಾಗಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಹಾಕಿತು. ಈ ಹಿಂದಿನ ಸಂಪ್ರದಾಯಗಳನ್ನು ಮುರಿದು ರಾಷ್ಟ್ರ ಧ್ವಜಾರೋಹಣದೊಂದಿಗೆ ಕಾಂಗ್ರೆಸ್ ಅಧಿವೇಶನಕ್ಕೆ ಚಾಲನೆ ಸಿಕ್ಕಿದ್ದು ಬೆಳಗಾವಿಯಲ್ಲಿಯೇ ಮೊದಲು. ಇದು ಮುಂದಿನ ಅಧಿವೇಶಗಳಿಗೆ ಒಂದು ಮನೋಭೂಮಿಕೆಯಾಯಿತು. ಪ್ರಾರಂಭದಲ್ಲಿ ಗಂಗೂಬಾಯಿ ಹಾನಗಲ್ ಅವರು ಬೆಳಗ್ಗೆ ಹನ್ನೊಂದು ಗಂಟೆಗೆ ‘ಒಂದೇ ಮಾತರಂ’ ಮತ್ತು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಹಾಡುಗಳನ್ನು ಮೋಹನರಾಗ ಮತ್ತು ಜಂಪೆ ತಾಳದಲ್ಲಿ ಸುಶ್ರಾವ್ಯವಾಗಿ ಹಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಮೆಚ್ಚುಗೆ ಪಡೆದರು. ಆಗ ಗಂಗೂಬಾಯಿ ಹಾನಗಲ್ ಅವರ ವಯಸ್ಸು ಕೇವಲ ಹದಿಮೂರು!
ಡಿಸೆಂಬರ್ 21ರಿಂದ 23ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಕರ್ನಾಟಕ ಏಕೀಕರಣದ ಪ್ರಥಮ ಅಧಿವೇಶನ ಇದೆ ವೇದಿಕೆಯಲ್ಲಿ ಜರುಗಿತು. ಸರ್ ಸಿದ್ದಪ್ಪ ಕಂಬಳಿ ಅವರು ಕರ್ನಾಟಕ ಏಕೀಕರಣ ಪರಿಷತ್ತಿನ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ದಿನಾಂಕ 27ರಂದು ಪಂಡಿತ್ ಮದನ್ ಮೋಹನ್ ಮಾಳವಿಯ ಅವರ ಅಧ್ಯಕ್ಷತೆಯಲ್ಲಿ ಹಿಂದೂ ಮಹಾಸಭಾ ಅಧಿವೇಶನ ಜರಗಿತು. ದಿನಾಂಕ 28ರಂದು ಸಾಮಾಜಿಕ ಸಮ್ಮೇಳನವು ಅರ್ಕಾಟ ರಾಮಸ್ವಾಮಿ ಮೊದಲಿಯಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ಶಿಕ್ಷಣ, ಸಾಮಾಜಿಕ, ಸಮಾನತೆ, ಬ್ರಿಟಿಷ್ ಕಾಯ್ದೆಗಳು, ನ್ಯಾಯಾಡಳಿತ ಹಿರಿಮೆಯನ್ನು ಕುರಿತು ವಿಚಾರಗಳನ್ನು ಮಂಡಿಸಲಾಯಿತು. ದಿನಾಂಕ 29 ರಂದು ಅಖಿಲ ಭಾರತ ಸಾಮಾಜಿಕ ಸಮ್ಮೇಳನ ಶಂಕರ ನಾಯರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ದಿನಾಂಕ 30 ರಂದು ಅಖಿಲ ಭಾರತ ಸಂಸ್ಥಾನಗಳ ಸಮ್ಮೇಳನ ಜರುಗಿತು. ಸಂಸ್ಥಾನಗಳಲ್ಲಿ ಜವಾಬ್ದಾರಿ ಸರ್ಕಾರಗಳು ಎಂಬ ವಿಷಯ ಕುರಿತು ಎನ್ ಪಿ ಕೇಳ್ಕರ್ ಅವರು ಮಾತನಾಡಿದರು.
ಅಧ್ಯಕ್ಷೀಯ ಮಾತುಗಳನ್ನು ಆಡಿದ ಗಾಂಧೀಜಿ, ಧರ್ಮಗಳನ್ನು ರಾಷ್ಟ್ರಗಳಂತೆ ತೂಗಿ ಅಳೆಯಬೇಕು. ಅನ್ಯಾಯ, ಅಧರ್ಮ ಮತ್ತು ಹಿಂಸೆಗಳನ್ನು ಆಚರಿಸುವ ರಾಷ್ಟ್ರಗಳು ನಶಿಸಿ ಹೋಗುವಂತೆ ಅನ್ಯಾಯ, ಅಧರ್ಮವನ್ನು ಆಚರಿಸುವ ಧರ್ಮಗಳು ನಶಿಸಿ ಹೋಗುತ್ತವೆ ಎಂದು ಹೇಳಿದರು. ಸ್ವರಾಜ್ಯ ಸ್ಥಾಪನೆಗೆ ಅಸ್ಪೃಶ್ಯತೆ ಒಂದು ಅಡ್ಡಿ ಎಂದು ಗಾಂಧೀಜಿ ಒತ್ತಿ ಹೇಳಿದರು. ತಮ್ಮ ಭಾಷಣದಲ್ಲಿ ‘ದಯವೇ ಧರ್ಮದ ಮೂಲ’ ಎಂಬ ಬಸವಣ್ಣನವರ ವಚನದ ಸಾಲನ್ನು ಉದ್ದರಿಸಿದರು. ಅಷ್ಟೇ ಅಲ್ಲ, “ಎಂಟುನೂರು ವರ್ಷಗಳ ಹಿಂದೆಯೇ ಬಸವೇಶ್ವರರು ಬೋಧಿಸಿದ ಮತ್ತು ಅದರಂತೆ ನಡೆದ ಸಾಧನೆಗಳನ್ನು ಅಭ್ಯಾಸ ಮಾಡಲು ನನ್ನಿಂದ ಸಾಧ್ಯವಾಗಿಲ್ಲ. ಅವುಗಳಲ್ಲಿ ಕೆಲವನ್ನು ನಾನು ಅಳವಡಿಸಿಕೊಂಡಿದ್ದೇನೆ; ಈ ಅಂಶದಲ್ಲಿಯೂ ನಾನು ಪರಿಪೂರ್ಣನಲ್ಲ, ಇನ್ನೂ ಅನ್ವೇಷಕನಾಗಿದ್ದೇನೆ. ಅವರಲ್ಲಿ ಜಾತೀಯತೆಯ ಸಣ್ಣ ಛಾಯೆಯೂ ಕಾಣುವುದಿಲ್ಲ…” ಎನ್ನುತ್ತಾ “ಅಸ್ಪೃಶ್ಯತೆಯ ಕೆಡುಕುಗಳ ಬಗ್ಗೆ ನಾನು ನಿಮಗೆ ವಿವರಿಸಬೇಕಿಲ್ಲ. ಬಸವಣ್ಣನವರನ್ನು ಅನುಸರಿಸಿದರೆ ಸಾಕು ಈ ಕ್ರೌರ್ಯದಿಂದ ಮುಕ್ತರಾಗುತ್ತೀರಿ” ಎಂದು ಹೇಳಿದ್ದನ್ನು ನೋಡಿದರೆ ಅವರು ಅಷ್ಟೊತ್ತಿಗಾಗಲೇ ಹರ್ಡೇಕರ ಮಂಜಪ್ಪನವರ ‘ಸತ್ಯಾಗ್ರಹಿ ಬಸವೇಶ್ವರ’ ಪುಸ್ತಕವನ್ನು ಓದಿದ್ದರೆಂಬುದು ಗೊತ್ತಾಗುತ್ತದೆ.
ಅಧಿವೇಶನದ ಠರಾವುಗಳು:
ಕಾಂಗ್ರೆಸ್ ಸಂಸ್ಥೆಗೆ ಆಯ್ಕೆಗೊಂಡ ಸದಸ್ಯರು ಪ್ರತಿ ತಿಂಗಳು ಆರು ಸಾವಿರ ಅಡಿ ಖಾದಿ ನೂಲನ್ನು ನೂಲಬೇಕು ಮತ್ತು ಕಾಂಗ್ರೆಸ್ಸಿಗರೆಲ್ಲ ಖಾದಿ ಬಟ್ಟೆಯನ್ನೇ ಧರಿಸಬೇಕು.
ಅಸ್ಪಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಬೇಕು ಮತ್ತು ಅದು ನಮ್ಮಿಂದಲೇ ಪ್ರಾರಂಭವಾಗಬೇಕು.
ರಾಷ್ಟ್ರೀಯ ಹಾಗೂ ಸಾರ್ವಜನಿಕ ಸೇವೆಗಾಗಿ ಸಂಬಳ ಪಡೆದರೆ ಅದು ತಪ್ಪಲ್ಲ.
ಸರೋಜಿನಿ ನಾಯ್ಡು ಹಾಗೂ ಮುಂತಾದ ಹೋರಾಟಗಾರರನ್ನು ವಿದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಪ್ರಚಾರ ಮಾಡಿದ್ದಕ್ಕೆ ಸತ್ಕರಿಸಲಾಯಿತು.
ಅಧಿವೇಶನದ ಫಲಶ್ರುತಿ:
ಕಾಂಗ್ರೆಸ್ಸಿನೊಂದಿಗೆ ಮುನಿಸಿಕೊಂಡಿದ್ದ ಸ್ವರಾಜ್ ಪಕ್ಷದವರು ಮತ್ತೆ ಕಾಂಗ್ರೆಸ್ ಜೊತೆ ಒಂದಾದರು. ಅದಕ್ಕಾಗಿ ಕೆಲವು ದಿನ ಮೊದಲೇ ಗಾಂಧೀಜಿ ಬೆಳಗಾವಿಗೆ ಬಂದು ನಡೆಸಿದ ಪ್ರಯತ್ನ ಸಫಲವಾಗಿತ್ತು. ಸಿ ಆರ್ ದಾಸ್ ಅವರಿಗೆ ಸ್ವರಾಜ್ ಪಕ್ಷವನ್ನು ಕಟ್ಟಲು ಗಾಂಧೀಜಿ ಅನುಮತಿ ನೀಡಿದರು. ಆ ಮೂಲಕ ಐಕ್ಯತಾ ಸಮ್ಮೇಳನವೆಂಬ ಖ್ಯಾತಿಗೆ ಈ ಅಧಿವೇಶನ ಪಾತ್ರವಾಯಿತು. ಕರ್ನಾಟಕ ಏಕೀಕರಣ ಸಂಸ್ಥೆಯು ಸ್ಥಾಪನೆಗೊಂಡಿದ್ದೂ ಇದೇ ಅಧಿವೇಶನದಲ್ಲಿ. ಮುಂದೆ ಅದು ಕರ್ನಾಟಕ ಏಕೀಕರಣ ಸಂಘವಾಗಿ ಸ್ವಾತಂತ್ರ್ಯದ ಜೊತೆಗೆ ಏಕಕಾಲಕ್ಕೆ ಏಕೀಕರಣ ಸಂಘ ಕರ್ನಾಟಕವನ್ನು ಒಂದುಗೂಡಿಸಲು ಹೋರಾಡಿತು.
ಹಿರಿಯರಿಂದ ಕೇಳಿ ಮತ್ತು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದ ರಾಷ್ಟ್ರೀಯ ನಾಯಕರನ್ನೆಲ್ಲ ಪ್ರತ್ಯಕ್ಷವಾಗಿ ನೋಡುವ ಅವಕಾಶ ಕನ್ನಡಿಗರಿಗೆ ದೊರೆಯಿತು. ಎನ್ ಎಸ್ ಹರ್ಡೆಕರ ಅವರಿಂದ ತರಬೇತಿ ಪಡೆದ ಸೇವಾದಳದ ಕಾರ್ಯಕರ್ತರು ಅಧಿವೇಶನದ ಯಶಸ್ವಿಗೆ ಅಹರ್ನಿಶಿ ದುಡಿದರು. ಇದು ರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ಪಾತ್ರವಾಯಿತು. ಇದರಿಂದ ಮಂಜಪ್ಪನವರು ರಾಷ್ಟ್ರೀಯ ನಾಯಕರಾಗಿ ಬೆಳೆಯಲು ಅಧಿವೇಶನ ವೇದಿಕೆಯಾಯಿತು.
ಶೌಚಕೂಪ ಮತ್ತು ಸ್ವಚ್ಛತೆಯ ವ್ಯವಸ್ಥೆಯ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತ ‘ಕಾಕಾ ಸಾಹೇಬ ಕಾಲೇಕರ’ ಅವರು ಭಂಗಿ ಬಳಿಯುವುದು ಶೂದ್ರರ ಕೆಲಸ ಎನ್ನುವ ತಪ್ಪು ಸಂದೇಶವನ್ನು ನಾವು ಹೋಗಲಾಡಿಸಬೇಕು. ಅದಕ್ಕಾಗಿ ಮೇಲ್ವರ್ಗದವರೆಂದು ಕರೆಸಿಕೊಳ್ಳುವ ನಾವೇ ಸ್ವಚ್ಛತಾ ಕೆಲಸ ಮಾಡಬೇಕು ಎಂಬ ಸೂಚನೆಯನ್ನು ಮುಂದೆ ಇಟ್ಟಾಗ ಮೇಲ್ವರ್ಗದ ಹಲವಾರು ಯುವಕರು ಮುಂದೆ ಬಂದು ಈ ಕೆಲಸಕ್ಕೆ ಕೈ ಹಾಕುವ ಮೂಲಕ ಅಸ್ಪೃಶ್ಯತೆ ನಿವಾರಣೆ ಮತ್ತು ಶ್ರಮ ಗೌರವದ ಮಹತ್ವವನ್ನು 1924ರ ಕಾಂಗ್ರೆಸ್ ಅಧಿವೇಶನ ಒತ್ತಿ ಹೇಳಿತು.
ಬೆಳಗಾವಿ ಅಧಿವೇಶನಕ್ಕೆ 2,20,829 ರೂಪಾಯಿ 5ಆಣೆ ಮತ್ತು 6 ಪೈಸೆ ಖರ್ಚಾಯಿತು. ಕಾಂಗ್ರೆಸ್ ಅಧಿವೇಶನದಲ್ಲಿ ಕೂಡುವ ಪ್ರತಿನಿಧಿ ಶುಲ್ಕದ ಒಂದು ಭಾಗವನ್ನು ಅಖಿಲ ಭಾರತ ಕಾಂಗ್ರೆಸ್ ಕಮಿಟಿಗೆ ಕೊಡಬೇಕಾಗಿತ್ತು. ಅಧಿವೇಶನ ಮುಗಿದ ದಿನವೇ ಗಂಗಾಧರ ರಾವ್ ದೇಶಪಾಂಡೆ ಅವರು ಎಂಟು ಸಾವಿರ ರೂಪಾಯಿಗಳ ಚೆಕ್ಕನ್ನು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕೋಶಾಧ್ಯಕ್ಷರಾಗಿದ್ದ ಜಮುನಾಲಾಲ್ ಬಜಾಜ್ ಅವರ ಕೈಗೆ ನೀಡಿದರು. ಅಧಿವೇಶನದ ಖರ್ಚು ವೆಚ್ಚಗಳನ್ನು ಕಳೆದು ರೂ.30,000 ಉಳಿತಾಯವಾಗಿತ್ತು. ಈ ಹಣವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಗೆ ಅದರ ಮುಂದಿನ ಕಾರ್ಯ ಚಟುವಟಿಕೆಗಳಿಗಾಗಿ ನೀಡಲಾಯಿತು.
ಕೆ.ಎಲ್.ಇ.ಸಂಸ್ಥೆಯ ಸಪ್ತರ್ಷಿಗಳಲ್ಲಿ ಓರ್ವರಾದ ಶಿಕ್ಷಣ ಪ್ರೇಮಿ ಸರ್ದಾರ್ ವೀರನಗೌಡ ಪಾಟೀಲ ಅವರು ಸ್ವತಃ ಶಿಕ್ಷಕರಾಗಿದ್ದರು. ಅವರು ಬೆಳಗಾವಿಯಲ್ಲಿ ಹರಿಜನ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ವಸತಿ ನಿಲಯಕ್ಕೆ ಗಾಂಧೀಜಿ ಭೇಟಿ ನೀಡಿ, ವೀರನಗೌಡರ ಕಾರ್ಯವನ್ನು ಶ್ಲಾಘಿಸಿದರು. “ನಿಮ್ಮದು ಶ್ರೇಷ್ಠ ಮಟ್ಟದ ದೇಶ ಸೇವೆ, ಇದನ್ನು ಮುಂದುವರಿಸಿ” ಎಂದು ವೀರನಗೌಡರ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಹರಿಜನ ಸೇವೆ ರಾಷ್ಟ್ರಭಕ್ತಿಯ ಭಾಗ ಎಂಬುದು ಗಾಂಧೀಜಿಯ ಅಭಿಮತವಾಗಿದ್ದ ಕಾರಣ ವೀರನಗೌಡರ ಸೇವಾಕಾರ್ಯ ಅವರ ಮೆಚ್ಚುಗೆ ಪಡೆಯಿತು.
ಕಾಂಗ್ರೆಸ್ ಪಕ್ಷ ಬ್ರಾಹ್ಮಣರ ಸಂಸ್ಥೆ ಎಂದು ಭಾವಿಸಿಕೊಂಡು ಅದರ ಚಟುವಟಿಕೆಗಳಿಂದ ದೂರವೇ ಉಳಿದಿದ್ದ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯವು ಈ ಅಧಿವೇಶನದಿಂದಾಗಿ ಕಾಂಗ್ರೆಸ್ಸಿಗೆ ಹತ್ತಿರವಾದರು.
ಹರ್ಡೇಕರ್ ಮಂಜಪ್ಪನವರ ‘ಬಸವೇಶ್ವರ ಸೇವಾದಳ’ವು ಅಧಿವೇಶನದಲ್ಲಿ ಸ್ವಯಂ ಕಾರ್ಯಕರ್ತರಾಗಿ ದುಡಿದು ಸಮ್ಮೇಳನಕ್ಕೆ ಬಂದವರಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಂಡದ್ದು ಎಲ್ಲರ ಮೆಚ್ಚುಗೆಗೆ, ವಿಶೇಷ ಗೌರವಕ್ಕೆ ಪಾತ್ರವಾಯಿತು. ಹರ್ಡೇಕರ್ ಮಂಜಪ್ಪನವರು ರಾಷ್ಟ್ರೀಯ ನಾಯಕರಾಗಿ, ಸಾಮಾಜಿಕ ಚಿಂತಕರಾಗಿ ಈ ನಾಡಿಗೆ ಅಧಿವೇಶನದ ಮೂಲಕ ಹೆಚ್ಚು ಹತ್ತಿರವಾದರು.
ಹರ್ಡೇಕರ್ ಮಂಜಪ್ಪನವರು ಒಟ್ಟಾರೆ 82 ಕೃತಿಗಳನ್ನು ರಚಿಸಿದ್ದಾರೆ. ತಾವು ನಡೆಸುತ್ತಿದ್ದ ಶರಣ ಸಂದೇಶ ಪತ್ರಿಕೆಗೆ ಗಾಂಧೀಜಿಯ ಸಂದೇಶ ಕೇಳಿದಾಗ, ಬಸವಣ್ಣನವರು ತುಳಿದದ್ದು ಸತ್ಯದ ಪಥವೇ ಆದ್ದರಿಂದ- “ಸತ್ಯದ ವಿನಹ ಬೇರೆ ಸಂದೇಶವಿಲ್ಲ” ಎಂದು ಗಾಂಧೀಜಿ ಹೇಳಿದ್ದರು. ಅಲ್ಲದೇ ಮುಂದೆ ಬಿಜಾಪುರದ ವಿದ್ಯಾಲಯ ಬಸವಣ್ಣನವರನ್ನು ಕುರಿತು ಸಂಭಾಷಣೆ ನಡೆಸಿದಾಗ ಸಂತ ತುಕಾರಾಮದಂತೆ ಬಸವಣ್ಣನವರು ಸಂತರು ಎಂದು ಗಾಂಧೀಜಿ ಅಭಿಪ್ರಾಯಪಡುತ್ತಾರೆ. ಆಗ ಹರ್ಡೇಕರ್ ಮಂಜಪ್ಪನವರು, “ಅಲ್ಲ ಬಾಪೂ, ಬಸವಣ್ಣನವರು ಗುರುನಾನಕರಂತೆ ಮತಸ್ಥಾಪಕರು” ಎಂದು ಅವರಿಗೆ ಮತ್ತಷ್ಟು ಬಸವಣ್ಣನವರ ಬಗೆಗೆ ಗಟ್ಟಿಯಾಗಿ ತಿಳಿಸಿಕೊಟ್ಟರು. ಅಂದರೆ ಹರ್ಡೇಕರ್ ಮಂಜಪ್ಪನವರಿಗೆ ಲಿಂಗಾಯತ ಒಂದು ಧರ್ಮ ಎಂಬುದು ಸ್ಪಷ್ಟವಾಗಿ ಆಗಲೇ ತಿಳಿದು ಅದನ್ನು ಪ್ರಚುರಪಡಿಸುತ್ತಿದ್ದರು. ಸಮಯ ಒದಗಿ ಬಂದಾಗಲೆಲ್ಲಾ ಅದನ್ನು ಗಾಂಧೀಜಿಗೆ ಮುಟ್ಟಿಸಲು ಪ್ರಯತ್ನ ಮಾಡುತ್ತಿದ್ದರು.
ಪುಸ್ತಕ ಪ್ರೇಮಿಗಳಾಗಿದ್ದ ಗಾಂಧೀಜಿ ಗಂಭೀರ ಓದುಗರಾಗಿದ್ದರು. ಲಿಯೋ ಟಾಲ್‌ಸ್ಟಾಯ್ ಅವರ ‘ದಿ ಕಿಂಗ್‌ಡಮ್ ಆಫ್ ಗಾಡ್ ಈಸ್ ವಿತಿನ್ ಯು’ ಪುಸ್ತಕ ಮತ್ತು ‘ಕ್ರಿಶ್ಚಿಯಾನಿಟಿ ಮತ್ತು ದೇಶಪ್ರೇಮ’ ಎಂಬ ಅವರ ಪ್ರಬಂಧದ ಬರವಣಿಗೆಯಿಂದ ಬಹಳ ಪ್ರಭಾವಿತರಾಗಿದ್ದರು. ಟಾಲ್‌ಸ್ಟಾಯ್ ಅವರ ಆದರ್ಶವಾದ ‘ಜೀವನದ ಸರಳತೆ ಮತ್ತು ಉದ್ದೇಶದ ಶುದ್ಧತೆ’ ಗಾಂಧೀಜಿಯನ್ನು ಆಳವಾಗಿ ಸೆಳೆದಿತ್ತು. ‘ದೇವರ ರಾಜ್ಯವು ನಿಮ್ಮೊಳಗಿದೆ’ ಎಂಬ ಪುಸ್ತಕವನ್ನು ಓದುವುದು ತನ್ನನ್ನು ಸಂದೇಹದಿಂದ ಮುಕ್ತಗೊಳಿಸಿತು ಮತ್ತು ಅಹಿಂಸೆಯ ಮೇಲೆ ಅಗಾಧ ನಂಬಿಕೆ ಇಡುವಂತೆ ಮಾಡಿತೆಂದು ಗಾಂಧೀಜಿ ಬರೆದುಕೊಂಡಿದ್ದಾರೆ. ಅದೇ ರೀತಿ ಜಾನ್ ರಸ್ಕಿನ್ ಅವರ ಪುಸ್ತಕ ‘ಅನ್ ಟು ದಿಸ್ ಲಾಸ್ಟ್’ ಕೂಡ ಗಾಂಧೀಜಿಯ ವಿಚಾರಗಳ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಿತು. ಒಂದು ಕಡೆ ರಸ್ಕಿನ್ ಅವರ ಸ್ವಾವಲಂಬನೆ ತತ್ವ ಮತ್ತು ಇನ್ನೊಂದು ಕಡೆ ದಮನಿತ ಅಂಚಿನಲ್ಲಿರುವ ಸಮುದಾಯದ ಹಕ್ಕುಗಳಿಗಾಗಿ ಮತ್ತು ದಬ್ಬಾಳಿಕೆಯ ವ್ಯವಸ್ಥೆಗಳ ವಿರುದ್ಧವಾಗಿ ಹೋರಾಡಿ ಅಸಮಾನತೆಯನ್ನು ನಿರ್ಮೂಲಗೊಳಿಸಬೇಕೆನ್ನುವ ಪ್ರಯತ್ನ ಗಾಂಧೀಜಿಯ ಕಾರ್ಯಗಳ ಮೇಲೆ ಅಗಾಧ ಪರಿಣಾಮ ಬೀರಿರುವುದನ್ನು ಕಾಣಬಹುದು. ಹಾಗೆಯೇ ಬೆಳಗಾವಿ ಅಧಿವೇಶನದಲ್ಲಿ ಹರ್ಡೇಕರ್ ಮಂಜಪ್ಪನವರು ಕೊಟ್ಟ ಸತ್ಯಾಗ್ರಹಿ ಬಸವೇಶ್ವರ ಪುಸ್ತಕ ಓದಿದ ಗಾಂಧೀಜಿಗೆ ಬಸವಣ್ಣನವರ ಕಾರ್ಯಕ್ಷಮತೆ ಸೂಜಿಗಲ್ಲಿನಂತೆ ಸೆಳೆದಿದ್ದುದನ್ನು ಗಮನಿಸಬಹುದು. ಕರ್ನಾಟಕದಲ್ಲಿ ಫ.ಗು.ಹಳಕಟ್ಟಿಯವರು ಆಗತಾನೇ ವಚನಗಳ ಸಂಗ್ರಹಣೆಯ ಸಾಹಸ ಮಣಿಹಕ್ಕೆ ಕೈ ಹಾಕಿದ್ದರು. ಬಸವಾದಿ ಶರಣರ ವಚನಗಳು ಮತ್ತು ಕಲ್ಯಾಣಕ್ರಾಂತಿಯ ಕುರಿತಂತೆ ಸ್ಪಷ್ಟವಾದ ತಿಳುವಳಿಕೆ ಕನ್ನಡಿಗರಲ್ಲೇ ಆಗಿನ್ನೂ ಮೂಡುತ್ತಿದ್ದ ಸಮಯವದು. ಆಗಲೇ ಹರ್ಡೇಕರ್ ಮಂಜಪ್ಪನವರು, ಬಸವಣ್ಣನವರ ಕುರಿತು ಪುಸ್ತಕ ಬರೆದು, ಅದನ್ನು ಹಿಂದಿಗೆ ತರ್ಜುಮೆ ಮಾಡಿಸಿ, ಗಾಂಧೀಜಿಯ ಗಮನಕ್ಕೆ ತರಲು ವಿಶೇಷ ಪ್ರಯತ್ನ ಮತ್ತು ಆಸಕ್ತಿ ವಹಿಸಿದ್ದು ವ್ಯರ್ಥವಾಗಲಿಲ್ಲ. ಎಲ್ಲಾ ಜಾತಿಗಳವರನ್ನೂ ಒಂದುಗೂಡಿಸಿ ಸಾಮೂಹಿಕವಾಗಿ ಸಮಾನತೆ ತರುವ ಪ್ರಯತ್ನಕ್ಕೆ ಬಸವಣ್ಣನವರು ಕನ್ನಡ ನೆಲದಲ್ಲಿ ಎಂಟು ಶತಮಾನಗಳ ಹಿಂದೆಯೇ ಪ್ರಯತ್ನಿಸಿದ್ದು ಗಾಂಧೀಜಿಯಲ್ಲಿ ಅಚ್ಚರಿ ಮೂಡಿಸಿತು. ಬಸವಣ್ಣನವರನ್ನು ಓದಿ ಅರಿತ ಬಳಿಕ ಅವರ ಕುರಿತು ಗಾಂಧೀಜಿ ಆಡಿದ ಮಾತುಗಳೇ ಅದಕ್ಕೆ ನಿದರ್ಶನ. ಅಂಥದೊಂದು ಅಪೂರ್ವ ಸಂದರ್ಭಕ್ಕೆ ಬೆಳಗಾವಿಯ ಕಾಂಗ್ರೆಸ್ ಅಧಿವೇಶನವು ಸಾಕ್ಷಿಯಾಗಿದ್ದು ಕನ್ನಡಿಗರಾದ ನಮ್ಮೆಲ್ಲರ ಹೆಮ್ಮೆ.
(ಲೇಖಕರು ವೃತ್ತಿಯಿಂದ ಪ್ರೌಢಶಾಲಾ ಮುಖ್ಯಶಿಕ್ಷಕರು. ಪ್ರವೃತ್ತಿಯಿಂದ ಇತಿಹಾಸ ತಜ್ಞರು. ಸಾಮಾಜಿಕ ಜಾಲತಾಣಗಳ ಮೂಲಕ ಸಂಶೋಧನಾತ್ಮಕ ಲೇಖನಗಳನ್ನು ಬರೆಯುವುದರಿಂದ ಉತ್ತರ ಕರ್ನಾಟಕದ ಜನರಿಗೆ ಚಿರಪರಿಚಿತರು. ಕಿತ್ತೂರು ಸಂಸ್ಥಾನದ ಕುರಿತು ಸಮಗ್ರ ಅಧ್ಯಯನ ಮಾಡಿದ ವಿದ್ವಾಂಸರು.)
Comments 13
ಧರ್ಮರಾಜ ಬೆಳಗಾವಿ
Dec 18, 2024ಲೇಖನ ಓದಿ 1924ನೇ ಕಾಂಗ್ರೆಸ್ ಬೆಳಗಾವಿ ಅಧಿವೇಶನಕ್ಕೆ ಹೋಗಿಬಂದಂತಾಯಿತು. 🙏
ಫಾಲಾಕ್ಷಿ, ದಾವಣಗೆರೆ
Dec 18, 2024ಗಾಂಧೀಜಿಯವರಿಗೆ ಬಸವಣ್ಣನವರನ್ನು ಪರಿಚಯಿಸಿದ ಹರ್ಡೇಕರ್ ಮಂಜಪ್ಪನವರಿಗೆ ಎಷ್ಟು ನಮನಗಳನ್ನು ಸಲ್ಲಿಸಿದರೂ ಸಾಲದು🙏🙏
ಶುಭ
Dec 24, 2024ಒಂದು ಅಲೌಕಿಕ ಅನುಭವ . ನಮ್ಮನ್ನೆಲ್ಲ 100 ವರ್ಷ ಹಿಂದೆ ಕೊಂಡು ಹೋದ ಅನುಭವ. ಎಲ್ಲಾ ಧೀಮಂತ ನಾಯಕರನ್ನು ನೋಡಿ ,ಸಮ್ಮೇಳನ ದಲ್ಲಿ ಭಾಗಿಯಾದ ಅನುಭವ
ಬಸವರಾಜ್ ಸುಬ್ರಾವ್ ಕಾಮಗೋಳ್
Dec 24, 2024ಸಧ್ಯದ ವಾತಾವರಣದಲ್ಲಿ ಕಾಂಗ್ರೆಸ್ಸ್ನಲ್ಲಿ ಗಾಂಧೀಜಿ ಹರ್ಡೇಕರ ಮಂಜಪ್ಪ ಡಾ ಅಂಬೇಡಕರ್ ನಿಜಲಿಂಗಪ್ಪ ಕಾಮರಾಜ್ ಇಂಥ ಮೇಧಾವಿಗದೊರೆಯುತ್ತಾರೆಯೇ ಈಗ ಕಾಂಗ್ರೆಸ್ಸ್ನಲ್ಲಿ ಸ್ವಜಾನಪಕ್ಶಷ್ಪಾಟ್ ಮೋಸದಿಂದ ಹಣ ಸಂಗ್ರಹಿಸುವುದು ಗುಂಪುಗರಿಕೆ ಹೆಚ್ಚಾಗಿದೆ ದೇಶದ ಬಗ್ಗೆ ಅಭಿಮಾನವೇ ಇಲ್ಲ 🙏🙏
Ashakiran, Bengaluru
Dec 24, 2024The above article is very informative and I was not knowing.. Thank u
A.P.Basavaraj, Bengaluru
Dec 24, 2024Superb article madam
ಜಯಕುಮಾರ್ ಹೊನ್ನಾವರ
Dec 25, 2024ಲೇಖನ ಓದಿ ಆ ಸಮ್ಮೇಳನವನ್ನೇ ನೋಡಿಬಂದಂತಾಯಿತು. ಬಸವಣ್ಣನವರನ್ನು ಓದಿಕೊಂಡ ಗಾಂಧೀಜಿಯನ್ನು ನಮಗೆ ತೋರಿಸಿದ ಲೇಖಕರಿಗೆ ವಂದನೆಗಳು.
ಪ್ರತಾಪ್ ಬಳಗೂರು
Dec 26, 2024ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ಸಿನ ನೂರನೆಯ ಸಮ್ಮೇಳನದ ಸಂದರ್ಭದಲ್ಲಿ ಈ ಲೇಖನ ಬಂದಿದ್ದು ಬಹಳ ಸಂಗತಿಗಳನ್ನು ಮನಗಾಣಿಸಿತು…
ಜಯಶ್ರೀ ಧಾರವಾಡ
Jan 2, 2025ಇತಿಹಾಸದ ನೆನಪುಗಳನ್ನು ಇಡಿಯಾಗಿ ಕಟ್ಟಿಕೊಟ್ಟ ಲೇಖಕರಿಗೆ ವಂದನೆಗಳು.
ಚಂದ್ರು ಬದಲೂರು
Jan 2, 2025ಅಂದಿನ ಬೆಳಗಾವಿಯ ಅಧಿವೇಶನವದಲ್ಲಿ ಕುವೆಂಪುರವರೂ ಭಾಗವಹಿಸಿದ್ದನ್ನು ಪತ್ರಿಕೆಗಳಲ್ಲಿ ಓದಿ ಬಹಳ ಖುಷಿಯಾಯಿತು.
ಮಹಾದೇವಪ್ಪ ಸಾಲಿಗ್ರಾಮ
Jan 6, 2025ಹರ್ಡೇಕರ್ ಮಂಜಪ್ಪನವರ ಎಡಬಿಡದ ಛಲ, ಬಸವೇಶ್ವರರನ್ನು ಮಹಾತ್ಮರಿಗೆ ಪರಿಚಯಿಸಿದ ಅವರ ಹಟ, ಶ್ರಮ ಓದಿ ಕಣ್ಣಲ್ಲಿ ನೀರು ಬಂತು. ನಮ್ಮ ಕನ್ನಡದ ಗಾಂಧಿಯನ್ನು ಪರಿಚಯಿಸುವ ಲೇಖನ ಬರೆಯಿರಿ.🙏
ಶಿವಕುಮಾರ್ ಸಿ.ಪಿ
Jan 8, 2025ಗಾಂಧೀಜಿ ಅವತ್ತಿಗೂ, ಇವತ್ತಿಗೂ, ಯಾವತ್ತಿಗೂ ಪ್ರಸ್ತುತರು. ಗಾಂಧೀಜಿಯ ಕೈಯಲ್ಲಿ ಬಸವಣ್ಣನವರನ್ನು ಓದಿಸಿದ ನಮ್ಮ ನಾಡಿನ ಗಾಂಧೀ ಮಂಜಪ್ಪನವರ ಪಾದಗಳಿಗೆ ನನ್ನ ಹಣೆ ಮುಟ್ಟಿಸಿದೆ.
Sumana M.G
Jan 12, 2025ಬಯಲಿನಲ್ಲಿ ಬರುವ ಪ್ರತಿ ಲೇಖನ, ಕವನ ತಪ್ಪದೆ ಓದುತ್ತೇವೆ, ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಳ್ಳುತ್ತೇನೆ… thanks for all writers🙏🙏