ಬಸವತತ್ವ ಸಮ್ಮೇಳನ
ಅನುಭಾವಿ ಅಲ್ಲಮಪ್ರಭುದೇವರು `ಬಸವಣ್ಣ ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು’ ಎಂದು ಅವರ ಗುರುತ್ವವನ್ನು ಗೌರವಿಸಿದ್ದಾರೆ. ಬಸವಣ್ಣನವರು ಎಲ್ಲರಿಗೂ ಬೇಕಾದವರು. ಅದೊಂದು ಬಸವತತ್ವ ಸಮ್ಮೇಳನ. ಆ ಸಭೆಯಲ್ಲಿ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಲ್ಲೂ ಇರಲಿಲ್ಲ. ಪುರುಷರು ಮಾತ್ರ ಇದ್ದು ಉಪನ್ಯಾಸಕರ ಮತ್ತು ಸ್ವಾಮೀಜಿಯವರ ಮಾತುಗಳನ್ನು ಶ್ರದ್ಧೆಯಿಂದ ಆಲಿಸುತ್ತಿದ್ದರು. ನಮ್ಮ ಸರದಿ ಬಂದಾಗ `ಬಸವಣ್ಣನವರು ಸಕಲ ಜೀವಾತ್ಮರ ಒಳಿತಿಗಾಗಿ ಮಿಡಿದವರು. ಅದರಲ್ಲೂ ಮಹಿಳಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಅವರು ಮನೆಯನ್ನು ಬಿಟ್ಟದ್ದೇ ತನಗೆ ಧರಿಸುವ ಜನಿವಾರ ತನ್ನನ್ನು ಹೆತ್ತ ತಾಯಿಗೆ, ಒಡಹುಟ್ಟಿದ ಸಹೋದರಿಗೆ ಏಕಿಲ್ಲ ಎಂದು ಪ್ರತಿಭಟಿಸುವ ಮೂಲಕ. ಅವರಿಗಿಲ್ಲದ ಜನಿವಾರ ನನಗಾದರೂ ಏಕೆ ಬೇಕು ಎನ್ನುವ ಅವರ ಪ್ರಶ್ನೆಗೆ ಪಟ್ಟಭದ್ರರು, ಪುರೋಹಿತ ಪರಂಪರೆಯವರ ಉತ್ತರ: ಮಹಿಳೆಯರು ಶೂದ್ರರು. ಅವರಿಗೆ ಜನಿವಾರ ಸಂಸ್ಕಾರ ನೀಡುವಂತಿಲ್ಲ ಎನ್ನುವುದು. ಶೂದ್ರರ ಹೊಟ್ಟೆಯಲ್ಲಿ ಹುಟ್ಟಿದ ನಾನು, ನೀವು ಸಹ ಶೂದ್ರರೇ ಅಲ್ಲವೇ ಎನ್ನುವ ಪ್ರಶ್ನೆ ಬಾಲಕ ಬಸವಣ್ಣನವರದು. ಅದಕ್ಕಾಗಿಯೇ ನಿಮಗೆ ಸಂಸ್ಕಾರ ನೀಡಿ ದ್ವಿಜರನ್ನಾಗಿ ಮಾಡುವುದು ಎನ್ನುವ ಉತ್ತರ. ಹಾಗಿದ್ದರೆ ಅವರಿಗೂ ಸಂಸ್ಕಾರ ನೀಡಿ ದ್ವಿಜರನ್ನಾಗಿ ಮಾಡಬಹುದಲ್ಲ ಬಾಲಕನ ಮರುಪ್ರಶ್ನೆ. `ಕೊಡಲಿಯ ಕಾವೇ ಕುಲಕ್ಕೆ ಮೃತ್ಯು’ ಎಂದರಿತ ಪಟ್ಟಭದ್ರರು ಬಾಲಕನಿಗೆ ಬಹಿಷ್ಕಾರ ಹಾಕುವರು. ನೀವು ನನಗೆ ಬಹಿಷ್ಕಾರ ಹಾಕುವುದೇನಿದೆ? ನಿಮ್ಮೆಲ್ಲ ಮೂಢಾಚರಣೆಗಳಿಗೆ ನಾನೇ ಬಹಿಷ್ಕಾರ ಹಾಕುವೆ ಎನ್ನುವ ದಿಟ್ಟತನ ತೋರುವರು ಬಾಲಕ ಬಸವಣ್ಣ. ಅದು ಕಾರಣವೇ ಅವರು ಹುಟ್ಟಿದ ಮನೆ, ಜಾತಿ, ಊರಿನಿಂದ ಹೊರಬರಬೇಕಾಗುತ್ತದೆ. ಇದನ್ನು ಮುಖ್ಯವಾಗಿ ಇಂದಿನ ಎಲ್ಲ ತಾಯಂದಿರೂ ಅರ್ಥಮಾಡಿಕೊಳ್ಳಬೇಕು. ಯಾರು ತಮಗಾಗಿ ಕರ್ಪುರದಂತೆ ಸುಟ್ಟುಕೊಂಡಿರುತ್ತಾರೋ ಅಂಥವರನ್ನು ಬೇಗ ಮರೆಯುವುದು ಮಾನವ ಸ್ವಭಾವ. ತಾಯಂದಿರು ಬಸವಣ್ಣನವರನ್ನು ಮರೆತರೆ ತಮ್ಮನ್ನೇ ಮರೆತಂತೆ. ಬಸವಣ್ಣನವರು ತಮಗಾಗಿ ಏನನ್ನೂ ಬಯಸಿದವರಲ್ಲ. ಲೋಕಕಲ್ಯಾಣಕ್ಕಾಗಿ ತಮ್ಮನ್ನೇ ಗಂಧದ ಕೊರಡಿನಂತೆ ತೇದುಕೊಂಡವರು. ಹಾಗಾಗಿಯೇ 900 ವರ್ಷಗಳ ನಂತರವೂ ಜನರು ಅವರನ್ನು ಮತ್ತೆ ಮತ್ತೆ ಸ್ಮರಣೆ ಮಾಡಿಕೊಳ್ಳುತ್ತಿರುವುದು. ಕೇವಲ ಸ್ಮರಣೆ ಮಾಡಿಕೊಂಡರೆ ಸಾಲದು. ಅವರ ಸ್ಮರಣೆಯ ಹಿಂದಿನ ಉದ್ದೇಶವನ್ನು ಅರಿತು ಅವರು ನೀಡಿದ ಸಂದೇಶವನ್ನು ವ್ಯಕ್ತಿಗತ ಮತ್ತು ಸಾರ್ವಜನಿಕ ಬದುಕಿನಲ್ಲಿ ಸಾಕಾರಗೊಳಿಸಿಕೊಳ್ಳಬೇಕು.
ಬಸವಣ್ಣನವರು ಲೋಕದ ಹಿತಚಿಂತನೆ ಮಾಡಿ ಅದರಂತೆ ಬದುಕಿದರು. ಬದುಕಿದ್ದನ್ನೇ ವಚನಗಳ ಮೂಲಕ ಲೋಕದ ಮುಂದೆ ಬಿಟ್ಟು ಹೋಗಿದ್ದಾರೆ. ಅಂಥ ವಚನಗಳ ಆಶಯಗಳನ್ನು ಅರಿತು ಅವುಗಳನ್ನು ಪ್ರತಿಯೊಬ್ಬರೂ ಬದುಕಿನ ಬಂಡವಾಳ ಮಾಡಿಕೊಳ್ಳಬೇಕಿದೆ. ಅವರು ತಮಗಾಗಿ ಏನನ್ನೂ ಇಟ್ಟುಕೊಂಡವರಲ್ಲ. ಇಷ್ಟಲಿಂಗ ನಿಷ್ಠೆ, ಕಾಯಕ ಮತ್ತು ದಾಸೋಹ ಪ್ರಜ್ಞೆಗೆ ಮತ್ತೊಂದು ಹೆಸರೇ ಬಸವಣ್ಣ. ಅವರು ಮಾಡಿದ ಸಂಕಲ್ಪವನ್ನು ಗಮನಿಸಬೇಕು.
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲಸಂಗಮದೇವಾ.
ಕಾಯಕ ಮತ್ತು ದಾಸೋಹ ಪ್ರಜ್ಞೆಯ ಮೂಲಕ ಸಮಸಮಾಜವನ್ನು ನಿರ್ಮಾಣ ಮಾಡಲು ಬಸವಣ್ಣನವರು ಸಂಕಲ್ಪ ಮಾಡಿ ಅದನ್ನು ತಮ್ಮ ಬದುಕಿನಲ್ಲೇ ಜಾರಿಯಲ್ಲಿ ತಂದವರು. ಹಾಗಾಗಿ ಯಾವುದನ್ನೂ ತಮಗಾಗಿ, ತಮ್ಮ ಕುಟುಂಬಕ್ಕಾಗಿ ಬೇಕೆಂದು ಕೂಡಿಡುವ ಪ್ರವೃತ್ತಿ ಅವರಲ್ಲಿರಲಿಲ್ಲ. ಏನೇ ಮಾಡಿದರೂ ಅದು ಶರಣರಿಗಾಗಿ ಎನ್ನುವ ಬದ್ಧತೆ ಅವರಲ್ಲಿತ್ತು. ನನಗೆ ಬೇಕೆಂದರೆ `ನಿಮ್ಮಾಣೆ, ನಿಮ್ಮ ಪ್ರಮಥರಾಣೆ’ ಎಂದು ಪ್ರಮಾಣ ಮಾಡುವರು. ಮತ್ತೊಂದು ವಚನದಲ್ಲಿ `ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ, ಎನ್ನ ಒಡಲಿಂಗೆ, ಎನ್ನ ಒಡವೆಗೆಂದು, ಎನ್ನ ಮಡದಿ ಮಕ್ಕಳಿಗೆಂದು, ಕುದಿದೆನಾದಡೆ ಎನ್ನ ಮನಕ್ಕೆ ಮನವೆ ಸಾಕ್ಷಿ’ ಎಂದವರು.
ಬಸವಣ್ಣನವರು ಸ್ಥಾವರ ದೇವಾಲಯಗಳ ಹಂಗಿನಿಂದ ಹೊರಬಂದವರು. ಜನರು ಅಂಥ ಬಾಹ್ಯ ದೇವಾಲಯಗಳಿಗೆ ಹೋಗಿ ಪೂಜಾರಿ ಪುರೋಹಿತರ ಶೋಷಣೆಗೆ ಬಲಿಯಾಗುತ್ತಿದ್ದುದನ್ನು ಕಂಡು ನೊಂದವರು. ಅದಕ್ಕಾಗಿ ದೇಹವನ್ನೇ ದೇವಾಲಯ ಮಾಡಿಕೊಳ್ಳಬೇಕು ಎಂದು ಸೂಚಿಸಿ ಅಂಗಕ್ಕೆ ಇಷ್ಟಲಿಂಗ ಸಂಬಂಧ ಕಲ್ಪಿಸಿದರು. ಅವರ ಪರಂಪರೆಯವರೆಂದು ಹೇಳಿಕೊಳ್ಳುವ ಲಿಂಗಾಯತರೇ ಇಂದು ಮಾಡುತ್ತಿರುವುದೇನು? ಕಂಡ ಕಂಡಲ್ಲಿ ಹೊಸ ಹೊಸ ದೇವಾಲಯಗಳನ್ನು ಕಟ್ಟಿಸುತ್ತಿದ್ದಾರೆ. ಅದಕ್ಕಾಗಿ ಕೋಟಿ ಕೋಟಿ ಹಣದ ದುವ್ರ್ಯಯ. ಬಸವಪ್ರಣೀತ ಲಿಂಗಾಯತ ಧರ್ಮೀಯರೇ ಗುಡಿಗಳನ್ನು ಕಟ್ಟಿಸುವಲ್ಲಿ ಸ್ಪರ್ಧೆಯನ್ನೇ ನಡೆಸಿದ್ದಾರೆ. ಗುಡಿ ಕಟ್ಟಿಸುವುದು ಮಾತ್ರವಲ್ಲ; ರಸ್ತೆಗಳಿಗೆ, ವೃತ್ತಕ್ಕೆ ಬಸವಣ್ಣನವರ ಹೆಸರಿಡಬೇಕೆಂದು ಒತ್ತಾಯ ಮಾಡುವರು. ಹಾಗೆ ಹೆಸರು ಇಡುವುದು ಮಾತ್ರ ಮುಖ್ಯವಾಗಬಾರದು. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಬೇಕು. `ಬಸವ ವೃತ್ತ’ ಎಂದು ನೆನಪಾಗುತ್ತಲೇ ಬಸವಣ್ಣನವರ ವಚನಗಳ ನೆನಪಾಗಬೇಕು. ಕಂಡ ಕಂಡ ದೇವಾಲಯಗಳನ್ನು ಸುತ್ತಬಾರದು ಎನ್ನುವ ಎಚ್ಚರ ಮೂಡಬೇಕು. ತೀರ್ಥಕ್ಷೇತ್ರಗಳಿಗೆ, ದೇವಾಲಯಗಳಿಗೆ ಹೋಗುವವರನ್ನು ಕಾಣುತ್ತಲೇ `ನೀರ ಕಂಡಲ್ಲಿ ಮುಳುಗುವರಯ್ಯಾ, ಮರನ ಕಂಡಲ್ಲಿ ಸುತ್ತುವರಯ್ಯಾ’ ಎನ್ನುವ ವಚನ ನೆನಪಾಗಬೇಕು. ಬಸವಣ್ಣನವರು ಹೇಳುವುದು: ನೀರು ಬತ್ತುವುದು. ಮರ ಒಣಗುವುದು. ಹೀಗೆ ಬತ್ತುವ ನೀರನ್ನು, ಒಣಗುವ ಮರವನ್ನು ನೆಚ್ಚಿದವರು ನಿಜವಾದ ದೇವರನ್ನು ನಂಬಲು ಸಾಧ್ಯವೇ ಎನ್ನುವ ಪ್ರಶ್ನೆ ಕಾಡುತ್ತಿದ್ದರೆ ಜನರು ತೀರ್ಥಕ್ಷೇತ್ರಗಳ ಮತ್ತು ಸ್ಥಾವರ ದೇವಾಲಯಗಳ ಹುಚ್ಚಿನಿಂದ ಹೊರಬರುವರು. ಹೀಗೆ ಬಸವಣ್ಣನವರ ಬದುಕಿನ ಬೇರೆ ಬೇರೆ ಘಟನಾವಳಿಗಳು ಬೆಳ್ಳಿ ಪರದೆಯ ಮೇಲೆ ಹರಿದು ಹೋಗುವಂತೆ ನಮ್ಮ ಮನದಲ್ಲಿ ಮೂಡಿ ಬದುಕಿಗೆ ಒಂದು ಬದ್ಧತೆಯನ್ನು ತಂದುಕೊಡಬೇಕು. ಆಗ ವೃತ್ತಕ್ಕೆ ಬಸವಣ್ಣ ಅಥವಾ ಮತ್ತಿತರ ಶರಣರ ಹೆಸರು ಇಟ್ಟದ್ದು ಸಾರ್ಥಕವಾಗುವುದು.
ಇವತ್ತು ರಾಜಕೀಯ ಬದಲಾದ ಹಾಗೆ ವೃತ್ತಗಳ ಹೆಸರುಗಳೂ ಬದಲಾಗುತ್ತಲೇ ಇರುತ್ತವೆ. ಒಂದು ಪಕ್ಷದವರು ಆ ಜಯಂತಿಯ ಆಚರಣೆ ಬೇಡವೆಂದರೆ ಮತ್ತೊಂದು ರಾಜಕೀಯ ಪಕ್ಷದವರು ಅಧಿಕಾರಕ್ಕೆ ಬರುತ್ತಲೇ ಆ ಜಯಂತಿ ಮಾಡುತ್ತೇವೆ ಎನ್ನುವರು. ರಾಜಕೀಯ ಬದಲಾದಂತೆ ತತ್ವ ಸಿದ್ಧಾಂತಗಳೂ ಬದಲಾಗುತ್ತ ಹೋದರೆ ನಾಳೆ ನಮ್ಮ ದೇಶದ ಸ್ಥಿತಿ ಏನಾಗಬಹುದೆಂದು ಗಂಭೀರ ಚಿಂತನೆ ಮಾಡಬೇಕಿದೆ. ನಾವು ಅನೇಕ ಸಂದರ್ಭಗಳಲ್ಲಿ ಹೇಳುತ್ತ ಬಂದಿರುವುದು ಸರ್ಕಾರ ಯಾವ ಜಯಂತಿಗಳನ್ನೂ ಮಾಡಬೇಕಾಗಿಲ್ಲ. ರಜೆಯನ್ನೂ ಕೊಡಬೇಕಾಗಿಲ್ಲ. ಅದಕ್ಕಾಗಿ ಹಣವನ್ನೂ ನೀಡಬೇಕಾಗಿಲ್ಲ ಎಂದು. ಯಾರು ಯಾವ ಜಯಂತಿಯನ್ನಾದರೂ ಮಾಡಿಕೊಳ್ಳಲಿ. ಅದರಂತೆ ರಸ್ತೆ, ವೃತ್ತಗಳಿಗೆ ಹೆಸರು ಇಡುವ ಬಗ್ಗೆಯೂ ಯೋಚಿಸಬೇಕು. ವೃತ್ತ, ರಸ್ತೆಗಳಿಗೆ ಬಸವಣ್ಣನವರ ಹೆಸರು ಇಡುವ ಬದಲು ಪ್ರತಿಯೊಬ್ಬರೂ ತಮ್ಮ ಬದುಕನ್ನು ಬಸವಮಯ ಮಾಡಿಕೊಳ್ಳುವುದು ಬಹುಮುಖ್ಯ. ವ್ಯಕ್ತಿಗತ ಬದುಕು ಬಸವಮಯವಾದಲ್ಲಿ ಯಾವ ವೃತ್ತ, ಬೀದಿಗೂ ಬಸವಣ್ಣನವರ ಹೆಸರಿಸುವ ಅವಶ್ಯಕತೆಯಿಲ್ಲ. ಬಸವಣ್ಣನವರ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಬೇಕಿಲ್ಲ. ನಿಜವಾಗಿಯೂ ಬಸವಣ್ಣನವರು ಪ್ರತಿಷ್ಠಾಪನೆ ಆಗಬೇಕಾದ್ದು ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಮತ್ತು ಬದುಕಿನ ವಿಧಾನದಲ್ಲಿ. ಅಲ್ಲೇ ಇಲ್ಲದ ಬಸವಣ್ಣನವರನ್ನು ಬೀದಿಯಲ್ಲಿಟ್ಟು ಪೂಜಾದಿ ಕ್ರಿಯೆಗಳನ್ನು ಮಾಡಿದರೆ ಬಂದ ಭಾಗ್ಯವಾದರೂ ಏನು? ಬಸವಣ್ಣನವರು ಎಲ್ಲರ ಬದುಕಿಗೆ ಬೇಕಾದ ಬೆಳಕನ್ನು ಕರುಣಿಸಿದವರು. ಹಾಗೆ ಕರುಣಿಸುವ ಮುನ್ನ ತಮ್ಮಲ್ಲೇ ಆ ಬೆಳಕನ್ನು ಕಂಡುಕೊಂಡವರು. ಅವರು ಬಾಲಕರಾಗಿದ್ದಾಗಲೇ ಎಂಥ ಬಂಡಾಯ ಪ್ರಜ್ಞೆ ಬೆಳೆಸಿಕೊಂಡಿದ್ದರು ಎನ್ನುವುದನ್ನು ತಿಳಿದರೆ ರೋಮಾಂಚನವಾಗುವುದು. ಅವರಂಥ ಗಟ್ಟಿ ಪ್ರಶ್ನೆಯನ್ನು ಇವತ್ತು ಯಾರೂ ಮಾಡಲು ಸಿದ್ಧರಿಲ್ಲ. ಇದೇ ಬಸವಣ್ಣನವರ ತಾಕತ್ತು. ಪ್ರತಿ ಜನಾಂಗದವರು ತಮ್ಮಲ್ಲಿ ಮುಂದುವರಿದುಕೊಂಡು ಬಂದಿರುವ ಅರ್ಥಹೀನ ಸಂಪ್ರದಾಯಗಳನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಲು ಯೋಚಿಸುತ್ತಿದ್ದಾರೆಯೇ ಹೊರತು ಅವುಗಳಲ್ಲಿರುವ ದೋಷಗಳನ್ನು ಪ್ರಶ್ನಿಸುವ ಎದೆಗಾರಿಕೆ ತೋರಿಸುವುದಿಲ್ಲ. ಮನುಷ್ಯ ಮೊದಲು ಪ್ರಶ್ನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಾಕ್ರಟೀಸ್ ಪ್ರಶ್ನೆ ಮಾಡುವ ಮೂಲಕವೇ ಯುವಕರ ಮನಸ್ಸನ್ನು ಪರಿವರ್ತನೆ ಮಾಡಿದ್ದು ಎಂಬ ಐತಿಹಾಸಿಕ ಸತ್ಯವನ್ನು ಮರೆಯಬಾರದು. ಅನುಭವ ಮಂಟಪ ಮಾಡಿದ್ದು ಸಹ ಅದೇ ಕಾರ್ಯವನ್ನು.
ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಂಡರೆ ಸತ್ಯದ ಅನಾವರಣವಾಗುತ್ತದೆ. ಸತ್ಯದ ಅನಾವರಣವಾದಾಗ ವ್ಯಕ್ತಿ ತನ್ನ ಮತ್ತು ತನ್ನ ಸುತ್ತಲಿನ ಜನರಲ್ಲಿ ಬದಲಾವಣೆ ತರುವ ಪ್ರಯತ್ನ ಮುಂದುವರಿಸುತ್ತಾನೆ. ಎಲ್ಲೆಡೆ ಸುಳ್ಳಿನ ಅನಾವರಣವಾಗುತ್ತಿದ್ದರೆ ಮನುಷ್ಯ ಸತ್ಯವನ್ನು ತನ್ನ ಬಂಡವಾಳ ಮಾಡಿಕೊಳ್ಳಲು ಹೇಗೆ ಸಾಧ್ಯ? ಕೊನೆಗೆ ಆತನೂ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವುದನ್ನೆ ರಕ್ತಗತ ಮಾಡಿಕೊಳ್ಳುವನು. ಇತ್ತೀಚೆಗೆ ಕರ್ನಾಟಕದ ವಿಧಾನಸಭೆಯ ಚುನಾವಣೆಗಳು ನಡೆದವು. ಅವುಗಳಲ್ಲಿ ಭ್ರಷ್ಟಾಚಾರದ ಹೊಳೆ ಹರಿದಿದೆ ಎಂದು ಗೆದ್ದವರು ಮತ್ತು ಸೋತವರು ಯಗ್ಗಿಲ್ಲದೆ ಹೇಳುತ್ತಾರೆ. ಹಾಗೆ ಹೇಳುವವರು ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವರೇ ಎನ್ನುವುದು ನಮ್ಮ ಪ್ರಶ್ನೆ. ಚುನಾವಣೆಗೆ ನಿಂತ ವ್ಯಕ್ತಿ ನಿಜಕ್ಕೂ ಪ್ರಾಮಾಣಿಕ ಮತ್ತು ಜನಪರ ಕಾಳಜಿಯುಳ್ಳವನಾಗಿ ಅಧಿಕಾರದಾಹಿಯಾಗಿರದಿದ್ದರೆ ನಾನು ಚುನಾವಣೆಯಲ್ಲಿ ಯಾವುದೇ ಆಮಿಷಗಳನ್ನು ಒಡ್ಡುವುದಿಲ್ಲ. ನನ್ನ ಸೇವೆ ಬೇಕೆಂದರೆ ಮತದಾರರು ನನಗೆ ಮುಕ್ತವಾಗಿ ಮತದಾನ ಮಾಡಬಹುದು. ಅದರಿಂದ ನನ್ನ ಸೇವೆಯನ್ನು ಕ್ಷೇತ್ರಕ್ಕೆ, ಸಮಾಜಕ್ಕೆ, ರಾಜ್ಯಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದರೆ ಅಂಥವರನ್ನು ಸ್ವಾಗತ ಮಾಡಬಹುದಿತ್ತು. ಆದರೆ ಆಗ ಹಾಗೆ ಹೇಳದೆ ಎಲ್ಲರಂತೆ ಅವರೂ ಹಣ ಮತ್ತಿನ್ನೇನೋ ಆಮಿಷ ತೋರಿಸಿ ಮತ ಕೊಳ್ಳುವಲ್ಲಿ ಸ್ಪರ್ಧೆಯನ್ನೇ ನಡೆಸಿದ್ದಾರೆ. ಸೋತಾಗ ಮಾತ್ರ ಹೀಗಾಗಬಾರದಿತ್ತು. ಮತದಾರರಲ್ಲಿ ನಿಷ್ಠೆ ಇಲ್ಲ ಎಂದೆಲ್ಲ ಗೊಣಗುವರು. ಹೀಗೆ ಗೊಣಗುವ ಮುನ್ನವೇ ಸ್ಪರ್ಧಿಗಳಾರೂ ಆಮಿಷ ತೋರಿ ಮತದಾರರನ್ನು ಕೊಳ್ಳುವುದು ಬೇಡ; ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನಮ್ಮ ಇದುವರೆಗಿನ ಸಾಧನೆ, ಸಾರ್ವಜನಿಕ ಸೇವೆಯ ಪರಿಚಯ ಮಾಡಿ ಮುಂದಿನ ನಮ್ಮ ಯೋಜನೆಗಳೇನು ಎಂದೆಲ್ಲ ಮನಬಿಚ್ಚಿ ಮಾತನಾಡಬೇಕು ಎನ್ನುವ ನಿರ್ಣಯಕ್ಕೆ ಬರಬೇಕಿತ್ತು. ಆಗ ಕೋಟಿ ಕೋಟಿ ಹಣವನ್ನು ಚುನಾವಣೆಗಾಗಿ ಸುರಿಯುವ ಪ್ರಸಂಗವೇ ಬರುತ್ತಿರಲಿಲ್ಲ. ಒಬ್ಬರಾದರೂ ಒಳ್ಳೆಯ ವಾತಾವರಣ ನಿರ್ಮಾಣ ಮಾಡಲು ಟೊಂಕ ಕಟ್ಟಿ ನಿಲ್ಲಬೇಕಿತ್ತು. ಅದರ ಬದಲು ಎಲ್ಲರೂ `ಹತ್ತರಕೂಡ ಹನ್ನೊಂದು’ ಎನ್ನುವಂತಾದರೆ ಸಮಾಜದಲ್ಲಿ ಹೇಗೆ ಬದಲಾವಣೆ ತರಲು ಸಾಧ್ಯ? ಈ ನೆಲೆಯಲ್ಲೇ ಬಸವಣ್ಣನವರು 12ನೆಯ ಶತಮಾನದಲ್ಲೇ ಹೇಳಿದ್ದು:
ನೂರನೋದಿ ನೂರ ಕೇಳಿ ಏನು?
ಆಸೆ ಬಿಡದು, ರೋಷ ಪರಿಯದು.
ಮಜ್ಜನಕ್ಕೆರೆದು ಫಲವೇನು?
ಮಾತಿನಂತೆ ಮನವಿಲ್ಲದ ಜಾತಿ [ಡಂ]ಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ.
ಮನುಷ್ಯ ಏನು ಹೇಳ್ತಾನೆ, ಏನು ಕೇಳ್ತಾನೆ ಎನ್ನುವುದು ಮುಖ್ಯವಲ್ಲ. ಬದಲಾಗಿ ಹಾಗೆ ಹೇಳುವ, ಕೇಳುವ ಮೂಲಕ ತನ್ನಲ್ಲಿನ ಆಸೆ ಬಿಡಬೇಕು. ರೋಷವನ್ನು ಕಳೆದುಕೊಳ್ಳಬೇಕು. ಮಾತಿನಂತೆ ಮನಸ್ಸಿರಬೇಕು. ಹೀಗಿಲ್ಲದೆ ಏನು ಕೇಳಿದರೇನು, ಹೇಳಿದರೇನು, ಎಷ್ಟು ಗಂಟೆ ಮಜ್ಜನಕ್ಕೆರೆದರೇನು? ಅವೆಲ್ಲ ವ್ಯರ್ಥವೆಂದು ದೇವರೇ ನಗುವನಂತೆ. ಏಕೆಂದರೆ ಮಾತಿನಂತೆ ಮನ, ಮನದಂತೆ ಮಾತು ಇರಬೇಕಾದ್ದು ಬಹುಮುಖ್ಯ. ಒಳಗೊಂದು, ಹೊರಗೊಂದು ಇದ್ದರೆ ಆ ವ್ಯಕ್ತಿಗೆ ಯಾರು ತಾನೆ ಮನದಾಳದಿಂದ ಗೌರವ ಕೊಡಬಲ್ಲರು? ಅವರು ಕೊಡುವ ಗೌರವ ಕೇವಲ ವ್ಯಾವಹಾರಿಕ ಲಾಭಕ್ಕಾಗಿರುತ್ತದೆ ಎನ್ನುವ ಸತ್ಯ ಮರೆಯಬಾರದು. ಬಸವಣ್ಣ ಎಂದೂ ಅಧಿಕಾರ ಲಾಲಸಿಗರಾಗಿರಲಿಲ್ಲ. ಯಾವ ಅಧಿಕಾರವನ್ನೂ ಬಯಸಿದವರಲ್ಲ. ಅಧಿಕಾರ ಸಿಕ್ಕಾಗ ಅದನ್ನು ಸಮಾಜದ ಒಳಿತಿಗಾಗಿ ಬಳಸಿದವರು. `ನಂಟುಭಕ್ತಿ ನಾಯಕ ನರಕ’ ಎಂದವರು. ಅಧಿಕಾರದ ದುರುಪಯೋಗ ಮಾಡಿಕೊಂಡವರಲ್ಲ. ತಮ್ಮ ಆದರ್ಶಗಳಿಗೆ ಅಧಿಕಾರ ಅಡ್ಡಿಯಾಗುತ್ತದೆ ಎಂದಾಗ ಅಂಥ ಅಧಿಕಾರವನ್ನು ತ್ಯಜಿಸಲು ಸಹ ಹಿಂದೆ ಮುಂದೆ ನೋಡಲಿಲ್ಲ. ಕಾರಣ ಅವರಿಗೆ ಆದರ್ಶ ಮುಖ್ಯವಾಗಿತ್ತೇ ಹೊರತು ಅಧಿಕಾರವಲ್ಲ. ಅಂಥ ಗಟ್ಟಿತನವನ್ನು ಬಸವನಾಡಿನಲ್ಲಿ ಇರುವ ರಾಜಕೀಯ, ಸಾಮಾಜಿಕ, ಧಾರ್ಮಿಕ ನೇತಾರರು ಬೆಳೆಸಿಕೊಳ್ಳಬೇಕಿದೆ. ಇದು ಹೇಳಿದಷ್ಟು ಸುಲಭವಲ್ಲ ಎಂದು ಹೊತ್ತು ಬಂದಂತೆ ಕೊಡೆ ಹಿಡಿಯುವವರೇ ಹೆಚ್ಚಾಗುತ್ತಿದ್ದಾರೆ. ರಾಮನ ಬಳಿ ಹೋದಾಗ ರಾಮನಿಗೆ ಜೈ ಎನ್ನುವುದು, ರಹೀಮನ ಹತ್ತಿರ ಹೋದಾಗ ರಹೀಮನಿಗೆ ಜೈ ಎನ್ನುವುದು. ಇಂಥ ಸಮಯಸಾಧಕತನ ರಾಜಕೀಯ ಕ್ಷೇತ್ರದಲ್ಲಿ ವಿಪರೀತವಾಗುತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆದರ್ಶಗಳನ್ನು ಗಾಳಿಗೆ ತೂರಿದ್ದಾಯ್ತು. ಅದರಲ್ಲಿ ಪ್ರಜಾಪ್ರತಿನಿಧಿ ಮತ್ತು ಪ್ರಜಾಪ್ರಭು ಇಬ್ಬರೂ ಪಾಲುದಾರರು.
ಬಸವಾದಿ ಶರಣರು ಕಾಯಕವೆ ಕೈಲಾಸವೆಂದು ದುಡಿದು ಉಣ್ಣುವ ಮತ್ತು ದುಡಿದದ್ದರಲ್ಲಿ ಸಮಾಜದ ಒಳಿತಿನ ಕಾರ್ಯಗಳಿಗೆ ಕೊಡುವ ದಾಸೋಹ ಪ್ರಜ್ಞೆ ಬೆಳೆಸಿದವರು. ಆದರೆ ಇಂದು ಅಧಿಕಾರದ ಹಪಾಹಪಿಯಿಂದ ಜನರಿಗೆ ಉಚಿತ ಯೋಜನೆಗಳ ಪಟ್ಟಿಯನ್ನೇ ಎಲ್ಲ ಪಕ್ಷದವರು ಮುಂದಿಟ್ಟು ಅಧಿಕಾರ ಪಡೆಯುವ ಸ್ಪರ್ಧೆ ಮಾಡಿದ್ದು ನಿಜಕ್ಕೂ ಬಸವನಾಡಿನ ದುರಂತವೇ ಸೈ. ಬಿಜ್ಜಳನ ಭಂಡಾರ ಸದಾ ತುಂಬಿತುಳುಕುತ್ತಿದ್ದುದರ ಹಿಂದಿರುವ ರಹಸ್ಯ `ಕಾಯಕವೆ ಕೈಲಾಸ’ ಎನ್ನುವ ತತ್ವ. ಅಲ್ಲಿ ಸೋಮಾರಿಗಳಿಗೆ, ಭಿಕ್ಷುಕರಿಗೆ ಅವಕಾಶವೇ ಇರಲಿಲ್ಲ. ಹಾಗಾಗಿಯೇ ಬಸವಣ್ಣನವರು `ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ’ ಎಂದಿದ್ದಾರೆ. ಪ್ರತಿಯೊಬ್ಬರೂ ಕಾಯಕ ಮತ್ತು ದಾಸೋಹ ನಿಷ್ಠೆ ಮೈಗೂಡಿಸಿಕೊಂಡಾಗ ಬೇಡುವವರನ್ನು ಎಲ್ಲಿಂದ ತರಲು ಸಾಧ್ಯ? `ಕೈ ಕೆಸರಾದರೆ ಬಾಯಿ ಮೊಸರು’ ಎನ್ನುವ ಗಾದೆ ಸುಮ್ಮನೇ ಹುಟ್ಟಿದ್ದಲ್ಲ. ದುಡಿಮೆ ಇಲ್ಲವಾದಾಗ ಸೋಮಾರಿತನ ಅದರ ಜೊತೆಗೆ ದುರಭ್ಯಾಸ ಮತ್ತು ಅನಾರೋಗ್ಯ ಹೆಚ್ಚುವುದು. ಆಗ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುವುದರಲ್ಲಿ ಅನುಮಾನವಿಲ್ಲ. ಈ ನೆಲೆಯಲ್ಲಿ ಮನುಷ್ಯನಿಗೆ ಯಾವಾಗಲೂ ಒಂದು ಬದ್ಧತೆ ಇರಬೇಕು. ಬಸವಾದಿ ಶರಣರು ಬದ್ಧತೆಗೆ ಒಳಗಾದವರು. ಯಾರೋ ಏನೋ ಹೇಳ್ತಾರೆ ಎಂದು ಕೌಲೆತ್ತಿನಂತೆ ತಲೆದೂಗಿದವರಲ್ಲ. ಅವರು ಹೇಳುವ ಮಾತು ಎಷ್ಟರಮಟ್ಟಿಗೆ ಸತ್ಯದಿಂದ ಕೂಡಿದೆ, ಸಾಮಾಜಿಕ ಒಳಿತನ್ನು ಒಳಗೊಂಡಿದೆ ಎಂದು ಚಿಂತನ ಮಂಥನ ಮಾಡಿದವರು. ಹಾಗಾಗಿ ಬಸವಾದಿ ಶರಣರು ಇಂದಿಗೂ ಸ್ಪೂರ್ತಿಯ ಸೆಲೆಯಾಗಿದ್ದಾರೆ.
ಚೈತನ್ಯದ ಚಿಲುಮೆಯಾಗಿದ್ದ ಬಸವಣ್ಣ ಮತ್ತಿತರ ಶರಣರ ಹೆಸರನ್ನು ಸ್ಮರಿಸಿಕೊಳ್ಳುವುದೇ ರೋಮಾಂಚನವನ್ನುಂಟುಮಾಡಿ ನಮಗೆ ಶಕ್ತಿ ತುಂಬುವಂತಹುದು. ಅವರ ವಿಚಾರಗಳಿಂದ ನಮ್ಮ ಬದುಕಿನಲ್ಲಿ ಬೆಳಕನ್ನು ತುಂಬಿಕೊಳ್ಳಬೇಕು. ಬದಲಾಗಿ ವ್ಯಕ್ತಿಗತ ಬದುಕು ಕತ್ತಲೆಯಿಂದ ತುಂಬಿ ಹೊರಗೆ ಮಾತ್ರ ಬೆಳಕು ಕಾಣಲಿ ಎಂದರೆ ಅದು ನಿರರ್ಥಕ. ಪ್ರತಿಯೊಬ್ಬರೂ ತಮ್ಮೊಳಗೆ ಶರಣರ ವಚನಗಳ ಬೆಳಕನ್ನು ತುಂಬಿಕೊಳ್ಳುವ ಸಂಕಲ್ಪ ಮಾಡಬೇಕು. ಅದನ್ನೇ ಬಸವಣ್ಣನವರು ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ ಎಂದದ್ದು. ಅಂತರಂಗ, ಬಹಿರಂಗ ಶುದ್ಧಿಯಾಗದಿದ್ದರೆ ಎಷ್ಟು ಜನ ಬಸವ, ಬುದ್ಧ, ವಿವೇಕಾನಂದ, ಗಾಂಧಿ, ಅಂಬೇಡ್ಕರ್ರಂಥ ಮಹನೀಯರು ಮತ್ತೆ ಮತ್ತೆ ಬಂದರೂ ಈ ನಾಡಿನ ಜನರನ್ನು ಪರಿವರ್ತನೆ ಮಾಡಲು ಸಾಧ್ಯವಿಲ್ಲ. ವ್ಯಕ್ತಿ ತನಗೆ ತಾನೇ ಬದಲಾಗಬೇಕು. ಅದಕ್ಕಾಗಿಯೇ ಬಸವಣ್ಣನವರು ಹೇಳಿದ್ದು:
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.
ಯಾಕಾಗಿ ಮತ್ತೊಬ್ಬರ ದೋಷಗಳತ್ತಲೇ ಬೆರಳು ಮಾಡಿ ತೋರಿಸುತ್ತೀರಿ ಎಂದು ಪ್ರಶ್ನೆ ಹಾಕುವರು. ಹಾಗಿದ್ದರೆ ತಪ್ಪು ಮಾಡುತ್ತೀರಿ ಎಂದು ಹೇಳಬಾರದೇ? ಖಂಡಿತ ಹೇಳಬೇಕು. ಹೇಳುವ ಮುನ್ನ ನಾವೇನಾಗಿದ್ದೇವೆ, ಹೇಗೆ ಇದ್ದೇವೆ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನು ಶುದ್ಧನಾಗಿದ್ದರೆ ಇನ್ನೊಬ್ಬರ ತಪ್ಪು ತೋರಿಸಿ ತಿದ್ದುವ ನೈತಿಕತೆ ಬರುತ್ತದೆ. `ತಾನೇ ಕಳ್ಳ ಪರರನ್ನು ನಂಬ’ ಎನ್ನುವಂತಾದರೆ ಹೇಗೆ? ಅದಕ್ಕಾಗಿಯೇ ಬಸವಣ್ಣನವರು ಮೊದಲು ತಮ್ಮ ತನು, ಮನವನ್ನು ಶುದ್ಧಗೊಳಿಸಿಕೊಂಡರು. ತಾವು ಸನ್ಮಾರ್ಗದಲ್ಲಿ ನಡೆದು ನಂತರ ಇತರರೂ ಆ ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡಿದರು. ಅವರ ಯಾವ ವಚನಗಳನ್ನು ನೋಡಿದರೂ ಅಲ್ಲಿ ಉಪದೇಶಕ್ಕಿಂತ ಆತ್ಮಾವಲೋಕನದ ವಿಧಾನವೇ ಮುಖ್ಯವಾಗಿದೆ. ಅವರು ಲೋಕ ಕೆಟ್ಟಿದೆ ಎಂದವರಲ್ಲ. ನಾನು ಕೆಟ್ಟಿದ್ದರೆ ಹೇಗೆ ತಿದ್ದಿಕೊಳ್ಳುತ್ತಿದ್ದೆ ಎನ್ನುವ ಮೂಲಕ ಲೋಕದ ಜನರಿಗೆ ಮಾರ್ಗದರ್ಶನ ಮಾಡಿದವರು. ಅದಕ್ಕಾಗಿ `ಎನ್ನ ತಪ್ಪು ಅನಂತ ಕೋಟಿ’ ಎನ್ನುವರೇ ಹೊರತು ನಿಮ್ಮ ತಪ್ಪು ಅನಂತಕೋಟಿ ಎನ್ನುವುದಿಲ್ಲ. `ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ ನಾನು’ ಎನ್ನುವರೇ ಹೊರತು ನೀವು ಎನ್ನುವುದಿಲ್ಲ. ಇದು ಮಹಾತ್ಮ ಬಸವಣ್ಣ ಸಮಾಜವನ್ನು ಬದಲಾಯಿಸಲು ಕಂಡುಕೊಂಡ ಮಾರ್ಗ. ಮನುಷ್ಯ ತನಗೆ ತಾನೇ ಶುದ್ಧನಾಗಿದ್ದರೆ ಇನ್ನೊಬ್ಬರನ್ನು ಸನ್ಮಾರ್ಗದಲ್ಲಿ ಕರೆದೊಯ್ಯಲು ಅರ್ಹನಾಗುವನು. ಇಲ್ಲವಾದರೆ ತನ್ನ ದೋಷಗಳನ್ನೇ ಇನ್ನೊಬ್ಬರಲ್ಲೂ ಕಂಡು ಅವನು ಹಾಗೆ, ಇವನು ಹೀಗೆ ಎಂದು ದೋಷಗಳನ್ನು ಹುಡುಕುವಲ್ಲೇ ತನ್ನ ಪ್ರಾವೀಣ್ಯತೆ ಮೆರೆಯುವನು. ಆದರೆ `ಮನವರಿಯದ ಕಳ್ಳತನವಿಲ್ಲ’ ಎನ್ನುವ ಸತ್ಯವನ್ನು ಮರೆಯಬಾರದಷ್ಟೇ.
ಲಿಂಗಾಯತ ಧರ್ಮದಲ್ಲಿ ಆದರ್ಶ ವ್ಯಕ್ತಿತ್ವಕ್ಕೆ ಬೇಕಾದ ಕೆಲವು ನೀತಿಸಂಹಿತೆಗಳನ್ನು ಪಂಚಾಚಾರಗಳ ಮೂಲಕ ಪ್ರತಿಪಾದಿಸಿದ್ದಾರೆ. ಅವೆಂದರೆ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ. ಇವು ಹೇಳುವುದು ಮನುಷ್ಯ ಆಚಾರವಂತನಾಗಿ ಬದ್ಧತೆಗೆ ಒಳಗಾಗಿ ಬಾಳಬೇಕು ಎಂದು. ಅಂದರೆ ಅವನು ಮೊದಲು ಏಕದೇವನಿಷ್ಠೆಯುಳ್ಳವನಾಗಬೇಕು. ಇಷ್ಟಲಿಂಗವನ್ನಲ್ಲದೆ ಬೇರೆ ಯಾವ ಸ್ಥಾವರ ಪೂಜೆಗೂ ಅಂಟಿಕೊಳ್ಳಬಾರದು. ಸದಾ ಕಾಯಕಶೀಲನಾಗಬೇಕು. ಸರ್ವರನ್ನೂ ಸಮಾನರೆಂದು ಪರಿಗಣಿಸಬೇಕು. ಇಷ್ಟಿದ್ದರೆ ಸಾಲದು ಅನ್ಯಾಯದ ವಿರುದ್ಧ ಸಾಮೂಹಿಕವಾಗಿ ಪ್ರತಿಭಟನೆ ಮಾಡಬೇಕು. ಹಾಗಂತ ಅವರಲ್ಲಿ ನಾನು ಮಾಡಿದೆ ಎನ್ನುವ ಅಹಂಭಾವವಿರದೆ `ಮುಗಿದ ಕೈ, ಬಾಗಿದ ತಲೆಯ’ ವಿನಯವಂತರಾಗಿರಬೇಕು. ಇವತ್ತು ಪಂಚಾಚಾರಗಳನ್ನು ಅಳವಡಿಸಿಕೊಳ್ಳುವ ಮನಸ್ಥಿತಿಯನ್ನು ಮೊದಲು ನಮ್ಮ ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಅದನ್ನು ಬಿಟ್ಟು ಅವರನ್ನೂ ದಿಕ್ಕುತಪ್ಪಿಸುವ ಕಾರ್ಯ ಮಾಡಬಾರದು. ಅವರಲ್ಲಿ ಪ್ರಶ್ನೆ ಮಾಡುವ ಮನಸ್ಥಿತಿಯನ್ನು ಬೆಳೆಸಬೇಕು. ಮಕ್ಕಳು ಒಂದರ್ಥದಲ್ಲಿ ಉತ್ಕೃಷ್ಟ ಬೀಜಗಳಿದ್ದಂತೆ. ಬೆಳೆದದ್ದನ್ನೆಲ್ಲ ಬೀಜವನ್ನಾಗಿ ಕೃಷಿಕರು ಬಳಸುವುದಿಲ್ಲ. ಅದರಲ್ಲೇ ಉತ್ತಮವಾದ ತೆನೆಗಳನ್ನು ಆರಿಸಿ ಅವುಗಳನ್ನು ವರ್ಷದುದ್ದಕ್ಕೂ ರಕ್ಷಣೆ ಮಾಡುವರು. ಹಾಗೆ ಗಟ್ಟಿಕಾಳಾಗಿ ತಮ್ಮ ಮಕ್ಕಳನ್ನು ಉತ್ತಮ ಬೀಜಗಳನ್ನಾಗಿ ಮಾಡಬೇಕು. ಬಸವಸಂಸ್ಕಾರದಡಿ ಅವರು ಬದುಕನ್ನು ಕಟ್ಟಿಕೊಳ್ಳುವ ವಾತವರಣ ಕಲ್ಪಿಸಬೇಕು. ವ್ಯಕ್ತಿ ತನಗೆ ತಾನೆ ಸತ್ಯವನ್ನೇ ನುಡಿವ, ಸರಳವಾಗಿ ಬಾಳುವ, ಯಾರಿಗೂ ಕೇಡು ಬಯಸದೆ ಎಲ್ಲರೂ ನಮ್ಮವರು ಎಂದು ಭಾವಿಸಿ ಸಕಲ ಜೀವಾತ್ಮರಿಗೆ ಒಳಿತು ಬಯಸುವ ಛಲವಂತರಾಗಬೇಕು. ಆಗ ಸಭೆ ಸಮಾರಂಭಗಳಿಗೆ ಮೆರಗು ಬರುವುದು. ಇಲ್ಲವಾದರೆ ಹತ್ತರಕೂಡ ಹನ್ನೊಂದು ಪರ್ಷಿಕೂಡ ಗೋವಿಂದ ಎನ್ನುವಂತೆ `ಬಸವತತ್ವ ಸಮ್ಮೇಳನ’ವೂ ಆಗಬಹುದು.
ಆದ್ಯರ ವಚನ ಪರುಷ ಕಂಡಣ್ಣಾ;
ಸದಾಶಿವನೆಂಬ ಲಿಂಗ[ವು] ನಂಬುವುದು,
ನಂಬಲೊಡನೆ ನೀ ವಿಜಯ ಕಂಡಣ್ಣಾ.
ಅಧರಕ್ಕೆ ಕಹಿ, ಉದರಕ್ಕೆ ಸಿಹಿ
ಕೂಡಲಸಂಗನ ಶರಣರ ವಚನ ಬೇವ ಸವಿದಂತೆ.
ಶರಣರ ವಚನಗಳು ಬೇವ ಸವಿದಂತೆ. ಬೇವು ಕಹಿಯಾಗಿದ್ದರೂ ಆರೋಗ್ಯವರ್ಧಕ. ಅದರಂತೆ ವಚನಗಳು ಬೇವಿನಂತೆ ಕಂಡರೂ ಬದುಕಿನ ದಿಕ್ಕನ್ನೇ ಬದಲಿಸುವ ಶಕ್ತಿ ಪಡೆದಿವೆ. ಈ ನೆಲೆಯಲ್ಲಿ ಶರಣರ ವಚನಗಳೆಂಬ ಬೇವನ್ನು ಸವಿಯುವ, ವ್ಯಕ್ತಿಗತ ಆರೋಗ್ಯದ ಜೊತೆಗೆ ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಛಲ, ಮನೋಬಲ ಬೆಳೆದುಬರುವಂತಾಗಬೇಕು.’
Comments 7
ಶಶಿಧರ್ ಲೋಕಾಪುರ
Jun 14, 2023ಶರಣರ ವಚನಗಳು ಕೇಳುವುದಕ್ಕೆ ಮಧುರ, ತಲೆದೂಗಿಸುವ ಅದಮ್ಯ ಶಕ್ತಿ ಹೊಂದಿವೆ. ಆದರೆ ಅನುಸರಿಸುವುದಕ್ಕೆ ಸುಲಭಸಾಧ್ಯವಲ್ಲವೇ ಅಲ್ಲಾ.
ರಾಜಪ್ಪ ದೇವರಮನಿ
Jun 15, 2023“ಬಸವ ತತ್ವ ಸಮ್ಮೇಳನಗಳು ನಿಜಕ್ಕೂ ಬಸವ ತತ್ವಗಳನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತವೆಯೇ? ಬಸವಣ್ಣನವರಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳನ್ನು ತಪ್ಪದೆ ಅಟೆಂಡ್ ಮಾಡುತ್ತೇನೆ, ಮದುವೆ ಮನೆಗಳಿಗೆ ಬಂದಂತೆ ಜನ ಜಮಾಯಿಸಿ, ಊಟಕ್ಕೆ ಮುಗಿಬಿದ್ದು ಬಾಯಿ ಚಪ್ಪರಿಸಿಕೊಂಡು ಹೋಗುತ್ತಾರೆ…😕
ಸಿದ್ದೇಶ ಯರಗುಂಡಿ
Jun 18, 2023ಬಸವ ಸಮ್ಮೇಳನಗಳು ತಮ್ಮ ಉದ್ದೇಶವನ್ನು ಮರು ವ್ಯಾಖ್ಯಾನಿಸಿಕೊಳ್ಳುವ ಸಮಯ ಬಂದಿದೆ. ಭಾಷಣಗಳಾಗಲಿ, ಪ್ರವಚನಗಳಾಗಲಿ, ಪುರಾಣಗಳಾಗಲಿ ವ್ಯಕ್ತಿಯನ್ನು ಬದಲಿಸಲು ಸಾಧ್ಯವಿಲ್ಲ. ಉಪದೇಶಗಳಿಗೂ ಗೊಡ್ಡು ಹರಟೆಗಳಿಗೂ ವ್ಯತ್ಯಾಸವಿಲ್ಲ. ಚಪ್ಪಾಳೆ ಹೊಡೆದು ಮುಕ್ತಾಯವಾಗುವ ಕಾರ್ಯಕ್ರಮಗಳಿಂದ ನಿಜಕ್ಕೂ ಯಾರಿಗೆ ಏನು ಪ್ರಯೋಜನ?
ಶಿವರುದ್ರಪ್ಪ ಜಾಗೀರ್
Jun 20, 2023ಗುರುಗಳೇ, ನೀವು ಹೇಳಿದ ಒಂದೊಂದು ವಿಚಾರಗಳೂ ಸತ್ಯವೇ, ಆದರೂ ಯಾಕೆ ಲಿಂಗಾಯತರಿಗೆ ಅವರ ಧರ್ಮದ ಅಗಾಧತೆ ಸ್ವಲ್ಪವೂ ತಿಳಿದಿಲ್ಲ. ಬಸವಣ್ಣನವರ ತತ್ವಗಳ ಆಚರಣೆ ಬಹಳ ಕಷ್ಟ, ಕೇಳಿಸಿಕೊಳ್ಳಲು ಬಹಳ ಹಿತ!
Sagar Igali
Jun 23, 2023ವ್ಯಕ್ತಿ ತನಗೆ ತಾನೇ ಬದಲಾಗಬೇಕು- ಈ ಮಾತು ಅಕ್ಷರಶಃ ಸತ್ಯ ಸ್ವಾಮೀಜಿ.
Veerabhadraiah J.K
Jun 26, 2023ಬೀದಿಗಳಿಗೆ ಬಸವಣ್ಣನವರ ಅಥವಾ ಶರಣರ ಹೆಸರು ಇಟ್ಟರೆ; ಮೂರ್ತಿಗಳನ್ನು ಸ್ಥಾಪಿಸಿದರೆ ಶರಣ ಧರ್ಮವನ್ನು ಎತ್ತಿಹಿಡಿದೆವೆಂದು ಅರ್ಥವಲ್ಲಾ. ಎಲ್ಲಿಯವರೆಗೆ ಆಚರಣೆಗಳಲ್ಲಿ ಅವರ ತತ್ವಗಳು ಇಳಿಯುವುದಿಲ್ಲವೋ ಅಲ್ಲಿಯವರೆಗೆ ಇವೆಲ್ಲಾ ಕೇವಲ ಬಯಲಾಟಗಳೇ ಆಗಿಬಿಡುತ್ತವೆ.
ಹರೀಶ್ ನರಗುಂದ
Jun 27, 2023ಬಸವಣ್ಣನವರು ಮತ್ತು ಅವರ ಒಡನಾಡಿಗಳಿಂದ ಪ್ರಶ್ನಿಸುವುದು ಹೇಗೆಂದು ಕಲಿಯಬೇಕು. ವಚನಗಳು ಬಹುತೇಕ ಪ್ರಶ್ನೆಗಳೊಂದಿಗೇ ಕಾಣಿಸಿಕೊಳ್ಳುತ್ತವೆ. ಪ್ರಶ್ನಿಸುವುದನ್ನು ಮರೆತರೆ ಗುಲಾಮರಾಗುವುದು ಖಚಿತ. ಗುರುಗಳ ಲೇಖನವು ಅವರ ಭಾಷಣದ ಮಾತುಗಳಂತೆ ಸುಲಲಿತ, ಸುಂದರ.