ಬಯಲು ಮತ್ತು ಆವರಣ
ಈ ಎರಡು ಪರಿಕಲ್ಪನೆಗಳು ಕೆಲವು ದಿನಗಳಿಂದ ನನ್ನನ್ನು ಕಾಡುತ್ತಿವೆ, ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತಿವೆ. ಈ ಬರಹದಲ್ಲಿ ಆ ಪ್ರಶ್ನೆಗಳನ್ನು ಓದುಗರ ಗಮನಕ್ಕೆ ತರುವುದು ಮಾತ್ರವೇ ನನ್ನ ಉದ್ದೇಶ. ಬಲ್ಲವರು ಈ ಬಗ್ಗೆ ಹೆಚ್ಚಿನ ತಿಳಿವು ನೀಡುವರೆಂದು ಆಶಿಸುತ್ತೇನೆ.
‘ನಿರ್ಬಂಧವಿರದ, ಆತಂಕವಿರದ, ಅಳುಕು ಇರದ, ಜಂಬವಿರದ, ಅರಿವು ಇರದ, ಮರೆವು ಇರದ ಇತ್ಯಾದಿಗಳು ಇರದ, ಅವು ಯಾವುವೂ ಅಲ್ಲದ ಬಯಲನ್ನು ಸಾಧಿಸುವುದೇ ಮನುಷ್ಯನ ನಿಜವಾದ ಗುರಿ,’ ಎಂದು ಬಯಲಗಳಿಕೆಯನ್ನು, ಅಂದರೆ ಶೂನ್ಯಸಂಪಾದನೆಯನ್ನು ವಿವರಿಸಿಕೊಳ್ಳಬಹುದು. ಅಂಥ ಬಯಲಗಳಿಕೆಗೂ ಮುಚ್ಚುವ, ಮರೆಮಾಡುವ; ಮುಚ್ಚಳವೋ ಹೊದಿಕೆಯೋ ಆಗುವ; ಚೈತನ್ಯವನ್ನು ಮರೆಮಾಡುವ ಅಜ್ಞಾನವೆಂದೂ ಕರೆಸಿಕೊಳ್ಳುವ; ಬೇಲಿ, ಮರೆ, ಪ್ರಾಕಾರ, ಗೋಡೆ ಎಂದೆಲ್ಲ ಜನಪ್ರಿಯ ಅರ್ಥಗಳನ್ನು ಹೊಂದಿರುವ; ಅಡ್ಡಿ, ಆತಂಕ, ತಡೆ ಎಂಬ ಅರ್ಥವನ್ನೂ ಒಳಗಿಟ್ಟುಕೊಂಡಿರುವ ಎಂದೆಲ್ಲ ಶಬ್ದಾರ್ಥಕೌಸ್ತುಭವು ವರ್ಣಿಸುವ ‘ಆವರಣ’ಕ್ಕೂ ಏನು ಸಂಬಂಧ? ಹೇಗೆ ಈ ಸಂಬಂಧವನ್ನು ವಿವರಿಸಿಕೊಳ್ಳುವುದು? ಈ ಪ್ರಶ್ನೆಗಳು ನನ್ನನ್ನು ಇತ್ತೀಚೆಗೆ ಕಾಡುತ್ತಿವೆ.
ಬಸವಣ್ಣನವರೂ ಅವರ ಜೊತೆಯ ಶರಣರೂ ಅನುಭವವನ್ನು ಪ್ರಮಾಣವೆಂದು ನಂಬಿದವರು. ಹಳೆಯ ಶಾಸ್ತ್ರ, ಆಚರಣೆಗಳನ್ನು ವಿರೋಧಿಸಿದವರು. ಬಯಲಗಳಿಕೆಗೆ ಅಡ್ಡಿಯಾಗುವ ವಿಚಾರ, ನಂಬಿಕೆ, ಆಚರಣೆ, ನೆನಪು, ಕುರುಹು, ಮರೆವು ಎಲ್ಲವನ್ನೂ ವಿರೋಧಿಸಿದವರು. ಹಾಗಿರುವಾಗ ಕಲ್ಪಿತ ಆವರಣಗಳು ಬಯಲಗಳಿಕೆಗೆ ನೆರವಾಗುತ್ತವೆ ಎಂದು ಹೇಳಿರಲು ಹೇಗೆ ಸಾಧ್ಯ?
ಆದರೂ ವಚನಗಳಲ್ಲಿ ಆವರಣ ಅನ್ನುವ ಮಾತು, ಅಷ್ಟಾವರಣ ಅನ್ನುವ ಮಾತು ಕೂಡ ಬಂದಿದೆಯಲ್ಲವೇ ಅನ್ನುವ ಪ್ರಶ್ನೆ ಹುಟ್ಟುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಫೇಸ್ಬುಕ್ಕು, ವಾಟ್ಸಾಪ್ಗಳಲ್ಲಿ ಬಸವಣ್ಣನವರ ರಚನೆ ಎಂದು ಆರೋಪಿಸಿ ಒಂದು ವಚನ ಅಡ್ಡಾಡುತ್ತಿತ್ತು. ಅದರಲ್ಲಿ ಬಂದಿರುವ ರೈತ ಅನ್ನುವ ಪದವೇ ಆ ವಚನ ಇಂದಿನ ಸೃಷ್ಟಿ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ. ಕರೋನ ಸಂದರ್ಭದಲ್ಲೂ ಅಲ್ಲಮರದೆಂಬಂತೆ ತೋರುವ ವಚನವೊಂದು ಚಾಲ್ತಿಗೆ ಬಂದಿತ್ತು. ಇಂದಿನ ಮಾತನ್ನು ಅಂದಿನ ಶರಣರ ತಲೆಗೆ ಕಟ್ಟುವ ಅಭ್ಯಾಸ ಇನ್ನೂ ಮುಂದುವರೆದಿದೆ. ಅದೇ ರೀತಿಯಲ್ಲೇ ಅಷ್ಟಾವರಣ ಇತ್ಯಾದಿ ಕಲ್ಪನೆಗಳನ್ನೂ ಆನಂತರದ ಕಾಲದಲ್ಲಿ ರಚಿಸಿ ಹನ್ನೆರಡನೆಯ ಶತಮಾನದ ಶರಣರ ರಚನೆಗಳು ಎಂದು ಹೇಳಿರಬಹುದಲ್ಲವೇ?
ಬಸವ ಯುಗದ ಶರಣರಲ್ಲಿ ಬಸವ, ಅಕ್ಕ ಇಬ್ಬರೂ ಆವರಣ ಅಥವಾ ಅಷ್ಟಾವರಣ ಅನ್ನುವ ಮಾತನ್ನೇ ಎತ್ತುವುದಿಲ್ಲ. ಅಲ್ಲಮ, ಸಿದ್ಧರಾಮ, ಚನ್ನಬಸವಣ್ಣ ಇವರ ವಚನಗಳಲ್ಲಿ ಆವರಣ, ಅಷ್ಟಾವರಣ ಇದ್ದರೂ ಆ ವಚನಗಳನ್ನೆಲ್ಲ, ಇದುವರೆಗೆ ವಚನ ಸಂಪಾದನೆ ಮಾಡಿದ ಹಿರಿಯ ವಿದ್ವಾಂಸರೆಲ್ಲ ಅಧಿಕ ವಚನಗಳು, ಅಂದರೆ ಆನಂತರದ ರಚನೆಗಳಿರಬಹುದು ಎಂದೇ ತೀರ್ಮಾನಿಸಿದ್ದಾರೆ. ಅವಸರದ ರೇಕಣ್ಣ, ಮೋಳಿಗೆ ಮಹದೇವಿ, ಉರಿಲಿಂಗದೇವ ಇವರ ರಚನೆಗಳಲ್ಲಿ ಆವರಣ ಅನ್ನುವ ಮಾತು ಎಲ್ಲೆಲ್ಲಿ ಬರುತ್ತದೋ ಆ ಎಲ್ಲ ವಚನಗಳೂ ಸುದೀರ್ಘವಾಗಿವೆ, ಅತಿ ಹೆಚ್ಚು ಸಂಸ್ಕೃತ ಪದಗಳನ್ನು ಬಳಸಿವೆ. ಬಸವಣ್ಣನವರ ಕಾಲದ ವಚನಗಳ ಲಕ್ಷಣಕ್ಕೆ ಇವೆರಡೂ ಸಂಗತಿ ಹೊಂದುವುದಿಲ್ಲ. ಅಷ್ಟಾವರಣದ ಬಗ್ಗೆ ಅತಿ ಹೆಚ್ಚಾಗಿ ಮಾತಾಡುವವರು ಬಸವಣ್ಣನವರ ಕಾಲದ ನಾಲ್ಕೈದು ಶತಮಾನಗಳ ನಂತರ ಬಂದವರೇ ಆಗಿದ್ದಾರೆ.
ಇನ್ನೊಂದು ಸ್ವಾರಸ್ಯವಿದೆ. ಆವರಣ ಎಂಬ ಮಾತಿಗೆ ಕತ್ತಿ, ಚೂರಿಯಂತಹ ಆಯುಧಗಳಿಂದ ಕಾಪಾಡುವ ರಕ್ಷಣೆ ಎಂಬ ಅರ್ಥವೂ ಇದೆ. ಅಷ್ಟಾವರಣಗಳು ಭಕ್ತರನ್ನು ಕಾಪಾಡುವ, ಸರಿದಾರಿ ತಪ್ಪದಂತೆ ರಕ್ಷಣೆ ನೀಡುವ ಕವಚಗಳ ಹಾಗೆ ಅನ್ನುವ ವಿವರಣೆ ನೀಡುವ ಸಂಸ್ಕೃತ ಶ್ಲೋಕವೊಂದು ಇದೆ. ಇಂಥ ಶ್ಲೋಕಗಳನ್ನು ಆಧಾರವಾಗಿಟ್ಟುಕೊಂಡು ಸ್ವಾನುಭವವೇ ಪ್ರಮಾಣವೆಂದು ನಂಬಿದ ಶರಣರು ಅಷ್ಟಾವರಣ ಪ್ರತಿಪಾದನೆ ಮಾಡಿರುವುದನ್ನು ಇಂದು ಊಹಿಸಲು ಸಾಧ್ಯವೇ? ಷಟ್ಸ್ಥಲಗಳ ಕಲ್ಪನೆಯೂ ಹೀಗೆಯೇ. ಆವರಣ, ಸ್ಥಲ ಇವೆಲ್ಲ ಆನಂತರ ಮೂಡಿಕೊಂಡ ಅಮೂರ್ತ ಕಲ್ಪನೆಗಳು ಎಂದು ಭಾವಿಸುವುದೇ ಸರಿ. ಮೊದಲು ಇಂಥ ಕಲ್ಪನೆಗಳನ್ನು ರೂಪಿಸಿಕೊಂಡು ಆಮೇಲೆ ಅವಕ್ಕೆ ಅನುಗುಣವಾಗಿ ವಚನಗಳನ್ನು ರಚಿಸಿದರು ಅನ್ನುವುದೂ ಸರಿಯಲ್ಲ. ಮೊದಲು ಅನುಭವ, ಅದರಿಂದ ಮೂಡಿದ ಅಮೂರ್ತ ವಿಚಾರವನ್ನು ಪರಿಕಲ್ಪನೆಗೊಳಿಸುವುದು ಆಮೇಲೆ. ಆವರಣ, ಷಟ್ಸ್ಥಲ ಇಂಥವೆಲ್ಲ ಆನಂತರ, ಬುದ್ಧಿ ವಿದ್ವತ್ತುಗಳು ಪ್ರಧಾನವಾಗಿ ರೂಪುಗೊಂಡ ಪರಿಭಾಷೆಗಳೆನ್ನುವುದೇ ಸೂಕ್ತವೆನಿಸುತ್ತದೆ.
ಬಯಲು ಎಂಬ ಪದಕ್ಕೆ ಇರುವ ಅರ್ಥವ್ಯಾಪ್ತಿಗೂ ಆವರಣ ಎಂಬ ಪದದ ಅರ್ಥವ್ಯಾಪ್ತಿಗೂ ಹೊಂದಿಕೆಯಾಗದು ಅನ್ನಿಸುತ್ತದೆ. ಏಕೆಂದರೆ ಬಯಲು ಅನ್ನುವುದು ಯಾವ ಅಡಚಣೆ, ಆತಂಕವಿರದ ನಿರಾಳವಾದ ಮುಕ್ತತೆಯನ್ನು ತೋರಿದರೆ ಆವರಣ ಎಂಬುದು ಗಡಿ, ಮಿತಿ, ಕಟ್ಟುಗಳನ್ನು ಸೂಚಿಸುತ್ತದೆ. ಬಯಲು ಅನ್ನುವುದು ಸಾಧಿಸಬೇಕಾದ, ಗಳಿಸಬೇಕಾದ ಸಂಗತಿಯೆಂದಾದರೆ ಮಿತಿಗೆ ಒಳಪಡಿಸುವ ಆವರಣ ಅದು ಹೇಗೆ ಬಯಲ ಗಳಿಕೆಗೆ ಸಹಾಯ ಮಾಡೀತು? ಬಯಲನ್ನು ಗಳಿಸಲು ಎಂಟೂ ಆವರಣಗಳನ್ನು ಮೀರುವುದು, ದಾಟುವುದು ಮುಖ್ಯವಾಗಬೇಕಲ್ಲವೇ? ಅಲ್ಲಮನ ವಚನಗಳಂತೂ ‘ಒಲವಿನ ಕೂಟಕ್ಕೆ ಹಾಸಿಗೆಯ ಹಂಗೇಕೆ?’ ಎಂಬ ಪ್ರಶ್ನೆಯನ್ನು ಕೇಳುತ್ತದೆಯಲ್ಲವೇ? ಬಯಲಗಳಿಕೆ ಅನ್ನುವುದು ಒಲವಿನ ಕೂಟದ ಹಾಗೆ. ಅದಕ್ಕೆ ಅಷ್ಟಾವರಣವೋ ಆರು, ಮೂವತ್ತಾರು, ಇತ್ಯಾದಿ ಸಂಖ್ಯೆಗಳ ಸ್ಥಲಗಳ ನಕ್ಷೆಯೆಂಬ ಹಾಸುಗೆಯೋ ಅಗತ್ಯವಿರಬಾರದು. ಕೊನೆಗೆ ಅಲ್ಲಮನಂಥವರು ಗುಹೇಶ್ವರನೆಂಬುವನು ಸತ್ತ ಅನ್ನುವ ಮಾತನ್ನೂ ಆಡುತ್ತಾರಲ್ಲವೇ?
ಹೀಗೆ ಹೇಳುವಾಗ ಇದೇ ಪ್ರಶ್ನೆಯ ಇನ್ನೊಂದು ಮಗ್ಗುಲನ್ನೂ ಮರೆಯಬಾರದು. ಅನುಭವ ಪ್ರಮಾಣವನ್ನು ಮಾತ್ರವೇ ನೆಚ್ಚಿಕೊಂಡು ಧರ್ಮ ‘ಸಂಘಟನೆ’ ಸಾಧ್ಯವಾಗದು ಎಂದೇ ತೋರುತ್ತದೆ. ಧರ್ಮವು ಸಾಮಾಜಿಕ ಸಂಸ್ಥೆಯಾಗಿ ಬಲಗೊಳ್ಳುವುದಕ್ಕೆ ಆಚರಣೆಗಳು, ಸಂಕೇತಗಳು ಅನಿವಾರ್ಯವಾಗುತ್ತವೆ. ಅಷ್ಟಾವರಣ ಎಂಬ ಕಲ್ಪನೆ, ಸಂಕೇತಗಳೂ ಹಾಗೆ ಧರ್ಮ-ಸಂಸ್ಥೆಯ ಅಗತ್ಯವಾಗಿ ರೂಪುಗೊಂಡಿರಬಹುದು. ಲಿಂಗಧಾರಣ ಚಂದ್ರಿಕೆ ಇತ್ಯಾದಿ ಗ್ರಂಥಗಳು ರೂಪುಗೊಂಡ ಹಾಗೆ ಇಂಥ ಪಾರಿಭಾಷಿಕಗಳ ಬಳಕೆಯೂ ವಿದ್ವತ್ ಸಮೂಹದ ಬಳಕೆಗಾಗಿ ರೂಪುಗೊಂಡಿರಬಹುದು. ಸಾಮಾನ್ಯ ಜನರಿಗೆ ದೊರೆತದ್ದು ಮಾತ್ರ ಸುಲಭವಾಗಿ ಆಚರಿಸಲು ಆಗುವಂಥ ಯಾಂತ್ರಿಕ ಆಚರಣೆಗಳು ಮಾತ್ರವೇ. ಆಚರಣೆಗಳು ಬಲಗೊಂಡಷ್ಟೂ ವಿಚಾರ ಮರೆಗೆ ಸರಿಯುತ್ತದೆ.
ರೂಪನೆ ಕಂಡರು, ನಿರೂಪನೆ ಕಾಣರು/ಅನುವನೆ ಕಂಡರು ತನುವನೆ ಕಾಣರು, ಆಚಾರವನೆ ಕಂಡರು ವಿಚಾರವನೆ ಕಾಣರು/ ಗುಹೇಶ್ವರಾ ನಿಮ್ಮ ಕುರುಹನೆ ಕಂಡರು ಕೂಡಲರಿಯದೆ ಕೆಟ್ಟರು [ಸಮಗ್ರ, ೨. ೪೯೫] ಗುಹೇಶ್ವರನು ರೂಪವಿಲ್ಲದ ನಿರೂಪ, ತನು, ವಿಚಾರ; ನಾವು ರೂಪವನ್ನು ಮಾತ್ರ ಕಾಣುತ್ತ, ಅನುವನ್ನು ಕಾಣುತ್ತ, ಆಚಾರವನ್ನು ಮಾತ್ರ ಕಾಣುತ್ತ, ಕುರುಹನ್ನು ಮಾತ್ರ ಕಾಣುತ್ತ ಕೂಡುವುದನ್ನು, ಒಲವಿನ ಕೂಟವನ್ನು ಮರೆತಿದ್ದೇವೆ.
ಧರ್ಮವೆನ್ನುವುದು ಕ್ರಾಂತಿಕಾರಿ. ಸಂಸ್ಥೆಯ ರೂಪವನ್ನು ಪಡೆದು ಮತವಾಗಿ ಬದಲಾದದ್ದು ಸ್ಥಾವರಗೊಳ್ಳುತ್ತದೆ. ಧರ್ಮದ ಅಪರಿಮಿತ ಬಯಲಿನ ಕ್ರಾಂತಿಕಾರಕತೆ ಸಮಾಜದ ನಡಾವಳಿಯಾಗಿ ಪರಿಮಿತಗೊಂಡು ಕುರುಹು ಮಾತ್ರವಾಗಿ ಉಳಿದದ್ದನ್ನು ಆವರಣ, ಸ್ಥಲ ಇಂಥ ಪರಿಕಲ್ಪನೆಗಳು ಸೂಚಿಸುತ್ತವೆ. ಪರಿಕಲ್ಪನೆಗಳದೇ ಮೇಲುಗೈಯಾದಾಗ ಅನುಭವ ಅಮುಖ್ಯ ಅನಿಸುವುದಕ್ಕೆ ಶುರುವಾಗಿ ಅನುಭವದ ವ್ಯಾಖ್ಯಾನವೇ ಮುಖ್ಯವಾಗುತ್ತದೆ.
ವಚನಗಳ ಒಳಗೇ ವಿಚಾರಗಳ ಹೊರಳಾಟ, ಬದಲಾವಣೆ, ಘರ್ಷಣೆ, ಪರಿಶೀಲನೆ ಇತ್ಯಾದಿಗಳೆಲ್ಲ ಅಡಗಿವೆ. ಅದನ್ನು ಬಿಡಿಸಿ ನೋಡಿದರೆ ಕನ್ನಡದ ಬದುಕಿನ ಸಂಸ್ಕೃತಿ ಕಥನದ ಕುತೂಹಲದ ಕಥೆ ಅನಾವರಣಗೊಳ್ಳುತ್ತದೆ. ಅಂಥ ಕೆಲಸ ಇನ್ನಾದರೂ ಆಗಬೇಕಲ್ಲವೇ!
*****************************
ಜಂಗಮ
ನದಿ ಬೆಟ್ಟದಲ್ಲಿ ಹುಟ್ಟಿ ಕಡಲಲ್ಲಿ ಮುಗಿಯುತ್ತದೆಯೇ? ಅದೊಂದು ಕೊನೆ ಇರದ ಹರಿವು ಮಾತ್ರ ಅಲ್ಲವೇ? ಅದಕ್ಕೆ ಶುರುವೂ ಇಲ್ಲ ಕೊನೆಯೂ ಇಲ್ಲ. ದೊಡ್ಡ ಪದ ಬೇಕಾದರೆ ಅನಾದಿ ಅನಂತ ಅನ್ನಿ.
ಸತತವಾದ ಹರಿವು ಇದೆಯಲ್ಲಾ ಅದೇ ಜಂಗಮ. ಜಂಗಮವೆಂಬುದು ಕ್ರಿಯಾಪದ.
ನದಿ ಸಾವಿರಾರು ಮೈಲು ಹರಿಯುತ್ತದೆ. ಅಷ್ಟುದ್ದಕ್ಕೂ ಅದು ಒಂದೇ ನದಿ ಎಂದು ತಿಳಿವುದು ನಮ್ಮ ಅನುಕೂಲಕ್ಕೆ. ನಿಜವಾಗಿ ಇರುವುದು ಮಾತ್ರ ಹಲವು ಸ್ರೋತಗಳು ಹರಿದು ಸೇರಿ ನಡೆವ ಗಮನ. ಹೆಸರಿಟ್ಟವರು ನಾವು. ಜಂಗಮವೂ ಹಾಗೆಯೇ ಹಲವು ಹರಿವುಗಳು ಸೇರಿ ಸಾಗುವ ಕೊನೆ ಮೊದಲು ಇರದ ಗಮನ.
ಸರಿ, ಅಷ್ಟುದ್ದ ಹರಿವಿನಲ್ಲಿ ಲಕ್ಷ ಕೋಟಿ ಕೋಟಿ ಕೋಟಿ ನೀರಿನ ಕಣಗಳಿರುತ್ತವಲ್ಲ, ಅವು ಒಂದೊಂದೂ ಸ್ವತಂತ್ರ, ಒಂದಕ್ಕೂ
ಇನ್ನೊಂದಕ್ಕೂ ನಡುವೆ ಒಂದಷ್ಟು ಬಯಲು. ಬಯಲು ಇರದಿದ್ದರೆ ಹರಿವು ಎಲ್ಲಿಯದು? ಯಾವುದೋ ಒಂದು ನೀರಿನ ಕಣ
ಹರಿವಿನಿಂದ ಬೇರೆಯಾದರೆ ಅದು ನದಿಯೂ ಅಲ್ಲ, ನೀರೂ ಅಲ್ಲ. ಗಮನದ ಭಾಗವಾಗಿ ಆದರೂ ಸ್ವತಂತ್ರವಾಗಿ ಸಾಗುವುದು
ಜಂಗಮ.
ಈ ಹರಿವು ಅನುಭವ ಮಾತ್ರ. ಕೊನೆಯೇ ಇರದ ಹರಿವ ಅನುಭವಕ್ಕೆ ನಿರ್ದಿಷ್ಟ ಆಕಾರವಿಲ್ಲ, ಗುರಿಯೂ ಇಲ್ಲ, ಒಟ್ಟಾರೆ ಹರಿವಿಗೆ ಚಕ್ರಗತಿ ಇದ್ದೀತು, ಆದರೆ ನದಿಯ ಎಲ್ಲ ಕಣಗಳೂ ಸಮುದ್ರವನ್ನು ಸೇರದೆ ಇರಬಹುದು. ಅಥವಾ ಸಮುದ್ರವನ್ನು ಸೇರುವ ಮೊದಲು ಇನ್ನೆಲ್ಲೆಲ್ಲೋ ಸುತ್ತಿ, ಕುಡಿವ ಬಟ್ಟಲಿನಿಂದ ಹಿಡಿದು, ಜೀವಿಗಳ ಹೊಟ್ಟೆ, ಚರಂಡಿಯವರೆಗೂ ಹೆಣಗಿ, ಹಬೆಯಾಗಿ ಮೋಡವಾಗಿ ಮತ್ತೆ ಮಳೆಯಾಗಿ ಹರಿವಿನ ಭಾಗವಾಗುತ್ತ ಪಾಡು ಪಡಬೇಕಾಗಬಹುದು ಹರಿವಿನ ಭಾಗವಾಗದೆ ಜಂಗಮ ಎಂಬುದಕ್ಕೆ ಅರ್ಥವಿಲ್ಲ.
ಅರ್ಥ! ಅರ್ಥವೆನ್ನುವುದು ಹರಿವನ್ನು ಸ್ಥಗಿತಗೊಳಿಸುವ ಕೆಲಸ! ನದಿಗೆ. ಹೆಸರಿಟ್ಟ ತಕ್ಷಣ ಅರ್ಥವಾಗುತ್ತದೆ, ಅನುಭವವಾಗುವುದಿಲ್ಲ. ನಮ್ಮ ಮೈಯಲ್ಲೂ ಸಾವಿರಾರು ಮೈಲುದ್ದದ ಹರಿವಿನ ದಾರಿಯಲ್ಲಿ ನಾವು ಬದುಕಿರುವಷ್ಟೂ ಕಾಲ ರಕ್ತಕಣಗಳು ಜಂಗಮವಾಗಿ ಸುತ್ತುತ್ತಲೇ ಇರುತ್ತವಲ್ಲಾ! ಅದಕ್ಕೆ ಮೈಯ ಕಟ್ಟು, ಮನಸಿನ ಕಟ್ಟು, ಬುದ್ಧಿಯ ಕಟ್ಟು ಹಾಗಿ ಜಂಗಮತ್ವವನ್ನು ಕಳೆದು ನಾನತ್ವವೆಂಬ ಗಟ್ಟಿಯನ್ನು ಮಾಡಿಟ್ಟುಕೊಳ್ಳುತ್ತೇವೆ.
ಜಂಗಮವೆಂಬುದು ಬದುಕು. ಜಂಗಮವಾಗಿರದಿದ್ದರೆ ಸ್ಥಾವರಗೊಂಡರೆ ಸಾವು. ಇದು ವಿಚಾರದ ಮಾತಲ್ಲ. ಆಯಾ ಕ್ಷಣದ ಹರಿವಿನ ಅನುಭವದ ಮಾತು. ಹೊಳೆಯನ್ನು ನೋಡುತ್ತ ಕೂತರೆ ಅಗೋ ಆ ಕಲ್ಲನ್ನು ಸುತ್ತಿ ಬಳಸಿ ಒಂದಿಷ್ಟು ಧುಮುಕಿ ಹರಿಯುವ ನೀರಿನಲ್ಲೂ ವಿನ್ಯಾಸ ಕಾಣುತ್ತದೆ. ಕಾಣುತ್ತಿದ್ದ ಹಾಗೇ ಇಲ್ಲವಾಗುತ್ತದೆ. ಒಂದೇ ಥರ ಅನಿಸಿದರೂ ಕ್ಷಣಾರ್ಧ ಕ್ಷಣಾರ್ಥದಲ್ಲೂ ಹೊಸತಾಗುತ್ತಲೇ ಇರುತ್ತದೆ. ಇದನ್ನು ಅನುಭವಿಸಬೇಕೇ ಹೊರತು ವಿವರಿಸಿ ಅರ್ಥೈಸಲುಬಾರದು.
ನದಿ, ನಮ್ಮೊಳಗಿನ ರಕ್ತದ ಹರಿವು, ಕ್ಷಣ ಕ್ಷಣವೂ ಬದಲಾಗುವ ಭಾವಗಳ ಹರಿವು ಎಷ್ಟೊಂದು ಜಂಗಮಗಳು! ವಿಚಾರವೆಂಬುದು ಅನುಭವಕ್ಕೆ ಕಟ್ಟು ಹಾಕಿ ಆ ಕಟ್ಟಿನಾಚೆಗೆ ಇರುವುದೆಲ್ಲ ಸುಳ್ಳು, ಅಮುಖ್ಯ ಅನ್ನುತ್ತದೆ. ಅನುಭವ ಮಾತ್ರ ಇಂಥ ವಿಚಾರವೇ ಸರಿಯಲ್ಲ ಅನ್ನುತ್ತದೆ. ಯಾವ ವಿವರಣೆಯೂ ಯಾವ ಸಿದ್ಧಾಂತವೂ ಯಾವ ಆಚರಣೆಯೂ ಬದುಕಿನ ಹರಿವನ್ನು ವಿವರಿಸಲಾರದು. ಹಾಗೆ ವಿಚಾರ ಮುಖ್ಯವೆಂದುಕೊಂಡ ತಕ್ಷಣ ಜಂಗಮ ಇಲ್ಲವಾಗಿ ಮರಣ ಇರುತ್ತದೆ.
ವಿಚಾರವೆಂಬುದು ಸಂದೇಹಕ್ಕೆ ಒಳಗು. ವಚನಗಳ ದೊಡ್ಡ ಕ್ರಾಂತಿಯೆಂದರೆ ವಿಚಾರದ ಪ್ರಾಧಾನ್ಯವನ್ನು ಅಲ್ಲಗಳೆದು ಅನುಭವವನ್ನು ಪ್ರಮಾಣವೆಂದದ್ದು. ಯಾಗ, ಯಜ್ಞ, ಬಲಿ, ನೂರೆಂಟು ಆಚರಣೆಗಳು ಇವೆಲ್ಲವೂ ವಿಚಾರವು ಜೀವದ ಹರಿವಿಗೆ ಹಾಕಿದ ಕಟ್ಟುಗಳು. ಅದನ್ನು ಮೀರುವುದೆಂದರೆ ಕ್ಷಣಕ್ಷಣದ ಹರಿವಿನ ಅನುಭವಕ್ಕೆ ಒಡ್ಡಿಕೊಳ್ಳುವುದೇ ಇರಬೇಕು.
ನೆನಪು, ನೆನಪಿನಿಂದ ಮೂಡಿಸಿಕೊಂಡ ಗುರುತು, ನೆನಪು, ಗುರುತುಗಳನ್ನು ಇನ್ನೊಬ್ಬರಿಗೆ ತಿಳಿಸಿಕೊಡಲು ಕಟ್ಟಿಕೊಂಡ ಭಾಷೆ ಇವೆಲ್ಲವೂ ವಿಚಾರವನ್ನೆ ಆಧರಿಸಿದ ಕಟ್ಟುಪಾಡುಗಳು. ಅರಿವು ಇರಬೇಕು, ಆದರೆ ಅರಿತದ್ದು ನೆನಪಾಗಿ ಉಳಿಯಬಾರದು. ಕುರುಹು ಇರಬೇಕು ಆದರೆ ಅದು ಬರಿಯ ಗುರುತು ಮಾತ್ರ, ಅಷ್ಟೊಂದು ಮುಖ್ಯವಲ್ಲ ಅನ್ನುವುದೇ ನಿಜ, ನುಡಿ ಅನ್ನುವುದು ಸಾವಿರಾರು ವರ್ಷಗಳ ಕಾಲ ರೂಪುಗೊಂಡ ಅರ್ಥಗಳ ದೊಡ್ಡ ರಾಶಿಯಾಗಿ ಅನುಭವದ ಬದಲಾಗಿ ಅದನ್ನು ಹೇಳಲು ಬಯಸುವ ಪದದ ಬಗ್ಗೆಯೇ ಜಗಳ ಹುಟ್ಟಿಸುವ ಇನ್ನೊಂದು ಸ್ಥಾವರ.
ಅರ್ಥವಿರುವ ಹಾಗೆ ಮಾತಾಡಿಯೂ ಅರ್ಥದ ಹಂಗನ್ನು ಮೀರುವ, ಕುರುಹು ಇದ್ದರೂ ಅದನ್ನು ಧಿಕ್ಕರಿಸುವ ಧೈರ್ಯ ಮಾಡುವ. ನೆನಪು ಇದ್ದರೂ ಅದರ ಪುನರುಕ್ತಿಯನ್ನು ಆಶಿಸದ ಹರಿವಿನೊಳಗೆ ಒಂದಾಗುವ ಕೆಲಸವೇ ವ್ಯಕ್ತಿಯ ಬದುಕಿನ ರೀತಿ ಇದ್ದೀತು. ಇದನ್ನು ಕಂಡು ಅನುಭವಕ್ಕೆ ತಂದುಕೊಂಡು ಮಾತಾಡದೆಯೂ ತಿಳಿಸುವುದಕ್ಕೆ ಸಾಧ್ಯವೇ?
ನದಿಯಲ್ಲಿ ಹರಿದು ಹೋಗುತ್ತಿರುವ ನೀರಿನ ಕಣ ಹೋಗುತ್ತಿರುತ್ತದೋ ಇದ್ದಲ್ಲೇ ಇರುತ್ತದೋ ಹರಿವಿನಲ್ಲಿ ಒಂದಾಗಿ ಸುಮ್ಮನೆ ಇರುತ್ತದೋ? ಹಾಗೆ ಜಂಗಮನದೂ ಗಮನವಿಲ್ಲದ ಗಮನ, ನಿರ್- ಗಮನ. ಅರ್ಥಕ್ಕೆ, ತರ್ಕಕ್ಕೆ, ಗೆಲುವಿನ ಹಂಬಲಕ್ಕೆ ಗಂಟುಬಿದ್ದ ಭಾಷೆ ಸೂತಕ. ಮಾತಾಡಿದರೂ ಮಾತಾಡಲಿಲ್ಲ ಅನ್ನುವ ಹಾಗೆ. ಮಾತಾಡದಿದ್ದರೂ ತಿಳಿಯಿತು ಅನ್ನಿಸುವ ಹಾಗೆ ಮಾಡುವ ಸಮರ್ಥ, ನುಡಿದು ಸೂತಕಿಯಾಗದ ಜಂಗಮ.
ಇಡೀ ಬದುಕು, ಬದುಕಿರುವ ಒಂದೊಂದೂ ಜೀವ, ಜೀವದ ದೇಹದೊಳಗಿನ ಒಂದೊಂದೂ ರಕ್ತಕಣ, ಮನಸಿನ ಒಂದೊಂದೂ ಭಾವ, ಆಲೋಚನೆ, ಎಲ್ಲವೂ ಜಂಗಮವೇ. ಹರಿವೇ. ಅದನ್ನು ಅರಿವಿಗೆ ತಂದುಕೊಂಡಾಗ ಜಂಗಮವಲ್ಲದ ಜೀವ ಒಂದೂ ಇರುವುದಿಲ್ಲ. ಜಂಗಮ ಚಲನೆಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ.
Comments 8
Panchakshari hv
Mar 6, 2024ಬಯಲ ಸಾಧನೆಗೆ ಆವರಣದ ಕಟ್ಟು! ಬಹಳ ಅರ್ಥಪೂರ್ಣ ಲೇಖನ.
ಮಹಾದೇವ
Mar 6, 2024ಕನ್ನಡದ ಬದುಕಿನ ಸಂಸ್ಕೃತಿ ಕಥನವನ್ನ ವಚನಗಳ ಬಿಡಿಸಿ ನೋಡಬೇಕು….. ಶರಣು ಶರಣಾರ್ಥಿಗಳು
Dayashankar K
Mar 11, 2024Great respect to the author, really thought provoking insights.
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Mar 11, 2024ತುಂಬಾ ದಿನಗಳ ನಂತರ ಒಂದು ಒಳ್ಳೆಯ ಲೇಖನ ಓದಿದೆ… ಇನ್ನೂ ಏನೇನೋ ಇದೆ.ಅಲ್ವಾ..
ಜಂಗಮ…ಇಕಿಗಾಯ್…ಸನಿಹ ಬರುವುದೇ…
ಮತ್ತೆ ಮತ್ತೆ ಬರಲಿ.. ನಿಮ್ಮ ಅಭಿಪ್ರಾಯ. ಧನ್ಯವಾದಗಳು.
ಪ್ರಕಟಿಸಿದುದೂ ಬಯಲು.
VIJAYAKUMAR KAMMAR
Mar 11, 2024Mind blowing… Beautiful and excellant write-up. 👏👏👏
ಚಿದಾನಂದ ಕವಿತಾಳ
Mar 12, 2024ವಚನಗಳ ಒಳಗೇ ಉಳಿದ ಹೂರಣವನ್ನು ಹೀಗೆ ತೆಗೆದುಕೊಡುವ ಬಯಲು ನನಗೆ ಅತ್ಯಂತ ಮೆಚ್ಚುಗೆಯ ಓದು ತಾಣ. ಹೊರಗಿನ ಸಿಪ್ಪೆಯ ಬಣ್ಣದ ವಿಚಾರದಲ್ಲೇ ಹೊರಳಾಡಿ, ಗುದ್ದಾಡಿ, ಮನಸ್ತಾಪಕ್ಕೊಳಗಾಗುವ ಇವತ್ತಿನ ಲಿಂಗಾಯತರು ಈ ಲೇಖನವನ್ನು ತಪ್ಪದೇ ಓದಬೇಕು. ನಾಗಭೂಷಣಸ್ವಾಮಿಯವರ ಬರಹ ಕಣ್ಣುತೆರೆಸುವಂತಿದೆ.
ಬಸವರಾಜ ಹಂಡಿ
Mar 12, 2024ಬಯಲು ಮತ್ತು ಆವರಣ- ಈ ಲೇಖನವನ್ನು ನಾಲ್ಕೈದು ಸಲ ಓದಿದ ನಂತರ ಸಹ ಇನ್ನು ಕೆಲವಂದು ಸಂದೇಹಗಳು ಹಾಗೆ ಉಳಿದವು.
ಶರಣರು ಬಯಲು ಬಗ್ಗೆ ಹೇಳಿದರು. ಬಯಲು ಸಾಧನೆ ಅವರ ಮುಖ್ಯ ಉದ್ದೇಶ ಆಗಿತ್ತು- ಇದರಲ್ಲಿ ಎರಡು ಮಾತು ಇಲ್ಲ.
ಶರಣರು ಆವರಣವನ್ನು ತಿರಸ್ಕರಿಸಿದರು ಎಂದು ಹೇಳಲು ಬಹಳ ಕಷ್ಟ ಆಗುತ್ತದೆ. ಈ ಕೆಳಗಿನ ವಚನದಲ್ಲಿ ಬಸವಣ್ಣನವರು ಬಯಲನ್ನು ಆವರಣ ರೂಪಕ್ಕೆ ತಂದಿದ್ದು ತಿಳಿದು ಬರುತ್ತದೆ:
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
ಈ ವಚನದಲ್ಲಿ ಇಷ್ಟಲಿಂಗವೆ ಬಯಲಿನ ಆವರಣ ಅಂತ ಕಂಡುಬರುತ್ತದೆ. ಶರಣರು ಬಯಲುವನ್ನು ಸಾಧಿಸಲು ಆವರಣ ಅನ್ನುವ ಉಪಾಯ (Technology) ಉಪಯೋಗಿಸಿರಬಹುದು. ಇದು ನನ್ನ ಗ್ರಹಿಕೆ. ಇದು ತಪ್ಪಾದ ಗ್ರಹಿಕೆ ಇರಬಹುದು.
ಅಷ್ಟಾವರಣ : ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ಮಂತ್ರ ಮತ್ತು ರುದ್ರಾಕ್ಷಿ
ಇದರಲ್ಲಿ ಸಹ ಗುರು, ಲಿಂಗ, ಜಂಗಮ ಇವು ಬಯಲು ರೂಪದಲ್ಲಿ ಇವೆ.
ಲೇಖನದಲ್ಲಿ ಬರೆದ ಈ ಸಾಲುಗಳು ಬಹಳ ಸರಿ ಎನಿಸುತ್ತದೆ:
“ಮೊದಲು ಅನುಭವ, ಅದರಿಂದ ಮೂಡಿದ ಅಮೂರ್ತ ವಿಚಾರವನ್ನು ಪರಿಕಲ್ಪನೆಗೊಳಿಸುವುದು ಆಮೇಲೆ. ಆವರಣ, ಷಟ್ಸ್ಥಲ ಇಂಥವೆಲ್ಲ ಆನಂತರ, ಬುದ್ಧಿ ವಿದ್ವತ್ತುಗಳು ಪ್ರಧಾನವಾಗಿ ರೂಪುಗೊಂಡ ಪರಿಭಾಷೆಗಳೆನ್ನುವುದೇ ಸೂಕ್ತವೆನಿಸುತ್ತದೆ.”
ಲೇಖಕರು ಹೇಳಿದ ಹಾಗೆ – ಧರ್ಮದ ರೂಪ ಪಡೆದುಕೊಂಡಾಗ ಆವರಣ ಮತ್ತು ಷಟ್ಸ್ಥಲ ಸೇರಿಕೊಂಡಿರಬಹುದು.
“ವಚನಗಳ ಒಳಗೇ ವಿಚಾರಗಳ ಹೊರಳಾಟ, ಬದಲಾವಣೆ, ಘರ್ಷಣೆ, ಪರಿಶೀಲನೆ ಇತ್ಯಾದಿಗಳೆಲ್ಲ ಅಡಗಿವೆ. ಅದನ್ನು ಬಿಡಿಸಿ ನೋಡಿದರೆ ಕನ್ನಡದ ಬದುಕಿನ ಸಂಸ್ಕೃತಿ ಕಥನದ ಕುತೂಹಲದ ಕಥೆ ಅನಾವರಣಗೊಳ್ಳುತ್ತದೆ. ಅಂಥ ಕೆಲಸ ಇನ್ನಾದರೂ ಆಗಬೇಕಲ್ಲವೇ”
ಮೇಲೆ ಹೇಳಿದ ಹಾಗೆ – ನಾವೆಲ್ಲರು ಈ ಕೆಲಸವನ್ನು ಮಾಡಬೇಕು. ಇಂತ ಕೆಲಸ ಆಗಲೇಬೇಕು.
ಜಂಗಮದ ಬಗ್ಗೆ ಬಹಳ ವಿವರವಾಗಿ ಮತ್ತು ಅರ್ಥವತ್ತಾಗಿ ಹೇಳಿದ್ದಾರೆ. ಬಯಲು ಇದ್ದರೆ ಮಾತ್ರ ಜಂಗಮ ಸಾದ್ಯ.
ಕೆಲವು ವಚನಗಳಲ್ಲಿ ಪ್ರಸಾದ = ಗುರು + ಲಿಂಗ + ಜಂಗಮ ಅಂತ ಹೇಳಿದ್ದಾರೆ.
ಜಂಗಮ –
ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಸತತವಾಗಿ ಬದಲಾವಣೆ. ಇನ್ನೊಂದು ಸ್ಥಿತಿ ಇದೆ ಅಂತ ಹೇಳಲು ಆಗಲ್ಲ. ಅನಂತ ಸಾದ್ಯತೆಗಳು ಇರುತ್ತವೆ. ಎಲ್ಲವು ಎಲ್ಲ ಕ್ಷಣಗಳಲ್ಲಿ ಜಂಗಮ ಸ್ವರೂಪಿ ಆಗಿರುತ್ತದೆ.
ನಾವು ಸಹ ಯಾವಾಗಲು ಎಚ್ಚರದಿಂದ ಜಂಗಮ ಸ್ವರೂಪಿ ಆಗಿರಬೇಕು. ಎಲ್ಲ ಪೂರ್ವಗ್ರಹ ರಹಿತ ಮತ್ತು ಅಭಿಪ್ರಾಯ ರಹಿತ ಆಗಿರಬೇಕು.
ಅದ್ಬುತವಾದ ಮತ್ತು ವಿರಳವಾದ ಜ್ಞಾನ ದಾಸೋಹಕ್ಕೆ ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಶರಣರಿಗೆ ಮತ್ತು ಬಯಲು ತಂಡಕ್ಕೆ ಧನ್ಯವಾದಗಳು ಮತ್ತು ಶರಣು ಶರಣಾರ್ಥಿಗಳು.
ರವಿಕಿರಣ ಹಿತ್ತಲಮನಿ
Mar 19, 2024ಅನುಭವವನ್ನು ಪ್ರಮಾಣವೆಂದು ಸ್ವೀಕರಿಸಿದ ಶರಣರು ಮತ್ತೆ ಶಾಸ್ತ್ರಗಳನ್ನು ಜೋಡಿಸುವ ಸಾಧ್ಯತೆಯೇ ಇಲ್ಲ. ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಬದಲಾವಣೆಯಾಗುತ್ತಲೇ ಚಲನಶೀಲವಾದ ನಿಸರ್ಗ ತತ್ವವಾದ ‘ಜಂಗಮ’ವನ್ನೇ (ಬಯಲುನಲ್ಲಿ ಈ ಹಿಂದೆ ಪ್ರಕಟವಾದ ‘ನಾನು ಯಾರು?’ ಲೇಖನ ಸರಣಿಯಿಂದ ನನಗೆ ಗೊತ್ತಾಗಿರುವುದು) ಜಾತಿಯಾಗಿಸಿಕೊಂಡವರಿಗೆ ಆವರಣಗಳ ಹಕೀಕತ್ತು ಅರ್ಥವಾಗುವುದಿಲ್ಲ.