ಬಯಲುಡುಗೆಯ ಬೊಂತಾದೇವಿ
ಸವಾಲಕ್ಷ ದೇಶದ ಮಾಂಡವ್ಯಪುರ ರಾಜಧಾನಿಯಲ್ಲಿ ಮಹದೇವ ಭೂಪಾಲನೆಂಬ ರಾಜನು ಆಳುತ್ತಿದ್ದನು. ಆ ರಾಜನ ಹೆಂಡತಿ ಗಂಗಾದೇವಿಯೂ ಮಗ ಲಿಂಗಾರತಿಯೂ, ರಾಜನ ತಂಗಿ ನಿಜದೇವಿಯರು ನಿಃಕಳಂಕ ಮಲ್ಲಿಕಾರ್ಜುನನ ಖಾಸಾ ಭಕ್ತರಾಗಿದ್ದರು. ರಾಜ್ಯವೂ ಸುಭಿಕ್ಷವಾಗಿರಲು ಸದೋದಿತ ಆ ದೇವರ ಪೂಜಾ ಕೈಂಕರ್ಯದಲ್ಲಿ ನಿರತನಾಗಿದ್ದ ಆ ರಾಜನ ಓಲಗದಲ್ಲಿಯೇ ಒಂದು ದೊಡ್ಡದಾದ ಲಿಂಗವಿತ್ತು. ಆ ಲಿಂಗಕ್ಕೆ ದಿನದಲ್ಲಿ ಮೂರುಹೊತ್ತು ಫಲಪುಷ್ಪಗಳಿಂದ ಸಿಂಗರಿಸಿ, ಧೂಪ-ದೀಪಾರತಿಗಳಿಂದ ಪೂಜೆ ನಡೆಯುತ್ತಿತ್ತು. ಮಾಂಡವ್ಯಪುರದ ತುಂಬೆಲ್ಲ ಶಿವಲಿಂಗಗಳು, ಶಿವದೇವಾಲಯಗಳು, ಹೂವನಗಳೇ ತುಂಬಿದ್ದವು. ರಾಜನ ನಿಷ್ಠೆ ಎಷ್ಟಿತ್ತೆಂದರೆ ಕಾಶ್ಮೀರಕ್ಕೆ ಬರುವ ಪ್ರತಿಯೊಬ್ಬ ತಪಸ್ವಿಯನ್ನು, ಸಾಧಕನನ್ನು, ದೇವೋಪಾಸಕನನ್ನು ಆಸ್ಥಾನಕ್ಕೆ ಕರೆಯಿಸಿ ಅವರೂ ನಿಃಕಳಂಕ ಮಲ್ಲಿಕಾರ್ಜುನ ದೇವರನ್ನೇ ಪೂಜಿಸಬೇಕೆಂದು ಕಟ್ಟಪ್ಪಣೆ ಹಾಕುತ್ತಿದ್ದ. ತನ್ನ ದೇವರನ್ನು ಪೂಜಿಸದವರ ಕೈಕಾಲುಗಳಿಗೆ ಕಬ್ಬಿಣದ ಸರಪಳಿ ತೊಡಿಸಿ ಆ ಬೃಹದಾಕಾರದ ಲಿಂಗದ ಮುಂದೆ ತೂಗುಹಾಕಿಸುತ್ತಿದ್ದ. ಜೀವ ಭಯದಲ್ಲಿ ಆರು ಸಾವಿರಕ್ಕೂ ಮಿಕ್ಕ ತಪಸ್ವಿಗಳು ನಿಃಕಳಂಕ ಮಲ್ಲಿಕಾರ್ಜುನನ ಪೂಜೆಪುನಸ್ಕಾರ ಮಾಡಿಕೊಂಡಿದ್ದರು.
ಒಂದು ದಿನ ಕಲ್ಯಾಣದಿಂದ ಹೊರಟಂತ ವ್ಯಾಪಾರಿ ಶರಣನನ್ನು ಬಂಧಿಸಿ, ಕೈಕಾಲುಗಳಿಗೆ ಕೋಳ ತೊಡಿಸಿ ಓಲಗಕ್ಕೆ ಕರೆತರಲಾಯ್ತು. ಆ ಶರಣನು ಕಳ್ಳಚಿಕ್ಕನ ಜೊತೆಗಾರನಾಗಿ ಮಾಂಡವ್ಯಪುರ ಪ್ರವೇಶಿಸಿದ್ದಲ್ಲದೆ, ನಿಃಕಳಂಕ ಮಲ್ಲಿಕಾರ್ಜುನನ್ನು ಅವಹೇಳನ ಮಾಡುವಂತೆ ಚಿಕ್ಕದೊಂದು ಲಿಂಗದಾಕಾರದ ಕಲ್ಲನ್ನು ಅಂಗೈಯಲ್ಲಿಟ್ಟು ಪೂಜೆ ಮಾಡಿಕೊಂಡ ಅಪರಾಧದ ಮೇಲೆ ಬಂಧಿಸಲಾಗಿತ್ತು. ವಿಷಯ ರಾಜರಿಗೆ ತಿಳಿದದ್ದೆ ತಡ ಮಹಾಮಂಗಳಾರತಿ ಮುಗಿಸಿಕೊಂಡು ಸೀದಾ ಓಲಗಕ್ಕೆ ಬಂದರು. ಆನೆಯಾಕಾರದ ಬಂಗಾರ-ರತ್ನ ಖಚಿತ ಸಿಂಹಾಸನದ ಮೇಲೆ ಕುಳಿತು ತಮ್ಮ ಬಿರುಗಣ್ಣಿನಿಂದಲೇ ಆ ಶರಣನನ್ನು ಅಳೆದು ತೂಗಿ, ನ್ಯಾಯ ಪಂಚಾಯತಿಗಾಗಿ ನಾಡಿನ ಸಮಸ್ತ ಹಿತೈಶಿಗಳನ್ನು ಓಲಗಕ್ಕೆ ಬರಹೇಳಿದರು.
ಮುದಿ ಮಂತ್ರಿಗಳು, ಕುಶಲಿ ಕವಿಗಳು, ಪುರೋಹಿತ ಪಾಮರರು ಒಬ್ಬೊಬ್ಬರಾಗಿ ಬಂದು ರಾಜರಿಗೆ ವಂದಿಸಿ ತಮ್ಮ ಆಸನದಲ್ಲಿ ಕುಳಿತುಕೊಂಡರು. ರಾಜನ ಪರಿವಾರದಲ್ಲಿ ಸೋದರಿ ನಿಜದೇವಿ, ಸತಿ ಗಂಗಾದೇವಿ, ಮಗ ಲಿಂಗಾರತಿ ಆದಿಯಾಗಿ ಅಂತಃಪುರದ ಊಳಿಗದವರು ಒಂದು ಕಡೆಗಿದ್ದರೆ ಇನ್ನೊಂದು ಕಡೆ ಪೂಜಾಕೈಂಕರ್ಯದಲ್ಲಿ ತೊಡಗಿದ್ದ ಸಾತ್ವಿಕರು ಏನು ಶಿಕ್ಷೆ ವಿಧಿಸುವರೋ ಎಂಬ ಆತಂಕದಲ್ಲಿ ನಿಂತಿದ್ದರು.
‘ಈ ವ್ಯಾಪಾರಿ ಕಲ್ಯಾಣ ದೇಶದವನಂತೆ, ನಮ್ಮ ಲಿಂಗದೇವರನ್ನು ಅಣಕಿಸುವ ಹಾಗೆ ಇದೊಂದು ಸಣ್ಣಕಲ್ಲನ್ನು ಪೂಜಿಸುತ್ತಿದ್ದ ರಾಜನ್, ಅಲ್ಲದೆ ಈತ ಅಡಗಿಕೊಂಡಿದ್ದ ತೊರೆಯಿಂದಲೇ ಚೋರಚಿಕ್ಕನು ಮಾಂಡವ್ಯಪುರ ಪ್ರವೇಶಿಸಿ ತನ್ನ ಸಹಚರರನ್ನು ಕರೆದುಕೊಂಡು ಹೋಗಿದ್ದಾನೆ. ಬಹುಶಃ ಈತನೂ ಆ ಚೋರಚಿಕ್ಕನ ಕಡೆಯವನೇ ಇದ್ದಿರಬಹುದು’ ಎಂದು ಸದರಿ ದಳಪತಿ ಹೇಳುತ್ತಿರಲು, ರಾಜರು ಕೈಸನ್ನೆ ಮಾಡಿ ಅವರನ್ನು ಸುಮ್ಮನಿರಿಸಿ ತಾವೇ ಖುದ್ದ ವಿಚಾರಣೆ ಶುರು ಮಾಡಿದರು.
ಏನು ನಿನ್ನ ಹೆಸರು..?
– ಬಸವಣ್ಣ..!
ಆ ಕಲ್ಯಾಣದ ಪ್ರಧಾನಿಯೇ..?
– ಅಲ್ಲ ಮಹಾಸ್ವಾಮಿ, ನಾನು ಗ್ರಂಥಗಳ ವ್ಯಾಪಾರಿ.. ಮಹಾಮನೆಯ ಒಬ್ಬ ಶರಣನಷ್ಟೆ.
ಮತ್ತೇಕೆ ಬಸವಣ್ಣನ ಹೆಸರಿಟ್ಟುಕೊಂಡಿದ್ದಿಯಾ?
– ನಾವು ದಕ್ಷಿಣದವರು ಎತ್ತುಗಳನ್ನೇ ದೇವರೆಂದು ಪೂಜಿಸುತ್ತೇವೆ. ಹಾಗಾಗಿ ನಮ್ಮ ನಾಡಿನಲ್ಲಿ ಬಸವಣ್ಣ, ನಂದೀಶ, ವೃಷಭೇಶ ಅನ್ನೋ ಹೆಸರು ಇಡುತ್ತಾರೆ.
ಯಾವ ಗ್ರಂಥಗಳನ್ನು ಮಾರುವ ಕಾಯಕ ನಿನ್ನದು?
– ಶರಣರ ವಚನಗಳು.
ನಮ್ಮ ರಾಜ್ಯದಲ್ಲಿ ಯಾರೆಲ್ಲ ನಿನ್ನ ಆ ಗ್ರಂಥಗಳನ್ನು ಖರೀದಿಸುತ್ತಾರೆ?
– ರಾಜರ ಧ್ವನಿಯಲ್ಲಿನ ಆವೇಶವನ್ನು ಕಂಡು ಆ ವ್ಯಾಪಾರಿ ಕ್ಷಣಕಾಲ ಮೌನಿಯಾದ. ಸಾತ್ವಿಕರ ಮುಖಭಾವದಲ್ಲಿ ಆತಂಕದ ಛಾಯೆ ಮನೆಮಾಡಿತು. ರಾಜರು ದಳಪತಿಗೆ ಸನ್ನೆ ಮಾಡಲು, ಆ ದಳಪತಿ ವ್ಯಾಪಾರಿಯ ಕೈಯೊಳಗಿನ ಲಿಂಗವನ್ನು ಕಿತ್ತುಕೊಂಡು, ಜೋಳಿಗೆಯೊಳಗಿನ ಒಂದೆರಡು ಗ್ರಂಥಗಳನ್ನು ರಾಜರಿಗೆ ಮುಟ್ಟಿಸಿದ. ಮಹದೇವ ಭೂಪಾಲರು ಲಿಂಗವನ್ನೊಮ್ಮೆ ಪರೀಕ್ಷಿಸಿ, ಆ ಗ್ರಂಥದ ತಾಳೆಗರಿಗಳನ್ನು ತಿರುವಿ ನೋಡಿದರು.
‘ದಳಪತಿ ನಾಳೆ ಮುಂಜಾನೆಯ ಪೂಜೆ ಮುಗಿದದ್ದೆ ಲಿಂಗಾರ್ಚನೆಯಲ್ಲಿ ತೊಡಗಿರುವ ಎಲ್ಲಾ ಉಪಾಸಕರನ್ನು, ಸವಣರನ್ನು, ಸಾಧು-ಸಂತರನ್ನು ಅರಮನೆ ಮೈದಾನಕ್ಕೆ ಬರಹೇಳಿರಿ. ಹಾಗೆಯೇ ಈತನ ಕೈಕಾಲುಗಳಿಗೆ ಕೋಳ ತೊಡಿಸಿ ವಧಾಸ್ಥಾನದಲ್ಲಿ ನಿಲ್ಲಿಸಿ’ ರಾಜರ ಮಾತಿಗೆ ಇಡೀ ಓಲಗವೇ ಗರಬಡಿದವರಂತೆ ಸ್ತಬ್ಧವಾಯ್ತು. ರಾಜರು ಶರಣರ ವಿಷಯದಲ್ಲಿ ದುಡುಕಿದರು ಎಂದುಕೊಂಡರು ಸಾತ್ವಿಕರು. ಸಭೆ ಮುಗಿದಾದ ಮೇಲೆ ಇಡೀ ಮಾಂಡವ್ಯಪುರದಲ್ಲಿ ಭಣಗುಡುವ ಮೌನದ ಹೊರತು ಯಾವ ಸದ್ದುಗಳು, ಮಂತ್ರಘೋಷಗಳು ಕೇಳಿಸಲಿಲ್ಲ.
ಆ ರಾತ್ರಿಯಿಡೀ ಮಾಂಡವ್ಯಪುರದಲ್ಲಿದ್ದ ಆರು ಸಾವಿರ ಸಾತ್ವಿಕರಿಗೆ ನಿದ್ದೆ ಬರಲಿಲ್ಲ. ತಮ್ಮ ಜೋಳಿಗೆಯ ಒಳಪದರುಗಳಲ್ಲಿ ಭದ್ರವಾಗಿರುವ ವಚನದ ಗ್ರಂಥಗಳನ್ನು ಇಟ್ಟುಕೊಳ್ಳಬೇಕೋ ಇಲ್ಲವೇ ಜೀವಭಯದಿಂದ ಬಾವಿಗೆ ಬಿಸಾಡಬೇಕೋ ಒಂದೂ ತಿಳಿಯದವರಂತಾಗಿದ್ದರು. ತಾವುಗಳು ಶರಣರ ವಚನಾಧ್ಯಯನದಲ್ಲಿ ಗುಪ್ತವಾಗಿ ತೊಡಗಿರುವುದರಿಂದ ತಮಗೂ ಶಿಕ್ಷೆಯಾದೀತೇ.. ಎಂಬ ಭಯ ಎಲ್ಲರ ಮುಖದಲ್ಲೂ ಕಾಣಿಸುತ್ತಿತ್ತು. ಕೆಲವು ಸಾತ್ವಿಕರು ಯಜ್ಞಕುಂಡದ ಬೆಂಕಿಗೆ ಹಾಕಲು ನಿರ್ಧರಿಸಿದರೆ ಇನ್ನು ಕೆಲವರು ಆ ವ್ಯಾಪಾರಿ ಶರಣರೊಡನೆ ತಾವೂ ಶಿಕ್ಷೆಗೆ ಗುರಿಯಾಗಿ ಶರಣರು ಮರಣಕ್ಕಂಜುವವರಲ್ಲ ಎಂಬುದನ್ನು ಸಾಧಿಸಿ ತೋರುವ ಛಲತೊಟ್ಟರು.
ವಧಾಸ್ಥಾನದ ಕಂಬದಲ್ಲಿ -ಹಿಂಗೈ ಕಟ್ಟಿ ಹಾಕಲಾಗಿದ್ದ ವ್ಯಾಪಾರಿ ಶರಣನು ಹಿಮ ಸುರಿಯುವ ಆ ಚಳಿಯಲ್ಲೂ ಬಸವಣ್ಣನವರ ವಚನವೊಂದನ್ನು ಇಡೀ ರಾಜಧಾನಿಗೆ ಕೇಳುವಷ್ಟು ಗಟ್ಟಿಯಾಗಿ, ರಾಗಬದ್ಧವಾಗಿ ಹಾಡಿಕೊಳ್ಳುತ್ತಿದ್ದನು.
ನಿಂದಿಸುವನೊಬ್ಬ, ಸ್ತುತಿಸುವನೊಬ್ಬ,
ಇವರಿಬ್ಬರು ನಮ್ಮ ಶಿವಯೋಗಿಯ
ಪರಮಬಂಧುಗಳಯ್ಯಾ…
ಪಾಪವನೊಬ್ಬ ಕೊಂಬ, ಪುಣ್ಯವನೊಬ್ಬ ಕೊಂಬ,
ಕೂಡಲ ಸಂಗಮದೇವಾ,
ನಿಮ್ಮ ಶರಣರು ನಿತ್ಯ ಮುಕ್ತರು.
ಸರೂ ರಾತ್ರಿಯಾದರೂ ಆ ವ್ಯಾಪಾರಿ ಶರಣನು ಹಾಡಿಕೊಳ್ಳುತ್ತಲೇ ಇದ್ದುದನ್ನು ಕೇಳಿ ಯುವರಾಜ ಲಿಂಗಾರತಿಗೆ ಕಡುಕೋಪ ಬಂದಿತಾದರೂ ನಾಳೆಯವರೆಗೂ ಸಹಿಸಿಕೊಂಡರಾಯ್ತು ಎಂದುಕೊಂಡು ಸುಮ್ಮನಾದ. ರಾಜನ ತಂಗಿಗೆ ಆ ವ್ಯಾಪಾರಿಯ ಧ್ವನಿಯೊಳಗಿನ ಸತ್ಯದ ಬೆಳಕು ಸ್ಪಷ್ಟವಾಗಿ ಗೋಚರಿಸತೊಡಗಿತು. ನಿದ್ದೆ ಇಲ್ಲದೆ ಚಡಪಡಿಸುತ್ತಿದ್ದ ಆಕೆಗೆ ಆ ವ್ಯಾಪಾರಿ ತಂದಿದ್ದ ವಚನದ ಗ್ರಂಥಗಳನ್ನು ಕೂಡಲೇ ಓದಬೇಕೆನಿಸಿತು. ರಾಜನ ಮಲಗುವ ಕೋಣೆಯಲ್ಲಿರುವ ಆ ಗ್ರಂಥಗಳನ್ನು ಕದಿಯುವ ಹಂಬಲದಿಂದ ನಿಧಾನಕ್ಕೆ ಹೆಜ್ಜೆಯಿಡುತ್ತಾ ಅರಮನೆಯ ಗವಾಕ್ಷಿಯ ಕಡೆಗೆ ಬಂದಳು. ತಾನು ತೊಟ್ಟುಕೊಂಡ ಆಭರಣಗಳ ಸದ್ದಾಗಿ ಅಣ್ಣ ಎದ್ದಾನು ಎಂದುಕೊಂಡು, ಕಾಲಂದುಗೆಯ ಕಳಚಿಟ್ಟಳು, ಸರಭರ ಸದ್ದಾದೀತೆಂತು ಹೊತ್ತುಕೊಂಡಿದ್ದ ರತ್ನಖಚಿತ ದುಪ್ಪಟಾ ತೆಗೆದಿರಿಸಿದಳು, ಕೈಬಳೆಗಳ ಕಿಂಕಿಣ ನಾದಕ್ಕೆ ಅತ್ತಿಗೆಗೆ ಎಚ್ಚರವಾದೀತೆಂದು ಬಳೆಗೆಳ ಬಿಚ್ಚಿಟ್ಟಳು. ಆಕೆಯ ನುಣುಪಾದ ಪಾದಗಳು ಜಾಣಬೆಕ್ಕಿನ ನಡಿಗೆಯಲ್ಲಿ ಅಣ್ಣ ಮಹದೇವಭೂಪಾಲನ ಮಲಗುವ ಕೋಣೆ ಪ್ರವೇಶ ಮಾಡಿದವು.
ಅರೆರೇ ಘಾತವಾಯ್ತು..! ಅಣ್ಣ ಮಹದೇವ ಭೂಪಾಲನು ಪುಟ್ಟದೊಂದು ಹಣತೆಯ ಮುಂದೆ ಕುಳಿತು ಆ ವಚನಗಳನ್ನು ಓದುತ್ತಾ, ಓದಿದ ಶಬ್ದಗಳನ್ನೆ ಮೆಲಕು ಹಾಕುತ್ತಾ, ಅರ್ಥಕ್ಕಾಗಿ ತಡಕಾಡುತ್ತಾ, ಕೈ-ಬಾಯಿ ಸನ್ನೆಗಳಲ್ಲಿ ವಚನಗಳ ಅರ್ಥವನ್ನು ಬಿಡಿಸುತ್ತಿದ್ದಾನೆ. ನಿಜದೇವಿ ಮುಂದೆ ಅಡಿಯಿಟ್ಟ ಪಾದಗಳನ್ನು ಮೆಲುವಾಗಿ ಹಿಂದೆಗೆದು… ಗವಾಕ್ಷದಿಂದ ಕೆಳಗಿಳಿದು ಅರಮನೆಯ ಮುಂಬಾಗಿಲ ಮುಂದೆ ಬಂದು ನಿಂತಳು. ಕೋಟೆಯ ಮುಂಬಾಗಿಲ ದೊಂದಿಯ ಬೆಳಕಲ್ಲಿ ಅರಮನೆ ಮೈದಾನ ಅಸ್ಪಷ್ಟವಾಗಿ ಕಾಣುತ್ತಿತ್ತು. ವಧಾಸ್ಥಾನದಲ್ಲಿ ಹಾಡಿಕೊಳ್ಳುತ್ತಿದ್ದ ವ್ಯಾಪಾರಿಯ ಧ್ವನಿ ಚಳಿಗೆ ಆಗಲೇ ಬಿದ್ದುಹೋಗಿತ್ತು. ಮುಂಬಾಗಿಲಲ್ಲಿ ನಿಂತಿದ್ದ ಕಾವಲಿನವರ ಕಣ್ತಪ್ಪಿಸಿ ಆಕೆ ವ್ಯಾಪಾರಿಯ ಬಳಿಗೆ ಹೋದಳು.
ನನಗೂ ಶರಣರ ವಚನಗ್ರಂಥ ಬೇಕಿತ್ತು.
ಯಾರು ನೀವು…?
– ನಾನು ನಿಜದೇವಿ. ರಾಜನ ತಂಗಿ.
ಈಗ ನನ್ನಲ್ಲಿ ಯಾವ ಗ್ರಂಥಗಳೂ ಉಳಿದಿಲ್ಲ. ಎಲ್ಲಾ ಗ್ರಂಥಗಳನ್ನು ಜಪ್ತಿಮಾಡಿದರು. ಬಹುಶಃ ನನ್ನ ಜೋಳಿಗೆಯಲ್ಲಿ ಗ್ರಂಥದ ದಾರ ತುಂಡಾದ ಕೆಲವು ಎಲೆಗಳಿದ್ದಾವೆ. ಅವನ್ನೇ ತೆಗೆದುಕೊಳ್ಳಿ.
ಲಗುಬಗೆಯಿಂದ ಅವನ ಜೋಳಿಗೆಯಲ್ಲಿ ಅಸ್ತವ್ಯಸ್ತವಾಗಿದ್ದ ಗ್ರಂಥದ ಕೆಲವು ಎಲೆಗಳನ್ನು ತೆಗೆದುಕೊಂಡಳು. ‘ನೀನು ಆಗ ಹಾಡುತ್ತಿದ್ದ ಹಾಡುಗಳನ್ನ ಇನ್ನೊಮ್ಮೆ ಹಾಡು’ ಎಂದು ಕೇಳಬೇಕೆಂದಿದ್ದಳು, ಅಷ್ಟರಲ್ಲಿ ಯಾರಾದರೂ ಕಾವಲುಗಾರರು ನೋಡಿದರೆ ತನಗಿಂತ ಈ ವ್ಯಾಪಾರಿಯ ಜೀವಕ್ಕೆ ಭಯ ಎಂಬ ಆತಂಕದಲ್ಲಿ ಸುಮ್ಮನಾದಳು.
ನಾನು ನಿನಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಲೇನು?
– ಬೇಡ ತಾಯಿ, ನಾನು ನಿಮ್ಮ ಕಾಳಜಿಗೆ ಋಣ .
ನಾಳೆ ಬೆಳಗಾದರೆ ನಿನ್ನ ಜೀವಕ್ಕೆ ಹಾನಿಯಾಗುವುದು.
ಆಗಲಿ…
ನಮ್ಮಣ್ಣ, ಮಹದೇವ ಭೂಪಾಲ ಬಹಳ ಮೃದು ಸ್ವಭಾವದವನು. ಆದರೆ ಒಂದು ಸಲ ಹಠಹಿಡಿದರೆ ನಿನ್ನ ಪ್ರಾಣ ತೆಗೆಸಲೂ ಹಿಂಜರಿಯುವುದಿಲ್ಲ.
ನಿಜದೇವಿಗೆ ಯಾಕೋ ಏನೋ ಆ ವ್ಯಾಪಾರಿಯ ಬಗ್ಗೆ ಕನಿಕರವಾಯ್ತು. ಆದರೆ ಅವನು ಮಾತ್ರ ವಿನಯದ ಗೊಂಬೆಯಂತೆ ಕಿರುನಗೆ ನಕ್ಕು ಹಾಡಿದೊಡೆ ಎನ್ನೊಡೆಯನ ಹಾಡುವೆ ಎಂಬ ಸಾಲುಗಳನ್ನು ರಾಗವಾಗಿ ಮೆಲುದನಿಯಲಿ ಹಾಡತೊಡಗಿದ.
ನಿನ್ನ ಹಾಡಿನೊಳಗಿನ ವಿನಯ ನನಗಿಷ್ಟವಾಯ್ತು. ನನ್ನ ಚಿಂತೆಯೊಂದೇ… ಇವರು ನಿನ್ನ ಜೀವಂತ ಬಿಡುವುದಿಲ್ಲ.
ಉರಿಯುವ ಬೆಂಕಿ, ಹರಿಯುವ ನದಿ, ಚಿಗುರೊಡೆದ ಹಸಿರು, ಸೊಂಯ್ಯನೇ ಬೀಸುವ ಗಾಳಿ, ಮಳೆಗೆ ಯಾರ ಅಪ್ಪಣೆಯೂ ಆಕ್ಷೇಪಣೆಯೂ ಬೇಕಾಗಿಲ್ಲವಲ್ಲ.
ಅವನ ಮಾತು ಕೇಳಿಸಿಕೊಳ್ಳುತ್ತ ಹಾಗೇ ಆ ರಾತ್ರಿ ಕಳೆಯಬೇಕೆನಿಸಿತು. ಆದರೆ ಕೋಟೆಯ ಮುಂಬಾಗಿಲ ಮುಂದಿನಿಂದ ನೆರಳಿನಲ್ಲಿ ಯಾರೋ ವ್ಯಾಪಾರಿಯ ಕಡೆಗೆ ಬರುತ್ತಿರುವುದು ಕಾಣಿಸಿತು. ಆತ ಚೋರಚಿಕ್ಕ ಇದ್ದಿರಬೇಕು. ಖಂಡಿತ ಆತ ಇವನನ್ನು ಬಿಡಿಸಿಕೊಂಡು ಹೋಗುತ್ತಾನೆಂದು ಅವನ ಹಿಂಗೈ ಕುಣಕೆ ಬಿಚ್ಚಿದಳು. ಅಲ್ಲಿ ಬರುತ್ತಿದ್ದವನು ಒಬ್ಬ ಎಂದುಕೊಂಡವಳಿಗೆ ಇಬ್ಬರು ಕಾಣಿಸಿದರು. ಮೂರು ಜನ, ನಾಲ್ಕು, ಐದು, ಹತ್ತು… ಒಬ್ಬರ ಹಿಂದೊಬ್ಬರಂತೆ ಸಾವಿರಾರು ಜನ ಬರತೊಡಗಿದರು.
ನಿದ್ದೆಯಿಲ್ಲದೆ ಒದ್ದಾಡುತ್ತಿದ್ದ ಸಾತ್ವಿಕರಲ್ಲಿ ಒಂದಿಬ್ಬರು ರಾಜನ ತಂಗಿ ನಿಜದೇವಿ ವಧಾಸ್ಥಾನದ ಕಡೆಗೆ ಹೋದುದನ್ನು ಕಂಡಿದ್ದರು. ಉಳಿದೆಲ್ಲ ದೇವೋಪಾಸಕರಿಗೂ ಸುದ್ದಿ ಮುಟ್ಟಿಸಿದರು. ಆ ವಚನಗ್ರಂಥಗಳ ವ್ಯಾಪಾರಿಯ ಜೀವಕ್ಕೆ ಕುತ್ತು ಬಂದೀತೆಂದು ಮಾಂಡವ್ಯಪುರದಲ್ಲಿದ್ದ ಆರುಸಾವಿರಕ್ಕೂ ಮಿಕ್ಕಿದ ದೇವೋಪಾಸಕರೂ ವಧಾಸ್ಥಾನದ ಕಡೆಗೆ ಬರತೊಡಗಿದರು. ಅಲ್ಲಿ ನಿಜದೇವಿ ವ್ಯಾಪಾರಿಯ ಕೈಕೋಳ ಬಿಡಿಸಿರುವುದನ್ನು ನೋಡಿ ಅಚ್ಚರಿಗೊಂಡರು. ಅವರೊಳಗೆ ಒಬ್ಬ ಈ ಕೂಡಲೇ ನಾವು ಇಲ್ಲಿಂದ ಹೊರಡೋಣ ಎಂದು ಆಜ್ಞೆಮಾಡಿದ. ನಿಜದೇವಿಗೆ ಏನು ನಡೆಯುತ್ತಿದೆ ಎಂಬುದು ಅರಿವಿಗೆ ಬರುವ ಮೊದಲೇ ಆ ಶರಣರೊಡನೆ ಹೆಜ್ಜೆ ಹಾಕತೊಡಗಿದಳು. ಅರೆಗಣ್ಣು ತೆರೆದಂತಿದ್ದ ಕಾವಲುಗಾರರಿಗೆ ಅರಮನೆ ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯದಾಗಿ ದೊಂದಿಯ ಬೆಳಕನ್ನು ಇನ್ನಷ್ಟು ದೊಡ್ಡದು ಮಾಡಿದರು.
ಆ ತಾಪಸಿಗಳು ಕಾವಲುಗಾರರನ್ನು ಲೆಕ್ಕಿಸದೆ ಕೋಟೆ ಬಾಗಿಲನ್ನು ತೆರೆದರು. ಅದರಾಚೆಗೆ ಮತ್ತೊಂದು ಮುಖ್ಯದ್ವಾರ, ಅಲ್ಲಿ ಸೈನಿಕರ ಸರ್ಪಗಾವಲು ಇತ್ತು. ಆದರೂ ತಾಪಸಿಗಳ ಮೇಲೆ ಕೈಯತ್ತದೆ ಸೈನ್ಯ ಮೌನದಿಂದಲೇ ಏನು ನಡೆಯುತ್ತಿದೆ ಎಂಬುದನ್ನು ಕುತೂಹಲದಿಂದ ನೋಡುತ್ತಿತ್ತು. ಅದರಾಚೆಗೆ ಮಾಂಡವ್ಯಪುರದ ಕೋಟೆ ಭದ್ರವಾಗಿದೆ. ಆರು ಸಾವಿರ ಜನರ ಹೆಜ್ಜೆ ಸಪ್ಪಳಕ್ಕೆ ಇಡೀ ರಾಜಧಾನಿಯೇ ಎಚ್ಚರಗೊಂಡು ರಾಜಬೀದಿಯ ಕಡೆಗೆ ನೋಡುತ್ತಿತ್ತು. ಮಾಂಡವ್ಯಪುರದ ಭದ್ರಕೋಟೆಯ ಒಳಭಾಗದಲ್ಲಿ ಸೈನಿಕರು ಸುತ್ತುವರೆದು ನಿಂತಿದ್ದರು. ಇನ್ನೇನು ಬಿಲ್ಲು ಹೆದೆಗೇರಿಸಿ ಬಿಟ್ಟಾರು ಎಂಬ ಆತಂಕದಲ್ಲೇ ಆರುಸಾವಿರ ಜನ ಕೋಟೆಬಾಗಿಲನ್ನು ಮುರಿದು ಪುಡಿಗಟ್ಟಿದರು. ಎಷ್ಟೋ ವರ್ಷಗಳಿಂದ ಬಂಧಿಯಾದವರ ಮುಖದಲ್ಲಿ ಸಂಭ್ರಮ ಕಂಡಿತು.
ರಾಜನ ಪರಿವಾರದ ದಳಪತಿಯೂ ರಾಜಕುಮಾರ ಲಿಂಗಾರತಿಯೂ ಮುಖ್ಯದ್ವಾರಕ್ಕೆ ಬರುವುದರೊಳಗಾಗಿಯೇ ಬಯಲೊಳಗಿನ ಮಂಜುಮುಸುಕಿನಲ್ಲಿ ಮಬ್ಬುಮಬ್ಬಾಗಿ ಕರಗಿಹೋದರು. ಇಡೀ ರಾಜ್ಯವೇ ಎದ್ದು ಕಲ್ಯಾಣದತ್ತ ನಡೆಯುತ್ತಿದೆಯೇನೋ ಎಂಬಂತೆ ಸಾತ್ವಿಕ ಶರಣರು ಹೊರಟಿದ್ದರು. ಆ ಕತ್ತಲಲ್ಲಿ ಯಾರು ಯಾರೆಲ್ಲ ಹೊರಟರು ಎಂಬುದು ಯಾರಿಗೂ ತಿಳಿಯದಂತಿರಲು ಅವರ ಮಧ್ಯದಲ್ಲಿ ರಾಜನ ಖಾಸಾತಂಗಿ ನಿಜದೇವಿಯು ಹೆಜ್ಜೆಹಾಕುತ್ತಿದ್ದಳು.
**** **** ****
ಆರು ಸಾವಿರ ಸಾತ್ವಿಕರು ರಾಜ್ಯ ತೊರೆದರೇನು ಗತಿ, ದೇವೋಪಾಸಕರ ದಯದಿಂದ ಈವರೆಗೂ ರಾಜ್ಯವು ಸುಭಿಕ್ಷವಾಗಿತ್ತು, ಇನ್ನುಮೇಲೆ ನಮಗೆಲ್ಲ ಆಪತ್ತು ಕಾದಿದೆ ಎಂದು ಭಾವಿಸಿದ ಜನರು ಕಂಗಾಲಾಗಿ ಅರಮನೆಯ ಕಡೆ ನೋಡುತ್ತಾ ಮುಂದಿನ ನಿರ್ಧಾರಕ್ಕಾಗಿ ಕಾದುಕುಳಿತರು. ಇಡೀ ಮುಗಿಲು ಕರಗಿ ಹಿಮವಾಗಿ ಬೀಳುತ್ತಿರುವ ಆ ಹೊತ್ತಿನಲ್ಲಿ ಜನರು ಮನೆಯಿಂದ ಹೊರಗೆ ಕಾಲಿಟ್ಟರೆ ಹೆಪ್ಪುಗಟ್ಟುತ್ತೇವೆ ಎಂಬ ಭಯದಲ್ಲಿರುತ್ತಾರೆ. ಅಂಥದರಲ್ಲಿ ಸಾತ್ವಿಕ ದೇವೋಪಾಸಕರು ದೇಶವನ್ನೇ ಬಿಟ್ಟು ಹೊರಟಿದ್ದರು. ಅವರ ನಡುವೆ ರಾಜನ ತಂಗಿಯೆಂಬ ಯಾವ ಪೋಷಾಕುಗಳ ಗುರುತಿಲ್ಲದೆ ನಿಜದೇವಿಯೂ ಹೊರಟಿದ್ದಳು.
ಬಾಲ್ಯದಿಂದಲೂ ರಾಜನ ಮಗಳು ಎಂಬ ಕಟ್ಟುಪಾಡು, ಬೆಳೆದಂತೆ ರಾಜಕುವರಿ, ಅಣ್ಣನ ತಂಗಿಯಾಗಷ್ಟೆ ಬಾಳಿದವಳಿಗೆ ಕಟ್ಟುಪಾಡುಗಳ ಮೀರಿ ಹೊರಟ ಸಂಭ್ರಮ. ಅರಮನೆಯ ಆಜ್ಞೆಗಳು, ಆ ಒಪ್ಪ ಓರಣದ ಹೂದೋಟಗಳು, ಎಲ್ಲಿ ಹೋದರು ಬಾಗಿ ವಂದಿಸುವ ಕೈಯಾಳುಗಳು, ಓಲಗದ ಶಿಸ್ತು, ಪೂಜೆ-ಪುನಸ್ಕಾರಗಳ ನಡುವೆ ಮನಸ್ಸು ತೋಚಿದಂತೆ ಬದುಕಲು ಸಾಧ್ಯವೇ ಆಗಿರದ ಆ ತಾಯಿಗೆ ಬಿಡಾಡಿಯ ಹಾಗೆ ತಿರುಗಿ ಆ ಬಿಡಾಡಿ ದೇವರನ್ನ ಹುಡುಕುವ ಹಂಬಲವಿತ್ತು. ಆ ಜೋಳಿಗೆಯಿಂದ ಎತ್ತಿ ತಂದಿದ್ದ ವಚನದ ಬಿಡಿ ಓಲೆಗಳನ್ನು ಓದಬೇಕು ಅನ್ನುವ ಆಸೆಯಿತ್ತು. ಈ ಶರಣರ ಸಂಗಡ ಹೊರಟರೆ ನೇರವಾಗಿ ಕಲ್ಯಾಣಕ್ಕೆ ಮುಟ್ಟಿಸುತ್ತಾರಲ್ಲದೆ ರಾಜನ ತಂಗಿ ಎಂಬ ಕರುಣೆಯಲ್ಲಿ ಬದುಕಬೇಕಾದೀತು. ಅರಿವಿಗೆ ಬಂದರೂ ಕುರುಹು ಉಳಿಸಬಾರದು ಎನ್ನಿಸಿತು. ಆರುಸಾವಿರ ಜನರ ನಡುವೆ ಹೆಜ್ಜೆಯ ಗತಿ ನಿಧಾನಿಸಿದಳು. ಶರಣರ ದಂಡು ಮುಂದಮುಂದಕೆ ನಡೆದಂತೆ ಆಕೆಯ ಹೆಜ್ಜೆಗಳು ಹಿಂದಹಿಂದಕೆ ಉಳಿದು ಆ ಗುಂಪಿನಿಂದ ದೂರಾದಳು. ಊರು ತಿಳಿದಿಲ್ಲ, ದಾರಿಯ ಅರಿತಿಲ್ಲ, ಹಸಿವಿಲ್ಲ, ನೀರಿಲ್ಲ, ನೆರಳಿಲ್ಲದ ಆ ರಾಜಕುವರಿಯ ಮನಸ್ಸು ಬಯಲಿನೊಳಗೆ ಅತ್ತಿಂದಿತ್ತ ಲೋಕ ತಿಳಿಯುವ ಹಂಬಲಕ್ಕೆ ಹಾತೊರೆಯುತ್ತಿತ್ತು. ಶರಣರ ಹಾದಿ ಶರಣರಿಗಾಯ್ತು, ನಿಜದೇವಿಯ ಹಾದಿ ಕಲ್ಲುಮುಳ್ಳಿನದಾಯ್ತು.
ತಾನು ರಾಜಮನೆತನದವಳು ಎಂಬ ಅರಿವು ಕಳೆದು ಬಾಳಬೇಕು ಅಂದವಳಿಗೆ ಬಯಲೇ ಅರಮನೆಯಾಯ್ತು, ದಾರಿಹೋಕರೇ ಬಂಧುಗಳಾದರು. ಊರುಕಂಡಲ್ಲಿ ಮಲಗಿ, ನೀರುಕಂಡಲ್ಲಿ ಮಿಂದು ಆ ಮೂಲೋಕದ ಮಾಯಕಾರ ಬಿಡಾಡಿಯ ಹಾಗೆ ಅಲೆದು ಅರಿವಿನ ಬೆಳಕ ಹುಡುಕತೊಡಗಿದಳು. ಅರಮನೆ ತೊರೆದು ದಿನಗಳು ಕಳೆದು ತಿಂಗಳಾಯ್ತು. ತೊಟ್ಟಬಟ್ಟೆಯ ಮೇಲೆ ಮೋಹವಿಲ್ಲ, ಹಸಿವು ನೀರಡಿಕೆಯ ಹಂಗಿಲ್ಲ, ವ್ಯಾಪಾರಿ ಕೊಟ್ಟಿದ್ದ ವಚನದ ಒಂದೊಂದು ಹಾಳೆಯೂ, ಅದರೊಳಗಿನ ಸಾರವೂ ಅತ್ಯಮೂಲ್ಯ ಎನಿಸತೊಡಗಿತ್ತು. ಓದುತ್ತಾ ತಾನು ತನ್ನ ಅರಿವಿನ ಬೆಳಕು ಹುಡುಕಿಕೊಳ್ಳಲು, ಕರೆದರೆ ಓ ಎನ್ನುವಾತ ಬಿಡಾಡಿ ಎಂದುಕೊಳ್ಳುತ್ತಾ ಬಯಲ ಜಪದಲ್ಲೇ ತಿರುತಿರುಗಿ ಹಲವು ಸವಣರ, ಸಾಧುಗಳ, ಜಂಗಮರ ಕಂಡು ಮಾತಾಡಿದಳು.
ಬೆಟ್ಟದ ಮೇಲೆ ಕುಳಿತ ತಾಪಸಿಗಳು, ದೇವಾಲಯದಲ್ಲಿ ಕುಳಿತು ಭಜಿಸುವ ಸಂತರ ನಡುವೆ ಎಲ್ಲಾದರೂ ಆ ದೇವರು ಸಿಕ್ಕಾನು ಎಂಬ ಆಸೆಯಿಂದ ಹಳ್ಳ, ಕೊಳ್ಳ, ಗುಡಿ-ಗುಂಡಾರ, ಮೊರ, ಕಲ್ಲು, ಗಿಡ-ಮರಗಳ ಸುತ್ತಿಸುತ್ತಿ ಆ ಬಿಡಾಡಿ ಕಂಡು ಮಾತಾಡಿಸುವ ತವಕದಲ್ಲಿ ತಿರುಗಿದಳು. ಇಲ್ಲೆಲ್ಲೂ ಕಾಣದ ದೇವರು ತನ್ನೊಳಗೆ ಇದ್ದಾನೆಂದು ಹಠತೊಟ್ಟ ಯೋಗಿಗಳ ಕಂಡು ಮಾತಾಡಿದಳು. ಯಾರ ಅನುಭವಕ್ಕೆ ಬಾರದ ದೇವರನ್ನ ಹೊರಗೆ ಹುಡುಕಿದ್ದು ಸಾಕು, ಅಂತರಂಗದ ಅರಿವಿನ ಕನ್ನಡಿಯಲ್ಲಿ ದಿನದಿನವೂ ಹುಡುಕಿಕೊಳ್ಳುವ ಶರಣರ ಕಡೆಗೆ ಹೋಗಬೇಕೆಂದು ಕಲ್ಯಾಣಕ್ಕೆ ಹೊರಟಳು.
ದಾರಿಯ ಮಧ್ಯ ಹುಲಿ-ಹುಲ್ಲೆಗಳು, ತೋಳ-ಕರಡಿಗಳು, ಕಾರ್ಕೋಟ ವಿಷಜಂತುಗಳು ಎದುರಾಗುತ್ತಿದ್ದವು. ಯಾವ ಕಟ್ಟುಪಾಡುಗಳಿಲ್ಲದ ಆ ಪ್ರಾಣಿಗಳ ಬದುಕಲ್ಲಿ ಶಿವನನ್ನು ಕಂಡಳು. ತಿಂಗಳು ಕಳೆದು ವರ್ಷಗಳಾದವು. ವಿಂದ್ಯದ ದಟ್ಟಕಾಡಿನಲ್ಲಿ ಓಡಾಡುತ್ತಿದ್ದಾಗ ಒಂದು ಸರಿರಾತ್ರಿ ಹತ್ತಿರದಲ್ಲೇ, ಮರದ ಪೊಟರೆಯಲ್ಲಿ ಬೆಚ್ಚಗೆ ಕುಳಿತಿದ್ದ ಸಿಂಹವೊಂದು ಘರ್ಜಿಸಿತು… ಆನೆಗಳು ಘೀಳಿಟ್ಟವು. ಹಕ್ಕಿ-ಪಕ್ಷಿಗಳು ಹಾರಾಡತೊಡಗಿದವು, ನರಿ-ನಾಯಿಗಳು ಊಳಿಡತೊಡಗಿದವು. ಇದ್ದಕ್ಕಿದ್ದಂತೆ ಬೆಂಕಿಯ ಕೆನ್ನಾಲಗೆ ಇಡೀ ಕಾಡನ್ನೇ ನುಂಗುವಂತೆ ಕಾನನವನ್ನು ದಹಿಸತೊಡಗಿತು. ಮಣ್ಣಿನ ಏರುದಿಬ್ಬದ ಮೇಲೆ ಆಯಾಸಗೊಂಡು ಮಲಗಿದ್ದವಳಿಗೆ ಏನಾಗುತ್ತಿದೆ ಎನ್ನುವುದು ಅರಿವಿಗೆ ಬರುವುದರೊಳಗೆ ಬೆಂಕಿಯು ಇವಳತ್ತ ಮುನ್ನುಗ್ಗುತ್ತಿತ್ತು. ಎಲಾ ಬಿಡಾಡಿ ಹೀಗೆ ಬಂದೆಯಾ ಎಂದುಕೊಂಡವಳ ದೇಹದಲ್ಲಿ ನಿತ್ರಾಣವಿಲ್ಲದಾಗಿ ಎದ್ದು ಮುಂದೆ ಅಡಿಯಿಡಲಾರದೆ ನಿಂತವಳು ಧಡಕ್ಕನೆ ಕುಸಿದು ಬಿದ್ದಳು.
ಮರುದಿನ ಎಚ್ಚರವಾದಾಗ ಕಾಡುಜನರ ಹಟ್ಟಿಯಲ್ಲಿ, ಬಾನೆತ್ತರದ ಗಿಡಮರಗಳ ನಡುವೆ ಹುಲ್ಲುಹಾಸಿನ ಮೇಲೆ ಮಲಗಿದ್ದಳು. ಲೋಕ ಸಂಚರಿಸುವ ಜೀವಕ್ಕೆ ಯಾವ ಭಯ..! ಕಾಲತುದಿಯಲ್ಲಿ ತ್ರಿಶೂಲ ಹಿಡಿದಿದ್ದ ಮುದುಕನೊಬ್ಬ ಕುಳಿತಿದ್ದ. ಆತ ಆ ಹಟ್ಟಿಯ ದೊರೆ, ಕಾಡಜನರಿಗೆ ದೇವರ ಸಮಾನ. ಅರಮನೆಯ ಮೃದುಹಾಸಿನ ಮೇಲೆ ಓಡಾಡಿದ್ದ ಕೋಮಲ ಪಾದಗಳಿಗೆ ಬೊಬ್ಬೆ ಬಂದಿದ್ದವು. ಮುಳ್ಳು-ಗಿಡಗಂಟೆ ಲಂಟಾನಕ್ಕೆ ಸಿಕ್ಕಿ ಅಳಿದುಳಿದ ಬಟ್ಟೆ ಅಲ್ಲಲ್ಲಿ ಹರಿದಿದ್ದವು. ಮೈಮೇಲೆಲ್ಲ ಸುಟ್ಟ ಕಪ್ಪುಮಸಿ ಹತ್ತಿತ್ತು.
ಪಾದದ ಬಳಿ ಕುಂತಿದ್ದ ಆಕೆ ‘ನೆನ್ನೆ ಹೊಳೆಯ ಆ ಕಡೆ ಕಾಡಿಗೆ ಬೆಂಕಿ ಹತ್ತಕೊಂಡಿತ್ತು, ನಮ್ಮ ಹಟ್ಟಿಯ ಹುಡುಗರು ಯಾವದಾದರೂ ಪ್ರಾಣಿ ಬೆಂಕಿಗೆ ಸುಟ್ಟಕೊಂಡಿರತದೆ ತಗೊಂಡ ಬಂದರಾಯ್ತು ಅಂತ ಹೋದವರು ನಿನ್ನ ಕರಕೊಂಡ ಬಂದಾರೆ’ ಎಂದು ನಡೆದ ಘಟನೆಯ ವಿವರ ಕೊಟ್ಟಳು.
ಹಟ್ಟಿಯ ಒಡೆಯ ಆಕೆಯನ್ನು ಅಪಾದಮಸ್ತಕ ನೋಡಿ, ಆಕೆಯ ಪಕ್ಕದಲ್ಲಿ ಕುಳಿತು ಕಾಲುಗಳಿಗೆ ತಿಕ್ಕಿಯ ರಸಹಿಂಡಿ ಆರೈಕೆ ಮಾಡುತ್ತಿದ್ದ ಹೆಂಗಸಿನೊಡನೆ ಕಾಡುಭಾಷೆಯಲ್ಲಿ ಏನನ್ನೋ ಹೇಳಿದ. ಆಕೆ ಹತ್ತಾರು ಔಷಧಿಯ ಮೂಲಿಕೆಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಒಂದೊಂದು ಬೇರನ್ನು ಮುಟ್ಟಿ, ಕೆಲವನ್ನು ನೀರಿಗೆ ತಾಕಿಸಿ, ಅರೆಗಲ್ಲು ಮೇಲಿಟ್ಟು ಕಲ್ಲೊಳಗೆ ಅರೆದು ಅದರ ರಸವನ್ನು ಗಾಯಗೊಂಡ ದೇಹಕ್ಕೆ ಹಚ್ಚುತ್ತಿದ್ದಳು.
ಎದುರಿಗಿದ್ದ ಹಟ್ಟಿಯ ದೊರೆಯ ಕಣ್ಣೊಳಗೆ ಎಂಥದೋ ವಿಚಿತ್ರ ಆಕರ್ಷಣೆ ಇದೆಯೆಂಬ ಸುಳಿವು ಸಿಕ್ಕದ್ದೇ ನಿಜದೇವಿಗೆ ಸಣ್ಣಗೆ ಮುಜುಗರವಾದಂತೆನಿಸಿತು, ಮೈಮುಚ್ಚಿಕೊಳ್ಳಲು ದುಪ್ಪಟಾಕ್ಕೆ ತಡಕಾಡಿದಳು, ಆರೈಕೆ ಮಾಡುತ್ತಿದ್ದ ಆ ಹಟ್ಟಿಕಾರನ ಹಿರೆಹೆಂಡತಿ ಕಂಬಳಿಯ ತಂದು ಆಕೆಯ ಮೈಮುಚ್ಚಿದಳು. ಅದೇನು ಸೊಪ್ಪಿನ ರಸವೋ ಅರೆದು ಹದಮಾಡಿ, ಅದಕೆ ತಟಕು ಜೇನುಬೆರೆಸಿ ಕುಡಿಯಲು ಕೊಟ್ಟಿದ್ದೆ ನಿಜದೇವಿ ಅದ್ಯಾವದೋ ಮಾಯಾಲೋಕಕ್ಕೆ ಪರವಶವಾದವಳಂತೆ ಹಾಗೇ ಮಲಗಿಬಿಟ್ಟಳು.
ಮರುದಿವಸ ಎಚ್ಚರವಾದಾಗ ಸುಟ್ಟುಕರಕಲಾದ ಪ್ರಾಣಿಯ ಮಾಂಸವನ್ನು ಬಿಸಿಲಿಗೆ ಹಾಕಿ ಒಣಗಿಸುತ್ತಿದ್ದರು ಕೆಲ ಹೆಂಗಸರು. ಹಟ್ಟಿಯ ಗಂಡಸರೆಲ್ಲ ಬೇರುಬಿಳಲಿನ ದೊಡ್ಡ ಮರದ ಕೆಳಗೆ ಇರುವ ಕಾಡುದೇವಿಯ ಮುಂದೆ ಬಂದು ಸೇರಿದ್ದರು. ನಿಜದೇವಿಯ ಪಾದಗಳಿಗೆ ಔಷಧಿಹಚ್ಚಿ ಆರೈಕೆ ಮಾಡಿದ್ದ ಆ ಹೆಂಗಸು ದೇವರ ಮುಂದೆ ಮಂಡಿಯೂರಿ ಏನನ್ನೋ ಬೇಡಿಕೊಳ್ಳುತ್ತಿದ್ದಳು. ಮೈಮೇಲೆ ಬಂದವಳಂತೆ ಥಕಥೈ ಕುಣಿಯತೊಡಗಿದಳು. ದೂರದಲ್ಲಿ ನಿಂತಿದ್ದ ಇಬ್ಬರು ಹುಡುಗಿಯರನ್ನು ಕರೆದು ಶಿಶುಮಗಳ ಕರೆದು ತನ್ನಿರೆಂದು ಸನ್ನೆ ಮಾಡಿದಳು. ಆ ಇಬ್ಬರು ಹುಡುಗಿಯರು ನಿಜದೇವಿಯನ್ನು ತಂದು ದೇವರ ಮುಂದೆ ನಿಲ್ಲಿಸಿದಾಗ ಅವಳ ಆವೇಶ ಮತ್ತಷ್ಟು ಹೆಚ್ಚಾಯ್ತು. ಈಗ ಆ ಹಟ್ಟಿಯ ದೊರೆ ಮುಂದೆ ಬಂದು ಮಂಡಿಯೂರಿ ಕುಳಿತು… ‘ನಿನ್ನ ಅಪ್ಪಣೆಯಾದರೆ ಈ ನಿನ್ನ ಶಿಶುಮಗಳ ನಾನು ಮದುವೆಯಾಗಿ ಕಾಡು ರಕ್ಷಿಸುವೆನು’ ಎಂದು ಬೇಡಿಕೊಂಡ. ದೇವತೆ ಈಗ ಆರ್ಭಟಿಸುತ್ತ ತನ್ನಿಡೀ ದೇಹವೇ ಭೂಮಿಯೆಂಬಂತೆ ಕಂಪಿಸತೊಡಗಿದಾಗ ಶಾಂತಿಗಾಗಿ ಕುಂಬಳಕಾಯಿ ಸೀಳಿದರು. ದೇವಿಯು ಹಟ್ಟಿಯ ದೊರೆಯ ಹಣೆಯ ಮೇಲೆ ಭಂಡಾರ ಹಚ್ಚಿ ಮದುವೆಗೆ ಸಮ್ಮತಿಸಿದಳು. ನೆರೆದ ಹಿರಿಕಿರಿಯರು ಹರ್ಷೋದ್ಘಾರ ತೆಗೆದು ಮಂಡಿಯೂರಿ ಅಮ್ಮನಿಗೆ ಕೈಮುಗಿದರು. ನಿಜದೇವಿಗೆ ಇದೆಲ್ಲವೂ ಸೋಜಿಗದಂತೆ ಕಾಣಿಸಿತು. ಮೈಮೇಲೆ ಬಂದ ದೇವರ ಆವೇಶ ಇಳಿಯುವುದರೊಳಗೆ ನಿಜದೇವಿ ಆಕೆಯ ಕೈ ಹಿಡಿದುಕೊಂಡಳು.
ಏನು ವರ ಬೇಕು ಮಗಳೇ… ಎಂದು ಆ ದೇವತೆ ಕೇಳಿದಳು.
‘ಯಾವ ಮೈ ಯಾರಿಗೆ ಆಸೆ ಚಿಗುರಿಸಿತೋ ಆ ಮೈಯ ವಾಸನೆ ನನಗಿಲ್ಲ. ಅದು ಆ ಬಿಡಾಡಿದೇವನ ಸೊತ್ತು. ಇದೋ ಲೋಕವೇ ನೋಡಿಕೊಳ್ಳಲಿ ಬಯಲಾದೆನು’ ಎಂದು ನಿಜದೇವಿ ತನ್ನ ದೇಹದ ಮೇಲಿನ ಅಳಿದುಳಿದ ಬಟ್ಟೆಯ ತುಂಡುಗಳನ್ನು ಹರಿದೊಗೆದು, ಹುಟ್ಟುಡುಗೆಯಲ್ಲಿ ನಿಂತಳು. ಮೈಮೇಲಿನ ದೇವರು ಸರ್ರನೇ ಇಳಿದುಹೋಗಿ ಅರೆರೆ ಹಿಂಗಾಯ್ತಲ್ಲ ಅಂತ ಆ ಹಟ್ಟಿಯ ಒಡೆಕಾರನ ಹೆಂಡತಿ ಗಾಬರಿಯಾಗಲು, ಆ ಒಡೆಯ ನಾಚಿಕೆಯಿಂದ ತಲೆತಗ್ಗಿಸಿದ. ಇಡೀ ಹಟ್ಟಿಯೇ ಎಲಾ, ಏನಾಯ್ತಿದು.. ನಮ್ಮ ಕಾಯುವ ದೇವಿಯೂ, ನಮ್ಮ ಒಡೆಯನೂ ಈಕೆಯ ಮುಂದೆ ತಲೆತಗ್ಗಿಸಿದರಲ್ಲ ಈಕೆಯೇ ನಿಜವಾದ ದೇವತೆ ಅಂತ ಕೈಮುಗಿದು ತಲೆಬಾಗಿಸಿದರು. ಆ ಹುಟ್ಟುಡುಗೆಯಲ್ಲಿ ಕಣ್ಣೆತ್ತಿ ನೋಡುವ ಧೈರ್ಯ ಯಾವ ಗಂಡಸಿಗೆ ಬಂದೀತು, ಮರುವಾದೆಯ ಮುಸುಕಿನಲ್ಲಿ ಮುಖ ಕೆಳಗೆ ಹಾಕಿದವರು ಯಾರೂ ಮೇಲೇಳಲಿಲ್ಲ. ಚಣಕಾಲ ಗಲಿಬಿಲಿಗೊಂಡ ಒಡೆಕಾರನ ಹಿರೇಹೆಂಡ್ತಿ ಆಗತಾನೇ ಹೊಲೆದಿಟ್ಟಿದ್ದ ಕೌದಿಯೊಂದನ್ನು ತಂದು ಹೊದಿಸಿದಳು.
ಆ ಕೌದಿಯೋ ಬಗೆಬಗೆಯ ಚಿತ್ತಾರ ಚಿತ್ರಿಸಿದ ಹಾಗಿತ್ತು. ನೀಲಿ, ಕಡುಹಸಿರು, ತಿಳಿನೀಲಿ, ಬಿಳಿ, ಹಳದಿ, ಕೆಂಪು, ನೇರಳೆ, ಕಿತ್ತಳೆ, ಬಂಗಾರಬಣ್ಣದ ಬಟ್ಟೆಯ ಚೌಕಗಳನ್ನು ಹೊಂದಿಸಿ ಹೊಲಿದ ಕೌದಿಯದು. ಆದಿಯಲ್ಲಿ ಒಂದೇ ನೂಲು ತುದಿಮುಟ್ಟುವವರೆಗೂ ಬಣ್ಣಬಣ್ಣಗಳ ಜೋಡಿಸಿ, ನಾಲ್ಕೂ ದಿಕ್ಕಿಗೆ ಗುಬ್ಬಿಯಾಕಾರದ ಚಟ್ಟು ಹಚ್ಚಿದ ಆ ಕೌದಿಯೊಳಗೆ ಶಿವನ ಹೋಲುವ ಚಿತ್ರಬಿಡಿಸಲಾಗಿತ್ತು. ಹಳೆಯ ಬಟ್ಟೆಗಳ ಹೊಸ ಹೊದಿಕೆಯಲ್ಲಿ ಆಕಾಶಮಂಡಲದ ಚಿತ್ರಚಿತ್ತಾರದಂತೆ ಬಿಳಿದಾರದ ಗೆರೆಗಳಿದ್ದವು. ಈರುಳ್ಳಿಯ ಸಿಪ್ಪೆ ಸುಲಿದಂತೆ ಅಲ್ಲೇನಿದೆ… ಒಂದೊಂದೇ ಬಟ್ಟೆಯ ಪದರು ಬಿಚ್ಚಿದರೆ ಅದೇ ಬಯಲು. ಕೂಡಿಸಿ ಜೋಡಿಸಿದರೆ ಹೊಸ ಹೊದಿಕೆ. ನಿಜದೇವಿಯ ಚಿತ್ತ ಕೌದಿಯ ಚಲುವು ಕಾಣುವುದರಲ್ಲೇ ಆ ಬಿಡಾಡಿದೇವ ಅದೇ ಕೌದಿಯಲ್ಲಿ ಎಲ್ಲೋ ಇದ್ದಾನೆಂದು ಭಾವಿಸಿಕೊಂಡಳು. ಇನ್ನು ತೊಡಬಾರದು ಬಟ್ಟೆಯ, ದೇಹಕ್ಕೊಂದು ಸೊಗಸಿರುವಾಗ ತೊಡುವ ಬಟ್ಟೆಯ ಹಂಗೇಕೆ ಎಂದುಕೊಂಡಳು.
ತಲೆತಗ್ಗಿಸಿ ನಿಂತಿದ್ದ ಆ ಹಟ್ಟೀಕಾರನ ಬೆನ್ನುತಟ್ಟಿ ಎಚ್ಚರಿಸಿದಳು. ಅವನೋ ಥೇಟ್ ಎಳೆಮಗುವಿನಂತೆ ಹಾಲುಗಲ್ಲದ ಹುಡುಗನಂತೆ ಕಾಣಿಸಿದಾಗ ತನ್ನ ಭ್ರಮೆಗೆ ತಾನೇ ನಕ್ಕಳು.
**** **** ****
ಅಲ್ಲಿಂದ ಹೊರಟವಳು ಆ ಬೊಂತೆ(ಕೌದಿ)ಯನ್ನು ಹೊತ್ತುಕೊಂಡು ಕಲ್ಯಾಣದತ್ತ ನಡೆದಳು. ಮುಖದಲ್ಲಿ ದುಗುಡ, ನಡಿಗೆಯಲ್ಲಿ ವೇಗ, ಆ ಬಿಡಾಡಿ ದೇವರನ್ನ ಹುಡುಕುತ್ತ, ಎಳೆಮಕ್ಕಳ ಕಂಡಲ್ಲಿ ನಿಂತು ಮಾತಾಡಿಸಿ ತಾನೂ ಎಳೆಮಗುವಿನಂತೆ ಆಗುತ್ತಿದ್ದಳು. ಆಕೆ ಹೊದ್ದುಕೊಂಡಿದ್ದ ಬೊಂತೆಯ ಕಂಡು ಲೋಕವು ಬೊಂತಾದೇವಿ ಅಂತ ಆಕೆಯನ್ನು ಕರೆಯತೊಡಗಿತು. ಗೋದಾವರಿ ದಡದಲ್ಲೊಂದು ರಾತ್ರಿ ಒಂಟಿಯಾಗಿ ಅಡ್ಡಾಡುತ್ತಿದ್ದಾಗ ತಾನು ಬೇರೆ ಅಲ್ಲ ಆ ಬಿಡಾಡಿ ದೇವರೂ ಬೇರೆ ಅಲ್ಲವೇನೋ ಎಂಬುದು ಹೊಳೆಯಿತು. ಅವನು ಬೇರೆಲ್ಲೂ ಇಲ್ಲ ತನ್ನೊಳಗೆ ಇದ್ದಾನೆ… ಇರುವ ಎಂಬತ್ತನಾಲ್ಕು ಲಕ್ಷಜೀವರಾಶಿಗಳಲ್ಲೂ ಇದ್ದಾನೆ. ಆದರೆ ತನ್ನೊಳಗಿನ ದೇವರನ್ನು ಹುಡುಕಿಕೊಳ್ಳುವ ಬಗೆ ಯಾವುದೆಂದು ಚಿಂತಿತಳಾದಳು.
ಮಾರನೆಯ ದಿನ ಹೊಳೆದಾಟಿ ಕಲ್ಯಾಣಸೀಮೆಗೆ ಬಂದಾಗ ಆ ಬಯಲೊಳಗೆ ಸ್ವರ್ಗವೇ ನಾಚುವಂಥ ಚಲುವು ಕಂಡಳು. ಮೇವಿನ ಬಣವೆಗಳ ಸಾಲು, ಕೆರೆಕಟ್ಟೆ ಬಾವಿಗಳ ತಿಳಿನೀರು, ಹೊಲ-ಗದ್ದೆಗಳ ನಡುವೆ ಜೋಡೆತ್ತುಗಳ ಗೊರಸಿನ ಸದ್ದು, ಬಾಯಾರಿದವರಿಗೆ ತುಂಬಿಟ್ಟ ಅರವಟ್ಟಿಗೆಗಳು, ಅನ್ನಾಹಾರದ ಛತ್ರಗಳು, ಜನರ ನಡತೆಯೊಳಗಿನ ನಯವಿನಯಗಳು ಆಕೆಯ ಮನಸ್ಸನ್ನು ಸೂರೆಗೊಂಡವು. ಆ ದಿನ ಹೊರಕೇರಿಯಲ್ಲಿ ಮಲಗಿದಳು. ಮಾರನೆಯ ದಿನ ಊರ ನಡುವಿನ ಮಂಟಪದಲ್ಲಿ, ಮಗದೊಂದು ದಿನ ಅಗಸಿಬಾಗಿಲ ಮುಂದೆ, ಹೀಗೆ ಎಲ್ಲಿ ಬೇಕು ಅಲ್ಲೆಲ್ಲ ಮಲಗಿ, ಹಸಿವಾದಲ್ಲಿ ಉಂಡು, ಕಲ್ಯಾಣ ನಾಡಿನ ಜನರ ಮನದಲ್ಲೂ ಊರಹೊರಗಿನ ಬಯಲಲ್ಲೂ ಊರ ಒಳಗಿನ ಬಯಲಲ್ಲೂ ಆ ಬಿಡಾಡಿಯನ್ನು ಕಂಡಳು. ತಾನು ಬೇರೆ ಅಲ್ಲ ಆ ಬಿಡಾಡಿ ಬೇರಲ್ಲ ಎಂಬ ಅರಿವಿನ ದಿಟ್ಟಗಿತ್ತಿಯಾಗಿ ಆ ಬೊಂತೆಯಲ್ಲಿಯೇ ಕಲ್ಯಾಣಪುರ ಪ್ರವೇಶಿಸಿದಳು.
ಯಾರ ಮುಖದಲ್ಲೂ ಯಾರ ಬಗ್ಗೆಯೂ ತಾತ್ಸಾರವಿಲ್ಲ, ಕಸಗುಡಿಸುವ ಸತ್ಯಕ್ಕನೂ, ಕದಿರಕಾಯಕದ ರೆಮ್ಮೆವ್ವೆಯೂ, ಕಾಳವ್ವೆ, ರೇಚವ್ವೆ, ರೇವಮ್ಮ, ಕಾಮಮ್ಮ, ಲಕ್ಷ್ಮಮ್ಮ, ಸೋಮಮ್ಮ ಎಲ್ಲರೂ ಬೆರೆತು ಮಾತಾಡುವ ಪರಿಯ ಕಂಡು ಮನಸ್ಸು ಉಲ್ಲಸಿತವಾಯ್ತು. ಕೆರೆಗೆ ಹೋದಲ್ಲಿ, ಕಟ್ಟಿಗೆಗೆ ಹೋದಲ್ಲಿ, ಮೇವಿಗೆ ಹೋದಲ್ಲಿ, ನೀರು ತರಲು ಹೋದಲ್ಲೆಲ್ಲ ಆ ಶರಣೆಯರು ಮಾತಾಡುತ್ತಿದ್ದ ಮಾತುಗಳು ಅಕ್ಕರೆಯದಾಗಿರುತ್ತಿದ್ದವು. ಮಾಂಡವ್ಯಪುರದಲ್ಲಿ ನಿಜದೇವಿಯಾಗಿದ್ದಾಗ ಪುರೋಹಿತರು ಕಲಿಸಿದ್ದ ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟು ಆಗಮಗಳು ಯಾವ ಅನುಭವವನ್ನು ಕೊಡಲಿಲ್ಲವೋ ಆ ಎಲ್ಲದನ್ನೂ ಮೀರಿದ ಅನುಭವ ಶರಣ-ಶರಣೆಯರ ನಡೆ-ನುಡಿಯಲ್ಲಿ ಕಂಡಳು. ಅನುಭವಮಂಟಪದಲ್ಲಿ ಪಾಲ್ಗೊಂಡು ಖುಷಿಗೊಂಡಳು. ಇಲ್ಲಿ ಹೆಣ್ಣೆಂಬ ಕಾರಣಕ್ಕೆ ತಾತ್ಸಾರವಿಲ್ಲ, ಗಂಡೆಂಬ ಅಹಂಕಾರವಿಲ್ಲ. ವಿಧವೆಯರು ಮುಂಡನ ಮಾಡಿಸಿಕೊಳ್ಳುವುದಿಲ್ಲ, ಮುಟ್ಟಾದ ಹೆಂಗಸರು ಹೊರಗುಳಿಯುವುದಿಲ್ಲ. ಎಲ್ಲರ ಉಸಿರೊಳಗೂ ಮನದೊಳಗೂ ಆ ಬಿಡಾಡಿ ದೇವನೇ ನೆಲೆಸಿರುವದ ಕಂಡು ಕೆಲಕಾಲ ಮಾತಿಲ್ಲದ ಮೌನದಲ್ಲಿಯೇ ಅನುಭವಿಸಿದಳು.
ಅದೊಂದು ದಿವಸ ಕಲ್ಯಾಣವೇ ಸಿಂಗಾರಗೊಂಡಂತೆ ಶರಣರ ಮನೆಗಳು ತಳಿರತೋರಣ, ಸುಣ್ಣಬಣ್ಣದಿಂದ ಕಂಗೊಳಿಸುತ್ತಿದ್ದವು. ಶರಣೆಯರ ಮುಖದಲ್ಲಿ ಮಂದಹಾಸ, ಮನೆಗೊಂದು ಬುಟ್ಟಿ ರೊಟ್ಟಿಗಳನ್ನು ದಾಸೋಹಕ್ಕೆ ಕಳಿಸುತ್ತಿದ್ದರು. ಶರಣರು ಅರಕಳಿಯಾದ ಸಿಂಗಾರದ ಕೆಲಸಗಳನ್ನು ಪೂರ್ಣಗೊಳಿಸುವ ತರಾತುರಿಯಲ್ಲಿದ್ದರು. ಯಾರೋ ‘ಅಣ್ಣನವರು ಬರುತ್ತಿದ್ದಾರೆ’ ಎಂದು ಕೂಗಿದಾಗ ಬೊಂತಾದೇವಿಯ ಕಣ್ಣುಗಳು ಅರಳಿದವು.
ಆಡಂಬರವಿಲ್ಲದ, ಯಾವ ಬಿಗುಮಾನವೂ ಇಲ್ಲದ, ಪ್ರಧಾನಿಗಳಿಗೆ ಇರಬೇಕಾದ ಪದಾತಿದಳದ ಯಾವೊಬ್ಬ ಸೈನಿಕನ ಕಾವಲೂ ಇಲ್ಲದೇ ಅವರೊಬ್ಬರೇ ಶರಣರೊಳಗೆ ಒಂದಾಗಿ ಹರಳಯ್ಯನವರ ಮನೆಯತ್ತ ಹೊರಟಿದ್ದರು. ಆ ಕೇರಿಯ ಮುಖ್ಯರಸ್ತೆಯ ಒಂದು ಕಡೆ ಸೈನಿಕರು ದಂಡುದಂಡಾಗಿ ಶರಣರ ಮೇಲೆ ಕಣ್ಗಾವಲಿಟ್ಟು ನಿಂತಿದ್ದರು. ಇನ್ನೊಂದು ಕಡೆಯಲ್ಲಿ ಅಣ್ಣನವರನ್ನು ಕಾಣಬೇಕೆಂದು ಬಂದಿದ್ದ ಬೇರೆ ಊರುಗಳ ರೋಗಿಗಳು, ಮುದು-ತದುಕರು, ದೀನರು, ಕೈ-ಕಾಲು ಮುರುಟಿ ಹೋದ ಕುಷ್ಠರೋಗಿಗಳು, ಬಹಿಷ್ಕರಿಸಲ್ಪಟ್ಟ ಹೆಂಗಸರೂ, ಅನಾಥ ವಿಧವೆಯರು ನಿಂತಿದ್ದರು. ಬಸವಣ್ಣನವರ ಹಿಂದಿನಿಂದ ಶರಣರು ಬರುತ್ತಿದ್ದರು, ಎದುರಾದ ಶರಣರು ತಲೆಬಾಗಿ ಶರಣು ಹೇಳಿದರೆ ಬಸವಣ್ಣನವರೂ ಪ್ರತಿಯಾಗಿ ಶರಣುಶರಣಾರ್ಥಿ ಹೇಳುತ್ತಿದ್ದರು. ದೂರದಿಂದಲೇ ಕೈಮುಗಿಯುತ್ತಿದ್ದ ದೀನರನ್ನು ಕಂಡದ್ದೇ ಬಸವಣ್ಣನವರ ಮನ ಕನಲಿ ಹೋಗಿರಬೇಕು. ಅಣ್ಣನವರು ಅವರ ಹತ್ತಿರ ಹೋಗಿ ಅಂತಃಕರಣದಿಂದ ಒಬ್ಬೊಬ್ಬರನ್ನೂ ಮುಟ್ಟಿ ಮಾತಾಡಿಸುತ್ತಿದ್ದರು. ಆ ಗದ್ದಲದಲ್ಲಿ ಬೊಂತಾದೇವಿಗೆ ಸಾಕ್ಷಾತ್ ಬಿಡಾಡಿಯ ದಯಾಮೂರ್ತಿಯನ್ನು ಕಂಡ ಅನುಭವವಾಯ್ತು.
ಅದೇ ದಿವಸ ರಾತ್ರಿ ಅದೇನು ಘಟಿಸಿತೋ.. ಆ ಘನಕತ್ತಲೊಳಗೆ ಕಲ್ಯಾಣದ ಚಿತ್ರವೇ ಬದಲಾದಂತೆ ದೊಂದಿಯ ಬೆಳಕುಗಳು ಧಗಧಗ ಉರಿಯ ತೊಡಗಿದವು. ಹೆಂಗಸರ ಕಿರುಚಾಟ, ಎಳೆಮಕ್ಕಳ ಅಳು, ಮುದು-ತದುಕರ ರೋಧನ, ಶರಣರ ಮನೆಗಳಿಗೆ ಬೆಂಕಿ ಹಚ್ಚಲಾರಂಭಿಸಿದರು. ಬೊಂತೆಯೊಳಗೆ ಮುದುಡಿ ಕುಳಿತಿದ್ದ ಬೊಂತಾದೇವಿಗೆ ಏನು ನಡೆಯುತ್ತಿದೆ ಎಂಬುದು ಅರಿವಾಗುವ ಮೊದಲೇ ಶರಣರು ಬಯಲೊಳಗೆ ಬಿಡಾಡಿಯ ಕುರುಹು ಹುಡುಕುತ್ತಿದ್ದರು. ದಿನಕಳೆದು, ದಿನಬೆಳಗಾದಾಗ ಯಾರ ಚಿತ್ರಕ್ಕೂ ಸಿಕ್ಕದ ಕಲ್ಯಾಣದ ಚೌಕಟ್ಟು ತುಸುತುಸುವೆ ವಿರೂಪಗೊಂಡಂತೆ ತೋರತೊಡಗಿತು… ಕರೆದರೆ ಓ ಎಂಬಾತ ಬಿಡಾಡಿಯು ಯಾವ ಬಯಲಿನೊಳಗೆ ಅಡಗಿರುವನೋ ಎಂದು ಕಲ್ಯಾಣದ ರಾಜಬೀದಿಯಲ್ಲಿ, ಕೇರಿಗಳಲ್ಲಿ, ಮಹಾಮನೆಯಲ್ಲಿ, ಅನುಭವ ಮಂಟಪದಲ್ಲಿ, ಹಾಳುಗುಡಿಯಲ್ಲಿ, ಉರಿದುಬಿದ್ದ ಶರಣರ ಮನೆಗಳ ಬೂದಿಯ ರಾಶಿಯಲ್ಲಿ ಹುಡುಕತೊಡಗಿದಳು.
ಯಾರೋ ಒಬ್ಬ ಸೈನಿಕ ಬೊಂತಾದೇವಿಯನ್ನು ತಡೆದು ನಿಲ್ಲಿಸಿದ. ‘ಏ.. ಹುಚ್ಚಿ ಏನು ಹುಡುಕುತ್ತಿದ್ದಿಯಾ?’ ಎಂದು ಕೇಳಿದ. ‘ಮಮಕಾರದ ಮುತ್ತು ಕಳೆದುಕೊಂಡೆನು, ನೀನು ಕಂಡಿಯೇನಪ್ಪಾ, ನೆನ್ನೆ ದಿವಸ ಇದೇ ಈ ಹಾದಿಯಲ್ಲಿತ್ತು. ಮೊನ್ನೆ ಅಣ್ಣನವರ ಜೋಳಿಗೆಯಲ್ಲಿತ್ತು, ಅದಕ್ಕೂ ಮೊದಲು ಶರಣರ ಜಂಗಮ ದಾಸೋಹದ ಊಟದ ಬಟ್ಟಲಲ್ಲಿತ್ತು… ಆ ಮುತ್ತಿನ ಬೆಲೆ ನಿನ್ನ ಕೈಯೊಳಗಿನ ಅಲುಗಿಗೆ ತಿಳಿಯದು, ಕಂಡರೆ ಹೇಳಪ್ಪಾ ಭಂಟನೇ… ನಾನೊಂದು ಬಿಡಾಡಿಯ ಮುತ್ತು ಕಳೆದುಕೊಂಡೆನು’ ಎಂದು ಹಲುಬತೊಡಗಿದಳು. ಆ ಸೈನಿಕನಿಗೆ ಮತ್ಯಾರೋ ‘ವಚನದ ಗ್ರಂಥಗಳು ಇಲ್ಲಿವೆ ಬಾರೋ’ ಎಂದು ಕರೆದಾಗ ಅರಿವಿಲ್ಲದ ಬಿಡಾಡಿಯಂತೆ ಅತ್ತ ಓಡಿದ. ಬೊಂತಾದೇವಿ ಮಮಕಾರದ ಮುತ್ತನ್ನು ಹುಡುಕುತ್ತಲೇ ನಗುತ್ತಿದ್ದಳು.. ನಕ್ಕುನಕ್ಕು ಅಳುತ್ತಿದ್ದಳು.
ಕಲ್ಯಾಣದ ಶರಣ ಸಂದೋಹದಲ್ಲಿ ಬಂದು ಸೇರಿದ ದಿನದಿಂದ ಅಪರಿಚಿತಳಾಗಿ ಅರಿವು ಹುಡುಕುತ್ತಾ ಊರ ಒಳಗೂ, ಊರ ಹೊರಗೂ, ಘಟದೊಳಗೂ ಎಲ್ಲೆಲ್ಲೂ ಬಯಲಾಗಿದ್ದುಕೊಂಡು, ಬೊಂತೆಯೊಳಗೂ ಬಯಲಾದ ಆ ಶರಣೆ ಕಲ್ಯಾಣದಲ್ಲೇ ಕಾಲಕಳೆದಿದ್ದಳು. ಆ ಬೊಂತೆಯ ಕಾರಣದಿಂದ ನಿಜದೇವಿ ಶರಣರ ಬಾಯಲ್ಲಿ ಬೊಂತಾದೇವಿಯಾಗಿದ್ದಳು. ಶರಣರೆಲ್ಲ ಕಲ್ಯಾಣ ತೊರೆದು ಕದಳಿಗೂ, ಕಪ್ಪಡಿಸಂಗಮಕ್ಕೂ, ಉಳುವಿಗೂ ಹೊರಟು ನಿಂತಾಗ ಆ ನಿಜಶರಣೆ ಊರ ನಡುವಿನ ದೇವಾಲಯದ ಕಟ್ಟೆಯನ್ನೇರಿ ನಿಂತುಬಿಟ್ಟಳು. ತಾನು ಹೊದ್ದುಕೊಂಡಿದ್ದ ಬೊಂತೆಯನ್ನು ಆಕಾಶಕ್ಕೆ ಬಿಸಾಡಿದಳು.
‘ಹುಟ್ಟುಡುಗೆಯಲ್ಲಿಯೇ ಬಯಲುಗೊಂಡ ಬಿಡಾಡಿಯನ್ನು ಕೂಡುವೆನು… ಈಗ ಆ ಮಮಕಾರದ ಮುತ್ತು ಎಲ್ಲೆಡೆ ಪಸರಿಸಲಿ, ನಾಡಮೇಲೆ ಹೊರಟ ಮುತ್ತು ನಾಡಾಡಿಗಳ ತನುಮನದಲ್ಲಿ ಬಸವಬೆಳೆ ಬೆಳೆಯಲಿ’ ಎಂದು ತನಗೆ ತಾನೇ ಹೇಳಿಕೊಳ್ಳುತ್ತಾ, ಕೆಲವೊಮ್ಮೆ ಕಿರುಚುತ್ತಾ… ಕೆಲವೊಮ್ಮೆ ನಗುತ್ತಾ… ಅಲ್ಲಿಯೇ ನಿಂತಲ್ಲಿಯೇ ನಿಂತುಬಿಟ್ಟಳು. ಸಾಕ್ಷಾತ್ ಕಲ್ಯಾಣ ಪಟ್ಟಣದ ದೇವತೆಯ ಹಾಗೆ ಆಹೋರಾತ್ರಿ ನಿಂತವಳು ಆ ಹಾಳು ಸುರಿಯುತ್ತಿದ್ದ ನಗರದ ಅವಸ್ಥೆಯಂತೆ ಬೆಳಗಿನ ಹೊತ್ತಿಗೆ ಕುಸಿದುಬಿದ್ದಳು ಎಂಬಲ್ಲಿಗೆ ನಿಜಶರಣೆ ಬೊಂತಾದೇವಿ ಕಥನವು ಮುಕ್ತಾಯವಾದುದು.
Comments 19
Ravandur Shivakumar
Feb 7, 2019Heart touching story.
Karibasappa hanchinamani
Feb 7, 2019ಕಥೆ ಓದುತ್ತಾ ಓದುತ್ತಾ ಕಳೆದುಹೋದೆ, ಕಣ್ಣಲ್ಲಿ ನೀರು ಹರಿಯುತ್ತಿತ್ತು. ಬೊಂತಾತಾಯಿಯನ್ನು ಪರಿಚಯಿಸಿದ ಕಥೆಗಾರರಿಗೆ ನಮೋನಮಃ.
Jahnavi Naik
Feb 7, 2019ಬಿಡಾಡಿಯಂತೆ ತಿರುತಿರುಗಿ ಊರುಕೇರಿಗಳನ್ನು ಸುತ್ತಿದ ನಿಜದೇವಿಯ ಕತೆ ಮನಮುಟ್ಟುವಂತಿದೆ. ಆಕೆಯ ಮನಸ್ಥಿತಿ ಹೇಗಿರಬಹುದು? ಆ ಕಾಲಕ್ಕೆ ಓದುಗರನ್ನು ಒಯ್ದ ಸುಂದರ ಕತೆ.
ದಯಾಶಂಕರ ಬೈಲಹೊಂಗಲ
Feb 8, 2019ಜಾನಪದ ಕಥೆಯೊಂದನ್ನು ಓದಿದ ಅನುಭವ ನೀಡಿತು. ಬೊಂತಾ ಮರೆಯಲಾಗದ ಸಾಧಕಿ. ನನಗಂತೂ ಇವರ ಬಗ್ಗೆ ಏನೂ ಗೊತ್ತಿರಲಿಲ್ಲ. ಬಯಲು ಬ್ಲಾಗಿಗೂ, ಕಥೆಗಾರರಾದ ಮಹಾದೇವ ಹಡಪದರಿಗೂ ವಂದನೆಗಳು.
Jagannatha Patil
Feb 8, 2019ಬೊಂತಾದೇವಿ ಯಾಕೆ ನೇರವಾಗಿ ಕಲ್ಯಾಣಕ್ಕೆ ಹೋಗಲಿಲ್ಲ? ಅಕ್ಕಮಹಾದೇವಿ ತಾಯಿಗೆ ಒಬ್ಬ ಒಳ್ಳೆಯ ಸ್ನೇಹಿತೆ ಆಗುತ್ತಿದ್ದರೇನೋ? ಕಥೆ ಹಲವಾರು ಪ್ರಶ್ನೆಗಳನ್ನ ಹುಟ್ಟಿಸಿದರೂ ಬೊಂತಾ ತಾಯಿ ರಹಸ್ಯವಾಗೇ ಉಳಿದುಬಿಡುತ್ತಾರೆ.
Manju s.p
Feb 10, 2019ಕಣ್ಣಿಗೆ ಕಟ್ಟಿದಂತಿದೆ..
Vinay Kanchikere
Feb 10, 2019ಎಲ್ಲ ಮೋಹವ ಮೀರಿದ ತಾಯಿ ನಿಜದೇವಿಯ ಕಥನವನ್ನ ಉಣಬಡಿಸಿದ ಮಹಾದೇವ ಅವರಿಗೆ ಶರಣುಗಳು. ಬೊಂತಾದೇವಿಯನ್ನು ಚಿತ್ರಿಸಿದ ರೀತಿ ಚೆನ್ನಾಗಿದೆ. ಅಕ್ಕಮಹಾದೇವಿಯ ಅವಳಿ ರೂಪ ನೋಡಿದಂತಾಯ್ತು.
ಡಾ. ಪಂಚಾಕ್ಷರಿ ಹಳೇಬೀಡು
Feb 11, 2019ಶರಣೆ ಬೊಂತಾದೇವಿಯ ಕಥೆ ಈಗ ಚಿತ್ರ ನೋಡುತ್ತಿರುವಂತೆ ಭಾಸವಾಗುತ್ತದೆ. ಬಹಳ ಉತ್ತಮವಾದ ಬರಹ.
Dr. Dinesh M.P
Feb 11, 2019” ಹಳೆಯ ಬಟ್ಟೆಗಳ ಹೊಸ ಹೊದಿಕೆಯಲ್ಲಿ ಆಕಾಶಮಂಡಲದ ಚಿತ್ರಚಿತ್ತಾರದಂತೆ ಬಿಳಿದಾರದ ಗೆರೆಗಳಿದ್ದವು. ಈರುಳ್ಳಿಯ ಸಿಪ್ಪೆ ಸುಲಿದಂತೆ ಅಲ್ಲೇನಿದೆ… ಒಂದೊಂದೇ ಬಟ್ಟೆಯ ಪದರು ಬಿಚ್ಚಿದರೆ ಅದೇ ಬಯಲು. ಕೂಡಿಸಿ ಜೋಡಿಸಿದರೆ ಹೊಸ ಹೊದಿಕೆ. ನಿಜದೇವಿಯ ಚಿತ್ತ ಕೌದಿಯ ಚಲುವು ಕಾಣುವುದರಲ್ಲೇ ಆ ಬಿಡಾಡಿದೇವ ಅದೇ ಕೌದಿಯಲ್ಲಿ ಎಲ್ಲೋ ಇದ್ದಾನೆಂದು ಭಾವಿಸಿಕೊಂಡಳು. ಇನ್ನು ತೊಡಬಾರದು ಬಟ್ಟೆಯ, ದೇಹಕ್ಕೊಂದು ಸೊಗಸಿರುವಾಗ ತೊಡುವ ಬಟ್ಟೆಯ ಹಂಗೇಕೆ ಎಂದುಕೊಂಡಳು.” ಕೌದಿಯಲ್ಲೇ ಜೀವನದ ಅರ್ಥವನ್ನು ಹೆಣೆದಿದ್ದೀರಿ. ಮತ್ತೆ ಮತ್ತೆ ಓದುವಂತಿವೆ ಈ ಸಾಲುಗಳು.
Shyla soragavi
Feb 11, 2019ತಾಪಸಿಗಳೊಂದಿಗೆ ಕಲ್ಯಾಣದತ್ತ ಹೆಜ್ಜೆ ಹಾಕಿದ ನಿಜದೇವಿ, ಅಕ್ಕಮಹಾದೇವಿಯವರನ್ನು ಭೇಟಿಯಾದರೆ? ಬಸವಣ್ಣನವರು ಅವರನ್ನು ಕಾಶ್ಮೀರದ ಯುವರಾಣಿಯೆಂದು ಗುರುತಿಸಲಿಲ್ಲವೇ? ಇಂಥ ಕೆಲವು ಪ್ರಶ್ನೆಗಳು ಉಳಿದವು. ಆದರೂ ಕಥೆ ಕತೆಯಾಗಿ ಅದ್ಭುತ.
ಭೈರವ ಎಂ ಪೂಜಾರಿ
Feb 11, 2019ಕಥೆ ತುಂಬಾ ಚೆನ್ನಾಗಿದೆ. ಸಹಸ್ರಾರು ಶರಣರಲ್ಲಿ ಅವರ ಹೆಸರುಗಳೇ ನೆನಪಿರುವುದಿಲ್ಲ, ಇಂತಹ ಕತೆಗಳ ಮೂಲಕ ಪರಿಚಯಿಸಿದಕ್ಕೆ ಧನ್ಯವಾದಗಳು. ಕಥೆ ಕಣ್ಣೆದುರೇ ಕಟ್ಟಿದಂತಿದೆ.
ನಂದಕುಮಾರ ಹೂವಿನ ಹಡಗಲಿ
Feb 12, 2019ಕಳೆದು ಹೋದ ಶರಣರ ಕಥೆಯ ಕಣ್ಣೆದುರು ತೆರೆದಿಟ್ಟದ್ದಕ್ಕೆ ಶರಣು ಶರಣಾರ್ಥಿ.
Manjunath B
Feb 12, 2019ಓದಿದೆ ಸರ್
Giridhar Tonde
Feb 19, 2019ಬೊಂತಾದೇವಿಯ ಬಗೆಗೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ ಹುಟ್ಟಿಸುವ ಕಥೆ. ದೇವರ ಹುಡುಕಾಟದಲ್ಲಿ ತನ್ನನ್ನೇ ಹುಡುಕಿಕೊಂಡ ಶರಣೆಯರಲ್ಲಿ ಬೊಂತಾದೇವಿಯದು ಒಂದು ವಿಶಿಷ್ಟ ಕಥೆ.
Ravindra Desai
Feb 19, 2019ಮಕ್ಕಳಿಗಾಗಿ ಮಾತ್ರವಲ್ಲ ಪ್ರತಿಯೊಬ್ಬರೂ ಓದಲೇ ಬೇಕಾದ ಅದ್ಭುತ ಕತೆ, ಕತೆಗಾರರಿಗೆ ಶರಣು
kavya kalmane
Feb 19, 2019Wow, fascinating story. Beautiful narration.
suma Vinayak
Feb 27, 2019while reading I felt that I am that lady and started crying, really amazing, heart touching.
Jayadev Jawali
Feb 27, 2019ಎಲ್ಲಾ ಶರಣರನ್ನು ಹೀಗೆ ಕಥಾ ರೂಪದಲ್ಲಿ ಬರೆಯಬೇಕೆಂದು ಮಹಾದೇವ ಶರಣರಲ್ಲಿ ನಮ್ಮ ವಿನಂತಿ. ನಮ್ಮ ನೆಚ್ಚಿನ ಬಯಲು ಅವನ್ನೆಲ್ಲಾ ಸುಂದರ ಚಿತ್ರಗಳೊಂದಿಗೆ ಪ್ರಕಟಿಸಲೆಂದು ಪ್ರಾರ್ಥನೆ.
Sharan
Nov 6, 2020ಸೊಗಸಾಗಿದೆ.