ಪದ, ಬಳಕೆ ಮತ್ತು ಅರ್ಥ
ನಾವು ಕೆಲವು ಪದಗಳನ್ನು ಕಾಲಕ್ಕೆ ಅಥವಾ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥಗಳಲ್ಲಿ ಬಳಸುತ್ತೇವೆ. ಉದಾಹರಣೆಗೆ, ಗುರು, ಲಿಂಗ, ಜಂಗಮ. ಪ್ರಸಾದ, ಮುಂತಾದ ಪದಗಳ ಬಳಕೆಯನ್ನು ನೋಡಿ. ‘ಗುರು’, ಎಂಬ ಪದದ ಬಳಕೆ ಉಪನಿಷತ್ತುಗಳಲ್ಲಾದರೆ ಅವನು ಬ್ರಹ್ಮವಿದ್ಯೆಯನ್ನು ಬೋಧಿಸುವವನು ಎಂದರ್ಥ. ದ್ರೋಣಾಚಾರ್ಯರೂ ಗುರುಗಳೇ, ಆದರೆ ಅವರು ಧನುರ್ವಿದ್ಯೆಯನ್ನು ಬೋಧಿಸುವವರು. ವಚನ ಸಂದರ್ಭದಲ್ಲಿ ಗುರು ಎಂದರೆ ಕೇವಲ ಸಿದ್ಧಾಂತ ಮತ್ತು ಆಚಾರಗಳನ್ನು ಬೋಧಿಸುವವನು ಎಂದಷ್ಟೇ ಅಲ್ಲ, ಲಿಂಗದೀಕ್ಷೆ ಕೊಡುವವನು, ಲಿಂಗಾಂಗಸಾಮರಸ್ಯಕ್ಕೆ ಮಾರ್ಗದರ್ಶನ ನೀಡುವವನು ಎಂದರ್ಥ. ಉಪನಿಷತ್ತು ಮತ್ತು ಮಹಾಭಾರತಗಳಲ್ಲಿ ಗುರು ಬ್ರಾಹ್ಮಣ, ಆದರೆ ಲಿಂಗಾಯತರ ಗುರು ಬ್ರಾಹ್ಮಣನಲ್ಲ. ವಚನಗಳಲ್ಲಿ ಗುರು ಎಂಬ ಪದಕ್ಕೆ ಅರಿವು ಎಂಬ ಅರ್ಥವೂ ಇದೆ. ಅರಿವು ಎಂಬ ಪದಕ್ಕೆ ಕನಿಷ್ಠ ಎರಡು ಅರ್ಥಗಳಿವೆ. ಸಂಸಾರ ಬಂಧನದಿಂದ ತಪ್ಪಿಸಿಕೊಳ್ಳಬೇಕು ಎಂಬ ಅರಿವು ಅಥವಾ ನಿರ್ಧಾರ ಮೂಡಿದರೆ ಆ ಅರಿವೇ ಗುರು. ಮಾನವ ಗುರುಗಳು ಹೇಳಿದ್ದಕ್ಕಿಂತ ಹೆಚ್ಚಿನ ಪರಿಣಾಮ ಇಂಥ ಅರಿವಿನಿಂದ ಉಂಟಾಗುತ್ತದೆ. ಮತ್ತೊಂದು ಅರ್ಥದಲ್ಲಿ ಜಗತ್ತಿನ ಒಳಗೆ ಮತ್ತು ಹೊರಗೆ ವ್ಯಾಪಿಸಿರುವ ಚಿತ್ತು ಅಥವಾ ಅರಿವು. ಇದನ್ನು ಸಾಕ್ಷಾತ್ಕರಿಸಿಕೊಂಡವನು ಇತರರಿಗೆ ಗುರುವಾಗಬಲ್ಲ. ಈ ಅರಿವಿನ ಸಾಕ್ಷಾತ್ಕಾರ ಇಲ್ಲದೆಯೇ ಇತರರಿಗೆ ಬೋಧಿಸುವವನು ಈಜು ಬಾರದಿದ್ದರೂ ನೀರಲ್ಲಿ ಮುಳುಗುತ್ತಿರುವವರನ್ನು ರಕ್ಷಿಸಲು ಹೋಗುವವರಿಗೆ ಸಮಾನ, ಎನ್ನುತ್ತಾರೆ ಅಂಬಿಗರ ಚೌಡಯ್ಯ.
ದೇವಸ್ಥಾನಗಳಲ್ಲಿ ಪೂಜಾರಿ ಮತ್ತು ಮನೆಗಳಲ್ಲಿ ಭಕ್ತರು ದೇವರಿಗೆ ನೈವೇದ್ಯ ಮಾಡಿದ ಆಹಾರ ಎಂಬುದು ಪ್ರಸಾದದ ಸಾಂಪ್ರದಾಯಿಕ ಅರ್ಥ. ಆದರೆ ವಚನ ಸಂದರ್ಭಗಳಲ್ಲಿ ಅದಕ್ಕೆ ತುಂಬಾ ವ್ಯಾಪಕವಾದ ಅರ್ಥವಿದೆ. ಪ್ರತಿಯೊಬ್ಬ ಭಕ್ತನೂ/ಭಕ್ತಳೂ ಆಹಾರವನ್ನು ತನ್ನ ಇಷ್ಟಲಿಂಗಕ್ಕೆ ಅರ್ಪಿಸುವ ಮೂಲಕ ಅದನ್ನು ಪ್ರಸಾದೀಕರಿಸಿಕೊಳ್ಳಬಹುದು. ಕೇವಲ ಒಂದು ಮುಷ್ಟಿಯಷ್ಟು ಆಹಾರವಷ್ಟೇ ಪ್ರಸಾದ ಎಂಬುದು ಸಾಂಪ್ರದಾಯಿಕ ಅರ್ಥವಾದರೆ ವಚನಕಾರರ ಪ್ರಕಾರ ಇಡೀ ಊಟವೇ ಪ್ರಸಾದ; ಅಷ್ಟೇ ಅಲ್ಲ, ನಾವು ಕುಡಿಯುವ ನೀರು, ಸೇವಿಸುವ ಗಾಳಿ, ರುಚಿ, ವಾಸನೆ, ರೂಪಗಳೆಲ್ಲ ಪ್ರಸಾದದ ವಿವಿಧ ರೂಪಗಳು. ಚೆನ್ನಬಸವಣ್ಣನವರ ಪ್ರಕಾರ, ನಮ್ಮ ಬುದ್ಧೀಂದ್ರಿಯಗಳು, ಕರ್ಮೇಂದ್ರಿಯಗಳು, ಅಂತಃಕರಣಗಳೆಲ್ಲ ಶಿವನ ಪ್ರಸಾದ. ಇವುಗಳನ್ನೆಲ್ಲ ಒಳಗೊಂಡ ಕಾಯ ಸಹಾ ಪ್ರಸಾದವೇ. ಅದು ಪ್ರಸಾದಕಾಯ.
ಹೀಗೆ ನಾವು ಒಂದೇ ಪದವನ್ನು ವಿವಿಧ ಸಂದರ್ಭಗಳಲ್ಲಿ ಉಪಯೋಗಿಸಿದಾಗ ವಿವಿಧ ಅರ್ಥಗಳು ಹೊರಹೊಮ್ಮುತ್ತವೆ. ವಸ್ತುಸ್ಥಿತಿ ಹೀಗಿರುವಾಗ ಗುರು, ಪ್ರಸಾದ, ಲಿಂಗ ಇವೆಲ್ಲಾ ಬಸವಪೂರ್ವದಲ್ಲಿಯೇ ಇದ್ದವು, ಲಿಂಗಾಯತ ಧರ್ಮದಲ್ಲಿರುವುದೆಲ್ಲ ಹೊಸತು ಎನ್ನುವುದು ತಪ್ಪು ಎಂದು ಕೆಲವರು ವಾದಿಸುತ್ತಾರೆ. ಅಂಥವರ ಸಂಖ್ಯೆ ಕಡಿಮೆಯೇನಲ್ಲ. ಅವರ ವಾದ ತಪ್ಪು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮತ್ತೆ ಕೆಲವು ಉದಾಹರಣೆಗಳನ್ನು ಪರಿಶೀಲಿಸೋಣ.
ರುದ್ರ: ಋಗ್ವೇದದ ಹತ್ತನೆಯ ಮಂಡಲದಲ್ಲಿ ‘ರುದ್ರ’ ಎಂಬ ಪದ ಬಳಕೆಯಾಗಿದೆ. ಅಲ್ಲಿ ಅನೇಕ ದೇವರುಗಳಲ್ಲಿ ಅವನೂ ಒಬ್ಬ. ಅವನು ಭಯಂಕರ. ಸಿಡಿಲು ಗುಡುಗುಗಳನ್ನು ಸೃಷ್ಟಿಸುತ್ತಾನೆ, ಹಸುಗಳನ್ನು ಕೊಲ್ಲುತ್ತಾನೆ. ಇದೇ ಋಗ್ವೇದದ ಮುಂದಿನ ಭಾಗಗಳಲ್ಲಿ ಅವನಿಗೆ ಬೇರೆ ಕೆಲವು ವಿಶೇಷಣಗಳನ್ನು ಅಂಟಿಸಲಾಗಿದೆ. ಅವನು ಶಿವ (ಒಳ್ಳೆಯವನು), ಭೇಷಜ (ರೋಗಗಳನ್ನು ಗುಣಪಡಿಸುವವನು), ಇತ್ಯಾದಿ. ಈ ಪದಪ್ರಯೋಗಗಳಿಂದ ಪ್ರೇರಿತರಾದ ಕೆಲವು ಪಂಡಿತರು, ‘ಶಿವನೇಕೋ ರುದ್ರನದ್ವಿತೀಯ’ ಎಂಬ ಬಸವಣ್ಣನವರ ವಚನವೊಂದರ (1/528) ನೆರವು ಪಡೆದು, ‘ಋಗ್ವೇದವೇ ಶಿವ ಮತ್ತು ರುದ್ರ ಒಬ್ಬನೇ ದೇವನ ಎರಡು ಹೆಸರುಗಳು ಎಂಬ ಮಾತನ್ನು ಒಪ್ಪಿಕೊಂಡಿದೆ, ಆ ಮಾತನ್ನು ಬಸವಣ್ಣನವರೂ ಬಳಸಿದ್ದಾರೆ, ಅಂದರೆ, ಬಸವಣ್ಣನವರ ಮಾತು ಋಗ್ವೇದದಷ್ಟು ಹಳೆಯದು ಅಥವಾ ಋಗ್ವೇದದ ಏಕದೇವತಾವಾದವನ್ನೇ ಬಸವಣ್ಣ ಪುನರುಚ್ಚರಿಸುತ್ತಿದ್ದಾರೆ’ ಎಂದು ವಾದಿಸುತ್ತಾರೆ. ಎಂದರೆ, ಲಿಂಗಾಯತ ಧರ್ಮ ಋಗ್ವೇದದಷ್ಟು ಹಳೆಯದು ಎಂಬುದು ಅವರ ತೀರ್ಮಾನ.
ಹೀಗೆ ವಾದಿಸುವ ಕೆಲವರು ಅರ್ಥವನ್ನು ಗಮನಿಸದೆ ಕೇವಲ ಮೇಲ್ನೋಟಕ್ಕೆ ಕಾಣುವ ಪದಪ್ರಯೋಗವನ್ನಷ್ಟೇ ಗಮನಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಅವರು ಗಮನಿಸಬೇಕಾದುದನ್ನು ಗಮನಿಸುತ್ತಿಲ್ಲವಾದುದರಿಂದ ಇಂಥ ವಾದಗಳು ಹುಟ್ಟಿಕೊಳ್ಳುತ್ತವೆ. ‘ರುದ್ರ’ ಎಂಬ ಪದ ಋಗ್ವೇದದಲ್ಲಿ ಅನೇಕ ದೇವರುಗಳಲ್ಲಿ ಒಬ್ಬನಾದ ದೈವಕ್ಕೆ ಅನ್ವಯಿಸುತ್ತದೆ. ಬಸವಣ್ಣ ಅವನನ್ನು ‘ಏಕೋದೇವ’ ಎಂದು ಕರೆಯುವ ಮೂಲಕ ಋಗ್ವೇದದ ರುದ್ರನೇ ಬೇರೆ, ಲಿಂಗಾಯತರ ರುದ್ರನೇ ಬೇರೆ ಎಂದು ಸ್ಪಷ್ಟಪಡಿಸುತ್ತಾರೆ. ಋಗ್ವೇದದಲ್ಲಿ ರುದ್ರನನ್ನು ಶಿವ ಎಂದು ಕರೆದಿದ್ದರೂ ರುದ್ರ ಒಬ್ಬ ವೈದಿಕ ದೇವನೇ ಹೊರತು ವಚನಕಾರರ ಶಿವನಲ್ಲ. ವಚನಕಾರರ ಶಿವ ಸೃಷ್ಟಿ, ಸ್ಥಿತಿ, ಲಯ, ತಿರೋಧಾನ ಮತ್ತು ಅನುಗ್ರಹಗಳನ್ನು ಮಾಡುವವನು; ಋಗ್ವೇದದ ರುದ್ರ-ಶಿವನಿಗೆ ಈ ಯಾವ ಕ್ರಿಯೆಗಳೂ ಇಲ್ಲ. ಅಲ್ಲದೆ, ಋಗ್ವೇದದ ರುದ್ರನ ವರ್ಣನೆಗಳು ನಮ್ಮಲ್ಲಿ ಭಯೋತ್ಪಾದನೆ ಮಾಡುತ್ತವೆ; ಆದರೆ ವಚನಕಾರರ ಶಿವನ ವರ್ಣನೆ ಭಕ್ತಿಗೆ ಪೂರಕವಾದುವು. ಅಷ್ಟೇ ಅಲ್ಲ, ಋಗ್ವೇದವು ರುದ್ರನನ್ನು ಲಿಂಗ ಎಂದು ಕರೆದಿಲ್ಲ ಎಂಬುದೂ ಗಮನಾರ್ಹ. ಆದುದರಿಂದ, ಋಗ್ವೇದದಲ್ಲಿ ಲಿಂಗಾಯತವನ್ನು ಹುಡುಕುವುದು ಹತಾಶೆಯ ಪ್ರಯತ್ನ. ಕೆಲವರಿಗೆ ಈ ವ್ಯತ್ಯಾಸ ಗೊತ್ತಿದ್ದರೂ ಇಂಥ ವಾದವನ್ನೇ ಉದ್ದೇಶಪೂರ್ವಕವಾಗಿ ಮುಂದು ಮಾಡುತ್ತಾರೆ. ಓದುಗರನ್ನು ವಂಚಿಸುವ ಈ ಕ್ರಮವನ್ನು ನಾವು ಶಬ್ದಸೂತಕ ಎನ್ನಬಹುದು. ಇಂಥ ಶಬ್ದಸೂತಕ ಮಾಡುವುದಕ್ಕೆ ಕೇವಲ ಪಾಂಡಿತ್ಯವಿದ್ದರೆ ಸಾಲದು, ಅದಕ್ಕೆ ತಕ್ಕ ಕೌಟಿಲ್ಯವೂ ಬೇಕು.
ಪ್ರಾಯಶಃ ಈ ಶಬ್ದಸೂತಕದಿಂದ ಪ್ರೇರಿತರಾದ ಒಬ್ಬ ಯತಿಗಳು ‘ಶಿವಾರಾಧಕರಾದ ಲಿಂಗಾಯತರು ಹಿಂದುಗಳು ಏಕಲ್ಲ?’ ಎಂದು ಪ್ರಶ್ನಿಸುತ್ತಾರೆ. ಒಂದು ವೇಳೆ ಶಿವ ಎಂದರೆ ಋಗ್ವೇದದ ಶಿವನಲ್ಲ, ಎಂದರೂ ಆ ಪದಕ್ಕೆ ಬೇರೆ ಅರ್ಥವಿರುವುದನ್ನು ನಾವು ಗಮನಿಸಬೇಕು. 1. ಶಿವ ಅಥವಾ ರುದ್ರ ಎಂದರೆ ತ್ರಿಮೂರ್ತಿಗಳಲ್ಲಿ ಒಬ್ಬ ಎಂಬ ಅರ್ಥದಲ್ಲಿ ತೆಗೆದುಕೊಂಡರೆ, ಆಗಲೂ ಆ ಶಿವ ಲಿಂಗಾಯತರ ಶಿವ ಆಗುವುದಿಲ್ಲ. ತ್ರಿಮೂರ್ತಿಗಳಲ್ಲೊಬ್ಬನಾದ ಶಿವ ಕೇವಲ ಲಯ ಮಾಡುತ್ತಾನೆ, ಸೃಷ್ಟಿ ಅಥವಾ ಸ್ಥಿತಿ ಮಾಡುವುದಿಲ್ಲ. ಲಿಂಗಾಯತರ ಶಿವ ಮೂರೂ ಕಾರ್ಯಗಳನ್ನು ಮಾಡುವವನು. ಅಂದರೆ, ಕೆಲವು ಹಿಂದೂಗಳಿಗೆ ಪೂಜ್ಯನಾದ, ತ್ರಿಮೂರ್ತಿಗಳಲ್ಲೊಬ್ಬನಾದ ಶಿವ ಲಿಂಗಾಯತರಿಗೆ ಪೂಜ್ಯನಲ್ಲ. 2. ಒಂದು ವೇಳೆ, ಅವನು ಶುದ್ಧ ಶೈವರ ಶಿವನಾದರೂ ಲಿಂಗಾಯತರು ಅವನ ಆರಾಧಕರಲ್ಲ. ಶುದ್ಧ ಶೈವರ ಶಿವ ಕೈಲಾಸವಾಸಿ, ಹೆಂಡತಿ-ಮಕ್ಕಳನ್ನು ಉಳ್ಳವನು, ಲಿಂಗಾಯತರ ಶಿವ ಸರ್ವಾಂತರ್ಯಾಮಿ, ಹೆಂಡತಿ ಮಕ್ಕಳನ್ನುಳ್ಳವನಲ್ಲ; ಶುದ್ಧ ಶೈವರು ಗಣಪತಿ, ಪಾರ್ವತಿ, ಕುಮಾರ ಮುಂತಾದವರನ್ನು ಪೂಜಿಸಿದರೆ ಅದು ಲಿಂಗಾಯತರಿಗೆ ವರ್ಜ್ಯ. ಕೆಲವು ವೇಳೆ ವಚನಕಾರರು ಶಿವನನ್ನು ಗೌರೀವಲ್ಲಭ, ನಂದಿವಾಹನ, ಪನ್ನಗಭೂಷಣ, ಚಂದ್ರಚೂಡ ಎಂದು ಕರೆದಿರುವುದುಂಟು. ಅದು ಅಭ್ಯಾಸಬಲದಿಂದಲೋ, ಶಿವನಿಗೆ ಆ ಗುಣಗಳುಂಟು ಎಂದು ನಂಬಿದವರೊಡನೆ ಮಾತಾಡುವಾಗಲೋ ಅವರು ಆ ಪದಗಳನ್ನು ಬಳಸಿದ್ದಾರು. ಆದರೆ ಅವರು ಶಿವನಿಗೆ ಹೆಂಡತಿ ಮಕ್ಕಳು ಇದ್ದಾರೆಂಬುದನ್ನಾಗಲಿ, ಅವನು ಗಜಚರ್ಮಾಂಬರಧಾರಿ, ಅಸುರರ ರುಂಡ ಮಾಲಾಧಾರಿ ಎಂದು ನಂಬಿದವರಲ್ಲ. ವಾಸ್ತವವಾಗಿ, ಅವರು ಶಿವ, ಪರಶಿವ ಮುಂತಾದ ಪದಗಳ ಬದಲು ಲಿಂಗ ಎಂಬ ಪದವನ್ನು ಬಳಸುತ್ತಾರೆ.
ಬಸವಪೂರ್ವ ಯುಗದ ಕಲ್ಬರಹದಲ್ಲಿ (ಕ್ರಿ.ಶ.979ರಲ್ಲಿ) ‘ಅಷ್ಟಾವರಣಸಂಪನ್ನರುಂ ಋಗ್ಯಜುರ್ವೇದ…’ ಎಂಬ ಮಾತು ಬರುತ್ತದೆ. ನಮ್ಮ ಪಂಡಿತರಿಗೆ ಈ ಪದಗುಚ್ಛದ ಬಳಕೆಯೇ ಸಾಕು, ಬಸವಪೂರ್ವಯುಗದಲ್ಲಿ ವೀರಶೈವ/ಲಿಂಗಾಯತ ಧರ್ಮ ಇತ್ತು ಎಂದು ಸಾಧಿಸಲು. ಹರ್ಡೇಕರ್ ಮಂಜಪ್ಪನವರೂ ಡಾ.ಎಂ.ಎಂ.ಕಲಬುರ್ಗಿಯವರೂ ಈ ಕಲ್ಬರಹದಲ್ಲಿ ಬಳಸಲಾಗಿರುವ ಲಿಪಿ ಬಸವಪೂರ್ವ ಕಲ್ಬರಹದ ಲಿಪಿಯಂತಿಲ್ಲ, ಆದುದರಿಂದ ಇದು ಸಂಶಯಾತೀತವಲ್ಲ, ಎಂದು ತೀರ್ಮಾನಿಸಿದ್ದಾರೆ. ಇವರ ತೀರ್ಮಾನದ ಜೊತೆಗೆ ನನ್ನ ವಾದ ಹೀಗಿದೆ. ಇಲ್ಲಿ ‘ಅಷ್ಟಾವರಣಸಂಪನ್ನರುಂ’ ಎಂಬ ವಿಶೇಷಣ ಯಾರಿಗೆ ಅನ್ವಯಿಸುತ್ತದೆ, ಅದರ ಅರ್ಥವೇನು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವೇ ಹೊರತು, ಆ ಮಾತಿನ ಬಳಕೆ ಅಲ್ಲ. 1. ‘ಅಷ್ಟಾವರಣಸಂಪನ್ನರುಂ’ ಎಂಬ ಪದ ದತ್ತಿಯನ್ನು ಸ್ವೀಕರಿಸುವ ಸ್ಥಾನಿಕ ಆಚಾರ್ಯ ಕಾಳಾಮುಖ ಗುರುವಿಗೆ ಅನ್ವಯಿಸುವುದರಿಂದ, ಕಾಳಾಮುಖ ಗುರುವೇ ಅಷ್ಟಾವರಣಸಂಪನ್ನನಾದ ಗುರು ಎಂಬ ವಾದವನ್ನು ಒಪ್ಪಿಕೊಳ್ಳಬೇಕು; 2. ಇಲ್ಲದಿದ್ದರೆ, ದತ್ತಿ ಸ್ವೀಕರಿಸಿದವನು ಲಿಂಗಾಯತ/ವೀರಶೈವ ಎಂಬುದನ್ನು ಒಪ್ಪಿಕೊಳ್ಳಬೇಕು. ದತ್ತಿ ಸ್ವೀಕರಿಸಿದವನು ಲಿಂಗಾಯತ/ ವೀರಶೈವ ಗುರು ಎಂಬುದನ್ನು ಒಪ್ಪಿಕೊಳ್ಳಲು ಅವನು ಬ್ರಾಹ್ಮಣನೆಂಬುದೂ ವೇದಗಳಲ್ಲಿ ಪಾರಂಗತವಾಗಿದ್ದವನು ಎಂಬ ಮಾತೂ ಅಡ್ಡಬರುತ್ತದೆ. ಅಲ್ಲದೆ, ಬಸವಣ್ಣನವರಿಂದಾಗಿ ಲಿಂಗಾಯತರು ದೇವಸ್ಥಾನಗಳಿಗೆ ಹೋಗಬಾರದು, ದೇವಸ್ಥಾನಗಳನ್ನು ನಿರ್ಮಿಸಬಾರದು, ನಿರ್ಮಿಸಿದ ದೇವಸ್ಥಾನಗಳಿಗೆ ದತ್ತಿ ಕೊಡಬಾರದು, ಎಂಬ ನಿಯಮ ಜಾರಿಗೆ ಬಂದಿತ್ತು. ಆದುದರಿಂದ ದತ್ತಿ ಪಡೆದ ಆಚಾರ್ಯ ವೀರಶೈವ/ಲಿಂಗಾಯತನಲ್ಲ, ಕಾಳಾಮುಖ ಸ್ಥಾನಾಚಾರ್ಯ ಎಂಬ ಮಾತು ಗಟ್ಟಿಯಾಗುತ್ತದೆ.
ಅದೇ ರೀತಿ, ಲಿಂಗಕಲ್ಪನೆಗಳಲ್ಲಿಯೂ ವ್ಯತ್ಯಾಸವಿದೆ. ಕೆರೆಯ ಪದ್ಮರಸ ತನ್ನ ದೀಕ್ಷಾಬೋಧೆಯಲ್ಲಿ ಐದು ಬಗೆಯ ಲಿಂಗಗಳನ್ನು ಪ್ರಸ್ತಾಪಿಸುತ್ತಾನೆ. ಅವೆಂದರೆ: ಸ್ವಯಂಭೂ ಲಿಂಗ, ದೇವಮಾನವರು ಪ್ರತಿಷ್ಠಾಪಿಸಿದ ಲಿಂಗ, ಬಾಣಲಿಂಗ, ಪ್ರಾಣಲಿಂಗ, ಚಲಲಿಂಗ ಅಥವಾ ಚರಲಿಂಗ. ಪದ್ಮರಸ ಮುಂದುವರಿದು ಹೀಗೆ ಹೇಳುತ್ತಾನೆ: 1. ಪಾಶುಪತರು ಚಲಲಿಂಗವನ್ನು ಪೂಜಿಸುತ್ತಾರೆ, ಇಷ್ಟಲಿಂಗವನ್ನಲ್ಲ; ಆದುದರಿಂದ ಪಾಶುಪತರು ಇಷ್ಟಲಿಂಗಾರಾಧಕರಾದ ವೀರಶೈವ/ಲಿಂಗಾಯತರಲ್ಲ. 2. ಈ ಐದು ಜನ ತಮಗೂ ಲಿಂಗಕ್ಕೂ ಭೇದವಿದೆ ಎನ್ನುವುದರಿಂದ ಅವರಿಂದ ಪ್ರಸಾದ ಪಡೆಯಬಾರದು. ಆದುದರಿಂದ, ಚರ(ಚಲ)ಲಿಂಗವೇ ಇಷ್ಟಲಿಂಗ ಎಂಬ ವಾದವೂ, ಪಾಶುಪತರೇ ವೀರಶೈವರು ಎಂಬ ವಾದವೂ ಬಿದ್ದು ಹೋಗುತ್ತವೆ.
ಮತ್ತೊಂದು ಪಾಂಡಿತ್ಯಪೂರ್ಣ ಸುಳ್ಳು ಹೀಗಿದೆ: “ಪಾಶುಪತರ ಬಗ್ಗೆ ಮಹಾಭಾರತದಲ್ಲಿ ಪ್ರಸ್ತಾಪವಾಗಿದೆ. ಪಾಶುಪತರೇ ವೀರಶೈವರು”.
ಮಹಾಭಾರತದಲ್ಲಿ ಪಾಶುಪತರ ಬಗ್ಗೆ ಉಲ್ಲೇಖವಿರುವುದು ನಿಜ. ಆದರೆ ಪಾಶುಪತರೇ ವೀರಶೈವರು/ಲಿಂಗಾಯತರು ಎನ್ನಲು ಯಾವ ಆಧಾರವೂ ಇಲ್ಲ. ಆಗಿನ ಕಾಲದ ಪಾಶುಪತರು ಜಾತಿಭೇದವನ್ನು, ಯಜ್ಞಯಾಗಾದಿಗಳನ್ನು, ಬಹುದೇವತಾವಾದವನ್ನು ನಿರಾಕರಿಸಿದ್ದರೆ? ಕಾಯಕ-ದಾಸೋಹಕ್ಕೆ ಒತ್ತು ನೀಡಿದ್ದರೆ? ಈ ಪ್ರಶ್ನೆಗಳಿಗೆ ಮಹಾಭಾರತದಲ್ಲಿ ಹೌದು ಅಥವಾ ಇಲ್ಲ ಎಂಬ ಖಚಿತವಾದ ಉತ್ತರ ಸಿಕ್ಕುವುದಿಲ್ಲ. ಖಚಿತವಾದ ಉತ್ತರ ಸಿಕ್ಕದಿದ್ದರೆ, ಪಾಶುಪತರು ವೀರಶೈವರು/ಲಿಂಗಾಯತರು ಎಂದು ನಿರ್ಧರಿಸಲು ನಮಗೆ ಯಾವ ಖಚಿತ ಆಧಾರವೂ ಇಲ್ಲದಂತಾಗುತ್ತದೆ. ಪಾಶುಪತರೇ ವೀರಶೈವರು ಎಂದು ಹೇಳುವಷ್ಟು ಧೈರ್ಯ ಇರುವುದು ಪಾಶುಪತ ಎಂಬುದರ ಅರ್ಥ ಗೊತ್ತಿಲ್ಲದವರಿಗೆ ಸಾಧ್ಯ.
ನಮಗೆ ಸಿಕ್ಕುವ ಅತ್ಯಂತ ಹಳೆಯ ಪಾಶುಪತ ಗ್ರಂಥ ಎಂದರೆ ನಕುಲೀಶನ ‘ಪಾಶುಪತ ಸೂತ್ರಂ’ ಎಂಬ ಗ್ರಂಥಕ್ಕೆ ಕೌಂಡಿನ್ಯ ಋಷಿ ಬರೆದಿರುವ ವ್ಯಾಖ್ಯಾನ. ಅದರಲ್ಲಿ ದೀಕ್ಷೆ ಪಡೆದವರು ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ, ಎನ್ನಲಾಗಿದೆ. ಬ್ರಾಹ್ಮಣರಿಗೆ ಮಾತ್ರ ದೀಕ್ಷೆ; ಅವರು ಸ್ತ್ರೀಯರೊಡನೆ ಮಾತನಾಡಬಾರದು; ಸ್ತ್ರೀಯರಿಗೆ ದೀಕ್ಷೆಯಿಲ್ಲ; ಪಾಶುಪತರು ಸ್ಮಶಾನಗಳಲ್ಲಿ ವಾಸಿಸಬೇಕಾಗುತ್ತದೆ; ಹುಚ್ಚರಂತೆ ನಟಿಸಬೇಕಾಗುತ್ತದೆ; ಇತ್ಯಾದಿ. ಇವೆಲ್ಲವೂ ಲಿಂಗಾಯತ ವಿರೋಧೀ ನಿಯಮಗಳಾದುದರಿಂದ ಪಾಶುಪತರು ಲಿಂಗಾಯತರಲ್ಲ.
ಪಾಶುಪತ ಸೂತ್ರಂ ಗ್ರಂಥದಲ್ಲಿ ‘ಲಿಂಗಧಾರೀ’ ಎಂಬ ಪದದ ಬಳಕೆಯಾಗಿದೆ. ಆದರೆ ಇಷ್ಟಲಿಂಗಧಾರಿ ಅಥವಾ ಚರಲಿಂಗಧಾರಿ ಎಂಬುದು ಈ ಪದದ ಅರ್ಥವಲ್ಲ. ಅಲ್ಲಿ ಲಿಂಗ ಎಂದರೆ ಲಕ್ಷಣ; ಭಸ್ಮಸ್ನಾನ, ಸ್ಥಾವರಲಿಂಗಪೂಜೆ, ನಿರ್ಮಾಲ್ಯ (ಲಿಂಗದ ಮೇಲಿನ ಮಾಲೆಯನ್ನು ತೆಗೆದುಕೊಂಡು ಧರಿಸುವುದು) ಮುಂತಾದ ಲಕ್ಷಣ(ಲಿಂಗ)ಗಳನ್ನು ಉಳ್ಳವನು ಲಿಂಗಧಾರಿ. ಒಂದು ವೇಳೆ ಲಿಂಗಧಾರಿ ಎಂದರೆ ಇಷ್ಟಲಿಂಗಧಾರಿ ಅಥವಾ ಚರಲಿಂಗಧಾರಿ ಎಂದಾಗಿದ್ದರೆ, ಅದನ್ನು ಯಾರು ಕೊಡುತ್ತಾರೆ, ಅದನ್ನು ಪಡೆದವನು ಆ ಲಿಂಗಕ್ಕೆ ಯಾವ ರೀತಿ ಪೂಜೆ ಮಾಡಬೇಕು, ಅವನ ಇತರ ನಡಾವಳಿ ಹೇಗಿರಬೇಕು ಮುಂತಾದ ವಿವರಣೆಗಳಿರಬೇಕಾಗಿತ್ತು. ಆದರೆ ಇಡೀ ಗ್ರಂಥದಲ್ಲಿ ಈ ಬಗ್ಗೆ ಒಂದಕ್ಷರದ ಪುರಾವೆಯೂ ಇಲ್ಲ.
ಅದೇ ರೀತಿ, ಮತ್ತೊಬ್ಬ ಪಂಡಿತರು ಜಂಗಮ ಎಂಬ ಪದ ಬಹಳ ಹಿಂದೆಯೇ ಪ್ರಯೋಗವಾಗಿದೆ, ಆದುದರಿಂದ ಬಸವಪೂರ್ವದಲ್ಲಿಯೇ ವೀರಶೈವ/ಲಿಂಗಾಯತ ಧರ್ಮ ಇತ್ತು ಎಂದು ವಾದಿಸುತ್ತಾರೆ. ಇಲ್ಲಿಯೂ ಅಷ್ಟೇ. ಯಾವ ಅರ್ಥದಲ್ಲಿ ಜಂಗಮ ಪದ ಬಳಕೆಯಾಗಿದೆ ಎಂಬುದನ್ನು ಅವರು ಪರೀಕ್ಷಿಸುವುದಿಲ್ಲ. ಬಸವಪೂರ್ವ ಜಂಗಮರು ಮಾಂಸಭಕ್ಷಕರಾಗಿದ್ದರೆ ಎಂಬುದು ಒಂದು ಮುಖ್ಯ ಪ್ರಶ್ನೆ. ಸಿರಿಯಾಳ ಮತ್ತು ಚೆಂಗಳೆಯರ ಏಕ ಮಾತ್ರ ಪುತ್ರನ ತಲೆಯ ಮಾಂಸದ ಅಡುಗೆಯನ್ನು ಬಡಿಸಲು ಒಬ್ಬ ಜಂಗಮ ಕೇಳುತ್ತಾನೆ. ಆ ದಂಪತಿಗಳಿಗೆ ‘ಜಂಗಮರು ನರಭಕ್ಷಕರೆ?’ ಎಂಬ ಶಂಕೆಯೇ ಬರಲಿಲ್ಲ. ಮತ್ತೊಬ್ಬ ಜಂಗಮ ಸಿಂಧುಬಲ್ಲಾಳನ ಪತ್ನಿಯನ್ನೇ ಕೇಳಿದ. ಆಗಲೂ ಸಿಂಧು ಬಲ್ಲಾಳನಿಗೆ ಈ ಬೇಡಿಕೆ ಆಘಾತವನ್ನುಂಟು ಮಾಡಲಿಲ್ಲ. ಬಸವಪೂರ್ವ ಜಂಗಮರಿಗೆ ಯಾವುದೇ ಕಾಯಕ ಇರಲಿಲ್ಲ. ಬಸವಣ್ಣನವರು ‘ಜಂಗಮ’ ಪದಕ್ಕೆ ಮೂರು ಮುಖ್ಯ ಅರ್ಥಗಳನ್ನು ಕೊಟ್ಟರು. 1. ಪರಮಾತ್ಮ (ಲಿಂಗ) ಸರ್ವಸಮಾವೇಶಿಯಾದ ಕಾರಣ ಅವನಿಗೆ ಚಲಿಸಲು ಜಾಗವೇ ಇಲ್ಲ, ಸಾಧ್ಯವೂ ಇಲ್ಲ. ಅವನು ಅಚಲ ಅಥವಾ ಸ್ಥಾವರ ಲಿಂಗ (ಗುಡಿಯಲ್ಲಿರುವ ಸ್ಥಾವರ ಲಿಂಗ ಎಂಬುದು ಇದರ ಅರ್ಥವಲ್ಲ). ಅದೇ ಸರ್ವಸಮಾವೇಶಿ ಲಿಂಗ ಪ್ರತಿ ಜೀವಿಯಲ್ಲಿಯೂ ಅದರ ಆತ್ಮದ ರೂಪದಲ್ಲಿ ಇರುವುದರಿಂದ ಹಾಗೂ ಜೀವಿಗಳು ಚಲಿಸುವುದರಿಂದ, ಚಲಿಸುವ ಜೀವಿಗಳೆಲ್ಲ ಚಲಿಸುವ ಲಿಂಗಗಳು (ಜಂಗಮಲಿಂಗಗಳು) ಎನಿಸಿಕೊಳ್ಳುತ್ತವೆ. ಅದಕ್ಕೇ ಬಸವಣ್ಣನವರು ಸ್ಥಾವರ ಜಂಗಮ ಒಂದೇ ಎಂದುದು. ಹೀಗೆ ಪ್ರತಿಯೊಬ್ಬ ಲಿಂಗಾಯತನೂ ಚಲಿಸುವ ಲಿಂಗ (ಜಂಗಮ). ಈ ಕಾರಣಕ್ಕಾಗಿಯೇ ಕಲ್ಯಾಣದಲ್ಲಿ ಬಸವಣ್ಣನವರ ಮಹಾಮನೆಗೆ ಪ್ರಸಾದಕ್ಕೆಂದು 1,96,000 ಜಂಗಮರು ಬರುತ್ತಿದ್ದರು ಎನ್ನಲಾಗಿದೆ (ಇಲ್ಲಿ ‘ಜಂಗಮರು’ ಎಂದರೆ ಲಿಂಗಾಯತರು ಎಂದೇ ಹೊರತು, ಜಾತಿಜಂಗಮರು ಎಂದಲ್ಲ). ಈ ಅರ್ಥದಲ್ಲಿಯೇ ಸಿ.ಪಿ.ಬ್ರೌನ್ ತಮ್ಮ ಲಿಂಗಾಯತರ ಕುರಿತಾದ ಪುಸ್ತಕಕ್ಕೆ Essay on the Creed, Customs and Literature of Jangamas ಎಂದು ಹೆಸರಿಟ್ಟರು.
2. ಎರಡನೆಯದಾಗಿ, ಬಸವಣ್ಣವರ ಪ್ರಕಾರ, ಯಾರು ತನ್ನನ್ನು ಲಿಂಗದೊಂದಿಗೆ ಏಕೀಕರಿಸಿಕೊಳ್ಳುತ್ತಾನೆಯೋ ಅವನು ಜಂಗಮಲಿಂಗ. ತನ್ನ ಆಧ್ಯಾತ್ಮಿಕ ಸಾಧನೆಯಿಂದಾಗಿ ಅವನು ಕೊನೆಯಲ್ಲಿ ಲಿಂಗವಾಗುತ್ತಾನೆ. ಆದರೆ ಅವನು ಚಲಿಸುವುದರಿಂದ ಅವನು ಚಲಿಸುವ (ಜಂಗಮ) ಲಿಂಗ ಎನಿಸಿಕೊಳ್ಳುತ್ತಾನೆ. 3. ಮೂರನೆಯದಾಗಿ, ಯಾರು ಸಮಾಜದ ಜನರನ್ನು ಧಾರ್ಮಿಕವಾಗಿ ಮತ್ತು ನೈತಿಕವಾಗಿ ತಿದ್ದುವ ಕಾಯಕ ಮಾಡುತ್ತಾ ಊರಿಂದೂರಿಗೆ ತಿರುಗುತ್ತಾನೋ ಅವನೂ ಜಂಗಮ. ಈ ಅರ್ಥಗಳು ಬಸವಪೂರ್ವದ ಜಂಗಮ ಶಬ್ದಕ್ಕೆ ಇಲ್ಲವಾದುದನ್ನು ಗಮನಿಸದಿದ್ದರೆ, ಅಂದರೆ, ಪದ ಒಂದೇ ಆದರೂ ಅರ್ಥ ಬೇರೆ ಬೇರೆ ಎಂಬುದನ್ನು ಗಮನಿಸದಿದ್ದರೆ, ಜಂಗಮ ಪದಬಳಕೆ ಮೊದಲೇ ಇತ್ತು, ಲಿಂಗಾಯತವೂ ಮೊದಲೇ ಇತ್ತು ಎಂಬ ಪಾಂಡಿತ್ಯಪೂರ್ಣ ಸುಳ್ಳು ಹೇಳಬೇಕಾಗುತ್ತದೆ.
ಚೆನ್ನಬಸವಣ್ಣ (3/7, 8) ಮತ್ತು ಅಲ್ಲಮ ಪ್ರಭು [ಡಾ.ಆರ್.ಸಿ.ಹಿರೇಮಠ (ಸಂ): ಅಲ್ಲಮಪ್ರಭುದೇವರ ವಚನಗಳು, 928] ತಮ್ಮ ವಚನಗಳಲ್ಲಿ ಗುರು, ಲಿಂಗ, ಜಂಗಮ ಮತ್ತು ಪ್ರಸಾದಗಳ ಪೂರ್ವಾಶ್ರಯಗಳನ್ನು ಕಳೆಯಲು ಬಸವಣ್ಣ ಭೂಮಿಗೆ ಬಂದ, ಎನ್ನುತ್ತಾರೆ. ಇವರ ವಚನಗಳನ್ನು ಗಂಭೀರವಾಗಿ ಪರಿಗಣಿಸಿದರೆ ನಮ್ಮ ಮೇಲಿನ ವಾದಕ್ಕೆ ಪುಷ್ಟಿ ದೊರೆಯುತ್ತದೆ. ಅಂದರೆ, ಈ ನಾಲ್ಕು ಪರಿಕಲ್ಪನೆಗಳು ಹಿಂದೆ ಇದ್ದವು, ಆದರೆ ಬಸವಣ್ಣ ಅವುಗಳಿಗೆ ಹೊಸ ಅರ್ಥ ನೀಡಿ, ಅವುಗಳ ಆಚರಣೆಯಲ್ಲಿ ಸುಧಾರಣೆ ತಂದರು, ಎಂದರ್ಥ.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ವೇದ ಮತ್ತು ಆಗಮಗಳ ಸಂದರ್ಭಗಳಲ್ಲಿ ಬಳಸಲಾಗಿದ್ದ ಪದಗಳು, ಪದಗುಚ್ಛಗಳು ವಚನಗಳಲ್ಲಿ ಬಳಕೆಯಾಗಿದ್ದರೂ ಅವೆರಡರ ಅರ್ಥಗಳು ಸಂದರ್ಭೋಚಿತವಾಗಿ ಬೇರೆ ಬೇರೆಯಾಗಿವೆ. ಆದುದರಿಂದ, ಪದ ಒಂದೇ, ಅರ್ಥವೂ ಒಂದೇ ಆಗಿರಬೇಕು ಎಂಬ ಮೊಂಡು ತಳಹದಿಯ ಮೇಲೆ ವಾದ ಮಾಡಬಾರದು.
Comments 10
veeraiah Danapura
Nov 12, 2021ಸಂಶೋಧನಾತ್ಮಕ ಲೇಖನ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಅಡ್ಡಿಯಾಗಿರುವ ವೀರಶೈವರ ವಾದಗಳಿಗೆ ಸರಿಯಾದ ಪ್ರತ್ಯುತ್ತರ.
Mariswamy Gowdar
Nov 12, 2021ನಿಜ ಸರ್. ಶರಣರಲ್ಲಿ ಪ್ರಸಾದ ಎಂದರೆ ದೇವರಿಗೆ ಎಡೆ ಹಿಡಿದ ನೈವೇದ್ಯ ಅಲ್ಲವೇ ಅಲ್ಲ. ಅದೊಂದು ಷಟಸ್ಥಲದ ಬಹುಮುಖ್ಯ ಸ್ಥಲ.
Revanasiddhaiah
Nov 12, 2021ಇತಿಹಾಸದಲ್ಲಿ ರುದ್ರ ಶಿವನಾದದ್ದು ಯಾವಾಗ? ರುದ್ರನ ಸ್ವಭಾವಕ್ಕೂ ಶಿವನ ಸ್ವಭಾವಕ್ಕೂ ಸಂಬಂಧವೇ ಇಲ್ಲ. ಹೀಗಿರುವಾಗ ದ್ರಾವಿಡರ ಶಿವನನ್ನು ರುದ್ರನನ್ನಾಗಿಸಿ, ಶಿವನ ವ್ಯಕ್ತಿತ್ವವನ್ನೇ ಹರಣ ಮಾಡಿದ್ದು ನಿಜಕ್ಕೂ ಖೇದದ ಸಂಗತಿ.
ಸೋಮಶೇಖರ, ಹಾಸನ
Nov 12, 2021ಲಿಂಗಾಯತರನ್ನು ಶಿವಾರಾಧಕರೆಂದು ಕರೆಯುವುದರಲ್ಲೇ ತಾತ್ವಿಕ ತಪ್ಪಾಗಿವೆ. ಲಿಂಗಾಯತವು ಏನನ್ನೂ ಅಂದರೆ ಯಾವ ಬಾಹ್ಯ ವಸ್ತುವನ್ನೂ ಆರಾಧಿಸಲು ಹೇಳುವುದಿಲ್ಲ. ಲಿಂಗಾಯತರು ಲಿಂಗಾರಾಧಕರೂ ಅಲ್ಲ. ವಚನಗಳನ್ನು ಅಧ್ಯಯನ ಮಾಡದೇ ಇಂತಹ ಉಡಾಫೆ ಮಾತುಗಳನ್ನಾಡುವುದು ಸರಿಯಲ್ಲ.
Shivamurthy K
Nov 14, 2021ಹಿಂದೂ ಸಮಾಜದಂತೆ ಲಿಂಗಾಯತವೂ ಕಲಬೆರಕೆಯಾಗಿ ಕಲಸುಮೇಲೋಗರವಾಗಿರುವುದಕ್ಕೆ ವೀರಶೈವ ಜಗಳವೇ ಸಾಕ್ಷಿ. ಶುದ್ದ ಮಾಡದಷ್ಟು ಲಿಂಗಾಯತ ಧರ್ಮಾಚರಣೆಗಳು ಹಾಳಾಗಿವೆ. ಮಹಾ ಧರ್ಮವೊಂದು ಕೊಚ್ಚೆಗುಂಡಿಯಾದದ್ದು ದೊಡ್ಡ ದುರಂತವೇ ಸರಿ.
ಶಿವಪ್ರಕಾಶ್ ಉದ್ಭೂರು
Nov 15, 2021ಕೆರೆಯ ಪದ್ಮರಸ ತನ್ನ ದೀಕ್ಷಾಬೋಧೆಯಲ್ಲಿ ಲಿಂಗದ ಕುರಿತಾಗಿ ಹೇಳಿದ ಮಾತುಗಳು ಸ್ಪಷ್ಟವಾಗಿ ಗೊತ್ತಾಗಲಿಲ್ಲ. ಲಿಂಗ- ಗೊಂದಲ ಹುಟ್ಟಿಸುವ ಹಾಗೂ ಬೇಕಂತಲೇ ದ್ವಂದ್ವ ಅರ್ಥಗಳನ್ನು ಹುಟ್ಟುಹಾಕುವ ಕುತ್ಸಿತ ಜನರ ಕೈಯಲ್ಲಿ ಸಿಕ್ಕು ತನ್ನ ನಿಜವಾದ ಮರ್ಮವನ್ನೇ ಕಳೆದುಕೊಂಡಂತಿದೆ. ಲಿಂಗಾಯತವನ್ನು ಅಕ್ಷರಗಳಲ್ಲೂ, ಆಚರಣೆಗಳಲ್ಲೂ ಹಾಳು ಮಾಡಿರುವ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಿದೆ.
Hariprasad
Nov 15, 2021Bayalu is amazing blog, it’s simple, yet very effective. Articles are really thought provoking…
Ganesh A.P
Nov 18, 2021ಶಿವ, ಪರಶಿವ ಮುಂತಾದ ಪದಗಳ ಬದಲು ಲಿಂಗ ಎಂಬ ಪದವನ್ನು ಶರಣರು ಬಳಸುತ್ತಾರೆ. ಲಿಂಗ ಎನ್ನುವುದು ಸೃಷ್ಟಿ, ಸ್ಥಿತಿ ಮತ್ತು ಲಯಗಳ ವಲಯಕ್ಕೆ ಸೇರಿದ್ದಲ್ಲ ಎನ್ನುವ ಇಂಗಿತವೂ ಇದರಲ್ಲಿದೆ. ಸಾಧನೆಯಿಂದ ಮಾತ್ರವೇ ದೊರಕುವ ಲಿಂಗ ಕಾರುಣ್ಯವನ್ನು ಷಟಸ್ಥಲಗಳು ವಿವರಿಸುತ್ತವೆ.
ವೀರಸ್ವಾಮಿ
Nov 25, 2021ಸಂಶೋಧನಾತ್ಮಕವಾಗಿದೆ. ವೀರಶೈವರಿಗಿಂತ ಲಿಂಗಾಯತ ಹೇಗೆ ಭಿನ್ನ ಎಂದು ಪ್ರತಿಯೊಂದು ವಿಷಯದಲ್ಲೂ ತೋರಿಸಬೇಕಾದ ಜರೂರು ಇಂದು ಹಿಂದಿಗಿಂತ ಹೆಚ್ಚಾಗಿದೆ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಅಡ್ಡಿಯಾಗಿರುವ ಗೊಂದಲಗಳನ್ನೆಲ್ಲಾ ಬಗೆಹರಿಸುವ ನಿಟ್ಟಿನಲ್ಲಿ ಪ್ರೋ. ಮಹಾದೇವಪ್ಪನವರ ಪ್ರಯತ್ನ ಶ್ಲಾಘನೀಯವಾದುದು. ಶರಣಾರ್ಥಿ.
-ವೀರಸ್ವಾಮಿ, ಕನಕಪುರ
Jagannatha Patil
Nov 25, 2021ಲಿಂಗಾಯತರನ್ನು ದಿಕ್ಕುತಪ್ಪಿಸುವ ಕುಟಿಲ ನೀತಿಯ ವಾದಕರಿಗೆ ಸೂಕ್ತ ಉತ್ತರ ನೀಡುವ ಇಂತಹ ವಿಚಾರಗಳು ಹೆಚ್ಚು ಹೆಚ್ಚು ಸಮಾಜದಲ್ಲಿ ಪ್ರಚಲಿತಗೊಳ್ಳಬೇಕು. ನಮ್ಮಲ್ಲಿರೊ ಅಜ್ಞಾನಕ್ಕೆ ಮದ್ದಾಗಿ ಇವು ಕೆಲಸ ಮಾಡುತ್ತವೆ.