
ನೋಟದ ಕೂಟ…
ಕಾಣುವುದೇ ಒಂದು
ನೋಟ ಹೇಳುವುದೇ ಬೇರೊಂದು
ಉಸಿರ ಘಮಲಲಿ ಇಲ್ಲಾ
ಹಿಡಿದ ವಾಸನೆಯ ಕುರುಹು
ಕಿವಿಗೆ ಬಿದ್ದ ಶಬ್ದಕೂ
ಕೇಳಿಸಿಕೊಂಡುದಕೂ
ಕಾಣಲಿಲ್ಲ ಸಾಮ್ಯತೆ
ನಾಲಿಗೆ ರುಚಿಸಿದ್ದಕ್ಕೂ
ಸವಿಯ ಬಯಕೆಗೂ ಎಲ್ಲಿದೆ ಹೋಲಿಕೆ
ಮೈಗೆ ತಾಕಿದ ಸ್ಪರ್ಶಕ್ಕೂ
ಅದಿತ್ತ ಸಂದೇಶಕೂ ಎಷ್ಟೊಂದು ಅಂತರ!
ಕಾಣದು ಕಣ್ಣು, ಕೇಳದು ಕಿವಿ,
ಆಘ್ರಾಣಿಸದು ಮೂಗು, ಸ್ಪರ್ಶಿಸದು ತ್ವಚೆ,
ರುಚಿಸಲೊಲ್ಲದು ನಾಲಿಗೆ ಇದ್ದುದನು ಇದ್ದ ಹಾಗೆ…
ಮನದ ಕೋಣೆಯ ಹೊಕ್ಕು
ಬರುವ ಗ್ರಹಿಕೆಗಳಿಗೆಲ್ಲಾ
ಸಾವಿರ ಬಣ್ಣ, ಸಾವಿರ ಭಾವ
ಅರ್ಥಗಳು, ಅನರ್ಥಗಳು ಸಾಲು ಸಾಲು…
ನೋಟ ಕೂಟದ ಮಾಟ
ಭವದ ಬಂಧನದಾಟ
ಇಂದ್ರಿಯಗಳ ಬಲೆಯಲ್ಲಿ
ಬದುಕು ಬದುಕಲರಿಯದೆ
ಇರುವಿಕೆಯ ನಿಜವ ಕಾಣದೆ
ಹಳವಂಡದಲೇ ನಿಟ್ಟುಸಿರನಿಡುತ
ಸವೆಸಿ ಬಿಡುವುದು ಕಾಲ…
ಗುರು ತೋರ್ದ ಉಪಾಯದಲಿ
ಇಂದ್ರಿಯ ಸಂಚ ನಿಲಿಸಿ
ಕಂಗಳ ಕರುಳ ಕತ್ತರಿಸಿ
ಕಲ್ಪನೆಯ ಸಂಚಯ ಇಲ್ಲವಾಗಿಸಲು
ನೋಟದ ಹಂಗಿಲ್ಲ ಕೂಟದುಪಟಳವಿಲ್ಲ
ನಿರ್ಮಲದ ತಿಳಿಯೊಡಲು
ನಿಚ್ಚಳದ ಜಗದಲ್ಲಿ ಸ್ವಚ್ಛ ಮನವು.
Comments 3
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
May 10, 2023ಅನುಭವ.. ಅನುಭಾವ ಗಳನ್ನು ಎಷ್ಟೊಂದು ಸರಳವಾಗಿ ಹೇಳಿರುವಿರಿ.
ಕೆ ಎಸ್ ಮಲ್ಲೇಶ್
May 13, 2023ನಿಮ್ಮ ಕವನ “ನೋಟ ಕೂಟದ ಮಾಟ” ವನ್ನು ನಾನು ಹೀಗೆ ಗ್ರಹಿಸಿದೆ.
ವಾಸ್ತವಕ್ಕೂ ಇಂದ್ರಿಯಗಳ ಗ್ರಹಿಕೆಯಿಂದ ಉಂಟಾದ ಅನುಭವಕ್ಕೂ ನಡುವಿರುವ ವ್ಯತ್ಯಾಸವನ್ನು ಕಾವ್ಯದ ಸಂಕ್ಷಿಪ್ತತೆ ಹಾಗೂ ಸೊಗಡಿನ ಮೂಲಕ ಕವನ ತಿಳಿಸಿದೆ. ಫಳಾರೆಂದು ಮಿಂಚಿತು, ಧಡ್ ಎಂದು ಸದ್ದಾಯಿತು, ಅಮೃತದ ಸವಿಗೆ ಬಾಯಿ ಚಪ್ಪರಿಸಿತ್ತು, ಘಮ್ ಎಂದು ಹೂವಿನ ವಾಸನೆ ಮೂಗಿಗೆ ಬಡಿದಿತ್ತು. ಚಟೀರ್ ಎಂದು ಕೆನ್ನೆಗೆ ಏಟು ಬಿತ್ತು ಎನ್ನುವಾಗ ನಿಜಕ್ಕೂ ಆ ಶಬ್ದಗಳೇ ಉಂಟಾದವೆ? ಖಂಡಿತ ಇಲ್ಲ. ಅಲ್ಲಿ ಉಂಟಾದ ನಿಜ ಶಬ್ದಗಳನ್ನು ಗ್ರಹಿಸುವ/ ತಿಳಿಯುವ/ ಸಂವಹಿಸುವ ಕ್ಷಮತೆ, ಸಾಮರ್ಥ್ಯ ನಮ್ಮಲ್ಲಿ ಅಂತರ್ಗತವಾಗಿದ್ದರೂ ಅವುಗಳ ಇರುವಿಕೆಯನ್ನೂ ಗಮನಿಸದಷ್ಟರ ಮಟ್ಟಿಗೆ ನಾವು ಭ್ರಮೆಗಳಿಗೆ ಆತುಕೊಂಡಿದ್ದೇವೆ. ಈ ಕಾರಣದಿಂದಲೇ ಭ್ರಮೆಗಳ ಬಗೆಗಿರುವ ವಿಶ್ವಾಸ ವಾಸ್ತವಗಳ ಬಗೆಗಿಲ್ಲ. ಆ ಭ್ರಮೆಗಳ ಬಲೆಯಲ್ಲಿ ನಮ್ಮ ಭವವನ್ನು ಬಂಧನವಾಗಿಸಿಕೊಂಡಿದ್ದೇವೆ.
ಎಲ್ಲ ಸಂಬಂಧಗಳ ನಡುವೆ ಇದ್ದೂ ಅವು ತೋರುವ ಭ್ರಮೆಗಳ ಅಂಧಕಾರದಲ್ಲಿ ಸಿಲುಕದೆ ವಾಸ್ತವದ ಬೆಳಕಿನಲ್ಲಿ ನಡೆವವನೇ ಗುರು. ಈ ಜಟಿಲ ಜಗತ್ತಿನೊಳಗೆ ನಮ್ಮ ಇಂದ್ರಿಯಗಳು ಭ್ರಮೆಗಳ ಬೆನ್ನೇರಿ ಅಂಡಲೆಯುವುದನ್ನು ತಪ್ಪಿಸಿ, ಎಂದಿನಿಂದಲೋ ಅಂಟಿರುವ ಧೂಳನ್ನು ಝಾಡಿಸಿ, ಸತ್ಯದ ದರ್ಶನ ಮಾಡಿಸುವ ಶಕ್ತಿ ಆ ಗುರುವಿಗಿದೆ.
ಪೆರೂರು ಜಾರು, ಉಡುಪಿ
May 13, 2023ಅರ್ಥಗಳ, ಅನರ್ಥಗಳ ತುಲನೆಯಲಿ
ವ್ಯರ್ಥವಾಗುವ ಸಮಯ.
ಅರ್ಥ ಹಿಂದೆ ಅರ್ಥಾಪೇಕ್ಷೆ ಮುಂದೆ
ಸ್ವಾರ್ಥದಲಿ ಸಾಯುತಿದೆ ಕಂಡುಂಡುದೆಲ್ಲ