ನಾ ಬರಬಾರದಿತ್ತು ಇಂಥ ಊರಿಗೆ…
ತತ್ವಪದಗಳ ಅಲ್ಲಮನೇ ಆಗಿದ್ದ ಕಡಕೋಳ ಮಡಿವಾಳಪ್ಪನವರು ಬದುಕಿರುವಾಗಲೇ ಅರಳಗುಂಡಗಿ ಮೂಲದ ಅವರ ಶಿಷ್ಯ ಪರಂಪರೆಯ ಸಿದ್ಧಲಿಂಗಪ್ಪಗೌಡರಿಗೆ ಜಂಗಮ ದೀಕ್ಷೆ ನೀಡುತ್ತಾರೆ. ತನ್ಮೂಲಕ ಜಾತಿ ಜಂಗಮತ್ವದ ನಿರಸನ ಪರಂಪರೆಗೆ ನಾಂದಿ ಹಾಡುತ್ತಾರೆ. ಅರಳಗುಂಡಗಿಯಿಂದ ಕಡಕೋಳ ಮಠಕ್ಕೆ ಬರುವಾಗ ಬಸುರಿ ಬಸವಲಿಂಗಮ್ಮ ಗೌಡ್ತಿಯ ಬೆನ್ನುಹತ್ತಿ ಆಕೆಯ ಮೂವರು ಮಕ್ಕಳಾದ ಬಸಪ್ಪಗೌಡ, ಖ್ಯಾತಪ್ಪಗೌಡ ಮತ್ತು ಸಿದ್ಧಲಿಂಗಪ್ಪಗೌಡ ತಾಯಿಯೊಂದಿಗೆ ಬಂದು ಕಡಕೋಳ ಮಠದ ವಾಸಿಗಳಾಗುತ್ತಾರೆ. ಅರಳಗುಂಡಿಗೆಯ ಗಂಡನ ಮನೆಯಿಂದ ಬರುವಾಗಲೇ ಸೆರಗು ನಿಂತು, ಬಸುರಿಯಾದ ಬಸವಲಿಂಗಮ್ಮ ಹೆಣ್ಣುಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವಿಗೆ ಅಕ್ಕನಾಗಮ್ಮ ಎಂದು ಮಡಿವಾಳಪ್ಪನವರೇ ನಾಮಕರಣ ಮಾಡುತ್ತಾರೆ.
ಅದಕ್ಕೆ ನಾಕೈದು ತಿಂಗಳು ಮುಂಚೆಯೇ ಸಿದ್ಧಲಿಂಗಪ್ಪಗೌಡರಿಗೆ ಜಂಗಮ ದೀಕ್ಷೆ ನೀಡುವ ಮೂಲಕ ಮಡಿವಾಳಪ್ಪನವರು ಅವರನ್ನು ಸಿದ್ಧಲಿಂಗಯ್ಯನವರೆಂದು ನಾಮಾಂತರ ಮಾಡಿದರು. ಅದು ಮಡಿವಾಳಪ್ಪನವರ ನಿಜದನೆಲೆಯ ಜಂಗಮಿಕೆಯ ಹುಡುಕಾಟವಾಗಿತ್ತು. ಮಡಿವಾಳಪ್ಪನವರ ತರುವಾಯ ಜಂಗಮ ಸ್ವರೂಪಿ ಮರಿದೇವರಾಗಿ ಮಠದ ಆಗು ಹೋಗುಗಳನ್ನು ನವಜಂಗಮ ಸ್ವರೂಪಿ ಸಿದ್ದಲಿಂಗಯ್ಯ ಮುನ್ನಡೆಸಿಕೊಂಡು ನಡೆದರು. ಸಿದ್ಧಲಿಂಗಯ್ಯನವರು ಕಾಲವಾದ ಮೇಲೆ ಕೆಲವು ಕಾಲ ಮಠದ ಉಸ್ತುವಾರಿಗೆ ಯಾರೂ ಇರಲಿಲ್ಲ. ನಂತರದಲ್ಲಿ ಬೀಳವಾರದ ಮಹಾಂತಯ್ಯ ಮಡಿವಾಳಯ್ಯ ಮರಿದೇವರುಗಳು ಮತ್ತು ಮಾಣಶಿವಣಗಿಯ ಹಿರೇಮಠದವರು ಕೆಲವು ಕಾಲ ಶ್ರೀಮಠದ ಕರ್ತೃಗದ್ದುಗೆಯ ಪೂಜೆ ಪುನಸ್ಕಾರ ಮಾಡಿದರಂತೆ. ಆವಾಗ ಮಡಿವಾಳಯ್ಯ ಎಂಬುವರು ನಮ್ಮೂರು ಕಡಕೋಳದಲ್ಲಿ ಕಂತೀಭಿಕ್ಷೆ ಮಾಡಿ ದಾಸೋಹ ನಡೆಸುತ್ತಾರೆ. ಹಾಗೆ ಕಂತೀಭಿಕ್ಷೆ ಮಾಡುವಾಗ ಜಮಾದಾರ ಮನೆಯಲ್ಲಿ ಭಿಕ್ಷೆಯಾಗಿ ಪಡೆದ ಮಗುವೇ ಬೆಂಚಿಯೊಳಗಿನ ಗದ್ದುಗೆಯ ಸಾಧು ಭೀಮರಾಯರು. ಈ ಮಗು ನಿರಂತರವಾಗಿ ಹಟ ಮಾಡುತ್ತಾ ಅಳುತ್ತಿದ್ದ ಕಥನದ ಚಾರಿತ್ರಿಕ ಮಾದರಿಯೊಂದಿದೆ.
ಮಹಾಂತಯ್ಯ ಮಡಿವಾಳಯ್ಯರ ತರುವಾಯ ಶ್ರೀಮಠಕ್ಕೆ ಬಂದವರು ತೆಲಗಬಾಳ ಮೂಲದ ಬಸವಲಿಂಗಯ್ಯ ರುದ್ರಮ್ಮನವರ ಪುತ್ರರಾದ ಶ್ರೀವೀರೇಶ್ವರ ದೇವರು. ಜನಸಾಮಾನ್ಯರ ಬಾಯಲ್ಲಿ ಅವರು ಈರಯ್ಯ ಮುತ್ಯಾ. ಶಿವಯೋಗಿ ಮಡಿವಾಳೇಶ್ವರರು ಸಾಮಾನ್ಯರ ನಾಲಗೆಯಲ್ಲಿ ಮುತ್ಯಾ ಮಡ್ಯಾಳಪ್ಪ ಆಗಿರುವಂತೆ. ವೀರೇಶ್ವರರು ಬಹುಜನ ಪ್ರೀತಿಯ ಆರೂಢ ಬಾಳನ್ನೇ ಬದುಕಿದವರು. ಅವರು ಪರಮ ಶಂಕರಿ ಸಿದ್ಧಪತ್ರಿಯ ಸಿದ್ಧ ಸಾಧಕರು. ಜತೆಗೆ ಅವರಿಗೆ ‘ತಂತ್ರಶಕ್ತಿ’ ಮಾರ್ಗದ ಪರಿಚಯವಿತ್ತು. ತಂತ್ರಪಥದಲ್ಲಿ ತೊಡಗಿಸಿಕೊಂಡ ಅವರು ಅದರ ವಾಂಛೆ, ಆಲಂಬನೆಗಳನ್ನು ಗೆಲ್ಲುವ ಸಾಧ್ಯತೆಯ ಕ್ಷಿತಿಜ ವಿಸ್ತರಿಸಿಕೊಳ್ಳುತ್ತಿದ್ದರು. ಮಡಿವಾಳಪ್ಪನವರು ಬಿಟ್ಟುಹೋಗಿದ್ದ ಮಹತ್ವದ ಹೊತ್ತಿಗೆಗಳು ಬಹಳಷ್ಟು ಕಾಲ ವೀರೇಶ್ವರ ದೇವರ ನೇರ ನಿಗಾವಣೆಯಲ್ಲಿ ಭದ್ರಗೊಂಡಿದ್ದವು.
ಕೆಲವು ಹೊತ್ತಿಗೆಗಳನ್ನು ಮುಧೋಳ ಮೃತ್ಯುಂಜಯ ಸ್ವಾಮಿಗಳು, ಮತ್ತೆ ಕೆಲವು ಕೈ ಬರಹದ ಹೊತ್ತಿಗೆಗಳನ್ನು ಮಹಾಂತಪುರದ ಶಿವಪುತ್ರಪ್ಪ ಪಡೆದರೆಂದು ಕೇಳಿದ್ದೇನೆ. ಅಂತಹ ಪುಸ್ತಕಗಳ ಪೈಕಿ ಕೆಲವು ಗಿಡಮೂಲಿಕೆ ಶಾಸ್ತ್ರಗಳಿಂದ ವೀರೇಶ್ವರ ದೇವರು ಚಿಕಿತ್ಸೆ ಉಪಚಾರಗಳನ್ನು ಕಲಿತುಕೊಳ್ಳುತ್ತಾರೆ. ಅಂತಹ ಗಿಡಮೂಲಿಕೆ ಶಾಸ್ತ್ರ ವಿದ್ಯೆಯ ನೆರವಿನಿಂದ ಬಾಲರೋಗ, ಬಿಳಿಮುಟ್ಟು ರೋಗ ವಾಸಿ ಮಾಡುತ್ತಿದ್ದರು. ತಾಯಿ ಮಕ್ಕಳ ಅನೇಕ ರೋಗಗಳಿಗೆ ಅವರು ನೀಡುತ್ತಿದ್ದ ಔಷಧಗಳು ಆಯುರ್ವೇದ ಪದ್ಧತಿಯ ಔಷಧಗಳೇ. ದೇಹಾರೋಗ್ಯ ಮಾತ್ರವಲ್ಲದೇ ಕುಂಡಲಿನಿ ಮತ್ತು ತಂತ್ರಮಾರ್ಗದಂತಹ ಅನೇಕ ಕಠಿಣ ಸಾಧನೆಗಳು ಮತ್ತು ತಂತ್ರ ವಿದ್ಯೆಯ ರಹಸ್ಯಗಳನ್ನೆಲ್ಲ ವೀರೇಶ್ವರ ದೇವರು ಕರಗತ ಮಾಡಿಕೊಂಡಿದ್ದರೆಂದು ನಾನು ಚಿಕ್ಕವನಿದ್ದಾಗ ಅನೇಕರು ಹೇಳುತ್ತಿದ್ದುದನ್ನು ಖುದ್ದು ಕೇಳಿದ್ದೇನೆ.
ದಶೀಂದ್ರೀಯ ಗುಣಗಳಿಂದ ಪಾರಾಗುವುದನ್ನು ಕಲಿಯಲು ಹೆಣಗುತ್ತಿದ್ದರು. ಅಂತೆಯೇ ತಂತ್ರಶಕ್ತಿಯ ಉನ್ಮಾದ ಮತ್ತು ಉಪಟಳ ತಾಳದೇ ಅವುಗಳ ವಿಸರ್ಜನೆಗಾಗಿಯೂ ತೋರಿಕೆಯ ಸಟಪಟ ದೌರ್ಬಲ್ಯಗಳ ಒಡನಾಟಕ್ಕೆ ಬಿದ್ದರು. ಅವರನ್ನು ಪಂಚ’ಮ’ಕಾರಗಳ ಸ್ಪರ್ಶಿ ಅಂತಲೂ ಕೆಲವರು ಗುರುತಿಸಿದ ನೆನಪುಗಳಿವೆ. ವರ್ಜ್ಯವೆಂಬುದು ಅವರ ಬಳಿ ಯಾವುದೂ ಇರಲಿಲ್ಲ. ಅಚಲ ಹಾದಿಯ ಇಂತಹ ಬಹುತ್ವದ ಪ್ರೀತಿಯಿಂದಾಗಿ ಸಾವಿರಾರು ಮಂದಿ ಶಿಶು ಮಕ್ಕಳಿಗೆ ಗುರುಬೋಧೆ ನೀಡಿದ ಪಡದಪ್ಪ ಅವರಾಗಿದ್ದರು. ಶಿಶುಮಕ್ಕಳಲ್ಲಿ ಭಾವ ಭಕ್ತಿಯ ಬೆರಗಿನ ಹೊಳೆ ಹರಿಸಿದವರು. ವರ್ಣ,ವರ್ಗ,ಜಾತಿ, ಧರ್ಮ, ಕುಲಗೋತ್ರ ಮತಗಳನ್ನು ಮೀರಿದ ಮಹಾಗುರು.
ಗುರುಮಾರ್ಗ ಬಳಗದ ಅವರ ಸದಸ್ಯರು ಇವತ್ತಿಗೂ ನಮ್ಮೂರು ಮಾತ್ರವಲ್ಲದೇ ಹಂದಿಗನೂರು, ಕೋರವಾರ, ಮಹಾರಾಷ್ಟ್ರ ಮೊದಲಾದ ಕಡೆಗಳಲ್ಲಿ ಇದ್ದಾರೆ. ಅವರ ಜವಾರಿತನದ ನಡೆ ನುಡಿಗಳು ನೆಲಮೂಲ ಸಂಸ್ಕೃತಿಯ ಅಪಾರ ಜನಮನ್ನಣೆ ಗಳಿಸಿದ್ದವು. ಮಡಿವಾಳಪ್ಪನ ತತ್ವಪದಗಳನ್ನು ಏಕತಾರಿ, ತಾಳ, ದಮಡಿ ನುಡಿಸುತ್ತಾ ತುಂಬಾ ಸೊಗಸಾಗಿ ಹಾಡುತ್ತಿದ್ದರು. ಅವರು ಲೀಲಾಮಯಿಯಾಗಿ ಹಾಡುವುದನ್ನು ಕೇಳುವುದು ಮತ್ತು ಸಚ್ಚಿದಾನಂದ ಲೀಲೆಗಳನ್ನು ನೋಡುವುದೇ ನಮಗೆಲ್ಲ ಸಂಭ್ರಮ ಆಗಿರುತ್ತಿತ್ತು. ತಮ್ಮ ಜೀವಾತ್ಮದೊಳಗೆ ಮಡಿವಾಳಪ್ಪನನ್ನು ಆವಾಹಿಸಿಕೊಂಡಂತೆ ಹಾಡುತ್ತಿದ್ದರು:
ಎಪ್ಪ ಎಂಥಾ ಮರವಿಯೋ/ ಅಬ್ಬಾ/
ಎಪ್ಪ ಇದು ಎಂಥ ಮಾಯಿಯೋ ಅಬ್ಬಾ //
ಅಯ್ಯಗಳು ನಾವು ಎಂಬುವರೋ/
ಅಯ್ಯಾಚಾರದ ಮಾಹಿತಿ ಅರಿವೆವೆಂಬುವರೋ//
ಅಯ್ಯಗಳಾದ ಕೂನವೇನು ಅರಿಯರೋ/
ಜನರ ಕೈಲೆ ಕಾಲು ಬೀಳಿಸಿ ಕೊಂಬುವರೋ//
ಪರಕಾಯ ಪ್ರವೇಶವಾದಂತೆ ಸುದೀರ್ಘವಾದ ಈ ತತ್ವಪದ ದೇಹ ಧ್ವನಿಗಳ ಭಾವ ಬಂಧುತ್ವದ ಬಂಧುರತೆಯನ್ನು ಝೇಂಕರಿಸುತ್ತಿತ್ತು. ಏಕತಾರಿ ನುಡಿಸುತ್ತಾ ಅವರು ಹಾಡುತ್ತಿದ್ದ ಮತ್ತೊಂದು ಪದ:
ನಿಲುಕಿಸಿಕೋ ಮೇಲಾದ ಕಾಯಿ/
ಕೆಳಗ ಹಲುಬಿ ತೆರೆಯುವದ್ಯಾತಕೋ ಬಾಯಿ//
ಈ ಪದ ನಮ್ಮನ್ನು ಪ್ರಯತ್ನವಾದಿ ಸಾಧ್ಯತೆಗಳತ್ತ ಕರಕೊಂಡು ಹೋಗುತ್ತಿತ್ತು. ಹೀಗೆ ನೂರಾರು ಪದಗಳನ್ನು ಹಾಡುತ್ತಿದ್ದರು. ಮಂಗಳಾರತಿ ಪದಗಳನ್ನು ಹಾಡುವಾಗ ಅವರು ಮೈ ಮನಗಳನ್ನು ಕುಲುಕಿಸಿದಂತೆ ದೇಹಭಾವಗಳ ತನ್ಮಯತೆ ಕಂಡು ಬರುವುದು ವಿಶೇಷವಾಗಿತ್ತು.
ನಾ ಬರಬಾರದಿತ್ತು ಇಂಥಾ ಊರಿಗೆ/
ಬಂದು ಬಿದ್ದೇನ ಮಾಯದ ಬಲೆಯೊಳಗೆ/
ಸರಕಾರ ಇಲ್ಲದ ಹಾಳ ಗ್ವಾಡೀಗೆ//
ಸಣ್ಣಗಾದೀತೋ ಜೀವ/
ಮಣ್ಣುಗೂಡಿತೋ ಮೋಹ/
ಮಾನ್ಯ ಮಡಿವಾಳ ನೀ/
ಪುಣ್ಯ ಸರಕಾರ ಬಿಟ್ಟು//
ಬರಬಾರದಿತ್ತು ಇಂಥಾ ಊರಿಗೆ/
ಸರಕಾರ ಇಲ್ಲದ ಹಾಳ ಗ್ವಾಡೀಗೆ//
ಮುತ್ತಿನ ಮಾಲಿ ಅಂಗಿ/
ಮಹಾಂತೇಶ್ವರ ತೊಟ್ಟಿದ್ದಾನು/
ಯತ್ತಿ ಬಡಿಯುದ ಕಂಡು/
ಅತ್ತು ಸಾಯಲಿ ಬ್ಯಾಡ//
ನಾ ಬರಬಾರದಿತ್ತು ಇಂಥ ಊರಿಗೆ…
ಅವರು ಮೈ ಮರೆತು ಭಾವ ಪರವಶರಾಗಿ ಈ ತತ್ವಪದ ಹಾಡುತ್ತಿದ್ದರೆ ಕುಂತು ಕೇಳುವ ಎಂಥವರ ಕಣ್ಣುಗಳು ತೇವಗೊಳ್ಳುತ್ತಿದ್ದವು. ಆರ್ದ್ರಭಾವಗಳ ತಪ್ತತೆಯ ವಾತಾವರಣ ನಿರ್ಮಾಣಗೊಳ್ಳುತ್ತಿತ್ತು. ಅಂತಃಕರಣದ ಅನುಭೂತಿ ತುಂಬಿ ತುಳುಕುತ್ತಿತ್ತು. ಇದು ಅವರಿಗೆ ಅತ್ಯಂತ ಪ್ರಿಯವಾದ ತತ್ವಪದವಾಗಿತ್ತೆಂದು ಅವರಿಂದ ಅನುಗ್ರಹ ದೀಕ್ಷೆ ಪಡೆದ ಶ್ರೀಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ.
ಅದೆಷ್ಟೋ ಬಾರಿ ಸಿದ್ಧಪತ್ರಿಯ ಆವಾಹನೆಗೊಳಗಾಗಿ ಅವರು ಉಚಾಯಿಸುತ್ತಿದ್ದ ಮಾತುಗಳು ಯಾವತ್ತೂ ಹುಸಿಯಾಗುತ್ತಿರಲಿಲ್ಲ. ಅವರು ವಾಕ್ ಸಿದ್ಧಿಪುರುಷರೆಂದೇ ಹೆಸರಾಗಿದ್ದರು. ಅಂತಹ ಹುಸಿಯೊಡೆಯದ ಹಸಿ ನುಡಿಗಳಿಗಾಗಿ ಜನರು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಯಾವುದೇ ಮಡಿ ಮೈಲಿಗೆ, ಶಾಸ್ತ್ರೀಯ ಶಿಸ್ತು ವಗೈರೆಗಳನ್ನು ಪಾಲಿಸದೇ ಅಪ್ಪಟ ನೆಲಧರ್ಮ ಮತ್ತು ಏಕೋಭಾವದ ತುಂಬಿದಕೊಡ ಅವರು. ಮಠಗಳ ಭೌತಿಕ ಸ್ವರೂಪದ ಪ್ರಗತಿಗಳ ಕುರಿತು ಯಾವುದೇ ವಾಂಛೆಗಳು ಅವರಲ್ಲಿ ಇರಲಿಲ್ಲ. ಅದನ್ನು ಅತ್ಯಂತ ಹತ್ತಿರದಿಂದ ಬಲ್ಲವರಾಗಿದ್ದ ಪೋಲಿಸ್ ದ್ಯಾವಪ್ಪಗೌಡ ಹೇಳುತ್ತಿದ್ದುದು ನನಗೆ ನೆನಪಿದೆ.
ಇಂತಹದೇ ಮಾತುಗಳನ್ನು ಮಾಲಿ ಮಾಂತಪ್ಪಗೌಡ ಸಹಿತ ಹೇಳುತ್ತಿದ್ದ ದ್ಯಾಸವಿದೆ. ಮಾಲಿ ಮಾಂತಪ್ಪಗೌಡ ತತ್ವಪದಗಳ ಹಾಡುಗಾರಿಕೆಯ ಕಣಜವೇ ಆಗಿದ್ದರು. ವೀರೇಶ್ವರ ದೇವರು ಮಠವನ್ನು ಅಭಿವೃದ್ಧಿ ಪಡಿಸುವುದಾಗಲಿ ಯಾವುದೇ ಅದ್ದೂರಿತನದ ಸಣ್ಣ ಕನಸುಗಳು ಸಹಿತ ಹೊಂದಿರಲಿಲ್ಲ. ನಾಕೈದು ಚೀಲ ಜೋಳ, ಸಜ್ಜೆಕಾಳು ಸಂಗ್ರಹಿಸಿ ಅಷ್ಟದರಲ್ಲೇ ಮಡಿವಾಳಪ್ಪನ ಜಾತ್ರೆಯ ಪ್ರಕ್ರಿಯೆಗಳೆಲ್ಲ ಮುಗಿಸುತ್ತಿದ್ದರು. ಅಷ್ಟರಲ್ಲೇ ಅವರಿಗೆ ಖುಷಿ ಇರುತ್ತಿತ್ತು. ಯಾವಾಗಲೂ ಆನಂದ ಸ್ವರೂಪಿಗಳೇ ಆಗಿರುತ್ತಿದ್ದರು. “ಮನುಷ್ಯ ಆನಂದ ಮತ್ತು ನೆಮ್ಮದಿಯಿಂದ ಇರುವುದೇ ನಿಜವಾದ ಅಧ್ಯಾತ್ಮದ ಗುಟ್ಟು” ಎನ್ನುವಂತಿದ್ದರು. ಮುಂದೊದು ದಿನ ಈ ಮಠ ಮುನ್ನಡೆಸುವ ವಸ್ತಾದ ಬಂದೇ ಬರ್ತಾನೆಂದು ಒಡಪಿನಂತೆ ನುಡಿಯುತ್ತಿದ್ದರು.
ಅಕ್ಷರಶಃ ಗ್ರಾಮ್ಯಜನ್ಯ ಜವಾರಿತನದ ಜೀವಾಳವೇ ಆಗಿದ್ದರು. ಅಂತೆಯೇ ಹಳ್ಳಿಗಳ ಎಲ್ಲಾ ಧರ್ಮ, ಜಾತಿ, ಮತ, ವರ್ಗಗಳ ಅಪಾರ ಭಕ್ತರು ಅವರಿಗಿದ್ದರು. ಅವರು ಕುದುರೆ ಮೇಲೆ ಕುಂತು ಪರ ಊರುಗಳಿಗೆ ಪ್ರಯಾಣಿಸುವುದೇ ಚೆಂದ. ಅವರ ಕುದುರೆ ‘ಕಡಕೋಳ ಕುದುರೆ’ ಎಂದೇ ಹೆಸರಾಗಿತ್ತು. ಯಾವಾಗಲೂ ತಮ್ಮ ಜಡೆಗೂದಲು ಮುಚ್ಚುವಂತೆ ಕಟ್ಟು ಹೊಡೆದು ಸುತ್ತಿದ ರುಮಾಲು. ಕೈಯಲ್ಲಿ ಯಾವತ್ತೂ ನಾಗಮುರಿಗೆಯಂತಹ ಬೆತ್ತ. ಅದನ್ನು ಅವರು ತಮ್ಮ ಬದುಕಿನ ಅಂತಿಮ ಕ್ಷಣಗಳಲ್ಲಿ ಹಂದಿಗನೂರು ಭಕ್ತ ಚೌದರಿ ಮಡಿವಾಳಪ್ಪನ ಮನೆಯಲ್ಲೇ ಬಿಟ್ಟು ಬಂದರು. ಈಗಲೂ ಅಲ್ಲಿ ‘ಈರಯ್ಯ ಮುತ್ಯಾನ ಬೆತ್ತ’ ನಿತ್ಯಪೂಜೆಗೆ ಭಾಜನ.
ವಾರಕ್ಕೊಮ್ಮೆಯಾದರೂ ಕೋರವಾರ ಹಂದಿಗನೂರುಗಳಿಗೆ ಹೋಗಿ ವಸ್ತಿ ಮಾಡಿದರೆ ಅದೇನೋ ಅವರಿಗೆ ಸಮಾಧಾನ. ಇದ್ದಕ್ಕಿದ್ದಂತೆ ನೆನಪಿಸಿಕೊಳ್ಳುತ್ತಲೇ ಕುದುರೆ ಹತ್ತಿ ಹೊರಟು ಬಿಡುತ್ತಿದ್ದರು. ನಿಜಗುಣರ ಶಾಸ್ತ್ರ, ಅನುಭಾವ ಗೋಷ್ಠಿಗಳ ಮಹಾಮನೆಗಳೇ ಆ ಎರಡೂ ಊರುಗಳಲ್ಲಿ ಇದ್ದವು. ಅದೆಲ್ಲ ಈರಯ್ಯ ಅಪ್ಪನವರ ಸಾರಥ್ಯದಲ್ಲಿ ಜರುಗುವ ಮೋಕ್ಷಮಾರ್ಗ ಕಾಂಡದ ಪಾರಮಾರ್ಥ ಚಿಂತನೆ. ಇವತ್ತಿಗೂ ಕಡಕೋಳ ಶ್ರೀಮಠಕ್ಕೆ ಅದರಲ್ಲೂ ಜಾತ್ರೆಯ ವಿಶೇಷ ಸಂದರ್ಭಗಳಲ್ಲಿ ಅಲ್ಲಿನ ಭಕ್ತರು ಸಲ್ಲಿಸುವ ಸೇವಾ ಕೈಂಕರ್ಯ ಮತ್ತು ಅನುಭಾವ ಸಮಾಲೋಚನೆ ಅಪೂರ್ವವಾದುದು. ಅದು ವೀರೇಶ್ವರ ದೇವರಿಗೆ ಸಲ್ಲಿಸುವ ವಿಭಿನ್ನ ಸೇವಾಭಕ್ತಿ. ಮಠದ ಹಿಂಬದಿಯಲ್ಲಿರುವ ದೇವರ ಗುಡಿಯ ಗದ್ದುಗೆಗೆ ಸಲ್ಲುವ ಸಂಪ್ರೀತಿಯೂ ಹೌದು.
ಬಹುಪಾಲು ಬಡವರು, ದಲಿತರು, ದಮನಿತರು, ಮುಸ್ಲಿಮರು, ಹೀಗೆ ಹಿಂದುಳಿದ ಜನಾಂಗದವರನ್ನು ಹುಡುಕಿ ಹುಡುಕಿ ಗುರುಬೋಧೆ ನೀಡುತ್ತಿದ್ದರು. ಅನೇಕ ಮುಸ್ಲಿಮರಿಗೆ ಗುರುಬೋಧೆ ನೀಡಿದ್ದರು. ಹಾಗೆ ಗುರುಬೋಧೆ ಪಡೆದ ಅವರ ಅನಕ್ಷರಸ್ಥ ಶಿಶುಮಗ ಕರೀಮಸಾಬ ತನ್ನ ಗುರುದೇವನ ಕುರಿತು ತತ್ವಪದವನ್ನೇ ಕಟ್ಟಿ ಹಾಡಿದ್ದ. ಗುರುಬೋಧೆ ಪಡೆದವರಲ್ಲಿ ಅಹಿಂದ ಶಿಶುಮಕ್ಕಳೇ ಅಧಿಕ ಸಂಖ್ಯೆಯಲ್ಲಿದ್ದರು. ಶಿಶುಮಕ್ಕಳ ಪ್ರಾರ್ಥನೆ, ಬೇಡಿಕೆ ಈಡೇರಿಸುವಲ್ಲಿ ಅವರಿಗೆ ತಾಯ್ತನದ ಪ್ರೀತಿ ಇರ್ತಿತ್ತು. ಕೆಲವೊಂದು ಬಾರಿ ತಾಯ್ತನದ ಅವರ ಮನಸಿಗೂ ಶಿಶುಮಕ್ಕಳು ಅಗಾಧ ಪ್ರಮಾಣದಲ್ಲಿ ನೋವನ್ನುಂಟು ಮಾಡಿದ್ದಾರೆ. ಆದರೆ ಅವರು ಯಾವತ್ತೂ ಶಿಶುಮಕ್ಕಳ ಮೇಲೆ ಬೇಸರ ಮಾಡಿಕೊಂಡವರಲ್ಲ. ಇಷ್ಟು ಮಾತ್ರ ಖರೇ, ಅವರಿಗೆ ನೋವುಂಟು ಮಾಡಿದವರೆಲ್ಲ ತಕ್ಕುದಾದ ಶಾಸ್ತಿ ಅನುಭವಿಸಿದ್ದಾರೆ. ಮತ್ತೆ ಕೆಲವರಿಗೆ ಪಶ್ಚಾತ್ತಾಪ ಆಗಿದ್ದುಂಟು. ಅದೆಲ್ಲವೂ ಬೋಳೇತನದಲ್ಲೇ ಜರುಗುತ್ತಿತ್ತು.
ಅವರಿಗೆ ಆಡಂಬರ ಅದ್ದೂರಿತನಗಳ ಪರಿಚಯವೇ ಇರಲಿಲ್ಲ. ಸರಳಾತಿ ಸರಳರು ಅಂದರೆ ಅಹಮಿಕೆಯನ್ನೆಲ್ಲ ಕಳಕೊಂಡಿದ್ದರು. ಅವರ ಬಹುಪಾಲು ಆಯಸ್ಸು ಶಿಶುಮಕ್ಕಳ ಮನೆಗಳಲ್ಲೇ ಕಳೆಯಿತು. ಅದು ಅಪ್ಪ ಮಕ್ಕಳ ನಡುವಿನ ಸಂಬಂಧ ಆಗಿರುತ್ತಿತ್ತು. ಯಾವುದೇ ಏಚು ಪೇಚು, ಶಿಷ್ಟಾಚಾರಗಳ ಪಾಲನೆ ಮಾಡುತ್ತಿರಲಿಲ್ಲ. ಮನಸು ಮಾಡಿದರೆ ತಾನು ಪಟ್ಟಾಧಿಕಾರಿ ಪಟ್ಟಕ್ಕೆ ಏರಬಹುದಿತ್ತು. ಆದರೆ ಅದರಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. ಅಪ್ಪಟ ಅವಧೂತ ಪ್ರಜ್ಞೆ ಅವರನ್ನು ಅಪ್ಪಿಕೊಂಡಿತ್ತು. ಅದೇ ಬಗೆಯ ಭಕ್ತರು ಅವರ ಸುತ್ತಮುತ್ತ ಇರುತ್ತಿದ್ದರು.
ನೋಡಲು ಥೇಟ್ ಗಾಂವಟಿ ಸ್ವರೂಪದ ಸಂಬಂಧಗಳೇ ಆಗಿರುತ್ತಿತ್ತು. ಆದರೆ ಅವು ಅಪ್ಪ ಮಕ್ಕಳ, ತಾಯಿ ಮಕ್ಕಳ ಮತ್ತು ಆಪ್ತ ಮಿತ್ರತ್ವದ ಮನುಷ್ಯ ಸಂಬಂಧಗಳಾಗಿದ್ದವು. ನಿಷ್ಕಲ್ಮಶ ನಡೆ, ನಿರಪೇಕ್ಷ ಪ್ರೀತಿ, ಅಂತಃಕರಣಗಳ ಖಜಾನೆ. ಒಟ್ಟಿನಲ್ಲಿ ಅದರ ಖಾಸ್ ಬಾತ್, ಭಾವಬಂಧುತ್ವಗಳಿಗೆ ಗೆರೆಕೊರೆದ ವರ್ತುಲದ ಅರ್ಥ ಕಲ್ಪಿಸಲಾಗದು. ಅವರ ಕಣ್ಣುಗಳಲ್ಲಿ ‘ಕ್ಷ’ ಕಿರಣದ ತೀಕ್ಷ್ಣತೆ. ದಿಟ್ಟಿಸಿ ನೋಡುತ್ತಿದ್ದರೆ ಅವರಲ್ಲೊಬ್ಬ ಹತ್ತಿರದ ಬಂಧು ಕಾಣಿಸಿದಂತೆ ನನಗೆ ಅನೇಕ ಬಾರಿ ಭಾಸವಾಗುತ್ತಿತ್ತು.
ನನ್ನ ಹಾಗೇ ಇನ್ನೂ ಕೆಲವರಿಗೆ ಅನಿಸಿದ್ದುಂಟು. ಕೆಲವರಿಗೆ ಅವರು ತಾಯಿ, ಮತ್ತೆ ಕೆಲವು ತಾಯಂದಿರಿಗೆ ಮಗುವಾಗಿ ಬಾಲಲೀಲೆಗಳ ಕೆಲವು ದೃಷ್ಟಾಂತಗಳನ್ನು ಅನೇಕರು ಈಗಲೂ ಪವಾಡದಂತೆ ನೆನೆಯುತ್ತಾರೆ. ಆದರೆ ಯಾವತ್ತೂ ಅವರು ತಮ್ಮನ್ನು ಪವಾಡ ಪುರುಷ ಎಂದು ಒಪ್ಪಿಕೊಂಡವರಲ್ಲ. ಅವರಲ್ಲಿ ದೈಹಿಕ ಶುದ್ಧತೆ ಮತ್ತು ಶುಚೀಕರಣ ಹುಡುಕಬೇಕು ಅಂತ ನನಗೆ ಯಾವತ್ತೂ ಅನಿಸುತ್ತಿರಲಿಲ್ಲ. ಅವರ ‘ಫಿಜಿಕಲ್ ಜೀವನಕ್ಕಿಂತ ಮೆಟಾ ಫಿಜಿಕಲ್’ ಜೀವನದ ಬಗ್ಗೆ ನನಗೆ ವಿಶೇಷ ಪ್ರೀತಿ ಮತ್ತು ಕೌತುಕ. ಅದು ಅವರ ಆಧ್ಯಾತ್ಮದ ಮೂಲಾಧಾರ ಚಕ್ರಶಕ್ತಿಗಳ ಅಸ್ಮಿತೆಯ ಹುಡುಕಾಟ ಇದ್ದೀತು.
ಒಮ್ಮೆ ಅರಳಗುಂಡಿಗಿಯಲ್ಲಿ ಎಂದಿನಂತೆ ಯಥಾಪ್ರಕಾರ ಲೋಕಲೀಲಾ ಗೋಷ್ಠಿ. ಮೇಲ್ವರ್ಗದವರ ಮನೆಯಲ್ಲಿ ನಡೆಯುವ ಗೋಷ್ಠಿಗೆ ಅದೇ ಊರಿನ ದಲಿತನೊಬ್ಬನ ಪ್ರವೇಶ. ದಲಿತ ಸಾಷ್ಟಾಂಗ ಹಾಕುತ್ತಾನೆ. ಅವನನ್ನು ಉದ್ದೇಶಿಸಿ ಅಪ್ಪನವರು ” ನಿನ್ನ ಮನೆಯಿಂದ ಕಜ್ಜಭಜ್ಜಿ ಉಣ್ಣುವಾಸೆ. ಮನೆಗೆ ಹೋಗಿ ನೆರೆದಿರುವ ನಮಗೆಲ್ಲ ರೊಟ್ಟಿ ಊಟ ತಗೊಂಬಾ” ಎಂದು ಹಂಬಲಿಸುತ್ತಾರೆ. ಸಾಷ್ಟಾಂಗ ಹಾಕಿ ಕೈಕಟ್ಟಿ ನಿಂತ ದಲಿತನಿಗೆ ದುಗುಡ. ಮರು ಉಸುರಲಾಗದ ಮುಜುಗರ. ಅದನ್ನು ಮನಗಂಡ ಅಪ್ಪಗಳು ಮತ್ತೊಮ್ಮೆ ಕಟ್ಟುನಿಟ್ಟಾಗಿ “ನಿಮ್ಮಪ್ಪನಿಗೆ ಹಸಿವಾಗಿದೆ, ಹೋಗಿ ಮನೆಯಿಂದ ಊಟ ತಗೊಂಬಾ ಹೋಗು ಮಗನೇ” ಎಂದು ಏರು ಸ್ವರದಲ್ಲಿ ಆದೇಶ ನೀಡುತ್ತಾರೆ.
ಅವನು ಓಡೋಡಿ ಮನೆಗೆ ಹೋಗಿ ರೊಟ್ಟಿಬುತ್ತಿ ತರುತ್ತಾನೆ. ನೆರೆದಿರುವ ಮೇಲ್ಜಾತಿಯ ಎಲ್ಲರೂ ದಲಿತನ ಮನೆಯ ಪ್ರಸಾದ ಸೇವಿಸುತ್ತಾರೆ. ಈ ಪ್ರಸಂಗವನ್ನು ಶ್ರೀಮಠದ ಡಾ. ರುದ್ರಮುನಿ ಶಿವಾಚಾರ್ಯರೇ ನನಗೆ ವಿವರಿಸಿದರು. ವೀರೇಶ್ವರ ದೇವರ ಕುರಿತು ಭಾವ ವಿರೇಚನದ ಇಂತಹ ನೂರಾರು ಕಥನಗಳಿವೆ. ಕೆಲವು ದಂತಕತೆಗಳಂತೆ ಮತ್ತೆ ಕೆಲವು ಸ್ಫೋಟಕ ಸೆಳೆತಗಳು. ವೀರೇಶ್ವರ ದೇವರು ಜನಸಾಮಾನ್ಯರ ಬಾಯಲ್ಲಿ ಈರಯ್ಯ ಮುತ್ಯಾ ಎಂದೇ ಜನಜನಿತರು. ಅವರಿಗೋ ಗುರುನಾಥನಂತಹ ಅಪ್ಪನೆಂದು ಕರೆಸಿಕೊಳ್ಳುವಲ್ಲಿ ಖುಷಿಯಿತ್ತು. ‘ಎಂಥಾ ಗುರುನಾಥನೋ ಭಾಳ ಅಂತಃಕರಣ ಉಳ್ಳಾತನೋ…’ ಎಂಬುದು ಅವರನ್ನು ಕಂಡ ಕೂಡಲೇ ಥಟ್ಟಂತ ಅನಿಸುತ್ತಿತ್ತು. ಅದು ಗುರು ಶಿಶುಮಕ್ಕಳ ಅನುಸಂಧಾನ. ಅಂತೆಯೇ ಅವರು ಲಿಂಗೈಕ್ಯರಾದಾಗ ಮನೆಯ ಅಪ್ಪನೇ ತೀರಿಕೊಂಡಾಗ ಅಳುವಂತೆ ಶಿಶುಮಕ್ಕಳು ಬೋರ್ಯಾಡಿ ಅಳುತ್ತಿದ್ದುದು ಮನಸು ಕಲಕುವಂತಿತ್ತು. ಬದುಕಿದ್ದಾಗ ತಾನೊಂದು ಪ್ರಮುಖ ಮಠ ಪೀಠದ ಮುಖ್ಯಸ್ಥನೆಂಬ ಅಹಮಿಕೆ ಅಲ್ಲ, ಅದರ ನೆನಪು ಸಹಿತ ಅವರಿಗೆ ಯಾವತ್ತೂ ಇರ್ತಿರಲಿಲ್ಲ. ತಾನೆಷ್ಟು ದೊಡ್ಡವನೆಂಬ ಅದರ ಅಳತೆ ಮಾಡಿಕೊಳ್ಳುವುದಲ್ಲ, ಆ ಕುರಿತು ಅವರಿಗೆ ಅರಿವು ಕೂಡಾ ಇರ್ತಿರಲಿಲ್ಲ. ಅವರು ಹೋದ ಮೇಲೆಯೇ ನಾವು ಅವರ ದೊಡ್ಡಸ್ತನದ ಅಳತೆ ಮಾಡುತ್ತಿದ್ದೇವೆ ಎನಿಸುತ್ತಿದೆ.
ಮಡಿವಾಳಪ್ಪ ತೋಡಿದ ಬಾವಿ, ಮಾಡಿದ ಕೃಷಿ, ನೆಟ್ಟ ನೂರಾರು ಸಸಿಗಳು ಗಿಡಮರಗಳಾಗಿದ್ದು, ಆ ಎಲ್ಲ ನಾಟೀ ಗಿಡಮೂಲಿಕೆಗಳ ಬಗ್ಗೆ ಅವರಿಗೆ ಅದಮ್ಯ ಪ್ರೀತಿ ಇತ್ತು. ಖುದ್ದು ತಾವೇ ಗಳೆ ಹೊಡೆಯುವುದು, ಎಡೆ ಕುಂಟೆ ಹೊಡೆಯುವುದರಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಸರಳತೆಗೆ ಅಕ್ಷರಶಃ ಹೇಳಿಸಿ ಮಾಡಿದಂತಿದ್ದರು. ಕೆಲವು ಮಂದಿ ವಿಚಾರವಾದಿಗಳು ಅದನ್ನು ದೌರ್ಬಲ್ಯವೆಂಬಂತೆ ಹಗುರವಾಗಿ ಭಾವಿಸುತ್ತಿದ್ದರು. ಅಂಥವರ ಪಾಲಿಗೆ ತಾಯ್ತನ ಎಂಬುದು ಸಣ್ಣದೊಂದು ಭಾವುಕತೆಯಂತೆ ಭಾಸವಾಗಿರುತ್ತದೆ. ಅಂಥವರಿಗೆ ಕ್ಷಮಾಗುಣ ಕೂಡ ದುರ್ಬಲತೆ ಅಥವಾ ಹೇಡಿತನದಂತೆ ಕಂಡಿದ್ದರೆ ಅಚ್ಚರಿಯೇನಲ್ಲ. ಅದ್ಯಾವುದಕ್ಕೂ ಅವರು ತಲೆಯಲ್ಲ, ಬೈತಲೆಯನ್ನೇ ಕೆಡಿಸಿ ಕೊಂಡವರಲ್ಲ.
ಆರೂಢ ಬಾಳಿನ ಎಂಬತ್ತು ವರುಷಗಳ ಸಾರ್ಥಕ ಜೀವನ ಸಾಗಿಸಿದ ವೀರಯ್ಯ ಅಪ್ಪಗಳು ೨೩.೦೭.೧೯೮೯ ರಂದು ಮಹಾಂತ ಮಡಿವಾಳರ ಸಾಮೀಪ್ಯದ ಶಿವಸಾಯುಜ್ಯಕ್ಕೆ ಅರ್ಪಿತಗೊಂಡರು. ಅವರ ಅಗಲಿಕೆಯಿಂದ ಅವಧೂತ ಪರಂಪರೆಯ ಅಚಲ ಕೊಂಡಿಯೊಂದು ಕಳಚಿಕೊಂಡಂತಾಯಿತು. ಅವರ ದೇಹತ್ಯಾಗದ ಸುದ್ದಿಯನ್ನು ಮಾಧ್ಯಮಗಳು ಪ್ರಚುರ ಪಡಿಸಿದವು. ಸುದ್ದಿ ತಿಳಿದು ಸಹಸ್ರಾರು ಮಂದಿ ಶಿಷ್ಯರು ಕಡಕೋಳಕ್ಕೆ ಧಾವಿಸಿ ಬಂದರು. ಪಡೆದಪ್ಪನನ್ನು ಕಳೆದುಕೊಂಡ ಸಹಸ್ರ ಸಹಸ್ರ ಸಂಖ್ಯೆಯ ಶಿಶುಮಕ್ಕಳು ಅನಾಥಪ್ರಜ್ಞೆಯಿಂದ ನರಳಾಡಿದರು. ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಎರಡು ದಿನಗಳ ಕಾಲ ಪೂಜ್ಯರ ಪಾರ್ಥಿವ ಶರೀರದ ಮುಂದೆ ನಿರಂತರ ರೋದಿಸುತ್ತಲೇ ಕುಂತಿದ್ದರು.
ರುದ್ರಮುನಿ ಶಿವಾಚಾರ್ಯರು ಶ್ರೀಮಠಕ್ಕೆ ಪೀಠಾಧೀಶರಾಗಿ ಬಂದಮೇಲೆ ವೀರೇಶ್ವರ ದೇವರುಗಳ ಶಿಶುಮಕ್ಕಳ ಸಂಪ್ರದಾಯಕ್ಕೆ ತಬ್ಬಲಿತನ ದೂರಾದ ನಿರಾಳತೆ ಹರಿದು ಬಂದಿತು. ಶ್ರೀಮಠವು ಶ್ರೀವೀರೇಶ್ವರ ಹೆಸರಿನ ಸಾಹಿತ್ಯ ಪ್ರಕಾಶನ ಸ್ಥಾಪಿಸಿದೆ. ಪ್ರಕಾಶನವು ಮೀನಾಕ್ಷಿ ಬಾಳಿ ಅವರು ಬರೆದ ‘ತನ್ನ ತಾನು ತಿಳಿದ ಮೇಲೆ’ ಎಂಬ ಸಂಶೋಧನಾ ಮಹಾಪ್ರಬಂಧ ಸೇರಿದಂತೆ ಇದುವರೆಗೆ ಹದಿನೈದಕ್ಕು ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದೆ. ಹಂದಿಗನೂರಲ್ಲಿ ಶ್ರೀ ವೀರೇಶ್ವರ ದೇವರ ಮಠ ನಿರ್ಮಾಣವಾಗಿದೆ. ಅವರ ಹೆಸರಲ್ಲಿ ಸಮುದಾಯ ಭವನ, ಹಿರಿಯ ಪ್ರಾಥಮಿಕ ಶಾಲೆ ಚಾಲನೆಯಲ್ಲಿವೆ.
ಇತ್ತೀಚೆಗೆ ವೀರೇಶ್ವರ ದೇವರ ಶ್ವೇತಶಿಲೆಯ ಪುತ್ಥಳಿಯನ್ನು ಅವರ ಶಿಷ್ಯ ಸಂಪ್ರದಾಯದ ಕೋಣಶಿರಸಗಿಯ ಚಾಂದಕವಟೆ ಸಿದ್ರಾಮಪ್ಪರ ಮಗ ಗುರುಬಸಪ್ಪ ಭಕ್ತಿಯಿಂದ ಅನಾವರಣ ಮಾಡಿದ್ದಾರೆ. ಪ್ರತಿವರ್ಷವೂ ಕಡಕೋಳದಲ್ಲಿ ವೀರೇಶ್ವರ ದೇವರ ಪುಣ್ಯಸ್ಮರಣೆಯ ಜಾತ್ರೆ ಜರುಗುತ್ತದೆ. ಜಾತ್ರೆಗೆ ಕಜ್ಜಭಜ್ಜಿಯ ಮಹಾಪ್ರಸಾದ. ತನ್ಮೂಲಕ ಅವರಿಂದ ಗುರುಬೋಧೆ ಪಡೆದ ಸಹಸ್ರಾರು ಮಂದಿ ಶಿಷ್ಯರು ಪೂಜ್ಯರ ಅನುಗ್ರಹದ ಪ್ರಭಾವಳಿಯಲ್ಲಿ ಮಿಂದು ಭಕ್ತಿ ಸಮರ್ಪಣೆಯಿಂದ ಸಂತುಲಿತರಾಗುತ್ತಾರೆ. ಇದೇ ದಿನಾಂಕ ೧೦.೦೭.೨೦೨೩ ರಂದು ಕಡಕೋಳ ಶ್ರೀಮಠದಲ್ಲಿ ಶ್ರೀವೀರೇಶ್ವರ ಶ್ರೀಗಳ ಮುವತ್ನಾಲ್ಕನೇ ವರ್ಷದ ಪುಣ್ಯಸ್ಮರಣೆ.
Comments 9
ಸದಾಶಿವ ಹೆರೂರು
Jul 12, 2023ತತ್ವಪದಕಾರರ ನಡೆ, ಬದುಕಿನ ಶೈಲಿ, ಮಾತನಾಡುವ ಧಾಟಿ ಎಲ್ಲವೂ ಬೇರೆಯೇ. ಅವರು ಬದುಕಿಗೆ ಹತ್ತಿರವಾಗಿದ್ದು ಪದ ಕಟ್ಟುತ್ತಾರೆ. ನಾನು ಬರಬಾರದಿತ್ತು- ತುಂಬಾ ಮನಸ್ಸಿಗೆ ನಾಟುವ ತತ್ವಪದ.
Jagadeesh Haliyal
Jul 12, 2023ಮಡಿವಾಳಪ್ಪನವರ ನಂತರದ ವಂಶಾವಳಿಯ ಬಗೆಗೆ ಮಾಹಿತಿ ಓದಿ ಆನಂದ, ಆಶ್ಚರ್ಯಗಳಾದವು. ಕಡಕೋಳ ಶಿವಯೋಗಿ ಎಂದೇ ನಾವು ಮಡಿವಾಳಪ್ಪನವರನ್ನು ನೆನೆಯುತ್ತೇವೆ. ಲೇಖನಕ್ಕೆ ಧನ್ಯವಾದಗಳು.
ಉಮೇಶ್ ಹೊಸಮಠ
Jul 17, 2023ತತ್ವಪದಕಾರರ ಲೋಕದೊಳಗೆ ಕರೆದುಕೊಂಡು ಹೋಗುವ ಲೇಖನದಲ್ಲಿ ಉಲ್ಲೇಖಿಸಿದ ಪದಗಳು ಹಾಡಿನ ಗುಂಗನ್ನು ಹಿಡಿಸಿದವು. ಥ್ಯಾಂಕ್ಯೂ ಸರ್.
Bhuvanesh Davangere
Jul 18, 2023ಮಡಿವಾಳಪ್ಪನವರ ಶ್ರೀಮಠದ ಪರಂಪರೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಒಂದು ಮಠ ತನ್ನ ಮೂಲ ಆಶಯವನ್ನು ಬಿಟ್ಟುಕೊಡದೆ ಮುನ್ನಡೆಯುವುದು ಸುಲಭವಲ್ಲಾ. ಮಠ ಆರ್ಥಿಕವಾಗಿ ಬೆಳೆದಂತೆ ಅಲ್ಲಿಯ ಆಚರಣೆಗಳು ಬೇರೆ ದಿಕ್ಕು ಹಿಡಿಯುತ್ತವೆ. ಹೃದಯವನ್ನು ಹಸನು ಮಾಡುವ ಕೆಲಸದಿಂದ ದೂರ ಸರಿಯುತ್ತವೆ.
Chandramouli Raichur
Jul 18, 2023ಎಪ್ಪ ಎಂಥಾ ಮರವಿಯೋ/ ಅಬ್ಬಾ/
ಎಪ್ಪ ಇದು ಎಂಥ ಮಾಯಿಯೋ ಅಬ್ಬಾ //- ಈ ಗಾಯನವನ್ನು ನಮ್ಮ ಊರಿನಲ್ಲಿ ಕಲ್ಲಪ್ಪ ಮುತ್ಯಾ ಅನ್ನುವವರು ತುಂಬಾ ಚೆನ್ನಾಗಿ ಹಾಡುತ್ತಿದ್ದರು. ನಿಮ್ಮ ಲೇಖನ ಓದಿ ನನ್ನೂರು ನೆನಪಾಯಿತು.
ಮುರುಗೇಶಪ್ಪ ನಿಡಗುಂದಿ
Jul 23, 2023ಕಡಿಕೋಳ ಮಡಿವಾಳಪ್ಪನವರ ಪರಂಪರೆಯಲ್ಲಿ ಬರುವವರು ಆರೂಢರೋ? ತತ್ವಪದಕಾರರೋ? ಸಿದ್ಧರೋ? ಲಿಂಗವಂತರೋ?- ಈರಪ್ಪ ತಾತಾ ಆರೂಢ ಜೀವನಕ್ಕೆ ಒಗ್ಗಿದವರು ಎಂದು ಲೇಖನದಲ್ಲಿ ಹೇಳಲಾಗಿದೆ. ಅವರ ಜೀವನಶೈಲಿ ಸಂತರಂತೆ ಇತ್ತೆಂದು ಗೊತ್ತಾಯಿತು, ಸಂತರಿಗೆ ಜಾತಿ, ಕುಲಗಳಿಲ್ಲವಾದರೂ ಅವರ ಗುರುಪರಂಪರೆ ಯಾವುದೆಂದು ತಿಳಿಯಲು ಕೇಳಿದ್ದೇನೆ.
ಬಸಪ್ಪಗೌಡ ಶಂಕರಿ
Jul 25, 2023ಈರಯ್ಯ ಮುತ್ಯಾ ಅವರ ಜೀವನವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ. ಅವರೂ ತತ್ವಪದಗಳನ್ನು ಬರೆದಿದ್ದಾರೆಯೇ? ಬರೆದಿದ್ದರೆ ಅವು ಎಲ್ಲಿ ಸಿಗುತ್ತವೆ?
VIJAYAKUMAR KAMMAR
Jul 26, 2023ಚಂದದ ಲೇಖನ 🙏🙏
Shivalinga Pani
Jul 28, 2023ಈರಯ್ಯ ಮುತ್ಯಾ ಅವರ ನೆಚ್ಚಿನ ತತ್ವಪದ- “ನಾ ಬರಬಾರದಿತ್ತು ಇಂಥಾ ಊರಿಗೆ/ ಬಂದು ಬಿದ್ದೇನ ಮಾಯದ ಬಲೆಯೊಳಗೆ/” ಅವರ ಮಂಗಳಾರತಿ ಗೀತೆಯೂ ಆಗಿತ್ತು… ಯೋಗಿಯ ಕತೆ ಸೊಗಸಾಗಿ ಮೂಡಿಬಂದಿದೆ.