ತೊತ್ತುಗೆಲಸವ ಮಾಡು
ಹೊತ್ತಾರೆ ಎದ್ದು, ಅಗ್ಘವಣಿ ಪತ್ರೆಯ ತಂದು,
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು?
ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಮದೇವನ.
ಮನುಷ್ಯ ಹೇಗೆ ಸಮಯದ ಸದ್ಬಳಕೆ ಮಾಡಿಕೊಳ್ಳಬೇಕೆಂಬ ಸೂಚನೆ ಬಸವಣ್ಣನವರ ಈ ವಚನದಲ್ಲಿದೆ. ಜನ ಕಾಲದ ಸದುಪಯೋಗಕ್ಕಿಂತ ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚು. ಎಲ್ಲರೂ ಕಾಲದ ಅಧೀನರು. ಕಾಲ ಯಾರಿಗೂ ಕಾಯುವುದಿಲ್ಲ. ಮನುಷ್ಯ ಕಾಲದ ಸದ್ಬಳಕೆ ಮಾಡಿಕೊಂಡು ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಬದುಕಿನಲ್ಲಿ ತುಂಬಾ ಅಮೂಲ್ಯವಾದುದು ಸಮಯ. ಇದಕ್ಕೆ ವೇಳೆ, ಹೊತ್ತು, ಕಾಲ ಎಂದೆಲ್ಲ ಕರೆಯುವರು. ಹಣ ಕೊಟ್ಟು ಕಾಲ ಕೊಳ್ಳಲು ಸಾಧ್ಯವಿಲ್ಲ. ದೇವರು ಕರುಣಿಸಿರುವ ಸಮಯವನ್ನು ಒಬ್ಬ ಹೇಗೆ ಬಳಕೆ ಮಾಡಿಕೊಳ್ಳುವನು ಎನ್ನುವ ಆಧಾರದ ಮೇಲೆ ಅವನ ವ್ಯಕ್ತಿತ್ವ ರೂಪಿತವಾಗುವುದು. ಈ ಲೋಕದ ಪ್ರತಿಯೊಬ್ಬ ವ್ಯಕ್ತಿಗೂ ಇರುವುದು ಹಗಲು 12 ತಾಸು, ರಾತ್ರಿ 12 ತಾಸು. ಈ ವೇಳೆಯನ್ನು ಹೇಗೆ ಬಳಸಿಕೊಳ್ಳುವರು ಎನ್ನುವ ಆಧಾರದ ಮೇಲೆ ಅವರ ಸಾಧನೆಯನ್ನು ಗುರುತಿಸಲಾಗುವುದು. ಕೆಲವರು ಸದಾ ದುಡಿಮೆ, ಸತ್ಚಿಂತನೆ, ಸದ್ವರ್ತನೆಯಲ್ಲಿಯೇ ಕಾಲದ ಸದ್ಬಳಕೆ ಮಾಡಿಕೊಂಡರೆ ಮತ್ತೆ ಕೆಲವರು ನಿದ್ರೆ, ಕಲಹ, ಜೂಜು, ವಿಷಯಭೋಗ, ವಿಲಾಸಿ ಜೀವನ ಇಂಥದರಲ್ಲೇ ಕಾಲದ ದುರ್ಬಳಕೆ ಮಾಡಿಕೊಳ್ಳುವರು. ಅಲ್ಲಿಗೆ ಅವರ ಕಾಲ ಮುಗಿಯಿತೆಂದೇ ಅರ್ಥ. ಇಲ್ಲಿ ಕಾಲ ಎಂದರೆ ಯಮ, ಸಾವು. ಮನುಷ್ಯನಿಗೆ ಸಾವು ಯಾವಾಗ, ಎಲ್ಲಿ, ಹೇಗೆ ಬರುತ್ತದೆಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅದರಲ್ಲೂ ಕೊರೊನಾ ವೈರಸ್ ಯಾವಾಗ, ಯಾರಿಗೆ, ಎಲ್ಲಿ, ಹೇಗೆ ತಗಲಿಕೊಳ್ಳುವುದೋ ಹೇಳಲು ಸಾಧ್ಯವಿಲ್ಲ. ಹಾಗಾಗಿ ಸಾವು ಬರುವ ಮುನ್ನವೇ ವ್ಯಕ್ತಿ ಸಾರ್ಥಕವಾದ, ಸಮಾಜಮುಖಿ ಕಾರ್ಯಗಳನ್ನು ಮಾಡಿ ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳುವ ಸಂಕಲ್ಪ ಸ್ವೀಕರಿಸಬೇಕು. ಶಿವಶರಣರೆಂಬ ಗಾಳಿ ಬಂದಾಗ ತೂರಿಕೊಳ್ಳಬೇಕು. ಗಾಳಿ ಯಾರ ಅಧೀನವೂ ಅಲ್ಲ. ಈ ನೆಲೆಯಲ್ಲಿ ಬಸವಣ್ಣನವರ ಈ ವಚನ ಅರ್ಥಪೂರ್ಣವಾಗಿದೆ.
ವ್ಯಕ್ತಿ ಈ ಲೋಕಕ್ಕೆ ಬಂದಿರುವುದು ಕೇವಲ ಉಂಡುಟ್ಟು, ಮಜಾ ಉಡಾಯಿಸಿ, ಹೇಗೋ ಕಾಲ ಕಳೆಯಲು ಅಲ್ಲ. ಬಸವಣ್ಣನವರು ಹೇಳುವಂತೆ ಪ್ರತಿದಿನ ಬೆಳಗಿನಜಾವ ಎದ್ದು ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು. ಪೂಜೆ ಮಾಡಿಕೊಳ್ಳುವ ಮುನ್ನ ನೀರು, ಹೂ-ಪತ್ರೆಗಳನ್ನು ತರಬೇಕು. ಸ್ನಾನಾದಿ ಕ್ರಿಯೆಗಳನ್ನು ಮುಗಿಸಿ ಪ್ರಶಾಂತ ಸ್ಥಳದಲ್ಲಿ ಕೂತು ಲಿಂಗಪೂಜೆಯನ್ನು ಪ್ರೀತಿಯಿಂದ ಮಾಡಬೇಕು. ಅದರಿಂದ ಕಾಲ, ಕರ್ಮ, ಅಪಮೃತ್ಯು ತಪ್ಪುವವು ಎನ್ನುವ ಆಶಯವೂ ಬಸವಣ್ಣನವರದು. ಆದರೆ ಎಷ್ಟೋ ಜನರು ಇನ್ನೂ ಸಾಕಷ್ಟು ವೇಳೆ ಇದೆ; ಇಷ್ಟು ಬೇಗ ಏಳುವುದೇಕೆ ಎಂದು ಸೋಮಾರಿತನ ತೋರುವರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಧರ್ಮ, ಪೂಜೆ ಬೇಕೇ ಎಂದು ಅಪಹಾಸ್ಯ ಮಾಡುವರು. ಆದರೆ ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹೊರಟು ಹೋದರೆ? ಪ್ರಾಣ ಹೋದಮೇಲೆ ಅವರನ್ನು ಕೇಳುವವರು ಯಾರು ಎನ್ನುವ ಪ್ರಶ್ನೆ ಬಸವಣ್ಣನವರದು. ಹಾಗಾಗಿ ವ್ಯರ್ಥವಾಗಿ ಸಮಯ ಕಳೆದುಹೋಗುವ ಮುನ್ನ ಅಂಗೈಯಲ್ಲಿ ಲಿಂಗಯ್ಯನನ್ನು ಹಿಡಿದು ಅಭಿಷೇಕ ಮಾಡಿಕೊಳ್ಳಬೇಕು. ಹೂ-ಪತ್ರೆಗಳನ್ನು ಧರಿಸಿ ಪೂಜೆ ಮಾಡಿಕೊಳ್ಳಬೇಕು. ನಂತರ ಅಂಗೈಯ್ಯಲ್ಲಿರುವ ಲಿಂಗವನ್ನು ಏಕಾಗ್ರದೃಷ್ಟಿಯಿಂದ ನೋಡುತ್ತ ಮನದಲ್ಲಿ `ನಮಃ ಶಿವಾಯ’ ಎನ್ನುವ ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು. ಇದನ್ನು ಬಿಟ್ಟು ವ್ಯರ್ಥವಾಗಿ ಕಾಲಹರಣ ಮಾಡಿದರೆ ಅಷ್ಟರಲ್ಲೇ ಯಮನ ಪಾಶ ಬೀಳಬಹುದು. ಬಸವಣ್ಣನವರು ಈ ವಚನದಲ್ಲಿ `ಹೊತ್ತು’ ಎನ್ನುವ ಪದವನ್ನು ತುಂಬಾ ಚಮತ್ಕಾರಿಕವಾಗಿ ಬಳಸಿದ್ದಾರೆ. ಮೊದಲ ಸಾಲಿನಲ್ಲಿ `ಹೊತ್ತಾರೆ’ ಎನ್ನುವಾಗ ಸೂರ್ಯೋದಯಕ್ಕೆ ಮುನ್ನ ಎನ್ನುವ ಅರ್ಥ. ಎರಡನೆಯ ಸಾಲಿನಲ್ಲಿ `ಹೊತ್ತು’ ಎನ್ನುವುದು ಸಮಯ, ವೇಳೆ ಎನ್ನುವುದಕ್ಕೆ ಸಂವಾದಿಯಾಗಿ ಬಳಕೆಯಾಗಿದೆ. ಮೂರನೆಯ ಸಾಲಿನಲ್ಲಿ `ಹೊತ್ತು’ ಎನ್ನುವುದನ್ನು ಮೃತ್ಯು ಎನ್ನುವ ಅರ್ಥದಲ್ಲಿ ಪ್ರಯೋಗಿಸಿದ್ದಾರೆ. ಅಂದರೆ ಸಾವು ಬಂದು ನಾಲ್ಕು ಜನರು ಹೊತ್ತೊಯ್ಯುವಂತಾದರೆ ನಿನ್ನನ್ನು ಯಾರು ಬಲ್ಲರು ಎನ್ನುವ ಪ್ರಶ್ನೆ ಇಲ್ಲಿದೆ. ನಾಲ್ಕನೆಯ ಸಾಲಿನಲ್ಲಿ ಸಮಯ ಕಳೆಯುವ ಮೊದಲು, ಮೃತ್ಯು ಆವರಿಸುವ ಮೊದಲು `ತೊತ್ತುಗೆಲಸ’ ಮಾಡು ಎನ್ನುವರು. ತೊತ್ತುಗೆಲಸ ಎಂದರೆ ಪೂಜೆ, ಕಾಯಕ, ದಾಸೋಹ ಈ ಮೂರು ತತ್ವವನ್ನು ಪರಿಪಾಲಿಸು ಎಂದು ಅರ್ಥ. ಬಸವಾದಿ ಶಿವಶರಣರು ಒತ್ತು ಕೊಟ್ಟದ್ದೇ ಇಷ್ಟಲಿಂಗ ಪೂಜೆ, ಕಾಯಕ ಶ್ರದ್ಧೆ, ದಾಸೋಹ ಪ್ರಜ್ಞೆಗೆ. ಇವು ಆದರ್ಶ ಬದುಕಿಗೆ ಆಧಾರ ಸ್ಥಂಭಗಳು. ವ್ಯಕ್ತಿತ್ವದ ವಿಕಾಸಕ್ಕೆ ಪೂರಕ ಶಕ್ತಿ ತುಂಬುವ ತತ್ವಗಳು. ಈ ನೆಲೆಯಲ್ಲೇ ಬಸವಣ್ಣನವರ ಮತ್ತೊಂದು ವಚನ ಗಮನಾರ್ಹವಾಗಿದೆ.
ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುಹೋಗದ ಮುನ್ನ,
ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ,
ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ,
ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲಸಂಗಮದೇವನ.
ಕೈ ಕಾಲು ಗಟ್ಟಿ ಇದ್ದು ಮೈಯಲ್ಲಿ ಶಕ್ತಿ, ತಲೆಯಲ್ಲಿ ಬುದ್ಧಿ, ಮನದಲ್ಲಿ ಏನಾದರೂ ಮಾಡಬೇಕು ಎನ್ನುವ ಛಲ ಇರುವಾಗ ಎಷ್ಟೋ ಜನರು ಅವುಗಳ ಸದ್ಬಳಕೆ ಮಾಡಿಕೊಳ್ಳದೆ ಸ್ವೇಚ್ಛೆಯಾಗಿ ಕಾಲ ಕಳೆಯುವರು. ಹಾಗಂತ ಅವರ ಶರೀರ ಯಾವಾಗಲೂ ಆರೋಗ್ಯಪೂರ್ಣವಾಗಿ, ಗಟ್ಟಿಮುಟ್ಟಾಗಿರಲು ಸಾಧ್ಯವಿಲ್ಲ. ಶರೀರ ಧರ್ಮಕ್ಕನುಗುಣವಾಗಿ ರೋಗರುಜಿನುಗಳು ಅಂಟಿಕೊಳ್ಳಬಹುದು. ಅಪಘಾತವಾಗಿ ಕೈ ಕಾಲು ಮುರಿಯಬಹುದು. ವಯೋಸಹಜವಾಗಿ ಮುಪ್ಪು ಆವರಿಸಬಹುದು. ಅಂಥ ಒಂದು ಮನಮಿಡಿಯುವ ಚಿತ್ರಣ ವಚನದಲ್ಲಿದೆ. ದೇಹ ಮುಪ್ಪಿನಿಂದ ಜರ್ಜರಿತವಾದಾಗ ಕೆನ್ನೆಯ ಚರ್ಮ ಅಷ್ಟೇ ಏಕೆ ಇಡೀ ದೇಹದ ಚರ್ಮ ಸುಕ್ಕುಗಟ್ಟುವುದು. ಹಲ್ಲುಗಳು ಉದುರಿ ಆಹಾರ ಜಗಿಯುವುದೇ ಕಷ್ಟವಾಗಬಹುದು. ಬಾಯಿಂದ ಮಾತುಗಳು ಸ್ಪಷ್ಟವಾಗಿ ಬರದಿರಬಹುದು. ಕಿವಿಗಳು ಕೇಳದಂತಾಗಬಹುದು. ದೇಹ ಬಾಗುವುದು. ನಡೆಯಲು ಸಾಧ್ಯವಾಗದೆ ಕೋಲು ಬರಬಹುದು. ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲು ಆಗದೆ ಮತ್ತೊಬ್ಬರ ಆಶ್ರಯ ಅಥವಾ ಹಂಗಿನಲ್ಲಿ ಬಾಳುವ ಪರಿಸ್ಥಿತಿ ಬರಬಹುದು. ಇನ್ನೇನು ಸಾವು ಎಷ್ಟು ಬೇಗ ಆಕ್ರಮಿಸಬೇಕೆಂದು ಕಾಯುತ್ತಲಿರಬಹುದು. ಆಗ ಏನು ತಾನೆ ಮಾಡಲು ಸಾಧ್ಯ? ಅದಕ್ಕಾಗಿ ಬಸವಣ್ಣನವರು ಹೇಳುವುದು ಇಂಥ ಸ್ಥಿತಿ ಬಂದೊದಗುವ ಮೊದಲೇ ಲಿಂಗಯ್ಯನ ಪೂಜೆ ಮೂಲಕ `ಶಿವಯೋಗ’ ಸಾಧನೆ ಮಾಡು ಎಂದು. ಶಿವಯೋಗ ಸಾಧನೆ ಎಂದರೆ ಗಂಟೆಗಟ್ಟಲೆ, ದಿನಗಟ್ಟಲೆ ಲಿಂಗಪೂಜೆ ಮಾಡುವುದಲ್ಲ. ಬದಲಾಗಿ ಕಾಯಕ, ದಾಸೋಹ ತತ್ವವನ್ನೂ ಮೈಗೂಡಿಸಿಕೊಳ್ಳುವುದು. ಲಿಂಗಕ್ಕೆ ಸಮರ್ಪಿಸುವ ನೈವೇದ್ಯ ಕೂಡ ಕಾಯಕದಿಂದಲೇ ಬಂದುದಾಗಿರಬೇಕು ಎನ್ನುವರು ನುಲಿಯ ಚಂದಯ್ಯನವರು. ಈ ನೆಲೆಯಲ್ಲಿ ಮಾದಾರ ಧೂಳಯ್ಯನವರ ವಚನ ಸತ್ಯಶುದ್ಧ ಕಾಯಕದ ಮಹತ್ವವನ್ನು ಮನದಟ್ಟು ಮಾಡುವಂತಿದೆ.
ಸತ್ಯಶುದ್ಧ ಕಾಯಕವ ಮಾಡಿ ತಂದು,
ವಂಚನೆಯಿಲ್ಲದೆ ಪ್ರಪಂಚವಳಿದು,
ನಿಚ್ಚಜಂಗಮಕ್ಕೆ ದಾಸೋಹವ ಮಾಡುವ
ಸದ್ಭಕ್ತನ ಹೃದಯದೊಳಗೆ ಅಚ್ಚೊತ್ತಿದಂತಿಪ್ಪ
ಕಾಮಭೀಮ ಧೂಳೇಶ್ವರ.
ಸತ್ಯಶುದ್ಧ ಕಾಯಕದಷ್ಟೇ ಮುಖ್ಯವಾದುದು `ಜಂಗಮ’ ದಾಸೋಹ. ಕಾಯಕದಿಂದ ಬಂದ ಪ್ರತಿಫಲವನ್ನು ಕಾಯಕಜೀವಿ ತಾನೊಬ್ಬನೇ ಬಳಸದೆ ಅದರಲ್ಲಿ ಕೆಲವು ಭಾಗವನ್ನಾದರೂ ಸಮಾಜಕ್ಕೆ ದಾಸೋಹ ರೂಪದಲ್ಲಿ ನೀಡಬೇಕು. ಅಂಥ ಭಕ್ತನ ಹೃದಯದಲ್ಲಿ ಮಾತ್ರ ಶಿವ ಅಚ್ಚೊತ್ತಿದಂತೆ ಇರಬಲ್ಲ ಎನ್ನುವ ಮಾತು ಮತ್ತೆ ಮತ್ತೆ ಮನನ ಮಾಡುವಂತಹುದು. ದೇವರನ್ನು ಜನರು ಎಲ್ಲೆಲ್ಲೋ ಹುಡುಕುವರು. ಅದನ್ನೇ ಡಾ. ಜಿ ಎಸ್ ಶಿವರುದ್ರಪ್ಪನವರು `ಎಲ್ಲೋ ಹುಡುಕಿದೆ ಇಲ್ಲದ ದೇವರ’ ಎಂದು ತಮ್ಮ ಒಂದು ಪದ್ಯದಲ್ಲಿ ಹೇಳಿದ್ದಾರೆ. ಆ ದೇವರನ್ನು ಎಲ್ಲೋ ಹುಡುಕುವುದಲ್ಲ. ಆ ಚೈತನ್ಯ ನಾವು ಮಾಡುವ ಕಾಯಕ ಮತ್ತು ದಾಸೋಹ ತತ್ವದಲ್ಲೇ ಅಡಕವಾಗಿದ್ದಾನೆ. ಅದು ಕಾರಣವೇ `ಕಾಯಕವೇ ಕೈಲಾಸ’, `ಕಾಯವೇ ಕೈಲಾಸ’ ಎಂದು ಶರಣರು ಹೇಳಿದ್ದಾರೆ. ಕಾಯದಿಂದ ಮಾಡುವುದು ಕಾಯಕ. ಕಾಯ ಅಂದರೆ ದೇಹ. ಅದು ವ್ಯರ್ಥವಾಗಿ ಹಾಳಾಗಬಾರದು. ಜೀವವಿರುವವರೆಗೆ ಕಾಯಕ ಮಾಡುತ್ತಲೇ ಇರಬೇಕು. ಕಾಯಕ ಮಾಡದ ವೇಷಾಡಂಬರಿ ಭಕ್ತರನ್ನು ಕಂಡ ಪ್ರಭುದೇವರು ಹೇಳುವುದನ್ನು ನೋಡಿ:
ಕಳ್ಳಗಂಜಿ ಕಾಡ ಹೊಕ್ಕಡೆ ಹುಲಿ ತಿಂಬುದ ಮಾಬುದೆ?
ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ?
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೆ?
ಇಂತೀ ಮೃತ್ಯುವಿನ ಬಾಯ ತುತ್ತಾದ,
ವೇಷಾಡಂಬಕರ ನಾನೇನೆಂಬೆ ಗುಹೇಶ್ವರಾ.
ಮನುಷ್ಯ ಕಾಯಕ ಮರೆತು ಸಾವಿಗಂಜಿ ಏನೇನೋ ಮಾಡಲು ಮುಂದಾದರೆ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸುವರು ಪ್ರಭುದೇವರು. ಅದಕ್ಕೆ ಅವರು ಕೊಡುವ ನಿದರ್ಶನ: ಊರಲ್ಲಿದ್ದರೆ ಕಳ್ಳರ ಕಾಟವೆಂದು ಅವರಿಗೆ ಹೆದರಿ ಕಾಡನ್ನು ಸೇರಿದರೆ ಅಲ್ಲಿಯಾದರೂ ಸುರಕ್ಷಿತವಾಗಿ ಇರಬಲ್ಲರೇ? ಅಲ್ಲಿ ಹುಲಿಯ ಕಾಟ ಇದ್ದದ್ದೇ. ಅದು ಯಾವಾಗ ಅವರನ್ನು ಕಬಳಿಸುವುದೋ ಹೇಳಲಾಗುವುದಿಲ್ಲ. ಹುಲಿಯ ಕಾಟ ತಪ್ಪಿಸಿಕೊಳ್ಳಬೇಕು ಎಂದು ಹುತ್ತವನ್ನು ಹೊಕ್ಕರೆ ಅಲ್ಲಿ ಸರ್ಪ ಕಚ್ಚದೆ ಬಿಡುವುದೇ? ಆಗಲೂ ಆತ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಭಕ್ತರ ವೇಷ ಧರಿಸಿದರೆ ಈ ಯಾವ ತಾಪತ್ರಯವೂ ಇರುವುದಿಲ್ಲ ಎನ್ನುವ ವೇಷಾಡಂಬರಿಗಳಿಗೆ ಹುಟ್ಟು ಸಾವಿನ ಚಕ್ರ ತಪ್ಪದು. ಹೀಗೆ ಹೇಳುವ ಮೂಲಕ ಮನುಷ್ಯ ಇಂಥ ಕಪಟ ವೇಷಗಳನ್ನು ಧರಿಸಿ ತನ್ನನ್ನು ಭಕ್ತ, ಶರಣ ಎಂದು ಬಿಂಬಿಸಿಕೊಳ್ಳುವ ಬದಲು ಭಕ್ತನ ಮೊದಲ ಲಕ್ಷಣವಾದ ಲಿಂಗನಿಷ್ಠೆ, ಕಾಯಕ ಶ್ರದ್ಧೆ, ದಾಸೋಹ ಪ್ರಜ್ಞೆಯನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಅದನ್ನು ಬಿಟ್ಟು ವೇಷ ಧರಿಸುವುದು ಸಲ್ಲದು ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ ಪ್ರಭುದೇವರು. ಕಾಯಕ ಮತ್ತು ದಾಸೋಹದ ವಿಚಾರವಾಗಿ ಶಿವಲೆಂಕ ಮಂಚಣ್ಣನವರ ವಿಚಾರಗಳು ಮನನೀಯವಾಗಿವೆ.
ಕಾಯಕವೆಂದು ಕಾಯವ ಬಳಲಿಸದೆ, ತನು ಕರಗದೆ, ಮನ ನೊಯದೆ,
ಕಾಡಿ ಬೇಡಿ ಮಾಡುವುದು ದಾಸೋಹವೆ?
ಆವ ಕಾಯಕವು ಪ್ರಾಣವೆ ಕಡೆಯಾಗಿ ದ್ರವ್ಯ ಮೊದಲಾಗಿ,
ಚಿತ್ತ ಶುದ್ಧದಲ್ಲಿ ಗುರುಚರಕ್ಕೆ ಮುಯ್ಯಾಂತು ಬಂದುದಕ್ಕೆ ಸರಿಗಂಡು,
ಲಿಂಗದೇಹಿಗಳಿಗೆಲ್ಲಾ ಒಂದೇ ಪ್ರಮಾಣದಲ್ಲಿ ಸಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ತೃಪ್ತಿ.
ದಾಸೋಹ ತತ್ವಕ್ಕೆ ಬೆಲೆ ಬರುವುದು ವ್ಯಕ್ತಿ ಮಾಡುವ ಕಾಯಕದಿಂದ. ತಮ್ಮ ದೇಹಕ್ಕೆ ಸ್ವಲ್ಪವೂ ಶ್ರಮ ಕೊಡದೆ, ಯಾವ ಕಾಯಕವನ್ನೂ ಮಾಡದೆ ಎಲ್ಲೆಲ್ಲೋ ಕಾಡಿ, ಬೇಡಿ ದಾಸೋಹ ಮಾಡುವ ಪ್ರವೃತ್ತಿಯುಳ್ಳವರು ಆ ಕಾಲಕ್ಕೂ ಇದ್ದರು. ಈಗಲೂ ಇದ್ದಾರೆ. ಹಾಗೆ ಮಾಡುವುದು ಖಂಡಿತ ದಾಸೋಹ ಅಲ್ಲ ಎನ್ನುವರು ಶಿವಲೆಂಕ ಮಂಚಣ್ಣನವರು. ಹಾಗಾಗಿ ಶರಣರು ಗುರು, ಲಿಂಗ, ಜಂಗಮ ಈ ಮೂವರಿಗೂ ಕಾಯಕ ಕಡ್ಡಾಯಗೊಳಿಸಿದರು. ಚಿತ್ತಶುದ್ಧವುಳ್ಳವರಾಗಿ ತನು, ಮನ ಬಳಲಿಸಿ ಕಾಯಕ ಮಾಡಬೇಕು. ಆಗಲೇ ಅದು ದಾಸೋಹಕ್ಕೆ ಸಲ್ಲುವುದು. ಲಿಂಗಪೂಜೆಗೂ ಮಾನ್ಯತೆ ಬರುವುದು. ಈ ನಿಟ್ಟಿನಲ್ಲಿ ಎಲ್ಲ ಶರಣರು ಇಷ್ಟಲಿಂಗ ಪೂಜೆ, ಕಾಯಕ, ದಾಸೋಹ ತತ್ವಗಳಿಗೆ ವಿಶೇಷ ಒತ್ತು ಕೊಟ್ಟದ್ದು ಕಂಡುಬರುತ್ತದೆ. ತಳಸಮುದಾಯದಿಂದ ಬಂದ ಸಾಮಾನ್ಯ ಮಹಿಳೆ ಕಾಳವ್ವೆ `ಕೃತ್ಯಕಾಯಕವಿಲ್ಲದವರು ಭಕ್ತರಲ್ಲ; ಸತ್ಯಶುದ್ಧವಿಲ್ಲದುದು ಕಾಯಕವಲ್ಲ’ ಎನ್ನುವಳು. ಕಾಯಕಜೀವಿಗೆ ಆಸೆ ಇರಬಾರದು. ಆಸೆಯೇ ಭವದ ಬೀಜಕ್ಕೆ ಕಾರಣವಾಗುತ್ತದೆ ಎನ್ನುವ ಆ ಶರಣೆ `ನಿರಾಸೆಯೆಂಬುದು ನಿತ್ಯ ಮುಕ್ತಿ’ ಎನ್ನುವಳು. ಮನುಷ್ಯ ಯಾವುದೇ ಕಾಯಕ ಮಾಡಿದರೂ ಅಲ್ಲಿ ಹುಸಿ, ಮೋಸ ಇರಬಾರದು. ಕಾಯಕದಲ್ಲಿ ಮೇಲು, ಕೀಳು ಎನ್ನುವ ತಾರತಮ್ಯ ಇಲ್ಲ. ಕಾಯಕ ಸಮಾನತೆ, ಸಂತೃಪ್ತಿಯ ಸಂಕೇತ. ಕಾಯಕ ಮತ್ತು ದಾಸೋಹ ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ. ನಾಣ್ಯ ಚಲಾವಣೆಯಲ್ಲಿರಬೇಕು ಎಂದರೆ ಅದರ ಎರಡೂ ಮುಖಗಳು ಸವೆಯದೆ ಚನ್ನಾಗಿರಬೇಕು. ಅದೇರೀತಿ ಕಾಯಕಕ್ಕೆ ಮಹತ್ವ ಬರುವುದು ದಾಸೋಹ ತತ್ವ ಮೈಗೂಡಿಸಿಕೊಂಡಾಗ. ದಾಸೋಹ ತತ್ವ ಜಾರಿಗೊಳ್ಳುವುದು ಸತ್ಯ ಶುದ್ಧ ಕಾಯಕ ಮಾಡಿದಾಗ ಮಾತ್ರ. ಕಾಯಕಜೀವಿಗಳಿಗೆ ಬಡತನ ಎಂಬುದೇ ಇಲ್ಲ. ಇದು ಅಂದಿಗೂ ಸತ್ಯ, ಇಂದಿಗೂ ಸತ್ಯ, ಮುಂದೆ ಕೂಡ ಸತ್ಯವಾಗುವುದು.
ಆಯ್ದಕ್ಕಿ ಲಕ್ಕಮ್ಮನ ಪ್ರಸಂಗದಲ್ಲಿ ಬರುವ ಘಟನೆ ಎಲ್ಲರ ಕಣ್ಣು ತೆರೆಸುವಂತೆ ಇದೆ. ಲಕ್ಕಮ್ಮ-ಮಾರಯ್ಯ ದಂಪತಿಗಳ ಕಾಯಕ ಅಕ್ಕಿಯನ್ನು ಆಯುವುದು. ಆಯ್ದ ಅಕ್ಕಿಯಿಂದ ಪ್ರಸಾದ ಮಾಡಿ ದಾಸೋಹ ಏರ್ಪಡಿಸುವುದು. ಒಮ್ಮೆ ಮಾರಯ್ಯನವರು ಅಗತ್ಯಕ್ಕಿಂತ ಹೆಚ್ಚು ಅಕ್ಕಿ ತರುವರು. ಇದನ್ನು ಕಂಡ ಲಕ್ಕಮ್ಮ ಸಿಡಿಮಿಡಿಗೊಂಡು `ಈಸಕ್ಕಿಯಾಸೆ ನಿಮಗೇಕೆ, ಈಶ್ವರನೊಪ್ಪ’ ಎಂದು ಆ ಅಕ್ಕಿಯನ್ನು ಅಲ್ಲೇ ಸುರಿದು ಬರುವಂತೆ ಹೇಳುವಳು. ಅಷ್ಟಕ್ಕೇ ಸುಮ್ಮನಾಗದೆ ಅಲ್ಲಿರುವ ಶರಣರನ್ನು ಮನೆಗೆ ಪ್ರಸಾದಕ್ಕೆ ಕರೆತರಲು ಸೂಚಿಸುವಳು. ಮೊದಲೇ ಅಕ್ಕಿ ಆಯ್ದು ಬದುಕುವ ಈ ಕಾಯಕಜೀವಿಗಳಿಗೆ ಇದ್ದ ಅಕ್ಕಿಯನ್ನೂ ಅಲ್ಲಿ ಹಾಕಿಬಂದರೆ ಮನೆಗೆ ಬರುವ ಶರಣರಿಗೆ ಹೇಗೆ ಪ್ರಸಾದ ಮಾಡಿ ತೃಪ್ತಿಪಡಿಸಲು ಸಾಧ್ಯ ಎನ್ನುವ ಅನುಮಾನ ಯಾರಿಗಾದರೂ ಬರುವುದು ಸಹಜ. ಅಂಥ ಅನುಮಾನಗಳಿಗೆ ಉತ್ತರ ರೂಪದಲ್ಲಿದೆ ಆಯ್ದಕ್ಕಿ ಲಕ್ಕಮ್ಮನ ಒಂದು ವಚನ:
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮಲೇಶ್ವರಲಿಂಗದ ಸೇವೆಯುಳ್ಳನ್ನಕ್ಕರ.
ಯಾರಿಗೆ ಮನಸ್ಸು ಶುದ್ಧವಾಗಿಲ್ಲವೋ ಅವರಿಗೆ ಮಾತ್ರ ಹಣಕಾಸಿನ ಬಡತನ ಇರುತ್ತದೆ. ಯಾವ ಭಕ್ತ ಚಿತ್ತವನ್ನು ಶುದ್ಧವಾಗಿಟ್ಟುಕೊಂಡು ಕಾಯಕ ಮಾಡುವನೋ ಅವನಿಗೆ ಕಣ್ಬಿಟ್ಟಲ್ಲೆಲ್ಲ ಸಂಪತ್ತು ತನ್ನಿಂದ ತಾನೇ ಹರಿದು ಬರುವುದು ಎನ್ನುವ ಮಾತು ಚಿಂತನಾರ್ಹವಾದುದು. ಕಾಯಕಜೀವಿಗಳು ಬಂದ ಆದಾಯವನ್ನು ತಾವೊಬ್ಬರೇ ಬಳಸುವ ಇಲ್ಲವೇ ಕೂಡಿಡುವ ಪದ್ಧತಿ ಇಲ್ಲ. ಈ ಮೊದಲೇ ಹೇಳಿದಂತೆ ಕಾಯಕಕ್ಕೆ ಮಾನ್ಯತೆ ಬರುವುದೇ ದಾಸೋಹದಿಂದ. ಅದಕ್ಕಾಗಿಯೇ ಬಸವಣ್ಣನವರು ವಸ್ತ್ರ, ಒಡವೆ ನನಗೆ, ನನ್ನ ಮಡದಿ-ಮಕ್ಕಳಿಗೆ ಬೇಕೆಂದು ಕೂಡಿಟ್ಟರೆ ತಲೆದಂಡ ಎನ್ನುವರು. ಅಂದರೆ ಕಾಯಕ ತತ್ವವನ್ನು ಒಪ್ಪಿಕೊಂಡವರು ಸಂಪತ್ತನ್ನು ಕೂಡಿಡುವಂತಿಲ್ಲ. ಅದನ್ನು ಸತ್ಕಾರ್ಯಗಳಿಗೆ ದಾಸೋಹ ರೂಪದಲ್ಲಿ ವಿನಿಯೋಗಿಸಬೇಕು. ಬಸವಣ್ಣನವರು ಬಿಜ್ಜಳನ ಭಂಡಾರದ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಬಂದಾಗ ಅವರು ಮಾಡಿದ್ದೇನು? ಲೆಕ್ಕ ಪತ್ರ ಮುಂದಿಟ್ಟು ಇದಕ್ಕೂ ಭಂಡಾರದಲ್ಲಿರುವ ಹಣಕ್ಕೂ ತಾಳೆ ಮಾಡಿ ಎನ್ನುವರು. ಹಾಗೆ ತಾಳೆ ಮಾಡಿದಾಗ ನಿರೀಕ್ಷೆಗಿಂತ ಹೆಚ್ಚೇ ಸಂಪತ್ತು ಭಂಡಾರದಲ್ಲಿತ್ತು ಎನ್ನುವ ಮಾತು ಕೇಳಿಬರುವುದು. ಅದರರ್ಥ ಆಗ ಪ್ರತಿಯೊಬ್ಬ ಕಾಯಕಜೀವಿಯೂ ದಾಸೋಹ ತತ್ವ ಮೈಗೂಡಿಸಿಕೊಂಡಿದ್ದರಿಂದ ಭಂಡಾರದ ಹಣ ದುರ್ಬಳಕೆ ಆಗಲು ಸಾಧ್ಯವಿಲ್ಲ ಎನ್ನುವುದು. ಈ ನೆಲೆಯಲ್ಲೇ ಲದ್ದೆಯ ಸೋಮಣ್ಣ ಎನ್ನುವ ಶರಣರು ಕಾಯಕದ ಪ್ರತಿಫಲವನ್ನು ಗುರು, ಲಿಂಗ, ಜಂಗಮದ ಮುಂದಿಟ್ಟು ಎನ್ನುವ ಪದಗಳನ್ನು ಬಳಸುವರು. ಅಂದರೆ ಕಾಯಕ ಮಾಡುವ ಭಕ್ತರು ದೇವರ ಹಂಗಿಗೂ ಒಳಗಾದವರಲ್ಲ. ಒಂದುವೇಳೆ ಕಾಯಕ ಮಾಡುವ ಭಕ್ತರಿಗೆ ವ್ಯಾಧಿ ಬಂದರೆ ನರಳಬೇಕು, ಬೇನೆ ಬಂದರೆ ಒರಲಬೇಕು, ಜೀವ ಹೋದರೆ ಸಾಯಬೇಕು. ಅದಕ್ಕಾಗಿ ಆ ದೇವರ ಹಂಗಿಗೆ ಒಳಗಾಗಬೇಕಿಲ್ಲ ಎಂದು ಸ್ಪಷ್ಟಪಡಿಸುವರು.
ಭಕ್ತ (ತಾ) ಮಾಡುವ ಕಾಯಕ ತನಗೆಂದಡೆ ಗುರುವಿಂಗೆ ದೂರ,
ತನ್ನ ಸತಿಗೆಂದಡೆ ಲಿಂಗಕ್ಕೆ ದೂರ, ತನ್ನ ಸುತರಿಗೆಂದಡೆ ಜಂಗಮಕ್ಕೆ ದೂರ,
ತನ್ನ ಬಂಧುಗಳಿಗೆಂದಡೆ ಸಂಗನಬಸವಣ್ಣ ಮೊದಲಾದ
ಶರಣ ಸಂಕುಳಕ್ಕೆಲ್ಲಕ್ಕೂ ದೂರ, ನನಗೂ ದೂರ,
ಎನ್ನೊಳಗಾದ ನಿಃಕಳಂಕ ಮಲ್ಲಿಕಾರ್ಜುನ ನಿನಗೂ ದೂರ.
ಈ ವಚನದಲ್ಲಿ ಕಾಯಕ, ದಾಸೋಹದ ಮಹತ್ವವನ್ನೇ ಮನಗಾಣಿಸಿದ್ದಾರೆ ಮೋಳಿಗೆ ಮಾರಯ್ಯ. ಅವರು ಸಂಗ್ರಹ ಪ್ರವೃತ್ತಿಯನ್ನು ಒಪ್ಪಿದವರಲ್ಲ. ಅದಕ್ಕಾಗಿ ಇಲ್ಲಿ ಅವರು ಹೇಳಿರುವುದು ಭಕ್ತನಾದವ ಮಾಡುವ ಕಾಯಕದ ಫಲ ತನಗೆ ಮಾತ್ರ ಎಂದರೆ ಗುರುವಿನಿಂದ ದೂರವಾಗುವನು. ತನ್ನ ಹೆಂಡತಿಗೆ ಎಂದರೆ ಲಿಂಗಕ್ಕೆ ದೂರವಾಗುವನು. ಮಕ್ಕಳಿಗೆ ಎಂದರೆ ಜಂಗಮಕ್ಕೆ ದೂರವಾಗುವನು. ಬಂಧು ಬಳಗಕ್ಕೆ ಎಂದರೆ ಬಸವಣ್ಣ ಮತ್ತಿತರ ಶರಣ ಸಂಕುಳಕ್ಕೆ ಮಾತ್ರವಲ್ಲದೆ ಶಿವನಿಗೂ ದೂರವಾಗುವನು ಎಂದು ಎಚ್ಚರಿಸಿದ್ದಾರೆ. ಕಾಯಕದ ಪ್ರತಿಫಲವನ್ನು ಗುರು ಸೇವೆಗೆ, ಲಿಂಗ ಪೂಜೆಗೆ, ಜಂಗಮ ದಾಸೋಹಕ್ಕೆ ವಿನಿಯೋಗ ಮಾಡಬೇಕೆನ್ನುವುದು ಲಿಂಗಾಯತ ಧರ್ಮದ ತತ್ವ-ಸಿದ್ಧಾಂತ. ಇದಕ್ಕೆ ವಿರುದ್ಧವಾಗಿ ತನಗೆ, ಮಡದಿ-ಮಕ್ಕಳಿಗೆ, ಬಂಧು-ಬಳಗಕ್ಕೆ ಎಂದರೆ ಆತ ಗುರು, ಲಿಂಗ, ಜಂಗಮ ತತ್ವಕ್ಕೆ ಅಪಚಾರ ಬಗೆದಂತೆ. ಅಷ್ಟೇ ಅಲ್ಲ; ಈ ಎಲ್ಲ ತತ್ವಗಳನ್ನು ಜಾರಿಯಲ್ಲಿ ತಂದ, ತರುವಂತೆ ಮಾಡಿದ ಬಸವಣ್ಣ ಮತ್ತು ಅವರ ಶರಣ ಸಮೂಹ ಮತ್ತು ಅವರು ನಂಬಿದ ಶಿವನಿಂದಲೇ ದೂರವಾಗುವನು ಎನ್ನುವ ಮಾತು ಮತ್ತೆ ಮತ್ತೆ ಮನನ ಮಾಡುವಂತಹುದು. ಕಾಯಕದ ಪ್ರತಿಫಲ ಇಂದಿಗೆ, ನಾಳೆಗೆ, ಮಡದಿ ಮಕ್ಕಳಿಗೆ ಬೇಕೆಂದು ಕೂಡಿಡುವುದಲ್ಲ; ಸಮಾಜದ ಸೇವೆಗಾಗಿ ಸದ್ವಿನಿಯೋಗ ಆಗಬೇಕೆಂಬುದು ಎಲ್ಲ ಶರಣರ ತಾತ್ವಿಕ ಸಿದ್ಧಾಂತ. ಈ ನೆಲೆಯಲ್ಲೇ ಬಸವಣ್ಣನವರ ವಚನವೊಂದನ್ನು ನೋಡಬಹುದು.
ನಾನು ಆರಂಭವ ಮಾಡುವೆನಯ್ಯಾ, ಗುರುಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು,
ನಾನಾವ ಕರ್ಮಂಗಳ ಮಾಡಿದಡೆಯು
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು,
ನಿಮ್ಮಾಣೆ ಕೂಡಲಸಂಗಮದೇವಾ.
ಲಿಂಗಾಯತ ಧರ್ಮದ ಸಂಸ್ಥಾಪಕರಾದ ಬಸವಣ್ಣನವರು ಇಷ್ಟಲಿಂಗ ಪೂಜೆ, ಕಾಯಕ, ದಾಸೋಹ ತತ್ವಗಳನ್ನು ವ್ಯಕ್ತಿಯ ಮತ್ತು ಸಮಾಜದ ಅಭ್ಯುದಯಕ್ಕೆ ನೀಡಿದವರು. ಇಲ್ಲಿ ವ್ಯಕ್ತಿ ಕಲ್ಯಾಣವೂ ಇದೆ, ಲೋಕಕಲ್ಯಾಣವೂ ಇದೆ. ಬಸವಣ್ಣನವರು ಆತ್ಮಕಲ್ಯಾಣಕ್ಕಾಗಿ ಸಂಸಾರ ತ್ಯಜಿಸಲು, ಕಾಡಿಗೆ ಹೋಗಲು, ಎಲ್ಲೋ ಗುಹೆಯಲ್ಲಿ ಕುಳಿತು ತಪಸ್ಸು ಮಾಡಲು ಹೇಳುವುದಿಲ್ಲ. ಬದಲಾಗಿ ಇದ್ದಲ್ಲಿಯೇ ಇಷ್ಟಲಿಂಗ ಪೂಜೆಯೊಂದಿಗೆ ಕಾಯಕ- ದಾಸೋಹ ತತ್ವಗಳನ್ನು ಪರಿಪಾಲಿಸಲು ಹೇಳುವರು. ಇದರಿಂದ ವ್ಯಕ್ತಿ ಜಾಡ್ಯವನ್ನು ಕಿತ್ತೆಸೆದು ನಿರಂತರ ಜಂಗಮತ್ವ ಕಾಯ್ದುಕೊಳ್ಳಲು ಸಾಧ್ಯವಾಗುವುದು. ಹಿಂದೆ ವ್ಯವಸಾಯ ಅಥವಾ ಒಕ್ಕಲುತನ ಇಲ್ಲವೇ ಕೃಷಿಯ ಚಟುವಟಿಕೆಗಳಿಗೆ `ಆರಂಭ’ ಎನ್ನುವ ಪದ ಬಳಸುತ್ತಿದ್ದರು. ವ್ಯವಸಾಯ, ವ್ಯಾಪಾರ, ವ್ಯವಹಾರ ಇನ್ನೇನೇ ಮಾಡುವುದು ಗುರು ಸೇವೆ, ಲಿಂಗ ಪೂಜೆ, ಜಂಗಮ ದಾಸೋಹಕ್ಕೆ ಎನ್ನುವುದನ್ನು ಈ ವಚನದಲ್ಲಿ ಒತ್ತಿ ಹೇಳಿದ್ದಾರೆ. ಏನೇ ಕಾಯಕ ಮಾಡಿದರೂ ಅದರ ಫಲವನ್ನು ಕೊಡುವವ ಶಿವ ಎನ್ನುವ ನಂಬಿಕೆ ಬಸವಣ್ಣನವರಿಗೆ. ಹಾಗಾಗಿ ನೀವು ಕೊಟ್ಟದ್ದನ್ನು ನಿಮಗೇ ವಿನಿಯೋಗಿಸುವೆ ಎನ್ನುವರು. ಈ ಭಾವನೆ ಇದ್ದಾಗ ಮನುಷ್ಯನಲ್ಲಿ ಸಂಗ್ರಹ ಮಾಡುವ ದುರ್ಬುದ್ಧಿ, ದುರಾಸೆ ಇರುವುದಿಲ್ಲ. ಕಾಲದ ದುವ್ರ್ಯಯವೂ ಆಗುವುದಿಲ್ಲ.
ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ;
ಆಯುಷ್ಯ ತೀರಿ ಪ್ರಳಯ ಬಂದಡೆ ಆ ಅರ್ಥವನುಂಬುವರಿಲ್ಲ.
ನೆಲನನಗೆದು ಮಡುಗದಿರಾ, ನೆಲ ನುಂಗಿದಡುಗುಳುವುದೆ?
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗಿದಿರಾ!
ನಿನ್ನ ಮಡದಿಗಿರಲೆಂದಡೆ, ಆ ಮಡದಿಯ ಕೃತಕ ಬೇರೆ;
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ,
ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು.
ಎಷ್ಟೋ ಜನ ತಮಗೆ ಸಾವೇ ಬರುವುದಿಲ್ಲ ಎಂದು ತಮ್ಮ ಸಂಪತ್ತನ್ನು ನೆಲದಲ್ಲಿ ಹೂತಿಡುತ್ತಿದ್ದುದನ್ನು ಕಂಡ ಇಲ್ಲವೇ ಕೇಳಿದ ಬಸವಣ್ಣನವರು ಈ ವಚನದ ಮೂಲಕ ಅಂಥವರನ್ನು ಎಚ್ಚರಿಸಿದ್ದಾರೆ. ಈಗಲೂ ಅಂಥ ಜನರಿಗೆ ಕೊರತೆ ಏನಿಲ್ಲ. ಅವರು ತಾವೂ ಉಣ್ಣದೆ, ಪರರಿಗೂ ಇಕ್ಕದೆ ಸ್ವಿಸ್ ಮತ್ತಿತರ ಬ್ಯಾಂಕ್ಗಳಲ್ಲಿ ತಮ್ಮ ಹಣವನ್ನಿಟ್ಟು ಸಂತೋಷಪಡುವರು. ಆದರೆ ಅವರಿಗೆ ಕೊರೊನಾ ರೋಗ ಬಂದು ಸತ್ತುಹೋದರೆ ಅವರ ಹೆಣ ಸಹ ಮುಟ್ಟುವವರಿಲ್ಲ. ಅವರಿಟ್ಟ ಹಣ ಯಾರ ಪಾಲಾಗುವುದೋ? ಯಾರಿಗೂ ಗೊತ್ತಾಗದಂತೆ ನೆಲದಲ್ಲೋ, ಬ್ಯಾಂಕಿನಲ್ಲೋ ಇಟ್ಟ ಸಂಪತ್ತನ್ನು ಆ ನೆಲವಾಗಲಿ, ಬ್ಯಾಂಕಾಗಲಿ ಉಗುಳುವುದಿಲ್ಲ ಎಂದು ವಾಸ್ತವತೆಗೆ ಕನ್ನಡಿ ಹಿಡಿದಿದ್ದಾರೆ ಬಸವಣ್ಣನವರು. ಇದಕ್ಕೆ ಇನ್ನೂ ಕೆಲವು ನಿದರ್ಶನಗಳನ್ನು ವಚನದಲ್ಲಿ ನೀಡಿದ್ದಾರೆ. ತನ್ನ ಪತ್ನಿಗೆ ಬೇಕಾಗಬಹುದು ಎಂದು ಕೂಡಿಟ್ಟರೆ ಆಕೆಯ ಬದುಕಿನ ವಿಧಾನವೇ ಬೇರೆ ಆಗಬಹುದು. ನೀನು ಸಾಯುತ್ತಲೇ ಆ ಸಂಪತ್ತನ್ನು ಮತ್ತೊಬ್ಬರ ವಶಕ್ಕೆ ಕೊಡಬಹುದು. ಹಾಗಾಗಿ ಸಂಪತ್ತನ್ನು ಕೂಡಿಡದೆ ಅಥವಾ ದುರಾಚಾರಗಳಿಗೆ ಕೊಟ್ಟು ವ್ಯರ್ಥವಾಗಿ ಹಾಳುಮಾಡದೆ ಅದನ್ನೇ ಕೂಡಲಸಂಗನ ಶರಣರಿಗೆ ಬಳಸಿದರೆ ಬದುಕು ಸಾರ್ಥಕವಾಗುತ್ತದೆ ಎನ್ನುವರು. ಬಸವಣ್ಣನವರು ಕಾಯಕ ಮತ್ತು ದಾಸೋಹಕ್ಕೆ ಕೊಟ್ಟಷ್ಟೇ ಮಹತ್ವವನ್ನು ಇಷ್ಟಲಿಂಗ ಪೂಜೆಗೂ ಕೊಟ್ಟಿದ್ದನ್ನು ಮರೆಯಬಾರದು. ಇಂದು ಬಹುತೇಕ ಜನರು ಕಾಯಕ, ದಾಸೋಹ ತತ್ವವನ್ನು ಮೆಚ್ಚಿಕೊಂಡು ಅದರ ಮೇಲೆ ಉದ್ದುದ್ದ ಉಪನ್ಯಾಸ ನೀಡುವರು. ಲಿಂಗಪೂಜೆಯ ಸುದ್ದಿ ಬಂದಾಗ ಅವರ ತರ್ಕವೇ ಬೇರೆಯಾಗುವುದು. ಅಂಥವರನ್ನೇ ಕುರಿತು ಹೇಳಿದಂತಿದೆ ಬಸವಣ್ಣನವರ ಒಂದು ವಚನ:
ಲಿಂಗವಿಲ್ಲದೆ ನಡೆವವರ, ಲಿಂಗವಿಲ್ಲದೆ ನುಡಿವವರ
ಲಿಂಗವಿಲ್ಲದೆ ಉಗುಳ ನುಂಗಿದಡೆ
ಅಂದಂದಿಗೆ ಕಿಲ್ಬಿಷವಯ್ಯಾ- ಏನೆಂಬೆನೇನೆಂಬೆನಯ್ಯಾ?
ಲಿಂಗವಿಲ್ಲದೆ ನಡೆವವರ ಅಂಗ ಲೌಕಿಕ: ಮುಟ್ಟಲಾಗದು.
ಲಿಂಗವಿಲ್ಲದೆ ನುಡಿವವರ ಶಬ್ದ ಸೂತಕ: ಕೇಳಲಾಗದು.
ಲಿಂಗವಿಲ್ಲದೆ ಗಮನಿಸಿದಡೆ ಆ ನಡೆನುಡಿಗೊಮ್ಮೆ ವ್ರತಗೇಡಿ
ಕೂಡಲಸಂಗಮದೇವಾ.
ನಿಜವಾದ ವ್ರತ ಯಾವುದು, ಯಾರು ವ್ರತಗೇಡಿಗಳು ಎನ್ನುವ ವಿವರಣೆ ಈ ವಚನದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಜೊತೆಗೆ ಇಷ್ಟಲಿಂಗದ ಅಗತ್ಯವನ್ನೂ ಒತ್ತಿ ಹೇಳಿದ್ದಾರೆ. ದುಶ್ಚಟ, ದುರಾಚಾರಗಳನ್ನು ದೂರಮಾಡಲು ಲಿಂಗವ್ಯಸನ, ಜಂಗಮಪ್ರೇಮ ಬೇಕೆಂದು ಮತ್ತೊಂದು ವಚನದಲ್ಲಿ ತಿಳಿಸಿದ್ದಾರೆ. ಇಂಥವುಗಳನ್ನು ಅರ್ಥಮಾಡಿಕೊಂಡರೆ ಬದುಕಿಗೆ ಬಲ, ಬೆಲೆ ಬರುವುದು. ಆಗ ಕಾಲದ ದುರ್ವಿನಿಯೋಗವಾಗಲಿ, ಸಾವಿನ ಭಯವಾಗಲಿ ಇರುವುದಿಲ್ಲ. ಈ ಬಗ್ಗೆ ಲಿಂಗಾಯತ ಧರ್ಮೀಯರು ಚಿಂತನ ಮಂಥನ ಮಾಡಿ ಶರಣರು ತೋರಿದ ದಾರಿಯಲ್ಲಿ ಅಂದರೆ ಲಿಂಗಪೂಜೆ, ಕಾಯಕ, ದಾಸೋಹ ತತ್ವಗಳಿಗನುಗುಣವಾಗಿ ನಡೆಯುವ ಛಲ ಮತ್ತು ಮನೋಬಲವನ್ನು ಮೈಗೂಡಿಸಿಕೊಳ್ಳಬೇಕಿದೆ. ಆಗ ವ್ಯಕ್ತಿಯ ಕಲ್ಯಾಣದ ಜೊತೆಗೆ ಲೋಕದ ಕಲ್ಯಾಣವೂ ಆಗುವುದು.
Comments 10
Veeru Savalagi
Jun 7, 2021ಜೀವನದ ನಶ್ವರತೆಯಲ್ಲಿ ಸಮಯವನ್ನು ಹಾಳುಮಾಡದೆ ಬದುಕುವ ಉತ್ತಮ ಮಾರ್ಗದರ್ಶನ
Tippesh Hiriyur
Jun 8, 2021ತೊತ್ತುಗೆಲಸ ಎಂದರೆ ಪೂಜೆ, ಕಾಯಕ, ದಾಸೋಹ ಈ ಮೂರು ತತ್ವವನ್ನು ಪರಿಪಾಲಿಸು ಎಂದು ಅರ್ಥ ಎಂದಿರುವಿರಿ. ಆದರೆ ತೊತ್ತುಗೆಲಸ ಎಂದರೆ ಸೇವೆ ಎಂದಾಗುತ್ತದೆ. ಪೂಜೆ ತೊತ್ತುಗೆಲಸ ಹೇಗಾಗುವುದು?
Jayakumar Vijaypur
Jun 9, 2021ಕಾಯಕ-ದಾಸೋಹಗಳು ಸಮಾಜವನ್ನು ಮಾತ್ರವಲ್ಲಾ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಪಾರ ಬದಲಾವಣೆ ತರುತ್ತವೆ. ಆದರೆ ಇವತ್ತು ಕಾಯಕ ಕೆಲಸವಾಗಿದೆ, ದಾಸೋಹ ಹೆಸರಿಗಾಗಿ ನೀಡುವ ದಾನವಾಗಿದೆ. ಹೆಸರು ಮಾತ್ರ ಕಾಯಕ- ದಾಸೋಹ ಎಂದೇ ಬಳಸುತ್ತಾರೆ. ಇದು ಶರಣರಿಗೆ ಮಾಡುವ ದ್ರೋಹ.
Aravind J
Jun 9, 2021This is very interesting Blog, I’ve shared your site in my social networks.
Gavisiddappa
Jun 12, 2021ಲಿಂಗಯ್ಯನ ಪೂಜೆ ಮತ್ತು ಶಿವಯೋಗ ಸಾಧನೆ ಎರಡೂ ಒಂದೆಯಾ ಅನ್ನುವುದು ನನ್ನ ಬಹಳ ದಿನಗಳ ಸಮಸ್ಯೆ. ನಿಜಕ್ಕೂ ಶಿವಯೋಗ ಎಂದರೇನು ಎಂಬ ಬಗ್ಗೆ ನನಗೆ ಹಲವಾರು ಗೊಂದಲಗಳಿವೆ. ಶಿವಯೋಗ ಸಾಧಕರೆಂದು ಬಿಂಬಿಸಿಕೊಳ್ಳುತ್ತಿರುವ ಸ್ವಾಮಿಗಳನ್ನಾಗಲಿ, ಇಂದಿನ ಬಸವಾನುಯಾಯಿಗಳನ್ನಾಗಲಿ ನೋಡಿದರೆ ಮಾರುದ್ದ ದೂರ ಓಡಬೇಕೆನಿಸುತ್ತದೆ. ನೀವೇ ಹೇಳಿ ಗುರುಗಳೇ…
Omkaraiah, Dharwad
Jun 12, 2021ಜಂಗಮ ದಾಸೋಹವೆಂದರೆ ಮಠದ ಅಯ್ಯನವರಿಗೆ ಊಟ ಮಾಡಿಸುವುದೋ? ಸಮಾಜಕ್ಕೆ ಸೇವೆ ಸಲ್ಲಿಸುವುದೋ? ಅಥವಾ ಇವೆರಡೂ ಬಿಟ್ಟು ಬೇರೇನೋ ಇದೆಯೋ? ನನ್ನ ವಚನ ಅಧ್ಯಯನದ ತಿಳುವಳಿಕೆಯಂತೆ ಜಂಗಮ ದಾಸೋಹಕ್ಕೆ ಶರಣರಲ್ಲಿ ಬೇರೆಯ ಆಚರಣೆಯೇ ಇದ್ದಿತೆನಿಸುತ್ತದೆ, ಗುರುಗಳೇ ತಿಳಿಸಬೇಕು.
ನಾಗರಾಜು ಜವಳಿ
Jun 21, 2021ಸತ್ಯಶುದ್ಧ ಕಾಯಕವ ಮಾಡಿ ತಂದು,
ವಂಚನೆಯಿಲ್ಲದೆ ಪ್ರಪಂಚವಳಿದು,
ನಿಚ್ಚಜಂಗಮಕ್ಕೆ ದಾಸೋಹವ ಮಾಡುವ
ಸದ್ಭಕ್ತನ ಹೃದಯದೊಳಗೆ ಅಚ್ಚೊತ್ತಿದಂತಿಪ್ಪ… ವಚನ ತುಂಬಾ ಚೆನ್ನಾಗಿದೆ. ನಿಮ್ಮ ಬರಹ ನಿಮ್ಮ ಮಾತುಗಳಂತೆ ಸರಳವಾಗಿ ಮನಮುಟ್ಟುವಂತಿದೆ ಗುರುಗಳೇ.
ಜೀವನ್ ಕುಮಾರ್
Jun 26, 2021ಲೇಖನ ಚನ್ನಾಗಿದೆ. ಆದರೆ ನನಗೊಂದು ಸಂದೇಹ ಗುರುಗಳೇ- ಆಸೆಯೇ ಭವದ ಬೀಜಕ್ಕೆ ಕಾರಣ ಎನ್ನುವುದು ನಿಜ. ಆದರೆ `ನಿರಾಸೆಯೆಂಬುದು ನಿತ್ಯ ಮುಕ್ತಿ’ ಎಂದರೆ ಶರಣರು ನಿರಾಶಾವಾದಿಗಳೆನಿಸುತ್ತದಲ್ಲವೇ?
Naveen, Washington
Jul 4, 2021Thanks for sharing this wonderful blog. I shared it with my friends who have a lot of interest in Kannada Literature.
H V Jaya
Jul 16, 2021ಸೃಷ್ಟಿಕರ್ತನಿಗೆ ಮಾಡಬೇಕಾದ ನಮ್ಮ ಕರ್ತವ್ಯಗಳ ಬಗ್ಗೆ ನಮ್ಮನ್ನು ಎಚ್ಚರಿಸುತ್ತಾ ಸಮಯ ಜಾರಿ ಹೋಗುವ ಮೊದಲು ,ಮುಪ್ಪು ಮೃತ್ಯು ಬಂದು ಆವರಿಸುವ ಮೊದಲೇ ಎಚ್ಚತ್ತುಕೊಂಡು ನಿನ್ನ ಕರ್ತವ್ಯಗಳಾದ ಪೂಜೆ, ಧ್ಯಾನ ಮಾಡುತ್ತಾ. ಜೊತೆ ಜೊತೆಗೆ ಕಾಯಕ ದಾಸೋಹವನ್ನು ಮಾಡುತ್ತಾ ಜೀವನವನ್ನು ಸಾರ್ಥಕಪಡಿಸಿಕೊಳ್ಳುವಂತೆ ತಿಳಿಸಿದ ಸ್ವಾಮೀಜಿಯವರಿಗೆ ಶರಣು ಶರಣಾರ್ಥಿಗಳು