ತುತ್ತೂರಿ…
ತುತ್ತೂರಿ ತುತ್ತೂರಿ
ಯಾಕೆ ಇಂತಹ ಪಿತೂರಿ?
ಯಾವುದೇ ಮಾತಲೂ ನಿನ್ನದೇ ರಾಗ
ಯಾವುದೇ ಭಾವಕೂ ನಿನ್ನದೇ ತಾಳ
ಬಾಯಿಬಿಟ್ಟರೂ ನಿನ್ನದೇ ಗಾನ
ಮೌನದಲಿದ್ದರೂ ನಿನ್ನದೇ ಧ್ಯಾನ
ಮಾತುಮಾತಿನಲೂ ನಿನ್ನದೇ ಹೊಳಪು
ಸ್ವಗತದ ಸರಿಗಮ ನಿನ್ನದೇ ಛಾಪು!
ತುತ್ತೂರಿ ತುತ್ತೂರಿ…
ಹಿಂದಕೆ ಹೋದರೂ ಕಾಲಿಗೆ ಸಿಗುವೆ
ಮುಂದಕೆ ಬಂದರೂ ಕಣ್ಮುಂದೇ ಇರುವೆ
ಕಡೆಗಣಿಸಿದರೂ ಕಾಯುತ ನಿಲ್ಲುವೆ
ತಳ್ಳುತಲಿದ್ದರೂ ನುಸುನುಸುಳಿ ಬರುವೆ
ಸರಿಸುತಲಿದ್ದರೂ ಹೇಗೋ ನುಗ್ಗುವೆ
ಎಲ್ಲಿದೆಯೊ ಅರಿಯೆ ನೀನಿಲ್ಲದ ತಾಣ
ತುತ್ತೂರಿ ತುತ್ತೂರಿ…
ನೆನಪಿನ ಕನವರಿಕೆಗಳೆಲ್ಲ ನೀನೇ
ನಾಳಿನ ಕನಸುಗಳೆಲ್ಲವೂ ನೀನೇ
ಭಾವಗಳುದ್ದಕೂ ಮೈಚಾಚಿರುವೆ
ತಲೆಯೊಳಗೆ ಅಡಗಿ ಕುಳಿತಿರುವೆ
ನಿನ್ನೆ-ನಾಳೆಗಳ ಜೀಕುವ ಮನದಲಿ
ನೀನಲ್ಲದೆ ಬೇರೇನಿದೆ ಅಲ್ಲಿ?
ತುತ್ತೂರಿ ತುತ್ತೂರಿ…
ಬಗೆಬಗೆಯ ರೂಪದೊಳಿರುವೆ
ಗುರುತಿಸದಂತೆ ವೇಷವ ತೊಡುವೆ
ಕೈಗೆ ಸಿಗದಂತೆ ಬಣ್ಣ ಬದಲಿಸುವೆ
ಸಮಯಕೆ ತಕ್ಕ ರಾಗ ಹಾಕುವೆ
ನೀನರಿಯದ ತಂತ್ರಗಳಿವೆಯೇ?
ನೀನರಿಯದ ಕಪಟಗಳಿವೆಯೇ?
ತುತ್ತೂರಿ ತುತ್ತೂರಿ…
ಮೈಯನಪ್ಪಿದ ಮಾಯೆಯು ನೀನು
ಬುದ್ಧಿಗೆ ಬಡಿದ ಭೂತವು ನೀನು
ಕಾಣದೆ ಅಂಟಿದ ಸೂತಕ ನೀನು
ನಾನೆ ನೀನೆಂದು ಸಾಧಿಸಿ ಗೆದ್ದೆI
ನಿನ್ನನ್ನೇ ನಾನೆಂದು ನಂಬಿದೆ
ನಿನ್ನದೆ ಗದ್ದುಗೆ ನಿನ್ನದೆ ಶಾಸನ
ತುತ್ತೂರಿ ತುತ್ತೂರಿ…
ಇಂತು
ಸ್ವಯದ ಮೇಲೆ ಸಾಗಿತ್ತು
ಪರದ ಮೆರವಣಿಗೆ
ಗುರು ಬರುವ ತನಕ ನಡೆದಿತ್ತು
ಸೆಂಗೋಲಿನ ಉರವಣಿಗೆ…