ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
ನಾನು ಮೇಲೆ ನೀತಿ ಶಿಕ್ಷಣದ ವಿಷಯಕ್ಕೆ ಹೇಳಿದ್ದರಲ್ಲಿ ಅನೀತಿಯಿಂದ ನಡೆದ ಜನರಿಂದ ಸಮಾಜಕ್ಕೆ ಆಗುವ ಅಪಾಯಗಳನ್ನು ವಿವರಿಸಿದ್ದೇನೆ. ಇಂಥ ಜನರೇ ಸರಕಾರದ ದಂಡನೆಗೆ ಒಳಪಟ್ಟು ತುರಂಗದಲ್ಲಿ ವಾಸ ಮಾಡುವ ಪ್ರಸಂಗವು ಬಂದಾಗ್ಗೆ ನಮ್ಮ ಮತಕ್ಕೆ ಅತಿ ವಿರುದ್ಧವಾದ ಆಚರಣೆಗಳು, ಅಂದರೆ, ಅಂಥ ಕೈದಿಯರ ಲಿಂಗವನ್ನು ತೆಗೆಸುವದೂ, ಅವರಿಗೆ ಪರಮತಸ್ಥರ ಕಡೆಯಿಂದ ಅನ್ನ ನೀರು ಕೊಡಿಸುವದೂ ನಮ್ಮ ಮತಕ್ಕೆ ಬಹಳೇ ಕುಂದದಾಯಕಗಳಾಗಿರುತ್ತವೆ. ಬ್ರಾಹ್ಮಣ ಕೈದಿಗಳಿಗೆ ಬ್ರಾಹ್ಮಣರಿಂದಲೇ ಅನ್ನೋದಕಗಳು ದೊರಕುವಂತೆ ನಮ್ಮ ಮತದ ಕೈದಿಗಳಿಗೂ ದೊರಕಬೇಕೆಂಬ ಬಗ್ಗೆ ನಮ್ಮ ಸರಕಾರದವರಿಗೆ ನಾವು ವಿನಯಪೂರ‍್ವಕವಾದ ಅರ್ಜಿಯ ದ್ವಾರಾ ಬೇಡಿ ಕೊಳ್ಳತಕ್ಕದ್ದು.
(ಲಿಂಗಪ್ಪ ಜಾಯಪ್ಪ ದೇಸಾಯಿ, ೧ನೇ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಥಮ ಅಧ್ಯಕ್ಷರು, ೧೯೦೪).
ವೀರಶೈವ ಕೈದಿಗಳನ್ನು ಇಷ್ಟಲಿಂಗ ಸಹಿತ ಕಾರಾಗೃಹದಲ್ಲಿ ಇರಿಸುವುದನ್ನು ನಮ್ಮ ಮುಂಬಯಿ ಸರಕಾರದವರು ಗೊತ್ತುಪಡಿಸಿರುವುದು.
(ಬುಳ್ಳಪ್ಪ ಬಸಂತರಾವ ಮಾಮಲೆ ದೇಸಾಯಿ, ೬ನೇ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ೧೯೧೧)
ಕಿತ್ತೂರ ರಾಣಿ ಚೆನ್ನಮ್ಮ ಎಂಬ ಕನ್ನಡ ಚಲನಚಿತ್ರದ ಕೊನೆಯ ದೃಶ್ಯ ಬ್ರಿಟೀಷರ ಜೈಲಿನಲ್ಲಿ ನಡೆಯುತ್ತದೆ. ಈ ದೃಶ್ಯದಲ್ಲಿ ಚೆನ್ನಮ್ಮ ತನ್ನ ಕೊರಳಿಗೆ ಹಾಕಿಕೊಂಡಿದ್ದ ಇಷ್ಟಲಿಂಗವನ್ನು ಕಣ್ಣಿಗೊತ್ತಿಕೊಂಡು ‘ಶಿವಾ’ ಎಂದು ಉಚ್ಚರಿಸುತ್ತಾ ಕೊನೆಯುಸಿರೆಳೆಯುತ್ತಾಳೆ. ಮೇಲಿನ ಹೇಳಿಕೆಗಳಿಗೂ ಮತ್ತು ಚೆನ್ನಮ್ಮಳ ದೃಶ್ಯಕ್ಕು ಒಂದು ಸಾಮ್ಯತೆ ಇದೆ. ಅದೇನೆಂದರೆ ವಿವಿಧ ಕಾರಣಗಳಿಗೆ ಜೈಲು-ವಾಸವನ್ನು ಅನುಭವಿಸುತ್ತಿರುವ ಲಿಂಗಾಯತರಿಗೆ ತಮ್ಮ ಧಾರ್ಮಿಕತೆಯ ಕುರುಹಾಗಿರುವ ಇಷ್ಟಲಿಂಗ ಮತ್ತು ಅದರ ಆಚರಣೆಯನ್ನು ಚಾಚು ತಪ್ಪದೆ ಪಾಲಿಸುವ ಅಂಶ. ೧೨ನೇ ಶತಮಾನದ ವಚನಕಾರರಿಂದ ಹಿಡಿದು, ಲಿಂಗಾಯತ ಸಂಪ್ರದಾಯಸ್ಥರಲ್ಲಿಯೂ ಕೂಡ ಬೇರೂರಿರುವ ಆಚರಣೆಯೆಂದರೆ ಇಷ್ಟಲಿಂಗದ ಧಾರಣೆ ಮತ್ತು ಆರಾಧನೆ. “ಇಷ್ಟಲಿಂಗವಿಡಿದು ಕಾಯ ಶುದ್ಧವಾಯಿತ್ತಯ್ಯ” ಎಂದು ವಚನಕಾರ ಜಕಣ್ಣಯ್ಯ ಹೇಳುವಲ್ಲಿ ಇಷ್ಟಲಿಂಗದ ಮಹತ್ವವನ್ನು ನಾವು ಅರಿಯಬಹುದು. “ಇಷ್ಟಲಿಂಗದ ಸಂಬಂಧವಿಲ್ಲದವರ ಮುಖವ ನೋಡಲಾಗದು” ಎಂದು ಹೇಳುವ ಚೆನ್ನಬಸವಣ್ಣನಲ್ಲಿ ಇಷ್ಟಲಿಂಗವನ್ನು ಬಿಟ್ಟರೆ ಬೇರೆ ಯಾವುದು ನಮಗೆ ಪಥ್ಯವಾಗಬಾರದು ಎಂಬ ಅಚಲ ನಂಬಿಕೆಯನ್ನು ಕಾಣಬಹುದು. “ಇಷ್ಟಲಿಂಗವ ಹಿಡಿದು ಪೂಜೆಯ ಮಾಡುವಲ್ಲಿ ಕಷ್ಟಗುಣಕ್ಕೆ ಬಾರದಿರಬೇಕು” ಎಂದು ಹಾಡುವ ಮೋಳಿಗೆ ಮಾರಯ್ಯನ ಸಾಲುಗಳಲ್ಲಿ ಇಷ್ಟಲಿಂಗದ ಚಿಕಿತ್ಸಾ ಗುಣವನ್ನು ಗಮನಿಸಬಹುದು. ಹೀಗೆ ಅನೇಕ ರೀತಿಯಲ್ಲಿ ಇಷ್ಟಲಿಂಗವು ಲಿಂಗಾಯತರಿಗೆ ಅರಿವಿನ ಮತ್ತು ಕುರುಹಿನ ಸಂಕೇತ.
ಈ ಹಿನ್ನೆಲೆಯಲ್ಲಿ ತಮ್ಮ ನಂಬಿಕೆ, ಆಚರಣೆ ಮತ್ತು ರೀತಿ-ರಿವಾಜುಗಳನ್ನು ಮುಂದುವರೆಸಲು ಜೈಲಿನ ಹೊರಗಿರುವ ಲಿಂಗಾಯತ ಸಮಾಜದ ಗಣ್ಯರಿಗೆ ಇರುವ ಅತೀವ ಕಾಳಜಿ ಮತ್ತು ಅದನ್ನು ಎಲ್ಲಿ ಕಳೆದುಕೊಳ್ಳುತ್ತೇವೆಯೋ ಎಂಬ ಆತಂಕ ಕೂಡ ಅವರ ಈ ಮೇಲಿನ ಹೇಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಪ್ರಾಯಶಃ ಅಂದಿನ ದಿನಗಳಲ್ಲಿ ಬ್ರಿಟೀಷರು ಲಿಂಗಾಯತ ಖೈದಿಗಳಿಗೆ ತಮ್ಮ ಇಷ್ಟಲಿಂಗವನ್ನು ಅಥವಾ ಯಾವುದೇ ಧಾರ್ಮಿಕ ಚಿಹ್ನೆಯನ್ನು ಧರಿಸುವ ಅವಕಾಶವನ್ನು ನೀಡಿರಲಿಲ್ಲವೆಂದು ತೋರುತ್ತದೆ. ಹಾಗಾಗಿ ಈ ಮೇಲಿನ ಒತ್ತಾಯ ಮಹತ್ವವನ್ನು ಪಡೆದುಕೊಳ್ಳುತ್ತದೆ.
ಜೈಲುವಾಸ ಮತ್ತು ಜೈಲಿನಲ್ಲಿರುವ ಖೈದಿಗಳ ಬಗ್ಗೆ ಈಗಾಗಲೇ ಅನೇಕ ಸಂಶೋಧನೆಗಳು ಮತ್ತು ಅಧ್ಯಯನಗಳು ಆಗಿವೆ. ಆದರೆ ಲಿಂಗಾಯತ ಗಣ್ಯ ವ್ಯಕ್ತಿಗಳು ಹಿಂದೆ ಜೈಲಿನಲ್ಲಿ ಖೈದಿಗಾಳಾಗಿದ್ದ ತಮ್ಮ ಸಮಾಜದವರ ಬಗ್ಗೆ ವಹಿಸಿರುವ ಕಾಳಜಿ ಮತ್ತು ಗಮನವನ್ನು ಸಾಂಸ್ಕೃತಿಕ ಮತ್ತು ಸಾಮಾಜಿಕ ದೃಷ್ಟಿಯಿಂದ ಅಧ್ಯಯನ ಮಾಡಿರುವ ಪ್ರಯತ್ನಗಳು ಇಲ್ಲವೆ ಇಲ್ಲ ಎಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಆರಂಭಿಕ ಅಧ್ಯಕ್ಷರುಗಳು ತಮ್ಮ ಅಧ್ಯಕ್ಷೀಯ ಭಾಷಣಗಳಲ್ಲಿ ಲಿಂಗಾಯತ ಖೈದಿಗಳ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸಿರುವುದು ಐತಿಹಾಸಿಕ ದೃಷ್ಟಿಯಿಂದ ಮತ್ತು ಧಾರ್ಮಿಕ ದೃಷ್ಟಿಯಿಂದ ಮಹತ್ವವನ್ನು ಪಡೆದುಕೊಳ್ಳುತ್ತದೆ. ಇಲ್ಲಿ ಧಾರ್ಮಿಕ ಆಚರಣೆಯ ಬಗ್ಗೆ ಮಾತ್ರ ಕಾಳಜಿಯಿರದೆ ಇತರ ಸಮುದಾಯ ಖೈದಿಗಳನ್ನು (ವಿಶೇಷವಾಗಿ ಬ್ರಾಹ್ಮಣರು) ಯಾವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿತ್ತೋ ಅದೇ ರೀತಿಯಲ್ಲಿ ಲಿಂಗಾಯತ ಖೈದಿಗಳನ್ನು ಸಮಾನವಾಗಿ ನಡೆಸಿಕೊಳ್ಳಬೇಕೆಂಬ ಒತ್ತಾಯವಿದೆ. ಲಿಂಗಾಯತರಿಗೆ ನೀಡುವ ಅನ್ನೋದಕಗಳ ಬಗ್ಗೆ ಚಿಂತೆಯನ್ನು ವ್ಯಕ್ತಪಡಿಸುವ ಮಾತುಗಳು ಅಂದಿನ ದಿನಗಳಲ್ಲಿ ಊಟೋಪಚಾರಗಳ ಬಗ್ಗೆ ಇರುವ ಸಾಮಾಜಿಕ ನಂಬಿಕೆಯನ್ನು ಸೂಚಿಸುತ್ತವೆ.
ಸಾಮಾನ್ಯವಾಗಿ ಬ್ರಿಟೀಷ್ ಜೈಲಿನಲ್ಲಿದ್ದ ಖೈದಿಗಳು ಭಿನ್ನ, ಭಿನ್ನ ವರ್ಗಕ್ಕೆ ಮತ್ತು ಸಮುದಾಯಕ್ಕೆ ಸೇರಿದಂತವರಾಗಿದ್ದರು. ಮೇಲ್ಜಾತಿ ಮತ್ತು ಕೆಳ ಜಾತಿಯ ಅಪರಾಧಿಗಳನ್ನು ಒಂದೇ ಸೆರೆವಾಸದಲ್ಲಿ ಇರಿಸಲಾಗುತಿತ್ತು. ಇದರಿಂದ ಮೇಲ್ಜಾತಿ ಅಪರಾಧಿಗಳಿಗೆ ಕೆಳ ಜಾತಿಯ ಅಪರಾಧಿಗಳ ಜೊತೆಗೆ ಒಟ್ಟಿಗೆ ಇರುವಂತಹ ಪರಿಸ್ಥಿತಿ ಮುಜುಗರವನ್ನುಂಟು ಮಾಡುತ್ತಿತ್ತು. ಸಮಾಜದಲ್ಲಿ ಸಾಮಾಜಿಕವಾಗಿ ಪ್ರತ್ಯೇಕ ಊಟೋಪಚಾರಗಳನ್ನು ಅನುಸರಿಸುತ್ತಿದ್ದ ಮೇಲ್ಜಾತಿ ಅಪರಾಧಿಗಳಿಗೆ ಈಗ ಬ್ರಿಟೀಷ್ ಜೈಲಿನಲ್ಲಿ ಕೆಳ ಜಾತಿಯ ಅಪರಾಧಿಗಳ ಜೊತೆಗೆ ಅನ್ನೋದಕಗಳನ್ನು ಹಂಚಿಕೊಳ್ಳುವ ಪ್ರಮೇಯ ಉಂಟಾಯಿತು. ಇದನ್ನು ಸಹಿಸದ ಅನೇಕ ಮೇಲ್ಜಾತಿ ಅಪರಾಧಿಗಳು ಊಟೋಪಚಾರಗಳ ಬಗ್ಗೆ ಪ್ರತ್ಯೇಕತೆಯನ್ನು ಒತ್ತಾಯಿಸಿದರು. ಇದಕ್ಕೆ ಮೊದಲ ಉದಾಹರಣೆ ೧೮೪೨ ಮತ್ತು ೧೮೪೬ರಲ್ಲಿ ಬಿಹಾರನ ಚಪ್ರ, ಅಲಹಾಬಾದ್ ಮತ್ತು ಪಾಟ್ನಾ ಜೈಲಿನಲ್ಲಿ ಮೇಲ್ಜಾತಿ ಅಡುಗೆ ಭಟ್ಟರು ಕೆಳ ಜಾತಿ ಅಪರಾಧಿಗಳಿಗೆ ಆಹಾರ ತಯಾರು ಮಾಡಲು ನಿರಾಕರಿಸಿ ಇತರ ಮೇಲ್ಜಾತಿ ಅಪರಾಧಿಗಳ (ಬ್ರಾಹ್ಮಣರು ಮತ್ತು ರಜಪೂತರು) ಜೊತೆಗೂಡಿ ಬಂಡಾಯವೆದ್ದರು. ಸಮಾಜದ ಹೊರಗೆ ಬೇರೂರಿದ್ದ ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆ ಜೈಲಿನ ಒಳಗು ಮುಂದುವರೆದಿದಕ್ಕೆ ಇದು ಐತಿಹಾಸಿಕ ಸಾಕ್ಷಿ. ಅಂದಿನಿಂದ ಬ್ರಿಟೀಷ್ ಜೈಲಿನಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದಾಗ ಸಾಮಾಜಿಕ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುವ ನಿಯಮಗಳನ್ನು ಬ್ರಿಟೀಷ್ ಅಧಿಕಾರಿಗಳು ರೂಪಿಸುವ ಅನಿವಾರ್ಯತೆ ಉಂಟಾಯಿತು.
೧೮೫೭ರಲ್ಲಿ ಉಂಟಾದ ಸಿಪಾಯಿ ದಂಗೆಯು ಸಾಮಾಜಿಕ ವ್ಯವಸ್ಥೆಯನ್ನು ಬ್ರಿಟೀಷರು ನಾಶಪಡಿಸಿ, ಅದರ ಜಾಗದಲ್ಲಿ ಕ್ರಿಶ್ಚಿಯಾನಿಟಿಯನ್ನು ಸ್ಥಾಪಿಸಲು ಹೊರಟ್ಟಿದ್ದಾರೆಂಬ ವದಂತಿಗಳು ಕೂಡ ಕಾರಣ. ಹಾಗಾಗಿ ದಂಗೆಯಲ್ಲಿ ಸಿಪಾಯಿಗಳು ಮೊದಲಿಗೆ ಬ್ರಿಟೀಷ್ ಜೈಲಿನಲ್ಲಿದ್ದ ಅಸಂಖ್ಯಾತ ಅಪರಾಧಿಗಳನ್ನು ಬಿಡುಗಡೆಗೊಳಿಸಿದರು. ಇದೆಲ್ಲಾ ಘಟನೆಗಳಿಂದ ಎಚ್ಚೆತ್ತುಕೊಂಡಿದ್ದ ಬ್ರಿಟೀಷ್ ಸರ್ಕಾರ ಭಾರತೀಯರ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗೆ ಕೈ ಹಾಕುವುದಕ್ಕೆ ಹಿಂಜರಿದರು. ಜೈಲಿನಲ್ಲಿದ್ದ ಅನೇಕ ಮೇಲ್ಜಾತಿ ಅಪರಾಧಿಗಳ ಮಡಿ-ಮೈಲಿಗೆ ಆಚರಣೆಗಳಿಗೆ ಅವರು ಮನ್ನಣೆ ನೀಡಿದರು. ಜೈಲು ಸುಧಾರಣೆ ಕಾನೂನಿನಲ್ಲಿ ಸ್ಥಳೀಯರ ಆಚಾರ-ವಿಚಾರಗಳನ್ನು ಗಮನಿಸಲಾಯಿತು. ಇದರ ಪರಿಣಾಮವಾಗಿ, ಪ್ರಾಯಶಃ ಬ್ರಾಹ್ಮಣ ಖೈದಿಗಳಿಗೆ ಪ್ರತ್ಯೇಕ ಅನ್ನೋದಕಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಿದ್ದಕ್ಕೆ ಈ ಐತಿಹಾಸಿಕ ಘಟನೆಗಳೆ ಕಾರಣವಾದವು ಎಂದು ಹೇಳಬಹುದು.
ಲಿಂಗಾಯತ ಗಣ್ಯರ ಈ ಮೇಲಿನ ಹೇಳಿಕೆಗಳ ಸಂದರ್ಭವು ವಿಶಿಷ್ಟವಾದುದು. ೨೦ನೇ ಶತಮಾನದ ಮೊದಲೆರಡು ದಶಕಗಳಲ್ಲಿ ಲಿಂಗಾಯತ ಗಣ್ಯ ವರ್ಗದವರು, ಪಂಡಿತರು, ವಿದ್ವಾಂಸರು ಮತ್ತು ಶಿಕ್ಷಕ ವರ್ಗದವರು ಬ್ರಾಹ್ಮಣರಂತೆ ತಮ್ಮ ಸಮಾಜವು ಕೂಡ ಪ್ರಾಚೀನ, ವೈದಿಕ, ಬ್ರಾಹ್ಮ ಮತ್ತು ಶಾಸ್ತ್ರೀಯವಾದುದು ಎಂದು ಘಂಟಾಘೋಷವಾಗಿ ಹೇಳಿಕೊಳ್ಳುವ ಮತ್ತು ಅದನ್ನು ಸಾಧಿಸುವ ಹಠವಿಡಿದಿದ್ದರು. ಸಾರ್ವಜನಿಕ ಕ್ಷೇತ್ರದ ಯಾವುದೇ ಭಾಗದಲ್ಲಿ ಬ್ರಾಹ್ಮಣರಿಗೆ ಸಮಾನರಾಗಿ ನಿಲ್ಲುವ ಅತ್ಯುತ್ಸಾಹವನ್ನು ಅವರು ಪ್ರದರ್ಶಿಸಿದರು. ಒಮ್ಮೊಮ್ಮೆ ಬ್ರಾಹ್ಮಣರಿಗಿಂತ ತಾವೇ ಶ್ರೇಷ್ಠರೆಂದು ಹೇಳಿಕೊಳ್ಳುವುದಕ್ಕೆ ಶಾಸ್ತ್ರೀಯ ಪ್ರಮಾಣಗಳನ್ನು ಸಹ ಸ್ಥಾಪಿಸುತ್ತಿದ್ದರು. ಇದರಲ್ಲಿ ಇಷ್ಟಲಿಂಗ, ಷಟಸ್ಥಲ, ಪಂಚಾಚಾರ ಮತ್ತು ಅಷ್ಟಾವರಣಗಳ ಮಹತ್ವ ಮತ್ತು ಅವು ಹೇಗೆ ಹಿಂದು ಧರ್ಮಕ್ಕೆ ಲಿಂಗಾಯತರ ವಿಶೇಷ ಮತ್ತು ವಿಶಿಷ್ಟ ಕೊಡುಗೆಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಂದರ್ಭವದಾಗಿತ್ತು. ಇಂತಹ ಚಾರಿತ್ರಿಕ ಸನ್ನಿವೇಶದಲ್ಲಿ “ಬ್ರಾಹ್ಮಣ ಕೈದಿಗಳಿಗೆ ಬ್ರಾಹ್ಮಣರಿಂದಲೇ ಅನ್ನೋದಕಗಳು ದೊರಕುವಂತೆ ನಮ್ಮ ಮತದ ಕೈದಿಗಳಿಗೂ ದೊರಕಬೇಕೆಂಬ ಬಗ್ಗೆ ನಮ್ಮ ಸರಕಾರದವರಿಗೆ ನಾವು ವಿನಯಪೂರ‍್ವಕವಾದ ಅರ್ಜಿಯ ದ್ವಾರಾ ಬೇಡಿಕೊಳ್ಳತಕ್ಕದ್ದು” ಎಂದು ಹೇಳುವ ಲಿಂಗಪ್ಪ ಜಾಯಪ್ಪ ದೇಸಾಯಿಯವರ ಮಾತುಗಳು ಈ ಮೇಲಿನ ಐತಿಹಾಸಿಕ ತುರ್ತನ್ನು ಪ್ರತಿಪಾದಿಸುತ್ತವೆ.
ಬ್ರಿಟೀಷ್ ಮಿಲಿಟರಿ ಕ್ಷೇತ್ರಗಳಲ್ಲು ಸಹ ಲಿಂಗಾಯತರನ್ನು ನೇಮಿಸಿಕೊಳ್ಳುವಾಗ ಈ ರೀತಿಯ ಬೇಡಿಕೆಗಳನ್ನು ಅಂದಿನ ಲಿಂಗಾಯತ ಗಣ್ಯರು ಮುಂದಿಟ್ಟಿದ್ದರು. ಇವರ ಬೇಡಿಕೆ/ಮನವಿಯನ್ನು ಪುರಸ್ಕರಿಸಿ ಬಾಂಬೆ ಸರ್ಕಾರದವರು ಲಿಂಗಾಯತ ಖೈದಿಗಳು ತಮ್ಮ ಇಷ್ಟಲಿಂಗವನ್ನು ಧರಿಸಬಹುದು ಎಂದು ಅವಕಾಶ ಕೊಟ್ಟಿರುವುದನ್ನು ನಾವು ಎರಡನೇ ಅಧ್ಯಕ್ಷೀಯ ಭಾಷಣದಲ್ಲಿ ನೋಡಬಹುದು. ಇಷ್ಟಲಿಂಗ ಧಾರಣೆ ಮತ್ತು ಅನ್ನೋದಕಗಳನ್ನು ತಮ್ಮ ಸಮಾಜದವರಿಂದಲೆ ಒದಗಿಸಬೇಕೆಂಬ ಒತ್ತಾಸೆ ಬೇರೆ ಸಮಾಜದವರಿಂದ ಅಂತರ ಕಾಯ್ದುಕೊಳ್ಳುವ ವಿಧಾನ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಮಡಿ- ಮೈಲಿಗೆಯನ್ನು ಲಿಂಗಾಯತರು ಜೈಲಿನಲ್ಲಿದ್ದರು ಕೂಡ ತಪ್ಪದೆ ಅನುಸರಿಸಬೇಕೆಂದು ಒತ್ತಾಯಿಸುವ ನಂಬಿಕೆಯು ಹೌದು. ಲಿಂಗಾಯತರ ಆಚರಣೆಗಳನ್ನು ಅಂದಿನ ದಿನಗಳಲ್ಲಿ ಶಾಸ್ತ್ರೀಯವಾಗಿ ರೂಪಿಸುತ್ತಿದ್ದ ಪ್ರಕ್ರಿಯೆಯಲ್ಲಿ ಖೈದಿಗಳ ಸುಧಾರಣೆಯ ಬಗ್ಗೆ ಮಾತನಾಡದೆ ಅವರ ಆಚಾರ-ವಿಚಾರಗಳ ಕಡೆಗೆ ಗಮನ ಕೊಡುವ ಈ ಗಣ್ಯರಿಗೆ ಸಮಾಜದ ಐಡೆಂಟಿಟಿ ಮುಖ್ಯವೆನಿಸುತ್ತದೆ. ಜೈಲಿನಲ್ಲಿದ್ದ ಲಿಂಗಾಯತ ಖೈದಿಗಳು ಕೂಡ ಲಿಂಗಾಯತರ ಪ್ರಮುಖ ಗುರುತಾದ ಇಷ್ಟಲಿಂಗವನ್ನು ಧರಿಸಬೇಕು ಅಥವಾ ಧರಿಸಲು ಅವಕಾಶವಿಲ್ಲದಿದ್ದರೆ ಸರ್ಕಾರ ಅಂತಹ ಅವಕಾಶವನ್ನು ಕೊಡಬೇಕೆಂದು ಒತ್ತಾಯಿಸುವ ಅಂಶವನ್ನು ನಾವು ಇಲ್ಲಿ ಕಾಣಬಹುದು.
ಲಿಂಗಾಯತರು ಯಾವ, ಯಾವ ಕಾರಣಗಳಿಗಾಗಿ ಜೈಲುವಾಸವನ್ನು ಅನುಭವಿಸುತ್ತಿದ್ದಾರೆ; ಅವರ ಅಪರಾಧಗಳಿಗೆ ಇದ್ದ ಮೂಲ ಕಾರಣಗಳೇನು; ಯಾವ ಬಗೆಯ ಅಪರಾಧಗಳನ್ನು ಮಾಡಿ ಅವರು ಈಗ ಜೈಲು ಪಾಲಾಗಿದ್ದಾರೆ; ಅಪರಾಧಿ ಸುಧಾರಣೆಗಳಿಗೆ ಪರಿಹಾರಗಳನ್ನು ಸಮಾಜ ಶಾಸ್ತ್ರೀಯವಾಗಿ ಕಂಡುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗಳು ಈ ಗಣ್ಯರಿಗೆ ಮುಖ್ಯವಾಗಿ ಕಾಣಿಸಲಿಲ್ಲ ಎಂದು ತೋರುತ್ತದೆ. ನೈತಿಕವಾಗಿ ನಡೆದುಕೊಂಡು, ಎಲ್ಲರು ಶಿಕ್ಷಣ ಪಡೆದುಕೊಂಡರೆ ಅನೀತಿ/ಅಪರಾಧಗಳು ನಮ್ಮ ಸಮಾಜದಲ್ಲಿ ಇರುವುದಿಲ್ಲ ಎಂದು ಹೇಳುವುದಕ್ಕಷ್ಟೆ ಮೇಲಿನ ಮಾತುಗಳು ಸೀಮಿತವಾಗಿವೆ.
೧೯೧೨ರ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಅರಟಾಳ ರುದ್ರಗೌಡರು ಜಾತಿ ಸೃಷ್ಟಿಯ ವಿರುದ್ದ ಮತ್ತು ಜಾತೀಯತೆಯ ಆಚರಣೆಗಳ ವಿರುದ್ಧ ಭಾವೋದ್ರೇಕದ ಮಾತುಗಳನ್ನು ಆಡಿದರು. ಇವರ ಭಾಷಣದ ಹಿನ್ನೆಲೆಯಲ್ಲಿ ಲಿಂಗಪ್ಪ ಜಾಯಪ್ಪ ದೇಸಾಯಿಯವರ ಒತ್ತಾಯವನ್ನು (“ಬ್ರಾಹ್ಮಣ ಕೈದಿಗಳಿಗೆ ಬ್ರಾಹ್ಮಣರಿಂದಲೇ ಅನ್ನೋದಕಗಳು ದೊರಕುವಂತೆ ನಮ್ಮ ಮತದ ಕೈದಿಗಳಿಗೂ ದೊರಕಬೇಕೆಂಬ ಬಗ್ಗೆ”) ಹೇಗೆ ಅರ್ಥಮಾಡಿಕೊಳ್ಳುವುದು? ಈ ವಿರೋಧಾಭಾಸದ ಹೇಳಿಕೆಗಳು ಅಂದಿನ ಲಿಂಗಾಯತ ಸಮಾಜದ ಪ್ರಮುಖ ಅಂಶವಾಗಿದ್ದವು. ಅವರಲ್ಲಿಯು ಸಂಪ್ರದಾಯಸ್ಥರು, ಪ್ರಗತಿಪರರು ಮತ್ತು ಸಮಾಜ ಸುಧಾರಕರು ಇದ್ದರು. ಇವರ ಐಡಿಯಾಲಜಿಗಳು ಮತ್ತು ಧೋರಣೆಗಳು ಭಿನ್ನಭಿನ್ನವಾಗಿದ್ದವು. ಇಷ್ಟೆಲ್ಲಾ ಭಿನ್ನತೆಗಳ ನಡುವೆ ಲಿಂಗಾಯತ ಖೈದಿಗಳ ಬಗ್ಗೆ ಮತ್ತು ಅವರ ಆಚರಣೆಗಳ ಬಗ್ಗೆ ಲಿಂಗಾಯತ ಸಮಾಜದಲ್ಲಿ ಒಮ್ಮತವಿದ್ದುದು (ವಿಶೇಷವಾಗಿ ಇಷ್ಟಲಿಂಗವನ್ನು ಧರಿಸುವುದರ ಬಗ್ಗೆ) ಗಮನೀಯ ಅಂಶ.
Comments 7
ಚೇತನ್ ದಿಣ್ಣೂರು
May 15, 2024ಬ್ರಿಟಿಷರ ಕಾಲದ ಲಿಂಗಾಯತ ಮುಖಂಡರ ವಿಚಾರಗಳು, ಕಳವಳಗಳು ಹೇಗಿದ್ದವೆಂದು ತಿಳಿಸುವ ಲೇಖನ ಬಹಳ ಆಸಕ್ತಿ ಹುಟ್ಟಿಸಿತು.
ಮಂಜು ಮಳವಳ್ಳಿ
May 17, 202420 ನೆಯ ಶತಮಾನದ ಹೊತ್ತಿಗಾಗಲೇ ಇಷ್ಟಲಿಂಗವು ಜಾತಿಯ ಕುರುಹು ಆಗಿದ್ದು ಸ್ಪಷ್ಟವಾಯಿತು!😕
Shivananda Hulyal
May 17, 2024ತಮ್ಮನ್ನು ಮೇಲ್ಜಾತಿಯವರೆಂದು ಸಾಧಿಸಿಕೊಳ್ಳಲು ಲಿಂಗಾಯತ ಗಣ್ಯರು ಏನೆಲ್ಲಾ ಪಡಿಪಾಟು ಪಟ್ಟಿದ್ದಾರೆ! ಆಗಿನ್ನೂ ವಚನಗಳು ಸಾರ್ವಜನಿಕರ ಕೈಯಲ್ಲಿ ಓಡಾಡುತ್ತಿರಲಿಲ್ಲ. ಅವರಿಗೂ ಲಿಂಗಾಯತ ಧರ್ಮದ ಆಂತರ್ಯವೇ ಗೊತ್ತಿರಲಿಲ್ಲವೆನ್ನುವುದು ಇದರಿಂದ ಗೊತ್ತಾಗುತ್ತದೆ. ಇತಿಹಾಸದ ಅಪರೂಪದ ಮಾಹಿತಿಗಳನ್ನು ನೀಡುತ್ತಿರುವ ವಿಜಯಕುಮಾರ್ ಬೋರಟ್ಟಿ ಶರಣರಿಗೆ ಧನ್ಯವಾದಗಳು.
ಸುಧಾ ಗಂಜಿ
May 22, 2024ಅರಿವಿನ ಕುರುಹಾದ ಇಷ್ಟಲಿಂಗ ಧಾರಣೆ
ಹಾಗೂ ನಿತ್ಯ ಲಿಂಗಾನುಸಂದ ರಿಂದ ಮನೋಬಲ ವೃದ್ಧಿಸುವುದು.ಇದು ಶರಣರು
ಕಂಡುಕೊಂಡ ಮಾರ್ಗ.ಕಠಿಣ ಪರಿಸ್ಥಿತಿ ಎದುರಿಸಲು ಸಾಧನೆ ತುಂಬಾ ಮುಖ್ಯ
ದಾನಪ್ಪ ಎಸ್, ರಾಯಚೂರು
May 25, 2024ಲಿಂಗಾಯತ ಧರ್ಮ ತನ್ನ ಮಹತ್ತರ ಉದ್ದೇಶದಿಂದ ದೂರ ಸರಿದು, ಸಮಾಜದಲ್ಲಿ ಅದು ಪ್ರತಿಷ್ಟೆಗಾಗಿ ಪೈಪೋಟಿಯಂತೆ ನಿಂತ ಸುಳಿವುಗಳನ್ನು ಲೇಖಕರು ಚೆನ್ನಾಗಿ ಸಾದರಪಡಿಸಿದ್ದಾರೆ1.
ಬಸವಣ್ಣ ಕಮತಗಿ
May 26, 2024“ಬ್ರಾಹ್ಮಣ ಕೈದಿಗಳಿಗೆ ಬ್ರಾಹ್ಮಣರಿಂದಲೇ ಅನ್ನೋದಕಗಳು ದೊರಕುವಂತೆ ನಮ್ಮ ಮತದ ಕೈದಿಗಳಿಗೂ ದೊರಕಬೇಕೆಂಬ ಬಗ್ಗೆ ನಮ್ಮ ಸರಕಾರದವರಿಗೆ ನಾವು ವಿನಯಪೂರ‍್ವಕವಾದ ಅರ್ಜಿಯ ದ್ವಾರಾ ಬೇಡಿಕೊಳ್ಳತಕ್ಕದ್ದು” – ಈ ಮಾತು ಭಾರತ ಇತಿಹಾಸದ ಒಳ ಸುಳಿಗಳನ್ನು, ಭಾರತದ ಮನಸ್ಸಿನ ಜಾತಿಯ ವಾಸನೆಯನ್ನು ತೋರಿಸುತ್ತದೆ. ಇಂತಹ ಮೂಲಭೂತ ವಿಚಾರಗಳನ್ನು ಅಚ್ಚುಕಟ್ಟಾಗಿ ಬರೆದ ಲೇಖಕರಿಗೆ ಥ್ಯಾಂಕ್ಸ್.
Kamala P.R
May 28, 2024ಯಾವ ಜಾತಿಯಾದರೇನು, ಯಾವ ಧರ್ಮ ಆದರೇನು, ಅಪರಾಧಿ ಅಪರಾಧಿಯೇ. ಜಾತಿಯ ಕಾರಣದಿಂದ ಅಪರಾಧಿಗಳಲ್ಲಿ ತಾರತಮ್ಯ ಮಾಡಬಹುದೇ? ಬ್ರಿಟಿಷರು ಇಂತಹ ಬೇಡಿಕೆಗಳನ್ನು ಪುರಸ್ಕರಿಸಿದರೇ?