ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಒಂದಾನೊಂದು ಕಾಲದಲ್ಲಿ ಸಿಂಧಿ ಅನ್ನೋ ನಾಡಲ್ಲಿ ಸುಪ್ರಸಿದ್ದ ಕಳ್ಳನಿದ್ದ. ಅವನು ಆಕಾರದಲ್ಲಿ ಕುಳ್ಳನಾಗಿದ್ದರೂ ಬುದ್ದಿಯಲ್ಲಿ ಬಲು ಜಾಣ. ಹಂಗಾಗಿ ಅವನು ಕಳ್ಳರಿಗೆಲ್ಲ ನಾಯಕನಾಗಿ, ಪ್ರವಾಸಿಗರ ವ್ಯಾಪಾರಿಗಳ, ಸಾಧು ಸಂತರ, ದಾರಿಹೋಕರನ್ನು ಹೆದರಿಸಿ ಕದಿಯುವುದರಲ್ಲಿ ಆ ನಾಡೊಳಗೆ ಚೋರಚಿಕ್ಕ ಎಂದೇ ಹೆಸರುವಾಸಿಯಾಗಿದ್ದ. ಉತ್ತರದ ಸವಾಲಕ್ಷ ದೇಶದಿಂದ ದಕ್ಷಿಣದ ಕಲ್ಯಾಣ, ಪೊನ್ನಾಟಿ, ನಾಗಾರ್ಜುನಕ್ಕೆ, ತೇಲಂಗದ ಕಡೆಗೆ ಹೋಗುವ ವ್ಯಾಪಾರಿಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದ.
ಹೀಗಿರಲು ಒಮ್ಮೆ ಸವಾಲಕ್ಷ ದೇಶದ ಮಹದೇವಭೂಪಾಲ ಎಂಬ ರಾಜ ಈ ಕಳ್ಳನ ಉಪಟಳಕ್ಕೆ ಬೇಸತ್ತು ಅವನನ್ನು ಹಿಡಿದು ಕಟ್ಟಿಹಾಕಲು ತನ್ನ ದಂಡನ್ನು ಕಳುಹಿಸಿದ್ದ. ಮಹಾಚತುರ ಚಿಕ್ಕ ಇಲ್ಲಿ ಕಂಡನು ಎನ್ನುವುದರೊಳಗೆ ಮಂಗನ ಹಾಗೆ ಗಿಡವೇರಿ ಮತ್ತೊಂದು ಗಿಡಕ್ಕೆ ಜಿಗಿದು ರಾಜನ ಸೈನಿಕರನ್ನು ಯಾಮಾರಿಸಿ ಚಳ್ಳೆಹಣ್ಣು ತಿನ್ನಿಸಿದ. ಸೈನಿಕರು ಸಿಂಧಿ ನಾಡನ್ನೆಲ್ಲ ತಿರುಗಿದರೂ ಚೋರಚಿಕ್ಕನೇನೂ ಕಾಣಿಸಲಿಲ್ಲ. ಬೇಸತ್ತ ಸೈನಿಕರು ಕಳ್ಳನ ಹಿಂಬಾಲಕರನ್ನು ಹಿಡಿದುಕೊಂಡು ಹೋದರು. ತನ್ನ ಗೆಳೆಯರನ್ನು ರಾಜನ ಸೈನಿಕರು ಹಿಡಿದುಕೊಂಡು ಹೋದದ್ದೆ ಚೋರಚಿಕ್ಕ ಒಬ್ಬಂಟಿಯಾಗಿಬಿಟ್ಟ. ದಿನಗಳು ಒಂದು ಎರಡು ಮೂರು ಅಂತ ಒಂದೊಂದೇ ಹಗಲುಗಳು ಮುಗಿದು ರಾತ್ರಿಗಳು ಸರಿದು ಬೆಳಕಾಗುತ್ತಲೇ ಅವನೊಳಗೆ ಒಂಟಿತನ ಕಾಡತೊಡಗಿತು. ಸವಾಲಕ್ಷ ರಾಜ್ಯದ ಬೊಕ್ಕಸವನ್ನು ಕೊಳ್ಳೆಹೊಡೆದು ತನ್ನ ಗೆಳೆಯರನ್ನು ಬಿಡಿಸಿಕೊಂಡು ಬರಬೇಕೆಂದು ಚಿಂತೆಗೀಡಾಗಿ ಓಡಾಡುತ್ತಿದ್ದ. ಹೇಗಾದರೂ ಮಾರುವೇಷದಲ್ಲಿ ಸವಾಲಕ್ಷದ ರಾಜ್ಯದೊಳಗೆ ಹೊಕ್ಕು ತನ್ನ ಗೆಳೆಯರನ್ನು ಯಾವ ಸೆರೆಮನೆಯಲ್ಲಿ ಕೂಡಿಟ್ಟಿದ್ದಾರೆಂದು ಪತ್ತೆ ಹಚ್ಚಿ ಬಿಡಿಸಿಕೊಂಡು ಬರಬೇಕು ಎಂದು ಯೋಚಿಸುತ್ತಿದ್ದ. ಆಗ ದಕ್ಷಿಣದ ದಿಕ್ಕಿನಿಂದ ಕತ್ತೆಯ ಮೇಲೆ ಸರಕು ಹೇರಿಕೊಂಡು ಬಗಲಲ್ಲಿ ಜೋಳಿಗೆ, ತಲೆಮೇಲೆ ಗಂಟು ಹೊತ್ತುಕೊಂಡು ಬರುತ್ತಿದ್ದ ವ್ಯಾಪಾರಿ ದೂರದಿಂದಲೇ ಕಾಣಿಸಿದ. ಚಕಚಕನೇ ಗಿಡವೇರಿ ಆ ವ್ಯಾಪಾರಿಯನ್ನು ದೋಚಲು ಹೊಂಚು ಹಾಕಿ ಕಾಯುತ್ತ ಕುಳಿತ.
ಆ ವ್ಯಾಪಾರಿ ಹತ್ತಿರ ಬಂದದ್ದೆ ತಡ ಚಂಗನೇ ಜಿಗಿದು ಸೊಂಟದಲ್ಲಿ ಕಟ್ಟಿದ್ದ ಬಳಕುವ ಖಡ್ಗವನ್ನು ಒಂದು ಸಲ ಝಳಪಿಸಿ ಆ ವ್ಯಾಪಾರಿಯನ್ನು ಹೆದರಿಸಲು ನೋಡಿದ. ಆ ವ್ಯಾಪಾರಿ ಹೆದರದೆ ತಟಸ್ಥನಾಗಿ ನಗುತ್ತ ನಿಂತಿದ್ದ. ಖಡ್ಗವನ್ನು ಮತ್ತೊಮ್ಮೆ ಕುತ್ತಿಗೆ ಹತ್ತಿರ ಝಳುಪಿಸಿದ. ಆಗಲೂ ಆ ವ್ಯಾಪಾರಿ ತಣ್ಣಗೆ ನಿಂತಿರುವುದನ್ನು ಕಂಡು ಚೋರಚಿಕ್ಕನಿಗೇ ಗಾಬರಿಯಾಯ್ತು. ‘ನಾನು ಕಳ್ಳನೋ ಮಾರಾಯ ಈ ಸೀಮೆಯಲ್ಲಿ ನನ್ನ ಹೆಸರು ಕೇಳಿದರೆ ಜನ ಬೆಚ್ಚಿಬೀಳುತ್ತಾರೆ. ನಿನಗೆ ಭಯವಾಗೋದಿಲ್ಲವೇನು..’ ಎಂದು ಅಬ್ಬರಿಸಿದ. ಅದೇ ನಗುಮುಖದಲ್ಲಿ ಆ ಶರಣನು ‘ನಿನಗೆ ಬೇಕಾದ ಸಂಪತ್ತು ನನ್ನಲ್ಲಿ ಇಲ್ಲವಪ್ಪಾ.. ಈ ಸರಂಜಾಮಿನಲ್ಲಿ ನೀನು ಕದಿಯಲು ಸಾಧ್ಯವಾಗದ ನಿಧಿ ಐತೆ’ ಅಂತ ಹೇಳಿದಾಗ ಚೋರಚಿಕ್ಕನು ಆ ಕತ್ತೆಯ ಮೇಲೆ ಹೇರಿದ್ದ ಗಂಟನ್ನು ಬಿಚ್ಚಿದ. ಆ ಗಂಟಿನ ತುಂಬ ಬರೀ ಓಲೆಗರಿಗಳ ಕಟ್ಟುಗಳಿದ್ದವು. ಅವನ ತಲೆಯ ಮೇಲಿನ ಗಂಟು ಕಿತ್ತುಕೊಂಡು ನೋಡಿದ. ಅಲ್ಲಿ ಇನ್ನೂ ಬರೆಯಲಾರದ ಖಾಲಿ ಓಲೆಗರಿಗಳಿದ್ದವು.
‘ನಾನು ಓಲೆಗರಿ ಮಾರುತ್ತ ಕಲ್ಯಾಣದಿಂದ ಹೊರಟ ಸಾಮಾನ್ಯ ವ್ಯಾಪಾರಿ. ನಿನಗೆ ಅಮೂಲ್ಯವೆನಿಸಿದ ವಸ್ತು ಸಿಕ್ಕರೆ ಧಾರಾಳವಾಗಿ ತೆಗೆದುಕೋ…’ ಎಂದು ವ್ಯಾಪಾರಿ ಜೋಳಿಗೆಯನ್ನು ಕೊಟ್ಟ. ಅದರಲ್ಲೇನಿತ್ತು..! ತಟ್ಟೆ, ಲೋಟ, ನೀರಿನ ತತರಾಣಿ, ಅಡುಗೆ ಬೇಯಿಸುವ ಮಡಕೆಯ ಜೊತೆಗೆ ಒಂದು ವಿಭೂತಿಯ ಉಂಡೆ, ಪೂಜೆಗೆ ಬೇಕಾದ ಸಾಮಗ್ರಿಯ ಹೊರತು ಮತ್ತೇನೂ ಸಿಕ್ಕಲಿಲ್ಲ. ಕಳ್ಳತನ ಮಾಡಲು ಅವನ ಬಳಿ ವಚನಗಳ ಓಲೆಗರಿ ಬಿಟ್ಟರೆ ಬೇರೆ ಏನೂ ಇದ್ದಿರಲಿಲ್ಲ. ಮೈಮೇಲಿನ ಶುಭ್ರ ಬಟ್ಟೆ, ಕಾಲಲ್ಲಿನ ಆವುಗೆ, ಕೊರಳಲ್ಲಿನ ಲಿಂಗ ಮತ್ತು ರುದ್ರಾಕ್ಷಿಯೇ ಆ ವ್ಯಾಪಾರಿಯ ಚೆಲುವನ್ನು ದುಪ್ಪಟ್ಟು ಮಾಡಿದ್ದವು. ಅಷ್ಟೊಂದು ಓಲೆಗರಿಗಳಿದ್ದರೂ ಅವನು ವ್ಯಾಪಾರ ಮಾಡಿದ್ದ ಯಾವ ನಗನಾಣ್ಯವೂ ಅವನ ಹತ್ತಿರವಿಲ್ಲದ್ದು ಚೋರಚಿಕ್ಕನಿಗೆ ಕುತೂಹಲ ಮೂಡಿಸಿತು.
‘ಈ ನಿನ್ನ ಓಲೆಗರಿಗಳನ್ನು ಯಾವ ದೇಶಕ್ಕೆ ಕೊಂಡುಯ್ಯತ್ತಿರುವೆ?’ ಎಂದು ಕಳ್ಳಚಿಕ್ಕನು ಕೇಳಿದಾಗ ಆ ಶರಣನು ‘ಸವಾಲಕ್ಷ ದೇಶದ ಭಂಡಾರಕ್ಕೆ ಒಯ್ಯುತ್ತಿರುವೆ’ ಎಂದು ಹೇಳಿದ. ಮಾರುವೇಷದಲ್ಲಿ ಹೇಗಾದರೂ ಮಾಡಿ ಸವಾಲಕ್ಷ ದೇಶದೊಳಗೆ ಹೋಗಬೇಕೆಂದು ಯೋಚಿಸುತ್ತಿದ್ದವನಿಗೆ ಈ ವ್ಯಾಪಾರಿ ಸಿಕ್ಕಿದ್ದು ಒಳ್ಳೆಯದೇ ಆಗಿತ್ತು. ‘ನನಗೋ ಈ ಕಳ್ಳತನದ ಜೀವನ ಸಾಕಾಗಿದೆ. ನಾನು ನಿನ್ನೊಂದಿಗೆ ಬರುತ್ತೇನೆ. ನಿನ್ನ ವ್ಯಾಪಾರದಲ್ಲಿ ಸಹಾಯ ಮಾಡುತ್ತೇನೆ, ನಿನ್ನೊಂದಿಗೆ ಕರೆದುಕೊಂಡು ಹೋಗುವೆಯಾ..’ ಎಂದು ವಿನೀತನಾಗಿ ಆ ಚೋರಚಿಕ್ಕ ಬೇಡಿಕೊಂಡ. ಚೋರಚಿಕ್ಕನ ಮನಃಪರಿವರ್ತನೆ ಆಯ್ತೆಂದು ಭಾವಿಸಿದ ವ್ಯಾಪಾರಿ ಆತನನ್ನು ಕರೆದುಕೊಂಡು ಹೋಗಲು ಒಪ್ಪಿಕೊಂಡ.
ಚೋರಚಿಕ್ಕನೂ ವ್ಯಾಪಾರಿಯೂ ದಾರಿಗುಂಟ ಮಾತುಕತೆಯಾಡುತ್ತಾ ಹೊರಟಿರುವಾಗ ‘ಅಲ್ಲಪ್ಪಾ ವ್ಯಾಪಾರಿ, ನಾನು ಖಡ್ಗ ತೋರಿಸಿದಾಗ ನಿನಗೆ ಹೆದರಿಕೆ ಆಗಲಿಲ್ಲವಲ್ಲ, ಯಾಕೆ?’ ಎಂದು ಕೇಳಿದ. ‘ಮರಣಕ್ಕಂಜುವುದಿಲ್ಲ ನಾನು, ನೀನು ಕದಿಯಲು ಯಾವ ನಗನಾಣ್ಯವೂ ನನ್ನಲ್ಲಿ ಇಲ್ಲವೆಂಬ ಅರಿವು ನನಗಿತ್ತಲ್ಲ’ಎಂದು ಮುಗುಳ್ನಗುತ್ತ ಹೇಳಿದ ವ್ಯಾಪಾರಿ. ‘ಅಲ್ಲಪ್ಪಾ ವ್ಯಾಪಾರಿ ಅಷ್ಟು ದೂರದಿಂದ ಈ ಓಲೆಗರಿ ಮಾರುತ್ತ ಬಂದಿದಿಯಾ… ಮಾರಿ ಬಂದ ನಗನಾಣ್ಯವೇನು ಮಾಡಿದೆ..?’ ಎಂದು ಚೋರಚಿಕ್ಕ ಕೇಳಿದಾಗ ಆ ಶರಣ ನಗುತ್ತಲೇ, ‘ಕಾಯಕದಿಂದ ಬಂದ ಫಲದಲ್ಲಿ ಏನೂ ಬರೆಯದ ಹೊಸ ತಾಳೆಗರಿಯನ್ನು ಕೊಂಡು ಈ ಜೋಳಿಗೆಯಲ್ಲಿ ಹಾಕಿಕೊಂಡೆ. ಉಳಿದ ನಗನಾಣ್ಯದಿಂದ ಜಂಗಮ ದಾಸೋಹ ಮಾಡಿದೆ.’
‘ಜಂಗಮದಾಸೋಹವೇ…?’
‘ಹೌದು… ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫಲದಲ್ಲಿ ಹೆಚ್ಚಿನದೇನನ್ನೂ ಬಯಸುವವರಲ್ಲ ಕಲ್ಯಾಣದ ಜನರು. ಕಾಯಕದಿಂದ ಬಂದ ಹಣದಲ್ಲಿ ಉಂಡು ಉಳಿದದ್ದನ್ನು ಮಹಾಮನೆಯ ದಾಸೋಹಕ್ಕೆ ನೀಡುತ್ತೇವೆ.’
‘ಭಳೀರೇ.. ಹಾಗಿದ್ದರೆ ಆ ಕಲ್ಯಾಣದ ಮಹಾಮನೆ ಯಾರು ನೋಡಕೊಳ್ತಾರೆ…?’
‘ಬಸವಣ್ಣ ದಣ್ಣಾಯಕರು..!’
‘ಬಸವಣ್ಣ..?’
‘ಅವರೇ ಅರಿವಿನ ಬೆಳಕನ್ನು ಶರಣರೊಳಗೆ ಬಿತ್ತಿದವರು. ಶರಣರಾದವರು ಕಾಯಕ ಮಾಡಿ, ಬಂದ ಹಣದಲ್ಲಿ ತಮಗೆ ಆ ದಿನಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ದಾಸೋಹ ಮಾಡಬೇಕೆಂದು ಹೇಳಿದವರು. ಕಲ್ಯಾಣ ರಾಜ್ಯದ ಪ್ರಧಾನಿಗಳೂ ಅವರೇ…!’
‘ದಾಸೋಹ ಎಂದರೆ ಏನು…?’
‘ಅದೊಂದು ವಿಧಾನ. ಯಾವದೋ ಒಂದು ಜಾತಿಗೆ ದಾನ ಮಾಡುವುದು ಮತ್ತು ದಾನ ಪಡೆಯುವುದು ಮಾತ್ರವೇ ನಡೆಯುತ್ತಿರುವ ಈ ಕಾಲದಲ್ಲಿ ಈ ಸಮಾಜವೆಂಬ ಜಂಗಮದ ಸ್ವರೂಪದಲ್ಲಿರುವ ದೀನರ, ಬಡಬಗ್ಗರ ಹೊಟ್ಟೆ ತುಂಬಿಸುವ ಮಹಾನ್ ಕೆಲಸವದು.’
‘ಭಳೀರೆ.. ಹಾಗಿದ್ದರೆ ಇಡೀ ರಾಜ್ಯದ ಜನರೆಲ್ಲ ತಂದು ಕೊಡುವ ಲಾಭದ ಹಣ ಬಸವಣ್ಣನ ಹತ್ತಿರವೇ ಇರುತ್ತದೆ. ಕಳ್ಳತನವ ಮಾಡಿದರೆ ಬಸವಣ್ಣನ ಮನೆಯನ್ನೇ ಕಳ್ಳತನ ಮಾಡಬೇಕು. ಈಗ ಸೆರೆಯಾಳಾಗಿರುವ ತನ್ನ ಗೆಳೆಯರನ್ನು ಬಿಡಿಸಿಕೊಂಡು ಕೂಡಲೇ ಕಲ್ಯಾಣಕ್ಕೆ ಹೋಗಿ ಬಸವಣ್ಣನ ಭಂಡಾರ ದೋಚಬೇಕು ನಾವು..’ ಎಂದು ಮನಸ್ಸಿನಲ್ಲಿಯೇ ಹೊಂಚುಹಾಕಿದ. ಹೀಗೆ ಕಲ್ಯಾಣದ ಕತೆ ಕೇಳುತ್ತಾ ಸವಾಲಕ್ಷ ದೇಶದೊಳಗೆ ಬಂದದ್ದೆ ಚೋರಚಿಕ್ಕನ ಚಿತ್ತ ಚಂಚಲವಾಯ್ತು.
**** **** ****
ಆ ಸಾಧಕರು ಹೋದ ಗುಪ್ತಮಾರ್ಗದಲ್ಲೇ ಚೋರಚಿಕ್ಕನೂ ಹಿಂಬಾಲಿಸಿ ಮಹದೇವಭೂಪಾಲನ ಅರಮನೆಯಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಪೂಜಾನೀರು ಹರಿದುಹೋಗುವ ಮೋರಿಯನ್ನು ತಲುಪಿದನು. ಮೋರಿಯಿಂದ ಒಳನುಗ್ಗಿ ಬಂದಾಗ ಅಲ್ಲಿ ಅಸಂಖ್ಯಾತ ಸನ್ಯಾಸಿಗಳು ಮಲ್ಲಿಕಾರ್ಜುನ ಲಿಂಗವನ್ನು ಸುಗಂಧದ್ರವ್ಯ, ಪುಷ್ಪಗಳಿಂದ ಅಲಂಕರಿಸಿ ಧೂಪದೀಪಾರತಿಗಳಿಂದ ಸದೋದಿತ ಪೂಜಿಸುತ್ತಲಿದ್ದರು.
ಆ ದೇವಸ್ಥಾನದ ಎಡಬದಿಯ ಜಗುಲಿಯಿಂದ ಆಚೆಗೆ ಕಾವಲುಗಾರರು ನಿಂತಿರುವುದು ಕಾಣಿಸಿತು. ಚೋರಚಿಕ್ಕನ ಹಿಂಬಾಲಕರನ್ನ ಅಲ್ಲಿ ನೆಲಮಾಳಿಗೆಯಲ್ಲಿ ಕೂಡಿಡಲಾಗಿತ್ತು. ಚೋರಚಿಕ್ಕ ಎಂದಾದರೊಮ್ಮೆ ಬಂದೇ ಬರುವನು, ಬಂದಾಗ ಸೆರೆಹಿಡಿಯಲು ಆ ನೆಲಮಾಳಿಗೆ ಸುತ್ತಲು ಬಲೆಯ ಕಟ್ಟಿಸಿ ಹತ್ತಾಳು ಸೈನಿಕರನ್ನು ಕಾವಲಿಗಿಟ್ಟಿದ್ದರು.
ಚೋರಚಿಕ್ಕನೋ ಮಂಗನಂತೆ ನೆಗೆದು ಹಾರುವ ವಿದ್ಯೆ ಕಲಿತವನು. ತನ್ನಿಡೀ ದೇಹವನ್ನು ಇನ್ನಷ್ಟು ಕುಗ್ಗಿಸಿ ಪಾದದ ತುದಿಬೆರಳ ಮೇಲೆ ಭಾರ ಹಾಕಿ ಚಂಗನೆ ನೆಗೆದು ಆ ಬಲೆಗಳ ಮೇಲೆ ಓಡಾಡತೊಡಗಿದಾಗ ಕಾವಲುಗಾರರಿಗೆ ಚೋರಚಿಕ್ಕ ಬಂದನೆಂದು ತಿಳಿದು ಹೋಯ್ತು. ಆ ಬಲೆಯ ಸುತ್ತಲೊಂದು ಗಿರಕಿ ಹೊಡೆದು ಆ ಕಾವಲುಗಾರರ ದಿಕ್ಕುತಪ್ಪಿಸಿದ ಚಿಕ್ಕ ಚಕಚಕನೇ ನೆಲಮಾಳಿಗೆ ಹೊಕ್ಕು ತನ್ನ ಸಹಚರರನ್ನು ಬಿಡಿಸಿಕೊಂಡು ಬಂದ ಮಾರ್ಗದಲ್ಲೇ ಮುನ್ನುಗ್ಗಿದ. ಆ ದೇವಸ್ಥಾನದ ಮೋರಿಯ ನೀರು ಹೋಗುವ ಇಡಿಕಿರಿದಾದ ದಾರಿಯಲ್ಲಿ ಜಿಗಿದು ಒಬ್ಬೊಬ್ಬರೇ ಆ ಹಾಳುಗುಡಿಗೆ ಬಂದು ತಲುಪಿದರು.
ಆ ವ್ಯಾಪಾರಿ ಇಲ್ಲಿಯವರೆಗೂ ಸಾಮಾನ್ಯನು ಆಗಿದ್ದವನು ಈಗ ಸ್ನಾನ ಮಾಡಿಕೊಂಡು ಪೂಜೆಗೆ ಕುಳಿತಿದ್ದ. ಅಷ್ಟೆತ್ತರದ ಶಿವಲಿಂಗವನ್ನು ಸಣ್ಣಗುಂಡುಕಲ್ಲನ್ನಾಗಿ ಮಾಡಿಕೊಂಡು ಅದಕ್ಕೆ ಪೂಜಿಸುತ್ತ ಧ್ಯಾನಾಸಕ್ತನಾದವನಿಗೆ ಯಾವ ತೊಂದರೆಯನ್ನೂ ಕೊಡದೇ ಚೋರಚಿಕ್ಕನೂ ಮತ್ತವನ ಸಹಚರರು ಅಲ್ಲಿಂದ ಹೊರಡಲು ಅನುವಾದರು.
ಅವರಲ್ಲೊಬ್ಬ ‘ಹೇಗೂ ಈ ರಾಜ ನಮ್ಮನ್ನು ಬಂಧಿಸಿ ಅವಮಾನಿಸಿದ್ದಾನೆ, ಈ ರಾಜ್ಯವನ್ನೇ ಕೊಳ್ಳೆಹೊಡಕೊಂಡು ಹೋಗೋಣ’ ಎಂದ. ಮತ್ತೊಬ್ಬ ‘ಇಲ್ಲೇನಿದೆಯೋ ಆ ದೇವರ ಅನುಗ್ರಹಕ್ಕಾಗಿ ಹಗಲು ಹನ್ನೆರಡು ತಾಸು ಪೂಜೆ ಮಾಡುವ ಈ ರಾಜನ ಬೊಕ್ಕಸದಲ್ಲಿ ಏನೂ ಇದ್ದಿರಲಿಕ್ಕಿಲ್ಲ’ ಎಂದು ತನ್ನ ಮಾತಿಗೆ ತಾನೇ ನಕ್ಕ. ಮಗದೊಬ್ಬ ‘ಇನ್ನೊಮ್ಮೆ ಈ ರಾಜ ನಮ್ಮ ತಂಟೆಗೆ ಬರಬಾರದು ಹಂಗ ಮಾಡಿ ಹೋಗೋಣ’ ಎಂದ.
ಯಾರೋ ಹಿಂದಿನಿಂದ ಅವರನ್ನು ಹಿಂಬಾಲಿಸಿ ಬರುತ್ತಿದ್ದಾರೆನಿಸತೊಡಗಿತು. ಆಗ ಚಿಕ್ಕ ಅವರೆಲ್ಲರಿಗೂ ಸುಮ್ಮನಿರಲು ಸೂಚಿಸಿ ಹತ್ತಿರಕ್ಕೆ ಕರೆದು ‘ಅಮೂಲ್ಯವಾದ ಆಸ್ತಿವಂತ ಒಬ್ಬ ಕಲ್ಯಾಣ ರಾಜ್ಯದ ಮಂತ್ರಿಯಾಗಿದ್ದಾನೆ. ಅವನೋ ಬಡಬಗ್ಗರ ಹತ್ತಿರ ಉಳಿಯಬಹುದಾದ ಹೆಚ್ಚಿನ ಮೊತ್ತವನ್ನು ನಾಲ್ಕಾರು ಜನಕ್ಕೆ ಊಟ ಹಾಕುವ ನೆಪದಲ್ಲಿ ವಸೂಲಿ ಮಾಡಿಕೊಂಡು ಭಾರಿ ಗಳಿಸಿದ್ದಾನೆ ಅಂತ ಕಾಣಸತದೆ. ನಾವೂ ಈಗಲೇ ಆ ಕಲ್ಯಾಣಕ್ಕೆ ಹೋಗಿ ಆ ಬಸವಣ್ಣನ ಮನೆಗೆ ಕನ್ನ ಹಾಕೋಣ’ ಎಂದು ಹೇಳಿದ. ಅವರ ಹಿಂದಿನಿಂದ ಆ ಗುಪ್ತ ಮಾರ್ಗದಲ್ಲಿ ರಾಜನ ಸೈನಿಕರು ಬರುತ್ತಿರುವುದ ಕೇಳಿದ್ದೆ ತಡ ಚೋರಚಿಕ್ಕನೂ ಮತ್ತವನ ಗೆಳೆಯರು ಯಾರ ಕಣ್ಣಿಗೂ ಬೀಳದಂತೆ ಕಾಡುಬಿದ್ದು ಓಡತೊಡಗಿದರು.
ಮಹದೇವ ಭೂಪಾಲನ ಸೈನಿಕರು ಆ ಚೋರಚಿಕ್ಕ ನುಗ್ಗಿದ ದೇವಸ್ಥಾನದ ಮೋರಿಯಿಂದಲೇ ನುಸುಳಿಕೊಂಡು ಬಂದು ನೋಡಲು ಅಲ್ಲಿ ಆ ವ್ಯಾಪಾರಿ ಲಿಂಗಪೂಜೆಗೆ ಕುಳಿತಿದ್ದ. ಆ ತೊರೆಯನ್ನು ದಾಟಿ ಬಡಗಣ ದಿಕ್ಕಿಗೆ ಕಳ್ಳರು ಓಡಿ ಹೋದ ಹೆಜ್ಜೆಗುರುತಿನ ಜಾಡು ಹಿಡಿದು ಕೆಲವು ಸೈನಿಕರು ಬೆನ್ನತ್ತಿದರು. ಇನ್ನುಳಿದ ಇಬ್ಬರು ಸೈನಿಕರು ತಮ್ಮ ರಾಜರ ಅರಮನೆಯ ಆವರಣದಲ್ಲಿ ಅಷ್ಟು ದೊಡ್ಡದಾದ ನಿಃಕಳಂಕ ಮಲ್ಲಿಕಾರ್ಜುನ ಲಿಂಗವಿದ್ದರೂ ಈ ಇವನು ಆ ದೇವರನ್ನು ಹಂಗಿಸುವ ರೀತಿಯಲ್ಲಿ ಈ ಪುಟ್ಟ ಲಿಂಗವನ್ನು ಪೂಜಿಸುತ್ತಿದ್ದಾನಲ್ಲ ಎಂದು ಕೋಪಗೊಂಡು ಆ ವ್ಯಾಪಾರಿಯನ್ನು ಬಂಧಿಸಿ ಅರಮನೆಗೆ ಕರೆದೊಯ್ದರು.
**** **** ****
ಚೋರಚಿಕ್ಕ ಮುಂದಾಗಿ ಹಿಂದೆ ನಾಲ್ವರು ಸಹಚರರು, ಅವರ ಹಿಂದೆ ಸವಾಲಕ್ಷದ ಸೈನಿಕರು ಓಡುತ್ತಿದ್ದರು. ಕಾಡುಮೇಡು ಅಲೆದು ಗುಡ್ಡವೇರಿ ಗುಡ್ಡವಿಳಿದು ಸಿಂಧೀ ಪ್ರಾಂತ್ಯಕ್ಕೆ ಬಂದುದೇ ಮಹದೇವ ಭೂಪಾಲನ ಸೈನಿಕರು ಹತಾಶರಾಗಿ ತಮ್ಮ ರಾಜ್ಯದತ್ತ ಮರಳಿದರು. ಚೋರಚಿಕ್ಕ ಓಡಿಓಡಿ ಬಂದು ತನ್ನ ಗುಹೆ ಮುಂದೆ ನಿಂತಾಗ ಹಗಲು ಕರಗಿ ಕತ್ತಲಾವರಿಸಿತ್ತು. ‘ಈ ರಾತ್ರಿಯೊಂದನ್ನು ಇಲ್ಲೇ ಕಳೆದು, ಬೆಳಗಾಗುತ್ತಲೇ ಕಲ್ಯಾಣದತ್ತ ಹೋಗೋಣ’ಎಂದಾಗ ಸಹಚರರು ಒಪ್ಪಿದರು. ಆ ಕಲ್ಯಾಣಕ್ಕೊಂದು ಕನ್ನ ಹಾಕಿದರೆ ಜೀವಮಾನಕ್ಕಾಗುವಷ್ಟು ಗಳಿಸಬಹುದು ಎಂಬ ಕನಸು ಕಟ್ಟಿಕೊಂಡು ಅದೇ ಆಲೋಚನೆಯಲ್ಲಿಯೇ ಒರಗಿದ್ದ ಚಿಕ್ಕ ಯಾವುದೋ ಗಳಿಗೆಯಲ್ಲಿ ನಿದ್ದೆಗೆ ಜಾರಿದ್ದ.
ಇನ್ನೇನು ಬೆಳ್ಳಿಚುಕ್ಕಿ ಮೂಡಿ ಲೋಕಕ್ಕೆಲ್ಲ ಬೆಳಕಾಗುವ ಹೊತ್ತಿಗೆ ಗಾಢವಾದ ಕನಸೊಂದಕ್ಕೆ ಬೆಚ್ಚಿದ ಚೋರಚಿಕ್ಕ ‘ಅಯ್ಯಯ್ಯೋ..’ ಎಂದು ಕಿರುಚುತ್ತಾ ಎದ್ದು ಕುಳಿತ. ಸಹಚರರೂ ಗಾಬರಿಯಿಂದೆದ್ದು ತಮ್ಮ ಹತ್ಯಾರಗಳನ್ನು ಹೊರಗೆಳೆದು ನಿಂತಿದ್ದರು.
ಕೆಟ್ಟ ಕನಸ ಕಂಡೆಯೇನೋ ಚಿಕ್ಕಾ..
ಕೆಟ್ಟ ಕನಸಲ್ಲ ಅದು.. ಆದರೆ..
ಆದರೇನು..? ಏನು ಕನಸ ಕಂಡೆ
ಬಲವಾದ ಕಲ್ಲೊಂದನ್ನು ಗುಹೆಯ ಬಾಗಿಲಿಗೆ ಅಡ್ಡಲಾಗಿ ಇಟ್ಟಿದ್ದರು. ಆ ಕಲ್ಲಿನ ಸಂದುಗೊಂದಿನಲ್ಲಿ ಗುಹೆಯೊಳಗಿಂದ ಬೆಳಕಿನ ಪ್ರಖರತೆ ತೂರಿಕೊಂಡು ಹೊರಗೆ ಹಣಿಕಿಕ್ಕುತ್ತಿತ್ತು. ಅದೆಂಥಾ ಬೆಳಗು, ಬರೀ ವಜ್ರ, ಮುತ್ತು, ಮಾಣಿಕ್ಯ ಹವಳದ ಹೊಳಪಿನ ಹಾಗೆ ಮಿರಿಮಿರಿ ಹೊಳೆಯುವ ಆ ಬೆಳಕನ್ನು ಮುಟ್ಟಬೇಕೆಂಬ ಹಂಬಲ ನನಗಾಯ್ತು. ಆದರೆ ಅಲ್ಲಿ ಯಾರೋ ಒಬ್ಬಿಬ್ಬರು ದಢೂತಿಗಳು ಆ ಬೆಳಕು ಹೊರಗೆ ಬಾರದಂತೆ ತಡೆಗೋಡೆಯಾಗಿ ಕಲ್ಲನ್ನು ಮುಚ್ಚುತ್ತಿದ್ದರು. ಆ ಅನಘ್ರ್ಯ ರತ್ನದ ಬೆಳಕು ಲೋಕಕ್ಕೆಲ್ಲ ಕಂಡರೆ ತಮಗೆ ನಷ್ಟವಾಗುವುದೆಂಬ ಭಯ ಅವರ ಮುಖದಲ್ಲಿತ್ತು. ನನಗೋ ಕೊಳ್ಳೆ ಹೊಡೆದರೆ ಅಂಥದೇ ಅನಘ್ರ್ಯವನ್ನ ಕದಿಯಬೇಕೆಂಬ ಛಲ. ಮೆಲ್ಲಮೆಲ್ಲನೇ ಆ ಬೆಳಕು ನುಸುಳುವ ಗುಹೆಯ ಬಾಗಿಲ ಹತ್ತಿರ ಹೋದೆ.. ಮಿಂಚಿನಷ್ಟೇ ವೇಗದಲ್ಲಿ ಆ ಗುಹೆಯ ಮೇಲೇರಿ ಬೆಳಕಿಂಡಿಯ ಮೂಲಕ ಮಂಗನ ಹಾಗೆ ಜಿಗಿದು ಬಿಟ್ಟೆ ಆ ಗುಹೆಯೊಳಗೆ..
‘ಆಮೇಲೆ ಏನಾಯ್ತು ಚಿಕ್ಕಾ… ಸಿಕ್ಕಿತೇನು ನಗನಾಣ್ಯ..’
‘ಅದೆಲ್ಲಿ ಸಿಕ್ಕಿತೋ ಮಾರಾಯ… ಆ ಬೆಳಕಿನ ಪ್ರಖರತೆಗೆ ಕಣ್ಣುಮುಚ್ಚಿಕೊಂಡೆ, ನೆಲವೇ ಸಿಗದಂತೆ ಆಳಾಳ ಪಾತಾಳದಲ್ಲಿ ಬೀಳುತ್ತಿರುವ ಹಾಗನಿಸಿ ಹೆದರಿಕೊಂಡು ಎದ್ದೆನೋ ಮಾರಾಯ.’
ಅರಕಳಿಯಾದ ಈ ಕನಸಿಗೆ ಸಹಚರರು ನಸುನಕ್ಕರು. ಅವರಲ್ಲೊಬ್ಬ ಕಲ್ಯಾಣದಲ್ಲಿ ಕೊಳ್ಳೆಹೊಡೆಯೋ ನಮ್ಮ ಕನಸು ಈಡೇರಲಿಕ್ಕಿಲ್ಲ, ಅಲ್ಲಿಗೆ ಹೋಗುವುದು ಬೇಡವೇನೋ ಎಂದು ಅನುಮಾನ ವ್ಯಕ್ತಪಡಿಸಿದ. ಇನ್ನೊಬ್ಬ ಅಷ್ಟೊಂದು ಬೆಲೆಬಾಳುವ ನಗನಾಣ್ಯ ಇರುವ ನಾಡಿನ ಕಡೆಗೆ ಹೋದರೆ ನಮ್ಮ ಕಳ್ಳತನದ ಕಸುಬು ನಿರಾತಂಕವಾಗಿ ನಡೀತದೆ, ಅಲ್ಲಿಗೆ ಹೋಗೋದೆ ಸರಿ ಎಂದ. ಕನಸು ಸುಳ್ಳೋ ನಿಜವೋ ಎಂಬ ಭ್ರಮೆಯಲ್ಲಿದ್ದ ಚೋರಚಿಕ್ಕ ಒಮ್ಮೆ ಮನಸು ಮಾಡಿದ ಮೇಲೆ ಅಲ್ಲಿ ನಮ್ಮ ಜೀವಮಾನಕ್ಕಾಗುವಷ್ಟು ಸುಖದ ಸಂಪತ್ತು ಸಿಕ್ಕೇಸಿಗುವುದು ಎಂಬ ಹುಮ್ಮಸ್ಸಿನಲ್ಲಿಯೇ ಕಲ್ಯಾಣದತ್ತ ಹೊರಡಲು ಅನುವಾದ. ಸಹಚರರು ಅವನನ್ನು ಹಿಂಬಾಲಿಸಿದರು.
**** **** ****
ದಿನಕಳೆದು ದಿನಮೂಡಿ ಏಳು ದಿನಗಳ ಕಾಲ ನಿರಂತರ ನಡೆದು ಕಲ್ಯಾಣ ಸೀಮೆಯನ್ನು ಮುಟ್ಟಿದ್ದೆ ಎಲ್ಲರ ಮುಖದಲ್ಲೂ ಹೊಸದೊಂದು ಕಳೆ ಮೂಡಿತು. ಬರುವ ದಾರಿಯ ಮಧ್ಯದ ಊರುಗಳಲ್ಲೆಲ್ಲ ಮುಂಜಾನೆಯ ಎಳೆಬಿಸಿಲಿಗೆ ಮೈಕಾಸುವ ಸಾಲುಸಾಲು ಜನರು ಸೂರ್ಯನಿಗೆ ಬೆನ್ನು ಮಾಡಿ ಕುಳಿತಿರುತ್ತಿದ್ದರು. ಆದರೆ ಈ ಸೀಮೆಯ ಜನರು ಮುಂಜಾನೆ ಮೈಮುರಿದು ದುಡಿದು ಮಧ್ಯಾಹ್ನ ಕೊಂಚ ವಿಶ್ರಮಿಸಿ ಸಂಜೆಗೆ ಅನುಭಾವದ ಕೂಟಗಳನ್ನು ಏರ್ಪಡಿಸುವ ರೀತಿ ಚೋರಚಿಕ್ಕನಿಗೆ ಸೋಜಿಗ ಎನಿಸಿತು.
ಹತ್ತಿರದ ಗುಡ್ಡವೊಂದರಲ್ಲಿ ಅವಿತುಕೊಂಡಿದ್ದು ಬಂದ ಕೆಲಸವನ್ನು ಪೂರೈಸುವ ಹಂಚಿಕೆ ಹಾಕಿದ ಚೋರಚಿಕ್ಕ. ಬಂದ ದಿನವೇ ಮಾರುವೇಷದಲ್ಲಿ ಕಲ್ಯಾಣದ ಬೀದಿಗಳ ಅಲೆದು ಸ್ಥಳಗಳ ಗುರುತು ಹಾಕಿಕೊಂಡನು. ಊರ ಸುತ್ತಲಿನ ಕೋಟೆ, ಅರಮನೆ, ಗುರುಮನೆ, ಓಲಗ, ಭಂಡಾರ, ಆನೆ-ಕುದುರೆಗಳ ಲಾಯ, ಬೆಟ್ಟದ ಮೇಲಿನ ಗುಹಾವಾಸಿಗಳು, ಮಹಾಮನೆ, ಅನುಭವಮಂಟಪ, ಹೊರಕೇರಿ, ಮೇಲಕೇರಿ, ಶಿವಕೇರಿ, ಸಂತೆಮೈದಾನ, ಅಗ್ರಹಾರಗಳನ್ನು ಕಣ್ಣಲ್ಲೇ ಗುರುತು ಹಾಕಿಕೊಂಡು ಬಂದನು. ಚೋರಚಿಕ್ಕನ ಹಂಚಿಕೆಗಾಗಿ ಕಾದು ಕುಳಿತಿದ್ದ ಸಹಚರರಿಗೋ ಆತುರ ಈ ಕ್ಷಣವೇ ಮಹಾಮನೆಗೆ ನುಗ್ಗಿ ಕೊಳ್ಳೆ ಹೊಡೆಯುವ ಕಾತರ.
ಅರಮನೆಗೆ ಸಮೀಪದಲ್ಲಿ ಮಹಾಮನೆಯೊಂದು ಇದ್ದು ಅಲ್ಲಿ ಬಡಬಗ್ಗರಿಗೆ, ದೀನರಿಗೆ, ದಾರಿಹೋಕರಿಗೆ ಅನ್ನಾಹಾರ ನೀಡಿ ಉಪಚರಿಸುವ ದಾಸೋಹವಿತ್ತು. ಅದರ ಸಮೀಪದಲ್ಲೇ ಪ್ರಧಾನಿಗಳ ಮನೆಯಿದೆ. ಅದರ ಎಡಭಾಗದಲ್ಲಿ ಹೊರಟರೆ ಅದು ನೇರ ಗುಡ್ಡದ ಮೇಲಿನ ಗುಹೆಗಳಿಗೆ ಬಂದು ಮುಟ್ಟುತ್ತದೆ. ಅದರ ಬಲಕಾಗಿ ಕಾಲುದಾರಿಯಲ್ಲಿ ನಡೆದರೆ ಅರಮನೆ. ಈ ದಿವಸ ರಾತ್ರಿಯೇ ನೀವುಗಳು ಬಸವಣ್ಣನವರ ಮನೆಗೆ ಕನ್ನ ಕೊರೆದು ಕೈಗೆ ಸಿಕ್ಕದ್ದನ್ನೆಲ್ಲ ದೋಚಬೇಕು. ನೆನಪಿರಲಿ ಅಲ್ಲಿಂದ ತಪ್ಪಿಸಿಕೊಂಡು ಬರುವಾಗ ಎಡಕಿನ ದಾರಿ ತುಳಿಯಿರಿ. ಅಪ್ಪಿತಪ್ಪಿ ಬಲಕಾಗಿ ಓಡಿದಿರೋ ಅರಮನೆಯ ಕಾವಲುಗಾರರ ಕೈಗೆ ಸಿಕ್ಕಿಬೀಳುವಿರಿ.
ಚೋರಚಿಕ್ಕನ ಮಾತನ್ನು ಕೇಳಿಸಿಕೊಂಡ ಸಹಚರರಿಗೆ ಯಾವಾಗ ಮಧ್ಯರಾತ್ರಿಯಾಗುವುದೋ, ಯಾವಾಗ ಕನ್ನ ಕೊರೆದೇವೋ ಎಂಬ ಆತಂಕದಲ್ಲಿ ಹೊತ್ತು ಬಲು ನಿಧಾನ ಸಾಗುತ್ತಿರುವುದರ ಬಗ್ಗೆ ಬೇಸರವಾಗತೊಡಗಿತು. ಕತ್ತಲಾವರಿಸಿತು… ಆಕಾಶಮಂಡಲದ ತುಂಬೆಲ್ಲ ಫಳಫಳ ಹೊಳೆಯುವ ನಕ್ಷತ್ರಗಳು ಹುಟ್ಟಿಕೊಂಡವು. ಕೋಟೆಯ ಮುಖ್ಯದ್ವಾರದಲ್ಲಿ ಬೆಂಕಿಯ ಹಿಲಾಲು ಧಗಧಗ ಉರಿಯುತ್ತ ಆ ಕತ್ತಲೊಳಗೆ ಬೆಳಕ ಹಿಡಿದಿಟ್ಟಿದ್ದವು. ಅನುಭವಮಂಟಪದಲ್ಲಿ ನೆರೆದಿದ್ದವರ ಮಾತುಗಳು, ಭಜನೆಯ ಹಾಡುಗಳು ಅಂದಿನ ಅನುಭಾವದ ಒಡಲು ಸೇರಿಕೊಂಡು ಸರೀರಾತ್ರಿಗೆ ಇಡೀ ಕಲ್ಯಾಣವನ್ನು ಮೌನ ವ್ಯಾಪಿಸಿಕೊಂಡಿತು. ಚೋರಚಿಕ್ಕ ಸಣ್ಣದೊಂದು ಶಿಳ್ಳೆಯ ಮೂಲಕ ಕೊಳ್ಳೆಗೆ ಸನ್ನದ್ಧನಾಗಲು ಸನ್ನೆ ಕೊಟ್ಟ. ದುಡಿದು ದಣಿದ ಆಯಾಸಕ್ಕೆ ಅರಮನೆಯ ಊಳಿಗದವರು ಮಹಾಮನೆಯ ಶರಣರೂ ಮಲಗಿಕೊಂಡಾದ ಮೇಲೆ ನಾಲ್ಕೂ ಜನ ಸಹಚರರು ತಮ್ಮ ಹೆಜ್ಜೆಯ ಸದ್ದು ತಮಗೂ ಕೇಳಿಸದಷ್ಟು ಹಗೂರಾಗಿ ಬಸವಣ್ಣನ ಮನೆ ಹೊಕ್ಕರು. ನಡುಮನೆಯ ಜಗಲಿ ಕಟ್ಟೆಯ ಮೇಲೆ ಸಣ್ಣದೊಂದು ದೀಪ ಹಚ್ಚಿಟ್ಟಿದ್ದರು. ಆ ಬೆಳಕಿನ ಪಕ್ಕದಲ್ಲಿ ಒಬ್ಬ ತೇಜೋಮೂರ್ತಿ ಆಗ ತಾನೇ ಓಲೆಗರಿಗಳ ಮೇಲೆ ಏನನ್ನೋ ಬರೆದು ಮಲಗಿದಂತಿತ್ತು.
ನಾಲ್ವರೂ ಮನೆಯ ಮೂಲೆಮೂಲೆಗಳ ಹುಡುಕಿ ಶೋಧಿಸಲು ಏನೆಂದರೆ ಏನೂ ಇಲ್ಲದ ಆ ಮನೆಯಲ್ಲಿ ಒಂದು ಹಿಡಿಯಷ್ಟೂ ದಾಸ್ತಾನಿಲ್ಲದ್ದನ್ನು ಕಂಡು ರೋಸಿ ಹೋಗಿದ್ದರು. ಮಲಗುವ ಕೋಣೆಯಲ್ಲಿ ಸಣ್ಣದೊಂದು ಪೆಟಾರಿ ಕಂಡದ್ದೆ ನಾಲ್ಕೂ ಜನ ನಾ ಮುಂದು ತಾ ಮುಂದು ಎಂದು ಅತ್ತ ಕಡೆಗೆ ಓಡಿದರು. ಅಷ್ಟೊತ್ತಿಗೆ ಸರಿಯಾಗಿ ಬಸವಣ್ಣನಿಗೆ ಎಚ್ಚರವಾಗಿ ಬೆಳಕನ್ನು ದೊಡ್ಡದು ಮಾಡಿದರು. ತಾವು ಸಿಕ್ಕುಬಿಟ್ಟೆವು ಎಂಬ ಆತಂಕದಲ್ಲಿ ಕಳ್ಳರು ಬಸವಣ್ಣನ ಮೇಲೇರಿ ಹೋದಾಗ ಗಂಗಾಂಬಿಕೆ ನೀಲಾಂಬಿಕೆಯರಿಗೂ ಎಚ್ಚರವಾಗಿ ಮನೆತುಂಬ ಬೆಳಕಿನ ಪಂಜುಗಳು ಹೊತ್ತಿಕೊಂಡವು.
‘ಏನು ಬಂದಿರಿ ಶರಣರೇ.. ಏನು ಬೇಕಾಗಿದೆ ನಿಮಗೆ?’
‘ನಾವು ಕಳ್ಳರು, ನಿಮ್ಮ ಮನೆ ದೋಚಲು ಬಂದವರು.’
‘ಆಯಾಸವಾಯ್ತೆ..? ಶರಣರೇ ಕುಡಿಯಲು ನೀರು ಬೇಕೇನು? ಕುಳಿತಿರಿ ನೀರು ತರುವೆನು.’
‘ಸ್ವಾಮಿ ನಾವು ಕಳ್ಳರು..!’
‘ಕಳ್ಳರಾದರೇನು ಮನುಷ್ಯರಲ್ಲವೇ.. ಹೃದಯದೊಳಗೆ ಕೂಡಲಸಂಗಮದೇವ ನೆಲೆಗೊಂಡ ಮೇಲೆ ನೀವು ಆರಾದರೇನು ನಮ್ಮ ಮನೆಗೆ ಬಂದ ಅತಿಥಿಗಳು.’
ಕಳ್ಳರು ನಿಧಾನ ಮುಖ ಮೇಲೆತ್ತಿ ಆ ಪ್ರಶಾಂತ ಮೂರ್ತಿಯ ಮುಖ ಕಂಡವರೇ ಕುಸಿದು ಕುಳಿತರು. ಬಸವಣ್ಣ ಅವರ ಮೈದಡವಿ ಮೇಲಕ್ಕೆತ್ತಿ, ನೀಲಾಂಬಿಕೆ ಗಂಗಾಂಬಿಕೆಯರನ್ನು ಕರೆದು ಇವರು ಕನ್ನ ಹಾಕಲು ಬಂದಿದ್ದಾರೆ. ಬಂದವರು ನಿರಾಶರಾಗಿ ಹೋಗಬಾರದು. ಹಾಗಾಗಿ ನಿಮ್ಮ ಮೈಮೇಲಿನ ಒಡವೆಗಳನ್ನು ಕೊಟ್ಟು ಕಳುಹಿಸಿರಿ ಎಂದಾಗ ಕಳ್ಳರ ಮೈ ಅದುರಿತು. ಹೊತ್ತು ಬಂದಾಗ ಎದುರಿದ್ದವರನ್ನು ಕೊಂದಾದರೂ ಸರಿ ಕಳ್ಳತನ ಪೂರೈಸುವ ಅವರ ಕೈಗಳು ಇಂದು ಮೇಲಕ್ಕೇರದಷ್ಟು ಸೋತಿದ್ದವು.
‘ಶರಣರೇ ನೀವು ಹಸಿದಿದ್ದೀರಿ, ಮೊದಲು ಊಟ ಮಾಡಿರಿ ನಂತರದಲ್ಲಿ ನಿಮಗೆ ಕೊಡುವ ನಗನಾಣ್ಯಗಳೆಲ್ಲ ಕೊಟ್ಟು ಕಳಿಸುವೆ’ಎಂದು ಬಸವಣ್ಣವರು ನುಡಿದಾಗ ಆ ನುಡಿಯೊಳಗಿನ ವಿನಯಕ್ಕೆ, ಆ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿ ತಲೆಬಾಗಿದರು.
**** **** ****
ಹೋದವರು ಎಷ್ಟು ಹೊತ್ತಾದರೂ ಮರಳಿ ಬಾರದೇ ಇದ್ದಾಗ ಚೋರಚಿಕ್ಕನಿಗೆ ಆತಂಕವಾಯ್ತು. ಹಾಕಿಕೊಟ್ಟ ಹಂಚಿಕೆ ಹುಸಿ ಹೋದುದಲ್ಲದೇ ಇವರು ಮತ್ತೆ ಸೆರೆ ಸಿಕ್ಕರೇನೋ ಎಂದು ಶಪಿಸಿಕೊಳ್ಳುತ್ತಾ ಹತ್ತಾರು ಬಾರಿ ಶಿಳ್ಳೆ ಹಾಕಿ ಸೂಚನೆ ಕೊಟ್ಟ. ಊಹೂಂ.. ಬಸವಣ್ಣನವರ ಮನೆಯಲ್ಲಿ ಬೆಳಕಿನ ಪಂಜುಗಳು ಉರಿದವು. ಮಹಾಮನೆಯಲ್ಲೂ ಬೆಳಕು ಹೊತ್ತಿದಾಗ ಸಹಚರರು ಖಂಡಿತ ಕಾವಲುಗಾರರ ಕೈಗೆ ಸಿಕ್ಕಿದ್ದಾರೆ ಎಂದುಕೊಂಡ.
ಮರುದಿನ ಕಲ್ಯಾಣಪಟ್ಟಣದಲ್ಲಿ ರಾತ್ರಿ ಸಿಕ್ಕ ಕಳ್ಳರ ಬಗ್ಗೆ ಏನಾದರೂ ಮಾತುಕತೆ ಆಗುವುದೋ ಎಂದು ಮಾರುವೇಷದಲ್ಲಿ ತಿರುಗಿ ವಿಷಯ ಕೇಳಿಸಿಕೊಂಡ. ಕನ್ನ ಹಾಕಲು ಬಂದ ಕಳ್ಳರು ಬಸವಣ್ಣನ ಪವಾಡದ ಕಾರಣದಿಂದ ಶರಣರಾಗಿ ಬದಲಾದರು ಎಂಬ ಸುದ್ದಿ ಅಲ್ಲಿ ಇಲ್ಲಿ ಶರಣರ ಮನೆಗಳ ಸುತ್ತ ಹರಿದಾಡುತ್ತಿತ್ತು. ಆ ದಿವಸ ತನ್ನ ಸಹಚರರ ಪತ್ತೆಗಾಗಿ ಊರೆಲ್ಲ ತಡಕಾಡಿ ಏನೊಂದು ಸುಳುಹು ಸಿಕ್ಕದೆ ಗುಡ್ಡದ ಮೇಲಿನ ಗುಪ್ತ ಸ್ಥಳಕ್ಕೆ ವಾಪಾಸದ ಚೋರಚಿಕ್ಕ.
ಕಳ್ಳರು ಶರಣರಾದರೇನೋ ಸರಿ ಆದರೆ ಅವರು ಎಲ್ಲಿ ಹೋದರು ಏನಾದರು ಎಂಬ ಬಗ್ಗೆ ಚೋರಚಿಕ್ಕನಿಗೆ ಅನುಮಾನ ಶುರುವಾಯ್ತು. ಈ ಬಸವಣ್ಣ ಅವರಿಗೆ ಎಂಥಾ ಮಂಕುಬೂದಿ ಎರಚಿದನೋ ಏನೋ.. ಹೇಗಾದರೂ ಮಾಡಿ ತನ್ನ ಸಹಚರರನ್ನು ಅವನ ಸುಪರ್ದಿಯಿಂದ ಬಿಡಿಸಿಕೊಳ್ಳಬೇಕು ಎಂದುಕೊಂಡ. ರಾತ್ರಿ ಬಸವಣ್ಣನ ಮನೆಗೆ ನುಗ್ಗಿದರೆ ಮಂಕುಬೂದಿ ಎರಚುತ್ತಾನೆ. ಅವನು ಪವಾಡಪುರುಷನೇ ಹೌದಾದರೆ ಹಗಲು ಹೊತ್ತಲ್ಲೇ ಅವನನ್ನು ಸಾಯಿಸಿ ಸಹಚರರ ಜೊತೆ ಪರಾರಿಯಾಗುವೆ.. ಎಷ್ಟೊಂದು ಊರುಗಳ ನೀರು ಕುಡಿದ ನನಗೆ ಈ ಬಸವಣ್ಣ ಎಷ್ಟರವನು. ಗುಡ್ಡದ ಮೇಲಿನ ಕಲ್ಲಬಂಡೆಯ ಮೇಲೆ ಮೈಚಲ್ಲಿ ಮಲಗಿದವನ ಕಣ್ಣಿಗೆ ಅದೇ ಆಕಾಶಮಂಡಲದ ಹೊಳೆಯುವ ತಾರೆಗಳು ಶುಭ್ರವಾಗಿ ಕಾಣಿಸಿದವು.
ಆ ನಕ್ಷತ್ರಗಳು ಮಸಕುಮಸುಕಾಗಿ ಕತ್ತಲಾವರಿಸಿತು ಇಡೀ ಭೂಮಂಡಲದ ಬೆಳಕನ್ನು ನುಂಗಿಕೊಂಡ ಕತ್ತಲು ಅದು. ಅಲ್ಲೆಲ್ಲೋ ಅಪರಿಚಿತ ಜಾಗದಲ್ಲಿ ನಡೆಯುತ್ತಾ ಕಲ್ಲುಮುಳ್ಳುಗಳ ದಾರಿ ತುಳಿಯುತ್ತಾ ಹೊರಟವನಿಗೆ ಮುಚ್ಚಲ್ಪಟ್ಟ ಗುಹೆಯೊಂದು ಕಾಣಿಸಿತು, ಅದೇ ಆ ಗುಹೆಯ ಬಾಗಿಲಿಗೆ ಅಡ್ಡಲಾಗಿ ಕಲ್ಲುಬಂಡೆಯೊಂದನ್ನು ಇಟ್ಟಿದ್ದರು. ಆ ಕಲ್ಲಿನ ಸಂದುಗೊಂದಿನಲ್ಲಿ ಗುಹೆಯೊಳಗಿಂದ ಬೆಳಕಿನ ಪ್ರಖರತೆ ತೂರಿಕೊಂಡು ಹೊರಗೆ ಹಣಿಕಿಕ್ಕುತ್ತಿತ್ತು. ಅದೆಂಥಾ ಬೆಳಗು, ಬರೀ ವಜ್ರ, ಮುತ್ತು, ಮಾಣಿಕ್ಯ ಹವಳದ ಹೊಳಪಿನ ಹಾಗೆ ಮಿರಿಮಿರಿ ಹೊಳೆಯುವ ಆ ಬೆಳಕನ್ನು ಮುಟ್ಟಬೇಕೆಂಬ ಹಂಬಲ… ಆದರೆ ಅಲ್ಲಿ ಒಬ್ಬಿಬ್ಬರು ದಢೂತಿಗಳು ಆ ಬೆಳಕು ಹೊರ ಬಾರದಂತೆ ತಡೆಗೋಡೆಯಾಗಿ ಕಲ್ಲನ್ನು ಮುಚ್ಚುತ್ತಲಿದ್ದರು. ಆ ಅನಘ್ರ್ಯ ರತ್ನದ ಬೆಳಕು ಲೋಕಕ್ಕೆಲ್ಲ ಕಂಡರೆ ತಮಗೆ ನಷ್ಟವಾಗುವುದೆಂಬ ಭಯ ಅವರ ಮುಖದಲ್ಲಿತ್ತು. ಇವನಿಗೋ ಕೊಳ್ಳೆ ಹೊಡೆದರೆ ಅಂಥದೇ ಅನಘ್ರ್ಯವನ್ನ ಕದಿಯಬೇಕೆಂಬ ಛಲ. ಮೆಲ್ಲಮೆಲ್ಲನೇ ಆ ಬೆಳಕು ನುಸುಳುವ ಗುಹೆಯ ಬಾಗಿಲ ಹತ್ತಿರ ಹೋದ.. ಮಿಂಚಿನಷ್ಟೇ ವೇಗದಲ್ಲಿ ಆ ಗುಹೆಯ ಮೇಲೇರಿ ಬೆಳಕಿಂಡಿಯ ಮೂಲಕ ಮಂಗನ ಹಾಗೆ ಜಿಗಿದು ಬಿಟ್ಟ. ಆಹಾ ಇನ್ನೇನೂ ಆಳಾಳ ಪಾತಾಳಕ್ಕೆ ಬಿದ್ದೇಬಿಟ್ಟ ಎನ್ನುವಾಗ ಒಬ್ಬ ಮಹಾನುಭಾವ ಹೂವು ಎತ್ತಿದಂತೆ ಇವನನ್ನು ಅಂಗೈಯಲ್ಲಿ ಮಗುವಾಗಿಸಿ ಎತ್ತಿಕೊಂಡ. ಆ ಮಹಾನುಭಾವನ ಮೈಯಿಂದಲೇ ಆ ಬೆಳಕಿನ ಪ್ರಖರತೆ ಹೊರಡುತ್ತಿತ್ತು. ಅವನು ನಕ್ಕ.. ಮೆಲುನಗೆ ಜೋರಾಯ್ತು ಮತ್ತಷ್ಟು ಇನ್ನಷ್ಟು..
ಚೋರಚಿಕ್ಕನಿಗೆ ಎಚ್ಚರವಾದಾಗ ಈ ಸಲ ಕಿರುಚಿಕೊಳ್ಳಲಿಲ್ಲ. ಕನಸು ಕೊನೆಯಾಗಿತ್ತು. ಇಡೀ ಮನಸ್ಸೆ ಸನ್ನೆಗೋಲಿಗೆ ಸಿಕ್ಕಂತೆ ಚಡಪಡಿಸುತ್ತಿತ್ತು. ಅವನು ಯಾರಿರಬಹುದು..? ಯಾಕಾಗಿ ನನ್ನ ಕೈ ಹಿಡಿದು ಮೇಲೆತ್ತಿರಬಹುದು. ಈ ಕನಸಿಗೆ ಏನರ್ಥವಿದ್ದೀತು..? ಎಷ್ಟೋ ದಿವಸಗಳಿಂದ ಅರಕಳಿಯಾಗುತ್ತಿದ್ದ ಕನಸು ಪೂರ್ಣವಾಯ್ತೆ..? ಅಥವಾ ಇದು ಕೂಡಾ ಅಪೂರ್ಣವೋ.. ಎಂಬ ಚಿಂತೆ ಕಾಡತೊಡಗಿತು.
ಮರುದಿನ ಕಲ್ಯಾಣದಲ್ಲಿ ಓಡಾಡಿ ಬಸವಣ್ಣನ ಬಗ್ಗೆ ತಿಳಿದುಕೊಂಡ, ಅವರು ಎಷ್ಟು ಹೊತ್ತಿಗೆ ಎಲ್ಲಿ ಹೋಗುತ್ತಾರೆ, ಮಹಾಮನೆಗೆ ಎಷ್ಟೊತ್ತಿಗೆ ಬರುತ್ತಾರೆ, ಅವರ ನಡೆ-ನುಡಿಗಳೇನು, ಆಚಾರ-ವಿಚಾರಗಳೇನು ಎಂಬುದನ್ನೆಲ್ಲ ತಿಳಿದುಕೊಂಡ. ಮಧ್ಯಾಹ್ನದ ಊಟಕ್ಕೆ ಮಹಾಮನೆಗೆ ಬರುತ್ತಾರೆ ಅಲ್ಲಿಯೇ ಅವರನ್ನು ಕೊಂದು ಪೂರೈಸಿ ಮಹಾಮನೆಯಲ್ಲಿ ಬಂಧಿ ಆಗಿರಬಹುದಾದ ತನ್ನ ಗೆಳೆಯರನ್ನು ಕರೆದುಕೊಂಡು ಪರಾರಿ ಆದರಾಯ್ತೆಂದು, ಥೇಟ್ ಶರಣರ ಹಾಗೆಯೇ ವೇಷ ಬದಲಾಯಿಸಿದ. ಮಹಾಮನೆ ಊಟದ ಪಂಕ್ತಿಯಲ್ಲಿ ಕೂಡಬೇಕಾದರೆ ಕೊರಳಿಗೊಂದು ಲಿಂಗ ಬೇಕಲ್ಲ ಎಂದುಕೊಂಡ. ಅಲ್ಲೆ ಕಾಯಿಬಿಟ್ಟಿದ್ದ ಬದನೆಯ ತುಂಬನ್ನು ಕಿತ್ತು ಲಿಂಗದ ಹಾಗೆ ಕಟ್ಟಿಕೊಂಡ. ಶರಣರೆಲ್ಲ ಬಾಗಿ ವಂದಿಸುವ ಶರಣು ಶರಣಾರ್ಥಿ ಶಬ್ದಗಳನ್ನು ಆನೂಚಾನಾಗಿ ನಕಲು ಮಾಡಿ ಒಂದಿಬ್ಬರು ದಾರಿಹೋಕರಿಗೂ ಶರಣು ಮಾಡಿದ.
ಮಹಾಮನೆಯಲ್ಲೇ ಬಸವಣ್ಣನವರು ಎದುರು ಬರುತ್ತಾರೆ. ಸರಿಯಾದ ಸಂದರ್ಭದಲ್ಲಿ ಸರಿಯಾಗಿ ಕಿರುಗತ್ತಿಯನ್ನು ಅವರ ಕುತ್ತಿಗೆಯ ಮೇಲೆ ಆಡಿಸಬೇಕೆಂದು ಸೊಂಟದಲ್ಲಿನ ಕಿರುಗತ್ತಿ ಭದ್ರವಾಗಿದೆಯೇ ಎಂದು ಮತ್ತೆಮತ್ತೆ ಮುಟ್ಟಿ ನೋಡಿಕೊಂಡ. ಮಹಾಮನೆಯ ಒಳಗೆ ಬಂದದ್ದೆ ಪದ್ಧತಿ ಪ್ರಕಾರ ಊಟದ ಪಂಕ್ತಿಯಲ್ಲಿ ಕುಳಿತ. ಅಕ್ಕಪಕ್ಕ ಕುಳಿತವರೆಲ್ಲ ಕೊರಳೊಳಗಿನ ಲಿಂಗ ಬಿಚ್ಚಿ ಪೂಜಿಸಿಕೊಳ್ಳಲು ಅಣಿಯಾದಾಗ ಇವನಿಗೆ ಏನು ಮಾಡಬೇಕೋ ತೋಚಲಿಲ್ಲ. ಒಂದಿಬ್ಬರು ಶರಣರು ‘ನೀವು ಲಿಂಗಪೂಜೆ ಮಾಡಕೊಳ್ಳಿ ದಾಸೋಹಕ್ಕೆ ಹೊತ್ತಾಗತದೆ’ಎಂದು ಹೇಳಿದಾಗ ಪೆಚ್ಚುಮೋರೆ ಹಾಕಿ ಪೆದ್ದು ನಗೆನಕ್ಕ. ಪಂಕ್ತಿಗೆ ಕುಳಿತವರಿಗೆ ಅನುಮಾನ ಬಂದು ಗಲಾಟೆ ಮಾಡತೊಡಗಿದಾಗ ಬಸವಣ್ಣ ಸಮೇತರಾಗಿ ಉಳಿದೆಲ್ಲ ಹಿರಿಕಿರಿಯ ಶರಣರು ಸುತ್ತಲೂ ನೆರೆದರು. ಯಾರೋ ಒಬ್ಬ ಶರಣರು ಮುಂದಾಗಿ ಚೋರಚಿಕ್ಕನ ಕೊರಳೊಳಗಿನ ಲಿಂಗದ ಬಟ್ಟೆ ಸಡಿಲಿಸಿ ನೋಡಿಯೇ ಬಿಟ್ಟರು. ಅದರೊಳಗೆ ಲಿಂಗದ ಬದಲಿಗೆ ಬದನೇ ಕಾಯಿ ಇರುವುದರಿಂದ ಶರಣರೊಳಗೆ ಹುಯಿಲೆದ್ದಿತು.
ಅಲ್ಲಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಹವಣಿಸುತ್ತಿದ್ದ ಚೋರಚಿಕ್ಕನ ಎದುರು ಬಸವಣ್ಣ ನಿಂತಿದ್ದರು. ‘ಆಹಾ.. ಎಂಥ ಘನಮಹಿಮರು ನೀವು, ನಾವು ಸಾಕ್ಷಾತ್ ಲಿಂಗವನ್ನೇ ಕಟ್ಟಿಕೊಂಡು, ಆ ಲಿಂಗವನ್ನೇ ಕೈಯಲ್ಲಿಟ್ಟುಕೊಂಡು ಧ್ಯಾನಿಸಿದರೂ ಎಲ್ಲೋ ಒಂದು ಮೂಲೆಯಲ್ಲಿ ಅದು ಕಲ್ಲು ಎಂಬ ಅಳಕು ಕಾಡುತ್ತದೆ. ನೀವು ಕಟ್ಟಿಕೊಂಡ ಬದನೆಕಾಯಿಯಲ್ಲೇ ಆ ಸಾಕ್ಷಾತ್ ಕೂಡಲಸಂಗಮನನ್ನ ಕಾಣುತ್ತೀರಲ್ಲ. ನಿಮ್ಮ ನಿಷ್ಕಲ್ಮಶ ಅಂತಃಸಾಕ್ಷಿಗೆ ಶರಣೆಂದು ಶುದ್ಧನಾದೆನು’ ಎಂದು ಬಾಗಿ ವಂದಿಸಿ ಕೊಂಡಾಡ ತೊಡಗಿದರು.
ಕೊಲ್ಲಲು ಬಂದಿದ್ದ ಚೋರಚಿಕ್ಕನ ಚಿತ್ತವೇ ಹಾರಿಹೋದಂತಾಗಿ, ಅವನೊಳಗಿನ ಕಳ್ಳನನ್ನು ಬಸವಣ್ಣನವರು ಸದುವಿನಯದಿಂದಲೇ ಹೊರಗೆ ಹಾಕಿಬಿಟ್ಟರು. ಆ ಕ್ಷಣದಲ್ಲಿಯೇ ಚಿಕ್ಕಣ್ಣನಿಗೆ ತನ್ನ ತಪ್ಪಿನ ಅರಿವಾಗಿ, ತನ್ನ ಪೂರ್ವದ ಕತೆಯನ್ನೆಲ್ಲ ಅಳುತ್ತ ಬಸವಣ್ಣನವರಲ್ಲಿ ನಿವೇದಿಸಿಕೊಂಡ.
ಕಳ್ಳನಲ್ಲೂ ದೇವರನ್ನು ಕಂಡ ಬಸವಣ್ಣನವರ ಆ ನಡೆ ಚೋರಚಿಕ್ಕನ ಪಾಲಿಗೆ ಪವಾಡದಂತೆ ನಡೆದು ಹೋಯ್ತು. ಈ ಶರಣಸಂದೋಹದಲ್ಲಿ ತಾನೂ ಒಬ್ಬ ಶರಣನಾಗಿ ಬಾಳಬೇಕೆಂದು ನಿಶ್ಚಯಿಸಿದ. ಚೋರಚಿಕ್ಕ ಅಂದಿನಿಂದ ಶರಣ ಚಿಕ್ಕಯ್ಯನಾಗಿ ಬದಲಾಗಿ ಕಲ್ಯಾಣದಲ್ಲಿಯೇ ಕಾಯಕ ಮಾಡುತ್ತ ಬಂದ ಫಲದಿಂದ ದ್ರವ್ಯವನ್ನು ಕೊಂಡು ಜಂಗಮ ದಾಸೋಹ ಮಾಡುತ್ತಾ ಇದ್ದನು… ಅವನೊಡನೆ ಬಂದ ಕಳ್ಳರೂ ಅಲ್ಲೇ ಮಹಾಮನೆಯಲ್ಲಿ ಇದ್ದುಕೊಂಡು ಶರಣರ ಆರೈಕೆ ಮಾಡುತ್ತಿದ್ದರು.
ಅದೊಂದು ದಿನ ಮಧ್ಯಾಹ್ನ ಜಂಗಮದಾಸೋಹ ಕೈಗೊಂಡು, ಹಾಗೆ ಗಿಡದ ನೆರಳಲ್ಲಿ ಕಣ್ಣುಮುಚ್ಚಿದ್ದನಷ್ಟೆ… ಅರಕಳಿಯಾದಂತೆ ಆಗಾಗ ಕಾಣುವ ಕನಸು ಮತ್ತೆ ಮರುಕಳಿಸಿತು. ಆ ಪ್ರಖರ ಬೆಳಕು ಸೂಸುವ ವ್ಯಕ್ತಿಯ ಗುರುತು ಸಿಕ್ಕಿತು. ಅದೋ ಅವನು ಸಾಕ್ಷಾತ್ ಬಸವಣ್ಣನ ಹಾಗೆ ಕಾಣಿಸಿದಾಗ ಧಡಗ್ಗನೇ ಎಚ್ಚರವಾಗಿ ಕುಳಿತ. ತಾನು ಘನವಾದ ಬೆಳಕನ್ನೇ ಕದ್ದುಬಿಟ್ಟಿದ್ದೇನೆ ಎಂಬ ಭಾವ ಬಂದಿತು. ಅದು ಬರೀ ಬೆಳಕಲ್ಲ ಅರಿವಿನ ಬೆಳಕು… ಅದು ಬಸವಣ್ಣ ತೋರಿದ ಅರಿವಿನ ಮಾರ್ಗ ಎಂಬುದು ಹೊಳೆದದ್ದೆ ಚಿಕ್ಕಯ್ಯನ ಮನಸ್ಸು ಮಗುವಿನಂತಾಯ್ತು, ಎಂಬಲ್ಲಿಗೆ ಶರಣ ಚಿಕ್ಕಯ್ಯನ ವೃತ್ತಾಂತವು ಮುಗಿದುದು.
Comments 18
Mariswamy Gowdar
Jan 8, 2019ಚಿಕ್ಕಯ್ಯನ ಕಥೆ ತುಂಬಾ ಚೆನ್ನಾಗಿ ಬರೆದಿರುವಿರಿ. ಕಣ್ಣಿಗೆ ಕಟ್ಟುವಂತಿದೆ. ಇಂಥ ಹೊಸ ಬಗೆಯ ಕಥೆಗಳು ಬರಲಿ ನಮ್ಮ ಬಯಲಿನಲ್ಲಿ.
mahadev hadapad
Jan 12, 2019Sharanarthi
ಡಾ. ಪಂಚಾಕ್ಷರಿ ಹಳೇಬೀಡು
Jan 9, 2019ಕಳ್ಳ ಶರಣನಾದ ಕಥೆ ಸುಂದರವಾಗಿ ಮೂಡಿಬಂದಿದೆ.
sharada A.M
Jan 9, 2019ಬಯಲು ಬ್ಲಾಗಿನ ಎಲ್ಲಾ ಲೇಖನಗಳೂ ಪ್ರಬುದ್ಧವಾಗಿವೆ, ಅರ್ಥಗರ್ಭಿತವಾಗಿವೆ. ಚೋರಚಿಕ್ಕನ ಕಥೆ ಪೂರ್ತಿ ಓದುವ ತನಕ ಹಿಡಿದಿಡುತ್ತದೆ. ಘಟನೆಗಳು, ಚಿತ್ರಗಳು ಪೂರಕವಾಗಿವೆ.
Karibasappa hanchinamani
Jan 9, 2019ಇದು ಬರಿ ಕತೆಯಲ್ಲ, ಪುರಾಣವಲ್ಲ, ಕಟ್ಟು ಕಾವ್ಯವಲ್ಲ. ಇತಿಹಾಸದ ಕತೆ ಇಲ್ಲಿ ಅಡಗಿಕೂತಿದೆ. ಓದಲಿಕ್ಕೆ ಗಮ್ಮತ್ತಾಗಿದೆ. ಕಲ್ಯಾಣದ ಹಾದಿ ತುಳಿವ ಜನ ಕಲ್ಯಾನವೇ ಆಗುತ್ತಾರೆ ಎಂದು ಮಹದೇವ ಹಡಪದ ಶರಣರು ತುಂಬಾ ಚೆನ್ನಾಗಿ ಬರೆದಿದ್ದಾರೆ.
Vinay Kanchikere
Jan 10, 2019ಕಥೆ ಹೇಳುವ ನಿಮ್ಮ ಶೈಲಿ ಬಹಳ ಚೆನ್ನಾಗಿದೆ, ಚೋರ ಚಿಕ್ಕನ ಜೊತೆಗೆ ನಮ್ಮ ಪ್ರಯಾಣವೂ ಹರಿಯುವಂತೆ ಭಾಸವಾಯಿತು. ಅವನಂತೆ ನಾವೂ ಕೂಡ ಶರಣರಾದಂತೆ ಅನಿಸಿತು. ನಿಮ್ಮಿಂದ ಇಂಥ ಕಥೆಗಳನ್ನು ಇನ್ನೂ ನಿರೀಕ್ಷಿಬಹುದೇ?
Gangadhara A Swamy
Jan 10, 2019ಕಳ್ಳ ಶರಣನಾದ ಕತೆ ಮಕ್ಕಳನ್ನು ಕೂಡಿಸಿಕೊಂಡು ಓದಿ ಹೇಳಿದೆ, ಅವರೂ ಖುಷಿಯಾದರು. ಪುರಾತನ ಕಾಲವನ್ನು ಕಣ್ಮುಂದೆ ಬರುವಂತೆ ಬರೆದದ್ದರಿಂದ ಕುತೂಹಲ ಹುಟ್ಟಿಸುತ್ತಿತ್ತು. ನಮ್ಮೆಲ್ಲರಿಂದ ನಿಮಗೆ ಧನ್ಯವಾದಗಳು. ನಾಟಕ ನೋಡಿದಂತೆ ಬರೆಯುವುದು ದೊಡ್ಡ ಕಲೆ ನನ್ನ ಪ್ರಕಾರ.
Gayathri.N.C
Jan 11, 2019ಬಹಳ ಚೆನ್ನಾಗಿದೆ ಚಿಕ್ಕಣ್ಣ ಕಳ್ಳನ ಕತೆ. ಕಲ್ಪನೆಯಲ್ಲಿ ನಾನಂತೂ ಮುಳುಗಿ ಹೋದೆ. ಬಯಲು ಬ್ಲಾಗಿನ ಎಲ್ಲ ಲೇಖನಗಳು ಸೂಪರ್.
ಮಹಾದೇವಬಹಡಪದ
Jan 11, 2019ಎಲ್ಲ ಶರಣರಿಗೂ ನಾನು ಆಭಾರಿ.
pro shivaranjini
Jan 12, 2019ಚೋರಚಿಕ್ಕನ ಕಥೆಯೂ, ಚಿತ್ರಗಳೂ ನಮ್ಮನ್ನು 12ನೇ ಶತಮಾನಕ್ಕೆ ಒಯ್ದವು. ಕಳ್ಳ ಚಿಕ್ಕನ ಕನಸು symbolic ಆಗಿತ್ತು. ಹೀಗೆ ಕಥಾ ರೂಪದಲ್ಲಿ ಶರಣರ ಬಗ್ಗೆ ತಿಳಿಸಿಕೊಡುವ ನಮ್ಮ ಪ್ರೀತಿಯ ಬಯಲು ಬ್ಲಾಗಿಗೆ ಶರಣು, ಲೇಖಕರಿಗೂ ಶರಣು ಶರಣಾರ್ಥಿ.
suma Vinayak
Jan 13, 2019ಗುಪ್ತಹಾದಿಗಳಲ್ಲಿ ಓಡಾಡುವ ಚೋರಚಿಕ್ಕ ಕಲ್ಯಾಣದ ಶರಣನಾದದ್ದು ಸುಂದರ ಕತೆ, ನಿಮ್ಮ ಬರವಣಿಗೆ ಕತೆಯನ್ನು ಸಿನೆಮಾದಂತೆ ಓದಿಸಿಕೊಳ್ಳುತ್ತದೆ. ರಂಗನಿರ್ದೇಶಕರಿಗೆ ಶರಣು ಶರಣಾರ್ಥಿ.
Chandarashekhar Kavali
Jan 16, 2019ಚಿಕ್ಕಯ್ಯನ ಕಥೆಗೆ ಸುಂದರ ನಾಟಕೀಯ ಚೌಕಟ್ಟು ಕಟ್ಟಿದ ಲೇಖಕರ ಕಥಾ ಶೈಲಿ ಅದ್ಭುತವಾಗಿದೆ. ಮನೆ ಮಂದಿಯೆಲ್ಲ ಓದಿ ಖುಷಿಪಟ್ಟೆವು. ಬಯಲು ಬಳಗಕ್ಕೆ ಹೊಸ ಲೇಖಕರ ಸೇರ್ಪಡೆ ಸಂತೋಷದ ಸಮಾಚಾರ.
Kalavathi Bevuru
Jan 16, 2019ಕೊನೆಯಲ್ಲಿ ಘನವಾದ ಬೆಳಕನ್ನೇ ಕದ್ದ ಚೋರ ಚಿಕ್ಕನ ಕತೆ ಚೆನ್ನಾಗಿತ್ತು. ಯಾರೂ ಕದಿಯಲಾಗದ್ದನ್ನೇ ಕದ್ದ ಚಾಣಾಕ್ಷ ಚೋರನಿಗೆ ಶರಣು.
ಶಿವರಾಜು ಲಿಂಗಪ್ಪ
Jan 18, 2019ಚಿಕ್ಕಯ್ಯನ ಕಥೆ ನನಗೆ ಗೊತ್ತೇ ಇರಲಿಲ್ಲ. ಓದಿ ಖುಷಿ ಆಯಿತು.
ಸುಜಾತಾ ಕುಣಿಗಲ್
Jan 20, 2019ಕಥೆ ಆಪ್ತವೆನಿಸಿತು. ಕಥೆಗಾರರಿಗೆ ಶರಣು.
Manju s.p
Feb 12, 2019ಅಣ್ಣಾ ನಿನ್ನ ಬರಹ ಬಹಳ ಇಷ್ಟವಾಯ್ತು. ಚೋರ ಶರಣನಾದ ರೀತಿ ಚನ್ನಾಗಿದೆ.
G.B.Patil
Feb 12, 2019Do ” BAYALU” need this kind of articles?
ಮಂಜುನಾಥ ಬಗಲಿ
Feb 12, 2019ಬದನೆಕಾಯಿಯಲ್ಲಿ ದೇವರು . ಕತೆ ಚೆನ್ನಾಗಿದೆ ಸರ್