
ಗುರುವೆ ಸುಜ್ಞಾನವೇ…
ಇದೆ ಎಂದೊಲಿದದ್ದು ಇಲ್ಲ
ಹಾಗೇನೂ ಅಲ್ಲ
ಎಂದು ಬಲವಾಗಿ ನಂಬಿದ್ದೂ
ಇಲ್ಲವೇ ಇಲ್ಲ…
ಹಂಬಲಿಸಿ ಹಿಡಿದಿದ್ದೆ
ಹಟ ತೊಟ್ಟು ಪಡೆದಿದ್ದೆ
ಹಬ್ಬಿಸಿಕೊಂಡಿದ್ದೇ
ಕುಸುರಿ ಭಾವಗಳ,
ಮನದ ಕವಾಟಗಳಲ್ಲಿ
ಮಧುರ ಮಾತುಗಳಲ್ಲಿ…
ಬಣ್ಣಗೆಟ್ಟವು
ದಿಕ್ಕು ಬದಲಿಸಿದವು
ನಾನೆಂಬ ದಿಬ್ಬವನು
ಒದ್ದು ಓಡಿದವು
ಕಾಲಸರಿದಂತೆಲ್ಲ
ಎಲ್ಲೋ ಮಾಯವಾದವು.
ಆದರೂ…
ಹಳಹಳಿಸಿದ ಮನ
ಮರೆವ ಕೊಡವಲಿಲ್ಲ
ಕಣ್ಣಲ್ಲಿ ಕಣ್ಣಿಟ್ಟು
ನಿಜವ ಹುಡುಕಲಿಲ್ಲ
ನಿಶೆ ಇಳಿದ ಮೇಲಾದರೂ
ಹಗಲಾಗ ಬೇಕಿತ್ತು…
ಪೊರೆಗಟ್ಟಿದ ಕಣ್ಣಲಿ
ಬೆಳಕಿನೆಳೆಗಳು
ತೂರುವುದು ಉಂಟೆ?
ಕಂಬಳಿ ಹೊದ್ದ ಎದೆಗೆ
ತಿಳಿಗಾಳಿಯಲೆ
ನುಸುಳ ಬಲ್ಲುದೆ?
ಉಸಿರಿಗೆ ತಡೆಯಾದ
ಹೊದಿಕೆಯ ಸರಿಸಲು
ಗಮನಕೆ ಅಡ್ಡಿಯಾದ
ಪೊರೆಯ ಕತ್ತರಿಸಲು
ನಿಂತ ಕಾಲುಗಳಿಗೆ
ನಡೆಯ ತೋರಿಸಲು
ಓ ಗುರುವೇ…
ನೀನೇ ಬರಬೇಕಾಯಿತು
ಕೈಹಿಡಿದು
ಭಾವ ಕಂದಕವನು
ದಾಟುವುದ ಕಲಿಸಲು.
Comments 3
Chandrika
Sep 11, 2021ಭಾವದ ಭವವನ್ನು ದಾಟಲು ಗುರುವಿನ ಕೈಹಿಡಿದು ನಡೆವ ಬಗೆ ಸುಂದರವಾಗಿ ಅಭಿವ್ಯಕ್ತವಾಗಿದೆ.
ಕೆ. ಎಸ್. ಮಲ್ಲೇಶ್
Oct 8, 2021ಸರಳ ಹಾಗೂ ನೇರ ಪದಗಳಲ್ಲಿ ಅನುಪಮ ರೂಪಕಗಳ ಮೂಲಕ ಗುರುವಿನ ಮಹತ್ವವನ್ನು ಮನಮುಟ್ಟುವಂತೆ ತಿಳಿಸುವ ಕವನ. ಐಹಿಕ ಬದುಕಿನ ತೋರಿಕೆಯ ಆವರಣದೊಳಗೆ ಸಿಲುಕಿದ ಜೀವಕ್ಕೆ ಕೊನೆಗೂ ಗುರು ನಿಲುಕಿದ್ದು -ಇದೇ ಭವಕ್ಕೆ ಅನುಭಾವದ ಸಿಂಚನ
SHARAN swami
Oct 14, 2021ಗುರು ಶಿಷ್ಯರ ಸಂಬಂಧದ ಮಹತ್ವ ಮಧುರ ರೀತಿಯಲ್ಲಿ ಭಾವಗಳ ಮೂಲಕ ವ್ಯಕ್ತಪಡಿಸಿದ್ಧಿರಿ. ಶರಣು ಶರಣಾರ್ಥಿ