ಕೊಂಡಗುಳಿ ಕೇಶಿರಾಜ ಮತ್ತು…
ಕಲ್ಯಾಣವನ್ನು ಆಳಿದವರಲ್ಲಿ ಆರನೆಯ ವಿಕ್ರಮಾದಿತ್ಯ ಅಥವಾ ಪೆರ್ಮಾಡಿಗೆ (1076-1126) ಕೊಂಡುಗುಳಿ ಕೇಶಿರಾಜ ಎಂಬ ಮಂತ್ರಿ, ಲಕ್ಷ್ಮೀದೇವಿ ಎಂಬ ಹೆಂಡತಿ, ತೆಲುಗು ಜೊಮ್ಮಯ್ಯ ಎಂಬ ಸೇವಕ ಇದ್ದರು. ಇದಕ್ಕೆ ಶಾಸನಗಳೂ, ಹರಿಹರ ಮತ್ತು ಭೀಮಕವಿಯ ಸಾಹಿತ್ಯವೂ ಸಾಕ್ಷಿಯಾಗಿವೆ.
ಕೊಂಡುಗುಳಿ ಕೇಶಿರಾಜ ಬಸವಪೂರ್ವದವನು ಎಂಬ ನಂಬಿಕೆ ಇದೆ. ಬಸವಾದಿ ಶರಣರು ತಮ್ಮ ವಿಚಾರಗಳನ್ನು ವಚನ ರೂಪದಲ್ಲಿ ಬರೆದಿಟ್ಟರೆ, ಕೇಶಿರಾಜ ಕೆಲವು ಅಂತಹವೆ ವಿಚಾರಗಳನ್ನು ಕಂದ ರೂಪದಲ್ಲಿ ಬರೆದಿಟ್ಟಿದ್ದಾನೆ. ಪ್ರತಿದಿನ ಎಂಟು ಪದ್ಯಗಳನ್ನು ಬರೆದು ಅವುಗಳನ್ನು ತನ್ನ ಆರಾಧ್ಯ ದೈವಕ್ಕೆ ಅರ್ಪಿಸುವುದು ಅವನ ವ್ರತವಾಗಿತ್ತು, ಎಂದು ಹರಿಹರ ತನ್ನ ‘ಕೇಶಿರಾಜನ ರಗಳೆ’ಯಲ್ಲಿ ತಿಳಿಸುತ್ತಾನೆ.
ಕೇಶಿರಾಜ 1. ‘ಮಂತ್ರಮಹತ್ವದ ಕಂದ’, 2. ‘ಲಿಂಗಸ್ತ್ರೋತ್ರದ ಕಂದ-1’, 3. ‘ಲಿಂಗಸ್ತೋತ್ರದ ಕಂದ-2’, 4. ‘ಶೀಲಮಹತ್ವದ ಕಂದ, 5. ‘ಕೇಶಿರಾಜ ಡಣಾಯಕರ ಕಂದ, 6. ‘ನವರತ್ನಮಾಲಾ’ ಮತ್ತು 7. ‘ಅಳಲಾಷ್ಟಕ’ ಎಂಬ ಕೃತಿಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಕೇಶಿರಾಜ ‘ಶೀಲಮಹತ್ವದ ಕಂದ’ದ ಕಂದ 1 ರಲ್ಲಿ ‘ವೀರಶೈವ’ ಪದವನ್ನೂ, ಕಂದ 33 ರಲ್ಲಿ ‘ಲಿಂಗಾಯತವಂತ’ಪದವನ್ನೂ ಬಳಸಿದ್ದಾನೆ. ಕಂದ 39 ರಲ್ಲಿ ಅವನು ಬಳಸಿರುವ ಪದ ‘ಲಿಂಗಯೇತ’ವೊ ‘ಲಿಂಗಾಯತ’ವೊ ಸ್ಪಷ್ಟವಾಗಿಲ್ಲ. ‘ವೀರಶೈವ’, ‘ಲಿಂಗಾಯತವಂತ’ ಪದಗಳನ್ನೂ ಅಲ್ಲದೆ ಆತ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ‘ಕರಸ್ಥಲ’, ‘ಗುರುಸೇವೆ’, ‘ಜಂಗಮದಾಸೋಹ’, ‘ಪ್ರಸಾದಸಿದ್ಧಿ’, ‘ಕಾಯಕನಿಷ್ಠೆ’ ಮುಂತಾದ ಪದಗಳನ್ನೂ ಬಳಸಿದ್ದಾನೆ. ಈ ಆಧಾರಗಳ ಮೇಲೆ ಕೆಲವು ವಿದ್ವಾಂಸರು 1. ಬಸವಪೂರ್ವದಲ್ಲಿಯೇ ಲಿಂಗಾಯತ ಧರ್ಮ ಇತ್ತು ಮತ್ತು 2. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಅಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಈ ತೀರ್ಮಾನ ವಿಶ್ವಾಸಾರ್ಹವೆ ಎಂಬುದು ಈ ಲೇಖನದ ಪ್ರಶ್ನೆ.
‘ಶೀಲಮಹತ್ವದ ಕಂದ’ದಲ್ಲಿ ಬಸವಣ್ಣ ಮತ್ತು ಅವರ ಸಮಕಾಲೀನ ವಚನಕಾರರು ಬಳಸಿದ ಕೆಲವು ಪದಗಳು ಸಿಕ್ಕುತ್ತವೆ ಎಂಬುದು ನಿರ್ವಿವಾದ. ಅವುಗಳಲ್ಲಿ ಮುಖ್ಯವಾದುವೆಂದರೆ: ಭಕ್ತಿಗಳು ಆರು ವಿಧ (ಅವುಗಳ ಹೆಸರು ಹೇಳಿಲ್ಲ) (ಕಂದ 7); ಮಹೇಶನಾದವನು ಪರಧನ, ಪರವಧು, ಪರದೈವಗಳನ್ನು ತೊರೆಯಬೇಕು (ಕಂ.3, 19); ಗುರು ಅಥವಾ ಜಂಗಮ ಭೂರುದ್ರ (ಕಂ. 9); ಲಿಂಗಪ್ರಸಾದವಲ್ಲದ ಆಹಾರ ಕಿಲ್ಬಿಷ (ಕಂ. 13); ಭವಿಪಾಕ ನೈವೇದ್ಯ ನರಕಕ್ಕೆ ದಾರಿ (ಕಂ. 14); ಗಂಡ-ಹೆಂಡತಿಗೆ ಸಮಶೀಲ ಇರಬೇಕು (ಕಂ. 23); ಸೂತಕಗಳನ್ನು ಪಾಲಿಸಬಾರದು (ಕಂ.24, 48); ಗರ್ಭಕ್ಕೆ ಲಿಂಗಧಾರಣೆ ಮಾಡಬೇಕು (ಕಂ.27); ಪಾದೋದಕವನ್ನು ಲಿಂಗಮಜ್ಜನಕ್ಕೆ ಬಳಸಬೇಕು (ಕಂ. 28); ಗುರುಲಿಂಗಜಂಗಮ ಹರನೆಂದು ತಿಳಿಯಬೇಕು (ಕಂ.44); ವಾರ, ತಿಥಿ, ಶಕುನ ನೋಡಬಾರದು (ಕಂ.56); ಶಿವಪಥಕ್ಕೆ ಸಲ್ಲದ ಶಿವರಾತ್ರಿ, ಸಂಕ್ರಾಂತಿ, ಉಪವಾಸ ಮಾಡಬಾರದು (ಕಂ.58); ತೀರ್ಥಯಾತ್ರೆ ಮಾಡಬಾರದು; ಕಾಮಿಸಿದುದು ಕಾಯಭೋಗ, ಕಾಮಿಸದುದು ಲಿಂಗಭೋಗ (ಕಂ.52); ಇತ್ಯಾದಿ.
ಇವೆಲ್ಲವನ್ನೂ ನೋಡಿದರೆ ಮೇಲ್ನೋಟಕ್ಕೇ ವೀರಶೈವ ಧರ್ಮ ಬಸವಪೂರ್ವದಲ್ಲೇ ಇತ್ತು, ಅದು ಬಸವಾದಿ ಶರಣರಿಂದ ಸ್ಥಾಪಿತವಾದುದೆಂದು ನಂಬಲಾಗಿರುವ ಲಿಂಗಾಯತ ಧರ್ಮಕ್ಕಿಂತ ಭಿನ್ನವಲ್ಲ ಎಂಬಂತೆ ಕಾಣುತ್ತದೆ.
ಆದರೆ ಡಾ. ಬಿ.ವಿ.ಮಲ್ಲಾಪೂರ ಇಡೀ ‘ಶೀಲಮಹತ್ವದ ಕಂದ’ವೇ ಪ್ರಕ್ಷಿಪ್ತ ಎನ್ನುತ್ತಾರೆ. ಅವರು ಕೊಡುವ ಕಾರಣಗಳು ಮೂರು:
1. ತಾಳೆಗರಿ ಪ್ರತಿಯ ‘ಶೀಲಮಹತ್ವದ ಕಂದ’ದ ಆದಿಯಲ್ಲಿ ‘ಶ್ರೀ ಗುರು ಬಸವಲಿಂಗಾಯನಮಃ’ ಎಂದಿದೆ. ಲಿಂಗಾಯತ ಲೇಖಕರು ತಮ್ಮ ಕೃತಿಯನ್ನು ‘ಶ್ರೀಗುರು ಬಸವಲಿಂಗಾಯನಮಃ’ ಎಂದು ಪ್ರಾರಂಭಿಸುವುದು ಬಸವೋತ್ತರ ಪದ್ಧತಿಯಾದುದರಿಂದ, ಬಸವೋತ್ತರ ಕವಿಯೊಬ್ಬ ‘ಶೀಲಮಹತ್ವದ ಕಂದ’ವನ್ನು ಬರೆದು ಅದನ್ನು ಕೊಂಡುಗುಳಿ ಕೇಶಿರಾಜನ ತಲೆಗೆ ಕಟ್ಟಿರಬೇಕು.
2. ‘ಮಂತ್ರಮಹತ್ವದ ಕಂದ’, ‘ಲಿಂಗಸ್ತೋತ್ರದ ಕಂದ’ಗಳ ಅಂತ್ಯದಲ್ಲಿ ಆಯಾ ಕಂದಗಳ ಸಮಾಪ್ತಿ ಎಂದಿದೆ. ಆದರೆ ‘ಶೀಲಮಹತ್ವದ ಕಂದ’ದ ಕೊನೆಯಲ್ಲಿ ‘ಕೇಶಿರಾಜ ಡಣಾಯಕರು ನಿರೂಪಿಸಿದ ಕಂದ ಸಮಾಪ್ತಿ’ ಎಂದಿದೆ. ಯಾವ ಕಂದ ಎಂಬುದನ್ನು ತಿಳಿಸಿಲ್ಲ.
3. ಒಂದು ವೇಳೆ ಕೇಶಿರಾಜ ಬಸವಪೂರ್ವದವನಾಗಿದ್ದರೆ, ಅವನ ಹೆಸರು ಬಸವಣ್ಣನವರ ಯಾವ ವಚನದಲ್ಲಿಯೂ ಕಂಡು ಬರುವುದಿಲ್ಲ. ತಮಗಿಂತ ಕೆಳಸ್ತರದ ಜಾತಿಯವರಾದ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ ಮುಂತಾದವರನ್ನೂ, ಸಿಂಧು ಬಲ್ಲಾಳ, ಸಿರಿಯಾಳ-ಚೆಂಗಳೆಯರನ್ನೂ ಮನಸಾರೆ ಹೊಗಳುವ ಬಸವಣ್ಣನವರು ತಮ್ಮ ವಚನಗಳಲ್ಲಿ ಕೇಶಿರಾಜನನ್ನೇಕೆ ಒಮ್ಮೆಯೂ ನೆನೆಯುವುದಿಲ್ಲ? ಲಿಂಗಾಯತ ಧರ್ಮ ಬಸವಪೂರ್ವದಲ್ಲೇ ಇತ್ತು ಎಂಬ ದುರುದ್ದೇಶದಿಂದ ಇದ್ದ ವಚನಗಳನ್ನು ತಿದ್ದುವುದು, ಚೆನ್ನಬಸವಣ್ಣ, ಅಲ್ಲಮ ಪ್ರಭು, ಮುಂತಾದವರ ಹೆಸರಿನಲ್ಲಿ ಬಸವಣ್ಣನವರ ಸಿದ್ಧಾಂತಗಳಿಗೆ ವಿರುದ್ಧವಾದ ವಚನಗಳನ್ನು ಬರೆಯುವುದು, ‘ಲಿಂಗಧಾರಣ ಚಂದ್ರಿಕಾ’, ‘ಶ್ರೀಕರಭಾಷ್ಯ’ ಮುಂತಾದ ಗ್ರಂಥಗಳನ್ನು ರಚಿಸುವುದು ಬಲ್ಲವರಿಗೆ ಹೊಸ ಸುದ್ದಿಯೇನಲ್ಲ. ಆದುದರಿಂದ ಡಾ.ಮಲ್ಲಾಪೂರ ಅವರ ಆಕ್ಷೇಪಣೆಯಲ್ಲಿ ಹುರುಳಿದೆ.
ಮೇಲಿನ ಆಕ್ಷೇಪಣೆಗಳ ಜೊತೆಗೆ ಪ್ರೊ. ವಿ.ವಿ.ಸಂಗಮದ ಅವರು ಕೆಲವು ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾದುವು ಎರಡು:
1.ಕ್ರಿ.ಶ. 1132ರ ಶಾಸನದಲ್ಲಿ ಕೊಂಡಗುಳಿ ಕೇಶಿರಾಜನು ಸೂತ್ರ ಸಂಹಿತೆ, ಯಾಜ್ಞವಲ್ಕ್ಯಸಂಹಿತೆ ಮುಂತಾದುವುಗಳನ್ನು ಬೋಧಿಸುವ ಉಪಾಧ್ಯಾಯರಿಗೆ ಮಾಸಾಶನ ನೀಡುವ ಮತ್ತು
2.ತನ್ನ ಆರಾಧ್ಯ ದೈವ ಸೋಮೇಶ್ವರನ ದೇವಾಲಯವನ್ನು ನಿರ್ಮಿಸಿ, ಅದಕ್ಕೆ ದತ್ತಿ ನೀಡುವ ಪ್ರಸ್ತಾಪವಿದೆ.
ಮೊದಲನೆಯದು ಅವೈದಿಕ ಎನಿಸುವ ಲಿಂಗಾಯತಕ್ಕೆ ವಿರುದ್ಧವಾದುದು. ಎರಡನೆಯದನ್ನು ಬಸವಣ್ಣನವರು ಖಂಡಿಸುತ್ತಾರೆ. ಕೇಶಿರಾಜನ ದತ್ತಿ ಪದ್ಧತಿ ವೈದಿಕ-ಆಗಮಿಕ ಪದ್ಧತಿಗೆ ಪೂರಕವಾದುದು. ಆದುದರಿಂದ ಕೇಶಿರಾಜ ಶೈವನಿರಬಹುದೇ ಹೊರತು ಲಿಂಗಾಯತನಲ್ಲ. ಪ್ರಾಯಶಃ 1132 ರ ನಂತರ ಅವನು ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಲಿಂಗಾಯತನಾಗಿರಬೇಕು.
ಮೇಲಿನ ಆಕ್ಷೇಪಣೆಗಳ ಜೊತೆಗೆ ಈ ಲೇಖಕನೂ ಕೆಲವು ಆಕ್ಷೇಪಣೆಗಳನ್ನು ಮಾಡುತ್ತಾನೆ. 1. ‘ಮಂತ್ರಮಹತ್ವದ ಕಂದ’ದ 110 ಕಂದಗಳಲ್ಲಾಗಲಿ, ಅದರಲ್ಲೆ ಇರುವ ಅನುಬಂಧದ ಐದು ಕಂದಗಳಲ್ಲೇ ಆಗಲಿ ‘ಲಿಂಗಾಯತ, ‘ವೀರಶೈವ’ ಪದಗಳು ಬಳಕೆಯಾಗಿಲ್ಲ. ಆ ಧರ್ಮದ ಗುರುಲಿಂಗಜಂಗಮಪ್ರಸಾದಕ್ಕೆ ಸಂಬಂಧಿಸಿದ ಪ್ರಸ್ತಾಪವಾಗಲಿ ಇಲ್ಲ. ಲಿಂಗಾಯತ ವಿಭೂತಿಧಾರಣೆ ಮಾಡಬೇಕು; ಆದರೆ ವಿಭೂತಿಧಾರಣೆ ಮಾಡಿದವರೆಲ್ಲ ಲಿಂಗಾಯತರೆನಿಸಿಕೊಳ್ಳುವುದಿಲ್ಲ; ಹಾಗೆಯೇ ಲಿಂಗಾಯತರು ಓಂ ನಮಶಿಃವಾಯ ಎಂಬ ಮಂತ್ರವನ್ನು ಪಠಿಸಬೇಕು; ಆದರೆ ಓಂ ನಮಶಿಃವಾಯ ಎನ್ನುವವರೆಲ್ಲಾ ಲಿಂಗಾಯತನೆನಿಸಿಕೊಳ್ಳುವುದಿಲ್ಲ. ಏಕೆಂದರೆ ಇದೇ ಮಂತ್ರದ ಮಹಿಮೆಯನ್ನು ಇತರ ಶೈವರೂ ಸ್ತುತಿಸಬಹುದು. ಆದುದರಿಂದ ಇದು ಹೇಗೆ ಲಿಂಗಾಯತ/ವೀರಶೈವ ಕೃತಿಯಾಗುತ್ತದೆ?
2. ಶರಣನಿಗೆ ಶರಣಸಂಗ, ಕರಸ್ಥಲದ ಪೂಜೆಗಳ ಅಗತ್ಯವಿದೆ ಎನ್ನುವುದೇನೋ ಸರಿ. ಶರಣಸಂಗ, ಕರಸ್ಥಲದ ಪೂಜೆ ಎಲ್ಲ ಸಾಧಕರಿಗೂ ಅಗತ್ಯವಾದರೂ ಅವು ಲಿಂಗಾಯತ ಧರ್ಮದ ಮುಖ್ಯ, ಅನಿವಾರ್ಯ ಲಕ್ಷಣಗಳೇನಲ್ಲ. ಸಾಧಕನು ಇತರ ಸಾಧಕರೊಡನೆ ಅಥವಾ ಗುರು ಮಾಡುವ ಪ್ರವಚನಗಳಲ್ಲಿ ಭಾಗಿಯಾಗಿರಬೇಕು ಎಂಬ ನಿಯಮ ಇತರ ಧರ್ಮಗಳಲ್ಲಿಯೂ – ಉದಾಹರಣೆಗೆ, ಇತರ ಶೈವ ಪ್ರಭೇದಗಳಲ್ಲಿಯೂ, ಜೈನ ಬೌದ್ಧರಲ್ಲಿಯೂ ಇದೆ. ಆದುದರಿಂದ ಇದನ್ನು ವಿಧಿಸುವ ಕೇಶಿರಾಜ ಲಿಂಗಾಯತನೇ ಆಗಿರಬೇಕು ಎನ್ನುವುದು ತಪ್ಪು. ಅದೇ ರೀತಿ, ಕರಸ್ಥಲದ ಪೂಜೆ ಲಿಂಗಾಯತರಿಗೆ ವಿಶಿಷ್ಟವಾದುದೇನಲ್ಲ. ಕೇಶಿರಾಜನಿಗೂ ಪೂರ್ವದಲ್ಲಿ ಚಿಕ್ಕ ಚಿಕ್ಕ ಲಿಂಗಗಳನ್ನು – ಇವುಗಳನ್ನು ಚಲಲಿಂಗ ಅಥವಾ ಚರಲಿಂಗ ಎಂದು ಕರೆಯಲಾಗುತ್ತಿತ್ತು – ಕೆಲವರು ಕರಸ್ಥಲದಲ್ಲಿಯೂ, ಕೆಲವರು ಪೀಠದ ಮೇಲೆಯೂ ಇಟ್ಟು ಪೂಜಿಸುವ ಪದ್ಧತಿ ಇತ್ತು. ಕೇಶಿರಾಜನು ತನ್ನ ಲಿಂಗವನ್ನು ಪೀಠದ ಮೇಲಿಟ್ಟು ಪೂಜಿಸುವುದನ್ನು ಹರಿಹರ ಪ್ರಸ್ತಾಪಿಸುತ್ತಾನೆ. ಅಂದರೆ, ಹರಿಹರನಿಗೆ ತನ್ನ ಪೂರ್ವದ ಕೇಶಿರಾಜನ ಕರಸ್ಥಲದ ಪೂಜಾವಿಧಾನ ಗೊತ್ತಿರಲಿಲ್ಲ ಎನ್ನಬೇಕೋ ಅಥವಾ (ಡಾ.ಮಲ್ಲಾಪೂರರು ಹೇಳುವಂತೆ) ‘ಮಂತ್ರಮಹತ್ವದ ಕಂದ’ದ ಈ ಭಾಗವನ್ನು ಯಾರೋ ರಚಿಸಿ ಕೇಶಿರಾಜನ ತಲೆಗೆ ಕಟ್ಟಿದರು ಎನ್ನಬೇಕೊ? ಅಂತೂ, ಪೂಜೆಗೂ ಮೊದಲು ಮತ್ತು ಪೂಜೆಯ ನಂತರ ಪೂಜ್ಯ ಲಿಂಗವನ್ನು ಒಂದು ಪೆಟ್ಟಿಗೆಯಲ್ಲಿಡಲಾಗುತ್ತಿತ್ತು. ಈ ಪದ್ಧತಿಯನ್ನು ಅನುಸರಿಸುವ ಶೈವರನ್ನು ಮಾರ್ಗಶೈವರೆಂದು ಕರೆಯಲಾಗುತ್ತಿತ್ತು. ಆದರೆ ಕೇಶಿರಾಜನ ಕೃತಿಗಳಲ್ಲಾಗಲಿ, ಹರಿಹರನ ರಗಳೆಯಲ್ಲಾಗಲಿ ಲಿಂಗವನ್ನು ಸದಾ ಮೈಮೇಲೆ ಧರಿಸಬೇಕು ಎಂದು ಹೇಳಿಲ್ಲ.
3. ಡಾ.ಪಿ.ಬಿ. ದೇಸಾಯಿಯವರು ತಮ್ಮ ‘ಬಸವೇಶ್ವರ ಮತ್ತು ಅವನ ಕಾಲ’ ಎಂಬ ಗ್ರಂಥದಲ್ಲಿ ಬಸವಣ್ಣ ಅನೇಕರು ಈಗ ನಂಬಿರುವಂತೆ 1131ರಲ್ಲಿ ಹುಟ್ಟಿರದೆ ಸು. 1104/5 ರಲ್ಲಿ ಹುಟ್ಟಿರುವ ಸಾಧ್ಯತೆ ಇದೆ ಎನ್ನುತ್ತಾರೆ. ಬಸವಣ್ಣನವರು ಕೇವಲ ಕೆಲವೇ ವರ್ಷಗಳ ಅವಧಿಯಲ್ಲಿ, ಅಂದರೆ, ಬಿಜ್ಜಳ ಕಲ್ಯಾಣಕ್ಕೆ ಬಂದಂದಿನಿಂದ ತಮ್ಮ ಮರಣದವರೆಗೆ (1162-1167), ಲಿಂಗಾಯತ ಧರ್ಮವನ್ನು ಸ್ಥಾಪಿಸಿ, ಅದನ್ನು ಪ್ರಚುರಪಡಿಸಿ, ಮಹಾಮನೆ ಮತ್ತು ಅನುಭವಮಂಟಪವನ್ನು ಸ್ಥಾಪಿಸಿದರು ಎಂದು ನಂಬುವುದು ಕಷ್ಟವಾಗುತ್ತದೆ. ಅವರೆ ಚಿಕ್ಕವರಾಗಿದ್ದರು ಎಂದರೆ ಮಹಾಜ್ಞಾನಿ ಎಂಬ ಹೆಸರು ಪಡೆದಿದ್ದ ಚೆನ್ನಬಸವಣ್ಣ ಇನ್ನೂ ಚಿಕ್ಕವನಾಗಿದ್ದ ಎಂದೂ ನಂಬಬೇಕಾಗುತ್ತದೆ. ಪ್ರಾಯಶಃ ಬಸವಣ್ಣನವರು ಕಲ್ಯಾಣಕ್ಕೆ ಬರುವ ಮೊದಲು ಕನಿಷ್ಠ 55 ವರ್ಷದವರಾಗಿರಬೇಕು. ಇದು ಸಾಧ್ಯವಾದರೆ, ಕೇಶಿರಾಜ ಮತ್ತು ಬಸವಣ್ಣ ಹೆಚ್ಚೂಕಡಿಮೆ ಸಮವಯಸ್ಕರಾಗಿದ್ದರು. ಆಗ ಕೇಶಿರಾಜನೇ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿದ್ದ ಎಂದೇಕೆ ಹೇಳಬಾರದು?
4. ‘ಮಂತ್ರಮಹತ್ವದ ಕಂದ’ ದಲ್ಲಿ (ಕಂದ 96) ಕೇಶಿರಾಜ ತನ್ನ ಧರ್ಮವನ್ನು ಶೈವವ್ರತ ಎಂದೇ ಕರೆದಿದ್ದಾನೆ. ಒಂದು ವೇಳೆ ಅವನ ಕಾಲದಲ್ಲಿ ಲಿಂಗಾಯತ/ವೀರಶೈವ ಎಂಬ ಹೆಸರಿನ ಒಂದು ಧರ್ಮವಿದ್ದಿದ್ದರೆ ಅದನ್ನು ಆ ಹೆಸರಿನಲ್ಲಿ ಕರೆಯದೆ ಶೈವವ್ರತ ಎಂದೇಕೆ ಕರೆದ?
5. ಬಸವಣ್ಣ, ಚೆನ್ನಬಸವಣ್ಣ ಮುಂತಾದವರು ತಮ್ಮ ವಚನಗಳಲ್ಲಿ ವೇದವಿರೋಧ, ಆಗಮವಿರೋಧವನ್ನು ಸ್ಪಷ್ಟವಾಗಿ, ನಿರ್ದಾಕ್ಷಿಣ್ಯವಾಗಿ ವ್ಯಕ್ತಪಡಿಸಿದ್ದಾರೆ. ಆದರೆ ಕೇಶಿರಾಜನ ಯಾವ ಕೃತಿಯೂ ಈ ವಿರೋಧದ್ವಯವನ್ನು ವ್ಯಕ್ತಪಡಿಸುವುದಿಲ್ಲ. ಅಷ್ಟೇ ಅಲ್ಲ, ದೇವಸ್ಥಾನವನ್ನು ನಿರ್ಮಿಸಿದುದು, ಅದಕ್ಕೆ ದತ್ತಿ ಬಿಟ್ಟಿದುದು, ಯಜ್ಞಯಾಗಾದಿಗಳನ್ನು ಬೋಧಿಸುವವರಿಗೆ ಮಾಸಾಶನ ನೀಡುತ್ತಿದ್ದುದು ವೇದಾಗಮ ಪದ್ಧತಿಯನ್ನು ಪ್ರೇರೇಪಿಸುವ ಅವನ ಪ್ರವೃತ್ತಿಯನ್ನು ತೋರಿಸುತ್ತದೆ.
ಒಂದು ವೇಳೆ ಕೇಶಿರಾಜನ ಎಲ್ಲ ಕೃತಿಗಳೂ ಅಪ್ಪಟವಾದುವು, ಅವನು ಬಸವಪೂರ್ವದವನು ಎಂಬುದನ್ನು ಊಹಿಸಿಕೊಂಡರು ಸಹ, ಅವನು ಕೆಲವು ಲಿಂಗಾಯತ ಪದಗಳನ್ನು ಬಳಸಿದ್ದಾನೆ ಎಂಬ ಮಾತ್ರಕ್ಕೆ ಅವನ ಕಾಲದಲ್ಲಿ ಲಿಂಗಾಯತ ಧರ್ಮ ಇತ್ತು ಎಂಬುದು ಖಚಿತವಾಗುವುದಿಲ್ಲ. ಇದಕ್ಕೆ ಸಮಾನವಾದ ಇನ್ನೊಂದು ಉದಾಹರಣೆಯನ್ನು ಪರಿಶೀಲಿಸಬಹುದು. ಕ್ರೈಸ್ತಧರ್ಮ ಹುಟ್ಟಿದ್ದು ಯೆಹೂದೀ ಧರ್ಮದ ಬೇರಿನಿಂದ. ಅದರ ಅನೇಕ ಸಿದ್ಧಾಂತಗಳು ಯೆಹೂದೀ ಧರ್ಮದಿಂದ ತೆಗೆದುಕೊಂಡ ಎರವಲು. ಪರಮಾತ್ಮ (ಯಾಹ್ವೆ ಅಥವಾ ಯೆಹೋವಾ) ವಿಶ್ವವನ್ನು ಆರು ದಿನಗಳಲ್ಲಿ ಸೃಷ್ಟಿ ಮಾಡಿ ಏಳನೆಯ ದಿನ ವಿಶ್ರಾಂತಿ ತೆಗೆದುಕೊಂಡ, ಭೂಮಿಯ ಸುತ್ತಲೂ ಸೂರ್ಯ, ಚಂದ್ರ, ನಕ್ಷತ್ರಗಳು ತಿರುಗುತ್ತವೆ, ಮೊದಲು ಮನುಷ್ಯ ಅನಂತರ ಇತರ ಪ್ರಾಣಿಗಳ ಸೃಷ್ಟಿಯಾಯಿತು, ಮುಂತಾದ ಸಿದ್ಧಾಂತಗಳನ್ನು ಕ್ರೈಸ್ತರು ಯೆಹೂದಿಗಳಿಂದ ಎರವಲು ಪಡೆದಿದ್ದಾರೆ. ಅಥವಾ ಇದನ್ನೆ ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ: ಇವುಗಳನ್ನು ಬೋಧಿಸುವ ಹಳೆ ಒಡಂಬಡಿಕೆ ಕ್ರೈಸ್ತ ಮತ್ತು ಯೆಹೂದೀ ಧರ್ಮಗಳೆರಡಕ್ಕೂ ಮಾನ್ಯ (ಹೊಸ ಒಡಂಬಡಿಕೆ ಕ್ರೈಸ್ತರಿಗೆ ಮಾತ್ರ ಮಾನ್ಯ; ಯೇಸು ದೇವರ ಮಗ ಎಂಬ ಮಾತನ್ನು ಯೆಹೂದಿಗಳು ಒಪ್ಪುವುದಿಲ್ಲ). ಯೆಹೂದಿಗಳಲ್ಲಿ ಸಾಡುಸಿ, ಫಾರಿಸಿ, ಎಸ್ಸೆನೀಸ್ ಮುಂತಾದ ನಾಲ್ಕು ಪಂಗಡಗಳಿದ್ದವು. ಇವುಗಳಿಗಿಂತ ಸ್ವಲ್ಪ ಭಿನ್ನವಾದ ಯೇಸುವಿನ ಅನುಯಾಯಿಗಳನ್ನು ಜನರು ಹೊಸ ಹೆಸರಿನಿಂದ ಕರೆಯದೆ, ಯೇಸು ದೈವಗತವಾಗಿ ಎಪ್ಪತ್ತು ವರ್ಷಗಳಾದರೂ ಕ್ರಿಶ್ಚಿಯನ್ ಯೆಹೂದೀ ಎಂದೇ ಕರೆಯುತ್ತಿದ್ದರು. ಅದೇ ರೀತಿ, ಬಸವಪೂರ್ವ ಶೈವಧರ್ಮದಲ್ಲಿ ಅನೇಕ ಲಿಂಗಾಯತ ಸಿದ್ಧಾಂತಗಳು ಇದ್ದಿರಬಹುದು. ಅವುಗಳಿಗೆ ಒಂದು ಸ್ಪಷ್ಟ ರೂಪ, ದಾರ್ಶನಿಕ ನೆಲೆಗಟ್ಟು, ಸ್ವತಂತ್ರ ಅಸ್ತಿತ್ವವನ್ನು ಕೊಟ್ಟವರು ಬಸವಣ್ಣನವರು. ಯಾವತ್ತು ಶರಣರು ತಮ್ಮ ಧರ್ಮವನ್ನು ವೇದಗಳಿಂದಲೂ ಆಗಮಗಳಿಂದಲೂ ಬಿಡಿಸಿಕೊಂಡರೋ ಅಂದೇ ಅದು ಒಂದು ಸ್ವತಂತ್ರ ಧರ್ಮವಾಯಿತು. ಈ ಸ್ವಾತಂತ್ರ್ಯದ ಕಹಳೆಯ ಧ್ವನಿ ಕೇಶಿರಾಜನಲ್ಲಾಗಲಿ ಇತರರಲ್ಲಾಗಲಿ ಕೇಳಿಸುವುದಿಲ್ಲ. ಆದುದರಿಂದ, ಬಸವಪೂರ್ವದಲ್ಲಿ ಕೆಲವು ಲಿಂಗಾಯತ ಸಿದ್ಧಾಂತಗಳು ಮೊದಲೇ ಇದ್ದವು ಎಂಬ ಮಾತೇ ಬೇರೆ, ಬಸವಪೂರ್ವದಲ್ಲಿ ಲಿಂಗಾಯತ ಎಂಬ ಸ್ವತಂತ್ರ ಧರ್ಮ ಇತ್ತು ಎಂಬ ಮಾತೆ ಬೇರೆ. ಇವುಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸದಿದ್ದರೆ, ಅವುಗಳನ್ನು ಮಾನ್ಯ ಮಾಡದಿದ್ದರೆ, ನಾವು ಅನಾವಶ್ಯಕ ಗೊಂದಲ, ವಾದವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ.
ಗ್ರಂಥಋಣ
- ಡಾ.ಎಮ್. ಎಮ್. ಕಲಬುರ್ಗಿ (ಸಂ): ಕೊಂಡಗುಳಿ ಕೇಶಿರಾಜನ ಕೃತಿಗಳು (ಜಗದ್ಗುರು ಸಂಸ್ಥಾನ ಮಠ, ಡಂಬಳ-ಗದಗ, 1999).
- ಡಾ.ಬಿ.ವಿ.ಮಲ್ಲಾಪೂರ (ಸಂ): ಸುಧಾರ್ಣವ-1 (ವೀರಶೈವ ಅಧ್ಯಯನ ಅಕಾಡೆಮಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ, 1998), ಪು.296-309.
- ಡಾ. ಸೋಮನಾಥ ಯಾಳವಾರ (ಸಂ): ಲಿಂಗಾಯತಂ ಭೊ ಸ್ವತಂತ್ರಶೀಲದಲ್ಲಿ ಪ್ರೊ. ಸಂಗಮದ ಅವರ ಲೇಖನ, ಪು. 85-86. (ವಿಶ್ವಬಸವಧರ್ಮ ಟ್ರಸ್ಟ್, ಪ್ರಸಾರಾಂಗ, ವಚನ ವಿಶ್ವವಿದ್ಯಾಲಯ, ಬಸವಕಲ್ಯಾಣ, 2017).
Comments 15
ಗುರುಪ್ರಸಾದ್, ಮೈಸೂರು
Apr 7, 2020ಹಿರಿಯರಾದ ಮಹಾದೇವಪ್ಪನವರ ಲೇಖನ ಓದಿ ಬಹಳ ಸಂತೋಷವಾಯಿತು. ಕೊಂಡಗುಳಿ ಕೇಶಿರಾಜನ ಬಗೆಗೆ ನನಗೆ ಏನೂ ಗೊತ್ತಿರಲಿಲ್ಲ. ವಿದ್ವತ್ಪೂರ್ಣ ಲೇಖನ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ನಿರತರಾದ ಪ್ರತಿಯೊಬ್ಬರೂ ಓದಲೇ ಬೇಕಾದ ಲೇಖನ.
Vinay Kanchikere
Apr 8, 2020ಡಾ.ಬಿ.ವಿ.ಮಲ್ಲಾಪುರ ಅವರು ಕೊಟ್ಟ ಕಾರಣಗಳನ್ನು ನೀವು ತರ್ಕಿಸಿದ ರೀತಿ ಸರಿಯಾಗಿದೆ. ಸಂಶೋಧನಾತ್ಮಕ ಬರಹಕ್ಕೆ ಧನ್ಯವಾದಗಳು
ಕರಿಬಸಪ್ಪ ಧನ್ನೂರು
Apr 9, 2020ವೀರಶೈವಕ್ಕೂ ಮತ್ತು ಲಿಂಗಾಯತಕ್ಕೂ ವ್ಯತ್ಯಾಸವಿದೆ. ಲಿಂಗಾಯತದ ಹಲವಾರು ಸಿದ್ದಾಂತಗಳನ್ನು ವೀರಶೈವರು ತಮ್ಮವೆಂದು ವಾದಿಸಿದರೂ ಶರಣರಲ್ಲಿ ಅವೆಲ್ಲಕ್ಕೂ ವಿಭಿನ್ನ ಅರ್ಥಗಳಿವೆ. ಕೇಶಿರಾಜನ ಪ್ರಕರಣದ ವಿವರ ನೀಡಿದ್ದಕ್ಕೆ ಮಹಾದೇವಪ್ಪ ಶರಣರಿಗೆ ವಂದನೆಗಳು.
Karibasappa hanchinamani
Apr 11, 2020ಕೇಶಿರಾಜ ಬಸವಪೂರ್ವದವನಾಗಿದ್ದರೆ, ಅವನ ಹೆಸರು ಬಸವಣ್ಣನವರ ಯಾವ ವಚನದಲ್ಲಿಯೂ ಕಂಡು ಬರುವುದಿಲ್ಲ…. ಎನ್ನುವ ತರ್ಕ ಎಲ್ಲರೂ ಒಪ್ಪುವಂಥದ್ದು. ಕೇಶೀರಾಜನಿಗೆ ಬಸವಣ್ಣನವರ ಬಗ್ಗೆ ಗೊತ್ತಿರಬಹುದು. ಆದರೆ ಬಸವಣ್ಣನವರಿಗೆ ಕೇಶಿರಾಜನ ಪರಿಚಯವೇ ಇರಲಿಕ್ಕಿಲ್ಲ.
ಭಾವನಾ, ಧಾರವಾಡ
Apr 13, 2020ಕೇಶಿರಾಜನ ಏಳು ಪುಸ್ತಕಗಳನ್ನು ಹೆಸರಿಸಿದ್ದೀರಿ. ಆದರೆ ಯಾವುದನ್ನು ನೋಡಿದರೂ ವಚನಗಳ ಭಾಷೆಯಂತೆ ತೋರುವುದಿಲ್ಲ. ಅವೆಲ್ಲವೂ 12ನೆಯ ಶತಮಾನದ ನಂತರದ ಕೃತಿಗಳೇ ಇರಬೇಕು.
Jayadev Jawali
Apr 14, 2020ಅತ್ಯಂತ ಮಹತ್ವದ ಸಂಶೋಧನಾತ್ಮಕ ಲೇಖನ. ಬಹಳ ಚನ್ನಾಗಿದೆ ಸರ್.
Sharada A.M
Apr 14, 2020ಯಹೂದೀ ಧರ್ಮದ ಮೂಲದಿಂದ ಹುಟ್ಟಿದ ಕ್ರೈಸ್ತ ಧರ್ಮದ ಉದಾಹರಣೆ ಸಂದರ್ಭೋಚಿತವಾಗಿದೆ. ಕೇಶೀರಾಜ ಬಸವಪೂಋ್ವದವನೆಂದು ವಾದಿಸಿದರೂ ಅವನ ಕೃತಿಗಳಲ್ಲಿ ಲಿಂಗಾಯದ ಧರ್ಮದ ಮಹತ್ತರವಾದ ಯಾವ ಅಂಶಗಳೂ ಇಲ್ಲ. ಕೇವಲ ಶಬ್ದಗಳಿಂದ ವಾದ ನಿಲ್ಲುವುದಿಲ್ಲ.
Devaraj B.S
Apr 24, 2020ಕೇಶಿರಾಜ ಲಿಂಗಾಯತನೇ ಆಗಿರಬೇಕು ಎನ್ನುವುದು ತಪ್ಪು- ಕೇಶಿರಾಜನ ಬಗೆಗೆ ವಿಶಿಷ್ಟ ಮಾಹಿತಿ ನೀಡುವ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ.
Pro Mallikarjuna
Apr 24, 2020ಬಯಲು ಬ್ಲಾಗಿನಲ್ಲಿ ಪ್ರೊ.ಮಹಾದೇವಪ್ಪನವರ ಸಂಶೋಧನಾತ್ಮಕ ಲೇಖನ ನೋಡಿ ಬಹಳ ಸಂತೋಷವಾಯಿತು. ಅವರು ಈ ಹಿಂದೆ ಬರೆದ ಹನ್ನೆರಡನೆಯ ಶತಮಾನದ ನಂತರ ಬಂದ ಶರಣರ ಸ್ತ್ರೀ ಧೋರಣೆ ಕುರಿತ ಲೇಖನ ನನಗೆ ಬಹಳ ಹಿಡಿಸಿತ್ತು. ಅವರ ಮತ್ತಷ್ಟು ವೈಚಾರಿಕ ಲೇಖನಗಳು ಬಯಲು ಓದುಗರಿಗೆ ಲಭ್ಯವಾಗಲಿ. ಶರಣಾರ್ಥಿಗಳು.
Prasad Patil
Apr 25, 2020ಬಯಲುನಲ್ಲಿ ಪ್ರಕಟವಾದ ಗುರು ತತ್ವವೇ ಅಥವಾ ವ್ಯಕ್ತಿಯೇ ಎನ್ನುವ ಪ್ರೊ.ಎನ್.ಜಿ.ಮಹಾದೇವಪ್ಪನವರ ಲೇಖನ ನನ್ನ ಬಳಿ ಇದೆ. ಕೇಶಿರಾಜನ ಕುರಿತಾದ ಐತಿಹಾಸಿಕ ಸತ್ಯವನ್ನು ಅನಾವರಣಗೊಳಿಸುವ ಈ ಲೇಖನ ಬಹಳ ಚನ್ನಾಗಿದೆ. ಲಿಂಗಾಯತ ಸ್ವತಂತ್ರಧರ್ಮ ಹೋರಾಟಗಾರರೆಲ್ಲರೂ ನಿಜಕ್ಕೂ ಓದಲೇ ಬೇಕಾದ ಮಾಹಿತಿಗಳು ಇಲ್ಲಿವೆ.
Kumar Jagirdar
Apr 27, 2020ಕೇಶಿರಾಜನ ಏಳೆಂಟು ಕೃತಿಗಳು ಈಗಲೂ ಲಭ್ಯವಿದೆಯೇ? ಆ ಕೃತಿಗಳ ಹೆಸರುಗಳಾವುವೂ ಶರಣರ ವಿಚಾರಗಳನ್ನು ಪ್ರತಿಫಲಿಸುವುದಿಲ್ಲವಲ್ಲಾ… ಮಂತ್ರ ಮಹತ್ವ ಎನ್ನುವ ವಿಚಾರಗಳೆಲ್ಲಾ ಗೊಡ್ಡು ಸಾಂಪ್ರಾದಾಯಿಕ ಆಚರಣೆಗಳು, ಶರಣರು ಇಂತಹ ಆಲೋಚನೆಗಳನ್ನು ಒಪ್ಪುವುದಿಲ್ಲ. ಲೇಖನ ಬಹಳ ಸೊಗಸಾಗಿದೆ.
Halappa Bhavi
May 2, 2020ವಿಚಾರಕ್ಕೆ ಹಚ್ಚುತ್ತಲೇ ಸುಲಲಿತವಾಗಿ ಬಿಡಿಸಿ ಹೇಳಿ ಇತಿಹಾಸದ ಸತ್ಯವನ್ನು ತೋರಿಸುವ ವಿದ್ವತ್ ಲೇಖನ.
gowrishankar
May 5, 2020ಅತ್ಯುತ್ತಮ ಸಂಶೋಧನಾ ಲೇಖನ. ವಸ್ತುನಿಷ್ಠ ಬರಹ ಪ್ರೊಫೆಸರದು. ಥ್ಯಾಂಕ್ಯೂ ಸರ್
ಹಬೀಬ್ ಮುಲ್ಲಾ ಕೊಂಡಗುಳಿ
Feb 15, 2021ಸರ್ ತಾವು ಬರೆದ ಲೇಖನ ತುಂಬಾ ಸೊಗಸಾಗಿದೆ ಮತ್ತು ಕೊಂಡಗುಳಿ ಕೇಶಿರಾಜನ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ಸರ್
Sadashiv patil
Aug 30, 2022ಸರ್ ನೀವು ತಿಳಿಸಿರುವ ಕೇಶಿರಾಜ ಪರಿಚಯ ತುಂಬಾ ಒಳ್ಳೆಯದು ಆದರೆ ಕೇಶಿರಾಜನು ಬಸವಣ್ಣನ ಕಿಂತ್ ಮೊದಲು ಕೇಶಿರಾಜ ಇದ್ದ ಎಂದರೆ ಅದು ಸ್ಪಷ್ಟ ಪಡಿಸಿ ಮತ್ತು ಕೇಶಿರಾಜನು ವೀರಶೈವ ನೋ ಇಲ್ಲ ಲಿಂಗಾಯತ ನೋ ನಮಗೆ ಸ್ಪಷ್ಟವಾದ ನಿಲುವು ವಿಮರ್ಶೆಗಳ ಅಧ್ಯಯನ ಮಾಡಿ ನೋಡಿ ಸರ್