ಕಾಲ ಎಲ್ಲಿದೆ?
ಎಲ್ಲವನೂ… ಎಲ್ಲರನೂ…
ಮಣಿಸುತಾ, ಬಾಗಿಸುತಾ
ಕಾಣಿಸುತಾ, ಕಣ್ಮರೆಯಾಗಿಸುತಾ
ತಾನೇ ಅಂತಿಮವೆನುವ
ಮಾಯಾವಿ ಕಾಲಕ್ಕೆ
ಇದೆಯೇ ಅಸ್ತಿತ್ವ?
ಉರುಳುರುಳಿ ಹೊರಳುತಿಹ
ಭುವಿಯ ಚಲನೆಯಲಿ
ನಮ್ಮ ಉಸಿರಿನ ಲೆಕ್ಕವಿದೆ
ಯಾವ ರಾತ್ರಿಯು ಕೊನೆಯೋ
ಯಾವ ಹಗಲನು ಕಾಣೆವೋ
ಬಲ್ಲವರು ಯಾರು?
ಭಾವ ಸಂಚಯದ ಸುಳಿಗೆ ಸಿಲುಕಿ
ಕಲ್ಪಿತ ಭ್ರಮೆಗಳಲಿ
ತಿರುತಿರುಗಿ ಬೀಳುತ್ತಾ
ತೂರಿ ಹೋಗುತಿಹ
ತರಗೆಲೆಯ ಜೀವಕ್ಕೆ
ಆಯುಷ್ಯವಾದರೂ ಎಲ್ಲಿದೆ?
ಆದಿ-ಅನಾದಿಯ ಗೊಡವೆಯಿಲ್ಲದೆ
ಆಗುತ್ತಲೇ ಸಾಗುತಿಹ
ಅನಂತ ಪ್ರವಾಹದಲಿ
ಏಳುತ್ತಲೇ ಇಳಿದು ಬಿಡುವ
ಕಿರು ಅಲೆಯು ಈ ಬದುಕು
ಹೇಳಿ ಕಾಲ ಎಲ್ಲಿದೆ?
ಜಗದೊಳಗೆ, ಮನದೊಳಗೆ
ಬೆಳಕು-ಕತ್ತಲೆಯೊಳಗೆ
ಕಣ್ಣೆದುರೇ ಜಾರುತಿಹ ಸಮಯದಲಿ
ಹಿಡಿಯಲಾದೀತೆ ಒಂದಾದರೂ ಗಳಿಗೆ
ಮಾಡದಡುಗೆಗೇ ಜೊಲ್ಲು ಸುರಿಸಿ
ತಂಗಳನ್ನವನೇ ಚಪ್ಪರಿಸುತಾ
ಭ್ರಮೆಯ ಚುಂಗನು
ಹಿಡಿದ ರೂಢಿಗರಿಗೆ
ತಿಳಿಯಲಾದೀತೇ ಈ ಕ್ಷಣದ ಮರ್ಮ?
ಹೇಳಿ ಕಾಲ ನಿಜವೋ, ಕಲ್ಪಿತವೋ?
Comments 2
Vijayala
Jan 8, 2022ಬಹಳ ಸೊಗಸಾದ ಬರವಣಿಗೆ👏🏽
Padmalaya
Jan 26, 2022ಚೆನ್ನಾಗಿದೆ.ಮುಂದುವರೆಸಿ….